ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀಮಧ್ವ ಸಿದ್ಧಾಂತ ಸಾರ ಸಂಗ್ರಹ

|| ಪ್ರಥಮಾಧ್ಯಾಯ ||

ಅನಂತ ಕಲ್ಯಾಣಗುಣಧಾಮ, ಸರ್ವದೋಷ ದೂರನಾದ ಶ್ರೀನಾರಾಯಣನಿಗೆ ಗುರ್ವಂತರ್ಗತ ಮೊದಲೊಂದಿಸಿ, ಸುಜ್ಞಾನಿಗಳಿಗೆ ಗಮ್ಯನಾದ ನಿಗಮವೇದ್ಯನ ಸೂತ್ರಾರ್ಥಗಳನ್ನು ಹೇಳಿದೆ. ಜಡ-ಚೇತನ ಪ್ರಪಂಚದ ಸರ್ವಕರ್ತೃ, ಸಮದರ್ಶಿ ಪರಿಪೂರ್ಣಾನಂದಧಾಮನಾದ ಶ್ರೀವಿಷ್ಣುವೇ ಮುಖ್ಯ ಪ್ರತಿಪಾದ್ಯನಾಗಿದ್ದಾನೆ. ಸರ್ವಶಬ್ದವಾಚ್ಯನಾದ ಶ್ರೀವಿಷ್ಣುವೇ ಸರ್ವಗುಣ ಸದ್ಗುಣಗಳಸಾಂದ್ರ ಹಾಗÀೂ ಸÀರ್ವರಿಗೂ ಮುಖ್ಯ ಜೀವಪ್ರದನಾಗಿರುವನು. ಸರ್ವದಾ ಸಕಲ ವೀಕ್ಷಕ, ಸರ್ವಪ್ರಾಣಿಗಳ ಹೃದಯಸ್ಥನಾಗಿದ್ದಾನೆ. ಸಕಲ ಜೀವಿಗಳ ಒಳಗೂ - ಹೊರಗೂ ನೆಲಸಿದ್ದಾನೆ. ಜಗದ್ವ್ಯಾಪಿತ, ಪ್ರಾಕೃತವಾಗಿ ಅಗೋಚರ, ವಿಶ್ವ ಜೀವಾಂತರಾತ್ಮನು ಸರ್ವ ಲಿಂಗಗಳಿಂದ ವಾಚ್ಯನಾಗಿದ್ದಾನೆ. ಸರ್ವರ ಆಶ್ರಯನು ಪ್ರಪಂಚಕ್ಕೂ ಆಧಾರನೆನಿಸಿದ್ದಾನೆ. ಸದ್ಗುಣಗಳ ಖನಿ, ಸರ್ವ ಹೃದಯವಾಸಿ, ಸೂರ್ಯ ಮೊದಲಾದವರಿಗೂ ತೇಜಸ್ಸಿನ ಶಕ್ತಿ ನೀಡುವವ, ಪ್ರಾಣದೇವರಿಗೂ ಪ್ರೇರಕ ಅಲ್ಲದೇ, ಸಕಲ ದೇವತೆಗಳಿಂದ ವಂದಿತನೂ, ಪೂಜ್ಯನೂ ಹಾಗೂ ವೇದಪ್ರತಿಪಾದ್ಯನೂ ಆಗಿದ್ದಾನೆ. ಆದರೆ ವೇದಗಳಿಂದಲೇ ತಿಳಿಯಬಲ್ಲ ಈತ ಅಸಾಧ್ಯವಾದ ವಿಲಕ್ಷಣ ಅಪ್ರಾಕೃತ ಸ್ವರೂಪ, ಜಡ-ಚೇತನರಿಂದ ಭಿನ್ನನಾಗಿದ್ದಾನೆ. ಜನ್ಮ - ಮರಣ ರಹಿತನಾದ ಜಗನ್ನಿಯಾಮಕನು ಸರ್ವ ಶಬ್ದಗಳಲ್ಲಿ ನೆಲಸಿದ್ದಾನೆ. ಪ್ರತಿ ಅಕ್ಷರವೂ ಮುಖ್ಯವಾಗಿ ಅವನ ಗುಣಗಳನ್ನೇ ಹೇಳುತ್ತದೆ. ಅಪ್ರಮೇಯನು, ಅದ್ವಿತೀಯನೂ, ಅವ್ಯಕ್ತನೂ ಆಗಿದ್ದಾನೆ. ಸಕಲ ಕಾರಣ ಕರ್ತಾ ಕಾರ್ಯಕಾರಣನೂ, ಫಲದಾತೃವೂ ಆಗಿರುವನು.

|| ದ್ವಿತೀಯೋಧ್ಯಾಯ ||

ಶ್ರುತಿ ಸ್ಮøತಿಗಳಿಗೆ ವಿರುದ್ಧವಾದುವುಗಳು ಹರಿಯ ಗುಣಗಳನ್ನು ತಿಳಿಸುವಲ್ಲಿ ಅಸಮರ್ಥ. ಕಾರಣ ವೇದವು ಸಕಲ ಗುಣಗಳನ್ನು ತಿಳಿಸುವುದಲ್ಲದೆ ಅನಾದಿ, ನಿತ್ಯ, ಅಪೌರುಷೇಯವಾಗಿದೆ. ಅದಕ್ಕೇ ಉತ್ತಮವಾದ, ನಿರ್ದುಷ್ಟವಾದ ಪ್ರಬಲ ಪ್ರಮಾಣವೆನಿಸಿದೆ. ವೇದ ವಾಕ್ಯಗಳು ದೇವತಾ ಪರ ವಾಗಿರುವುದರಿಂದ ಯುಕ್ತಿಗೆ ವಿರುದ್ಧವಾದ ಯಾವ ಅರ್ಥವನ್ನು ಪ್ರತಿಪಾದಿಸುವುದಿಲ್ಲ. ಅಸತ್, ಜೀವ, ಪ್ರಧಾನ, ಮೊದಲಾದ ಶಬ್ಧಗಳು ವಿಷ್ಣುವಿನ ಪರತ್ವವನ್ನೇ ಸಾರುತ್ತದೆ. ಪೂರ್ಣಗುಣತ್ವವನ್ನೇ ಹರಿಯಲ್ಲಿ ಹೇಳುತ್ತದೆ. ಹೇಗೆಂದರೆ ಸ್ವತಂತ್ರನೂ, ಸರ್ವಕರ್ತೃವೂ, ಸರ್ವಾಧಿಪತಿಯಾದ ಬ್ರಹ್ಮನು ಪರಿಪೂರ್ಣಗುಣೋರ್ಣ ಎಂದು ಶ್ರುತಿ ಸಿದ್ಧ ಪ್ರಮೇಯವಾಗಿದೆ. ಇದಕ್ಕೆ ವಿರೋಧವಾದ ವಾಕ್ಯವನ್ನು ಶ್ರುತಿ ಎಂದಿಗೂ ಹೇಳಲಾರದು. ಶ್ರುತಿ ವಾಕ್ಯವು ನಿಸ್ಸಂಶಯವಾಗಿಯೂ ವಿಶ್ವಾಸಾರ್ಹ. ಇದಕ್ಕೆ ಹೊರತಾದ ಅನ್ಯ ಸಕಲ ಮತಗಳು ಭ್ರಮಜನಕವಾಗಿವೆ ಮತ್ತು ಅಪ್ರಾಮಾಣಿಕವಾಗಿವೆ. ಅನ್ಯಮತಗಳ ವಿರೋಧದಿಂದ ಶ್ರುತಿ ವಾಕ್ಯಗಳಲ್ಲಿ ಅಪನಂಬಿಕೆಯನ್ನು ಎಂದಿಗೂ ಹೊಂದಲಾಗದು. ಆಕಾಶಾದಿ ಸಮಸ್ತ ಪಂಚಭೂತಗಳು, ಸಕಲ ಜೀವಿಗಳು, ಸೃಷ್ಟಿ, ಸ್ಥಿತಿ, ಲಯ ಕರ್ತನಾದ ಶ್ರೀಹರಿಯ ಅಧೀನ ಹಾಗೂ ಅವನ ಪ್ರತಿಬಿಂಬ. ವಿಷ್ಣುವಿನ ಸಕಲ ಅವತಾರ, ರೂಪಗಳು ಭೇದರಹಿತ ಹಾಗೂ ಸದಾಸಮ. ಸಕಲ ದೇಹಗಳು, ಇಂದ್ರಿಯಗಳು ಮುಖ್ಯಪ್ರಾಣನ ವಶ. ಅಷ್ಟೇ ಅಲ್ಲದೆ ಅವನಿಂದಲೇ ಹುಟ್ಟಿದೆ. ಸಕಲ ಸುರಾಸುರ ಜೀವಿಗಳು ಸಹಾ ಮುಖ್ಯಪ್ರಾಣ ವಶದಲ್ಲಿರುವರು. ಮುಖ್ಯಪ್ರಾಣನು ಸದಾ ವಿಷ್ಣುವಿನ ವಶದಲ್ಲಿದ್ದು ಅವನ ಆಜ್ಞಾಪಾಲಕನಾಗಿರುವನು. ಸರ್ವದೋಷರಹಿತನಾದ ಭಗವಂತನು ಪುರುಷ ಶೇಷ್ಠ. ಸರ್ವದೇವವಂದ್ಯ, ಸರ್ವೋತ್ತಮ, ಜ್ಞಾನಾನಂದಪೂರ್ಣ, ಸರ್ವಾಧಿಪತಿ ಬಗ್ಗೆ ವೇದದಲ್ಲಿ ಯಾವುದೇ, ಎಲ್ಲೂ ವಿರುದ್ಧವಾಗಿ ಹೇಳಿಲ್ಲ.

|| ತೃತೀಯೋಧ್ಯಾಯ ||

ಶುಭ ಕರ್ಮದಿಂದ ಸ್ವರ್ಗಪ್ರಾಪ್ತಿಯಾಗುವುದು. ಸ್ವೋಚಿತ ಕರ್ಮರಹಿತನಿಗೆ ನರಕಪ್ರಾಪ್ತಿ, ಯಥಾರ್ಥ ಜ್ಞಾನದಿಂದ ಶ್ರೇಷ್ಠವಾದ ಮೋಕ್ಷಪ್ರಾಪ್ತಿ. ಅನ್ಯಥಾ ಜ್ಞಾನಿಗೆ ಅಥವಾ ವಿರುದ್ಧ ಜ್ಞಾನ ಹೊಂದಿದವರೇ ಪುನಃ ಸಂಸಾರಕ್ಕೆ ಹಿಂತಿರುಗಿ ಬರುತ್ತಾರೆ. ಜನನ- ಮರಣ ಚಕ್ರದಿಂದ ಪಾರಾಗುವುದೇ ಇಲ್ಲ. ವಿರಕ್ತರಿಗೆ ಜ್ಞಾನವು ಲಭಿಸುತ್ತದೆ ಎಂದರೆ ವಿರಕ್ತರು ನವವಿಧಭಕ್ತಿಪೂರ್ವಕವಾಗಿ ಜ್ಞಾನವನ್ನು ಆಶ್ರಯಿಸಬೇಕು ಎಂದರೆ ಶುದ್ಧ ಜ್ಞಾನ ಕೊಡುವ ಗುರುಗಳನ್ನಾಶ್ರಯಿಸಬೇಕು. ಸರ್ವರೂಪ ಭೇದರಹಿತನಾದ ಶ್ರೀವಿಷ್ಣುವು ಸಕಲ ಜೀವರ ಜಾಗ್ರತ, ಸ್ವಪ್ನ, ಸುಷುಪ್ತಾವಸ್ಥೆಗಳ ಪ್ರೇರಕ, ನಿಯಾಮಕರಾಗಿಹನು. ಸಕಲ ದೇಶ, ಕಾಲಗಳಲ್ಲಿ ಪರಮಾತ್ಮನೊಬ್ಬನೇ ಶ್ರೇಷ್ಠ ಹಾಗೂ ಭಕ್ತಿಗನುಸಾರವಾಗಿ ಮುಕ್ತಿಯನ್ನು ಕೊಡುವನು. ತಾರತಮ್ಯಯುಕ್ತವಾದ ಭಕ್ತಿಯಿಂದ ಮುಕ್ತಿಯಲ್ಲೂ ತಾರತಮ್ಯೋಪೇತವಾದ ಆನಂದ ಪ್ರಾಪ್ತಿ. ಸತ್, ಚಿತ್, ಆನಂದ ಆತ್ಮನಾದ ಪರಮಾತ್ಮ ಸಕಲ ದೇವತೆಗಳಲ್ಲಿ ಶ್ರೇಷ್ಠ. ಭಗವಂತನು ಮಂಗಳಮಯ, ಸತ್ಯ ಸ್ವರೂಪ, ಜ್ಞಾನಾನಂದ ಚಿನ್ಮಯರೂಪನು ಸಕಲ ದೇವತೆಗಳ ಪ್ರಭು ಆಗಿದ್ದಾನೆ. ಗುಣಗಳು ತಾರತಮ್ಯೋಪಾದಿಯಲ್ಲಿ ದೇವತೆಗಳಿಗಿದೆÉ. ಚತುರ್ಮುಖ ಬ್ರಹ್ಮದೇವನು ಸಕಲ ದೇವತೆಗಳಿಗಿಂತ ಹೆಚ್ಚು ಗುಣಪೂರ್ಣನು. ಸಕಲರಿಂದಲೂ ಅವರವರ ಯೋಗ್ಯತಾನು ಸಾರವಾಗಿ ಸಾಮಥ್ರ್ಯಕ್ಕಗುಣವಾಗಿ ಶ್ರೀವಿಷ್ಣುವು ತಿಳಿಯಲ್ಪಡುವನು. ಇವನಿಂದಲೇ ಉತ್ತರೋತ್ತರವಾಗಿ ವಿಶೇಷ ಜ್ಞಾನಫಲ ಪ್ರಾಪ್ತಿಯಾಗುವುದು. ಅಪರೋಕ್ಷ ಜ್ಞಾನಿಗಳಿಗೆ ದೋಷಲೇಪವಾಗುವುದು ಬಹಳ ಕಡಿಮೆ, ಅಲ್ಲದೆ ಅವರಿಗೆ ಸರ್ವ ಪುರುಷಾರ್ಥಗಳು ಜ್ಞಾನದಿಂದಲೇ ಪ್ರಾಪ್ತಿ. ಗುಣ-ದೋಷ ಪ್ರಕಾರದಿಂದ ಸುಖದ ವೃದ್ಧಿ ಹಾಗೂ ಹ್ರಾಸ ಉಂಟಾಗುತ್ತದೆ. ಮುಕ್ತಿಯಲ್ಲೂ ಸುಖ, ಆನಂದದ ವೃದ್ಧಿ ಅವರವರ (ಮುಕ್ತರ) ಯೋಗ್ಯತಾನುಸಾರವಾಗಿ ಆಗುತ್ತದೆ.

|| ಚತುರ್ಥೋಧ್ಯಾಯ ||

ಶ್ರೀವಿಷ್ಣುವಿನ ಸರ್ವೋತ್ತಮ ಗುಣ ಪರಿಪೂರ್ಣತ್ವಾದಿಗಳನ್ನು ಸದಾ ಉಪಾಸಿಸಬೇಕು. ನಿರಂತರ ಉಪಾಸನೆಯಿಂದ ವಿಷ್ಣುವು ಅಪರೋಕ್ಷನಾಗುತ್ತಾನೆ. ಅಪರೋಕ್ಷ ಜ್ಞಾನದಿಂದ ಪ್ರಾರಬ್ಧ ಕರ್ಮಬಿಟ್ಟು ಇತರ ಸಂಚಿತ - ಆಗಾಮಿ ಕರ್ಮಗಳು ನಾಶ ಹೊಂದುತ್ತವೆ. ಪ್ರಾರಭ್ಧ ಕರ್ಮವನ್ನು ಮಾತ್ರ ಭೋಗಿಸಿಯೇ ತೀರಬೇಕು. ಮುಕ್ತಿಯನ್ನು ಹೊಂದುವ ದೇವತೆಗಳು ವಾಯು ದೇವರ ಪರ್ಯಂತ ತಮಗಿಂತಲೂ ಉತ್ತಮರಾದ ದೇವತೆಗಳಲ್ಲಿ ಲಯ ಹೊಂದಿ ಅಪೇಕ್ಷಿತ ಭೋಗಗಳನ್ನು ಸೇವಿಸುತ್ತಾರೆ. ಇದರಲ್ಲೂ ತಾರತಮ್ಯವಿದ್ದು ಉತ್ತರೋತ್ತರವಾಗಿ ಸಾಧನೆಯ ಮೇರೆಗೆ ಆನಂದ ಅಧಿಕವಾಗುವುದು. ದೇವತೆಗಳು ದೇಹ ಕ್ಷಯದಿಂದ ಹಾಗೂ ಮನುಷೋತ್ತಮರು ಬ್ರಹ್ಮನಾಡಿಯಿಂದ ಉತ್ಕøಮಣ ಹೊಂದಿ ಮುಕ್ತಿಯನ್ನು ಪಡೆಯುತ್ತಾರೆ. ಸಾಧಕರು ಅರ್ಚಿರಾದಿ ಮಾರ್ಗದಿಂದ ವಾಯು ದೇವರನ್ನು ಹೊಂದಿ ಅವರ ಜೊತೆ ಬ್ರಹ್ಮ ಲೋಕಕ್ಕೆ ಹೋಗಿ ನಂತರ ಅಲ್ಲಿಂದ ಚತುರ್ಮುಖ ಬ್ರಹ್ಮ ದೇವರ ಜೊತೆಯಲ್ಲಿ ಹೋಗಿ ಜನ್ಮಾದ್ವಿಮೋಚಕನಾದ ಪರ ಬ್ರಹ್ಮನನ್ನು ಹೊಂದಿ ಜನನ - ಮರಣ ರಹಿತರಾಗುತ್ತಾರೆ. ಅಲ್ಲಿ ಭಗವಂತನ ಇಚ್ಛೆಗನುಗುಣವಾಗಿ ಚಿನ್ಮಯ ಶರೀರ ಎಂದರೆ ಅಪ್ರಾಕೃತ ಶರೀರದಲ್ಲಿ ಭೋಗಗಳನ್ನು ಹೊಂದುತ್ತಾರೆ. ಜಗತ್ತಿನ ಸೃಷ್ಟ್ಯಾದಿ ವಿಷಯಗಳನ್ನುಳಿದು ಇತರ ಸ್ವಯೋಗ್ಯಕ್ಕನುಸಾರವಾಗಿ ವಿಷಯಗಳಲ್ಲಿ ಯಥಾ ಸಾಮಥ್ರ್ಯವನ್ನು ಹೊಂದಿರುತ್ತಾರೆ. ತಮಗಿಂತ ಉತ್ತಮರಾದವರಲ್ಲಿ ಮಾತ್ರ ಅಧೀನರಾಗಿರುತ್ತಾರೆ. ತಮಗಿಂತ ಅವರರ ವಶವರ್ತಿಗಳಾಗದೇ, ವೃದ್ಧಿ-ಹ್ರಾಸ ರಹಿತರಾಗಿ ದುಃಖರಹಿತರಾಗಿ ನಿತ್ಯವೂ ಸಂತೋಷದಿಂದ ಅವಿರತ ಸುಖವನ್ನು ಭೋಗಿಸುತ್ತಾರೆ.

ಶ್ರೀ ಮದಾನಂದ ತೀರ್ಥರಿಂದ ರಚಿತ ಸರ್ವಶಾಸ್ತ್ರ ಸಂಗ್ರಹ ರೂಪವಾದ ಈ ಕೃತಿಯು ಪರಮ ಶ್ರೀನಾರಾಯಣಾಭಿನ್ನ ಶ್ರೀಕೃಷ್ಣವಿಠ್ಠಲನ ಪ್ರೀತ್ಯರ್ಥವಾಗಿ ರಚಿಸಲ್ಪಟ್ಟಿದೆ. ಸಕಲ ದೋಷ ದೂರ, ಪರಿಪೂರ್ಣಗುಣಾತ್ಮ, ಬ್ರಹ್ಮರುದ್ರಾದಿ ವಂದಿತ ಶ್ರೇಷ್ಠನಾದ ಶ್ರೀಕೃಷ್ಣವಿಠ್ಠಲನಿಗೆ ಅನಂತಾನಂತ ನಮಸ್ಕಾರಗಳು.

ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ

|| ಶ್ರೀಕೃಷ್ಣವಿಠ್ಠಲಾರ್ಪಣಮಸ್ತು ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು