ಶ್ರೀ ಮಹಾಲಕ್ಷ್ಮೀದೇವಿ
"ಶ್ರೀ ಮಹಾಲಕ್ಷ್ಮೀದೇವಿ"
32. ಶ್ರೀ ರಮಾ ಕಮಲಾಸನೇ ಅಭಯಹಸ್ತೇ |
ವರಲಕ್ಷ್ಮೀ ಅಂಬುಜಾಕ್ಷೀ ಪದ್ಮಪ್ರಿಯೇ || 1 ||
ಪದ್ಮ ಶಂಖ ಚಕ್ರ ಗದಾಧಾರಿಣಿ |
ವಂದಿಪೆ ಸುಮನಸೆ ಮಹಾಮಾಯೆ || 2 ||
ಸರ್ವಾಲಂಕಾರ ಭೂಷಿತೇ ಸರಸಿಜಾಕ್ಷಿ |
ಶ್ರೀಕೃಷ್ಣವಿಠ್ಠಲ ಪ್ರಿಯೇ ವೇದಾಂತ ವೇದ್ಯಳೇ || 3 ||
33. ಧನ್ಯೆ ಧನ್ಯೆ ಲೋಕಮಾತೆ ಭಕ್ತವತ್ಸಲೆ |
ಜ್ಞಾನಪ್ರದಾಯಿನಿ ಸಂತೋಷದಾಯಿನಿ || 1 ||
ವಿನೂತನೆ ನಿತ್ಯಾವಿಯೋಗಿ ಚಿರಯೌವ್ವನೆ |
ಮಾನಾಪಮಾನ ನಿನ್ನದೇ ಮಹಾಲಕುಮಿ || 2 ||
ಜನನಿ ನೀ ಸರ್ವರಿಗೆ, ಕುಂದೆಣಿಸುವಿಯೇ |
ನನ್ನ ಸುಕರ್ಮವೆಲ್ಲಾ ನಿನ್ನ ಕೃಪೆಯಿಂ ಹರಿಸೇವೆಯಾಗಲಿ || 3 ||
ವರ್ಣಾಭಿಮಾನಿಯೇ ಎನ್ನ ಮಾತೆಲ್ಲಾ ಹರಿಸ್ತುತಿಯಾಗಲಿ |
ಧ್ಯಾನಪ್ರಿಯೇ, ಹರಸು ಶ್ರೀಕೃಷ್ಣವಿಠ್ಠಲನ ದಯೆ ಎನಗಾಗಲಿ || 4 ||
34. ಹರಿಯಂತಿರುವ ಮನವ ಹರಿಯಗೊಡದೆ ನಿರುತ |
ಹರಿಯ ಧ್ಯಾನದಿ ನಿಲಿಸಿ ಹರಸು ತಾಯೇ ಹರಿಪ್ರಿಯೆ || ಪ ||
ಅರಿಯದೇ ಆಗಿರುವ ತಪ್ಪುಗಳ ಅರಿತು ಮನ್ನಿಸು ಎನ್ನ |
ಅರಿಗಳ ತರಿದು ಅರಿವು ನೀಡೇ ಅರವಿಂದ ಪ್ರಿಯೆ || 1 ||
ಬಿಂಬನ ಪ್ರತಿ ಬಿಂಬವೇ ನಾನೆಂದು ನಂಬಿ ಅಂಬುಧಿವಾಸಗೆ ಶರಣೆಂಬೆ
ಅಂಬೆ ಎನ್ನ ಮನವತಿದ್ದಿ ಶ್ರೀಕೃಷ್ಣವಿಠ್ಠಲನಲಿ ಇಂಬುಗೊಡೆ || 2 ||
35. ಮಾರಮಣನ ಪಾದವ ತೋರೇ ತಾಯೇ, ಅಂಬುಜಾಕ್ಷಿಯೇ |
ಪಾರುಗಾಣಿಸು ಭವ ಸಂಸಾರವ ನೀ ದಯದಿ || ಪ ||
ಸುರಗುರವಂದ್ಯ ವಾಯು, ಬ್ರಹ್ಮ ಸುಪೂಜಿತೆ |
ಚಾರು ಚರಣವ ತವಕದಿ ಪಾಲಿಸೆ ತಾಯೇ || ಅ ||
ಮೂರು ಪಾದದಿ ಜಗವನಳೆದ ತ್ರಿವಿಕ್ರಮ |
ತೋರಿದ ಮೊದಲು ವಾಮನ ಪುಟ್ಟ ಬಾಲಕನಾಗಿ ||
ಗಿರಿಯನೆತ್ತಿದ ಕಿರು ಬೆರಳಲಿ ನಂದಕುಮಾರ |
ಪರಮಾದರದಲಿ ಪಾಡಲು ಒಲಿದು ಬರುವ || 1 ||
ಮುರಳಿ ನಾದದಿ ಮೋಹಗೊಳಿಸುವ |
ಜಾರ ಶ್ರೀವೇಣುಲೋಲ ನವನೀತ ಚೋರನ ||
ಎರಗಿ ನಿನ್ನ ಪಾದಕೆ ಬೇಡಿಕೊಂಬೆ ಚಿತ್ತಕ್ಕೆ ತಂದು |
ಸಿರಿಕೃಷ್ಣವಿಠ್ಠಲನ ಪಾದಪದ್ಮ ಸಮೀಪದಲ್ಲಿಡು ಎನ್ನ || 2 ||
36. ಇಂದುವದನೆ ಸಿಂಧುನಂದನೆ ಮಂದಹಾಸಿಯೇ ಮಹಾಲಕ್ಷ್ಮೀ |
ಭದ್ರೇ, ಕಂಗಳು ತೆರೆದು ನೋಡೆ ಕೃಪಾಕಟಾಕ್ಷದಿ ಜಗನ್ಮಾತೆಯೇ || 1 ||
ಪಕ್ಷಿವಾಹನಪ್ರಿಯೆ, ಕ್ಷೀರಾಬ್ಧಿನಂದನೆ ಮಂಗಳಾಂಗಿಯೇ |
ಇಕ್ಷುಚಾಪನ ಪಡೆದ ಸರಸಿಜಾಕ್ಷಿ ನೀಳಕುಂತಳೇ || 2 ||
ಸರ್ವಮಂಗಳೆ ಅಕ್ಷಯದಾತೆ ಶ್ರೀಹರಿಯ ಸದಾಸೇವಿತೆ |
ಉರ್ವಿಯೊಳುತ್ತಮೆ ಬ್ರಹ್ಮರುದ್ರಾದಿ ವಂದ್ಯೆ ಕಮಲನಯನೆ || 3 ||
ನಿಗಮವೇದ್ಯಳೆ ನಲುಮೆಯಿಂ ಹರಸಿ ದರುಶನ ತೋರೆ |
ಜಗದ್ರಕ್ಷಕ ಶ್ರೀಕೃಷ್ಣವಿಠ್ಠಲನ ಭಾಮೆ ಎನ್ನ ಜನನಿಯೇ || 4 ||
37. ಅಮ್ಮಾ ಲಕುಮಿ ದೇವಿ ಬೇಡಿಕೊಂಬೆ ಅನುದಿನ |
ನಲ್ಮೆಯ ಕರೆಯ ಓಲೈಸಿ ಪೇಳು ನಿನ್ನ ಪತಿಗೆ || ಪ ||
ಒಮ್ಮೆಯಾದರೂ ತನ್ನವನೆಂದೆನ್ನ ಸ್ವೀಕರಿಸಲಿ |
ಸುಮ್ಮಾನದಿ ಆಲಿಸಿ ನಿಜ ಭಕ್ತರ ಕರೆಯ || ಅ ||
ನೀನೇ ಪೆತ್ತ ಮಕ್ಕಳ ಕುಂದು ಎಣಿಸುವೆಯಾ ? |
ತಪ್ಪು ಅಕ್ಷಮ್ಯವಾದರೂ ತಾಯಿ ನೀನಲ್ಲವೇ ? ||
ನಾ ಪ್ರತಿದಿನ ಚರಣಕೆರಗಿ ಬೇಡುವೆನಮ್ಮಾ |
ಸಫಲವಾಗುವಂತೆನ್ನ ಜನುಮ ಹರಸಮ್ಮಾ || 1 ||
ಉಪ್ಪಿಲ್ಲದ ಊಟ ಒಗ್ಗುವುದೇ ಜಿಹ್ವೆಗೆ ? |
ಕುಪ್ಪೆಹಣ ತುಂಬಿರಲು ವಾರಸುದಾರನಿಲ್ಲದಂತೆ ||
ಒಪ್ಪಿಸಿರುವೆ ಎನ್ನನ್ನು ನಿಶ್ಚಿಂತೆಯಿಂದ ಒಮ್ಮನದಿ |
ಸಂಪ್ರೀತಿಯಿಂದ ನೆಚ್ಚಿರುವೆ ಮಾಧವನ ಚರಣವ || 2 ||
ಒಪ್ಪುವುದೆ ಶೃಂಗಾರ ಸರ್ವಾಲಂಕಾರದಿ ಮುತ್ತೈದೆಗೆ |
ಕಪ್ಪುಮಣಿ ಮಂಗಳ ಸರ ಕೊರಳಲ್ಲಿ ಇಲ್ಲದಿರೆ ||
ವಿಪುಲ ಧನಕನಕ ಬಂಧುಬಳಗವಿರೆ |
ವಿಫಲವಾಗುವುದು ಪತಿ ಒಲುಮೆ ಇಲ್ಲದಿರೆ || 3 ||
ಕೊಂಪೆಯಲ್ಲಿದ್ದ ಎನ್ನ ಉಪ್ಪರಿಗೆ ಮೇಲಿರಿಸಿ |
ಜೊಂಪೆಯಾಗಿದ್ದೆನ್ನ ಪಾಪಕರಗಿಸಿ ಹಗುರಮಾಡಿ ||
ವಿಪರ್ಯಾಸದಿ ತನ್ನ ಭಕುತಿಯ ದಾರಿ ತೋರಿದ |
ಮುಪ್ಪು, ಬಾಲ್ಯ ಬರದಂತೆ ಮಾಡುವ ಶ್ರೀಕೃಷ್ಣವಿಠ್ಠಲಗೆ ಎನ್ನ ಒಪ್ಪಿಸಮ್ಮಾ || 4 ||
38. ವಂದಿಪೆ ಪಾದ ಸುಂದರಿಯ | ನಾ | ವಂದಿಪೆ ಪಾದ ಮಹಾಲಕುಮಿಯ ||ಪ||
ಇಂದುವದನೆಯ ಮೀನಲೋಚನೆಯ ಸುಸ್ಮಿತೆಯ ಪಾದ ವಂದಿಪೆ ||ಅ||
ಪದುಮಕರ ಪದುಮಪಾದ ಪದುಮಜಾತೆ ತಾಯೇ |
ಪದುಮರಾಗ ಶೋಭೆ ಪದುಮನಾಭ ಪ್ರಿಯೇ ||
ಸದ್ಗುಣವಂತೆ ಶ್ರೀಶವಲ್ಲಭೆ ಭಕ್ತಜನರೊದ್ಧಾರಿಯೇ |
ಆದಿಮಾಯೆ ಸಮನಾ ಬ್ರಹ್ಮಾದಿ ಸುರಗಣ ವಂದಿತೇ || 1 ||
ಚತುರ್ವೇದಾಭಿಮಾನಿಯೇ ಚತುರಳೇ ಸುಮುಖಳೇ |
ನಿತ್ಯ ನಿರ್ಮಲೆ ಸುಮಾಂಗಲ್ಯಧರಿತೆ ಅವಿಕಾರಳೇ ||
ನಿತ್ಯ ತೃಪ್ತಳೆ ನಾರಾಯಣಪಾದ ಸದಾ ಸೇವಿತೇ |
ರತ್ನಖಚಿತ ಕಾಂಚಿ ಪೀತಾಂಬರಧಾರಿ ಮಂದಹಾಸಿಯೇ || 2 ||
ದೇವಿ, ದೇವ ಪುರುಷೋತ್ತಮನ ಆರಾಧಿಪಳೇ, ಮುಕ್ತಳೇ |
ಸರ್ವ ಜೀವ ಭೂತಗಣ ರಕ್ಷಿಪಳೇ ಕರುಣಾ ಕಟಾಕ್ಷದಿ ||
ಸರ್ವಾಲಂಕಾರಭೂಷಿತೇ, ಸುಗಂಧ ಪುಷ್ಪಹಾರ ಧರಿತೇ |
ಸರ್ವಜ್ಞೇ ನಮಾಮಿ ತೇ ಶ್ರೀಕೃಷ್ಣವಿಠ್ಠಲನರ್ಧಾಂಗಿಯೇ || 3 ||
"ಶ್ರೀ ರುಕ್ಮಿಣಿ ಕಲ್ಯಾಣ"
39. ಚೆಲುವೆ ರುಕ್ಮಿಣಿ ಮನ ಸೋತಳು ಚೆಲುವರ ಚೆಲುವಗೆ |
ಬಲು ಮೋಡಿ ಮಾಡುವ ಮುರಳಿ ಮನೋಹರನಿಗೆ || ಪ ||
ಮಹಾ ಸ್ವಯಂವರವೇರ್ಪಡಲು ತಾ ಭಯತೋರುತ |
ಆಹಾರ ಸೇರದೆ ನಿದ್ರೆ ಬಾರದೆ ಚಡಪಡಿಸುತ ||
ಅಹೇಯಗೆ ಬರೆದಳೋಲೆ ತನ್ನಪಹರಿಸಲು ಬಿನ್ನೈಸಿ |
ಬ್ರಾಹ್ಮಣನ ಕರೆಸಿ ಕೈಗಿತ್ತು ಕಳುಹಿದಳು ಆತಂಕದಿ || 1 ||
ಗೋಪಾಲನ ಕಂಡು ಭಕ್ತಿಲಿ ಮೈಮರೆತು ತಾ ನಿಲ್ಲಲು |
ಭೂಪಾಲ ದ್ವಿಜನ ಪಾದಕ್ಕೆರಗಿ ವಿಷಯ ತಿಳಿಯಲು ||
ಗೌಪ್ಯದಿ ತ್ವರಿತದಿ ತೆರಳಿ ರಾಜಕುವರಿಯ ಕಂಡು |
ರೂಪಸಿ ಕೈಪಿಡಿದು ಶೀಘ್ರದಿಂ ರಥಕೆ ಕರೆತಂದನು || 2 ||
ಬೆನ್ನಟ್ಟಿದ ದುಷ್ಟರ ತರಿದಟ್ಟಿ ದಿಟ್ಟತನದಿ |
ಕನಲಿದ ಭ್ರಾತೃನ ಹತ್ಯೆಗೈಲು ಮುಂದಾದ ||
ಕನ್ಯೆ ನೋಟದಿ ಬಿನ್ನೈಸಲು ಜೀವದಿ ಉಳಿಸಿದ |
ಚಿನ್ಮಯ ಕರೆತಂದವಳ ದ್ವಾರಕಾಪುರಿಗೆ || 3 ||
ವೈಭವದಿ ವಿವಾಹ ನಡೆಯಿತಲ್ಲಿ ಸಂಭ್ರಮದಿ |
ನಭದಿ ಸುರರು ಭವದಿ ಪುರಜನರು ಆನಂದಿಸಿದರು ||
ಶೋಭನ ದಕ್ಷತೆ ನಿತ್ಯ ವಧುವರರಿಗೆ ತಳೆದರು |
ಶುಭಾಂಗಿ ಕೈಪಿಡಿದ ವಿನೂತನ ಶ್ರೀಕೃಷ್ಣವಿಠ್ಠಲರೇಯ ಜಯ ಜಯ ||4||
"ಶ್ರೀ ಲಕ್ಷ್ಮೀ ಸ್ವಯಂವರ"
40. ಸಿಂಧು ನಂದನೆಗೆ ಕಲ್ಯಾಣಂ, ನಿತ್ಯಕಲ್ಯಾಣಂ, ಶುಭ ಕಲ್ಯಾಣಂ |
ಸುಂದರವದನೆ, ನಾನಾಭರಣಭೂಷಿತೆ, ಅರವಿಂದಮಾಲೆ ಪಿಡಿದು || 1 ||
ನಿರ್ದೋಷ, ಗುಣಪೂರ್ಣ ಪುರುಷನ ಹುಡುಕುತ್ತಾ ನಡೆದಳು ಸಭೆಯಲಿ |
ಸುಂದರಾತಿ ಸುಂದರರ ಸಾಲಲಿ ಕುಳಿತ ಬ್ರಹ್ಮ-ವಾಯು ರುದ್ರೇಂದ್ರರಲ್ಲಿ || 2 ||
ಕಂಡಳವರ ಗುಣಕಿಂತ ಅಧಿಕ ದೋಷಗಳ ಎಣಿಸಿದಳು ಮನದಿ |
ವೃದ್ಧ ಬ್ರಹ್ಮ, ಚಂಚಲ ವಾಯು, ರುದ್ರನ ಕೋಪ, ಜ್ವಲಿಪ ಸೂರ್ಯನ || 3 ||
ಇಂದ್ರನ ಗರ್ವ, ಚಂದ್ರನ ಕ್ಷಯ, ನೋಡಿ ನಸುನಗುತ ಮುನ್ನಡೆದಳು |
ಬಿಡದ ಕಡು ಕೋಪದ ಸಾಧನಾ ಮಾರ್ಗದ ಋಷಿಗಳ ನೋಡಿದಳು ||4 ||
ಉದ್ದ ಮೂಗಿನ ಗರುಡ, ಹೆಳವ ಶೇಷ, ಜಡನಾದ ವರುಣರ ಬಿಟ್ಟು |
ಕಂಡಳು ನಿರಪೇಕ್ಷ, ನಿರ್ದೋಷ, ಗುಣಪೂರ್ಣನ ಆನಂದದಿ || 5 ||
ಮಂದರಧಾರಿಯನರ್ಧಾಂಗಿ ಲೋಕಮಾತೆ ದೋಷರಹಿತಳು |
ಸುಂದರ ಪುರುಷೋತ್ತಮ ಶ್ರೀಕೃಷ್ಣವಿಠ್ಠಲನ ವರಿಸಿದಳು ನಿತ್ಯಾವಿಯೋಗಿನಿ || 6 ||
41. ಜಯ ಕರವೀರಪುರ ಮಹಾಲಕುಮಿ ಜಯಾ ಜಯಾ |
ಜಯ ಯೋಗಿನಿ ಕಮಲಪೀಠಸ್ಥೇ ಜಯಾ ಜಯಾ ||
ಜಯ ಅಭಯ ಹಸ್ತೇ ಭಕ್ತವತ್ಸಲೆ ಜಯಾ ಜಯಾ |
ಜಯ ಮಾಯಾದೇವಿ ಶಂಖಚಕ್ರಧಾರಿ ಜಯಾ ಜಯಾ ||
ಜಯ ಶ್ರೀವೇದಮಾತಾ ತ್ರಿಗುಣಾತೀತೆ ಜಯಾ ಜಯಾ |
ಜಯ ಸರೋಜ ಭೃಂಗಕುಂತಳೆ ಸುರವಂದ್ಯೇ ಜಯಾ ಜಯಾ ||
ಜಯ ಇಂದಿರೇಶನ ನಿತ್ಯಪಾದ ಸೇವಿತೇ ಜಯಾ ಜಯಾ |
ಜಯ ಶ್ರೀಕೃಷ್ಣವಿಠ್ಠಲ ಹೃದಯಸ್ಥೇ ಪ್ರಿಯೇ ಜಯಾ ಜಯಾ ||
42. ಶ್ರೀ ಕಮಲಾಕ್ಷಿಯೇ ಕಸ್ತೂರಿ ತಿಲಕಧಾರಿಯೆ |
ಶ್ರೀಕರ ಮನೋಹಾರಿಣಿ ಚತುರ್ಭುಜೇ ||
ಶಂಖಚಕ್ರಧಾರಿಣಿ ಪಾಪ ವಿಮೋಚನಿ |
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕೀ || 1 ||
ಶ್ರೀಪದ ಸೇವಿತೆ ಸದಾ ಹರಿಗುಣ ಚಿಂತಿತೆ |
ರಿಪುವೈರಿ ಹೃದ್ಗುಹವಾಸಿ ಸದಾ ಮಾನ್ಯೇ ||
ಪಾಪ ಕಳೆವ ತ್ರಿಲೋಕ ಜಗನ್ಮಾತೆ |
ಕೈಪಿಡಿದು ಉದ್ಧರಿಸೆನ್ನ ವೇದಾಭಿಮಾನಿಯೆ || 2 ||
ಕರುಣಿಸು ನಿನ್ನ ಪಾದಸೇವೆ ಭಾಗ್ಯವ |
ಭರದಿಂ ಸಲಹು ನೀ ಕುಂದೆಣಿಸದೆ ||
ಸರ್ವಶಕ್ತಳೇ, ಮಹಾಮಾಯೆ ನಮಿಸುವೆ |
ಶರಣೆಂಬೆ ಪೊರೆ ಎನ್ನ ಪ್ರಿಯ ಶ್ರೀಕೃಷ್ಣವಿಠ್ಠಲನ ರಾಣಿ || 3 ||