ಶ್ರೀ ಕೃಷ್ಣವಿಠ್ಠಲಪದಗುಚ್ಛ 2
ಶ್ರೀ ಮಹಾಲಕ್ಷ್ಮೀ ದೇವಿ
39. ಅನುಗ್ರಹಿಸೆ ಎನ್ನ ಭಾಗ್ಯದೇವತೆಯೇ ಅನುಗ್ರಹಿಸೆ | || ಪ ||
ಕಣ್ಣು ತೆರೆದು ಕ್ಷಣದಿ ಎನ್ನ ನೋಡಿ ಅನುಗ್ರಹಿಸೆ | || ಅಪ ||
ಐಶ್ವರ್ಯ ಲಕ್ಷೀ ಸಿರಿ ಭೂದೇವಿ |
ವಿಶ್ವಾಧಾರನ ಅರ್ಧಾಂಗಿ ಲಕ್ಷಣೆ ||
ದೇಶಕಾಲದಿ ನಿತ್ಯ ಇರುತಿಹ ಸಮನಾ |
ಸೃಷ್ಟಿಕರ್ತನ ವಕ್ಷಸ್ಥಳವಾಸಿ ಅನುಪಮಳೇ | || 1 ||
ಬ್ರಹ್ಮರುದ್ರಾದಿ ವಂದಿತಜಗನ್ಮಾತಾ ಅಂಬಾ |
ಅಹಂ ಮಮಕಾರ ವರ್ಜಿತ ರಮಾ ||
ಸಹನಾಮೂರುತಿ ಶಾಂತಿ ಸ್ವರೂಪ |
ಬಹುರೂಪ ತಳೆದು ಸಲಹುವ ದುರ್ಗೆಯೇ | || 2 ||
ಮಲ್ಲೆಜಾಜಿ ಪಾರಿಜಾತ ಕೇದಿಗೆ |
ಪಲ್ಲವಿಸುವ ಕಮಲ ಸಂಪಿಗೆ ||
ಒಲವಿನಿಂದ ಅರ್ಪಿಸಿ ಪೂಜಿಪೆ |
ನಿಲ್ಲೇ ಮನದಿ ಸದಾ ಹರಿಯೊಡಗೂಡಿ | || 3 ||
ಹಚ್ಚುವೆ ಘೃತ ನಂದಾದೀಪ ನಿರುತದಿ |
ಪಂಚಭಕ್ಷ್ಯ ಪರಮಾನ್ನ ಪಾಯಸ ||
ಪಚ್ಚಕರ್ಪೂರ ವೀಳ್ಯವ ಸಮರ್ಪಿಸುವೆ |
ಮೆಚ್ಚು ಎನ್ನ ಸೇವೆ ಹರಸುತ ತಾಯೆ | || 4 ||
ಸರ್ವತ್ರ ಸರ್ವೇಶನ ಸೇವಿಪ ಶುಭಾಂಗಿ ||
ಸರ್ವ ಶ್ರುತಿಗಳಭಿಮಾನಿ ಸುವಿದ್ಯೆ |
ಅವಿಕಾರಿ ನಿತ್ಯಾವಿಯೋಗಿ ಕನಕವರ್ಣೇ ||
ಸುವಂದ್ಯ ಇಂದಿರೇಶ ಶ್ರೀಕೃಷ್ಣವಿಟ್ಠಲನಪ್ರಿಯೆ | || 5 ||
40. ಧನ್ಯ ಧನ್ಯ ಲೊಕಮಾತೆ, ಸರಸ್ಸಿಜಾಸನೇ |
ಲಕ್ಷ್ಮಿಸಮುದ್ರವಸನೇ, ಶ್ವೇತಾಂಬರಧಾರಿ ||
ಜ್ಞಾನಪ್ರದಾಯಿನಿ, ಸಂತೋಷದಾಯಿನಿ |
