ದಾರಿದೀಪ
ಅಚ್ಯುತನ ಕರುಣೆಯಿಂ ಕೊಂಚವಾದರೂ
ನಮ್ಮ ಕೃಷ್ಣ ಪರಮಾತ್ಮನು, ಈ ಕಲಿ ಕಾಲದಲ್ಲಿ ಕೇವಲ ಆಜ್ಞಾನದ ಕಗ್ಗತ್ತಲೆಯೇ ಎಲ್ಲ ಜೀವನದಲ್ಲಿ ಪ್ರಬಲವಾಗಿ ವ್ಯಾಪಿಸಿದ್ದರಿಂದ, ಸುಜೀವರಿಗೆ ಬೆಳಕು ತೋರಿ ಒಳ್ಳೇ ಮಾರ್ಗ ತೋರಿಸಿರಿ ಅಂತಾ, ತನ್ನ ಭಕ್ತೋತ್ತುಮರಾದ ಮಹಾಮಹಾ ಜ್ಞಾನ ಭಕ್ತಿ ವೈರಾಗ್ಯ ಸಂಪನ್ನರಿಗೆ ಆಜ್ಞೆ ಮಾಡಿ , ಜನ್ಮ ಕೊಟ್ಟು ಕಳಿಸುತ್ತಲೇ ಇರುವನು. ಆದ್ದರಿಂದಲೇ ಎಂದಿನಿಂದಲೂ ಅಂಥಂಥ ಗುರುಗಳೂ, ಮಹಾನುಭಾವರೂ ತಾವು ಕಂಡುಕೊಂಡ ಬೆಳಕಿನ ದಾರಿಗೆ ನಮ್ಮಂಥ ಪಾಮರರನ್ನು ಕಳಿಸುವ ಉದ್ದೇಶದಿಂದಲೇ, ಜ್ಞಾನದ ದೀಪ ಕೈಯಲ್ಲಿ ಹಿಡಿದು ನಮ್ಮಂಥ ಆಜ್ಞಾನಿಗಳಿಗೆ ’ಒಳ್ಳೇ ಹಾದಿ ಆ ಕಡೆಗೆ ಇಲ್ಲ, ಈ ಕಡೆಗೆ ಬನ್ನಿರಿ’ ಅಂತಾ ಆ ಕಲ್ಲು-ಮುಳ್ಳುಗಳು ಹರವಿದ ಕತ್ತಲೆಯ ಹಾದಿ ಬಿಡಿಸಿ, ಒಳ್ಳೆ ಸ್ಥಳದ ಹಾದಿಗೆ ಹಚ್ಚುವುದಕ್ಕಾಗಿಯೇ ( ಆ ಪುಣ್ಯ ಪುರುಷರು ) ಇವತ್ತಿಗೂ ನಮಗೆ ಅಲ್ಲಲ್ಲಿ ಉಪದೇಶಿಸಲು ದೊರೆಯುವರು. ದೊಡ್ಡ ದೊಡ್ಡ ಜ್ಞಾನಿಗಳೂ, ಮಹಾ ಮಹಾ ಪಂಡಿತರೂ ದೇವರ ಆಜ್ಞೆಯಿಂದ ಲೊಕೋದ್ಧಾರಕ್ಕಾಗಿ ಚರಿಸುವರು.
ಅಂಥವರಲ್ಲಿಯವರೇ ನಮ್ಮ ಗುರುಗಳಾದ ಪೂಜ್ಯ ಮಾಧವೇಶಾಚಾರ್ಯ ರಾಮದುರ್ಗ. ಇವರ ತಂದೆಯವರು ಕೂಡಾ ಮಹಾದೊಡ್ಡ ಪಂಡಿತರಿದ್ದು ನೂರಾರು ಶಿಷ್ಯರನ್ನು ಊಟ ವಸತಿ ಕೊಟ್ಟು ವಿದ್ಯಾದಾನ ಮಾಡಿದ್ದಲ್ಲದೇ, ಮನೆಯಲ್ಲಿ ಆಗ್ನಿಹೋತ್ರ ಇಟ್ಟುಕೊಂಡು ಪರಮ ವೈರಾಗ್ಯದಿಂದ ಜೀವನ ನಡೆಸಿಕೊಂಡವರು. ಸಾಮಾನ್ಯ ಸ್ಥಿತಿಗತಿಯಲ್ಲಿದ್ದರು. ಮೊದಮೊದಲು ೨೫:೩೦ ವಿದ್ಯಾರ್ಥಿಗಳ ಪಾಠ ಶಾಲೆ ಮನೆಯಲ್ಲೇ ನಡಿಸುತ್ತಿದ್ದಾಗ ಬಹಳ ತೊಂದರೆಯಾಗಿ ಮಧುಕರಿಗೆ ಶಿಷ್ಯರಿಗೆ ಕಳಿಸುತ್ತಿದ್ದರು. ಪೂಜಾ ನೈವೇದ್ಯ ಆಗಿಂದ ಆ ಮಧುಕರಿ ಜೋಳಿಗೆಗಳಗೆ ಶಂಖೋದಕ ತೀರ್ಥ ಹಾಕಿ, ವಿದ್ಯಾರ್ಥಿಗಳಿಗೂ ತಮ್ಮೆಲ್ಲರಿಗೂ ಮನೆಯ ಅಡಿಗೆ, ಜೋಳಿಗೆ ಅಡಿಗೆ ಕೂಡಿಸಿಯೇ ಪಂಕ್ತಿ ಭೇದವಿಲ್ಲದೇ ಹಾಕಿಕೊಂಡು ಎಲ್ಲರೂ ಊಟ ಮಾಡುತ್ತಿದ್ದರಂತೆ. ಇದೆಲ್ಲ ವೃತ್ತಾಂತವನ್ನು ಮಹಾರಾಣಿಯವರು ಜನರ ಬಾಯಿಂದ ಕೇಳಿ, ಪ್ರತಿ ತಿಂಗಳು ಸಾಕಾಗುವಷ್ಟು ಧಾನ್ಯ ಹಣ ಕಳಿಸುವ ವ್ಯವಸ್ಥೆ ಮಾಡಿದರಂತೆ, ಆ ಮೇಲೆ ಪಾಠಶಾಲೆಯ ವಿದ್ಯಾರ್ಥಿಗಳ ಸಂಖ್ಯಾ ಬಹುವಾಗಿ ಬೆಳೆಯಿತು.
ಒಮ್ಮೆ ಶ್ರೀ ಸತ್ಯಜ್ಞಾನ ಶ್ರೀಗಳು ಈ ಆಚಾರ್ಯರಲ್ಲಿ ಬಂದು ನೋಡಿ ಆಶ್ಚರ್ಯಪಟ್ಟರಂತೆ, ಎಷ್ಟು ಹಣ ಖರ್ಚ ಮಾಡಿ ಪಾಠಶಾಲೆ ಅಲ್ಲಲ್ಲಿ ನಡೆಸುತ್ತಿದ್ದರೂ ಇಷ್ಟೊಂದು ವಿದ್ಯಾರ್ಥಿಗಳು ಅಲ್ಲಿ ಕಣುವುದಿಲ್ಲ, ಅಂತಾ ಸಂತೋಷ ಪಟ್ಟು ತಮ್ಮ ಜೊತೆಗೆ ಎಲ್ಲ) ವಿದ್ಯಾರ್ಥಿಗಳನ್ನು ಕರೆದುಕೊಂಡು ನೀವು ಬರಲೇಬೇಕು, ಅಂತಾ ಉಡುಪಿಗೆ ಕರದುಕೊಂಡು ಹೋಗಿ ಸಂಭಾವನೆ ಕೊಟ್ಟು ಆಶೀರ್ವಾದ ಮಾಡಿದರು. ಶ್ರೀನಿವಾಸಾಚಾರ್ಯರ ಶಿಷ್ಯ ಪರಂಪರೆಯವರೂ ಸಹ ಪಂಡಿತರಾಗಿದ್ದುದು ಕೇಳುತ್ತಿದ್ದೇವೆ. ಕೆಲವೇ ಶಿಷ್ಯರ ಹೆಸರು ಕೊಟ್ಟಿದೆ. ನೂರಾರು ಹೆಸರು ಸಾಧಿಸದು, ಬೆಳ್ಳುಬ್ಬಿ ಅಣ್ಣಾಯ್ಯಾಚಾರ್ಯರು: ಸಾಠೆ ಬಿಂದಾಚಾರ್ಯರು, ನಾಗಸಂಪಿಗಿ ಕೃಷ್ಣಾಚಾರ್ಯರು, ಮಳಿಗಿಕೃಷ್ಣಚಾರ್ಯರು, ಕಂಚಿ ಗುರಾಚಾರ್ಯರು, ಗಲಗಲಿ ಸುಬ್ಬಣ್ಣಾಚಾರ್ಯರು, ಶ್ರೀಮಂತ್ರಾಲಯ ಆರ್ಚಕ ಶ್ರೀ ವೇದವ್ಯಾಸಾಚಾರ್ಯರು,ಉಳಿದ ಅನೇಕ ಶಿಷ್ಯರನ್ನು ಪಂಡಿತರನ್ನೂ ತಯಾರು ಮಾಡುತ್ತಿದ್ದುದ್ದರಿಂದಲೇ ಪರಂಪರೆಯಿಂದ ನಮಗೆಲ್ಲ ಸದಾಕಾಲ ಉಪದೇಶ ದೊರೆಯುವಂತಾಗಿದೆ.
ಈ ಆಚಾರ್ಯರ ಧರ್ಮಪತ್ನಿ ಆರುಂಧತಿಯಂತೆ ಇದ್ದು, ವಿದ್ಯಾರ್ಥಿಗಳಿಗೆ ತಾಯಿಯಾಗಿ ಮನೆಗೆಲಸಕ್ಕೆ ಗೃಹಿಣಿಯಾಗಿ, ಅತಿಥಿಗಳಿಗೆ ಅನ್ನಪೂರ್ಣೆಯಾಗಿ ಇದ್ದರು. ರಮಾಬಾಯಿಯಂತೆ ಅವರ ಹೆಸರು ಅವರು ನರಸಾಪೂರವರ ಮನೆಯ ಹೆಣ್ಣುಮಗಳು. ಪತಿಯ ಮನೆ ಬೆಳಗಿದವರು. ಅವರ ಪುಣ್ಯ ಉದರದಲ್ಲಿ ಕ್ರಿ.ಶ. ೧೮೮೩ರಲ್ಲ ಜೇಷ್ಠ ಪುತ್ರನಾಗಿ ಶ್ರೀ ಮಾಧವೇಶಾಚಾರ್ಯರು ಜನಿಸಿದರು. ತಂದೆಯಂತೇ ಜ್ಞಾನ ವೈರಾಗ್ಯ ಸಂಪನ್ನರಾಗಿ, ಭಕ್ತಿ ಮಾರ್ಗದಲ್ಲಿ ತೀವ್ರವೇ ಮುಂದಾದರು. ವೇದಾಂತ, ವ್ಯಾಕರಣ, ಸಾಹಿತ್ಯ, ಎಲ್ಲದರಲ್ಲಿಯೂ ನಿಷ್ಣಾತ ಪಂಡಿತರಾದರು. ತಂದೆಯ ಅಪ್ಪಣೆ ಪಡೆದು ಈಚಲಕರಂಜಿಯ ಬಾಳಕೃಷ್ಣ ಬುವಾ ಸ್ವರ ಸಾಮ್ರಾಟ್ ಎಂದು ಪ್ರಖ್ಯಾತವಗಿದ್ದವರಲ್ಲಿ, ಸಂಗೀತ ವಿದ್ಯೆಕಲಿತು ಪ್ರಖ್ಯಾತರಾಗಿದ್ದರು. ಆ ವಿದ್ಯೆಯನ್ನು ಲೌಕಿಕದಲ್ಲಿ ಎಂದೂ ಉಪಯೋಗಿಸದೇ ದೇವರ ವಿಷಯಕ್ಕೇ ಮೀಸಲಾಗಿಸಿದರು.
ತಂದೆ ತೀರಿದ ಮೇಲೆ ತಮ್ಮ ಕುಟುಂಬ, ೩ ಜನ ಗಂಡು ಮಕ್ಕಳು, ೪ ಹೆಣ್ಣು ಮಕ್ಕಳು, ಬಾಣಂತಿತನ, ಎಲ್ಲ ಭಾರವಿದ್ದರೂ ಸ್ವಾಮಿ ಪರಿವಾರ, ಅವನಿಗೇ ಅವರ ಕಾಳಜೀ, ಅಂತಾ ನಿಶ್ಚಂತೆಯಿಂದ ತಮ್ಮ ಸಾಧನದ ಕಡೆಗೇ ಹೆಚ್ಚು ಗಮನವಿಟ್ಟರು.ಬಾಲವಿಧವೆ ತಂಗಿಯೇ ಮನೆಯೊಳಗಿನ ಆಗುಹೋಗುಗಳನ್ನು ಗೃಹಕಾರ್ಯವನ್ನು ಮಾಡುತ್ತಿದ್ದಳು. ಸದಾ ಅವರ ಬಾಯಲ್ಲಿ ಹರಿಕಥಾಮೃತ ಸಾರ ನಡೆದೇ ಇರುತ್ತಿತ್ತು. ೩೨ ಸಂಧಿ ಮುಖಪಾಠವಿತ್ತು ಆ ಸಾದ್ವಿಮಣಿ, ಸಿಟ್ಟಿಗೆದ್ದ್ದು, ಬೇಸರವೆಂದದ್ದೂ ಎಂದೂ ಯಾರೂ ನೋಡಿರಲಿಲ್ಲ. ತಂದೆತಾಯಿಗೆ ತಕ್ಕಮಗಳು, ಅಣ್ಣಗೆ ತಕ್ಕ ತಂಗಿ ಅಂತಾ ಜನರಾಡುತ್ತಿದ್ದರು. ಆಚಾರ್ಯರ ಆಶ್ರಯದಲ್ಲಿ ೮:೧೦ ಜನ ಅನಾಥ ವಿಧವಾ ಹೆಂಗಸರು ಸಹ ಇದ್ದರು. ಅವರಿಗೆಲ್ಲ ಒಂದು ಸೇವೇ ಸದಾ ಹರೇರಾಮಜಪ ಮಾಡುತ್ತಾ ದೇವರು ಮಧ್ಯಾಹ್ನಕ್ಕೆ ಏನು ಎಷ್ಟು ಕೊಡುವನೋ ಅದನ್ನು ಹರಿಪ್ರಸಾದವೆಂದು ಊಟ ಮಾಡಬೇಕು. ಇದಕ್ಕೆ ತಯಾರಿದ್ದವರಿಗಷ್ಟೆ ಪ್ರವೇಶ, ಅಂತಾ ಸ್ಪಷ್ಟ ಹೇಳುತ್ತಿದ್ದರು !
ವೇಣೂಬಾಯಿ ಆಂತಾ ಅತೀ ಸಾತ್ವೀಕ ಪತ್ನಿ ಇದ್ದಳು. ಭೋಳೆ ಸ್ವಭಾವದವಳಿದ್ದು ಯಾವ ಕೆಲಸವನ್ನೂ ಮಾಡುತ್ತಿದ್ದಿಲ್ಲ. ಒಂದು ಸಾರೆ ನೆಗೆಣ್ಣಿಯರು ಬಂಗಾರದ ಒಸ್ತ ಇಟ್ಟುಕೊಡಂತೆ ನನಗೂ ಮಾಡಿಸಿರೆಂದು ಕೇಳಿದಳಂತೆ. ಆಗ್ಗೆ ನಮ್ಮ ಆಚಾರ್ಯರು ಹೀಗೆ ಹೇಳಿದರಂತೆ , ನೋಡು, ಅವರಿಗೆ ಬಹಳ ಒಸ್ತ ಇಲ್ಲ ಅದಕ್ಕೆ ಅವರು ಇದ್ದಷ್ಟೇ ಮೈಮೇಲೆ ಇಟ್ಟುಕೊಂಡಿದ್ದಾರೆ. ನಿನಗೆ ರಾಮದುರ್ಗ ಮಹಾರಾಜನೇ ಮಾಡಿಸಿ ಎಲ್ಲ ತರದ ವಸ್ತು ತನ್ನ ತಿಜೋರಿಯಲ್ಲಿಟ್ಟಿದ್ದಾನೆ. ನಮ್ಮ ಹಳೇ ಬೀಳಕ ಮನೆಯೆಂದು ಕಳ್ಳಕಾಕರ ಭಯವಾದೀತೆಂದು ನಾನೇ ರಾಜನಿಗೆ ನಿನ್ನ ತಿಜೋರಿಯಲ್ಲಿರಲಿ ಅಂತಾ ಹೇಳಿದ್ದೇನೆ’ ಅಂತಾ ಹೇಳಿದರು. ನನಗೆ ಅಷ್ಟೂ ತಿಳಿಯುವುದಿಲ್ಲವೇ? ಎಂದು ಅವಳೇ ಒಂದು ಸಾರೆ ನನ್ನ ಮುಂದೆ ಹೇಳಿದ್ದಳು.
ಪೂರ್ವಿಜರಿಂದಲೂ ಅವರ ಮನೆತನದಲ್ಲಿ ವೈರಾಗ್ಯದ ಖಣಿಗಳೇ, ಇದ್ದರಲ್ಲದೇ ಜ್ಞಾನ ಭಂಡಾರ ಇಂಥಾದ್ದು ! ಭಾಗವತ ಸಾರೋದ್ದಾರ ಸದಾ ಪಾರಾಯಣ, ಎಂಥಾದಕ್ಕೆ ಕರ್ತೃವಾದ ಶ್ರೀ ವಿಷ್ಣುತೀರ್ಥರ ವೈರಗ್ಯದಂತೆ ನಡೆದವರಿಗೇ ಸಾದ್ಯ. ಎಲ್ಲೆಲ್ಲಿ ಹೋಗಿ ನೆಲಿಸುವರೋ ಅಲ್ಲಲ್ಲಿ ಹರೇರಾಮಾಶ್ರಮ, ಮತ್ತು ತುಳಸೀ ಹಚ್ಚಿ ಬೆಳೆಸಿ ಕೋಟಿ ತುಳಸಿ ಏರಿಸುವುದು, ಇದರಂತೇ ಎಷ್ಟು ಕೋಟಿ ಹರೇರಾಮ ಜಪ ಎಷ್ಟು ಕೋಟಿ ತುಳಿಸಿ ಅರ್ಚನೆ ಆಗಿದೆಯೋ? ಏಣಿಸಲಾಸಾಧ್ಯ. ಸದಾ ಹೋಗಿ ವಾಸಿಸಿದಲ್ಲೆಲ್ಲ ಪುರಾಣ ಪ್ರವಚನಗಳು, ಭಜನೆ ಮಾಡುವುದು ಅದರಂತೇ ತಮ್ಮನ್ನನುಸರಿಸುತ್ತಿದ್ದವರಿಗೆ ಸದುಪದೇಶದಿಂದ ಸನ್ಮಾರ್ಗ ತೋರಿಸುವುದು, ನಡೆದೇ ಇರುತ್ತಿತ್ತು, ೬ ವೈರಿಗಳನ್ನು ಗೆದ್ದ ಮಹಾತ್ಮರು, ಆದರೆ ಪುರಾಣ ನಡೆದಾಗ್ಗೆ ಗಂಟೆ ಬಾರಿಸಿದರೆ, ಗರ್ಭಗುಡಿಯಲ್ಲಿ ಬೇರೆ ಮಾತಾಡಿದರೆ, ಮಾತ್ರ ಸಹನವಾಗದೇ ಗುಡುಗುತ್ತಿದ್ದರು. ಉಳಿದ ವೇಳೆಯಲ್ಲೆಲ್ಲ ಹಸನ್ಮುಖದಿಂದ ಪಾರಾಯಣ ಜಪ ಇಂಥದರಲ್ಲೇ ನಿರತರಾಗಿರುತ್ತಿದ್ದರಲ್ಲದೇ ಪ್ರವಚನ ರೂಪದಲ್ಲಿ ನಮ್ಮಂಥ ಆಜ್ಞಾನಿಗಳಿಗೆ ತಿಳಿಯಾಗಿ ತಿಳಿಸಿ ಹೇಳುತ್ತಿದ್ದರು. ಅಂದರೆ ನಮ್ಮ ಬುದ್ಧಿಗೆ ನಿಲುಕುವಂತೆ ಲೌಕಿಕದ್ದೇ ಉದಾಹರಣೆ ಕೊಟ್ಟು ಮನಸ್ಸಿಗೆ ನಡುವಂತೆ ಹೇಳುತ್ತಿದ್ದರು. ಅವರು ತಾವು ಹೇಳಿದಂತೇ ಆಚರಿಸುತ್ತದ್ದರು. ಅದು ಮುಖ್ಯ ವೈರಾಗ್ಯವೆಂದು ಎಷ್ಟೋ ಜನರು ಇನ್ನೂ ಅವರ ಬಗ್ಗೆ ಹೇಳುತ್ತಾರೆ. ನಾನು ಸ್ವತಃ ಅವರನ್ನು ಕಂಡದ್ದು ಅಥಣಿಯಲ್ಲಿ ಶ್ರೀ ಭೀಮದಾಸರಿಗೊಲಿದ ಶ್ರೀರಾಯರವೃಂದಾವನ ಸ್ಥಾಪಿತವಾಗಿದೆ. ಒಂದು ಚಿಕ್ಕ ಝೊಪಡಿಯಲ್ಲಿ ವೃಂದಾವನ ಇಟ್ಟಿದ್ದು ಕೆಲವು ಭಕ್ತರಿಂದ ಹಣ ಬಂದು ಸ್ಥಾಪನೆ ಆಗಿ ಕೆಲವು ವರ್ಷ ಹೇಗೋ ನಡೆದು ಭೀಮದಾಸರಿಗೆ ಅಜಾರಿ ಆಗಿ ನಮ್ಮಗುರುಗಳನ್ನು ಕಾಶಿಯಿಂದ ಬರಬೇಕೆಂದು ಕೇಳುತ್ತಿರಲು, ಅವರು ನಾನು ಕಾಶಿಯಲ್ಲೇ ಕೊನೆವರೆಗೆ ಇರುವೆ, ಅಂದರು ಕಡೆಗೆ ಅವರ ಹೆಸರಿಗೇ ಭೀಮದಾಸರು ಮಠ ಬರೆದುಕೊಟ್ಟರು. ಅವರ ಮೇಲೆ ಜವಾಬುದಾರೀ ಆಗಿ, ಅವರು ಕೆಲವು ವರ್ಷ ಅಥಣಿಯಲ್ಲಿರಬೇಕಾಯಿತು.
ಇದಕ್ಕಿಂತ ಪೂರ್ವದಲ್ಲೇ ಅನೇಕ ವರ್ಷಗಳ ಹಿಂದೆ ನಮ್ಮ ವಿಜಾಪೂರ ಜನರ ಭಾಗ್ಯವೆನ್ನುವಂತೆ ೫:೬ ವರ್ಷ ಇಲ್ಲಿದ್ದಾಗ್ಗೆ ಇಲ್ಲಿಯ ಭಾವಿಕರಿಗೆಲ್ಲ ಅಮೃತದೂಟ ಹಾಕಿದರು. ಅದು ( ಕರ್ಣಾಮೃತ ) ಜ್ಞಾನ, ಭಕ್ತಿ, ವೈರಾಗ್ಯ, ಈ ಮೂರರಲ್ಲಿ ಯಾವುದೂ ಕಡಿಮೆ ಇಲ್ಲ. ಅವರಷ್ಟು ದುಃಖ ಸಹಿಸುವುದಂತೂ ಯಾರಿಂದಲೂ ಸಾದ್ಯವಿಲ್ಲ.
ಕಾಯದಿಂದ ಅನುಭವಿಸುವುದು ಬಹು ಕಷ್ಟ. ಇದು ಎಲ್ಲರಿಗೂ ಅನುಭವಸಿದ್ಧ, ಅದರಲ್ಲಿಯೂ ಅಥಣಿಯಲ್ಲಿದ್ದಾಗ್ಗೆ ಒಂದು ದ್ವಾದಶಿ ದಿವಸ ನಸುಕಿನ 5 ಘಂಟೆಗೆ ಎದ್ದು ಬಹಿರ್ದೇಶಕ್ಕೆ ಹೊರಟಾಗ್ಗೆ, ಕತ್ತೆಲೆಯಲ್ಲಿ ಒಂದು ಹಾಳುಬಾವಿಯಲ್ಲಿ ಬಿದ್ದುಬಿಟ್ಟರು. ಮನೆಯಲ್ಲಿ ತಂಗಿಯು ಆಚಾರ್ಯರ ಹಾದೀ ನೋಡುತ್ತಾ, ೮ಗಂಟೆವರೆಗೆ ಇದ್ದು ನಂತರ ಗಾಬರಿಗೊಂಡು ನಾಲ್ಕು ಕಡೆಗೆಲ್ಲಾ ಹುಡುಕಿದಾಗ ಉಪವಾಸದವರು ಎಲ್ಲಿ ಹೋಗಿರಬಹುದು. ಅಂತಾ ಪೇಚಾಟದಲ್ಲಿರಲು, ದನ ಕಾಯುವ ಹುಡುಗರು ಓಡುತ್ತಾ ಬಂದು ಆಚಾರ ಆಜ್ಜಾ ಅವರು ಬಾವಿಯಲ್ಲಿ ಬಿದ್ದಾರೆ. ಹರೇರಾಮ ಅಂತಾ ಒದರುತ್ತಿದ್ದಾರೆ. ಅಂತಾ ಹೇಳಲು ಆಗ ಸುಮಾರು ೧೦ ಘಂಟೆಗೆ ಅಲ್ಲಿಯ ಜನರು ಬಿದಿರು ತೊಟ್ಟಿಲ ಬಿಟ್ಟು ತಾವೂ ಒಬ್ಬೊಬ್ಬರು ಬಾವಿಯಲ್ಲಿಳಿದು ಅವರನ್ನು ಎತ್ತಿ ಕೂಡಿಸಿ, ಮೇಲೆ ಜಗ್ಗಿ ತಂದು ಮಲಗಿಸಿ ಉಪಚಾರ ಮಾಡಿದರು. ೧೫ದಿನಗಳ ವರೆಗೆ ಮುಳ್ಳುಗಳನ್ನು ತೆಗೆದರಂತೆ. ಇಷ್ಟಾದರೂ ಹಸನ್ಮುಖರಾಗೇ ಭೇಟಿ ಬಂದವರೊಡನೆ ಮಾತಾಡುತ್ತಿದ್ದರು. ಇದು ಪ್ರಾರಬ್ಧ ಭೋಗಿಸಲೇಬೇಕಲ್ಲ? ಇದು ಸ್ವಾಮಿಯ ಸಂಕಲ್ಪ ಯಾರಿಗೂ ಬಿಟ್ಟದ್ದಲ್ಲ ಅನ್ನುತ್ತಿದ್ದರು. ಟೊಂಕದ ಎಲಬು ಮುರಿದು ವಿಪರೀತ ವೇದನೆಯಿಂದ ಆಗಾಗ್ಗೆ ನರಳುತ್ತಿದ್ದು ಅಂಥದರಲ್ಲಿಯೇ ಹರೇರಾಮ ಅಂತಾ ಸ್ಮರಣೆ ನಡೆದೇ ಇರುತ್ತಿತ್ತು. ಅವರ ಶ್ರೀ ಶಾಮರಾವ್ ನರಸಾಪೂರ ಅವರೂ ಒಬ್ಬಿಬ್ಬ ಭಕ್ತರೂ ಮಿರಜಕ್ಕೆಕರೆದುಕೊಂಡು ಹೋಗಲು ಕಬ್ಬಿಣದ ಸಳಿ ಡಾಕ್ಟರು ಕೂಡಿಸಿದರಂತೆ, ಕೆಲವು ತಿಂಗಳ ನಂತರ ಮತ್ತೆ ಹೋಗಿ ಸಳಿ ತಗಿಸಿಕೊಂಡು ಬಂದನಂತರ, ಮಲಗಿಕೊಂಡೇ ಪುರಾಣ ಶ್ರವಣ ಮಾಡುತ್ತದ್ದರು. ಕಾಶಿಯಲ್ಲಿರುವ ಬಯಕೆ ದಿನೇದಿನೇ ಹೆಚ್ಚಾಗಲು ಕಂಕುಳ ಕೋಲಿನ ಸಹಾಯದಿಂದ ಸ್ವಲ್ಪ ನಡೆಯಲು ಶುರುವಾದೊಡನೇ ಕಾಶಿಗೇ ಹೋದರು. ಅಲ್ಲಿ ನಿತ್ಯ ಕಂಕುಳ ಕೋಲಿನ ಸಹಾಯದಿಂದಲೇ ಗಂಗಾ ಸ್ನಾನ ಮಾಡಿ ಬರುವುದು ನಿರಂತರ ಹರೇರಾಮ ಜಪ ನಡೆದೇ ಇರುತ್ತಿತ್ತಂತೆ.
ಇನ್ನು ಮನಸ್ಸಿನ ದುಃಖ ಕೂಡಾ ಅವರಿಗೆ ಕಡಿಮೆ ಇಲ್ಲ !. ೩:೪ ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಪ್ರೌಢರಾಗಿಯೇ ಇವರ ಕಣ್ಣು ಮುಂದೇ ಹೋದರು. ಹೆಂಡತಿ ಮೊದಲೇ ಹೋದರು. ಆಗಾ ಕೂಡಾ ಶಾಂತತೆಯಿಂದಲೇ ಸ್ವಾಮಿಯ ನಿಯಮದಂತೇ ಎಲ್ಲವೂ ನಡೆಯುವುದು. ಅವನೇ ಕೊಟ್ಟಿದ್ದ ವಸ್ತು ಅವನೇ ಕಸಿದುಕೊಂಡಾಗ ದುಃಖಿಸಿದರೆ ಏನು ಆಗುವುದು? ನಮಗೆ ಕರೆ ಬಂದರೆ ನಾವೂ ಹೋಗುವರೇ, ಊರಿಗೆ ಹೋಗುವರಂತೆ ತಯಾರ ಮಾಡಬೇಕು ಅನ್ನುತ್ತಿದ್ದರು. ಅಥಣಿ ಮಠ ಇವರ ತಾಬೇದಲ್ಲಿದ್ದಾಗ್ಗೆ ಕೂಡಾ ಮ್ಯಾನೇಜ್ಮಂಟಕ್ಕೆ ಬೇರೆಯವರನ್ನು ನೇಮಿಸಿದ್ದು, ಅನೇಕ ಊರುಗಳಿಂದ ಎಮ್.ಓ. ಬರುತ್ತಿದ್ದರೆ ಕೇವಲ ಸಹಿ ಮಾಡಿ ಹಣ ಕೈಯಿಂದ ಹಿಡಿಯುತ್ತಿದ್ದಿಲ್ಲ. ನಿಸ್ಪ್ರುಹದಿಂದಲೇ ಇಡೀ ಜೀವನ ನಡೆಸಿದವರು. ಒಮ್ಮೆ ಪದ್ಮ ಸರೋವರದಲ್ಲಿ ಶ್ರೀ ಸತ್ಯಧ್ಯಾನ ತೀರ್ಥರು ಏಕಾದಸಿ ಜಾಗರಣೆ ಮಾಡಿದಾಗ್ಗೆ ನಮ್ಮ ಆಚಾರ್ಯರು ದ್ವಾದಶಿ ಸ್ತೋತ್ರ ರಾಗಧಾರಿಯಾಗಿ ಸುಶ್ರಾವ್ಯವಾಗಿ ಮಧುರ ಕಂಠಸ್ವರದಿಂಧ ಗಾಯನ ಮಾಡಿದರಂತೆ, ಆಗಾ ಶ್ರೀಗಳವರು ಪರಮಾನಂದದಿಂದ ೫ತೂಲಿ ಬಂಗಾರದ ಕಡಗ ಕೈಗೆ ಸ್ವತಃ ಹಾಕಿದರಂತೆ, ಮುಂದೆ ಹರಿವಾಣ ಸೇವೆ ಆಗಿಂದ ಎಲ್ಲರೂ ಸ್ನಾನಾನ್ಹೀಕ ನಡಿಸಿದಾಗ್ಗೆ ಆಚಾರ್ಯರು ತಾವೂ ತಮ್ಮ ದೇವರ ಪೂಜಾ ಮುಗಿಸಿದ ಮೇಲೆ ಅಲ್ಲಿಯೇ ಪೂಜಾ ಮಾಡುತ್ತಾ ಕುಳಿತ ಬಡ ಬ್ರಾಹ್ಮಣನಿಗೆ ದಕ್ಷಿಣೆ ಸಹಿತ ಆ ಬಂಗಾರದ ಕಡಗ ಕೃಷ್ಣಾರ್ಪವೆಂದು ಕೊಟ್ಟರಂತೆ! ಇದರಂತೇ ಅವರು ನುಡಿದಂತೇ ನಡೆದದ್ದು ಅನೇಕರ ಬಾಯಿಂದ ಕೇಳ ಬರುತ್ತಿದೆ. ಪುರಾಣ ಪ್ರವಚನ ಕೇಳಿ ಮಂಗಳವೆಂದು ಜನ ತಯಾರಿ ಮಾಡಿದರೆ, ಅವರೆನ್ನುತ್ತಿದ್ದ ಮಾತು, ಧನದ ಅಪೇಕ್ಷೆ ಮಾಡಿ ಮಂಗಳ ಮಾಡಿದರೆ, ಅದು ಕೇವಲ ಅಂಗಳ (ಬಯಲು) ಮಂಗಳ ಸ್ವಾಮಿಗೆ ನಿತ್ಯವೂ ಇರುವುದು. ಒಮ್ಮೆ ಮಂಗಳದಲ್ಲಿ ಭಕ್ತರೆಲ್ಲರೂ ರೂಪಾಯಿಗಳನ್ನು ಹಾಕುತ್ತಿದ್ದಾಗ ಒಬ್ಬ ಗ್ರಹಸ್ಥರು ರೂಪಾಯಿಗಳನ್ನು ಹಾಕಿದ್ದಲ್ಲದೇ ತಮ್ಮ ಕೈಯೊಳಗಿದ್ದ ಪವಿತ್ರದುಂಗುರ ( ಬಂಗಾರದ್ದು) ಹಾಕಿದರಂತೆ. ಮಂತ್ರಾಕ್ಷತೆ ಕೊಡುವ ಮುಂದೆ ಪ್ರತಿಯೊಬ್ಬ ಬ್ರಾಹ್ಮಣನಿಗೂ ಒಂದೊಂದು ಹಿಡಿ ರೂಪಾಯಿ-ನಾಣ್ಯಗಳನ್ನು ಕೊಡುತ್ತಿದ್ದು ಒಬ್ಬ ಬ್ರಾಹ್ಮಣನಿಗೆ ಆ ಪವಿತ್ರ ಉಂಗುರ ಸಹಿತ ಉಡಿಯಲ್ಲಿ ಬಂದಿತಂತೆ, ಅವನು ಸ್ವಾಮಿ ಈ ಉಂಗುರ ಆ ಗ್ರಹಸ್ಥರು ಇದೀಗ ತಮಗೆ ಕೊಟ್ಟಿದ್ದಾರೆಂದು ತಿರುಗಿ ಕೊಡಲು, ’ಅದು ನಿಮಗೇ ನಿಮ್ಮ ಭಾಗದ್ದು’ ಅಂದು ಕೈ ಝಾಡಿಸಿಕೊಂಡು ವಾಸಸ್ಥಳಕ್ಕೆ ಹೋದರಂತೆ.
೧೦೧ ವರ್ಷ ಜೀವಿಸಿದ ಮಹಾತ್ಮರ ಚರತ್ರೆ ೧:೨ ಪುಟದಲ್ಲಿ ಹೇಗೆ ಸಾಧ್ಯ? ಭಾಗವತ ಸಾರೋದ್ಧಾರವಂತೂ ಅವರ ರಕ್ತಗತವಾದಂತೆ ಎಂದು ಸರ್ವರ ಬಾಯಲ್ಲೂ ಇರುತ್ತಿತ್ತು. ಕಾಶೀ ವಿಶ್ವೇಶಾಂತರ್ಗತ, ಭಾರತಿರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಬಿಂದುಮಾಧವನ ಸನ್ನಿಧಿಯಲ್ಲಿ ತಾ 21-8-1984 ಶ್ರಾವಣ ವಧ್ಯ ದಶಮಿ ದಿನ ವೈಕುಂಠವಾಸಿಗಳಾದರು. ಅಂಥ ಮಹನೀಯರ ಅಗಲುವಿಕೆಯಿಂದ ಎಲ್ಲ ಭಕ್ತ ವೃಂದಕ್ಕೂ ದೊಡ್ಡ ನಿಧಿ ಕಳೆದಂತಾಗಿದೆ.
ವರ್ಷಾಂತಿಕ ಹಳೇ ಹುಬ್ಬಳ್ಳಿ ಮಠದಲ್ಲಿ ಜರುಗಿತು. ಆಗ್ಗೆ ಪಿಂಡಕ್ಕೆ ನಮಸ್ಕಾರ ಮಾಡುಲು ತುಂಬಾ ಭಕ್ತರು ಸೇರಿದ್ದೆವು. ಮರುದಿನ ಏಕಾದಸಿ ದಿನ ಅವರ ಉಪದೇಶ ಅವರ ಆಚರಣೆ, ಅವರ ವೈರಾಗ್ಯ, ಸಹನ ಶೀಲತೆ, ಒಂದೊಂದೇ ನೆನಪಾಗಿ ಕಣ್ಣೀರು ತನ್ನಷ್ಟಕ್ಕೆ ತಾನೇ ಹೋಗುತ್ತಾ ಒಂದು ಹಾಡು ಅವರ ಮೇಲೆ ಆಗಿದೆ. ಅದು ಅವರ ಅನುಗ್ರಹದಿಂದಲೇ ಎಂದು ಪದೇ ಪದೇ ನೆನಪಿಗೆ ಬರುತ್ತಿದ್ದು, ಅದನ್ನು ಮುಂದೆ ಕೊಟ್ಟಿದೆ.