ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಭಕ್ತಿಗೀತೆಗಳು

126. ನಿನ್ನ ದಯೆ ಒಂದಿದ್ದರೆ ಸಾಕೋ ಎನಗೆ || ಪ ||

ಹತ್ತಾವತಾರಗಳಲಿ ಮಿಂಚಿ ನಾ ಮೆರೆಯುವೆ |

ಮತ್ಸಾವತಾರದಂತೆ ಕ್ಷಣ ಕ್ಷಣಕೂ ಭಕ್ತಿ ಬೆಳೆಯಲಿ || 1 ||

ಕೂರ್ಮಾವತಾರದಂತೆ ಪಾದ ಸ್ಮರಣೆ ಸದಾ ಹೊತ್ತಿರಲಿ |

ವರಾಹವತಾರದಂತೆ ಕ್ಲೇಶಗಳ ಸರಳವಾಗಿ ಎತ್ತಲಿ || 2 ||

ನರಸಿಂಹವತಾರದಂತೆ ದುಷ್ಟ ಶಕ್ತಿಗಳ ಎದುರಿಸಲಿ |

ವಾಮನವತಾರದಂತೆ ಸಮರ್ಪಣಾ ಬುದ್ಧಿ ತ್ರಿವಿಕ್ರಮನಂತೆ ಏರಲಿ || 3 ||

ಭಾರ್ಗವತಾರದಂತೆ ವಿಷಯದಾಸೆ ಅಳಿಯಲಿ |

ರಾಮಾವತಾರದಂತೆ ಸದ್ಗುಣಗಳ ಸಾಂದ್ರನಾಗಲಿ || 4 ||

ಮುಕುಂದಾವತಾರದಂತೆ ಮುಕ್ತಿಯ ಉಪದೇಶವಾಗಲಿ |

ಬುದ್ಧಾವತಾರದಂತೆ ಚಂಚಲದ ಸ್ಥಿರತೆಯಾಗಲಿ || 5 ||

ಕಲ್ಕೀ ಅವತಾರದಂತೆ ದುರ್ವಿಷಯ ಖಂಡಿಸಲಿ

ಶ್ರೀಕೃಷ್ಣವಿಠ್ಠಲ ನಿನ್ನ ದಯೆ ದೊರಕದಿದ್ದರೆ ಏನು ದೊರೆಯದು || 6 ||

127. ಹರಿ ನಿನ್ನ ಚರಣದಿ ಸ್ಥಿರ ಭಕುತಿ ಕರುಣಿಸೋ |

ಪರಿ ಪರಿ ಬೇಡಿಕೊಂಬೆ ನಿಜ ಭಕುತಿ ದಯಪಾಲಿಸೋ || ಪ ||

ನೀರಿಗಿಂತ ತಿಳಿಯಾದ ಜ್ಞಾನವಿತ್ತು ಸಲುಹೋ |

ಧರೆಗಿಂತ ಭಾರವಾದ ಪಾಪದಿಂದ ಉಳಿಸೋ || 1 ||

ಕರಿಯಾದ ಕಾಡಿಗೆಗಿಂತ ಕಲಂಕದ ಕಪ್ಪು ಅಳಿಸೋ |

ಉರಿಗಿಂತ ತೇಜವಾದ ಕ್ರೋಧದಿಂದ ತಪ್ಪಿಸೋ || 2 ||

ಅರಿಯದೇ ಬರುವ ಒಳಗಿನ ಅರಿಯ ತರಿಯೋ |

ನರ ಜನ್ಮದಿ ಹೊರುವ ಕರ್ಮದ ಭಾರವಿಳುಹೋ || 3 ||

ಬರದಂತೆ ಜನುಮ ಇರುವ ಉಪಾಯ ತಿಳಿಹೋ |

ಭರದಿಂ ಸಂಸಾರ ಸಾಗರ ದಾಟುವ ದಾರಿ ತೋರೋ || 4 ||

ಪರರ ದೈನ್ಯಕೆ ಸಿಲುಕದಂತೆ ನಡೆಸೋ |

ಸ್ಮರಿಸಿ ಸದಾ ಶ್ರೀಕೃಷ್ಣವಿಠ್ಠಲನ ಬದುಕುವಂತೆ ಮಾಡೋ || 5 ||

"ದಶವತಾರ"

128. ನೀರಿನಿಂದ ಅಂಗೈಲಿ ಬಂದೆ ನೀನು |

ಗಿರಿಯನ್ನು ಬೆನ್ನಲಿ ಪೊತ್ತು ನಿಂದೆ || 1 ||

ಧರೆಯನ್ನು ಕೊರೆಯಲ್ಲಿಟ್ಟು ರಕ್ಷಿಸಿದೆ |

ನರಮೃಗನಾಗಿ ಕಂಬದಿಂದ ಬಂದೆ || 2 ||

ಮೂರಡಿಬೇಡಿ ಪಾತಾಳಕ್ಕೊತ್ತಿ ಕಾವಲಾದಿ |

ಮಾತೃ ಶಿರವ ಕಡಿದು ತಂದೆಗೆ ಮಗನಾದಿ || 3 ||

ಅರಣ್ಯದಿ ಸುತ್ತಿ ಪಿತೃವಾಕ್ಯ ಪರಿಪಾಲಕನಾದಿ |

ಪೊರೆದೆ ಅಕ್ಷಯಾಂಬರವಿತ್ತು ಮಾನಿನಿಯ ಮಾನ || 4 ||

ದುರ್ಜನರಿಗೆ ಬೋಧಿಸಿ ಜ್ಞಾನ ಕಳೆದೆ |

ಏರಿ ಹಯವ ಧರ್ಮ ರಕ್ಷಿಸಿದೆಯಾ ಶ್ರೀಕೃಷ್ಣವಿಠ್ಠಲ || 5 ||

129. ಅಧಿಕಾರಿ ಸಾಧಕರ ತಿಳವಳಿಕೆ ಕಾಣಿರೋ ||

ಓದಿದ್ದೆಲ್ಲಾ ವೇದ - ಧರ್ಮ ಶಾಸ್ತ್ರವಾಗಲಿ || 1 ||

ಓಡಾಡಿದ್ದೆಲ್ಲಾ ತೀರ್ಥಯಾತ್ರೆಯಾಗಲಿ |

ನಡೆದಾಡಿದ್ದೆಲ್ಲಾ ಪವಿತ್ರ ದೇವಸ್ಥಾನವಾಗಲಿ || 2 ||

ನೋಡಿದ್ದೆಲ್ಲಾ ಪರಮಾತ್ಮನ ದಿವ್ಯ ಮೂರ್ತಿಯಾಗಲಿ |

ಕೊಡಮಾಡಿದ್ದೆಲ್ಲಾ ದಾನ-ಧರ್ಮವಾಗಲಿ || 3 ||

ಒಡಲಲ್ಲಿ ಹಾಕಿದ್ದೆಲ್ಲಾ ನೈವೇದ್ಯವಿರಲಿ |

ನುಡಿದಿದ್ದೆಲ್ಲಾ ಸ್ತುತಿ - ಸ್ತೋತ್ರವಾಗಲಿ || 4 ||

ಮಾಡಿದ್ದೆಲ್ಲಾ ಶ್ರೀಹರಿಯ ಕೈಂಕರ್ಯವಾಗಲಿ |

ಬಿಡದೆ ವಿಹಿತ ಸಕಲವೂ ಶ್ರೀಕೃಷ್ಣವಿಠ್ಠಲಗೆ ಪ್ರೀತಿಯಾಗಲಿ || 5 ||

130. ಆಲಿಸಿ ಕಂದನ ಕರೆ ಮಾತೆ ಓಡಿ ಬರುವಂತೆ |

ಮುರ್ಲೋಕದೊಡೆಯ ಭಕ್ತಿಗೊಲಿದು ಬರುವ || ಪ ||

ಪ್ರೇಮದಿ ಎಲೆ ಕೊಟ್ಟವಳ ಸಂರಕ್ಷಿಸಿದ |

ನೇಮದಿ ಫಲ ಕೊಟ್ಟವಳಿಗಿತ್ತ ಮುಕುತಿಯ ||

ಕಾಮದಿ ಪುಷ್ಪ ವಿತ್ತವನ ಬಂಧನ ಕಿತ್ತಿದ |

ಒಮ್ಮನದಿ ಜಲವಿತ್ತವಗಿತ್ತ ತನ್ನ ದರುಶನವ || 1 ||

ನಿರಂತರ ನಿತ್ಯ ಚಿಂತನ ನಿಷ್ಕಾಮದಿ ಭಜಿಪ |

ಪುರುಷರ ಯೋಗಕ್ಷೇಮ ಸ್ವಯಂ ತಾ ನೋಡುವ ||

ಪರಮೇಶ್ವರ ಮನೋವಾಚಾಗಮಗೋಚರನ |

ಸ್ವರ್ಗ ಬೇಡದೆ ಸದಾ ಭಕ್ತಿ ದರುಶನ ಬೇಡುವರು || 2 ||

ನಿಷ್ಕಲಂಕ ಭಾವದಿ ಸಮರ್ಪಿತವೆಂದಿದ್ದೆಲ್ಲಾ |

ಸ್ವೀಕರಿಸುವ ಶುದ್ಧಾತ್ಮ ಕರ್ಮ ಬಿಡಿಸುವ ||

ಸಕಲ ವಿದಿತಾತ್ಮ ಕೂಗಿಗೆ ಓಡಿ ಬಂದು |

ಅಕ್ಷಯ ಫಲ ಕೊಡುವ ನಮ್ಮ ಶ್ರೀಕೃಷ್ಣವಿಠ್ಠಲ || 3 ||

131. ಎನಗೆ ಎಳೆತ, ಸಕಲ ಕಡೆಯಿಂದಲೂ ಎಳೆತ |

ನಿನಗೆ ತಿಳಿಯದೇ, ನಾ ಹೇಗೆ ಧ್ಯಾನಿಸಲಿ ನಿನ್ನ || ಪ ||

ನಿನ್ನ ಬಿಟ್ಟು ಅನ್ಯದರಲ್ಲಿ ಸದಾ ಸೆಳೆತ |

ಮನ, ಶರೀರ, ಸತಿ, ಆತ್ಮಜರಲಿ ||

ಮನೆ ಮತ್ತು ಆಪ್ತರು, ಸಮಾಜ ರಾಷ್ಟ್ರದಲ್ಲಿ |

ಧನ, ಕನಕ, ಸೇವಕ, ಆತ್ಮೀಯರಲಿ || 1 ||

ತ್ರಿಗುಣದಲಿ ಸಿಲುಕಿ ಸುತ್ತುತಿರುವೆ ಸದಾ |

ಸಂಗರಹಿತಳಾಗಲು ಆಗದೆ ಒದ್ದಾಡುತ್ತಿರುವೆ ||

ಸುಜ್ಞಾನ ಪಡೆಯದೆ ಜನುಮ ವ್ಯರ್ಥವಾಗುತಿದೆ |

ಸುಗುಣಾಂತರಂಗ ಶ್ರೀಕೃಷ್ಣವಿಠ್ಠಲ ಪಾರುಗಾಣಿಸೋ || 2 ||

132. ಪರಮ ಪುರುಷ ಪರಮೇಶ್ವರ ಪರಾಶಕ್ತಿ ಪರಾತ್‍ಪರ |

ಪರಿಶುದ್ಧ ಪರಮ ಕಾರಣ ಪರಮ ಪರಿಮಾಣ ಪರೇಶ || 1 ||

ಸರ್ವ ವೀಕ್ಷಕ ಪ್ರೇರಕ ಸಾಕ್ಷಿ ಸಾಕ್ಷಾತ್ ಸ್ಥಿತ |

ಸರ್ವತ್ರ ಸ್ಥಿತ ಅಂತರ್ಬಹಿಶ್ಚ ವ್ಯಾಪ್ತ ಅವ್ಯಕ್ತ || 2 ||

ಪರಮ ಚೇತನ ಆದಿಬೀಜಾಯ ಪರಂ ಬ್ರಹ್ಮ |

ಪರಮಧಾಮ ಹೃದಿಸ್ಥಿತ ಶ್ರೀಕೃಷ್ಣವಿಠ್ಠಲ ನ ವಿದುಃ || 3 ||

133. ಭಕ್ತರ ಕರೆಗೆ ಭಕ್ತಿಯ ಕೂಗಿಗೆ ಭೂಮಿಗೆ ಬರುವ ಭಗವಂತ ಇದು ನಿಶ್ಚಯ |

ಭಕುತಿಗೆ ಒಲಿದು ಬಾಲಕ ಧ್ರುವನ ಕರೆಗೆ ಶ್ರೀಮನ್ನಾರಾಯಣ ಬರಲಿಲ್ಲವೆ ? ||

ಶಕ್ತಿಯ ಸೆಣಸಾಟದಿ ಸೋತ ಗಜೇಂದ್ರನ ಆರ್ತತೆಗೆ ಶ್ರೀಹರಿ ಬರಲಿಲ್ಲವೇ ? |

ಮೂಕರೋದನದಿ ಶಿಲೆಯಂತಾದ ಅಹ್ಯಲೆಯ ಬಳಿಗೆ ಶ್ರೀರಾಮ ಬರಲಿಲ್ಲವೆ ? ||

ಯಾಕೆ ಇನ್ನು ಬರಲಿಲ್ಲವೆಂದು ಕಾಯುತ್ತಿದ್ದ ಶಬರಿಯ ಕಾಣಲು ಶ್ರೀರಾಮ ಬರಲಿಲ್ಲವೇ ? |

ದುಃಖಿತ ಅಬಲೆ ದ್ರೌಪದಿ ಶರಣಾಗಲು ಶ್ರೀ ಕೃಷ್ಣ ಬಂದೊದಗಿದನಲ್ಲವೆ ? |

ಏಕ ಪರಮಾತ್ಮ ಅನೇಕ ರೂಪದಿ ಭಕ್ತರು ಕರೆದಲ್ಲಿ ತಾ ಬರುವನೆಂಬುದು ನಿಜವಲ್ಲವೆ ? ||

134. ಇಲ್ಲಿ ಬರಸಿದವ ನೀನೆ ಕರ್ಮ ಕಳೆಯಲು |

ಇಲ್ಲಿ ಇರಿಸಿದವ ನೀನೇ ಭೋಗ ಉಣಲು || 1 ||

ಇಲ್ಲಿ ಮೆರೆಸಿದವ ನೀನೇ ಪುಣ್ಯ ಅನುಭವಿಸಲು |

ಇಲ್ಲಿ ಉರಿಸಿದವ ನೀನೇ ಪಾಪ ಕಳೆಯಲು || 2 ||

ಇಲ್ಲಿ ಹೊರೆಸಿದ ಭಾರ ಕರಗಿಸುವವ ನೀನೇ |

ಇಲ್ಲಿ ಒರೆಸಿದವ ನೀನೇ ಶ್ವಾಸ ಋಣ ತೀರಲು || 3 ||

ಅಲ್ಲಿ ಕರೆಸಿದವ ನೀನೇ ಸ್ವಯೋಗ್ಯತಾ ಫಲ ಕೊಡಲು |

ಎಲ್ಲ ಬಲ್ಲ ಸತ್ಯವ ಸರಸಿಜನಾಭ ಶ್ರೀಕೃಷ್ಣವಿಠ್ಠಲ || 4 ||

135. ಗುರುವೆಂದರೆ ಯಾರಿಹರು ಎಲ್ಲಿಹರು |

ಅರಿವೇ ಗುರು ಎಂಬುವರು ತಿಳಿದವರು ||

ಅರಿವಿನ ಪರಿಪೂರ್ಣ ಅರಿತವರಿಲ್ಲ ಇಹದಿ |

ಅರಿತಾಗ ಹರಿವುದು ಜನನ - ಮರಣ ಚಕ್ರ || 1 ||

ಅರಿವಿನ ಪರಿವೇ ಇಲ್ಲದೆ ತೊಳಲಾಡುವರು |

ಅರಿವೆಂದರೆ ಜ್ಞಾನ-ಸುಜ್ಞಾನಗಳೆಂಬುವರು ||

ಅರಿತ ಗುರುವಿನ ಹುಡುಕಾಟದಿ ಜನ್ಮ ಕಳೆವರು |

ಅರಿಹಂತಕನೇ ಅಕ್ಷರ ಪ್ರತಿಪಾದ್ಯನೆಂಬುವನೇ ಜ್ಞಾನಿ || 2 ||

ಅಜ್ಞಾನ ಕಳೆದು ಸುಜ್ಞಾನ ನೀಡುವ |

ವಿಜ್ಞಾನದಿ ಪೊಳೆ ಪೊಳೆವ ಸರ್ವಜ್ಞ ||

ವಿಜ್ಞಾಪನೆ ಮಾಡೇ ನಲಿದು ತಿಳಿಸುವ |

ವಾಙ್ಮನೋಹರ ಮೂರ್ತಿ ಒಲಿದು ಬರುವ || 3 ||

`ಅ' ದಿಂದ `ಜ್ಞ' ವರೆಗೆ ಪ್ರತಿ ಅಕ್ಷರಾರ್ಥ ತಿಳಿದವಗೆ |

ಆದರದಿ ಹರಿಯು ಅರಿತು ಸ್ವೀಕರಿಸುವ ||

ಸಾದರ ಭಕ್ತಿಯಲಿ ಜ್ಞಾನ ಮಾರ್ಗದಿ ಸಾಗುವ |

ವೇದ ಮೂರ್ತಿ ನಮ್ಮ ಶ್ರೀಕೃಷ್ಣವಿಠ್ಠಲನೇ ಜಗದ್ಗುರು ಎನ್ನುವ || 4 ||

136. ದಿವ್ಯರೂಪ ನೋಡಲು ದಿವ್ಯದೃಷ್ಟಿ ಪಾಲಿಸೋ |

ದಿವ್ಯ ದರುಶನದಿ ಧನ್ಯನಾಗುವೆ ಯೋಗೇಶ್ವರನೇ || ಪ ||

ದಿವ್ಯ ಯೋಗವಿದು ಸಕಲರಿಗೂ ಸುಲಭವಲ್ಲ |

ದಿವ್ಯ ಶಕ್ತಿ ಭವ್ಯ ವಿಶ್ವರೂಪ ವೀಕ್ಷಿಸಲು || ಅ ||

ದಿವ್ಯ ಆಭರಣಗಳ ಸಮೂಹವಿಲ್ಲಿದೆ |

ದಿವ್ಯಮಾಲೆ ಧರಿಸಿ ದಿವ್ಯಗಂಧ ಪೂಸಿದೆ ||

ದಿವ್ಯಾಯುಧಗಳ ಪಿಡಿದು ಅಚಿಂತ್ಯಾದ್ಭುತ |

ದಿವ್ಯಾನಂದ ದೇಶ ಕಾಲ ಗುಣತಃ ನಿರವಧಿಕನ || 1 ||

ಅನೇಕಾನೇಕ ಮುಖಗಳಿಂದ ಕೂಡಿದೆ |

ಅನೇಕಾನೇಕ ನಯನಗಳು ತುಂಬಿವೆ ||

ಅನೇಕಾನೇಕ ಆಶ್ಚರ್ಯ ನೋಟಗಳಡಗಿದೆ |

ಅನೇಕಾನೇಕ ಸೂರ್ಯಪ್ರಭೆ ಒಮ್ಮೇ ಮೂಡಿದೆ || 2 ||

ಸರ್ವಲೋಕನೊಳಗೊಂಡ ವಿಶ್ವತೋಮುಖ |

ಸರ್ವವ್ಯಾಪಿ ಸರ್ವಪ್ರೇರಕ ಸರ್ವಜ್ಞನಿವ ||

ಸರ್ವ ನಿಯಾಮಕ ಸತ್ಯಸ್ಯಸತ್ಯನಿವ |

ಸರ್ವ ದೇವೋತ್ತಮ ಶ್ರೀಕೃಷ್ಣವಿಠ್ಠಲನ ರೂಪ ಬಲು ಅಪರೂಪ || 3 ||

137. ಭಕುತಿ ಮೇಲೋ ವಿರಕ್ತಿ ಮೇಲೋ | ಯುಕುತಿವಂತರು ಪೇಳಬೇಕು || 1 ||

ಮುಕುತಿ ಮಾರ್ಗಕೆ ನವವಿಧ ಭಕುತಿ ಬೇಕು | ಶಕುತಿಯೊಂದೆ ಸಾಲದು ಹರಿ ಪ್ರೇರಣೆ ಬೇಕು || 2 ||

ಸತ್ಯಪಥದಿ ಸಾಗಲು ಭಗವದ್ಭಕ್ತಿ ಬೇಕು | ನಿತ್ಯ ಸಂಸಾರದಿ ವಿರಕ್ತಿ ಪೊಂದಬೇಕು || 3 ||

ಪತಿತಜೀವನ ಪಾವನವಾಗಲು ಭಕ್ತಿ ಬೇಕು | ಸತತಯತ್ನದಿ ಬದುಕು ಸವೆಸಬೇಕು || 4 ||

ಸದಾ ವಿಷಯ-ಸುಖದಿ ವಿರಕ್ತಿ ಬೆಳಸಿ | ಶುದ್ಧ ಹೃದಯದಿ ಪೂರ್ಣ ಭಕ್ತಿ ಧರಿಸಿ || 5 ||

ಸಾಧನೆಯ ಮಾರ್ಗದಿ ಸಾಗಿ ಸಮರ್ಪಿಸೆ | ಶೋಧಿಸಿ ಶ್ರೀಕೃಷ್ಣವಿಠ್ಠಲ ಮೋಕ್ಷ ಕರುಣಿಪ || 6 ||

138. ಪಿಡಿವೆ ನಿನ್ನ ಪಾದ ಎನ್ನಾಣೆಗೂ |

ಬಿಡದಿರೂ ಎನ್ನ ಹೃದಯ ನಿನ್ನಾಣೆಗೂ || ಪ ||

ಜೋಡಿಸಿದ ಕರದಿ ನೀ ಜಾರಿದರೂ |

ಹೊಡೆದು ತಿವಿದರೂ ನೀ ದಾಡೆÀಯಲಿ ||

ಬಡೆದು ಭಾರ ಹಾಕಿದರೂ ಬೆನ್ನಲಿ |

ಬಂದು ಸ್ತಂಭದಿಂ ಘುಡು ಘುಡಿಸಿದರೂ || 1 ||

ಪಾದವನ್ನೊತ್ತಿ ಪಾತಾಳಕೆ ಇಳಿಸಿದರೂ |

ಕಡಿದರೂ ಎನ್ನ ಶಿರವ ಪರುಶದಿ ||

ಗುಡ್ಡ ಕಾಡಲಿ ತಿರುಗಿಸಿ ಬಳಲಿಸಿದರೂ |

ಕದಿಯುವ ಕಳ್ಳ ನಾನೆಂದರೂ || 2 ||

ಬುದ್ಧಿ ಇಲ್ಲದ ಮೋಹ ಪರವಶನೆಂದರೂ |

ಕುದುರೆ ಕಾಲಲಿ ಎನ್ನ ತುಳಿಸಿದರೂ ||

ಕಾಡುವೆ ಬೇಡುವೆ ಫಲ ಅಲ್ಪ ಸಾಧನಕೆ |

ಶುದ್ಧ ಫಲದಾತ ಶ್ರೀಕೃಷ್ಣವಿಠ್ಠಲ ಕಡೆಹಾಯಿಸೋ || 3 ||

139. ಚಂಚಲವೀ ಮನ ಎಂದವಗೆ, ಸರ್ವೇಶನೇ |

ಅಚಲವಾದ ಮನವೀಯಬಾರದೆ ದಯದಿ || 1 ||

ಸಚರಾಚರದಲ್ಲೂ ನೆಲಸಿಹ ಜೀವೇಶ |

ಪಾಚಕನ ಕೈಯ್ಯಲಿ ಅಡುಗೆ ರುಚಿ ಇರುವಂತೆ || 2 ||

ಅಚಿಂತ್ಯಾದ್ಭುತ ಶಕ್ತಿ ಪೊಂದಿರುವ ದೇವನೇ |

ಶುಚಿರ್ಭೂತವಾದ ಜೀವನ ಸಕಲರಿಗೆ ಕೊಡೆ || 3 ||

ನಿಶ್ಚಯದಿ ಪಾಪ ಪೆಸರಿಲ್ಲದೆ ಓಡಿ ಪೋಪುದು |

ಅಚ್ಯುತನೇ ಶ್ರೀಕೃಷ್ಣವಿಠ್ಠಲ ನೀನಲ್ಲದೆ ನಮಗಾರು ದಿಕ್ಕು || 4 ||

140. ಕಾಡಾಟವ ದೂರ ಮಾಡೋ, ಗ್ರಹಗಳ ಕಷ್ಟ ತಾಳಲಾರೆ |

ಬೇಡಿದಿಷ್ಟಾರ್ಥ ನೀಡುವ ಸಕಲ ಗ್ರಹಬಲ ದೊರೆಯೆ || ಪ ||

ಚಾಡಿ ಮಾತು ಕೇಳಿ ಎನ್ನ ಹಿಂಸಿಸಲು ಬೇಡ |

ನಡೆಸಿದಂತೆ ನಡೆವ ಎನ್ನ ನಡೆ ಕಾಯೋ ||

ಕೊಡುವ ದೊರೆ ನೀನಿರಲು ಇನ್ನೊಬ್ಬರ ಹಂಗೇಕೆ |

ಕಡೆಗಾಣಿಸದೆ ದಯದಿ ಎನ್ನಪಾರು ಮಾಡೋ || 1 ||

ಆದರದಿ ನಿನ್ನ ಸಕಲ ಸೇವೆ ಮಾಳ್ಪೆ ಅವಕಾಶ ಕೊಡು |

ಸಾಧಿಸದೆ ನಿನ್ನೊಲುಮೆ ಈ ಸಾಲದ ಜೀವನವೇಕೊ ||

ಭಾಧಿಸುತಿರುವ ಷಡ್ವೈರಿಗಳ ಬಾಧೆ ತಡೆಯದಾದೆ |

ಬದುಕು ದುರ್ಭರವಾಗಿದೆ ನಿನ್ನಡೆಗೆ ದಾರಿ ತೋರೋ || 2 ||

ಮರ್ದಿಸೆನ್ನ ಸರ್ವಪಾಪ ಸನ್ಮತಿಯ ಪಾಲಿಸಿ |

ಮದನನಯ್ಯ ನಿನ್ನ ಪಾದದಡಿ ಬಿದ್ದಿರುವೆ ||

ಕಂದನಂದದಿ ಎನ್ನೆತ್ತಿ ಸಂರಕ್ಷಿಸೋ ಬೇಗ |

ತಂದೆ ಶ್ರೀಕೃಷ್ಣವಿಠ್ಠಲ ನಿನ್ನನೇ ಮೊರೆಹೊಕ್ಕಿರುವೆ || 3 ||

141. ಮಂತ್ರ ಮಹಾಮಂತ್ರ ಸರಳ ಮಂತ್ರವಿದು |

ಸಂತತ ಜಪಿಸೆ ಜೀವನ ಸಾರ್ಥಕಗೊಳಿಪುದು || ಪ ||

ಬಾಳಿಗೆ ಬಲವೀಯುವ ಮಂತ್ರ |

ಹಲವು ವ್ಯಸನದಿಂ ಕಾಪಿಡುವ ಮಂತ್ರ ||

ಕುಳಿತಲ್ಲಿ ನಿಂತಲ್ಲಿ ಜಪಿಸಬಹುದೀ ಮಂತ್ರ |

ನಾಲಿಗೆಗೆ ರಸ, ಮನಸಿಗೆ ಮುದವೀವ ಮಂತ್ರ || 1 ||

ಶತ್ರುನಾಶಕ ಮಹಾವ್ಯಾಧಿ ನಿವಾರಕ ಮಂತ್ರ |

ಹಿತಕರ ಸಂಜೀವಿನಿ ದಿವ್ಯೌಷಧ ಮಂತ್ರ ||

ಸರ್ವೈಶ್ವರ್ಯ ಫಲಪ್ರದ ಮಂತ್ರ |

ಭವ ಸಾಗರ ಸುಲಭದಿ ದಾಟಿಸುವ ಮಂತ್ರ || 2 ||

ಭಕ್ತರಿಗೆ ಶ್ರೇಯಃ ಪ್ರಾಪ್ತಿಕರ ಮಂತ್ರ |

ಮುಕ್ತಿ ಮಾರ್ಗ ತೋರುವ ಸುಲಭ ಮಂತ್ರ ||

ಸಕಲ ಉಪನಿಷತ್ತುಗಳ ಸಾರ ಈ ಮಂತ್ರ |

ಶ್ರೀಕೃಷ್ಣವಿಠ್ಠಲನ ನಾಮಜಪ ಮಂತ್ರ || 3 ||

142. ಶಿಕ್ಷಿಸದೆ ಬಿಡುವೆಯಾ ಎನ್ನ ದೋಷಗಳ |

ಲಕ್ಷಿಸದೆ ಮನ್ನಿಸುವೆಯಾ ಕರುಣಾಕರ || 1 ||

ಪಾಪಗಳ ಪರ್ವತವೇ ನಾನಾಗಿರುವಾಗ |

ಚಾಪಧರನೇ ಎನ್ನ ಅವಗುಣಗಳಿಗೆ || 2 ||

ನೀನಿತ್ತ ಮಾನವ ಜನುಮದಿ |

ನಿನ್ನನ್ನೇ ಮರೆತಿರುವ ಪಾಪಕೆ || 3 ||

ಸಾಧನೆಯ ದೇಹವ ವ್ಯರ್ಥಗೊಳಿಸಿ |

ಕ್ರೋಧ ಕಾಮವಶದಿ ಕಾಲ ಕಳೆದೆನ್ನ || 4 ||

ಕ್ಷಣ ಭಂಗುರದ ಈ ಸಂಸಾರದಿ |

ಮಣಭಾರ ತಪ್ಪೆಸೆಗುವ ಎನಗೆ || 5 ||

ಭಕುತಿ ಒಂದಿನಿತು ಮಾಡಲಿಲ್ಲ |

ಮುಕುತಿದಾಯಕ ಶ್ರೀ ಕೃಷ್ಣ ವಿಠ್ಠಲ || 6 ||


143. ಮಾನಾಭಿಮಾನ ನಿನ್ನದೇ, ಶ್ರೀ ಲಕುಮಿ ವಲ್ಲಭ || ಪ ||

ನಿನ್ನದೇ ಸಕಲ ಸಂಪದವು || ಅ ||

ಕ್ಷಣದಿ ಅಟ್ಟಕ್ಕೇರಿಸಿ ಕಾಣದ ಸೌಭಾಗ್ಯವೀವೆ |

ಅನೇಕ ಮದಗಳಿತ್ತು ಮಿನುಗಿಸುವೆ ||

ಚಿನ್ಮಯ ರೂಪದಿ ಸಲಹುವೆ |

ಘನ್ನ ಮಹಿಮೆ ಕೃಪೆ ಸುರಿಸುತ || 1 ||

ಚೆನ್ನಿಗ ರಾಯನ ನೋಟ ಸರಿದರೆ |

ಬನ್ನ ಬಡಿಸುವೆ ಈ ಸಂಸಾರದಿ ||

ಆಣೆ ಮಾಡಿ ಹೇಳುವೆ ಶ್ರೀಕೃಷ್ಣವಿಠ್ಠಲನ |

ಪೂರ್ಣ ಅರಿತವರ್ಯಾರು ಮೂರ್ಲೋಕದೊಳಿಲ್ಲ || 2 ||

144. ಏನಾದರೊಂದನ್ನು ಕರುಣಿಸೆನಗೆ ದೇವಾ |

ಮುನಿಯೋಗಿಗಳಿಗೆ ಪಾದದ್ವಯವಿತ್ತೆ || ಪ |

ನಖದಿಂದ ಗಂಗೆಗೆ ಜನುಮವಿತ್ತೆ |

ಸಖ ಪಾರ್ಥನಿಗೆ ಜ್ಞಾನವನಿತ್ತೆ ||

ಕುಕ್ಷಿಯೊಳು ಬ್ರಹ್ಮಾಂಡಗಾಶ್ರಯವಿತ್ತೆ |

ಲಕ್ಷ್ಮಿಗೆ ವಕ್ಷಸ್ಥಳ ವಾಸವವಿತ್ತೆ || 1 ||

ಪ್ರಲಯದಿ ಸಕಲ ಜೀವರುದರಲಿಟ್ಟೆ |

ವಾಲಿಯ ತರಿದು ಸುಗ್ರೀವಗೆ ರಾಜ್ಯವನ್ನಿತ್ತೆ ||

ಬಾಲಿಕೆ ತ್ರಿವಕ್ರೆಗೆ ಸುಂದರ ರೂಪವಿತ್ತೆ |

ಬಲಿಯ ಪಾತಾಳಕ್ಕೊತ್ತಿ ನಿನ್ನನೇ ಇತ್ತೆ || 2 ||

ಧ್ರುವಗೆ ವರದಿ ಚಿರಸ್ಥಾನವನಿತ್ತೆ |

ಸುವಧು ದ್ರೌಪದಿ ಕರೆಗೆ ವಸ್ತ್ರವನಿತ್ತೆ ||

ಪವನಪುತ್ರಗೆ ಸಂಪೂರ್ಣಾಲಿಂಗನವಿತ್ತೆ |

ಭವಭಯ ಪರಿಹರಿಸೋ ಶ್ರೀಕೃಷ್ಣವಿಠ್ಠಲ || 3 ||

"ಭ್ರಮರಗೀತೆ"

145. ಮೂರ್ಖರಾದೆವು ನಾವು ಹೇ ! ಉದ್ಧವ |

ಏಕೋಭಾವದಿ ನೆನೆದವನ ರೂಪವ || ಪ ||

ಶಿಕ್ಷಿಸದೇ ನಮ್ಮ ಅಪಚಾರ ಲಕ್ಷಿಸದೇ |

ಸುಖವನಿತ್ತು ತಣಿಸಿದವ ಮನಕೆ || ಅ ||

ಬೀಸುವ ಗಾಳಿಯೇ ಗುಯ್ಗುಡುವ ಭ್ರಮರವೇ |

ಕಸ್ತೂರಿ ಬೊಟ್ಟನಿಟ್ಟು ವನಮಾಲೆ ಧರಿಸಿದ ||

ವತ್ಸಾಂಕಿತ ಹೃದಯ ನಮ್ಮೆಲ್ಲರ ಕಣ್ಮಣಿ |

ವಶವಲ್ಲ ತಾನೊಬ್ಬರ, ಸಕಲರೂ ಅವನವಶ || 1 ||

ಬೇಗ ಬರುವೆನೆಂದು ಪೇಳಿ ಪೋದವನ |

ಮಂಗಳೆಯರೆಲ್ಲಾ ಅವನ ಬರವ ಕಾಯುತ ||

ಅಂಗಸಂಗ ರಾಸಲೀಲೆಯ ನೆನೆ ನೆನೆಸಿ |

ಕಂಗಳಾಶ್ರುವಿನಿಂದ ತುಂಬಿ ಕಾಯುತಿರೆÉ || 2 ||

ಲಕ್ಷಿಸದೇ ಗೋಪಿಯರ ಅಳಲು |

ಗೋಕುಲ ಬಿಟ್ಟು ಭರದಿಂ ತೆರಳಿದವನ ||

ಮೋಕ್ಷರಸ ವೀಕ್ಷಿಸುತ ಕಾಯುತಿಹೆವು |

ಲಕ್ಷ್ಮೀಪತಿ ಶ್ರೀಕೃಷ್ಣವಿಠ್ಠಲನ ತಂದು ತೋರು || 3 ||

"ಕುಚೇಲೋಪಾಖ್ಯಾನ"

146. ಸಾಂದೀಪನಿ ಗುರ್ವಾಶ್ರಮದಲ್ಲಿದ್ದ ಸಹಪಾಠಿ ತಾನೆಂದು ಬೀಗದೆ |

ಅಂದು ಹೊರಟ ಕುಚೇಲ ಬ್ರಾಹ್ಮಣನೊಬ್ಬ ಶ್ರೀಕೃಷ್ಣ ದರುಶನಕೆ || 1 ||

ಮಡದಿ ತಂದಿತ್ತ ಎರವಲು ಅವಲಕ್ಕಿ ಹರಕು ಬಟ್ಟೆಗಂಟು ಕಂಕುಳಲಿಟ್ಟು |

ಎದುರಲವನ ಕಾಣಲು ಕಂಬನಿ ಮಿಡಿದು ತೆÀಕ್ಕೈಸಿ ಬಿಕ್ಕುತ ಸ್ಮರಿಸಿ ಕಳೆದ ದಿನಗಳ ||2||

ಪಾದ ತೊಳೆದು ಬ್ರಾಹ್ಮಣನ ಪರಿಪರಿಯಲಿ ಉಪಚರಿಸಿದ ರುಕ್ಮಿಣಿ ಸಮೇತನಾಗಿ |

ಎದ್ದು ಹೋಗಿ ಬರುವೆನೆಂದವನ ಸಂತೋಷದಿ ಬೀಳ್ಕೊಟ್ಟ ಸರ್ವವಿದಿತನು || 3 ||

ಬೇಡದೇನೂ ಹಿಂತಿರುಗಿದವ ಕಂಡ ಸತಿ ಸುತರ ಸಂಪದ್ಭರಿತ ಆನಂದಿತರ |

ನೀಡಿದರೆನಗೆ ನಿನ್ನೇ ನೀಡು ಬೇರೇನೊ ಬೇಡದಂತೆ ಮಾಡು ಎಂದ ಕಣ್ಣಾಲಿ ತುಂಬಿ ||4||

ಬೇಡದಿದ್ದರೂ ಭಕ್ತನ ಮನದಿಚ್ಛೆ ಅರಿತುಕೊಳ್ಳುವ ಹೃದ್ಗುಹಾವಾಸಿ |

ಒಡೆಯ ಶ್ರೀಕೃಷ್ಣವಿಠ್ಠಲ ಮಾಡಿದುಪಕಾರವ ನೆನೆನೆನೆದು ಪುಳಕಿತನಾದ || 5 ||

"ಶ್ರೀ ಮದ್ಭಾಗವತ"

147. ನಾರಾಯಣ ಮಂತ್ರ ಜಪಿತ ನಾರದ ಪ್ರಾರ್ಥಿಸಿದಂತೆ ಬಾ- |

ದರಾಯಣ ರಚಿಸಿದ ಶ್ರೀಮದ್ಭಾಗವತ ಆನಂದದಿ || 1 ||

ವಿರಾಗಿ ಶುಕಮುನಿಗೆ ಪೇಳಿದರ್ಮೊದಲು ಒಲುಮೆಯಿಂದಲಿ |

ಹರಿ ಪ್ರೇರಿತ ಶುಕರು ಸಂಚರಿಸುತ ಬಂದರು ಗಂಗಾ ತಟಕೆ || 2 ||

ಪರೀಕ್ಷಿತರಾಜ ಪರಮಭಾಗ್ಯದಿ ಭಾಗವತೋಪದೇಶ ಪಡೆದವರಿಂದಲಿ |

ನಿರ್ಮಲ ಮನದಿ ನಿರೀಕ್ಷಿಸುತ ಕಾಲಾಗಮನ ಸಪ್ತದಿನ ಪರ್ಯಂತ || 3 ||

ಖಟ್ವಾಂಗರಾಜ ಮೂಹುರ್ತದಿ ಸಾಧಿಸಿದ ಸತ್ಯಲೋಕ ಖಗಪತಿ ಧ್ಯಾನದಿ |

ಸಟೆಯಲ್ಲ ಶ್ರೀಮದ್ಭಾಗವತ ನೀಡುವುದು ಸಕಲೇಷ್ಟಗಳ ಇಹಪರದಿ || 4 ||

ಪುಷ್ಟಿ ಕೊಡುವುದು, ಸಂತುಷ್ಟಿ ಕೊಡುವುದು ಸಕಲ ಸಜ್ಜನರ ಮನಕೆ |

ದಿಟವಿದು ಶ್ರೀ ಕೃಷ್ಣ ವಿಠ್ಠಲನಾಣೆಗೂ ಸತ್ಯ, ಸತ್ಯ, ಪರಮ ಸತ್ಯ || 5 ||

148. ದರುಶನ ತೋರೋ ದಯಾನಿಧೇ ಘನಶ್ಯಾಮ |

ದುರಿತರಾಶಿ ತರಿದು ಒಲವಿಂದ ದಯೆ ತೋರು || ಪ ||

ಕರೆದಾಕ್ಷಣ ಬಂದು ಕರಿಯ ಪೊರೆದೆ |

ಆರ್ತಳಾದ ದ್ರೌಪದಿಗೆ ಅಕ್ಷಯಾಂಬರವಿತ್ತೆ ||

ಪೋರ ಪ್ರಲ್ಹಾದಗೆ ಇದ್ದಲ್ಲಿ ಬಂದು ದರ್ಶನವಿತ್ತೆ |

ಹರಿಧ್ಯಾನಿಪ ಧ್ರುವಗೆ ಒಲಿದುಎದುರು ನಿಂತೆ || 1 ||

ಕರೆಯದೆಯೆ ಸರಳ ಗೋಪಾಲರೊಡನಾಡಿದೆ |

ನಾರಾಯಣನೆಂದೊಮ್ಮೆ ಕರೆಯಲು ಮೋಕ್ಷವಿತ್ತೆ ||

ಆರ್ತಕರೆಯಾಲಿಸಿ ಒದಗುವ ನರಹರಿಯೇ |

ಭರ್ತೃ ಶ್ರೀಕೃಷ್ಣವಿಠ್ಠಲಾ ನಿನ್ನ ದರ್ಶನ ಎನಗೆಂದೀವೆ ? || 2 ||

149. ಸ್ವರ್ಗಾದಿ ಲೋಕಗಳಲ್ಲಿ ಇಡಬೇಡಾ ಎನ್ನನ್ನು |

ಸರ್ವದಾ ಶ್ರೀಕೃಷ್ಣವಿಠ್ಠಲ ನಿನ್ನ ಪಾದತಳದಲ್ಲಿಡು || 1 ||

ಜಡಮತಿಯಾಗಲಿ ಮತಿವಂತನಾಗಲಿ ಪ್ರತಿ ಜನುಮದಿ |

ದೃಢ ಭಕುತಿ ನಿನ್ನಲಿ ನೀಡು ಶ್ರೀಕೃಷ್ಣವಿಠ್ಠಲ || 2 ||

ಭಕ್ತಜನರು ಮುಂದೆ ನೀನವರ ಹಿಂದೆಯಂತೆ

ಭಕ್ತವತ್ಸಲ ಶ್ರೀಕೃಷ್ಣವಿಠ್ಠಲ ಸದಾಭಕ್ತಿ ನೀಡು || 3 ||

ಭಕ್ತಿಯಿಂದ ಬೇಡಿದ್ದು ನೀಡುವ ಅಕ್ಷಯದಾಯಕ |

ಶ್ರೀಕೃಷ್ಣವಿಠ್ಠಲ ನಿನ್ನೇ ಸದಾ ಬೇಡುವಂತೆ ಮಾಡು || 4 ||

ಯಾವ ಪುಣ್ಯ ಲೋಕದಲ್ಲೂ ಆಸೆ ಇರಿಸದೆ ಎನಗೆ |

ಕೈವಲ್ಯದಾಯಕ ಶ್ರೀಕೃಷ್ಣವಿಠ್ಠಲ ಸೇವೆ ಭಾಗ್ಯಕರುಣಿಸು || 5 ||

ಅಜ್ಞಾನದಿ ನಾ ಮರೆತರೂ ನೀ ಮರೆಯದಿದ್ದರೆ ಸಾಕು |

ಸುಜ್ಞಾನಮೂರ್ತಿ ಶ್ರೀಕೃಷ್ಣವಿಠ್ಠಲನ ಕೃಪೆಯಾದರೆ ಧನ್ಯೆ || 6 ||

"ಮಾನಸ ಪೂಜೆ"

150. ದಿವ್ಯ ಪೂಜೆ ಮಾಡಿರೋ ಭಗವಂತನ ಮನದಣಿಯ |

ಕಾಸು ಖರ್ಚಿಲ್ಲದೆ ಹೊರಗಿರುವ ಸ್ವಾಮಿಯೇ ಅಂತರಂಗದಲ್ಲಿರುವನೆಂದು || ಪ ||

ಮನವ ಶುಚಿಮಾಡಿ ಸಾರಿಸಿ ಚಕ್ರಾಬ್ಜ ಮಂಡಲದಿ |

ಒಂದೇ ಮನದಿ ಕರೆದು ಉನ್ನತ ಪೀಠದಿ ಕುಳ್ಳಿರಿಸಿ ||

ಅಘ್ರ್ಯಪಾದ್ಯಾಚಮನ ಮದುಪರ್ಕದಿ ಉಪಚರಿಸಿ |

ಸಕಲ ಪವಿತ್ರ ಜಲ ಸ್ಮರಿಸಿ ಶುದ್ಧೋದಕ ಸ್ನಾನ ಮಾಡಿಸಿ || 1 ||

ಶ್ರೇಷ್ಠ ದುಕೂಲವ ಉಡಿಸಿ ಮೇಲೆ ವಸ್ತ್ರ ಹೊದಿಸಿರಿ |

ಸರ್ವಾಲಂಕಾರ ಮಾಡಿ ಕಿರೀಟ, ಹಾರ, ಕೇಯೂರ ||

ಕಡಗ, ಕಂಕಣ, ಮಕರಕುಂಡಲ, ಕಸ್ತೂರಿ ತಿಲಕ ಇಡಿ |

ತುಳಸಿ, ಶ್ರೀಗಂಧ, ಪುಷ್ಪದಿಂದ ಅರ್ಚಿಸಿ ಮೆಚ್ಚಿಸಿ || 2 ||

ಸರ್ವಭಕ್ಷ, ಭೋಜ್ಯ, ಫಲ, ತಾಂಬೂಲ ನೈವೇದ್ಯವ ಅರ್ಪಿಸಿ |

ಸರ್ವವಿಧ ಆರತಿ ಬೆಳಗಿ ಪ್ರದಕ್ಷಿಣ ನಮಸ್ಕಾರ ಸಲ್ಲಿಸಿ |

ಷೋಡಶೋಪಚಾರ ಒಂದೇ ಮನದಿ ಮಾಡಿ ಸಂತೋಷಿಸಿ |

ಸರ್ವ ಸಮರ್ಪಣವೆಂದು ತನ್ನನ್ನೇ ಶ್ರೀಕೃಷ್ಣವಿಠ್ಠಲಗರ್ಪಿಸಿ ಮಾನಸಪೂಜೆ ಮಾಡಿರಿ || 3 ||

151. ರಂಗಾ ನಿನ್ನ ಅಂಗಸಂಗವಿತ್ತು ಸಲಹೋ | ನಂದೇನೋ ಸಕಲವೂ ನಿನ್ನದೇ || 1 ||

ಸಂಸಾರ ಸೃಷ್ಟಿಸಿ ಸುಖ- ದುಃಖವಿತ್ತು | ಇಂದ್ರಿಯದಾಸೆಗೆ ಬಲಿಪಡಿಸಿ || 2 ||

ಸಂಚಿತ ಕರ್ಮ ಪ್ರಾರಬ್ಧವನುಣಿಸಿ | ಸಂದಣಿಸುವ ಲೆಕ್ಕಿಗ ಮಿತಿ ಉಂಟೇನೋ || 3 ||

ಬಂಧ ಮೋಕ್ಷ ಕೊಡುವ, ಬಿಡಿಸುವ | ಚೆಂದದ ಪರಿಪೂರ್ಣಗುಣ ಸಾಗರನೇ || 4 ||

ನುಂಗುವೆ ಸಕಲ ಲಯಕಾಲದಿ ಬಿಡದೆ | ಬೊಮ್ಮಾಂಡನಾಯಕ ಶ್ರೀಕೃಷ್ಣವಿಠ್ಠಲ || 5 ||

152. ಅಂತಿಲ್ಲ ಇಂತಿಲ್ಲ ಸುಳ್ಳಿನ ಕಂತೆಯೆ ಮೊದಲಿಲ್ಲ |

ಅಂತರಂಗದಿ ಅಂತರ್ಯಾಮಿ ಕಾಣಲು ಅಸಂಭವವೇನಿಲ್ಲ || ಪ ||

ಅಸಂಪ್ರಾಜ್ಞಾತ ಸ್ಥಿತಿಯೇ ಬೇಕಿಲ್ಲ, ಆಡಂಬರಗಳ ಮಾತೇ ಬೇಡಾ |

ಸರ್ವವ್ಯಾಪಿತ ಶ್ರೀಕೃಷ್ಣವಿಠ್ಠಲನ ದೃಷ್ಟಿಸಲು ಒಳಗಣ್ಣಿದ್ದರೆ ಸಾಕು || 1 ||

ಆನಂದದಿ ಮಾಡಿದ ಸುಕರ್ಮವ ಭಕ್ತಿಯಲಿ ಸಮರ್ಪಿಸೆ |

ಅನಂತ ಫಲ ಕೊಡುವ ನಮ್ಮ ಶ್ರೀಕೃಷ್ಣವಿಠ್ಠಲ ಬಿಡದೆ || 2 ||

ಸುರಾಸುರ, ಧನಿಕನಿರ್ಧನಿಕ ಎಂದು ಭೇದವಿಲ್ಲದೆ ಒಲಿವ |

ಆರ್ತಿಯ ಕರೆಗೆ ಓಡೋಡಿ ಬರುವ ನಮ್ಮ ಶ್ರೀಕೃಷ್ಣವಿಠ್ಠಲ || 3 ||

ಅಲ್ಲಿ ಇದ್ದಾನೆ ಇಲ್ಲಿ ಇದ್ದಾನೆ ಎನ್ನದೇ ಭಗವಂತನ ಸರ್ವತ್ರ ಕಾಣು |

ಅಚಿಂತ್ಯಾದ್ಭುತ ನಮ್ಮ ಶ್ರೀಕೃಷ್ಣವಿಠ್ಠಲ ಎಲ್ಲಿ ಕಡೆ ಕಂಡಾನು || 4 ||

ಆನಂದಪೂರ್ಣ ನಿತ್ಯತೃಪ್ತನಿಗೆ ಕೊಡುವುದೇನೂ ಬೇಕಿಲ್ಲ ಕೊಡುವುದಾದರೆ |

ಅಭಿಮಾನ ಬಿಟ್ಟು ಒಂದೇ ಮನದಿ ತನ್ನನೇ ಕೊಟ್ಟರೆ ಸಾಕು ಶ್ರೀಕೃಷ್ಣವಿಠ್ಠಲ ಸ್ವೀಕರಿಪ || 5 ||

153. ನಾ ಧನವಂತ ಸೌಭಾಗ್ಯವಂತ ಭಗವಂತನೆಂಬೋ |

ಸುಧನ ಪೊಂದಿದ ಮಾನವಂತ ||

ವಿಷಯ ಸುಖ ಬೇಡದ, ಅನ್ಯ ದೇವತಾರಾಧಿಸದ |

ಎಂದೆಂದೂ ಅಲ್ಪ ವರ ಅಪೇಕ್ಷಿಸದ ಗುಣವಂತ ||

ಹಿಡಿ ಹಿಟ್ಟಿಗಾಗಿ ಕಲ್ಪವೃಕ್ಷವ ಪೀಡಿಸದೇ ಸಂಸಾರತಾರಕ |

ಶ್ರೀಕೃಷ್ಣವಿಠ್ಠಲನ ಎಂದೆಂದೂ ಏನು ಬೇಡದ ಬುದ್ಧಿವಂತ |

ಬೇಡುವುದಾದರೆ ಮೋಕ್ಷಪ್ರದ ಅಕ್ಷಯನನ್ನೆ ಬೇಡುವೆ ||

154. ಅಲ್ಲಿ ಅಲೆದೆ ಇಲ್ಲಿ ಅಲೆದೆ ಎಲ್ಲೆಲ್ಲೊ ಅಂಡಲೆದೆ |

ಬಲ್ಲದೇ ನಿಜ ಸುಖದ ನೆಲೆಯಾ || ಪ ||

ಶೃಂಗಾರದಿ ಮೈಮೆರೆತೆ ಬಂಗಾರ ಭಗವಂತನರಿಯದೆ |

ಸಂಗ ತೊರೆಯದೆ ಮಂಗನಂತೆ ಕುಣಿದಾಡಿದೆ || 1 ||

ಸುತ್ತಿ ಸುತ್ತಿ ಸೋತು ಮತ್ತೆ ಗತ್ತು ಬಿಡದೆ |

ಆರ್ತತೆಯ ಭಾವ ಅರಿಯದೆ ಕರ್ತೃನ ಕಡೆಗಣಿಸಿದೆ || 2 ||

ಮಣಿಸಿ ಹಣೆಯ ಸಕಲೆಡೆ ಸುಣ್ಣವಾದೆನಾದರೂ

ಕಣ ಕಣದಲ್ಲಿರುವನ ಚಣ ಕಾಲವೂ ಕಾಣದಾದೆ || 3 ||

ಅಕ್ಷಯದಾತನ ಮರೆತು ಸಕಲಾಪೇಕ್ಷೆ ಬಯಸಿದೆ |

ಸಾಕ್ಷಿ ಶ್ರೀಕೃಷ್ಣವಿಠ್ಠಲನ ಪಾದಭಕ್ತಿಯೇ ನಿಜಸುಖದನೆಲೆ ಎಂದರಿಯದೆ || 4 ||

155. ಗುರು ಕರುಣೆಯಿಂದ ಹರಿ ಸ್ಮರಣೆಯಾಗಲಿ || ಪ ||

ನಿರಂತರ ಜಪದಿಂದ ಹರಿ ದರುಶನವಾಗಲಿ || ಅ ||

ಜಪ-ತಪಗಳೊಂದು ಅರಿಯದೆ |

ವೃತ ನೇಮಗಳೊಂದು ಸಾಧಿಸದೆ ||

ಸುಖಲೋಲುಪದಿ ಜೀವಿಸಿದೆ |

ಹೀಗೇ ಜನುಮ ಹೋಯಿತಲ್ಲ || 1 ||

ಸಾಧನ ಶರೀರವೆಂದು ತಿಳಿಯದೆ |

ವ್ಯರ್ಥವಾಗಿ ದಿನ ಕಳೆಯುತಾ ||

ಇನ್ನಾದರೂ ಗುರುಗಳೊಲುಮೆಯಿಂದ |

ಶ್ರೀಕೃಷ್ಣವಿಠ್ಠಲನ ಸೇವಾ ಭಾಗ್ಯಸಿಗಲಿ || 2 ||

156. ನಿನ್ನ ಸ್ಮರಣೆ ದಯಪಾಲಿಸೋ | ಜೀಯಾ | ನಿನ್ನ ಪ್ರೇರಣೆ ಇಲ್ಲದೆ

ದೊರೆಯದೋ ಈ ಭಾಗ್ಯ || ಪ ||

ಜ್ಞಾನಿ ನೀನು, ಅಜ್ಞಾನಿ ನಾ ನಿನ್ನ ಗುಣಗಳರಿಯೆ |

ಭಕ್ತಿಗೆ ಒಲಿದು ಮುಕ್ತಿಯ ನೀಡುವವ ನೀನೆ || 1 ||

ಅನಂತ ಗುಣಗಳ ಮಹಿಮನೇ, ಭವಪಾಶ ಮೋಚಕನೇ |

ಪಂಚಭೇದ, ತಾರತಮ್ಯ ಜ್ಞಾನ ಕೊಟ್ಟು ಸಲಹೋ ಕರುಣಾಕರನೇ || 2 ||

ನನ್ನನು ಅರಿಯೇ, ನಿನ್ನನು ತಿಳಿಯೇ ಅಸ್ವತಂತ್ರ ನಾನು |

ಸೂತ್ರಧಾರಿ ಶ್ರೀಕೃಷ್ಣವಿಠ್ಠಲ ಎಲ್ಲ ನೀನಾಡಿಸಿದಂತೆ || 3 ||

157. ಸದಾ ಸಿರಿವಂತ ಆಗುವಂತೆ ಅನುಗ್ರಹಿಸೋ ಸಿರಿವಲ್ಲಭ ನಿನ್ನ ದಯದಿ || ಪ ||

ಭಕ್ತಜನರ ಸಂಗದಿ ಕುಟುಂಬ ಸಿರಿವಂತವಾಗಲಿ |

ಸದಾ ನಿನ್ನ ನಾಮಜಪದಿ ಕೋಟಿ ಸಿರಿವಂತವಾಗಲಿ ||

ಎನ್ನ ಹೃದಯದಿ ನೀನೇ ನೆಲಸಿ ಲಕ್ಷ್ಮೀಪತಿ ನಿವಾಸವಾಗಲಿ |

ಸಮಾನ ಭಾವದಿ ಸರ್ವರಲಿ ಸರಸಿಜನಾಭನ ಕಾಣುವಂತಾಗಲಿ || 1 ||

ನಿನ್ನ ಪಾದ ದರುಶನದ ಆಶೆ ಮನದಿ ಹೆಚ್ಚುತಿರಲಿ |

ಎನ್ನ ಪಾಪರಾಶಿ ಎಂಬ ಬಡತನ ಕರಗಲಿ ||

ಭಕ್ತಿ, ಜ್ಞಾನದ ಧನಕನಕ ರಾಶಿ ಸಿಗುವಂತಾಗಲಿ |

ಶ್ರೀಕೃಷ್ಣವಿಠ್ಠಲನ ದಯದಿ ಈ ದುರಾಸೆ ಎಂದಿಗೂ ಇರಲಿ || 2 ||

158. ನಮಿಪೆ ಶ್ರೀಹರಿಪಾದಪದ್ಮಕೆ, ಮುಕುತಿಪಥ ತೋರುವಪಾದ |

ಅಮಿತ ಸೂರ್ಯ ಸಮಪ್ರಭ ನಖಕಾಂತಿಯುಕ್ತ ಪಾದ ||

ಋಷಿಮುನಿ ವಂದಿತ ಪಾದ, ಶಂಖ ಚಕ್ರಾಂಕಿತ ಪಾದ |

ಜಾಹ್ನವಿಜನಕ ಪಾದ, ಸರ್ವಲೋಕಗಳಳೆದ ಪಾದ || 1 ||

ಅಂಗುಷ್ಟದಿ ಭೂಮಿಯ ಒತ್ತಿದ ಪಾದ, ಜಾನಕಿ ಸೇವಿತ ಪಾದ |

ಅಹಲ್ಯೋದ್ಧಾರಕ ಪಾದ, ಶಬರಿ ಭಕ್ತಿಯಲಿ ಪೂಜಿಪ ಪಾದ ||

ದ್ವಿಜ ಸ್ಮರಿಸುವ ಪಾದ, ಸದಾ ಹೃನ್ಮನದಲ್ಲಿ ನೆನೆವ ಪಾದ |

ಭಕ್ತರಿಗೊಲಿದು, ದರುಶನದಿ ದಯಪಾಲಿಪ ಪಾದ, ಅದುವೇ ಶ್ರೀಕೃಷ್ಣವಿಠ್ಠಲನ ದಿವ್ಯಪಾದ || 2 ||

159. ನಿನ್ನ ಇಚ್ಛೆಯೇ ನನ್ನ ಇಚ್ಛೆಯಾಗಲಿ |

ನಿನ್ನ ಸೇವೆಯೇ ನನ್ನ ಕರ್ಮವಾಗಲಿ || 1 ||

ನಿನ್ನ ಧ್ಯಾನ ನಿರಂತರ ನನ್ನದಾಗಲಿ |

ನನ್ನ ಆತ್ಮ ಎಂದೂ ಪರಮಾತ್ಮ ನಿನ್ನದಾಗಲಿ || 2 ||

ನನ್ನದೆಂಬುದು ಎಲ್ಲಾ ನಿನ್ನದಾಗಲಿ |

ನನ್ನ ಮೇಲೆ ಸದಾನುಗ್ರಹ ನಿನ್ನದಿರಲಿ || 3 ||

ನಾನು ನಿನ್ನವಳೆಂದು ಮಾತ್ರ ಮರೆಯದಿರು |

ನನಗೆ ಶ್ರೀಕೃಷ್ಣವಿಠ್ಠಲನ ಸ್ಮರಣೆವೊಂದೇ ಸಾಕು || 4 ||

160. ಸುಗುಣಾಂತರಂಗ ಸಂಸಾರ ಭಯತಾರಕ |

ಸುಂದರ ಮೂರುತಿ ಸಕಲ ಪಾಪ ಪರಿಹಾರಕ || 1 ||

ಸವೋತ್ತಮ ಸರ್ವ ಪರಿ ಪಾಲಕ |

ಸರ್ವೇಶ ಸರ್ವ ಶಬ್ದವಾಚ್ಯ ಸರ್ವಜ್ಞ || 2 ||

ಸೃಷ್ಟಿಕರ್ತ ಸರ್ವಾಭೀಷ್ಟ ಫಲಪ್ರದಾತ |

ಸರ್ವಾಂತರ್ಯಾಮಿ ಶ್ರೀಕೃಷ್ಣವಿಠ್ಠಲ ಸಕಲರ ಸಲಹಲಿ || 3 ||

161. ಚದುರಂಗವ ನಾಡಿದ ಚದುರ ಚತುರ್ಯುಗದಿ || ಪ ||

ಚೆಂದದಿ ನೋಡಿ ಕಾಯಿಯ ನಡೆಸಿ ಮಾಯದಿ || ಅ ||

ಲೋಕವ ಹಾಸನ್ನಾಗಿಸಿ ಚೇತನಾಚೇತನರ ಕಾಯನ್ನಾಗಿಸಿ |

ಸಕಲರ ಅಂತರಂಗವರಿತು ತಾ ಮುನ್ನಡೆಸಿದ || 1 ||

ಸಾಧನೆ ಮಾರ್ಗದಿ ನಡೆದವರೆಷ್ಟೋ ಮನೆಗಳ ಹಾರಿ ಕುಣಿದವರೆಷ್ಟೋ |

ಕೊಂದವರೆಷ್ಟೋ ಕರ್ಮಾನುಸಾರದಿ ಕೊಲ್ಲಿಸಿ ಕೊಂಡವರೆಷ್ಟೋ || 2 ||

ಕುಣಿಸಿದಂತೆ ಕುಣಿವ ಬಿಂಬದ ಪ್ರತಿಬಿಂಬ ತಾನೆಂದರಿಯದೆ |

ಮಣಿದು ಸ್ವತಂತ್ರ ಸರ್ವೋತ್ತಮ ಶ್ರೀಕೃಷ್ಣವಿಠ್ಠಲನ ತಿಳಿಯದೆ ಬಳಲುತಾ || 3 ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು