ಶ್ರೀ ಕೃಷ್ಣವಿಠ್ಠಲಪದಗುಚ್ಛ 2
ಪರಮಾತ್ಮನ ಪದಗಳು
ದಶಾವತಾರ ಸ್ತುತಿ
51. ಪರಮಾತ್ಮ ನಿನ್ನ ನಾಮ ರೂಪಗಳನೇಕ, ಗುಣವಾಚಕವಲ್ಲವೇ? |
ನೀರಲಿ ಶೇಷಶಯನನಾಗಿ, ಪಾಪತೊಳೆವ ನಾರಾಯಣನೆನಿಸಿದೆ ||
ಧರ್ಮವ ರಕ್ಷಿಸಿ, ಪ್ರಳಯದಿ ಮತ್ಸನೆನಿಸಿದೆ |
ವರಾಹನೆನಿಸಿ, ಉರ್ವಿಯ ರಕ್ಷಿಸಿದೆ ||
ಕೂರ್ಮನಾಗಿ ಗಿರಿಯ ಪೊತ್ತೆ, ಅಮೃತವನಿತ್ತೆ |
ವರವಿತ್ತೆ ಪ್ರಹ್ಲಾದಗೆ ಸೌಮ್ಯ ನರಸಿಂಹನೆನಿಸಿದೆ ||
ಸುರ ಸುಂದರ ವಟುವಾಮನನಾಗಿ ತ್ರಿಪಾದ ಭೂಮಿ ಬೇಡಿದೆ |
ಮೂರು ಪಾದದಿ ಭೂಮಿ ಅಳೆದು ತ್ರಿವಿಕ್ರಮನಾಗಿ ಬಲಿಯ ಪಾತಾಳಕ್ಕಟ್ಟಿದೆ ||
ಕ್ಷತ್ರಿಯರ ಸಂಹರಿಸಿ ಭೂಪ್ರದಕ್ಷಣೆ ಮಾಡಿ ಪರಶುರಾಮನೆನಿಸಿದೆ |
ಪಿತೃವಚನಪಾಲಿಸಿ ವನದಿ ಸಂಚರಿಸಿ ರಿಪುಸಂಹರಿಸಿದೆ ಶ್ರೀರಾಮನಾಗಿ ||
ಸರ್ವರ ಆಕರ್ಷಿಸಿ ಮೊದಪ್ರಮೋದವಿತ್ತೆ ನಂದನಕಂದನಾಗಿ |
ತುರು-ಕರು ಕಾಯ್ದೆ ಮೋಹದಿ ಕೊಳಲೂದಿ ಗೋಪಾಲನಾಗಿ ||
ಪರ್ವತವೆತ್ತಿ ಇಂದ್ರನ ಗರ್ವವಳಿದು ಸಕಲರಿಗಾಶ್ರಯವಿತ್ತೆಗೋವರ್ಧನಧಾರಿಯಾಗಿ |
ಚೋರನಂತೆ ಹಾಲು ಬೆಣ್ಣೆ ಮೊಸರು ಕದ್ದು ನವನೀತ ಚೋರನೆನಿಸಿದೆ ||
ಅರಿವನು ಮೂಡಿಸಿ ಜ್ಞಾನವ ಬೋಧಿಸಿ ಧರ್ಮವನುಳುಹಿದೆ ಗೋವಿಂದನಾಗಿ |
ಸರ್ವತ್ರ ವ್ಯಾಪಿಸಿ ಸರ್ವರ ಪ್ರಾಣ ಪ್ರೇರಕನಾಗಿ ವಾಸುದೇವನೆನಿಸಿದೆ ||
ಪರಿಕಲ್ಪನೆಯಲ್ಲಿ ವಿರುದ್ಧ ಧರ್ಮಬೋಧಿಸಿ ಬುದ್ಧನೆನಿಸಿದೆ |
ತುರುಗವನೇರಿ ಧರ್ಮ ಉಳುಹಲು ಬರಲು ಕಲ್ಕಿಯೆನಿಸಿದೆ ||
