ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 2

ಶ್ರೀ ಪಾಂಡುರಂಗ ವಿಠ್ಠಲ

105. ಚಂದ್ರಭಾಗಾ ತೀರದಿ ಇಟ್ಟಿಗೆ ಮೇಲೆ ನಿಂತವನೇ | || ||

ದೊಡ್ಡ ಭಕ್ತರು ಬರುವುದು

ಎದುರು ನೋಡುತಿರುವೆಯಾ || || ಅಪ ||

ದೊಡ್ಡ ನಾಮಧಾರಿ, ಪಾಂಚಜನ್ಯ ಕರದಿ ಧರಿಸಿ |

ಲಂಡ ಪಿತಾಂಬರಉಟ್ಟು ಚಿಕ್ಕ ಬಾಲಕನಂದದಿ ||

ಮುದ್ದು ಮುಖದಿ ಭಕ್ತರ ಮೋಡಿ ಮಾಡುತಿರುವೆಯಾ | || 1 ||

ಪಂಢರಪುರದ ಪ್ರಸಿದ್ಧನೇ ಭಕ್ತರಿಗೆ ಅಂಕಿತ ಕೊಡುವವನೇ |

ಕೊಡಿಸಿ ಗುರುಗಳಿಂದೆನಗೆಶ್ರೀಕೃಷ್ಣವಿಟ್ಠಲವೆಂಬೋ ಅಂಕಿತ |

ಮುಂದೆ ದಾರಿ ತೋರೋ ದೀನ, ಭಕ್ತಜನರೋದ್ಧಾರಿಯೇ || || 2 ||

ಶುದ್ಧ ಮಾಡಿ ಎನ್ನ ಹೃದಯದಿ ಸದಾ ನೀ ನೆಲಸು |

ಒಂದೇ ಮನದಿ ನಿರುತ ನಿನ್ನ ನಾಮ ಭಜಿಸುವಂತೆ ಮಾಡು ||

ತಂದಿರಿಸಿದ ಮೇಲೆ ತಿರುಗಿ ನೋಡದಿರುವುದು ನ್ಯಾಯವೇ? | || 3 ||

ಬಂಧು ನೀನೇ ಪ್ರತಿ ಜನುಮಕೂ ಕೈ ಬಿಡದಿರು |

ಹಾದಿ ತಿಳಿಯದೇ ಭವಾಟವಿಯಲಿ ಹೊಕ್ಕಿಸಿರುವೆ |

ಬಿಡದೆ ನೀನೇ ದಯಪಾಲಿಸು ಜ್ಞಾನ,ಭಕ್ತಿ ಪ್ರತಿ ಜನುಮಕೂ ||

ಉದ್ಧರಿಸೆನ್ನ ಪರಮಕೃಪಾಲು ನಿನ್ನದೇ ಹೊಣೆ ಶ್ರೀಕೃಷ್ಣವಿಟ್ಠಲ || || 4 ||

ಎಎಎ

106. ವಿಟ್ಠಲ, ವಿಟ್ಠಲ ಶ್ರೀಕೃಷ್ಣ ವಿಟ್ಠಲ |

ವಿಟ್ಠಲನೆಂದರೂ ನೀನೇ, ಶ್ರೀಕೃಷ್ಣನೆಂದರೂ ನೀನೇ ||

ಉಡುಪಿಲಿ ನಿಂತವ ನೀನೇ,

ಪಂಢರಿಯಲ್ಲಿರುವವ ನೀನೇ |

ಒಂದೇ ಕೈ ಕಟಿಯಲ್ಲಿಟ್ಟಿರುವವ ನೀನೇ,

ಎರಡು ಕರ ಕಟಿಯಲ್ಲಿಟ್ಟಿರುವವನು ನೀನೇ ||

ಇಕ್ಷುರಸ ನಿನ್ನ ನಾಮ ಕೃಷ್ಣ, ಜೇನು ತುಪ್ಪದ ರುಚಿ ನಿನ್ನ ನಾಮ ವಿಟ್ಠಲ |

ಅಕ್ಷಮಾಲೆ ಸಾಲದು ನಿನ್ನ ಮನಸಾ ಕೊಂಡಾಡಲು ||

ಮಧುರತಮ ನಾಮದಿ ನಾಮಾಮೃತ ನಾಮ ಶ್ರೀಕೃಷ್ಣವಿಟ್ಠಲ |

ಬುದ್ಧಿಯಿಂ ಮನದಿ ಜಪಸಿಲು, ಹೃದಯದಿ ಅಪ್ಯಾಯ ಮಾನ ||

ಎಎಎ

107. ಚೆಳ್ಳಂ ಚೆಳ್ಳಂ ಚೆಳ್ಳಂ ಎಂದು ತಾಳಹಾಕುತ್ತಾ ರುಕ್ಮಿಣಿವಲ್ಲಭನ ಪಾಡಿರೊ| ||||

ಘಿಲ ಘಿಲ ಘಿಲ ಎಂದು ಗೆಜ್ಜೆ ಕಟ್ಟಿ ಲಜ್ಜೆ ಬಿಟ್ಟು ಹೆಜ್ಜೆ ಹಾಕಿರೊ ||

ಝಲ್ ಝಲ್ ಝಲ್ ಎಂದು ಝಲ್ಲರಿ ಬಾರಿಸಿ ನಾದವ ನುಡಿಸಿರೋ |

ಜುಳು ಜುಳು ಜುಳು ಎಂದು ಹರಿವ ಚಂದ್ರಭಾಗಾ ನದಿ ತೀರದಿ |

ಬಲು ಬಲು ಬಲು ಸೋಜಿಗದಿ ನಿಂತ ಪಂಢರಿರಾಯನ ನೋಡಿರೋ ||

ಕಲ ಕಲ ಕಲ ಮಾಡುವ ಭಕ್ತರ ಭಕ್ತಿಯ ಉತ್ತುಂಗ ಸ್ವರ ಕೇಳಿರೋ| ||1||

ಪಳ ಪಳ ಪಳ ಎಂದು ಉದುರುವ ಕಣ್ಣೀರದಿ ಭಾವುಕತನವ ಕಾಣಿರೊ ||

ಚಳಿ ಮಳೆ ಗಾಳಿ ಲೆಕ್ಕಿಸದೆ ಹರಿದಿನದಿ ದೂರದಿಂ ನಡೆದು ಬರುವರು |

ಠಳ ಠಳ ಠಳ ಕಾಣುವ ಕರಿಯಮೂರ್ತಿ ಪಾದಸ್ಪರ್ಶಕೆ ಕಾಯ್ಪರೋ ||

ತುಳಸಿಮಾಲೆ ಕೊರಳೊಳು, ವದನದಿ ಸತತ ವಿಟ್ಠಲ ನಾಮಾ |

ಎಲ್ಲ ಬಲ್ಲ ಚೆಲ್ವ ಲೀಲಾವಿನೋದಿ ಒಡೆಯ ಶ್ರೀಕೃಷ್ಣವಿಟ್ಠಲನ ಪೊಗಳುತ|| ||2||

ಎಎಎ

108. ಪಾಂಡುರಂಗ, ಪಾಂಡುರಂಗ, ನಿನ್ನಸವಿ ನಾಮವೇ ಸುಖದಾಯಕ |

ಅಂಡಲೆಯುವ ಮನಕೆ ಸ್ಥಿರ ಪ್ರದಾಯಕ || ಪಾಂಡುರಂಗ || || ||

ನಿತ್ಯದಿ ನಾಮಸ್ಮರಣೆ ಭಕ್ತಿಪ್ರದಾಯಕ |

ಸತ್ಯದಿ ಕ್ರೋಧ ನಿವಾರಿಸಿ ಜ್ಞಾನಪ್ರದಾಯಕ || || 1 ||

ಯತ್ನದಿ ವಿಷಯ ವೈರಾಗ್ಯ ಸಹಜದಾಯಕ |

ಆತ್ಮಸ್ಥ ಸಂಸಾರತಾರಕ ಶ್ರೀಕೃಷ್ಣವಿಟ್ಠಲಪೊರೆವ || || 2 ||

ಎಎಎ

109. ತಿಳಿಯದೋ ನಿನ್ನಾಟ ಪಂಢರಿ ವಿಟ್ಠಲ |

ತಿಳಿಯಲಿ ಹೇಗೆ ನಿನ್ನ ವಿವಿಧ ಲೀಲೆಗಳ | || ||

ತಾಯ್ತಂದೆ ಸೇವೆ ಮಾಡುವವನ ಮನೆ |

ಕಾಯುತ್ತಾ ದಾಸನಂತೆ ಸೊಂಟದ ಮೇಲೆ ||

ಕೈಯಿಟ್ಟು ಇಟ್ಟಿಗೆ ಮೇಲೆ ನಿಂತಿರುವಿ |

ರಾಯ ಕರೆದರೆ ಬರಲು ಒಲ್ಲೆ ಎನ್ನುವಿ | || 1 ||

ಈಗ ಬಾ ಆಗ ಬಾ ಎಂದವರ ಹಿಂದೆ |

ಸಾಗಿ ಬಿದ್ದು ನಿನ್ನೊಪ್ಪಿಸಿಕೊಂಬೆ ||

ಸಿಗದಂತೆ ಮುಂದೆ ಓಡುವಿ ಮರಿಚಿಕೆಯಂತೆ |

ಬೀಗಿದವನ ಬಿಡುವಿ ಬಾಗಿದವಗೆ ಒಲಿವೆ | || 2 ||

ಶ್ರೀಂಗಾರ, ಬಂಗಾರಕೆ ಒಲಿಯದವ |

ಭಂಗ ತಪ್ಪಿಸಲು ಭಕ್ತರ ಬವಣಿ ಪಡಿಸುವ ||

ಸಂಗರಹಿತರ ಸದಾ ಸಂಗಾತಿಯಾಗುವ |

ಅಂಗ ಸಂಗ ಬಯಸದ ಸ್ವರಮಣನೇ | || 3 ||

ಪುಟ್ಟ ಬಾಲಕನಂದದಿ ನಿಂತಿರುವೆ |

ಆಟವಾಡಿಸುವೆ ವಿರಾಟರೂಪದಿ ||

ಕಟ್ಟಕಡೆಗೆ ನಿನ್ನ ಪಾದವೇ ಗತಿ |

ಒಟ್ಟಿನಲಿ ಶ್ರೀಕೃಷ್ಣವಿಟ್ಠಲನೇ ನಿನ್ನ ಬಿಟ್ಟು ಬೇರೆ ಇಲ್ಲ | || 4 ||

ಎಎಎ

110. ಜೈ ಹರಿವಿಠಲ ಪಾಂಡುರಂಗ || ಪಾಂಡುರಂಗ, ಪಾಂಡುರಂಗ ||

ಜೈಜೈವಿಠಲ ಪಾಂಡುರಂಗ || ಪಾಂಡುರಂಗ, ಪಾಂಡುರಂಗ ||

ಶ್ರೀ ಹರಿವಿಠಲ ಪಾಂಡುರಂಗ || ಪಾಂಡುರಂಗ, ಪಾಂಡುರಂಗ ||

ಶ್ರೀಹರಿಗೋವಿಂದ ಪಾಂಡುರಂಗ || ಪಾಂಡುರಂಗ, ಪಾಂಡುರಂಗ ||

ಜೈ ಹರಿ ನಾರಾಯಣ ಪಾಂಡುರಂಗ || ಪಾಂಡುರಂಗ, ಪಾಂಡುರಂಗ ||

ಜೈ ಹರಿ ಪಂಢರಿ ಪಾಂಡುರಂಗ || ಪಾಂಡುರಂಗ, ಪಾಂಡುರಂಗ ||

ಶ್ರೀಹರಿ ವಾಸುದೇವ ಪಾಂಡುರಂಗ || ಪಾಂಡುರಂಗ, ಪಾಂಡುರಂಗ ||

ಶ್ರೀಕೃಷ್ಣವಿಟ್ಠಲ ಪಾಂಡುರಂಗ || ಪಾಂಡುರಂಗ, ಪಾಂಡುರಂಗ ||

ಊಊಊ

ಶ್ರೀ ಶ್ರೀನಿವಾಸ

111. ಎನಿತು ಕೊಂಡಾಡಲಿ ಮಂಗಳಾಂಗನೇ ಶ್ರೀನಿವಾಸನೇ || ||

ಮನೊಹರ ಸಂಮ್ಮೋಹಕ ರೂಪ ಆದಿದೇವನೇ || ಅಪ ||

ವಜ್ರಕಿರೀಟಧರ, ಭರ್ಜರಿ ಪಟ್ಟೆನಾಮ |

ಕಸ್ತೂರಿತಿಲಕ, ಮಕರ ಕುಂಡಲ ಧಾರಿ |

ನಿಮಿಲ ನೇತ್ರನೇ, ಕರುಣೆಯ ಸೂಸುತ |

ನೀಳನಾಸಿಕ ಮಂದಹಾಸದ ಸೌಮ್ಯನೇ | || 1 ||

ಬಾಗಿದ ಭ್ರುಕುಟ, ತುಂಬಿದ ಕೆನ್ನೆ, ಮುಕ್ಕಾದಂತೆ ಗದ್ದ |

ಶಂಖ, ಚಕ್ರಧಾರಿ ವರವ ಹಸ್ತನೇ ||

ಕಟಿಯಲ್ಲಿಕೈಇಟ್ಟ ವಿಶ್ವಮಾರ್ಗದರ್ಶಿ |

ಶ್ರೀಶನ ಸೌಂದರ್ಯದ ಸೊಬಗೇ ಚೆನ್ನ | || 2 ||

ಏಳುಬೆಟ್ಟದೊಡೆಯ ಸದಾನಿಂತಿರುವ |

ಭಕ್ತರ ಕರೆದು ಅಭೀಷ್ಟೆಯ ಕೊಡುವ ||

ಅದ್ಭುತ ರೂಪದ ದಯಾನಿಧಿಯೇ |

ರೋಮಾಂಚನಗೊಳಿಸುವ ಶ್ರೀಕೃಷ್ಣವಿಟ್ಠಲ | || 3 ||

ಎಎಎ

112. ಎನಿತು ಪಾಡಲಿ ಎನಿತು ಪೊಗಳಲಿ ಶ್ರೀನಿವಾಸ ದಯಾನಿಧೇ | || ||

ಎನಗೆ ದೊರೆತ ಭಾಗ್ಯ ನಿನ್ನ ಕೃಪೆಯಿಲ್ಲದೆ ಮತ್ತೇನು? | || ಅಪ ||

ಕಣ ಕಣದಲ್ಲಿರುವ ಸರ್ವತ್ರ ವ್ಯಾಪ್ತನೇ |

ಕ್ಷಣಪ್ರತಿ ಕ್ಷಣ ನಿನ್ನ ಧ್ಯಾನ ಇತ್ತು ಧನ್ಯನಾಗಿಸೋ ||

ಹಣ, ಕನಕ, ಒಣ ಪ್ರತಿಷ್ಟೆ ಆಶೆ ತೋರಿಸದೇ |

ನಿನ್ನ ಪಾದ ಪದ್ಮದಿ ಧೃಡ ಭಕುತಿ ನೀಡೋ | || 1 ||

ನಾನೇ ಮಾಡಿದೆನೆಂಬ ಹಮ್ಮು ಏಕೆ? ಸರ್ವಕರ್ತೃ ನೀನಲ್ಲವೇ? |

ಎನಗೆ ಸಲ್ಲುವ ಗೌರವಾದರ ಒಳಗಿರುವ ನಿನಗಲ್ಲವೆ? ||

ನಿನ್ನ ದಯೆ ತಪ್ಪಲು ಸಿಗುವುದೂ ಸಿಗದೇ ದಿಕ್ಕು ತಪ್ಪುವುದು |

ನಿನ್ನ ಇಚ್ಛೆಯೇ ಎನ್ನಿಚ್ಛೆಯಾದರೆ ಸಾಕು ಒಡೆಯಾ ಶ್ರೀಕೃಷ್ಣವಿಟ್ಠಲಾ || 2 ||

ಎಎಎ

113. ಇಕೋ, ನೋಡಿ ಭೂವೈಕುಂಠ ಸುರಪತಿ |

ಉತ್ಕøಷ್ಟ ಮೂರುತಿ ನೆಲಸಿಹ ಶೇಷಾದ್ರಿಯಲಿ ||

ಭಕುತರ ಕೈಬೀಸಿ ಕರೆಯುವ ಮೋಹಕತನದಿ |

ಸಕಲ ಭಾಗ್ಯಪ್ರದಾತಾ ಸದಾ ಆಪದ್ಬಾಂಧವ ||

ಭಕುತಿಯ ಕೈಂಕರ್ಯದಿ ಒಲಿವಾ ಮುಗುಳ್ನಗುತಾ |

ವೇಂಕಟಪತಿ, ವರದಹಸ್ತ ತೋರುತಿರುವ ||

ಲಕುಮಿಪತಿ ಶ್ರೀಕೃಷ್ಣವಿಟ್ಠಲನೇ ಶ್ರೀನಿವಾಸ |

ಮುಕುತಿದಾಯಕ ಭಕುತ ಜನಪ್ರಿಯ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು