ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 2

ಮುಂಡಿಗೆಗಳು

324. ನೀನಿದ್ದರೆ ನಾನಿರುವೆ, ನೀನೆದ್ದರೆ ನಾನೆಲ್ಲಿರುವೆ? |

ನಿನ್ನೊಳು ನಾನಿರುವೆ, ನನ್ನೊಳು ನೀನಿರುವೆ ||

ನನ್ನ ನಿನ್ನ ಸಂಬಂಧ ಬಿಡಿಸಲಾಗದ ನಂಟು |

ಏನೀ ಒಗಟು ಶ್ರೀ ಕೃಷ್ಣವಿಟ್ಠಲಾ ||

ಎಎಎ

325. ಮನುಜ ಮನುಜನಾಗಿರಲು ಎರಡನ್ನು

ಮರೆತು ಎರಡನ್ನು ನೆನಪಿಡು |

(ಮಾಡಿದುಪಕಾರ & ಪಡೆದಅಪಕಾರ) & (ಮೃತ್ಯೂ & ದೇವರು)

ಸ್ವೋನ್ನತಿ ಪಡೆಯಬೇಕೆಂದರೆ ಬಿಡು ಎರಡನ್ನು,

ಹಿಡಿ ಘಟ್ಟ್ಯಾಗಿ ಶ್ರೀಕೃಷ್ಣವಿಟ್ಠಲನ ಪಾದ || (ದುರಭಿಮಾನ & ದುರಾಸೆ)

ಎಎಎ

326. ಮೂರ್ಲೋಕದಿ ಇರುವುದೇ ಮೂರರ

ಮೋಜಿನಾಟ ಹುಟ್ಟು, ಬದುಕು, ಸಾವಿನಾಟ |

ಮರೆಯದೇ ಆಡಿ, ಆಡಿಸುವ

ಮೂರ್ಲೋಕದೊಡೆಯ ಜಗದೋದ್ಧಾರಕ || (ಭೂ, ಭುವ, ಸುವ)

ನರಜನ್ಮದಿ ಪ್ರಾತ:, ಮಧ್ಯಾನ್ಹ:, ಸಾಯಂ-ಕಾರ್ಯ,

ಕಾರಣ, ಕರ್ತೃನ ಅರಿತು |

ಪರಮಾತ್ಮನ ಧ್ಯಾನ, ಪ್ರಾಣಾಗ್ನಿಹೋತ್ರದಿ ಭೋಜನ,

ನಂತರ ದಿನದ ಕರ್ಮಸಮರ್ಪಣೆ ||

ಓಂಕಾರ ರೂಪದಿ ಇರುವುದು ಅವಸ್ಥಾತ್ರ್ರಯನ

ವ್ಯಾಪಾರ ಸತತ ನಡೆವುದು | (ವಿಶ್ವ, ತೈಜಸ, ಪ್ರಾಜ್ಞ)

ಭಕ್ತಿ, ಜ್ಞಾನ, ವೈರಾಗ್ಯಕ್ಕಾಗಿ ಸತತ ಪ್ರಯತ್ನ,

ಸ್ವಯೋಗ್ಯತೆ, ದೇವರ ಕೃಪೆ ಬೇಕು ||

ಸತ್ಕಥಾಶ್ರವಣ, ಸಜ್ಜನ ಸಮಾಗಮ, ಸಮೀಚೀನ ಧ್ಯಾನಕ್ಕೆ

ಅಡ್ಡಿಯಾದಾವು ತ್ರಿವಿಧ ಬಾಧೆಗಳು | (ಆದಿಭೌತಿಕ, ಆಧ್ಯಾತ್ಮ, ಅದಿದೈವಿಕ)

ಸುಖಕೆ ಸಾಮಗ್ರಿ ಆಯುಷ್ಯ, ಆರೋಗ್ಯ, ಐಶ್ವರ್ಯ ದೊರೆತರೂ

ತ್ರಿನಾಮ ಸ್ಮರಿಸಲಿಲ್ಲ || (ಅಚ್ಯುತಾನಂತಗೋವಿಂದ)

ಜಾಗ್ರತ, ಸ್ವಪ್ನ, ಸುಷುಪ್ತಿಯಲ್ಲೇ

ಕಳೆಯಿತು ಬಾಲ್ಯ, ಯೌವ್ವನ, ಮುಪ್ಪು

ಹೋಗಲಿಲ್ಲ ಕ್ರೋಧ, ಲೋಭ, ಮೋಹ,

ಬರಲಿಲ್ಲ ಧಾರಣ, ಧ್ಯಾನ, ಸಮಾಧಿ ||

ಜಗದೊಡೆಯಕೊಟ್ಟ ಮನ, ಬುದ್ಧಿ,

ಇಂದ್ರಿಯ ಸುಧರ್ಮಗಳಾಚರಿಸಲಿಲ್ಲ |

ಸುಗುಣವಂತ, ದೋಷದೂರ, ಸ್ವತಂತ್ರನ

ತಿಳಿಯದಾದೆ ಪರಶುಕ್ಲತ್ರಂiÀi ಅನುಗ್ರಹವಿಲ್ಲದೆ || (ಲಕ್ಷ್ಮೀ, ಬ್ರಹ್ಮ-ವಾಯು, ಸರಸ್ವತಿ-ಭಾರತಿ)

ಸದ್ವೈಷ್ಣವರ ದ್ವೇಷ, ನಿಷಿದ್ಧ ಇಚ್ಛಾ,

ಆತ್ಮ ಪ್ರಶಂಸೆ ಬಿಡಲಾಗದೆ ತೊಳಲಿದೆ |

ಓಡಾಡಿ, ಮಲಗಿ, ಕುಳಿತೇ ಕಳೆಯಿತು ಕಾಲ,

ಮಾಡಲಿಲ್ಲ ದಾನ, ಧರ್ಮ,ತಪವ ||

ಮರೆಯದಿರು ಮೃತ್ಯು, ದೇವರ

ಹಾಗೂ ದೇವರ ಉಪಕಾರಗಳು |

ಗುರುವಾಗಲೀ ದೇಹ ಜ್ಞಾನ, ವಿಜ್ಞಾನ,

ಸುಜ್ಞಾನಗಳ ಉತ್ಪತ್ತಿ ಸ್ಥಾನ || (ಸಂಗಮ)

ತ್ರಿಗುಣಗಳ ಸುಳಿಯಲ್ಲಿ ಅಳೆಯದಾದೆ ಪೋದಾಯುಷ್ಯ ತ್ರಿಕರಣದಿ |

ಜಗದೀಶ್ವರ ಬಿಂಬರೂಪಿ ಶ್ರೀಕೃಷ್ಣವಿಟ್ಠಲನರಿಯದೆ ವ್ಯರ್ಥಹೊಯಿತು ಜನ್ಮವೆಲ್ಲಾ ||

ಎಎಎ

327. ಪಂಚಭೂತಾತ್ಮಕ ಶರೀರದಿ ಪಂಚಭೇದವರಿತು |

ಪಂಚ ಪಂಚ ಅಂಗಗಳಿಂದ ಮಾಳ್ಪಕರ್ಮವ || (ಜ್ಞಾನ, ಕರ್ಮೇಂದ್ರಿಯಗಳು)

ಪಂಚ ಪ್ರಾಣಾಂತರ್ಗತ, ಪಂಚಕೋಶಾಂತರ್ಗತ |

ಪಂಚ ದೇಹದಿ ನಿರ್ವಂಚನದಿ ಕಾಯ್ಪ ಪಂಚರೂಪಿ ||

ಪಂಚಾಯತನ ಶ್ರೀಕೃಷ್ಣವಿಟ್ಠಲಗೆ ಅರ್ಪಿಸಿ ಸುಖಿಯಾಗೋ ||

(ಪಂಚದೇಹದಿ (ಸ್ವರೂಪ, ಲಿಂಗ, ಅವ್ಯಕ್ತ, ಅನಿರುದ್ದ, ಸ್ಥೂಲದೇಹಗಳು) ಮಾಯಾದೇವಿ ಮಾಯೆಯನ್ನು ಅಪಸರಣ ಮಾಡಿಕೊಳ್ಳುವುದೇ ಜೀವನಮುಕ್ತಿ)

ಎಎಎ

328. ಒಂದರಲ್ಲೇ ಇದ್ದು (ಅನ್ನ), ಒಂದರಿಂದಯೈದು |

ಒಂದೇ ಐದಾಗಿ, ಐದರ ಸಂಬಂಧ ಮಾಡಿಸಿ ||

(ಪಂಚಪ್ರಾಣ-ಪಂಚಕೋಶದಲ್ಲಿರುವ ಅನಿರುದ್ಧಾದಿ)

ಐದರ ಫಲ ಆನಂದದಿಂದ ಉಣಬಡಿಸಿ |

ಕೊಡಮಾಡಿದ ಉಪಕಾರ ಮರೆಯಲುಂಟೆ? ||

ಬದ್ಧರ ಬಿಂದಿಗೆ ಸುಜಲದಿ ತುಂಬಿಸಿ |

ಬಿಡದೇ ನಿತ್ಯಸುಖವೀವ ಶ್ರೀಕೃಷ್ಣವಿಟ್ಠಲನ ಕರುಣೆಗೆ ಎಣೆಯುಂಟೆ?||

ಎಎಎ

329. ಆನು ತಾನಲ್ಲ ತಾನ್ಯಾರೆಂದು ಅರಿವಿಲ್ಲ |

ತಾನೇ (ದೇಹ) ತಾನೆಂದು (ಆತ್ಮ) ಹೇಳುವರು ಜಾಣರಲ್ಲ || || ||

ಎರಡನ್ನು ತಾ ತಿಳಿದು ಮಾಡಿಲ್ಲ | (ಪಾಪ ಪುಣ್ಯ)

ಎರಡರ ಫಲ ತನ್ನರಿವಿಂದೇ ಅನುಭವಿಸಬೇಕು ||

ಬೇರೆಯವರಿಗೆ ಕೊಡಲಾಗದು | (ಪಾಪ)

ಎರವಲು ಪಡೆಯಲು ಬಾರದು || (ಪುಣ್ಯ) || 1 ||

ಸಟ್ಟುಗದಂತೆ ಅದ್ದಿದೆಡೆ ತಾನಿದ್ದು |

ಒಟ್ಟಿನಲ್ಲಿ ಪಾಯಸವಾಗಲಿ, ಸಾರಾಗಲಿ ||

ಇಟ್ಟಲ್ಲಿ ಇದ್ದು ರುಚಿ ತಿಳಿಯದಿದ್ದರೂ |

ಕಟ್ಟಕಡೆಗೆ ಅದರ ಲೇಪವಾಗುವುದೇ ಸರಿ || || 2 ||

ಬಂದದ್ದೇಕೆ, ಹೋಗುವುದೆಲ್ಲಿ ಗೊತ್ತಾಗದೆ |

ಹಿಂದೆ-ಇಂದು-ಮುಂದಿನದು ಅರಿವಿಲ್ಲದೆ ||

ಮದಡನಂತೆ ನಾನು, ನನ್ನದು, ನನಗಾಗಿಯೆ |

ಬಿದ್ದು ಎದ್ದರೂ ಬುದ್ದಿ ಬರಲಿಲ್ಲ || || 3 ||

ಅಣು ರೇಣುವಿನಲ್ಲಿರುವವನ ತಿಳಿಯದೇ |

ಮಣ್ಣು, ಹೊನ್ನನ್ನು ಪ್ರೀತಿಸಿ ಅಜರಾಮರಂತೆ || (ತಾನೇ ಸ್ಥಿರವೆಂದು ತಿಳಿದು)

ಹೊಣಗೇಡಿಯಂತೆ ಜನ್ಮದ ಗುರಿ ಅರಿಯದೆ |

ಪ್ರಾಣಿ ಪಶುವಿನಂತೆ ದಿನನೂಕಿ ಬದುಕಿದೆ || || 4 ||

ಬೇಡೆಂದರೆ ಬಿಡದು ಬೇಕೆಂದರೆ ಸಿಗದು |

ಕಡೆಗಣಿಸಿದವರ ಮೇಲಕ್ಕೆತ್ತುವುದು ||

ತುದಿಯಲ್ಲಿದ್ದವರ ಕೆಳಗೆ ದೂಕುವುದು |

ವಿಧಿಯಾಟವಲ್ಲದೆ ನಮ್ಮ ಕ್ಯೆಯ್ಯಲ್ಲಿರುವುದೇ? || || 5 ||

ಶ್ವಾಸದ ಪರಿಮಿತಿ ಪೂರ್ವನಿರ್ಧಾರಿತ |

ಕೋಶ ಕೊಟ್ಟರೂ ಸಿಗದು ಹೆಚ್ಚಿನದು ||

ದೇಶ ಸುತ್ತಿದರೂ ದೇಹದಅದ್ಭುತ ಪರಿ ತಿಳಿಯದು |

ಅಸುಪತಿ ದಯದಿ ಕಾಲತ: ಯೋಗ್ಯತಾನುಸಾರ ಪ್ರಾಪ್ತಿ || || 6 ||

ದೋಷ ದೂರನೂ, ಗುಣ ಪೂರ್ಣನೂ ಆದ |

ಅಂಶಿಯ ಅಂಶ ತಾನು ಅನಾದಿಯಂದರಿತು ||

ಆಶಾ ಪಾಶ ಕ್ಲೇಶ ಕಳೆದು ಪ್ರಯತ್ನದಿ |

ವಿಶುದ್ಧ ಭಾವದಿ ಸದ್ಗುಣಗಳ ಜ್ಞಾನ ಪಡೆಯದೆ || || 7 ||

ಮನ್ನಿಸು ಎನ್ನ ತಪ್ಪೆಂದು ಬೇಡಲು |

ಜ್ಞಾನಿ ಜನುಮ ಮತ್ತೆ ಸಿಗುವುದೆ? ||

ಮನುಜನಾದರೂ ಮುನ್ನ ಮಾಡಿದ್ದೇ ಮಾಡಲಿಕ್ಕಿಲ್ಲವೇ? |

ಇನ್ನಾದರೂ ಆದದ್ದಾಗಲಿ ಶ್ರೀಕೃಷ್ಣವಿಟ್ಠಲ ಸ್ಮರಣೆ ಸಂತತವಿರಲಿ || || 8 ||

ಎಎಎ

330. ಸದಾ, ಸದಾ ಚಿಂತೆ ಜೀವಕೆ ಸದಾ ಸಾದಾ ಚಿಂತೆ | (ಜಗದಿ)

ಬಂದು ಹೋಗುವ ಮಧ್ಯೆ ಚಿಂತೆ ಸಾಗರ || || ||

ಇದ್ದರೂ ಚಿಂತೆ ಇರದಿದ್ದರೂ ಚಿಂತೆ | (ಮಡದಿ ಮಕ್ಕಳು)|

ಬಂದರೂ ಚಿಂತೆ ಬರದಿದ್ದರೂ ಚಿಂತೆ || (ಬಂಧುಗಳು, ಲಾಭ) |

ತಂದರೂ ಚಿಂತೆ ತರದಿದ್ದರೂ ಚಿಂತೆ | (ಧನ, ಕನಕ) |

ಹೋದರೂ ಚಿಂತೆ ಹೋಗದಿದ್ದರೂ ಚಿಂತೆ || (ಸಮಯ) || 1 ||

ಕೊಂದರೂ ಚಿಂತೆ ಕೊಲ್ಲದಿದ್ದರೂ ಚಿಂತೆ | (ಬಾಂಧವ್ಯ)

ನೊಂದರೂ ಚಿಂತೆ ನೋಯದಿದ್ದರೂ ಚಿಂತೆ || (ಮನೋವಿರುದ್ದವಾದಾಗ)

ಉದಾರಿಯಾದರೂ ಚಿಂತೆ ಆಗದಿದ್ದರೂ ಚಿಂತೆ | (ಸ್ವಾರ್ಥನಿಸ್ವಾರ್ಥ)

ಬಂದಾಗಲೂ ಚಿಂತೆ ಹೋದಾಗಲೂ ಚಿಂತೆ || (ಸುಖ-ದು:) || 2 ||

ಬೇಡಿದರೂ ಚಿಂತೆ ಬೇಡದಿದ್ದರೂ ಚಿಂತೆ | (ಆಸೆ-ನಿರಾಸೆ)

ಹೊಡೆದರೂ ಚಿಂತೆ ಹೊಡೆಯದಿದ್ದರೂ ಚಿಂತೆ || (ಅಹಂ, ಮಮ, ಕಾಮ)

ಮಾಡಿದರೂ ಚಿಂತೆ ಮಾಡದಿದ್ದರೂ ಚಿಂತೆ | (ದಾನ, ಧರ್ಮ, ಕರ್ಮ)

ಕೊಂಡರೂ ಚಿಂತೆ ಕೊಳ್ಳದಿದ್ದಿರೂ ಚಿಂತೆ || (ಬೇರೆಯವರ ಒಡನಾಟ) ||3||

ಸದ್ಗುರು ಪಾದ ನಂಬಿ ಸಾಧನೆ ಮಾರ್ಗದಿಂದಿದ್ದು |

ಬಿದ್ದು ಎದ್ದು ಹೋಗುವ ಮುನ್ನ ಚಿನ್ಮಯಮೂರುತಿ ||

ಉದ್ಧಾರಕರ್ತ ನಮ್ಮ ಶ್ರೀಕೃಷ್ಣವಿಟ್ಠಲನೇ ಗತಿ |

ಎಂದಿಗೂ ಒಂದೇಮನದಿ ಧ್ಯಾನಿಸಿ ಸಂಸಾರಚಿಂತೆ ತಾರಿಸಿ | || 4 ||

ಎಎಎ

331. ಒಬ್ಬನಾಗಿ ಬಂದಿ ಒಬ್ಬನಾಗಿ ಇದ್ದು

ತಬ್ಬಿಬ್ಬು ಸಂಸಾರದಿ ಗಬ್ಬೇರದಂತೆ ತೂಗಿಸಿ ||

ಕೊಬ್ಬೇರಿಸದೆ ಹಬ್ಬದಂತಿದ್ದು ಎಲ್ಲ ಬಿಟ್ಟು |

ಒಬ್ಬನೇ ಹೋಗುವಾಗ ಪರಿತಪಿಸದೆ ||

ಜರ್ಬಾಗಿ ದರ್ಪದಿ ಪಯಣಿಸು ಶ್ರೀಕೃಷ್ಣವಿಟ್ಠಲ ಜೊತೆಯಲಿರುವ ||

ಎಎಎ

332. ಓಡೋಡಿ ಬರುವ ಭಕ್ತವತ್ಸಲ ಸಕಲರನುದ್ಧರಿಸಲು | || ||

ನೋಡದೆ ಸಮಯ ತ್ವರಿತದಿ ಧಾವಿಸಿ ಬರುವ ದೇವ || || ಅಪ ||

ಪುಟ್ಟ ಬಾಲಕನಿರಲಿ (ಧ್ರುವ), ದೀನಾರ್ತಪ್ರಾಣಿಇರಲಿ | (ಆನೆ)

ಕಷ್ಟದಲ್ಲಿರಲಿ(ದ್ರೌಪದಿ), ಶಾಪಿತಳಾಗಿರಲಿ || (ಅಹಲ್ಯ)

ಇಷ್ಟದಿ ಭಕ್ತಿಯಿಂದ ದಾರಿ ಕಾಯ್ದಿರಲಿ | (ಶಬರಿ) || 1 ||

ಬಡವನಿರಲಿ (ಸುದಾಮ), ಸಖ-ಸಖಿಯಾಗಿರಲಿ || (ಅರ್ಜುನ & ಗೋಪಿಕೆ)

ಭಂಡ ಬಲ್ಲಿದವನಿರಲಿ(ಪ್ರಲ್ಹಾದ), ಅಸುರನಿರಲಿ | (ಬಲಿ)

ಬಿಡದೆ ಸಲಹುವ ಅವರಿದ್ದಲ್ಲಿಗೆ ಪೋಗಿ || || 2 ||

ತ್ರಿವಕ್ರಳಿರಲಿ, ಜ್ಞಾನಾರ್ತಿ ಇರಲಿ | (ಉದ್ಭವ)

ಈವ ಆಭಯ ದು:ಖಭಂಜಕ ||

ಕಾವ ಸರ್ವದಾ ನಮ್ಮ ಶ್ರೀಕೃಷ್ಣವಿಟ್ಠಲ ಭೇದವೆಣಿಸದೆ ||

ಎಎಎ

333. ಮೂರಕ್ಷರದಿಂ ನೆಲಸಿಹಓಂಕಾರಾತ್ಮನೆ |

ಮೂರುಪಾದ ಮಂತ್ರ ರೂಪನೆ ||

ಮೂರು ವೇದ ಪ್ರತಿಪಾದ್ಯನೆ |

ಮೂರು ಲೋಕಗಳ ಒಡೆಯನೆ ||

ಮೂರು ಕಾಲ, ಗುಣತ: ದೇಶತ: ನೆಲಸಿಹನೆ |

ಮೂರು ರೂಪಾತ್ಮಕ ಗಂಗಾ ಜನಕನೆ ||

ಮೂರು ಕಾರ್ಯಗಳ ಮಾಳ್ಪನೆ |

ಮೂರು ನಾಡಿಗಳಲ್ಲಿ ಗಮಿಸುವ ದೈವನೆ ||

ಮೂರು ಅವಸ್ಥಾ ಕೊಡುವ ಸ್ವಾಮೀಯೆ |

ಕ್ಷರಾಕ್ಷರಗಳ ನಿಯಾಮಕನೆ ||

ಪರಾಕ್ರಮಿ, ಜ್ಞಾನಿ ಗುಣಪೂರ್ಣ ಚಿದಾನಂದ |

ಶರೀರಿ ಸರ್ವಬಿಂಬಸ್ಥ ಶ್ರೀಕೃಷ್ಣವಿಟ್ಠಲೆನ್ನ ಪೊರೆಯೋ ಕರುಣದಿ ||

ಎಎಎ

334. ಒಳಗಿದ್ದದ್ದೇ ಹೊರಗಿದೆ, ಹೊರಗಿದ್ದದ್ದೇ ಅತಿ ಹೊರಗಿದೆ | (ಪಿಂಡಾಂಡ, ಬ್ರಹ್ಮಾಂಡ)

ಕೆಳಗಿದ್ದದ್ದೇ ಮೇಲೆ ಇದೆ, ಮೇಲಿದ್ದದ್ದೇ ಸುತ್ತಲೂ ಇದೆ || (ಪರಮಾತ್ಮ)

ಒಳ್ಳೆಯದು-ಕೆಟ್ಟದ್ದು ತಿಳಿಸುವ ಶಕ್ತಿ ಅದಕಿದೆ | (ಪಾಪ-ಪುಣ್ಯ)

ಕೊಳೆಯನ್ನು ತೊಳೆದು ಶುಭ್ರ ಮಾಡುವುದು || (ಸರ್ವಶಕ್ತ)

ತಿಳಿವು ನೀಡಿ, ತಿದ್ದಿ, ಒಳ್ಳೆಯ ದಾರಿ ತೊರುವುದು | (ಸಾಧನೆಮಾರ್ಗ)

ತಿಳಿಯದಿದ್ದರೆ ಹೊರಳಿ-ಮರಳಿ ಯತ್ನ ಮಾಡಿಸುವುದು || (ಗುರುಮುಖದಿ)

ಕೇಳದಿದ್ದರೆ ತುಳಿದು-ಕೆಡವಿ ಮತ್ತೆ ಕಷ್ಟಪಡಿಸುವುದು | (ಸಂಸಾರದಿ)

ಕೇಳಿದರೆ ಒಳ್ಳೇ ಮಾರ್ಗ ತೋರಿ ಮೇಲೆ ಮೇಲೇರಿಸುವುದು || (ಜ್ಞಾನದಿಂದ)

ತೊಳೆಯುವುದು ಒಳಗಿನ ಕೊಳೆ ಸ್ವಲ್ಪವೂ ಬಿಡದೆ | (ಲಿಂಗಭಂಗ)

ಹೊಳೆಯುವುದು ಶಾಶ್ವತದಿ ಸ್ವಯೋಗ್ಯತಾನುಸಾರದಿ || (ಮುಕ್ತಿಯಲಿ)

ತಿಳಿದು ಇದನು ಬಾಳಿದರೆ ಆಗುವುದು ಜನುಮ ಸಾರ್ಥಕ |

ಒಳಿತು ಹಾರೈಸುವ ಸದಾ ಸರ್ವೇಶ ಶ್ರೀಕೃಷ್ಣವಿಟ್ಠಲ ||

ಎಎಎ

335. ಕದವೇ ಇಲ್ಲ ಆದರೂ ಕದ ತೆರೆ ಎನ್ನುವೆ | (ಕಿವಿ)

ಪದವೇ ಇಲ್ಲ ಆದರೂ ಪದ ಪೇಳಿಸು || (ಶಬ್ದಾತೀತ, ನಾಮೋಚ್ಚಾರ)

ನೋಡದ ಕಂಗಳು ನೋಡುವಂತೆ ಮಾಡು | (ಅದೃಷ್ಟ, ಪರಮಾತ್ಮನ)

ಮಾಡದ ಕೈಗಳು ಮಾಡುವಂತೆ ಮಾಡು || (ನಾಹಂ ಕರ್ತಾ, ಕೈಂಕರ್ಯ)

ಎಂದೂ ಪೋಗದ ಕಾಲುಗಳು ಪೋಗುವಂತಾಗಲಿ |

ಬುದ್ಧಿ, ಮನದಿ ಸ್ಥಿರದಿ ನೆಲಸುವಂತಾಗಲಿ || (ಚಂಚಲತೆ ನೀಗಿ ನಿಶ್ಚಯವಾಗಲಿ)

ಉದ್ಧಾರ ಕರ್ತ ಎನ್ನ ಸ್ವಾಮಿ ಶ್ರೀಕೃಷ್ಣವಿಟ್ಠಲನ ದಯದಿ ||

ಎಎಎ

336. ವಸುವಿನಿಂದ ಜನಿಸಿ, ವಸುವನು ಪಾಲಿಸಿದ |

ವಸುಧೀಶ ಶ್ರೀಕೃಷ್ಣವಿಟ್ಠಲ ವಾಸಿಸೆನ್ನ ಹೃನ್ಮಂದಿರದಿ ||

ಎಎಎ

337. ಸುಂದರಾಂಗ, ಸುಂದರನ ಒಲಿಸುವ ದಾರಿಯೊಂದೇ |

ಒಂದೊಂದ್ಲ ಒಂದು ಮೂಲ ನಾರಾಯಣ ರೂಪ ಸ್ಮರಣೆ ||

ಒಂದೆರಡ್ಲ ಎರಡು ಇಹ-ಪರದೊಳು |

ಒಂದ ಮೂರ್ಲ ಮೂರು ಶ್ರೀ, ಭೂ, ದುರ್ಗಾ ಸಹಿತ ||

ಒಂದನಾಕ್ಲ ನಾಲ್ಕು ಬಾಲ್ಯ, ಕೌಮಾರ, ಯೌವ್ವನ, ವೃದ್ಧ್ಯಾಪ್ಯದಿ |

ಒಂದ ಐದ್ಲ ಐದು ಪಂಚತತ್ವ, ತಾರತಮ್ಯವರಿತು ||

ಒಂದ ಆರ್ಲ ಆರು ಅರಿಷಡ್ವೈರಿಗಳ ತರಿದು |

ಒಂದು ಏಳ್ಲ ಏಳು ಸಪ್ತಧಾತುಗಳಲ್ಲೂ ಇರುವಂತೆ ||

ಒಂದ ಎಂಟ್ಲ ಎಂಟ ಅಷ್ಟಮದಗಳ ಬಿಟ್ಟು |

ಒಂದ ಒಂಬತ್ಲ ಒಂಬತ್ತು ನವವಿಧ ಭಕುತಿಯಲಿ ಭಜಿಸಿ ||

ಒಂದು ಹತ್ಲ ಹತ್ತು ದಶಾವತಾರ ತಿಳಿದು ಪೂರ್ಣಜ್ಞಾನಿಯಾಗಿ |

ಒಂದು ಹನ್ನೊಂದ್ಲ ಹನ್ನೊಂದು ಏಕಾದಶೇಂದ್ರಿಯ ವ್ಯಾಪಾರವರಿತು ||

ಒಂದು ಹನ್ನೆರಡ್ಲ ಹನ್ನೆರಡು ದ್ವಾದಶ ಪುಂಡ್ರ ಧರಿಸಿ ಮೆರೆದರೆ |

ಛಂದದಿ ಬಂದು ಶ್ರೀಕೃಷ್ಣವಿಟ್ಠಲ ಮನದಲಿ ಸ್ಥಿರದಿ ನೆಲೆಸುವ ||

ಎಎಎ

338. ಮಾಡಿದೆ (ದೇಹ), ನೀಡಿದೆ (ಜೀವನ) |

ಕಾಡಿದೆ (ಆಸೆಪೂರೈಕೆಗೆ), ಬೇಡಿದೆ (ಬರದಿದ್ದುದಕೆ) ||

ನೋಡಿದೆ (ಜಗವ), ಆಡಿದೆ (ಬಾಳಿದೆ) |

ಬಾಡಿದೆ (ಮಾನಸಿಕ-ದೈಹಿಕಕಷ್ಟದಿ), ಬೆಂಡಾದೆ (ಸೋತು) ||

ಚೆಂಡಾದೆ (ಯೋನಿಯಿಂದಯೋನಿಗೆ ತಿರುಗಿ), ಬಿಡದೆ (ಸದಾ) |

ಕಾಡದೆ (ತಿರುಗಿಸದೆ), ಒಡೆದು (ಲಿಂಗದೇಹ) ||

ನಾಡಲಿ (ಶಾಶ್ವತನೆಲೆ), ಕೂಡಿಸು (ಮುಕ್ತರೊಂದಿಗೆ ಸೇರಿಸು) |

ಒಡೆಯಾ ಶ್ರೀಕೃಷ್ಣವಿಟ್ಠಲ ಬೇಡುವೆ ಇದೊಂದೇ ||

ಎಎಎ

339. ಉಭಯ ತಿಳಿದವಗೆ ಭಯವಿಲ್ಲ || ಸರ್ವತ್ರ | || ||

ಉಭಯ ಶಕ್ತಿಗಳು ಪರನ | (ಅಚಿಂತ್ಯ-ವಿಶೇಷ)

ಉಭಯ ರೂಪಗಳು ಪರನ || (ವ್ಯಕ್ತ-ಅವ್ಯಕ್ತ)

ಉಭಯ ಲೋಕಗಳು ಸುಖಕೆ | (ಇಹ-ಪರ)

ಉಭಯ ವ್ಯಾಪ್ತ ಪರಮಾತ್ಮ || (ಬ್ರಹ್ಮಾಂಡ-ಪಿಂಡಾಡ) || 1 ||

ಉಭಯ ವಸ್ತುಗಳು | (ನಿತ್ಯ-ಅನಿತ್ಯ)

ಉಭಯ ಸೃಷ್ಟಿಯನು || (ಜೀವ-ಜಡ)

ಉಭಯ ನಂಬಿಕೆಗಳು | (ಆಸ್ತಿಕ-ನಾಸ್ತಿಕ)

ಉಭಯ ಉಪಾಸನೆಗಳು || (ಸಗುಣ-ನಿರ್ಗುಣ) || 2 ||

ಉಭಯ ಪಂಥಗಳು | (ದೈತ-ಅದೈತ)

ಉಭಯ ದೇಹಗಳು || (ಪ್ರಾಕೃತ-ಅಪ್ರಾಕೃತ)

ಉಭಯ ಅವಸ್ಥೆ ಜೀವಿಗೆ | (ಮುಕ್ತ-ಅಮುಕ್ತ)

ಉಭಯ ಮೃತ್ಯು ಮಾರ್ಗ || (ದೇವ-ಪಿತೃ) || 3 ||

ಉಭಯ ಸ್ಥಿತಿ ಜೀವನದಿ | (ವಿದ್ಯೆ-ಅವಿದ್ಯೆ)

ಉಭಯ ಪ್ರಸಾದ ಅವಶ್ಯ || (ಗುರು-ಹರಿ)

ಉಭಯ ಗುಣಗಳು | (ಭಿನ್ನ-ಅಭಿನ್ನ)

ಉಭಯ ಸಾನಿಧ್ಯ ಅಧ್ಯಾತ್ಮದಿ ||

ಶ್ರೀಭಾರತೀಶ ಅಂತರ್ಗತ ಶ್ರೀಕೃಷ್ಣವಿಟ್ಠಲ ನಮ: ||

ಎಎಎ

340. ನನಗೆ(ಅತ್ಮ) ನಾನೇ(ದೇಹ)ಆಶ್ರಯ ಎಂಬಂತೆ ಕರ್ಮವುಂಬುವಾಗ |

ನನಗೆ(ಜೀವ)ನೀನೇ(ದೇವ)ಆಶ್ರಯ ಸಾಧನದಿ ಅನವರತ ||

ನನ್ನೀ ಜೀವನದಿ ಸುಖಭೋಗ ಉಣುವಾಗ |

ನನ್ನ ಕಾಲನು ಕಾಲನದೂತರ್ಹಿಡಿದು ಎಳೆವಾಗ ತಿಳಿದು ||

ನಿನ್ನ ಕೂಗಿ ಕರೆಯುವಂತೆ ಜ್ಞಾನವಿತ್ತು ಸಲಹೋ |

ಬನ್ನ ಬವಣೆಗೆ ಸಿಲುಕಿ ಸೊರಗಿಕೊರಗದಂತೆ ಮಾಡದೆ ||

ಚೆನ್ನ ಶ್ರೀಕೃಷ್ಣವಿಟ್ಠಲ ಎನ್ನನ್ನೆತ್ತಿ ಉದ್ಧರಿಸೋ ಕಾಲಾಶ್ರಯನೇ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು