ಶ್ರೀ ಕೃಷ್ಣವಿಠ್ಠಲಪದಗುಚ್ಛ 2
114. ರಥದಿ ಕುಳಿತಿಹ ಜೀವ ಸಾರಥಿ ಪರಮಾತ್ಮ |
’ ಎನ್ನುತ ಯಾಚಕನಿಗೆ ಸದಾ ||
ಸ್ವಾರ್ಥ ಕೇಳಲಿ, ಪಾರಮಾರ್ಥಕೇಳಲಿ ‘ತಥಾಸ್ತು’ |
ಮಥಿಸಿ ಮನವ ಮಾರ್ಗಸೂಚಿಪ ಸದ್ಭಕ್ತಿಗೆ ಒಲಿದು ||
ಪಂಥನಾಡುವ ಪಂಚಪ್ರಾಣನಾಡಿಸುತ ಸರ್ವಕರ್ತೃ |
ಇಂಥಾ ಉದ್ಗೀಥ ಶ್ರೀಕೃಷ್ಣವಿಟ್ಠಲ ಸ್ವಯಂಭೂ ಸರ್ವೇಶ ||
115. ತನ್ನತನವ ಬಿಡದೆ, ಇನ್ನೊಬ್ಬರಿಗೂ ಪೂರ್ಣತಿಳಿಸದೆ |
ಅನ್ನಂ ದೇಹಿ ಎಂದವರಿಗೆ ನಾಸ್ತಿ ಎನ್ನದೆ ||
ಉನ್ನತಪ್ರಾರ್ಥಿಪರಿಗೆ ಇಹ-ಪರ ಸುಖವೀವ |
ಮನವನಿತ್ತರೆ ತನ್ನನೀವ ಶ್ರೀಕೃಷ್ಣವಿಟ್ಠಲ ಭಕ್ತಾನಾಂ ವಶ ||
116. ಏನೆಂತು ಪಾಡಲಿ, ಏನೆಂತು ಪೊಗಳಲಿ |
ಅನಂತ ಗುಣಗಳು ನಿನ್ನಲುಂಟು || || ಪ ||
ಎನಗೆ ಒಂದೇ ನಾಲಿಗೆ ಮಂದಮತಿ ನಾ |
ಎಣಿಸಲುಂಟೇ ಈಜಗದಿ ಮಳಲಕಣಗಳ || || ಅಪ ||
ಆನಂದ ಆನಂದವೋ ಅಲ್ಪವೇ ಗುಣ ನೆನೆಯಲು |
ಎನಿತು ಆನಂದವೋ ಪೂರ್ಣ ಗುಣತಿಳಿಯಲು ||
ಮನದನ್ನೇ ಚೆಲುವೆ ಲಕುಮಿ ಜೊತೆಗಿರಲು ಸದಾ |
ಮನಸಾ ಅರಿಯಳು ಸಕಲ ರೂಪಂಗಳ || || 1 ||
ಜನುಮ ಜನುಮಕ್ಕೂ ನಿನ್ನ ಸ್ಮರಣೆ ಕೊಡೆ |
ಮನಸಾ ಕೊಂಡಾಡುವ ಬುದ್ಧಿ ಇರೆ ||
ಇನಿತು ಇನಿತು ಪಾಡಿ ಕೊಂಡಾಡುವೆ |
ನಿನ್ನೊಲುಮೆಯಿಂ ಮನ ತುಂಬಿ ಪಾಡುವೆ ಶ್ರೀಕೃಷ್ಣವಿಟ್ಠಲ || || 2 ||
117. ಪೇಳೇ ಸಖಿ ನೀ ಎಲ್ಲಿಂದ ಬಂದೆ |
ತಿಳಿಸಿ ಒಲವಿಂದ ನೀ ನಿಜ ಪೇಳೇ || || ಪ ||
ಅಯೋಧ್ಯಾ ನಗರಿ ದಶರಥ ನಂದನ |
ಮರ್ಯಾದಾ ಪುರುಷೋತ್ತಮಾ ಕಳುಹಿದನೇನೆ || || 1 ||
ಕ್ಷೀರಶಯನ ಶೇಷಶಾಯಿ ನಾರಾಯಣ |
ವರಗಿರಿ ತಿಮ್ಮಪ್ಪ ಕಳುಹಿದನೇನೆ || || 2 ||
ವೈಕುಂಠದಿ ಶ್ರೀ ಲಕುಮಿಪತಿ |
ಲೋಕದ ಸೃಷ್ಟಿ ನೋಡಲು ಕಳುಹಿದನೇನೆ || || 3 ||
ಕರ್ಮವ ಕಳೆದು ಸಾಧಿಸಿ ಭಕ್ತಿಯ |
ಮರ್ಮವನರಿಯಲು ಕಳುಹಿದನೇನೆ || || 4 ||
ವೃಂದಾವನ ಕಂದ ಗೋಕುಲ ಚಂದ್ರ |
ರಾಧಾರಮಣ ಶ್ರೀ ಕೃಷ್ಣವಿಟ್ಠಲ ಕಳುಹಿದನೇನೆ || || 5 ||
118. ಪೊರೆ ಎನ್ನ ಸ್ವಾಮಿ ಶರಣೋದ್ಧಾರಕ |
ಪರಮಾತ್ಮ ಪರಮಾಪ್ತ ಜೀಯಾ ||
ಕರುಣಾ ಸಮುದ್ರ ಲೋಕಪಾಲಕ |
ಪರಿ ಪರಿಯಿಂದ ಬೇಡಿಕೊಂಬೆ ||
ಸರ್ವಸ್ವಾಮಿ ಎನ್ನ ಹೃದಯಂತಸ್ಥ |
ಪರಿಪೂರ್ಣಗುಣಸಾಗರ ದೋಷದೂರ ||
ಸರ್ವೇಶ ಸರ್ವವಂದ್ಯ ಸರ್ವಜ್ಞ |
ಸರ್ವತ್ರ ಸರ್ವಾಂಗೀಣ ಸರ್ವದಾ ||
ಶ್ರೀಕೃಷ್ಣವಿಟ್ಠಲ ಬಿಡದೆ ಸಲಹೋ ದೇವಾ ||
119. ಹರಿ ನಿನ್ನ ಚರಣದಿ ಸ್ಥಿರ ಭಕುತಿ ಕರುಣಿಸೋ |
ಪರಿ ಪರಿ ಬೇಡಿಕೊಂಬೆ ನಿಜ ಭಕುತಿ ದಯಪಾಲಿಸೋ ||
ನೀರಿಗಿಂತ ತಿಳಿಯಾದ ಜ್ಞಾನವಿತ್ತು ಸಲುಹೋ |
ಉರ್ವಿಗಿಂತ ಭಾರವಾದ ಪಾಪದಿಂದ ಉಳಿಸೋ ||
ಕರಿಯಾದ ಕಾಡಿಗೆಗಿಂತ ಕಲಂಕದ ಕಪ್ಪು ಅಳಿಸೋ |
ಉರಿಗಿಂತ ತೇಜವಾದ ಕ್ರೋಧದಿಂದ ತಪ್ಪಿಸೋ ||
ಅರಿಯದೇ ಬರುವ ಒಳಗಿನ ಅರಿಯ ತರಿಯೋ |
ನರಜನ್ಮದಿ ಹೊರುವ ಕರ್ಮದ ಭಾರ ಇಳುಹೋ ||
ಬರದಂತೆ ಜನುಮ ಇರುವ ಉಪಾಯ ತಿಳಿಸೋ |
ಭರದಿಂದ ಸಂಸಾರ ಸಾಗರ ದಾಟುವ ದಾರಿ ತೋರೋ ||
ಬೇರೆಯವರ ದೈನ್ಯಕೆ ಸಿಲುಕದಂತೆ ನಡೆಸೋ |
ಸ್ಮರಿಸಿ ಸದಾ ಶ್ರೀಕೃಷ್ಣವಿಟ್ಠಲನ ಬದುಕುವಂತೆ ಮಾಡೋ ||
120. ಓಡಾಡಿದೆಡೆ ಎಲ್ಲಾ ತೀರ್ಥಯಾತ್ರೆಯಾಗಲಿ |
ನಡೆದಾಡಿದ್ದೆಲ್ಲಾ ದೇವಸ್ಥಾನವಾಗಲಿ ||
ನೋಡಿದ್ದೆಲ್ಲಾ ಪರಮಾತ್ಮನ ಮೂರ್ತಿಯಾಗಲಿ |
ನುಡಿದಿದ್ದೆಲ್ಲಾ ಸ್ತುತಿ ಸ್ತೋತ್ರವಾಗಲಿ ||
ಓದಿದ್ದೆಲ್ಲಾ ವೇದ ಶಾಸ್ತ್ರವೇ ಇರಲಿ |
ಕೊಡ ಮಾಡಿದ್ದೆಲ್ಲಾ ದಾನ ಧರ್ಮವಾಗಲಿ ||
ಒಡಲಲ್ಲಿ ಹಾಕಿದ್ದೆಲ್ಲಾ ನೈವೇದ್ಯವಾಗಲಿ |
ಮಾಡಿದ್ದೆಲ್ಲಾ ಶ್ರೀಹರಿಯ ಕೈಂಕರ್ಯವಾಗಲಿ ||
ಬಿಡದೆ ಸಕಲವೂ ಶ್ರೀಕೃಷ್ಣವಿಟ್ಠಲನ ಪ್ರೀತಿಯಾಗಲಿ ||
121. ಸುಗುಣಾಂತರಂಗ ಅವಿರ್ಭವಿಸಿ ಅದಿತಿ ಕಶ್ಯಪ ಪುತ್ರನಾಗಿ |
ಆಗಲೇ ತೋರಿದ ಸುಂದರ ವಟು ವಾಮನರೂಪದಿ ||
ಅಗಮಿಸಿ ಯಜ್ಞಮಂಟಪದಿ ಬೇಡಿದ ಬಲಿಗೆ ದಾನವ |
ಬಗೆಬಗೆಯ ದಾನ ಒಲ್ಲದೆ ಬೇಡಿದ ತ್ರಿಪದಿ ಭೂವಿಯ ||
ಆಗಣಿತ ಬೆಳೆದ ಅಚಿಂತ್ಯಾದ್ಭುತ ತ್ರಿವಿಕ್ರಮ ರೂಪದಿ |
ಬೇಗ ಅಳೆದ ಎರಡು ಪಾದದಿ ಭುವಿ, ಅಂತರಿಕ್ಷವ ||
ನಗೆ ಬೀರಿ ಕೇಳಿದ ಎಲ್ಲಿಡಲಿ ಮೂರನೇಪಾದ ಸ್ಥಳತೋರು |
ಯೋಗದಿ ಅರಿತ, ಸಾಮಾನ್ಯನಲ್ಲ ಇವ ಪರಮಾತ್ಮನೆಂದು ||
ಭಂಗವಾಗದಂತೆ ತನ್ನ ಪ್ರತಿಜ್ಞೆ, ಶಿರವ ತೋರಿದ ಸ್ಥಳವಾಗಿ |
ಬೇಗನೆ ಬಲಿ ಶಿರವ ಮೆಟ್ಟಿ ಪಾತಾಳಕ್ಕಟ್ಟಿದ ||
ಅಂಗನೆಯ ಜೊತೆಗೂಡಿ ನಡೆದ ಚಿರಂಜೀವಿ ಬಲಿ |
ಈಗಲೂ ಕಾಯುತ್ತಿರುವ ಭಕ್ತವತ್ಸಲ, ಅರಮನೆಯ ಬಾಗಿಲವ ||
ಗಗನಕ್ಕೆತ್ತಿದ ಪಾದ ನಖ ತಾಕಿ ಒಡೆಯಿತು ಬ್ರಹ್ಮಾಂಡ ಖರ್ಪರ |
ಸುಜ್ಞಾನಿ ಬ್ರಹ್ಮ ಆ ಜಲದಿ ಮಾಡಿದ ಪಾದ ಪೂಜೆಯ ||
ಆಗ ವಿಷ್ಣುಪದಿ ಎನಿಸಿ ಪವಿತ್ರಳಾಗಿ ಕೆಳಗೆ ಹರಿದಳು |
ನುಗ್ಗಿ ಬಂದ ರಭಸ ತಡೆದು ಶಿವ ಜಟೆಯಲಿ ಬಂಧಿಸಿದ ||
ಭಗೀರಥ ಮಾಡಿದ ಘೋರತಪಕ್ಕೆ ಮೆಚ್ಚಿ ಕೆಳಗೆ ಕಳುಹಿದ |
ಸಂಗತೊರೆಯಲು ಮನವಿಲ್ಲದೆ ದೇವಲೋಕ ಬಿಟ್ಟು ಇಳಿದಳು ||
ಸಾಗಿ ಬಂದು ಜನ್ಹು ಋಷಿ ಆಶ್ರಮವ ತೇಲಿಸಿದಳು |
ಗಂಗೆಯನು ತೀರ್ಥವೆಂದು ಆಪೋಷನದಿ ಸಕಲ ಸ್ವೀಕರಿಸಿದ ||
ಸುಜ್ಞಾನಿಗಳು ಪಾವನವಾದುದು ಎಂದು ಬಿಟ್ಟಗಲರು |
ವಿಜ್ಞಾಪಿಸಲು ಭಗಿರಥ, ಕಿವಿಯಿಂದ ಹೊರ ಹೊರಟಳು ಜಾಹ್ನವಿ ||
ಮಂಗಳೆ, ಕೆಳಗೆ ಹರಿದು ಭುವಿ, ಪಾತಾಳಾದಿ ಲೋಕ ಪಾವನಗೊಳಿಸಿ |
ಸಗರ ಕುಲ ಬಾಂಧವರನ್ನೆಲ್ಲಾ ಉದ್ಧರಿಸಿದ ಸುಚರಿತನ ಗಾಥಾ ||
ಗಗನ ಸುರನದಿ, ಭೂಮಿಲಿ ಪಾಪ ಕಳೆವ ಗಂಗೆ |
ಜಗದೋದ್ಧಾರಕ ಶ್ರೀ ಕೃಷ್ಣವಿಟ್ಠಲನ ಪ್ರೇಮ ಕುವರಿಯಾದಳು ||
122. ಜೀವೇಶ ದೇವೇಶ ಈರೇಶ ಬ್ರಹ್ಮೇಶ ಲಕ್ಷ್ಮೀಶ |
ವಿಶ್ವೇಶ ಜಗದೀಶ ವೇದೇಶ ಸರ್ವೇಶ ಶರಣೇಶ ||
ಭೂಮೇಶ ಅಸುರೇಶ ದುರ್ಗೇಶ ತತ್ವೇಶ ಅದ್ರೀಶ |
ಕಾಮೇಶ ಧರ್ಮೇಶ ರಾಮೇಶ ಮುಕ್ತೇಶ ಜ್ಞಾತೇಶ ||
ಪರಮೇಶ ಅಬ್ಧೀಶ ಭವೇಶ ಸ್ತಂಭೇಶ ಪೊಡವೀಶ |
ಪ್ರೇರಕೇಶ ನಿಯಮೇಶ ಪ್ರೋಷ್ಠೀಶ ರವೀಶ ಕವೀಶ ||
ನಾಮೇಶ ರೂಪೇಶ ವಾದೀಶ ಜಯೀಶ ಸರ್ವಾಧೀಶ |
ವ್ಯೋಮಕೇಶ ಯೋಗೇಶ ಅನೀಶ ಸುಂದರೇಶ ಸ್ವಯಂಮೇಶ ||
ಗೀತೇಶ ಗುರ್ವೇಶ ಹೃದಯೇಶ ವಿಜಯೇಶ ಗಮ್ಯೇಶ ||
ಕಾಂತೇಶ ಶಾಂತೇಶ ಸ್ವರೂಪೇಶ ಚಿತ್ತೇಶ ಸ್ವವಶ |
ಪ್ರಾಣೇಶ ಅಗ್ರೇಶ ಮೂಲೇಶ ಕರ್ಮೇಶ ಕಮಲೇಶ |
ಗುಣೇಶ ಕಾರಣೇಶ ಕಾರ್ಯೇಶ ಬುದ್ಧೇಶ ಸಿದ್ಧೇಶ ||
ಪೂರ್ಣೇಶ ಜ್ಞಾನೇಶ ಆನಂದೇಶ ಸತ್ಯೇಶ ನಿತ್ಯೇಶ |
ಗಣೇಶ ವ್ಯಾಪ್ತೇಶ ಸ್ಥಿತೇಶ ವಿಶೇಷ ಸರ್ವಜ್ಞೇಶ ||
ಭೂತೇಶ ಇಂದ್ರೇಶ, ವಾಗೀಶ ಹರೀಶ ಪುರುಷೇಶ |
ಕ್ಷೇತ್ರೇಶ ಅಕ್ಷರೇಶ ತ್ರಿಗುಣೇಶ ಭಕ್ತೀಶ ಶ್ರೀಶ ||
ಸಂಕರ್ಷ ತ್ರಿಲೋಕೇಶ ಭಿನ್ನಾಭಿನ್ನೇಶ ಸೃಷ್ಟೀಶ |
ಮುಖ್ಯೇಶ ಅದೃಶ್ಯಾದೃಶ್ಯ ದೃಷ್ಟೀಶ ಸಂತುಷ್ಟೀಶ ||
ವಂದ್ಯೇಶ ಅಮಲೇಶ ಸರ್ವೇಶ ತ್ರಯೀಶ ಅವಿನಾಶಿ |
ರುದ್ರೇಶ ಹೃಷಿಕೇಶ ಅಂಶಿ ಶ್ರೀಕೃಷ್ಣವಿಟ್ಠಲೇಶ ಆಶೀಶಮೇ (ಕ್ಷಮಸ್ವಮೇ) ||
123. ಪ್ರಾರಬ್ಧ ತಪ್ಪದು ಗುಡ್ಡದಷ್ಟಿರುವ ಕಷ್ಟ ಕಡ್ಡಿಯಂತೆ ಮಾಡಿದೆ | || ಪ ||
ಸರ್ವದಾ ಸರ್ವತ್ರ ಕಣ್ಣರೆಪ್ಪೆಯೆಂದದಿ ಎನ್ನ ರಕ್ಷಿಸಿದೆ || || ಅಪ ||
ಏನು ಕರುಣೆಯೋ ಕಾರುಣ್ಯನಿಧಿಯೇ ಎಷ್ಟೆಂದು ಪೇಳಲಿ |
ಸ್ವಾನುಭವದ ಮಾತಿದು ಉತ್ಪ್ರೇಕ್ಷೆ ಸ್ವಲ್ಪವೂ ಇಲ್ಲ ||
ವದನದಿ ನುಡಿಸಿದ ಮಾತನ್ನು ನಿಜವಾಗಿಸಿ ಗೌರವಿಸಿದೆ |
ಮಾಡಿದ ಕಾರ್ಯವ ಜಯವನ್ನಾಗಿಸಿ ಉನ್ನತಿ ನೀಡಿದೆ || || 1 ||
ಶುದ್ಧ ಮಾಡುತ ಅಂತ:ಕರಣ ಸರ್ವಕಾರ್ಯ ಕಾರಣಪ್ರೇರಕನಾದೆ |
ಮಾಡಿದುಪಕಾರವ ಅಳೆಯಲಾರೆ,ಮರೆಯಲಾರೆ,ತೀರಿಸಲಾರೆ ||
ತನುಮನದಿ ಅಶುದ್ಧಳ ಶುದ್ಧಗೊಳಿಸಿದೆ ಸ್ವಚ್ಛಮೂರುತಿಯೆ |
ಮನದಿ ನೆನೆದಿದ್ದನ್ನು ನಿಜಕೆ ತಂದು ತೋರಿಸಿದೆ ಸಾಕ್ಷಿಯೆ || || 2 ||
ನಿನಗೇನು ಸಂಬಂಧವೆಂದು ಇದೆಲ್ಲವ ಮಾಡಿದೆಯೋ ದಯಾನಿಧೆ
ನಿನ್ನರಿಯದಾದೆ ಒಮ್ಮೆಯಾದರು ನಿನ್ನ ತೋರಿಸಿ ಕೊಡೊ ಅದೃಷ್ಯ ಬಾಂಧವನೇ ||
ಕಣ್ಣಿಗೆ ಕಾಣದಿದ್ದರೂ ಸದಾ ನೆರವಿನ ಹಸ್ತ ಚಾಚಿದ ಅಪ್ರತ್ಯಕ್ಷದೈವವೆ |
ನಿನ್ನ ಇರುವು ಹರವಿನ ಅರಿವು ನೀಡಿ ಸರ್ವವಶತ್ವವ ನಿರೂಪಿಸಿದೆ || ||3||
ದೊಡ್ದ ಗಂಡಾಂತರ ಒದಗಿದಾಗ ಬಿಡದೇ ಚಿಕ್ಕದಾಗಿಸಿ ಸಲಹಿದೆ |
ಬಂದ ನೋವು ಅರಿವಿಗೆ ಬಾರದಂತೆ ಎನಗೆ ಉಣಿಸಿದೆ ||
ಬಿಡದೆ ನಿನ್ನುಪಕಾರವ ಜನುಮ ಜನುಮಕ್ಕೂ ಸ್ಮರಿಸುವಂತೆ ಮಾಡು
ಒಡೆಯಾ ಪ್ರಾಣಸಖ ಶ್ರೀಕೃಷ್ಣವಿಟ್ಠಲ ನಿನ್ನ ಋಣ ತೀರಿಸುವ ಬಗೆ ಹೇಗೆ? ತಿಳಿಸು || ||4||
124. ಅಧಿಕರಾರೈ, ಸಮರಾರೈ ದೇವಾ ನಿನಗಧಿಕರಾರೈ ಸಮರಾರೈ |
ಭೇದ ವಿವರ್ಜಿತನ ಮಹಿಮೆಗಳೇ ಅಧಿಕ, ನಿನ್ನ ಗುಣಗಳೇ ಸಮ ನಿನಗೆ ||
ಸುಂದರರಾರೈ, ಸರ್ವಶಕ್ತರಾರೈ, ನಿನಗಿಂತ ಸುಂದರರಾರೈ ಸರ್ವಶಕ್ತರಾರೈ |
ಸುಂದರಾತಿ ಸುಂದರ ಸಕಲಾವತಾರಗಳು, ಸರ್ವಶಕ್ತನೀನೇ ಶ್ರೀಕೃಷ್ಣವಿಟ್ಠಲ ಸರ್ವದಾ ||
125. ಅನುಗ್ರಹಿಸು, ಅನುಗ್ರಹಿಸು ಎನ್ನ ಬಿಡದೆ ಸದಾ | || ಪ ||
ಜನುಮ ಜನುಮದ ಬಂಧು ಅನಿಮಿತ್ತ ಸಖನೇ || || ಅ.ಪ ||
ನಿತ್ಯದಿ ಸದಾ ನಿನ್ನ ಸ್ಮರಣೆಯಲ್ಲಿರುವಂತೆ |
ಸತ್ಯದಿ ಸಾಧು ಸಜ್ಜನರ ಸಂಗದಲ್ಲಿರುವಂತೆ || || 1 ||
ಚಿತ್ತೈಕಾಗ್ರದಿ ಸುಂದರ ಮೂರುತಿ ನೆನೆವಂತೆ |
ಅತ್ಯಾಸಕ್ತದಿ ಮಂಗಳ ಮಹಿಮೆ ಪಾಡುವಂತೆ || || 2 ||
ಭಕ್ತಿಯು ಮನದಿ ಪ್ರತಿ ಕ್ಷಣ ವೃದ್ಧಿಸುವಂತೆ |
ಮತ್ತೆ ಮತ್ತೆ ಶ್ರೀಕೃಷ್ಣವಿಟ್ಠಲನ ಕಾಣುವಂತೆ || || 3 ||
126. ಹರಿರೂಪದಿ ಗರುಡನ ಮೇಲೇರಿ ಭರ ಭರ್ರನೆ |
ಸರೋವರಕೆ ತೀವ್ರವೇ ಬಂದು ಚಕ್ರದಿಂದ ||
ನಕ್ರನ ಕೊರಳು ಸರ ಸರನೇ ಕತ್ತರಿಸಿ |
ಕರಿರಾಜನ ಪಾಪಗಳ ಕರ ಕರ್ರನೇ ತರಿದು ||
ಶ್ರೀಕೃಷ್ಣವಿಟ್ಠಲ ತನ್ನ ಚರಣದಲ್ಲಿಟ್ಟವನೇ |
ಹರಿದು ಎನ್ನ ಪಾಪವ ಪರ್ರನೇ ಸಂಸಾರದಿಂ ತಾರಿಸು ಕರುಣಾನಿಧಿಯೇ ||
127. ಪ್ರದ್ಯುಮ್ನನೇ ಹಿಂಕಾರನಾಮಕನಾಗಿ ಪ್ರಾಣನಲಿ |
ಉದ್ಗೀಥನಾಮಕ ನಾರಾಯಣ ಚಕ್ಷುವಿನಲಿ ||
ವಾಗೀಂದ್ರಿಯಲಿ ಪ್ರಸ್ತಾವನಾಮಕ ವಾಸುದೇವ |
ಶ್ರೋತ್ರೇಂದ್ರಿಯಲಿ ಪ್ರತಿಹಾರ ನಾಮಕ ಅನಿರುದ್ಧ ||
ನಿಧನನಾಮಕ ಸಂಕರ್ಷಣನು ಮನದಿ |
ಐದು ಇಂದ್ರಿಯಗಳಲಿ ಪಂಚರೂಪಿ ಪರಮಾತ್ಮನ ಉಪಾಸಿಸಿ ||
ಪರೋವರೀಯ ಶ್ರೀಕೃಷ್ಣವಿಟ್ಠಲನು ಮಾಡುವುಪಕಾರವ |
ಪ್ರತಿಕ್ಷಣದಿ ನೆನೆ ನೆನೆದು ಧನ್ಯರಾಗಿರಿ ||
128. ಕ್ಷೀರಸಾಗರಂ ಶೇಷಶಯನಂ, ಲಕ್ಷ್ಮೀಸಂಸೇವಿತಂ |
ಸರ್ವ ಭೂತಚೇಷ್ಟಕಂ, ಸೃಷ್ಟ್ಯಾದಿ ಕರ್ತಾರಂ ||
ಮಹದಾನಂದಂ ವಿಜ್ಞಾನಂ ಪರಮಂ ಸತ್ಯಂ |
ಬ್ರಹ್ಮರುದ್ರೇಂದ್ರಸುರಾದಿಗಣಯೋಗಿವಂದ್ಯಂ ||
ದೋಷದೂರಂ ಅನಂತಂ ಕಲ್ಯಾಣ ಗುಣಪೂರ್ಣಂ |
ವಿಶ್ವಾಧಾರಂ ಓಂಕಾರವಾಚ್ಯಂ ಸುಂದರಂ ||
ಅಘಹರ್ತಾರಂ ದಯಾನಿಧಿಂ ಸಮೀಕ್ಷಂ ಸ್ವಭಾನುಂ |
ಯುಗಪ್ರವರ್ತಕಂ ಶುಭಾಂಗಂ ನಿಖಿಲಾಧೀಶಂ ಸರ್ವಜ್ಞಂ ||
ಅಣೋರಣೀಯಾನ್ ಮಹಿತೋ ಮಹಿಯಾನ್ ಸರ್ವಶಕ್ತಂ |
ಅನಾದಿ ನಿತ್ಯಂ, ಮುಕ್ತಿಪ್ರದಾಯಕಂ ಶ್ರೀಕೃಷ್ಣವಿಟ್ಠಲಂ ಭಜೇ ||
129. ಅನ್ಯನಲ್ಲವೋ ನಾ ನಿನ್ನವಳೇ ಭೇದವೆಣಿಸÂದಿರು |
ಮನದಣಿಯೆ ನೀ ಕೊಟ್ಟರುಂಟು ಇಲ್ಲದಿರೆ ಇಲ್ಲ || || ಪ ||
ಎಷ್ಟು ಯಾವಾಗ ಹೇಗೆ ಕೊಡಬೇಕೆಂದು ನಿನಗೆ ಗೊತ್ತು |
ಕಷ್ಟ ಪಟ್ಟರೂ ಬೇಡಿಕೊಂಡರೂ ಸಿಗಲಾರದೆನಗೆ ||
ಬೇಡಿ ಬಡವನೆನಿಸದಿರು ಭವದಿ ಬನ್ನಬಡಿಸದಿರು |
ಕೊಡುವ ಒಡೆಯ ನಿನ್ನ ಇಚ್ಛೆಯೇ ಎನ್ನ ಇಚ್ಛೆ ಆಗಲಿ || || 1 ||
ಸ್ವತಂತ,್ರ ಸರ್ವಜ್ಞ ನಿನಗೆ ನಾ ಹೇಳಲೇಕಿನ್ನು |
ಅತಂತ್ರ ಪರತಂತ್ರಳ ಮಾಡದೇ ಪದತಲದಲ್ಲಿರಿಸಿಕೋ ||
ಹೆಜ್ಜೆ ಹೆಜ್ಜೆಗೆ ಒಜ್ಜೆ ಇಳಿಸಿ ಸನ್ಮತದಿ ನಡೆಸೆನ್ನ |
ಜಜ್ಜಿ ಗೋಜಲು ಬಿಡಿಸಿ ಭಕ್ತಿಮಾರ್ಗದಿ ಸರಳವಾಗಿಸೆನ್ನ || || 2 ||
ತಪ್ಪೆಣಿಸಿ ಕುಟ್ಟದಿರು ಅಘನಾಶನೇ ಸೈರಿಸುಎನ್ನ |
ಒಪ್ಪವಾಗಿ ತಿದ್ದಿ, ಜ್ಞಾನ ಉತ್ತುಂಗಕ್ಕೇರಿಸು ಖರ್ಪರ ಛೇದಕನೆ ||
ಆರು ಅರಿಗಳು ಪರಿಪರಿಯಲಿ ಸಂಸಾರದಿ ಎಳೆಯುತಿರಲು |
ಅರಿತು ತರಿದು ತೀವ್ರ ವೈರಾಗ್ಯ ನೀಡಿ ರಕ್ಷಿಸನವರತ || || 3 ||
ಒದ್ದರೂ, ಹೊಡೆದರೂ ಬಿಡಲಾರೆ ನಾ, ಮಗು ತಾಯಿಗಂಟಿದಂತೆ
ಈ ದೇಹಧಾರಿ ನಾನಾದರೇನು, ಆತ್ಮನಿನ್ನದಲ್ಲವೇ? ಸೃಜ್ಯಕಾರಣನೇ ||
ನಿರುತ ಕೃಪೆ ತೋರೊ ಅಂಶ ನಾನು ಅಂಶಿ ನೀನು |
ಸರ್ವೇಶ ಇಷ್ಟ ಬಾಂಧವಾ ಶ್ರೀಕೃಷ್ಣವಿಟ್ಠಲ ಪರಮಗತಿ ನೀಡೆನಗೆ || || 4 ||
130. ಸ್ವಲಕ್ಷಣವಂತ ಭಗವಂತ ಸ್ವಯಂ ವಿಲಕ್ಷಣ |
ಆಳದರಿವಿಲ್ಲದ ಅಗಣಿತ ಗುಣಧಾಮ ||
ಸ್ವಕಾಂತಿ ಪೊಂದಿರುವ ಜ್ಞಾನೀ ಜೌದಾರ್ಯವಂತ |
ಸಕಲಾಧಾರ ಸರ್ವ ಸಂರಕ್ಷಕ ಸ್ವಪ್ರಕಾಶಕ ||
ಸಂಪೂಜ್ಯವಂತ ಅವಿನಾಶ ನಿಶ್ಚಲ |
ಸುಪಾಲಯಾ, ನಿಖಿಲ ಹೃದಯ ಸಂಚಾರಿ ||
ಉತ್ತಮೋತ್ತಮ ಸ್ವತಂತ್ರ ಸ್ವಾಮಿ ನಿತ್ಯ |
(ವೇದ ಹೇಳುವ) ಸಂತತ ವಚನ, ಸತತ ಸುಸೇವ್ಯ ||
ಶುದ್ದ ಬ್ರಹ್ಮ, ಪುರಾಣ ಪುರುಷ ಅಮಿತ ಪರಾಕ್ರಮ |
ಸೌಂದರ್ಯಸಾರ ಶ್ರೀಕೃಷ್ಣವಿಠ್ಠಲ ಸಂಧಾನದಾತಾ ನಮೋ ನಮ: ||
(ಯಮಕಭಾರತ-ಭಾ (32) ರಿಂದ ಪ್ರೇರಿತವಾಗಿ ಬರೆದಿದ್ದು)
131. ನಮಿಸು ಸುಮನ ಸದಾ, ದಾಸರಮಾ ಮಾರರ |
ಮರ್ಮದಿ ಜೊತೆ ತೇಜೋತಮ ಶ್ರೀಕೃಷ್ಣವಿಟ್ಠಲನ ಮತವ ||
132. ಸಿರಿ ತಾ ತಾರಿಸಿ ಸಂಸಾರ, ಸುರಿತಾ ರಸ ಸಾರ |
ಸ್ವರಾಟ, ಸ್ವಸಾರ ಶ್ರೀಕೃಷ್ಣವಿಟ್ಠಲನ ಪ್ರಿಯೆ ದಯದಿ ||
133. ಯಜ್ಞ ಮನದಿ ಜ್ಞೇಯ, ಲಕ್ಷ್ಮೀ ತೀಕ್ಷ ಲಕ್ಷ್ಯ |
ಪ್ರಾಜ್ಞ ಶ್ರೀಕೃಷ್ಣವಿಟ್ಠಲಗೆ ಮನದಿ ನಮೋ ನಮ: ||
134. ಒಂದು ರೂಪದಿ ವಿಶ್ವ ಒಳ ಹೊರ ವ್ಯಾಪಿಸಿ |
ಭೇದವಿಲ್ಲದೇ ಅನೇಕರೂಪ ತಳೆದವಗೆ ನಮೋ ನಮ: ||
ಅಂಶ, ಪೂರ್ಣಾವತಾರವೆಂಬೆರಡು ರೀತಿಯಲಿ ತಾ |
ಶೇಷ, ರಮಾದಿರೊಳಗಿದ್ದು ಜಗದ್ರಕ್ಷಕನಾದವನಿಗೆ ನಮೋ ನಮ: ||
ಮೂರುರೂಪದಿ ಜಾಗ್ರತ, ಸ್ವಪ್ನ, ಸುಷುಪ್ತಿ ನೀಡುವ | (ವಿಶ್ವ,ತೈಜ,ಸಪ್ರಾಜ್ಞ)
ಮೂರು ರೂಪದಿ ಹೃದಂiÀiದಿ ನೆಲಸಿ ಸಂಚರಿಪಗೆ ನಮೋ ನಮ: || (ಅಗ್ರೇಶ,ಮೂಲೇಶ ಪಾದೇಶ)
ಮೂರು ನಾಮದಿ ಪಾಪ ಸಂಹಾರಕನೆನಿಸಿದ ಸರ್ವೋದ್ಧಾರಕ |
ಕರ್ಮ ಲೋಪ-ದೋಷಗಳ ತಿದ್ದುವಗೆ ನಮೋ ನಮ: || (ಅಚ್ಯುತಾನಂತ ಗೊವಿಂದ)
ವಿಚಿತ್ರ ಸೃಷ್ಟ್ಯಾದಿ ಕರ್ತ, ನಿಯಾಮಕ ನಾಲ್ಕು ರೂಪದಿ ಭರಿಸಿ | (ಸಂಕರ್ಷಣಾದಿ)
ಪಂಚರೂಪದಿ ದೇಹ ವ್ಯಾಪಿಸಿ ಕರ್ಮವೈದಿಸುವಗೆ ನಮೋ ನಮ: ||
ಅಜಾದಿ ಐವತ್ತೊಂದು ಶಬ್ದರೂಪದಿ ಸೇವಿಸಲ್ಪಡುವವನೇ |
ನಿಜದಿ ಶತ, ಸಹಸ್ರನಾಮಾವಳಿಂದ ಪೊಗಳ್ಪಡುವವನೆ ನಮೋ ನಮ: ||
ಬಾಲರೂಪದಿ ಜಲದಿ ಆಲದೆಲೆ ಮೇಲೆ ಪವಡಿಸಿ |
ಲೀಲೆಯಲಿ ಕ್ರೀಡಿಸುವ ಯುಗಪ್ರವರ್ತಕಗೆ ನಮೋ ನಮ: ||
ಅಗಣಿತರೂಪ, ಅಗಣಿತ ನಾಮದಿ, ಪೂರ್ಣತಿಳಿಯಲಾಗದ |
ಖಗಪತಿ ಶ್ರೀಕೃಷ್ಣವಿಟ್ಠಲ ಸ್ವಯಂ ವ್ಯಕ್ತಾವ್ಯಕ್ತಗೆ ನಮೋ ನಮ: ||
135. ಸುಖ ಸ್ವರೂಪನೇ, ಶೇóಷಶಾಯಿಯೇ |
ಪಂಕಜನಾಭನೇ, ಸುರಚಕ್ರವರ್ತಿಯೇ ||
ಜಗದಾಶ್ರಯನೆ, ಆಕಾಶಾಧಿಪತಿಯೆ |
ನೀಲವರ್ಣನೇ, ಸುರಸುಂದರನೇ ||
ರಮಾಪತಿಯೇ, ಅರವಿಂದನಯನೇ |
ಯೋಗಿ,ಧ್ಯಾನಿಗೋಚರಿಪನೇ, ಸಂಸಾರ ಭಯತಾರಕನೇ||
ಶ್ರೀಕೃಷ್ಣವಿಟ್ಠಲನೇ ನಮೋ ನಮ: ||
136. ನಾನೊಂದು ಹುಲು ಮಾನವ ಎನ್ನಿಂದೇನು ಸಾಧ್ಯವೋ | || ಪ ||
ಎನ್ನಲಿ ನೀನಿಂತು ಮಾಡಿಸಿದ ಕರ್ಮದ ಸುಫಲ ಜಯ ಎನ್ನದೆ?|| ||ಅಪ||
ಸಕಲ ವಸ್ತುಗಳ ಒಳ-ಹೊರಗೆ ವ್ಯಾಪುತ ಸರ್ವದಾ |
ಸಕಲ ವಸ್ತುಗಳೊಳಗಿನ ಶಕ್ತಿ, ಗುಣ ನೀನೇ ||
ಅಖಿಲ ಜಗತ್ ಸೃಷ್ಟಿ-ಲಯ-ಪಾಲನಕರ್ತನೆ |
ಮಂಕು ಬುದ್ಧಿ, ಅರಿಯದೇ ನಾನೇ ಮಾಡಿದೆ ಎನ್ನುವೆ || || 1 ||
ಪ್ರತಿಯೊಂದು ಕ್ಷಣದಲ್ಲೂ ನೀನಿರುವಿ ನೀನಿರದ ಕಾಲವಿಲ್ಲ |
ಪ್ರತಿಯೊಂದು ತಾವಿನಲ್ಲೂ ನೀನಿರುವಿ ನೀನಿರದ ತಾವಿಲ್ಲ ||
ಪ್ರತಿಯೊಂದು ಅಂಗಾಂಗದಿ ನೀನಿದ್ದು ಕಾರ್ಯಮಾಡಿಸುವೆ |
ಪ್ರತಿಯೊಂದು ಕಾರ್ಯದ ಉದ್ದೇಶ-ಆರಂಭ-ಕೊನೆ ನೀನೇ || || 2 ||
ಕ್ಷಣವೂ ಬಿಡದೇ ಜೀವಿಯ ಜೊತೆಗಾರ ಸರ್ವರಕ್ಷಕ |
ಕಣ ಕಣದಿ ಇದ್ದು ಅದರ ಅರಿವುಮೂಡಿಸುವೆ ||
ಬಣ್ಣ ಬಣ್ಣದ ಜಗತ್ತಿನ ರೂಪಕಂಡು ಮರುಳಾಗಿ |
ಒಣ ಪ್ರತಿಷ್ಠೆ, ಧನ, ಬಾಂಧವರ ಬೆನ್ಹತ್ತಿ ನಿನ್ನ ಮರೆತಿರುವೆ || || 3 ||
ಎನ್ನ ಅದೃಷ್ಟದ (ಪಾಪ ಪುಣ್ಯ) ಫಲ ಎನಗೇ ಉಣಿಸುವಿ ಅದೃಶ್ಯದಿ |
ನೀ ನೀಡುವೆ ಸರಿಯಾದ ಕಾಲಕ್ಕೆ ಭಾಗ್ಯವನನುಸರಿಸಿ ನಿಷ್ಪಕ್ಷಪಾತಿ ||
ಜನರ ನಿಂದಿಸಿ ಫಲವೇನು? ಅವರೊಳು ನಿಂತು ನೀನೇ ಮಾಡಿಸುವಿ |
ಮುನ್ನವೇ ಬರೆದಿಟ್ಟ ಹಣೆ-ಬರಹ ಅಂದಿಗಂದಿಗೆ ತೋರಿಸುವಿ || || 4 ||
ಒಮ್ಮೆ ಇಲ್ಲಿರಿಸುವೆ ಮತ್ತೊಮ್ಮೆ ಎಲ್ಲೋ ಇರಿಸುವಿ |
ಒಮ್ಮೆ ಸಕಲ ಸೌಭಾಗ್ಯ ಹರುಷವಿತ್ತು ಕ್ಷಣದಿ ಅಪಹರಿಸುವಿ ||
ಒಮ್ಮೆ ನಗಿಸುವಿ ಮತ್ತೊಮ್ಮೆ ಅಳಿಸುವಿ ಸೂತ್ರಧಾರನೇ |
ಸ್ವಾಮಿ, ಶ್ರೀಕೃಷ್ಣವಿಟ್ಠಲ ನೀ ಮಾತ್ರ ಮೂಕಸಾಕ್ಷಿ ಸಕಲ ಆಗುಹೊಗುಗಳಿಗೆ|| ||5||
137. ದಟ್ಟೋ ದಟ್ಟೋ ಹೆಜ್ಜೆಯಿಕ್ಕುತಾ ಅಂಗಳದಲ್ಲಾಡ ಬಾರೋ |
ಪುಟ್ಟ ಪುಟ್ಟ ಪಾದ ಚಿನ್ಹೆ ಎಲ್ಲ ಕಡೆ ಮೂಡಿಸೊ ||
ದೃಷ್ಟಿ, ಮನ, ಶ್ರವಣವೆಂಬ ಗೆಜ್ಜೆಗಳ ಪೋಣಿಸಿ |
ಗಟ್ಟಿಯಾಗಿ ನಿನ್ನಕಾಲಿಗೆ ಕಟ್ಟುವೆ ಕುಣಿಯೋ ||
ಸೊಟ್ಟಗಿರುವ ಎನ್ನ ಹೃದಯ ತಿದ್ದಿ ಸರಿಯಾಗಿಸೋ |
ಇಷ್ಟಪಡುವ ನಿನ್ನ ಮೂರುತಿ ನೆಟ್ಟಗೆ ನಿಲ್ಲಿಸೋ ||
ಕಷ್ಟಪಟ್ಟು ಬಂದದ್ದು ವ್ಯರ್ಥವಾಗದಂತೆ ಮಾಡೊ |
ಪುಟ್ಟಿಸಿದಕ್ಕೆ ಇಷ್ಟು ಮಾತ್ರ ಸಲಹೋ ಶ್ರೀಕೃಷ್ಣವಿಟ್ಠಲರಾಯಾ ||
138. ಓಂಕಾರ ಸ್ವರೂಪ ಶಾಂತಸ್ವಭಾವ |
ಲೋಕೈಕ ಸುಂದರ ಮೂಲ ಪುರುಷೋತ್ತಮ ||
ಭಕ್ತ ಜನರೋದ್ಧಾರ ಸತ್ಯವಚನ ಪರಿಪಾಲಕ |
ಶ್ರೀಕೃಷ್ಣವಿಟ್ಠಲನೇ ಸರ್ವಕಾರ್ಯಕಾರಣ, ಕರ್ತ ||
139. ನಿನ್ನ ಸ್ಮರಣೆಯ ಮರೆಯದೇ ದಯಪಾಲಿಸೋ | || ಪ ||
ನಾರಾಯಣ ನಿನ್ನ ಪ್ರೇರಣೆಯಿಲ್ಲದೇ ದೊರೆಯದೋ ಈ ಭಾಗ್ಯ | ||ಅಪ||
ಜ್ಞಾನಿ ನೀನು ಅಜ್ಞಾನಿ ನಾ ನಿನ್ನ ಗುಣಗಳರಿಯೆ |
ಭಕ್ತಿಗೆ ಒಲಿದು ಮುಕ್ತಿಯ ನೀಡುವ ಮುಕುಂದನೇ | || 1 ||
ಅನಂತಗುಣಗಳ ಮಹಿಮನೇ, ಭವ ಪಾಶಮೋಚಕನೇ |
ಪಂಚಭೇದ ಜ್ಞಾನಕೊಟ್ಟು ಸಲಹೋ ಕರುಣಾಕರನೇ | || 2 ||
ನನ್ನನು ಅರಿಯೆ ನಿನ್ನನು ತಿಳಿಯೇ ಸ್ವತಂತ್ರನೇ |
ಸೂತ್ರಧಾರಿ ಶ್ರೀಕೃಷ್ಣವಿಟ್ಠಲ ಎಲ್ಲಾ ನೀನಾಡಿಸಿದಂತೆಯೇ | || 3 ||
140. ಈಶನೀನು, ನಿನ್ನದಾಸಿ ನಾನು |
ನೀನು ನಡೆಸಿದಂತೆ ನಡೆವೆ ನಾನು ||
ಚಲಿಸಿದರೆ ಚಲಿಸುವೆನು |
ಮಲಗಿಸಿದರೆ ಮಲಗುವೆ ||
ಬಿಂಬನೀನು, ಪ್ರತಿಬಿಂಬ ನಾನು |
ಡಿಂಬದ ಇಂದ್ರಿಯಗಳ ವ್ಯಾಪಾರನಡೆಸುವ ||
ನಿನ್ನ ಚರಣಕೆ ಶರಣಾಗಿರುವೆ |
ಶ್ರೀಕೃಷ್ಣವಿಟ್ಠಲನೇ ಎನ್ನ ಉದ್ಧರಿಸೋ ||
141. ನಮಿಪೆ ಶ್ರೀಹರಿಯ ಪಾದಪದ್ಮಕೆ, ಮುಕ್ತಿಪಥ ತೋರುವ ಪಾದ |
ಅಮಿತ ಸೂರ್ಯ ಸಮಪ್ರಭ, ನಖಕಾಂತಿಯುಕ್ತಪಾದ ||
ಋಷಿ, ಮುನಿಯಿಂ ವಂದಿತಪಾದ, ಶಂಖ-ಚಕ್ರಾಂಕಿತ ಪಾದ |
ಜಾನ್ಹವಿ ಜನಕಪಾದ, ಸರ್ವಲೋಕಂಗಳ ಅಳೆದಪಾದ ||
ನಖದಿಂ ಭೂಮಿಯ ಮೆಟ್ಟಿದಪಾದ, ಜಾನಕಿ ಸೇವಿತ ಸೌಭಾಗ್ಯಪಾದ |
ಅಹಲ್ಯೋದ್ಧಾರಕ ಪಾದ, ಕಪಿ ವರಹನುಮಂತ ಪೂಜಿತ ಪಾದ ||
ಸುರರು ಸದಾ ಹೃನ್ಮನದಿ ನೆನೆಯುವ ಪಾದ |
ಭಕ್ತಿಗೊಲಿದು ದಯಪಾಲಿಸುವ ಶ್ರೀಕೃಷ್ಣವಿಟ್ಠಲನ ಪಾದ ||
142. ಮಾಡಿದ ಕರ್ಮವ ಕೇಶವಗರ್ಪಿಸಿ ನಿಸ್ವಾರ್ಥದಿ |
ಕ್ಲೇಶವ ಕಳೆವ ನಿಜ ಮರ್ಮವ ತಿಳಿಯಿರೋ ||
ಬಿದ್ದುಹೋಗುವ ದೇಹದ ಬಾಧೆಗೆ ಸಿಲುಕದೆ ಚಿತ್ತಶುದ್ಧಿಯ ಕಾಣಿರೋ |
ನಡೆ-ನುಡಿ ಒಂದಾಗಿ, ದಾನ-ಧರ್ಮವಗೈದು, ದಯಾವಂತರಾಗಿ ||
ತನುಶುದ್ಧಿಗಾಗಿ ವ್ರತ-ನೇಮ ಆಚರಿಸಿ, ನಿರ್ಮಲರಾಗಿ |
ಮನ:ಶುಚಿಗಾಗಿ, ಸತ್ಯಸಾಧಕರಾಗಿ ಸಜ್ಜನ ಸಂಗದಿ ||
ಒಡೆಯ ಶ್ರೀಕೃಷ್ಣವಿಟ್ಠಲನ ಮೆಚ್ಚಿಸಿ ಶಾಶ್ವತಪದ ಪಡೆಯಿರೋ||
143. ಅನವರತವೂ ನಿನ್ನ ಗುಣಗಳನ್ನೇ ಪಾಡುತ್ತಿರಲಿ ವದನ |
ನಿನ್ನ ನಾಮಸಂಕೀರ್ತನೆಯನ್ನೆ ಪೇಳಲಿ ಜಿಹ್ವೇ ||
ನಿನ್ನ ಹೆಸರನ್ನೇ ಜಪಿಸಲಿ ಈ ಶ್ವಾಸವು |
ನಿನ್ನ ಕಥೆಯನ್ನೇ ಕೇಳಲೀ ಕಿವಿಗಳು ||
ನಿನ್ನನು ಬಗೆ ಬಗೆಯಲಿ ಚಿಂತಿಸಲಿ ಈ ಮನವು |
ಒಳ-ಹೊರಗೂ ಸದಾನಿನ್ನನೇ ಕಾಣುವಂತಾಗಲಿ ಕಂಗಳು ||
ಯಾವಾಗಲೂ ನಿನ್ನ ಕೆಲಸವೇ ಮಾಡಲಿ ಈ ಕೈಗಳು |
ಎಲ್ಲಿ ಹೋದರೂ ನಿನ್ನ ಬಳಿಗೆ ನಡೆಯಲಿ ಕಾಲ್ಗಳು ||
ನಿಜ ಭಕುತರ ಸಂಗ ದೂರೆತು ನಿತ್ಯದಲಿ |
ಶ್ರೀಕೃಷ್ಣವಿಟ್ಠಲನಲಿ ಅನನ್ಯರತಿ, ಅನ್ಯರಲಿವಿರೆಕ್ತಿ ಆಗಲಿ ||
144. ಸರ್ವವ್ಯಾಪುತನಿಗೆ, ಗುಡಿಯಿಂದೇನು ಫಲ? |
ಮಂಗಳಮೂರ್ತಿಗೆ, ಮಂಗಳಾರತಿಯಿಂದೇನು ಫಲ? ||
ಪುಣ್ಯಶ್ಲೋಕನಿಗೆ, ಸ್ತೋತ್ರಗಳಿಂದೇನು ಫಲ? |
ಸರ್ವಭಕ್ಷಕನಿಗೆ, ನೈವೇದ್ಯದಿಂದೇನು ಫಲ? ||
ಲಕ್ಷ್ಮೀಪತಿಗೆ, ದಕ್ಷಿಣೆಯಿಂದೇನು ಫಲ? ||
ಸ್ವಯಂಭೂಷಿತನಿಗೆ, ಅಲಂಕಾರದಿಂದೇನು ಫಲ? |
ಶೇಷಶಯನಿಗೆ, ಶಯನೋತ್ಸವದಿಂದೇನು ಫಲ? ||
ಜಗತ್ತೇ ತೂಗುವವಗೆ, ತೊಟ್ಟಿಲುಸೇವೆಯಿಂದೇನು ಫಲ? |
ಅನ್ನ ಬ್ರಹ್ಮನಿಗೆ, ಅನ್ನ ಸಮರ್ಪಣೆಯಿಂದೇನು ಫಲ? ||
ಹೃದಯದಲ್ಲಿರುವಗೆ, ಮಂಟಪದಿಂದೇನುಫಲ? |
ಸದ್ಗುಣಗಳ ಖನಿಯಾದ ಶ್ರೀಕೃಷ್ಣವಿಟ್ಠಲಗೆ ||
ಭಕ್ತಿಯಿಂದ ಸರ್ವಸಮರ್ಪಣೆ ಮಾಡಿ ಧನ್ಯರಾಗಿರೋ ||
145. ಕೇಶವ ನಾರಾಯಣ ಮಾಧವ ಗೋವಿಂದಾ ಎನೆ ಸಂಸಾರ ಭವತಾರಕ |
ವಿಷ್ಣುಮಧುಸೂದನ ತ್ರಿವಿಕ್ರಮ ವಾಮನ ನೆನೆದರೆ ಸರ್ವತ್ರರಕ್ಷಿಪ ||
ಶ್ರೀಧರ ದಾಮೊದರ ಹೃಷಿಕೇಶ ಪದ್ಮನಾಭ ಎನೆ ಹೃದಯದಿವಾಸಿಪ |
ಸಂಕರ್ಷಣ ವಾಸುದೇವ ಪ್ರದ್ಯುಮ್ನ ಅನಿರುದ್ಧ ಎನೆ ಆತ್ಮೋದ್ಧಾರಮಾಳ್ಪ ||
ಪುರುಷೋತ್ತಮ ಅಧೋಕ್ಷಜ ನಾರಸಿಂಹ ಸ್ವಾಮಿ ಅಚ್ಯುತವೆನೆ ದುರಿತಪರಿಹಾರಕ |
ಜನಾರ್ದನ ಉಪೇಂದ್ರ ಹರೀ ಶ್ರೀಕೃಷ್ಣವಿಟ್ಠಲವೆನೆ ಸಾಯುಜ್ಯದಯಪಾಲಿಪ ||
146. ಮೂಲರೂಪ ಶ್ರೀಹಯಗ್ರೀವ ಜ್ಞಾನಪ್ರದಾಯಕ ಪುಣ್ಯರೂಪ |
ಮತ್ಸ, ಕೂವರ್i, ವರಾಹ ಜಗದೋದ್ಧಾರಕ ರೂಪ ||
ನಾರಸಿಂಹ, ವಾಮನ, ಭಾರ್ಗವ ಅಸುರೀಶಕ್ತಿ ದಮನ |
ಬುದ್ಧ, ಕಲ್ಕೀ, ರೂಪ ಅಜ್ಞಾನ ನಾಶಕ ||
ದಶಾವತಾರಸ್ತುತೀ ಸುಖದಾಯಕ ಸರ್ವದಾ |
ಶ್ರೀಕೃಷ್ಣವಿಟ್ಠಲನ ಪಾದದಾಣೆಗೂ ಇದು ಸತ್ಯ ||
147. ನಿನ್ನನ್ನೆ ನಂಬಿರುವೆ ನಂಬಿಸಿ ಕೈಬಿಡಬೇಡಾ || ಪ ||
ಹೆಜ್ಜೆಹೆಜ್ಜೆಗೆ ಭಯ ತರುವ ಈ ಜನ್ಮಚಕ್ರವ ತಪ್ಪಿಸಿ ಅಭಯವೀಯೆಯ ||ಅಪ||
ಭವಬಂಧಪಾಶದಿ ಸಿಲುಕಿ ನಲಗುತ್ತಿರುವೆನೆಗೆ |
ಬಂಧಮೋಕ್ಷಕರುಣಿಸಿ ಸಾಯುಜ್ಯವೀಯೆಯಾ ||
ಕರುಣಾಕರ ನೀ ಕವರ್iಬಂಧವ ತಪ್ಪಿಸಿ |
ಸದಾಎನ್ನ ಹೃದಯದಲ್ಲಿ ನೆಲಸೆಯಾ | || 1 ||
ಸರ್ವದೇವರದೇವ ಸಜ್ಜನೋದ್ಧಾರಕ, ಸಕಲವ ಮನ್ನಿಸಿ ಸಲಹಲಾರೆಯಾ ||
ಮುಗಿಯಲಾಗದ ಈ ಪಯಣದ ಅಂತವೆಂತೋ ನಾನರಿಯೇ |
ಆದಿ-ಅಂತ್ಯವಿರದ ಅನಂತ ಗುಣಪೂರ್ಣ ಶ್ರೀಕೃಷ್ಣವಿಟ್ಠಲ
ಸದಾ ಎನ್ನ ಜೊತೆಗಿರಲಾರೆಯಾ | || 2 ||
148. ಎನ್ನ ಜೀತಕಿಟ್ಟು ಕೊಳ್ಳೋಮಹರಾಯಾ, ಜೀಯಾ | || ಪ ||
ನಿನ್ನ ಪಾದ ಸೇವೆಯಮಾಡಿ, ನಿನ್ನನ್ನೆ ಓಲೈಸುವೆನು |
ಸರ್ವಕಾಲದಿ ನಿನ್ನ ಒಂದರಗಳಿಗೆ ಬಿಟ್ಟಿರೆನೋ || ಜೀಯಾ || || 1 ||
ತಿನ್ನುವ ಉಡುವ ಆಶೆಎನಗಿಲ್ಲಾ, ಬೇರೆಡೆಹೋಗಲು ಮನಸಿಲ್ಲಾ |
ಹೊಡೆದರೂ ಒದೆದರೂ ನೀನೆ ಗತಿ ಎಂಬೆ || ಜೀಯಾ || || 2 ||
ಒಂದು ಕ್ಷಣ ನೀ ಎನ್ನ ನೋಡಿದರೂ ಸಾಕಯ್ಯಾ|
ಏನನ್ನೂ ಬೇಡೆನು ನಿನ್ನಹೊರತು ಶ್ರೀಕೃಷ್ಣವಿಟ್ಠಲ || ಜೀಯಾ | || 3 ||
149. ನಿನ್ನ ದಾಸನ ದಾಸನಂತೆ ಸೇವೆ ಮಾಳ್ಪೆ |
ನಿನ್ನ ಪಾದದಲ್ಲೇ ಸೇರಿಸಿಕೋ ಪಾಂಡುರಂಗ ||
ತನು ಮನ ನಿನ್ನದೇ, ಎಂದೆಂದೂ ಪ್ರತಿ ಜನುಮದಲ್ಲೂ |
ನಿನ್ನ ಕಾಣುವಂತಾಗಲಿ ಶ್ರೀನಿವಾಸ ಬಿನ್ನಹವಿದೊಂದೇ ||
ನಾ ನಿನ್ನ ಧರಿಪೆ ಸದಾ | ನಿ ಎನ್ನ ಭರಿಸೋ ಶ್ರೀಕೃಷ್ಣವಿಟ್ಠಲ || ಜೀಯಾ ||
150. ನಾನೆಂತು ಪೊಗಳಲಿ ನಿನ್ನನು ನಾನೆಂತು ವರ್ಣಿಸಲಿ | || ಪ ||
ಸಹಸ್ರಶೀರ್ಷ ನೀನು, ಒಂದೇ ತಲೆ ನನ್ನದು ಹೇಗೆ ಯೋಚಿಸಲಿ |
ಸಹಸ್ರಾಕ್ಷ ನೀನು, ಒಂದೇ ದೃಷ್ಟಿ ನನ್ನದು ಹೇಗೆ ಕಾಣಲಿ ||
ಸಹಸ್ರಪಾದನೀನು, ಒಂದೇ ನಡುಗೆ ನನ್ನದು ಹೇಗೆ ನಡೆಯಲಿ | || 1 ||
ಅನಾದಿ ಮೂರುತಿ ನೀನು, ಕ್ಷಣಭಂಗುರ ನಾನು ಹೇಗೆ ತಿಳಿಯಲಿ |
ಸಮದರ್ಶಿನೀನು, ಸ್ವಾರ್ಥದ ಪರಾಕಾಷ್ಠೆ ನಾನು ಹೇಗೆ ಸರಿ ಇರಲಿ ||
ಅನಂತ ಗುಣಸಾಂದ್ರ ನೀನು, ಅವಗುಣಗಳ ಗೂಡು ನಾನು ಹೇಗೆ ವಿಮರ್ಶಿಸಲಿ | || 2 ||
ಸುಜ್ಞಾನ ಸರ್ವವಿದಿತ ನೀನು, ಅಜ್ಞಾನದ ಆಗರ ನಾನು ಜ್ಞಾನವ್ಹೇಗೆ ತಿಳಿಯಲಿ |
ಸೃಷ್ಠಿ ಸ್ಥಿತಿ ಲಯಕರ್ತ ನೀನು, ಸ್ವಾತಂತ್ರವಿಲ್ಲದವ ನಾನು ಏನು ಮಾಡಲಿ ||
ಸವೋತ್ತಮನಾದ ಶ್ರೀಕೃಷ್ಣವಿಟ್ಠಲ ನಾನೇನೆಂಬುದು ನಿನಗೆ ತಿಳಿಯದೆ || 3 ||
151. ಸರ್ವವೇದ ಸಾರ ತಿಳಿಯಿರೋ ಜಗದೊಳು |
ಮಾನವ ಜನ್ಮದಿ ಪಾವನರಾಗಿರೋ | || ಪ ||
ಕೃಷ್ಣನ ಸ್ಮರಿಸಿರೋ ಶ್ರೀಹರಿಯ ಭಜಿಸಿ ಬದುಕಿರೋ |
ವಿಷ್ಣುವಿನ ನಮಿಸಿರೋ ಅಚ್ಯುತನಾಶ್ರಯಿಸಿ ಬಾಳಿರೋ ||
ಶೌರಿ ಕಥಾಶ್ರವಣಮಾಡಿ ಪುಣ್ಯದಿ ಶ್ರೀಪತಿ ವಿಗ್ರಹನೋಡಿರೋ | || 1 ||
ಶ್ರೀಪಾದತುಳಸಿ ಆಘ್ರಾಣಿಸಿ, ವೈಕುಂಠಪತಿಯ ಮನಮುಟ್ಟಿ ಭಜಿಸಿರೊ |
ಕೇಶವನ ನೈವೇದ್ಯ ಭುಂಜಿಸಿ, ನಿತ್ಯಮಾಧವನ ಸಂಗದಿ ಇರೆ ||
ಮಂಗಳಮೂರ್ತಿ ಶ್ರೀನಾರಾಯಣಮಂತ್ರ ಉಸಿರಾಗಿಸಿ ಜಪಿಸಿರೋ || 2 ||
ಕ್ಷಮೆಯೇ ತಪಸ್ಸಾಗಿಸಿ ನಿತ್ಯ ಹಿತವಾದ ಸತ್ಯವ ನೇಮವಾಗಿಸಿ |
ಐಹಿಕ ಸುಖವ ತೊರೆದು ಸದಾ ಸಜ್ಜನ ಸಂಗವಬಯಸಿ ||
ಸರ್ವರಲಿ ದಯೆಯಿರಲಿ ಧರ್ಮಾಚರಣೆಯಲಿ ಮನವಿರಲಿ | || 3 ||
ಆತ್ಮ ಅಮರ ದೇಹ ನಶ್ವರವೆಂಬ ಸುಜ್ಞಾನವಿರಲಿ |
ಸತ್ಯಜಗದಿ ಶುದ್ಧಾನಂದಗೆ ಸರ್ವ ಸಮರ್ಪಿಸಿ ಧನ್ಯರಾಗಿರಿ ||
ಸರ್ವ ವೇದಾರ್ಥದ ಸಾರವೇ ಇದೆಂದು ತಿಳಿಯಿರಿ | || 4 ||
ಸರ್ವರಲಿ ನರಹರಿಯ ಚಿಂತಿಸಿ ಸದಾನಂದ ಪೊಂದಿರೋ |
ಏಕಮೇವಾದ್ವಿತೀಂiÀi ನಾರಾಯಣನ ಸಮರಾರಿಲ್ಲಾ ||
ಎಂಬ ಸತ್ಯವಾಕ್ಯ ಶ್ರೀಕೃಷ್ಣವಿಟ್ಠಲನ ಪಾದದಾಣೆಗೂ ಸತ್ಯ | || 5 ||
152. ದರ್ಶನ ಭಾಗ್ಯ ಕರುಣಿಸೋ ಬೇಗ ಶ್ರೀಹರಿಯೇ |
ಸ್ವರ್ಣರತ್ನಾಭರಣ ಕಿರೀಟ ಭೂಷಿತ | || ಪ ||
ಪೂರ್ಣಗುಣಾಖಿಲ ನಿಜಭಕ್ತ ವತ್ಸಲ |
ಸರ್ಪಶಯನ ಲಕ್ಷ್ಮೀಪತೀ ಶ್ರೀವತ್ಸ | || ಅಪ ||
ಸರ್ವೋತ್ತಮ ಸೃಷ್ಟಿ, ಸ್ಥಿತಿ ಲಯ ಕರ್ತ |
ಸರ್ವಜ್ಞ ಸುಜ್ಞಾನ ಪ್ರದಾಯಕ ||
ಸರ್ವ ಪ್ರೇರಕಶ್ಚ ಭೇದ ಭಾವ ವರ್ಜಿತ |
ಸರ್ವವಂದಿತ ಸುಜನ ಪೂರೆವ ||
ಸರ್ವಕಾಲಿಕ ಜಗದ್ರಕ್ಷಕ |
ಸರ್ವವ್ಯಾಪ ವಿಶ್ವಧಾರ್ಯಕ | || 1 ||
ಕರ್ಮಾಕರ್ಮ ಬಂಧಕ ಮೋಚಕ ||
ಸರ್ವಸಮರ್ಥ ದೋಷವಿದೂರ |
ಸರ್ವಕ್ರಿಯಾ ವಿಶೇಷಾಭಿನ್ನ ||
ಸರ್ವಸಂಕಲ್ಪ ಮಹಿಮಾತೀತ |
ಇಚ್ಛಾಮಾತ್ರ ಸರ್ವ ಕಾರ್ಯಸಿದ್ಧಿ | || 2 ||
ಸರ್ವಾವತಾರ ಭೇದ ವಿವರ್ಜಿತ |
ಸವೋತ್ತಮಸ್ಯ ಸದಾ ಪರಮಾಗತಿದಾತಾ ||
ಸರ್ವವೇದಶಾಸ್ತ್ರ ರಚಿತ |
ಸರ್ವಾಕ್ಷರ ಪ್ರತಿಪಾದಿತ ಸದಾ ||
ಗುರ್ವಾದಿ ವಾಯುಬ್ರಹ್ಮನಿಂ ಪೂಜಿತ |
ಮಮ ಶ್ರೀಕೃಷ್ಣವಿಟ್ಠಲ ಪ್ರವರ ಸರ್ವತ್ರ | || 3 ||
153. ಭಕ್ತಿಯ ಅಗಳು ತಿನ್ನುವನೇ ಅಕ್ಷಯ ಫಲದಾತ |
ಮೂರುಹೆಜ್ಜೆ ಭೂಮಿ ಬೇಡುವನೆ ತ್ರಿಲೋಕದೊಡೆಯ ||
ಬೆಣ್ಣೆ ಮೊಸರು ಕದಿಯುವನೇ ಕ್ಷೀರಸಾಗರಶಾಯಿ |
ತಂದೆ, ತಾಯಿ ಬಯಸುವನೇ ಸರ್ವ ಲೋಕಪಾಲಕ ||
ಅಧರ್ಮದಿ ಯುದ್ಧ ಮಾಡುವನೇ ಧರ್ಮಜನಕ |
ಜಾರನೆಂಬುವರೇ ಪತಿತೋದ್ಧಾರಕನಿಗೆ ||
ಕಾಲಯುವನಿಗಂಜುವನೆ ರಾಕ್ಷಸ ಕುಲಾಂತಕ |
ಮಡದಿಯ ಮೋಹವೇ ಮೋಹಿನಿ ರೂಪಧಾರಿಗೆ ||
ದೋಷ ಕಲ್ಪಿಸುವರೇ ನಿರ್ದೋಷನಿಗೆ |
ಅಳಿವುಂಟೇ ಸಂಕಲ್ಪ ಮಾತ್ರದಿ ಸೃಷ್ಟಿ, ಲಯ ಮಾಳ್ಪಗೆ ||
ಭಕ್ತಿಯಿಂ ಕರೆಯೇ ಓಡೋಡಿ ಬರುವ ನಮ್ಮ ಶ್ರೀಕೃಷ್ಣವಿಟ್ಠಲ ||
154. ಆಶಾಪಾಶಾ ಕ್ಲೇಶ ಕಳೆದು ಪದಸಮೀಪದಲ್ಲಿಡು ಪುರುಷೋತ್ತಮದೇವಾ|
ಹರ್ಷಚಿತ್ತನಾಗಿ ನಿನ್ನ ಸದಾ ಸ್ಮರಿಸುವಂತೆ ಮಾಡು ಹೃಷೀಕೇಶ ||
ಬುದ್ಧಿ ಶೂನ್ಯ ಕಳೆದು ದುರ್ಬುದ್ಧಿಯ ಬಿಡಿಸು ಪ್ರೇರಕ ಪ್ರದ್ಯುಮ್ನ |
ಆಧ್ಯಾತ್ಮವಿದ್ಯೆ, ಸತ್ಯ ಜ್ಞಾನ ಕೊಟ್ಟು ನಿತ್ಯ ಕಾಪಾಡು ಅಧೋಕ್ಷಜ ||
ಸದ್ಬುದ್ಧಿ ಕೊಟ್ಟು ಸಂಕಟ ಬಾರದಂತೆ ನೋಡಿಕೋ ಸಂಕರ್ಷಣ |
ಅನಿತ್ಯ ಸಂಸಾರದಲ್ಲಿ ತೊಳಲಾಡುವುದು ತಪ್ಪಿಸಿ ನಿತ್ಯ ಲೋಕದಲ್ಲಿರಿಸು ||
ಶ್ರೀಕೃಷ್ಣವಿಟ್ಠಲ ನೀ ಎನ್ನ ತಂದೆ ಜನುಮ ಜನುಮಕೂ ||
155. ಜಗವ ಮೆಚ್ಚಿಸಲರಿಯೇ ನಾನಿನ್ನ ಮೆಚ್ಚಿಸಲರಿಯೇ ಹರಿ | || ಪ ||
ಅರ್ಚಿಸಲರಿಯೇ ನಿನ್ನಪೂಜಿಸಲರಿಯೇ |
ಸ್ತೋತ್ರ, ವ್ರತವ ಏನೊಂದು ನಾ ಅರಿಯೇ | || 1 ||
ನಿನ್ನ ನಾಮಸ್ಮರಣೆ ಸದಾ ಎನ್ನ ನಾಲಿಗೆಯಲ್ಲಿರಲಿ |
ಮನದ ವೀಣೆಯು ನಿನ್ನ ಸ್ಮøತಿಯ ಝೇಂಕಾರ ಮೀಟಲಿ | || 2 ||
ಧೃಡಭಕುತಿಯ ಕರುಣಿಸು ನಿನ್ನ ಚರಣಕಮಲದಿ |
ಶ್ರೀಕೃಷ್ಣವಿಟ್ಠಲ ಮುಕ್ತಿಪಥವ ತೋರೋ ದಯಾಸಾಗರನೇ | || 3 ||
156. ಕಟ್ಟಿಹಾಕು ಎನ್ನನು ಬಿಟ್ಟುಬಿಡದೇ ನಿನ್ನ ಚರಣದಿ |
ಚಾಟಿ ಏಟಿನಿಂದ ಥಳಿ ಥಳಿಸು ಸದಾ ನಿನ್ನ ಗುಣದಿ ||
ಹೊಟ್ಟೆ ಖಾಲಿಯಾಗದಂತೆ ಉಣಿಸುತಿರು ನಿನ್ನ ನಾಮದಿ |
ಗಂಟು ಭಾರ ಹೂರೆಸು ನಿನ್ನ ಸೇವೆಯ ಪುಣ್ಯಫಲದ ||
ಬಂಟನಾಗಿ ಸ್ವೀಕರಿಸೆನ್ನ ದಾಸನಾಗಿ ಪಡೆದು |
ನೆಂಟ ಶ್ರೀಕೃಷ್ಣವಿಟ್ಠಲ ಕಾಯೆನ್ನೆ ಎಡಬಿಡದೆ | || 1 ||
ಒಂಟಿನಾನಲ್ಲ, ಎನ್ನೊಳಗೆ ನೀನಿರುವಿ ನೆರಳಿನಂದದಿ |
ಒಂಟಿಬಡುಕ ನೀನೇ ನಿನ್ನ ಜೊತೆ ಯಾರಿಲ್ಲ ||
ಬಿಟ್ಟರೆ ಕೈಯೆನ್ನ ಮತ್ತೆ ನಿನ್ನಡೆ ಬರಲಾಗದು |
ಕಂಟಕ ಪ್ರಾಯ ಸುಖವನಳಿಸಿ, ಬಿಂಬ ದರುಶನದ ಹರುಷ ನೀಡು ||
ಇಷ್ಟು ಮಾತ್ರ ಬೇಡಿ ಕೊಂಬೆ ಪ್ರಾಣಪ್ರಿಯನೇ |
ನಿಷ್ಠೆಯಿಂದ ಶ್ರೀಕೃಷ್ಣವಿಟ್ಠಲನ ಪ್ರಸಾದವಾಗಲಿ | || 2 ||
157. ಅತ್ತ ಇತ್ತ ಚಲಿಸದಂತೆ ಚಿತ್ತ ಒಟ್ಟಿಗೆ ನಿಲ್ಲಿಸು |
ಸುತ್ತಮುತ್ತ ತಿರುಗದಂತೆ ಕಟ್ಟಿಹಾಕು ಒಂದೆಡೆ ||
ಕಿತ್ತು ತಿನ್ನುವ ವಿಷಯಸುಖ ಬಿಸುಟಿ ಬೇರೆಡೆ |
ಎತ್ತಿ ಶಿಶುವ ತನ್ನೆಡೆ ತಾಯಿ ಕರೆದು ಕೊಳ್ಳುವಂತೆ ||
ಕೃತಿಯೆ ಎನ್ನುಡಿಯಾಗಲಿ ನೋಟವೇ ನೀನಾಗಲಿ |
ಸತಿ ಲಕುಮಿ ಒಲಿದರೆ ಬಿಟ್ಟಿರದಂತೆ ಎನ್ನನ್ನು ಅಪ್ಪಿಕೋ ||
ಆತ್ಮನಿತ್ಯ ನಾನಾದರೆ ಪರಮಾತ್ಮ ನೀನೆಂದಿಗೂ ಜೊತೆಗಿರು |
ಶ್ರುತಿ ಪೊಗಳುವ ಚೆಲ್ವ ಶ್ರೀಕೃಷ್ಣವಿಟ್ಠಲ ಎನ್ನವನಾಗಿರಲಿ ||
ಶಕ್ತಿ ಎನಗೆ ನೀನೇ, ಮುಕ್ತಿ ಪಥದಿ ನಡೆಸೆಯಾ |
ಅರ್ಥ, ಕಾಮ, ಮೋಕ್ಷ ಕೂಡುವ ಧರ್ಮ ತಿಳುಹಲಾರೆಯಾ ||
ಸತ್ಯ ಭಕ್ತಿಎನ್ನ ಉಸಿರಾಗುವಂತೆ ಮಾಡಲಾರೆಯಾ |
ತತ್ವ ಜ್ಞಾನ ತಿಳಿಸಿ ಜನ್ಮ ಸಾರ್ಥಕ ಮಾಡೆಯಾ ಶ್ರೀಕೃಷ್ಣವಿಟ್ಠಲಾ ||
158. ಸ್ವಾಮಿ ನೀನು, ಎನಗಾದರೂ ದಾನಿ ನಾನೇ ಸದಾ |
ಅಮಿತ ಗುಣಿ ನಿರ್ದೋಷಿಯಾದರೂ ನೀನೆನ್ನ ಹಿಂದೆ ||
ಅಂತಸ್ಥ ನೆಲಸಿದರೂ ಏಕೆ ಮೂಕಸಾಕ್ಷಿಯಾಗಿರುವೆ? |
ಪ್ರಾತ: ಸಾಯಂ ನಿನ್ನ ಪರ ನಾ ಕರ್ಮ ಎಸಗುವೆ ||
ಭಕ್ತಿಯಿಂದ ಸಕಲ ನಿನಗೇ ಸಮರ್ಪಿಸುವೆ |
ಹೇಳಿ ಮಾಡಿ ಮಾಡಿಸಿದ್ದು ಚಾಚೂ ಬಿಡದೆ ಮಾಡುವೆ ||
ನಿಲುವಿಗೂ ಸಿಲುಕದ ವೇದಾಂತ ವೇದ್ಯನೇ |
ನಿಲುಗಡೆ ಇಲ್ಲದ ಜೀವನಚಕ್ರದಿ ತಿರುಗುತಿರುವೆ ||
ಕರುಣೆಯಿಂದ ಒಮ್ಮೆಯಾದರೂ ನಾ ಬೇಡಿದ್ದು ನೀಡಿದ್ದುಂಟೆ |
ಅರಿತಾದರೂ ನಾ ಕೇಳಿದ ಸಾಮಿಪ್ಯ, ಸಾನಿಧ್ಯ ಇತ್ತಿದ್ದುಂಟೆ ||
ಸ್ಮರಣೆ ಸಂತತವಿತ್ತಾದರೂ ನೀ ದಾನಿಯಾಗು, ಶ್ರೀಕೃಷ್ಣವಿಟ್ಠಲಾ ಎನ್ನ ಮುಂದೆ ಸುಳಿದಾಡು ||
159. ಏನು ಆಟ ಆಡಲಿ ನಿನ್ನ ಜೊತೆ ನಾನೇನು ಆಟ ಆಡಿ ಗೆಲ್ಲಲಿ |
ಈಜಾಟ ಮಾಡುವೆನೆಂದರೆ ಮತ್ಸರೂಪಿಯಾಗಿ ಸಕಲರ ದಡ ಸೇರಿಸಿದವನಲ್ಲವೆ ||
ಭಾರ ಎತ್ತುವಾಟ ಎಂದರೆ ಕೂರ್ಮರೂಪದಿ ಮಂದರ ಪೊತ್ತವನಲ್ಲವೆ | ಅಂಜಿಸುವಾಟವಾಡುವೆನೆಂದರೆ ನರಸಿಂಹನಾಗಿ ಹಿರಣ್ಯಕನ ಕೊಂದವನಲ್ಲವೆ ||
ಬೆನ್ನ ಮೇಲೆ ಹೊತ್ತೊಯ್ಯುವ ಆಟವೆಂದರೆ ತೃಣಾವರ್ತನ ಹಣಿಸಿದೆಯಲ್ಲವೆ ||
ತಿನ್ನುವ ಆಟ ಆಡುವನೆಂದರೆ ಖಾಂಡವವನ ಮೆದ್ದವನಲ್ಲವೆ |
ಕಣ್ಣುಮುಚ್ಚಾಟವೆಂದರೆ ಕಣ್ತಪ್ಪಿಸಿ ಹಾಲುಬೆಣ್ಣೆ ಕದ್ದವನಲ್ಲವೆ ||
ಮುಷ್ಟಿ ಯುದ್ಧಾಟವೆಂದರೆ ಮುಷ್ಟಿಕನ ಸದೆ ಬಡೆದವನಲ್ಲವೆ |
ಮೋಜಿನಾಟ ನಾಡುವೆನೆಂದರೆ ಒಂದೇ ಸಮಯಕೆ ಷೋಡಶ ಸಾವಿರ ಹೆಂಡಿರ ಒಡನಾಟ ಸೋಜಿಗವಲ್ಲವೆ ||
ಚೆಂಡಾಟ ಎಂದರೆ ಚೆಂಡಿನ ನೆಪದಿ ಗೋಪಿಕೆಯರ ವಸ್ತ್ರಾಪಹರಿಸಿದವನಲ್ಲವೆ |
ಅಡುಗೆ ಆಟ ಆಡುವೆನೆಂದರೆ ಕಣ್ಣಂಚಲಿ ಖಾದ್ಯವ ಅಕ್ಷಯವಾಗಿಸಿದವನಲ್ಲವೆ ||
ಕಾಮದಾಟವೆಂದರೆ ಗೋಪಿಯರೂಡನೆ ರಾಸಕ್ರೀಡಿಸಿದ ಕಾಮಪಿತನಲ್ಲವೆ |
ನಾಟ್ಯಮಾಡುವೆನೆಂದರೆ ಕಾಳಿಂದಿಫಣೆಲಿ ತಕ್ಕಥೈ ಮಾಡಿದವನಲ್ಲವೆ ||
ಒಂದುಕೈಯಲ್ಲಿ ಸಾಹಸ ಮಾಡುವೆನೆಂದರೆ ಕಿರುಬೆರಳಲಿ ಗಿರಿಯನ್ನೆತ್ತಿದವನಲ್ಲವೆ |
ಕದಿಯುವ ಆಟನಾಡುವೆನೆಂದರೆ ರುಕ್ಮಿಣಿಯಪರಿಹರಿಸಿದ ಚಿತ್ತಚೋರನಲ್ಲವೆ ||
ಸಂಸಾರದಾಟವೆಂದರೆ ಜಗತ್ತನ್ನೆ ಗೊಂಬೆಯಾಟ ಆಡಿಸುವ ಜಗದೀಶನಲ್ಲವೆ ||
ನಿನಗೆ ತಿಳಿಯದಂತಹ ಆಟವನ್ಯಾರು ಆಡಬಲ್ಲರು ಜಗದೊಳು |
ಎನ್ನಂತರಂಗದಿ ನಿಂತು ಆಡಿಸುವ ಶ್ರೀಕೃಷ್ಣವಿಟ್ಠಲ ನಿನ್ನ ಜೊತೆ ಎಂತಹ ಆಟ ||
160. ಹರಿಯ ಪೊಗಳಿ ಪಾಡಿ ಆನಂದಿಸಿ ಸದಾ |
ವಿರಮಿಸದಂತೆ ಅನುಗಾಲವೂ ಸೇವಿಸಿರಿ | || ಪ ||
ಸಾವಿರ ಮುಖದ ಶೇಷ ಇಂದ್ರರಿಗಸಾಧ್ಯದ |
ಸಾವು ಹುಟ್ಟಿಲ್ಲದ ಮುಕ್ತಾಮುಕ್ತರಿಗಾಗದ ||
ನವವಿಧಭಕುತಿಂ ಒಲಿಸಿ ಭಜಿಸಿರಿ |
ಅವನಿಪತಿಯ ತಡೆ ಇಲ್ಲದೆ ಸ್ಮರಿಸಿರಿ | || 1 ||
ಸಂತತ ಸ್ಮರಣೆಯಿಂದೆಮಗೆ ಬಹುಲಾಭ |
ಅಂತ್ಯಾದಿಗಳಿಲ್ಲದವನಿಗೇನದರ ಸಂಬಂಧ ||
ಸಂತೋಷದಿ ಹಿಗ್ಗಿಲ್ಲದವಗೆ ದುಃಖದ ಮಾತಿಲ್ಲಾ |
ಅತಿಶಯ ಭಕ್ತಿಜ್ಞಾನದಿ ದೊರಕುವನೆಮಗೆ | || 2 ||
ಕುಣಿದು ಕುಪ್ಪಳಿಸಿದರೂ ನಾವೆಂದಂತಾಗದು |
ಒಣಮಾತು ಢಂಬಾಚಾರಕೆ ಬಗ್ಗುವನಲ್ಲ ||
ಹಣಾಹಣಿಗೆ ಮಣಿಯಲಾರ ದೋಷವಿದೂರ |
ಸಣ್ಣಕ್ರಿಯೆ ಸಹ ಅವನಿಚ್ಛೆಯಂತೆ ನಡೆಯುವುದು | || 3 ||
ಮಾಡಿ ಮಾಡಿಸುವ ಬೇಡೆಂದರೆ ಬಿಡ |
ನೋಡಿ ನೋಡಿಸುವ ಕಣ್ಣಿಗೆಂದೂ ಕಾಣಿಸ ||
ನುಡಿದು ವದನದಿ ನಿಂತು ನುಡಿಸುವ |
ಒಡೆಯ ಕರ್ತೃ ಶ್ರೀಕೃಷ್ಣವಿಟ್ಠಲ ಅನುಕ್ಷಣವೂ | || 4 ||
161. ಚಿತ್ತವ ಹರಿ ಚರಣದಲಿ ನಿಲ್ಲಿಸೋ |
ಅತ್ತಿತ್ತ ಸರಿದರೂ ಮತ್ತೆ ತಂದು ಪದಕಮಲದಲಿ ನಿಲ್ಲಿಸೋ | || ಪ ||
ಲೌಕಿಕ ವಿಷಯ ಭೋಗಗಳ ಕಂಡೊಡೆ |
ವಿರಕ್ತಿ ಓಡಿ ಪೋಪುವುದು ಕಂಡರಿಯದಂತೆ ||
ಕುತರ್ಕಬಿಡಿಸಿ ಸುಭಕ್ತಿ ನೀಡು ಶಾಶ್ವತದಿ | || 1 ||
ಬಾಲಕನ ತಪ್ಪುಗಳ ಮಾತೆ ಎಣಿಸದ ತೆರದಿ |
ಭಾವುಕನ ಭಾವನೆಗಳಿಗೆ ಬೆಲೆಕೊಡೊ ||
ಬಯಕೆಯ ನೀಗಿಸು ಮೋಚಕ ಶ್ರೀಕೃಷ್ಣವಿಟ್ಠಲ ಜೀಯಾ ||
162. ಸುಂದರ ಈ ಜಗವೆಲ್ಲಾ ಅತೀ ಸುಂದರ |
ಸುಂದರಾಂಗ ಶ್ರೀಕೃಷ್ಣವಿಟ್ಠಲನ ಸೃಷ್ಟಿಯಲಿ | || ಪ ||
ಹರಿವ ನದಿ ಸುಂದರ |
ಸಾಗರದ ತೆರೆ ಅತೀ ಸುಂದರ ||
ಅರಳುವ ಪುಷ್ಪ ಸುಂದರ |
ಬಣ್ಣದ ಚಿಟ್ಟೆ ಅತೀ ಸುಂದರ ||
ಮರ-ಗಿಡದ ಹಸಿರು ಸುಂದರ |
ಉಲಿವ ಹಕ್ಕಿಗಳ ಇಂಚರ ಅತೀ ಸುಂದರ ||
ಸೂರ್ಯೋದಯಸ್ತಮಾನ ಸುಂದರ |
ಚಂದಿರನ ಶೀತಲತೆ ಅತೀಸುಂದರ | || 1 ||
ಮುಗಿಲೆತ್ತರ ಪರ್ವತಗಳ ಸಾಲು ಸುಂದರ |
ಕಾರ್ಮೋಡದ ಕೋಲ್ಮಿಂಚು ಅತೀ ಸುಂದರ |
ಮಗಿಮಗಿಸುವ ಹಸಿಮಣ್ಣಿನ ಪರಿಮಳ ಸುಂದರ |
ಮಳೆನಂತರ ಮೈಚೆಲ್ಲಿನಿಂತ ಕಾಮನಬಿಲ್ಲು ಅತೀ ಸುಂದರ ||
ಮೂಗುತಿ ಮೂಗಿಗೆಸುಂದರ |
ಹಣೆಯಲಿ ರಾರಾಜಿಸುವ ಕುಂಕುಮ ಅತೀಸುಂದರ ||
ಮಗುವಿನ ನಗುವೇ ಸುಂದರ |
ಮುಗ್ಧಯುವತಿಯ ಚೆಲುವೆ ಕಂಗಳು ಅತೀ ಸುಂದರ | || 2 ||
ಪ್ರಕೃತಿ ಸೌಂರ್ಯದ ರಮ್ಯತೆಸುಂದರ |
ಸಾಧನ ಪುರುಷರ ಸತ್ಸಂಗ ಅತೀ ಸುಂದರ |
ಸಂಸ್ಕøತಿ ಬಿಂಬಿಸುವ ವ್ಯಾಸರ ಕೃತಿ ಸುಂದರ |
ಭಗವಂತನ ಭಜನೆ, ನಾಮ ಸಂಕೀರ್ತನೆ ಅತೀ ಸುಂದರ ||
ಮುಕ್ತಿ ಧಾಮಗಳು ಸುಂದರ |
ಯುಕುತಿಯುತವಾದ ಭಕ್ತಿ ಅತೀಸುಂದರ |
ತ್ರಿಕಾಲಜ್ಞನ ಸೃಷ್ಟಿ, ಸ್ಥಿತಿ, ಲಯ ಸುಂದರ |
ಭವಪಾಶ ಕಳೆಯುವ ಶ್ರೀಕೃಷ್ಣವಿಟ್ಠಲ ಅತೀ ಸುಂದರ | || 3 ||
163. ಧ್ಯಾನಕೊಡು ಧ್ಯಾನಕೂಡು ಧ್ಯಾನಕೂಡು ನಿರಂತರ | || ಪ ||
ಮನ ಶುಚಿಮಾಡಿ ನಿನ್ನ ದಿವ್ಯರೂಪ ನಿಲ್ಲಿಸು | || ಅಪ ||
ಕ್ಷಣ ಕ್ಷಣಕೆ ಎನ್ನ ಭಕ್ತಿ ಹೆಚ್ಚುವಂತೆ ಮಾಡು |
ಕಣಕಣದಿ ನಿನ್ನ ನಾಮ ರಸಹರಿವಂತೆ ಮಾಡು ||
ಹಣಕನಕ ಬಂಧುಗಳ ವ್ಯಾಮೋಹ ನೀಗಿಸು |
ಪಣವಾಗಿಡುವೆ ಈ ದೇಹ ನಿನ್ನ ಹೆಸರಲಿ | || 1 ||
ಯಾವ ಭಂಗ ಬರದಿರಲಿ ನಿನ್ನ ಧ್ಯಾನದಿ |
ನವವಿಧ ಭಕುತಿಯೇ ದಾರಿದೀಪವಾಗಲಿ ||
ಭವ್ಯಮಂಟಪ ಎನ್ನ ಹೃದಯವಾಗಲಿ |
ದಿವ್ಯಮೂರುತಿ ಸದಾ ನೆಲಸಲಿ | || 2 ||
ಅಖಂಡ ಧ್ಯಾನ ಪಡೆಯುವ ಸೌಭಾಗ್ಯ ನನ್ನದಾಗಲಿ |
ನಿಖಿಲಾಂಡ ಕೋಟಿಬ್ರಹ್ಮಾಂಡನಾಯಕ ಹರಸಲಿ ||
ಅಖಿಳ ಜೀವರಾಶಿ ಅಂತರ್ಯಾಮಿ ಎನ್ನಲ್ಲೂ ಇರುವ |
ಸಖ ಶ್ರೀಕೃಷ್ಣವಿಟ್ಠಲ ಸದಾ ಎನ್ನ ಅನುಗ್ರಹಿಸಲಿ | || 3 ||
164. ಯೋಗನಿದ್ರೆ ಮಾಡು ಯೋಗಿವಂದ್ಯ ಯೋಗೀಶ |
ಕ್ಷೀರ ಸಾಗರದಿ ಪವಡಿಸಿದ ಸರ್ಪಶಾಯಿಯೇ ಲಾಲಿ ||
ಮೋಹಿನಿರೂಪಿಯೇ, ರಾವಣಾದಿ ಅಸುರಾಂತಕ |
ಒಂದೆಲೆ ಮೇಲೆ ಮಲಗಿದ್ದ ಶಿಶುವೇ ಲಾಲಿ ||
ಪುಟ್ಟ ಬಾಲಕ ದಾನವ ಬೇಡಿ ತ್ರಿಜಗವನಳೆದ |
ಬ್ರಹ್ಮಾಂಡ ಕಟಾಹನೊಡೆದ ತ್ರಿವಿಕ್ರಮಗೆ ಲಾಲಿ ||
ನರಸಿಂಹರೂಪದಿ ಪ್ರಲ್ಹಾದಗಭಯವಿತ್ತ |
ದ್ರೌಪದಿಗೆ ಅಕ್ಷಯಾಂಬರವಿತ್ತವಗೆ ಲಾಲಿ ||
ಪೂತನ ಸಂಹಾರಿ ಕಂಸಾರಿ ವಾಸುದೇವಗೆ |
ಗೋವರ್ಧನಧಾರಿ, ಜ್ಞಾನಬೋಧಿಪ ಪಾರ್ಥಸಾರಥಿಗೆ ಲಾಲಿ ||
ವನಮಾಲೆ ಕೊರಳೊಳು ಶೋಭಿಪ ಶಂಕಚಕ್ರಧಾರಿ |
ಕನಕವಸನದಿ ಮೆರೆವ ಶ್ರೀವತ್ಸಾಂಕಿತಗೆ ಲಾಲಿ ||
ಅಮರಾದಿ ಸುರ ಮುನಿವಂದ್ಯ ಶ್ರೀಸಹಿತ |
ಸುಮ್ಮನೆ ಮಲಗೋ ವೇದವೇದ್ಯ ಶ್ರೀಕೃಷ್ಣವಿಟ್ಠಲಗೆ ಲಾಲಿ ||
165. ಪ್ರಾತಃ ಕಾಲದಿ ಕೇಶವ ಗೋವಿಂದ ಎನ್ನಿ |
ಮಧ್ಯಾಹ್ನದಿ ವಿಷ್ಣು, ಮಧುಸೂದನ ಎನ್ನಿ ||
ಸಾಯಂಕಾಲದಿ ನೃಸಿಂಹ, ಹೃಷಿಕೇಶನೆನೆದು |
ರಾತ್ರಿಯಲಿ ಪದ್ಮನಾಭ ಪದ್ಮಾವತಿ ನೆನೆದು ||
ಹಗಲಿನಿಂದ ಇರುಳು ಇರುಳುನಿಂದ ಹಗಲು |
ಮಾಡಿದ ಸರ್ವ ಕಾರ್ಯಗಳನ್ನು ಶ್ರೀಹರಿಗರ್ಪಿಸಿ ||
ಲಕ್ಷ್ಮೀಪತಿ ಕರುಣಾಳು ಕಣ್ರೆಪ್ಪೆ ತೆರದಿ ಕಾಯ್ವ |
ಸಕಲವೂ ಶ್ರೀಕೃಷ್ಣವಿಟ್ಠಲನ ಪೂಜೆಯೆನ್ನಿ ||
166. ಅಂತರಂಗದಿ ಪೊಳೆವ ಚಿನ್ಮಯ ವಚನಾತೀತ |
ಅತಿಶಕ್ತ ಸುಜೀವಿಗಳ ವೈಕುಂಠದಲ್ಲಿಡುವ |
ಚೇತನ ಪರಮನ ಅಧೀನ ಎನ್ನಕರ, ಶ್ರವಣ, ಚರಣ, ಪ್ರಾಣ |
ಆತ್ಮಸ್ಥ ಪುರುಷ ಶ್ರೀಕೃಷ್ಣವಿಟ್ಠಲ ನಿನಗೆ ನಮೋನಮಃ ||
167. ಮೊರೆ ಇಡಲು ಭಕ್ತರು ಸದಾ ಸಂಕಟದಿ ಕೇಳದೇನು |
ಪಾರುಮಾಡು ಸಂಸಾರ ಭಯ ನೀಗಿಸೆಂದು ಕೇಳಿದರೂ ||
ಸ್ತೋತ್ರ ಮಾಡಲು ನೀ ಒಲಿವೆಂದು ನಂಬಿದರು |
ತ್ವರಿತದಿಂ ಅಭಯವಿತ್ತು ಪರಿಹರಿಸು ಆಪತ್ತು ||
ಪೂರ್ವಕೃತ ಪುಣ್ಯ ನನ್ನದಿರಲು ನೀ ದಯೆ ತೋರುವಿ |
ಕರುಣಿ ನೀನೆಂದು ಹೇಗೆ ನಾ ತಿಳಿಯಲಿ ||
ಪ್ರಾರಬ್ಧವೇನೆ ಇರಲಿ ಶ್ರೀಕೃಷ್ಣವಿಟ್ಠಲ ನಿನ್ನಿಚ್ಛೆ ನನದಾಗಲಿ ||
168. ಪರಮಪುರುಷ ಪರಮೇಶ್ವರ ಪರಾಶಕ್ತಿ ಪರಾತ್ಪರ |
ಪರಶುದ್ಧ ಪರಮಕಾರಣ ಪರಮಪರಿಣಾಮ ಪರೇಶಾಯ ||
ಸರ್ವವೀಕ್ಷಕ ಪ್ರೇಕ್ಷಕ ಸಾಕ್ಷಿ ಸಾಕ್ಷಾತ್ ಸ್ಥಿತ |
ಸರ್ವತ್ರಸ್ಥಿತ ಅಂತರ್ಬಹಿಶ್ಚ ವ್ಯಾಪ್ತ ಅವ್ಯಕ್ತ ||
ಪರಮಚೇತನ ಆದಿ ಬೀಜಾಯ ಪರಂ ಬ್ರಹ್ಮ |
ಪರಮಧಾಮ ಹೃದಿ ಸ್ಥಿತ ಶ್ರೀಕೃಷ್ಣವಿಟ್ಠಲ ನ-ವಿದುಃ ||
169. ಭಕ್ತನ ಕರೆಗೆ ಭಕ್ತಿಯ ಕೂಗಿಗೆ ಭೂಮಿಗೆ ಬರುವ ಭಗವಂತ ಇದು ನಿಶ್ಚಯ |
ಭಕುತಿಗೆ ಒಲಿದು ಬಾಲಕ ಧ್ರುವನ ಕರೆಗೆ ಶ್ರೀಮನ್ನಾರಾಯಣ ಬರಲಿಲ್ಲವೇ ||
ಶಕ್ತಿಯ ಸೆಣಸಾಟದಿ ಸೋತ ಗಜೇಂದ್ರನ
ಆರ್ತಧ್ವನಿಗೆ ಶ್ರೀಹರಿಬರಲಿಲ್ಲವೇ? |
ಭಕ್ತಿಯಿಂ ಬಾಲಕ ಪ್ರಹ್ಲಾದ ಪ್ರಾರ್ಥಿಸೆ
ಕಂಬ ಒಡೆದು ಶ್ರೀನರಸಿಂಹತಾ ಬರಲಿಲ್ಲವೇ? ||
ಮೂಕರೋದನದಿ ಶಿಲೆಯಂತಾದ ಅಹಲ್ಯೆಯ
ಬಳಿಗೆ ಶ್ರೀರಾಮ ತಾ ಬರಲಿಲ್ಲವೇ? ||
ಯಾಕೆ ಇನ್ನೂ ಬರಲಿಲ್ಲವೆಂದು ಕಾಯುತ್ತಿದ್ದ
ಶಬರಿಯ ಕಾಣಲು ಶ್ರೀರಾಮ ತಾ ಬರಲಿಲ್ಲವೇ? |
ದು:ಖಿತ ಅಬಲೆ ದ್ರೌಪದಿ ಶರಣರಾಗಲು
ಶ್ರೀಕೃಷ್ಣವಿಟ್ಠಲ ಬಂದೊದಗಿದನಲ್ಲವೆ? |
ಏಕ ಪರಮಾತ್ಮ ಅನೇಕ ರೂಪದಿ ಭಕ್ತರು
ಕರೆದಲ್ಲಿ ತಾ ಬರುವನೆಂಬುದು ನಿಜವಲ್ಲವೆ? ||
170. ಸರ್ವೇಶ, ಸರ್ವಾಭಿಜ್ಞ, ಸರ್ವದಾತಾ |
ಜೀವಕ್ಕೆ ದೇಹವಿತ್ತು ಸೃಷ್ಟಿಸಿದ ಚಾತುರ್ವಣ್ರ್ಯ ||
ಅವನ ಬುದ್ಧಿಯೇ ಬ್ರಾಹ್ಮಣ ಭುಜಬಲವೇ ಕ್ಷತ್ರಿಯ |
ಅವನುದರವೇ ವೈಶ್ಯ ಸಮರ್ಪಕ ಶಕ್ತಿ ಪ್ರದಾಯಕ ||
ಸರ್ವವಣ್ರ್ಯ ಸೇವೆ ಮಾಳ್ಪ ಕಾಲುಗಳೇ ಶೂದ್ರ |
ಸರ್ವರ ಪರಸ್ಪರ ಅವಲಂಬನ ಸಹಕಾರವೇ ಸುಖ ||
ಜೀವನದಿ ಸಾಧನೆಗನುಕೂಲಕರ ಸಾಧ್ಯ-ಸಾಧನಗಳು |
ಇವೆಲ್ಲಕ್ಕಿಂತ ಅವಶ್ಯಕ ಶ್ರೀಕೃಷ್ಣವಿಟ್ಠಲನ ಅನುಗ್ರಹ ||
ಸರ್ವೇಚ್ಛಾ ಕಾರ್ಯಕಾರಣ ಅವಕಾಶಪ್ರದಾಯಕ ನಮೋ ನಮಃ ||
171. ಶರಣೆಂಬೆ ನಾ ನಿನ್ನ ಸೇರುವ ಪರಿ ಅರಿಯೆನು |
ಮಾರ್ಗವ ತೋರಿ ಪಾರುಗಾಣಿಸೋ ಕೃಪಾಕರನೇ | || ಪ ||
ಬರಿದೇ ಮೂಢ ಭಕ್ತಿಯಲೇನು ಪ್ರಯೋಜನ ಜ್ಞಾನವಿರದೆ |
ಸರಿಯಾಗಿ ನಿನ್ನ ಅನುಗ್ರಹವಿಲ್ಲದೆ ಬದುಕುವುದೆಂತು ||
ತೋರು ದರುಶನ ಎನ್ನೊಳ-ಹೊರಗಿನ ಶಕ್ತಿಯಾಗಿರುವನೇ |
ಪ್ರೇರಕನಾಗಿರುವ ಸಕಲೇಂದ್ರಿಯಗಳ ನಿನ್ನ ಗುರುತಿಸುವುದೆಂತು | || 1 ||
ಪರಮಾತ್ಮ ಹಿರಿಯನೆಂದಷ್ಟೇ ಹೇಳಿದರೆ ಸಾಕೆ? |
ಅರಿಯುವ ಪರಿ ತಿಳಿಯುವುದು ಹೇಗೆ? ||
ಪರಿ ಪರಿಯಲಿ ತಾನೇ ತಿಳಿಸುವ ತನಕ |
ಕವರ್iವ ತೀರಿಸಿ ಮರ್ಮವ ಭೇದಿಸಿ ಬೋಧಿಸುವತನಕ | || 2 ||
ಒಪ್ಪಾಗಿ ತಪ್ಪುಗಳ ಅರಿಯಿಂದ ತರಿದು |
ತಪ್ಪಿಸು ಬಾಧೆಗಳ ಶಂಖದ ಧ್ವನಿಯಿಂದ ||
ಬಪ್ಪ ವಿಘ್ನಗಳ ಗದೆಯಿಂದ ಸದೆಬಡೆದು |
ಸುಪುಷ್ಪ ಪದ್ಮದಂದದಿ ಸುಖವಿತ್ತು ಸಲಹೋ | || 3 ||
ಕ್ಷಮಿಸಿ ಅಗಣಿತ ದುರಿತ ಪಾಪರಾಶಿಯ |
ಶಮ, ದಮಾದಿ ಇತ್ತು ಸರಿಯಾಗಿ ಪರಿಪಾಲಿಸೋ ||
ಸುಮ್ಮಾನದಿ ಅವಿರತ ಭಕ್ತಿಯಿಂದ ಜೀವಿಸಿ |
ಒಮ್ಮನದಿ ಶ್ರೀಕೃಷ್ಣವಿಟ್ಠಲನ ಸದಾ ಸೇವಿಸುವಂತೆ ಮಾಡು | || 4 ||
172. ನಿಗರ್ವಿ ಹರಿಯ, ಗುರುವಿನಿಂದ ತಿಳಿದು ಧನ್ಯನಾಗು |
ಅಗಣಿತ ಗುಣಧಾಮ ನಿಖಿಲಗುಣಪೂರ್ಣನ ||
ಉಗಾಭೋಗ, ಸುಳಾದಿ, ಕೀರ್ತನೆ ಸರ್ವಾಕ್ಷರದಲ್ಲಿರುವನ |
ಹಗೆರಹಿತ ಬಗೆಬಗೆಯ ರೂಪಧಾರಿಯ ಅರಿಯಲು ||
ಗಗನಂ ಗಗನಾಕಾರ ಸಾಗರಕೆ ಸಾಗರ ಸಾಟಿ ಎನಿಪ |
ಜಗಸೃಷ್ಟಿ ಸ್ಥಿತಿ ಲಯ ನಿಯಮನ ಕಾರಣಕರ್ತನ ಭಜಿಸು ||
ನಿಗಮ ವೇದ್ಯ ತದ್ವನಂ(ಸರ್ವವ್ಯಾಪ್ತನ ಭಜಿಸು)ಆಗಮ ಹರಿಕಾರ ಜ್ಞಾನಪೂರ್ಣ |
ಜಾಗು ಮಾಡದೆ ಜಾಗರರಿ ಭವತಾರಕ ಭಗವಂತನೇ ||
ಹೃದ್ಗುಹಾವಾಸಿ ಶ್ರೀಕೃಷ್ಣವಿಟ್ಠಲನೆಂದು ತಿಳಿಯೇ, ಸಕಲವೂ ತಿಳಿದಂತೆ ||
173. ಶ್ರೀಂಗಾರ ಶ್ರೀಲೋಕ ಪೂರ್ಣ ಲೀಲಾ ವಿನೋದಿ |
ಗಂಗಾಜನಕ ನಿರ್ವಿಕಾರಿ ಭಕ್ತಜನ ಪ್ರಿಯ ||
ಯೋಗಿ ವಂದ್ಯ ಸರ್ವತ್ರ ತದಾಕಾರ ಸ್ಥಿತ |
ಸದ್ಗುಣ ಸಾಂದ್ರ ಶ್ರೀಕೃಷ್ಣವಿಟ್ಠಲನ ಭಜಿಸೆ ಒಲಿವಾ ಕಾಣೋ ||
174. ವಾಚಕೆ ಸಿಲುಕದ ಶುಚಿರ್ಭೂತ ನಿಗಮಗೋಚರ |
ಆಚಾರ-ವಿಚಾರವಿಲ್ಲದ ಬುದ್ಧಿಗೆ ನಿಲುಕುವನೆ ||
ಸಂಚಿತಾಗಾಮಿ ಪ್ರಾರಬ್ಧ ಕಳೆಯಲು ಅರ್ಚಿಸಿ |
ಅಚ್ಯುತಾನಂತ ಗೋವಿಂದ ಎನೆ ಶ್ರೀಕೃಷ್ಣವಿಟ್ಠ¯ ಮೆಚ್ಚುವಾ ||
175. ಪ್ರ(ಅ)ಕ್ಷಯ ಫಲದಾತಾ, ಮೋಕ್ಷ ಪ್ರದಾಯಕ ಅಕ್ಷರ ನಾಮಕ ಲಕ್ಷ್ಮೀಶ |
ಲಕ್ಷಣೋಪೇತ ಪುಂಡರಿಕಾಕ್ಷ ಸರ್ವಲೋಕ ಭೋಕ್ತಾರ ||
ಸಾಕ್ಷಿಭೂತ ಸರ್ವತ್ರ ವೀಕ್ಷಿತ ಸರ್ವದಾ ಸರ್ವಶಕ್ತ |
ಸ್ವಕ್ಷ ಸದಾನಂದ ರಕ್ಷಸ್ವಮಾಂ ಶ್ರೀಕೃಷ್ಣವಿಟ್ಠಲ ||
176. ನಿಂದು ಮನದಲಿ, ಮಾಡುವ ಬಯಕೆ ಮೂಡಿಸಿ |
ಬುದ್ಧಿಯಲಿದ್ದು ಬಿಡದೆ ಮಾಡುವ ಛಲ ಮೂಡಿಸಿ ||
ಪಾದದಲ್ಲಿದ್ದು ಅಲ್ಲಿಗೆ ನಡೆದಾಡಿಸಿ ಬಿಡದೆ |
ಮಾಡಿಸಿ ಕರದಿಂದ ಕರ್ಮವ ಅಚ್ಚುಕಟ್ಟುತನದಿ ||
ಮೂಡಿಸಿ ಹೆಮ್ಮೆ, ಅಭಿಮಾನ ಹೃದಯದಿ |
ನಡೆಸಿರುವಿ ನಿನ್ನಿಚ್ಛೆಯಂತೆಯೇ ಸದಾ ||
ಆದರೂ ಯದೃಚ್ಛಾ ಫಲ ಎನಗೇ ಉಣಿಸುವಿ |
ಇದು ಸರಿಯೇನೋ ಇಂದಿರೇಶ ಶ್ರೀಕೃಷ್ಣವಿಟ್ಠಲ ||
ಎಎಎ