ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 2

ಅಚ್ಯುತನ ಕರುಣೆಯಿಂ ಕೊಂಚವಾದರೂ

ಕಡಿಮೆಯಾಗುವುದಂತೆ || ಹೇಗೋ | || ಅಪ ||

ಕೌಸಲ್ಯಾನಂದನನೇ ಆಗಿದ್ದೂ, ಪುತ್ರವಿರಹ ತಪ್ಪಲಿಲ್ಲಾ |

ಜಾನಕೀರಾಮನಾಗಿದ್ದೂ, ಪತ್ನಿಯ ಕಳೆದುಕೊಂಡವ ||

ಶ್ರೀರಾಮನ ಅನುಜನಾಗಿದ್ದೂ, ಹದಿನಾಲ್ಕುವರ್ಷದ ವನವಾಸ ತಪ್ಪಲಿಲ್ಲಾ |

ಮರ್ಯಾದಾಪುರುಷೋತ್ತಮನಿದ್ದೂ ಸೀತೆಯ ಶಂಕಿಸಿದನು | || 1 ||

ಲಕ್ಷ್ಮೀಪತಿಯಾಗಿದ್ದೂ ಇನ್ನೊಬ್ಬರ ಅನ್ನಕ್ಕೆ ಕೈಚಾಚಿದವ |

ಇಂದಿರೇಶನಾಗಿದ್ದೂ, ಇಂದುವದನೆಯ ಭೂಮಿಯ ಮಡಿಲೊಳಿಟ್ಟವ ||

ಶ್ರೀಮನ್ನಾರಾಯಣನೇ ಪುತ್ರನಾದರೂ ಸೆರೆವಾಸ ತಪ್ಪಲಿಲ್ಲಾ |

ಕೇಶವಸಖನಾದರೂ ವನವಾಸ ತಪ್ಪಲಿಲ್ಲಾ | || 2 ||

ಮುಕುಂದನ ಅತ್ತೆಯಾದರೂ ಮುತ್ತೈದೆತನ ಉಳಿಯಲಿಲ್ಲಾ |

ದ್ವಾರಕಾಧೀಶನ ತಂಗಿಯಾದರೂ ಅಪಮಾನ ಬಿಡಲಿಲ್ಲಾ ||

ಗುಣಪೂರ್ಣನಾಗಿದ್ದೂ ನವನೀತಚೋರನೆಂಬ ಬಿರುದು ಬಿಡಲಿಲ್ಲಾ |

ಶ್ರೀಕೃಷ್ಣವಿಟ್ಠಲನ ನಿರುತ ಭಜಿಸಿದರೆ ಸಂಚಿತಕರ್ಮ

ಕಿಂಚಿತ್ತಾದರೂ ಕಡಿಮೆಯಾಗುವುದಂತೆ | || 2 ||

ಎಎಎ

364. ಢೋಂಗಿ ಭಕುತಿಯ ಕಂಡು ಭಂಗಾರದಂತಹ

ನಮ್ಮ ಸ್ವಾಮಿ ನಗುವನು | || ||

ಎಲ್ಲರೂ ಕಾಣುವಂತೆ ಪೂಜೆ, ನಮಸ್ಕಾರ ಮಾಡಿದರೇನು

ಬಂತು ಹೃದಯದಿ ಲೇಶ ಭಕುತಿಯಿಲ್ಲದೆ |

ಶ್ರೀಮಂತಿಕೆ ಸೊಕ್ಕಿನಲಿ ಭಗವಂತನ ತೂಗಿದರೆ ಒಲಿಯುವನೇ || || 1 ||

ಶ್ವಾಸೋಚ್ಛ್ವಾಸದಂತೆ ಶುದ್ಧಮನದಿ ನಿರಂತರ ಜಪಿಸಿದರೂ ಸಾಕು |

ಆರ್ತನಾದದಿ ಒಮ್ಮೆ ಕರೆದರೂ ಸಾಕು ಓಡೋಡಿಬರುವ || 2 ||

ಸದಾಚಾರದಿಂದ ಸದಾ ಸದಾನಂದನನ ಕಾಣುವಗೆ |

ಸರ್ವಸಮರ್ಪಣೆ ಮಾಡಿದವನ ಸದಾ ಸಲುಹುವನು ಸಂಶಯಬೇಡಾ || 3 ||

ಢಂಬಾಚಾರವ ಬಿಟ್ಟು ನಿಜ ಭಕುತಿಯ ಧರಿಸಿ |

ಶ್ರೀಕೃಷ್ಣವಿಟ್ಠಲನ ಮನ ಮುಟ್ಟಿ ಭಜಿಸಲು ತ್ವರಿತದಿ ಒಲಿವ || 4 ||

ಎಎಎ

365. ಸೂತ್ರವ ಕಟ್ಟಿ ಬೊಂಬೆಯ ಇಳೆಗಿಳಿಸೆ ಆಟವನಾಡುವೆಯಾ |

ನಿನ್ನಗಿಲ್ಲಾ ಲಾಭಹಾನಿ ಆದರೂ ಆಡುವೆಯಾ-ಆಟವನಾಡುವೆಯಾ ||

ಇಚ್ಛೆಯಿಂದಲೆ ತಲೆ, ಕಾಲ್ಗಳಕುಣಿಸುವೆ |

ಇಲ್ಲದಿರೆ ಸುಮ್ಮನೆ ಬೀಳಿಸುವೆ ||

ಉಸಿರು, ಜೀವದ ಗಳಿಗೆ ಎಣಿಸಿ ಕಳಿಸುವೆ |

ಅದು ಮುಗಿಯಲು ಚಣ ಮಾತ್ರ ಇರಲು ಬಿಡದೊಯ್ಯವೆ | || 1 ||

ಇಷ್ಟಾನಿಷ್ಟಗಳ ಗಣನೆಗೆ ತಾರದೆ ಎಲ್ಲಾ |

ಸಂಚಿತ ಕರ್ಮ ಫಲವೆಂದುಣಿಸುವೆ ||

ಸಮದರ್ಶಿ ಎನಿಸುವ ನಿನಗಾಧೀನ ಸರ್ವ |

ಶ್ರೀಕೃಷ್ಣವಿಟ್ಠಲನೇ ಗತಿ ಎನ್ನುವರಾಧೀನ ನೀನು ಸದಾ | || 2 ||

ಎಎಎ

366. ಚಿತ್ತಜನಯ್ಯಾ, ಚಿತ್ತವನಿಲ್ಲಸೋ ಚಿನ್ಮಯನಲಿ ಚಿತ್ತವನಿಲಿಸೋ | || ||

ಸುತ್ತಮುತ್ತ ತುಂಬಿದೆ ಗಾಡಾಂಧಕಾರ |

ಎತ್ತಲೋ ಓಡಾಡಿದೆ ದಾರಿ ತಿಳಿಯದೇ ||

ಶತ್ರುಗಳೇ ಒಳ ಹೊರಗೆ ಮುತ್ತಿರುವಾಗ |

ಹತಾಶಳಾಗಿ ನಿನ್ನೇ ಮೊರೆ ಹೊಕ್ಕಿರುವೆ-ದಯಮಾಡು | || 1 ||

ವೇದಶಾಸ್ತ್ರ ಓದಿ ತಿಳಿಯದೆ |

ವಾದ ಮಾಡಿ ನಾನೇ ಸರಿಯೆಂದೇ ||

ವಿದ್ಯೆಯ ಮರ್ಮವನರಿಯದೆ |

ಬಿದ್ದಿರುವೆ ಸಂಸಾರಕೂಪದೊಳಗೆ-ಕೃಪೆತೋರು | || 2 ||

ಸರಸಿಜನಾಭನೇ ನೀನೆನಗಾಸರೆ |

ಕರುಣದಿ ಕಡೆಗಾಣಿಸದೆ ಎನ್ನನು ||

ಭರದಿಂದ ಎತ್ತಿ ನೀನೇ ಪಾರುಗಾಣಿಸು |

ಪರತರನೆನಿಸಿದ ಶ್ರೀಕೃಷ್ಣವಿಟ್ಠಲನೇ-ದೇವಾಧಿದೇವ | || 3 ||

ಎಎಎ

367. ಸಾಧನೇ, ಜಪ, ತಪ ಭಗವದ ಪ್ರಸಾದ ಸದಾ

ಸಾಗಿಸು ಜೀವನ ಪೂರ್ತಿ ದೇವನ ನಂಬಿ |

ಧರಿಸು ಹೃದಯದಿ ಅನುಗಾಲ ||

ನೆನೆದು ಹಗಲಿರುಳು ಎಡೆಬಿಡದೆ |

ಜನ್ಮ ಜನ್ಮಕ್ಕೂ ಅವನೇ ಸಂಗಾತಿ ||

ಪರಿತಪಿಸುವನು ನಮಗಾಗಿ |

ತನ್ಮಯತೆಯಿಂದ ಚಿನ್ಮಯನ ||

ಪರಿಪರಿಯಾಗಿ ಪೂಜಿಸಿ |

ಭಕ್ತಿಭಾವದಿ ಸಮರ್ಪಿಸಿಕೋ ||

ಗತಿನೀನೇ ಎಂದಾರ್ತದಲಿ ಕರೆಯೇ |

ವಲಿದು ಬರುವ ತವಕದಿ ತಡಮಾಡದೆ ||

ದಣಿದಿರುವೆ ಜೀವನ ಚಕ್ರದಿ ಸಿಕ್ಕು |

ಪ್ರಣವ ಮಂತ್ರ ಜಪಿತ ಮಾರುತಿಯೇ ||

ಸಾನುರಾಗದಿ ನಿನ್ನೆ ನಂಬಿರುವೆ |

ದಯೆ ತೋರಿ ಶ್ರೀಕೃಷ್ಣವಿಟ್ಠಲನ ||

ಸಮೀಪದಲ್ಲಿಡು ನಿನ್ನ ಪಾದದ |

ದಾಸ ನಾನೆಂದು ಎನ್ನ ಸ್ವೀಕರಿಸು ಬಿಡದೆ ||

ಎಎಎ

368. ಚಿಕ್ಕವರಿದ್ದಾಗ ತಾಯಿಯ ಆಶ್ರಯ |

ಸ್ಥಾನಮಾನಗಳಿಸಲು ತಂದೆಯ ಆಶ್ರಯ ||

ಯೌವನದಲಿ ಮಡದಿಯ ಆಶ್ರಯ |

ಮುದಿತನದಲಿ ಮಕ್ಕಳ ಆಶ್ರಯ ||

ಹುಲುಮಾನವರನ್ನೇ ಹೂಗಳುವ ಜಿಹ್ವೆಗೆ |

ಅನಾದಿ ಕಾಲದಿಂ ಆಶ್ರಯಿಸಿರುವಾಗ ||

ಕರೆದು ಪೇಳಿದರೂ ಒಪ್ಪಲಾರದೆ ನಿತ್ಯ |

ನರಕವೆಂಬ ಕೂಪದಲ್ಲಿ ಹೂರಳಾಡುವರಲ್ಲಾ ||

ಶ್ರೀಕೃಷ್ಣವಿಟ್ಠಲನ ನೆನೆದುಪಾಡಲು |

ಮನಬಾರದೇ ಹೀನಾಯರಾಗಿರುವರಲ್ಲಾ ||

ಎಎಎ

369. ತಾಯಿ, ತಂದೆ ಬಂಧು ಬಳಗ ರಕ್ಷಿಪುದು ಕೆಲವರಿಗೆ |

ಧನಧನಕ, ಮನೆಯೇ ಸರ್ವಸ್ವ ಜೀವನದಲಿ ಹಲವರಿಗೆ ||

ಇಚ್ಛಿತ ಮಡದಿ, ಮಕ್ಕಳು ಇರಲು ಜೀವನ ಸುಖವೆನಿಪುದು |

ಸುಗ್ರಾಸ ಭೋಜನದಿ ಎಲ್ಲಾದು: ಮರೆವರು ಬಹುಜನ ||

ಕಾಮಕೇಳಿಯಲಿ ನಿಜವಾದ ಸುಖವ ಕಾಣುವರು |

ವಾಂಛಿತ ಜೀವನ ಸುಖದ ಸುಪ್ಪತ್ತಿಗೆ ಇಷ್ಟೇ ಜೀವನ ||

ವೆನ್ನುವ ಮಂದಬುದ್ಧಿ ಜನ ನಿಜ ಮರ್ಮ ತಿಳಿಯದೇ |

ಸಂಸಾರದಲಿ ತೂಳಲಾಡಿ ಹೂರಳಾಡುವರು ಪದೆಪದೇ ||

ಶ್ರೀಕೃಷ್ಣವಿಟ್ಠಲನ ನಾಮಸ್ಮರಣೆ ಒಂದೇ ಪಾರಮಾರ್ಥಕ್ಕೆ |

ಸರಳ ಸೋಪಾನವೆಂದರಿಯದೆ ಮೋಸ ಹೋಗುವರಲ್ಲಾ ||

ಎಎಎ

370. ಬಹುಜನ್ಮದ ಸಂಚಿತಪಾಪ ಪುನ: ಪುನಃ ವಿನಾಶವಾಗಲಿ |

ಪಾಪಾತ್ಮಾ ಮಾಡಿದ, ಮಾಡುವ ಪಾಪಕರ್ಮನಾಶವಾಗಲಿ ನಿನ್ನನುಗ್ರಹದಿ ||

ಅನ್ಯನಾನಲ್ಲಾ ನಿನ್ನನೇ ಶರಣು ಹೂಕ್ಕಿರುವೆ ಕರುಣಿಯಿಂದ ರಕ್ಷಿಸೆನ್ನನವರಿತ |

ಜಪತಪ ಧ್ಯಾನಾದಿಗಳಲ್ಲಿ ನಿನ್ನ ನಾಮೋಚ್ಚಾರವೊಂದೇ ಗತಿ ||

ಎನ್ನದೋಷ ಪರಿಹರಿಸಿ ನಿನ್ನ ಚರಣದಲ್ಲಿರಿಸಿಕೋ |

ಎನ್ನದೇನೂ ಇಲ್ಲಾ ನೀ ಮಾಡಿಸಿದ ಕರ್ಮವೆಲ್ಲಾ ನಿನ್ನ ಪೂಜೆಯಾಗಲಿ ||

ಪೂಜಿಸುವ ಭಾಗ್ಯ ಎನಗಿರಲಿ ಅದರ ಫಲ ಎನ್ನ ಸಹಿತ ನಿನಗೇ ಅರ್ಪಿತ |

ಶ್ರೀಕೃಷ್ಣವಿಟ್ಠಲನ ಸಂತೃಪ್ತಿ ಪಡಿಸುವ ಭಾಗ್ಯ ಎನದಾಗಲಿ ||

ಎಎಎ

371. ಸಂಸಾರದಿ ಬರಲು ಸದಾ ನೆನೆದರೆ ಇಲ್ಲಕಷ್ಟ |

ಕಂಸಾರಿ ಸ್ಮರಣೇಲಿ ನಿಜಪೂರ್ಣಲಾಭ ನಿತ್ಯಸಂತುಷ್ಟ ||

ವಾಸಿತ ಹೃದ್ಗುಹನ ಗುರುತಿಸದಿರೆ ಜನ್ಮ ಪೂರ್ಣನಷ್ಟ |

ದಾಸನಾಗಿ ಸೇವಿಸೇ ಭಕ್ತವತ್ಸಲ ತಾನಾಗುವ ಹೃಷ್ಟ ||

ಆಶಾಪಾಶ ಕ್ಲೇಶ ಸಂಹರಿಸಿ ನೀಡುವ ದಿವ್ಯದೃಷ್ಟಿ |

ಅಷ್ಟಕರ್ತೃ ಶ್ರೀಕೃಷ್ಣವಿಟ್ಠಲನ ಕೊಂಡಾಡೆ ಒಲಿವ ವಿಶಿಷ್ಠ ||

ಎಎಎ

372. ಪರಮಾತ್ಮ ದಯದಿ ಇತ್ತ ನರಜನ್ಮ |

ವ್ಯರ್ಥವಾಗಿಸದೇ ಸಾರ್ಥಕವಾಗಿಸಿರೋ || ||

ತಿರುಗಿ ಎಂಬತ್ನಾಲ್ಕು ಲಕ್ಷಯೋನಿ ನಂತರಬಂದ ಜನ್ಮ |

ತಿರುಗಿಬಾರದು ಮತ್ತೀ ಜನ್ಮ ಯೋಚಿಸಿ ನೋಡಿರೋ ||

ಕರ್ಮೇಂದ್ರಿಯ ಜ್ಞಾನೇಂದ್ರಿಯಗಳೈದೈದು ತಿದ್ದಿ ತಿದ್ದಿ |

ಸರಿಯಾದ ಮಾರ್ಗದಿ ಬುದ್ಧಿ ಮನ ಅನುಸರಿಸಿರಿ || || 1 ||

ಹೃದಯದಿ ಅಷ್ಟದಳದಲ್ಲಿಪ್ಪವನ ಬೇಡಿರೋ |

ಬರಿದೇ ವಿಷಯ ಸುಖಲೋಲುಪದಿ ಹಾಳುಮಾಡದೆ ||

ಸರ್ವಪ್ರಯತ್ನದಿ ಸಕಲೇಂದ್ರಿಯವ ಸನ್ಮಾರ್ಗದಿ ನಡೆಸಿ |

ಪ್ರಾರಬ್ಧ ಅನುಭವಿಸುತ ಭಕ್ತಿಯೆಡೆ ಮನಹರಿಸಿ || || 2 ||

ಜಾರಿಹೋಗುವ ಸಮಯದಿ ಸಾಧಿಸಿ ಗುರು-ಹರಿಯೊಲುಮೆ |

ದುರ್ಲಭತರ ಮಾನವ ಜನುಮದ ಗುರಿ ತಿಳಿಯಿರೋ ||

ನಿದ್ರೆ, ನೀರಡಿಕೆ,ಹಸಿವು,ಮೈಥುನ ಪ್ರತಿ ಜನುಮದಿ ಸಿಗುವುದು |

ದಾರಿ ಇರದು ಸರಿಯಾದ ಜ್ಞಾನ-ವಿಜ್ಞಾನ ಪಡೆಯಲು || || 3 ||

ಸರಿದುಜನ್ಮ ವೇಳೆ ಸವೆಯುವ ಮುನ್ನ ಪ್ರಯತ್ನದಿ |

ಸ್ಮರಿಸಿ ಸುಗುಣನ ಸದಾ ಸದಾಚಾರದಿ ಬೇಡಿ ಅನುಗ್ರಹ ||

ಸುಪ್ರಯತ್ನದಿ ನವವಿಧಭಕ್ತಿ ವಿಧವಿಧದಿಂ ಮಾಡಿ |

ಮರುತಾಂತರ್ಗತ ಶ್ರೀಕೃಷ್ಣವಿಟ್ಠಲಗರ್ಪಿಸಿ ಧನ್ಯರಾಗಿರೋ || || 4 ||

ಎಎಎ

373. ಉತ್ತಮ ಲೋಕ ಪ್ರಾಪ್ತಿಗೆ ಉತ್ಕøಷ್ಟ ದಾನ ಮಾಡು |

ಉತ್ತಮೋತ್ತಮಾಂಗಾಯ ಒಲಿದು ಸಂಪ್ರೀತನಾಗುವ || ||

ಸತ್ಪಾತ್ರರಿಗೆ ಕೊಡುವ ಪ್ರತೀ ದಾನವು |

ಸತ್ಫಲ ರೂಪದಿ ಕುಲವುದ್ಧರಿಸುವುದು ||

ಅತೀ ಪ್ರಿಯ ವಸ್ತುವನ್ನೇ ದಾನವಾಗಿಸು |

ವ್ಯರ್ಥವಾದ ವಸ್ತುದಾನದಿ ಕೇಡನ್ನೇ ಉಣ್ಣುವಿ || 1 ||

ಕಾಟಾಚಾರಕ್ಕಾಗಿ, ಬೈದು ಕೊಡಬೇಡಾ |

ಇಟ್ಟು ಒಳ್ಳೆಯ ಮನ, ಸದ್ಭಾವನೆಯಲಿ ಕೊಡು ||

ಕೆಟ್ಟದ್ದುದ ಕೊಟ್ಟು ನೀ ಕೆಡಬೇಡ |

ಕೊಟ್ಟ ಮೇಲೆ ಅದಕ್ಕಾಗಿ ಪರಿತಪಿಸಬೇಡ || 2 ||

ಬೇರೆಯವರಿಗೆ ಕೊಡಲೆಂದೇ ಬಂದ ವಿದ್ಯೆ, ಧನ, ಸಂತೋಷ |

ವರವಾಗಿಹುದು ನಿನಗೆ ಪೂರ್ವಜನ್ಮಕೃತ ಪುಣ್ಯವು ||

ಹೆರವರಿಗೆ ಕೊಡದಿದ್ದರೆ ಧರ್ಮದೃಷ್ಟಿಯಲಿ ಕಳ್ಳನಾಗುವಿ |

ಬರುವ ಜನ್ಮಾಂತರಗಳಲಿ ತಪ್ಪುಕಾಣಿಕೆ ಕೊಡಲೇಬೇಕು || 3 ||

ಕೊಟ್ಟರೊಮ್ಮೆ ದಾನ ಋಣ ಮುಗಿದಂತಲ್ಲ |

ಹುಟ್ಟಿನಿಂದ ಸಾಯುವರೆಗೂ ಕೊಡುತ್ತಲೇ ಇರು ||

ಮಾತೃ, ಗುರು, ಸಮಾಜ ಋಣ ತೀರದು ಎಂದಿಗೂ |

ಶ್ರೀಕೃಷ್ಣವಿಟ್ಠಲ ಇತ್ತಿದ್ದು ಅವನಿಗೇ ಕೊಟ್ಟು ವರವ ಪಡಿ || 4 ||

ಎಎಎ

374. ಶುದ್ಧ ಬ್ರಹ್ಮನ ಪಡೆಯಲು ಶುದ್ಧಾತ್ಮವಿರಬೇಕು |

ಶುದ್ಧ ಬುದ್ಧಿಯಲಿ ಶುದ್ಧ ಮನವಿರಬೇಕು ||

ಶುದ್ಧ ಆಹಾರವಲ್ಲದೆ ಶುದ್ಧ ವಾಣಿ ಇರಬೇಕು |

ಶುದ್ಧ ವ್ಯವಹಾರದಿ ಶುದ್ಧ ದೃಷ್ಟಿ ಇರಬೇಕು ||

ಶುದ್ಧ ನಡೆ-ನುಡಿ ಸದಾ ಒಂದಾಗಿರಬೇಕು |

ಶುದ್ಧ ಧರ್ಮದಿ ಶುದ್ಧ ಕಾಯವಿರಬೇಕು ||

ಶುದ್ಧ ಕಾಯಕದಿ ಶುದ್ಧಾತ್ಮನರ್ಚಿಸಬೇಕು ಶುದ್ಧ ಹೃದಯದಲ್ಲಿಪ್ಪ ವಿಶುದ್ಧ ಶ್ರೀಕೃಷ್ಣವಿಟ್ಠಲ ಮಿಂಚಿನಂತೆ ಹೊಳೆವ ||

ಎಎಎ

375. ಎಲ್ಲ ಬಲ್ಲಿದರೂ ಮನ ನಿನ್ನಲಿ ನಿಲ್ಲದು |

ಬಲ್ಲಿದವರೊಡನಿದ್ದರೂ ತ್ರಿಕರಣ ಶುದ್ಧಿಯಾಗದು ||

ವೇಳೆ ವೇಳೆಗೆ ಜಾರಿದ ಮನ ಎಳೆತಂದರೂ ನಿಲ್ಲದು |

ಕಳೆದರೂ ಆಯುಷ್ಯ ನಾಯಿಬಾಲ ಡೊಂಕೆಂದಂತೆ ||

ಒಳಗೆ ಬದಲಾಗುವ ಇಚ್ಛೆ ಇದ್ದರೂ ಕರ್ಮಪ್ರಬಲ |

ಕಲ್ಲಮೇಲೆ ಮಳೆಗೆರೆದಂತೆ ಬರೀ ವ್ಯರ್ಥಯತ್ನ ||

ಗೋಳಾಡಿದರೂ ಪ್ರಾರಬ್ಧವೆಂದೂ ಮೀರಲಾಗರು |

ಒಲುಮೆಯಿಂದ ಕನಿಕರಿಸಿ ಪಾರುಗೈಸು ||

ಸಲಹುವರು ನಿನ್ನಹೊರತು ಬೇರ್ಯಾರು ಕಾಣೆ |

ಕೇಳಿ ಕೊಳ್ಳುವೆ ದೀನ ಬಂಧು ಶ್ರೀಕೃಷ್ಣವಿಟ್ಠಲನೇ ||

ಹೇಳು ಒಮ್ಮೆ ಎನ್ನನು ದಯದಿ ನಿನ್ನವಳೆಂದು ||

ಎಎಎ

376. ಜಿಹ್ವೆ ನಿನ್ನ ಮಹಿಮೆ ಪೊಗಳಲೆಂತು |

ಆಹಾ! ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ||

ಗುಹೆಯೊಳಿದ್ದಾಗ ನಿನ್ನ ಬಣ್ಣ ತಿಳಿಯದು |

ಮಹಾ ಮಹಾಜನರೂ ಸೋತು ಶರಣಾಗುವರು ||

ಪಹರೆ ಮಾಡುವ ಹಲ್ಲುಗಳದಿ ಸಿಕ್ಕು ನೋಯುವುದು |

ಮೋಹ ಅರಳುವುದು ಸವಿ ಸವಿ ಮಾತಿನಲಿ ||

ಕುಹಕ ಕಟುಮಾತಲಿ ಸಂಬಂಧದ ಅಳಿವು-ಉಳಿವು |

ದೇಹ ಅನುಭವಿಸುವುದು ಶಿಕ್ಷೆ ಜಿಹ್ವೆ ತಪ್ಪಿಗೆ ||

ಅಹಿತ ಆಹಾರ ನಾಲಿಗೆಗೆ ಬಹು ರುಚಿಯಾಗುವುದು |

ಅಹಾರ ವೈವಿಧ್ಯ ಬಯಸುವುದಷ್ಟೇ ಅಲ್ಲದೆ ||

ಸಹಜವೆಂಬಂತೆ ಪರರ ದೂಷಿಸಲೂ ಸದಾ ತಯಾರು |

ದಹಿಸಲೆನ್ನ ಪಾಪ ನಾಲಿಗೆಯಲ್ಲಿ ನಲಿದಾಡುತ ||

ದಹರಾಕಾಶ ಸ್ಥಿತ ಶ್ರೀಕೃಷ್ಣವಿಟ್ಠಲನ ನಾಮ ಜಪದಿ ||

ಎಎಎ

377. ತಿರುಗುತ್ತಲೇ ಇರಬೇಕು ಸದಾ ಸಂಸಾರ ಚಕ್ರದಿ |

ಪೂರ್ವ ನಿರ್ಧಾರಿತ ಜೀವನ-ಮರಣಗಳು ತಪ್ಪಿದ್ದಲ್ಲ || ಯಾರಿಗೂ || ||

ಗರ್ಭಾವಾಸ ದುಃಖದಿ ಪೂರ್ವಜನ್ಮದ ಸ್ಮøತಿಯಲಿ |

ಪರಿತಪಿಸಿ ಪರಮಾತ್ಮನ ಸ್ತುತಿಸಿ ಶರಣು ಹೋದಾಗ ||

ಹೊರ ತಳ್ಳುವುದು ಸೂತಿಕಾವಾಯು ಪ್ರೇರಣೆಯಲಿ |

ಮರೆತು ದುಃಖ, ಮೋಹಕ ಸಂಸಾರದಿ ಸಿಲುಕುವುದು|| ಜೀವ || 1 ||

ಬರುವ ಅಷ್ಟಮದದಿ ಅನಂತ ಅಪಚಾರಗೈದು |

ವೈರಾಗ್ಯ, ಭಕ್ತಿ, ಜ್ಞಾನಗಳಿಸದೇ ವ್ಯರ್ಥವಾಗಿಸಿ ಬದುಕು ||

ಇರುವಷ್ಟು ದಿನ ಸ್ವಾರ್ಥದಿ, ಅಹಂ-ಮಮಕಾರ ಗಳಿಸಿ |

ಪರಿಪರಿ ಜನುಮಕೂ ಸಾಕಾಗುವಷ್ಟು ಗಂಟು ಕಟ್ಟುವುದು|| ಕರ್ಮದ || 2 ||

ಸರ್ಪ, ವ್ಯಾಧಿ, ಕೊಲೆ, ಬೆಂಕಿ, ಅಪಘಾತ, ಆಕಸ್ಮಿಕ, ಆತ್ಮಹತ್ಯೆ |

ಕಾರಣವೇನೇ ಇರಲಿ ಒಂದಿನ ಎಲ್ಲಾ ತ್ಯಜಿಸಿ ಹೋಗೋದು ಸತ್ಯ ||

ಸುರ-ನರಾದಿಗಳಿಗೂ ದೇಹಪಾತ ಧೃಡ ನಿಶ್ಚಿತ |

ನಿರ್ಧಾರವಿದು ಜನಿತವಸ್ತು ಅಳಿಯಲೇಬೇಕು|| ತಪ್ಪದೇ || 3 ||

ಮರಣ ಯಾರನ್ನೂ ಹೇಳಿ ಕೇಳಿ ಬರುವುದಿಲ್ಲ |

ನರಕ ಯಾತನೆ ಯಾಗುವುದು ಪ್ರಾಣ ಬಿಡುವಾಗ ||

ಮರಳಿ ಬರಲೇಬೇಕು ಲಿಂಗದೇಹ ಇರುವತನಕ |

ಪ್ರಾರಬ್ಧ ತೀರಿದ ನಂತರ ತಿರುಗಿ ಬಾರದ ಸ್ಥಳಕೆ ಪೋಪುದು|| ಮುಕ್ತಿಗೆ ||4||

ಮರಣ ದುಃಖ ಶಮನವಾಹುದು ಸರ್ವತ್ರ ಸರ್ವೇಶ |

ಸರ್ವವ್ಯಾಪ್ತನ ಕಂಡು ಸ್ತುತಿಸಿ ಧ್ಯಾನಿಸಿದಾಗ ಮಾತ್ರ ||

ಸರ್ವಾಯುಷ್ಯಕೃತ ಸಾರ ಮುಂದಿನ ಜನುಮದ ಭೂಮಿಕೆ |

ಅರಿವು ತಿಳಿವುದರಲ್ಲೇ ಮರಣ ಸೆಳೆದೊಯ್ವುದು|| ನಿರ್ದಯದಿ | || 5 ||

ಮರಣಾನಂತರ ಜೀವನ ಕಂಡವರ್ಯಾರೂ ಇಲ್ಲ ಇಲ್ಲಿ |

ಕುರುಡ ಆನೆ ವರ್ಣಿಸಿದಂತೆ ಊಹೆಮಾಡಿ ಗಾಬರಿಯಾಗದೇ ||

ಶಾಸ್ತ್ರದಿ ಪೇಳಿದಂತೆ ಗುರುವಿನಿಂದ ಅರಿತು ಎದುರಿಸಿ |

ಹೊರಡುವ ಮೊದಲೇ ಸರ್ವ ರೀತಿಯಲಿ ತಯಾರಿರಬೇಕು|| ಧೈಂರ್iದಿ ||6||

ಮರಣ-ಹರಿದ ವಸ್ತ್ರಕ್ಕೆ ಬದಲು ಹೊಸವಸ್ತ್ರ ತೊಟ್ಟಂತೆ |

ಇರುವತನಕ ಸತ್ಕರ್ಮ, ದಾನ, ಸತ್ಸಂಗದಿ ಕಾಲ ಕಳೆದು ||

ಸುಧೃತಿಯಲಿ ಜೀವಾತ್ಮ, ದೇಹಾತ್ಮ, ವಿಶ್ವಾತ್ಮರು ಒಂದೇ ಎಂದು ಧೇನಿಸಿ |

ಶ್ರೀಕೃಷ್ಣವಿಟ್ಠಲ ಕೈಬಿಡದೆ ಸಕಲಾವಸ್ಥೆಯಲಿ ಜೊತೆಯಿರುವ|| ಎಂದಿಗೂ ||7||

ಎಎಎ

378. ಸ್ವಚ್ಛ ಮೂರುತಿಯ ಪುಚ್ಫನಾದವಗೆ |

ಉಚ್ಛ್ರಾಯ ಹೇಗೆ ಒದಗುವುದೋ || || ||

ಇಚ್ಛಾ ಮಾತ್ರ ಪ್ರಭೋಸೃಷ್ಟಿಯಾದವನ |

ಇಚ್ಛೆಯೇ ಎನ್ನ ಇಚ್ಛೆಯಾಗದಿರಲು | || ಅಪ ||

ಕಂಚಿಕಾಶಿ ಬದರಿ ತಿರಗಿದರೇನು ಫಲ |

ಮಿಂಚುವಂತೆ ತನು ನದಿಯೊಳಗದ್ದಿದರೇನು ಫಲ ||

ಉಚ್ಚಸೇವೆ ಮಾಳ್ಪನ ಮನದಿ ಭಕ್ತಿಇಲ್ಲದಿರೆ |

ಸಚ್ಚಿದಾನಂದಾತ್ಮನು ಮೆಚ್ಚುವನೇ! ಭಲಾ! || || 1 ||

ಕೊಚ್ಚೆ ಹುಳುವಿನಂದದಿ ಬಿದ್ದಲ್ಲೇ ಸುಖಿಸುತಿರೆ |

ಹೆಚ್ಚಿನ ಅಘಗಳ ತೊಳೆಯಲು ಸಾಧನ ಮಾಡದಿರೆ ||

ಅಚ್ಯುತನ ದಯದಿ ದೊರೆತ ಮಾನವ ಜನ್ಮ ಹಾಳುಮಾಡಿ |

ಅಚಿಂತ್ಯಾದ್ಭುತ ಶ್ರೀಕೃಷ್ಣವಿಟ್ಠಲನ ನಿಶ್ಚಿತವಾಗಿ ತಿಳಿಯದಿರೆ | || 2 ||

ಎಎಎ

379. ಎಲ್ಲಿಯವರೆಗೆ ದೇಹ, ಎಲ್ಲಿವರೆಗೆ ದೇಹ |

ಕಾಲಕಾಲಕೆ ಅಳಿವುದು ದೇಹ ಉಳಿಯದು ಕಡೆತನಕ | || ||

ಬಾಲ್ಯ, ಯೌವನ ದುರ್ಮದದಿ ಸಮಯ ಗೊತ್ತಾಗದೆ ಸರಿಯುವುದು |

ಕಳೆವುದು ಐಹಿಕ ಸುಖಭೋಗ ಲೋಲುಪದಿ ನಿಶಿ-ಹಗಲೆನ್ನದೆ ||

ಬಾಳಿನ ಒಳಗುಟ್ಟು ಅರಿಯದೆ ಜೀವನವೇ ಸವೆಯುವುದು |

ಸುಳ್ಳು, ಮೋಸ, ದ್ವೇಷ, ಲೋಭ ಬಿಟ್ಟುಬೇರೇನೂ ಗಳಿಸೆವು | || 1 ||

ಒಳಗಿರುವುದು ಬೇರೆ ಹೊರಗಿನ ಮುಖವಾಡ ಬೇರೆ |

ಒಳಗಿನ ಕೊಳೆಯ ಮುಚ್ಚಿಟ್ಟು ಅತೀ ಶುಭ್ರರಂತೆ ತೋರ್ಪೆವು ||

ಒಳಗೊಳಗೆ ಅಸಹನೆ, ಮತ್ಸರದಿ ಬೆಂದು ಹಣ್ಣಾಗುವೆವು |

ಬೆಳ್ಳಗಿನ ವಸ್ತ್ರ ಉಟ್ಟವರೆಲ್ಲಾ ಒಳ್ಳೆಯವರೇ ಎಂದಿಲ್ಲ | || 2 ||

ಮಲಿನ ಮನ ಯೋಚಿಸುವುದೊಂದು ಮಾಡುವುದಿನ್ನೊಂದು |

ಹೊಲಸೆಂದು ತಿಳಿದಿದ್ದರೂ ಬಯಸುವುದು ಸುಖ ಅದರಲ್ಲೇ ||

ಬೆಲೆಯುಳ್ಳ ಸಲಹೆ ಒಪ್ಪಿ ಎಂದೂ ತಿದ್ದಿಕೊಳ್ಳದು

ಗೋಳಿನ ಗೋಜಲು ಬಗೆಹರಿಯದು ಕೊನೆಯತನಕ | || 3 ||

ಬಲು ಉಪಯೋಗಿ ದೇಹ ಸುದೈವದಿ ಲಭ್ಯ |

ಸಲಕರೆಣೆ ಇದು ಸಾಧನ ಮಾರ್ಗದಿ ಮುನ್ನಡೆಯಲು ||

ಅಳಿವುದೆಂದೋ ತಿಳಿಯದು ಮುನ್ನ ಸಾರ್ಥಕ ಮಾಡಿಕೊಳ್ಳಬೇಕು |

ಎಲ್ಲ ಬಲ್ಲ ಶ್ರೀಕೃಷ್ಣವಿಟ್ಠಲಗೆ ಸಮರ್ಪಿಸಿ ಮುಕ್ತರಾಗಬೇಕು | || 4 ||

ಎಎಎ

380. ಬದುಕೊಂದು ಕಲೆ, ಬದುಕಿರಿ-ಬದುಕಲು ಬಿಡಿ |

ವೈದಿಕ ಶಾಸ್ತ್ರ ವಿದ್ಯೆಯೇ ಅಧ್ಯಾತ್ಮವಿದ್ಯೆ ಬಿಡದೆ ಓದಿರಿ ||

ಹೃದಯಪೂರ್ವಕ ಆದಮ್ಯ ಇಚ್ಛೆಯಿಂದ ಪಡೆಯಿರಿ |

ಅಧ್ಯಯ-ಅಧ್ಯಾಪನದಿ ಕಾಲ ಸವೆಸಿ ಉದ್ಧಾರವಾಗಿರಿ ||

ಸದ್ವಿದ್ಯೆ ಇದು ಎಂದೂ ನಶಿಸದ ದೊಡ್ಡ ನಿಧಿ |

ವಿದ್ವಾಂಸ ಸರ್ವತ್ರ ಸರ್ವದಾ ಪೂಜ್ಯನೆಂಬುದು ದಿಟ ||

ಆಧ್ಯಾತ್ಮ ವಿದ್ಯೆಯೇ ಆತ್ಮೋದ್ಧಾರಕ ಸರ್ವಪ್ರದಾಯಕ |

ಆದಿಪುರುಷ ಶ್ರೀಕೃಷ್ಣವಿಟ್ಠಲನ ಪಾದದಾಣಿಗೂ ಇದು ಸತ್ಯ ||

ಎಎಎ

381. ಸಕಲವೂ ಪ್ರಭು ಶ್ರೀಹರಿಯ ಇಚ್ಛೆಯಂತೆ |

ಸಂಕಲ್ಪ-ವಿಕಲ್ಪ, ಮಾಡುವ-ಮಾಡದಿರುವುದೂ | || 1 ||

ಭಂಗ-ಅಭಂಗ, ಬಿಗುಮಾನ ಅಹಂಗಳು |

ಆಗು-ಹೋಗುಗಳು, ಜಾಗು-ನಿದ್ರೆಯು ಸಹ | || 2||

ಕ್ರೌರ್ಯ-ದಯಾಮನ, ಪರೋಪಕಾರ ಬುದ್ಧಿ |

ಅರಿವು-ಮರೆವು, ಕಾರ್ಯ ಅಕಾರ್ಯಗಳೆಲ್ಲಾ | || 3 ||

ಆಡುವ ಮಾತುಗಳು ವರ್ಣಗಳಲ್ಲಿರುವವನೇ |

ನೋಡುವ, ಉಡುವುದರಲ್ಲಿಯೂ ಇರುವ | || 4 ||

ಮನ, ಬುದ್ಧಿ, ಇಂದ್ರಿಯಗಳ ಪ್ರೇರಕನಿವ |

ಕಾಣುವ-ಕಾಣದ ಸರ್ವದರಲ್ಲಿರುವವ | || 5 ||

ಹಸನಾದ ಬಾಳು, ಅಡ್ಡಿ ಆತಂಕಗಳೆಲ್ಲಾ |

ಸಾಸಿರನಾಮದ ಶ್ರೀಕೃಷ್ಣವಿಟ್ಠಲನಿಂದಲೇ ನಡೆವುದು | || 6 ||

ಎಎಎ

382. ಗುಟ್ಟೊಂದು ಹೇಳುವೆ ಕೇಳು ಚಿನ್ನ |

ಒಟ್ಟಿನಲಿ ಶ್ರೀಹರಿಯ ಬಿಡದೆ ಭಜಿಸು ||

ಪ್ರಕೃತಿ ವೈವಿಧ್ಯ,ವಿರುದ್ಧ,ವ್ಶೆಚಿತ್ರ್ಯವೆಲ್ಲಾ ವಿಶೇಷನ |

ಸುಕೃತಿಯಿಂದಾದ ಸೃಷ್ಟಿಯೆಂದು ತಿಳಿದು ಭಜಿಸು ||

ಪರರ ಆಪೇಕ್ಷಿಸದೆ-ಆಕ್ಷೇಪಿಸದೆ ಸಹನೆಯಿಂದಿರು |

ಮರೆಯದೆ ಉಪಕರಿಸು ಸರ್ವರಿಗೂ ಭೇದವೆಣಿಸದೆ ||

ಸರ್ವತ್ರ ಸರ್ವರ ಒಳ-ಹೊರಗೂ ಪರಮಾತ್ಮನ ಕಾಣು |

ಸರ್ವ ಕಾರ್ಯಕರಣ ಕರ್ತನವನೊಬ್ಬನೇ ಕಾಣು ||

ಏನಾದರಾಗಲಿ ಸದ್ಭಾವದಿ ವರ್ತಿಸು ಪರರೊಡನೆ |

ಮನದ ಕ್ಲೇಷ, ಆಶಾ-ಪಾಶ ತೊಳೆದು ಸುಖದಿ ಜೀವಿಸು ||

ಮನದಂತಾದರೆ ಸುಖ, ಆಗದಿದ್ದರೆ ದುಃಖ ತಾಳದಿರು |

ಏನಾದ್ದದ್ದಾಗಲಿ ಎಲ್ಲ ಒಳಿತೆಂದೇ ತಿಳಿದಿರು ||

ನಡೆಯುವುದು ಸದಾ ಪರಮಾತ್ಮನ ಇಚ್ಛೆಯಂತೆ |

ಕೆಡಕು-ಒಳಿತು, ಆಗು-ಹೋಗುಗಳು ಯಾರ ವಶವೂ ಅಲ್ಲ ||

ಕಾಕು ಜನರ ಮಾತಿಗೆ ನೊಂದದೆ ಪ್ರಾರಬ್ಧವೆಂದು ತಿಳಿ |

ಸಕಲರ ತೃಪ್ತಿ ಪಡಿಸಲು ಆಗದು, ಮನಸಾಕ್ಷಿಯ ನಂಬು ||

ದ್ವೇಷ ಭಾವ ತನ್ನ ಸುಟ್ಟು ಪರರನೂ ಸುಡುವುದು |

ಈಶ ಜ್ಞಾನ ತನ್ನ ಬೆಳಗಿ ಪರರಿಗೂ ಜ್ಯೋತಿಯಾಗುವುದು ||

ದೈವದಿಂದೊಮ್ಮೆ ಸಿಗುವುದು ಮಾನವ ಜನುಮ |

ಜೀವೇಶನ ಜ್ಞಾನಗಳಿಸದೇ ವ್ಯರ್ಥವಾಗಿಸಬೇಡ ||

ನಾಮಸ್ಮರಣಿ-ಭಜನೆಯೇ ಪರಮ ಸುಖಕಾಣೋ |

ಸಮಯ ಸಮಯಕೆ ಬಿಡದೆ ಭಕ್ತವತ್ಸಲನ ನೆನೆಸು ||

ಗುಪ್ತನಾಗಿ ಜೀವಿಸಿ ಹಣ-ಖ್ಯಾತಿಯ ಹಿಂದೆ ಬೀಳದೆ |

ಒಪ್ಪವಾಗಿ ಅಪ್ಪ ಶ್ರೀಕೃಷ್ಣವಿಟ್ಠಲನ ನಂಬಿ ಬದುಕು ||

ಎಎಎ

383. ಸಾತ್ತ್ವಿಕರೆಂದರೆ ಯಾರು ಜಗದಿ | || ||

ಸತತ ಡಾಂಭಿಕರೇ ಕಾಣುವರಲ್ಲ-ಹೇಗೆ ತಿಳಿಯಲಿ | || ಅಪ ||

ಚಾಡಿ ಹೇಳುವರು, ಮಾಟ ಮಾಡಿಸುವರು |

ನಡೆ-ನುಡಿಲಿ ಮನ ನೋಯಿಸುವರು ||

ಒಡ ಹುಟ್ಟಿದವರನ್ನೇ ಕೊಲ್ಲಿಸುವರು |

ಮಡದಿ ಮಕ್ಕಳನ್ನೇ ಮಾರುವರಲ್ಲ | || 1 ||

ಕಷ್ಟದಿ ದೂರ ನಿಲ್ಲುವರು ಕಾಣದ ರೀತಿಲಿ |

ಎಷ್ಟು ಬೇಡಿದರೂ ಕನಿಕರಿಸರು ||

ಐಶ್ವರ್ಯ ಬಂದಾಗ ಮುಗಿ ಬೀಳುವರು |

ಒಟ್ಟಿನಲಿ ನಿಜರೂಪ ತಿಳಿಯದಲ್ಲ | || 2 ||

ಕಾಯಾ, ವಾಚಾ, ಮನಸಾ ವಂಚಿಸುವರಲ್ಲ |

ಭಯ ಇವರಿಗೆ ಇಲ್ಲವೇ ಇಲ್ಲ ||

ದಯಾ ಮಮತೆ ಒಂದಿನಿತೂ ಇಲ್ಲ |

ಆಯಾ ಕಾಲಕೆ ಬಣ್ಣ ಬದಲಾಯಿಸುವರಲ್ಲ | || 3 ||

ಪತಿತರೆಂದು ಪರರ ಜರೆಯುವರು |

ಸ್ವಂತ ತಮ್ಮನ್ನೇ ಅರಿಯದಂತಿಹರು ||

ಮತಿವಂತರು ಅತಿ ಕೆಲವರೇ ಕಾಣ್ವರು |

ಪ್ರತಿ ಜನುಮದ ಪತಿ ಶ್ರೀಕೃಷ್ಣವಿಟ್ಠಲನ ಭಜಿಪರು | || 4 ||

ಎಎಎ

384. ಅನುಭವದ ಅಡಿಗೆ ಮಾಡಿ ಬಡಿಸಣ್ಣ |

ಚೆನ್ನಾಗಿ ಕೇಳಿ ತಿಳಿದು ಸುರುಚಿಯಾಗಿ | || ||

ಮಾಡಲು ಸುಲಭವಿರಬೇಕು |

ನೋಡಲು ತಿನ್ನಬೇಕೆನಿಸಬೇಕು ||

ನೀಡಲು ಸರಳವಿರಬೇಕು |

ಬೇಡಿಕೊಳ್ಳುವಂತಿರಬೇಕು || ಅಂತಹ | || 1 ||

ಬಾಯಿಗೆ ಸವಿಯಿರಬೇಕು |

ಸುಯ್ ಎಂದು ಕೆಳಗಿಳಿಯಬೇಕು |

ನಯವಾಗಿ ಪಚನವಾಗಬೇಕು |

ಭಯವಿಲ್ಲದೆ ಹಿತವಾಗಿರಬೇಕು || ಅಂತಹ || 2 ||

ಸಕಲವು ಶುಚಿಯಾಗಿರಬೇಕು |

ಅಕಾಲಕೂ ಹಳಸದಂತಿರಬೇಕು||

ಮಕ್ಕಳಾದಿಯಾಗಿ ಸೇವಿಸುವಂತಿರಬೇಕು |

ಶ್ರೀಕೃಷ್ಣವಿಟ್ಠಲ ಮೆಚ್ಚುವಂತಿರಬೇಕು || ಅಂತಹ | || 3 ||

ಎಎಎ

385. ಇದು ಯಾರ ಕೃಪೆಯೋ, ಯಾವ ಜನ್ಮದ ಪುಣ್ಯವೋ|

ಪದಪುಂಜ, ಸುವಾಕ್ಯಗಳ ಸುರಿ ಮಳೆ ಹೇಗಾಯಿತೋ? | || 1 ||

ಸಾಧನೆಯ ಮಾರ್ಗದಿ ಪಾದ ಹೇಗೆ ಬೆಳೆಯಿತೋ ಅರಿಯದು|

ವಿಧಿಲಿಖಿತವಲ್ಲದೆ ಮತ್ತೇನು ಇರಲು ಸಾಧ್ಯ | || 2 ||

ತಕ್ಷಣಕೆ ಬರುವ ಯೋಚನೆ ಅಕ್ಷರ ರೂಪದಿ ಇಳಿದಿದೆ |

ಅಕ್ಷರ ಪ್ರತಿಪಾದ್ಯ ಅಕ್ಷರನಾಮಕ ಶ್ರೀಕೃಷ್ಣವಿಟ್ಠಲನ ಸೇವೆ ಮಾತ್ರ | || 3 ||

ಎಎಎ

386. ಹೋದದ್ದು ಹೋಯಿತು ಪರಿತಪಿಸದೆ, ಇದ್ದುದ್ದರ ಬಗ್ಗೆ ವಿಚಾರಿಸು|

ಬಂದಿದ್ದರ ಬಗ್ಗೆ ಸಂತೋಷಿಸು, ಬಾರದಿದ್ದರೆ ಹಿಂದೆ ಹೋಗಬೇಡಾ ||

ಮುಂದಿನದ್ದು ಯೋಚಿಸಿ ಬದುಕಿನಲಿ ಮುಂದೆ ನಡೆ |

ಮುದ್ದು ಶ್ರೀಕೃಷ್ಣವಿಟ್ಠಲನ ನಂಬಿ ನೆನೆದರೆ ಸದಾ ಕಾಪಾಡುವ ||

ಎಎಎ

387. ದೊಡ್ಡ ಕಡಲು ನೀನು, ಬಿಂದುವಿನ ಬಿಂದುನಾ |

ತಡಿಯಲಿ ನಿಂತು ನಿನ್ನಾಳರಿಯಬಲ್ಲನೆ? ||

ಒಡಲಲಿ ತ್ರಿಲೋಕವಿಟ್ಟವನೀನು |

ಒಡಲುಹೊಯ್ಯುವವ ನಾ, ನಿನ್ನೊಡಲ ತಿಳಿಯಬಲ್ಲನೆ? ||

ಸಿಡಿಲು-ಗುಡುಗು, ಮಿಂಚು-ಮಳೆ ನೀನು |

ಮಡಿಲ ಮರಿ ನಾ, ನಿನ್ನ ರೂಪ ಗುರುತಿಸಬಲ್ಲನೇ? ||

ಎಡಬಿಡದೆ ಸಕಲ ವಸ್ತುವಿನಂತೆ ಸಕಲದಲ್ಲಿರುವ ನೀನು |

ಒಂದೆಡೆ ಇರುವೆ ನಾ ನಿನ್ನ ಕಾಣಬಲ್ಲೆನೇ? ||

ಒಡನಾಡಿಯಾಗಿ ಸದಾ ಮೌನದಿಂದಿರುವ ನೀನು |

ಬಡಬಡ ಮಾತನಾಡುವ ನಾ ನಿನ್ನ ವರ್ಣಿಸಬಲ್ಲೆನೆ? ||

ಬಿಡದೆ, ಒಂದು, ದಶ, ಸಾವಿರಾರು ರೂಪು ತಳೆವ ನೀನು |

ಕೊಡಮಾಡಿದ ಒಂದೇ ದೇಹದಿ ನಾ ನಿನ್ನ ನೆನಪಿಡಬಲ್ಲೆನೇ? ||

ಅಡಿಯ ನಖದಿಂ ಸುರಗಂಗೆ ಹರಿಸಿದವ ನೀನು |

ಕಡೆಯತನಕ ನೀರಿನಿಂದ ಜೀವಿಸುವ ನಾ ನಿನ್ನ ನೆಲೆ ತಿಳಿಯಬಲ್ಲೆನೆ? ||

ತಡಮಾಡದೇ ಸುಜ್ಞಾನವಿತ್ತು ನಿನ್ನ ನೀನೇ ತಿಳಿಸು |

ಗಂಡರ ಗಂಡ ಉದ್ದಂಡ ಶ್ರೀಕೃಷ್ಣವಿಟ್ಠಲ ನಿನಗೇ ಶರಣೆಂಬೆ ||

ಎಎಎ

388. ಅಕ್ಷರಗಳು ಸ್ವಂತ ಆಸ್ತಿಯಲ್ಲ | ಅಕ್ಷರ ಜೋಡಣೆ ಎನ್ನ ಬುದ್ಧಿಯಿಂದಲ್ಲ ||

ಅಕ್ಷರಾರ್ಥ ಎನಗೆ ತಿಳಿದಿಲ್ಲ | ಲಕ್ಷ್ಯವಿದ್ದಲ್ಲಿ ಅನುಭವ ವೇದ್ಯ ||

ಭಕ್ಷ್ಯದಲ್ಲಿಯ ಸವಿ ಇದ್ದಂತೆ | ಭಕ್ಷಿಸಲು ತಿಳಿವುದು, ವರ್ಣಿಸಲಶಕ್ಯ ||

ಅಕ್ಷರ ಪ್ರತಿಪಾದ್ಯ ಅಕ್ಷರದಾತಾ | ಲಕ್ಷ್ಮೀಪತಿ ಶ್ರೀಕೃಷ್ಣವಿಟ್ಠಲನೇ ಕರ್ತೃ ||

ಎಎಎ

389. ಯೋಚಿಸಲಾಗದು, ಯೋಚಿಸಿದರೆ ಬರೆಯಲಾಗದು |

ಹಚ್ಚಿದ ಹಣತೆ ಕಾಣದಂತೆ ಘೃತ ಬಳಸಿ ಉರಿವಂತೆ ||

ಹೆಚ್ಚೇನೂ ಆಲೋಚಿಸದೆ ಪದ ರೂಪದಲ್ಲಿ ಮೂಡುವುದು |

ಅಚ್ಚಿನಲ್ಲಿಳಿದ ತಪ್ಪು-ಒಪ್ಪು ಎನಗೆ ಸಂಬಂಧವಿಲ್ಲ ||

ಮೆಚ್ಚಿ ಪರಮಾತ್ಮ ದಯಪಾಲಿಸಿದ ವರವಿದು |

ಇಚ್ಛೆ ಶ್ರೀಕೃಷ್ಣವಿಟ್ಠಲನದು ಒಕ್ಕಣಿಕೆ ಎನ್ನದು ಅಷ್ಟೇ ||

ಎಎಎ

390. ಅಧ್ಯಯನ-ಅಧ್ಯಾಪನಕ್ಕಾಗಿ ಬ್ರಾಹ್ಮಣ ಮುಖದಿಂ |

ಯುದ್ಧ-ರಕ್ಷಣೆಗಾಗಿ ಕ್ಷತ್ರಿಯ ಬಾಹುದಿಂ ||

ಬದ್ಧನಾಗಿ ವೈಶ್ಯ ಕೃಷಿ, ವ್ಯಾಪಾರದಿ ಊರುವಿನಿಂ |

ಶೂದ್ರ ಸಕಲ ಸೇವೆಗಾಗಿ ಪಾದದಿಂ ||

ಪದ್ಮನಾಭನಿಂದ ಹೊರ ಹೊರಟವರು |

ಭೇದವೆಲ್ಲಿದೆ ಸವಿಯೊಳು ಸಕ್ಕರೆಗೊಂಬೆ ಅವಯವದಿ ||

ಭೇದ ಜನ್ಮದಿಂದಲ್ಲ, ಕರ್ಮದಿಂದಾಗುವುದು |

ವೇದ ಪ್ರತಿಪಾದ್ಯ ಶ್ರೀಕೃಷ್ಣವಿಟ್ಠಲನ ದೃಷ್ಟಿಯಲಿ ಸಕಲರೂ ಸಮರೇ ||

ಎಎಎ

391. ಯಾರನ್ನೂ ಅನುಮಾನಿಸಬೇಡಾ, ಅಪಮಾನಿಸಬೇಡಾ |

ಯಾರ ಯೋಗ್ಯತೆ ಯಾರು ಬಾಹ್ಯದಿಂ ಅರಿಯರು ||

ಯಾರ ಅಂತರಂಗ ಯಾರಿಗೂ ಪೂರ್ಣ ತಿಳಿಯದು |

ಯಾರ ಶಾಪ-ಅನುಗ್ರಹ ಯಾವಾಗ ಫಲಿಸುವುದೋ ಹೇಳಲಾಗದು ||

ಯಾರ ಜೊತೆಗೂ ದ್ವೇಷ-ಅಸೂಯೆ, ಕೆಡುಮಾತುಗಳು ಸಲ್ಲದು |

ಸರ್ವರನೂ ಆದರದಿ ಕಾಣು ಶ್ರೀಕೃಷ್ಣವಿಟ್ಠಲ ಒಲಿವನು ||

ಎಎಎ

392. ಹಿತವಚನ ಯಾರೇ ಹೇಳಲಿ ಕೇಳಬೇಕು |

ಸತ್ಸಂಗ ಸಜ್ಜನರೊಡಗೂಡಿ ಸದಾ ಇರಬೇಕು ||

ಭಕ್ತಿಯ ಮಾರ್ಗ ವಿವಿಧ ರೀತಿಯಲ್ಲಿದ್ದರೂ ಬಿಡಬಾರದು |

ಪತಿತ ಪಾವನ ಶ್ರೀಕೃಷ್ಣವಿಟ್ಠಲಪಾದ ನಿರುತ ನೆನೆಯಬೇಕು ||

ಎಎಎ

393. ಮೊಸರಲಿ ಅವಲಕ್ಕಿ ನೆನೆದಂತೆ |

ಹೊಸವಧು ಪತಿಯ ಮುಖ ವೀಕ್ಷಿಸುವಂತೆ ||

ಬಿಸಿಹಾಲಲಿ ಸಕ್ಕರೆ ಬೆರೆತಂತೆ |

ಕೂಸಿನ ಕಂಡು ಮಾತೆ ಮೈಮರೆತಂತೆ ||

ಹಸನಾದ ಬಾಳಲಿ ದಿನಗಳು ಉರುಳುವಂತೆ |

ಈಶನ ನೆನೆಸಿ, ಪ್ರೇಮದಿಂದ, ಭಕ್ತಿಲಿ ಒಂದಾಗಿ ||

ದೋಷರಹಿತ ಶ್ರೀಕೃಷ್ಣವಿಟ್ಠಲನ ಸ್ಮರಿಸೆ ಜನುಮ ಸಾರ್ಥಕವಾಹುದು ||

ಎಎಎ

394. ಜ್ಞಾನಬೇಕು, ವಿಶೇಷ ಸುಜ್ಞಾನ ಬೇಕು |

ಜೀವ ಪರಮಾತ್ಮರೊಳು ಭೇದ ||

ಜೀವ-ಜೀವಕೆ ಭೇದ |

ಜೀವಜಡಕೆ ಭೇದ ಸಾರುವ ಪ್ರತ್ಯಕ್ಷ ಜ್ಞಾನಬೇಕು ||

ದ್ವೈತಾದ್ವೈತ ಭೇದ, ಕ್ಷರಾಕ್ಷರ ಭೇದ |

ಎಲ್ಲಕಿಂತ ಶ್ರೇಷ್ಠ ಪುರುಷೋತ್ತಮ ||

ಎಂದು ಸಾರುವ ವೇದಗಳ ಜ್ಞಾನಬೇಕು |

ಗುರು ಮಧ್ವರಾಯರ ದಯದಿ ||

ಶ್ರೀ ಕೃಷ್ಣವಿಟ್ಠಲನ ಗುಣಮಹಿಮಗಳ ಅರಿತು |

ಮುಕ್ತಿಮಾರ್ಗದೆಡೆ ಸಾಗಲು ಜ್ಞಾನಬೇಕು ||

ಎಎಎ

395. ಬಿರುದೇಕೆ, ಹೊಗಳಿಕೆ ಯಾತಕೆ, ಲೋಕದಲಿ | || ||

ಹೊಗಳುವ ಭಟ್ಟಂಗಿ ಕಂಡರೆ ಅಂಜಿಕೆ ಎನಗಯ್ಯಾ |

ಹೊಗಳಿದವರೇ ಮರುಕ್ಷಣ ತೆಗಳುವರಯ್ಯಾ ||

ಚಿತ್ತ ಚಂಚಲರಿಂದ ಸದಾ ಎನ್ನ ಕಾಪಾಡು |

ಚಿತ್ತಜನಕ ನಿನ್ನೊಲಮೆ ಇದ್ದರೆ ಸಾಕು | || 1 ||

ನಶ್ವರ ಜಗತ್ತು, ನಶ್ವರದೇಹ |

ಶಾಶ್ವತ ಆತ್ಮಕ್ಕೆ ನಿನ್ನ ಸ್ಮರಣೆ ಸಾಕು ||

ಗುರುಗಳಾಶೀರ್ವಾದ ಬಲದಿಂದಲೇ |

ಮುಳ್ಳಿನ ಹಾದಿ ಹುಲ್ಲುಹಾಸಾದರೆ ಸಾಕು | || 2 ||

ನಾಹಂ ಕರ್ತಾ, ಹರಿಃ ಕರ್ತಾ ಎಂದಂತೆ |

ಮನ ನಿನ್ನದು, ತನು ನಿನ್ನದು ಸದಾ ||

ನೀ ನಡೆಸಿದಂತೆ ನಡೆವ ಜೀವ |

ಶ್ರೀಕೃಷ್ಣವಿಟ್ಠಲ ಪ್ರೇರಣೆಯಾಂ,

ಪ್ರೀತ್ಯರ್ಥಂ ಎಂದು ಮಾಡುವ ಕೆಲಸಕೆ | || 3 ||

ಎಎಎ

396. ಸರ್ವಕರ್ತೃನ ಮುಂದೆ ನಾನೇ ಮಾಡಿದೆ ಎಂದರೆ |

ಸೃಷ್ಠಿಕರ್ತನ ಮುಂದೆ ನಾನೇ ಜನಕನೆಂದರೆ ||

ನಿರ್ದೋಷನಿಗೆ ನನ್ನ ತಪ್ಪೆಲ್ಲಾ ನಿನ್ನಿಂದಲೇ ಎಂದರೆ |

ಸರ್ವಜ್ಞನ ಮುಂದೆ ನನಗೆ ಎಲ್ಲಾ ತಿಳಿದಿದೆ ಎಂದರೆ ||

ಸದ್ಗುಣಸಾಂದ್ರನ ಮುಂದೆ ನನ್ನ ಗುಣಗಳ ಹೊಗಳಿ ಕೊಂಡರೆ |

ಅನಾದ್ಯನಂತನ ಮುಂದೆ ನಾನೇ ಚಿರಾಯು ಎಂದರೆ ||

ಪುರುಷೋತ್ತಮನ ಮುಂದೆ ನಾನೇ ಶ್ರೇಷ್ಠನೆಂದರೆ |

ಶ್ರೀಕೃಷ್ಣವಿಟ್ಠಲ ಮೆಚ್ಚುವನೇನಯ್ಯಾ ||

ಎಎಎ

397. ಶರೀರದ ವಿವಿಧ ಕಾರ್ಯಗಳ ಪ್ರೇರಕ ಅದ್ಭುತ! ಅತ್ಯದ್ಭುತ |

ತರತರದ ವಸ್ತುಗಳು ಸೇರುವುದು ಒಂದೇ ಚೀಲದಲಿ ||

ನೀರಿರಲಿ, ಅನ್ನವಿರಲಿ ಒಳ ಹೋಗುವ ಮಾರ್ಗ ಒಂದೇ |

ಸಂತೃಪ್ತಿ, ತುಷ್ಟಿ, ಪುಷ್ಟಿ ನೀಡುವುದು ಉಂಡ ದೇಹಕೆ ||

ಕರಗಿಸಿ-ಅರಗಿಸಿ ವಿವಿಧರೂಪದಿ ಸಕಲಾಂಗಗಳಗೆ ಪೋಪುದು |

ಸೇರುವುದು ತದ್ರೂಪದಿ ತದಂಗಗಳಿಗೆ ||

ವೀರ್ಯರೂಪದಿ ಪ್ರಜನಕೆ ಕಾರಣವಾಹುದು |

ಕ್ಷೀರರೂಪದಿ ಉಣಿಸಿ-ತಣಿಸುವುದು ಶಿಶುವ ||

ಪುರೀಷ, ಮಾಂಸ, ಮೂಳೆ ಆಗಿ ಮಾರ್ಪಡುವುದು |

ನರ, ನಾಡಿಗಳಲಿ ರಕ್ತವಾಗಿ ನಿರಂತರ ಹರಿವುದು ||

ಬೇರೆ ಬೇರೆ ಕಾರ್ಯ ಉದ್ದೇಶ ಸಫಲವಾಗುವುದು |

ಮರುತ ಪಂಚರೂಪದಿ ಸಂಚರಿಸಿ ಕಾರ್ಯವೆಸಗುವ ||

ಕಾರ್ಯಕಾರಣ ಕರ್ತ ಶ್ರೀಕೃಷ್ಣವಿಟ್ಠಲನ ಕಾರುಣ್ಯದಿಂದಲೇ ||

ಎಎಎ

398. ಲೆತ್ತವಾಡಿ ಸೋತರಂತೆ ಪತಿಗಳೈವರು |

ಆಂತ:ಪುರದಲ್ಲಿದ್ದ ಪತ್ನಿಯ ಪಣಕ್ಕಿಟ್ಟರು ||

ಸೋತು ಕೌರವೇಶನ ಅಪಮಾನಕ್ಕಿಡಾದರು ||

ಕಾತರಿಸಿದ ದುಷ್ಟ,ಸೇಡು ತೀರಿಸಿಕೊಳ್ಳಲು |

ಸತಿಯ ಸಭೆಗೆಳೆತರಲು ಭ್ರಾತೃಗ್ಹೇಳಿದ ||

ಋತುಮತಿಯಾದ ಕುರುಕುಲವಧು ಬರಲು ನಿರಾಕರಿಸೆ |

ಸಂತಾಪದಿ ಮುಡಿಹಿಡಿದು ಜಗ್ಗುತ್ತಾ ಎಳೆತಂದ ||

ಧೃತರಾಷ್ಟ್ರ ಹುಟ್ಟು ಕುರುಡ ಧರ್ಮಾಂಧನೂ ಆದ |

ಪಿತಾಮಹರಾದಿಯಾಗಿ ನಾಚಿಕೆಯಲಿ ತಲೆ ತಗ್ಗಿಸಿದರು ||

ಸೋತ ಪತಿಗಳು ಪತ್ನಿಯ ಹೇಗೆ ಪಣಕ್ಕಿಟ್ಟರೆಂದಳಾ ನಾರಿಗೆ |

ಉತ್ತರ ಕೊಡದೆ ತಡಬಡಿಸಿದರೆಲ್ಲ ಸುಬುಧರು ||

ವಸ್ತ್ರ ಸೆಳೆಯಲು ತಮ್ಮನಿಗೆ ಆಜ್ಞಾಪಿಸಿದ ಮಂದಾಂಧ |

ತತ್ತರಿಸಿದ ಸಾಧ್ವಿ ಸಹಾಯಕ್ಕಾಗಿಸಭೆಯಲಿ ಬೇಡಿಕೊಂಡಳು ||

ಉತ್ಸಾಹದಿ ಮುಂದೆ ಬಂದು ಸೆರಗನೆಳೆದ ಧೂರ್ತ |

ಭೀತಿಯಿಂದ ಮಾನ ಕಾಯಲು ದ್ವಾರಕಾಧೀಶನ ಕೂಗಿ ಕರೆದಳು ||

ಆರ್ತನಾದ ಆಲಿಸಿ ಧಾವಿಸಿ ಬಂದು ಸಂರಕ್ಷಿಸಿದ |

ಹಸ್ತದಿಂದ ಅನಂತಮಡಿ ವಸ್ತ್ರ ದಯಪಾಲಿಸಿದ ||

ಮತ್ತೆ ಮತ್ತೆ ಸೆಳೆಯಲು ಸೀರೆಯ ಪರ್ವತವಾಯಿತು |

ಸೋತು ಬಸವಳಿದು ಧರಾಶಾಯಿಯಾದ ದುಷ್ಟ ||

ಭಕ್ತೆ ಮಾನಿನಿಯ ಮಾನ ಕಾಯ್ದ ಶ್ರೀಕೃಷ್ಣವಿಟ್ಠಲನ ಕಾರುಣ್ಯ ಸೀಮಾತೀತ ||

ಜೊತೆ

ಭಕ್ತರ ದು:,ಅಸಹಾಯಕತೆ ಸಹಿಸನು ಎಂದಿಗೂ |

ಸತತ ಪಾಲಿಪ ದೀನರಕ್ಷಕ ನಮ್ಮ ಶ್ರೀಕೃಷ್ಣವಿಟ್ಠಲ ||

ಎಎಎ

399. ಸರ್ವರಿಗೂ ಸುಖವನ್ನುಂಟು ಮಾಡು |

ದೇವಾ, ಯಾರಿಗೂ ದು: ನೀಡದಿರು ||

ಸರ್ವದಾ ಶುಭವೇ ತೋರುತಿರು |

ಸರ್ವರ ತಪ್ಪು ಮನ್ನಿಸಿ ಕಾಪಾಡು ||

ಸರ್ವರ ಸುಖದಲಿ ಎನ್ನ ಸುಖವಡಗಿದೆ |

ಸರ್ವರ ತಪ್ಪು ಕಾಯೋ ಅಪ್ಪ, ಶ್ರೀಕೃಷ್ಣವಿಟ್ಠಲ ||

ಸರ್ವರಕ್ಷಕ ನೀನಲ್ಲವೇ? ಬಿಡದೇ ಎನ್ನನ್ನೂ ಕಾಯೋ ||

ಎಎಎ

400. ನಿತ್ಯ ಸಾಯುವುದು ನೋಡಿ ದು:ಖಿಸದೆ, ನಮ್ಮವರಿಗಾಗಿ ದು: ಏಕೆ? |

ನಿತ್ಯವೂ ಸಾಯುವವು ಅನೇಕ ಕ್ರಿಮಿ, ಕೀಟಾದಿಗಳು ||

ನಿತ್ಯವೂ ಸಾಯುವವು ಅನೇಕ ಅರಳಿದ ಹೂಗಳು |

ನಿತ್ಯವೂ ಸಾಯುವವು ಅನೇಕ ಹಣ್ಣಾದ ಎಲೆಗಳು ||

ನಿತ್ಯವೂ ಸಾಯುವವು ಆಹಾರ ರೂಪದಿ ಶಾಕಗಳು |

ನಿತ್ಯವೂ ಸಾಯುವವು ಅನೇಕ ಜೀವಿಗಳು, ಜೀವಿಗಳ ಬದುಕಿಗಾಗಿ ||

ನಿತ್ಯವೂ ಸಾಯುವವು ಕರ್ಮಗಳು ಅನೇಕ ಕರ್ಮದ ಹುಟ್ಟಿನಲಿ |

ನಿತ್ಯವೂ ಸಾಯುವುದು ಸಮಯವು ಕಾಲಗರ್ಭದಲಿ ||

ನಿತ್ಯವೂ ಸಾಯುವುದು ದುರ್ಬಲತೆ ಬಲಿಷ್ಠತೆ ತೆಕ್ಕೆಯಲಿ |

ನಿತ್ಯವೂ ಸಾಯುವುದು ಹೊಸತಲ್ಲ ಹಾಗೇ ಹುಟ್ಟು ಹೊಸತಲ್ಲ ||

ನಿತ್ಯ ಸಾಯುವುದು ಹುಟ್ಟಲೇಬೇಕು, ಹುಟ್ಟಿದ್ದು ಸಾಯಲೇಬೇಕು |

ನಿತ್ಯ ಸಾಯುದು ದೇಹದ ಕಣಗಳನೇಕ, ಹೊಸ ಕಣಗಳು ಹುಟ್ಟುವುವು ||

ನಿತ್ಯ ಸಾಯುವುದು ಹೊರರೂಪ ಹೊರತು ಒಳಾತ್ಮಕ್ಕೆ ಸಾವಿಲ್ಲ |

ನಿತ್ಯ ಸಾಯುವ ರೂಪ ಹೊಸ ರೂಪಕೆ ನಾಂದಿಯಾಗುವುದು ||

ನಿತ್ಯ ಸಾಯುವ ಹಳೆರೂಪ ಹೋದರೆ ದು:ಖವೇಕೆ? |

ನಿತ್ಯ ಸಾಯುವುದಕ್ಕೆ ಶೋಕವೇಕೆ? ವಿಷಾದವೇಕೆ? ||

ನಿತ್ಯ ಸಾಯಲಿ ನಮ್ಮಅಹಂ-ಮಮ ಭಾವನೆಗಳೆಲ್ಲ |

ನಿತ್ಯ ಆತ್ಮ ಸತ್ಯ ಎನ್ನುವ ನಮ್ಮ ಸತ್ಯಸ್ಯಸತ್ಯ ಶ್ರೀಕೃಷ್ಣವಿಟ್ಠಲ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು