ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ದಾರಿದೀಪ

ಸಾಧನೆಯ ಸ್ವರೂಪ

ಅದ್ಯಾಯ-2

“ಸಾಧನಕೆ ಬಗೆಗಾಣೆನೆನ್ನಬೇಕೇ,

ಸಾದರದಿ ಗುರುಕರುಣೆ ಪಡೆದ ಬಳಿಕ.”

ದ್ವಿದ್ಯೆ ಕಲಿಸುವಂಥ ಸಜ್ಜನರ ಶಾಲೆಗೇ ಹೋಗಬೇಕು. ಅಲ್ಲಿ ಚೆನ್ನಾಗಿ ಲಕ್ಷಪೂರ್ವಕ ಅಭ್ಯಾಸ ಮಾಡಬೇಕು. ಮೊದಲು ಕೆಟ್ಟ ದುರ್ಗುಣಗಳ ಆಭ್ಯಾಸವಾಗಿದ್ದು, ಈಗ ಒಳ್ಳೇ ಅಭ್ಯಾಸ ಹೇಗೆ ರುಚಿಸಬೇಕು?

ಪ್ರಲ್ಹಾದ ರಾಜರ ಉಪದೇಶ ೧:೨ ತಾಸಿನಲ್ಲ ಸುಜೀವಿಗಳಾದ ಕೆಲವು ದೈತ್ಯ ಬಾಲಕರಿಗೆ ನಾಟಿ, ಅವರು ಸನ್ಮಾರ್ಗದಲ್ಲಿ ಪ್ರವೃತ್ತರಾದರು. ಅವರೂ ಮೊದಲು ಶಂಡಾಮರ್ಕರ ದುರುಪದೇಶದ್ದೇ ಅಭ್ಯಾಸ ಮಾಡಿದ್ದರು. ಅವರಿಗೆ ಪ್ರಲ್ಹಾದ ರಾಜರಂಥಾ ಭಕ್ತೋತ್ತಮರ ಸಹವಾಸದ್ದೇ ಫಲ ದೊರತು ಅವರು ಉದ್ಧಾರವಾದರು. ಈಗಲೂ ಅದೇ ಪ್ರಲ್ಹಾದರೇ ಶ್ರೀ ಮಂತ್ರಾಲಯ ಪ್ರಭುಗಳಾಗಿ, ವಿರಾಜಮಾನರಾಗಿದ್ದು ಮಂತ್ರಾಲಯದಲ್ಲಿದ್ದಾರೆ. ಭಕ್ತಿಯಿಂದ ಕರೆದರೆ ಕರೆದಲ್ಲಿಗೆ ಬರುವಾ ಅಂತ ಹೇಳಿದ್ದಾರೆ. ಅವರು ಬರೆದಿರುವ ಪರಿಮಳ ಮುಂತಾದ ಗ್ರಂಥಗಳನ್ನು ಅನೇಕ ಯತಿಗಳೂ ಪಂಡಿತ್ತೋತ್ತಮರೂ ಅಭ್ಯಾಸ ಮಾಡುತ್ತಿರುವುದು ಸರ್ವರಿಗೂ ತಿಳಿದ ಮಾತು. ನಮಗೆ ಸಮಕ್ಷಮ ರಾಯರನ್ನೇ ಪ್ರತ್ಯಕ್ಷ ನೋಡುವ ಭಾಗ್ಯವಿಲ್ಲ ಎಂದು ಹಳಹಳಿಸುವ ಕಾರಣವಿಲ್ಲ. .ವೃಂದಾವನದಲ್ಲಿ ಗ್ರಂಥಗಳಲ್ಲಿ ನಾನಿದ್ದೇನೆ. ಎಂದು ಹೇಳಿದ್ದಾರೆ ಮತ್ತು ಎಷ್ಟೋ ಭಕ್ತರ ಅನುಭವಕ್ಕೂ ಬಂದಿದ್ದು ಕೇಳುತ್ತಿದ್ದೇವೆ. ಕಾರಣ ಈಗ ಅವರ ಗ್ರಂಥ ಅಭ್ಯಾಸ ಮಾಡಿ ಪ್ರವಚನ ರೂಪದಲ್ಲಿ ಅಮೃತ ಹಂಚುವ ಮಹಾತ್ಮರು ಇದ್ದು ನಮಗೆ ಪ್ರಲ್ಹಾದರಾಜರು ದೈತ್ಯ ಬಾಲಕರಿಗೆ ಉಪದೇಶಿಸಿದ ಭಾಗವತ ಧರ್ಮವನ್ನು ಸಾರಿ ಸಾರಿ ಹೇಳಿವಂಥ ಆಚಾರ್ಯವರ್ಯರು, ಪಂಡಿತರು, ಅಲ್ಲಲ್ಲಿ ಉಪದೇಶ ಮನಮುಟ್ಟುವಂತೆ ಮಾಡುತ್ತಲೇ ಇದ್ದಾರೆ. ಅವರಲ್ಲಿ ಕೆಲವರು ಶ್ರೀ ಸತ್ಯಧ್ಯಾನ ಶ್ರೀಗಳವರ ಗರಡಿಯಲ್ಲಿ ತಯಾರಾದವರೂ ಹಾಗೂ ಶ್ರೀ ಮಾಹುಲಿ ಗೋಪಾಲಾಚಾರ್ಯರ ಗರಡಿಯಲ್ಲಿ ತಯಾರಾದಂಥವರೂ ನಮ್ಮೆಲ್ಲರ ಕಣ್ಣಿಗೆ ಕಾಣಿಸುತ್ತಾರೆ.

ಶ್ರೀ ಸತ್ಯಪ್ರಮೋದ ತೀರ್ಥರ ಅನುಗ್ರಹ

ಇದಲ್ಲದೇ ಸದ್ಯ ಶ್ರೀ ಶ್ರೀ ಸತ್ಯ ಪ್ರಮೋದ ತೀರ್ಥರು ಚಾತುಮಾರ್ಸಕ್ಕೆಂದು ವಿಜಾಪೂರದಲ್ಲಿ ಇದ್ದು, ಇಲ್ಲಿಯ ಸರ್ವ ಸುಜೀವಿಗಳಿಗೆ ಜ್ಞಾನ ಮತ್ತು ವಚನಾಮೃತವನ್ನು ಉಣಿಸುತ್ತಿದ್ದು ಆನಂದ ಸಾಗರದಲ್ಲಿ ಮೀಯುವಂತೆ ಮಾಡಿದ್ದಾರೆ. ಇದರಿಂದ ನಮಗೆಲ್ಲಾ ಧೈರ್ಯ ಬಂದಿದೆ. ಏನೆಂದರೆ ಅನಂತ ಜನುಮದ ಪಾಪ ರಾಶಿಯನ್ನು ಭಸ್ಮ ಮಾಡಿ ಮುಂದೆ ಪಾಪ ಘಟಿಸದಂತೆ ಅಂತಃಕರುಣೆ ಇಂದ ಆಶೀರ್ವಾದಗಳನ್ನು 2 ತಿಂಗಳು ನಿತ್ಯವೂ ಮಾಡುತ್ತಿದ್ದು ಶ್ರೀ ರಾಮದೇವರ ದರ್ಶನ ಮಾಡಿಸುತ್ತಾ ಕೃತಾರ್ಥರನ್ನು ಮಾಡಿಯೇ ಮುಂದಿನ ಸಂಚಾರ ಕೈಕೊಳ್ಳುವರೆಂಬ ಸಂತೋಷ ಇಲ್ಲಿರುವ ಸರ್ವ ಜನರಿಗೂ ಆಗಿದ್ದು ಎಲ್ಲರಿಗೂ ಕಂಡು ಬರುತ್ತದೆ. ಇದರಂತೇ ಸದಾಕಾಲ ಇಂಥಾ ಮಹಾನುಭಾವರಾದ ಜ್ಞಾನಿಗಳು ಉಪದೇಶ ನಡೆಸುತ್ತಿರಲು ಶ್ರೀ ಭಾ.ಮು. ಅಂತರ್ಗತ ಪರಮಾತ್ಮ ಶ್ರೀ ರಾಮಚಂದ್ರ ದೇವರಿಗೆ ಒಟ್ಟಾಗಿ ನಾವೆಲ್ಲರೂ ಪ್ರಾರ್ಥಿಸುವುದೇ ನಮ್ಮ ಮುಖ್ಯ ಕರ್ತವ್ಯ. ಶ್ರೀ ಶುಕಾಚಾರ್ಯರು ಬಂದಾಗ ಪರೀಕ್ಷಿತ ರಾಜನಿಗಾದ ಆನಂದದ ಅನುಭವ ಎಂಥೆದೆಂಬುವದು ಪ್ರಸ್ತುತ ಉಪನ್ಯಾಸ ಕೇಳುತ್ತಿದ್ದಾಗ್ಗೆ ಕುಳಿತ ಭಕ್ತ ಮಂಡಳಿಗಳಿಗೆಲ್ಲ ಕಲ್ಪನೆಗೆ ಬಂದೇ ಬರುತ್ತಿದೆ. ಅವರು ಇದ್ದದ್ದರಿಂದ ಅನೇಕ ಪಂಡಿತರು ಬರುತ್ತಿದ್ದು ಅವರು ಕೂಡಾ ಆಜ್ಞರಾದ ನಮಗೆಲ್ಲ ಶ್ರೀಗಳವರಿಂದ ಪಡೆದ ಜ್ಞಾನಾಮೃತವನ್ನು ಹಂಚುತ್ತಿದ್ದಾರೆ. ಇದು ಹಿಂದೆ ಹೇಳಿದ ತಾಯಿ ದೃಷ್ಟಾಂತವೇ ಸರಿ.

ಸುಜೀವಿಗಳ ವ್ಯವಹಾರ

ಇನ್ನೂ ಶ್ರೀ ಪೇಜಾವರ ಶ್ರೀಗಳು ಅನುಗ್ರಹ ಭಾಷಣದಲ್ಲಿ ಈ ಕೆಳಗಿನಂತೆ ಒಮ್ಮೆ ಹೇಳಿದರು. ದೇವರು ಪೂರ್ವಾರ್ಜಿತ ಪುಣ್ಯವಿದ್ದವರಿಗೆ ಸುಜೀವಿಯೇ ಇರಲೀ ದುರ್ಜೀವಿಯೇ ಇರಲಿ ಸಂಪತ್ತು ಕೊಡುವನು. ಆ ಸಂಪತ್ತಿದ್ದವರಿಗೆ ಒಳ್ಳೆ ಮರ್ಯಾದೆ ಮಾನ ಮಾಡುತ್ತಾ ಜನರೆಲ್ಲ ಇಂದ್ರ ಚಂದ್ರ ಅಂತಾ ಹೊಗಳುವರು ಸಜ್ಜನರು ದುರ್ಜನರಂತೆ ಗರ್ವದ ಬೆಟ್ಟ ಏರದೇ ಇದೆಲ್ಲ ಆತನ ಕೃಪೆ, ಎಲ್ಲ ಐಶ್ವರ್ಯ ವೈಭವ ಅವನೇ ಕೊಟ್ಟಿದ್ದು ಇದೆಲ್ಲ ಅವನದೇ ಅಂತಾ ಆ ಹಣ ಸದ್ವಿನಿಯೋಗಕ್ಕೆ ಮೀಸಲು ಮಾಡಿ ಅನಿವಾರ್ಯವೆಂದು ಸ್ವಾರ್ಥಕ್ಕೆಷ್ಟು ಬೇಕೋ ಅಷ್ಟೇ ಉಪಯೋಗಿಸುತ್ತಾರೆ. ದಾನ ಧರ್ಮ ಹರಿ ಪ್ರಿತಿಗಾಗಿ ಆ ಹಣ ಸದುಪಯೋಗ ಮಾಡುತ್ತಾ ದ್ರವ್ಯ “ ಈ ಪರಮಾತ್ಮ ನನ್ನಲ್ಲಿಟ್ಟಿದ್ದಾನೆ. ಅವನ ಆಜ್ಞೆಯಂತೇ (ಪ್ರರಣೆ)ಯಂತೆ ಬಳಸಬೇಕು ಅಂತಾ ಒಳ್ಳೆ ಭಾವನೆಯಿಂದಿದ್ದರೆ ಗರ್ವ, ಮದ ಬರಲು ಶಕ್ಯವೇ ಇಲ್ಲ, ಇದೇ ಅನುಸಂದಾನವಿದ್ದ ಒಬ್ಬ ದೊಡ್ಡ ಶ್ರೀಮಂತ ಇದ್ದವನು ನಿತ್ಯ ಕಾಲು ನಡಿಗೆ ಇಂದಲೇ ದೇವಸ್ಥಾನಕ್ಕೆ ಹೋಗುತ್ತಿರಲು ಮಾರ್ಗದಲ್ಲಿ ಯಾರಾದರೂ ಭೇಟಿಯಾಗಿ ನಮಸ್ಕಾರ ಸ್ವಾಮಿ ಅಂತಾ ಅಂದು ಕೈಮುಗಿಯಿತ್ತಿದ್ದರೆ ಈ ಧನಿಕನು ಒಳ್ಳೇದು ಮುಟ್ಟಿಸುತ್ತೇನೆ ಎಂದು ಅನ್ನುತ್ತಿದ್ದರೂ, ದೊಡ್ಡ ಮನುಷ್ಯನೆಂದು ಕಂಡವರೆಲ್ಲರೂ ನಮಸ್ಕಾರ ಮಾಡುತ್ತಿದ್ದರೂ, ಪ್ರತಿಯೋಬ್ಬರಿಗೂ ಇದೇ ಮಾತನ್ನು ಹೇಳುತ್ತಿದ್ದರು. ಎಲ್ಲ ಜನರಿಗೂ ಕೂತುಹಲ. ಎಲ್ಲರಿಗೂ ಒಂದೇ ಮಾತು ಹೇಳತ್ತಾರಲ್ಲ? ಇದರ ಮರ್ಮ ಏನಿರಬಹುದು ? ಅಂತ ಎಲ್ಲರೂ ಕೂಡಿ ಆ ಧನಿಕನ ಪರಮ ಸ್ನೇಹಿತರಿಗೆ,ಹೋಗಿ’ ಇದರ ರಹಸ್ಯವೇನು ಕೇಳಿರಿ. ಅನ್ನಲು ಸ್ನೇಹಿತನು ಈ ಧನಿಕನಿಗೆ, “ನಮಸ್ಕಾರ ಮಾಡಿದ ಕುಡಲೇ ಮುಟ್ಟಿಸುತ್ತೇನೆ” ಅಂತಾ ಅನ್ನುವಿರಲ್ಲಾ ಏನು ಈ ಮಾತಿನ ಅರ್ಥ? ಯಾರಿಗೆ ಮುಟ್ಟಿಸುವಿರಿ? ಅಂತಾ ಕೇಳಲು ಈ ನಮಸ್ಕಾರಗಳು, ಮಾನ ಮರ್ಯಾದೆ ಎಲ್ಲವೂ ಈ ನಶ್ವರ ದೇಹಕ್ಕಲ್ಲ. ಧನ ದೌಲತ್ ಎಲ್ಲಾ ಸ್ವಾಮಿಯದು. ಕಾರಣ ಇವೆಲ್ಲ ನಮಸ್ಕಾರಗಳು ನನಗಲ್ಲ ನಮ್ಮಲ್ಲಿದ್ದ ತಿಜೋರಿಗೆ. ಕಾರಣ ಆ ಧನ ಲಕ್ಷ್ಮೀ ಇದ್ದ ತಿಜೋರಿಗೆ ಮುಟ್ಟಿಸುತ್ತೇನೆ ಅಂತ ಹೇಳಿದರು. ಈ ಮಾತನ್ನು ಶ್ರೀಗಳವರು ಪರ್ಯಾಯಕ್ಕೆ ಕೂಡುವ ಮೊದಲು ಸಂಚಾರಕ್ಕೆ ಹೊರಟು ಬಂದಾಗ್ಗ ಇದೇ ವಿಜಾಪೂರದ ಭಕ್ತರು ನಿಧಿ ಕೂಡಿಸಿ ಕೊಡುವ ಸಂದರ್ಭದಲ್ಲಿ ಹೇಳಿದರು.ಈ ನಿಧಿ ಶ್ರೀಮದಾನಂದ ತೀರ್ಥರದು. ಈ ಮರ್ಯಾದೆ ಸಹಿತವಾಗಿ ಅವರಿಗೆ ಮುಟ್ಟಿಸುತ್ತೇನೆ. ಮತ್ತು ನಮ್ಮಂಥಾ ಮನುಷ್ಯ ಮಾತ್ರರಲ್ಲಿ ಏನಾದರೂ ಮಹತ್ವಗುಣವಿದ್ದು ಜನರು ಮನ್ನಣಿ ಮಾಡುತ್ತೆದ್ದರೆ ಆ ಮನ್ನಣೆ ನಮಗೆಂದು ತಿಳಿಯಬಾರದು. ಆ ಮಹತ್ವ ಕೊಟ್ಟಂಥ ಆ ಸ್ವಾಮಿಗೆ ಎಂದು ತಿಳಿಯಬೇಕು ಅಂತಾ ಹೇಳಿದರು.

ಪ್ರತಿಯೊಬ್ಬ ಭಗವದ್ಭಕ್ತರಾದ ಜ್ಞಾನಿಗಳು ಹೇಳುವ ಮುಖ್ಯ ಉಪದೇಶದ ಮಾತುಗಳೆಂದರೆ ನಾವು ಮಾಡುವ ಸಕಲ ಕರ್ಮಗಳನ್ನು ಭಗವದರ್ಪಣ ಮಾಡಲೇಬೇಕು ಎಂದು ಆದರೆ ಅವನುಎಲ್ಲಿರುವನು ? ಅವನಿಗೆ ಹೇಗೆ ಮುಟ್ಟುವುದು? ಅಂದರೆ ಈಗ ಪರದೇಶಕ್ಕೆ ಹೋಗಿರುವಂಥಾ ಅಪ್ತೇಷ್ಟರಿಗೆ ನೀವು ಬರೆದು ಕಳಿಸಿದ ಪತ್ರಗಳು ಹೇಗೆ. ಅಡ್ರೆಸ್ ಬರೆದರೆ ಮುಟ್ಟುವುವೋ, ಹಾಗೆ ಪರಮಾತ್ಮಗೆ ನಾವು ಭಕ್ತಿ ಪೂರ್ವಕ ಮಾಡಿದ ಕರ್ಮಗಳು ನಾಮಸ್ಮರಣೆ, ದಾನ ಧರ್ಮಾದಿಗಳು, ಮುಟ್ಟಬೇಕಾದರೆ ಅವನ ಅಡ್ರೆಸ್ ಆದ ಭಾರತೀಶ ಮುಖ್ಯ ಪ್ರಾಣಾಂತರ್ಗತೆ, ಶ್ರೀ ಕೃಷ್ಣಾರ್ಪಣ ಅಂತಾ ಅಂದು ಭಕ್ತಿಯಿಂದ ವಂದಿಸಿದರೆ ಸರಳ ಅಲ್ಲಿ ಮುಟ್ಟುವದು. ಈ ಅಡ್ರೆಸ್ ಇಲ್ಲದೇ ಮುಟ್ಟುವುದೇ ಇಲ್ಲ. ಕರ್ಮ ಆರಂಭ ಮಾಡುವಾಗ್ಗೆ ಶ್ರೀ ಭಾ.ಮು. ಅಂತರ್ಗತ ಶ್ರೀವಿಷ್ಣು ಪ್ರೇರಣೆಯಾ ವಿಷ್ಣು ಪ್ರೀತ್ಯರ್ಥಂ ಅಂತಾ ಸಂಕಲ್ಪ ಮಾಡದೇ ಯಾವ ಕರ್ಮಕ್ಕೂ ಮಹತ್ವವಿಲ್ಲಾ. ಅದೇ ರಾಜ ಮುದ್ರೆ ನಾಮಸ್ಮರಣೆಯಿಂದ ಅಜಮಿಳನು ಒಂದೇ ಕ್ಷಣದಲ್ಲಿಯೆ ಯಮದೂತರಿಂದ ಬಿಡುಗಡೆ ಹೊಂದಿದನು. ನಾಮ ಅಂದರೆ ಹೆಸರು ಅಂತಾ ಎಲ್ಲರಿಗೂ ಗೊತ್ತಿದೆ. ದೇವರ ಹತ್ತಿರ ಹೋಗಬೇಕೆಂಬವರಿಗೆ ನಾಮ ಸ್ಮರಣೆಯೇ ವಾಹನ. ಹೇಗೆ ಕಾಶಿಗೋ, ರಾಮೇಶ್ವರಕ್ಕೋ ಹೋಗುವರಿದ್ದವರು ಸ್ಟೇಶನಕ್ಕೆ ಹೋಗಿ ಟಿಕೇಟ್ ಕೊಡಿರಿ ಅಂದರೆ ಎಲ್ಲಿಗೆ ? ಅಂದಾಗ್ಗೆ ಆ ಊರ (ನಾಮ) ಹೆಸರು ಹೇಳದಿದ್ದರೆ ಟಿಕೇಟೇ ಸಿಗುವುದಿಲ್ಲ. ಇದರಂತೆ ಸ್ವಾಮಿಯ ನಾಮಸ್ಮರಣೆ ಸದಾ ಮಾಡುತ್ತಿದ್ದು ಆ ನಾಮ ಸದಾ ಪಠಿಸುತ್ತಾ ಪುಣ್ಯ ಕರ್ಮಗಳೆಂಬ ಧನವಿದ್ದರೆ ಸ್ವಾಮಿಯ ಗುರುಗಳ ಅನುಗ್ರಹವೆಂಬ ಟಿಕೇಟು ನಮ್ಮ ಪಾಳೀ ಬಂದಾಗ ಸಿಗುವುದು. ಅಲ್ಲಿಯವರೆಗೆ ಭಗದ್ಭಕ್ತರ ಕ್ಯೂದಲ್ಲಿ ನಿಂತು ತದೇಕ ಚಿತ್ತದಿಂದ ಧ್ಯಾನ ಮಾಡುತ್ತಿರಬೇಕು. ತಾಯಿ ತಂದೆ ಇದ್ದ ಊರಿಗೆ ಹೋಗುವಾಗ್ಗೆ ಅವರ ಮೇಲಿನ ಪ್ರೇಮದಿಂದ ಅವರ ಮುಖಧೇನಿಸುತ್ತಾ ಆನಂದ ಪಡುವೆವೋ ಹಾಗೆ ಸ್ವಾಮಿಯ ನಾಮಸ್ಮರಣೆಯನ್ನು ಮಾಡುತ್ತಲಿರಬೇಕು.

ವಾಯು ದೇವರನ್ನು ಬಿಟ್ಟು ದೇವರು ಇರನು, ದೇವರನ್ನು ಬಿಟ್ಟು ವಾಯು ದೇವರಿರರು. ವಾಯು ದೇವರು ತಮ್ಮ ೩ ಆವತಾರಗಳಲ್ಲಿಯೂ ಎಡೆ ಬಿಡದೇ ಸ್ವಾಮಿಯ ಸೇವೆ ಮಾಡುವುದೇ ಅವರ ಮುಖ್ಯ ಕರ್ತವ್ಯ. ಹರಿ ಆಜ್ಞೆಯಿಂದ ಹರಿ ಪೂಜೆ ಎಂದೆ ಯಾವುದೇ ಕಾರ್ಯಮಾಡಲಿ ಅವನಿಗೆ ಅರ್ಪಿಸುವರು. ಪ್ರತಿ ಜೀವಿಗಳಲ್ಲಿ ಶ್ವಾಸೋಚ್ಛಾಸ ಒಂದು ದಿನಕ್ಕೆ ೨೦,೬೦೦ ಆಗುವವು. ಅದೇ ಹಂಸ ಮಂತ್ರ ಜಪ ಅಂಥಾ ಜಪ. ಅನಂತ ಜೀವರಲ್ಲಿ ಇದೇ ಕ್ರಮದಿಂದ ಅಂದರೆ ಲೆಕ್ಕಕ್ಕೇ ಅನಂತ ನಿಲುಕದಷ್ಟು ಜಪ ಶ್ರೀ ಹಂಸನಾಮಕ ಪರಮಾತ್ಮನಿಗೆ ಸಮರ್ಪಣ ಮಾಢುತ್ತಲೇ ಇರುವರು. ಮತ್ತೆ ೭೨ಸಾವಿರ ನಾಡೀ ದೇಹದಲ್ಲಿದ್ದು ಆ ಎಲ್ಲ ನಾಡಿಗಳಲ್ಲಿಯೂ ಸಂಚಾರ. ಇದು ಬಂದಾದರೆ ಶ್ವಾಸ ಬಂದಾದರೆ ಹೆಣವೆಂದು ಎಂಥ ಸಾರ್ವಭೌಮ ರಾಜನದೇ ಇರಲಿ, ಹೊರಗೆ ಹಾಕುವರು. ಗೌರಿ ಆರತಿ ಆದಾಗ ಶುಕ್ರವಾರ ಸಂಜೆವೇಳೆ ಕಸವನ್ನು ಕೂಡ ಇರಲಿ ಅಂತಾ ಇಡುವರು. ಆದರೆ ವಾಯುದೇವರು ದೇಹವನ್ನು ಬಿಟ್ಟು ಹೊರಟ ತಕ್ಷಣ ಬೇಕಾದಷ್ಟು ಪ್ರೀತಿಯವರಿರಲಿ ತ್ಯಾಗ ಮಾಡುವರು. ವಾಯುದೇವರ ಹೆಗಲಮೇಲೆ ಸ್ವಾಮಿ ಉಪಸ್ಥಿತನಿರುವುದರಿಂದ ಜೀವವಾಯು ಸಹಿತ ಪರಮಾತ್ಮ ಹೋಗುತ್ತಾನೆ. ಗಂಟಲಲ್ಲಿ ವಾಯು ಭಾರತಿ ಇದ್ದು ಅನ್ನ ನೀರಿಗೆ ಅಸ್ಪದ ಕೊಡುವರು. ಮಾತಾಡಲು ಕೂಡ ಅವರೇ ಕೊಡುವರು. ಜೀವ ಎಚ್ಚರಿಕೆ ಇದ್ದಾಗ ಲಕ್ಷಕೊಟ್ಟರೆ ಶ್ವಾಸೋಚ್ಛಾಸ ಗೊತ್ತಾಗುವುದು. ನಿದ್ರೆಯಲ್ಲಿ ನಾವು ಮಲಗಿ ನಿದ್ರಿಸಿದಂತೆ ವಾಯು ದೇವರೂ ನಿದ್ರೆ ಮಾಡಿದರೆ ಜಗತ್ತಿನಲ್ಲಿ ಯಾವ ಜೀವಿಯೂ ಜೀವಿಸಿರಲಾರನು. ಅವರು ಜಾಗರ ಮೂರುತಿ, ಈ ವಾಯು ದೇವರ ಸಹಿತನಾಗಿ ಅಂದರೆ ಅವರಂತರ್ಗನಾಗಿಯೇ ಪರಮಾತ್ಮಗೆ ಪೂಜಾ ನೈವಿದ್ಯ. ಎಲ್ಲ ಜೀವಿಗಳಲ್ಲಿಯೂ ದೇವತೆಗಳಲ್ಲಿಯೂ ದೈತ್ಯರಲ್ಲಿಯೂ ವಾಯು ಅಂತರ್ಗತ ಪರಮಾತ್ಮ ನಿಂತು ಕಾರ್ಯಮಾಡಿಸುವನು. ಮೊದಲು ತಾನು ಮಾಡಿ ಮಾಡಿಸುವನು. ಸ್ವಾಮಿ ೨೪ ತತ್ವಗಳಿಂದ ದೇಹ ಯಾತ್ರಾ ನಡೆಸುವನು. ೨೪ ಮಂದಿ ದೇವತೆಗಳನ್ನು ನಿಯಮಿಸಿದ್ದಾನೆ ಅದರಂತೆ ಆ ತತ್ವಾಭಿಮಾನಿ ದೈತ್ಯರೂ ನಮ್ಮ ದೇಹದಲ್ಲಿ ಇದ್ದಾರೆ. ಇವರು ದುಷ್ಟಕಾರ್ಯಕ್ಕೆ ಪ್ರೇರಿಸುವರು. ದೇವತೆಗಳು ಸತ್ಕಾರ್ಯಕ್ಕೆ ಪ್ರೇರಿಸುವರು.

ಹೀಗೆ ಈ ತತ್ವಗಳ ದೇಹ ನಿರ್ಮಿಸಿ ಒಂದೊಂದು ತತ್ವಕ್ಕೆ ಒಬ್ಬೊಬ್ಬ ದೇವತೆಗಳನ್ನು ನೇಮಿಸಿ ಅವರೊಳಗೆ ಇದ್ದು ಚಲನ ವಲನ ಕೂಡಾ ಮಾಡಿ ಅವರಿಂದ ಮಾಡಿಸುವನು. ಅಂದರೆ ಇಲೆಕ್ಟ್ರಿಕ್ ಕರಂಟದಿಂದ ಕಾರಖಾನೆ ನಡೆಸುವಂತೆ ಮುಖ್ಯ ಮೇನ್ ಸ್ವಿಚ್ ಚಾಲೂ ಮಾಡಿದ ಕೂಡಲೇ ಎಲ್ಲ ಕಡೆಯ ಕಾರ್ಯ ನಡೆಯುವವು. ದಶ ಕರಣಗಳೆಂದರೆ ಜ್ಞಾನೇಂದ್ರಿಯ ಕರ್ಮೇಂದ್ರಿಯ ೧೦ ಮನಗನ್ನೂ ಹಿಡಿದು ೧೧ ಇಂದ್ರಿಯಗಳು ಇವುಗಳಿಗೆಲ್ಲ ಒಬ್ಬೊಬ್ಬ ಪ್ರೇರಣೆ ಮಾಡುವ ನಿಯಮಾಕರು ಅವರು ಕೂಡಾ ಅಸ್ವತಂತ್ರರು ತಮ್ಮ ಒಡೆಯನ ಅಪ್ಪಣೆ ಪಡೆದು ಕಾರ್ಯ ಮಾಡುಯಬೇಕು. ಆ ಒಡೆಯ ವಾಯು ಅವನು ಕೂಡ ಸ್ವಾಮಿಯ ಆಜ್ಞೆಯಂತೆ ಕಾರ್ಯ ಮಾಡುವವ. ಅಸ್ವತಂತ್ರ. ನಿರ್ಜೀವಿ ಯಂತ್ರದಿಂದ ಈ ದೇಹ ಎಲ್ಲವನ್ನೂ ನಾ ಮಾಡಿದೆ ಅಂತಾ ಜಂಬ ಕೊಚ್ಚಿಕೊಳ್ಳುವದು ನೋಡಿದರೆ ಶುದ್ಧ ಮೂರ್ಖತನ ಅನಿಸುತ್ತದೆ. ಅದರೂ ಪರಮಾತ್ಮ ಮಾಯಾ ಹಾಕಿ ನಿಜವಾದ ಆ ಜ್ಞಾನ ಮರೆ ಮಾಡಿದ್ದರಿಂದ ನಾವು ಪೂರ್ಣ ಸ್ವತಂತ್ರ ಅಂತಾ ಸೊಕ್ಕಿನಿಂದ ಗರ್ವ ಪಡುತ್ತೇವೆ ಆದರೆ ಅದೇ ಒಳ್ಳೆಯ ಕಾರ್ಯ ಶುರು ಮಾಡಿ ಅದು ಕೆಟ್ಟಿತೆಂದರೆ ಹಾನಿ ಆದರೆ ಮಾತ್ರ ದೇವರು.ಆಗ್ಗೆ ನೆನಪಾಗಿ ಅವನೇ ಯಶ ಕೊಡಲಿಲ್ಲ. ಹೀಗೇಕೆ ಮಾಡಿದನೋ ದೇವರು. ಅನ್ನುವುದು ರಾಜಸರ ಸ್ವಭಾವ, ಸಾತ್ವಿಕರು ಸ್ವಾಮಿಯೇ ಎಲ್ಲವನ್ನೂ ನಮ್ಮಲ್ಲಿ ನಿಂತು ಮಾಡಿಸುವನುಒಳ್ಳೆಯದೂ ಅವನೇ ಮಾಡಿಸುವವನು ಕೆಟ್ಟದ್ದೂ ಅವನೇ ಮಾಡಿಸುವವ. ನಮ್ಮದೇನು ಸ್ವತಂತ್ರ ಅಂದುಕೊಂಡು ಯಾವುದಕ್ಕಾದರೂ ಹಿಗ್ಗದೇ ಕುಗ್ಗದೇ ಪ್ರಸನ್ನರಾಗಿಯೇ ಇರುವರು. ಸತ್ಕಾರ್ಯ ಮಾಡುತ್ತಾ ಸ್ವಾಮಿಯ ಧ್ಯಾನದಲ್ಲೆ ನಿರತರಾಗಿ ಒಂದು ಕ್ಷಣ ಕೂಡಾ ವ್ಯರ್ಥ ಕಾಲ ಕಳೆಯರು. ತಾಮಸರಂತೂ ಜಗತ್ತೇ ತಮ್ಮಿಂದ ನಡೆಯುವದೆಂಬಂತೆ ತಿಳಿದು ಅಹಂಕಾರ, ದರ್ಪ ಜಂಬದಿಂದಲೇ ಮೆರೆಯುವರು.

ಯಂತ್ರದ ಗೊಂಬೆಹೇಗೆ ಕೀಲ ಕೊಟ್ಟರೆ ನಡೆಯುವುದೋ ಹಾಗೆ ಜಡವಸ್ತು ಇದ್ದಂತೆ ಇದ್ದು ಸೂತ್ರಧಾರನಾದ ವಾಯು ಅಂತರ್ಗತ ಪರಮಾತ್ಮ ನಿಂತು ಕೀಲೀ ಕೊಟ್ಟರೆ ಸರಿ. ಇಲ್ಲವಾದರೆ ಕಲ್ಲಿನಂತೆ ಸ್ಥಬ್ಧತೆಯೇ ಈ ದೇಹಕ್ಕೆ. ಇಂಥಿಂಥ ವಿಷಯಗಳನ್ನೆಲ್ಲ ಜ್ಞಾನಿಗಳ ಸಮೀಪದಲ್ಲಿದ್ದರೆ ತಾನಾಗಿಯೇ ಕಿವಿಗೆ ಬೀಳುವವು. ಆದರಿಂದ ಅಂತಃಕರಣ ಶುದ್ದಿ ಆಗಿ ದೇವರಲ್ಲಿ ಗುರು ಹಿರಿಯರಲ್ಲಿ ಭಕ್ತಿ ಬೆಳೆಯುತ್ತಾ ನಮ್ಮ ಆಚರಣೆಯಲ್ಲಿಯೂ ಸುಧಾರಣೆ ಆಗಿ ದೇವರ ನಾಮಸ್ಮರಣೆ ಭಜನೆ ಪೂಜಾದಿಗಳನ್ನು ಮಾಡುವ ಮನಸ್ಸಾಗಿ ದುರ್ಮಾರ್ಗದ ಕಡೆಗೆ ಬೆನ್ನು ಮಾಡಿ ಸನ್ಮಾರ್ಗದ ಹಾದಿ ಹಿಡಿದಂತೇ ಆಗಿ ಹಿಂದೆ ಮಾಡುತ್ತಿದ್ದುದೆಲ್ಲ ಹೇಯವನಿಸುವುದು. ಮೊದಲು ದೇವರ ಕಡೆಗೆ ಬೆನ್ನು ಇದ್ದದ್ದು ಹೆಚ್ಚು ಗಮನ ಮಾಡಬೇಕೆಂಬ ಇಚ್ಛೆ ಸುರುವಾಯಿತೆಂದರೆ ನಮ್ಮ ಉದ್ದಾರ ಹಾದಿ ತೆರೆದಂತೆ ಆಗುವದು. ಅದಕ್ಕಾಗಿಯೇ ಮೊದಲು ದೇವರಿಗೆ ಬೇಡಿಕೊಳ್ಳುವದಿದ್ದರೆ ಸಾಧು ಸಜ್ಜನರ ಸಂಗವನ್ನೇ ಬೇಡಿ ಕೊಳ್ಳಬೇಕು. ಅಂಥವರ ಗುಂಪಿನಲ್ಲಿದ್ದ ಉಪದೇಶ ಮಾಡುವ ಅನೇಕ ಮಹಾನುಭಾವರು ಗುರುಗಳೇ ಸರಿ. ಆ ಗುರುಗಳ ಸೇವೆ ಮಾಡುತ್ತಾ ಆಜ್ಞೆ ಪರಿಪಾಲಿಸುತ್ತಾ ಅಂಥವರನ್ನು ಪ್ರಸನ್ನೀಕರಿಸಿಕೊಂಡರೆ ಆ ಗುರುಗಳು ಒಲಿದರೆ ಹರಿವಲಿವನು.

ಭಗವದ್ಭಕ್ತರ ಗುರುಗಳ ಸೇವಾ, ಸಜ್ಜನ ಸಹವಾಸದ್ದು ಯಾವ ಪುರಾಣಗಳಲ್ಲಿ ಆಗಲೀ ಪ್ರವಚನದಲ್ಲಿ ಆಗಲೀ ದಾಸರೆಲ್ಲರ ಉಪದೇಶದಲ್ಲಿ ಆಗಲೀ ಪದೇ ಪದೇ ಒತ್ತಿ ಹೇಳಿತ್ತಿದ್ದದ್ದು ಯಾಕೆ? ಅಂದರೆ ಮನಸ್ಸು ಸದಾ ವಿಷಯ ಚಿಂತನೆಯಲ್ಲೇ ಮಗ್ನವಾಗಿ ನಮ್ಮ ಹೃದಯದಲ್ಲೆಲ್ಲ ಅಮವಾಸಿ ರಾತ್ರಿಯ ಕತ್ತಲವೇ ಕವಿದು ಕೇವಲ ವಿಷಯಗಳ ಚಿಂತೆಯೇ ಬೆಳೆದು ಬೆಳೆದು ಬೆಟ್ಟದಷ್ಟಾಗಿ ಮಿಣಿ ಮಿಣಿ ಪ್ರಣತಿಯ ಪ್ರಕಾಶದಂತೆ ಇದ್ದ ಬೆಳಕೂ ಕೂಡಾ ಜೀವನಿಗೆ ಮರೆ ಆಗಿ ಆ ಚಿಂತೆಯ ಬೆಟ್ಟದಿಂದ ಇದ್ದಷ್ಟು ಅಲ್ಪ ಸ್ವಲ್ಪಜ್ಞಾನ ಕೂಡಾ ಕಾಣಿಸದಾಗಿ ಮುಂದೆ ಕತ್ತಲೇ(ಆಜ್ಞಾನ)ಯಲ್ಲೇ ಜೀವನ ನಡೆದು ಕಡೆಗೆ ದೊಡ್ಡ ಕೂಪದಲ್ಲೇ ಬೀಳುವಂತಾಗುವುದು. ಆ ಪ್ರಣತಿಯ ಪ್ರಕಾಶ ಕೂಡಾ ಹಿಂದಿನ ಜನ್ಮದಲ್ಲಿ ಕ್ವಚಿತ ಸತ್ಕರ್ಮ ಒಳ್ಳೇ ಸಹವಾಸ ಸ್ವಲ್ಪೇ ಕಾಲವಾಗಿದಿದ್ದರೆ ಪುಣ್ಯ ಪ್ರಭಾವ, ಆ ಪುಣ್ಯ ಸ್ವಲ್ಪ ಸಿಕ್ಕೂ ಉಪಯೋಗಿಸಿಕೊಳ್ಳದೇ ಪರಿವಾರದ ಪತ್ನಿ ಪುತ್ರಾದಿಗಳ, ತನ್ನ ಸ್ವಂತದ ಸುಖದ ಸಲುವಾಗಿಯೇ ಚಿಂತನೆ ಮಾಡುತ್ತಾ ಆ ಪ್ರಣತಿ ದೀಪದ ಬೆಳಕೂ ಕಾಣದಂತೆ ಚಿಂತೆಯ ಬೆಟ್ಟ ಮರೆ ಮಾಡಿ ಕೊಂಡರೆ ತನ್ನ ಜೀವವನ್ನೇ ನಾಶ ಮಾಡಿಕೊಳ್ಳವನು.

ದೇವರ ಮಹಿಮೆ ಕೇಳುತ್ತಿರಲು ಅದು ಅಪಾರವಿದೆ. ಇಲ್ಲಿಗೆ ಮುಗಿಯಿತು ಅಂತಾ ಇಲ್ಲ. ಸಮುದ್ರ ತೆರಗಳಿದ್ದಂತೆ ಅದರಂತೆ ಪ್ರಾಪಂಚಿಕನ ಚಿಂತೆಯೂ ಅಪಾರ. ಅದು ಮುಗಿಯುವುದೇ ಇಲ್ಲ. ಕಾರಣ ಈ ರೀತಿಯಿಂದಿರುವ ಸಾಂಸಾರಿಕ ಜೀವರಿಗೆ ದಾಸರು ಒತ್ತಿ ಧೈರ್ಯ ಹೇಳಿದ್ದಾರೆ. “ಚಿಂತಿ ಯಾಕೆ ಮಾಡುತೀ: ಚಿನುಮಯನಿದ್ದಾನೇ ಪ್ರಾಣಿ” ಎಲ್ಲಿದ್ದಾನೇ? ಅನ್ನುವಿಯಾ, “ ಎಳ್ಳು ಮನೆಯ ಮುಳ್ಳು ಕೊನೆಯ : ಪೊಳ್ಳ ಬಿಡದೆ ಒಳಗೇ: ಹೂರಗೇ: ಎಲ್ಲಾ ಠಾವಿನಲೀ: ಲಕುಮಿ ನಲ್ಲನಿದ್ದಾನೇ: ಪ್ರಾಣೀ: ೧ : ಅಂತಾ ಹೇಳಿದ್ದಾರೆ. ಎಲ್ಲ ಶ್ರೀ ಹರಿದಾಸರು ಸರ್ವರಿಗೂ ಸರಳಾರ್ಥದಿಂದ ಪದ ಪದ್ಯ ರೂಪದಿಂದ ನಮ್ಮ ನಡಾವಳಿಗಳನ್ನು ಸರಿಪಡಿಸಿಕೊಳ್ಳಲು ಮುಂದೆ ಬರುವ ಎಲ್ಲ ಕಾಲದ ಪೀಳಿಗೆಗೂ ಉದ್ಧಾರವಾಗಲು ಎಂದಿಗೂ ಆರದ ಲಾಯಿಟ ಹಚ್ಚಿ ಹೋಗಿದ್ದಾರೆ. ಕತ್ತಲೆ ಮನೆಯಿಂದ ಹೊರಗೆ ಬಂದು ಪ್ರಕಾಶವಿದ್ದಲ್ಲಿ ಹೋಗಿ ವಾಸಿಸಿರಿ. ಅಂತಾ ಹೇಳಿದ್ದಾರೆ ಸಾಧು ಸಜ್ಜನರ ಸಹವಾಸವೇ ಜ್ಞಾನವೆಂಬ ದೀಪದಿಂದ ಪ್ರಕಾಶವಿದ್ದ ಸ್ಥಳ ಸತ್ಸಂಗದಿಂದಾಗುವ ಫಲ ಎಂಥಾದು ? ಅಂತಾ ನಾರದರು ಶ್ರೀಕೃಷ್ಣಗೆ ಕೇಳಿದರಂತೆ. ಆಗಾ ಅವನು ಹಾಳಭಾವಿಯಲ್ಲಿ ಒಂದು ಓತೀಕಾಟವಿದೆ. ಅದಕ್ಕೆ ಹೋಗಿ ಕೇಳು ಅನ್ನಲು ಅಲ್ಲಿ ಹೋಗಿ ಅದಕ್ಕೆ ಇದೇ ಪ್ರಶ್ನೆ ಕೇಳಿದೊಡನೇ ಅದು ಪ್ರಾಣ ಬಿಟ್ಟಿತು. ಅನ್ನುತ್ತಲೇ ಹಾಗಾದರೆ ಗಿಡದ ಮೇಲೆ ಒಂದು ಗಿಳಿ ಇದೆ ಅದನ್ನು ಕೇಳು ಅಂತಾ ಹೇಳುಲು ಅದರಂತೆ ಮಾಡಲು ಅದು ಹಾಗೇ ಆಯಿತು ಎನ್ನಲು ರಾಜನಲ್ಲಿ ಒಳ್ಳೇ ಕುದುರೆ ಆದೆ. ಅದನ್ನು ಕೇಳು ಎನ್ನಲು ಅದೂ ಪ್ರಾಣಬಿಡಲು, ಮತ್ತೆ ರಾಜನಿಗೆ ಪುತ್ರೋತ್ಸವ ಆಗಿದೆ. ಆ ಶಿಶುವಿಗೆ ಕೇಳು ಅಂತಾ ಹೇಳಿದನು. ಆಗ ನಾರದರು ಸ್ವಾಮಿ ಈ ಪ್ರಾಣಿಗಳು ಪ್ರಶ್ನೆ ಕೇಳಿದೊಡನೇ ಪ್ರಾಣ ಬಿಟ್ಟಂತೆ ಆ ಶಿಶು ಪ್ರಾಣ ಬಿಟ್ಟರೆ ನನ್ನ ಗತಿ ಏನು? ಅಪರೂಪಕ್ಕೆ ರಾಜನಿಗೆ ಪುತ್ರ ಜನಿಸಿದಾಗ ನನ್ನಿಂದ ಮರಣ ಹೂಂದಿದರೆ ಹೇಗೆ? ಅಂತಾ ಅನುಮಾನಿಸಲು ಇಲ್ಲ ನಾರದರೇ ಈಗ ನಿಮಗೆ ಉತ್ತರದೊರೆಯುವುದು ಅಂತಾ ಕಳಿಸಿದನು. ಅಲ್ಲಿ ಶಿಶುವಿಗೆ ನಾರದರು ಕೇಳಿದರು. ಸಜ್ಜನ ಸಂಗದಿಂದ ಫಲ ಏನು? ಅಂತಾ? ಆಗ ಆ ಶಿಶು ಕೈ ಜೋಡಿಸಿ ಮಹಾಸ್ವಾಮಿ ನಾನು ಹೀನ ಓತೀಕಾಟನಾಗಿ ಹಾಳು ಬಾವಿಯಲ್ಲಿ ಬಿದ್ದಿದ್ದೆ. ಅಲ್ಲಿ ನೀವು ಒಂದು ಮಿನಿಟೇ ನಿಂತು ಕೇಳಿದಿರಿ. ಅಷ್ಟೇ. ನಿಮ್ಮಂಥ ಸಜ್ಜನರ ಸಹವಾಸ ದರ್ಶನದ ಫಲದಿಂಧ ಗಿಳಿ ಜನ್ಮ ಬಂದಿತು. ಅಲ್ಲಿಯೂ ನೀವು ಅಷ್ಟೇ ವೇಳೆ ಆಗಮಿಸಿ ದರ್ಶನವಿತ್ತಿದ್ದಕ್ಕೆ ರಾಜನಲ್ಲಿ ಕುದುರೆ ಜನ್ಮ ಪಡೆದೆ ಆಗೂ ನೀವು ಬಂದು ಸಹವಾಸ ದರ್ಶನದ ಭಾಗ್ಯ ಕೊಟ್ಟಿದ್ದರಿಂದ ರಾಜ ಕುಮಾರನಾದೆ ಎಂದು ನಮಸ್ಕಾರ ಮಾಡಿತಂತೆ. ಸಂಗತಿ ಫಲ (ಕವಿತಾ ಒಂದರಲ್ಲಿದ್ದ ಜೋ ಜೈಸೀ ಸಂಗತ ಕರತೇ ಹೈ ವೇ ವೈಸಾ ಫಲಹೀ ಪಾತೇ ಹೈ ಅಂತಾ ) ಹಾಗೆ ನಿಯಮ ಆದೆ.

ಇನ್ನೊಂದು ಸಂದರ್ಭದಲ್ಲಿ ನಾರದರು ತಮ್ಮ ಹಿಂದಿನ ಜನ್ಮದಲ್ಲಿ ದಾಸೀ ಪುತ್ರರಾಗಿದ್ದು ಚಾತುರ್ಮಾಸ್ಯಕ್ಕೆಂದು ಆ ಸ್ಥಳದ ದೇವಾಲಯದಲ್ಲಿ ಒಬ್ಬ ಯತಿಗಳೂ ಭಗವದ್ಭಕ್ತರೂ ನದೀತೀರವೆಂದು ೨ ತಿಂಗಳು ಇದ್ದರು. ಆಗಾ ಅಲ್ಲಿಯ ಕೆಲಸಕ್ಕಾಗಿ ಆ ದಾಸಿಯು ಸಮೀಪದ ಗುಡಿಸಲಲ್ಲಿ ಈ ಒಬ್ಬನೇ ಮಗನೊಂದಿಗೆ ಇರುತ್ತಿದ್ದು, ಕಸ ಮುಸುರೆ ಮಾಡುತ್ತಿದ್ದಳು ಈ ಬಾಲಕನೂ ಅವರ ಬಟ್ಟೆ ಬರೆ ಒಗೆದಿಡುವುದು, ಹೂ ತರವುದು ಉಪಕರಣೆಗಳನ್ನು ತೊಳೆಯುವುದು ಮತ್ತೇನು ಕೆಲಸ ಹೇಳಿದ್ದು ಮಾಡುತ್ತಿದ್ದರು. ಅವರು ಹೇಳುತ್ತಾ ಪಾಠ ಪುರಾಣಾದಿಗಳನ್ನು ಕೇಳುತ್ತಾ ತನಗೆ ತಿಳಿಯದ್ದಿದ್ದದ್ದು ಕೇಳುತ್ತಾ ಅವರ ಸಹವಾಸದಲ್ಲೇ ಅವರ ನುಡಿಗಳ ಕಡೆಗೇ ಗಮನಕೊಡುತ್ತಾ ಅವರ ಸೇವೆ ಮಾಡುತ್ತಿದ್ದನು.

ಒಂದು ದಿನ ತಾಯಿ ಆಕಳಿಗೆ ಮೇವು ಹಾಕಲು ಕತ್ತಲೆಯಲ್ಲಿ ಹೋದಾಗ ಹಾವು ಕಡಿದು ಮೃತಳಾದಳು. ಈಗ ಒಬ್ಬಂಟಿಗನಾದ ಬಾಲಕನು ಆ ಋಷಿ ಮುನಿಗಳಾದ ಭಗವದ್ಭಕ್ತರ ಸಂಗಡ ನಾನೂ ನಿಮ್ಮ ಜೊತೆಗೆ ಬರುವೆನು? ನೀವೇ ನನಗೆ ರಕ್ಷಕರೆಂದನು. ಅವರು ಕರೆದುಕೊಂಡು ಹೋದಮೇಲೇ ಅವರು ಹೇಳಿದ ಪ್ರಕಾರ ಧರ್ಮದಿಂದಿದ್ದು ಸದಾಚರಣೆಯಿಂದ ಭಕ್ತಿಯಿಂದ ಭಗವಂತನ ಧ್ಯಾನ ಮಾಡಿ ಇಡೀ ಜೀವನ ಆ ಗುರುಗಳ ಹೇಳಿಕೆಯಂತೇ ಇದ್ದು ಜನ್ಮ ನೀಗಿದನು. ಪುಣ್ಯ ಪುರುಷರ ಸಹವಾಸದ ಫಲದಿಂದ ನಾನು ನಾರದನೆಂದು ಬ್ರಹ್ಮಪುತ್ರನಾಗಿ ಜನ್ಮಪಡೆದೆ ಅಂತಾ ಅವರೇ ತಮ್ಮ ಪೂರ್ವದ ವೃತ್ತಾಂತವನ್ನು ಶ್ರೀ ವೇದವ್ಯಾಸರ ಮುಂದೆ ಹೇಳಿಕೊಂಡಿದ್ದು ಪುರಾಣದಲ್ಲಿದ್ದುದ್ದು ಬಹುಶಃ ಬಹಳ ಜನರಿಗೆ ಶೃತ್ರುವಾದದ್ದು ಇದೆ. ಇನ್ನು ಈ ಜನ್ಮಾಂತರ ಪುಣ್ಯದ್ದು, ಸಹವಾಸದ್ದು ಇನ್ನೂ ದೃಷ್ಟಾಂತ ಹೇಳಿದ್ದಾರೆ. ಅದು ಪುರಾಣದ್ದೆ. ಜಡ ಭರತನಿಗೆ ಚಿಗರಿ ಜನ್ಮ ಸಹವಾಸದ್ದೆ ಫಲ. ಸರ್ವಸಂಗ ಪರಿತ್ಯಾಗ ಮಾಡಿ ವೈರಾಗ್ಯದಿಂದ ನದಿ ದಂಡೆಗೆ ತಪಸ್ಸಿಗೆ ಕುಳಿತಾಗ ತುಂಬ ಗರ್ಭಿಣಿಯಾದ ಚಿಗರಿ ನೀರು ಕುಡಿಯಲು ಬಂದು ನೀರಿಗೆ ಬಾಯಿ ಹಚ್ಚುವಷ್ಟರಲ್ಲಿ ಹುಲಿ ಗುಡುಗು ಕೇಳಿಸಿತು. ಕೂಡಲೇ ಜೀವದಂಜಿಕೆಯಿಂದ ಏನೂ ತೋಚದೇ ನೀರಿನಲ್ಲಿ ಜಿಗಿಯಿತು. ಆಗ ಪ್ರಸವಿಸಿತು. ಅದೇ ಹುಟ್ಟಿದ ಚಿಕ್ಕ ಎಳೆಯ ಆ ಮರಿ ನದಿ ದಂಡಿಗೆ ನೀರಿನಲ್ಲಿ ಬಿದ್ದದ್ದು ಈ ಜಡ ಭರತನಿಗೆ ಕಾಣಿಸಿತು. ಕರುಣೆ ಬಂದು ಪಾಪ ನೀರಿನಲ್ಲಿ ಒದ್ದಾಡಿ ಸಾಯುವುದಲ್ಲ ಅಂತಾ ಕನಿಕರದಿಂದ ಮೇಲೆ ತಂದು ತನ್ನ ಉತ್ತರಿಯದಿಂದ ಮೈ ಕೈ ಒರಸಿದನು. ಅದಕ್ಕೆ ನಡಗು ಕಡಿಮೆ ಮಾಡಲು ಒಣ ಹುಲ್ಲು ತಂದು ಉರಿ ಹಚ್ಚಿ ಬಎಚ್ಚಗೆ ಮಲಗಿಸಿದನು. ಅದರ ಸಲುವಗಿ ಹೊಟ್ಟೆಗೆ ಹಾಲು ಬೇಕೆಂದು ಆಕಳು ತರಿಸಿ ಆ ಹಾಲು ಕುಡಿಸುವುದು. ಅದರ ಪರಾಮರಿಕೆಯಲ್ಲಿ ಧ್ಯಾನಕ್ಕೆ ವೇಳೆ ಕಡಿಮೆಯಾಗುತ್ತ ನಡೆಯುವುದು. ಕಡೆಗೆ ಅದರ ಶೂಶ್ರೂಷಾ ಮುಗಿಸಿ ಧ್ಯಾನ ಮಾಡುತ್ತಿದ್ದಾಗ ಕೂಡಾ ಅದು ಬಂದು ತೊಡೆಯ ಮೇಲೆ ಕೂಡುವುದು, ಮೈ ನೆಕ್ಕುವುದು, ಭುಜದ ಮೇಲೆ ಬಂದು ಕೂಡುವುದು, ಹೀಗೆಲ್ಲಾ ಅತಿ ಸ್ನೇಹ ಮಾಡುತ್ತಿತ್ತು. ಕಣ್ಣು ಮುಚ್ಚಿ ಧ್ಯಾನ ಮಾಡುವಾಗ ಕೂಡಾ ಚಿಗರಿ ಚಿತ್ರ ಕಣ್ಣಿಗೆ ಕಟ್ಟುವಂತಾಗಿತ್ತು. ಇಷ್ಟು ಮಮತೆ ಬೆಳೆದಾಗ ಒಂದು ದಿನ ಇವರು ಸ್ನಾನ ಮಾಡಿ ಬರುವಾಗ ಅಲ್ಲಿ ಬಂದ ಚಿಗರಿ ಹಿಂಡಿನೊಂದಿಗೆ ಚಿಗರಿ ಹೋಗಿಬಿಟ್ಟಿತು. ಆಸ್ರಮದಲ್ಲಿ ಚಿಗರಿ ಇಲ್ಲ ಅಂತ ತಿಳಿದು ಅಲ್ಲಲ್ಲಿ ಹುಡುಕುತ್ತಿದ್ದು ಚಿಗರಿಗೆ ಏನಾಗಿದೆ, ಯಾರು ಒಯ್ದರೋ ಅದಕ್ಕೆ ಏನಾಯಿತೋ, ಏನು ತೊಂದರೆಯಾಗುತ್ತಿದೆಯೋ, ಅಂತಾ ಅದನ್ನೇ ಧ್ಯಾನ ಮಾಡುತ್ತಿದ್ದು. ಒಂದು ದಿನ ಪ್ರಾಣ ಬಿಡಲು ಚಿಗರಿ ಜನ್ಮವೇ ಬಂದಿತು. ಸಾಯುವ ಮುಂದೆ ಏನೂ ಸ್ಮರಣೆ ಬರುವುದೋ ಆ ಜನ್ಮ ಬರುವದಂತೆ ಎಂದು ಗೀತೆಯಲ್ಲಿ ಪರಮಾತ್ಮನೇ ಹೇಳಿದ್ದಾನೆ. ಆ ಪಶುಯೋನಿ ಬಂದರೂ ಪುಣ್ಯ ಸಾಧನ ಪೂರ್ವ ಜನ್ಮದಲ್ಲಿ ಮಾಡಿದ್ದರಿಂದ ಹಿಂದಿನ ಜನ್ಮದಲ್ಲಿ ತಾನು ಚಿಗರಿಯಲ್ಲಿ ಮೋಹ ಅತಿಯಾಗಿ ಮಾಡಿದಕ್ಕೆ ಈ ಜನ್ಮ ಬಂದಿದೆ ಅಂತ ಸ್ಮರಣೆಗೆ ಬಂದು ಈಗ ಮಾತ್ರ ಸಂಗ ರಹಿತನಾಗಿ ಈ ಜನ್ಮ ಕಳೆಯುವೆನು ಎಂದು ಯಾವ ಚಿಗರಿಗಳ ಸ್ನೇಹ ಮಾಡದೇ ಇದ್ದು ಜನ್ಮ ನೀಗಿದ ರಾಜನಿಗೆ ಹಿರಿಯ ಮಗನಾಗಿ ಜನಿಸಿದರೂ ರಾಜದ ಆಶಾ ಮಾಡದೇ ಮನೆ ಬಿಟ್ಟು ಅವಧೂತನಾಗಿ ಅಲ್ಲಲ್ಲಿ ಚಲಿಸುತ್ತಾ ದೇಹಾಭಿಮಾನ ಬಿಟ್ಟು ತಿರುಗುತ್ತ ದೇವರ ಧ್ಯಾನದಲ್ಲಿ ಮಗ್ನನಾಗಿ ಅನೇಕ ಅಪಮಾನಕರ ಮಾತುಗಳನ್ನು ಸಹಿಸುತ್ತಾ ಕಿವುಡನಂತೆ ಕೇಳುವಂತೆ, ಮೂರ್ಖನಂತೆ, ಹುಚ್ಚನಂತೆ, ಜೀವನ ಸಾಗಿಸುವನು.

ಅದು ಎಂತದೇ ಇರಲಿ ಶ್ರೀ ಹರಿ ಪ್ರಸಾದವೆಂದು ಸ್ವಲ್ಪ ಸಿಗಲಿ, ಬಹಳ ಸಿಗಲಿ, ಅಷ್ಟೆ ತಿಂದು ಗುಡಿ ಗುಂಡಾರದಲ್ಲಿ ಮಲಗುವುದು, ಹೀಗೆ ಇರುವಾಗ ಬಿಟ್ಟಿ ಕೆಲಸಕ್ಕೆ ಯಾರ್ಯಾರೋ ಕರೆದು ಹಚ್ಚುವರು. ಅದನ್ನೂ ದೇವರ ಸೇವೆ ಎಂದೇ ಮಾಡುವುದು. ಹೀಗಿರಲು ರಹುಗಣರಾಜನು ಪಾಲಕಿಯಲ್ಲಿ ಕಪಿಲ ಋಷಿಗಳ ಕಡೆಗೆ ಜ್ಞಾನೋಪದೇಶಕ್ಕಾಗಿ ಹೊರಟಾಗ ರೋಗಿಯಾದ ಒಬ್ಬನಿಗೆ ದೇಹಾಲಸ್ಯವಾಗಲು ಈ ಜಡಭರತ ಬಿಟ್ಟೀ ಹೊಲ ಕಾಯುತ್ತಿದ್ದದ್ದು ಕಾಣಿಸಲು ಕೊಳಕು ಬಟ್ಟೆ ಉಟ್ಟ ಧೃಡಾಂಗ ವ್ಯಕ್ತಿಯನ್ನು ಕಂಡು ’ರಾಜಾಜ್ಞೆಯಾಗಿದೆ. ನಡಿ ಮೇಣೆ ಹೊರಲು’ ಅಂತಾ ಕರೆದರು. ಆಗ ಮರು ಮಾತಿಲ್ಲದೇ ಮೇಣೆ ಹೊತ್ತು ನಡೆಯುತ್ತಿರಲು ಮಾರ್ಗದಲ್ಲಿ ಹುಳಹುಪ್ಪಡಿಗಳು ಕಾಣಲು ಅದಕ್ಕೆ ಹಿಂಸೆಯಾಗಬಾರದೆಂದು ಟಣ್ಣನೆ ಹಾರುತ್ತಿರಲು ಒಂದು ಎರಡು ಸಲ ಹೊಸಬನೆಂದು ರಾಜ ತಾಕಿತು ಮಾಡಿದ. ಆದರೂ ಮತ್ತೆ ಹೀಗೆ ನಡೆಯುತ್ತಿರಲು ’ನಾನು ರಾಜನು ನಿನಗೆ ಶಾಸನ ಮಾಡುತ್ತೇನೆ. ಹೀಗೇಕೆ ಮಾಡುವಿ ? ಪಾಪ ನೀನು ಸೊರಗಿದ್ದಿ, ಶಕ್ತಿ ಇಲ್ಲ, ನೀನೊಬ್ಬನೇ ಭಾರ ಹೊತ್ತಿರುವಿ ಅಲ್ಲವೇ?’ ಎಂದು ಅನೇಕ ಅಣಕದ ಮಾತನ್ನಾಡಿದನು. ಆಗ ಜಡಭರತನು ಜ್ಞಾನ ದೃಷ್ಟಿಯಿಂದ ವಿಚಾರ ಮಾಡಿ ಈ ರಾಜ ಯೋಗ್ಯನಿದ್ದು ಸುಜೀವಿ ಇದ್ದು ಕಲಿ ಆವೇಶದಿಂದ ಅಜ್ಞಾನದಿಂದ ಮುಚ್ಚಿದ್ದಾನೆ ಎಂದು ವಿಚಾರಿಸಿ ಯಾರೊಂದಿಗೂ ಮಾತನಾಡದವನು ರಾಜನಿಗೆ ಹೇಳಿದನು. ’ರಾಜಾ ನೀನು ಅಹಂಕಾರದಿಂದ ನಾನು ರಾಜ’ ಶಾಸನ ಮಾಡುವೆನೆಂದು.’ ಹೇಳುತ್ತಿರುವಿ ಎಲ್ಲರಿಗೂ ನಿನಗೂ, ನನಗೂ, ಶಾಸನ ಮಾಡುವ ಕರ್ತಾ ಬೇರೆ ಇದ್ದಾನೆ, ನಾನು ಭಾರ ಹೊತ್ತಿದ್ದು ನಿಜ. ಜಗತ್ತಿನಲ್ಲಿ ಬ್ರಹ್ಮಾಂಡ ಭಾರ ಹೊತ್ತಿರುವ ವಿಷ್ಣು ಕುರ್ಮ, ಭುಮಂಡಲ ಭಾರಶೇಷನಿಗೆ ಹೊರಲು ಅಸಾಧ್ಯವೆನಿಸಿ ಅವನಿಗೆ ಆಧಾರನಾಗಿದ್ದವ ವಾಯು, ಕೂರ್ಮ ಎಲ್ಲರ ಭಾರ ಹೋತ್ತವನು ಅತೀ ಕೆಳಗೇ ವಿಷ್ಣುಕೂರ್ಮ. ನಾನು ಭಾರ ಹೊತ್ತಿಲ್ಲ. ನನ್ನ ಹೆಗಲು ಅದಕ್ಕೆ ಟೊಂಕದಾಧಾರ. ಅದಕ್ಕೆ ಕಾಲು ಆಧಾರ ಅದಕ್ಕೆ ಭೂಮಿ ಆಧಾರ. ಭೂಮಿಗೆ ಶೇಷನಾಧಾರ. ಅವನಿಗೆ ವಾಯು ಆಧಾರ. ಅವನಿಗೆ ವಿಷ್ಣು ಆಧಾರ. ಅಂದಮೇಲೆ ನಾನು ಭಾರ ಹೊತ್ತವನಲ್ಲ ನೀನು ಶಾಸಕನಲ್ಲ. ಇಷ್ಟ ಮಾತಾಡುವದನ್ನು ಕೇಳಿದೊಡನೇ ರಾಜನು ’ಒಹೋ ನಾನು ಎಂಥಾ ಸೋತ್ತಮದ್ರೋಹ ಮಾಡಿದೆನಲ್ಲ’ ಅಂತಾ ಕೆಳಗಿಳಿದು ನನ್ನ ಅಪರಾಧ ಕ್ಷಮಿಸಿರಿ ಕಪಿಲ ಋಷಿಗಳ ಕಡೆಗೆ ಸದುಪದೇಶ ಎಂದು ಹೊರಟಿದ್ದ. ನನಗೆ ಇಲ್ಲೇ ಒಳ್ಳೆ ಉಪದೇಶ ದೊರೆಯಿತು. ಮಹಾಸ್ವಾಮೀ ದಯಮಾಡಿ ಈ ಪಾಪಿಯನ್ನು ಉದ್ಧಾರ ಮಾಡಿರಿ ಅಂತಾ ಪ್ರಾರ್ಥಿಸುತ್ತಾ ಪಾಧಗಳನ್ನು ಹಿಡಿದು ದುಃಖಿಸುತ್ತಿರುವ ರಾಜನಿಗೆ ’ರಾಜ ನಾನು ಅನ್ನುವ ದೊಡ್ಡು ಶತ್ರುವನ್ನು ಮೊದಲು ಗೆದಿಯಬೇಕು. ನಾನು ಅನ್ನವ ಶತ್ರು ಹೋದ ಮೇಲೆ ನನ್ನದ ಅನುವುದು ತಾನ್ನೆ ಬಾಯಿ ಮುಚ್ಚಿಕೊಂಡು ಹೋಗುವುದು. ನಾನು ನನ್ನದು ಈ ಎರಡು ಕಳ್ಳರ ಕಾಕರ ಮುಖ್ಯಸ್ಥರು. ಇವರು ನಮ್ಮೊಳಗೇ ಇದ್ದು ತಮ್ಮ ಪರಿವಾರಕ್ಕೆಲ್ಲ ಬಾಗಿಲತೆರೆದು ಒಳಗೆ ನಮ್ಮ ಮನಸ್ಸೆಂಬ ಸೊತ್ತನ್ನು ಅಪಹರಿಸಲು ಒಕ್ಕಟ್ಟಾಗಿ ನಮ್ಮ ಸೊತ್ತನ್ನು ತಾವೇ ಮನಬಂದಂತೆ ಭೋಗಿಸುವರು.’ ಇಂಥಿಂಥ ಇನ್ನೂ ಅನೇಕ ತತ್ವ ವಿಚಾರಗಳನ್ನು ಹೇಳಿ ಅವನಿಗೆ ಅಲ್ಲೇ ಉಪದೇಶಿಸಿ ಉದ್ಧಾರ ಮಾಡಿದರು. ಎಷ್ಟೋ ರಹುಗುಣನಂಥವರು ಸುಜೀವಿಗಳಿಗೂ ಹೀಗೆ ಮಾರ್ಗ ತಪ್ಪುವುದುಂಟು.

ಆಗ ಸಜ್ಜನ ಸಂಗವಾದರೆ ಮತ್ತೆ ತಮ್ಮ ನಡತೆ ಇದು ಅಂತಾ ತಿದ್ದಿಕೊಂಡು ಒಳ್ಳೆಯ ನಡತೆ ಆಚರಣೆಯಿಂದ ಉದ್ಧಾರ ಮಾರ್ಗ ಕಂಡುಕೊಳ್ಳುವುರು. ಜಾತ್ಯಾನೆ ಬೇವಿನ ಬೀಜದಂತಿದ್ದವರು ಎಷ್ಟೇ ಸನ್ಮಾರ್ಗಿಗಳ ಗುಂಪಿನಲ್ಲಿದ್ದರೂ ತಮ್ಮ ಕಹಿ ಗುಣ ಹೋಗಕೂಡದು. ವೇನನಂತೆ ಇದ್ದವರಿಗೆ ಏನೂ ಪ್ರಯೋಜನವಾಗದು. ಸುಜೀವರಿದ್ದು ಸಂಸರ್ಗದೋಷದಿಂದ, ಕಲಿ ಪ್ರಭಾವದಿಂದ, ದೋಷಗಳೇನಾದರೂ ಆದರೆ ಸಜ್ಜನ ಸಂಗ ದೊಡ್ಡವರ ಉಪದೇಶದಿಂದ ಆ ದೋಷ ಪರಿಹಾರವಾಗಿ ಜ್ಞಾನ ಭಕ್ತಿ ವೈರಾಗ್ಯಾದಿ ಗುಣಗಳಿಗೆ ಸ್ಥಾನ ದೊರೆಯುವುದು. ಈಗ ಕೈ ಮೈ ಮೇಲೆ ವಿಷ ಹತ್ತಿದರೆ ತೊಳೆದರೆ ಸ್ವಚ್ಛ ಮಾಡಿದರೆ ಹೋಗುವುದು. ಇದು ವಿಷ ಸಹವಾಸದಿಂದ ಬಂದ ದೋಷವೇ, ಇದು ಮೇಲೆ ಹತ್ತಿದ್ದು, ಇದನ್ನು ಜ್ಞಾನಿಗಳದವರು ತಮ್ಮ ಉಪದೇಶವೆಂಬ ಸ್ವಚ್ಛ ನೀರಿನಿಂದ ತೊಳೆದು ಆ ವಿಷ ಕಳೆಯುವುರು. ಅದರೆ ಹೊಟ್ಟೆಯೊಳಗೆ ವಿಷವಿದ್ದರೆ ಅದನ್ನು ಎಂಥ ಉಪದೇಶಕರು ಪರಿಹರಿಸಲು ಶಕ್ಯವಾಗದು. ತಾಮಸರು ವಿಷ ಸಹಿತರಾಗೇ ಜೀವಿಸುವರು ? ಸಜ್ಜನ ಸಂಗವೇ ನಮ್ಮ ಸನ್ಮಾರ್ಗದ ಮೊದಲ ಪಾವಟಿಗೆ ಅದರಿಂದ ಶರಣಾರ್ಥಿ ವಿವಿಧಭಕ್ತಿಯ ಪಾವಟಿಗೆಗಳನ್ನು ಸಾಧಿಸುವುದು ಅನುಕೂಲವೆಂದು ಅನುಭವಿಕರಾದ ಗುರುಹಿರಿಯರು ಆರುಹುತ್ತಿದ್ದುದನ್ನು ಅಲ್ಪ ಬುದ್ಧಿಗೆ ಸ್ವಾಮಿ ನೆನಪು ಕೊಟ್ಟು ಬರೆಸಿದ್ದನ್ನು ಶ್ರೀ ಗುರು ಅಂತರ್ಗತ ಭಾ.ಮು. ಅಂತರ್ಗತ. ಶ್ರೀ ಕೃಷ್ಣಾರ್ಪಣವೆಂದು ಅರ್ಪಿಸಿ ವಂದಿಸುವೆನು.

ಗುರುಸ್ತವನ

ರಾಗ – ಭೂಪ ತಾಳ – ಭಜಠೇಕಾ

ಶ್ರೀ

ಇಂಥಾ ಗುರುಗಳು ಈ ಕಾಲದಲ್ಲಿ | ಎಂತು ದೊರಕುವರೂ ಪೇಳಮ್ಮ |

ಸಂತತ ಹರೇ ರಾಮ |ಮಂತ್ರವ ಜಪಿಸುತ |ಕಂತು ಪಿತನ

ಏಕಾಂತ ಭಕುತರಾದ ||ಪ||

ಆಥಣಿಯಲಿ ಕೆಲಕಾಲ | ಯತಿಯನು ಸೇವಿಸೀ | ಮಿತ ಪ್ರಾರಬ್ಧ

ಭೋಗಿಸಿ ಸಂತೋಷದೀ | ಸತಿ | ದೇವಿ ಪತಿಯಸನ್ನಿಧಿಯ |

ಬಯಸುತಲ್ಲೀ | ಅತಿತ್ವರಪೋಗಿ | ಕಾಶಿಯಲಿ | ವಾಶಿಸಿದರೂ ||೧||

ಹರೇ ರಾಮ | ಹರೇ ಕೃಷ್ಣ | ಸರುವದಾ ಜಪಿಸಲೂ | ಹರಿಯಪುರದ |

ಮಾರ್ಗ ದೊರೆಯುವದೆಂದೂ|ಪರಿಪರಿಯಲಿ ಉಪದೇಶಿ|ಸುಜನರ|

ದುರಿತಗಳೆಲ್ಲವ ಪರಿಹರಿಸಿದರೂ ||೨||

ಸಾರೋದ್ಧಾರ ಸಾರಿದ ಯತಿಪರರಂತೇ | ಘೋರ ವೈರಾಗ್ಯ ಜ್ಞಾನ |

ಭಕುತಿ ಆಚರಿಸುತಾ |ಸಾರಿದ ಭಕುತರಿಗೇ | ದಾರಿಯ ತೋರಿ |

ಅಪಾರ ಭವಾಂಭುದಿ ಪಾರುಮಾಡಿಸುವಂಥಾ ||೩||

ಭೋದಿಸುತಿರುವಂತೇ | ಸಾಧಿಸಿದವರೆಂದೂ | ಮಾಧವೇಶಂಗೆ |

ಬಿಂದುಮಾಧವ ವಿಠ್ಠಲಾ | ಮೋದ ಕೊಡುವೆನೆಂದೂ | ಆದರಿಸಿ |

ಪುರವಾದ ವೈಕುಂಠಕೆ ಕರೆದೊಯ್ದನಮ್ಮಾ ||೪||

ನಿತ್ಯ – ಪೂಜೆ

ರಾಗ – ಅಹಿರಭ್ಯೆರ ತಾಳ – ದೀಪಚಂದಿ

ಮಧ್ವೇಶಾರ್ಪಣ ಯನ್ನವದೇ ಯಜ್ಞ | ಮನ,ವಚನ, ಕಾಯದ |

ಸಕಲ ಕರ್ಮಗಳು ||ಪ||

ಭೂತ ಭವಿಷದ್ವರ್ತ ಮಾನದೀ |

ಮಾತಾ ಪಿತಾ ಶ್ರೀನಾಥನೆಂದರಿತು | ಈ | ತನು | ಮನ|

ಪರಮಾತ್ಮ ಗರ್ಪಿಸಿ | ಪ್ರೀತನಾಗೆಂದು | ಪ್ರಾರ್ಥನೆ ಗೈಯುತ ||ಅ.ಪ||

ನಡಯೋದು ನುಡಿಯೊದು ಶಯನಿಸುವದು | ಉಂಬುಡುವೊದು

ಕೊಡುವದು | ಧೃಡಭಕುತಿಲಿ | ಶಿರಿಯೊಡೆಯ ಪೂಜೆಂಬೆನು

ಸಂಧಾನದಿ | ಅಡಿಗಡಿಗೇ | ಅಮರ್ಪಣೆಗೃಯ್ಯುತ ||೧||

ಜನನಿ ಜನಕ | ಸತಿಸುತ ಬಾಂಧವರೂ |

ಘನ ಮಹಿಮನ ಪರಿವಾರ ವೆನುತಲೀ |

ಅನುದಿನದಲಿ | ಗುರು ಹಿರಿಯರ ಸೇವಿಸಿ |

ಅನಿಲಾಂತರ್ಗತ ಹರಿಯ ಸೇವೆ ಎಂದು ||೨||

ನಾನು ನನ್ನದು | ಎಂಬುದನಳಿದು |ಜ್ಞಾನಿ ಗುರುಗಳನುಗ್ರಹ |ಪಡೆದು

ಏನು ಅರಿಯೆ ಬಿಂದು ಮಾಧವ ವಿಠ್ಠಲ |

ನೀನೇ ಪೊರೆದುದ್ಧಾರ ಮಾಡೆಂದು ||೩||

ಪಂಡರೀನಾಥನ ಹಾಡು

ರಾಗ – ಪರಮೇಶ್ವರಿ ತಾಳ – ದಾದರಾ

ಪಾದಕಂಡೂ | ಪಾವನಾದೇ | ನಾ ಪಂಡರೀನಾಥನ ಪಾದಕಂಡೂ |

ಪಾವನಾದೇ | ನಾ ಶ್ರೀ ಪಾಂಡುರಂಗನ ಪಾದ ಕಂಡೂ | ಪಾವನಾದೇ |

ನಾ ||ಪ||

ಪಾದ ಕಂಡೂ | ಪಾದನಾದೇ | ಆದಿ ಮಧ್ಯ ಅಂತ್ಯರಹಿತನ

ಸಾಧು ಸಂತರ ಭಜನೆಗೊಲಿದೂ |

ಮೋದವೀವ | ನಾದ ಬ್ರಹ್ಮನ ||ಅ ಪ||

ಕಮಲೇ ಕಮನಲಜ ವಾಯು ವಾಣೀ |

ವಿಮಲ | ಪಾರ್ವತಿ |

ರಮಣ | ಶಕ್ರಾಧೀ |

ಅಮಿತ ದಿವಿಜರು | ಸಕಲ ಸಜನರು |

ಕ್ರಮದಿ | ಸುತ್ತಿಸುತ | ನಮಿಸುತಿರುವಾ ||೧||

ಶ್ರೇಷ್ಟ ಪುರಂದರ | ಜಗನ್ನಾಥ |

ಶಿಷ್ಟ ಗೋಪಾಲದಾಸರಾಯರ | ನಿಷ್ಟೆಗೊಲಿದರೊಡನೆ ಆಡಿದ |

ಇಷ್ಟದಾಯಕ | ಲಕ್ಷ್ಮಿ ರಮಣನ ||೨||

ಸಂತ ಸಖು ತುಕಾರಾಮ |ದಾಮಾಜಿ |

ಶಾಂತ ಜ್ಞಾನೇಶ್ವರ | ಕುಂಬಾರಾದಿ|

ಇಂಥ ಭಕುತ| ಹೃದಯ ಕಮಲದಿ |

ನಿಂತು ನಲಿವಾನಂತ | ಮಹಿಮನ ||೩||

ಭಕುತರಿಗೆ ಭವ ಶರಧಿ ಪರಿಮಿತಿ |

ಕಟಿಯಲೀ |ಕರವಿರಿಸಿ ತೋರುತ |

ಮುಕುತಿ ಈಯಲು | ಧರೆಯೊಳ್ ನಿಂತಿಹ |

ರುಕುಮಿಣೀದೇವಿಯರ |ಸಹಿತಾ ||೪||

ಚಂದ್ರ ಭಾಗಾ ತೀರದಲ್ಲೇ |

ಪುಂಡಲೀಕನು |ಭಕುತ್ತಿಲಿತ್ತಾ |ಒಂದು ಇಟ್ಟಿಗಿ ಮೇಲೆ ನಿಂತಹ

ಬಿಂದು ಮಾಧವ ವಿಠ್ಠಲನ್ನು ||೫||

ಶ್ರೀ ಭಾ. ಮು. ಶ್ರೀ ಕೃಷ್ಣರ್ಪಣ

ಶ್ರೀ ಗುರುಭ್ಯೋನಮಃ

ರಾಗ – ಭೂಪ ತಾಳ – ಭಜಠೇಕಾ

ನರ್ತನ ಸೇವೆ ಹಾಡು

ದೇವಾದಿ ದೇವ ಶ್ರೀ ಹರಿ ಸವೋತ್ತುಮನೆಂದು | ಭಾವಭಕುತಿ ಯಿಂದ

ಕುಣಿಯೋಣ ಬಾ|.... ಭಾವ ಭಕುತಿ ಯಿಂದ ಕುಣಿಯೋಣ ಬಾ ||ಪ||

ಹರಿ ಶಿರಿ ವಿಧಿ ವಾಯು, ಸರಸ್ವತಿ, ಭಾರತಿ |

ಹರ ಶೇಷ ಗರುಡಾದ್ಯಮರರನೂ || ತಾರತಮ್ಯವನು

ಅನುಸರಿಸಿ | ಸುತ್ತಿಸುತಲಿ |

ಹರುಷದಿಂದಲಿ ನಾವು ನಲಿಯೋಣ ಬಾ |

ಹರುಷದಿಂದಲಿ ನಾವು ನಲಿಯೋಣ ಬಾ |

ಹರಿ ನಿರ್ಮಾಲ್ಯ ಶಿರದಲ್ಲಿರಸೀ |

ಗುರುವಿತ್ತ ನವ ವಿಧಾಭರಣದ ಧರಿಸೀ||

ಶಿರಿ ವರನ ಮುರಲಿ ನಾದ ವಾಲಿಸುವಂಥಾ

ಹರಿದಾಸರ ಸಹ ನಲಿಯೋಣು |ಬಾ||

ಹರಿದಾಸರ ಸಹ ನಲಿಯೋಣು ಬಾ ||೨||

ಇಂದಿರೆ ಸಹಿತಾನಂದ ಮುನಿಯೊಳಿಪ್ಪ ಬಿಂದುಮಾಧವನಿಗೆ

ಒಂದಿಸುತಾ | ಒಂದೇ ಮನದಿ ಪೊರೆ ಯಂದು ಪ್ರಾರ್ಥಿಸಲು

ಆನಂದ ಕೊಡುವನು | ನಂದಸುತಾ ||೩||

ಶ್ರೀ ಮಧ್ವೇಶಾರ್ಪಣ

ರಾಗ – (ಭೈರವಿ) ತಾಳ – ಭಜಠೇಕಾ

ಸ್ವಾಮಿಗೆ ಮಂಗಳ ಪದ

ಶ್ರೀ... ನಾಥ ಗೋವಿಂದ... ಆನಂದ ಮೂರುತಿಗೆ | ನಾನಿಂದು

ಬೆಳಗುವೆನು ಮುದದಿಂದ ಆರುತಿಯ ||ಪ||ನೀರೊಳಿಹ ಮತ್ಸ್ಯನಿಗೇ |

ಭಾರಪೊತ್ತ ಕೂರ್ಮನಿಗೆ |ನಾರಿ ಭೂಮಿಯ ತಂದ ಆ ವರಾಹನಿಗೇ |

ಪೋರನಾ ನುಡಿಗಾಗಿ |ಭಾರಿ ಖಂಬದಿ ಬಂದು | ಧೀರ ದೈತ್ಯನ

ಕರಳ ಹಾರ ಧರಿಸಿದಗೇ ||೧||

ವಟುವಾದ ವಾಮನಗೇ | ಧಿಟನಾದ ಭಾರ್ಗವಗೇ |ಆಡವಿ

ಸಂಚರಿಸಿದಾ...ಶ್ರೀ ರಾಮಗೇ|

ಕುಟಿಲ ಕಂಸನ | ಕೊಂದ ವಟ ಬೌಧ್ಧ ರೂಪಾದ | ನಟನೆಯಲಿ

ಹಯವೇರಿದಾ ಕಲ್ಕಿಗೇ ||೨||

ನಂದ ತೀರ್ಥಗೊಲಿದು ಬಂದು ಉಡಪಿಲಿನಿಂದ | ಸಿಂದು ನಂದನೆ

ಸಹಿತಾ ನಂದದಿಂದಾ||

ಒಂದೇಳು ಯತಿಗಳಿಂ ಪೂಜೆಗೊಳ್ಳುತಲಿರುವ ಬಿಂದು ಮಾಧವ

ವಿಠಲ ಇಂದು ಧರ ವಂದ್ಯನಿಗೆ ||೩

ಶ್ರೀ ಮಧ್ವೇಶಾರ್ಪಣ

ಜ್ಞಾನಿವರೇಣ್ಯರಾದ ಗುರುಗಳನ್ನು ಧ್ಯಾನಿಸಲು

ಕೆಲವು ಭಗವದ್ರೂಪಗಳನ್ನು ಉಪದೇಶಿಸಿದ್ದು

ಪರಮಾತ್ಮನ ಅನಂತ ರೂಪಗಳನ್ನು ಅವನ ಕಾರ್ಯಗಳನ್ನು ಸಂಪೂರ್ಣ ತಿಳಿಯಲು ಮಹಾಲಕ್ಷ್ಮೀದೇವಿಗೇ ಅಸಾಧ್ಯ. ಉಳಿದ ಬ್ರಹ್ಮಾದಿ ದೇವತೆಗಳಿಗೂ ತಾರತಮ್ಯ ಪ್ರಕಾರ ಅಲ್ಪ ಸ್ವಲ್ಪ ತಿಳಿಯುತ್ತಿದ್ದು ಪಾಮರರಿಗಂತೂ ಯಾವ ರೂಪ, ಯಾವ ಕಾರ್ಯ ಸ್ಮರಿಸಿ ಪ್ರಾರ್ಥಿಸಬೇಕು ಎಂಬುದು ತಿಳಿಯದೇ ಪರಿತಪಿಸುವಂಥ ಸುಜೀವಿಗಳು ತಿಳಿದುಕೊಳ್ಳವುದು ಮಹತ್ವವೆಂದು ಜ್ಞಾನಿಗಳ ಹೇಳಿಕೆ.

ಸ್ವಾಮಿಯು

i ಬಾದರಾಯಣ ರೂಪದಿಂದ – ಜ್ಞಾನ ಪ್ರದಾನ ಮಾಡುವರು

ii ಶ್ರೀ ವಾದಿರಾಜರ ಉಪಾಸ್ಯ ಮೂರ್ತಿ ರೂಪ – ಹಯಗ್ರೀವದೇವರಾಗಿ – ರಹಸ್ಯ ಜ್ಞಾನ (ವಿಜ್ಞಾನ ನೀಡುವ ಮಂತ್ರಾತ್ಮಕರೂಪ)

iii ಭೂವರಾಹರೂಪದಿಂದ – ಜೀವರಿಗೆ ವಾಸಿಸಲು ಸ್ಥಳಕೊಟ್ಟ ಆಧಾರ ರೂಪ ಇವೆಲ್ಲಕ್ಕಿಂತ ಮೊದಲು – ಮೂಲ ರೂಪನಾದ ನಾರಾಯಣದೇವರು ಪಂಚ ಭೌತಿಕ ಶರೀರ ಕೊಟ್ಟು ಜೀವರಿಗೆ ಸೃಷ್ಟಿ ಮಾಡುವನು, ಹೀಗೆ ಧ್ಯಾನ ಮಾಡುತ್ತಾ, ನಂತರ ಮುಖ್ಯ ಮಂತ್ರಿ ವಾಯುದೇವರ ಅವತಾರ ಮತ್ತು ಕಾರ್ಯಗಳನ್ನು ಧ್ಯಾನಿಸಬೇಕು.

ಹನುಮಂತನಾಗಿ ರಾಮದೂತನೆನಿಸಿ 10ತಲೆ ರಾವಣನನ್ನು ದಂಡಿಸಿ ಮರ್ದನ ಮಾಡಿ ಸೀತಾ ಸಂದೇಶವನ್ನು ಶ್ರೀರಾಮದೇವರಿಗೆ ಮುಟ್ಟಿಸಿ, ಆ ತಾಯಿಯ ಬಂಧನವನ್ನು ಬಿಡಿಸಿ ರಾಮಸನ್ನಿಧಿಗೆ ಸೇರಿಸಿದ್ದನ್ನು ಸ್ಮರಿಸುತ್ತಾ, ಪ್ರಾರ್ಥಿಸಬೇಕು. ಏನೆಂದರೆ 10 ಇಂದ್ರಿಯಗಳೂ 10 ತಲೆಯ ರಾವಣನಂತೆ. ಸೀತಾನಂತೆ ಬಂಧನದಲ್ಲಿರುವ ಸುಜೀವಗಳು ಅವಳಂತೇ ಸದಾ ಧ್ಯಾನ ಮಾಡುವವರಿಗೆ, ಹನುಮಂತನು ದಶೇಂದ್ರಿಯಗಳ ದುಷ್ಟಶಕ್ತಿ ದೂರ ಮಾಡಿ ನಮ್ಮ ಪ್ರಾರ್ಥನೆಯನ್ನು ಶ್ರೀರಾಮಗೆ ಸಲ್ಲಿಸುವನು. ದಶೇಂದ್ರಿಯಗಳ ಉಪದ್ರವವನ್ನು ನಿವಾರಿಸಿ ಸ್ವಾಮಿಯಲ್ಲಿ ಭಕ್ತಿ ವೈರಾಗ್ಯ. ಜ್ಞಾನ ಕೊಡುವನಲ್ಲದೇ ದಾಸ್ಯ ಭಾವನೆಯು ಸದಾ ನಮ್ಮಲ್ಲಿರುವಂತೆ ಅನುಗ್ರಹಿಸುವನು. ಆಮೇಲೆ ಸ್ವಾಮಿಯ ಲೋಕವಾದ ವೈಕುಂಠವಾಸಕ್ಕೆ ಯೋಗ್ಯರೆಂದು ಸ್ವಾಮಿಗೆ ಬಿನ್ನವಿಸಿ ಮೋಕ್ಷ ಕೊಡಿಸುವನು.

ಭೀಮಸೇನನಾಗಿ ಕಲಿ ದುರ್ಯೋಧನ ಅವನ ಪರಿವಾರವನ್ನೆಲ್ಲ ನಿರ್ಮೂಲನಾಶ ಮಾಡಿದನು. ಅದರಂತೇ ಅವನನ್ನು ಪದೇ ಪದೇ ಸ್ಮರಿಸುತ್ತಾ ಪ್ರಾರ್ಥಿಸಬೇಕು ನಮ್ಮ ದೇಹದಲ್ಲಿದ್ದ (ದುರ್ಯೋಧನ) ಅಹಂ (ದುಶ್ಯಾಸನ) ವಿಪರೀತ ಜ್ಞಾನ, ಇವರ ಸೈನಿಕರೇ ಕಾಮ ಕ್ರೋಧಾದಿ ದುರ್ಗಣಗಳ ಸಮೂಹ, ಇಂಥವುಗಳನ್ನೆಲ್ಲ ನಾಶ ಮಾಡಿ ನಮಗೆ ಹರಿಗುರುಗಳ ಅನುಗ್ರಹವಾಗುವಂತೆ ಮಾಡಲು ಹನುಮಂತನಾಗಿದ್ದು ನಮ್ಮ ದಶೇಂದ್ರಿಯಗಳನ್ನು ನಿರ್ವಿಣ್ಯ ಮಾಡಿ ನಮ್ಮ ಅಜ್ಞಾನ ವಿಪರೀತ ಜ್ಞಾನಗಳನ್ನು ನಾಶ ಮಾಡಿ ಭವಬಂಧ ಮೋಚನ ಮಾಡಲು ದೈನ್ಯದಿಂದ ಬೇಡಿಕೊಳ್ಳುತ್ತಿರಬೇಕು.

ಶ್ರೀಮದಾನಂದ ತೀರ್ಥರಾಗಿ ಮೋಕ್ಷಪ್ರದವಾದ ಕಿಂಚಿತ್ ಕಲುಷವಿಲ್ಲದ ಶ್ರೇಷ್ಟಜ್ಞಾನ ಕೊಡುವರು ಶ್ರೀರಾಮಸೇವಕನಾದ ಹನುಮಂತ, ಶ್ರೀಕೃಷ್ಣ ಸೇವಕ ಭೀಮಸೇನ, ಶ್ರೀ ವೇದವ್ಯಾಸ ಉಪಾಸಕ ಶ್ರೀಮಧ್ವರನ್ನು ಸ್ಮರಿಸುವಂತೆ, ಶ್ರೀಹಯವದನ ಉಪಾಸಕ ಶ್ರೀ ಭೂವರಾಹ ಆರ್ಚಕರಾದ, ಶ್ರೀ ಗುರುಗಳಾದ ಶ್ರೀ ವಾದಿರಾಜರನ್ನೂ ಹಾಗೇ ಮನೋನಿಯಾಮಕ ರುದ್ರದೇವರ ಪಟ್ಟಕ್ಕೆ ಬರುವ ಶ್ರೀಭೂತರಾಜರನ್ನೂ ಸ್ಮರಿಸುತ್ತಾ ನಿತ್ಯವೂ ಪ್ರಾರ್ಥಿಸುತ್ತಾ ಇದ್ದರೆ ಅವರೆಲ್ಲರ ಅಂತರ್ಗತ ಅವರ ಉಪಾಸ್ಯ ಮೂರ್ತಿ ಭಗವಂತನು ನಮ್ಮ ಸಾಧನ ಪೂರ್ತಿ ಮಾಡಿಕೊಳ್ಳಲು ನಮ್ಮ ನಮ್ಮ ನೀತ ಗುರುಗಳನ್ನು ದೊರಕಿಸಿಕೊಟ್ಟು ನಮ್ಮನ್ನು ನಿಜವಾಗಿಯೂ ಮೋಚನೆ ಗೊಳಿಸುವನು. ಶ್ರೀಪಾದರಾಜ ಕೃತ ಮದ್ವನಾಮವನ್ನು, ಶ್ರೀ ಜಗನ್ನಾಥದಾಸಕೃತ ಹರಿಕಥಾಮೃತಸಾರದ ಮಂಗಳಾಚರಣ ಸಂಧಿಯ ಶ್ಲೋಕಗಳನ್ನು ಬೆಳಗಿನಲ್ಲಿ ಸರ್ವರಿಗೂ ಪಠಣಮಾಡುವುದಕ್ಕಾಗಿ ರಚಿಸಿದ್ದನ್ನು ನಿತ್ಯ ಪಠಣವನ್ನು ಅವಶ್ಯ ಮಾಡಿದರೆ ಉದ್ಧಾರ ತೀವ್ರವೇ ಆಗುವುದರಲ್ಲಿ ಸಂಶಯವಿಲ್ಲ. ಹರಿವಾಯುಗುರುಗಳಿಗೆಲ್ಲ ಒಂದಿಸಿ ಸ್ತ್ರೋತ್ರ ಮಾಡಿದ್ದೇ ನಿರೂಪಣೆ ಮಾಡಲಾಗಿದೆ.

ಶ್ರೀ ಮದ್ವೇಶಾರ್ಪಣಮಸ್ತು

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು