ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಉಗಾಭೋಗಗಳು

83. ಮಧ್ವಮತದಿ ಹರಿಯೇ ಗುರು, ಹರಿಯೇ ಶ್ರೇಷ್ಠ |

ಬುಧಜನ ಪೇಳ್ವರು ತತ್ವವ ಈ ಜಗಸತ್ಯ ನಿತ್ಯ ||

ಸಾಧನದಿ ಭಕ್ತಿಯೇ ಉತ್ತಮ ತ್ರಿಕಾಲದಿ |

ಪಡೆಯಲು ನಿತ್ಯಸುಖ, ನಿಜ ಮುಕುತಿಯಲಿ

ವೇದವೇ ಸಾಕ್ಷಿ ಶ್ರೀಕೃಷ್ಣವಿಠ್ಠಲನಾಣೆಗೂ ||

84. ವೇದವೇ ಸರ್ವಧರ್ಮದ ಮೂಲ | ವೇದವೇ ಮೂಲ

ಪರಮಾತ್ಮನರಿವಿಗೆ ||

ವೇದದಿ ಪೇಳಿದಂತೆ ಶ್ರೀಕೃಷ್ಣವಿಠ್ಠಲನಾ | ರಾಧಿಪರಿಗೆ ಶ್ರೇಷ್ಠ ಪರಗತಿಯೇ

ಪ್ರಾಪ್ತಿ ||

85. ಭಾಸ್ಕರನ ದಯದಿ ಆರೋಗ್ಯ | ಐಶ್ವರ್ಯವು ಅಗ್ನಿ ದಯದಿ

ಈಶ್ವರನ ದಯದಿ ಜ್ಞಾನವು | ಮೋಕ್ಷ ಸಿಗುವುದು ಶ್ರೀಕೃಷ್ಣವಿಠ್ಠಲನ ದಯದಿ |

86. ಮಧುರ ಕೆನೆಮೊಸರು | ಮಧುರ ಸವಿ ಜೇನು |

ಮಧುರ ಆಮ್ರರಸ | ಮಧುರಾತಿ ಅಮೃತ |

ಮಧುರಾತೀ ಮಧುರತಮ | ಮಧುರಾಧಿಪತಿ ಶ್ರೀಕೃಷ್ಣವಿಠ್ಠಲನಾಮ ||

87. ಅಲ್ಲಿಯೂ, ಇಲ್ಲಿಯೂ, ಎಲ್ಲೆಲ್ಲಿಯೂ ಇರುವವ ಪರಿಪೂರ್ಣವ್ಯಾಪುತ |

ಮಲಗಿದಾಗಲೂ, ಕುಳಿತಾಗಲೂ, ನಡೆವಾಗಲೂ, ಸ್ಮರಿಸು ಹೃದಯಸ್ಥ ಶ್ರೀಕೃಷ್ಣವಿಠ್ಠಲನ ||

88. ಮುಂಜಾವಿನಿಂದ ಸಂಜೆವರೆಗೆ | ಸಂಜೆಯಿಂದ ಮುಂಜಾವಿನವರೆಗೆ ||

ಕಂಜನಾಭ ನಾ ಮಾಡುವ ಕರ್ಮವೆಲ್ಲಾ | ಅಂಜನಾಪುತ್ರಾಂತರ್ಗತ ಶ್ರೀಕೃಷ್ಣವಿಠ್ಠಲ ನಿನಗೊಪ್ಪಿಸುವೆ ಸಲಹೋ ||

89. ಅರಿತು ಮಾಡುವ ಕರ್ಮ ಶ್ರೇಷ್ಠ | ಅರಿತು ಪೇಳುವ ವಾಣಿ ಉತ್ತಮ

ಅರಿತು ಮನದಿ ಆಲೋಚಿಸಿ ನಡೆಸು | ಶ್ರೀ ಕೃಷ್ಣವಿಠ್ಠಲಾ ಅರಿವಿನ ಗುರು ನೀನೇ||

90. ನೀನಿದ್ದರೆ ನಾನಿರುವೆ - ನೀನೆದ್ದರೆ ನಾನೆಲ್ಲಿರುವೆ ? |

ನಿನ್ನೊಳು ನಾನಿರುವೆ - ನನ್ನೊಳು ನೀನಿರುವೆ ||

ನನ್ನ - ನಿನ್ನ ಸಂಬಂಧ ಬಿಡಿಸಲಾಗದ ನಂಟು |

ಏನೀ ಒಗಟು ಗಂಟು ಬಿಡಿಸು ಶ್ರೀಕೃಷ್ಣವಿಠ್ಠಲಾ ||

ವಿವರಣೆ - ಲಯ ಕಾಲದಲ್ಲಿ ಪರಮಾತ್ಮನ ಉದರದಲ್ಲಿ ಜೀವರ ವಾಸ ಹಾಗೂ ಜೀವಿಯ ಹೃದ್ಗುಹಾವಾಸಿ ಪರಮಾತ್ಮ.

91. ಅನೇಕಾನೇಕ ಶಿರ, ನೇತ್ರ, ಪಾದ, ಬಾಹುವಿಗೆ ನಮಃ |

ಅನೇಕಾನೇಕ ರೂಪ ಪರಮಾತ್ಮನಿಗೆ ನಮಃ ||

ಅನೇಕಾನೇಕ ಹೆಸರಿನ ಪುರುಷ ಶಾಶ್ವತಗೇ ನಮಃ |

ಅನೇಕಾನೇಕ ಯುಗಗಳಲ್ಲವತರಿಸುವ ಶ್ರೀಕೃಷ್ಣವಿಠ್ಠಲ ತೇ ನಮೋ ನಮಃ ||

92. ತನ್ನತನವ ಬಿಡದೆ ಇನ್ನೊಬ್ಬರಿಗೂ ಪೂರ್ಣ ತಿಳಿಸದೆ |

"ಅನ್ನಂದೇಹಿ" ಎಂದವರಿಗೆ ನಾಸ್ತಿ ಎನ್ನದೆ ||

ಉನ್ನತ ಪ್ರಾರ್ಥಿಪರಿಗೆ ಇಹ-ಪರ ಸುಖವೀವ |

ಮನವನಿತ್ತರೆ ತನ್ನನೀವ ಶ್ರೀ ಕೃಷ್ಣವಿಠ್ಠಲನು ಭಕ್ತರ ವಶ ||

93. ಒಮ್ಮೆ ಹಾಡಿ ಹೊಗಳಿ ಕುಣಿದರೂ ಸರಿ | ಒಮ್ಮೆ ನೋಡಿ ಬೇಡಿ

ಕಾಡಿದರೂ ಸರಿ ||

ಒಮ್ಮೆ ಬಳಿ ಸಾರಿ ಕರೆದರೂ ಸರಿ | ಸುಮ್ಮಾನದಿ ಶ್ರೀಕೃಷ್ಣವಿಠ್ಠಲ ಕರಪಿಡಿವ ||

94. ಗುರು ಕರುಣೆ ಇಲ್ಲದೆ ಹರಿ ಒಲುಮೆಯಾಗದು | ಹರಿಯೊಲುಮೆ ಇಲ್ಲದೆ

ಸಾಧನೆ ಸಾಗದು ||

ಗುರಿ ತಲುಪದ ಮಾನವ ಜನ್ಮವ್ಯರ್ಥ | ಸರ್ವವೂ ಸಾಧ್ಯ ಶ್ರೀಕೃಷ್ಣವಿಠ್ಠಲನ ದಯದಿ ||

95. ಅಂಜೆನು ಬಿರುಗಾಳಿ, ಮಳೆ, ಬಿಸಿಲಿಗೆ | ಅಂಜೆನು ಕಷ್ಟ ಕೋಟಲೆಗಳ

ಸರಮಾಲೆಗೆ ||

ಅಂಜೆನು ಲೋಕೋಪವಾದ ನಿಂದೆಗೆ | ಅಂಜುವೇ ಶ್ರೀಕೃಷ್ಣವಿಠ್ಠಲ ನೀ ಎನ್ನ ತೊರೆದರೆ ||

96. ಅಲ್ಲೂ ಇಹನು, ಇಲ್ಲೂ ಇಹನು | ಎಲ್ಲೆಲ್ಲೂ ಅವನೇ ಇಹನು ||

ಒಳಗೂ ಇಹನು ಹೊರಗೂ ಇಹನು | ಲೀಲಾಮಾನುಷ ಸೃಷ್ಠಿಕರ್ತ ||

ಪ್ರಳಯ ಜಲದಿ ಪವಡಿಪನೊಬ್ಬನೇ | ಎಲ್ಲಾ ಬಲ್ಲ ನಮ್ಮ ಶ್ರೀಕೃಷ್ಣವಿಠ್ಠಲ ||

97. ಅದ್ಭುತ ಲೀಲೆಗೈದ ನಂದನಂದನ | ನಂದ ಗೋಪರೆಲ್ಲಾ ಗೋವರ್ಧನವ

ಪೂಜಿಸಲು ||

ಇಂದ್ರ ರೋಷದಿ ಮುಸಲಧಾರೆ ಸುರಿಸೆ | ಭೂಧರ ಕಿರುಬೆರಳಲೆತ್ತಿ ಸಂರಕ್ಷಿಸಿದ ||

ವೇದ ಪ್ರತಿಪಾದ್ಯ ಶ್ರೀಕೃಷ್ಣವಿಠ್ಠಲ | ಮಾಡಿದ ದೇವೇಂದ್ರನ ಗರ್ವಾಪಹಾರ ||

98. ಹಿರಿಯರಿಲ್ಲದ ಮನೆ ಹಗೇವಿನಂತೆ | ಮಕ್ಕಳಿಲ್ಲದ ಮನೆ ಮಸಣದಂತೆ ||

ಹೃತ್ಕಮಲದಿ ಶ್ರೀಕೃಷ್ಣವಿಠ್ಠಲ ನಿಲ್ಲದಿರೆ | ದೇಹವು ಶವದಂತೆ ಕಾಣಿರೋ ||

99. ಒಪ್ಪಿಕೋ ಧರ್ಮಶಾಸ್ತ್ರಗಳ ತಿಳಿದು | ಅರ್ಪಿಸಿಕೋ ಶ್ರೀ ಕೃಷ್ಣವಿಠ್ಠಲನ

ಸೇವೆಗೆ ಸದಾ ||

ತಪ್ಪು ನೋಡದೆ ಅಪ್ಪಿಕೊಳ್ಳುವನು | ಸಪ್ಪೆ ಜೀವನ ಸಾರ್ಥಕವಾಗುವುದು ||

100. ದಂಡಿಸಿ ದೇಹವ ಬಿಡಿಸಿ ಕಾಮವ | ಭಂಡ ಜೀವವು ಕಂಡ ಕಂಡಲ್ಲಿ ||

ಅಂಡಲೆಯದಂತೆ ಮಾಡಿ ದಯದಿ | ಪುಂಡರೀಕಾಕ್ಷ ಶ್ರೀಕೃಷ್ಣವಿಠ್ಠಲಾ ನಿನ್ನಲ್ಲೇ ನಿಲ್ಲಿಸು ||

101. ಚಿತ್ತಕ್ಕೆ ಬಂದಂತೆ ಇರಿಸೋ | ಚಿತ್ತದಿ ನೀನಿಂದು ಸದಾ ||

ಚಿತ್ತಾಪಹಾರಿ, ನಾ ನಿನ್ನವನೆಂದು | ಚಿತ್ತೈಸು ಶ್ರೀಕೃಷ್ಣವಿಠ್ಠಲನೇ ||

102. ಬೇಡ ಬೇಡ ಎನಗೇನು ಬೇಡ | ಬೇಡದಂತೆ ಮಾಡು ಎನ್ನ ಸದಾ ||

ಬೇಡಿದರೆ ನಿನ್ನಲ್ಲಿ ಶುದ್ಧಭಕ್ತಿ | ಬೇಡುವಂತೆ ಮಾಡು ಎನ್ನೊಡೆಯಾ ಶ್ರೀಕೃಷ್ಣವಿಠ್ಠಲ ||

103. ನೀನೇ ಪೂರ್ಣಾನಂದ, ಜ್ಞಾನವಂತ | ನೀನೇ ಗುಣಪೂರ್ಣ

ದೋಷದೂರ ||

ನಿನಗೇ ನೀನೆ ಸಮ ಶ್ರೀಕೃಷ್ಠವಿಠ್ಠಲ ಅಧಿಕರಾರಿಲ್ಲ | ನಿನ್ನ ಸಂಪೂರ್ಣ ಬಲ್ಲವರ್ಯಾರು? ||

104. ಹರಿನಾಮಜಪ ಸಂಸಾರತಾರಕ ಪುಣ್ಯದಾಯಕ ಸದಾ |

ಹರಿದ್ವೇಷಿಯಾಗಿ ಸಂಸಾರದಿ ಸುಖಿಸುವುದು ಬೇಡ ||

ಹರಿಪ್ರಿಯಳಾಗಿ ನರಕದಿ ಹೊರಳಾಡುವುದುಚಿತ ಕಾಣೋ |

ಹರಿ ಶ್ರೀಕೃಷ್ಣವಿಠ್ಠಲನ ನೆನೆವ ಭೃತ್ಯಗೆ ನರಕವೆಲ್ಲಿದೆ ? ||

105. ಗೀತಾಚಾರ್ಯ ವಸುದೇವಾತ್ಮಜ ಯದುಕುಲಚಂದ್ರ ಸತ್ಯಸಂಕಲ್ಪ |

ಚತುರ ರುಕ್ಮಿಣೀಶ ಶ್ರೀಕೃಷ್ಣವಿಠ್ಠಲ ಪರಬ್ರಹ್ಮಣೇ ನಮೋ ನಮಃ ||

106. ಚತುರ್ಭುಜಸ್ಥ ಶಂಖ ಚಕ್ರಧಾರಿ | ಸತತ ಯೋಗ ಮುದ್ರಾವಸ್ಥಾ |

ಕಂತುಪಿತ ಶ್ರೀಬದರಿನಾರಾಯಣ ಸ್ವಯಂ | ಸತ್ಯರೂಪಿ ಶ್ರೀಕೃಷ್ಣವಿಠ್ಠಲ ||

107. ಉಡುಪಿಯಲಿ ನಿಂತ ಬಾಲಕೃಷ್ಣ | ಕಡೆಗೋಲು ನೇಣ ಪಿಡಿದಿರುವ ||

ಸದ್ಭಕ್ತರ ಮನ ಸೆಳೆದು ಪೋಷಿಸುವ | ಒಡೆಯಾ ಶ್ರೀಕೃಷ್ಣವಿಠ್ಠಲ ಎಂದಿಗೂ ಕೈ ಬಿಡ ||

108. ಆಹಾರ - ವಿಹಾರ, ನಿದ್ರೆ - ಮೈಥುನ |

ಒಣ ಪ್ರತಿಷ್ಠೆ ಹಿಂದೆ ತಿರುಗುವರು ನಿತ್ಯ ||

ಪರಮಾಪ್ತ ಸಖ ಶ್ರೀ ಕೃಷ್ಣವಿಠ್ಠಲನ |

ಸ್ಮರಣೆಗೆ ಸಮಯವಿಲ್ಲ ವೆನ್ನುವರು ||

109. ಚೊಕ್ಕ ಚಿನ್ನವಾಗಿರುವ ಚಿನ್ಮಯರೂಪ |

ಸರ್ವಾಭರಣಭೂಷಿತ ಸರ್ವಾಂಗ ಸುಂದರ || 1 ||

ಶುದ್ಧ ಭಕ್ತಿಗೆ ಒಲಿವ ಶ್ರೀಕೃಷ್ಣವಿಠ್ಠಲನೇ ||

ನಿಜ ಭಕ್ತಿಪಾಲಿಸು ಇಲ್ಲಾ ಎನ್ನನ್ನು ಸ್ವೀಕರಿಸು || 2 ||

110. ಎನ್ನಲಿ ನಿಂತು ನುಡಿಸಿ, ನಡೆಸುವವ ಪರಮಾತ್ಮನಿರಲಾಗಿ |

ಎನಗೇಕೆ ಕರ್ಮಲೇಪದ ಸಂಸಾರ ಭಯ ||

ಸಂಚಿತ ಆಗಾಮಿ ಕರ್ಮಗಳ ಹತ್ತಿಯ ಬೆಟ್ಟದ ರಾಶಿ ಸುಡಲು |

ಶ್ರೀಕೃಷ್ಣವಿಠ್ಠಲಾಪರೋಕ್ಷ ಕಿಡಿಯೊಂದೇ ಸಾಲದೆ ||

111. ಸುಜ್ಞಾನಿಗಳು ತೋರಿಪ ದಾರಿಯಲಿ |

ಕಣ್ಮುಚ್ಚಿ ಓಡಿದರೂ ಬೀಳದೆ ||

ಕನಸಿನಂತೆ ಸರಾಗವಾಗಿ ತೇಲಿ |

ಪುನಃ ಬರದಂತೆ ತಲುಪುವೆವು ಶ್ರೀಕೃಷ್ಣವಿಠ್ಠಲನಪುರ ||

112. ಧ್ಯಾನಿಸು ಜಗದೇಕವಂದ್ಯ ಶ್ರೀ ವಿಷ್ಣುರೂಪ ಹೃದಯಾಕಾಶದಿ |

ಕಿರೀಟ, ಶಂಖ, ಚಕ್ರಧರಿತ ಬ್ರಹ್ಮರುದ್ರೇಂದ್ರ ವಂದ್ಯ ಯೋಗಿಯ ||

ಕಮಲ ಪೀಠದಿ ವಿರಾಜಿಪ ಮಂದಹಾಸ ಬೀರುವ ಸದಾ |

ಶ್ರೀರುಕ್ಮಿಣಿ ಸತ್ಯಭಾಮಾಸಹಿತ ಶ್ರೀಕೃಷ್ಣವಿಠ್ಠಲ ಸಕಲ ಪ್ರದಾತ ||

113. ಗುಣಪೂರ್ಣ ಜ್ಞಾನ ಸ್ವರೂಪ | ಆನಂದರೂಪ ರಕ್ಷಕ ||

ಓಂ ನಮೋ ಸುಖಸ್ವರೂಪತ | ವಿನಾಶರಹಿತ ಸರ್ವವ್ಯಾಪ್ತ -

ಶ್ರೀಕೃಷ್ಣವಿಠ್ಠಲಾಯ ನಮಃ ||

114. ನಾರಾಯಣಂ ನಮಸ್ಕøತ್ಯ ದೇವಂ ದೇವಕಿನಂದನಮ್ |

ವಂದೇ ಜಗದ್ರಕ್ಷಕತಮಂ ದೀನ ಬಂಧುಂ ಸದಾಶ್ರಯೇ ||

ಸರ್ವಪಾಪ ಪ್ರಶಮನಂ ಸದ್ಭಕ್ತಿಪ್ರದಾಯಕಮ್ |

ಕರುಣಾವಾರುಣ ಸಂಪೂರ್ಣಂ ನೌಮಿ ಶ್ರೀಕೃಷ್ಣವಿಠ್ಠಲಂ ||

"ನವವಿಧ ಭಕ್ತಿ"

115. ಕೇಳು ನೀ ಕೇಶವ ಗಾಥಾ | ಓಲೈಸಿ ಕೀರ್ತಿಸು ಸದಾ ಕೃಷ್ಣನ ||

ಲೀಲೆಗಳ ಸ್ಮರಿಸು ಸಂತತ ಶ್ರೀ ಹರಿಯ | ಒಲ್ಮೆಯಿಂ ಪಾದ ಸೇವಿಸು ಪದ್ಮನಾಭನ ||

ಬಲು ಅರ್ಚಿಸು ಅಚ್ಯುತಾನಂತನ | ಒಳಗೇ ವಂದಿಸು ವಿಷ್ಣು ವ್ಯಾಪಿಯ ||

ಒಳ್ಳೇ ದಾಸನಾಗು ನಾರಸಿಂಹನ | ಮೆಲ್ಲ ಸಖ್ಯ ಬೆಳಸು ನಾರಾಯಣನಲಿ ||

ಬಲ್ಲಿದ ಆತ್ಮ ನಿವೇದಿಸು ಗೋವಿಂದಗೆ | ಚೆಲ್ವ ಶ್ರೀಕೃಷ್ಣವಿಠ್ಠಲ ನಿನ್ನೇ ಮೆಚ್ಚುವಾ ||

116. ಬಿಂಬದಂತೆ ಪ್ರತಿಬಿಂಬ, ಬಿಂಬ ಚಲಿಸಿದೊಡೆ ಪ್ರತಿಬಿಂಬ ಚಲಿಸುವುದು |

ವಸ್ತು ಚಲಿಸಿದೊಡೆ ನೆರಳು ಚಲಿಸುವಂತೆ, ದೃಷ್ಟಿ, ಸೃಷ್ಟಿ ಒಬ್ಬನದೇ ||

ತೈಲಕೆ ಧಾರೆಯಂತೆ, ಕಣ್ಣಿಗೆ ದೃಷ್ಟಿಯಂತೆ |

ಕೋಗಿಲೆಗೆ ವಸಂತದಂತೆ, ಸರಸಿಗೆ ಸೂರ್ಯನಂತೆ |

ಆತ್ಮಸಖ ಶ್ರೀಕೃಷ್ಣವಿಠ್ಠಲನ ಇಚ್ಛೆಯಲಿ ಕ್ರಿಯೆ ನಡೆಯುವುದು ||

117. ಚಕೋರಿಗೆ ಚಂದ್ರಮ, ಬೆಳಕಿಗೆ ಸೂರ್ಯ |

ಜೀವಕೆ ಜೀವನ ಶರೀರ, ಬದುಕಲು ಪ್ರಾಣ ||

ಭಕ್ತಗೆ ಭಗವಂತ, ಆತ್ಮಕ್ಕೆ ಪರಮಾತ್ಮನಂತೆ |

ಎನಗೆ ಆಪ್ತಸಖ ಶ್ರೀಕೃಷ್ಣವಿಠ್ಠಲನೊಬ್ಬನೇ ||

118. ನಾನಿರುವುದು ಸಂಸಾರದಲಿ, ಎನ್ನ ಮನವಿರುವುದು ವಿರಕ್ತಿಯಲಿ |

ವೈರಾಗ್ಯವಿರಲಿ ಅನ್ಯ ವಿಷಯದಲಿ, ಸುರಾಗವಿರಲಿ ನಿನ್ನ ಪಾದ ಕಮಲದಲಿ ||

ಅಜ್ಞಾನವಿರಲಿ ಜಗದ ವಿಚಾರದಲಿ, ಸುಜ್ಞಾನ ಪಾಲಿಸೋ ನಿನ್ನಲಿ |

ಶ್ರೀಕೃಷ್ಣವಿಠ್ಠಲ ಎನ್ನ ಹೃದಯ ಮಂದಿರದಿ ನಿತ್ಯ ನೀನೇ ವಿರಾಜಿಸೋ ಸ್ವಾಮಿ ||

119. ಪರಿಪರಿ ನರರಿಂದೇನು ಫಲ ? | ಬಂಧನ ತೊಡಿಸುವರ ಸಂಗದಿಂದೇನು ಫಲ? ||

ಬಂಧನ ಬಿಡಿಸುವ ಬಿಂದುಮಾಧವನ ಸಂಗ ಸುಖ | ಮಾಡದಿರೆ ಮಾನವ ಜನುಮವಿದ್ದೇನು ಫಲ? ||

ನರರಿಗಿಂತ ಸುರೋತ್ತಮ, ಸರ್ವೋತ್ತಮ ಶ್ರೀಕೃಷ್ಣವಿಠ್ಠಲಗೆ | ಸರ್ವಸಮರ್ಪಣೆ ಮಾಡೆ ಕರೆದು ಸಾಯುಜ್ಯ ಕೊಡುವ ||

120. ಸದಾ ಶ್ರವಣ ಸತತ ಕೀರ್ತನದಿ ಸ್ಮರಿಸಿ |

ಮುದದಿ ಪಾದ ಸೇವನೆ ಪೂಜಾರ್ಚನೆ ||

ವಂದಿಸಿ ನಿಷ್ಕಳಂಕದಿ ಸೇವಿಸು ದಾಸ್ಯದಿ |

ಎಡಬಿಡದೇ ಸಖನಂತಿಹಗೆ ಪ್ರೀತಿಯಿಂ ||

ಮಾಡು ಶ್ರೀಕೃಷ್ಣವಿಠ್ಠಲಗೆ ಆತ್ಮ ಸಮರ್ಪಣೆ

ಕೊಡುವ ಮುಕ್ತಿಯ ತ್ವರಿತದಿ ಕರೆದು ||

121. ಸರಿಯುವುದು ಸಮಯ ಅರಿವಿಲ್ಲದೆ |

ಮರೆಯದೆ ಮುನ್ನಮಾಡು ಹರಿಸೇವೆ ||

ಸದಾ ಶ್ರವಣನಿರುತನಾಗು ಹರಿಕಥೆಯಲಿ |

ಸದಾ ಕೀರ್ತಿಸು ಚಿತ್ತದಿ ಹರಿ ಮಹಾತ್ಮೆಯಾ ||

ಸದಾ ಧ್ಯಾನಿಸು ಅಂತ್ಯವಿಲ್ಲದ ಹರಿ ಗುಣಗಳ |

ಸದಾ ಸ್ಮರಿಸು ಹರಿ ಮಾಡಿದ ಮಹೋಪಕಾರಗಳ ||

ಸದಾ ಸಖ್ಯ ಬೆಳಸು ಹರಿ ನಿಜಭಕ್ತರಲಿ |

ಸದಾ ಸೇವಿಸು ಪ್ರೀತಿಯಿಂ ಹರಿಪ್ರಸಾದವ ||

ಸದಾ ಸತ್ಕರ್ಮಾಚರಣೆಯೇ ಉಸಿರಾಗಿರಲಿ |

ಸದಾ ಅಘ್ರಾಣಿಸು ಹರಿ ನಿರ್ಮಾಲ್ಯವ ||

ಸದಾ ಓಡಾಡುವುದು ತೀರ್ಥಯಾತ್ರೆಯಾಗಲಿ |

ಸದಾ ದೃಷ್ಟಿಸು ಒಲುಮೆಯಿಂದ ಹರಿ ಸೃಷ್ಟಿಯ ||

ಸದಾ ಮಾಡಿದ ಕೆಲಸವ ಹರಿಗರ್ಪಿಸು |

ಸದಾ ನಡೆಯುವುದೆಲ್ಲಾ ಹರಿ ಪ್ರೇರಣೆಯೆನ್ನು |

ಸದಾನಂದಾತ್ಮ ಶ್ರೀಕೃಷ್ಣವಿಠ್ಠಲನೊಲಿವ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು