ಶ್ರೀ ಹನುಮಂತ
27. ಅಂಜನಾಸುತ ಹನುಮಂತ ಒಬ್ಬರಿಗಂಜುವನಲ್ಲ |
ಈ ಜಗದಿ ಸರ್ವತ್ರ ಓತ ಪ್ರೋತನಾಗಿರುವ || ಪ ||
ಜೀವದ ಜೀವಕೆ ಕಾರಣ ಈ ಪ್ರಾಣ | ಇವನಧೀನ ಸರ್ವೇಂದ್ರಿಯಗಳು |
ಇವನಿರೇ ಈ ದೇಹ ಶಿವವಾಹುದು | ಶವವಾಹುದು ಈತ ದೇಹ ತೊರೆಯಲು || 1 ||
ಪಂಚಾವರಣದೊಳು ಪಂಚರೂಪದಿ | ಸಂಚರಿಪ ಈಶನಾಜ್ಞೆಯಲಿ ||
ಕೊಂಚ ಇವನ ಕೃಪೆ ತಪ್ಪಲು | ಹೊಂಚು ಹಾಕುವ ಕಾಲನ ದೂತ || 2 ||
ಜಾಗ್ರತ ಸ್ವಪ್ನ ಸುಷುಪ್ತಿಯಲ್ಲೂ ಕಾವ | ಭಗವಂತನಧೀನದಿ ಕಾರ್ಯನಡೆಸುವ ||
ಸದ್ಗುಣಸಾಂದ್ರ ಸದಾ ಹಂಸಮಂತ್ರ ಜಪಿತ | ಉಗ್ರ ಪ್ರತಾಪಿ ಅಸುರರ ಸದೆ ಬಡೆವ || 3 ||
ಮುಖ್ಯಪ್ರಾಣನ ವಶ ಸರ್ವವೂ ಇವರು ವಿಷ್ಣುವಶ | ಮುಖ್ಯಪ್ರಾಣನ ಪ್ರೀತಿಕರ ಸರ್ವವೂ ವಿಷ್ಣುಪ್ರಿಯ ||
ಮುಖ್ಯ ಪ್ರಾಣನಿದ್ದೆಡೆ ಜತೆ ಇರುವ ಹರಿ | ಮುಖ್ಯಪ್ರಾಣನೊಪ್ಪುವ ಹರಿಮತ || 4 ||
ಜ್ಞಾನಮಾರ್ಗ ಪ್ರೇರಕನಿವ ದಯದಿ | ಧ್ಯಾನಮಾರ್ಗತೋರುವ ಸಾಧಕರಿಗೆ ||
ದಾನವರ ಲಿಂಗದೇಹ ಭಂಗಿಸುವ ಗದಾಪ್ರಹಾರದಿ | ಘನ ಹಂಸಮಂತ್ರ ಜಪಿಸುವ ಶ್ರೀಕೃಷ್ಣವಿಠ್ಠಲನ ನಿಜದೂತ || 5 ||
28. ನಮಾಮಿ ಮಾರುತಂ ವಾಯುಪುತ್ರಂ |
ರಾಮಕಿಂಕರÀಂ, ಸೀತಾನ್ವೇಷಕಂ ಶುಭದಂ |
ಲಕ್ಷ್ಮಣಪ್ರಾಣದಾತಾರಂ ದಶಕಂಠಹಂತಕ ಪ್ರಿಯಂ |
ಸ್ವಾಮೀ ಶ್ರೀಕೃಷ್ಣವಿಠ್ಠಲ ನಿಜ ಭಕ್ತಂ |
ಸುಸ್ಮರೇಣೇನ ಸದಾಶತ್ರು ನಾಶನಂ ||
"ಸಂಕ್ಷಿಪ್ತ ಸುಂದರಕಾಂಡ"
29. ಸುಂದರ ಸಂದರ್ಶಿಸಿ ಸುರಪತಿ ಸುಂದರಿನಾಥನ |
ಸುಂದರಿಯ ಕಾಣಲು ನಿರಾಯಾಸದಿ ಸಾಗರತಾರಿಸಿ ||
ಬಂದ ವಿಘ್ನಗಳ ನಿರ್ಭಯದಿ ನಿವಾರಿಸಿ |
ಮಂದಿರ ಪ್ರವೇಶಿಸಿ ಕಂಡ ಬೀಭತ್ಸದಿಂ ||
ಬಂದ ಹೊರಗೆ ಅಶೋಕವನ ಪ್ರವೇಶಿಸಿ |
ಕ್ಷುದ್ರ ರಾಕ್ಷಸಿಯರ ನಡುವೆ ಕಂಡ ಸ್ತ್ರೀರತ್ನ ||
ವಂದಿಸಿ ಭಕ್ತಿಯಲಿ ಕೈಗಿತ್ತ ಉಂಗುರ |
ಮುದ್ರೆಯಂ ನೋಡಿ ಸಂತೋಷದಿ ಹರಸಿ ||
ಒಡನೇ ತಾ ಚೂಡಾಮಣಿಯನಿತ್ತಳು |
ಬಂಧಿತನಾದ ಕಪಿ ವನವ ಹಾಳುಮಾಡಲು ||
ಮದಭüರಿತ ರಾವಣನ ಕಂಡ ದೂತ |
ಮರ್ದಿಸದೇ ಅವನ ತನ್ನ ಸ್ವಾಮಿಗೆ ಮೀಸಲಿಟ್ಟ ||
ನಡುಗಿಸಿದ ಲಂಕೆಯ ಭರದಿಂ ಅಗ್ನಿಗರ್ಪಿಸಿ |
ಮುದದಿ ತನಗೊಪ್ಪಿಸಿದ ಕಾರ್ಯ ನೆರವೇರಿಸಿ ||
ಸಂದೇಶವಿತ್ತ ವಿನೀತನಾಗಿ ಕಾರ್ಯ ಒಪ್ಪಿಸಿದವಗೆ |
ಸುದೈವ ಶ್ರೀಕೃಷ್ಣವಿಠ್ಠಲ ಪೂರ್ಣಾಲಿಂಗನ ಪ್ರಸಾದವಿತ್ತ ||