ಶುಭದಾ, ಸದಾ ವಂದಿಪೆ ಚರಣದ್ವಯ ||
ನೀಲಕುಂತಳೇ, ಹರಿಣಾಕ್ಷಿಯೇ ಕರುಣಾಮಯಿ |
ಯೋಗಿನಿ, ನಿತ್ಯಾವಿಯೋಗಿನಿ ಚಿರನೂತನೆ ||
ಹರಿ ವಕ್ಷಸ್ಥಲ ವಾಸಿನಿ ಮಹಾಲಕ್ಷ್ಮಿಯೇ |
ಶ್ರೀಕೃಷ್ಣವಿಟ್ಠಲನ ನಿರಂತರ ಸೇವಿಪಳೇ ||
41. ಮಂಗಳೇ, ಸರ್ವಮಂಗಳೆ, ಮನಕಾನಂದವೀವ ರಮಾದೇವಿಯೇ |
ಸಂಗಸುಖ ಬಯಸುವೆ ಸದಾ ಎನ್ನ ಕೈ ಹಿಡಿಯೇ ||
ಇಂದ್ರಿಯ ನಿಗ್ರಹಿಸುವಂತೆ ಒಲುಮೆಯ ತೋರೆ ಇಂದಿರೆಯೇ |
ನಿನ್ನಲ್ಲಿ ಏಕ ಲಕ್ಷ್ಯವಿರುವಂತೆ ಅನುಗ್ರಹಿಸು ಲಕ್ಷ್ಮೀಯೇ ||
ಸುಮನದಿ ಸಂತೋಷ ತೋರೆ ಸರಸಿಜಾಕ್ಷಿಯೇ |
ಸಕಲ ಕಾರ್ಯವ ಜಯಸುವಂತೆ ಮಾಡೆ ಜಲಜಾಕ್ಷಿಯೇ ||
ಶ್ರೀ ಧೀ: ಶಕ್ತಿದಯಪಾಲಿಸೆ ತಾಯೇ ಶ್ರೀವಾರಿಧಿಯೇ |
ಸಂಚಿತ ಕರ್ಮ ಕೊಂಚ ಮಾಡುವಂತೆ ಪೇಳೆ ||
ಕಮಲಾಕ್ಷಿಯೇ, ನಿನ್ನ ಪ್ರಿಯ ಶ್ರೀಕೃಷ್ಣವಿಟ್ಠಲಗೆ ||
42. ಮಾರಮಣನ ಪಾದವ ತೋರೇ ತಾಯೇ ಅಂಬುಜಾಕ್ಷಿಯೇ |
ಪಾರುಗಾಣಿಸು ಭವಸಂಸಾರವ ನೀ ದಯೆದಿ ||
ಸುರಗುರುವಂದ್ಯ ವಾಯು ಬ್ರಹ್ಮ ಸುಪೂಜಿತ |
ಚಾರುಚರಣನ ತವಕದಿ ತೋರೇ ತಾಯೇ | || 1 ||
ಮೂರುಪಾದದಿ ಜಗವನೆಳೆದ ತ್ರಿವಿಕ್ರಮ |
ತೋರಿದ ಮೊದಲ ವಾಮನ ಪುಟ್ಟ ಬಾಲಕನಾಗಿ ||
ಗಿರಿಯನೆತ್ತಿದ ಕಿರುಬೆರಳಲಿ ನಂದಕುಮಾರ |
ಪರಮಾದರದಲಿ ಪಾಡಲು ಒಲಿದು ಬರುವ | || 2 ||
ಮುರುಳಿಯ ನಾದದಿ ಮೋಹಕ ಗೊಳಿಸುವ |
ಜಾರ ಶ್ರೀವೇಣುಲೋಲ ನವನೀತ ಚೋರನ ||
ಎರಗಿ ನಿನ್ನಪಾದಕ್ಕೆ ಬೇಡಿಕೊಂಬೆ ನೀ ಚಿತ್ತಕ್ಕೆ ತಂದು |
ಸಿರಿ ಕೃಷ್ಣವಿಟ್ಠಲನ ಪಾದಪದ್ಮ ಸಮೀಪದಲ್ಲಿಡು ಎನ್ನ | || 3 ||
43. ಮಹಾಸಾಗರದಂತೆ ವಿಶಾಲ ಮನದವಳೇ |
ಮಹಾ ಪರ್ವತಗಳ ಭಾರ ಪೊತ್ತವಳೇ ||
ಸಹಿಸೆನ್ನಪರಾಧ,ಕ್ಷಮಿಸಿ ಸ್ವೀಕರಿಸೆನ್ನ |
ಮಹಾಗುಣಾರ್ಣ ಶ್ರೀಕೃಷ್ಣವಿಟ್ಠಲನರ್ಧಾಂಗಿಯೇ ||
ಊಊಊ
ಶ್ರೀಮದ್ಭಾಗವತ
ಶ್ರೀಮದ್ಭಾಗವತ ರಶ್ಮಿ
44. “ಶ್ರೀ ಮದ್ಭಾಗವತ” ಶ್ರವಣ ನಿಜ ಭಕ್ತಿಗೆ ಸೋಪಾನ |
ಸಮಚಿತ್ತದಿ ಆಲಿಸೇ ದ್ವಾದಶಸ್ಕಂಧ ಮುಕ್ತಿಮಾರ್ಗ ||
ಶ್ರೀ ಮದ್ಭಾಗವತ ಫಲ ಶುಭರಸ ಪುನಃ ಪುನಃ ಸ್ವಾದಿಸೆ |
ಪ್ರಮೇಯ, ಜಗದ್ವ್ಯಾಪಾರ ತಿಳಿವುದು ಶ್ರೀಕೃಷ್ಣವಿಟ್ಠಲನ ದಯದಿ ||
ಪ್ರಥಮ ಸ್ಕಂಧ
ನಾರದ ಮಹರ್ಷಿ ವಿನಂತಿಸೇ ರಚಿಸಿದರು |
ಪುರಾಣ, ಭಾಗವತ ಶ್ರೀ ವ್ಯಾಸ ಮಹರ್ಷಿ ||
ಪುತ್ರ ಶುಕರಿಗೆ ಪ್ರಥಮ ಉಪದೇಶಿಸಿದ್ದು |
ಪರೀಕ್ಷಿತರಾಜಗೆ ಶುಕರು ಅಂತ್ಯಕಾಲದಿ ಬೋಧಿಸಿದರು ||
ಸಂತನಾರದ, ಸನಕಾದಿಗಳ ಸಂದರ್ಶಿಸಿ |
ಭಕ್ತಿ, ಜ್ಞಾನ, ವೈರಾಗ್ಯ, ಭೇಟಿ ಸಂದರ್ಭದಿ ಪ್ರಚಾರಿಸಿದರು ||
ಮುಕ್ತಿ ಪಡೆದ ದುಂಧುಕಾರಿ ಗೋಕರ್ಣ ಮಹಾತ್ಮೆಯಲಿ |
ಸಪ್ತಾಹ ಶ್ರವಣ ವಿಧಾನದಿ ಭಾಗವತ ತಿಳಿಯುತ ||
ಪರೀಕ್ಷಿತ ನೀರಡಿಸಿ ಕೇಳಲು, ಸಮಾಧಿಸ್ಥ ಶಮೀಕ ನೋಡದಿರಲು |
ಬಲು ಕ್ರೋದಧಿ ಸತ್ತಸರ್ಪವನ್ನೆತ್ತಿ ಅಲಂಕರಿಸಿದ ಋಷಿ ಕೊರಳೊಳು ||
ಅಳಲಿನ ದನಿಗೆ ಎಚ್ಚರವಾಗುವುದರಲಿ ರಾಜನಿಗೆ ದುರ್ಮರಣ ಶಾಪವಿತ್ತಿದ್ದ ಗುರುಪುತ್ರ |
ಕಾಲಕೆ ಅಂಜದ ರಾಜ ಪ್ರಾಯೋಪೇಶಕೆ ಸಿದ್ಧನಾದ ||
ತರುಣ ಶುಕಯತಿ ಆಗಮಿಸಿದರಾಗ ಹರಿ ಪ್ರೇರಣೆಯಂತೆ |
ಏಳುದಿನ ಬಿಡದೆ ಹರಿಮಹಾತ್ಮೆ ಕೇಳಿದ ರಾಜ, ಸಂತೋಷದಿ ನಡೆದ ಹರಿಪುರಕೆ ||
ದ್ವಿತಿಯ ಸ್ಕಂಧ
ಎರಡನೇಸ್ಕಂಧದಿ ಪರಮಾತ್ಮನ ರೂಪಧಾರಣೆ |
ಬೇರೆ ದೇವತೆಗಳ ಆರಾಧನೆ ಫಲಬೇರೆ ||
ಅರುಹಿದರು ಚತುಃಶ್ಲೋಕಿ ಭಾಗವತದ ಸಾರ |
ವಿರಾಟ ಪುರುಷನ ಪ್ರಾದುರ್ಭಾವ ವಿಭೂತಿಯ ||
ಪರಮಾತ್ಮನ ವಿವಿಧ ಅವತಾರಗಳಿವೆ ||
ತೃತೀಯ ಸ್ಕಂಧ
ತೃತೀಯ ಸ್ಕಂಧದಿ ನವವಿಧ ಸೃಷ್ಟಿ ಪ್ರಕಾರಗಳು |
ಮೈತ್ರೇಯ-ವಿದುರ ಸಮಾಗಮ, ಯುಗಮನ್ವಂತರ ವಿವರ ||
ಅಂತೇ ಜಯವಿಜಯರ ಶಾಪ, ವರಾಹಾವತಾರ |
ಮಾತೆ ದೇವಹೂತಿ-ಕಪಿಲ ಪರತತ್ತ್ವ ಪ್ರಾಪ್ತಿ ಸಂವಾದ ||
ಭಕ್ತಿ ಪ್ರಬೇಧ, ಪ್ರವೃತ್ತಿ-ನಿವೃತ್ತಿ ಪೇಳಿ ಮುಕ್ತಿಯಿತ್ತಕಥೆ ||
ಚತುರ್ಥ ಸ್ಕಂಧ
ನಾಲ್ಕನೇ ಸ್ಕಂಧದಿ ದಕ್ಷ-ಮಹಾದೇವರ ವಿರೋಧಕಾರಣ |
ಶಂಕರಸತೀ ಯಜ್ಞದಿ ದೇಹತ್ಯಾಗ, ಧ್ರುವ ಚರಿತ್ರೆ ||
ಉತ್ಕಲ, ಅಂಗ, ಪೃಥುಕಥೆ, ರುದ್ರಗೀತೆ |
ಮುಕ್ತಿ ಪಡೆದ ಪ್ರಾಚೇತಸರು, ಪುರಂಜನೋಪಾಖ್ಯಾನವಿದೆ ||
ಸಕಲ ಆಧ್ಯಾತ್ಮಿಕದ ಅರ್ಥ ಅಡಗಿದೆ ಇಲ್ಲಿ ||
ಪಂಚಮ ಸ್ಕಂಧ
ಐದನೇ ಸ್ಕಂಧದಿ ಪ್ರಿಯವೃತ, ಋಷಭರ ಚರಿತೆ |
ಜಡಭರತಾಖ್ಯಾನ, ರಹೂಗಣ ಸಂವಾದ, ಗಯಚರಿತೆ ||
ಇದರಲ್ಲಿದೆ ಭೂಗೋಲ-ಖಗೋಲ, ಶಿಂಶುಮಾರ ವಿಚಾರ |
ಖಂಡಗಳ ವಿವರ ಜೊತೆ ಭವಾಟವಿ ವರ್ಣನೆ ||
ಕಡೆಗಿದೆ ಅಧೋಲೋಕ-ನರಕಗಳ ವರ್ಣನೆ ||
ಷಷ್ಠ ಸ್ಕಂಧ
ಷಷ್ಠಿಸ್ಕಂಧದಿ ಹರಿ ತನ್ನ ಭಕ್ತರ ಪೋಷಣ ಬಗೆ ತಿಳಿಸುವ |
ವಿಷ್ಣುದೂತ-ಯಮಭಟರ ಸಂವಾದವಿದೆ ಅಜಮಿಳನ ಕಥೆಯಲಿ ||
ವಿಶ್ವರೂಪ ಚರಿತೆ, ನಾರಾಯಣವರ್ಮ ಕವಚದ ಮಾಹಿತಿ |
ಶ್ರೇಷ್ಠ ಭಕ್ತ ವೃತ್ರಾಸುರನ ಕಥೆ, ಚಿತ್ರಕೇತುವಿನ ಶಾಪ ||
ಪುಂಸವನ ವ್ರತವಿಧಿ, ಬ್ರಹ್ಮಹತ್ಯಾ ನಿವೃತ್ತಿ, ಮರುತರ ವೃತ್ತಾಂತವಿದೆ ||
ಸಪ್ತಮ ಸ್ಕಂಧ
ಏಳನೇ ಸ್ಕಂಧದಲಿ, ಜಯ-ವಿಜಯರ ಮೂರು ಜನ್ಮಗಳ ವೃತ್ತಾಂತ, ಸುಯಜ್ಞೋಪಾಖ್ಯಾನ |
ಪ್ರಹ್ಲಾದಭಗವನ್ನಿಷ್ಠೆ, ಪಿತಹಿರಣ್ಯಕನ ಅತ್ಯಾಚಾರ ಕಥೆಯಲ್ಲಿದೆ ||
ಕೊಲ್ಲಲು ಹಿರಣ್ಯಕನ ಪ್ರಾದುರ್ಭವಿಸಿದ ನರಸಿಂಹ ಕಂಬದಿಂದ |
ಇಲ್ಲಿ ಹೇಳಿದೆ ಸನಾತನ ಧರ್ಮ, ಯತಿಧರ್ಮ, ಬ್ರಹ್ಮಚರ್ಯ, ವಾನಪ್ರಸ್ಥಗಳಬಗ್ಗೆ ||
ಬಲು ನಿರೂಪಿಸಲಾಗಿದೆ ಗೃಹಸ್ಥಧರ್ಮ, ಲಯ ಚಿಂತನೆ, ಕರ್ಮಜ್ಞಾನಗಳ ||
ಅಷ್ಠಮ ಸ್ಕಂಧ
ಅಷ್ಟಮ ಸ್ಕಂಧದಲ್ಲಿದೆ ಹದಿನಾಲ್ಕು ಮನ್ವಂತರಗಳ ವಿವರ |
ಮೋಕ್ಷ ಪಡೆದ ಗಜೇಂದ್ರೋಪಾಖ್ಯಾನ, ಕ್ಷೀರಸಾಗರ ಮಥನ ||
ವಿಷಪಾನ, ಅಮೃತೋತ್ಪತ್ತಿ, ದೇವಾಸುರ ಸಂಗ್ರಾಮ |
ಲಕ್ಷ್ಮೀನಾರಾಯಣರ ಕಲ್ಯಾಣ, ಅದಿತಿಪುತ್ರ ವಾಮನಾವತಾರ, ಬಲಿ ಉದ್ಧಾರ ||
ಔಷಧೀ, ಬೀಜ, ಸಪ್ತರ್ಷಿಗಳ ಪ್ರಳಯದಿ ರಕ್ಷಿಸಿದ ಮತ್ಸ್ಯಾವತಾರದ ಕಥೆ ||
ನವಮಸ್ಕಂಧ
ಒಂಭತ್ತನೇ ಸ್ಕಂಧದಿ ಬರುವುದು ಸುದ್ಯುಮ್ನ, ಮನುಸುತರೈವರ ಚರಿತೆ |
ನಾಭಾಗ, ಚ್ಯವನ, ಅಂಬರೀಷಾಖ್ಯಾನ, ಮಾಂಧಾತ ||
ಸೌಭರಿ, ಹರಿಶ್ಚಂದ್ರ ಉಪಾಖ್ಯಾನಗಳು, ಸಗರ ಖಟ್ವಾಂಗರ ಕಥೆ |
ನಭದಿಂದ ಭೂಮಿಗೆ ಗಂಗೆಹರಿಸಿದ ಭಗೀರಥ, ರಘು, ನಿಮಿವಂಶಗಾಥಾ ||
ಬಿಂಬಿಸಿದೆ ಶ್ರೀರಾಮ, ಪರಶುರಾಮಾವತಾರ ಅಲ್ಲದೆ ಯದುವಂಶದ ಕೃಷ್ಣಾವತಾರ ಪ್ರಸ್ತಾವನೆ ||
ದಶಮಸ್ಕಂಧ
ದಶಮಸ್ಕಂಧ ಪೂರ್ವಾರ್ಧದಲ್ಲಿದೆ ಕಂಸ ಚರಿತೆ |
ವಸುದೇವ-ದೇವಕಿ ವಿವಾಹ, ಯೋಗ ಮಾಯಾ ಮಹಿಮೆ ||
ಕೃಷ್ಣಾವತಾರ, ಗೋಕುಲ ನಿರ್ಗಮನ, ಬಾಲ ಲೀಲೆಗಳನೇಕ |
ರಾಕ್ಷಸರಾದ ಪೂತನಾ, ಶಕಟಾಸುರಾದಿ ಸಂಹಾರ ಕಥೆ, ಕಾಲೀಂiÀiಮರ್ದನ ||
ಗ್ರೀಷ್ಮಾದಿ ಋತುಗಳವರ್ಣನೆ, ಗೋವರ್ಧನೋದ್ಧಾರ, ಗೋಪಿಗೀತೆ, ರಾಸಲೀಲೆ |
ಕೇಶಿವಧೆ, ಅಕ್ರೂರ ಜೊತೆ ಮಥುರಾಗಮನ, ತ್ರಿವಕ್ರೆ ಉದ್ಧಾರ ||
ಕಂಸವಧೆ, ರಾಮ-ಕೃಷ್ಣರ ಗುರುಕುಲವಾಸ, ಉದ್ಧವ ಗೀತೆ |
ಪೂರ್ವಸ್ಕಂಧ ಕೊನೆಯಾಗಲಿದೆ, ಉತ್ತರಾರ್ಧದಲ್ಲಿದೆ ||
ಜರಾಸಂಧ ಮರಣ, ಸೃಗಾಲವಾಸುದೇವ ವಧೆ, ಪಾಂಡವರ ಕ್ಷೇಮ ವಿಚಾರ |
ದ್ವಾರಕಾ ನಿರ್ಮಾಣ, ಮುಚಕುಂದ ಚರಿತೆ, ಕಿರೀಟ ಪ್ರಾಪ್ತಿ ||
ಶ್ರೀರುಕ್ಮಿಣಿ ಕಲ್ಯಾಣ, ಸ್ಯಮಂತಕಾಖ್ಯಾನ, ಸತ್ಯಭಾಮಾದಿಯರ ಕಲ್ಯಾಣ |
ನರಕಾಸುರ ವಧೆ, ರಾಜಸೂಯಯಾಗ,ಶಿಶುಪಾಲವಧೆ ||
ಶ್ರೀಕೃಷ್ಣ ಗಾರ್ಹಸ್ಥ್ಯಧರ್ಮದರ್ಶ, ಕುರುಕ್ಷೇತ್ರ ಯುದ್ಧ, ಸುದಾಮ ಚರಿತ್ರೆ, ಶ್ರುತಿಗೀತೆ |
ದ್ವಾರಕಾ ಮಹಿಮೆ, ಶ್ರೀ ಕೃಷ್ಣವಿಹಾರ, ದಂತವಕ್ರ ವಧೆ ||
ಏಕಾದಶ ಸ್ಕಂಧ
ಏಕಾದಶ ಸ್ಕಂಧದಲ್ಲಿದೆ ಅವಧೂತಗೀತೆ, ಜಾಯಂತೇಯೋಪಾಖ್ಯಾನ |
ಭಕ್ತರ ಲಕ್ಷಣ, ಜೊತೆ ಭಕ್ತಿ, ಧ್ಯಾನಪ್ರಕಾರ ಯೋಗ್ಯ ಉಪಾಸನಾಕ್ರಮ ||
ಭಿಕ್ಷುಗೀತೆ, ಐಲಗೀತೆ, ಕರ್ಮ, ಜ್ಞಾನ, ಭಕ್ತಿಯೋಗಸಾರ ಇಲ್ಲಿವೆ |
ಪ್ರಕೃತಿ ಬಂಧ-ಮೋಚಕ ನಂತರ ಯದುಕುಲೋಪಸಂಹಾರ ||
ಶ್ರೀಕೃಷ್ಣ ಬೋಧಿಸಿದ, ವ್ಯಾಪ್ತೋಪಾಸನೆಯ ಫಲವೇ ಸಂಸಾರದಿಂದ ಮುಕ್ತಿ |
ಏಕಾಂತ ಭಾಗವತ ಭಕ್ತ ಉದ್ಭವಗೆ ಉಪದೇಶಾನಂತರ ಶ್ರೀಕೃಷ್ಣಪರಂಧಾಮಗಮನ ||
ದ್ವಾದಶ ಸ್ಕಂಧ
ಕಲಿಯುಗ ಲಕ್ಷಣ, ಕಲಿದೋಷದ ಪರಿಹಾರ, ದ್ವಾದಶ ಸ್ಕಂದದಲಿ
ಕಲ್ಪ ಪ್ರಳಯ, ಮಾರ್ಕಂಡೇಯ ಕಥೆ, ಮಾನಸ ಪೂಜೆ ಪ್ರಾಮುಖ್ಯತೆ ||
ಕಳೆದ ಅಜ್ಞಾನ, ಪಡೆದ ಜ್ಞಾನ, ನಿವಾರಿಸಿ ಸರ್ಪಯಾಗ ಮುಕ್ತನಾದ |
ನಾಲ್ಕು ಮುಖದಿಂದ, ನಾಲ್ಕು ವೇದಗಳ ಬೋಧಿಸಿದ ಚರ್ತುಮುಖ ||
ಕೇಳಿದರು ಕಶ್ಯಪಾದಿಋಷಿಗಳು, ಆರು ಪೌರಾಣಿಕರು |
ಪೇಳಿದರು ಶ್ರೀ ಮದ್ಭಾಗವತದ ದಶಲಕ್ಷಣಗಳ ಮಹಾಪುರಾಣ ||
ಕಲಿಯುಗದಿ ಇದನು ತಿಳಿದವ ಜ್ಞಾನೀಯಾಗುವ |
ಒಲಿಸಿಕೊಳ್ಳುವ ಸುಲಭದಿ ಶ್ರೀ ಕೃಷ್ಣವಿಟ್ಠಲನ ದಯೆ ನಿಜದಿ ||
45. ದ್ವಾದಶ ಸ್ಕಂಧಗಳ ಶ್ರೀಮದ್ ಭಾಗವತದ ಸಾರ |
ಇದು ಸಂಕ್ಷೇಪದಿ ತಿಳಿಸಿದ ವೇದಗಳಸಾರ ||
ಮೊದಲ ಸ್ಕಂಧದಿ ದೇಹಾಭಿಮಾನ ಬಿಟ್ಟು ಸಾವಿಗಂಜದೇ ಮೊಕ್ಷಧರ್ಮ ಕಲಿಯಿರಿ |
ಸ್ಕಂಧ ಎರಡರಲ್ಲಿ ಯೋಗ್ಯ ಗುರುಗಳ ಮೂಲಕ ಸಂಸಾರತಾರಕ ಭಗವತ್ಕಥಾಶ್ರವಣ ಮಾಡಿ ||
ಸ್ಕಂಧ ಮೂರರಲ್ಲಿ ತತ್ವ ನಿಶ್ಚಯಿಸಿ, ಶ್ರೀಕಪಿಲ-ದೇವಹೂತಿ ಸಂವಾದದಿ |
ಸ್ಕಂಧ ನಾಲ್ಕರಲ್ಲಿ ತತ್ವನಿಶ್ಚಯವಾಗದಿದ್ದರೆ ದಕ್ಷಾಧ್ವರ ಧ್ವಂಸದಂತೆ ಬಾಧಕವು ||
ಐದರ ಸ್ಕಂಧದಂತೆ ಭೂಗೋಲ, ಖಗೋಲ ವಿಚಾರ ಅರಿತು ಸ್ಥೂಲೋಪಾಸನೇ ಮಾಡು |
ಸ್ಕಂಧ ಆರರಲ್ಲಿ ಉದಾಸಿನದಿ ತಪ್ಪೆಸಗಿದರೆ ಮಹಾನರ್ಥವೆಂದು ವೃತ್ರಾಸುರನ ಕಥೆಯೇ ಸಾಕ್ಷಿ ||
ಸ್ಕಂಧ ಏಳರಲಿ ಭಕ್ತಿಯ ಬಹು ಧಾಡ್ರ್ಯ ಬೆಳಿಸಿ, ಸಾಕ್ಷಿಯಾಗಿ ಪ್ರಲ್ಹಾದ ಹಿರಣ್ಯಕನ ಕಥೆ |
ಸ್ಕಂಧ ಎಂಟರಲ್ಲಿ ಬಿಡದೇ ಪ್ರಯತ್ನದಿ ಶ್ರೀಹರಿಗೇ ಶರಣಾಗಿ ಸ್ತುತಿಸಿ ಗಜೇಂದ್ರನಂತೆ ||
ಸ್ಕಂಧ ಒಂಬತ್ತರಲ್ಲಿ ಹೇಳಿದರು ಬಹುರಾಜರ ವಂಶಾವಳಿ ಭಕ್ತಿಘಟ್ಟ್ಯಾಗಿ ವಿರಕ್ತಿ ಬರಲು |
ಸ್ಕಂಧ ಹತ್ತರಲ್ಲಿ ನಿರ್ವಾಜ್ಯ ಪ್ರೀತಿ-ಭಕ್ತಿ ಮಾಡಿ ಭಗವಂತನೊಲಿಸಿ ಗೋಪಿಕಾಸ್ತ್ರೀಯರಂತೆ ||
ಸ್ಕಂಧ ಹನ್ನೊಂದರಲ್ಲಿ ಭವ ಭಯ ಸಂಸಾರ ದಾಟಲು ಉಪಾಸನೆ ಒಂದೇ ಮಾರ್ಗವೆಂದು ಉದ್ಧವನ ಉಪದೇಶಾಖ್ಯಾನದಲ್ಲಿದೆ |
ದ್ವಾದಶಸ್ಕಂಧದಿ ಗುರುಮುಖೇನ ಉಪದೇಶವೇ ಅಪರೋಕ್ಷ ಕಾರಣವೆಂದು ಮಾರ್ಕಂಡೇಯರ ಉದಾಹರಿಸಿದೆ ||
ಓದಿರಿ ಬಿಡದೇ ನಿತ್ಯ ಉಸಿರಿರುವರೆಗೂ ಜ್ಞಾನ, ಭಕ್ತಿ, ವೈರಾಗ್ಯದ ತಾತ್ಪರ್ಯವೇ ಇದರಲ್ಲಿ
ಶ್ರೀಕೃಷ್ಣವಿಟ್ಠಲನೇ ಒಂದಂಶದಿ ನೆಲೆಸಿದ್ದು ಅನುಗ್ರಹಿಪ ||