ದಾರಿದೀಪ
ಶ್ರೀ ಗುರುವಾಣಿ
ಶ್ರೀ ಗುರುವಾಣಿ – ಉಪದೇಶಾಮ್ರತ
ತಾರತಮ್ಯ
ವೈಷ್ಣವರೆಲ್ಲರೂ ಮುಖ್ಯವಾಗಿ ತಾರತಮ್ಯ ಪಂಚಭೇದವನ್ನು ತಿಳಿಕೊಂಡವರೇ, ಶ್ರೀ ಮದಾನಂದತೀರ್ಥರ ಕೃಪಾ ಪಾತ್ರರು ಅಂಥವರೇ, ವಿಷ್ಣುಭಕ್ತರು (೧) ಶ್ರೀಮನ್ನಾರಾಯಣ ಅನಂತಗುಣಪೂರ್ಣ (೨) ಶ್ರೀ ಲಕ್ಷ್ಮೀದೇವಿ ಇವಳು ಸ್ವಾಮಿಗಿಂತಲೂ ಅನಂತಗುಣದಿಂದ ಕಡಿಮೆ, ಈ ಇಬ್ಬರೂ ಈಶಕೋಟಿ. ಉಳಿದೆಲ್ಲ ಬ್ರಹ್ಮಾದಿ ಸಕಲ ಜೀವರೂ ಜೀವಕೋಟಿಯವರು. ಇನ್ನು ಶ್ರೀ ಲಕ್ಷ್ಮೀಗಿಂತ ಬ್ರಹ್ಮ ವಾಯುದೇವರು ಕೋಟಿಗುಣದಿಂದ ಕಡಿಮೆ; ನಂತರ ಭಾರತಿ, ಸರಸ್ವತಿಯರು ತಮ್ಮ ಪತಿಗಳಿಗಿಂತ ನೂರುಗುಣದಿಂದ ಕಡಿಮೆ; ಇದರಂತೇ ಗರುಡ ಶೇಷ ರುದ್ರರು ಮೇಲಿನವರಗಿಂತ ಕಡಿಮೆ; ಹೀಗೆ ಕ್ರಿಮಿಕೀಟ ಕಡ್ಡಿಗಳವರೆಗೂ ತಾರತಮ್ಯವಿದೆ.
ಪಂಚಭೇಧ
ಪಂಚಭೇದವೆಂದರೆ ೧.ಜೀವ ಈಶಗೆ ಭೇದ : ೨ ಜೀವ ಜೀವರಿಗೆ ಭೇಧ.. ೩ನೇದು ಜೀವ ಜಡಕ್ಕೆ ಭೇಧ ೪ನೇದು ಜಡ ಜಡಕ್ಕೆ ಭೇಧ ೫ನೇದು ಜಡಕ್ಕೆ ಪರಮಾತ್ಮಗೆ ಭೇಧ. ಈ ಜ್ಞಾನ ಮುಖ್ಯವಾಗಿ ಬೇಕೇಬೇಕು. ಲಕ್ಷ್ಮೀ ಮೊದಲು ಮಾಡಿಕೊಂಡು ಸರ್ವರೂ ಅಸ್ವತಂತ್ರರೇ; ಅವನ ಅಜ್ಞಾಧಾರಕಳಾದ ಲಕ್ಷ್ಮೀ, ಬ್ರಹ್ಮಾದಿ ದೇವತೆಗಳಿಗೆ ಆಜ್ಞೆ ಮಾಡುವಳು, ಜೀವರಿಗೂ ಪುರುಷ ಅಂತ ಲಕ್ಷ್ಮೀಗೂ ಪುರುಷ ಅಂತ ಅದೆ. ಬ್ರಹ್ಮಾದಿ ಸಕಲ ಜೀವರೂ ಕ್ಷರರೂ ಅಂದರೆ ನಾಶ ಹೊಂದುವರು, ಅವಳು ಅಕ್ಷರಳು ಅಂದರೆ ನಾಶವಿಲ್ಲದವಳು. ಈ ಕ್ಷರ ಅಕ್ಷರ ಪುರಷರಿಗೆ ಉತ್ತಮೋತ್ತಮನೆಂದು ಅವನಿಗೆ ಪುರಷೋತ್ತಮ ಅಂತಾ ನಾಮ.
ಶ್ರೀ ಲಕ್ಷ್ಮೀದೇವಿ ಸ್ವಾಮಿಗೆ ದೇಶ ಕಾಲದಿಂದ ಸಮಳು, ಗುಣದಿಂದ ಅಸಮಳು. ಅದಕ್ಕೆ ಅವಳಿಗೆ ಸಮಾಸಮ ಅಂತ ಹೆಸರು. ಜೀವರೂ ಅನಾದಿ, ಈಶನಾದ ಪರಮಾತ್ಮನಂತೂ ಅನಾದಿ ಅಂತಾ ವೇದವೇ ಸಾರುತ್ತಿದೆ. ಜೀವರು ಅಸೃಜ್ಯ ರಾಶಿಯಲ್ಲಿ ತಮ್ಮ ಅನಾದಿ ಆದ ಕರ್ಮನೂ ಜೊತೆಗೆ ಇದ್ದೇ ಇರುತ್ತಿದ್ದು, ಸ್ವಾಮಿ ಸೃಷ್ಟಿಗೆ ತಂದು ಅಭಿವ್ಯಕ್ತ ಮಾಡಿ, ಆಯಾ ಕರ್ಮ ಮಾಡಿಸಿ ಅದರ ಫಲ ಭೋಗಿಸಲು ಕೊಟ್ಟು ಸುಜೀವಿಗಳನ್ನು ಮೋಚನೆ ಮಾಡಿ ಅವರವರ ಗತಿಗೆ ಕಳಿಸುವನು.
ವಾದಿರಾಜರ ವಿವರಣೆ
ಶ್ರೀ ವಾದಿರಾಜ ಸ್ವಾಮಿಗಳವರು ಸೃಷ್ಟಿ ಸ್ಥಿತಿ ಲಯಗಳನ್ನು ಜನರಿಗೆ ತಿಳಿಸುವ ಸಲುವಾಗಿ, ಪಂಚೀಕರಣ ಅಂತಾ ೫ ಮನೆ ಬರೆದು ಗಂಧದ ಕಾಯಿಗಳನ್ನು ಮಾಡಿ ಆಟ ಆಡುವಂತೆ ತಿಳಿಸಿದ್ದಾರೆ. ಮೂಲ ಪ್ರಕೃತಿ ರಮಾದೇವಿ ಇವಳೇ ಮಾಯಾ ಮಾಡುವಳು, ಜಡ ಪ್ರಕೃತಿ ಒಂದಿದೆ. ಅದು ಮಣ್ಣು.ಸೃಷ್ಟಿ ಕುಂಬಾರ ಗಡಿಗೆ ಮಾಡಿದಂತೆ, ಸ್ವಾಮಿ ಕಂಬಾರ, ಪ್ರಕೃತಿ ಮಣ್ಣು ಕುಂಬಾರ ಮಾಡಿದ ಗಡಿಗೆಯನ್ನು ಒಡೆದರೆ ಮಣ್ಣು ಇದೇ ಇರುತ್ತದೆ. ಅದೇ ರೀತಿ ಪಂಚಭೂತಗಳಿಂದ ಸಿದ್ದವಾದ ಈ ದೇಹ ನಾಶವಾದ ಮೇಲೆ ಪಂಚಭೂತಗಳಲ್ಲಿಯೇ ಒಂದಾಗುವುದು.
ಜೀವಸ್ವರೂಪ
ಜೀವ, ಈಶ, ಜಗತ್ತು, ಕಾಲ ಅನಾದಿ ನಿತ್ಯವು. ಇದರಂತೇ ಜೀವರ ಸ್ವಭಾವ ಗುಣ ಅನಾದಿಯಿಂದ ಇದ್ದವುಗಳೇ; ಅವರವರ ಗುಣ ಸ್ವಭಾವದಂತೆ ಕರ್ಮ ಮಾಡಿಸಿ ಅದರಂತೆ ಫಲ ಕೊಡುವನು. ಅವನಿಗೆ ತನ್ನವರು ಬೇರೆಯವರು ಅನ್ನುವ ಪಕ್ಷಪಾತವಿಲ್ಲ. ತೋಟಗಾರನಂತೆ ಯಾವ ಬೀಜದಂತೇ ಫಲ ಸಿಗುವುದು ಬಿತ್ತಿದವನಿಗೆ ಗೊತ್ತಿರುವುದು. ಮಾವು, ಬೇವು, ಹುಣಸಿ,ಗುಣಧರ್ಮದಂತೇ ಆದಿ ಮಧ್ಯ ಆಂತ್ಯ ರಮಾ ನಾರಾಯಣರಿಗಿಲ್ಲ. ಅವರಿಬ್ಬರಿಗೂ ವಿಯೋಗವಿಲ್ಲ ನಾಶವಿಲ್ಲ
ಸಾಧನ
ಹೀಗೆಲ್ಲ ಚೆನ್ನಾಗಿ ಜ್ಞಾನಿಗಳಿಂದ ತಿಳಕೊಂಡು ತಾರತಮ್ಯ ಪ್ರಕಾರ ಹೇಗೆ ಮೇಲಿನವರನ್ನು ಧ್ಯಾನಿಸುತ್ತಾ ಮೇಲೆ ಮೇಲಿನವರಿಗೆ ಹೆಚ್ಚುಹೆಚ್ಚು ಭಕ್ತಿ ಮಾಡುತ್ತಾ ತಮಗಿಂತಾ ದೊಡ್ಡವರಿಂದ ಜ್ಞಾನ ಸಂಪಾದನೆ ಮಾಡಿಕೊಂಡು ಅವರವರಲ್ಲಿ ಭಾರತೀಯ ಮುಖ್ಯ ಪ್ರಾಣಾಂತರ್ಗತ ಪರಮಾತ್ಮನನ್ನು ನಮಸ್ಕರಿಸುತ್ತಾ ಅವರ ಸೇವೆಯೇ ಅಂತರ್ಗತ ಪರಮಾತ್ಮನಿಗೆ ಅರ್ಪಣ ಅಂತಾ ತಿಳಿಯುವುದೇ ಮುಖ್ಯ. “ಅರಿತವರಿಗತಿ ಸುಲಭ ಹರಿಯ ಪೂಜೆ” ಅಂತಾ ದಾಸರು ಹೇಳಿದ್ದಾರೆ
ಸೃಷ್ಟಿ ನಿರೂಪಣೆ
ಜಗಜ್ಜನನಿ ಲಕ್ಷ್ಮೀದೇವಿಯು ಪ್ರಳಯ ಜಲದಲ್ಲಿ ಮಲಗಿದ ಸ್ವಾಮಿಗೆ ಪ್ರಾರ್ಥಿಸಿ ಸೃಷ್ಟಿ ಮಾಡಿ ಜೀವರ ಉದ್ದಾರ ಮಾಡು, ಅವರವರ ಗತಿಗೆ ಹೋಗಲು ಸಾಧನ ಮಾಡಿಕೊಳ್ಳಲಿ ಅಂತಾ ಪ್ರಾರ್ಥಿಸಲು, ಕಾಲ ಪುರಷ ತಾನೂ, ಆನಿರುದ್ಧ, ಪ್ರದ್ಯುಮ್ನ ಸಂಕರ್ಷಣ, ವಾಸದೇವ, ನಾರಾಯಣ ಅಂತಾ ಇನ್ನೂ ಅನೇಕ ರೂಪ ತೆಗೆದುಕೊಂಡನು. ಸ್ವಾಮಿ ಎಷ್ಟು ರೂಪ ತೆಗೆದುಕೊಂಡನೋ ಅಷ್ಟು ರೂಪ ತೆಗೆದುಕೊಂಡಳು. ಜಯಾ ಮಾಯಾ ಕೃತಿ ಶಾಂತಿ ಲಕ್ಷ್ಮೀ ಅಂತಾ ಮತ್ಸ್ಯಾದಿ ದಶರೂಪ, ಕೇಶವಾದಿ ೨೪ ರೂಪ, ಅಜಾದಿ ೫೦ ರೂಪ, ನಾರಾಯಣಾದಿ ಶತ ರೂಫ, ವಿಶ್ವಾದಿ ಸಹಸ್ರರೂಪ, ಪರಾದಿ ಬಹುರೂಪಗಳನ್ನು ತೆಗೆದುಕೊಂಡನು. ಮೊದಲು ಬ್ರಹ್ಮನನ್ನು ಹೊಕ್ಕಳದಿಂದ ಕಮಲ ಸೃಷ್ಟಿಸಿ ಅದರಲ್ಲಿ ಅವನನ್ನು ಸೃಷ್ಟಿಮಾಡಲು, ದುರ್ಗಾ, ಕವಿಸಿದ ಕತ್ತಲಲ್ಲ ಏನೂ ಕಾಣದೇ, ನನ್ನ ತಂದಿ ಯಾರು ? ತಾಯಿ ಯಾರು ? ಅಂತಾ ವಿಚಾರಿಸುತ್ತಿರಲು ತಪ ತಪ ಅಂತಾ ಶಬ್ದ ಬಂದಿತು. ಆಗ ತಪಧ್ಯಾನ ಮಾಡುತ್ತಿರಲು ಹಂಸ ರೂಪದಿಂದ ಪರಮಾತ್ಮ ಪ್ರತ್ಯಕ್ಷನಾಗಿ ಉಪದೇಶ ಮಾಡಿ ಸೃಷ್ಟಿ ಮಾಡಿಲು ಆಜ್ಞೋಕೋವ್ವನು, ಸ್ಥಿತಿ, ಲಯ, ನಿಯಮನ, ಜ್ಞಾನ, ಆಜ್ಞಾನ, ಬಂಧ ಹಾಗೂ ಮೋಕ್ಷ ಈ ಅಷ್ಟ ಕರ್ತತ್ವ ಸ್ವಾಮಿಯದೇ; ಆಯಾ ದೇವತೆಗಳಿಂದ ಒಳಗೆ ತಾನಿದ್ದೇ ಮಾಡಿಸುವನು. ಯಂತ್ರದ ಗೊಂಬೆಗೆ ಕೀಲಿ ಕೊಟ್ಟಂತೆ ಆಜ್ಞೆ ಕೊಡುವನು ಒಳಗಿದ್ದು ತಾನೇ ಮಾಡಿ ಮಾಡಿಸುವನು. ಅವರ ಹೊರತು ಒಂದು ಕಡ್ಡಿ ಕೂಡಾ ಚಲಿಸದು. ಲಕ್ಷ್ಮೀ ಕೂಡಾ ಅವನ ಅಜ್ಞಾವಾರಿಗೆಸ್ವತಃಅಸ್ವತಾತ್ರಳ ಎದ ಇಕ್ಕುವೆ ವಿಸಬಿಡುವ ಶಕ್ತಿ ಲೇಶ ವಿಲ್ಲ ಎಂಬದೇ ಫಲವಿದ್ದು ಬಾಳುವದಕೆ ಅಂತಾ ಇದೆ ಅಂಥಾ ಬ್ರಹ್ಮ ವಾಯುಗಳೇ ಅವನ ಅಧೀನ, ಅಂದ ಮೇಲೆ ಉಳಿದೆಲ್ಲ ದೇವತೆಗಳು ಜೀವಗಳೂ ಅಸ್ವತಂತ್ರರೆಂದು ಹೇಳುವುದೇನಿದೆ.
ಜೀವನಸ್ವರೂಪ
ಬಿಂಬ ಪರಮಾತ್ಮ ಉಳಿದೆಲ್ಲರೂ ಅವನ ಪ್ರತಿಬಿಂಬ, ಇದನ್ನು ಮನನ ಮಾಡುತ್ತಾ ಅನುಸಂಧಾನ ಮಾಡುತ್ತಿದ್ದವರಿಗೆ ಹುಟ್ಟು ಸಾವು ಎಂಬ ಭಯವೇ ನಾಶ. ಕನ್ನಡಿಯಲ್ಲಿ ನಾವು ಮಾಡುವದೆಲ್ಲ ಅದು ಪ್ರತಿ ಬಿಂಬಮಾಡುತ್ತಿದೆ. ನಾವು ಮಾಡಿದನಂತರವೇ ಅದು ನಮ್ಮ ಜೊತೆಗೆ ಮಾಡುತ್ತಿದೆ. ಕನ್ನಡಿಯೇ ಕಾರ್ಯ ಮಾಡಿದೆ ಅಂದರೆ ಹೇಗೆ? ( ನಾನೇ ಮಾಡಿದ್ದೇನೆ ಅಂತಾ ಅಂದರೆ) ಅಂಥಾ ಅನುಸಂಧಾನ ಹೆಜ್ಜೆ ಹೆಜ್ಜೆಗೆ ಬರತೊಡಗಿದರೆ ಬರುಬತ್ತಾ ಅಹಂ ಮಮಗಳು, ಸೋರುವ ಕೊಡದ ನೀರು ಸೋರಿದಂತೆ ಕಡಿಮೇ ಆಗಿ ಪೂರ್ಣ ನಾನು ನನ್ನದು ನಿರ್ನಾಮವಾಗಿ ವ್ಯವಹರಿಸುವ ಪೂರ್ತಿ ಉಪಯೋಗಿಸುವರು, ಜ್ಞಾನ ಭಕ್ತಿವೈರಾಗ್ಯ ಸಂಪನ್ನರಿಗೇನೇ ಇಂಥದು ಸಾಧಿಸುವುದು. ಅಂಥವರಿಂದಲೂ ಅಕಸ್ಮಾತ ಪ್ರಾರಬ್ದ ವಶಾತ್ ಒಮ್ಮೊಮ್ಮೆ ಪಾಪ ಘಟಿಸಬಹುದು. ಹಾಗಾದಲ್ಲಿ ಆಗಿಂದಾಗ್ಗೆ ಪಶ್ಚಾತ್ತಾಪದಿಂದ ಕೂಡಲೇ ’ಸ್ವಾಮಿ ನನ್ನಿಂದ ಇಂಥ ಪಾಪ ಕಾರ್ಯಮಾಡಿಸಬೇಡ. ನಿನಗೇ ಅರ್ಪಣ ಅಂತಾ ಪಕ್ವ ಜೀವಿಗಳು ಪಶ್ಚಾತ್ತಾಪದಿಂದ ಅವನಿಗೇ ಮೊರೆ ಇಡುವುರು. ಪಾಪ ಪುಣ್ಯ ಎರಡನ್ನೂ ಅರ್ಪಿಸಬೇಕು ಅನ್ನುವ ಮಾತು ದಾಸರ ಹೇಳಿದ್ದಾರೆ. ಅದು ಯಾರಿಗೆ? ಅಭಿಮಾನ ಅಹಂ ಮಮಗಳನ್ನು ಬಿಟ್ಟು ೬ ವೈರಿಗಳನ್ನು ಹೊರಹಾಕಿ ಸದಾ ಧ್ಯಾನ ಮಗ್ನರಾದವರಿಗೇನೇ ಸರಿ. ಅದನ್ನೂ ಹೇಳಿದ್ದಾರೆ.
ಸಂಸಾರ ಮತ್ತು ಸಾಧನ
“ಕಿಚ್ಚಿಗೆ ಇರುವೆ ಮುತ್ತುವದೇ? ನಾ ನಿನ್ನ ಧ್ಯಾನದೊಳಿರಳು ಸದಾ ಅಂಥವರಿಂದ ಪಾಪ ಕಾರ್ಯ ಕ್ವಚಿತ್ ಆಗಬಹುದು. ಅಂತಾ ಯೋಗ್ಯತೆಯವರಿಗೆ ಹೇಳಿದ್ದು ಅದು. ಅಂಥವರೂ ಸಂಸಾರದಲ್ಲಿದ್ದೇ ಸಾಧನ ಮಾಡಿಕೊಳ್ಳುವರು” ಇರಬೇಕು ಇಲ್ಲದಿರಬೇಕು” ಅಂತಾನೂ ದಾಸರ ವಾಕ್ಯ ಅಂದರೆ ಗ್ರಹಸ್ಥ ಧರ್ಮ ಪಾಲಿಸುತ್ತಾ ಸ್ವಾಮಿಯ ಪರಿವಾರೆಂದು ನಿತ್ಯ ಕರ್ಮಾನುಷ್ಠಾನ ಮಾಡುತ್ತಾ ಬಂಧು ಬಾಂಧವ ಅತಿಥಿ ಅಭ್ಯಾಗತ ಯತಿ ವಟು ಎಲ್ಲರಿಗೂ ತನ್ನ ಯೋಗ್ಯತೆಯಲ್ಲಿ ಭೋಜನ ದಾನಾದಿಗಳನ್ನು ಮಾಡುತ್ತಾ ಇದೆಲ್ಲ ನಿನ್ನ ಪರಿವಾರ ಸ್ವಾಮಿ ಈ ಎಲ್ಲರಂತರ್ಗತ ಭಾ ಮು, ಆಂತರ್ಗತ ಶ್ರೀ ಕೃಷ್ಣಾ ನಿನಗರ್ಪಿತಾ ಆಂತಾ ತಿಳಿದ ಗ್ರಹಸ್ಥರಿಗೆ ಧನ್ಯೋ ಗ್ರಹಸ್ಥಾಶ್ರಮೆ ಅಂದಿದ್ದಾರೆ. ಹೀಗಿದ್ದವರಿಗೆ ಉಳಿದ ೩ ಆಶ್ರಮ ದವರಿಗಿಂತಲೂ ಬೇಗನೇ ಅನುಗ್ರಹ ಮಾಡುವನು ಅಂತಾ ಹೇಳಿದ್ದಾರೆ. ಅದೆಲ್ಲ ನಿಜ. ಅದರೆ? ಮನೆಯ ಜವಾಬ್ದಾರಿ (ಕುಟುಂಬ ಪೋಷಣೆಗಾಗಿ) ಇಂಥಾ ಕಾಲ ಬೇರೆ ಹೇಗೆ ವೇಳೆ ಸಿಗಬೇಕು ? ಅಂದರೆ ನಿಜ. ಈಗ ಲೌಕಿಕದ್ದೇ ಉದಾಹರಣೆ, ಕಚೇರಿ ಕೆಲಸಕ್ಕೆ ವೇಳೆ ಇಂತಿಷ್ಟು ಅಂತಾ ನಿಯಮದ ಪ್ರಕಾರ ಹೋಗಿ, ಕೆಲಸದ ವೇಳೆ ಮುಗಿದೊಡನೇ ಒಂದು ಕ್ಷಣ ಕೂಡ ತಡಮಾಡದೇ ಮನೆಯ ಕಡೆಗೆ ಹೇಗೆ ಧಾವಿಸುವಿರೋ ಹಾಗೇ ಮನೆಯ ಪ್ರಪಂಚದ ಕೆಲಸವನ್ನೂ ವೇಳೆಗೆ ಸರಿಯಾಗಿ ಮಾಡಿರಿ. ಕಚೇರಿಯಿಂದ ಮನೆಗೆ ಗಡಬಡಿಸಿ ಬರುವಂತೆ ದೇವರ ಕಡೆಗೆ ಮನಸ್ಸನ್ನು ಜಗ್ಗಬೇಕು. ಅಂದರೆ ಪೂಜಾ ಶ್ರವಣ ಪಠಣ ಮುಂತಾದ ಕಡೆಗೆ ಮನಸ್ಸನ್ನು ಕೊಟ್ಟು ಪರಮಾತ್ಮನ ಧ್ಯಾನ ಜಪ ಮುಂತಾದವುಗಳನ್ನು ಮಾಡಬೇಕು. ತಾತ್ಬರ್ಯ, ಸಂಸಾರದಲ್ಲಿ ಆಸಕ್ತಿ ತಾನಾಗೇ ಇರುವುದು ಸ್ವಾಭಾವಿಕ. ಮನಸ್ಸು ಕೊಟ್ಟು ಈ ಕೆಲಸ ಎಷ್ಟು ಉತ್ಸಾಹದಿಂದ ಮಾಡುತ್ತೇವೆಯೋ ಅಷ್ಟು ಉತ್ಸಾಹದಿಂದಲೇ ಪೂಜಾದಿಗಳನ್ನು ಮಾಡಬೇಕು ಅಂತಾ ಹೇಳಿದ್ದಾರೆ.
ಪ್ರಪಂಚದ ಜವಾಬದಾರಿಯನ್ನು ನಮಗೆ ನೀನೇ ನಿಯಮಿಸಿರುವಿ ಸ್ವಾಮಿ (ಈ ಡಿಪಾರ್ಟ್ಮೆಂಟ್) ಪತ್ನಿ ಪುತ್ರಾದಿ ಸಮಸ್ತ ಬಾಂಧವರ ಯೋಗ. ನೋಡುವುದನ್ನು ಇದು ರಾಜನಾದ ನಿನ್ನಾಜ್ಞೆ. ಇದು ನಿನ್ನ ಸೇವೆ ಅಂತಾ ಅನುಸಂಧಾನ ಮಾಡಬೇಕು.
ಸಾಧನದ ಮೆಟ್ಟಲುಗಳು
ಕುಟುಂಬ ಪೋಷಣೆಯನ್ನು ಅತೀ ಆಸಕ್ತಿ ಇಲ್ಲದೇ ಕಚೇರಿಯ ವೇಳೆಯಂತೆ ನಿಯಮಿತ ವೇಳೆ ಮಾಡಿ ಮುಗಿಸಿ, ಎಲ್ಲೆಲ್ಲ ಭಗವದ್ಬಕ್ತರಿಂದ ಪುರಾಣ ಪ್ರವಚನಾದಿಗಳು ನಡೆಯುವವೋ ಅಲ್ಲಲ್ಲಿ ಹೋಗಿ ಶ್ರವಣ ಮಾಡುತ್ತಾಕೇಳಿ ಬಂದು ಮನನ ಮಾಡುತ್ತಾ ಅವರು ಹೇಳಿದಂತೆ ನಡೆ ನುಡಿಗಳನ್ನು ತಿದ್ದಕೂಳ್ಳಲು ಅಭ್ಯಾಸ ಮಾಡಿ ಮಾಡಿ ಎಷ್ಟೋ ವರ್ಷಗಳೂ ಅಂದರೆ ನಮ್ಮ ಆಯುಷ್ಯವೆಲ್ಲ ಈ ಅಭ್ಯಾಸ ಮಾಡುತ್ತಿದ್ದರೆ, ಆ ಜ್ಞಾನಿಗಳಾದ ಗುರುಗಳಿಂದ ನಮಗೆ ಪ್ರಶಸ್ತಿದೊರೆಯಲು, ಅವರ ಸಹವಾಸದಲ್ಲಿಯೇ ಇದ್ದು ಅಂಥವರ ಸೇವೆ ಶುಶ್ರೂಷಾದಿಗಳು ಮಾಡುತ್ತಿರಲು, ಆ ಗುರುಗಳು ನಮ್ಮನ್ನು ಪ್ರಾಥಮಿಕ ಅಭ್ಯಾಸ ಮುಗಿಸಿ ಮಾಧ್ಯಮಿಕ ಶಾಲೆಗೆ ಕಳಿಸುವಂತೆ ಪ್ರಶಸ್ತಿ ಕೊಡುವರು. ಅಂಥವರ ಸಹವಾಸ ಆಚರಣೆ ಸಾತ್ವಿಕ ಗುಣದಿಂದ ಹರಿಧ್ಯಾನ ಇಂಥ ಉಪಾಸನಾ ಶಿಕ್ಷಣ ಸಿಗುವುದು. (ಕರ್ಮಕಾಂಡ) ಈ ಉಪಾಸನಾ ಶಿಕ್ಷಣ ಪೂರ್ಣವಾದ ಮೇಲೆ, (ಜ್ಞಾನಕಾಂಡ) ಇಂಥಾ ಶಿಕ್ಷಣ ಕೊಡುವ ಗುರುಗಳು ಹರಿಸರ್ವೋತ್ತಮ ವಾಯು ಜೀವೋತ್ತಮ ಹರ ವೈಷ್ಣವೋತ್ತಮ ಎಂಬ ದಿವ್ಯ ಜ್ಞಾನೋಪದೇಶ ಕೊಟ್ಟು ನಂತರ ಉಚ್ಚ ಶಿಕ್ಷಣ (ಕಾಲೇಜ್)ದಲ್ಲಿ ಜ್ಞಾನಕಾಂಡ ಇದ್ದಂತೆ ಮೇಲಿನ ಮಟ್ಟದ ಜ್ಞಾನ ವೈರಾಗ್ಯ, ಭಕ್ತಿಯುತರಾದ ಮಹಾನ್ ಮಹಾನ್ ಗುರುಗಳು, ಉಪದೇಶಕರಾಗುವಂತೆ ಸ್ವಾಮಿ ಅನುಗ್ರಹ ಮಾಡುವನು.
ಸಾಧನ ಶುಚಿತ್ವ
ಒಟ್ಟಿನಲ್ಲಿ ಗುರುಗಳ ಬೆನ್ನು ಹತ್ತದೇ ಯಾರೂ ಉದ್ಧಾರರಾಗಲು ಸಾಧ್ಯವೇ ಇಲ್ಲ. ಅವರು ಉಪಾಸನಾ ಕ್ರಮವನ್ನೂ ಮನಸ್ಸು ಒಂದೇ ಕಡೆಗೆ ನಿಲ್ಲಿಸುವಂಥಾ ಉಪಾಯವನ್ನೂ ಮೊದಲು ಮನಸ್ಸಿನ ಕೊಳೆಯನ್ನು ತೊಳೆಯುವುದನ್ನೂ ತಿಳಿಸುತ್ತಾರೆ. “ ಮುಸುರೆ ತೊಳೆಯಬೇಕೋ ಈ ಮನಸ್ಸಿನ ಮುಸರೆ ತೊಳೆಯಬೇಕೋ” ಅಂತಾ ಹೇಳಿದ್ದಾರೆ. ಮುಖ್ಯವಾಗಿ ಮೊದಲ ಕಾರ್ಯ , ಮನಸ್ಸನ್ನು ಸ್ವಚ್ಛವಾಗಿಟ್ಟರೆ ಅಲ್ಲಿ ಸ್ವಾಮಿ ಇರಲು ಯೋಗ್ಯ. ಹೇಗೆ ಮನೆಗೆ ಸಾಮಾನ್ಯವಾಗಿ ದೊಡ್ಡವರೇ ಬಂದರೂ ಮನೆ ಸ್ವಚ್ಛವಾಗಿ ಅಂದವಾಗಿ ಅಲಂಕರಿಸುವವೋ ಹಾಗೆ ಸ್ವಾಮಿ ಹದಿನಾಲ್ಕು ಲೋಕದೊಡೆಯ ನಮ್ಮ ಮನ ಮಂದಿರದಲ್ಲಿ ನಿಲ್ಲಬೇಕೆಂದರೆ, ಕಾಮ ಕ್ರೋಧಾಧಿ ೬ವೈರಿಗಳೆಂಬ ಕೊಳೆಹೋಗಬೇಕು. ಈ ದೇಹವೆಂಬ ಮನೆಯನ್ನು ದ್ವಾದಶನಾಮ ಮುದ್ರೆಗಳೆಂಬ ರಂಗವಲ್ಲಿಯಿಂದ ಅಲಂಕರಿಸುತ್ತಿರಬೇಕು. ಮಂತ್ರ ಸ್ತೋತ್ರಗಳಿಂದ ಭಕ್ತಿಯಿಂದ ಸ್ವಾಗತ ಮಾಡುತ್ತಾ ಅವನ ಮನರಂಜನಕ್ಕಾಗಿ ಭಕ್ತಿಗೀತೆಗಳನ್ನೂ ತಾಲ ತಂಬೂರಿಗಳನ್ನು ಬಾರಿಸುತ್ತಾ ನರ್ತನ ಸೇವೆಯನ್ನು ಮಾಡಿದ, ಮಹಾತ್ಮರಾದ ನಮ್ಮ ಹರಿದಾಸರ ಪೀಳಿಗೆಗಳಿಗೆ ಸದಾ ವಂದಿಸುತ್ತಾ ಅವರ ಪದ ಸುಳ್ಳಾದಿಗಳನ್ನು ಜ್ಞಾನಿಗಳಲ್ಲಿ ವಿನಯದಿಂದ ತಿಳಿಯದಿದ್ದನ್ನು ಕೇಳುತ್ತಾ ತಿಳಿದುಕೊಳ್ಳಬೇಕು. ಪುರಂದರೋಪನಿಷತ್ ಅಂತಾ ಶ್ರೀ ವ್ಯಾಸರಾಜರೇ ಹೇಳಿದ್ದಾರೆ.ವೇದ ಉಪನಿಷತ್ದ್ದೆಲ್ಲ ಸಾರ, ದಾಸರ ಪದಗಳಲ್ಲಿದೆ ಅಂತಾ ಹೇಳಿದ್ದಾರೆ. ಅದರೆ ಎಷ್ಟೇ ಓದಿದರೂ ಕೇಳಿದರೂ ಪ್ರಯತ್ನ ಮಾಡಿದರೂ ಕೃತಿಯೊಳಗೆ ಬರುವುದೇ ಅಸಾಧ್ಯ. ಹೀಗಾಗಿ ಆತ್ಮೋದ್ಧಾರ ಹೇಗೆ ಆದೀತು? ಆಂತಾ ನಿರಾಶವೇ ಆಗುವುದು ಸಹಜ
ತ್ರಿವಿಧ ಗುಣಗಳು
ಸ್ವಾಭಾವಿಕವಾಗಿ ಮೂರು ಗುಣ ಮಿಶ್ರಣದಿಂದಲೇ ಸ್ವಾಮಿ ಸೃಷ್ಟಿ ಮಾಡಿದ್ದರಿಂದ ಹೀಗಾಗುವುದು. ಅವನು ಹಾಕಿದ ಮಾಯೆಯಿಂದ ಪ್ರಪಂಚದಲ್ಲಿ ವ್ಯಾಮೋಹ, ದೇವರಲ್ಲಿ ಧರ್ಮದಲ್ಲಿ ಬೇಸರ; ಎಂಥೆಂಥವರಿಗೂ ಒಮ್ಮೊಮ್ಮೆ ಕೈತಪ್ಪೆ ಪಾಪ ಕಾರ್ಯವೂ ಘಟಿಸುವವು. ಯಾಕೆಂದರೆ ಮೂರು ಗುಣ ಮಿಶ್ರವಿರುವುದರಿಂದ 3 ಗುಣಗಳೂ ತಿರುಗುತ್ತಿದ್ದು ತಮೋಗುಣ ಮೇಲೆ ಬಂದಾಗ್ಗೆ ಪಾಪ, ರಜೋಗುಣ ಮೇಲೆ ಬಂದಾಗ್ಗೆ ಐಷಾರಾಮ ಹರಟೆ ತಿನ್ನುಣ್ಣುವ ಸೌಕರ್ಯ ಇಂಥವು ನಡೆಯುತ್ತಿವೆ. ಸತ್ವಗುಣ ಮೇಲೆ ಬಂದಾಗ್ಗೆ ಸತ್ಕಾರ್ಯಗಳು, ದೇವ ಬ್ರಾಹ್ಮಣರ ಪೂಜಾ, ಕಥಾ ಶ್ರವಣ, ಗುರು ಹಿರಿಯರ ಸೇವೆ ಇಂಥವು ಆಗುವವು. ಸತ್ವ ಹೆಚ್ಚು ರಜ, ತಮ ಕಡಿಮೆ ಇದ್ದವರು ಸಾತ್ಮಿಕ ಜೀವಿಗಳು, ರಜ ಹೆಚ್ಚು ಸತ್ವ ತಮ, ಕಡಿಮೆ ಇದ್ದವರು ರಾಜಸರು ತಮೊಗಣ ಹೆಚ್ಚು ಸತ್ವರಜ ಕಡಿಮೆ ಇದ್ದವರು ತಾಮಸರ (ದೈತ್ಯರು) ಸತ್ವ ಹೆಚ್ಚಿಗಿದ್ದವರು ದೇವತೆಗಳು. 3 ಗುಣ ತಿರುಗುತ್ತಿರಲು ಸತ್ವ ಹೆಚ್ಚಿನ ಸಾತ್ವಿಕರಿಗೆ ಸತ್ವಗುಣ ಮೇಲೆ ಬಂದು ಬಹಳ ವೇಳೆ ಇರುವುದರಿಂದಲೇ ಪುಣ್ಯ ಕಾರ್ಯ ಶಾಂತತೆ, ಜ್ಞಾನ, ಭಕ್ತಿ, ವೈರಾಗ್ಯಾದಿಗಳಗೆ ಸ್ಥಾನ ಬಹಳ ವೇಳೆ ಇದ್ದು ಸ್ವಲ್ಪ ವೇಳೆ ಇರುವಾಗ್ಗೆ ಆಲಸ್ಯ ನಿದ್ರೆ ಕೋಪ ಬರುವ ಸಂಭವವಿದೆ. ಆಗ್ಗೆ ಕ್ವಚಿತ್ (ಪಾಪ ಸಂಭವಿಸುವುದು) ಕೂಡಾ ಪ್ರಾರಬ್ಧವಶಾತ್ ಪಾಪ ಕಾರ್ಯ ಆಗಬಹುದು. ಆದರೆ ಕೂಡಲೇ ತಮ ಕೆಳಗೆ ಹೋಗಿ ಸತ್ವ ಮೇಲೆ ಬರುವುದು. ಆದರಿಂದ ಪಶ್ವಾತ್ತಾಪದಿಂದ ಸ್ವಾಮಿಗೆ ತಪ್ಪು ಮಾಡಿದ್ದು ಒಪ್ಪಿಕೊಂಡು ಪ್ರಾರ್ಥಿಸುವರು ಆಗೆ “ ಆ ಪಾಪ ತೂಲರಾಶಿಯೊಳನೆಲ ಪೊಕ್ಕಂತೆ)” ಅಖಂಡ ಅಂಥವರ ಬಾಯಲ್ಲಿ ನಾಮಸ್ಮರಣೆಯೇ ಇರುವುದರಿಂದ ಆ ಹರಿ ನಾಮವೆಂಬ ಕಿಡಿ ಅರಳಿಯ ರಾಶಿಯನ್ನು ಸುಡುವಂತೆ ಪಾಪರಾಶಿ ಸುಟ್ಟು ಹೋಗಿ ಪವಿತ್ರರಾಗುವರು. ಕಾರಣ ನಮ್ಮಂಥಹ ಯಃಕಶ್ಚಿತರು ಅಂಥಾ ಭಗವದ್ಭಕ್ತರ ತಪ್ಪುಗಳನ್ನು ಎಣಿಸುತ್ತಾ ‘ಅಂಥವರೇ ಮಾಡಿದ್ದಾರೆ ನಮಗ್ಯಾಕೆ ನಿರ್ಭಂಧ’ ಅಂತಾ ನಿಂದಾ ಮಾಡಿದರೆ ಸೋತ್ತುಮ ದ್ರೋಹದಂಥಾ ಪಾಪ ಘಟಿಸಿ ಯಾವುದರಿಂದೂ ಹೋಗದು. ಅಂಥವರ ವಿಷಯದಲ್ಲಿ ಬಹಳ ಹುಷಾರಾಗಿರಬೇಕು. ಸ್ವಲ್ಪ ನಿಂದೆಯ ಪ್ರಭಾವದಿಂದಲೇ ಶ್ರೀ ಜಗ್ನಾಥದಾಸರು ಎಷ್ಟು ಸಂಕಟಕ್ಕೊಳಗಾಗಿದ್ದರು ಎಂಬುದು ಗೊತ್ತಿದ್ದದ್ದೇ ಇದೆ. ಈ ಮಹನೀಯರೇ ಹರಿಕಥಾಮೃತಸಾರ ರಚಿಸದ್ದಲ್ಲದೇ, ಅನೇಕ ಪದ ಪದ್ಯಗಳನ್ನು ರಚಿಸಿ ಸಜ್ಜನರಿಗೆಲ್ಲ ಸನ್ಮಾರ್ಗ ತೋರಿಸಿದ್ದಾರೆ.
ಜೀವ ಕರ್ತವ್ಯ
ಪಾಪ ಪುಣ್ಯ ನಾನೇ ಮಾಡಿದ್ದೇನೆ ಅನ್ನುವವ ಅಧಮ, ಪಾಪ ನಾನು ಮಾಡಿದ್ದೇನೆ ಪಾಪ ನಾನು ಮಾಡಿದ್ದೇನೆ
ಪುಣ್ಯ ಸ್ವಾಮಿ ಮಾಡಿಸಿದ್ದಾನೆ ಅನ್ನುವನು ಮಧ್ಯಮ, ಎರಡನ್ನೂ ಸ್ವಾಮಿಯೇ ಮಾಡಿಸಿದ್ದಾನೆ. ಅವರ ಹೊರತು ಎವೆ ಇಕ್ಕುವ, ಶ್ವಾಸ ಬಿಡುವ ಶಕ್ತಿ ರಮಾ ಬ್ರಹ್ಮಾದಿಗಳಂಥವರಿಗೇ ಇಲ್ಲವೆಂದ ಮೇಲೆ, ನೊರಜಿಗಿಂತ ಕಡೆ ಆದ ಆಜ್ಞಾನಿ ಜೀವರಿಗೆ ‘ ನಾನು ಮಾಡಿದ್ದೇನೆ’ ಅನ್ನುವದೆಲ್ಲಿ ಬಂತು? ಎಂಬ ತಿಳುವಳಿಕೆಯುಳ್ಳ ಜ್ಞಾನಿಯೇ ನರೋತ್ತಮನು. ಕಾರಣಸರ್ವರಿಗೂ ಬಿಂಬನನಾದ ಪರಮಾತ್ಮನಿಂದೇ ಕಾರ್ಯವೆಂಬುದನ್ನು ಪದೇ ಪದೇ ಮನಸ್ಸಿನಲ್ಲ ಬರುವಂತೆ ಅಭ್ಯಾಸವಾಗಬೇಕು. ಅಂದರೆ ಮನಸ್ಸು ಶಾಂತವಾಗಿ ಪ್ರಸನ್ನವಾಗಿ ದೇವರಲ್ಲಿ ಭಕ್ತಿ ಬೆಳೆಯುವುದು. ಅಹಂ, ಮಮ ಕಡಿಮೆ ಆಗುವುದು. ಇಂಥದ್ದೆಲ್ಲ ಸಾಧಿಸಬೇಕಾದರೆ ಸಾಧು ಸಂಗವೇ ಮುಖ್ಯ “ಸಂಗದಿಂದ ಲಿಂಗದೇಹ ಭಂಗವಾಗಲೀ ಸಾಧು ಸಂಗವಾಗಲೀ,” ಅಂತಾ ಹೇಳಿದ್ದಾರೆ. ಸದಾ ಭಗವದ್ಬಕ್ತ ಸಾಧು ಜನರ ಸಹವಾಸದಿಂದಲೇ ಮೊದಲ ಮೆಟ್ಟಿಲ ಸಿಗುವುದು. ಶ್ರವಣ ಭಕ್ತಿಯೇ 9 ವಿಧ ಭಕ್ತಿಯಲ್ಲಿ ಮೊದಲನೇದ್ದು. ಇದು ಇಂಥವರಲ್ಲಿ ಸದಾ ನಡೆದಿರುವುದು. ಅಂಥವರ ಜೊತೆಗೇ ಇದ್ದು ಅವರ ಸೇವಾ ಶುಶ್ರೂಷೆ ಮಾಡುತ್ತಿದ್ದು ಅವರ ನಡೆ ನುಡಿಗಳ ಕಡೆಗೆಯೇ ಲಕ್ಷವಿಟ್ಟು ಅದರಂತೆ ಆಚರಿಸಲು ಪ್ರಯತ್ನ ಮಾಡುತ್ತಾ ನಮ್ಮ ಆಚರಣೆಯನ್ನೂ ದಿನೇ ದಿನೇ ತಿದ್ದಿಕೊಳ್ಳಲು ಸುಸಂಧಿ ಒದಗಿ ನಮ್ಮ ಉದ್ದಾರದ ಕಡೆಗೇ ನಮ್ಮ ಮನಸ್ಸು ಹಾತೊರಿಯುವುದು.
ಮನಸ್ಸು
ಮನಸ್ಸಿನ ಸ್ವಭಾವ ನೀರಿನಂತೆ . ಆದು ನಡುವೆ ಇದ್ದು ಸ್ವಾಮಿ ಎತ್ತರದ ಮೇಲಿದ್ದಾನೆ. ಮನಸ್ಸಿಗೆ ಬೇಕಾದದ್ದು ವಿಷಯ. ಅದು ಕೆಳಗೆ ಇರುತ್ತದೆ. ವಿಷಯ ಅಂದರೆ ತಿನ್ನುಣ್ಣುವುದು. ಚಂದ ವಸ್ತುವನ್ನು ನೋಡುವುದು, ಉಡುಗೆ ತೊಡಿಗೆ ಹೆಂಡರು ಮಕ್ಕಳ, ಎಲ್ಲರಿಗೂ ಐಷಾರಾಮ ಬಯಸುವುದು. ಮನಸ್ಸು ಮೇಲೆ ಒಯ್ಯಬೇಕಾದರೆ ಕೇವಲ ನಾವೇ ಪ್ರಯತ್ನ ಮಾಡಲು ಸಾಧ್ಯವಾಗದು. ತಜ್ಞರಾದ ಇಂಜಿನೀಯರ ಕಡೆಗೆ ಹೋಗಿ ಅವರ ಸಹಾಯದಿಂದಲೇ ಒಡ್ಡು ಕಟ್ಟಬೇಕು. ಅದು ವೈರಾಗ್ಯದ ಒಡ್ಡು (ಡ್ಯಾಮ) ಚಾಣಾಕ್ಷ ಇಂಜಿನೀಯರಿಂದ ಶಿಕ್ಷಣ ಪಡೆದರೆ ಒಡ್ಡು ಗಟ್ಟಿಯಾಗುವುದು. ಅವರು ಹೇಳಿದ್ದರಲ್ಲಿ ಚಾಚೂ ತಪ್ಪದೇ ಅದರಂತೆ ಮಾಡಬೇಕು. ಸ್ವಲ್ಪ ಅಲಗರ್ಜಿ ಅದರೆ ಒಡ್ಡು ಒಡೆದು ಮತ್ತೆ ವಿಷಯವೆಂಬ ತಗ್ಗಿಗೇ ನೀರು ಹೋಗಿ ವ್ಯರ್ಥವಾಗುವದು ಅದಕ್ಕೆ ಜ್ಞಾನಿಗಳಾದ ಭಗವದ್ಬಕ್ತರೆಂಬ ಇಂಜಿನೀಯರ ಸೇವೆ ಮಾಡಿ ಅವರ ಪ್ರಸನ್ನತೆ ಪಡೆದು ಅವರ ಆಶಿರ್ವಾದ ಸಿಗಬೇಕು. ಅದೇ ಹಣ ಬೇಡದ ಡಿಗ್ರಿ. ಅವರ ಅನುಗ್ರವಾದರೇನೇ ಡ್ಯಾಂ ಕಟ್ಟಲು ಬರುವುದು. ನಂತರ ಭಕ್ತಿ ಎಂಬ ಕಾಲುವೆ ತೋಡಿ ನೀರು ಮೇಲೆ ಏರಲು ಮಂತ್ರ ಸ್ತೋತ್ರ ಸದಾ ನಾಮಸ್ಮರಣವೆಂಬ ಯಂತ್ರ ಸಹಾಯದಿಂದ ಮನಸ್ಸನ್ನು ಮೇಲೆ ಒಯ್ಯಲು ಅನುಕೂಲವಾಗಿ ಶ್ರೀ ಪರಮಾತ್ಮನ ಸಮೀಪಕ್ಕೆ ಎಳೆದು ಸ್ಮರಿಸಿ ಧ್ಯಾನಿಸಿದಾಗ ಮನಸ್ಸಿಗೆ ರೂಪ ಕಂಡಂತಾಗಿ ಮನಸ್ಸು ಒಂದೇ ಕಡೆಗೆ ಅವನ ಪಾದದಲೇ ನಿಲ್ಲಸಲು ಬರುವುದು. ಈ ಮಾತನ್ನು ಅನುಭವಿಗಳಾದ ಭಕ್ತೋತ್ತಮರು ಸಾರಿ ಸಾರಿ ಹೇಳುತ್ತಾರೆ. ತಮ್ಮ ಆತ್ಮೋದ್ದಾರಕ್ಕಾಗಿ ತಾವೇ ಪ್ರಯತ್ನ ಮಾಡಬೇಕು.
ಸಜ್ಜನರ ಸಂಗ
ಇದಕ್ಕೆಲ್ಲ ಲೌಕಿಕದಲ್ಲಿದ್ದಂತೆಯೇ ತರಬೇತಿ ಪಡೆಯಬೇಕು ಒಂದೆರಡು ದಿನ ದೊಡ್ಡವರ ಹತ್ತಿರ ಹೋಗಿ ಯಾವಾಗಾದರೊಮ್ಮೆ ಪುರಾಣ ಪ್ರವಚನ ಕೇಳಿದರೆ, ಮಕ್ಕಳು ಶಾಲೆ ತಪ್ಪಿಸುತ್ತಿದ್ದು, ಪಾಸ್ ಆಗುವೆನೆಂದಂತೆ ಅದಕ್ಕೇ ಅವರ ಸಹವಾಸಕ್ಕೆ ಹೆಚ್ಚು ಮಹತ್ವ. ಕೆಟ್ಟ ಜನರಿಂದ ದೂರವಿರಲೇಬೇಕು. ಇದು ಮಖ್ಯವೇ. ಯಾಕೆಂದರೆ ಅವರ ಸಹವಾಸದಿಂದ ಆ ಗುಣಗಳು ನಮ್ಮಲ್ಲಿ ಬಹು ಬೇಗನೇ ಅಂಟಿಕೊಳ್ಳುವವು. ಅವು ಸಂಸರ್ಗಿಕ ರೋಗವಿದ್ದಂತೆ. ತೀವ್ರವೇ ಪ್ರವೇಶಿಸಿ ನಮ್ಮ ಮನಸ್ಸಿನಲ್ಲಿ ಬೇರೂರುವವು. ಅದು ತಪ್ಪದೆರೆ ನಮ್ಮ ಮನಸ್ಸೆಂಬ ಕುದುರೆಯ ಲಗಾಮು ಹರಿದಂತಾಗಿ ಅದು ಬೇಕಾದ ಕಡೆ ಓಡಿ ಓಡಿ ನಮ್ಮನ್ನು ಅಂಧ ಕೂಪದಲ್ಲೇ ಬೀಳಿಸುವುದು. ನಾವು ಅಂಥವರ ಸಮೀಪವಿದ್ದರೂ ಅವರ ಸಂಪರ್ಕ ಬರದಂತೆ ಎಚ್ಚರದಿಂದಿದ್ದರಾಯಿತು. ಅಂದರೆ ತಿಪ್ಪೆಯ ಸಮೀಪದಲ್ಲಿ ಇದ್ದವರಿಗೆ ಬೇಡವಾಗಿದ್ದರೂ ವಾಸನೆ ಬರುವಂತೆ ಸಂಪರ್ಕ ಬಿಟ್ಟರೂ ಅದು ಬಂದು ಬಂದು ಕೆಲವೇ ದಿವಸಗಳಲ್ಲಿ ಅದೇ ಕೆಟ್ಟ ವಾಸನೇ ರೂಢಿ ಆಗಿಬಿಡುವಂತೆ ಅದೇನು ಮಹತ್ವವೆನಿಸುವುದೇ ಇಲ್ಲ. ಅದೇ ಸಜ್ಜನ ಸಹವಾಸದಲ್ಲಿದ್ದರೆ ಹೂವಿನ ತೋಟದ ಸಮೀಪ ಕುಳಿತರೆ ಎಷ್ಟು ಆನಂದ! ಬೇಡವೆಂದರೂ ಅಲ್ಲಿ ಕೆಟ್ಟ ವಾಸನೆ, ಇಲ್ಲಿ ಸುವಾಸನೆ !
ಸಾತ್ವಿಕರ ಸ್ವರೂಪ
ಹಾಗಾದರೆ ಅಂಥಾ ಮಹಾನುಭಾವರನ್ನು ಗುರುತಿಸುವುದು ಹೇಗೆ? (ಕೆಲವರು ಈ ಕಲಿ ಕಾಲದಲ್ಲಿ ಢೊಂಗಿ ಸಾಧು ವೇಷದವರೂ ಅಲ್ಲಲ್ಲಿ ಕಾಣುವರು) ಅಂದರೆ ಅಂಥವರ ಲಕ್ಷಣಗಳನ್ನು ಅವರ ಆಚರಣೆಯನ್ನು ನಡೆ ನುಡಿಗಳನ್ನೂ ನೋಡಿ ನೋಡಿ ತಾನಾಗಿಯೇ ನಂಬಿಗೆ ಹುಟ್ಟಿ ಅವರಿಗೆ ತಲೆ ಬಾಗಿಸಲು ಮನಸ್ಸು ಮುಂದಾಗುತ್ತಿದೆ. ಅವರು ಹೇಗಿರುವರೆಂಬುವುದನ್ನು ಅವರ ಇರುವಿಕೆಯೇ ಹೇಳುತ್ತದೆ. ಭಾಗವತ ಧರ್ಮಾವಲಂಬಿಗಳೇ ಭಗವದ್ ಭಕ್ತರು ಅಂಥವರ ಲಕ್ಷಣಗಣಗಳನ್ನು ದಾಸರಾಯರೇ ಹೇಳಿದ್ದಾರೆ. “ ರಂಗಾ ನಿನ್ನ ಕೊಂಡಾಡುವೆ ಮಂಗಳಾತ್ಮರ ಸಂಗಸುಖವಿತ್ತು ಕಾಯೋ ಕರುಣಾಸಾಗರ” ಅಂತಾ . ಅವರು ಮೂಕರಂತೆ ಇರುವರು. ಅಂದರೆ ಲೌಕಿಕ ಮಾತು ಹರಟೆ ಇವುಗಳಲ್ಲಿ ಅವಶ್ಯವಿದ್ದಷ್ಟು ಮಾತನಾಡುವರು. ಅದರಲ್ಲಿ ಅತೀ ಜಿಪೂಣರು. ಹಣ ಹೇಗೆ ಖರ್ಚು ಮಾಡುವರೋ ಹಾಗೇ ಮಾತನಾಡುವರು. ಅದರಂತೆ ಲೌಕಿಕದ ಮಾತಿಗೆ ಕಿವುಡ ಅದೇ ಪರಮಾತ್ಮನ ವಿಷಯಕ್ಕೆ ಕೇಳಿದರೆ ಬೇಕಾದಷ್ಟು ಮಾತಾಡುವರು. ಮತ್ತು ಆ ವಿಷಯವನ್ನು ಮನಸ್ಸು ಕೊಟ್ಟು ಶ್ರವಣ ಮಾಡುವರು. ನಿಂದಾ ಮಾಡಿದರೆ ನೊಂದುಕೊಳ್ಳರು ಮತ್ತು ಪ್ರತಿ ಮಾತನ್ನಾಡರು. ಸ್ತುತಿ ಮಾಡಿದರೆ ಪರಮಾತ್ಮನ ಸ್ತುತಿ ಮಾಡಿರಿ ಅಂತಾ ಉಪದೇಶ ಮಾಡುವರು. ಮಾನ ಅಪಮಾನ, ಜಯಾ ಅಪಜಯಾ ಲಾಭ ನಷ್ಟ ಸುಖ ದುಃಖ ಎಲ್ಲವೂ ಸಮನಾಗಿಯೇ ತಿಳಿಯುವವರು. 6 ವೈರಿಗಳಂತೂ ಭದ್ರವಾದ ಇಂಥವರ ಸದ್ಗುಣಗಳ ಕೋಟೆ ಗೋಡೆಯೊಳಗೆ ಪ್ರವೇಶ ಮಾಡಲು ಸಾದ್ಯವೇ ಇಲ್ಲ.
ಈ ಕ್ಷಣಗಳು 1 ದಾರೇಷುಣ (ಪತ್ನಿ) ಪುತ್ರೇಷುಣ 3. ವಿತ್ತೇಷುಣ (ಹಣ) ಹಾಗೂ 4.ಲೋಕೇಷು ಅಂದರೆ ಲೋಕದಲ್ಲಿ ನಾನೇ ದೊಡ್ಡವ ನನ್ನ ಸಮಾನರ್ಯಾರು. ಅಂತಾ ಈ ಕ್ಷಣಗಳಂತೂ ಇವರ ಸನಿಹ ಹಾಯುವುದಿಲ್ಲ. ಜಡಭರತನ ಚರಿತ್ರ ಸಾಮಾನ್ಯರಿಗೂ ಕೇಳಿ ಗೊತ್ತಿರಲು ಸಾಕು. “ಬೂದಿ ಮುಚ್ಚಿದ ಕೆಂಡದಂತಿಪ್ಪರೊ ಈ ಧರೆಯ ಮೇಲೆ ಭಗವದ್ ಭಕ್ತ ಜನರೂ” ಅಂತಾನೂ ಹೇಳಿದ್ದಾರೆ. ಅವರೂ ಪ್ರಪಂಚ ಮಾಡುವರು. ಆದರೆ ಅತೀ ವ್ಯಾಪ ಹಚ್ಚಿಕೊಂಡು ಅಜ್ಞರಂತೆ ಒದ್ದಾಡುವುದಿಲ್ಲ. ನಿಷಿದ್ಧವಲ್ಲದ ಆಹಾರ ಸ್ವಾಮಿಗೆ ಸಮರ್ಪಸಿ ಸೇವಿಸುವರು. ಅದನ್ನು ವೈಶ್ವಾನರ ಯಜ್ಞ ಅಂತಾ ಮಾಡುವರು, ಇದರಂತೇ ಪ್ರತಿಯೊಂದು ಕಾರ್ಯವನ್ನು ಭಾ.ಮು. ಸ್ವಾಮಿ ಪ್ರೇರಣೆ ಅವರ ಪ್ರೀತ್ಯರ್ಥ ಅಂತಾನೇ ಮಾಡುವರು. ಕ್ಷಣ ಕ್ಷಣದ ಕೆಲಸವೆಲ್ಲ ಮುಂಜಾನಿಂದ ಸಂಜೆಯವರೆಗೆ ಸಂಜೆಯಿಂದ ಮುಂಜಾನೆವರೆಗೆ ಮಾಡಿದ್ದೆಲ್ಲ, ಮಾಡುವದೆಲ್ಲ ಯಜ್ಞವೆಂಬ ಅನುಸಂಧಾನವೇ ಅವರದು. ಅಂಥವರಿಗೇ ಮಾತ್ರ ಹಿಂದೇ ಹೇಳಿದಂತೆ ಪಾಪ ಪುಣ್ಯಗಳನ್ನು ಅರ್ಪಿಸುವ ಅಧಿಕಾರ.
ಮೋಕ್ಷಕ್ಕೆ ದಾರಿ.
ಸಾಮಾನ್ಯರೂ ಪಾಪ ಮಾಡಿದ್ದಕ್ಕೆ ಪಶ್ವಾತ್ತಾಪ ಪಟ್ಟು ’ತಪ್ಪಾಗಿದೆ ಸ್ವಾಮಿ’ ಅಂತಾ ಅವನ ನಾಮಸ್ಮರಣೆ ಮಾಡುವವರಿಗೆ ಕ್ಷಮಿಸುವನು. ಜೀವರೊಳಗೆ ತತ್ವಾಭಿಮಾನದೇವತೆಗಳಿದ್ದಂತೆ ತತ್ವಾಭಿಮಾನಿ ದೈತ್ಯರೂ ಇದ್ದು ಪಾಪ ಕಾರ್ಯಕ್ಕೆ ಪ್ರೇರೇಪಿಸಿ, ಮಾಡಿಸುವರು. ದೇವತೆಗಳು ಪುಣ್ಯ ಕಾರ್ಯಕ್ಕೆ ಪ್ರೇರೇಪಿಸಿ ಪಾಪ ದೈತ್ಯರಿಗೆ, ಪುಣ್ಯ ದೇವತೆಗಳಿಗೆ ಭಾಗ ಮಾಡಿ ಕೊಟ್ಟು ಜೀವಿಗಳು ಅಲ್ಪಶಕ್ತಿಯವರು ಎಂದು ಅಲ್ಪಭಾಗ ಪುಣ್ಯ ಪಾಪಗಳನ್ನು ಕೊಟ್ಟು ಬಹುಭಾಗ ಪ್ರೇರಕರಿಗೆ ಕೊಡುವನು. ಅಷ್ಟು ಕೂಡಾ ಭೋಗಿಸುವುದು. ಸಾಧ್ಯವಾಗದೆಂದು ಅನೇಕ ಜನ್ಮಕೊಟ್ಟು ಭೋಗಿಸಲು ಹಚ್ಚುವನು. ಅದು ಸ್ಟಾಕ್ ಮುಗಿಯುವುದರೊಳಗೇ ಮತ್ತೆ ಮತ್ತೆ ಕರ್ಮಗಳು, ಪಾಪ ಪುಣ್ಯ ಮಾಡುವುದು ನಡೆದೇ ಇದ್ದುದರಿಂದ ಆ ಪರಮಾತ್ಮಗೇ ಶರಣು ಹೋಗಬೇಕು. ಜನನ ಮರಣದ ಶಿಕ್ಷಾ ಕೊಟ್ಟು ಜೇಲಿನಲ್ಲಿ ಬಂಧಿಸಿದವನೇ ಬಿಡುಗಡೆಗೆ ಆಜ್ಞೆ ಮಾಡಿ ಬಿಡಿಸಬೇಕು. ಆದೊರೆಯ ಆಜ್ಞೆ ಆಗಬೇಕಾದರೆ ಮೊದಲು ಕಾವಲಗಾರರಿಗೆ ನಾವು ಒಳ್ಳೆ ನಡತೆಯಿಂದ ಇದ್ದು ಖಾತ್ರಿ ಆದಕೂಡಲೇ, ಅವರು ತಮ್ಮ ಮೇಲಾಧಿಕಾರಿಗಳಿಗೆ ’ಇವನಿಗೆ ಬಿಡುಗಡೆ ಮಾಡಿಸಿರಿ’ ಯೋಗ್ಯವಾಗಿದ್ದಾನೆ ಅಂತಾ ವಿನಂತಿ ಮಾಡಿಕೊಂಡ ಮೇಲೆ ಅವರಿಗೂ ಕರುಣೆ ಬಂದು ಆ ದೊರೆಗೆ ಹೇಳಿ ಬಂಧನದಿಂದ ಮೋಚನ ಮಾಡಿಸುತ್ತಾರೆ. ಕೆಳಗಿನವರೇ ಶ್ರೀ ಗುರುಗಳು. ಅವರ ಕರುಣೆ ಅದರೆ ಮೇಲಿನ ಮೂಲ ಗುರು ವಾಯುದೇವರು ಒಲಿಯುವರು. ಅವರು ಒಲಿದರೆ ಹರಿ ಎಂಬ ದೊರೆ ತೀವ್ರ ಮೋಚನೆ ಮಾಡುವನು. ಕಾರಣ ನಮಗೆ ಭವವೆಂಬುವ ಜೇಲವಾಸ ತಪ್ಪಬೇಕಾದರೆ ಶ್ರೀ ಮಂತ್ರಾಲಯ ಪ್ರಭುಗಳಂಥ ಗುರುಗಳ ಪಾದಕ್ಕೆ ಶರಣು ಹೋಗಬೇಕು. ಅಂಥವರ ವಕೀಲಿಯಿಂದ ನಮ್ಮ ಮಧ್ವಗುರುಗಳ ಮತದ ಜ್ಞಾನವಾಗಿ, ಒಳ್ಳೇ ಭಕ್ತಿ ವೈರಾಗ್ಯ ಅವರ ಕರುಣೆಯಿಂದ ಕ್ರಮೇಣ ಬಂದು ನಮ್ಮ ಅಂತಃಕರಣ ಶುದ್ದವಾದ ಮೇಲೆ ಗುರುಗಳೇ.”ಸ್ವಾಮಿ ಈ ಜೀವನಿಗೆ ಮೋಚನ ಮಾಡು ಇವನು ಯೋಗ್ಯನಾಗಿದ್ದಾನೆ” ಅಂತಾ ಪ್ರಾರ್ಥನೆ ಮಾಡಿದ ಕೂಡಲೇ ಬಿಡುಗಡೆ ಆಗುವುದು. ಇದೆಲ್ಲ ಆಗಬೇಕಾದರೆ ನಾವು ಪ್ರತ್ಯಕ್ಷ ಕಾಣುವ ಉಪದೇಶ ಮಾಡುವಂಥ ಗುರುಗಳನ್ನು ಹೇಗೆ ಹುಡುಕುವುದು? ಅಂತಾ ವಿಚಾರಿಸಿದರೆ ಅಲ್ಲಲ್ಲಿ ಭರತ ಖಂಡದಲ್ಲಿ ಹಿಂದೆ ತಿಳಿಸಿದ ಲಕ್ಷಣಗಳುಳ್ಳ ಮಹಾನುಭಾವರು ಇದ್ದೇ ಇರುವರು.
ಜೀವ ಮತ್ತು ಈಶ
ಜೀವ ಈಶ ಎಂದೆಂದಿಗೂ ಒಂದೇ ಕಡೆಗೆ ಇದ್ದು ಅವರಿಗೆ ಆಗಲುವಿಕೆ ಇಲ್ಲ ಅಂತಾ ಶೃತಿ ಸಾರುತ್ತಿದ್ದೆ, ಅಂತಾ ಜ್ಞಾನಿಗಳು ಹೇಳುತ್ತಾರೆ. ಎರಡು ಬಂಗಾರದ ಪಕ್ಷಿಗಳು ಒಂದೇ ಗಿಡದಲ್ಲಿ ಒಂದೇ ಸ್ಥಳದಲ್ಲಿ ಕುಳಿತು ಒಂದು ಹಣ್ಣು ತಿನ್ನುತ್ತಿದ್ದರೂ, ಸೊರಗಿದೆ ಇನ್ನೊಂದು, ತಿನ್ನುವುದೇ ಇಲ್ಲ ಆದರೂ ಬಲಿಷ್ಟವಾಗಿದೆ ಅಂತಾ ದಾಸರು ಪದ ಮಾಡಿದ್ದಾರೆ. ಆದರೆ ಕಾಣುವುದಿಲ್ಲವಲ್ಲ? ಅಂದರೆ ಸ್ವಾಮಿ ಎರಡು ಪರದೇ ನಡುವೆ ಹಾಕಿದ್ದಾನೆ. ಅವೇ ಜೀವಾಚ್ಛಾದಿಕಾ ಅಂತಾ. ಜೀವ ತಾನ್ಯಾರು? ಅಂತಾ ಕಾಣದಂತೆ. ಇನ್ನೊಂದು ಪರಮಾಚ್ಛಾಧಿಕಾ ಅಂತಾ. ದೇವರು ಯಾರು ? ಎಲ್ಲಿದ್ದಾನೆ? ತಿಳಿಯದಂತೆ. ಮಾಯಾ ದೇವಿಯೇ ಆ ಎರಡು ಪರದೆಗಳನ್ನು ಹರಿ ಆಜ್ಞೆಯಿಂದ ಹಾಕಿದ್ದಾಳೆ. ಅದು ಮೂರು ಪ್ರಕಾರದಿದ್ದು ಸಾತ್ವಿಕ ಜೀವರಿಗೆ ಕಾಜಿನ ಕಪಾಟಿನಲ್ಲಿ ಕಾಣುವಂತೆ, ರಾಜಸರಿಗೆ ನಾಟಕದ ಪರದೆಯಂತೆ, ತಾಮಸರಿಗೆ ಗಚ್ಚಿನ ಕಾಂಕ್ರೀಟ್ ಗೊಡೆಯಂತೆ ಹಾಕಿದ್ದಾಳೆ. ಜೀವ ಪರಮಾತ್ಮರ ಮಧ್ಯ ಮಾಯಾ ಪರದೇ ಇರುವುದರಿಂದ , ಕಾಂಕ್ರೀಟ್ ಗೋಡೆ ಇದ್ದ ತಾಮಸರು “ಎಲ್ಲಿ? ನಿಮ್ಮ ದೇವರು ನೀವೆಲ್ಲ ಹೇಳುವುದು ಸುಳ್ಳು ನಾವೇ ದೇವರು’ ಅನ್ನುವರು ರಾಜಸರು ಪರದೇದ ಆಚೆಗೆ ಸ್ಪಷ್ಟ ಕಾಣಿಸದಿದ್ದರೂ ಮಸಕಾಗಿ ಒಳಗಿರುವುದು. ತಿಳಿಯುವುದರಿಂದ ’ಏನೋ ಅದೆ ಸಾತ್ವಿಕರು ಹೇಳುತ್ತಿದ್ದಂತೆ ದೇವರು ಇದ್ದಾನೆ ಅದರೆ ಖಾತ್ರೀ ಇಲ್ಲ. ಸಾತ್ವಿಕರು ಮಾತ್ರ (ಅಪರೋಕ್ಷಿಳಾಗಿ) ಪ್ರತ್ಯಕ್ಷ ಗಾಜಿನ ಕಪಾಟಿನಲ್ಲಿಯ ಸರಾಪ ಅಂಗಡಿಯ ಆಭರಣ ಕಂಡಂತೆ, ಸ್ವಾಮಿಯನ್ನು ನೋಡುವ ಆನಂದದಲ್ಲಿ ಸಂಸಾರದಲ್ಲಿ ವ್ಯಾಪ ಕಡಿಮೆ ಆಗಿ ಸ್ವಾಮಿಯ ಪ್ರತ್ಯಕ್ಷ ದರ್ಶನಕ್ಕಾಗಿ ಒಳ್ಳೆ ಸಾಧನಮಾಡುವುದೊಂದೇ ಅವರಿಗೆ ವ್ಯಾಪ,ಸಂಸಾರದಲ್ಲಿದ್ದರೂ ಹಿಂದೆ ಹೇಳಿದಂತೆ ಎಲ್ಲರೂ ಅವನ ಪರಿವಾರ, ಇವರ ಪೋಷಣೆಯೂ ಅವನ ಸೇವೆ ಅವನ ಪೂಜೆ ಎಂದೇ ತಿಳಿದು ದ್ವಂದ್ವಗಳನ್ನು ಸಮವೆಂದೇ ತಿಳಿಯುವರು. ಅಂಥವರಿಗೆ ಸ್ವಾಮಿಯ ಸೇವೆ ಗ್ರಂಥಾದಿಗಳ ಅಧ್ಯಯನ ಪ್ರವಚನ ಪುರಾಣಾದಿಗಳಲ್ಲಿ ಒಳ್ಳೆ ಜಾಗ್ರತೆ. (ಹಗಲು)ಪ್ರಾಪಂಚಿಕ ವಿಷಯದಲ್ಲಿ ರಾತ್ರಿ, ಉಳಿದವರಿಗೆ ಪ್ರಪಂಚದಲ್ಲಿ ಜಾಗ್ರತೆ, ದೇವರ ವಿಷಯಗಳಲ್ಲಿ ರಾತ್ರಿ, ಇದ್ದಂತೆ. ರಾತ್ರಿ ಇದು ಆಜ್ಞಾನದ ಮೂಲ, ಹಗಲು ಇದು ಜ್ಞಾನಕ್ಕೆ ಹೋಲಿಸಿದ್ದಾರೆ. ರಾತ್ರಿ ನಿಶಾಚರರ (ದೈತ್ಯ) ಸಂಚಾರ ಬಗ್ಗೆ ಅವರ ವ್ಯಾಪಾರ ಬೆಳಿಗ್ಗೆ ೪ ಘಂಟೆಗೆ ಬ್ರಹ್ಮ ಮೂಹೂರ್ತ ಅನ್ನುವರು, ಆಗ ದೇವತೆಗಳ ಸಂಚಾರ. ಆ ವೇಳೆಯಲ್ಲಿ ಮಲಗದೇ ಎದ್ದು ನಿತ್ಯ ಕರ್ಮ ಮಾಡಿ ಜಪ ತಪ ಪೂಜಾದಿಗಳನ್ನು ಮಾಡುತ್ತಾ ಧ್ಯಾನ ಮಾಡಿ ಮಾಡಿ ಪರಮಾತ್ಮನ ಅನುಗ್ರಹ ಸಂಪಾದಿಸುವರು.
ತ್ರಿವಿಧ ಕರ್ಮ
ತ್ರಿವಿಧರೂ ಯಜ್ಞ ಯಾಗಾದಿಗಳಲ್ಲಿ ನಿತ್ಯಕರ್ಮಗಳಲ್ಲಿ ನಿರುತರಾಗಿರುತ್ತಾರೆ. ಆದರೆ ಸಾತ್ವಿಕರು ಯಾವುದೇ ಕರ್ಮವನ್ನೂ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಷ್ಞು ಪ್ರೇರಣಾಯಾ ವಿಷ್ಣು ಪ್ರೀತ್ಯರ್ಥಂ ಎಂದು ಸಂಕಲ್ಪ ಮಾಡಿ ಕೊನೆಗೆ ಶ್ರೀ ಭಾರತೀರಮಣ ಮುಖ್ಯ ಪ್ರಾಣಾಂರ್ತಗತ ಶ್ರೀ ಕೃಷ್ಣಾರ್ಪಣ ಅಂತಾ ಅವನ ಪ್ರೀತಿಗಾಗಿ ಮಾಡಿ ಅವನಿಗೆ ಅರ್ಪಣ ಮಾಡುತ್ತಾರೆ. ಅವರಿಗೆ ಯಾವುದೂ ಕಾಮನಾ ಇಲ್ಲ, ನಿಷ್ಕಾಮ ಕರ್ಮವೇ ಅವರ ಧ್ಯೇಯ. ರಾಜಸರು ಸಕಾಮಕರ್ಮ, ನಮಗೆ ಒಳ್ಳೇದಾಗಲೀ, ಶ್ರೀಮಂತಿಕ ಬರಲಿ, ಪ್ರಮೋಶನ್ ಆಗಲಿ , ಪಾಸಾಗಲಿ, ಮಕ್ಕಳಾಗಲೀ, ಅಂತಾ ಅವರ ಬೇಡಿಕೆಗಳಿಗೆ ಕೊನೆಯೇ ಇಲ್ಲ. ಪ್ರಲ್ಹಾದ್ ರಾಜರಿಗೆ ಶ್ರೀ ನರಸಿಂಹ ಸ್ವಾಮಿ ವರವಕೊಡಲು ಸ್ವಾಮೀ ನನ್ನ ಸಂಬಂಧವನ್ನು ಇಲ್ಲಿಗೆ ಮುಗಿಸಿಬಿಡುವಿಯೋ? ನಾನು ನಿನ್ನನ್ನು ಭಜಿಸಿದೆ. ನೀನು ವರ ಕೊಟ್ಟೆ, ಹೀಗಾದರೆ ವ್ಯಾಪಾರಸ್ಥನಂತೇ ನನ್ನೊಂದಿಗೆ ವ್ಯವಹರಿಸಿದರೆ ನಾನು ಭಕ್ತನಲ್ಲ. ಗಿರಾಕಿ ಅಂದಂತಾಯಿತು. ನನಗೆ ಸರ್ವಥಾ ಏನೂ ಬೇಡಾ ಕೊಡುವಂತಿದ್ದರೆ ಸದಾ ನಿಮ್ಮಲ್ಲಿ ಭಕ್ತಿಕೊಟ್ಟು ನಿನ್ನ ಕೃಪಾ ಇರಲಿ ಅಂದರಂತೆ. ಇದೇ ನಿಷ್ಕಾಮ ಭಕ್ತಿ ಯಾವ ಉದ್ದೇಶವಿಲ್ಲದೇ ಭಕ್ತಿ ಕರ್ಮ ಮಾಡುವುದೇ ಭಾಗವತ ಧರ್ಮ ಇನ್ನು ತಾಮಸರೂ ಯಜ್ಞೆ ತಪ್ಪಸ್ಸು ಮಾಡಿದ್ದೂ ಅದೆ. ಅವರ ಉದ್ದೇಶ ಅಥವಾ ಕಾಮನಾ ಎಂಥಾದ್ದು ? ನನಗೆ ಜಗತ್ತನ್ನೇ ಗೆಲ್ಲುವ ಶಕ್ತಿ ಬೇಕು, ನನ್ನ ಸಮಾನರಾರಿರದಂತೆ ನಾನೇ ಮೆರೆದಾಡಬೇಕು, ನನಗೆ ಮರಣ ಬರಬಾರದು ಅಂತಾ ಕೇಳಿದ ಅನೇಕ ದೈತ್ಯರ ಕಥೆಗಳಿವೆ. ಇದಕ್ಕಿಂತ ದೈತ್ಯರೊಳಗೇ ಮೊದಲ ನಂಬರದವ ಕಲಿಯೇ ದುರ್ಯೋಧನನು. ದುರ್ವಾಸರಿಗೇ ಸೇವೆ ಬಹುಪರಿ ಮಾಡಿದ್ದಕ್ಕೆ ಅವರು ಬೇಕಾದ ವರ ಬೇಡು ಅವನು ಅನ್ನಲು ಬೇಡಿದ್ದೇನು ? ಅದರ ಉದ್ದೇಶ ಎಂತಾದ್ದು ? ತನಗಾಗಿ ಏನೂ ಬೇಡದೇ ಪಾಂಡವರ ನಾಶಕ್ಕಾಗಿ, ಅವರಲ್ಲಿ ರಾತ್ರಿ ಶಿಷ್ಯರೊಂದಿಗೆ ಹೋಗಿ ಊಟ ಬೇಡಿರಿ. ಎಂದನು! ಊಟ ಕೊಡಲು ಆಗದು, ಆಗ್ಗೆ ಈ ಸಿಟ್ಟನ ಮುನಿ ಶಾಪ ಕೊಟ್ಟು ಭಸ್ಮ ಮಾಡುವರು ಎಂದು ಅವನ ಉದ್ದೇಶ. ಹೀಗೆ ತಾಮಸಿಗಳ ಮನೋವೃತ್ತಿ ಕಣ್ಣಿಗೆ ತ್ರಿವಿಧರೂ ಮಾಡುವ ಪುಣ್ಯ ಕಾರ್ಯ ಕಾಣಿಸಿದರೂ ಅವರವರ ಸ್ವಭಾವ ಭಾವನೆಯಂತೆ ಅವರ ಕಾಮನೆ. ಅದಕ್ಕಾಗಿ ಸದ್ಭಾವನೆಯಿಂದ ಮಾಡಿದ ಕರ್ಮ ಪೂಣ್ಯಪ್ರದವೇ. ಮಗಳನ್ನು ಲಗ್ನ ಮಾಡಿ ಕಳುಹಿಸುವಾಗ್ಗೆ ತಂದೆ ಅಲಿಂಗನ ಮಾಡುತ್ತಾನೆ ? ಆ ಭಾವನೆ ಹೇಗೆ ? ಅದನ್ನು ವ್ಯಭಿಚಾರದ ಆಲಿಂಗನಕ್ಕೆ ಹೋಲಿಸಬಹುದೆ ? ಅದು ಪುಣ್ಯ ಇದು ಮಹಾಪಾಪ.
ಹರಿದಾಸರ ಅನುಗ್ರಹ
ಈ ಭರತ ಖಂಡಕ್ಕೆ ನಾರದರೇ ಅಭಿಮಾನಿ. ಕಲಿಯುಗದ ಪ್ರಭಾವದಿಂದ ಸಜ್ಜನರೆಲ್ಲ ದುಷ್ಟರ ಸಮೂಹದಲ್ಲಿ ಒಳ್ಳೆ ಮಾರ್ಗ ಕಾಣದೇ ನಾನೇ ದೇವರೆಂಬ ದೈತ್ಯ ಬೋಧೆ ಸರಿಬೀಳದೆ ಕಗ್ಗತ್ತಲೆ ಕವಿದಂತಾಗಿ ಜ್ಞಾನ ಶೂನ್ಯರಾಗಿ ಪರಿತಪಿಸುವಂತಾಗಿದೆ ಎಂದು ಸ್ವಾಮಿಗೆ ಮೊರೆ ಇಟ್ಟರು. ನಾರದರೇ ನಿಜ ನಿಮ್ಮ ಮಾತು.ಕಲಿಯುಗದಲ್ಲಿ ನಿಜರೂಪದಿಂದ ಸಂಚರಿಸುವಂತಿಲ್ಲವೆಂದು ಚಿಂತಿಸಬೇಡಿರಿ. ನನ್ನ ಭಕ್ತರಾದ ನೀವೆಲ್ಲ ಜನ್ಮ ತೆಗೆದುಕೊಂಡು.ಪಾಮರರಿಗೆ ಉದ್ಧಾರ ಮಾರ್ಗ ತೋರಿಸಲು ಯಾವ ಅಭ್ಯಂತರವಿಲ್ಲ. ಈ ಯುಗದಲ್ಲಿ ಧ್ಯಾನ ಯಜ್ಞ, ತಪ ಎಲ್ಲ ಮಾಡಿದ ಫಲವೂ ನಾಮಸ್ಮರಣೆಯಿಂದಲೇ ಲಭಿಸುವುವು ಎಂದು ಆಜ್ಞೆ ಮಾಡಲು ನಾರದರೇ ಪುರಂದರದಾಸರಾಗಿ, ಪ್ರಲ್ಹಾದರೇ ಶ್ರೀವ್ಯಾಸರಾಯರಾಗಿ ಹಾಗೂ ಶ್ರೀ ರಾಘವೇಂದ್ರರಾಯರಾಗಿ, ಭಗುಋಷಿಗಳೇ ವಿಜಯರಾಯರಾಗಿ ಇನ್ನೂ ಇದರಂತೇ ಅನೇಕ ಭಗವದ್ಭಕ್ತರು ಅವತರಿಸಿ ತಮ್ಮ ಉಪದೇಶದಿಂದ ಜನರ ಮನಸ್ಸಿನ ಕಿಲುಬನ್ನು ಹೋಗಲಾಡಿಸಿ ಹರಿನಾಮ ಬೀಜ ಬಿತ್ತಿ ಭಾಗವತಧರ್ಮ ಸಾರಿ ಕಗ್ಗತ್ತಲೆಯಿಂದ ಎಷ್ಟೋ ಸುಜೀವಿಗಳನ್ನು ಬೆಳಕಿಗೆ ತಂದರು. ಮುಂದಿನ ಪೀಳಿಗೆಯ ನಮ್ಮಂಥ ಪಾಮರರ ಉದ್ಧಾರಕ್ಕಾಗಿ, ಮಕ್ಕಳಿಗೆ ಬುದ್ಧಿ ಹೇಳಿದಂತೆ ರಮಿಸಿ ಬೈದು ಅಂಜಿಕೆ ತೋರಿಸಿ ತಿದ್ದುವಂಥಾ ಉಪದೇಶಾಮೃತದ ಕ್ಷೀರ ಸಮುದ್ರವನ್ನು ಅನುಗ್ರಹಿಸಿದ್ದಾರೆ. ನಾವು ಆ ಕಡೆಗೆ ನೋಡದೇ ಮದಾಂಧರಾದರೆ ನಮ್ಮ ಆತ್ಮ ಘಾತ ನಾವೇ ಮಾಡಿಕೊಂಡಂತೇ ಸರಿ. ದಾಸ ಸಾಹಿತ್ಯವೆಂದರೆ ವಜ್ರ ವೈಢೂರ್ಯಗಳ ಭಂಡಾರ. ಅದನ್ನು ನಮ್ಮ ಮುಂದಿಟ್ಟರೂ ಮರ್ಕಟದಂತಿದ್ದ ನಮ್ಮ ಮನಸ್ಸಿಗೆ ಅದು ಕಲ್ಲು ಕಠಿಣವೆಂದು ತ್ಯಜಿಸಿದರೆ, ಅವರೇನು ಮಾಡುವರು? ಮರುಗುವರಷ್ಟೇ ಕಾರಣ ನಾವು ನಮ್ಮ ಉದ್ಧಾರವಾಗಬೇಕೆಂದರೆ ಅವರು ಮಾಡಿದ ಉಪದೇಶದಂತೆ ನಡೆಯಬೇಕು. ಗುರುಭಕ್ತಿ ಹರಿಭಕ್ತಿ ಬೇರೂರಲು, ನಮ್ಮ ಹೃದಯದಲ್ಲಿ ಸ್ವಾಮಿ ವಾಸಿಸಲು ಮನಸ್ಸು ಮಾಡೇ ಮಾಡುವನು. ನಮ್ಮ ಮನದಲ್ಲಿ ಜ್ಞಾನವೆಂಬ ಬೆಳಕು ಬಂದರೆ ಸ್ವಾಮಿ ಬರುವನು ಅಂದರೆ ಕಾಣದಂತೆ ಇದ್ದವನು ನಮಗೆ ದರ್ಶನ ಕೊಡುವನು.
ಗುರುಗಳ ಅನುಗ್ರಹ
ಗಾಡಾಂಧಕಾರದ ಅಜ್ಞಾನದ ಕತ್ತಲಲ್ಲಿ, ಮಧ್ವಗುರುಗಳಿಂದ ಪಡೆದ ಜ್ಞಾನ ಜ್ಯೋತಿ ಇದ್ದವರ ಮನೆಗೆ ಹೋಗಿ ನಮಗೆ ಸ್ವಲ್ಪವಾದರೂ ಬೆಳಕು ಕಾಣಲು ಒಂದು ಚಿಕ್ಕ ಪ್ರಣತಿಯಾದರೂ ಕೊಡಿರಿ ಅಂತಾ ದೈನ್ಯದಿಂದ ಬೇಡಿಕೊಳ್ಳುತ್ತಾ, ಅವರ ಮನವೊಲಿಸಿ ನಿತ್ಯ ಅವರಲ್ಲಿ ಏನಾದರೂ ಸೇವೆ ಮಾಡುತ್ತಾ, ಅವರು ಹೇಳಿದಂತೆ ಕೇಳುತ್ತಾ ಇರಲು ಅವರು ಅನುಗ್ರಹ ಕೃಪೆ ಕೊಟ್ಟೇ ಕೊಡುವರು. ಆ ಪ್ರಣತಿಯ ದೀಪದ ಪ್ರಕಾಶದಲ್ಲಿ ನಮ್ಮ ಮನವೆಂಬ ಮನೆಯಲ್ಲಿ ಆರು ವೈರಿಗಳು ಮಸಕಾಗಿಯಾದರೂ ಕಾಣಿಸುವರು. ಅಂದರೆ ನಮ್ಮಲ್ಲಿದ್ದ ದುರ್ಗುಣಗಳು ಸ್ವಲ್ಪ ಸ್ವಲ್ಪ ಕಾಣಿಸಿ ಅವುಗಳನ್ನು ಆ ಜ್ಞಾನ ದೀಪ ಕೊಟ್ಟ ಗುರುಗಳ ಉಪದೇಶ ಅನುಗ್ರಹದಿಂದ ಒಂದೊಂದನ್ನೇ ಹೊರಗೆ ಹಾಕಲು ಪ್ರಯತ್ನ ಮಾಡುತ್ತಿರಲು, ಗುರುಗಳು ಇನ್ನಷ್ಟು ಬೆಳಕಾಗಲು ಆ ವೈರಿಗಳನ್ನು ಓಡಿಸಲು ಅನುಕೂಲ ಮಾಡಿ ಲಾಯಿಟ್ ಪ್ರಕಾಶವನ್ನೇ ಕೊಡುವರು. ಆಮೇಲೆ ಆ ಜ್ಞಾನದ ಬೆಳಕಿಗೆ ವೈರಿಗಳು ಒಬ್ಬೊಬ್ಬರಂತೆ ಓಡಿಹೋಗುವರು. ಆಗ್ಗೆ ನಮ್ಮ ಮನ ಸ್ವಚ್ಛವೂ ಪ್ರಕಾಶವುಳ್ಳದ್ದೂ ಆಗಿ ನಿರಂತರವಾಗಿ ದರ್ಶನಕೊಡುವನು. ಅಂಥವರಿಗೇ ಅಪರೋಕ್ಷ ಜ್ಞಾನವಾಗುವುದು.
ಉಪಾಸನೆಗೆ ಅನುಶಾಸನ
ಇದೆಲ್ಲ ಆಗಬೇಕಾದರೆ ಗುರುಗಳು ಹೇಳಿದಂತೆ ದಾನ ಧರ್ಮ ದೇವಪೂಜಾ ವಗೈರೆ ಕಾಲಕ್ಕೆ (ವೇಳೆಗೆ) ಸರಿಯಾಗಿ ಮಾಡಬೇಕು ಅಂತಾ ನಿಯಮ. ನಮಗೆ ಸವಡಾದಾಗ ಮಾಡುವೆವು ಅದರಲ್ಲಿ ಅಲ್ಲ ಕಾಲನಾಮಕಪರಮಾತ್ಮನ ಸೇವೆ ಅಂತಾ ಮಾಡಿದರೇನೇ ಯೋಗ್ಯ. ಹೇಗೆಂದರೆ ಕಾಳು ಬಿತ್ತಲು ನಿಯಮ ಹೊಲಹರಿಗಿ ಒಂದೆರಡು ಮಳೆಯಾದ ನಂತರ ಬಿತ್ತಿದರೆ ಬೆಳೆ ಬರುವುದು. ಅದು ಬಿಟ್ಟು ತಮ್ಮ ಅನುಕೂಲ ನೋಡಿ ಬೇಕಾದಾಗ ಬಿತ್ತಿದರೆ ಹೇಗೆ ವ್ಯರ್ಥವೋ ಹಾಗೆ ಸರಿ. ಅದರಂತೆ ಅನೇಕ ನಿಯಮ ಅವೆ. ದೇವರ ಅನುಗ್ರಹ ಸಂಪಾದಿಸುವ ಇಚ್ಛೆ ಉಳ್ಳವರಿಗೆ ಗುರುಗಳಿಂದ ಎಲ್ಲ ನಿಯಮವನ್ನೂ ತಿಳಿದು ನಡೆದರೆ ತೀವ್ರ ಉದ್ಧಾರ ಆಗುವುದು. ಇನ್ನೂ ಸತ್ಪಾತ್ರರಲ್ಲಿಯೇ ದಾನ ಮಾಡಬೇಕೆಂದು ಹೇಳಿರುವರು. ಯಾರಾದರೇನು ? ನಮಗೆ ಬೇಕಾದವರಿಗೆ ದಾನ ಮಾಡಿದರಾಯಿತು. ಅಂದರೆ ದುರ್ಗುಣ ದುರರಾಚಾರ ಇದ್ದವರು ನಮಗೆ ಬೇಕಾದವರೆಂದು ದಾನ ಮಾಡಿದರೆ ತಾಮ್ರ ಪಾತ್ರೆಯಲ್ಲಿ ಪಾನಕ ಮಾಡಿಟ್ಟು ಕುಡಿದಂತೆ ಸರಿ. ಆ ದಾನಕ್ಕೆ ಪುಣ್ಯದ ಬದಲು ಪಾಪವೇ ಬರುವುದು. ಅದೇ ಪಾನಕ ಮಾಡಿ ಬೇಳ್ಳಿ ಅಥವಾ ಕಲಪರಟಿಯಂಥಾದರಲ್ಲಿಟ್ಟು ಕುಡಿದರೆ ಅಮೃತದಂತೆ ಆಗಿ ಆನಂದವಾಗುವಂತೆ ಪುಣ್ಯ ಬರುವುದು ಸತ್ಪಾತ್ರದಾನದೀಂದ.
ದಾನ ಮಾಡುವುದೇ ಬೇಡ ಅಂತಾ ಹಾಗೇ ಹಣ ಕೂಡಿ ಇಡೋಣವೆಂದರೆ ಅದು ನೀರಿದ್ದಂತೆ. ಅದನ್ನಿಟ್ಟ ಪಾತ್ರೆಗೆ ಮೂರು ತೂತುಗಳೇ ಇರುವುವು. ದಾನ ಭೋಗ ನಾಶ ಅಂತಾ. ಸುಜೀವಿಗಳ ಹಣ ದಾನಧರ್ಮ ಪರೋಪಕಾರ ದೇವ ಬ್ರಾಹ್ಮಣರ ಪೂಜಾ ಇಂಥದರ ಸಲುವಾಗಿ ಸೋರುವುದು. ರಾಜಸರದು ಹಣ ಭೋಗದಿಂದ, ತಾಮಸರದು ಹಣ ದುಶ್ಚಟ ಲೆತ್ತ, ಜೂಜು ಶೆರೆ ಶಿಂದಿ ಇಸ್ವೇಟ್ ವಗೈರೆಯಿಂದಾ ನಾಶವಾಗುವುದು. ಇನ್ನು ಸರ್ವ ಜೀವರು ದಾನ ಪಾತ್ರರು ಅಂತಾನೂ ಹೇಳಿದ್ದಾರೆ. ಅದು ಅನ್ನದಾನಕ್ಕಷ್ಟೇ; ಉಳಿದ ಬಡವರಿಗೆ ಉಪಕಾರಾರ್ಥ ಏನಾದರೂ ಕೊಡಬಹುದು.
ಮಾನವಜನ್ಮ ದೊಡ್ಡದು
ಮನುಷ್ಯ ಜನ್ಮ ದುರ್ಲಭ, ಅದರಲ್ಲಿಯೂ ಬ್ರಾಹ್ಮಣನಾಗಿ ಜನಿಸುವುದು, ಅದಕ್ಕೂ ದುರ್ಲಭ ಅದರಲ್ಲಿಯೂ ವೈಷ್ಣವ ಜನ್ಮ ಪರಮ ದುರ್ಲಭವು, ಎಂಬತ್ನಾಲ್ಕು. ಲಕ್ಷ ಯೋನಿಯಲ್ಲಿ ಜನಿಸಿ ಜನಿಸಿ ಪೂಣ್ಯ ವಿಶೇಷದಿಂದ ಸ್ವಾಮಿ ಒಂದು ಚಾನ್ಸ್ ಕೊಟ್ಟು ನೋಡುವನಂತೆ. ಅಂದರೆ ಒಂದು ದೊಡ್ಡ ರೌಂಡವಾಗಿ ಕೋಟೆ ಗೋಡೆ ಇದ್ದು ಅದರಲ್ಲಿ ಒಂದೇ ಬಾಗಿಲು ಪಾರಾಗಲು ಬಿಟ್ಟಿದ್ದು ಒಳಗೆ ಜೀವನನ್ನು ಬಿಟ್ಟದ್ದಾನೆ. ಅವಗೆ ಕಣ್ಣಿಲ್ಲ ಅಂದರೆ ಜ್ಞಾನ ದೃಷ್ಟಿಹೀನ. ಅವನು ಗೋಡೆಗೆ ಕೈ ಸವರುತ್ತಾ ನಡೆದು ನಡೆದು ಹೋಗುತ್ತಿರಲು, ಹೆಜ್ಜೆ ಮಾತ್ರ ಹಾಗೇ ನಡೆದೇ ಇರುತ್ತಿದ್ದು ಅಂದರೆ ಒಂದೊಂದು ಹೆಜ್ಜೆಗೆ ಒಂದೊಂದು ಜನುಮದಂತೆ ನಡೆದು ನಡೆದು ಬಾಗಿಲ ಬಂದಾಗ್ಗೆ. ಏನು ಕಾರಣದಿಂದಲೋ ಕೈಬಿಟ್ಟು ಹೆಜ್ಜೆ ಸಾಗಿದೆ. ಬಾಗಿಲು ದಾಟಿದ ಅಂದರೆ ನರಜನ್ಮ ಅದರಲ್ಲೂ ವೈಷ್ಣವ ಜನ್ಮ ಒಮ್ಮೆ ಚಾನ್ಸ ಬಂದಾಗ್ಗೆ (ಬಾಗಿಲ) ಪಾರಾಗುವದಾಗಲಿಲ್ಲ. ಆ ವೇಳೆಗೆ ಕೈ ತೆಗೆದ ಅಂದರೆ ವಿಷಯ ಸುಖಕ್ಕಾಗಿ ಮೈಮರೆತ. ಕಾರಣ ಮತ್ತೆ ಅಷ್ಟು ರೌಂಡ್ ಸುತ್ತುವುದೇ ಆಯಿತು.
ಕಾರಣ ಮನುಷ್ಯನಾಗಿ ಮಾಧ್ವನಾಗಿ ಪಾರಾಗಲು ಸಾಧಿಸದಿದ್ದರೆ ಮತ್ತೆ ಪುನಃ ಅನೇಕ ಜನುಮ ಪಡೆದು ಅನುಭವಿಸಬೇಕಾಗುವುದು. ಅದಕ್ಕಾಗಿ ಭಗವದಭಕ್ತರ ಸಹವಾಸದಲ್ಲೇ ಪ್ರಯತ್ನ ಪೂರ್ವಕ ಇದ್ದು ಸಾಧನ ಮಾಡಿಕೊಂಡವರೇ ಧನ್ಯರು. ನಮ್ಮೊಳಗಿನ ದೈತ್ಯರ ಹಾವಳಿ ತಪ್ಪಿಸಿ ನಮಗೆ ಭವರೋಗ ನಿವಾರಣೆಗಾಗಿ ನವವಿಧ ಭಕ್ತಿ ಎಂಬ ಮಾತ್ರೆ ಕೊಟ್ಟು ನಮ್ಮನ್ನು ಮುಕ್ತ ಮಾಡುವರು. ಸ್ಕೂಲಿನಲ್ಲಿ ಇತಿಹಾಸ ಹೇಳಿದಂತೆ ನಿತ್ಯ ಪುರಾಣ ಪ್ರವಚನಗಳನ್ನು ಹೇಳಿ ನಮ್ಮ ಮನಸ್ಸಿನ ಕೊಳೆ ಹೋಗಿಸಿ ಜ್ಞಾನದ ಗಿಡ ನಡೆಸುವರು.
ಅನಂದತೀರ್ಥರ ಮಹಿಮೆ
ಆ ಗಿಡ ಎಲ್ಲಿಂದ ತಂದದ್ದೆಂದರೆ ನಮ್ಮ ಸ್ವಾಮಿಯ ಪೂರ್ಣ ಅನುಗ್ರಹ ಪಾತ್ರರೂ, ಪುತ್ರರೂ ಮುಖ್ಯಮಂತ್ರಿಯೂ ಆದ ಶ್ರೀ ವಾಯುದೇವರಿಂದ. ಅವರು ತಮ್ಮ ತಂದೆಯಿಂದ (ಪರಮಾತ್ಮನಿಂದ) ಪಡೆದದ್ದು. ಅವರ ಮೂರನೇ ಅವತಾರರಾದ ಶ್ರೀ ಆನಂದತೀರ್ಥರು ಅವರ ಪರಂಪರದಿಂದ ಬಂದ ಗುರು ಶಿಷ್ಯ ಪ್ರಶಿಷ್ಯ ಇದರಂತೇ ಇಲ್ಲಿಯವರೆಗೂ ಇನ್ನೂ ಮುಂದೆಯೂ ಅವರ ಪೀಳಿಗೆ ನಡೆದೇ ಬರುವಂತೆ ಶ್ರೀಹರಿ ಅನುಗ್ರಹ ಪಡೆದಿದ್ದ ಗುರುಗಳವರು. ಅಂಥವರ ದರ್ಶನ ಅಪೇಕ್ಷ ಎಲ್ಲ ಸುಜೀವರಿಗೂ ಸಿಗುವುದು ಸಾಧ್ಯವಿಲ್ಲ, ನಮ್ಮ ಉದ್ಧಾರ ಹೇಗೆ ಎಂದು ಚಿಂತಿಸಬೇಡಿರಿ. ಸಂಸಾರ ಸಮುದ್ರ ದಾಟಲು ಒಂದು ಉಪಾಯವೆಂದು ನಮ್ಮ ಶ್ರೀ ಪೇಜಾವರ ಶ್ರೀಗಳವರು ಪ್ರವಚನದಲ್ಲಿ ಹೇಳಿದ್ದಾರೆ. ಒಮ್ಮೆ ಒಂದು ಪ್ರವಾಹ ದಾಟಿ ಬೇರೆ ದಂಡೆಗೆ ಹೋಗುವುದಕ್ಕೆ ಶ್ರೀ ಮಧ್ವಗುರುಗಳು ಶಿಷ್ಯ ಸಮೇತ ಹೊರಟಾಗ್ಗೆಮ್ಲೇಂಛ ರಾಜನು ನಾವಿಕರಿಗೆ ಪ್ರತಿಬಂಧ ಮಾಡಿದನಂತೆ. ಆಗ ಗುರು ಮಧ್ವರು ತಾವು ಈಸು ಬಿದ್ದು ತಮ್ಮ ಕಾಲು ಒಬ್ಬ ಶಿಷ್ಯನಿಗೆ ಹಿಡಿದು ಧುಮುಕಲು ಹೇಳಿದರು. ಮತ್ತೆ ಆ ಶಿಷ್ಯನ ಕಾಲು ಮತ್ತೊಬ್ಬ ಶಿಷ್ಯ ಹೀಗೆ ಇದರಂತೇ ಮುಂದಿದ್ದವರ ಕಾಲು ಹಿಂದಿದ್ದವರು ಹಿಡಿಯುತ್ತಾ ಎಲ್ಲರೂ ನಿರಾಯಾಸವಾಗಿ, ಈಸು ಬಾರದಿದ್ದವರೂ ಕೂಡ ಸರಳವಾಗಿ ದಾಟಿದರಂತೆ. ಆ ಮೂಲ ಗುರುಗಳ ಆಜ್ಞೆಯಲ್ಲಿ ವಿಶ್ವಾಸವಿಟ್ಟು ಎಲ್ಲರೂ ಒಬ್ಬರ ಕಾಲು ಮತ್ತೊಬ್ಬರು ಹಿಡಿದು ದಾಟಿಸಿದ್ದು ಏನು ತಿಳಿಸಿತೆಂದರೆ? ಈ ಭವಸಮುದ್ರ ದಾಟಿಸಲು ಈಗ್ಯೂ ಮುಂದೂ ನಮ್ಮ ಗುರುಗಳ ಪೀಳಿಗೆಯವರ ಪಾದ ಭಕ್ತಿಯಿಂದ ಹಿಡಿದು ಭವದಾಟುವ ವ್ಯವಸ್ಥೆ ಗುರು ಮಧ್ವರು ಮಾಡಿಬಿಟ್ಟಿದ್ದಾರೆ. “ಪ್ರಥ್ವಿ ಮಂಡಲ ಮಧ್ಯಸ್ಥ ಗುರು ಮಧ್ಯಸ್ಥ ಪೂರ್ಣ ಭೋಧ ಮತಾನುಗಾಃ ವೈಷ್ಣವಾ ವಿಷ್ಣು ಹೃದಯಾ ತಾಂ ನಮಸ್ತೇ ಗುರುನ್ಮಮಃ” ಈಗ ಸರ್ವ ಮಾಧ್ವರೂ ಈ ಮಂತ್ರ ಪಠಿಸುವುದು ರೂಢಿ ಆಗಿದೆ.
ಜಪನಿಯೋಗ
ಭಗವದ್ಬಕ್ತರಿಗೆ ಯಾರು ಏನೇ ಮಾತಾಡಿ ಬೈದು ಮಾಡಿದರೂ ಸಂತೋಷದಿಂದಲೇ ಇರುವರು.ಅವರು ಎಲ್ಲ ಮಾತಾಡಿದ್ದೆಲ್ಲ ಪರಮಾತ್ಮನ ನಾಮಸ್ಮರಣೆ ಎಂದೇ ತಿಳಿಯವರು. ಹೇಗೆಂದರೆ ಐವತ್ತೊಂದು ಅಕ್ಷರಗಳಲ್ಲೇ ಎಲ್ಲ ಶಬ್ದಗಳೂ, ಆಯಾ ಅಕ್ಷರ ಜೋಡಿಸಿದರೆ ಒಂದೇ ಒಂದು ಶಬ್ದವಾಗುವುದು. ಪ್ರತಿಯೊಂದು ಅಕ್ಷರವೂ ಅವನ ಹೆಸರೇ ಅಂತಾ ತಿಳಿಯುವರು. ಅಂದರೆ “ಆ ಮೊದಲು ಕ್ಷ ಪರಿಯಂತಾ ಆ ಮಹಾ ವರ್ಣಗಳೆಲ್ಲ ಸ್ವಾಮಿಯಾದ ನಾರಾಯಣನ ನಾಮವೆಂದು ಅರಿತವರಿಗೆ ಆನಂದ ಆನಂದಾ ಮತ್ತೆ ಪರಮಾನಂದ “ ಅಂತಾ ಪದವಿದೆ, ನಿಂದಾ ಮಾಡಲೀ ಸುತ್ತಿ ಮಾಡಲಿ, ಬೈಯಲಿ ಹೊಗಳಲೀ ಎಲ್ಲವೂ ಈ ಐವತ್ತೊಂದು ಅಕ್ಷರದೊಳಗಿನವೇ ಪ್ರತಿಯೊಂದು ಅಕ್ಷರ ಅವನ ನಾಮವೇ ಎಂದು ಸಂತೋಷದಿಂದಿರುವುವರು. ಜಡಭರತನು ಇದೇ ಅನುಸಂಧಾನದವನು. ಎಲ್ಲವನ್ನೂ ತನ್ನ ದೇಹವನ್ನೂ ಪರಮಾತ್ಮಗೆ ಅರ್ಪಿಸಿದವನು. ಅವನ ಉಪದೇಶದಿಂದ ರಹೋಗಣನಿಗೆ ಜ್ಞಾನೋದಯವಾಯಿತಂತೆ. ಅಂಥವರಾದ ಜ್ಞಾನಿ ಭಕ್ತರ ಆಜ್ಞೆಯಂತೆ ಸ್ವಾಮಿಯಲ್ಲಿ ಪರಮಭಕ್ತಿ ನಂತರ ತಾರತಮ್ಯದಿಂದ ಲಕ್ಷ್ಮೀದೇವಿ ಬ್ರಹ್ಮ ವಾಯುಗಳಿಂದ ಹಿಡಿದು ಅವನ ಪರಿವಾರ ದೇವತೆಗಳಲ್ಲಿಯೂ ತಾರತಮ್ಯ ತಿಳಿದು ಕಡಿಮೇಯವರಕ್ಕಿಂತ ಹೆಚ್ಚಿನವರಲ್ಲಿ ಹೆಚ್ಚೆಚ್ಚು ಭಕ್ತಿ ಮಾಡುತ್ತಾ ಸದಾ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಹರಿಗರ್ಪಿಸಬೇಕು. “ಪ್ರಥಮೋ ಹನುಮನ್ನಾಮ ದ್ವಿತೀಯಾ ಭೀಮ ಯೇವಚ ಪೂರ್ಣಪ್ರಜ್ಞ ತ್ರತೀಯಸ್ತು ಭಗವತ್ಕಾರ್ಯ ಸಾಧಕಾಃ” ಅಂತಾ ಮೊದಲು ಅಂದು”
ಹರೇ ರಾಮ ಹರೇ ರಾಮ ರಾಮ ಹರೇ ಹರೇ:
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ:
ಅಂತಾ ಜಪಿಸಬೇಕೆಂದು ನಮ್ಮ ಗುರುಗಳಾದ ಆಚಾರ್ಯರ ಆಜ್ಞೆ, ೧೦೮ ಆದ ಕೂಡಲೇ ಮತ್ತೆ ಪ್ರಥಮೋ ಹನುಮನ್ನಾಮ ಅಂತಾ ಅಂದು ಮತ್ತೆ ಇದೇ ಜಪ ಲಕ್ಷ, ಕೋಟಿ ಮಾಡಿದರೂ ಸರಿ ಪುನಃ ಮಾಡಿದ್ದೆಲ್ಲ ಮೇಲೆ ತಿಳಿಸಿದಂತೆ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣ ಅಂತಾ ಅರ್ಪಿಸಬೇಕು. ಮಡಿ ಮೈಲಿಗಿ ಹೇಗೇ ಇರಲಿ ಈ ಜಪಕ್ಕೆ ಯಾವುದೂ ಆತಂಕವಿಲ್ಲ. ಮಕ್ಕಳಾಡಿಸುವಾಗಲೀ ಮಲಗುವಾಗ ಕುಳಿತಾಗ ಬೇಕಾದಾಗ ಮಾಡಬಹುದು. ಸ್ವಾಮಿಗೆ ನಮ್ಮನ್ನು ಸೃಷ್ಟಿ ಮಾಡಿ ನಮ್ಮ ನಮ್ಮ ಕರ್ಮ ಮಾಡಿಸಿ ನಮ್ಮ ಗತಿಗೆ ಕಳಿಸುವುದರಿಂದ ಏನಾದರೂ ಪ್ರಯೋಜನ ಇರಬಹುದೆ? ಅಂದರೆ ಏನೂ ಇಲ್ಲ. ಅನ್ನುತ್ತಾರೆ. ದಾಸರು ಉದಾಹರಣೆ ಕೊಟ್ಟು ಹೇಳಿದ್ದಾರೆ. ಏನೂ ಪ್ರಯೋಜನ ಇರದೇ ರಕ್ಷಣೆ ಸಹಾಯ ಮಾಡುವುದನ್ನು ನಮ್ಮ ದೇಹದಲ್ಲಿ ತೋರಿಸಿದ್ದಾನೆ. ಸ್ವಾಮಿ “ಕಣ್ಣಿಗೆವೆಯಿಂದದಲಿ ಕೈ ಮೈ ತಿಣ್ಣಿಗೊದಗುವ ತೆರದಿ ಪಲ್ಲುಗಳ ಪಣ್ಣು ಫಲಗಳನಗಿದು ಜಿವ್ಹೆಗೆ ರಸವನೀವಂತೆ ಪುಣ್ಯ ಫಲಗಳನೀವುದಕೆನುಡಿವೆಣ್ಣ ನಾಣ್ಮೂಂಡದೊಳು ಲಕ್ಷಣ ನುಣ್ಣನೊದಗುವ ಭಕ್ತರವಸರಮಕರಗಣ ಸಹಿತಾ.’ ಅಂತಾ ಹೇಳಿದ್ದಾರೆ. ಗಾಳಿಧೂಳು ಬರುವದೊಳಗೇ ಕಣ್ಣೊಳಗೆ ಹೋಗದಂತೆ ಎವೆ ಗಟ್ಟಿಯಾಗಿ ಮುಚ್ಚುತ್ತೆ ಎವೆಗೆ ಏನು ಪ್ರಯೋಜನವಿದೆ? ಕೈ ಮೈಗೆಲ್ಲಿಯಾದರೂ ತಿಂಡಿ ಬಿಟ್ಟರೆ ಆಗಿಂದಾಗೇ ತುರಸುವುದು, ಹಲ್ಲುಗಳು ಹಣ್ಣುಗಳನ್ನು ಕಬ್ಬು ಮೊದಲಾದದವುಗಳನ್ನು ಜಜ್ಜಿ ಜಜ್ಜಿ ನಾಲಿಗೆಗೆ ರಸವನ್ನು ಕೊಡುವಂತೆ ಸ್ವಾಮಿಯು ಸೃಷ್ಟಿಸಿದವುಗಳೇ ತಮಗೇನೂ ಪ್ರಯೋಜನವಿಲ್ಲದೇ ಸಹಾಯ ಮಾಡಿದ ಮೇಲೆ, ಆ ಶಕ್ತಿ ಕೊಟ್ಟ ಪರಮಾತ್ಮಗೇನೂ ಪ್ರಯೋಜನವಿಲ್ಲದೇ ಮಾಡುವನೆಂಬುದುಸಿದ್ದವು.
ಮಹಾನುಭಾವರ ಕ್ರಮ
ಆ ಪರಮಾತ್ಮನನ್ನು ನೋಡುವ ಬಗೆ ಹೇಗೆ ? ಅವನು ಕಾಣವುದೇ ಇಲ್ಲ ಎಷ್ಟೇ ಹಂಬಲಿಸಿದರೂ ಒಮ್ಮೆ ಕೂಡಾ ಕಾಣುವುದಿಲ್ಲ. ಅಂದರೆ ನಾವು ದೇವರ ಕಡೆಗೆ ಬೆನ್ನು ಮಾಡಿದ್ದೇವೆ, ಅಂತಾ ಅರ್ಥ, ನಮ್ಮ ಮುಖ ಪ್ರಪಂಚದ ಕಡೆಗೆ ಇದೆ. ನಮಗೆ ಈತರಹ ರೋಗವಿದೆ. ಹಿಂದೆ ತಿರುಗಲು ಇಲ್ಲ. ಇದನ್ನು ಪರೀಕ್ಷೆ ಮಾಡಲು ಸ್ವಾಮಿ ಧನ್ವಂತರಿಗೆ ಪ್ರಾರ್ಥಿಸುತ್ತಾ ಅನ್ಯರಾರಿಂದಲೂ ಈ ರೋಗ ತಿಳಿಯದು ಸ್ವಾಮಿ ಈ ರೋಗವ ಕಳೆದು ನಿರೋಗಿಯನ್ನು ಮಾಡೆಂದು ದಾಸರೇ ಪ್ರಾರ್ಥಿಸಿದ್ದಾರೆ. “ಯಾವ ರೋಗವೋ ಎನಗೆ ದೇವಧನ್ವಂತ್ರಿ : ಸಾವಧಾನದಿ ಎನ್ನಕರ ಪಿಡಿದು ನೋಡಯ್ಯಾ” ಅಂತಾ ತಾವು ಈ ರೋಗದಿಂದ ಮುಕ್ತರಾಗಿ ನಿರೋಗಿ ಆಗಿ ನಮ್ಮ ಪರವಾಗಿ ಹೇಳೀಕೊಂಡಿದ್ದಾರೆ. ಅವರು ಯಾವಾಗಲೋ ಪರಮಾತ್ಮನನ್ನು ಕಂಡವರು, ಅವನೊಂದಿಗೆ ಒಂಬತ್ತು ವಿಧ ಭಕ್ತಿಯಿಂದ ವಲಿಸಿಕೊಂಡು ಎಂಟನೇ ಸಖ್ಯ ಭಕ್ತಿಯಿಂದ ಸಲುಗೆಯಿಂದ ಒಮ್ಮೊಮ್ಮೆ “ನೀನ್ಯಾಕೋ ನಿನ್ನ ಹಂಗಾಕ್ಯೊ ಞಂತಾ ಹೇಳಿ “ನಮಗೆ ನಿನ್ನ ನಾಮದ ಬಲ ಒಂದಿದ್ದಮೇಲೆ ನೀನ್ಯಾಕೊ ಅಂದಾರೆ” ಇನ್ನೊಂದು ಕಡೆ “ಭಕುತ ಜನ ಮುಂದೆ ನೀನವರ ಹಿಂದೆ “ಅಂದಾರೆ. “ಹಿಂದೆ ತಿಳಿಸಿದಂತೆ ಅವರೆಲ್ಲ ಮೋಕ್ಷದ ತಿಕೀಟ (ಪಾಸ್ಪೋರ್ಟ್) ಸಿಕ್ಕವರು. ಬ್ರಹ್ಮದೇವರ (ಗುರುವಾದ) ಸಂಗಡಲೇ ಹೋಗುವ ನಿಯಮವಿದ್ದ ಕಾರಣ ವೇಟಿಂಗ ಹಾಲಿನಲ್ಲಿ ಕುಳಿತವರು. ಕೇವಲ ನಾವು ಉದ್ಧಾರವಾದರೆ ಹೇಗೆ ಉಳಿದ ಪಾಮರ ಸುಜೀವರು ಕಲಿ ಬಾಧೆಯಿಂದ ಮಂಕಾಗಿ ಸನ್ಮಾರ್ಗ ಕಾಣದೇ ಪರಿತಪಿಸುತ್ತಿದ್ದಾರೆ. ಇಲ್ಲಿ ನಾವು ಸುಖವಾಗಿದ್ದು ನಮ್ಮಷ್ಟಕ್ಕೆ ನಾವು ಕುಳಿತು ಆ ಜೀವರ ಭವಣೆ ನೋಡುವುದು ಯೋಗ್ಯವಲ್ಲ. ತಾಯಿ ತಾನೊಬ್ಬಳು ಉಂಡು ಮಕ್ಕಳ ಊಟ ಆಗದಿದ್ದರೆ ಹೇಗೆ ಕನಿಕರದಿಂದ ಗಡಬಡಿಸಿ ಅಡಿಗೆ ಮಾಡಿಟ್ಟು ಊಟ ಮಾಡಿರೋ ಅನ್ನುತ್ತಾ ಕೂಗುವಳೋ ಹಾಗೆ, ಸ್ವಾಮಿಯ ಆಜ್ಞೆ ಪಡೆದು ಜನ್ಮವೆತ್ತಿ ಸ್ವಚ್ಚೆಯಿಂದ ಬಂದು ನಮಗೆಲ್ಲ ಊಟ ಮಾಡಿರೋ ಅನ್ನುವಂತೆ ತಯಾರಿಸಿಟ್ಟಾಗ್ಗೆ ನಮಗೆ ಹಸಿವೆಯೇ ಇಲ್ಲ ಯಾಕೆ ? ಅಂದರೆ ವಿಷಯ ಭೋಗದ್ದೇ ದೊಡ್ಡ ಪಕ್ವಾನ್ನದಂತೆ ರುಚಿ ಹತ್ತಿ ತಾಯಿ ಬಂದು ಅಡಿಗೆ ಮಾಡುವದರೊಳಗೆ ಹೊಟ್ಟೆ ತುಂಬಿ ಅಜೀರ್ಣವಾಗುವಷ್ಟು ತಿಂದು ಇನ್ನೂ ಪ್ರಿಡ್ಜನಲ್ಲಿ ಸ್ಟಾಕ್ ಇಟ್ಟುಕೊಂಡಿದ್ದೇವೆ.ಅಂದ ಮೇಲೆ ಈ ಅಡಿಗೆ ಕಡೆಗೆ ನಾವು ನೋಡುವುದಿರಲಿ, ವಾಸನೆ ಕೂಡ ತೆಗೆದುಕೊಳ್ಳವ ಪರಿಸ್ಥಿತಿಯಲ್ಲಿರದಷ್ಟು ವಿಷದೂಟ ಉಂಡಿದ್ದರೆ ಅವರೇನು ಮಾಡಬೇಕು “ರಾಮನಾಮ ಪಾಯುಸಕ್ಕೆ ಕೃಷ್ಟನಾಮ ಸಕ್ಕರೆ. ವಿಠಲ ನಾಮ ತುಪ್ಪ ಕಲಿಸಿ ಬಾಯಿ ಚಪ್ಪರಿಸಿರೋ” ಅಂತಾ ಆ ತಾಯಿ ಸ್ಥಾನದಲ್ಲಿ ನಿಂತು ಹೇಳುತ್ತಿದ್ದಂತೆ ಪದ ಪದ್ಯಗಳನ್ನು (ಅಡಿಗೆ) ಮಾಡಿಟ್ಟಿದ್ದಾರೆ ಇನ್ನಾದರೂ ಹಸಿವೆಗೆ ಔಷಧ ಸೇವಿಸಿ ಈ ಅಡಿಗೆ ಊಟ ಮಾಡಿರಿ ಅಪಥ್ಯದ (ವಿಷಯ)ದ ಅಡಿಗೆ ಚಲ್ಲಿ ಬಿಡಿರಿ ಅಂತಾ ಉಪದೇಶಿಸುತ್ತಾರೆ.
ಭವರೋಗನಿವಾರಣೆಗೆ ದಾರಿ
ಮೇಲೆ ಹೇಳಿದ ಭವರೋಗದ ತಕರಾರನ್ನು ಹದಿನಾಲ್ಕು ಲೋಕಕ್ಕೆ ಪ್ರಸಿದ್ಧ ವೈದ್ಯನಾದ ಧನ್ವಂತರಿ ಮುಂದೆ ಹೇಳುವುದು. ’ಸ್ವಾಮಿ ಕಣ್ಣುಗಳಿಗೆ ನಿನ್ನ ಮೂರ್ತಿ ಕಾಣದು , ಕಿವಿಗಳು ನಿನ್ನ ಮಹಿಮೆ ಕೇಳವು, ನಾಲಿಗೆಗೆ ನಾಮಸ್ಮರಣೆ ಬಾರದು, ಪ್ರಸಾದ ರುಚಿಸದು, ಇದರಂತೇ ಐದು ಜ್ಞಾನೇಂದ್ರಿಯ ಐದು ಕರ್ಮೇಂದ್ರಿಯಗಳಿಂದ ನಿನ್ನ ಸಂಬಂಧಿಕವಾದ ಯಾವುದೂ ಮಾಡುವದಾಗದು ಹನ್ನೊಂದನೇ ಇಂದ್ರಿಯದ್ದಂತೂ ಸಹಿಸಲಾರದಷ್ಟು ವೇದನೆ ಆಗಿದೆ. (ಹನ್ನೊಂದನೇಯದ್ದೇ ಮನಸ್ಸು) ಎತ್ತ ಬೇಕಾದತ್ತ ಓಡುತ್ತಿದೆ. ನನ್ನನ್ನು ಉನ್ಮತ್ತರೋಗ (ಮನಸ್ಸು) ಎಲ್ಲಿ ಕೆಡಹುತ್ತದೋ ಏನೋ ಎಂದು ಭಯವಾಗುತ್ತಿದೆ. ಅನ್ಯ ಯಾವ ಪ್ರಸಿದ್ಧ ಡಾಕ್ಟರಿಗೂ ತಿಳಿಯದ ಈ ರೋಗ ನಿವಾರಣೆ ಮಾಡು ಸ್ವಾಮಿ, ನನ್ನನ್ನು ನಿನ್ನಲ್ಲಿಯೇ ಇಂಡೋರ ಪೇಶಂಟ್ ಮಾಡಿಕೊಂಡು ಆಡ್ಮಿಟ್ ಮಾಡಿಕೊಂಡು ನಿನ್ನ ಕೈಕೆಳಗಿನವರಿಂದ ಟ್ರೀಟ್ಮೆಂಟ್ ಕೊಡಿಸುತ್ತಾ ನನ್ನನ್ನು ಈ ರೋಗದಿಂದ ಪಾರು ಮಾಡು’ ಎಂದು ಅನನ್ಯ ಭಾವದಿಂದ ಅವನನ್ನೇ ಮೊರೆ ಹೋಗಬೇಕು.
ಅನನ್ಯಭಕ್ತಿ
ಅನನ್ಯ ಅಂದರೆ ಅವನ ಹೊರತು ಅನ್ಯರ್ಯಾರು ಮೋಕ್ಷ ಮೋಚನ ಮಾಡಲಾರರು. ಇನ್ನೂ ಅನ್ಯ ಚಿಂತೆ ತೊರೆದು ಪ್ರಾರ್ಥಿಸುವುದು, ನೀನ್ನೇ ಸ್ರಷ್ಠಿಆದಿ ಅಷ್ಟ ಕರ್ತತ್ವಕ್ಕೆ ಕಾರಣ. ಒಂದು ಕಡ್ಡಿಕೂಡ ಚಲಿಸಲಿಕ್ಕೆ ಅನ್ಯ ಯಾವ ದೇವತೆಗಳಿಗೆ ಸಾದ್ಯವಿಲ್ಲ.ಉಳಿದವರು ಏನೂ ಮಾಡರೆಂಬುದನ್ನು ದೃಢವಾಗಿ ನಂಬಿ ಅವನ ಮೇಲೇ ಭಾರ ಅಂತಾನೇ ಅನನ್ಯದ ಅರ್ಥ. ಸರ್ವತ್ರದಲ್ಲಿ ಸರ್ವ ಸ್ಥಾವರ ಜಂಗಮದಲ್ಲಿ ಮತ್ತು ಎಲ್ಲದರಲ್ಲಿಯೂ ಅಂದರೆ ಕನಕದಾಸರ ಬಾಳೇಹಣ್ಣಿನ ಸಂದರ್ಭದಲ್ಲಿ ಹೇಳಿಕೆಯಂತೆ ಅವನಿಲ್ಲದ ಅನ್ಯ ಸ್ಥಳ ನನಗೆ ಕಾಣಿಸಲೇ ಇಲ್ಲ, ಅಂದರಂತೆ ಹಾಗೆ ಅವನಿಲ್ಲದ ಸ್ಥಳವೇ ಇಲ್ಲ. ಇದೂ ಒಂದು ಅನನ್ಯ ಅರ್ಥ. ಈ ರೀತಿ ಅನನ್ಯಭಾವನೆ ಬಂದ ಮೇಲೆ, ಸ್ವಾಮಿ ಅನುಗ್ರಹವಾಗಿ ನಮಗೆ ಗುರುಗಳು ದೊರೆತು, ಅವರೂ ಅನುಗ್ರಹ ಮಾಡಿದಂತೆ ನಮ್ಮಜನ್ಮ ಮೃತ್ಯೊ ಭಯ (ಭವರೋಗ) ಪೂರ್ಣ ನಿವಾರಣ ಆಗುವುದು. ಇದೆಲ್ಲ ಭಾವನೆ ಜ್ಞಾನ ಬಂದು ಭಕ್ತಿ ವೈರಾಗ್ಯಗಳು ಧೃಡವಾಗುವಂತೆ ತರಬೇತಿ ಕೊಡುವರು. ಜ್ಞಾನ ಭಕ್ತಿ ವೈರಾಗ್ಯಾದಿಗಳಿಂದ ಸಂಪನ್ನರಾದ ಭಗವದ್ಭಕ್ತರು ಅಂಥವರು ಸಜ್ಜನರ ಉದ್ಧಾರಕ್ಕಾಗಿ ಸಂಚರಿಸುತ್ತಿರುವರು. ಪರೋಪಕಾರವೇ ಅವರ ದ್ಯೇಯ; ಜನರ ಉದ್ಧಾರವೇ ಅವರ ಬಯಕೆ; ಅಂಥಾ ಮಹಾಮಹಿಮರನ್ನು ಸೇವಿಸುತ್ತಾ ಅವರ ಪ್ರೀತಿ ಸಂಪಾದಿಸಲು, ಅವರು ಇವನು ನಮ್ಮವನೇ? ಅಂತಾ ಅವರು ಮೊದಮೊದಲು ಪರೀಕ್ಷೆ ಮಾಡಿ, ಇವನು ಹರಿಭಕ್ತನೆನ್ನಲು ಯೋಗ್ಯ ಅನಿಸಿದ ಮೇಲೆ ಹಿಂದೆ ಹೇಳಿದ ಜೇಲ ಮುಖ್ಯಸ್ಥಗೆ ಇವನನ್ನು ಬಿಡುಗಡೆ ಮಾಡಲು ಅರ್ಜಿಕೊಡುವರು. ದುರ್ಗುಣಗಳೆಲ್ಲ ಬಿಟ್ಟು ಸಜ್ಜನನಾಗಿ ಭಕ್ತರ ಗುಂಪಿಗೆ ಯೋಗ್ಯನಾಗಿದ್ದಾನೆ ದಯಮಾಡಿ ಮಹಾರಾಜನಿಂದ ಅಪ್ಪಣೆ ಪಡೆದು ಬಿಡುಗಡೆ ಮಾಡಬೇಕೆಂದು ಪ್ರಾರ್ಥಿಸುವರು. ಆಗ್ಗೆ ನಮ್ಮ ಮೂಲ ಗುರು ಮಾರುತೀ ಸ್ವಾಮಿಗೆ ಅರಿಕೆ ಮಾಡಿಕೊಂಡು ಮಾಯಾ ಮೋಹವೆಂಬ ಬಾಗಿಲ ತೆಗೆದು ಬಿಡುಗಡೆ ಮಾಡುವರು. ಕಾರಣ ಎಲ್ಲಕ್ಕೂ ಮೊದಲು ಯಾರು ಸದುಪದೇಶ ಮಾಡುವರೋ ಅಂಥವರೆಲ್ಲ, ಯಾರು ಯಾರಿಂದ ಏನೇನು ಸದ್ಗುಣಗಳು ದೊರೆಯುವವೋ ಅಂಥವರೆಲ್ಲ ಗುರುಗಳೆಂದು ತಿಳಿದು ನಮ್ಮನ್ನು ತಿದ್ದಿಕೊಳ್ಳಬೇಕು. ಭಾಗವತರಲ್ಲಿ ೨೪ ಗುರುಗಳೆಂದು ಒಬ್ಬೊಬ್ಬರಿಂದ ಒಂದೊಂದು ಪಾಠ ಆಗುತ್ತಿರಲು ದೊಡ್ಡ ದೊಡ್ಡ ಜ್ಞಾನಿಗಳ ಹತ್ತಿರ ಹೋಗಿ ನಿತ್ಯ ಅವರಿಂದ ಪುರಾಣ ಪ್ರವಚನಾದಿಗಳನ್ನು ಕೇಳುತ್ತಾ ನಮ್ಮ ಮನಸ್ಸನ್ನು ಸ್ಥಿರವಾಗಿರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅಖಂಡ ಧ್ಯಾನ ಭಜನಾದಿಗಳು ಅಂಥಾ ಜ್ಞಾನಿಗಳಲ್ಲಿ ನಡೆದೇ ಇರುತ್ತಿದ್ದು ಅವರ ಸಹವಾಸದಿಂದ ನಮಗೆ ಸಿಗುವ ಅನಂದ ಈ ಪ್ರಪಂಚದಲ್ಲಿ ಎಂದೂ ಸಿಗಲಾರದು ಎಂದು ಮೇಲಿಂದ ಮೇಲೆ ಅನಿಸುತ್ತಿದೆ. ಆದರೆ ಅವರ ಸಂಗ ಕೆಲವೇ ದಿವಸ ದೂರವಾದರೆ ಮತ್ತೆ ನಮ್ಮ ಮನಸ್ಸಿನ ಸ್ಥಗಿತವಾದ ಪ್ರಪಂಚದ ಕಡೆಗೆ ಎಳೆಯುತ್ತಿದೆ. ಅಂಥವರ ಸಮೀಪವಿದ್ದಾಗ್ಗೆ ಪೋಲೀಸ್ ಕಚೇರಿಯ ಕಂಪೊಂಡಿನಲ್ಲಿ ರಕ್ಷಣೆ ಇರುತ್ತದೆ. ಆಗ್ಗೆ ಯಾವ ಷಡ್ವ್ಯೆರಿಗಳು ನಮ್ಮ ಮನಸ್ಸಿನಲ್ಲಿ ಸುಳಿಯುವ ಧೈರ್ಯವಿಲ್ಲದೇ ಓಡಿ ಹೋಗುವರು. ನಮಗೆ ಆ ವೈರಿಗಳನ್ನು ಸಂಪೂರ್ಣ ಓಡಿಸಿ ನಮ್ಮ ಉಸಾಬರಿಗೆ ಬರದಂತೆ ಮಾಡಲು ಸಾಧ್ಯವಿದ್ಧಷ್ಟು ಅಂಥವರ ರಕ್ಷಣೆಯಲ್ಲೇ ಇರಬೇಕು. ಅಂತಾ “ದಾಸ ದಾಸ ದಾಸರ ದಾಸ್ಯವ ಕೊಡೋ ಸ್ವಾಮಿ ದೋಷ ರಾಶಿಗಳಳಿದೂ” ಎಂದು ಪದ ಮಾಡಿದ್ದಾರೆ. ಅದಕ್ಕೆ ಸ್ವಾಮಿಯಲ್ಲಿ ಇದನ್ನೇ ಬೇಡಿಕೊಳ್ಳಬೇಕು ಅಂದರೆ ಯಾವುದೂ ಕೊರತೆ ಆಗದೇ ಶ್ರೀ ಹರಿವಾಯು ಗುರುಗಳ ಅನುಗ್ರಹ ಪಡೆಯುವ ಗುರಿ ಮುಟ್ಟಿದಂತಾಗುತ್ತದೆ.
ಶ್ರವಣ ಭಕ್ತಿ
ಎಲ್ಲದರಲ್ಲಿ ಶ್ರೇಷ್ಠ ಶ್ರವಣ ಭಕ್ತಿ. ಅದಕ್ಕೆ ಮೇಲಿಂದ ಮೇಲೆ ಆಗುತ್ತಿರಬೇಕು ಶ್ರವಣ. ಆದಕ್ಕಾಗಿ ಎಲ್ಲೆಲ್ಲಿ ಹರಿ ಮಹಿಮೆ ದೊಡ್ಡವರ ಭಗವಧ್ಭಕ್ತರ ಚರಿತ್ರ ನಡೆದಿರುವವೋ ಅಲ್ಲಲ್ಲಿ ಹೋಗಿ ಕೇಳಿ ಮನಸ್ಸಿನೊಳಗೇ ನೆನಪಿಗೆ ತಂದುಕೊಳ್ಳುತ್ತ ಆ ಭಕ್ತರು ಪರಮಾತ್ಮನ ಪ್ರೀತಿ ಹೇಗೆ ಸಂಪಾದಿಸಿ ಮುಕ್ತರಾದರು ನಾವು ನಮ್ಮ ಯೋಗ್ಯತೆ ಪ್ರಮಾಣ ಹರಿವಾಯು ಗುರುಗಳ ಪ್ರೀತಿಗೆ ಪಾತ್ರರಾಗಿ ಉದ್ಧಾರ ಮಾರ್ಗ ಸಿಕ್ಕು ಈ ಬಂಧನದಿಂದ ಮುಕ್ತರಾಗಲು ಪ್ರಯತ್ನ ಮಾಡಲೇಬೇಕು. ಅದಕ್ಕಾಗಿ ಅನೇಕ ದಿವಸಗಳವರೆಗೆ ಶ್ರವಣ ಮಾಡಿದರೂ ಮತ್ತೆ ಮತ್ತೆ ಮಾಡುತ್ತಲೇ ಇರಬೇಕು.
“ಶ್ರವಣ ಮನಕಾನಂದ ನೀವುದು, ಭವ ಜನಿತ ದುಃಖಗಳ ಕಳೆದು,
ವಿವಿಧ ಭೋಗಗಳಿಹ ಪರಂಗಳಲಿತ್ತು ಸಲಹುವುದೋ”
ಅಂತಾ ಹರಿದಾಸರು ಹರಿಕಥಾಮೃತ ಸಾರದಲ್ಲಿ ಹೇಳಿದ್ದಾರೆ.
ನಿರಾಸೆ ಸಲ್ಲದು
ಎಂತಹ ಭಗವದ್ಭಕ್ತರ ಚರಿತ್ರೆ ಕೇಳಿದರೂ ದುಃಖ ಮೊದಲಾದ ಧ್ವಂದಗಳನ್ನು ಸಹಿಸುತ್ತಾ ಎಂಥಂಥ ವಿಪತ್ತಿಗೂ ಹೆದರದೇ ಏಕನಿಷ್ಟೆಯಿಂದ ಸ್ವಾಮಿಯನ್ನು ಒಲಿಸಿಕೊಂಡರೂ, ನಮ್ಮಂಥವರಿಂದ ಅದು ಹೇಗೆ ಸಾದ್ಯ ಅಂತಾ ಆಧೈರ್ಯವು ಅಹಜವಾಗಿಯೇ ಆಗುವುದು. ಅದಕ್ಕೂ ಉದಾಹರಣೆ ಇದೆ, ಹನುಮಂತ ಹಾರಿದಂತೆ ನಮಗೆ ಸಾಧ್ಯವಿಲ್ಲ ಅಂತಾ ಕಾಗಿಗುಬ್ಬಿ ಹಾರುವುದನ್ನು ಬಿಟ್ಟಿವೆಯೇ? ಅದರಂತೆ ನಮ್ಮ ಜೀವನ ಯೋಗ್ಯತೆ ಇದ್ದಷ್ಟಾದರೂ ಸ್ವಾಮಿ ಕೊಟ್ಟ ದತ್ತ ಸ್ವಾತಂತ್ರದಿಂದ ಪ್ರಯತ್ನ ಮಾಡಲೇಬೇಕು. ಪೂರ್ಣ ಅವರಂತೇ ನಡೆಯಲು ಮೊದಮೊದಲು ಸಾಧಿಸದಿದ್ದರೂ ಅಭ್ಯಾಸದಿಂದ ನಮ್ಮ ಯ್ಯೋಗ್ಯತೆಗೆ ತಕ್ಕಷ್ಷು ಜ್ಞಾನ ಭಕ್ತಿ ವೈರಾಗ್ಯ ಬಂದೇ ಬರುವುದು. ಉಪದೇಶ ಮಾತ್ರ ಪದೇ ಪದೇ ಬೇಕು. ಹರಿ ಭಜನೆಗೆ ನರ್ಥನ ಸೇವೆಗೆ ಕಾಲಲ್ಲಿ ಗೆಜ್ಜೆ ಕೈಯಲ್ಲಿ ತಾಳಗಳನ್ನು ಹಿಡಿದು ತಂಬೂರಿ ಹೆಗಲಿಗೆ ಹಾಕಿ ಹರಿ ನಾಮ ಕೀರ್ತನೆ ಮಾಡುತ್ತಾ ಹೊರಬಿದ್ದವರು ಎಂಥವರು? ಆಗಿನ ನವಕೋಟಿ ಹರಿ ನವಕೋಟಿ ನಾರಾಯಣನೆಂದು ಮಾನ್ಯರಾದ ವಿಜನಗರದ ಸಾರ್ವಭೌಮರಿಂದಲೂ ಮಾನ್ಯರಾದ ಶ್ರೀನಿವಾಸ ನಾಯಕರು. ಅವರಷ್ಟು ಶ್ರಿಮಂತಿಕೆ ಇರದಿದ್ದರೂ ಅವರು ಅದರ ಅಭಿಮಾನ ಬಿಟ್ಟಂತೆ ಯಾರಿಗೂ ಅಭಿಮಾನ ಬಿಡಲು ಸಾಧ್ಯವಿಲ್ಲ. ಅವರ ಚರಿತ್ರ ಕೇಳಿ ಸ್ವಲ್ಪವಾದರೂ ದುರಭಿಮಾನ ಬಿಡಲು ಪ್ರಯತ್ನ ಮಾಡಬೇಕು. ಇನ್ನು ಅವರ ಹಣದ ತ್ಯಾಗ, ದೇಹಾಭಿಮಾನ ಲಜ್ಜೆತ್ಯಾಗ (ಅಂದರೆ ಸ್ವಾಮಿಯ ಸೇವೆಗಾಗಿ) ಜನರ ನಿಂದೆ ಎಲ್ಲವೂ ಏಕ ಕಾಲಕ್ಕೆ ನಡೆದದ್ದು ಬೀಗರು ಕೂಡಾ ನಿಂದೆ ಮಾಡಿದರೂ ಸರ್ವಸ್ವದಾನ ಮಾಡಿ ಮಕ್ಕಳಿಗೆ ಬಿಕ್ಷಾ ಪಾತ್ರೆ ಕೊಟ್ಟಿರಿ ಅಂತಾ ಬೈದರು. ಹಿಂದೆ ಮಾನ ಮರ್ಯಾದೆ ಎಷ್ಟಿತ್ತು? ಒಂದು ಕ್ಷಣದಲ್ಲಿಯೇ ಅಪಮಾನ ನಿಂದೆ ಶುರುವಾದರೂ ಅವರು ಹಸಮ್ಮಖದಿಂದಲೇ ಆದದೆಲ್ಲಾ ಒಳಿತೆ ಆಯಿತು’ ಅಂತಾ ಹಾಡುತ್ತಾ ಮುಂದೆ ಸಾಗಿ ದೇವಸ್ಥಾನದಲ್ಲಿ ತಂಗಿದ್ದು ಧ್ಯಾನಾಸಕ್ತರಾದದ್ದು ಮುಂದೆ ಎಲ್ಲರಿಗೂ ತಿಳಿದ ಕಥೆಯೇ ಇದೆ ಸುಜೀವಿಗಳೂ ಭಕ್ತ ಜನರೂ ಇವರ ಸ್ತೋತ್ರ ಮಾಡುತ್ತಾ ಇವರ ವೈರಾಗ್ಯ ಭಕ್ತಿ ಜ್ಞಾನಗಳನ್ನು ಕೊಂಡಾಡುತ್ತಿದ್ದರೆ, ನಿಂದಕರು ಅನೇಕ ರೀತಿ ನಿಂದಾ ಮಾಡುತ್ತಿದ್ದದ್ದು ಸಜ್ಜನರು ಈ ನಿಂದಾ ಕೇಳಿ ಸಹಿಸದೇ ದಾಸರಿಗೆ ಹೇಳಿದರಂತೆ. ಆಗ್ಗೆ ದಾಸರ “ನಿಂದಕರು ಇರಬೇಕು ಸಜ್ಜನರಿಗೆ, ಹಂದಿ ಇದ್ದರೆ ಹೇಗೆ ಕೇರಿ ಸ್ಚಚ್ಛವೂ ಹಾಗೆ” ಅಂತಾ ಪದ ಹಾಡುತ್ತಾ ಸಾಗಿದರಂತೆ!
ದಾಸರು ತೋರಿಸಿದ ಮಾರ್ಗ
ಇಂಥ ದಾಸರೂ ಭಕ್ತರಾದ ಜ್ಞಾನಿಗಳೆಲ್ಲರೂ ಪದೇ ಪದೇ ಉಪದೇಶ ಮಾಡಲು ನಮಗೆ ಹೇಗೆ ಸಿಗಬೇಕು, ಅಂದರೆ ನಮ್ಮ ಅಜ್ಜ ಮುತ್ತಜ್ಜರು ಸಂಪಾದಿಸಿಟ್ಟ ಸಂಪತ್ತನ್ನು ಜೋಪಾನಮಾಡಿಟ್ಟು ಅದಕ್ಕೆ ತಾನೂ ಸಂಪಾದಿಸಿದ್ದನ್ನೂ ಕೂಡಿಸಿಟ್ಟು ತಂದೆಯಾದವನು ಮಕ್ಕಳಿಗೆ ಹಂಚಿ ಕೊಡುವಂತೆ ವರ್ತಮಾನದಲ್ಲಿರುವ ಯತಿಶ್ರೇಷ್ಟರೂ ಮತ್ತು ಶ್ರೀ ಮಧ್ವಶಾಸ್ತ್ರ ಸುಧಾದಿಗಳನ್ನೂ ವೇದ ಉಪನಿಷತ್ ಜ್ಞಾನವಿದ್ದ ದಾಸ ಸಾಹಿತ್ಯದಲ್ಲಿ ತಲ್ಲಿನರಾದಂಥವರು ಇಂಥ ಜ್ಞಾನಿಗಳೇ. ತಂದೆಯ ಸ್ಥಾನದಲ್ಲಿದ್ದ ಮಹಾನ್ ಪಂಡಿತೋತ್ತಮರು ತಮ್ಮ ಜ್ಞಾನ ಭಂಡಾರದಿಂದ ನಮಗೆಲ್ಲ ಹಂಚುತ್ತಿದ್ದಾರೆ. ಇದ್ದದ್ದನ್ನೆಲ್ಲ ಹಂಚಿದರೆ ಅವರ ಭಂಡಾರ ಖಾಲಿ ಎಂದಿಗೂ ಆಗದು ಇನ್ನೂ ಮತ್ತೊಬ್ಬರಿಗೆ ಕೊಡುತ್ತಾ ಹೊಸ ವಿಚಾರ ಹೊಳೆಯುವದಲ್ಲದೇ ಎಲ್ಲ ಜ್ಞಾನ ಗಟ್ಟಿಮುಟ್ಟಿಆಗಿ ಉಳಿದು ಬೆಳೆಯುವದು. ದಾಸರು ಇಂಥಾ ಧನ ಗಳಿಸಿ ಅಂತಾ ಹೇಳಿದ್ದಾರೆ. “ಧನವ ಗಳಿಸಬೇಕಿಂತಾದ್ದು ಈ ಜನರಿಗೆ ಕಾಣಿಸದಂತಾದ್ದು: ಕೊಟ್ಟರೆ ತೀರದಂತಾದ್ದು ತನ್ನ ಬಿಟ್ಟು ಅಗಲದಿರುವಂತಾದ್ದು: ಕಟ್ಟಿ ಗಂಟನೂ ಬಯಲೊಳಗಿಟ್ಟರೆ ಯಾರಾರ್ಯೂ ಮುಟ್ಟದಂತಾದ್ದು” ಎಂದು.
ವೈಷ್ಣವ ಗುರು ಪರಂಪರೆ
ಈ ಧನ ಎಲ್ಲಿಂದ ಬಂತು? ಅಂದರೆ ಮೂಲ ಹಂಸ ನಾಮಕ ಪರಮಾತ್ಮ (ನಾರಾಯಣ) ನಿಂದ ಬ್ರಹ್ಮ ದೇವರಿಗೆ ವಾಯು ದೇವರಿಗೆ ಅವರೇ ಶ್ರೀಮದಾನಂದ ತೀರ್ಥರಾಗಿ ವೇದ ವ್ಯಾಸ ನಾರಾಯಣ ದೇವರಲ್ಲಿ ಈ ಧನವನ್ನು ಸಂಪಾದಿಸಿ ಪರಂಪರೆ ಶಿಷ್ಯ ಸಮುದಾಯ (ಮಕ್ಕಳೇ)ಕ್ಕೆ ಹಂಚಿಕೊಟ್ಟದ್ದೇ ಶ್ರೀ ಟೀಕಾಚಾರ್ಯರು , ಶ್ರೀವಾದಿರಾಜ, ಶ್ರೀ ವ್ಯಾಸರಾಜ, ಶ್ರೀ ರಾಘವೇಂದ್ರ ಗುರುಗಳಿಗೆಲ್ಲ ಕೊಟ್ಟರು ಆ ಧನವನ್ನೇ ಈಗ ಅಂಥವರ ಶಿಷ್ಯ ಪ್ರಶಿಷ್ಯ ಅಂತಾ ಅನೇಕ ಗ್ರಂಥಕಾರರು ಟಿಪ್ಪಣಿಕಾರರು ತಮ್ಮ ತಮ್ಮ ಶಿಷ್ಯ ಪರಂಪರೆಗೆ ಕೊಟ್ಟಂಥ ಜ್ಞಾನದ ಒಳ್ಳೆ ಪ್ರಕಾಶ ಲಾಯಿಟ ಬೆಳಕಿನಿಂದ ಕಗ್ಗತ್ತಲೆಯಲ್ಲಿ (ಆಜ್ಞಾನದ) ಕಾಲಾಡಿಸುತ್ತಾ ಸಾಗಿರುವಂಥ ಸುಜೀವಿಗಳಿಗೆ ಮಾರ್ಗ ತೋರಿಸಲು ಪರೋಪಕಾರ ಬುದ್ದಿ ಇಂದ ತಾವೇ ಬಂದು ಬೆಳಕಿಗೆ ತರುತ್ತಿದ್ದಾರೆ. ಯಾರಿಗೆ? ಅಂದರೆ ಹರಿ ಸರ್ವೋತ್ತಮತ್ವದ ಜ್ಞಾನಕ್ಕಾಗಿ ಮಧ್ವಮತದಲ್ಲಿ ಶ್ರದ್ದೆ ಇದ್ದು, ಉದ್ಧಾರಕ್ಕಾಗಿ ಉತ್ಸುಕರಿದ್ದು ರಾಮ ಕೃಷ್ಣ ಅಂತಾ ಧ್ಯಾನ ಮಾಡುವಂಥಾ , ದುರ್ಗಣಗಳನ್ನು ದೂರ ಓಡಿಸಿದಂಥಾ, ಜೀವಿಗಳಿಗೆ, ಬೆಳಕು ತೋರಿ ವೈಕಂಠದ ಹಾದಿ ತೋರಿಸುವ ಉದ್ದೇಶದಿಂದ ತಾವೂ ತಮ್ಮ ಗುರುಗಳಿಂದ ಉಂಡ ಅಮೃತದ ಊಟ ಉಣಿಸುತ್ತ ತಾವು ಕಂಡು ಕೊಂಡ ಶಾಶ್ವತ ಸುಖದ ಹಾದಿಗೇ ಕರಕೊಂಡು ಹೋಗುವರು ಆಮೇಲೆ ಆನಂದವೇ ಆನಂದ.
ಸಾಧಕನ ಕರ್ತವ್ಯ
ಅಂಥ ಮಹಾ ಗುರುಗಳಿಂದ ದೊರೆತ ಮಹಾತ್ಮ ಜ್ಞಾನ ಪೂರ್ವಕ ಸ್ವಾಮಿಯಲ್ಲಿ ಭಕ್ತಿ ಬರಬೇಕಾದರೆ ಬಹಳಷ್ಟು ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ಹಿಂದೆ ಹೇಳಿದಂತೆ ಯಾರ್ಯಾರಲ್ಲಿ ಯಾವ ಯಾವ ಉತ್ತಮ ಗುಣಗಳಿವೆಯೋ ಅವುಗಳನ್ನು ನಮ್ಮ ಹೃದಯದಲ್ಲಿ ಸದ್ಗುಣಗಳನ್ನು ಒಂದೊಂದರಂತೆ ಕೂಡಿ ಹಾಕಿ ಬಿತ್ತಬೇಕು. ಮೊದಲು ಹೊಲ ಹರಗಿದಂತೆ (ಅಂದರೆ ಕಲ್ಲು, ಮುಳ್ಳು ದುರ್ಗಣಗಳನ್ನು) ಹರಗಿ ಚೆಲ್ಲಬೇಕು. ನಂತರ ಹೃದಯ ಸ್ವಚ್ಛವಾಗಿ ಬಿತ್ತಿದರೆ ಬೆಳೆ ಬರಲು ಅನುಕೂಲವಾಗಿ ಉಪಯೋಗವಾಗುವುದು. ಆದರೆ ಅಲ್ಲಿ ಕಲ್ಲು ಮುಳ್ಳಗಳಂತಿದ್ದ ನಾನು ನನ್ನದು, ಇದು ಬೇಕು, ಇದು ಬೇಡವೆಂಬ (ರಾಗದ್ವೇಷಗಳು) ನಮ್ಮನ್ನು ಜನ್ಮಕ್ಕೆ ಸ್ವಾಮಿ ತರುವ ಮೊದಲೇ ಇದ್ದವುಗಳು. ಗಟಿಯಾಗಿ ಬೇರು ಬಿಟ್ಟ ವೃಕ್ಷದಂತೆ ಒಳತನಕ ಹೋಗಿದ್ದು ಡಬ್ಬಗಳ್ಳಿಯಂತೆ ಬೆಳೆದಿವೆ. ಎಷ್ಟೋ ಜನಮಗಳ ಅಭ್ಯಾಸದ್ದು ಅಹಂ, ಮುಮ ಅದನ್ನು ಹೊರಗೆ ತೆಗಿದು ಹಾಕಲು ಗಟ್ಟುಳ್ಳವರ ಸಜ್ಜನರ ಸ್ನೇಹದಿಂದ ಸಹವಾಸದಿಂದ ಸ್ವಲ್ಪ ಸ್ವಲ್ಪ ತೆಗೆದು ಹಾಕುತ್ತಾ ಅವರಂತೇ ನಡೆತೆಯನ್ನು ಸುಧಾರಿಸಿಕೊಳ್ಳುತ್ತಾ ಅವರ ಅನುಕರಣ ಮಾಡುವುದರಿಂದ, ಸಿಟ್ಟು, ಕೋಪ, ಈರ್ಷೆ, ಜಿದ್ದು, ಆಸೂಯಾ, ಡಂಭ ಹೆಮ್ಮೆ ಗರ್ವ, ಇಂಥ ಅನೇಕ ತರದ ಕಲ್ಲುಮುಳ್ಳುಗಳನ್ನು ಒಂದೊಂದರಂತೆ ಹೊರಗೆ ಹಾಕಿ, ಸಜ್ಜನರ ಸಂಗದಿಂದ ಸದ್ಗುಣಗಳನ್ನು ಕಲಿಯಬೇಕು. ಅಂಥವರ ನಡೆ ನುಡಿಗಳಲ್ಲೇ ಲಕ್ಷವಿಟ್ಟು ಕಲಿಯಬೇಕು. ಅದೂ ಅಭ್ಯಾಸದಿಂದಲೇ ಬರುವುದು.