ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಮಂಡಿಗೆಗಳು

162. ಮುರಾರಿಯ ನೆನೆಯದ ಮನ |

ಕೇಶವನಾರಾಧಿಸದ ನಾಲಿಗೆ ||

ಕಂಸಾರಿಯ ಪೂಜಿಸದ ಕೈಗಳು |

ಗೋವಿಂದನ ದರುಶಕೆ ಹೋಗದ ಕಾಲ್ಗಳು ||

ನಾರಾಯಣ ಮೂರ್ತಿ ಕಾಣದ ಕಂಗಳು |

ಹರಿಯಕಥೆ ಕೇಳದ ಕಿವಿಗಳು ||

ಹೃಷಿಕೇಶನ ಧರಿಸದ ಹೃದಯ |

ಜೀವ ಇಲ್ಲದ ದೇಹಕೆ ಅಲಂಕಾರ ಮಾಡಿದಂತೆ ||

ಶ್ರೀಕೃಷ್ಣವಿಠ್ಠಲಾ ಎಂದು ಒಂದು ಬಾರಿ ಆರ್ತಯಿಂ ಕರೆಯೇ |

ಕಲಿಯುಗದಿ ಕರೆದು ಕೈವಲ್ಯ ಕೊಡುವ ಬಿಡದೆ ||

163. ಐದು ಕುದುರೆಯ ರಥದಿ ಕುಳಿತು |

ಎರಡು ಚಕ್ರವ ಕಟ್ಟಿ ಎಳೆಯುತಿರೆ ||

ಬಿಟ್ಟು ಬಿಡದೆ ಮೂಕ ಸಾಕ್ಷಿಗನಂತೆ ಇರುವ |

ಮನದಿಂದಲೇ ಹರ್ಷಾದಿ ಉಣಿಸುವ ನಮ್ಮ ಶ್ರೀಕೃಷ್ಣವಿಠ್ಠಲ ||

ವಿವರಣೆ-ಐದು ಕುದುರೆ ಪಂಚ ಜ್ಞಾನೇಂದ್ರಿಯಗಳು

ರಥ - ದೇಹ, 2 ಚಕ್ರ - ಪಾಪ - ಪುಣ್ಯ, ಮೂಕಸಾಕ್ಷಿ-ಪರಮಾತ್ಮ

164. ತಾನು (ಆತ್ಮ) ತಾನಲ್ಲ, ತನ್ನದು (ದೇಹ) ತನ್ನದಲ್ಲ |

ತನಗಾಗುವ (ದೇಹ) ಸುಖ-ದುಃಖ ತನಗಲ್ಲ (ಆತ್ಮಕ್ಕಿಲ್ಲ) ||

ತನ್ನದಲ್ಲದ್ದನ್ನು (ಪರಮಾತ್ಮ) ಅರಿಯುವುದೇ ಜೀವನಧ್ಯೇಯ |

ಅಣೋರಣೀಯಾ ಮಹಿತೋ ಮಹಿಯಾನ್ ಎಂದು ||

ಅಣುರೇಣು ತೃಣಕಾಷ್ಠದಿ ವಿರಾಜಿಪ ಸರ್ವವ್ಯಾಪ್ತ |

ಗುಣ ಪರಿಪೂರ್ಣ ಶ್ರೀಕೃಷ್ಣವಿಠ್ಠಲನ ಅರಿವೇ ನಿತ್ಯಸತ್ಯ ||

165. ನಾನು ನಾನಲ್ಲ | ನಾನೆಂಬುದು ಹೋಗಲ್ಲ || ಪ ||

ನೀನಿಲ್ಲದೆ ನಾನಿರಲಾರೆ, ನಾ ನಿನಗೆ ಬೇಕಿಲ್ಲ || ಅ ||

ನನ್ನ ಒಳ ಹೊರಗೆ ನೀನೇ ವ್ಯಾಪಿಸಿರುವೆ |

ನನ್ನ ಆಗು ಹೋಗುಗಳ ಸಾಕ್ಷಿಯಾದ ||

ನಿನ್ನನ್ನೇ ಅರಿಯದ ಅಜ್ಞಾನಿ ನಾನು |

ನನ್ನ ತಿಳುವಿಗೂ ನಿಲುಕದ ಆಗರ ನೀನು || 1 ||

ನನ್ನ ಸಹಚಾರಿ ಆಗಿದ್ದರೂ ನಿನ್ನ ನೋಡಿಲ್ಲ |

ನಿನ್ನಿಂದಲೇ ಸಕಲ ಕಾರ್ಯ ನಡೆಯುವುದು ||

ನೀ ನಡೆಸಿದರೆ ಮಾತ್ರ ನಾ ನಡೆಯುವೆ |

ನನ್ನ ಕೈ ಬಿಡದಿರು ಶ್ರೀಕೃಷ್ಣವಿಠ್ಠಲ || 2 ||

"ಅಕ್ಷರವಾಚಕ ಮುಂಡಿಗೆಗಳು"

166. ನಿಜದ ನಿಜ ಪಿತನ್ಯಾರು (ಸತ್ಯಸ್ಯಸತ್ಯ) |

ನಿಜ ದನಿ ಜಪಿತನ್ಯಾರು (ಶ್ರೀವಾಯುದೇವರು) ||

ಕಾಮ ದಮನ ಮಾಡದೆ |

ಕಾಮದ ಮನ ಮಾಡದೆ |

ಚಿತ್ತದಿ ನೆನೆ ಶ್ರೀಕೃಷ್ಣವಿಠ್ಠಲನ ಬಿಡದೆ ||

167. ಪರರ ಮಾತನು ಹೇಳಿದಂತೆ |

ಪರ ರಮಾ ತನು ಹೇಳಿದಂತೆ ||

ನೀ ಬಿಡದೇ ಹರಿ ತಿಳಿದುಕೋ |

ನಿಬಿಡ ದೇಹ ರೀತಿ ತಿಳಿದುಕೋ ||

ಸುಹೃದಯದಿ ವಾಸಿಪನು |

ಸುಹೃ ದಯದಿ ವಾಸಿಪನು ಶ್ರೀಕೃಷ್ಣವಿಠ್ಠಲರಾಯಾ ||

168. ಆತ್ಮಕ್ಕೊಂದು ದೇಹ, ದೇಹಕೊಂದು ಆತ್ಮ |

ಧರ್ಮಕ್ಕೊಂದು ಅರ್ಥ, ಅರ್ಥಕೊಂದು ಧರ್ಮ |

ಮೋಕ್ಷಕ್ಕೊಂದು ಕಾಮ, ಕಾಮಕೊಂದು ಮೋಕ್ಷ |

ಸುಮನಕ್ಕೊಂದು ಬುದ್ಧಿ ಬುದ್ಧಿಕೊಂದು ಧ್ಯಾನ |

ಹೃದಯಕ್ಕೊಂದು ಚೇತನ, ಚೇತನಕೆ ಪರಮ ಚೇತನ |

ಮರ್ಮವ ಬಿಡಿಸಿ ತಿಳಿಸು ಒಂದಕ್ಕೊಂದರ ಗಂಟು ಶ್ರೀಕೃಷ್ಣವಿಠ್ಠಲ ||

ವಿವರಣೆ :

ಸಾಧನೆ ಮಾಡಲು ಆತ್ಮಕ್ಕೆ ಮಾನವ ದೇಹದ ಅವಶ್ಯಕತೆ ಇದೆ.

ದೇಹ ಹೋದರೂ ಮಾಡಿದ ಸಾಧನೆ ಆತ್ಮನಲ್ಲಿ ಸ್ಥಿರವಾಗಿರುತ್ತದೆ.

ವೇದ ಪ್ರಣೀತ ಧರ್ಮ ಮಾಡುವುದರಲ್ಲೇ ನಿಜವಾದ ಅರ್ಥ ಅಡಗಿದೆ ಇದನ್ನು ಗಳಿಸಲು ಹಣದ ಅವಶ್ಯಕತೆ ಇರುವುದು.

ಮೋಕ್ಷದ ಕಾಮನೆ ಸಕಲ ಸಾಧಕರಿಗೆ ಬೇಕು ಆದರೆ ಕೆಟ್ಟ ಕಾಮನೆಗಳು ಹೋದಾಗಲೇ ಮೋಕ್ಷ ಸಿಗುವುದು.

ಮನಸ್ಸು ಚಂಚಲ, ಒಳ್ಳೆಯದನ್ನೇ ಬಯಸುವ ಮನಸ್ಸಿಗೆ ಸ್ಥಿರ ಮಾಡಿಕೊಡುವ ಬುದ್ಧಿಬೇಕು. ಸ್ಥಿರ ಬುದ್ಧಿಗೆ ಒಂದು ಸಂತತ ಚಿಂತನೆಬೇಕು.

ಸಾಧನಾ ದೇಹವಿರಬೇಕಾದರೆ ಹೃದಯದಲ್ಲಿ ಆತ್ಮವಿರಬೇಕು

ಆ ಆತ್ಮಕ್ಕೆ ಪರಮಾತ್ಮನೇ ಜೊತೆ ಅವನ ಅನುಗ್ರಹದಿಂದ

ಮಾತ್ರ ಮೇಲಿನದೆಲ್ಲಾ ಸಾಧ್ಯ, ಇದನ್ನು ಪಡೆಯುವ ಬಗೆ ಸರಳವಾಗುವಂತೆ ಬಿಡಿಸಿ ತಿಳಿಸು ಶ್ರೀಕೃಷ್ಣವಿಠ್ಠಲಾ ||

"ಸಂಖ್ಯಾವಾಚಕ ಮುಂಡಿಗೆಗಳು"

169. ಒಂದರ ಸುಖ ಸವಿಯಲೇಬೇಕು | ಪ್ರಯತ್ನದಿ ||

ಎಂದರೆ ಎರಡರರ್ಥ ತಿಳಿಯಲು ಬೇಕು ||

ಮೂರರ ಮೆಟ್ಟಲೇರಿ ಪಡೆಯಲು | ಇರಬೇಕು ನಾಲ್ಕರ ಸಹಾಯ ||

ಪಂಚರೈವರ ತುಳಿದು ಹಂಚಿಕೆಯಿಂದ | ವಂಚಿಸಿ ಆರು ಅರಿಗಳ ತರಿಯಲುಬೇಕು ||

ಸಪ್ತಕಗಳ ಸಪ್ತದೋಷ ಕಳೆದು | ವ್ಯಾಪ್ತವಾಗಿರುವ ಅಷ್ಟಕ ವರ್ಜಿಸಲುಬೇಕು ||

ನವವಿಧದಿ ತನ್ಮಯರಾಗಿ ಸದಾ | ಭವತಾರಕ ಶ್ರೀಕೃಷ್ಣವಿಠ್ಠಲನದಯದಿ ಪೂರ್ಣಜ್ಞಾನಿ ಯಾಗೋ || ಹೇ ಮನುಜ ||

ವಿವರಣೆ

1) ಸ್ವರೂಪ ಸುಖವನ್ನು ಪ್ರಯತ್ನದಿಂದಾಗಲಿ ಸವಿಯಲೇಬೇಕು. ಅದಕ್ಕಾಗಿ ಭಕ್ತಿ ಪ್ರವೃತ್ತಿ ಹಾಗೂ ವಿಷಯಸುಖಗಳ ನಿವೃತ್ತಿ (2) ತಿಳಿಯಲು ಬೇಕು. ಜ್ಞಾನ, ಭಕ್ತಿ, ವೈರಾಗ್ಯದ (3) ಮೆಟ್ಟಲೇರಿದರೆ ಮಾತ್ರ ಸಾಧ್ಯ. ಇದನ್ನು ಪಡೆಯಲು ಯಜ್ಞ, ಅಧ್ಯಯನ, ದಾನ, ತಪಗಳಿಂದ (4) ಸಾಧ್ಯ ಪಂಚೇಂದ್ರಿಯಗಳ (5) ಆಶೆಯನ್ನು ಮೀರಿ ಕಾಮಾದಿ (6) ಷಡ್ವೈರಿಗಳನ್ನು ದಮನ ಮಾಡಲೇಬೇಕು. ಸಪ್ತಕಗಳ (7) ಸಪ್ತ ದೋಷಗಳಾದ ದುಷ್ಟ ಸ್ತ್ರೀಸಂಗ, ದ್ಯೂತ, ಬೇಟೆ, ಸುರಾಪಾನ, ಬಿರುನುಡಿ, ಉಗ್ರ ಶಿಕ್ಷೆ, ಅರ್ಥನಿಂದ್ರೆ ಮುಂತಾದ ಸಪ್ತದೋಷಗಳನ್ನು ಕಳೆದು ಅಷ್ಟಮದಗಳನ್ನು (8) ನಿವಾರಿಸಬೇಕು. [ಅನ್ನಮದ, ಅರ್ಥಮದ, ಅಖಿಲವೈಭವಮದ, ಪ್ರಾಯದಮದ, ರೂಪಮದ, ತನ್ನ ಸತ್ವದ ಬಲ, ಭೂವಶಮದ, ತನಗೆ ಯಾರು ಎದುರಿಲ್ಲ ಎಂಬ ಮದ] ಆಗಲೇ ನವವಿಧ ಶ್ರವಣಾದಿಗಳಲ್ಲಿ (9) ಸಂಪೂರ್ಣ ತನ್ಮಯರಾಗಿದ್ದಾಗಲೇ ಸಂಸಾರ ಸಮುದ್ರ ದಾಟಿಸುವ ಶ್ರೀಕೃಷ್ಣವಿಠ್ಠಲ ದಯೆಯಿಂದ ಜೀವನ ಯೋಗ್ಯತೆಗೆ ಅನುಗುಣವಾದ ಪೂರ್ಣಜ್ಞಾನ ಪಡೆಯಬಹುದು.

170. ಚಿತ್ತವೊಂದೇ ಆದರೆ ಮನವೆರಡು |

ಈ ತ್ರಿಗುಣಗಳ ಗೊಂದಲದಿ ಗಳಿಸಿ ನಾಲ್ಕನು ||

ಪಂಚಭೂತಗಳಿಂದಾದ ದೇಹದಿ ಆರು ತರಿದು |

ಸಂಚು ಮಾಡಿ ಏಳು ಮೀರಿ ಎಂಟನು ದಾಟಿ ||

ಒಂಬತ್ತರಿಂದ ಮೇಲೆ ಹತ್ತು ಸೇರು ವೈಕುಂಠ |

ಬೆಂಬಿಡದೆ ಶ್ರೀಕೃಷ್ಣವಿಠ್ಠಲನ ಪಾದ ಭಜಿಸಿ ||

ವಿವರಣೆ :

ಪರಮಾತ್ಮನ ಸ್ಮರಣೆವೊಂದೇ (1) ಸಾಕು ಆದರೆ (ದ್ವಂದ್ವ ) ಚಂಚಲ ಮನ ಬೇಕು ಬೇಡಗಳ ಸಂಗಮ. ಸತ್ಪ, ರಜ, ತಮೊ ಗುಣಗಳ (3) ಗೊಂದಲದಲ್ಲಿದ್ದರೂ ನಾವು ತಪ್ಪದೇ ಧರ್ಮ, ಅರ್ಥ, ಕಾಮ, ಮೋಕ್ಷಕ್ಕಾಗಿ (4) ಪ್ರಯತ್ನಿಸಲೇಬೇಕು. ಪೃಥಿವ್ಯಾದಿ (5) ಪಂಚಭೂತಗಳಿಂದಾದ ಈ ಶರೀರದಲ್ಲೇ ಸಾಧ್ಯವಾಗಿಸಿಕೊಳ್ಳಬೇಕಾದರೆ ಷಡೂರ್ಮಿಗಳಾದ (6) ಹಸಿವು-ಬಾಯಾರಿಕೆ (ಪ್ರಾಣಧರ್ಮ), ಶೋಕ-ಮೋಹ, (ಮನೋಧರ್ಮ) ಜರಾ-ಮೃತ್ಯು(ದೇಹಧರ್ಮ) ಮೀರಿ ಸಪ್ತದೋಷಗಳನ್ನು (7) ಕಳೆದು ಅಷ್ಟಮದ (8) ದಾಟಿ ಶ್ರವಣಾದಿ (9) ನವವಿಧ ಭಕ್ತಿಯ ಸಹಾಯದಿಂದ ಪೂರ್ಣವಾಗಿ ಮೇಲೆ ಹತ್ತು ಮತ್ತೆ ತಿರುಗಿ ಸಂಸಾರಕ್ಕೆ ಬರಲಾರದಂತೆ ವೈಕುಂಠ ಸೇರು ಇದು ಹೇಗೆಂದರೆ ಬಿಡದೆ ಶ್ರೀಕೃಷ್ಣವಿಠ್ಠಲನ ಪಾದ ಭಜಿಸಿದರೆ ಮಾತ್ರ ಸಾಧ್ಯ.

171. ಜಗನ್ನಿಯಾಮಕ, ಜಗದೋದ್ಧಾರಕ, ಜಗನ್ನಾಥ ಪಾಲಿಸೋ |

ಜಲಜಾಕ್ಷಿಪ್ರಿಯ ಜನ್ಮ ಮುಕ್ತಿಪ್ರದೋ ದೇವಾ || 1 ||

ಸರ್ವಾಂತರ್ಯಾಮಿ, ಸರ್ವೋತ್ತಮ, ಸಕಲ ಗುಣಪೂರ್ಣ |

ಸ್ವತಂತ್ರ ಸತ್ಯ ಮೂರುತಿ ಸದ್ಭಕ್ತಿ ಕರುಣಿಸೋ || 2 ||

ದುರಿತಗಳೆಲ್ಲಾ ದಹಿಸಿ ದೋಷಗಳ ಕಳೆಯುತ |

ದುರ್ಲಭ ಮಾನವ ಜನ್ಮದಿ ಸುಲಭ ಸಾಧನೆಗೈಸೋ || 3 ||

ಪರಮ ಪುರುಷ ಪರವಾಸುದೇವ ಪರಮಾಪ್ತನೇ |

ಪರಿ ಪರಿಯಲಿ ಪೇಳುವೆ ಪರಿ ಪಾಲಿಸೋ || 4 ||

ಕಡು ಕಷ್ಟವ ಕಳೆದು, ಸಂತುಷ್ಟ ಉತ್ಕøಷ್ಟನೇ |

ದಿಟ್ಟ ನಮ್ಮ ಶ್ರೀಕೃಷ್ಣವಿಠ್ಠಲ ದಯಾ ದೃಷ್ಟಿ ತೋರೋ || 5 ||

172. ಒಂದರ ಒಲುಮೆಯಿಂದ ಒಂದನ್ನು ಕಳೆದು |

ಒಂದರಲ್ಲೇ ಪ್ರಯತ್ನಿಸಿ ಒಂದರಿಂದ ಮಾತ್ರ ||

ಒಂದರೊಳಗೊಂದಾಗಿ ಒಂದನ್ನು ಪಡೆಯಲು ಸಾಧ್ಯ |

ಇದು ಶ್ರೀಕೃಷ್ಣವಿಠ್ಠಲನಾಣಿಗೂ ಸಾಧ್ಯ, ಸತ್ಯ ಸಾಧ್ಯ ||

ವಿವರಣೆ :

ಪರಮಾತ್ಮನ ಒಲುಮೆಯಿಂದ ಪ್ರಾರಬ್ಧವನ್ನು ಕಳೆದು ಒಂದೇ ಅಮೂಲ್ಯವಾದ ನರಜನ್ಮದಲ್ಲಿ ಪ್ರಯತ್ನಿಸಿ ನಿಜಭಕ್ತಿಯಿಂದ ಮಾತ್ರ ಪರಮಾತ್ಮನಲ್ಲಿ ಏಕಾಗ್ರ ಬುದ್ಧಿಯಿಂದ ಮುಕ್ತಿಯನ್ನು ಪಡೆಯಲು ಸಾಧ್ಯ. ಇದು ಶ್ರೀ ಕೃಷ್ಣವಿಠ್ಠಲನಾಣೆಗೂ ಸಾಧ್ಯವಿದೆ. ಸತ್ಯವಾಗಲೂ ಸಾಧ್ಯವಿದೆ.

173. ನಾವು ಇದ್ದರೆ ನೀವು, ಇಲ್ಲದಿರೆ ಯಾರಿದ್ದರೇನು ಫಲ ? |

(ಪರಮಾತ್ಮ ಮತ್ತು ಪ್ರಾಣ ಇದ್ದರೆ ದೇಹ, ಇಂದ್ರಿಯಗಳು. ಇಲ್ಲದಿರೆ

ಸರ್ವಾಂಗ ಶವದಂತೆ)

ನಾವು - ನೀವು ಜೊತೆ ಇರೆ ಪರಿಪೂರ್ಣ ಇದ್ದಂತೆ || 1 ||

(ಭಕ್ತಿ ಮತ್ತು ಜ್ಞಾನ, ಸಾಧನ ದೇಹದ ಜೊತೆ ಇರೆ ಪರಮಾತ್ಮನ ಕೃಪೆ )

ನಾವು ಇಲ್ಲದಿರೇ, ನೀವು ಇಲ್ಲೇ ಇರುವಿರಿ |

(ದೋಣಿ ಇಲ್ಲದೆ ಜೀವ ಸಂಸಾರ ಸಾಗರ ದಾಟನು ಎಂದರೆ ಪರಮಾತ್ಮ ಒಪ್ಪದಿರೆ ಸುಖ-ದುಃಖ ಮಿಶ್ರಿತ ಸಂಸಾರದಲ್ಲೇ ತೊಳಲುವಿರಿ)

ನಾವು ಬಯಸಿದರೆ ನೀವು ಅಲ್ಲಿಗೆ ಬರಬಹುದು || 2 ||

(ಪರಮಾತ್ಮನ ಪ್ರಸಾದವಾದರೆ ಮುಕ್ತಿ ಸಾಧ್ಯ)

ನಾವು ಸದಾ ಇರುವವರು ನೀವು ಬಂದು ಹೋಗುವವರು |

(ಪರಮಾತ್ಮ ನಿತ್ಯ, ಜೀವ ಸಂಸಾರಕ್ಕೆ ಬಂದು ಹೋಗುವುದು)

ನಾವು ನೀವು ಸದಾ ಜೊತೆ ಇದ್ದರೂ ನಿಮಗದು ತಿಳಿದಿಲ್ಲ || 3 ||

("ದ್ವಾ ಸುಪರ್ಣಾ ಸಯುಜಾ ಸಖಾ ............... ಎಂಬಂತೆ)

ನಾವು ಇಲ್ಲದೆ ನೀವು ಇಲ್ಲ ಇದು ಶ್ರೀಕೃಷ್ಣವಿಠ್ಠಲನಾಣೆಗೂ ಸತ್ಯ ||

(ಪರಮಾತ್ಮನ ಬಿಟ್ಟು ಜೀವಾತ್ಮ ಎಂದಿಗೂ ಇಲ್ಲ)

174. ಮಾಡುವೆನೆಂದರೆ ಮಾಡದು | (ಜೀವಸ್ವತಂತ್ರ ಕರ್ತೃತ್ವ ಇಲ್ಲ)

ಮಾಡೆನು ಎಂದರೆ ಬಿಡದು || (ಪ್ರಾರಬ್ಧ ಒಲ್ಲೆ ಎಂದರೆ ಬಿಡದು)

ಸೆಡ್ಡು ಹೊಡೆದರೆ ನಾ ಮಾಡಬಹುದೇ ? | (ಅಹಂಕಾರ ಭಾವ)

ಒಡೆಯ ಶ್ರೀಕೃಷ್ಣವಿಠ್ಠಲ ಮಾಡಿಸಿದರೆ ಮಾಡುವೆ || (ಶರಣಾಗತ ಭಾವ)

175. ಪುಟ್ಟದ ದೇಶವಿಲ್ಲ ಧರಿಸದ ದೇಹವಿಲ್ಲ |

ಮುಟ್ಟದ ಗ್ರಾಸವಿಲ್ಲ ತಿರುಗದ ಸ್ಥಳವಿಲ್ಲ || 1 ||

ಬಟ್ಟ ಬಯಲಲ್ಲೂ ನೀನೇ ಗತಿ |

ಹುಟ್ಟದ ಸ್ಥಿತಿಯಲ್ಲೂ ನೀನೇ ಜೊತೆ || 2 ||

ಹುಟ್ಟಿದ ಮೇಲೆ ಹೊಟ್ಟೆಯ ಚಿಂತೆ |

ಹೊಟ್ಟೆಗಾಗಿ ಮಾಡದ ಕೆಲಸವಿಲ್ಲ || 3 ||

ಕಟ್ಟದೆ ಬುತ್ತಿ ತಿಂದುಂಡು ತೇಗಿದೆ |

ಜಟ್ಟಿ ನಾನೆಂದು ಎಂಟರಿಂದ ಬೀಗಿದೆ || 4 ||

ಕಟ್ಟ ಕಡೆಗೆ ನಿನ್ನ ಪಾದವೇ ಗತಿಯೆಂದೆ |

ಖಟ್ವಾಂಗನಂದದಿ ನಿನ್ನ ಸೇರಲರಿಯೆ || 5 ||

ಸತ್ಯದಾಣೆಗೂ ಮುಂದೆ ಎಲ್ಲಿ ಹೇಗೆಂದರಿಯೇ |

ಕಟ್ಟಿ ಎಳೆದೊಯ್ವಾಗ ನಿನ್ನ ಸ್ಮರಣೆ ಸಾಕು |

ಇಷ್ಟು ಮಾತ್ರ ಪಾಲಿಸು ಶ್ರೀಕೃಷ್ಣವಿಠ್ಠಲರೇಯಾ || 6 ||

176. ಮೂರು ಮಾತೆಯರ ಮಗನೊಬ್ಬ - ದ್ವಿ ಮಾತೆಯರ ಪುತ್ರನೊಬ್ಬ ||

ಪಿತೃವಾಕ್ಯ ಪರಿಪಾಲಕನೊಬ್ಬ - ಮಾವ ಕಂಸನ ಕೊಂದವನೊಬ್ಬ ||

ಸ್ಪರ್ಶಿಸಿ ಶಿಲೆ ಬಾಲೆ ಮಾಡಿದನೊಬ್ಬ - ಒದ್ದು ಬಂಡಿಯ ಅಸುರನ ಕೊಂದೊಬ್ಬ ||

ಭ್ರಾತೃಪ್ರಿಯ ಏಕಪತ್ನಿ ವ್ರತಸ್ಥನೊಬ್ಬ - ಸಾವಿರಾರು ಹೆಂಡಿರ ಆಳಿದವನೊಬ್ಬ ||

ಕಪಿಸೈನ್ಯವ ಕಟ್ಟಿದವನೊಬ್ಬ - ಆಯುಧವಿಲ್ಲದೆ ಜಯಸಿದವನೊಬ್ಬ ||

ಅಪವಾದಕ್ಕಂಜಿ ಪತ್ನಿ ಬಿಟ್ಟವನೊಬ್ಬ - ಅಪವಾದ ಕಳೆದು ಕನ್ಯಾಮಣಿ ತಂದವನೊಬ್ಬ ||

ಒಪ್ಪುವಂತೆ ನಡೆದ ಪುರುಷೋತ್ತಮನೊಬ್ಬ - ಕಪಟನಾಟಕ ಸೂತ್ರಧಾರಿಯೊಬ್ಬ ||

ಸರ್ಪಶಯನ ನೊಬ್ಬನೇ ಆಡಿದ ನಾಟಕ ಬೇರೆ - ಅವನೇ ಶ್ರೀಕೃಷ್ಣವಿಠ್ಠಲನೆಂದು ಬೇರೆ ಹೇಳಲೇಕೆ ? ||

177. ಈರ್ವರಲಿ ಉತ್ತಮೋತ್ತಮರ್ಯಾರು ಈ | ಪರಿ ದ್ವಂದ್ವವ ಅರಿತು

ಪರಿಹರಿಸಿರೋ || ಪ ||

ಎರಡು ಸತಿಯುಳ್ಳವನೋ | ಮೂರು ಸತಿಯುಳ್ಳವನೋ ||

ಮರ್ದಿಸಿದ ವಿಷವುಂಡವನೋ | ಮಂದರ ಪೊತ್ತವನೋ || 1 ||

ಶಿರದಿ ಜಲ ಪೊತ್ತವನೋ | ನೀರು ಪಾದದಿಂ ಸುರಿದವನೋ ||

ಕೊರಳ ತರಿದ ಮಗನ ಅಪ್ಪನೋ | ಜರೆದವನ ತರಿದು ಮುಕ್ತಿ ಇತ್ತವನೋ || 2 ||

ಸ್ತ್ರೀರೂಪಕೆ ಮರುಳಾದವನೋ | ಸ್ತ್ರೀರೂಪದಿ ಅಮೃತವನುಣಿಸಿದವನೋ ||

ವಿರೂಪದಿ ಮಾವನ ಕೊಂದವನೋ | ಮಾವನಕೊಂದು ಹಿರಿಯರ ಸೆರೆ ಬಿಡಿಸಿದವನೋ || 3 ||

ಕರುಣದಿ ದಾನವರಿಗೂ ವರವಿತ್ತವನೋ | ಆಪತ್ತು ಕಳೆದು ಪ್ರಾಣ ಉಳಿಸಿದವನೋ |

ಸುರ-ನರರಲಿ ವೈಷ್ಣವೋತ್ತಮನೋ | ಸ್ವಯಂ ಗುಣಪೂರ್ಣ ಮುಕ್ತಿ ಪ್ರದಾತ ಶ್ರೀಕೃಷ್ಣವಿಠ್ಠಲನೋ || 4 ||

178. ಹುಡುಗತನದಿ ಹುಡುಗಾಟ, ಯೌವನದಿ ಕಾಮದಾಟ |

ನಡಗುವ ವೃದ್ಧಾಪ್ಯದಿ ಕಾಡುವ ರೋಗದಾಟ ||

ಬಂಧ ಸಂಸಾರ ಕಾಲ ಕಳೆದರೂ ಒಮ್ಮೆಯಾದರೂ ನೆನೆಯಲಿಲ್ಲ |

ಒಡೆಯ ಶ್ರೀಕೃಷ್ಣವಿಠ್ಠಲನೇ ವ್ಯರ್ಥ ಹೋಯಿತು ಜನುಮವೆಲ್ಲಾ ||

"ಏಕಾದಶಿ ವ್ರತ"

179. ಹರಿ ಪ್ರೀತಿಗಾಗಿ ಹರಿದಿನ ವ್ರತ ಮಾಡದ ನರರು ಹಂದಿಗಿಂತ ಕಡೆ |

ಮುರಾರಿಯ ಮನ ಮುಟ್ಟಿ ಭಜಿಸದ ಜೀವನ ನರಕಯಾತನೆ || 1 ||

ಸ್ವಾರ್ಥಕ್ಕಾಗಿ ಮಾಡಿದ ದಾನ ಧರ್ಮ ಹೊಳೆಯಲ್ಲಿ ಹುಣಸೆ ತೊಳೆದಂತೆ|

ಸ್ಮರಿಸದೆ ನಮ್ಮ ದಿಟ್ಟ ಶ್ರೀ ಕೃಷ್ಣವಿಠ್ಠಲನ ದಿನವೇ ಸೂತಕದ ದಿನ || 2 ||

180. ದಶಮಿ - ಏಕಾದಶಿ - ದ್ವಾದಶಿ ತಿಥಿತ್ರಯ ವ್ರತಸಾಧಿಸಿ |

ಬೇಸರಿಸದೆ ಹರುಷದಿ ಅನುಗಾಲವೂ ಈ ವ್ರತವ ಮಾಡಿರೋ || 1 ||

ಹರಿದಿನದ ದಶಮಿ, ದ್ವಾದಶಿ ಒಪ್ಪತ್ತು ಉಂಡು ಏಕಾದಶಿ ದಿನ |

ನಿರ್ಜಲ, ನಿರಾಹಾರಿಯಾಗಿ, ರಾತ್ರಿ ಜಾಗರದಿ ನಾರಾಯಣನ ಮೆಚ್ಚಿಸಿ || 2 ||

ಸುಗುಣಾಂತರಂಗನ ಗುಣಗಾನ ಮಾಡುತ್ತಾ ನಮ್ಮ ಮನದಿ |

ದುರ್ಗುಣಗಳ ನಿರ್ಮೂಲನಗೈವಂತೆ ಹರಿಯ ಭಜಿಸಿ || 3 ||

ಏಕಾದಶಿ ಉಪವಾಸ ಸಾಧಿಸಿ ಹೊತ್ತು ಮೀರದೆ ದ್ವಾದಶಿ ಪಾರಣೆಗೈದು |

ಶ್ರೀಕೃಷ್ಣವಿಠ್ಠಲನ ಪ್ರೀತಿಗಾಗಿ ಸುಜೀವಿಗಳಿಗೆ ಈ ವ್ರತ ಪೇಳಿರೋ || 4 ||

181. ವೈಕುಂಠ ಏಕಾದಶಿಯಂದು ನಿರ್ಜಲ ನಿರಾಹಾರದಿಂದಿದ್ದು |

ಏಕಮನದಿ ವೈಕುಂಠಪತಿಯ ಭಜಿಸಿ ನಿರಂತರ |

ಭಕ್ತಿಯಲಿ ರಾತ್ರಿ ಜಾಗರದಿ ಅಖಂಡ ಭಜಿಸಿ |

ಮುಕ್ಕೋಟಿ ದ್ವಾದಶಿ ಪಾರಣೆ ಹೊತ್ತು ಹೋಗದೆ ಮಾಡೇ |

ನಾಕ ಸಿಗುವುದು ನಿಶ್ಚಯ ಕಟ್ಟಿಟ್ಟ ಬುತ್ತಿಯಂತೆ |

ಲಕ್ಷ್ಮೀಪತಿ ಶ್ರೀಕೃಷ್ಣವಿಠ್ಠಲನ ಪಾದವೇ ಸಾಕ್ಷಿ ||

182. ಕೆಟ್ಟ ಮಾತುಗಳಿಂದ ಬಿಡುಗಡೆ |

ಕೆಟ್ಟ ವಿಚಾರಗಳಿಂದ ಬಿಡುಗಡೆ ||

ಕೆಟ್ಟ ಕೆಲಸಗಳಿಂದ ಬಿಡುಗಡೆ |

ಕೆಟ್ಟ ವಿಷಯಬಂಧದಿಂದ ಬಿಡುಗಡೆ ||

ದಿಟವಾಗಿ ಈ ಬಿಡುಗಡೆಯೆ ಜೀವಕೆ ಮುಕುತಿ |

ಸೃಷ್ಟೀಶ ಶ್ರೀಕೃಷ್ಣವಿಠ್ಠಲನ ದಯದಿ ದೊರೆವುದು ||

183. ಸಕಲೇಂದ್ರಿಯಗಳು ಸುಸ್ಥಿತಿಯಲ್ಲಿರೆ ಮೋಜಿನಲಿ ದಿನಗಳುರುಳಿದವು |

ಶ್ರೀಕೃಷ್ಣವಿಠ್ಠಲನ ನೆನಪಾದುದು ಒಂದೊಂದೇ ಇಂದ್ರಿಯ ಕೈಬಿಟ್ಟಾಗ ||

ಸುಖದಿ ಸುಖಪೂರ್ಣನ ನೆನೆಯದೆ ದುರುಳರ ಕೈ ಪಿಡಿದೆ |

ದುಃಖದಿ ಶ್ರೀಕೃಷ್ಣವಿಠ್ಠಲನ ಬೈಯುತ ದಿನ ಕಳೆದೆ ||

ಧಿಃಕ್ಕಾರವಿರಲಿ ಮಾನವ ಜನುಮ ನಿರರ್ಥಕ ಕಳೆದುದಕೆ |

184. ಏಸು ಜನುಮ ಕಳೆದವೋ, ಏಸು ತಾಯ್ತಂದೆಗಳಾದರೋ ||

ಏಸು ಊರು ತಿರುಗಿದೆನೋ | ಏಸು ಬಂಧು ಬಳಗ ಬಿಟ್ಟೆನೋ ||

ಏಸು ಅನ್ನದ ಪರ್ವತ ಕರಗಿಸಿದೆನೋ | ಏಸು ನದಿಯ ನೀರು ಕುಡಿದೆನೋ || 1 ||

ಏಸು ಮನೆ ಕಟ್ಟಿ ಬೀಳಿಸಿದೆನೋ | ಹೊಸತಾಗಿ ಕಾಣುತಿದೆ ಪ್ರತಿ ಸಲ ||

ಈ ಸುಳಿಯಲ್ಲಿ ಸಿಕ್ಕು ಹೊರ ಬರಲಾರದೆ | ಹಸನಾದ ಬಾಳಿಗೆ ಪರಿತಪಿಸುವೆ ||

ಹಂಸ ಮಂತ್ರ ಜಪಿತ ಶುದ್ಧಾತ್ಮನೇ | ಈಶ ಶ್ರೀಕೃಷ್ಣವಿಠ್ಠಲಗೆ ಪೇಳಿಪಾರುಗೈಸೋ || 2 ||

185. ಸಾಧನೆಯ ಮೆಟ್ಟಲೇರಿ ಗುರಿ ಮುಟ್ಟುವುದ್ಹ್ಯಾಂಗೆ |

ಬಂಧನದ ನಿವೃತ್ತಿ ಉಪಾಯ ತಿಳಿವುದ್ಹ್ಯಾಂಗೆ ಎನ್ನದೆ || 1 ||

ವೇದವ್ಯಾಸ, ಮೋದತೀರ್ಥರ, ಜಯರಾಯ, ರಾಘವೇಂದ್ರರು |

ಬೋಧಿಸಿದ ಮಾರ್ಗದಿ ನಡೆದು ಕ್ರಮದಿ ಸಾಧಿಸಲು ಬೇಕು || 2 ||

ಸಾಧಕರಿಗೆ ಸತತ ಸಾಧನೆಯ ಪ್ರಯತ್ನವಿರಬೇಕು |

ಸದಾಚಾರ - ಸತ್ಕರ್ಮಾಚರಣೆಯಿಂ ಶುದ್ಧಾಂತಃಕರಣಲಭ್ಯ || 3 ||

ಸದ್ವಿಚಾರದಿ ದೊರೆಯುವುದು ನಿಶ್ಚಲ - ನಿರ್ಮಲಮನ |

ತೊಡೆದುರಾಗ ದ್ವೇಷಗಳ, ನೀಗಿ ಸಂಶಯ - ಭ್ರಮೆಯ || 4 ||

ಪಡೆದು ಶಾಸ್ತ್ರಗಳ ಜ್ಞಾನ ಗುರುಗಳಿಂದ ಅಜ್ಞಾನ ತೊಡೆಯೇ |

ತಡೆದು ಸುಖ-ದುಃಖಗಳ ಸರಮಾಲೆ, ಕಳೆದು ಪಾಪ-ಪುಣ್ಯ || 5 ||

ಬಿಡುಗಡೆ ಬಯಸಿ ಅನಾದಿ ಪ್ರಕೃತಿ ಬಂಧನದಿ |

ಇಂದ್ರಿಯ-ದೇಹ ಬೇರೆ, ತನ್ನ ಆತ್ಮದ ಅರಿವು ತಿಳಿದು || 6 ||

ಸದಾ ಇರುವ ಬ್ರಹ್ಮ ಜ್ಞಾನ ತಿಳಿದು ಧ್ಯಾನಿಸಿ |

ಬುಧರು ಪರಮಾತ್ಮನ ಸಾಕ್ಷಾತ್ಕರಿಸಿಕೊಳ್ಳುವರು || 7 ||

ಬೋಧಿಸಿ ಈ ಸತ್ಯ ಇತರರಿಗೆ ಜ್ಞಾನ ಸಾರ್ಥಕಗೊಳಿಸುವರು |

ಹೃದಯದ ಸ್ವಾನಂದಾನುಭವಕೆ ಪರಮಾತ್ಮನ ಭಜಿಪರು || 8 ||

ಶುದ್ಧ ವಿಶೇಷ ಭಕ್ತಿಯಲಿ ಪರಮಾನುಗ್ರಹ ಪಡೆÀವರು |

ಸಾಧಿಸಿ ಶ್ರೀಕೃಷ್ಣವಿಠ್ಠಲ ದಯದಿ ಮುಕ್ತಿ ಎಂಬ |

ಮುದ ನೀಡುವ ನಿತ್ಯ ಮೋಕ್ಷಫಲ ಪಡೆವರು || 9 ||

(ಶ್ರೀವಿಶ್ವೇಶತೀರ್ಥರ ಪ್ರವಚನ ಸ್ಪೂರ್ತಿಯಿಂದ ಬರೆದಿದ್ದು)

186. ಎನಗ್ಯಾರು ಗತಿ ಎನ್ನ ಬೇಡಾ | ನಿನಗೆ ನೀನೇ ಗತಿ ಬೇರ್ಯಾರಿಲ್ಲಾ || ಪ ||

ಎನಗೆ ಇಹರು ಸೇವಕರಿಬ್ಬರು ಕೈಗಳೆರಡು |

ಎನ್ನ ಹೊತ್ತೊಯ್ಯಲು ವಾಹನ ಕಾಲುಗಳೆರಡು ||

ಎನಗೆ ಉತ್ತಮ ಮಾರ್ಗದರ್ಶಕರೆರಡು ಕಂಗಳು |

ಎನಗೆ ಸರಿ ಮಾತು ಕೇಳಿಸುವ ಕಿವಿಗಳೆರಡು || 1 ||

ಎನ್ನ ಪ್ರಾಣಕ್ಕಾಧಾರ ಅನ್ನ, ಒಳಹಾಕಲೊಂದು ಬಾಯಿ |

ಎನ್ನ ದೇಹದ ಮಲ ಹೊರಗ್ಹಾಕುವರಿಬ್ಬರು ಗುದ, ಉಪಸ್ಥ ||

ಎನ್ನೊಳಗಿನ ಚಿತ್ರ ವಿಚಿತ್ರ ಮುಚ್ಚುವುದು ಚರ್ಮವು |

ಎನಗೆ ನಿಶ್ಚಿತ ಜ್ಞಾನ ಕೊಡಲು ಬುದ್ಧಿಯೊಂದಿದೆ || 2 ||

ಎನ್ನ ಭಾವನೆಗಳರ್ಥ ಮಾಡುವ ಮನವೊಂದಿದೆ |

ಎನ್ನ ಪ್ರೇರಕರು ಇಂದ್ರಿಯಾಭಿಮಾನಿ ದೇವತೆಗಳಿಹರು ||

ಎನಗೆ ಮುದ ತರುವ ಮೃದು ಹೃದಯ ಒಂದಿದೆ |

ಎನಗೆ ಪರಮಗತಿ ಕೊಡುವ ಶ್ರೀಕೃಷ್ಣವಿಠ್ಠಲನೇ ಅದರೊಳಿರಲು ಬೇರೆ ಯಾಕೆ ಬೇಕು || 3 ||

187. ಪರಮಾತ್ಮ ದಯದಿ ಇತ್ತ ನರಜನುಮ |

ವ್ಯರ್ಥವಾಗಿಸದೇ ಸಾರ್ಥಕವಾಗಿಸಿರೋ || ಪ ||

ತಿರುಗಿ ಎಂಬತ್ನಾಲ್ಕುಲಕ್ಷಯೋನಿ ನಂತರದ ಜನ್ಮ |

ತಿರುಗಿ ಬಾರದು ಮತ್ತೇ ಈ ಜನುಮ ಯೋಚಿಸಿ ನೋಡಿರೋ ||

ಕರ್ಮೇಂದ್ರಿಯ ಜ್ಞಾನೇಂದ್ರಿಯಗಳೈದೈದು ತಿದ್ದಿ ತಿದ್ದಿ |

ಸರಿಯಾದ ಮಾರ್ಗದಿ ಬುದ್ಧಿ, ಮನ ಅನುಸರಿಸಲು || 1 ||

ಈ ಹೃದಯದಿ ಅಷ್ಟದಳದಲ್ಲಿಪ್ಪವನ ಬೇಡಿರೋ |

ಬರಿದೆ ವಿಷಯ ಸುಖ ಲೋಲುಪದಿ ಹಾಳು ಮಾಡದೇ ||

ಸರ್ವಪ್ರಯತ್ನದಿ ಸಕಲೇಂದ್ರಿಯ ಸನ್ಮಾರ್ಗದಿ ನಡೆಸಿ |

ಪ್ರಾರಬ್ಧ ಅನುಭವಿಸುತ ಭಕ್ತಿಯೆಡೆ ಮನಹರಿಸಿ || 2 ||

ಜಾರಿ ಹೋಗುವ ಸಮಯದಿ ಸಾಧಿಸಿ ಗುರು - ಹರಿಯೊಲಮೆ ||

ದುರ್ಲಭತರ ಮಾನವ ಜನುಮದ ಗುರಿ ತಿಳಿಯಿರೋ ||

ನಿದ್ರೆ, ನೀರಡಿಕೆ, ಹಸಿವು, ಮೈಥುನ ಪ್ರತಿ ಯೋನಿಲಿರುವುದು |

ದಾರಿ ಇರದು ಸರಿಯಾದ ಜ್ಞಾನ - ವಿಜ್ಞಾನ ಪಡೆಯಲು || 3 ||

ಸರಿದು ಜನ್ಮ ವೇಳೆ ಸವೆಯುವ ಮುನ್ನ ಪ್ರಯತ್ನದಿ |

ಸ್ಮರಿಸಿ ಸುಗುಣನ ಸದಾ ಸದಾಚಾರದಿ ಬೇಡಿ ಅನುಗ್ರಹ ||

ಸುಪ್ರಯತ್ನದಿ ನವವಿಧ ಭಕ್ತಿ ನವವಿಧದಿ ಮಾಡಿ ಕರ್ಮವ |

ಮರುತಾಂತರ್ಗತ ಶ್ರೀಕೃಷ್ಣವಿಠ್ಠಲಗರ್ಪಿಸಿ ಧನ್ಯರಾಗಿರೋ || 4 ||

188. ಈ ಭೂಮಿ ನನ್ನದು | ಈ ಕನಕ ನನ್ನದು | ಈ ನಾರಿ ನನ್ನವಳು || ಪ ||

ಈ ಬಗೆ ಸ್ವಾಮಿತ್ವ ಸ್ಥಾಪಿಸಿದ ರಾಜಾಧಿರಾಜರೆಲ್ಲಾ ಏನಾದರು ? || ಅ ||

ವಿಷಯ ಸುಖದಿ ಮುಳಗಿ ಇದೇ ನಿಜವೆಂದು ಭ್ರಮಿಸಿ |

ವರ್ಷ ಅನೇಕ ಹರುಷದಿಂ ಸವೆಸಿ ಸಂಭ್ರಮಿಸುವಂತೆ ||

ಸುಮ್ಮನೆ ಬಂದು ಹೋಗುವ ನಡುವೆ ಅಹಂ - ಮಮದಿ ಇದ್ದು |

ನಮ್ಮನೆ ಅಲ್ಲಿದೆ ಇಲ್ಲಿರುವುದು ದೈವೇಚ್ಛೆಯಂದರಿಯದೆ || 1 ||

ನಾನಾ ಕಷ್ಟ ಕೋಟಲೆಗೊಳಗಾಗಿ ಅಲ್ಪ ಸುಖ ಶಾಶ್ವತವೆಂದು |

ತನಗಿದ್ದ ಆಯುಷ್ಯ ಜಾರಿಹೋಗುವುದು ತಿಳಿಯದೆ ಇರುವ ||

ತನಗಿಂತ ಮಿಗಿಲಾರಿಲ್ಲೆಂದು ಮೆರೆದು ಕಾಲದೂತರೆಳೆದೊಯ್ವಾಗ |

ಜನ್ಮ ವ್ಯರ್ಥವಾಯಿತು ಸಾರ್ವಭೌಮ ಶ್ರೀಕೃಷ್ಣವಿಠ್ಠಲನ ಮರೆತೆ ಎಂದು ಹಲಬುವ || 2 ||

189. ಅತೀ ಸಮೀಪ ಅತೀ ದೂರದ ವಸ್ತು ಕಾಣದು |

ಹೃತ್ಕಮಲಸ್ಥ ಮತ್ತು ವೈಕುಂಠಸ್ಥಿತ ಶ್ರೀಕೃಷ್ಣವಿಠ್ಠಲ ಸಹ ಕಾಣನು || 1 ||

ಅತೀ ಬೆಳಕಿನಲಿ ಅತೀ ಕತ್ತಲಲಿ ಏನೂ ತೋರದು |

ಮಿತ್ರಾಂತರ್ಗತ ದುರ್ಗಾಪತಿ ಶ್ರೀಕೃಷ್ಣವಿಠ್ಠಲ ಸಹ ತೋರನು || 2 ||

ವಾಚಕೆ ಸಿಲುಕದ ನಿಗಮತತಿಗೆ ನಿಲುಕದವ |

ಕೊಂಚ ತೋರಿ ತೋರದವ ನಮ್ಮ ಶ್ರೀಕೃಷ್ಣವಿಠ್ಠಲ || 3 ||

ಎಲ್ಲ ಕಡೆಯಲ್ಲಿ ಪ್ರತಿವಸ್ತು ಹೊರ ಒಳಗಿರುವವ |

ಬಲ್ಲವರೊಡನೆ ಸರಸವಾಡುವ ನಮ್ಮ ಶ್ರೀಕೃಷ್ಣವಿಠ್ಠಲ || 4 ||

ಅಪ್ರಮೇಯ ಸ್ವೇಚ್ಛಾನಿಯತ ಸ್ವತಂತ್ರ ಸರ್ವಕರ್ತ |

ಅಪ್ರಾಕೃತದೈವ ಶ್ರೀಕೃಷ್ಣವಿಠ್ಠಲ ಪ್ರಾಕೃತದಿ ತಿಳಿಯಬಲ್ಲನೆ || 5 ||

ಅಣೋರಣೀಯಾನ್ ಮಹತೋ ಮಹಿಯಾನ್ ಸ್ವಯಂಭೂ |

ಕಣಕಣದಿ ವ್ಯಾಪಿತ ಕಂತುಪಿತ ನಮ್ಮ ಶ್ರೀಕೃಷ್ಣವಿಠ್ಠಲ || 6 ||

ಸ್ಥೂಲ-ಸೂಕ್ಷ್ಮ, ಅನಿರುದ್ಧ, ಲಿಂಗ, ಆನಂದ ದೇಹದಿ ಜೊತೆ ಇರುವ |

ಅಲೌಕಿಕ ಸಚ್ಚಿದಾನಂದಾತ್ಮಕ ಶ್ರೀಕೃಷ್ಣವಿಠ್ಠಲ ಹೇಗೆ ಕಾಣುವನು ? || 7 ||

190. ಕಾಲ ಕಾಲಕೆ ಭೂಮಿಗೆ ಬಂದ ಜೀವಿಯ |

ಕಾಲಗಣನೆ ತಕ್ಷಣವೇ ಪ್ರಾರಂಭ || ಪ ||

ಕಾಲವು ಶ್ವಾಸೋಚ್ಛ್ವಾಸದಿ ನಿರ್ಧರಿತ |

ಕಾಲ ಕಾಲದಿ ಕ್ರಮದಿಂ ಕರ್ಮಮಾಡಿಸುತ || 1 ||

ಕಾಲನ ವಶದಿ ಕಾಲ ಸರಿದುದು ತಿಳಿಯದೇ |

ಕಾಲನ ಕರೆ ಬರಲು ಅತೀ ಶ್ರೀಘ್ರದಿ || 2 ||

ಕೆಲಕಾಲ ಸಹ ನಿಲ್ಲಲು ಬಿಡದೆ |

ಕಾಲನ ದೂತರು ಕಾಲ್ಪಡಿದೊಯ್ವರು || 3 ||

ಕಾಲವ ಕಳೆಯದೆ ಸತ್ಕರ್ಮ ಮಾಡಲು |

ಕಾಲನಾಮಕ ಶ್ರೀಕೃಷ್ಣವಿಠ್ಠಲ ಸತತಕಾಯ್ವ || 4 ||

"ಪ್ರೀತಿಯ ಪುತ್ರಿಗೆ ಬುದ್ಧಿವಾದ"

191. ಒಂದು ಮಾತು ಹೇಳುವೆ ಅಂದದ್ದು ಮನಸ್ಸಿಗೆ ತಾರದೆ |

ನಿದ್ರ್ವಂದ್ವದಿಂ ಬಂದದ್ದೇ ಭಾಗ್ಯವೆಂದು ನೀ ಸಾಗು ಮುಂದೆ || ಪ ||

ಮೆಚ್ಚುಗೆಯ ಮಾತು ಬಿಟ್ಟು ಹೆಚ್ಚು ಮಾತಾಡದೆ ಮೌನಿಯಾಗು |

ಯೋಚಿಸಿ ನೋಡಿ ವಿವೇಚನೆಯಿಂ ಕಾರ್ಯವ ನೀ ಮಾಡು |

ಹುಚ್ಚು ಮನಸಿಗೆ ಕಡಿವಾಣ ಹಾಕಿ ಲೋಕದೊಳು |

ಅಚ್ಚುತನಂಘ್ರಿಯ ಬಿಡದೆ ಅರ್ಚಿಸಿ ಸುಖಿಯಾಗು || 1 ||

ಜನರೊಳು ಸಂಗದಿ ಪತಿಗೆ ಕಾಕು ನುಡಿಯದಿರು |

ಮನೆಯೊಳು ಗುರು ಹಿರಿಯರಿಗೆ ತಲೆಬಾಗಿ ವಂದಿಸುತಿರು ||

ಹಣದ ವ್ಯಾಮೋಹ ದೊಡ್ಡಸ್ತಿಕೆ ಬಿಟ್ಟು ಗುಣಿಯಾಗಿರು |

ಮನದೊಳು ಹಟ ದ್ವೇಷ ಬೆಳಿಸಿ ಸಾಧಿಸದಿರು || 2 ||

ಸಕಲರ ಯೋಗಕ್ಷೇಮ ಪ್ರೇಮದಿ ವಿಚಾರಿಸುತಿರು |

ಲೋಕವಾರ್ತೆಗೆ ಕಿವಿಗೊಡದೆ ಮನೆಯೇ ಮುಖ್ಯವೆಂತಿರು ||

ಮಕ್ಕಳ ಲಾಲಸಿ ಪೋಷಿಸು ಸದಾ ಪ್ರೀತಿಯಿಂದ |

ಬೇಕು ಬೇಡಗಳ ಗುರುತಿಸಿ ಸದ್ಬುದ್ಧಿ ಬೋಧಿಸುತಿರು || 3 ||

ಆರೋಗ್ಯವೇ ಭಾಗ್ಯ ಎಂದು ಮರೆಯದಿರು ನೀನೆಂದೂ |

ಆರಿದ ಆಹಾರ ತಂಗಳು ತ್ಯಜಿಸಿ ಆರೋಗ್ಯದಿಂದಿರು ||

ಅರಿತು ಶತ್ರುವಾದ ಆಕರ್ಷಣೆಯಿಂದ ದೂರವಿರು |

ಅರಿಯದೇ ಮಾಡಿದ ತಪ್ಪಿಗೆ ಯಾಚಿಸು ಕ್ಷಮೆ ಸಂಕೋಚಿಸದೆ || 4 ||

ಹೊತ್ತುಮಾಡಿ ತಿರುಗದಿರು ಹೊತ್ತಿಗೆ ಸರಿಯಾಗಿ ಮನೆಯಲಿರು |

ಗೊತ್ತು ಮಾಡಿಕೋ ಮನೆಯ ವ್ಯವಹಾರ ಗುಟ್ಟು ಕಾಪಾಡಿಕೋ ||

ಗೊತ್ತಿಲ್ಲದವರ ನಂಬಬೇಡಾ ನಂಬಿ ನೀ ಕೆಡಬೇಡಾ |

ಜತೆ ನೀನಿರು ಉಸಿರಿನಂತೆ ಪತಿಯ ಸಂಗಡ ಗತ್ತು ಮಾಡದೇ || 5 ||

ಸುಳ್ಳು ನುಡಿಯದಿರು ಪ್ರಿಯವಾದ ಸತ್ಯ ಉಸಿರಾಗಿರಲಿ |

ಲಲ್ಲೆ ಪರರ ಕೂಡ ಮನವೊಲಿಸಲು ಎಂದೂ ಮಾಡದಿರು ||

ಎಲ್ಲೆಲ್ಲೋ ವ್ಯರ್ಥ ಕಾಲ ಕಳೆಯದೆ ಜ್ಞಾನ ವೃದ್ಧಿಸಿಕೋ |

ನಲ್ಮೆಯ ಜೀವನ ನಿನದಾಗಲಿ ಸದಾ ಉತ್ಸಾಹೀ ನೀನಾಗಿರು || 6 ||

ಏಕಾಂತದಿ ಚಿಂತಿಸಿ ತಪ್ಪು ಒಪ್ಪುಗಳ ನಿರ್ಧಾರ ನಿದಾನಿಸಿ ಮಾಡು |

ಚಕಾರ ಬಿಡದೆ ನನ್ನ ತಾಯ್ತಂದೆ ತಿಳಿಸಿದ್ದು ನಿನಗೆ ಹೇಳಿರುವೆ ||

ವಿಕಾರವಾಗದಂತೆ ಸಕಲವ ಅರುಹು ನಿನ್ನ ಮಕ್ಕಳಿಗೆ ಬಿಡದೆ |

ಸಾಕಾರಗೊಳಿಸು ನಿನ್ನ ಜೀವನ ಸಂತೋಷ-ಸಮತೋಲನದಿ || 7 ||

ಸಮಯ ಬಂದಾಗ ಯೋಗ್ಯತಾಯೋಗ್ಯತೆನರಿತು ತ್ಯಾಗ ಮಾಡು |

ಕೋಮಲ ಹೃದಯಕೆ ನೋವಾಗದಂತೆ ಹಸಿರಾಗಿರಿಸು ಸದಾ ||

ಸುಮಧುರ ಬಾಂಧವ್ಯ ಜೀವನ ನಿನ್ನದಾಗಿರಲಿ ಕಂದಾ |

ಅಮಲಗುಣ ಶ್ರೇಷ್ಠ ಶ್ರೀಕೃಷ್ಣವಿಠ್ಠಲನ ಭಜಿಸಿ ನೀ ಸುಖಿಯಾಗು || 8 ||

ಜತ್ತೆ

ಮನುಷ್ಯಳಾಗಿ ಹುಟ್ಟಿದ್ದಕ್ಕೆ ಧರ್ಮದಿ ದಾರಿದೀಪವಾಗು ಸಕಲರಿಗೆ |

ತನಗೇನು ಬಂದಿದೆ ಎಂದು ಚಿಂತಿಸದೆ ಶ್ರೀಕೃಷ್ಣವಿಠ್ಠಲನ ದಯದಿ ನಿಸ್ವಾರ್ಥಿಯಾಗು ||

192. ಅಡಿಗಡಿಗೆ ನಾ ಮಾಡಿದ ಪಾಪ ಅನಂತವಿರಲಾಗಿ |

ಬಿಡದೇ ಸಲಹು ಒಡೆಯಾ ಎಂದರೆ ಸಾಕೆ ? || ಪ ||

ಕಾಮದಿ ಮಾಡಿದ ಮಮಕಾರಕೆ ಎಣೆಯುಂಟೆ ? |

ಕಾಮಹರಗೆ ಮಣಿಯದೇ ತಿರಸ್ಕರಿಸಿದೆ ||

ಕಾಮಪಿತನನ್ನು ಅಜ್ಞಾನದಿಂ ಅಲಕ್ಷಿಸಿದೆ |

ಕ್ಷಮೆಗೆ ಸಲ್ಲ ನಾ ಮಾಡಿದ ಅಪರಾಧ || 1 ||

ಮೋಹಕತನದಿ ಅಹಂಭಾವ ತೋರಿದೆ |

ಸಹವಾಸ ಮಾಡಿ ಕುಹಕಿಗಳ ನಾ ಮೆರೆದೆ ||

ಅಹರ್ನಿಶಿ ಧ್ಯಾನಿಸಿ ಅಯೋಗ್ಯರ ಕೂಡಿದೆ |

ಮಹದೇವ ಎನ್ನಲಿ ತಪ್ಪು ನೋಡದಿರುವನೆ || 2 ||

ಕ್ರೋಧದಿ ಸಕಲರ ತೆಗಳಿ ಬಲ್ಲಿದವರಂತೆ |

ಮೋದವ ತೋರದೆ ದ್ವೇಷವ ಸಾಧಿಸಿದೆ ||

ಕಡುಕೋಪದಿ ಹಾನಿಯ ನಾ ಮಾಡಿದೆ |

ವಿಧ ವಿಧ ಶಾಪಕೆ ಗುರಿಯಾದೆ || 3 ||

ಮದವನಡಗಿಸದೆ ಕೊಬ್ಬಿದೆ ಅಷ್ಟಮದದಿ |

ಹೃದಯದ ಕದ ತೆರೆಯದೆ ಉಬ್ಬಿದೆ ಜಂಬದಿ ||

ವಾದ ವಿವಾದದಿ ನಾ ಗೆದ್ದೆನೆಂಬ ಗರುವತೋರೆ |

ಸದ್ದಡಗಿಸದೆ ಬಿಡುವನೆ ಹೃದ್ಗುಹವಾಸಿ || 4 ||

ಮತ್ಸರದಿ ಯಾರನ್ನೂ ಕೂಡದೆ ಕಡೆಗಣಿಸಿದೆ |

ಯಾತನೆಯ ಕೊಟ್ಟ ಇತರರಿಗೆ ಅಸಹ್ಯಿಸಿ ||

ಶಾಂತರ ಉಪರತರ ಮನ ಕೆಡಿಸಿದೆ |

ಪೂತನಾಹರ ಎನ್ನ ಪಾಪ ಎಣಿಸದಿರನೇ ? || 5 ||

ಲೋಭಕತನದಿ ಸಕಲವೂ ಎನಗೆಂದೆ |

ಗಬ್ಬು ನಾರುವ ದುರ್ಗುಣಗಳ ಆಗರವಾದೆ ||

ಒಬ್ಬರ ಭಿಡೆ ಮಾಡದೇ ನಾನೇ ಸರಿ ಎಂದೆ |

ಅಬ್ಬರದ ಹೆದ್ದೈವ ಶ್ರೀಕೃಷ್ಣವಿಠ್ಠಲ ಎಲ್ಲ ನೋಡನಾ ? || 6 ||

193. ತಿಳಿದವರು ಬುದ್ಧಿ ಹೇಳುವರು |

ತಿಳಿಯಾಗಿ ತಿಳಿಸಿ ಹೇಳುವರು || ಪ ||

ತಿಳಿದೂ ತಿಳಿಯದಂತಿರುವವ ಮೂರ್ಖ |

ತಿಳಿದಿದ್ದು ತಿದ್ದಿಕೊಂಡಾತ ಜ್ಞಾನಿ ||

ಕೇಳಿದ್ದೂ ತಿಳಿಯದವನು ಅಜ್ಞಾನಿ |

ತಿಳಿದುಕೊಂಡು ಬಾಳಿದವ ಸುಜ್ಞಾನಿ || 1 ||

ಒಳಗೆ ಉಳಿಸಿ ಬೆಳಸಿದವ ವಿಜ್ಞಾನಿ |

ಕೊಳಕುತನ ತೊರೆದು ಶುದ್ಧಮನÀದಿ ||

ಒಳಿತನ್ನರಿತು ಒಗೆತನ ಬಿಟ್ಟಾತನ |

ಒಳಿತನ್ನೇ ಸದಾ ಹಾರೈಸಿ ಪೊರೆವ ಶ್ರೀಕೃಷ್ಣವಿಠ್ಠಲ || 2 ||

194. ತಂದೆ, ತಂದೆ ಎನ್ನ ಈ ಜಗಕೆ ತಂದೆ |

ನಿಂದೆ ಜಗದ ಸೋಜಿಗವ ಕಂಡು || ಪ ||

ಬಂಧುಗಳ್ಯಾರೆಂದು ನಿಜದಿ ತಿಳಿಯದೆ |

ಬಂಧ ಮೋಕ್ಷವನೀವನ ಅರಿಯದೆ ||

ಬಂಧನಕ್ಕೊಳಗಾದೆ ಬೆಂಡು ಬಸವಳಿದೆ |

ಹಿಂದಿನದು ಮರೆತೆ ಮುಂದಿನ ದಾರಿ ಅರಿಯದೆ || 1 ||

ದಡ್ಡತನದಿ ಕಂಡ ಕಂಡವರ ಹಿಂದೆ ಅಂಡಲೆದೆ |

ದುಡುಕುತನದಿ ಅನೇಕ ಕುಕರ್ಮ ಮಾಡಿದೆ ||

ಮಾಡುತ ಕರ್ಮವ ಮರೆತೆ ಸರ್ವಕರ್ತನ |

ಬಿಡದೆ ಭಜಿಸೆ, ಶ್ರೀಕೃಷ್ಣವಿಠ್ಠಲ ಮುಕ್ತಿಮಾರ್ಗ ತೋರ್ಪನೆಂಬುದ || 2 ||

195. ರೋಷವು ಸಲ್ಲದು ಸಲ್ಲದು ಎಂದಿಗೂ | ಹರುಷವಿರಲಿ ಮನಕೆ ಸದಾ || 1 ||

ರೋಷದಿ ಮಾಡಿದ ಕಾರ್ಯಗಳೆಲ್ಲಾ ಕೆಡುವುವು | ಹರುಷದಿ ಮಾಡಿದ ಕಾರ್ಯಗಳಿಗೆ ಜಯವುಂಟು || 2 ||

ರೋಷದಿ ದಾನವ ಸ್ತಂಭವನೊಡೆದ ಅಂತ್ಯವ ಕಂಡ | ಹರುಷದಿ ಬಾಲಕ ಸ್ತುತಿಸಲು ಹರಿಕೃಪೆ ಕಂಡ || 3 ||

ರೋಷದಿ ಋಷಿಯು ರಾಜನ ಶಪಿಸಲು ಬಾಧೆಗೊಳಗಾದ | ಹರುಷದಿ ಕ್ಷಮಿಸಿದ ರಾಜ ಭಾಗವತ್ತೋಮನಾದ || 4 ||

ರೋಷದಿ ಒದೆಯಲು ಎದೆಗೆ ಋಷಿ ಪಾದ ದೃಷ್ಟಿ ಹೋಯಿತು | ಹರುಷದಿ ಸಂತೈಸಿದವ ಸರ್ವೋತ್ತಮನಾದ || 5 ||

ರೋಷ ನಟಿಸಿ ಭಾಮೆ ಐಶ್ವರ್ಯದಿ ಹರಿಯ ತೂಗಿ ಬಾಗಿದಳು | ಭಕ್ತಿಯಲಿ ಭೈಷ್ಮಿಗೊಲಿದ ಶ್ರೀಕೃಷ್ಣವಿಠ್ಠಲ ಭಕ್ತರ ಪರಾಧೀನ || 6 ||

196. ಅಂಕು ಡೊಂಕು ಮನ, ಅಂಕೆ ಇಲ್ಲದ ಮನ |

ಶಂಕೆ ಇಲ್ಲದಂತೆ ತಿದ್ದಿ ಸರಿಯಾಗಿಸು ದೇವಾ || ಪ ||

ಸಾಕು ಸಾಕು ಎನ್ನದ ಮನ |

ಬೇಕು ಬೇಕು ಎನ್ನುವ ಭೋಗ ||

ಲೋಕವನ್ನಾಳಬೇಕೆಂಬ ಇಚ್ಛೆ |

ಕಾಕು ಜನರೊಂದಿಗೆ ಕೂಡಿದೆ ಮನ || 1 ||

ಸಹಿಸದಾದೆ ಪರರ ಭಾಗ್ಯ |

ಅಹಂಕಾರದಿ ಮೆರೆವ ಚಪಲ ||

ಮಹತ್ತಾದ ಆಸೆ ಬಿಡಿಸು ದಯದಿ |

ಅಹಿಶಯನ ಶ್ರೀಕೃಷ್ಣವಿಠ್ಠಲ || 2 ||

197. ಸುಧರ್ಮ ಮನವೇ ಗುಣ ದೋಷಗಳ ತಿದ್ದಿ |

ಅಧರ್ಮ ಮಾಡದಂತೆ ಸದಾ ತಡೆದು || 1 ||

ಬುದ್ಧಿಯಲಿ ನಿಂತು ಶುದ್ಧನಾಗಿ |

ಇಂದ್ರಿಯಗಳ ಗೆಲಿಸಿ ಕಲಿಯ ಬಂಧಿಸಿ || 2 ||

ಸಾಧಕನ ಮಾಡಿ ಸುಹೃದನಂತೆ ಅರ್ಪಿಸು |

ಸುಧಾಮಸಖ ಶ್ರೀಕೃಷ್ಣವಿಠ್ಠಲನ ಅಡಿಗೆ || 3 ||

198. ಸಾವಿಗಂಜುವಿಯೇಕೆ ಹೇ ! ಮನುಜ ಸಾವಿನ ಭಯವೇಕೆ ? |

ಸಾವೆಂದರೆ ಮುಖದಿ ಮ್ಲಾನತೆ, ದುಮ್ಮಾನ ಬರುವುದೇಕೆ ? ||

ನೋವನ್ನಳಿಸಿ ಸಂಸಾರ ದುಃಖ ತೊರೆದು ಹರಿಯುವದಲ್ಲಿ |

ಸಾವನ್ನೊಮ್ಮೆ ಅಪ್ಪಿದರೆ ಭವಕೆ ಬರಲು ಹಿಂಜರಿಯುವೆ || 1 ||

ಯೋಗಿಯಾಗಲಿ, ರಾಜನಾಗಲಿ, ಮಹಾಜ್ಞಾನಿಯಾದರೇನು ? |

ನಿರ್ಗಮಿಸಲೇಬೇಕು ಅಂಕದ ಪರದೆ ಜಾರಿದ ಮೇಲೆ ||

ಬಗೆ ಬಗೆಯ ಅಷ್ಟೈಶ್ವರ್ಯ, ಬಂಧು-ಬಾಂಧವರ ತ್ಯಜಿಸಲೇಬೇಕು |

ಸಗ್ಗ ಮೃಷ್ಟಾನ್ನ ಉಂಡವೆಂದು ಜಠರದಲ್ಲೇ ಇರಿಸಲು ಸಾಧ್ಯವೇನು ? || 2 ||

ಉಟ್ಟ ಬಟ್ಟೆಯಲಿ ಎಷ್ಟು ದಿನದೂಡಲು ಸಾಧ್ಯ ಯೋಚಿಸು |

ಬಟ್ಟೆ ಬಿಸುಡಲೇಬೇಕು ಹರಿದು ಛಿಂದಿಯಾಗುವ ಮುನ್ನ ||

ಕಟ್ಟು ಬುತ್ತಿಯ ಕಡಿಮೆಯಾಗದಂತೆ ದೂರ ಪಯಣ |

ನಿಷ್ಠೆ ಭಕ್ತಿಯಲಿ ಕರೆಯೆ ಶ್ರೀಕೃಷ್ಣವಿಠ್ಠಲ ಜೊತೆ ಇರುವ ಎಂದೆಂದೂ || 3 ||

199. ಹರಿ ಚಿತ್ತಕ್ಕೆ ಬಂದದ್ದು ಸತ್ಯ ನಡೆಯುವುದದೇ ನಿತ್ಯ |

ಮಿಕ್ಕಿದ್ದೆಲ್ಲಾ ಯತ್ನ ಆಗುವುದೆಲ್ಲಾ ವ್ಯರ್ಥ || 1 ||

ಸುಮ್ಮನೆ ಗೋಳಾಡಿ ಕರೆದರೇನು ಫಲ |

ಬಂದದ್ದು ಮಹಾಭಾಗ್ಯವೆಂದು ನೀ ತಿಳಿ ಸದಾ || 2 ||

ದುಃಖದಿ ದಿನ ಕಳೆಯದೆ, ಆಕ್ಷೇಪಿಸದೆ |

ಸುಖಿಸು ಸರ್ವದಾ ಮಹಾಪ್ರಸಾದವೆಂದು || 3 ||

ತನ್ನಂತಾಗಲೆಂದು ಬಯಸದೆ ಆದಂತಾಗಲಿ |

ಶ್ರೀಕೃಷ್ಣವಿಠ್ಠಲನ ಇಚ್ಛೆಯಂತಾಗಲಿ ಎಂದ್ಹೇಳುತ || 4 ||

200. ಹೋಗಬೇಕಲ್ಲಿಗೆ, ಬೇಗ ಹೋಗಬೇಕಲ್ಲಿಗೆ |

ಹೋದರೆ ಮತ್ತೆ ಬಾರದಿರುವಲ್ಲಿಗೆ || ಪ ||

ಹೋಗಲು ಹಲವು ಎಡರು ತೊಡರುಗಳಿವೆ |

ಹೋಗಬೇಕೆಂದಾಗ ಹೋಗಲಾರೆವು || ಅ ||

ಬರುವುದು ಸದಾ ಬರುವುದು ಇದ್ದೇ ಇದೆ |

ಅರಿತಿದ್ದು ಬಿಡಲಾಗದ ನಂಟು ಇದರ ಜೊತೆ ||

ಕರದಲ್ಲಿದ್ದ ನೆಲ್ಲಿಕಾಯಿಯ ಗುರುತಿಸಲಿಲ್ಲಾ |

ಭಾರವನ್ನು ಬೇಡವಾಗಿದ್ದರೂ ಹೊತ್ತುಕೊಂಡೆವು || 1 ||

ಯಾರು ಯಾರಿಗೂ ತಿಳಿಸುವುದೇ ದುರ್ಲಭ |

ಕರೆದು ತಿಳಿಸಿದರೂ ಕೇಳದಂತಿರುವೆವು ||

ಕುರುಡ ಆನೆಯ ಪೂರ್ಣದಿ ತಿಳಿಯಬಲ್ಲನೆ |

ಇರುವುದೇ ತಿಳಿಯದಿದ್ದಲ್ಲಿ ಇಲ್ಲದ್ದು ಅರಿವಾಗುವುದೇ ? || 2 ||

ಕಾಣದ ಜಾಗ ಕೇಳಿ ಬಲ್ಲರು ಬುಧರು |

ಕಂಡವರ್ಯಾರು ಹೇಳಲು ಇಲ್ಲಿ ಇಲ್ಲ ||

ಗುಣವಂತನ ನಂಬಿ ನಡೆದರೆ ಲೇಸು |

ಚಣಕಾಲ ಆಲೋಚಿಸಿ ನಡೆಯುವುದೇ ಸರಿ || 3 ||

ಬುತ್ತಿ ಕಟ್ಟಬೇಕು ಸುತ್ತುಲ ದಾರಿ ಅರಿಯದೆ |

ಕರ್ತವ್ಯದ ಜೊತೆ ಜ್ಞಾನಭಕ್ತಿ ಬೇಕು ||

ಮತ್ಸರ ಬಿಟ್ಟು ಒಲಿಸಬೇಕು ಸುಜನರ |

ಸತ್ಯ ಮೂರ್ತಿ ಶ್ರೀಕೃಷ್ಣವಿಠ್ಠಲನ ಸೇವಿಸಲು || 4 ||

201. ಪರಿ ಪರಿ ರೀತಿಯಲಿ ತನ್ನಂತೆ ಬಾಳಿದರೇನು |

ಪರಿಧಿ ತೀರಲು ಕಾಲನ ಕರೆಯ ಕೇಳಲೇಬೇಕು || ಪ ||

ಕಿರಿ ಕಿರಿಮಾಡಿದರೂ ಒಲ್ಲೆನೆಂದರೂ ಯಾರಿಗೂ ಬಿಡದು |

ಚಕ್ರಧರನ ಅಂಕಿತದಿ ಎಲ್ಲರೂ ಸಿಲುಕಲೇಬೇಕು || ಅ ||

ಯಾತನಾಮುಕ್ತ ಸಂಸಾರಮುಕ್ತನಾಗುವಿ ನೀನೆಂದೂ |

ಯಾತರ ಭಯ ಚಿಂತೆ ಇಲ್ಲದೇ ಎದುರಿಸು ||

ಇತರ ಆಗು ಹೋಗುಗಳ ಮೇಲಿಡದೆ ಆಸೆಗಳ |

ನೀ ತೊರೆದು ಜಗವ ಜಗನ್ನಾಥನ ಸೇರು ಭಕ್ತಿಲಿ || 1 ||

ಹೇಳುವುದು ಸುಲಭ ಹೋಗುವುದು ಕಷ್ಟ ಎನಬೇಡಾ |

ಒಳ್ಳೆಯ ಕರ್ಮ ಮಾಡಿರಲು ಸಾವಿನ ಭಯವೇಕೆ ||

ಕಳೆದು ಕೊಳ್ಳುವುದಕ್ಕಿಂತ ನಂತರ ಗಳಿಸುವುದೇ ಹೆಚ್ಚು |

ಪೇಳಿ ಶ್ರೀಕೃಷ್ಣವಿಠ್ಠಲನ ನಾಮ ಕಡೆಗಾಲದಿ ಸಾಗು ನೀ ವೈಕುಂಠಕೆ || 2 ||

202. ಯುಗ ಪ್ರವರ್ತಕನ ಧರ್ಮಕರ್ಮಗಳ ಪ್ರೇರಕನ್ಯಾರು ? |

ಭಗವನ್ನಿರ್ಮಿತ ಜಗಚಕ್ರದ ಸುಳಿಗೆ ಸಿಲುಕದವರ್ಯಾರು ? ||

ಅಗಿ ಮೊದಲೋ ಬೀಜಮೊದಲೋ ಅರಿತವರ್ಯಾರು ? |

ಆಗಮ ನಿರ್ಗಮದೊಳು ಸುತ್ತದಿರುವರ್ಯಾರು ? ||

ಅಗ್ಯ್ನಾದಿ ಪಂಚ ಭೂತಗಳು, ಸೂಕ್ಷ್ಮ ಸಂಬದ್ಧ ಜೀವ |

ಅಂಗಸಂಗದಿ ಹೋಮಿಸಿ ಗರ್ಭಸ್ಥವೈದು ||

ಆಗಮಿಸಿ ಧರೆಯೊಳು ದೇಹಧಾರಿಯಾಗಿ |

ಭೋಗದಿ ಮೈಮರೆತ ಜೀವರಿಗುಣಿಸುವ ಸಕಲಕರ್ಮಫಲಗಳ ||

ಅಗಣಿತ ಗುಣವಂತನ ಪೂರ್ಣದಿ ತಿಳಿದವರ್ಯಾರು ? |

ಅಗ್ರ ಏಕಾತ್ಮ ಶ್ರೀಕೃಷ್ಣವಿಠ್ಠಲಾಂತರ್ಗತನಾಗಿ |

ಭಂಗವಿಲ್ಲದೆ ದಶರೂಪದಿ ದಶವಿಧ ಕಾರ್ಯಮಾಳ್ಪರು ||

203. ಸ್ವಯಂಪಾಕ ವ್ರತ ಪಾಲಿಸಿರಿ ಸಕಲರೂ ಸ್ವಯಂಪಾಕ ಸಿದ್ಧಿಸಿರಿ || ಪ ||

ವಯಸ್ಸಿನ ನಿರ್ಬಂಧವಿಲ್ಲದಂತೆ ವ್ರತ-ನೇಮ ಆಚರಿಸಿರಿ || ಅ ||

ಜನುಮ ಜನುಮಕೂ ಜೊತೆ ಬರುವ ಬುತ್ತಿ ಕಟ್ಟಿರಿ |

ಜನ್ಮರಹಿತನ ಮರೆಯದೆ ಸಂತತ ಸ್ಮರಿಸಿರಿ ||

ಲೋಕವಾರ್ತೆಂಗಳಲಿ ಮುಳುಗದೆ ನಿರಾಸಕ್ತರಾಗಿ |

ನಾಕ-ನರಕದಲ್ಲಿ ಸುತ್ತದಂತೆ ಶ್ರೀಲೋಲನ ಭಜಿಸಿರಿ || 1 ||

ಹಣ, ಕನಕ, ಲತಾಂಗಿಯರ ಹಿಂದೆ ಬೀಳದಿರಿ |

ಕ್ಷಣಕಾಲವೂ ಬಿಡದೆ ಜನಕ ಕುವರಿ ರಾಯನ ನೆನೆಯಿರಿ ||

ಜನ್ಮದಾತ ಮುಕ್ತಿದಾತನ ಪಾದವಾಂತು ನಂಬಿರಿ |

`ಜನಿತೋಥ ವಿಷ್ಣು'ವೆಂಬ ಶ್ರೀಕೃಷ್ಣವಿಠ್ಠಲಗೆ ಶರಣೆನ್ನಿರಿ || 2 ||

204. ಸರ್ವಸ್ಯ ಸರ್ವ ನೀನಾದರೆ ಜಡ ಚೇತನಗಳೇಕೆ ? |

ಸರ್ವವಿದಿತನಾದರೆ ನಿನ್ನಲಿ ಅರಿಕೆ ಏಕೆ ? ||

ಸರ್ವಸ್ವತಂತ್ರನಾದರೆ ಕರ್ಮಾನುಸಾರಫಲ ಏಕೆ ? |

ಸರ್ವಕರ್ತೃ ನೀನಾದರೆ ಜೀವಕರ್ತೃತ್ವ ಏಕೆ ? ||

ಸರ್ವತೃಪ್ತನಿಗೆ ಯಜ್ಞದಿ ಹವಿಸ್ಸೇಕೆ ? |

ಸರ್ವ ಮುಕ್ತನಿಗೆ ಭಕ್ತಿಯ ಬಂಧವೇಕೆ ? ||

ಸದಾ ಎಚ್ಚೆತ್ತವನಿಗೆ ಸರ್ಪಶಯನವೇಕೆ ? |

ಸರ್ವಮಂಗಲನಿಗೆ ಮಂಗಲ ಘೋಷ ಏಕೆ ? ||

ಸರ್ವ ಸ್ವಾಮಿಯಾದರೆ ಆಳಾಗಿ ದುಡಿಯುವುದೇಕೆ ? |

ಸರ್ವಸತ್ಯನೆನಿಸಿದರೆ ಮೋಹಕ ಬೋಧವೇಕೆ ? ||

ಸ್ವರಮಣ ತಾನಾದರೆ ಸಾವಿರಾರು ಪತ್ನಿಯರೇಕೆ ? |

ಸರ್ವಶಬ್ದವಾಚ್ಯನಾದರೆ ಸಹಸ್ರ ನಾಮಗಳೇಕೆ ? ||

ಸರ್ವ ಬಂಧಕ ನೀನಾದರೆ ಬಿಡುಗಡೆ ಮಾತೇಕೆ ? |

ಸರ್ವಸಾಕ್ಷಿ ನೀನಾದರೆ ಮೂಕನಾಗಿರುವುದ್ಯಾಕೆ ? ||

ಸರ್ವತ್ರ ರಕ್ಷಕ ನೀನಾದರೆ ಮರಣವೇಕೆ ? |

ಸರ್ವ ಸುಖಸ್ವರೂಪ ನೀನಾದರೆ ದುಃಖವೀಯುವುದೇಕೆ ? ||

ಸರ್ವಸುಲಭದಿ ತಿಳಿಯುವುದಾದರೆ ಜಟಿಲ ಶಾಸ್ತ್ರಗಳೇಕೆ ? |

ಸರ್ವವೂ ಶ್ರೀಕೃಷ್ಣವಿಠ್ಠಲನೇ ಆದರೆ ನಾನಾ ಅವತಾರಗಳೇಕೆ ? ||

ಸರ್ವವೂ ಪ್ರಶ್ನೆಗಳೇ ಆದರೆ ಉತ್ತರ ನೀಡುವುದೇ ಶಾಸ್ತ್ರ ||

205. ಎಮ್ಮ ಪ್ರಾರಬ್ಧಕರ್ಮ ಬಲವಾಗಿದ್ದರೆ ಅನುಭವಿಸದೇ ತೀರದು ||

ವಂಚನೆಯಿಂದ ದಾಟಲುಬಾರದು ಯಾರಿಗೂ |

ಅಚ್ಯುತನ ಕರುಣೆಯಿಂ ಕೊಂಚ ಕಡಿಮೆಯಾಗುವುದು ||

ಶ್ರೀಮನ್ನಾರಾಯಣನೇ ಪುತ್ರನಾದರೂ ಸೆರೆವಾಸ ತಪ್ಪಲಿಲ್ಲ |

ಕೇಶವನ ಸಖನಾದರೂ ವನವಾಸ ತಪ್ಪಲಿಲ್ಲ ||

ಮುಕುಂದನ ಅತ್ತೆಯಾದರೂ ಮುತ್ತೈದೆತನ ಉಳಿಯಲಿಲ್ಲ |

ದ್ವಾರಕಾಧೀಶನ ತಂಗಿಯಾದರೂ ಅಪಮಾನ ತಪ್ಪಲಿಲ್ಲ ||

ಮುರಾರಿಯೇ ಸೋದರಮಾವನಾದರೂ ಮರಣ ತಪ್ಪಲಿಲ್ಲ |

ಪುರುಷೋತ್ತಮನೇ ಪತಿಯಾದರು ಮಗನಪಹರಣ ತಪ್ಪಲಿಲ್ಲ ||

ಲಕ್ಷ್ಮೀಪತಿಯಾಗಿದ್ದೂ ಇನ್ನೊಬ್ಬರ ಎಂಜಲಿಗೆ ಕೈ ಚಾಚಿದವ |

ದೇವಾಧಿದೇವ ಸರ್ವೋತ್ತಮನಾದರೂ ಕಳ್ಳತನ ಅಪವಾದ ತಪ್ಪಲಿಲ್ಲ ||

ಸರ್ವವ್ಯಾಪ್ತನಾಗಿದ್ದೂ ಕೌಸಲ್ಯಾಗೆ ಪುತ್ರವಿರಹ ತಪ್ಪಲಿಲ್ಲ |

ರಾಮಾನುಜನಾಗಿದ್ದೂ ಹದಿನಾಲ್ಕು ವರ್ಷ ವನವಾಸ ತಪ್ಪಲಿಲ್ಲ ||

ನಿತ್ಯಾವಿಯೋಗಿ ಆಗಿದ್ದೂ ಶ್ರೀರಾಮ ಪತ್ನಿಯ ಕಳೆದು ಕೊಂಡವ |

ಸರ್ವವಿದಿತ ವೇದವೇದ್ಯನಿದ್ದೂ ಪತ್ನಿಯ ತ್ಯಜಿಸಿದವ ||

ಗುಣ ಪರಿಪೂರ್ಣ ಶ್ರೀಕೃಷ್ಣವಿಠ್ಠಲನ ನಿರುತ ಭಜಿಸಿದರೆ |

ಸಂಚಿತ ಕರ್ಮ ಕಿಂಚಿತ್ತಾದರೂ ಕಡಿಮೆಯಾಗುವುದಂತೆ ||

[ದೇವರಿಗೆ ನರನಾಟಕವಾದರೂ, ಬಿಡದ ಪ್ರಾರಬ್ಧಕರ್ಮವೆಮಗೆಂದು ತಿಳಿಯಬೇಕು]

206. ಜ್ಞಾನ ಬೇಕು, ವಿಶೇಷ ಸುಜ್ಞಾನ ಬೇಕು || ಪ ||

ಜೀವ, ಜಡ, ಈಶನ ಭೇದ ಸಾರುವ |

ಯಾವಾಗಲೂ ನಾಶವಾಗದ ಜ್ಞಾನ ಬೇಕು || ಅ ||

ದ್ವೈತಾದ್ವೈತ ಭೇದ | ಕ್ಷರಾಕ್ಷರ ಭೇದ |

ಎಲ್ಲಕ್ಕಿಂತ ಮಿಗಿಲಾದ ಪುರುಷೋತ್ತಮನ ಸಾರುವ ವೇದಗಳ ಜ್ಞಾನ || 1 ||

ಗುರು ಮಧ್ವ ರಾಯರ ದಯದಿ ಶಾಸ್ತ್ರಗಳರಿತು |

ಶ್ರೀಕೃಷ್ಣವಿಠ್ಠಲನ ಗುಣ ಮಹಿಮೆಗಳರಿತು ಮುಕ್ತಿ ಮಾರ್ಗದೆಡೆ ಸಾಗಲು ಜ್ಞಾನ || 2 ||

207. ಸ್ಮರಣೆ ಇರಲಿ ಸದಾ ಹರಿ ಜಪದಲಿ |

ಬರಲಿ ವಿಸ್ಮರಣೆ ಲೋಕವಾರ್ತೆಗಳಲಿ ||

ಹರಿಕಥಾ ಪ್ರಸಂಗ ಎನಗೆ ದೊರಕಲಿ |

ನಿರ್ಮಲ ಭಕುತರ ದರ್ಶನವಾಗಲಿ ||

ಭಕುತಿ, ವೈರಾಗ್ಯ ಎನಗಿರಲಿ |

ಮುಕ್ತಿದಾಯಕ ಜ್ಞಾನ ಎನಗಾಗಲಿ |

ಸತ್ಯ ಸಜ್ಜನ ಸಂಗ ಸದಾ ಇರಲಿ |

ಪ್ರತಿ ಜನಮಕೂ ಮನವಿದೇ ಬಯಸಲಿ |

ಶ್ರೀಕೃಷ್ಣವಿಠ್ಠಲನ ಸುಪ್ರಸಾದವಾಗಲಿ ||

208. ದೇಹದ ಕಣ ಕಣದಿ ಪರಮಾತ್ಮನ ಸ್ಮರಣೆ ಇರಲಿ || ಪ ||

ನಿಶಿ ಹಗಲೂ, ಒಳ-ಹೊರಗೂ ಬಿಡದೇ || ಅ ||

ಯಾವುದೇ ಜನ್ಮವಿರಲಿ, ಯಾವುದೇ ಯೋನಿ ಇರಲಿ |

ಯಾವುದೇ ದೇಶದಲ್ಲಿರಲಿ, ಯಾವುದೇ ಕಾಲದಲ್ಲಿರಲಿ || 1 ||

ಅನವರತವೂ ನೆನೆಯುವ ಮನವಿರಲಿ |

ಭವಭಯತಾರಕ ಶ್ರೀಕೃಷ್ಣವಿಠ್ಠಲ ಮಂತ್ರ ಸದಾ ಜಪಿಸುತಿರಲಿ || 2 ||

209. ಸರ್ವ ಕರ್ತೃವಿನ ಮುಂದೆ ನಾನೇ ಮಾಡಿದೆ ಎಂದರೆ |

ಸೃಷ್ಟಿ ಕರ್ತನ ಮುಂದೆ ನಾನೇ ಬಾಲಕನ ಜನಕನೆಂದರೆ || 1 ||

ನಿರ್ದೋಷನಿಗೆ ನನ್ನ ತಪ್ಪೆಲ್ಲಾ ನಿನ್ನಿಂದಲೇ ಎಂದರೆ |

ಸರ್ವಜ್ಞನ ಮುಂದೆ ನನಗೇ ಎಲ್ಲಾ ತಿಳಿದಿದೆ ಎಂದರೆ || 2 ||

ಸದ್ಗುಣ ಸಾಂದ್ರನ ಮುಂದೆ ನನ್ನ ಗುಣಗಳ ಹೊಗಳಿಕೊಂಡರೆ |

ಅನಾದ್ಯನ ಮುಂದೆ ನಾನೇ ಚಿರಾಯು ಎಂದರೆ || 3 ||

ಪುರುಷೋತ್ತಮನ ಮುಂದೆ ನಾನೇ ಶ್ರೇಷ್ಠನೆಂದರೆ |

ಪರಮಾತ್ಮ ಶ್ರೀಕೃಷ್ಣವಿಠ್ಠಲ ಮೆಚ್ಚುವನೇನಯ್ಯಾ || 4 ||

210. ಮನುಜರನ್ನೇಕೆ ಓಲೈಸುವಿರಿ ಹುಚ್ಚುತನದಿ |

ಶ್ರೀಶನ ಸೇವಿಸಿ ಧನ್ಯರಾಗಿ || ಪ ||

ಜನುಮವಿಡೀ ಸೇವೆ ಮಾಡಿದರೂ |

ಬಂಧು ಬಾಂಧವರೇನು ಕೊಟ್ಟಾರು ||

ನಿಂದೆಯ ಮಾತನಾಡುವುದ ಬಿಟ್ಟು |

ಕೊಡುವಾಗ ಹೊಗಳಿ ಇಲ್ಲವೆಂದಾಗ ಮೂದಲಿಸುವರೋ || 1 ||

ಕೊಟ್ಟು ಕೊಂಬುವ ವ್ಯಾಪಾರ ಮನುಜರಲ್ಲಿ |

ಕೊಟ್ಟರೂ ಕೊಡದಿರುವರು ಅನೇಕರು ||

ಕೊಡದಿದ್ದರೂ ಅಕ್ಷಯವೀವ ನಮ್ಮ |

ಶ್ರೀಕೃಷ್ಣವಿಠ್ಠಲ ಕರುಣಾಳು || 2 ||

211. ಮುಂಜಾವಿನಲಿ ಏಳುವ ಮುನ್ನ ಮುರಾರಿಯ ನೆನೆ |

ಗಜೇಂದ್ರಮೋಕ್ಷದಕಥೆ ಕಪಿಲೋಪಾಖ್ಯಾನವ ನೆನೆ ||

ಕ್ಷೀರ ಸಮುದ್ರದಿ ಪವಡಿಸಿದ ಲಕ್ಷ್ಮೀನಾರಾಯಣನ |

ಪರಿವಾರ ಸಮೇತ ತಾರತಮ್ಯದಿ ನಮಿಸಿ ||

ಶ್ರೀಹರಿ ಅವತಾರ ಸ್ಮರಿಸಿ ನಂತರ |

ಬ್ರಾಹ್ಮೀ ಮೂಹುರ್ತದಿ ಕರಶ್ಲೋಕ ಪಠಿಸಿ ||

ಮಾಡುವ ಸಕಲ ಕರ್ಮಗಳಿಗೆ ಕಾರಣ ಕರ್ತೃ |

ಒಡೆಯ ಶ್ರೀಕೃಷ್ಣವಿಠ್ಠಲ ಎಂದರೆ ನಿರ್ಮಲ ಬುದ್ಧಿ ಪ್ರಾಪ್ತಿ ||

"ಚಾತುರ್ವಣ್ರ್ಯ ಭಾವಾರ್ಥ"

212. ಮಾನವ ದೇಹದಿ ತೋರುತಿದೆ ಚಾತುರ್ವಣ್ರ್ಯ ಧರ್ಮಗಳು |

ಮಾಣವ ಶಬ್ದಬ್ರಹ್ಮರೂಪ (ಶ್ರುತಿ) ದಿಂದ ಪರಬ್ರಹ್ಮರೂಪದ ಅಭಿವ್ಯಕ್ತಿ || 1 ||

ಬುದ್ಧಿ ಪ್ರಭೇದ ಸಹಿತ ಪ್ರಧಾನದಿ ಇರುವುದು ಶಿರದಲಿ |

ಅದಕೆ ಬ್ರಾಹ್ಮಣವರ್ಣ (ವೇದ ತಿಳಿದವ) ವಿರುವುದು ಇಲ್ಲೇ || 2 ||

ಕ್ಷತ್ರಿಯ ವರ್ಣವಿರುವುದು ಬಾಹು ಬಲದಲಿ ಪ್ರಾಧಾನ್ಯವಾಗಿದೆ |

ನಿರೋಗಿಯಾಗಿಸಿ ಆರೋಗ್ಯ ಭಾಗ್ಯ ದೊರೆಯುವುದೇ ಇದರಿಂದ || 3 ||

ಊರುವಿನಲ್ಲಿರುವುದೇ ಪ್ರಧಾನ ವೈಶ್ಯವರ್ಣ |

ಶರೀರದ ವ್ಯಾಪಾರ ಸಾಂಗವಾಗಿ ನಡೆಯುವುದೇ ಇದರಿಂದ || 4 ||

ತಳಭಾಗದಲ್ಲಿ ಇರುವುದೇ ಪ್ರಧಾನ ಶೂದ್ರವರ್ಣ |

ಇಲ್ಲಿದೆ ದೇಹ ನಿರ್ಮಲ ಕಾರ್ಯ, ಇದಾಗದಿರೆ ಸಕಲ ಅಂಗಕಾರ್ಯ ಶೂನ್ಯ || 5 ||

ಮುಖ್ಯಪ್ರಾಣನ ಕಾರ್ಯದಿಂದೇ ಸಕಲ ವರ್ಣಗಳ ಹಾರಾಟ |

ಅಖಿಲ ದೇಹದ ಕಾರ್ಯ ನಡೆವುದು ಇವನಿಂದಲೇ || 6 ||

ಉಸಿರಾಟದ ಜೊತೆ ಸ್ಪರ್ಶ ಜ್ಞಾನವು ದೇಹವಿಡಿ ಹರಡಿದೆ |

ಸುಸ್ಥಿರ ದೇಹಕೆ ಸಕಲ ವರ್ಣಗಳ ಪರಸ್ಪರ ಸಹಕಾರವೇ ಶಿವ || 7 ||

ಯಾವ ವರ್ಣದ ಕೆಲಸದಲ್ಲೂ ಮೇಲು ಕೀಳಿಲ್ಲ |

ಸರ್ವ ವರ್ಣಗಳ ಕ್ರಿಯೆಗೆ ಮುಖ್ಯಪ್ರಾಣನೇ ಕಾರಣ || 8 ||

ಪ್ರಾಣನ ಕೆಲಸ ನಡೆಯಲು ಪರಮ ಚೇತನ ಅಲ್ಲಿರಲೇಬೇಕು |

ಪ್ರಾಣಕೆ ಜೊತೆ ಪರಮ ಚೇತನವಿಲ್ಲದಿರೆ ಸಕಲ ಕಾರ್ಯವು ನಿಶ್ಚೇತ || 9 ||

ಬುದ್ಧಿ ಪ್ರಧಾನವಾದುದು ಬ್ರಾಹ್ಮಣ ವರ್ಣ, ಶಕ್ತಿ ಪ್ರಧಾನವಾದುದು ಕ್ಷತ್ರಿಯ ವರ್ಣ |

ಪುಷ್ಠಿಪ್ರದಾಯಕ ವೈಶ್ಯವರ್ಣ, ಎಲ್ಲ ವರ್ಣಗಳ ಸುಗಮ ಸೇವಾ ಕಾರ್ಯಕೆ ಮೂಲ ಶೂದ್ರವರ್ಣ ||10||

ಚಾತುರ್ವಣ್ರ್ಯ ಪ್ರಭೇದ ಜ್ಞಾನ ಇಹ-ಪರದ ಉನ್ನತಿಗೆ ಮೂಲ |

ಚತುರ ಎಲ್ಲ ಬಲ್ಲ ಶ್ರೀಕೃಷ್ಣವಿಠ್ಠಲ ಪೇಳಿದ್ದು ತಪ್ಪು ತಿಳಿದರೆ ನರಕವೇಗತಿ || 11 || ಮಂಡಿಗೆಗಳು

174. ಮಾಡುವೆನೆಂದರೆ ಮಾಡದು | (ಜೀವಸ್ವತಂತ್ರ ಕರ್ತೃತÀ್ವ ಇಲ್ಲ)

ಅಣೋರÀಣೀಯಾನ್ ಮಹತೋ ಮಹಿಯಾನ್ ಸ್ವಯಂಭೂ |

ರೋಷ ನಟಿಸಿ ಭಾಮೆ ಐಶ್ವರ್ಯದಿ ಹರಿಯ ತೂಗಿ ಬಾಗಿದÀಳು | ಭಕ್ತಿಯಲಿ ಭೈಷ್ಮಿಗೊಲಿದ ಶ್ರೀಕೃಷ್ಣವಿಠ್ಠಲ ಭಕ್ತರ ಪರಾಧೀನ || 6 ||

196. ಅಂಕು ಡೊಂಕು ಮನ, ಅಂಕೆ ಇಲ್ಲದ ಮನ |

ಶಂಕೆ ಇಲ್ಲದಂತೆ ತಿದ್ದಿ ಸರಿಯಾಗಿಸು ದೇವಾ || ಪ ||

ಸಾಕು ಸಾಕು ಎನ್ನದ ಮನÀ |

ಬೇಕು ಬೇಕು ಎನ್ನುವ ಭೋಗ ||

ಲೋಕವನ್ನಾಳಬೇಕೆಂಬ ಇಚ್ಛೆ |

ಕಾಕು ಜನರೊಂದಿಗೆ ಕೂಡಿದೆ ಮನ || 1 ||

ಸಹಿಸದಾದೆ ಪರರ ಭಾಗ್ಯ |

ಅಹಂಕಾರದಿ ಮೆರೆವ ಚಪಲ ||

ಮಹತ್ತಾದ ಆಸೆ ಬಿಡಿಸು ದಯದಿ |

ಅಹಿಶಯನ ಶ್ರೀಕೃಷ್ಣವಿಠ್ಠಲ || 2 ||

197. ಸುಧರ್ಮ ಮನವೇ ಗುಣ ದೋಷಗಳ ತಿದ್ದಿ |

ಅಧರ್ಮ ಮಾಡದಂತೆ ಸದಾ ತಡೆದು || 1 ||

ಬುದ್ಧಿಯಲಿ ನಿಂತು ಶುದ್ಧನಾಗಿ |

ಇಂದ್ರಿಯಗಳ ಗೆಲಿಸಿ ಕಲಿಯ ಬಂಧಿಸಿ || 2 ||

ಸಾಧಕನ ಮಾಡಿ ಸುಹೃದನಂತೆ ಅರ್ಪಿಸು |

ಸುಧಾಮಸಖ ಶ್ರೀಕೃಷ್ಣವಿಠ್ಠಲನ ಅಡಿಗೆ || 3 ||

198. ಸಾವಿಗಂಜುವಿಯೇಕೆ ಹೇ ! ಮನುಜ ಸಾವಿನ ಭಯವೇಕೆ ? |

ಸಾವೆಂದರೆ ಮುಖದಿ ಮ್ಲಾನತೆ, ದುಮ್ಮಾನ ಬರುವುದೇಕೆ ? ||

ನೋವನ್ನಳಿಸಿ ಸಂಸಾರ ದುಃಖ ತೊರೆದು ಹರಿಯುವದಲ್ಲಿ |

ಸಾವನ್ನೊಮ್ಮೆ ಅಪ್ಪಿದರೆ ಭವಕೆ ಬರಲು ಹಿಂಜರಿಯುವೆ || 1 ||

ಯೋಗಿಯಾಗಲಿ, ರಾಜನಾಗಲಿ, ಮಹಾಜ್ಞಾನಿಯಾದರೇನು ? |

ನಿರ್ಗಮಿಸಲೇಬೇಕು ಅಂಕದ ಪರದೆ ಜಾರಿದ ಮೇಲೆ ||

ಬಗೆ ಬಗೆಯ ಅಷ್ಟೈಶ್ವರ್ಯ, ಬಂಧು-ಬಾಂಧವರ ತ್ಯಜಿಸಲೇಬೇಕು |

ಸಗ್ಗ ಮೃಷ್ಟಾನ್ನ ಉಂಡವೆಂದು ಜಠರದಲ್ಲೇ ಇರಿಸಲು ಸಾಧ್ಯವೇನು ? || 2 ||

ಉಟ್ಟ ಬಟ್ಟೆಯಲಿ ಎಷ್ಟು ದಿನದೂಡಲು ಸಾಧ್ಯ ಯೋಚಿಸು |

ಬಟ್ಟೆ ಬಿಸುಡಲೇಬೇಕು ಹರಿದು ಛಿಂದಿಯಾಗುವ ಮುನ್ನ ||

ಕಟ್ಟು ಬುತ್ತಿಯ ಕಡಿಮೆಯಾಗದಂತೆ ದೂರ ಪಯಣ |

ನಿಷ್ಠೆ ಭಕ್ತಿಯಲಿ ಕರೆಯೆ ಶ್ರೀಕೃಷ್ಣವಿಠ್ಠಲ ಜೊತೆ ಇರುವ ಎಂದೆಂದೂ || 3 ||

199. ಹರಿ ಚಿತ್ತಕ್ಕೆ ಬಂದದ್ದು ಸತ್ಯ ನಡೆಯುವುದದೇ ನಿತ್ಯ |

ಮಿಕ್ಕಿದ್ದೆಲ್ಲಾ ಯತ್ನ ಆಗುವುದೆಲ್ಲಾ ವ್ಯರ್ಥ || 1 ||

ಸುಮ್ಮನೆ ಗೋಳಾಡಿ ಕರೆದರೇನು ಫಲ |

ಬಂದದ್ದು ಮಹಾಭಾಗ್ಯವೆಂದು ನೀ ತಿಳಿ ಸದಾ || 2 ||

ದುಃಖದಿ ದಿನ ಕಳೆಯದೆ, ಆಕ್ಷೇಪಿಸದೆ |

ಸುಖಿಸು ಸರ್ವದಾ ಮಹಾಪ್ರಸಾದವೆಂದು || 3 ||

ತನ್ನಂತಾಗಲೆಂದು ಬಯಸದೆ ಆದಂತಾಗಲಿ |

ಶ್ರೀಕೃಷ್ಣವಿಠ್ಠಲನ ಇಚ್ಛೆಯಂತಾಗಲಿ ಎಂದ್ಹೇಳುತ || 4 ||

200. ಹೋಗಬೇಕಲ್ಲಿಗೆ, ಬೇಗ ಹೋಗಬೇಕಲ್ಲಿಗೆ |

ಹೋದರೆ ಮತ್ತೆ ಬಾರದಿರುವಲ್ಲಿಗೆ || ಪ ||

ಹೋಗಲು ಹಲವು ಎಡರು ತೊಡರುಗಳಿವೆ |

ಹೋಗಬೇಕೆಂದಾಗ ಹೋಗಲಾರೆವು || ಅ ||

ಬರುವುದು ಸದಾ ಬರುವುದು ಇದ್ದೇ ಇದೆ |

ಅರಿತಿದ್ದು ಬಿಡಲಾಗದ ನಂಟು ಇದರ ಜೊತೆ ||

ಕರದಲ್ಲಿದ್ದ ನೆಲ್ಲಿಕಾಯಿಯ ಗುರುತಿಸಲಿಲ್ಲಾ |

ಭಾರವನ್ನು ಬೇಡವಾಗಿದ್ದರೂ ಹೊತ್ತುಕೊಂಡೆವು || 1 ||

ಯಾರು ಯಾರಿಗೂ ತಿಳಿಸುವುದೇ ದುರ್ಲಭ |

ಕರೆದು ತಿಳಿಸಿದರೂ ಕೇಳದಂತಿರುವೆವು ||

ಕುರುಡ ಆನೆಯ ಪೂರ್ಣದಿ ತಿಳಿಯಬಲ್ಲನೆ |

ಇರುವುದೇ ತಿಳಿಯದಿದ್ದಲ್ಲಿ ಇಲ್ಲದ್ದು ಅರಿವಾಗುವುದೇ ? || 2 ||

ಕಾಣದ ಜಾಗ ಕೇಳಿ ಬಲ್ಲರು ಬುಧರು |

ಕಂಡವರ್ಯಾರು ಹೇಳಲು ಇಲ್ಲಿ ಇಲ್ಲ ||

ಗುಣವಂತನ ನಂಬಿ ನಡೆದರೆ ಲೇಸು |

ಚಣಕಾಲ ಆಲೋಚಿಸಿ ನಡೆಯುವುದೇ ಸರಿ || 3 ||

ಬುತ್ತಿ ಕಟ್ಟಬೇಕು ಸುತ್ತುಲ ದಾರಿ ಅರಿಯದೆ |

ಕರ್ತವ್ಯದ ಜೊತೆ ಜ್ಞಾನಭಕ್ತಿ ಬೇಕು ||

ಮತ್ಸರ ಬಿಟ್ಟು ಒಲಿಸಬೇಕು ಸುಜನರ |

ಸತ್ಯ ಮೂರ್ತಿ ಶ್ರೀಕೃಷ್ಣವಿಠ್ಠಲನ ಸೇವಿಸಲು || 4 ||

201. ಪರಿ ಪರಿ ರೀತಿಯಲಿ ತನ್ನಂತೆ ಬಾಳಿದರೇನು |

ಪರಿಧಿ ತೀರಲು ಕಾಲನ ಕರೆಯ ಕೇಳಲೇಬೇಕು || ಪ ||

ಕಿರಿ ಕಿರಿಮಾಡಿದರೂ ಒಲ್ಲೆನೆಂದರೂ ಯಾರಿಗೂ ಬಿಡದು |

ಚಕ್ರಧರನ ಅಂಕಿತದಿ ಎಲ್ಲರೂ ಸಿಲುಕಲೇಬೇಕು || ಅ ||

ಯಾತನಾಮುಕ್ತ ಸಂಸಾರಮುಕ್ತನಾಗುವಿ ನೀನೆಂದೂ |

ಯಾತರ ಭಯ ಚಿಂತೆ ಇಲ್ಲದೇ ಎದುರಿಸು ||

ಇತರ ಆಗು ಹೋಗುಗಳ ಮೇಲಿಡದೆ ಆಸೆಗಳ |

ನೀ ತೊರೆದು ಜಗವ ಜಗನ್ನಾಥನ ಸೇರು ಭಕ್ತಿಲಿ || 1 ||

ಹೇಳುವುದು ಸುಲಭ ಹೋಗುವುದು ಕಷ್ಟ ಎನಬೇಡಾ |

ಒಳ್ಳೆಯ ಕರ್ಮ ಮಾಡಿರಲು ಸಾವಿನ ಭಯವೇಕೆ ||

ಕಳೆದು ಕೊಳ್ಳುವುದಕ್ಕಿಂತ ನಂತರ ಗಳಿಸುವುದೇ ಹೆಚ್ಚು |

ಪೇಳಿ ಶ್ರೀಕೃಷ್ಣವಿಠ್ಠಲನÀ ನಾಮ ಕಡೆಗಾಲದಿ ಸಾಗು ನೀ ವೈಕುಂಠಕೆ || 2 ||

202. ಯುಗ ಪ್ರವರ್ತಕನ ಧರ್ಮಕರ್ಮಗಳ ಪ್ರೇರಕನ್ಯಾರು ? |

ಭಗವನ್ನಿರ್ಮಿತ ಜಗಚಕ್ರದ ಸುಳಿಗೆ ಸಿಲುಕದವರ್ಯಾರು ? ||

ಅಗಿ ಮೊದಲೋ ಬೀಜಮೊದಲೋ ಅರಿತವರ್ಯಾರು ? |

ಆಗಮ ನಿರ್ಗಮದೊಳು ಸುತ್ತದಿರುವರ್ಯಾರು ? ||

ಅಗ್ಯ್ನಾದಿ ಪಂಚ ಭೂತಗಳು, ಸೂಕ್ಷ್ಮ ಸಂಬದ್ಧ ಜೀವ |

ಅಂಗಸಂಗದಿ ಹೋಮಿಸಿ ಗರ್ಭಸ್ಥವೈದು ||

ಆಗಮಿಸಿ ಧರೆಯೊಳು ದೇಹಧಾರಿಯಾಗಿ |

ಭೋಗದಿ ಮೈಮರೆತ ಜೀವರಿಗುಣಿಸುವ ಸಕಲಕರ್ಮಫಲಗಳ ||

ಅಗಣಿತ ಗುಣವಂತನ ಪೂರ್ಣದಿ ತಿಳಿದವರ್ಯಾರು ? |

ಅಗ್ರ ಏಕಾತ್ಮ ಶ್ರೀಕೃಷ್ಣವಿಠ್ಠಲಾಂತರ್ಗತನಾಗಿ |

ಭಂಗವಿಲ್ಲದೆ ದಶರೂಪದಿ ದಶವಿಧ ಕಾರ್ಯಮಾಳ್ಪರು ||

203. ಸ್ವಯಂಪಾಕ ವ್ರತ ಪಾಲಿಸಿರಿ ಸಕಲರೂ ಸ್ವಯಂಪಾಕ ಸಿದ್ಧಿಸಿರಿ || ಪ ||

ವಯಸ್ಸಿನ ನಿರ್ಬಂಧವಿಲ್ಲದಂತೆ ವ್ರತ-ನೇಮ ಆಚರಿಸಿರಿ || ಅ ||

ಜನುಮ ಜನುಮಕೂ ಜೊತೆ ಬರುವ ಬುತ್ತಿ ಕಟ್ಟಿರಿ |

ಜನ್ಮರಹಿತನ ಮರೆಯದೆ ಸಂತತ ಸ್ಮರಿಸಿರಿ ||

ಲೋಕವಾರ್ತೆಂಗಳಲಿ ಮುಳುಗದೆ ನಿರಾಸಕ್ತರಾಗಿ |

ನಾಕ-ನರಕದಲ್ಲಿ ಸುತ್ತದಂತೆ ಶ್ರೀಲೋಲನ ಭಜಿಸಿರಿ || 1 ||

ಹಣ, ಕನಕ, ಲತಾಂಗಿಯರ ಹಿಂದೆ ಬೀಳದಿರಿ |

ಕ್ಷಣಕಾಲವೂ ಬಿಡದೆ ಜನಕ ಕುವರಿ ರಾಯನ ನೆನೆಯಿರಿ ||

ಜನ್ಮದಾತ ಮುಕ್ತಿದಾತನ ಪಾದವಾಂತು ನಂಬಿರಿ |

`ಜನಿತೋಥ ವಿಷ್ಣು'ವೆಂಬ ಶ್ರೀಕೃಷ್ಣವಿಠ್ಠಲಗೆ ಶರಣೆನ್ನಿರಿ || 2 ||

204. ಸರ್ವಸ್ಯ ಸರ್ವ ನೀನಾದರೆ ಜಡ ಚೇತನಗಳೇಕೆ ? |

ಸರ್ವವಿದಿತನಾದರೆ ನಿನ್ನಲಿ ಅರಿಕೆ ಏಕೆ ? ||

ಸರ್ವಸ್ವತಂತ್ರನಾದರೆ ಕರ್ಮಾನುಸಾರಫಲ ಏಕೆ ? |

ಸರ್ವಕರ್ತೃ ನೀನಾದರೆ ಜೀವಕರ್ತೃತ್ವ ಏಕೆ ? ||

ಸರ್ವತೃಪ್ತನಿಗೆ ಯಜ್ಞದಿ ಹವಿಸ್ಸೇಕೆ ? |

ಸರ್ವ ಮುಕ್ತನಿಗೆ ಭಕ್ತಿಯ ಬಂಧವೇಕೆ ? ||

ಸದಾ ಎಚ್ಚೆತ್ತವನಿಗೆ ಸರ್ಪಶಯನವೇಕೆ ? |

ಸರ್ವಮಂಗಲನಿಗೆ ಮಂಗಲ ಘೋಷ ಏಕೆ ? ||

ಸರ್ವ ಸ್ವಾಮಿಯಾದರೆ ಆಳಾಗಿ ದುಡಿಯುವುದೇಕೆ ? |

ಸರ್ವಸತ್ಯನೆನಿಸಿದರೆ ಮೋಹಕ ಬೋಧವೇಕೆ ? ||

ಸ್ವರಮಣ ತಾನಾದರೆ ಸಾವಿರಾರು ಪತ್ನಿಯರೇಕೆ ? |

ಸರ್ವಶಬ್ದವಾಚ್ಯನಾದರೆ ಸಹಸ್ರ ನಾಮಗಳೇಕೆ ? ||

ಸರ್ವ ಬಂಧಕ ನೀನಾದರೆ ಬಿಡುಗಡೆ ಮಾತೇಕೆ ? |

ಸರ್ವಸಾಕ್ಷಿ ನೀನಾದರೆ ಮೂಕನಾಗಿರುವುದ್ಯಾಕೆ ? ||

ಸರ್ವತ್ರ ರಕ್ಷಕ ನೀನಾದರೆ ಮರಣವೇಕೆ ? |

ಸರ್ವ ಸುಖಸ್ವರೂಪ ನೀನಾದರೆ ದುಃಖವೀಯುವುದೇಕೆ ? ||

ಸರ್ವಸುಲಭದಿ ತಿಳಿಯುವುದಾದರೆ ಜಟಿಲ ಶಾಸ್ತ್ರಗಳೇಕೆ ? |

ಸರ್ವವೂ ಶ್ರೀಕೃಷ್ಣವಿಠ್ಠಲನೇ ಆದರೆ ನಾನಾ ಅವತಾರಗಳೇಕೆ ? ||

ಸರ್ವವೂ ಪ್ರಶ್ನೆಗಳೇ ಆದರೆ ಉತ್ತರ ನೀಡುವುದೇ ಶಾಸ್ತ್ರ ||

205. ಎಮ್ಮ ಪ್ರಾರಬ್ಧಕರ್ಮ ಬಲವಾಗಿದ್ದರೆ ಅನುಭವಿಸದೇ ತೀರದು ||

ವಂಚನೆಯಿಂದ ದಾಟಲುಬಾರದು ಯಾರಿಗೂ |

ಅಚ್ಯುತನ ಕರುಣೆಯಿಂ ಕೊಂಚ ಕಡಿಮೆಯಾಗುವುದು ||

ಶ್ರೀಮನ್ನಾರಾಯಣನೇ ಪುತ್ರನಾದರೂ ಸೆರೆವಾಸ ತಪ್ಪಲಿಲ್ಲ |

ಕೇಶವನ ಸಖನಾದರೂ ವನವಾಸ ತಪ್ಪಲಿಲ್ಲ ||

ಮುಕುಂದನ ಅತ್ತೆಯಾದರೂ ಮುತ್ತೈದೆತನ ಉಳಿಯಲಿಲ್ಲ |

ದ್ವಾರಕಾಧೀಶನ ತಂಗಿಯಾದರೂ ಅಪಮಾನ ತಪ್ಪಲಿಲ್ಲ ||

ಮುರಾರಿಯೇ ಸೋದರಮಾವನಾದರೂ ಮರಣ ತಪ್ಪಲಿಲ್ಲ |

ಪುರುಷೋತ್ತಮನೇ ಪತಿಯಾದರು ಮಗನಪಹರಣ ತಪ್ಪಲಿಲ್ಲ ||

ಲಕ್ಷ್ಮೀಪತಿಯಾಗಿದ್ದೂ ಇನ್ನೊಬ್ಬರ ಎಂಜಲಿಗೆ ಕೈ ಚಾಚಿದವ |

ದೇವಾಧಿದೇವ ಸರ್ವೋತ್ತಮನಾದರೂ ಕಳ್ಳತನ ಅಪವಾದ ತಪ್ಪಲಿಲ್ಲ ||

ಸರ್ವವ್ಯಾಪ್ತನಾಗಿದ್ದೂ ಕೌಸಲ್ಯಾಗೆ ಪುತ್ರವಿರಹ ತಪ್ಪಲಿಲ್ಲ |

ರಾಮಾನುಜನಾಗಿದ್ದೂ ಹದಿನಾಲ್ಕು ವರ್ಷ ವನವಾಸ ತಪ್ಪಲಿಲ್ಲ ||

ನಿತ್ಯಾವಿಯೋಗಿ ಆಗಿದ್ದೂ ಶ್ರೀರಾಮ ಪತ್ನಿಯ ಕಳೆದು ಕೊಂಡವ |

ಸರ್ವವಿದಿತ ವೇದವೇದ್ಯನಿದ್ದೂ ಪತ್ನಿಯ ತ್ಯಜಿಸಿದವ ||

ಗುಣ ಪರಿಪೂರ್ಣ ಶ್ರೀಕೃಷ್ಣವಿಠ್ಠಲನ ನಿರುತ ಭಜಿಸಿದರೆ |

ಸಂಚಿತ ಕರ್ಮ ಕಿಂಚಿತ್ತಾದರೂ ಕಡಿಮೆಯಾಗುವುದಂತೆ ||

[ದೇವರಿಗೆ ನರನಾಟಕವಾದರೂ, ಬಿಡದ ಪ್ರಾರಬ್ಧಕರ್ಮವೆಮಗೆಂದು ತಿಳಿಯಬೇಕು]

206. ಜ್ಞಾನ ಬೇಕು, ವಿಶೇಷ ಸುಜ್ಞಾನ ಬೇಕು || ಪ ||

ಜೀವ, ಜಡ, ಈಶನ ಭೇದ ಸಾರುವ |

ಯಾವಾಗಲೂ ನಾಶವಾಗದ ಜ್ಞಾನ ಬೇಕು || ಅ ||

ದ್ವೈತಾದ್ವೈತ ಭೇದ | ಕ್ಷರಾಕ್ಷರ ಭೇದ |

ಎಲ್ಲಕ್ಕಿಂತ ಮಿಗಿಲಾದ ಪುರುಷೋತ್ತಮನ ಸಾರುವ ವೇದಗಳ ಜ್ಞಾನ || 1 ||

ಗುರು ಮಧ್ವ ರಾಯರ ದಯದಿ ಶಾಸ್ತ್ರಗಳರಿತು |

ಶ್ರೀಕೃಷ್ಣವಿಠ್ಠಲನ ಗುಣ ಮಹಿಮೆಗಳರಿತು ಮುಕ್ತಿ ಮಾರ್ಗದೆಡೆ ಸಾಗಲು ಜ್ಞಾನ || 2 ||

207. ಸ್ಮರಣೆ ಇರಲಿ ಸದಾ ಹರಿ ಜಪದಲಿ |

ಬರಲಿ ವಿಸ್ಮರಣೆ ಲೋಕವಾರ್ತೆಗಳಲಿ ||

ಹರಿಕಥಾ ಪ್ರಸಂಗ ಎನಗೆ ದೊರಕಲಿ |

ನಿರ್ಮಲ ಭಕುತರ ದರ್ಶನವಾಗಲಿ ||

ಭಕುತಿ, ವೈರಾಗ್ಯ ಎನಗಿರಲಿ |

ಮುಕ್ತಿದಾಯಕ ಜ್ಞಾನ ಎನಗಾಗಲಿ |

ಸತ್ಯ ಸಜ್ಜನ ಸಂಗ ಸದಾ ಇರಲಿ |

ಪ್ರತಿ ಜನಮಕೂ ಮನವಿದೇ ಬಯಸಲಿ |

ಶ್ರೀಕೃಷ್ಣವಿಠ್ಠಲನ ಸುಪ್ರಸಾದವಾಗಲಿ ||

208. ದೇಹದ ಕಣ ಕಣದಿ ಪರಮಾತ್ಮನ ಸ್ಮರಣೆ ಇರಲಿ || ಪ ||

ನಿಶಿ ಹಗಲೂ, ಒಳ-ಹೊರಗೂ ಬಿಡದೇ || ಅ ||

ಯಾವುದೇ ಜನ್ಮವಿರಲಿ, ಯಾವುದೇ ಯೋನಿ ಇರಲಿ |

ಯಾವುದೇ ದೇಶದಲ್ಲಿರಲಿ, ಯಾವುದೇ ಕಾಲದಲ್ಲಿರಲಿ || 1 ||

ಅನವರತವೂ ನೆನೆಯುವ ಮನವಿರಲಿ |

ಭವಭಯತಾರಕ ಶ್ರೀಕೃಷ್ಣವಿಠ್ಠಲ ಮಂತ್ರ ಸದಾ ಜಪಿಸುತಿರಲಿ || 2 ||

209. ಸರ್ವ ಕರ್ತೃವಿನ ಮುಂದೆ ನಾನೇ ಮಾಡಿದೆ ಎಂದರೆ |

ಸೃಷ್ಟಿ ಕರ್ತನ ಮುಂದೆ ನಾನೇ ಬಾಲಕನ ಜನಕನೆಂದರೆ || 1 ||

ನಿರ್ದೋಷನಿಗೆ ನನ್ನ ತಪ್ಪೆಲ್ಲಾ ನಿನ್ನಿಂದಲೇ ಎಂದರೆ |

ಸರ್ವಜ್ಞನ ಮುಂದೆ ನನಗೇ ಎಲ್ಲಾ ತಿಳಿದಿದೆ ಎಂದರೆ || 2 ||

ಸದ್ಗುಣ ಸಾಂದ್ರನ ಮುಂದೆ ನನ್ನ ಗುಣಗಳ ಹೊಗಳಿಕೊಂಡರೆ |

ಅನಾದ್ಯನ ಮುಂದೆ ನಾನೇ ಚಿರಾಯು ಎಂದರೆ || 3 ||

ಪುರುಷೋತ್ತಮನ ಮುಂದೆ ನಾನೇ ಶ್ರೇಷ್ಠನೆಂದರೆ |

ಪರಮಾತ್ಮ ಶ್ರೀಕೃಷ್ಣವಿಠ್ಠಲ ಮೆಚ್ಚುವನೇನಯ್ಯಾ || 4 ||

210. ಮನುಜರನ್ನೇಕೆ ಓಲೈಸುವಿರಿ ಹುಚ್ಚುತನದಿ |

ಶ್ರೀಶನ ಸೇವಿಸಿ ಧನ್ಯರಾಗಿ || ಪ ||

ಜನುಮವಿಡೀ ಸೇವೆ ಮಾಡಿದರೂ |

ಬಂಧು ಬಾಂಧವರೇನು ಕೊಟ್ಟಾರು ||

ನಿಂದೆಯ ಮಾತನಾಡುವುದ ಬಿಟ್ಟು |

ಕೊಡುವಾಗ ಹೊಗಳಿ ಇಲ್ಲವೆಂದಾಗ ಮೂದಲಿಸುವರೋ || 1 ||

ಕೊಟ್ಟು ಕೊಂಬುವ ವ್ಯಾಪಾರ ಮನುಜರಲ್ಲಿ |

ಕೊಟ್ಟರೂ ಕೊಡದಿರುವರು ಅನೇಕರು ||

ಕೊಡದಿದ್ದರೂ ಅಕ್ಷಯವೀವ ನಮ್ಮ |

ಶ್ರೀಕೃಷ್ಣವಿಠ್ಠಲ ಕರುಣಾಳು || 2 ||

211. ಮುಂಜಾವಿನಲಿ ಏಳುವ ಮುನ್ನ ಮುರಾರಿಯ ನೆನೆ |

ಗಜೇಂದ್ರಮೋಕ್ಷದಕಥೆ ಕಪಿಲೋಪಾಖ್ಯಾನವ ನೆನೆ ||

ಕ್ಷೀರ ಸಮುದ್ರದಿ ಪವಡಿಸಿದ ಲಕ್ಷ್ಮೀನಾರಾಯಣನ |

ಪರಿವಾರ ಸಮೇತ ತಾರತಮ್ಯದಿ ನಮಿಸಿ ||

ಶ್ರೀಹರಿ ಅವತಾರ ಸ್ಮರಿಸಿ ನಂತರ |

ಬ್ರಾಹ್ಮೀ ಮೂಹುರ್ತದಿ ಕರಶ್ಲೋಕ ಪಠಿಸಿ ||

ಮಾಡುವ ಸಕಲ ಕರ್ಮಗಳಿಗೆ ಕಾರಣ ಕರ್ತೃ |

ಒಡೆಯ ಶ್ರೀಕೃಷ್ಣವಿಠ್ಠಲ ಎಂದರೆ ನಿರ್ಮಲ ಬುದ್ಧಿ ಪ್ರಾಪ್ತಿ ||

"ಚಾತುರ್ವಣ್ರ್ಯ ಭಾವಾರ್ಥ"

212. ಮಾನವ ದೇಹದಿ ತೋರುತಿದೆ ಚಾತುರ್ವಣ್ರ್ಯ ಧರ್ಮಗಳು |

ಮಾಣವ ಶಬ್ದಬ್ರಹ್ಮರೂಪ (ಶ್ರುತಿ) ದಿಂದ ಪರಬ್ರಹ್ಮರೂಪದ ಅಭಿವ್ಯಕ್ತಿ || 1 ||

ಬುದ್ಧಿ ಪ್ರಭೇದ ಸಹಿತ ಪ್ರಧಾನದಿ ಇರುವುದು ಶಿರದಲಿ |

ಅದಕೆ ಬ್ರಾಹ್ಮಣವರ್ಣ (ವೇದ ತಿಳಿದವ) ವಿರುವುದು ಇಲ್ಲೇ || 2 ||

ಕ್ಷತ್ರಿಯ ವರ್ಣವಿರುವುದು ಬಾಹು ಬಲದಲಿ ಪ್ರಾಧಾನ್ಯವಾಗಿದೆ |

ನಿರೋಗಿಯಾಗಿಸಿ ಆರೋಗ್ಯ ಭಾಗ್ಯ ದೊರೆಯುವುದೇ ಇದರಿಂದ || 3 ||

ಊರುವಿನಲ್ಲಿರುವುದೇ ಪ್ರಧಾನ ವೈಶ್ಯವರ್ಣ |

ಶರೀರದ ವ್ಯಾಪಾರ ಸಾಂಗವಾಗಿ ನಡೆಯುವುದೇ ಇದರಿಂದ || 4 ||

ತಳಭಾಗದಲ್ಲಿ ಇರುವುದೇ ಪ್ರಧಾನ ಶೂದ್ರವರ್ಣ |

ಇಲ್ಲಿದೆ ದೇಹ ನಿರ್ಮಲ ಕಾರ್ಯ, ಇದಾಗದಿರೆ ಸಕಲ ಅಂಗಕಾರ್ಯ ಶೂನ್ಯ || 5 ||

ಮುಖ್ಯಪ್ರಾಣನ ಕಾರ್ಯದಿಂದೇ ಸಕಲ ವರ್ಣಗಳ ಹಾರಾಟ |

ಅಖಿಲ ದೇಹದ ಕಾರ್ಯ ನಡೆವುದು ಇವನಿಂದಲೇ || 6 ||

ಉಸಿರಾಟದ ಜೊತೆ ಸ್ಪರ್ಶ ಜ್ಞಾನವು ದೇಹವಿಡಿ ಹರಡಿದೆ |

ಸುಸ್ಥಿರ ದೇಹಕೆ ಸಕಲ ವರ್ಣಗಳ ಪರಸ್ಪರ ಸಹಕಾರವೇ ಶಿವ || 7 ||

ಯಾವ ವರ್ಣದ ಕೆಲಸದಲ್ಲೂ ಮೇಲು ಕೀಳಿಲ್ಲ |

ಸರ್ವ ವರ್ಣಗಳ ಕ್ರಿಯೆಗೆ ಮುಖ್ಯಪ್ರಾಣನೇ ಕಾರಣ || 8 ||

ಪ್ರಾಣನ ಕೆಲಸ ನಡೆಯಲು ಪರಮ ಚೇತನ ಅಲ್ಲಿರಲೇಬೇಕು |

ಪ್ರಾಣಕೆ ಜೊತೆ ಪರಮ ಚೇತನವಿಲ್ಲದಿರೆ ಸಕಲ ಕಾರ್ಯವು ನಿಶ್ಚೇತ || 9 ||

ಬುದ್ಧಿ ಪ್ರಧಾನವಾದುದು ಬ್ರಾಹ್ಮಣ ವರ್ಣ, ಶಕ್ತಿ ಪ್ರಧಾನವಾದುದು ಕ್ಷತ್ರಿಯ ವರ್ಣ |

ಪುಷ್ಠಿಪ್ರದಾಯಕ ವೈಶ್ಯವರ್ಣ, ಎಲ್ಲ ವರ್ಣಗಳ ಸುಗಮ ಸೇವಾ ಕಾರ್ಯಕೆ ಮೂಲ ಶೂದ್ರವರ್ಣ ||10||

ಚಾತುರ್ವಣ್ರ್ಯ ಪ್ರಭೇದ ಜ್ಞಾನ ಇಹ-ಪರದ ಉನ್ನತಿಗೆ ಮೂಲ |

ಚತುರ ಎಲ್ಲ ಬಲ್ಲ ಶ್ರೀಕೃಷ್ಣವಿಠ್ಠಲ ಪೇಳಿದ್ದು ತಪ್ಪು ತಿಳಿದರೆ ನರಕವೇಗತಿ || 11 ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು