ಶ್ರೀ ಪಾಂಡುರಂಗ
79. ಹೊರೆಯಾದನೆ ನಾ ನಿನಗೆ ಪಂಢರಿರಾಯಾ |
ಪೊರೆಯಲಾರೆಯಾ ಎನ್ನ ನೀನು ಪುಂಡರೀಕಾಕ್ಷ || ಪ ||
ದುರುಳ ಜನರೊಳು ನಾ ದುರ್ಮತಿಯಾಗದಂತೆ |
ಮರುಳ ಮಾಡಯ್ಯಾ ನಿಜ ಮರ್ಮವನರಿತವನೇ || ಅ ||
ಕಾಕು ಜನರೊಳು ನೂಕದೆ ಸಜ್ಜನ ಸಂಗದಿ ಇರಿಸು |
ರಕ್ತಿ ಇರಲಿ ನಿನ್ನ ಕಥೆಯೊಳು ರೂಪವಿರಲಿ ಮನದೊಳ್ ||
ಭಕ್ತಿ ಇರಲಿ ನಿನ್ನಂಘ್ರಿಯಲಿ ಎಂದನುಗ್ರಹಿಸು ಸದಾ |
ಲೋಕಜ ಎನ್ನನ್ನೆತ್ತಿ ನಿನ್ನ ಪದ ಸಮೀಪದಿ ಇರಿಸು || 1 ||
ತನು, ಮನವಿರಲಿ ಸದಾ ನಿನ್ನ ಏಕಾಂತ ಧ್ಯಾನದಿ |
ಜನುಮ ಜನುಮದಿ ದೊರಕಲಿ ನಿನ್ನ ಕೃಪಕಟಾಕ್ಷ ||
ನಿನಗೇ ಶರಣೆಂಬೆ ಕಲಿಬಾಧೆ ತಪ್ಪಿಸಯ್ಯಾ |
ಎನ್ನ ಅವಗುಣಗಳೆಣಿಸದೇ ಒಲಿದು ಬಾರೋ || 2 ||
ಅತೀ ನಿಕೃಷ್ಟ ಪಾಪದ ಮೇರು ಪರ್ವತ ನಾ ಕಾಣೋ |
ಹತ್ತಿಗೂಡ, ಕಿಡಿಯಿಂದ ಸುಡುವಂತೆ ಸಂಚಿತ ಪ್ರಾರಬ್ಧ ಕಡೆಗಾಣಿಸೋ ||
ಸಂತತ ನಿನ್ನ ಚಿಂತೆ ಇರಲಿ ಅಂತ್ಯ ಕಾಲಕೆ ವಿಶೇಷದಿ |
ಅಂತ್ಯಾದಿವಿದೂರ ಪಾಂಡುರಂಗಾಭಿನ್ನ ಶ್ರೀಕೃಷ್ಣವಿಠ್ಠಲ ಪಾಲಿಸೋ || 3 ||
80. ಇಟ್ಟಿಗೆಯ ಮೇಲೆ ನಿಂತ ವಿಠ್ಠಲ | ಕಟಿಯಲ್ಲೆರಡು ಕರವಿಟ್ಟ
ಪಂಢರಿರಾಯ |
ದಿಟವಾಗಿ ಇವನೇ ಶ್ರೀಕೃಷ್ಣವಿಠ್ಠಲ | ಕಟ್ಟ ಕಡೆಗೆ ಪರಗತಿತೋರ್ಪ ಭಕುತರಿಗೆ ||