ಶ್ರೀ ನರಸಿಂಹ ಸುಳಾದಿ
52. ಪಾಹಿ ನರಸಿಂಹ, ಶ್ರೀ ಲಕ್ಷ್ಮೀ ನರಸಿಂಹ | ಪ್ರಲ್ಹಾದ ವರದ ಭಕ್ತ ವತ್ಸಲನೇ || - ಪಾಹಿ ||
ತಂದೆ ಹಿರಣ್ಯಕ ತರಳ ಬಾಲಕನಿಗೆ ಕೋಪದಿಂ ಕೇಳಿದ |
ಎಡಬಿಡದ ನಿನ್ನೊಡೆಯ ಎಲ್ಲಿರುವ ತೋರೆನಗೆ ||
ಖಡುಗದಿಂ ಸ್ತಂಭ ಒಡೆದು ನೋಡಲು |
ಗಡಗಡನೆ ಕಂಬ ಸಿಡಿ ಸಿಡಿದು ಉರುಳಲು ||
ಒಡನೆಯೇ ಅರ್ಧ ನರ-ಮೃಗ ವೇಷದಿ ಹೊರಬಂದ |
ಕಡು ಕೆಂಪಾದ ಕಣ್ಗಳು ಗಿರಗಿರನೆ ತಿರುಗಿಸುತ ಕೋಪದಿ ||
ಕೂದಲನು ಛಟೀ ಛಳಿರೆಂದು ಝಾಡಿಸುತ |
ನಿಡಿ ಸುಯ್ಯುತ ಸುರ್ರ ಸುರ್ರೆಂದು ಬಿಸಿ ಉಸಿರು ಜೋರಾಗಿ ||
ಕಡಿಯುತ ಪಲ್ಗಳ ಕಟಕಟನೆಂದು ಸಿಂಹನಾದ |
ಮಾಡುತ ಭುಸು ಭುಸುಗುಡುತ ದಿಟ್ಟಿಸುತ ||
ಉದಿಸಿದ ನರಸಿಂಗ ಭಯಂಕರ ರೂಪದಿ |
ಕಂಡ ಕಂಡಲ್ಲಿ ಚೆಂಡಾಡಿದ ಅಸುರರ ರಕ್ತದೊಕುಳಿ ಚೆಲ್ಲಿದ ||
ನೋಡಿದ ಹಿರಣ್ಯಕಶ್ಯಪನ ದುರು ದುರುಗುಟ್ಟಿ |
ದಡ ಬಡನೆ ನಡೆದವನೆಡೆಗೆ ದಾಪುಗಾಲಿಟ್ಟು ||
ಹಿಡಿದವನ ಮುಂಗೈ ಸರಸರನೆಳೆದು ತಂದು ಮುಸ್ಸಂಜೆಯಲಿ |
ತೊಡೆಯಲಿರಿಸಿಕೊಂಡು ತಾ ಕುಳಿತ ಹೊಸ್ತಿಲಲಿ ||
ಭಡ ಭಡನೆ ನಖದಿ ಉದರವ ಸೀಳಿ ಕರಕರನೆ |
ತಾ ಧರಿಸಿದವನ ರಕ್ತಸಿಕ್ತ ಕರುಳ ಮಾಲೆ ಅಂದದಿ ||
ಎಂದೆಂದೂ ಕಾಣದ ಅದ್ಭುತ | ಆಗಾಧ ರೂಪವ ಕಂಡು |
ಶ್ರೀದೇವಿ ಸುತ ಬ್ರಹ್ಮಾದಿಗಳು ಭಯದಿ ಪ್ರಾರ್ಥಿಸಲು ||
ಒಡೆಯ ಒಲಿಯದೇ ಕೆಂಡಾಮಂಡಲವಾಗೇ ಇರಲು |
ಮುಂದೆ ಮಾಡಿ ಬಾಲಕನ ಸಾರಿದರು ಭಕ್ತಿ ಮಹಿಮೆಯ ||
ಮಧುಸೂದನನ ಸಂತೈಸಲು ತರಳ ಪ್ರಲ್ಹಾದನು ಪ್ರಾರ್ಥಿಸೆ |
ನುಡಿಗೆ ಮೆಚ್ಚಿ ಒಡನೆ ಶಾಂತನಾದ ಜಗದಂತರ್ಯಾಮಿ ||
ನೀಡಿದ ವರವ ಕರುಣದಿ ಮಾಡಿದ ಪಟ್ಟಾಭಿಷೇಕ |
ರುದ್ರಾದಿ ದೇವತೆಗಳು ಸುರಿಸಿದರು ಹೂಮಳೆಯ ||
ಸುಂದರ ಮೂರ್ತಿ ನರಹರಿಯ ಪೂಜಿಸುತ ಸಕಲರು |
ಸುಧರ್ಮನ ಕೊಂಡಾಡಿ ಕರವ ಮುಗಿದರು ಶ್ರೀಕೃಷ್ಣವಿಠ್ಠಲರೇಯಗೆ ||
ಜತ್ತೆ
ವಜ್ರನಖ, ವಜ್ರದಂಷ್ಟ್ರ, ವಜ್ರದೇಹಿ, ಪ್ರಲ್ಹಾದವರದ ನರಸಿಂಹಾಭಿನ್ನ |
ವಜ್ರಾಂಕಿತ ವ್ರಜನಾಯಕ ಶ್ರೀಕೃಷ್ಣವಿಠ್ಠಲ ಸತತ ಸಲಹೆನ್ನ ||
53. ಜಯ ಜಯ ಶ್ರೀನರಸಿಂಹ ಸ್ತಂಭೋದ್ಭವ |
ಜಯ ಜಯ ಸಮಸ್ತ ಲೋಕ ಕಲ್ಯಾಣಕಾರಕ ||
ಜಯ ಜಯ ಹಿರಣ್ಯಕಶ್ಯಪ ಸಂಹಾರಕ |
ಜಯ ಜಯ ತರಳ ಪ್ರಹ್ಲಾದ ವರದಾಯಕ ||
ಜಯ ಜಯ ಬ್ರಹ್ಮ ವಾಯು ಸುರಾದಿ ಪೂಜಿತ |
ಜಯ ಜಯ ನರಸಿಂಹಾಭಿನ್ನ ಶ್ರೀಕೃಷ್ಣವಿಠ್ಠಲ - ಭೋಪರಾಕ ||