ಅವತಾರತ್ರಯ ಸ್ತುತಿ
ಸೂತ್ರವ ಪಿಡಿಯಿರೋ ಬಿಡದೆ ಸೂತ್ರನಾಮಕ ಕಾಯ್ವ ರಾಮದೂತ |
ದಾಟಿಸುವ ಭವಸಾಗರ ಸಹಜದಲಿ ಜಲಧಿಯ ಲಂಘಿಸಿದವ || 1 ||
ಲಂಕೆಯ ಸುಟ್ಟು ರಾವಣನ ಎದೆ ನಡುಗಿಸಿದ ಧೀರ ವಿಜ್ಞಾನಿ ||
ಯುಕುತಿಯಿಂದಲಿ ನಿಜಭಕುತಿಯ ಬೇಡಿದ ಸಂಜೀವಿನಿಗಿರಿ ತಂದು || 2 ||
ದ್ರೌಪದಿಗೆ ಸೌಗಂಧಕನಿತ್ತವ ಕೀಚಕನ ಪ್ರಾಣ ಹೀರಿದ ಸುಜ್ಞಾನಿ |
ಕಪಟ ಕೌರವರ ರಣರಂಗದಿ ತರಿದ ಧೀರ ಬಲವಂತನು || 3 ||
ದ್ವೈತಮತವನುದ್ಧರಿಸಿದ ವೇದಶಾಸ್ತ್ರ ಪಾರಂಗತ ತತ್ವಜ್ಞ |
ನಿತ್ಯ ವಿಶ್ವಸತ್ಯವೆಂದ ಗುರುಮಧ್ವೇಶ ಶ್ರೀಕೃಷ್ಣವಿಠ್ಠಲನ ದಯದಿ || 4 ||
ಪಂಚರೂಪಾತ್ಮಕ ಮುಖ್ಯ ಪ್ರಾಣನೇ ಸಲಹು |
ಪಂಚೇಂದ್ರಿಯ ಕಾರ್ಯಕಾರಣ ಕರ್ತ ||
ಪಂಚತತ್ವನರಿತ ಪಂಚಮುಖಿಯೇ |
ಪಂಚಭೇದ ನಿತ್ಯತ್ವ ಪ್ರತಿವಾದ್ಯ ತೇ ನಮೋ || 1 ||
ವಜ್ರಕಾಯಭವ ಭಯ ಹರಣ |
ದುರ್ಜನ ಸಂಗ ಬಿಡಿಸಿ ಸಜ್ಜನರೊಳಿಡು ||
ಗರ್ಜಿಸಿ ದುಷ್ಟರ ತರಿದು ಶಿಷ್ಟ ಸಂರಕ್ಷಕ |
ಭಂಜಿಸಿಪಾಪಪುಣ್ಯಮಾರ್ಗತೋರಿಪ ತೇ ನಮೋ || 2 ||
ಅಂಜಿಸಿ ರಾವಣನ ಲಂಕಾಪುರಿ ಸುಟ್ಟು |
ಭುಂಜಿಸಿ ಬಂಡಿಅನ್ನ, ಅಸುರನಕೊಂದು ||
ಅಂಜದೇ ಖಂಡಿಸಿ ಅದ್ವೈತ, ದ್ವೈತ ಸಾರಿದ |
ಅಂಜನಾಪುತ್ರಶ್ರೀಕೃಷ್ಣವಿಠ್ಠಲನ ನಿಜದೂತ ತೇ ನಮೋ || 3 ||