ನಿರ್ದೋಷ ಪವಿತ್ರ ಉತ್ತಮಶ್ಲೋಕ ಅಚ್ಯುತನೆನಿಸಿದೆ |
ಶ್ರೀರಮಣಿಗಾಶ್ರಯನಾಗಿ ಶ್ರೀಧರನೆನಿಸಿದೆ ||
ಸರ್ವರ ಜ್ಞಾನ ಪ್ರದಾಯಕ ಜ್ಞಾನಾನಂದ ಮಾಧವನೆನಿಸಿದೆ |
ಕರೆದು ಮುಕ್ತಿ ಕೊಡುವ ಭಕುತರ ವಶನಾಗಿ ಮುಕುಂದನೆನಿಸಿದೆ ||
ನಾರಿಯ ರೂಪದಿ ಮೋಡಿಮಾಡಿ ಶಿವನ, ಮೋಹಿನಿಎನಿಸಿದೆ |
ಅತ್ರಿಗೆ ನಿನ್ನನ್ನೇ ದತ್ತವಾಗಿಸಿ ದತ್ತಾತ್ರಯ ಎನಿಸಿದೆ ||
ಕರಿಮೊರೆ ಕೇಳಿ ತ್ವರಿತದಿ ಬಂದು ನಕ್ರನ ತರಿದು ಶ್ರೀಹರಿ ಎನಿಸಿದೆ |
ಮರ್ದಿಸಿ ಪಾಪ, ಜನನ ಮರಣ ಚಕ್ರ ಅಳಿಸಿ ಜನಾರ್ದನನೆನಿಸಿದೆ ||
ಕರೆ ಆಲಿಸಿ ಭಕ್ತನ ಅಣತಿಯಂತೆ ಇಟ್ಟಿಗೆಮೇಲೆ ನಿಂತು ವಿಟ್ಠಲನೆನಿಸಿದೆ |
ಸರ್ವದಾ ಸುಖ, ಬಲ, ಜ್ಞಾನ ನೀಡುವ ವಿಷ್ಣುವೆನಿಸಿದೆ ||
ತೋರಿ ಅಂತವಿಲ್ಲದ ಅದ್ಭುತಲೀಲೆ ಅನಾದಿ ಅನಂತನೆನಿಸಿದೆ |
ಸರ್ವಾಶ್ರಯ ಸ್ವತಂತ್ರ ದೋಷದೂರ ಶ್ರೀಕೃಷ್ಣವಿಟ್ಠಲ ಸಕಲಕರ್ತೃನೀನೊಬ್ಬನೇ ||
52. ನಿನ್ನ ದಯೆ ಒಂದಿದ್ದರೆ ಸಾಕೋ |
ಹತ್ತವತಾರಗಳಲಿ ಮಿಂಚಿ ನನ್ನನೇ ನಾ ಮರೆಯುವೆ ||
ಮತ್ಸಾವತಾರಿಯಂತೆ, ಕ್ಷಣ ಕ್ಷಣಕ್ಕೂ ಭಕ್ತಿ ಬೆಳೆಯಲಿ ನಿನ್ನದಯದಿ |
ಕೂರ್ಮಾವತಾರಿಯಂತೆ, ಪಾದಸ್ಮರಣೆ ಸದಾ ಹೊತ್ತಿರಲಿ ನಿನ್ನದಯದಿ ||
ವರಾಹವತಾರಿಯಂತೆ, ಸರಳವಾಗಿ ಕ್ಲೇಶಗಳ ಎತ್ತಿರಲಿ ನಿನ್ನದಯದಿ |
ನಾರಸಿಂಹವತಾರಿಯಂತೆ, ದುಷ್ಟ ಶಕ್ತಿಗಳ ಎದುರಿಸಲಿ ನಿನ್ನದಯದಿ ||
ವಾಮನಾವತಾರಿಯಂತೆ, ಸಮರ್ಪಣಾ ಬುದ್ಧಿ ತ್ರಿವಿಕ್ರಮನಂತೆ ಏರಲಿ ನಿನ್ನದಯದಿ |
ಭಾರ್ಗವನವತಾರಿಯಂತೆ, ವಿಷಯದಾಸೆ ಅಳಿಯಲಿ ನಿನ್ನದಯದಿ ||
ರಾಮಾವತಾರದಂತೆ, ಸದ್ಗುಣಗಳ ಸಾಂದ್ರನಾಗಲಿ ನಿನ್ನದಯದಿ ||
ಮುಕುಂದನವತಾರದಂತೆ, ಮುಕ್ತಿಯ ಉಪದೇಶವಾಗಲಿ ನಿನ್ನದಯದಿ |
ಬುದ್ಧಾವತಾರನಂತೆ, ಚಂಚಲಮನದಿ ಸ್ಥಿರತೆ ಉಳಿಯಲಿ ನಿನ್ನ ದಯದಿ ||
ಕಲ್ಕ್ಯಾವತಾರದಂತೆ, ದುರ್ವಿಷಯಗಳ ಖಂಡಿಸಲಿ ನಿನ್ನದಯದಿ |
ಶ್ರೀಕೃಷ್ಣವಿಟ್ಠಲ ನಿನ್ನ ದಯೆ ದೊರಕದಿದ್ದರೆ ಏನೂ ದೊರೆಯದು ||
ದಯಾನಿಧೇ, ನಿನ್ನ ದಯೆ ಒಂದೇ ಸಾಕೋ ||
53. ಶರಣಾದೆ, ಮೇಲಿರಿಸಿದೆ, ಎತ್ತಿಕೊಂಡೆ, ಮಡಿಲೊಳಿಟ್ಟೆ |
ಶಿರವೊತ್ತಿದಿ, ತರಿದಿಟ್ಟೆ, ಒರೆಸಿಟ್ಟೆ, ಕೊಲ್ಲಿಸಿದೆ ||
ಅರಿವೂ ಕಳೆದೆ, ಹಯವೇರಿದೆ ಪ್ರಭು ಶ್ರೀಕೃಷ್ಣವಿಟ್ಠಲನೇ |
ಹೊರೆಇಳಿಸಿ, ಉದ್ಧರಿಸಿ, ಮೇಲಿರಿಸೋ || (ಮುಕ್ತಿ)
54. ನಿನ್ನ ದಯೆ ಒಂದಿದ್ದರೆ ಸಾಕೋ |
ಹತ್ತಾವತರಗಳಲಿ ಮಿಂಚಿ ನನ್ನನೇ ನಾ ಮರೆಯುವೆ | || ಪ ||
ಮತ್ಸಾವತಾರಿಯಂತೆ ಕ್ಷಣ ಕ್ಷಣಕ್ಕೂ ಭಕ್ತಿ ಬೆಳೆಯಲಿ ನಿನ್ನ ದಯದಿ |
ಕೂರ್ಮಾವತಾರಿಯಂತೆ ಪಾದಸ್ಮರಣೆ ಸದಾ ಹೊತ್ತಿರಲಿ ನಿನ್ನ ದಯದಿ ||
ವರಾಹಾವತಾರಿಯಂತೆ ಸರಳವಾಗಿ ಕ್ಲೇಶಗಳ ಎತ್ತಿರಲಿ ನಿನ್ನ ದಯದಿ |
ನಾರಸಿಂಹಾವತಾರಿಯಂತೆ ದುಷ್ಟ ಶಕ್ತಿಗಳ ಎದುರಿಸಲಿ ನಿನ್ನ ದಯದಿ || 1 ||
ವಾಮನಾವತಾರಿಯಂತೆ ಸಮರ್ಪಣಾ ಬುದ್ಧಿ ತ್ರಿವಿಕ್ರಮನಂತೆ ಏರಲಿ ನಿನ್ನದಯದಿ |
ಭಾರ್ಗವನವತಾರಿಯಂತೆ ವಿಷಯದಾಸೆ ಅಳಿಯಲಿ ನಿನ್ನದಯದಿ ||
ರಾಮಾವತಾರದಂತೆ ಸದ್ಗುಣಗಳ ಸಾಂದ್ರನಾಗಲಿ ನಿನ್ನದಯದಿ |
ಮುಕುಂದನವತಾರದಂತೆ ಮುಕ್ತಿಯ ಉಪದೇಶವಾಗಲಿ ನಿನ್ನ ದಯದಿ || 2 ||
ಬುದ್ಧಾವತಾರನಂತೆ ಚಂಚಲಮನದಿ ಸ್ಥಿರತೆ ಉಳಿಯಲಿ ನಿನ್ನದಯದಿ |
ಕಲ್ಕೀವತಾರದಂತೆ ದುರ್ವೀಷಯಗಳ ಖಂಡಿಸಲಿ ನಿನ್ನದಯದಿ ||
ಶ್ರೀಕೃಷ್ಣವಿಟ್ಠಲ ನಿನ್ನ ದಯೆ ದೊರಕದಿದ್ದರೆ ಏನೂ ದೊರೆಯದು |
ನಿನ್ನ ದಯೆ ಒಂದೇಸಾಕೋ ಸರ್ವಕಾಲಕೂ || 3 ||
55. ಪ್ರಳಯದಿ ಸತ್ಯವ್ರತನ ರಕ್ಷಿಸಿದ ಮತ್ಸನಾಗಿ |
ಒಲವಿಂದ ಪರ್ವತ ಬೆನ್ನಲಿ ಪೊತ್ತ ಕೂರ್ಮನಾಗಿ ||
ಜಲದಿ ಪೊಕ್ಕು ಮೇದಿನಿಯ ತಂದ ವರಾಹನಾಗಿ |
ಬಾಲಕನ ರಕ್ಷಿಸಿದ ಸ್ತಂಭಸ್ಥ ನರಸಿಂಹನಾಗಿ ||
ಬಲಿಯನೊತ್ತಿದ ಪಾತಾಳಕೆ ವಾಮನನಾಗಿ |
ಬಲವಡಗಿಸಿದ ಕ್ಷತ್ರೀಯರ ಪರಶುರಾಮನಾಗಿ ||
ಜಾನಕಿಯ ರಕ್ಷಿಸಿದ ಶ್ರೀರಾಮನಾಗಿ |
ವಿಲಕ್ಷಣ ಮಹಿಮೆ ತೋರಿದ ವಸುದೇವ ಸುತನಾಗಿ ||
ಪಾಲಿಸುದ ಧರ್ಮಮೋಹಕ ಬುದ್ಧನಾಗಿ |
ಕಲಿಯ ನಿಗ್ರಹಿಸಲು ತೇಜಿಏರಿ ಬರುವ ಕಲ್ಕಿಯಾಗಿ ||
ಲೀಲೆಯಲಿ ಸರ್ವರೂಪ ಧರಿಸುವ ನಮ್ಮ ಶ್ರೀಕೃಷ್ಣವಿಟ್ಠಲ ||
ಶ್ರೀಮನ್ನಾರಾಯಣ
56. ಹೃದಯದಿ ಸದಾ ನಾರಾಯಣನ ನೆನಿಸು |
ಮನದಲಿ ಸದಾ ನಾರಾಯಣನ ನೆನೆಸು ||
ಕಂಗಳಲಿ ಸದಾ ನಾರಾಯಣನ ದೃಷ್ಟಿಸು |
ಕಿವಿಯಲಿ ಸದಾನಾರಾಯಣನ ನಾಮ ಕೇಳಿಸು ||
ನಾಲಿಗೆಯಲಿ ಸದಾನಾರಾಯಣನ ಪದ ನುಡಿಸು |
ಹಸ್ತಗಳು ಸದಾ ನಾರಾಯಣನ ಪೂಜಿಸಲಿ ||
ಪಾದಗಳು ಸದಾ ನಾರಾಯಣನತ್ತ ಪೋಗಲಿ |
ಭವತಾರಕ ಶ್ರೀಕೃಷ್ಣವಿಟ್ಠಲ ಸದಾ ಸರ್ವರನು ಸಲಹಲಿ ||
57. ಎನ್ನ ಜೀವನದ ಬೆಳಕು ನಾರಾಯಣ |
ಎನ್ನ ಜೀವದ ಉಸಿರು ನಾರಾಯಣ ||
ಎನ್ನ ಕಂಗಳ ದೃಷ್ಟಿ ನಾರಾಯಣ |
ಎನ್ನ ಮನದ ನಿವಾಸಿ ನರಾಯಣ ||
ಎನ್ನ ಜಿಹ್ವೆಯಲಿ ನೆಲಸಿಹ ನಾರಾಯಣ |
ದೇಹದ ಕಣಕಣದಿ ನಾರಾಯಣ ||
ಸರ್ವಕರ್ತೃಮೂಲ ನಾರಾಯಣ |
ಸರ್ವಫಲದಾತ ನಾರಾಯಣ ||
ಸರ್ವ ಬಂಧಕನೇ ನಾರಾಯಣ |
ಜೀವನದ ಮೋಚಕ ನಾರಾಯಣ ||
ಸೃಷ್ಟಿಸ್ಥಿತಿ ಲಯಕರ್ತ ನಾರಾಯಣ |
ಸರ್ವಕಾರ್ಯೋದ್ದೇಶ ನಾರಾಯಣ ||
ಸಕಲ ಸಮಯವೂ ನಾರಾಯಣ |
ಸರ್ವದಾ ಸಮದರ್ಶಿ ನಾರಾಯಣ ||
ಸರ್ವವಿಲಕ್ಷಣ ನಾರಾಯಣ |
ಎನ್ನ ಹೃದಯದಿ ನೆಲಿಸಿದ ನಾರಾಯಣ ||
ಸಕಲವೂ ನಾರಾಯಣಮಯ |
ನಾರಾಯಣನ ನಾಮದ ಸವಿಬಲ್ಲವನೇ ಬಲ್ಲ ||
ನಾರಾಯಣಾಭಿನ್ನ ಶ್ರೀಕೃಷ್ಣವಿಟ್ಠಲನ ಸ್ಮರಣೆ ಪ್ರತಿಜನಮಕೂ ಇರಲಿ ||
58. ಶಂಖಚಕ್ರಗದಾ ಪದ್ಮಧಾರಿ ಪದ್ಮನಾಭಗೆ ಮಂಗಳಂ |
ಉರಗಶಯನ ಉತ್ತಮ ಶ್ಲೋಕಗೆ ಮಂಗಳಂ ||
ಜಾನು ಜಂಘಸುಂದರ ಜನಾರ್ದನಗೆ ಮಂಗಳಂ |
ಉದರದಿ ತ್ರೀಲೋಕ ಧರಿಪ ತ್ರಿವಿಕ್ರಮಗೆ ಮಂಗಳಂ ||
ನಾಭಿಯಿಂದ ಜನಿತ ಬ್ರಹ್ಮನ ಕಂತುಪಿತಗೆ ಮಂಗಳಂ |
ವಕ್ಷದಿ ವಾಸಿಪ ಲಕ್ಷ್ಮೀರಮಣಗೆ ಮಂಗಳಂ ||
ಮೌಕ್ತಿಕಹಾರ ಸುಶೋಭಿತ ಕಂಠದ ಅನಿಕೇತಗೆ ಮಂಗಳಂ |
ಅಭಯಹಸ್ತಪೊತ್ತ ಹೃಷಿಕೇಶಗೆ ಮಂಗಳಂ ||
ಕಂಕಣಧೃತ ಕರದಿಂ ವರವೀವ ಅನಂತಗೆ ಮಂಗಳಂ |
ನಿಮಿಲನೇತ್ರ ನಳಿನಾಕ್ಷ ಶ್ರೀವಿಷ್ಣುವಿಗೆ ಮಂಗಳಂ ||
ನೀಳನಾಸಿಕದಿಂ ವೇದ ಉಸುರಿದ ಹಯಗ್ರೀವಗೆ ಮಂಗಳಂ |
ತುಟಿಯಲಿ ಮಂದಹಾಸ ಬೀರಿದ ಮೋಹನಗೆ ಮಂಗಳಂ ||
ಮಕರಕುಂಡಲಧಾರಿ ಖಗವಾಹನ ಶ್ರೀಹರಿಗೆ ಮಂಗಳಂ |
ವಿಶಾಲ ಕೇಶರಾಶಿಯ ಕೇಶವನಿಗೆ ಮಂಗಳಂ ||
ಕಿರೀಟಧಾರಿ ಕ್ಷಿತಿಜನ ಪಾಲಿಪ ಗೋವಿಂದಗೆ ಮಂಗಳಂ |
ಅಚ್ಯುತ ನಾರಸಿಂಹ ಪುರುಷೋತ್ತಮಗೆ ಮಂಗಳಂ ||
ಅಡಿಯಿಂ ಮುಡಿವರೆಗೆ ಸರ್ವಾಂಗ ಸುಂದರನಾದ |
ಶ್ರೀಕೃಷ್ಣವಿಟ್ಠಲಗೆ ಮಂಗಳಂ ಜಯಮಂಗಳಂ ||
59. ನಾರಾಯಣನ ನಮಿಸಿ ಪಾದಕಮಲಕೆ | ನಾರಾಯಣನ ಪಾಡಿನಾಮಸದಾ ||
ನಾರಾಯಣ ಪೂಜೆಮಾಡಿ ಮನದಿ | ನಾರಾಯಣನ ಸ್ಮರಿಸಿ ವಿಗ್ರಹದಿ ||
ನಾರಾಯಣ ಅನುಗ್ರಹಿಪ ಸದಾ | ವಿರಾಜಿಪ ಭಕ್ತರಹೃದಯದಿ ||
ನಾರಾಯಣರೂಪಿ ಶ್ರೀಕೃಷ್ಣವಿಟ್ಠಲ | ತಾರಿಸಿ ಭವ ಪಾಪಿಗಳ ಉದ್ಧರಿಪ ||
60. ಜಯಮಂಗಳಂ, ನಿತ್ಯ ಶುಭಮಂಗಳಂ |
ಮನೋ ನಿಯಾಮಕನಿಗೆ, ಮನುಜೊದ್ಧಾರಗೆ ಮಂಗಳಂ ||
ಮತ್ಸಾವತಾರಿಗೆ, ಮಂದರೊದ್ಧಾರಕನಿಗೆ |
ಬ್ರಹ್ಮಾಂಡವನೆ ಪೊತ್ತವನಿಗೆ, ಮೂರು ಪಾದ ಅಳೆದವಗೆ ||
ಮಗುವಿಗೆ ಅಭಯವಿತ್ತವಗೆ, ಮಾತೆಯ ಶಿರವ ತರಿದವಗೆ |
ಮಾತೃ ವಾಕ್ಯ ಪರಿಪಾಲಕಗೆ, ಮುರಹರ ಮುರಳಿವಾದಕನಿಗೆ ||
ಮನವ ಕೆಡಿಸಿದ ಮನುಜಗೆ, ಮದವ ಹೆಚ್ಚಿಸುವ ವಾಜಿಗೆ |
ಮಂಗಳಾಂಗನಿಗೆ ಶ್ರೀಕೃಷ್ಣವಿಟ್ಠಲಗೆ ಮಂಗಳಂ ||
ಶ್ರೀ ನರಸಿಂಹ
61. ದರುಶನ ಮಾತ್ರದಿ ದುರಿತ ಕಳೆವ ಶೂರ್ಪಾಲಯ ಪ್ರಭು |
ನರಸಿಂಹ-ಶ್ರೀಲಕ್ಷ್ಮೀನರಸಿಂಹ “ಸ್ವಾಮಿ ಲಕ್ಷ್ಮೀನರಸಿಂಹ” ||
ಚರಣಯುಗಳ ಭಜಿಸಲು ಪೊರೆವ ಕರುಣದಿ |
ಊರುವಿನಲಿ ಉರ್ವಿಯುತ್ತಮಳ (ಸುಂದರಿಯ) ಕುಳ್ಳಿರಿಸಿ ||
ಕರದಿ ಅಭಯ ತೋರುತಿರುವ ಶಂಖ ಚಕ್ರಧಾರಿ |
ಕಿರೀಟ, ಕಂಕಣ, ಕೊರಳೊಳು ಹಾರ ಪದಕ ||
ಧರಿಸಿ ಕಾಲಲಿ ಕಡಗ ಪೀತಾಂಬರಧಾರಿ |
ಕರದಿಂ ಅರ್ಧಾಂಗಿಯ ನಡು ಬಳಸಿ ನಗುತಿರುವ ||
ಪರಮ ಸುಂದರನ ವೀಕ್ಷಿಸೇ ಆತ್ಮ ಶಾಂತಿ ಸಿಗುವುದು |
ಸುರ ಶ್ರೇಷ್ಠ ಭಕ್ತಜನಪ್ರಿಯ ನಮ್ಮ ಶ್ರೀಕೃಷ್ಣವಿಟ್ಠಲ ||
62. ಸಭೆಯಲಿ ಪರಮಾತ್ಮ ಎಲ್ಲಿಹ ತೋರೆನಲು |
ಸದ್ಬುದ್ಧಿ ಬಾಲಕನ ಭಕ್ತಿಗೆ ಮೆಚ್ಚಿ ||
ಡಿಂಬಸ್ಥ ಬಿಂಬ ಕಂಜನಾಭ ಸರ್ವವ್ಯಾಪಿ |
ಉದ್ಭವಿಸಿದ ಶೇಷಶಾಯಿ ಸ್ತಂಭದಿಂ ||
ಅದ್ಭುತ ಲೀಲಾ ವಿನೋದಿ ನರಸಿಂಹರೂಪದಿ |
ನಿಭೃತಕಾಯ ತಟಿತ್ಕೋಟಿ ಜಗನ್ನಾಥ ||
ಅಭಯಂಕರ ನಾಲ್ಮೊಗನಯ್ಯಾ |
ವಿಭ್ರಮ ಅಸುರ ವಿಭಂಗಿಸಲು ಯತ್ನಿಸೆ ||
ಸಂಭವಿಸಿತು ಮರಣ ಹರಿದ್ವೇಷಿಗೆ |
ಶುಭ್ರ ಬಭ್ರು ದು:ಖಭಂಜಕ ||
ಸುಭದ್ರ ವಿಭೋ ಶ್ರಿಕೃಷ್ಣವಿಟ್ಠಲ ಜಯ ಜಯ ||
63. ನವಮಾಸ ತುಂಬಿರಲು ಕಯಾದುವಿನ ಬಸಿರಲಿ |
ನಾರದರುಪದೇಶ ಪೊಂದಿ ಜನ್ಮ ಸಾರ್ಥಕವಾಗಿಸಲು ಪುಟ್ಟಿದ ಬಾಲಕ ಶ್ರೀ ಪ್ರಲ್ಹಾದ ||
ಬಾಲ್ಯದಿ ಆಟವಬಿಟ್ಟು, ಪಾಠವ ಬಿಟ್ಟು |
ನಾರಾಯಣನ ಧ್ಯಾನವ ಉಸಿರನ್ನಾಗಿಸಿಕೊಂಡ ಶ್ರೀಪ್ರಲ್ಹಾದ ||
ಗುರುಗಳ ದೂಷಣಿಗೆ, ತಂದೆಯ ಕೋಪಕೆ ಪಾತ್ರನಾದ |
ಶ್ರೀಹರಿಯ ಬಿಡದೆ ಸತತ ಸ್ಮರಿಸುತ ಗೆಳೆಯರ ಕೂಡಿ ಭಜನೆಯ ಮಾಡುತಿರೆ||
ಗುರುಗಳು ನೋಡಿ ತಂದೆ ಹಿರಣ್ಯಕಶ್ಯಪನ ಹತ್ತಿರ ಸೆಳೆತರಲು |
ಅತೀ ಕೋಪದಿ ತಂದೆ ನಾನಾ ಶಿಕ್ಷೆಗೆ ಬಳಪಡಿಸಿದ ಶ್ರೀಪ್ರಲ್ಹಾದನಾ ||
ಧೃತಿಗೆಡೆದೆ ಶಾಂತಮೂರ್ತಿಯಾಗಿ ಶ್ರೀಹರಿಯ ಭಜನೆ ಮಾಡುವ ಪ್ರಲ್ಹಾದನ ಕಂಡು |
ಕಡುಕೋಪದಿಂ ನಿನ್ನ ಆ ನಾರಾಯಣನೆಲ್ಲಿರುವನು ತೋರೋ ಎನಲು ||
ಹೆದರದೆ ಬೆದರದೆ ಸೌಮ್ಯನಾದ ಬಾಲಕ ಭಕ್ತಿಯಿಂ |
ಸರ್ವತ್ರ ವ್ಯಾಪಿಸಿರುವ ಸರ್ವೋತ್ತಮನ ಭಕ್ತಿಯಿಂ ನೋಡೆ ನೀನೆಲ್ಲಲ್ಲೂ ಕಾಣಿವಿ ಎಂದ||
ಈ ಕಂಬದಲ್ಲಿರುವನೋ ಆ ನಿನ್ನ ನಾರಾಯಣ ಎನ್ನುತ |
ಖಡ್ಗವನೇ ಪಿಡಿದು ಕಂಬವ ಭೇದಿಸಲು, ಒಡನೆ ಕಾಣಿಸಿದ ಶ್ರೀನರಸಿಂಹ ||
ತಾಯಿಯು ಕಂದನ ತೊಡೆಯ ಮೇಲೆ ಮಲಗಿಸಿ ಕೊಳ್ಳುವಂತೆ |
ಹಿರಣ್ಯಕಶ್ಯಪನ ಮಲಗಿಸಿಕೊಂಡು ನಖದಿಂ ಹೊಟ್ಟೆಯ ಬಗೆದ ||
ಶ್ರೀಪ್ರಲ್ಹಾದಸಂತಹ ಪುತ್ರರತ್ನಗಳಿಗಾಗಿ ಹುಡುಕಿ ಸಿಗದೆ |
ನಿರಾಸನಾಗಿ ಮುಕ್ತಿಯನು ಕರುಣಸಿÂದನು ವಿಜಯಗೆ ||
ಬಾಲಕ ಪ್ರಲ್ಹಾದನು ಬಗೆಬಗೆಯಾಗಿ ಸ್ತುತಿಸಲು ಶ್ರೀಲಕ್ಷ್ಮೀನರಸಿಂಹನು |
ಬಲುಕರುಣೆಯಿಂದ ವರವಿತ್ತು ಸಲುಹಿದನು ಕಂದ ಶ್ರೀಪ್ರಲ್ಹಾದನ ||
ಸದಾ ಸ್ಮರಿಸುವರ ಬಿಡದೆ ಸಲಹುವ | ನಮ್ಮ ಶ್ರೀಕೃಷ್ಣವಿಟ್ಠಲ ಅನವರತ ||
64. ಉಗುರನು ನೆನೆದರೆ ಕಷ್ಟ ಎಷ್ಟೂ ಇಲ್ಲ |
ಉಗುರಿನ ಮಹಿಮೆ ತಿಳಿದಷ್ಟೂ ಕಗ್ಗಂಟು ||
ಉಗುರು ಕೋಟಿ ಸೂರ್ಯಸಮಪ್ರಭ |
ಉಗುರು ನಿತ್ಯಜ್ಞಾನಾನಂದಮಯ ||
ಉಗುರು ವಜ್ರಾಯುಧದಂತೆ ಅದ್ರಿಯ ಸೀಳುವುದು |
ಉಗುರಿನಿಂದಲೆ ದುಷ್ಟ ಹಿರಣ್ಯಕನ ಸಂಹಾರವಾಯಿತು ||
ಉಗುರು ಅಸುರ ಶತೃಗಳ ಸದೆ ಬಡೆವುದು |
ಉಗುರನು ಸದಾ ಧ್ಯಾನಿಪರು ಸುರರೆಲ್ಲ ||
ಉಗ್ರ ಉಗುರಿರುವ ಶ್ರೀಕೃಷ್ಣವಿಟ್ಠಲ ರಕ್ಷಿಸಲಿ ನಮ್ಮನನವರತ ||