ಗಜೇಂದ್ರ ಮೋಕ್ಷ
122. ಗರುಡಾರೂಢ ಶ್ರೀ ಹರಿಯೇ ಆಲಿಸೆನ್ನ ಮೊರೆ |
ತ್ವರಿತದಿ ಬಂದು ಪರಿಹರಿಸೆನ್ನ ಸಂಕಟವ || 1 ||
ಧರಿಸಿದ ಚಕ್ರವ ಸರಸರ ತಿರುಗಿಸಿ |
ತರಿದು ನಕ್ರನ ಕೊರಳು ಪಾರುಗಾಣಿಸೋ || 2 ||
ಕರುಣದಿ ಎನ್ನೆತ್ತಿ ನಿನ್ನ ಮಂದಿರಕೆ ಕರೆದೊಯ್ಯೋ |
ಶ್ರೀಕೃಷ್ಣವಿಠ್ಠಲ ಎನಗೂ ಸಾಯುಜ್ಯ ಪದವಿತ್ತು ಕಾಯೋ || 3 ||
123. ಸುಂದರ ಶೀತಲ ಜಲದೊಳು ಗಜರಾಜ ಕ್ರೀಡಿಸುತಿರೆ |
ಬಂದ ಮೊಸಳೆ ಕಾಲು ಪಿಡಿದು ಒಳ ಗೆಳೆಯಲು || 1 ||
ಬಿಡಿಸಲು ನೋಡಿ ಆಗದೆ ಅತಿಯಾದ ದುಃಖದಿ |
ಕಡೆಗೆ ಆರ್ತಿಯಿಂದ ಪಕ್ಷಿವಾಹನ ಶ್ರೀಹರಿಗೆ ಮೊರೆ ಇಡೆ || 2 ||
ಕಂದನ ಕರೆಗೆ ತಾಯಿ ಬರುವಂತೆ ಬಲು ಬೇಗನೆ |
ಓಡಿ ಬಂದು ಕಂಡು ದೀನಾರ್ತನ ಸುದರ್ಶನ ಬಿಡಲು || 3 ||
ಕೊಂದಿತು ಮೊಸಳೆಯ, ಅನುಗ್ರಹಿಸಿ ಗಜೇಂದ್ರನ |
ವಂದ್ಯ ಶ್ರೀಕೃಷ್ಣವಿಠ್ಠಲ ಕರುಣದಿ ಮೋಕ್ಷವನಿತ್ತ || 4 ||
"ಏಕವಾಕ್ಯ ಗದ್ಯ ರೂಪ ಗಜೇಂದ್ರಮೋಕ್ಷ"
124. ಸುಂದರ ಸರಸ್ಸಿನಲಿ ಸಾವಿರವರುಷದಿಂ ತಪಗೈಯ್ದ ಗಜರಾಜನ ಆರ್ತ |
ಮೊರೆ ಆಲಿಸಿ ವರಗಿರಿ ಶ್ರೀಹರಿ ತ್ವರಿತದಿ ಗರುಡಾರೂಢನಾಗಿ ಧರೆಗವತರಸಿ |
ಕರಿಯ ಕಾಲ್ಪಿಡಿದ ಮಕರದ ಶಿರ ಭರದಿಂ ಚಕ್ರದಿ ತರಿದು ಶಾಪಗ್ರಸ್ತ |
ನಕ್ರನಿಗೆ ಗಂಧರ್ವಲೋಕ ಪಾಲಿಸಿ ಪ್ರೀತಿಯಿಂ ಕರಿಗೆ |
ಪರಲೋಕದಿ ಮುಕುತಿಯಿತ್ತ ಶ್ರೀಕೃಷ್ಣವಿಠ್ಠಲನ ಕರುಣೆಗೆ ಪಾರುಗಾಣೆ ||