ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಹನುಮಂತ

ಓಂ ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |

ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋs ಶಾಂತಯೇ ||

ಉಗ್ರಂವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ |

ನೃಸಿಂಹಂ ಭೀಷಣಂಭದ್ರಂ ಮೃತ್ಯೋರ್ಮೃತ್ಯುಂ ನಮಾಮ್ಯಹಂ ||

ನಮಸ್ತೇ ವಾಸುದೇವಾಯ ಶಾಂತಾನಂದ ಚಿದಾತ್ಮನೇ |

ಅಧ್ಯಕ್ಷಾಯ ಸ್ವತಂತ್ರಾಯ ನಿರಪೇಕ್ಷಾಯ ಶಾಶ್ವತೇ ||

ಜ್ಞಾನಾನಂದಮಯಂ ದೇವಂ ನಿರ್ಮಲ ಸ್ಫಟಿಕಾಕೃತಿಂ |

ಆಧಾರಂ ಸರ್ವ ವಿದ್ಯಾನಾಂ ಹಯಗ್ರೀವಂ ಉಪಾಸ್ಮಹೇ |

ಶ್ರೀಕೃಷ್ಣಾಯ ಯಾದವೇಂದ್ರಾಯ ಜ್ಞಾನಮುದ್ರಾಯ ಯೋಗಿನೇ |

ನಾಥಾಯ ರುಕ್ಮಿಣೀಶಾಯ ನಮೋ ವೇದಾಂತ ವೇದ್ಯನೇ ||

ನಮಸ್ತೇ ಪ್ರಾಣೇಶ ಪ್ರಣತವಿಭವಾಯಾವನಿಮಗಾಃ |

ನಮಃ ಸ್ವಾಮಿನ್ ರಾಮಪ್ರಿಯತಮ ಹನೂಮನ್ ಗುರುಗುಣ |

ನಮಸ್ತುಭ್ಯಂ ಭೀಮ ಪ್ರಬಲತಮ ಕೃಷ್ಣೇಷ್ಟ್ಟ ಭಗವನ್ |

ನಮಃ ಶ್ರೀಮನ್‍ಮಧ್ವ ಪ್ರದಿಶ ಸುದೃಶಂ ನೋ ಜಯ ಜಯ ||

ಸತ್ಯಾಭಿಜ್ಞ ಕರಾಬ್ಜೋತ್ಥಾನ್ ಪಂಚಾಷದ್ವರ್ಷ ಪೂಜಕಾನ್ |

ಸತ್ಯಪ್ರಮೋದತೀರ್ಥಾರ್ಯಾನ್ ನೌಮಿ ನ್ಯಾಯಸುಧಾರತಾನ್ ||

ಶಾಸ್ತ್ರೇಷು ಪಾರದೃಶ್ವಾನಂ ಶಾಸ್ತ್ರಜ್ಞೇಷು ಕೋವಿದಂ |

ಭಕ್ತ ದೀನೋದ್ಧಾರಕರಂ ಸತ್ಯಾತ್ಮಾನಂ ಯತಿಂ ಭಜೇ ||

ಮನ್ಮನೋಭೀಷ್ಟವರದಂ ಸರ್ವಾಭೀಷ್ಟ ಫಲಪ್ರದಂ |

ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾ ನಿಧಿಂ ||

ಪೃಥ್ವೀಮಂಡಲಮಧ್ಯಸ್ಥಾಃ ಪೂರ್ಣಬೋಧಮತಾನುಗಾಃ

ವೈಷ್ಣವಾಃ ವಿಷ್ಣುಹೃದಯಾಃ ತಾನ್ ನಮಸ್ಯೇ ಗುರೂನ್ಮಮ ||

"ಸುಪ್ರಭಾತ"

1. ಸುಪ್ರಭಾತವು ನಿನಗೆ ಯಶೋದೆಕಂದ ಸುಪ್ರಭಾತವು || ||

ಸುಪ್ರಭಾತವು ನಿನಗೆ ಲಕ್ಷ್ಮೀಪತಿಯೇ ಸುಪ್ರಭಾತವು || ಅಪ ||

ಅರುಣೋದಯವಾಯಿತು ಯೋಗ ನಿದ್ರೆಯಿಂ ಏಳು ಚಿನ್ಮಯನೇ |

ಸರುವ ಹಕ್ಕಿಗಳ ಚಿಲಿಪಿಲಿ ನಿನಾದ ಸಂಗೀತ ಕೇಳದೇ ||

ಕರು ಒಲುಮೆಯಿಂ ಅಂಬಾ ಎನುತ ತಾಯಿಯೆಡೆ ಓಡುತಿದೆ |

ಅರಳುವ ಪುಷ್ಪ ಸುಗಂಧಭರಿತ ತಂಗಾಳಿ ಎಲ್ಲೆಡೆ ಬೀಸುತಿದೆ || 1 ||

ಋಷಿ ಮುನಿಗಳು ವೇದಘೋಷ ಭಕ್ತಿಯಲಿ ಮಾಡುತಿಹರು |

ಈಶ ನೀನೆಂದು ಸಮಸ್ತ ಸುರರು ವಂದಿಸುತಿಹರು ||

ಕ್ಲೇಶಪಾಶ ಕಳೆದು ಮಂಗಳ ಮಾಡೆಂದು ಪ್ರಾರ್ಥಿಸುತಿಹರು |

ದರ್ಶನದಿ ಹರುಷವಿತ್ತು ಸಕಲರ ಚಿತ್ತದಿ ನೀ ನೆಲಸೋ || 2 ||

ಸಮಸ್ತ ಬ್ರಹ್ಮಾಂಡ ಚೇತನಾಚೇತನ ಸೃಷ್ಟಿಕರ್ತ ನೀನೆಂದು |

ಸಮಸ್ತ ಜೀವರಾಶಿಯ ಚೇತನಗೊಳಿಸವರ ಪಾಪ ಕಳೆದು ||

ಕರ್ಮವೆಲ್ಲಾ ಸತ್ಕರ್ಮವಾಗಿ ನಿನಗರ್ಪಿತವಾಗಲೆಂದು |

ಸಮಸ್ತ ವಿಶ್ವಕೆ ಮಂಗಳವಾಗಲೆಂದು ಬೇಡಿ ಬಯಸುತಿಹರು || 3 ||

ಬಿಡಿಸಿ ಸಂಚಿತಾಗಾಮಿ ಪಾಪವ ಕಳೆಯಿಸೋ |

ಒಡಲಿಗೆ ನಿನ್ನ ನೈವೇದ್ಯಾಮೃತ ಹಾಕಿ ಶುದ್ಧನಾಗಿಸೋ ||

ಬಿಡದೆ ನಿನ್ನ ನಾಮಾಮೃತ ಸದಾ ಭಜಿಸುವಂತೆ ಮಾಡೋ |

ಬೇಡುವೆ ನಿನ್ನ ಶ್ರೀಕೃಷ್ಣವಿಠ್ಠಲ ಎನ್ನ ಹೃದಯದಿ ಸದಾ ನೆಲಸೋ || 4 ||

2. ಏಳು ನಾರಾಯಣ ಏಳು ನಿಸ್ಸೀಮ ಮಹಿಮನೇ |

ಏಳು ಅಹಿಶಯನ, ಏಳು ಲಕ್ಷ್ಮಿಕಾಂತ || - ಏಳಯ್ಯ ಏಳು - || ||

ಎಚ್ಚೆತ್ತು ಯೋಗ ನಿದ್ರೆಯಿಂ ಮೆಚ್ಚು ಸುರಗಣ ಪೂಜೆಯ |

ಸಚ್ಚಿದಾನಂದ ಸರ್ವವ್ಯಾಪ್ತ ನಿರ್ಲಿಪ್ತ ಪರಮಾತ್ಮನೇ ||

ಅಚಿಂತ್ಯಾದ್ಭುತ ರೂಪತ್ರಯೇ ಪುರುಷೋತ್ತಮನೇ |

ಅಚ್ಯುತಾನಂತ ಗೋವಿಂದ, ಬ್ರಹ್ಮವಾಯ್ವಾದಿ ವಂದಿತನೇ || 1 ||

ಜ್ಞಾನಾನಂದ, ಪರಿಪೂರ್ಣ, ಸರ್ವೋತ್ತಮ, ಜಗದ್ವಂದ್ಯ |

ಅನಲೋದಕ ಭೂ ವಾಯ್ವಾಕಾಶದಲ್ಲಿದ್ದು ಒಂದೂ ತಾನಲ್ಲ ||

ಭಿನ್ನನು ಜಡಜೀವಿಗಿಂತ, ಪ್ರೇರಕ ಇಂದ್ರರುದ್ರಾದಿ, ಸರ್ವರಿಗೂ |

ಚಿನ್ಮಯ ಸುಚರಿತ್ರ ವೈಕುಂಠಪುರವಾಸಿ ಭಕ್ತವತ್ಸಲ || 2 ||

ಕ್ಷರಾಕ್ಷರಕ್ಕಿಂತ ಉತ್ತಮನು ಪುಣ್ಯಶ್ಲೋಕ ಅನಾದಿ |

ಕಾರ್ಯಕಾರಣ ಕರ್ತೃ ತಾನಾಗಿ ಕರ್ಮಲೇಪ ಇನಿತಿಲ್ಲ ||

ಸರ್ವ ಸಾಕ್ಷೀ, ದೇಶ ಕಾಲದಿ ಗುಣತಃ ಸರ್ವಾಧಿಕ |

ವಿರಾಡ್ರೂಪಿ ಶ್ರೀ ಕೃಷ್ಣವಿಠ್ಠಲಗೆ ಸರಿ ಸಮಾನರಾರು ? || 3 ||

ಜತೆ

ಉತ್ಥಾನ ದ್ವಾದಶಿಯಂದು ಉತ್ತಿಷ್ಠನಾಗುವ ಸರ್ವಜ್ಞ |

ಸತ್ಪಥಾಚಾರ ಉರ್ವಿಪತಿ ಶ್ರೀಕೃಷ್ಣವಿಠ್ಠಲ ||

3. ಸುಪ್ರಭಾತ ಲಕ್ಷ್ಮೀರಮಣಗೆ, ಸುಪ್ರಭಾತ ನಾಗಶಯನಗೆ || ||

ಮತ್ಸ ಮೂರುತಿ ಸತ್ಯದಿ ಏಳೋ | ನಿತ್ಯಮರ್ಮವನರಿತ ಕೂರ್ಮನೇ ಏಳೋ ||

ಉರ್ವಿಯನ್ನೆತ್ತಿದ ಭೂವರಾಹನೇ ಏಳೋ | ತರಳನ ಕಾಯ್ದ ನರಸಿಂಹನೇ ಏಳೋ ||

ವಾಮನ ಸುಂದರ ರೂಪನೇ ಏಳೋ | ದುಷ್ಟ ಕ್ಷತ್ರಿಯ ಕುಲಾಂತಕ ಪರಶುರಾಮನೇ ಏಳೋ || 1 ||

ಮುದದಿ ಹನುಮನ ಆಲಂಗಿಸಿದವನೇ ಏಳೋ | ಯದುಕುಲಚಂದ್ರ ಮುಕುಂದನೇ ಏಳೋ ||

ವಿಶ್ವಾಸದಿ ಪ್ರಶಾಂತವಿದ್ಯೆ ಬೋಧಿಸಿದವನೇ ಏಳೋ | ಅಶ್ವನೇರಿ ಕುಳಿತವನೇ ಏಳೋ ||

ಸಾಷ್ಟಾಂಗ ನಮಿಸಿ ಬಿನ್ನವಿಸುವೆ | ಸೃಷ್ಟಿಕರ್ತ ಶ್ರೀಕೃಷ್ಣವಿಠ್ಠಲನೇ ಏಳಯ್ಯಾ ಏಳು || 2 ||

"ಶ್ರೀ ವಿಜಯದಾಸರು"

4. ಚೀಕಲ ಪರವಿಯ ಗುರುರಾಯಾ

ಸಕಲ ಜಯ ಶ್ರೀವಿಜಯರಾಯಾ || ||

ಸಂಸಾರ ತ್ಯಜಿಸಿ ಕಂಸಾರಿಯ ನೆನೆದು |

ವ್ಯಾಸ ಕಾಶಿಯಲಿ ವೇದವ್ಯಾಸರ ಕಂಡು ||

ದಾಸನಾದಿ ವಿಜಯವಿಠಲಾಂಕಿತದಿ |

ಏಸು ಜನುಮದ ಪುಣ್ಯವೋ ನಾಕಾಣೆ || 1 ||

ಸ್ಮರಿಸುತ ನಿರುತ ಹರಿ ಬಿಡದೆ |

ತರಳ ಮೋಹನನ ಕಾಯ್ದೆ ಒಲುಮೆಯಲಿ ||

ಪರಮ ವೈರಾಗ್ಯಶಾಲಿ ಭಾಗಣ್ಣನ |

ಸ್ವರೂಪೋದ್ಧಾರಕನೇ ಉದ್ಧರಿಸೆನ್ನನು || 2 ||

ವಿಜ್ಞಾನವಂತನ ಪಾದ ನಂಬಿರುವೆ |

ಸುಜ್ಞಾನವಿತ್ತು ಸಲಹೋ ದಯಾನಿಧೇ ||

ವಿಜಯವಿಠ್ಠಲನೆಂಬ ಕವಚದಿ ಮೆರೆವ |

ಅಜನಯ್ಯ ಶ್ರೀಕೃಷ್ಣವಿಠ್ಠಲನ ದಾಸನೇ || 3 ||

"ಸರ್ವದಾಸರ ಅಂಕಿತಪದ"

5. ಬಾರೋ ಬೇಗ ಬಾರೋ, ಶ್ರೀ ಅಚ್ಯುತಾನಂತ ಗೋವಿಂದ ಬಾರೋ |

ನರಹರಿ ಶ್ರೀರಂಗವಿಠ್ಠಲ, ಚೆನ್ನಪ್ರಸನ್ನ ಶ್ರೀಹಯವದನ ಬಾರೋ || 1 ||

ವೇಣುಗೋಪಾಲ ಪುರಂದರವಿಠ್ಠಲ ಶ್ರೀನೆಲೆಯಾದಿಕೇಶವ ಬಾರೋ |

ಘನ್ನ ವಿಜಯವಿಠ್ಠಲ ಶ್ರೀ ಗೋಪಾಲವಿಠ್ಠಲ ಜಗನ್ನಾಥವಿಠ್ಠಲ ಬಾರೋ || 2 ||

ಪ್ರಸನ್ನವೇಂಕಟ ಪ್ರಾಣೇಶ ವಿಠ್ಠಲ ಶ್ರೀ ವಾಸುದೇವವಿಠ್ಠಲ ಬಾರೋ |

ವ್ಯಾಸವಿಠ್ಠಲ ಶ್ರೀದವಿಠ್ಠಲ ಶ್ರೀಶವಿಠ್ಠಲ ಶೇಷವಿಠ್ಠಲ ಬಾರೋ || 3 ||

ಭೀಮೇಶಕೃಷ್ಣ, ರಮಿಯರಸ, ಶ್ರೀಇಂದಿರೇಶ ಬಾರೋ |

ಶಾಮಸುಂದರ, ಅನಂತಾದ್ರೀಶ, ಶ್ರೀಕೃಷ್ಣವಿಠ್ಠಲ ಬಾರೋ || 4 ||

"ಅಂಕಿತ ಪದ"

6. "ಶ್ರೀಕೃಷ್ಣವಿಠ್ಠಲ" ನಾಮವೆಂಬೊ ರತನದ |

ಅಂಕಿತ ದೊರೆತುದು ಅಂದು ಎನಗೆ ಸ್ವಪ್ನದಿ || 1 ||

ಮುಖ್ಯ ಪ್ರಾಣಾಂತರ್ಯಾಮಿಯಾದ |

ಲಕುಮಿ ಪತಿ ಮಾಡಿದ ಅನುಗ್ರಹವಿದು || 2 ||

ಸಾಧನೆಯ ಮಾರ್ಗ ತೋರಿದ ಮಹಾ ಮಂತ್ರ |

ಇಂದು ಗುರು ಶ್ರೀವಿಶ್ವೇಶತೀರ್ಥರು ಎನಗಿತ್ತ ಮಂತ್ರ || 3 ||

ಮುದದಿ ಹಿಂದೆ ಮಾಡಿದ ಪುಣ್ಯದ ಫಲವಿದು |

ಎಂದೆಂದೂ ಎನ್ನ ಕೈ ಬಿಡದಿರು ಶ್ರೀಕೃಷ್ಣವಿಠ್ಠಲ ಜೀಯಾ || 4 ||

"ಶ್ರೀ ವಿಶ್ವೇಶತೀರ್ಥರು"

7. ಶ್ರೀಶ ಹಂಸಪರಿವ್ರಾಜಕ ಮಧ್ವ ಪೀಠಾಧಿಪತಿ

ವಿಶ್ವೇಶನಾಮಕ ಪರಮಾತ್ಮರತ ಅನವರತ || ||

ಶ್ವೇತದ್ವೀಪದ ಅನಂತಶಯನನ ಪೂಜಿಪ |

ಸತತ ಪ್ರಣವಮಂತ್ರ ಜಪಿತ ||

ತೀರ್ಥಯಾತ್ರಾನಿರುತ ಸುಜ್ಞಾನಿ

ಅರ್ಥಕಾಮವರ್ಜಿತ ಧರ್ಮಬದ್ಧ || 1 ||

ವಿದ್ಯಾ(ಶ್ವ)ಮಾನ್ಯ ಗುರು ವಾತ್ಸಲ್ಯಪೂರ್ಣ ಶಿಷ್ಯ |

ರುದ್ರಾಂತರ್ಗತ ಭಾರತೀರಮಣ ಅನುಗ್ರಹದಿ ||

ವೇದಶಾಸ್ತ್ರ ಅಭ್ಯಾಸಿತ ನಿತ್ಯ ಆತ್ಮರತ |

ವಂದಿಪೆ ಭಕ್ತಿಪೂರ್ವಕ ತ್ವಂ ಶ್ರೀಕೃಷ್ಣವಿಠ್ಠಲದಾಸ || 2 ||

8. ಮರೆಯಲಾರೆ ನನ್ನ ಭಾಗ್ಯದ ಬಾಗಿಲ ತೆರೆದವರ |

ಕರೆಯದೆ ಬಂದು ಉಪಕರಿಸಿದ ಗುರುವರ್ಯರ || 1 ||

ಸರ್ವೇಶ ಸರ್ವವಂದ್ಯನ ಕರುಣೆಯ ಕಂದನೆನಿಸಿದ |

ಶ್ರೀವಿಶ್ವೇಶತೀರ್ಥರೆನ್ನ ವೀಕ್ಷಿಸಿದ ಅಂತಃಕರಣ ದೃಷ್ಟಿಯಾ || 2 ||

ಸ್ವಪ್ನದಿ ಬಂದು ವಿಠ್ಠಲಕೃಷ್ಣನ ತೋರಿ ದಯದಿ |

ಪಾಪವನೆ ತೊಳೆವ ಸಾಧನೆಯ ದಾರಿ ತೋರಿದವರ || 3 ||

ಜ್ಞಾನ ಭಕ್ತಿ ವೈರಾಗ್ಯ ಬೇಡಿದಾಕ್ಷಣ ಕರೆದು ಮುನ್ನ |

ಅನುಗ್ರಹಿಸಿ ಶ್ರೀಕೃಷ್ಣವಿಠ್ಠಲ ಎಂದಂಕಿತ ಇತ್ತವರ || 4 ||

"ಶ್ರೀ ಸತ್ಯಾತ್ಮತೀರ್ಥರು"

9. ಲೌಕಿಕದಿ ಅಲೌಕಿಕ ಮೆರೆವ ಗುರು ಶ್ರೀಸತ್ಯಾತ್ಮತೀರ್ಥರು

ಸಕಲ ಸುಗುಣವಂತ ಶಿಷ್ಯವತ್ಸಲ ಶ್ರೀಸತ್ಯಾತ್ಮತೀರ್ಥರು

ಸತ್ಯಪ್ರಮೋದತೀರ್ಥ ಕರಕಮಲ ಸಂಜಾತ ಶ್ರೀಸತ್ಯಾತ್ಮತೀರ್ಥರು

ಸತ್ಯವಚನ ಪರಿಪಾಲಕ ನೈಷ್ಠಿಕ ಯತಿ ಶ್ರೀಸತ್ಯಾತ್ಮತೀರ್ಥರು

ಉತ್ತರಾದಿಮಠಾಧೀಶ ಯತಿಕುಲಚಂದ್ರ ಶ್ರೀಸತ್ಯಾತ್ಮತೀರ್ಥರು

ದ್ವೈತಸಿದ್ಧಾಂತ ಸರ್ವದಾ ಪ್ರತಿಪಾದಯ ಸಾತ್ವಿಕ ಶ್ರೀಸತ್ಯಾತ್ಮತೀರ್ಥರು

ಬ್ರಹ್ಮಕರಾರ್ಚಿತ ಮೂಲಸೀತಾರಾಮಾರಾಧಕ ಶ್ರೀಸತ್ಯಾತ್ಮತೀರ್ಥರು

ಶ್ರೀಮನ್ಯಾಯಸುಧಾ ಉಪದೇಶ ನಿಪುಣ ಶ್ರೀಸತ್ಯಾತ್ಮತೀರ್ಥರು

ಅದ್ಭುತ ವಾಗ್ವೈಖರಿಯುಕ್ತ ವೇದಶಾಸ್ತ್ರ ಪ್ರವೀಣ ಶ್ರೀಸತ್ಯಾತ್ಮತೀರ್ಥರು

ವಿದ್ಯಾ, ಅನ್ನದಾನ ಅನಂತಹಸ್ತದಿ ಅನವರತ ಮಾಲ್ಪ ಶ್ರೀಸತ್ಯಾತ್ಮತೀರ್ಥರು

ಶಮ ದಮಾದಿ ಪರಾಕಾಷ್ಠ ತಿತಿಕ್ಷ ಋಜು ಶ್ರೀಸತ್ಯಾತ್ಮತೀರ್ಥರು

ರಾಮಾಭಿನ್ನ ಶ್ರೀಕೃಷ್ಣವಿಠ್ಠಲ ಧ್ಯಾನಮುನೀಶ್ವರ ಶ್ರೀಸತ್ಯಾತ್ಮತೀರ್ಥರು

"ಶ್ರೀ ಸತ್ಯಪ್ರಮೋದತೀರ್ಥರು"

10. ಶ್ರೀ ಸತ್ಯಪ್ರಮೋದಾರ್ಯ ನಿಮ್ಮ ಪಾದದಿ ಎನ್ನ ಮನವಿರಲಿ ಸದಾ |

ಸರ್ವವ್ಯಾಪಕ ತ್ರಿಗುಣಾತೀತ ಮೂಲ ದಿಗ್ವಿಜಯರಾಮದಾಸ ||

ತ್ಯಜಿಸಿ ವಿಷಯ ಸುಖಗಳ ನಿನ್ನ ಪಾದ ಭಜಿಸುವಂತೆ ಮಾಡೋ |

ಪ್ರಯತ್ನವಿಲ್ಲದೆ ನಿತ್ಯ ನಿನ್ನನ್ನೆ ಸ್ಮರಿಸುವಂತಿರಲಿ ಮನ ||

ಮೋದದಿ ನಿನ್ನ ನಾಮಾಮೃತ ಪಾಡುತಿರಲಿ ವದನ |

ದಯೆ ತೋರು ಜೀಯಾ ನಿನ್ನ ದರ್ಶನವಾಗಲಿ ಅನವರತ ||

ತೀರದಿರಲಿ ನಿನ್ನ ಅನುಗ್ರಹದ ಭಂಡಾರವೆನ್ನ ಮೇಲೆ ಸಾ- |

ರ್ಥಕವಾಗಲಿ ಎನ್ನ ಪ್ರತಿಜನುಮ ಸಜ್ಜನ ಸಂಗದಿ ||

ಜನಕಜಾಮಾತರ ಪೂಜಿಪ ನಿತ್ಯ ಭಕ್ತಿಯಲಿ |

ಯಾರು ಕೈಬಿಟ್ಟರೂ ನೀ ಎನ್ನ ಕೈ ಬಿಡದಿರು ||

ಜಯಸಿ ಸಂಸಾರ ಸೇರಿ ಶ್ರೀಕೃಷ್ಣವಿಠ್ಠಲನ ಪದತಲ |

ಯಾವಾಗಲೂ ಅಲ್ಲಿಯೇ ಇರುವಂತೆ ಅನುಗ್ರಹಿಸು ಎನ್ನ ||

"ಶ್ರೀ ರಾಘವೇಂದ್ರತೀರ್ಥರು"

11. ರಘುನಂದನನ ಅಂತರಂಗ ಭಕುತ

ಶ್ರೀಗುರು ರಾಘವೇಂದ್ರರಾಯಾ || ||

ಸುಧೀಂದ್ರರ ಕರುಣೆಯ ಕಂದ

ಮಧ್ವಮತ ಜಲಧಿಯ ಪೂರ್ಣೇಂದು

ಸುಧಾಕ್ಕೆ ಪರಿಮಳ ಬೆರೆಸಿದ ವ್ಯಾಖ್ಯಾನಕಾರ

ವಿಧದಿ ಭಕ್ತರ ಪೊರೆವ ಕಾಮಧೇನು || 1 ||

ತುಂಗಾತೀರದ ವೃಂದಾವನದಿ ನೆಲೆಸಿಹ

ಬಗೆಬಗೆಯಲಿ ಮಹಿಮೆಯ ತೋರುತ

ಆಗಮವ ಸಾರಿದ ಪ್ರಾತಃಸಂಕಲ್ಪ ಗದ್ಯದಿ

ನಿಗಮಗೋಚರ ಶ್ರೀಕೃಷ್ಣವಿಠ್ಠಲನ ಭಕುತ || 2 ||

"ಶ್ರೀ ರಘೂತ್ತಮತೀರ್ಥರು"

12. ಶ್ರೀ ಭಾವಬೋಧ ಕೃತ್ಪಾದ ಮಧ್ವ ಶಾಸ್ತ್ರ ಪ್ರವರ್ತಕಮ್ |

ರಘೂತ್ತಮಗುರುಂ ವಂದೇ ಪಿನಾಕೀತಟವಾಸಿನಂ ||

"ಶ್ರೀ ವಾದಿರಾಜರು"

13. ರಾಜರು ಗೊತ್ತೇನಮ್ಮಾ ನಿಮಗೆ ಶ್ರೀ ವಾದಿರಾಜರು, ಗೊತ್ತೇನಮ್ಮಾ || ||

ಸುಜನರೋದ್ಧಾರಕ ಧರೆಗೆ ಇಳಿದ ಸುರಯತಿಗಳಿವರು || ||

ರುಕ್ಮಿಣೀಶ ವಿಜಯ ಗ್ರಂಥ ರಚಿಸಿ ವಿಜಯಗಳಿಸಿದವರಮ್ಮಾ |

ಯುಕ್ತಿಯಿಂ ಯುಕ್ತಿಮಲ್ಲಿಕೆಯ ಸುಗಂಧ ಪಸರಿಸಿದವರಮ್ಮಾ ||

ತೀರ್ಥ ಪ್ರಬಂಧವ ರಚಿಸಿ ಕಾಣದ ತೀರ್ಥಗಳ ಕಾಣಿಸಿದವರಮ್ಮಾ |

ತತ್ವಸುವ್ವಾಲಿ ತತ್ವಪ್ರಕಾಶಿಸಿದ ವ್ಯಾಸ, ಮಧ್ವರÀ ಶಿಷ್ಯರಿವರಮ್ಮಾ || 1 ||

ಅರಸಗೆ ಒಲಿದು ಸೋದೆಲಿ ನೆಲಸಿ ಧವಳಗಂಗೆ ನಿಲಿಸಿದವರಮ್ಮಾ

ಶ್ರೀರಮಾ ತ್ರಿವಿಕ್ರಮರ ಬದರಿಯಿಂ ಶುದ್ಧ ಭಕ್ತಿಲಿ ಕರೆಸಿದವರಮ್ಮಾ ||

ಪಂಚವೃಂದಾವನದಿ ನೆಲೆಸಿಹರಿವರು ಹಯಗ್ರೀವಾರಾಧಕರಮ್ಮಾ |

ಮೆಚ್ಚಿನ ಪ್ರಭು ಶ್ರೀಕೃಷ್ಣವಿಠ್ಠಲನ ಜಪಗೈದು ಒಲಿಸಿಕೊಂಡವರಮ್ಮಾ || 2 ||

14. ಪಂಚವೃಂದಾವನದಿ ನೆಲೆಸಿಹ ವಾದಿರಾಜ ಗುರುವೇ |

ಕೊಂಚ ಮಾಡೆನ್ನ ಸಂಚಿತ ಕರ್ಮಕಳೆದು ಪ್ರಾರಬ್ಧವ || 1 ||

ಹೊಂಚು ಹಾಕಿ ಬರುವ ಕಾಲ ಯಮನ ಭಟರ |

ಸಂಚು ತಿಳಿದು ಮುನ್ನ ಶ್ರೀಕೃಷ್ಣವಿಠ್ಠಲನ ಭಜಿಸುವಂತೆ ಮಾಡು || 2 ||

"ಶ್ರೀ ವ್ಯಾಸರಾಜರು"

15. ಮಧ್ವಮತ ಸಿದ್ಧಾಂತ ಪ್ರವರ್ತಕ ಚಂದ್ರಮ್ |

ಮೋದರೂಪ ಸುವಿಶುದ್ಧ - ಶಾಂತ- ಸ್ವರೂಪಮ್ |

ತೇಜೋನಿಧಿ ಶ್ರೀಪಾದರಾಜ ಕರುಣಾ ಪೂರ್ಣ ಶಿಷ್ಯಮ್ |

ದ್ವಾದಶ ವರ್ಷ ಭೂ ವೈಕುಂಠಪತಿ ಪೂಜಕಮ್ |

ಸಪ್ತಶತ ದ್ವಾತ್ರಿಶನ್ಮಾರುತಿ ಸ್ಥಾಪಕಮ್ |

ಶುದ್ಧ ತ್ರಿಕರಣೇನ ಸದಾ ಹನುಮದುಪಾಸಕಮ್ |

ಯದುಕುಲ ರಾಜ್ಯ ಸಿಂಹಾಸನಾಲಂಕೃತಂ |

ನ್ಯಾಯಾಮೃತ, ಚಂದ್ರಿಕಾ, ತರ್ಕತಾಂಡವ ವಿರಚನೇನ ವಾಘ್ರಂ |

ತುಂಗಭದ್ರಾ ತಟೆ ನವ ವೃಂದಾವನೇ ವಿರಾಜಿತಂ ಶ್ರೀಕೃಷ್ಣವಿಠ್ಠಲಂ ಭಜಂ |

ಮುನಿ ಕುಮುದೇಂದುಂ ಶ್ರೀವ್ಯಾಸರಾಜ ಮಹಂ ಭಜೇ ||

"ಶ್ರೀ ಜಯತೀರ್ಥರು"

16. ಭಜಿಸಿರಿ ಜಯರಾಯರ ಶ್ರುತಿ ಮಥಿತಾರ್ಥ ತಿಳಿಯಲು |

ಗೋಜಲು ಬೀಳದೆ ಸಂಸಾರತಾರಕ ಗುರುಗಳ ಭಜಿಸಿರೋ || 1 ||

ಇಂದ್ರಾವತಾರಿ ಶೇಷಾವೇಶದಿ ಸಂಸಾರವಿಷ ತೊರೆದ |

ಪರಮ ವಿರಕ್ತ ಭಕ್ತ ಜನರಿಗೆ ಅಭಯ ವಚನವೀವ || 2 ||

ಎತ್ತಾಗಿ ಜನಿಸಿ ಮಧ್ವಶಾಸ್ತ್ರ ಕೇಳಿ ನಿಷ್ಠೆಯಲಿ ತಿರುಗಿದ |

ಸರ್ವಮೂಲಗಳಿಗೆ ಟೀಕೆ ಬರೆದ ಟೀಕಾರಾಯರ ಬಿಡದೆ || 3 ||

ಕಾಗಿನಿ ತಟ ವೃಂದಾವನದಿ ನೆಲೆಸಿಹ ಯೋಗನಿರುತ |

ಯೋಗೇಶ್ವರ ಶ್ರೀಕೃಷ್ಣವಿಠ್ಠಲನ ಪಾದ ನಂಬಿ ಭಜಿಪ || 4 ||

"ಶ್ರೀ ಆನಂದತೀರ್ಥರು"

17. ಆನಂದತೀರ್ಥರ ಸಿದ್ಧಾಂತ ಅರಿತವರಿಗೆ

ಪನ್ನಂಗ ಶಯನ ಒಲಿದು ರಕ್ಷಿಪನನವರತ || ||

ಸರ್ವಮೂಲ ಗ್ರಂಥ ವಿರಚಿಸಿ |

ದುರ್ವಾದಿಯ ಮಾಯಾವಾದ ಖಂಡಿಸಿ ||

ಸರ್ವೋತ್ತಮನ ಉಡುಪಿಲಿ ನಿಲಿಸಿದ |

ಮಧ್ವಮುನಿ ದ್ವೈತಮತ ಪ್ರವರ್ತಕ ನಮೋ || 1 ||

ಅನಂತ ಜನುಮದ ಪುಣ್ಯದಿ ಭಾಗ್ಯ ದೊರೆಕೆ |

ಜ್ಞಾನನಿಧಿ ದೊರಕುವುದು ಗುರುವನುಗ್ರಹದಿ ||

ಮನಸಿನ ವಿಷಯ ಸುಖಗಳ ಬೇಡದಿರಲು |

ಸಾನುರಾಗದಿ ಒಲಿವಾ ಶ್ರೀಕೃಷ್ಣವಿಠ್ಠಲರಾಯಾ || 2 ||

"ಶ್ರೀ ಗಣಪತಿ

18. ನಮೋ ನಮೋ ವಿಘ್ನರಾಜ ಗೌರಿತನಯ |

ನಿರ್ಮಲ ಮನಕೆ ಸುಖ ತೋರುವ ಗಣನಾಥ || 1 ||

ಮನದೊಳಿಹ ದುರ್ವಿಷಯ ತರಿದು ಬಿಸುಟು |

ಸನ್ಮನದಿ ಭಜಿಪೆ ರಮಾಪತಿಯಲಿ ಭಕ್ತಿ ಇರಿಸು || 2 ||

ವ್ಯಾಸಕೃತ ಗ್ರಂಥಗಳ ಬರೆದು ವಿಸ್ತರಿಸಿದೆಯೋ |

ಮೂಷಕವಾಹನ ಅದರರ್ಥವ ಮಾಡಿಸೋ || 3 ||

ಕರಿಮುಖ ಲಂಬೋದರ ಪಾಶಾಂಕುಶಧರನೇ

ಉರಗ ಕಟಿಸೂತ್ರ ಧರಿಪ ಸುಚರಿತ್ರನೇ || 4 ||

ಸರ್ವ ಸುಸಿದ್ಧಿದಾಯಕ ಮೋದಕಪ್ರಿಯನೇ |

ಸರ್ವೋತ್ತಮ ಶ್ರೀಕೃಷ್ಣವಿಠ್ಠಲನ ನಿಜಭಕ್ತನೇ || 5 ||

19. ಜಯ ಜಯ ಆದಿ ಪೂಜಿತ ವಿದ್ಯಾಬುದ್ಧಿ ಪ್ರದಾಯಕ ತೇ ನಮೋ ನಮೋ || |

ಭಯಭವತಾರಕ ಭೂತಾಕಾಶಪತಿಯೇ ತೇ ನಮೋ ನಮೋ || ||

ಸುಖದಾತ ದುಃಖಹರ್ತ ಗಣಾಧೀಶ ಕೃಪಾಕರ ತೇ ನಮೋ ನಮೋ |

ಅಖಿಲ ಸದ್ಗುಣ ಗುಣಪೂರ್ಣ ಗಜ ಮುಖ ತೇ ನಮೋ ನಮೋ ||

ಏಕದಂತ ವಿಘ್ನರಾಜ ಸಜ್ಜನಪ್ರಿಯ ಲಂಬೋದರ ತೇ ನಮೋ ನಮೋ |

ಶಂಕರಾತ್ಮಜ ಮೃದ್ಭವ ಗೌರಿತನಯ ಮುಕುಟಧರ ತೇ ನಮೋ ನಮೋ || 1 ||

ಪಾಶಾಂಕುಶಧಾರಿ ಮೂಷಕವಾಹನ ಸಿಂಧೂರ ಚರ್ಚಿತ ತೇ ನಮೋ ನಮೋ |

ಆಶಾಪಾಶಕ್ಲೇಶನಿವಾರಕ ವಕ್ರತುಂಡ ಮಂಗಳ ತೇ ನಮೋ ನಮೋ ||

ಶ್ರೀಶನಂಘ್ರಿ ಸುಪೂಜಿಪ ಸಂಕಟ ವಿಮೋಚಕ ತೇ ನಮೋ ನಮೋ |

ವಿಶ್ವಂಭರನಾಮಕ ಶ್ರೀಕೃಷ್ಣವಿಠ್ಠಲಪ್ರಿಯ ತೇ ನಮೋ ನಮೋ || 2 ||

"ಶ್ರೀ ಗಂಗೆ"

20. ಗಂಗೆ ಗಂಗೆ ಗಂಗೆ ಎಂದರೆ ಸರ್ವಪಾಪ ಹಿಂಗುವುದು |

ಸಂಗ ದೊರೆತು ಸಜ್ಜನರ ಬದುಕು ಉದ್ಧರಿಸುವುದು || ||

ಭಗೀರಥ ಪ್ರಯತ್ನದಿ ಧರೆಗೆ ಇಳಿದು ಬಂದು |

ಸಾಗರವ ಸೇರಿದಳು ಸಿಂಧುವಿನರ್ಧಾಂಗಿ ||

ವಿಷ್ಣು ಪಾದೋದ್ಭವೆ ಆಕಾಶಗಂಗೆ ಹರನ ಶಿರದಿಂದಿಳಿದು |

ಋಷಿ ಜಹ್ನುವಿನಾಶ್ರಮ ಪಾವನಗೊಳಿಸಿದಳು || 1 ||

ಕಲಿಯುಗದಿ ಜಾಹ್ನವಿ ಪಾಪವ ತೊಳೆಯಲು |

ಅಲಕನಂದಾ ಜೊತೆಯಾಗಿ ಮುಂದೆ ಹರಿದಿಹಳು ||

ಹರಿಪದಿ ಹರಿಯ ದ್ವಾರವ ಮೆಟ್ಟಿ ಪ್ರಯಾಗದಿ ಯಮುನೆ

ಸರಸ್ವತಿಯ ಕೂಡಿ ತ್ರಿವೇಣಿ ಸಂಗಮವೆನಿಸಿದಳು || 2 ||

ಗೋದಾವರಿ, ಕೃಷ್ಣೆಯರೊಡಗೂಡಿ ಅಪರೂಪಕೆ |

ಒಂದಾಗಿ ಭಕ್ತಜನರ ಸೇವೆ ಕೈ ಕೊಂಬುವಳು ||

ಭಕ್ತಿಯಲಿ ನೆನೆಯಲು ಕಂದನ ಕರೆಗೆ ಜನನಿ ಬರುವಂತೆ |

ಸಕಲಾಭೀಷ್ಟ ಪೂರೈಸುವ ಗಂಗಾಂತರ್ಗತ ಶ್ರೀಕೃಷ್ಣವಿಠ್ಠಲ || 3 ||

"ಗಂಗಾವತರಣ"

21. ಸುಗುಣಾಂತರಂಗ ಆವಿರ್ಭವಿಸಿ ಅದಿತಿ - ಕಶ್ಯಪ ಪುತ್ರನಾಗಿ |

ಆಗಲೇ ತೋರಿದ ಸುಂದರ ವಟು ವಾಮನ ರೂಪದಿ ||

ಆಗಮಿಸಿ ಯಜ್ಞ ಮಂಟಪದಿ ಬೇಡಿದ ಬಲಿಗೆ ದಾನವ |

ಬಗೆ ಬಗೆಯ ದಾನಕೊಳ್ಳದೇ ಬೇಡಿದ ತ್ರಿಪದ ಭೂಮಿಯ ||

ಅಗಣಿತ ಬೆಳೆದ ಅಚಿಂತ್ಯ-ಅದ್ಭುತ ತ್ರಿವಿಕ್ರಮನಾಗಿ |

ಬೇಗ ಅಳೆದ ಎರಡು ಪಾದದಿ ಭುವಿ-ಅಂತರಿಕ್ಷವ ||

ನಗೆ ಬೀರಿ ಕೇಳಿದ, ಎಲ್ಲಿಡಲಿ ಮೂರನೇ ಪಾದ ಸ್ಥಳ ತೋರು |

ಯೋಗದಿ ಅರಿತನವ ಸಾಮಾನ್ಯನಲ್ಲ ಇವ ಪರಮಾತ್ಮನೆಂದು ||

ಭಂಗವಾಗದಂತೆ ಪ್ರತಿಜ್ಞೆ, ಬಾಗಿ ತನ್ನ ಶಿರವ ತೋರಿದ |

ಬೇಗನೆ ಬಲಿಯ ಶಿರವ ಮೆಟ್ಟಿ ಪಾತಾಳಕ್ಕಟ್ಟಿದ ||

ಅಂಗನೆಯ ಜೊತೆಗೂಡಿ ನಡೆದ ಚಿರಂಜೀವಿಯಾಗಿ ಬಲಿ |

ಈಗಲೂ ಕಾಯುತಿರುವ ಭಕ್ತವತ್ಸಲ ಅರಮನೆಯ ಬಾಗಿಲವ ||

ಗಗನಕ್ಕೆತ್ತಿದ ಪಾದನಖ ತಾಕಿ ಬ್ರಹ್ಮಾಂಡ ಖರ್ಪರ |

ಸುಜ್ಞಾನಿ ಬ್ರಹ್ಮ, ಸುರಿದ ಜಲದಿ ಮಾಡಿದ ಪಾದ ಪೂಜೆ ||

ಆಗ ವಿಷ್ಣುಪದಿ ಎನಿಸಿ ಸುಪವಿತ್ರಳಾಗಿ ಕೆಳಗೆ ಧುಮುಕಿದಳು |

ನುಗ್ಗಿ ಬಂದ ರಭಸ ತಡೆದು ಶಿವ ಜಟೆಯಲಿ ಬಂಧಿಸಿದ ||

ಭಗೀರಥ ಮಾಡಿದ ಘೋರ ತಪಕೆ ಮೆಚ್ಚಿ ಭುವಿಗೆ ಕಳುಹಿದ |

ಸಂಗ ತೊರೆಯಲು ಮನವಿಲ್ಲದೆ ದೇವಲೋಕ ಬಿಟ್ಟು ಇಳಿದಳು ||

ಸಾಗಿ ಬಂದು ಜಹ್ನು ಋಷಿ ಆಶ್ರಮವ ತೇಲಿಸಿದಳು |

ಗಂಗೆಯನು ತೀರ್ಥವೆಂದು ಆಪೋಶನದಿ ಸಕಲ ಸ್ವೀಕರಿಸಿದ ||

ಸುಜ್ಞಾನಿಗಳು ಪವಿತ್ರಗೊಳ್ಳುವ ಸುಸಂಧಿ ಎಂದೂ ಬಿಡರು |

ವಿಜ್ಞಾಪಿಸಲು ಭಗೀರಥ ಕರುಣದಿ ಕಿವಿಯಿಂದ ಹೊರಟಳು ಜಾಹ್ನವೀ ||

ಮಂಗಳೆ ಹರಿದು ಕೆಳಗೆ ಭುವಿ ಪಾತಾಳಾದಿ ಲೋಕ ಪಾವನಗೊಳಿಸಿ |

ಸಗರ ಕುಲ ಬಾಂಧವರನ್ನೆಲ್ಲಾ ಉದ್ಧರಿಸಿದ ಸುಚರಿತ ಗಾಥಾ |

ಗಗನದ ಸುರನದಿ ಭೂಮಿಲಿ ಪಾಪಕಳೆವ ಗಂಗೆಯಾಗಿ ||

ಜಗದೋದ್ಧಾರಕ ಶ್ರೀಕೃಷ್ಣವಿಠ್ಠಲನ ದಯದಿ ತ್ರಿಪಥಗಾಮಿನಿಯಾದಳು ||

"ಶ್ರೀ ರುದ್ರ ದೇವರು"

22. ಚೆಲುವಿನ ಚಂದಿರ ಒಲುಮೆಯಿಂದ ಶಿರದಿ ಗಂಗೆಯ ಪೊತ್ತವನ್ಯಾರಮ್ಮಾ ? |

ಕೈಲಾಸನಾಥ ವಿಶ್ವೇಶ್ವರನಿವ ಮಂಗಳಮಯನಮ್ಮಾ || 1 ||

ಉರಗಪ್ರಿಯ ಡಮರುಧರ ಗಜಚರ್ಮಾಂಬರಧರನ್ಯಾರಮ್ಮಾ ? |

ಪರಮ ಸುಂದರ ಪಾರ್ವತಿ ಪತಿ ಶಂಕರನಿವನಮ್ಮಾ || 2 ||

ಗಜಮುಖಪಿತ ಗಣಾಧೀಶ ವಿರೂಪಾಕ್ಷನ ಸೃಜಿಸಿದವನ್ಯಾರಮ್ಮಾ ? |

ಅಜಮುಖವಿತ್ತು ದಕ್ಷನ ಉಳುಹಿದ ದಾಕ್ಷಾಯಿಣಿ ಪತಿಯಮ್ಮಾ || 3 ||

ಸತಿಯ ವಿರಹ ಸಹಿಸದೆ ಕ್ರೋಧದಿ ಜಟೆ ಅಪ್ಪಳಿಸಿದವನ್ಯಾರಮ್ಮಾ ? |

ಸುತನ ಶಿರ ತರಿದ ಪಶುಪತಿ ಧೂರ್ಜಟಿನಿವನಮ್ಮಾ || 4 ||

ಭಸ್ಮಾಸುರನಿಗೆ ವರವಿತ್ತು ಭಯದಿ ಓಡಿ ದಣಿದವನ್ಯಾರಮ್ಮಾ ? |

ಸುಸ್ಮಿತನಿವ ಶೀಘ್ರದಿ ತಪಕೆ ಒಲಿವ ಆಶುತೋಷನಿವನಮ್ಮಾ || 5 ||

ಕೇಳಿದ್ದೆಲ್ಲಾ ಕೊಡುವ ಕಡೆಗೆ ಆತ್ಮಲಿಂಗವನಿತ್ತವನ್ಯಾರಮ್ಮಾ ? |

ಬಲುಸೋಜಿಗನಿವ ವೈರಾಗ್ಯಮೂರುತಿ ಮನೋನಿಯಾಮಕನಮ್ಮಾ || 6 ||

ಕೈಲಾಸದಿ ಮಾತೆ ಸೀತೆಯ ಕೈಂಕರ್ಯಮಾಡಿದ ಧನ್ಯನ್ಯಾರಮ್ಮಾ ? |

ನಲುಮೆಯ ಉಮಾಪತಿ ನಾಲ್ಮೊಗನಸುತ ಕಾಮಹರನಮ್ಮಾ || 7 ||

ರಾಮಮಂತ್ರ ಸತಿಗುಪದೇಶಿಸಿದ ಪರಮಭಕ್ತನ್ಯಾರಮ್ಮಾ ? |

ಭೂಮಿಗೆ ಕರುಣದಿ ಪಾವನಗಂಗೆ ಹರಿಸಿದ ವೈಷ್ಣವೋತ್ತಮನಮ್ಮಾ || 8 ||

ಮೋಹಿಸಿ ಮೋಹಿನಿ ರೂಪದ ಹಿಂದೆ ಮಾಯದಿ ಓಡಿದವನ್ಯಾರಮ್ಮಾ ? |

ಬಹುರೂಪಿ ನಾರಾಯಣನ ನಿಜವ ತಿಳಿದ ಭೂತನಾಥನಿವನಮ್ಮಾ || 9 ||

ನಂದಿವಾಹನ ಭಸ್ಮಲೇಪಿತ ಕಂಠದಿ ವಿಷವಿಟ್ಟವನ್ಯಾರಮ್ಮಾ ? |

ಒಂದೇ ಮನದಿ ಸದಾ ಶ್ರೀಕೃಷ್ಣವಿಠ್ಠಲನ ನೆನೆವ ವಿಷಕಂಠನಿವನಮ್ಮಾ || 10 ||

23. ಮಹದೇವ ದಯಾಮಯ ಭಯನಿವಾರಕ |

ಮಹಾಕಾಲ ಮಂಗಳ ನಿರಂಜನ ನಿಷ್ಕಳಂಕ || 1 ||

ಸಂಗವಿದೂರ ತ್ರಿಶೂಲಧಾರಿ ಭೂತನಾಥ |

ಗಂಗಾಧರ ವಿಷಕಂಠ ವಿರಕ್ತ ಸತ್ಯನಾಥ || 2 ||

ಆತ್ಮಲಿಂಗಪ್ರದಾತ ಭಕ್ತವತ್ಸಲ ಅಭಿಷೇಕಪ್ರಿಯ |

ಸತ್ಯ ಶ್ರೀಕೃಷ್ಣವಿಠ್ಠಲ ಭಕುತ ತ್ರಾಹಿಮಾಂ! ತ್ರಾಹಿಮಾಂ || 3 ||

24. ಕರುಣಾಕರ ಸದಾಶಿವ ಉಮಾ ಮಹೇಶ್ವರ ನಮೋ ನಮೋ |

ಪರಮ ವೈಷ್ಣವ ರಾಮನಾಮಪ್ರಿಯ ನಮೋ ನಮೋ || ||

ಗಂಗಾಧರ ಗೌರಿಪ್ರಿಯ ವಿಷಧರ |

ಮಂಗಳ ಸತಿಯ ಅಂತರಂಗಪ್ರಿಯ ||

ಚಂದ್ರಚೂಡ ಶಿವ ಚರ್ಮಾಂಬರಧರ |

ನಂದಿವಾಹನ ಇಂದ್ರಾದಿವಂದಿತ || 1 ||

ಮನೋನಿಯಾಮಕ ಭುಜಗ ಧರಿತ |

ಸನ್ನುತ ಪಾರ್ವತಿ ಪತೇ ಕಾಮಹರ ||

ಏಕದೇವತೋಪಾಸಕ ಮಹದೇವಾಂತರ್ಗತ |

ಶ್ರೀಕೃಷ್ಣವಿಠ್ಠಲ ಅನುಗ್ರಹಿಸೆನ್ನನು ಸತತ || 2 ||

25. ಶ್ರೀ ಶಾರದೆ ತಾಯೆ ಶಾರದೆ ಪೊರೆಯೆ ನಮ್ಮನು ||

ಸುಸ್ಮಿತೆ ವಾಗಾಭಿಮಾನಿ ಚತುರವದನನ ರಾಣಿಯೇ || ||

ಶುಭ್ರವದನೇ ಫಾಲೆ ಕುಂಕುಮ ವಿರಾಜಿತೇ |

ಸುಭಗೇ ನೀಳನಾಸಿಕೆ ಪವಿಮೂಗುತಿ ಧರಿತೇ ||

ಶುಭಕಾಯೆ ಕನಕವಸನೇ ಪುಷ್ಪಹಾರ ಸುಶೋಭಿತೇ |

ಗಂಭೀರೇ ವೀಣಾಧರೇ ಪದ್ಮಾಸನಸ್ಥಿತೇ ದೇವಿ || 1 ||

ವಿದ್ಯೆಯೆಂಬ ವಜ್ರಕವಚ ತೊಡಿಸು ಶೀಘ್ರದಿ |

ಭೇದವಿಲ್ಲದೆ ವಿಘ್ನ ಕಳೆದು ಘನಮಹಿಮೆ ತೋರೆ ||

ನಾದ ಶಿರೋಮಣಿ ಶಂಕರ ಕರಾರ್ಚಿತೆ ಸುಪೂಜಿತೆ |

ಬುದ್ಧಿ ಪ್ರದಾಯಿನಿ ಶುದ್ಧ ಬ್ರಹ್ಮಾಣಿ ಮಂಗಳೇ || 2 ||

ಮಂದಮತಿಯೆನ್ನ ಕುಂದೆಣಿಸದೆ ಉದ್ಧರಿಸು ಸದಾ |

ಬಂದ ಭಕುತರಿಗೆ ಕರುಣಾಕಟಾಕ್ಷಬೀರೆ ಅಭಯದಿ ||

ಕಂದ ನಿನ್ನವರೆಂದು ಶರಣ ಜನರ ಪೊರೆಯೇ |

ಸುಂದರಿ ಇಹಪರಗತಿ ಶ್ರೀಕೃಷ್ಣವಿಠ್ಠಲನ ಚರಣದಾಸಿಯೇ || 3 ||

26. ಲೋಕಪಾವನೆಯೋರ್ವಳೆ ಗಂಗೆ |

ಆಕಾಶಕೆಲ್ಲಾ ಓರ್ವನೆ ಚಂದಿರ || 1 ||

ಪ್ರಕಾಶಿಪ ಶ್ರೇಷ್ಠನೋರ್ವನೆ ಸೂರ್ಯ |

ಶಕುತನೋರ್ವನೆ ಮುಖ್ಯಪ್ರಾಣ || 2 ||

ಪರಾಕ್ರಮಿಗಳಲ್ಲೋರ್ವನೆ ಬಲಭೀಮ |

ಗುರುಗಳಲ್ಲೋರ್ವರೆ ಆನಂದತೀರ್ಥರು || 3 ||

ಸರ್ವರೊಳು ನಿಂತ ಕಾರ್ಯಕಾರಣನು |

ಶ್ರೀಕೃಷ್ಣವಿಠ್ಠಲನೋರ್ವನೇ ಸರ್ವಕಾಲಕೂ ಇನ್ನೋರ್ವನಿಲ್ಲ || 4 ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು