ಶ್ರೀ ಕೃಷ್ಣವಿಠ್ಠಲಪದಗುಚ್ಛ 2
ಸಂಗರಹಿತನಾಗಿ ಏಕಾಂತದಿ
ಮಾರುತಿರಮಣನ ಧ್ಯಾನದಿ ಮುಳುಗಿಸು | || 1 ||
ಅಪರೋಕ್ಷ ಪಡೆದ ಮುಮುಕ್ಷಗಳನರಿತು
ಸೇವಿಸುವವರ ನಿರುತದಿ ಸೇವೆ ಕೊಡು |
ಪಾಪ-ಪುಣ್ಯಗಳ ಲೆಕ್ಕವಿಡದೆ ಸಕಲವೂ
ಪರಮಾತ್ಮನ ಸೇವೆ ಎಂದರಿತು ||
ಅಪರಿಮಿತ ಭಕ್ತಿಯಿಂ ಶರಣೆಂಬೆ ದೈನ್ಯತೆಯಲಿ ಬೇಡುವೆ |
ಸರ್ಪಶಯನ ನಮ್ಮಪ್ಪ ಶ್ರೀಕೃಷ್ಣವಿಟ್ಠಲ ಚಿತ್ತಕ್ಕೆ ತಂದು ಪಾರುಗಾಣಿಸೋ ||
220. ಏನು ಮಾಡಿದರೆ ಮುಕುತಿಯಾಗುವುದು ಜಗದೊಳು |
ಅಣು, ರೇಣು ತೃಣಕಾಷ್ಟದಿ ನೆಲೆಸಿರುವ ಹರಿಯೆ | || 1 ||
ಏಸು ದೇಹ ದಂಡಿಸಿದರೇನು? ಮಂಡೆಯೂರಿ ನಮಿಸಿದರೇನು? |
ಏಸುವ್ರತ, ಯಾಗ ಮಾಡಿದರೇನು? ಏಸು ಜಪ, ತಪದಿಂದೇನು? | || 2 ||
ದಿನದಿನದಿ ಅನ್ನದಾನ, ಧನ, ಕನಕದಾನದಿ ಒಲಿಯನು |
ಮನಮುಟ್ಟಿ ಮಾಡಿದ ಭಜನೆ, ಸಜ್ಜನ ಸಂಗದಿ ಒಲಿಯನು | || 3 ||
ಅನುದಿನ ಮಾಳ್ಪ ಜ್ಞಾನಸಹಿತ ಕರ್ಮ ಸ್ವೀಕರಿಪ |
ದಾನವಾಂತಕ ಶ್ರೀಕೃಷ್ಣವಿಟ್ಠಲನ ಕೃಪೆಯಾದರೆ ಮಾತ್ರ | || 4 ||
221. ಅವನಿಯೊಳು ಗಂಧವಿಟ್ಟೆ, ಗರ್ಭದಿ ಜೀವವಿಟ್ಟೆ |
ಆ ವನ(ನೀರು)ದೊಳು ರಸವಿಟ್ಟೆ, ಅದರಲಿ ರುಚಿಯಿಟ್ಟೆ ||
ಉಜ್ವಲ ಶಿಖಿಯಲಿ ರೂಪವಿಟ್ಟೆ, ಜೊತೆ ಶಾಖವಿಟ್ಟೆ |
ಪವನನಲಿ ಸ್ಪರ್ಶವಿಟ್ಟೆ, ಅದರಲಿ ಅರಿವುಇಟ್ಟೆ ||
ಭವ್ಯ ಆಗಸದಿ ಶಬ್ದವಿಟ್ಟೆ, ಸುವಿಶಾಲ ಭಾವವಿಟ್ಟೆ |
ಅವ್ಯಕ್ತಾವ್ಯಕ್ತ ಶ್ರೀಕೃಷ್ಣವಿಟ್ಠಲ ಎನ್ನೊಳು ಏನಿಟ್ಟೆ ತಿಳಿಸು ||
ಊಊಊ
ಉಗಾಭೋಗಗಳು
222. ನಿನ್ನ ಗುಣಶ್ರವಣದಿ ಜನುಮ ಸಾರ್ಥಕವೆನಿಸುವುದು |
ನಿನ್ನ ಸ್ಮರಣೆಯಲಿ ಚಿತ್ತದಿ ಹರುಷವಾಗುವುದು ||
ನಿನ್ನ ದರುಶನದಿ ಮನವರಳಿ ಹೂವಾಗುವದು |
ಅನ್ಯಥಾ ಭೇದಿಸದೆ ಸದಾ ಸಕಲರ ಪೊರೆಯುವವನೇ ||
ನಿನ್ನ ನಿಜ ಭಕುತಿಯಲಿ ಮುಳುಗುವ ಸೌಭಾಗ್ಯ ಕೊಡು |
ನೀನೇ ನನಗೆ ಪರಮಾಗತಿ ಶ್ರೀ ಕೃಷ್ಣವಿಟ್ಠಲ ||
223. ಹೊಡಿ, ಬಡಿ, ಜಡಿ, ಕಡಿ, ಸುಡು ಬೇಡುವೆನೊಂದೇ |
ಕಡೆಗೂ ನಿನ್ನ ಬಿಟ್ಟರೆ ಅನ್ಯಗತಿಯಿಲ್ಲ, ಸುಖವಿಲ್ಲ ||
ದಡ ಸೇರಿಸು ನೋಡುವೆ ಒಮ್ಮೆ ಮನ ದಣಿಯಾ |
ಬಿಡದೆ ಪಾಲಿಸೋ ದಯದಿ ಶ್ರೀಕೃಷ್ಣವಿಟ್ಠಲಾ ||
224. ಅನ್ಯರ ದೂಷಿಸಿ, ದ್ವೇಷಿಸೇ ಸಿಗುವುದು ಏನೋ |
ವೈಮನದಿ ಕೋಪ-ತಾಪದಿ ಕಳೆದುಕೊಳ್ಳುವುದೆ ಬಹಳ ||
ಮನಸಾ ಪ್ರೀತಿಸೇ ಶಾಂತಿ ಒಲುಮೆ ಸಿಗುವುದು |
ಕನ್ನಡಿಯಂತಿರ್ಪುದೀ ಜಗ ಶ್ರೀಕೃಷ್ಣವಿಟ್ಠಲನಾಣೆಗೂ ಸತ್ಯ ||
225. ಎಲ್ಲ ದೇಶಗಳಲ್ಲಿ ಭರತ ಖಂಡ ಶ್ರೇಷ್ಠ |
ಎಲ್ಲಯೋನಿಗಳಲ್ಲಿ ಮಾನವ ಜನ್ಮ ಶ್ರೇಷ್ಠ ||
ಎಲ್ಲ ಮನೆಗಳಲ್ಲಿ ದೇವರ ಮನೆ ಶ್ರೇಷ್ಠ |
ಎಲ್ಲ ಅನ್ನಗಳಲ್ಲಿ ನೈವೇದ್ಯನ್ನ ಶ್ರೇಷ್ಠ ||
ಎಲ್ಲ ಸಂಗಗಳಲ್ಲಿ ಸತ್ಸಂಗ ಶ್ರೇಷ್ಠ |
ಎಲ್ಲ ಸಾಧನೆಗಳಲ್ಲಿ ಮೋಕ್ಷ ಸಾಧನೆ ಶ್ರೇಷ್ಠ ||
ಎಲ್ಲ ಗುರುಗಳಲ್ಲಿ ಸಂತೋಷ ತೀರ್ಥರು ಶ್ರೇಷ್ಠ |
ಎಲ್ಲ ದೇವರಲ್ಲಿ ಪುರುಷೋತ್ತಮ ಶ್ರೀಕೃಷ್ಣವಿಟ್ಠಲ ಶ್ರೇಷ್ಠ ||
226. ಭಾಗವತ ಎಂದರೆ ಎನ್ನ ಭಾಗವ-ತಾ |
ಭ ಎಂದರೆ ಭಕ್ತಿ, ಗ ಎಂದರೆ ಜ್ಞಾನ, ವ ಎಂದರೆ ವಿರಕ್ತಿ ||
ಇವುಗಳನ್ನು ಮನೋಬುದ್ಧಿ, ಇಂದ್ರಿಯಗಳಲಿ ತುಂಬಿ ತುಳುಕಿಸಿದಾಗ |
ತ ಎಂದರೆ ತರುವುದು ಭಾಗವತ ತತ್ವ, ಆಗುವುದು ಶ್ರೀಕೃಷ್ಣವಿಟ್ಠಲನ ದರ್ಶನ ||
227. ಆನಂದ ಆನಂದ ಆತ್ಮಪರಮಾತ್ಮ ಸಂಬಂದ ತ್ರಿಶುದ್ಧಿಲಿ ತಿಳಿದವಗೆ |
ಆನಂದ ದೇಹದ ಚತುರ್ವಿಂಶತಿ ತತ್ವ ತಿಳಿದವಗೆ ||
ಆನಂದ ಪಂಚಭೇದ, ತಾರತಮ್ಯ ಕಾರುಣ್ಯವರಿತವಗೆ |
ಆನಂದ ತತ್ತ್ವೇಶರ ಕಾರ್ಯ ಸ್ಥೂಲದಿ ಅರಿತವಗೆ ||
ಆನಂದ ತತ್ತ್ವೇಶರಲ್ಲಿದ್ದ ಮುಖ್ಯಪ್ರಾಣನ ಪಾತ್ರವರಿತವಗೆ |
ಆನಂದ ಪ್ರಾಣನಲ್ಲಿದ್ದ ಶ್ರೀಕೃಷ್ಣವಿಟ್ಠಲನ ಪ್ರಸಾದಿತಗೆ ||
228. ನಿತ್ಯದಲ್ಲಿ ನಿತ್ಯಮಂಗಳ ಚರಿತನಾದ ಪರಮಾತ್ಮನ |
ನಿತ್ಯಚಿಂತನದಿಂದಲೇ ದೊರಕುವುದು ನಿತ್ಯಮಂಗಳ ||
ಸಾತ್ತ್ವಿಕ ಸದ್ವಾಸನಾ ಅಭಿಲಾಷೆಯೇ ಪುಣ್ಯ ಲೋಕಗಳ ಪ್ರಾಪ್ತಿ |
ಸ್ವತಂತ್ರ ಶ್ರೀಕೃಷ್ಣವಿಟ್ಠಲ ಅನುಗ್ರಹಿಪ ಯದೃಚ್ಛಾಲಾಭ ಸಂತುಷ್ಟನ ||
229. ಹಿಂದೆ-ಇಂದು-ಮುಂದೆ ಮಾಡಿದ,
ಮಾಡುವ ಕರ್ಮಫಲ ಅರ್ಪಿಸುವೆ |
ಹಿಂದಿನದು ಗೊತ್ತಿಲ್ಲಾ, ಮುಂದೇ ಈ ಬುದ್ದಿ
ಇರುವುದೊ ಇಲ್ಲವೋ ತಿಳಿಯದು ||
ಮುಂದೇ ಮಾಡುವುದನ್ನು ಇಂದೇ
ನಿನಗೊಪ್ಪಿಸಿರುವೆ ದಯದಿ ಸ್ವೀಕರಿಸು |
ಇಂದಿರಾರಮಣ, ಸದಾನಂದ, ಸಖ ಶ್ರೀಕೃಷ್ಣವಿಟ್ಠಲ ಇಂದೇ
ಎನ್ನ ಒಪ್ಪಿಕೊ ಇಲ್ಲಾ ಅಪ್ಪಿಕೊ ||
230. ಮುಂದೆ ನರಸಿಂಹ ರಕ್ಷಿಸೇ, ಹಿಂದ ನಂದನ ಕಂದ |
ಎಡಬಲದಲಿ ಧನುರ್ಧಾರಿ ಶ್ರೀರಾಮಲಕ್ಷ್ಮಣರಿರೇ ||
ಇಂದಿರಾರಮಣ ಎನಗೇತರ ಭಯವೋ |
ಸದಾ ಎನ್ನ ನಡೆ-ನುಡಿ ಕಾಯ್ವ ಶ್ರೀಕೃಷ್ಣವಿಟ್ಠಲ ||
231. ಆಡಿಸಿದಂತೆ ಆಡುವ | ನುಡಿಸಿದಂತೆ ನುಡಿವ ||
ನಡೆಸಿದಂತೆ ನಡೆವ | ಓಡಿಸಿದಂತೆ ಓಡುವ ||
ಕೂಡಿಸಿದಂತೆ ಕೂಡುವ | ದಡ ಸೇರಿಸಿದರೆ ಸೇರುವ ||
ಹಿಡಿತಕ್ಕೆ ಸಿಗದ ಜಗ್ಗದ (ಲೌಕಿಕದಿ) | ಕಡಲಾಬ್ಧಿವಾಸನ ಕೈಗೊಂಬೆ ||
ಕೊಂಡವರ ವಶವಾಗುವ (ಜನ್ಮದಾತರ) | ಮಂಡೆ ತಗ್ಗಿಸಿ ಹೇಳಿದಂತೆ ಕೇಳುವ || (ಪರಮಾತ್ಮನಧೀನ)
ಕಂಡವರ ಕಡೆಗಣಿಸುವ (ಅಹಂ)| ಗುಂಡಾಕೃತಿಯಲ್ಲಿ ಸುತ್ತುವ || (ಸಂಸಾರದಿ)
ಮಾಡದೆಯೂ ತಾ ಮಾಡಿದಂತೆ | ಒಡೆತನವ ತೊರಿಸಿಕೊಳ್ಳುವ ||
ಕಡೆಗಣಿಸಿದರೂ ಓಲೈಸುವ (ಸಂಸಾರದಿ ಹೀನ ಬದುಕು) | ಭಂಡತನದಿ ಬದುಕುವ ||
ಲಂಡತನದೀ ಜೀವ| ಅಂಡಲೆದರು ಬಿಡದೆ ||
ಉಂಡುಂಡು ತೇಗಿದರೂ| ಕಡಿಮೆಯಾಗದ ಕಾಮ ||
ಬಿಡುಗಡೆಗೆ ಯತ್ನಿಸದೆ| ಮೂಢತನದಿ ತನ್ನನರಿಯದೆ || (ಆತ್ಮ)
ಜಡ ಶರೀರವೇ ತಾನೆಂದು| ಒಡನೆ ಮೆಚ್ಚಿ ಶಾಶ್ವತ ತಾನೆಂದು ತಿಳಿದು ||
ಸಡಗರದಿ ಜನ್ಮ ಕಳೆದು| ಕೊಡಮಾಡಿದವರ ಮರೆತು || (ಪರಮಾತ್ಮನ)
ಪಡೆಯದೆ ಮುನ್ನ ಸುಜ್ಞಾನ| ಕಡೆಗೆ ಪರಿತಪಿಸಿದರೇನು ಬಂತು ಭಾಗ್ಯ ||
ಮುಂಡೆ ಹೂ-ಜಡೆಗತ್ತಂತೆ | ಸೊಡರು ಆರಿದಮೆಲೆ ಸೂಜಿ ಹುಡುಕಿದಂತೆ ||
ಹೆಡೆಮುರಿಗಿ ಕಟ್ಟಿ ಎಳೆದೊಯ್ವಾಗ | ಗಂಡರ ಗಂಡ ಶ್ರೀಕೃಷ್ಣವಿಟ್ಠಲನ ನೆನೆಯದಿರೆ ||
232. ಬಾಧಕಗಳೆಲ್ಲ ಸಾಧಕವಾಗಲಿ ಅನುದಿನ ಸಾಧನೆ ಹೆಚ್ಚಲಿ |
ಬಂಧಕ ವಿಷಯದಿಂದ ವಿಮುಖವಾಗಲಿ ಇಂದ್ರಿಯ ||
ದುರ್ದಿನಗಳೆಲ್ಲಾ ಸುದಿನವಾಗಿ ಸಂತೈಸಲಿ ನಿತ್ಯ |
ಬಿದ್ದು ಹೊಗುವ ಮುನ್ನ ತೀರಲಿ ಪ್ರಾರಬ್ಧವೆಲ್ಲಾ ||
ಬಂಧು ಬಾಂಧವರ ಸಂಗತೊರೆದು ಏಕಾಂತವಾಗಲಿ ಮನ |
ವೃಂದಾವನಸ್ಥ ವರದೇಶ ವರಪ್ರದ ಶ್ರೀಕೃಷ್ಣವಿಟ್ಠಲನ ದಯದಿ ||
233. ಒಂದೇ ಮನದಿ ಬೇಡುವೆ ನಿರ್ಮಲ, ನಿಚ್ಚಳ, ನಿರವಧಿಕ,
ನಿರಂತರ ನಿತ್ಯ, ನಿಜ ಭಕುತಿ ನಿನ್ನ ಪದತಲದಿ |
ಇದೇ ಜ್ಞಾನ ಇರಲಿ ಸಾಕು ಪ್ರತಿ ಜನುಮದಿ,
ಇದನ್ನೇ ದಯಪಾಲಿಸು ಶ್ರೀಕೃಷ್ಣವಿಟ್ಠಲ ||
234. ಅತ್ತ-ಇತ್ತ, ಸುತ್ತ-ಮುತ್ತ ಎತ್ತಲೂ ಪ್ರತೀ ಜನುಮದಿ |
ಕರ್ತೃ ಪ್ರೇರಕ ಶ್ರೀಕೃಷ್ಣವಿಟ್ಠಲನೇ ಕಾಣಲಿ ದಯದಿ ||
235. ಖಾಲಿ ಕೈಲಿ ಬಂದು ಜೀವನದಿ ಸರ್ವಸುಖ |
ಓಲೈಸಿ ಲೀಲೆಯಲಿ ಸಂಸಾರ ಜಯಿಸಿ ||
ಕೆಲಕಾಲ ಸುಖದಿ ಅತಿಥಿಯಂತಿದ್ದು |
ಕಾಲಕರೆದಾಗ ಒಲ್ಲೆಯೆಂದರೆ ಬಿಡದೆ ಒಯ್ವ ಶ್ರೀಕೃಷ್ಣವಿಟ್ಠಲ ||
236. ಹರಿದು ಸುರಿದು ಬಂದಾಗ ಸಂಸಾರದಿ |
ಸರಿಯಾಗಿ ಸರಿದು ಇರದಿದ್ದರೆ ||
ಸರ್ರನೇ ಸರಿಯುವ ಸಮಯದಿ |
ಕರೆಕರೆ ಮಾಡಿದರೆ ಕೇಳುವನೇ ಶ್ರೀಕೃಷ್ಣವಿಟ್ಠಲ||
ಪರರ ಪರಿವೆ ಇಲ್ಲದೆಸ್ವಾರ್ಥಿಯಂತೆ |
ಪರಜ್ಞಾನ ಗಳಿಸದೆ ಪ್ರಾಣಿಯಂತೆ ||
ಹೆರವರ ಉಪಕಾರ ಭಾರಹೊತ್ತಂತೆ |
ಪರೋವರ ಶ್ರೀಕೃಷ್ಣವಿಟ್ಠಲ ಮೆಚ್ಚುವನೇ? ||
ಬಂದಾಗ ಇಲ್ಲದ ಅಹಂ-ಮಮಕಾರ |
ಬಂದ ಮೇಲೆ ಬಿಡದೆ ಗಳಿಸಿದ ಆಸ್ತಿ ||
ಇದ್ದಾಗ ಮೆರೆದು, ತೊರೆಯದೆ |
ಒಯ್ದರೆ ಜೊತೆಯಲಿ ಶ್ರೀಕೃಷ್ಣವಿಟ್ಠಲ ಶಿಕ್ಷಿಸದಿರುವನೇ ||
237. ಪತಿ ಮಾಡಿದ ಪುಣ್ಯದಲಿ ಸತಿಗೆ ಸಮಪಾಲು |
ಸತಿ ಮಾಡಿದ ಪುಣ್ಯದಲಿ ಪತಿಗೆ ಪಾಲಿಲ್ಲ ||
ಪತಿ ಮಾಡಿದ ಪಾಪ ಸತಿಗೆ ಪೊಗದು |
ಸತಿ ಮಾಡಿದ ಪಾಪದ ಪಾಲು ಪತಿಗುಂಟು ||
ಪ್ರತಿಜನುಮದ ಪತಿ ನೀನೆನಗೆ ಶ್ರೀಕೃಷ್ಣವಿಟ್ಠಲ ರಕ್ಷಿಸನವರತ ||
238. ನೆಂಟರೆಲ್ಲಾ ಇಷ್ಟರಲ್ಲಾ |
ಇಷ್ಟರೆಲ್ಲಾ ನೆಂಟರಲ್ಲಾ ||
ಕಂಟಕ ಕಳೆವ ಶ್ರೀಕೃಷ್ಣವಿಟ್ಠಲ |
ಒಂಟಿ ಜೀವಕೆ ನೀನೇ ನೆಂಟ-ಇಷ್ಟ ||
239. ಬಗೆಬಗೆಯ ಉಪದೇಶ ಪೇಳುವರೆಲ್ಲಾ ಆಪ್ತರಲ್ಲಾ |
ಒಗೆತನದ ಮಾತಿನಲ್ಲಿ ಹೊಗೆ ಹಾಕುವರು ||
ಕಂಗೆಡಿಸಿ ಬೇಕೆಂದೆ ದಾರಿ ತಪ್ಪಿಸುವರು |
ಅಗ್ರೇಶ ಶ್ರೀಕೃಷ್ಣವಿಟ್ಠಲನ್ನೇ ನಂಬಿದರೆ ಉದ್ಧರಿಸುವಾ ||
ಸಾಧನೆಯಲ್ಲಿ ಪಂಚಪ್ರಾಣರ ವ್ಯಾಪಾರ ||
240. ಎಲ್ಲ ಕೊಡುವವ ನೀನೇ, ಕೊಡಲು ಬುದ್ಧಿಕೊಡುವವ ನೀನೇ |
ಕಲ್ಪಿಸಿ ಅವಕಾಶ ಕೊಡಿಸುವವ ನೀನೇ ಶ್ರೀಕೃಷ್ಣವಿಠ್ಠಲ ||
ಎಲ್ಲ ಬಲ್ಲಿದ್ದು ಅಹಂ ಮಾತ್ರ ಎನಗೇಕೆ ಕೊಡುವಿ? ||
241. ಮೃತ್ಯುವು ಬಡವ-ಶ್ರೀಮಂತ ಭೇದವಿಲ್ಲದೆ |
ಸತ್ಯದಿ ಸಕಲರಿಗೂ ಸಮಾನದಿ ಬರುವುದು ||
ಮೃತ್ಯುವಿಗೂ ಮೃತ್ಯುವಾದ ಶ್ರೀಕೃಷ್ಣವಿಟ್ಠಲನ |
ನಿತ್ಯದಿ ಸೇವಿಸಿ ಜೀವಿನ ಧನ್ಯವಾಗಿಸಿಕೋ ||
242. ಬೇಡುವವರಿಗೆ ನೀಡದೇ ಮೂದಲಿಸಬೇಡ |
ಕೊಡದಿದ್ದರೆ ಮುಂದೆ ನೀನು ಬೇಡುವವನಾಗುವಿ ||
ಒಡನೆಯೇ ಕೊಡು ಇಲ್ಲದಿದ್ದರೆ ಬುದ್ಧಿ ಬದಲಾಗುವುದು |
ಒಡಲು ಹೊಯ್ಯಲು ಶ್ರೀಕೃಷ್ಣವಿಟ್ಠಲನಿರೆ ನಿನಗೇತರ ಚಿಂತೆ ||
243. ದೊಡ್ಡವರ ಅಪಮಾನಿಸಬೇಡಾ | ನಿಂದೆಯ ಫಲ ವಜ್ರಲೇಪದಂತೆ ||
ಬಿಡದೇ ನಿನ್ನ ಬವಣಿ ಪಡಿಸಿ ಹಾನಿಮಾಳ್ಪುದು ||
ವೇದ, ಬ್ರಾಹ್ಮಣ, ಗೋಪೂಜೆ ಪೂಜಿಸದವರ ಸಾಧನೆ ವ್ಯರ್ಥ ||
ಉದ್ದಾರ ಕರ್ತ, ಶ್ರೀಕೃಷ್ಣವಿಟ್ಠಲನ ಸಂಗ ಬಿಟ್ಟು ಕೆಡಬೇಡ ||
244. ಅಂತರಂಗ ಸಖ, ಸರ್ವಾಂತಯಾಮಿ, ಸರ್ವಪ್ರೇರಕ,
ಮೂಕಪ್ರೇಕ್ಷಕ ಅನವರತ ಸಂಗಾತಿ |
ಇತ್ತೆನಗೆ ಅಮಲ ಭಕುತಿ ಪರಿಪಾಲಿಸೊ ಕರುಣಾಕರನೇ ||
ಸತತ ನಿನ್ನ ಸ್ಮರಣೆಯಲ್ಲಿದ್ದು ಅನ್ಯಾಪೇಕ್ಷೆ
ಇಲ್ಲದಂತೆ ದಯಮಾಡೋ ಶ್ರೀಕೃಷ್ಣವಿಟ್ಠಲ ||
245. ಏಸು ಜನುಮ ಕಳೆದವೋ, ಏಸು ತಾಯಿ, ತಂದೆ,
ಬಂಧುಬಳಗವೋ ಒಡೆಯಾ |
ನೀನೇ ನನ್ನ ಶಾಶ್ವತ ತಾಯಿ ತಂದೆ ಎಲ್ಲ ಜನುಮಕೂ |
ನೀನೆ ನನ್ನ ಬಂಧು ಬಳಗ ||
ನಿನ್ನ ಬಿಟ್ಟು ಅನ್ಯರ ಭಜಿಸದಂತೆ ಮಾಡೋ
ಶ್ರೀಕೃಷ್ಣವಿಟ್ಠಲ ನೀನೆ ನನ್ನ ಪರದೈವ ಸದಾ ||
246. ಲೋಕದಿ ಮನುಜರ ಮೆಚ್ಚಿಸಲರಿಯೇ,
ಎನ್ನ ಮಾಧವನ ಮನವ ಮೆಚ್ಚಿಸಬಹುದು |
ಪರಿಪರಿ ಸ್ತುತಿಸೆ ಪರರಿಂದ ಅಪವಾದ ತಪ್ಪದು,
ಆರ್ತದಿಂದೊಮ್ಮೆ ಕರೆಯೇ ಅನಿಕೇತನೊಲಿವಾ ||
ಪರರ ಆಪೇಕ್ಷೆಗೆ ಮಿತಿಯಿಲ್ಲಾ, ಅಮಿತವಿಕ್ರಮನ ಅವಿರತ
ನೆನೆದೊಡೆ ಶ್ರೀಕೃಷ್ಣವಿಟ್ಠಲನ ಕಾರುಣ್ಯಗೆ ಎಣೆಯಿಲ್ಲಾ ||
247. ನನ್ನ ಕರ್ಮವೆಲ್ಲಾ ನಿನ್ನ ಸೇವೆಯಾಗಲಿ,
ನಿನ್ನ ಸೇವೆಯೇ ನನ್ನ ಕರ್ಮವಾಗಲಿ |
ನಿನ್ನ ಇಚ್ಛೆಯೇ ನನ್ನ ಇಚ್ಛೆಯಾಗಲಿ, ನನ್ನಜೀವ,
ಆತ್ಮ ಎರಡೂ ಪರಮಾತ್ಮನದಾಗಲಿ ||
ನಿರಂತರ ನಿನ್ನ ಧ್ಯಾನ ನನದಾಗಲಿ, ಸದಾನುಗ್ರಹ ಎನಗಾಗಲಿ |
ಶ್ರೀಕೃಷ್ಣವಿಟ್ಠಲನ ಸ್ಮರಣೆ ಸೌಭಾಗ್ಯದಿಂದ ನನದೆಲ್ಲಾ ನಿನ್ನದಾಗಲಿ ||
ನಾನು ಸದಾ ನಿನ್ನವನಾದರೆ ಸಾಕು ಎಂದೆಂದಿಗೂ ಮರೆಯದಿರು ||
248. ಪ್ರತ್ಯಕ್ಷ ಕಂಡು, ಎಲ್ಲಾ ಕೇಳುವ, ಹೇಳುವ |
ಸರ್ವವಿದಿತ ಮನಸ್, ಸರ್ವ ಪ್ರೇರಕನೇ ||
ಪ್ರಾಣ, ಗುಣಪೂರ್ಣನಾದ ಸಂಹಾರಕನೇ |
ಬ್ರಹ್ಮಗಿರಿಯಾದ ನಮ್ಮ ಶ್ರೀಕೃಷ್ಣವಿಟ್ಠಲ ||
249. ಜೀವ-ಈಶ್ವರ ಭೇದ, ಜೀವ-ಜೀವಕೆ ಭೇದ |
ಜಡ-ಈಶ್ವರ ಭೇದ, ಜಡ-ಜಡಕೆ ಭೇದ ||
ಜಡ-ಜೀವಕೆ ಭೇದ ಸತ್ಯವಿದು ಪಂಚಭೇದವು |
ಮುಕ್ತಿ, ಸಂಸಾರದಲ್ಲೂ ಅನ್ಯಥಾ ಹೇಳಿದರೆ ನರಕ ತಪ್ಪದು ||
ಜಗತ್ತು ಮಿಥ್ಯೆಯಾದರೆ ತಾನೂ ಮಿಥ್ಯೆಯೇ |
ನಿಯಾಮಕನಿಲ್ಲವೆಂದು ಅಸತ್ಯವಾದಿ ನುಡಿಯೇ ||
ಅಲ್ಪ ಜ್ಞಾನಿಗಳು ಜನ್ಮಜನ್ಮದಲಿ ಅಸುರಯೋನಿಯಲಿ ಜನಿಸಿ |
ಅನಿಕೇತನ ಪಡೆಯದೇ ನಿತ್ಯನರಕದಲ್ಲಿ ಪೊರಳುವರು ||
ಈ ಜನ್ಮವು ಮುಂದಿನ ಜನ್ಮಕ್ಕೆ ಒಂದು ಸಿದ್ಧತೆ ಮಾತ್ರ |
ಶ್ರೀಕೃಷ್ಣವಿಟ್ಠಲನ ದಯದೀ ಸುಜ್ಞಾನ ನಿತ್ಯವೂ ದೊರಕಲಿ ||
250. ನೀ ಎನ್ನ ಹೃದಯದಲಿ | ನಾ ನಿನ್ನ ಸನಿಹದಲಿ ||
ನಾ ನಿನ್ನ ಧರಿಪೆ | ನೀ ಎನ್ನ ಭರಿಸೋ ಶ್ರೀಕೃಷ್ಣವಿಟ್ಠಲ || ಜೀಯಾ ||
251. ಬೇಡಿದರೂ ಕೊಡಲಾಗದರಿಗೆ ಕರೆದುಕೊಡುವ ಮನಸ್ಸೆಲ್ಲಿ? |
ಮನುಜರಲ್ಲೇ ಕರುಣೆ ತೋರದವಗೆ ಪ್ರಾಣಿಗಳಲ್ಲಿ ದಯೆಯೆಲ್ಲಿ? ||
ಹಸಿದವರ ಮುಂದೆ ಸುಗ್ರಾಸ ಭೋಜನ ಮಾಡುವವ ಕಾಗೆಗಿಂತ ಕಡೆ |
ಹೃದಯವಂತಿಕೆ ಇಲ್ಲದವನ ಜೀವನ ಇಹಪರದಲ್ಲೂ ದು:ಸ್ಸಹ ||
ಶ್ರೀಕೃಷ್ಣವಿಟ್ಠಲನ ಭಜಿಸದಿರುವನ ಜನುಮ ವ್ಯರ್ಥ ||
252. ತಿಳಿಯಬೇಕು ತಿಳಿದು ತಿಳಿಸಬೇಕು |
ಒಳ್ಳೆಯದು ಹೇಳಿದರೆ ಕೇಳಬೇಕು ||
ತಿಳಿಯಾಗಿರುವುದ ನೋಡಬೇಕು |
ಗಿಳಿಯಂತೆ ಶ್ರೀಕೃಷ್ಣವಿಟ್ಠಲ ಹೇಳಿದ್ದು ಕೇಳಬೇಕು ||
253. ನವ ನವದ್ವಾರದಿ ಒಳಬರುವ ಅರಿಷಡ್ವರ್ಗಗಳ |
ನವ ನವರೀತಿಯಿಂ ಕರ್ಮಬಂಧಕವಾಗದಂತೆ ||
ನವವಿಧ ಭಕುತಿ ಅಹರ್ನಿಶಿ ಮಾಡಲು |
ನವೋದಯದಿ ಆತ್ಮಶುದ್ಧಿಯಾಗುವುದು ||
ಸರ್ವಸಮರ್ಪಣವೆನೆ ಶುದ್ಧಜ್ಞಾನ ಪ್ರಾಪ್ತಿ |
ನಾವೆ ತೀರ ಸೇರುವಂತೆ ಸುಜ್ಞಾನ ಕಾರಣ ಮುಕುತಿಗೆ ||
ಯಾವತ್ತೂ ಮಾಡುವ ಕಾರ್ಯ, ಕರ್ಮ, ಕಾರಣ ಕರ್ತೃ |
ಅವಿನಾಶಿ ಶ್ರೀಕೃಷ್ಣವಿಟ್ಠಲನಲ್ಲದೆ ಬೇರಾರುಂಟು ||
254. ನಮ್ಮ ಉಸಿರು ನಾವೇ ತೆಗೆದುಕೊಳ್ಳುವಂತೆ |
ನಮ್ಮ ಕಣ್ಣೇ ನಮಗೆ ನೋಟ ತೋರುವಂತೆ ||
ನಮ್ಮ ಹಸಿವಿಗೆ ನಾವೇ ಉಣ್ಣುವಂತೆ |
ನಮ್ಮ ಹೃದಯ ಮಿಡಿದರೆ ನಾವೇ ಜೀವಿಸುವಂತೆ ||
ನಮ್ಮ ಸಾಧನೆ ನಾವೇ ಮಾಡಿದಾಗ ಮಾತ್ರ |
ನಮ್ಮ ಜೀವನ ಸಾರ್ಥಕತೆ ಪಡೆಯುವುದು ||
ನಮ್ಮ ದೇಹದಿ ದೇವ ಶ್ರೀಕೃಷ್ಣವಿಟ್ಠಲ ಇರುವರೆಗೂ |
ನಮ್ಮ ಜೀವ, ಜೀವನ, ನಂತರ ಯಾವುದು ಏನಾದರೇನು ||
255. ಹರಿಯಂತಹ ಮನವ ಅತ್ತಿತ್ತ ಹರಿಗೊಡದಲೆ |
ಹರಿದಿನದಿ ಬರೀ ಹರಿ ಚಿಂತನೆಯಲಿ ಕಳೆಯುತ ||
ಸರಿಯಾಗಿ ರಾತ್ರಿ ಜಾಗರಣೆ ಮಾಡುತ |
ಮರುದಿನ ಪಾರಣೆಯ ಹೊತ್ತುಕಳೆಯದೆ ಮಾಡಲು ||
ಸರ್ವೇಶ ಶ್ರೀಕೃಷ್ಣವಿಟ್ಠಲ ತನ್ನ ಪದ ಸಮೀಪವಿಡುವ ||
256. ಅಚಿಂತ್ಯಾಶಕ್ತಿ ಸ್ವತಂತ್ರ ಸ್ವಗತಾಭೇದ |
ಅಚೇತನ ಶರೀರ ಗುಣರಹಿತ ||
ಅಚ್ಚುಮೆಚ್ಚಿನ ಅಚ್ಯುತ ಸಚ್ಚಿದಾನಂದಾತ್ಮಕ |
ಸ್ವಚ್ಛ ಮೂರುತಿ ಶ್ರೀಕೃಷ್ಣವಿಟ್ಠಲನಲ್ಲದೆ ಬೇರ್ಯಾರು? ||
257. ವೇದವೇ ಸರ್ವಧರ್ಮದ ಮೂಲ |
ಸರ್ವ ವೇದವೇ ಪರಮಾತ್ಮನರಿವಿಗೆ ||
ವೇದದಿ ಪೇಳಿದಂತೆ ಶ್ರೀಕೃಷ್ಣವಿಟ್ಠಲನಾ |
ರಾಧಿಪರಿಗೆ ಶ್ರೇಷ್ಠಪರಗತಿಯೇ ಪ್ರಾಪ್ತಿ ||
258. ಯಾರು ಹಳಿದರೇನು, ಯಾರು ಹಂಗಿಸಿದರೇನು |
ಯಾರು ಹೂಗಳಿದರೇನು, ಯಾರು ಹೀಯಾಳಿಸಿದರೇನು ||
ಯಾರಿಂದ ನನಗೇನು ಭಯ, ಯಾರಿದ್ದರೇನು ಇಲ್ಲದಿದ್ದರೇನು |
ಬೇರಾವ ಚಿಂತೆಗಳೆನಗಿಲ್ಲ ಕಾರುಣ್ಯಗುಣ ನಿಧಿ ||
ಶ್ರೀಕೃಷ್ಣವಿಟ್ಠಲ ನಿನ್ನ ಬಿಟ್ಟರಿನ್ಯಾರ ಭಿಡೆ ಎನಗಿಲ್ಲ ||
259. ರಥದಿ ಕುಳಿತಿಹ ಜೀವ ಸಾರಥಿ ಪರಮಾತ್ಮ |
ತಥಾಸ್ತು ಎನ್ನುತ ಯಾಚಕಗೆ ಸದಾ ||
ಸ್ವಾರ್ಥ ಕೇಳಲಿ ಪಾರಮಾರ್ಥ ಕೇಳಲಿ ತಥಾಸ್ತು |
ಮಥಿಸಿ ಮನವ ಮಾರ್ಗಸೂಚಿಪ ಸದ್ಭಕ್ತಿಗೆ ಒಲಿದು ||
ಪಂಥವನಾಡುವ ಪಂಚಪ್ರಾಣನಾಡಿಸುತ ಸರ್ವಕರ್ತೃ |
ಇಂಥಾ ಉದ್ಗೀಥ ಶ್ರೀಕೃಷ್ಣವಿಟ್ಠಲ ಸ್ವಯಂಭೂ ಸರ್ವೇಶ ||
260. ತನ್ನತನವ ಬಿಡದೆ ಇನ್ನೊಬ್ಬರಗೂ ಪೂರ್ಣತಿಳಿಸದೆ |
‘ಅನ್ನಂ ದೇಹಿ’ ಎಂದವರಿಗೆ ನಾಸ್ತಿ ಎನ್ನದೆ ||
ಉನ್ನತ ಪ್ರಾರ್ಥಿಪರಿಗೆ ಇಹ-ಪರ ಸುಖ ವೀವ |
ಮನವನಿತ್ತರೆ ತನ್ನನೀವ ಶ್ರೀಕೃಷ್ಣವಿಟ್ಠಲ ಭಕ್ತಾನಾಂ ವಶಃ ||
261. ಇಳೆಯ ಕೊಳೆ ಚಿಂತೆಮಾಡಿ ಕೆಡಬೇಡಾ |
ತಿಳಿ ನೀರ ಮನ, ಒಳಕೊಳೆ ತೊಳೆವುದು ||
ತಿಳಿ ನೀ ರಮಣನ, ಒಳ ಕೊಳೆ ತೊಳೆವುದು |
ಒಳಗೊಳಗೆ ಧ್ಯಾನಿಸು ಶ್ರೀಕೃಷ್ಣವಿಟ್ಠಲನ ಅನವರಿತ ||
262. ಹಗೆತನದಿ ಸಾಧಿಸುವುದೇನು? | ಹಗರಣದಿ ಆಗುವುದೇನು? ||
ಬಿಗುಮಾನದ ಬಗೆಯಲಿ ಸಗ್ಗಸುಖವಿರದು |
ಜಗದಕಗ್ಗಂಟು ಹರಿಯದು ಚೆನ್ನಾಗಿ ತಿಳಿಯುವತನಕ ||
ಸೋಗಿನ ಮಾತಿಗೆ ಒಲಿಯನು ಮಂಗಳಾಂಗ ಶ್ರೀಕೃಷ್ಣವಿಟ್ಠಲ ||
263. ಶಕ್ತಿಯೇ ದೇಹದಿ ಭಕ್ತಿಯಾಗಿ |
ಭಕ್ತಿಯೇ ಜ್ಞಾನದ ಜೊತೆಯಾಗಿ ||
ಮುಕ್ತಿ ಪಥಕೆ ಕರೆದೊಯ್ಯುವುದು |
ಶ್ರೀಕೃಷ್ಣವಿಟ್ಠಲನ ಕೃಪೆ ಇರಲು ||
264. ಸಂತತ ವಿಷಯ ಚಿಂತೆ ಚಿತೆಗೆ ದಾರಿ |
ಸಂತರ ಸಂಗ ಸದ್ಭಕ್ತಿಗೆ ದಾರಿ ||
ಸತ್ಯ ನಿರ್ಮಲ ಭಕ್ತಿ ಮುಕ್ತಿಗೆ ದಾರಿ |
ಶಾಂತ ಶ್ರೀಕೃಷ್ಣವಿಟ್ಠಲನಾಮ ಸರ್ವ ದುರಿತಾಪಹಾರಿ ||
265. ಬೇರೆಯವರು ನಮ್ಮ ಗುಣ-ದೋಷ ತಿಳಿಸುವುದಕ್ಕಿಂತ |
ಸರಿಯಾಗಿ ನಮ್ಮನ್ನು ನಾವೇ ಅರಿತರೆ ಉತ್ತಮ ||
ಇರುವುದನ್ನು ಒಪ್ಪಿಕೊಂಡು ತಿದ್ದಿ ನಡೆದರೆ ಮಧ್ಯಮ |
ಶ್ರೀಕೃಷ್ಣವಿಟ್ಠಲನ ಮರೆತು ಅಹಂಕಾರದಿ ಮೆರೆದರೆ ಅಧಮ ||
266. ಹಣ ಹಣವೆಂದು ಓಡಿ ಓಡಿ ದಣಿವುದ್ಯಾಕೆ |
ಅಣುರೇಣು ತೃಣದಲ್ಲಿರುವ ಗುಣೈಶ್ವರ್ಯ ||
ಒಣ ಪ್ರತಿಷ್ಠೆ ಬಿಟ್ಟರೆ ಕಣಕಣದಲ್ಲೂ ಕಾಣುವ |
ಕ್ಷಣವೂ ಜೊತೆ ಬಿಡದಿರುವ ಶ್ರೀಕೃಷ್ಣವಿಟ್ಠಲನೆಂಬ ಶ್ರೇಷ್ಠನಿಧಿ ಕಾಣಿರಿ ||
267. ಗುರುಭಕ್ತಿ ಎಂಬ ಅಮೃತವ ಸವಿಯಿರಿ |
ಗುರುಸೇವೆಯಲಿ ಪಾಪವ ಕಳೆಯಿರಿ ||
ಗುರುದರುಶನದಿ ಸುಖವ ಕಾಣಿರಿ |
ಪೂರ್ವಜನುಮದ ಪುಣ್ಯದಿಂ ಸಿಗುವುದೀ ಭಾಗ್ಯ ||
ಗುರು ಆಶೀರ್ವಾದವೇ ಸುದೈವ |
ಶ್ರೀಕೃಷ್ಣವಿಟ್ಠಲನ ಪರಮಾನುಗ್ರಹವೆಂದು ತಿಳಿಯಿರಿ ||
268. ಅಖಿಲ ಜಗತ್ ದುಃಖ ಭಂಜಕ |
ಪ್ರಖರ ಸುಖಪ್ರದಾತ ||
ಶಂಖ-ಚಕ್ರ, ಮುಕುಟಧರ |
ಸುಖಾತ್ಮ ಸಖ ಶ್ರೀಕೃóಷ್ಣವಿಟ್ಠಲ ಪಾಹಿಮಾಂ ಪಾಹಿಮಾಂ ||
269. ನೀನೇ ಎನ್ನ ಶ್ವಾಸ | ನೀನೇ ಎನ್ನ ಶ್ರವಣ |
ನೀನೇ ಎನ್ನ ದೃಷ್ಟಿ | ನೀನೇ ಎನ್ನ ಮಿಡಿತ (ಪ್ರಾಣ) ||
ನೀನೇ ಎನ್ನ ಸಕಲ ಕ್ರಿಯೆ | ನೀನೇ ಸಕಲ ಕಾರಣ ಕರ್ತ |
ನೀನೇ ಸರ್ವಸ್ವ ಶ್ರೀಕೃಷ್ಣವಿಟ್ಠಲ | ನೀನಿಲ್ಲದಿರೆ ಏನೂ ನಡೆಯದು ||
270. ಅನ್ನ ಕೊಡುವವರಲ್ಲೂ ನೀನಿರುವಿ |
ಅನ್ನ ತೆಗೆದು ಕೊಳ್ಳುವರಲ್ಲೂ ನೀನಿರುವೆ ||
ಅನ್ನದೊಳು ನೀನಿರುವಿ |
ತಿನ್ನುವುದರೊಳು ನೀನಿರುವಿ || (ಕ್ರಿಯೆ)
ತಿನ್ನುವವರಲ್ಲಿ ನೀನಿರುವಿ |
ಆನಂತರ ಅರಗುವಿಕೆಯೆಲ್ಲೂ ನೀನಿರುವಿ ||
ಅನ್ನವನ್ನು ಎಲ್ಲಡೆ ಮುಟ್ಟಿಸುವವ ನೀನೇ |
ಅನ್ನದಲ್ಲಿಯ ತುಷ್ಟಿ, ಪುಷ್ಟಿ ನೀನೇ ||
ಅನ್ನದಲ್ಲಿಯ ಪ್ರಾಣವೂ ನೀನೇ |
ಅನ್ನದಿಂ ದೇಹ ನೀಡುವವ, ಬಿಡಿಸುವವ ನೀನೇ ||
ನೀನೇ ಗುಹ್ಯ, ಅನ್ನಂ ಅನ್ನಾದ ಏವಚ |
ಎನ್ನ ಶ್ರೀಕೃಷ್ಣವಿಟ್ಠಲನೊರ್ವನೇ ಸರ್ವವೂ ||
271. ಹಾರುವವರು ಹಾರಲಿ, ಕುಣಿಯುವವರು ಕುಣಿಯಲಿ |
ಜೋರಾಗಿ ಓಡುವವರು ಓಡಲಿ, ನಡೆಯುವವರು ನಡೆಯಲಿ ||
ಹಾರಾಟ, ಹೋರಾಟ, ಭೋರಾಟದ ಜೋರಾಟ ಎಷ್ಟು ದಿನ |
ಘೋರ ಸಂಸಾರ ತೆವಳುತ್ತಾ ದಾಟಿದರೂ ಸಾಕು ಶ್ರೀಕೃಷ್ಣವಿಟ್ಠಲನ ದಯದಿ ||
272. ರಕ್ಷಿಸುವವ ಅವನೇ | ಶಿಕ್ಷಿಸುವವ ಅವನೇ ||
ಭಕ್ಷಿಸುವವ ಅವನೇ | ತಕ್ಷಣಕೆ ಒದಗುವವ ಅವನೇ ||
ಲಕ್ಷ್ಮೀಪತಿ ಶ್ರಿಕೃಷ್ಣವಿಟ್ಠಲ | ಈಕ್ಷಿಸುವ ನಮ್ಮನನವರತ ||
273. ದಿನಂಪ್ರತಿ ಎಡಬಿಡದೆ ನಡೆಯುವ |
ಮಾನವನ ಅಂತರ್ಬಹಿಶ್ಚ ಕರ್ಮಗಳಿಗೆ ||
ದಿನಕರ, ಸೋಮ, ನಿಶಿ, ಹಗಲು, ಭೂಮಿ |
ಬಾನು, ಅನಲಾನಿಲ, ಆಪ್, ಅಂತರಂಗ |
ಮನಾದಿಸ್ಥ ಶ್ರೀಕೃಷ್ಣವಿಟ್ಠಲನೇ ಸರ್ವಸಾಕ್ಷಿಗ ||
274. ನನ್ನ ಕರ್ಮದ ಗಂಟೇ ಹೊರೆಯಾಗಿರಲು |
ನೀನೇನು ಮಾಡುವಿ ಒಳ-ಹೊರಗಿದ್ದು ||
ನಿನ್ನ ಮನಸಿಗೆ ಬಂದಂತೆ ಉಣಿಸುವಿ |
ಎನಗೇಕೆ ಹೊಗಳಿಕೆ-ತೆಗಳಿಕೆ ಚೆನ್ನಿಗರಾಯ ಶ್ರೀಕೃಷ್ಣವಿಟ್ಠಲ ||
275. ಪಕ್ಷಿ, ಪ್ರಾಣಿ, ಪಶುವಾಗಿರಲಿ | ವೃಕ್ಷ, ತೃಣ, ಲತೆಯಾಗಿರಲಿ ||
ದೀಕ್ಷೆ ಸದಾ ಎನಗಿರಲಿ | ಲಕ್ಷ್ಮೀಪತಿ ಶ್ರೀಕೃಷ್ಣವಿಟ್ಠಲನಡಿಯಲಿ ||
276. ಕೃತಿಯಾಗಲಿ ಜ್ಞಾನಕ್ಕೆ ಮೂಲ |
ಧೃತಿ ಇರಲಿ ಧ್ಯಾನಕ್ಕೆ ಮೂಲ ||
ಶಾಸ್ತ್ರೋಕ್ತವಾಗಿರಲಿ ಸಕಲದ ಮೂಲ |
ಉತ್ಕøಷ್ಟತೆಗೆ ಶ್ರೀಕೃಷ್ಣವಿಟ್ಠಲನೇಮೂಲ ||
277. ಸೂರ್ಯನ ಬೆಳಗುವಿಕೆ, ವಾಯು ಬೀಸುವಿಕೆ |
ವರ್ಷಾ ಸುರಿಸುವಿಕೆ, ಅಗ್ನಿಸುಡುವಿಕೆ ||
ಚಂದ್ರನ ಶೀತಲತೆ, ಯಮನ ಧರ್ಮಕಾರ್ಯ |
ಸುರರ ಸಕಲಕಾರ್ಯವೂ, ಶ್ರೀಕೃಷ್ಣವಿಟ್ಠಲನ ಭಯದಿ ಆಗುವುದು ||
278. ಸರಿಯಾದ ನೋಟ | ಸರಿಯಾದ ಶ್ರವಣ ||
ಸರಿಯಾದ ಊಟ | ಸರಿಯಾದ ನಡತೆ ||
ಸರಿಯಾದ ನುಡಿ | ಸರಿಯಾದ ಯೋಚನೆ ||
ಸರಿಯಾದ ಜ್ಞಾನ | ಸರಿಯಾದ ವಿಜ್ಞಾನ ||
ಸರಿಯಾದ ಪರಿ | ಸರಿಯಾಗಿ ತಿಳಿಯದಲ್ಲ ||
ಸರ್ವವಿದಿತ ಶ್ರೀಕೃಷ್ಣವಿಟ್ಠಲ | ಸರಿಯಾಗಿ ತಿಳಿಸಿ ನಡೆಸು ||
279. ಏಳು ಸಂಸಾರದ ಏಳು-ಬೀಳು ಅಲೆಗಳಿಂದ |
ಏಳುದಿನಗಳ ಕಥೆ ಕೇಳಿ ವೈಕುಂಠಕೆ ನಡಿ ||
ಸುಳ್ಳು ಹೇಳದಿರೆ ಒಳ್ಳೆಯದನ್ನೇ ಕಾಣುವಿ |
ಕಳ್ಳರೈವರ ಸುಳಿಯಿಂದ ಉಳಿದು ಜಯಿಸಿಕೋ ||
ಬೆಳೆಸು ಪುಷ್ಪ ಮನದಿ ಮುಳ್ಳನ್ನು ಕಿತ್ತೊಗೆದು |
ಗಳಿಸು ಶ್ರೀಕೃಷ್ಣವಿಟ್ಠಲನೊಲುಮೆ ಒಳ್ಳೆಯತನದಿ ||
280. ಹರಿಹರಿ ಹರಿ ಎಂದರೆ ಹರಿಯುವುದು ಸಂಸಾರ |
ಹರಿಹರಿ ಹರಿ ಎಂದರೆ ಹರುಷದಿ ಮನ ||
ಹರಿ ಅಭಿನ್ನ ಶ್ರೀಕೃಷ್ಣವಿಟ್ಠಲನ ಚರಣವ ಪೊಂದುವುದು ||
281. ‘ಅ’ನಾಮಕ ಅಕ್ಷರ ಪ್ರತಿಪಾದ್ಯ ಪೂರ್ಣೇಂದು |
ತಾನೂಪೂರ್ಣ, ಇಲ್ಲಿಯೂ ಪೂರ್ಣ-ಅಲ್ಲಿಯೂ ಪೂರ್ಣ ||
ಕಣ-ಕಣದಲ್ಲೂ ಪೂರ್ಣ, ಸದಾ ಸರ್ವತ್ರ ಪೂರ್ಣ |
ಪೂರ್ಣಾತಿ ಪೂರ್ಣ ಪರತಮ ಶ್ರೀಕೃಷ್ಣವಿಟ್ಠಲನೇ ಪರದೈವ ||
282. ಸರ್ವತ್ರ, ಸರ್ವ ಸಮಯದಿ | ಸರ್ವಗುಣ ಪರಿಪೂರ್ಣ ಸ್ವಭಾವ ||
ಸರ್ವದೋಷದೂರ | ಸರ್ವೇಶ, ಸರ್ವವಂದ್ಯ ಶ್ರೀಕೃಷ್ಣವಿಟ್ಠಲಂ ತ್ವಂ ಭಜೆ ||
283. ಅಖಿಲ ಮೂಲ ಜಗತ್ಕಾರಣ |
ಅಖಿಲ ಮೂಲ ಘಟನಾಕಾರ ||
ಅಖಿಲ ಮೂಲ ಫಲ ಪ್ರದಾಯಕ |
ಅಖಿಲೇಶ ವಿಶೇಷ ಶ್ರೀಕೃಷ್ಣವಿಟ್ಠಲಂ ವಂದೇ ||
284. ದೋಷದೂರ, ಮಂಗಳಸ್ವರೂಪ |
ದೋಷನಾಶಕ, ಭಕ್ತೋದ್ಧಾರಕ ||
ಶ್ರೀಶ ಶ್ರೀಕೃಷ್ಣವಿಟ್ಠಲ ಎನ್ನಂತರ್ಯಾಮಿ |
ವಿಶೇಷಗೆ ನಿವೇದನರೂಪ ಅರ್ಪಣಾ ನಮನಗಳು ||
285. ಸರ್ವ ಜೀವಿಗಳಿಗೆ ಸತ್ತಾಪ್ರದ ವಾಯು ಧಾರಣಾ ಪ್ರದ |
ಸರ್ವೇಂದ್ರಿಯಾಭಿಮಾನಿ ನಿಯಾಮಕ ಮುಖ್ಯಪ್ರಾಣ ||
ಇವನಿಗೂ ಪ್ರೇರಕಳು ರಮಾ ಭಕ್ತಿಪ್ರದಾಯಕಳು |
ಸರ್ವರಿಗೂ ಮುಕ್ತಿಪ್ರದಾಯಕ ನಮ್ಮ ಶ್ರೀಕೃಷ್ಣವಿಟ್ಠಲ ||
286. ಹರಿಕಥೆ ಶ್ರವಣದಿ, ಹರಿಗುಣಗಳ ಕೀರ್ತಿಸು |
ಹರಿಸ್ಮರಣೆಯಲಿ, ಹರಿಪಾದ ಸೇವೆಯಾಗಲಿ ||
ಹರಿ ಮೂರ್ತಿಗಳ ಪೂಜಿಸು, ಹರಿ ನಮಸ್ಕಾರದಿಂದ |
ಹರಿದಾಸನೆಂಬ ನಿತ್ಯಭಾವನೆ, ಹರಿಯೇ ನಿತ್ಯ ಸಖ ||
ಹರಿಯ ನಿತ್ಯಾಧೀನ, ಸ್ವಸ್ವರೂಪವೆಂದು ಆತ್ಮ ಅರ್ಪಿಸು |
ಹರಿಯಾಭಿನ್ನ ಶ್ರೀಕೃಷ್ಣವಿಟ್ಠಲನ ಪ್ರಸಾದವಾಹುದು ಶುದ್ಧಭಕ್ತಿಲಿ ||
287. ಬೇಡಾ, ಬೇಡಾ ಎನ್ನ ದೂಡಬೇಡಾ | (ಸಂಸಾರದಿ)
ಬೇಡುವೆ ದಿನತೆಯಲಿ ಒಡೆಯಾ ||
ನೋಡಿದರೆ ಭಯ ಪಡುತಿರುವೆ |
ಕಾಡುವರನೇಕರು ವಿಧ ವಿಧದಿ ||
ಕಂಡು ಅವರ ದಿಕ್ಕೆಟ್ಟು ಹೋಗಿರುವೆ |
ಪಡಬಾರದ ಕಷ್ಟ ಪಡುತಿರುವೆ ||
ಬೇಡಿಕೊಂಬೆ ದೀನಳಾಗಿ ಶ್ರೀಕೃಷ್ಣವಿಟ್ಠಲ |
ಒಡಲೊಳಗೆ ಬೆಚ್ಚಗೆ ಸದಾ ಇರಿಸಿಕೋ ||
288. ನಿನ್ನ ಆಗು-ಹೋಗುಗಳಿಗೆ | ನೀನೇ ಹೊಣೆಗಾರನಲ್ಲವೆ? ||
ಚೆನ್ನಾಗಿ ಯೋಚಿಸಿ ನೋಡು | ಇನ್ನಾದರೂ ಪರರ ದೂಷಿಸದಿರು ||
ಅನ್ಯಾಪೇಕ್ಷೆಮಾಡದಿರು | ಧನ್ಯತೆಯಲಿ ‘ಸ್ವ’ಸಹಾಯ ನಂಬು || (ಸ್ವನಾಮಕ ಪರಮಾತ್ಮ)
ಮಾನ್ಯಮಾಡು ಸ್ವನಾಮಕ | ಸುನಾಥ ಶ್ರೀಕೃಷ್ಣವಿಟ್ಠಲನ ನಿರ್ಧಾರವ ||
289. ಸುಂದರ ಶ್ಯಾಮ ಮುರಳಿ ಮನೋಹರ |
ಬಂದ ಯಮುನೆಗೆ ಗೋಪಿಯರೊಡನೆ ||
ಚೆಂದದಿ ಬೆಳದಿಂಗಳ ನೊಡಿ ಅತಿ |
ಮೋದದಿ ಶ್ರೀಕೃಷ್ಣವಿಟ್ಠಲ ರಾಸ ರಚಿಸಿದ ||
290. ಅಗಿಯಲಿ, ಉಗುಳಲಿ | ಹುಗಿಯಲಿ, ಬಗೆಯಲಿ ||
ನೆಲೆಯಾಗಿ ಪಶು, ಪ್ರಾಣಿ, ವೃಕ್ಷಂಗಳಿಗೆ |
ಸೆಲೆಯಾಗಿ ಜೀವ ನದಿಗಳಿಗೆ ||
ಪರ್ವತಗಳ ಎದೆಮೇಲೆ ಪೊತ್ತು |
ಸರ್ವದಾ ಹಸಿರಾಗಿ ವನಸುಮಗಳಿಗೆ ||
ತುಳಿಯಲಿ, ಕೊಳೆಯಾಗಿಸಲಿ | ಒಳ್ಳೆಯದನ್ನೇ ಹರಸುವ ||
ಕಷ್ಟ-ಸಹಿಷ್ಣುತೆಯ ಪ್ರತೀಕ |
ಶ್ರೀಕೃಷ್ಣವಿಟ್ಠಲನ ರಾಣಿಗೆ ವಂದಿಸಿ ಬೇಡುವೆ, ಕ್ಷಮಿಸು ತಾಯೇ ||
291. ಭವಾಟವೀಯಲ್ಲಿ ಮಾರ್ಗ ತೋರುವುದು ಒಂದೇ ನಾಮ |
ಭವಾಬ್ಥಿಯಲಿ ಸರಳವಾಗಿ ತೇಲಿಸುವುದು ಒಂದೇ ನಾಮ ||
ಯಾವಾಗಲೂ ಜಪಿಸಬೇಕಾದುದು ಒಂದೇ ನಾಮ |
ಶಾಶ್ವತ ಪದ ನೀಡುವ ಸಹಜನಾಮ ಅದುವೇ ‘ಶ್ರೀಕೃಷ್ಣವಿಟ್ಠಲ’ನಾಮ ||
292. ಭಿಕ್ಷು ಇರಲಿ ಲಕ್ಷ ಇರಲಿ | ಲಕ್ಷ್ಯ ಸದಾ ಒಂದೇ ಇರಲಿ ||
ಲಕ್ಷಣವಾದ ಅಕ್ಷಯದಾತ | ಲಕ್ಷ್ಮೀಪತಿ ಶ್ರೀಕೃಷ್ಣವಿಟ್ಠಲನ ಪದತಲದಿ ||
293. ಸರದಿಯಾಗಿ ಪ್ರಾರಬ್ಧ ಸುಖ-ದುಃಖ ಉಣಿಸುವ |
ಪರಿಹಾರ ಸೂಚಿಸುವ ಕಷ್ಟ ಕಳೆಯಲು ||
ಸೈರಿಸುವಷ್ಟೇ ದುಃಖವೀವ ಸಾಮಥ್ರ್ಯ ತಿಳಿದು |
ಹೊರಲಿಕ್ಕಾಗುವಷ್ಟೇ ಜೀವನ ಭಾರ ಮಾಡುವ ||
ಆರ್ತರ ಕರೆ ಆಲಿಸಿ ಕೈ ಪಿಡಿಯುವ ಬಿಡದೆ |
ಪೊರೆವ ಸದಾ ‘ನಾನ್ಯಥಾ ಪಂಥಾಃ ಅಯನಾಯ ವಿದ್ಯತೇ’ ಎಂದವರ ||
ಆಶ್ರಯದಾತ ಶ್ರೀಕೃಷ್ಣವಿಟ್ಠಲ ಸರ್ವರ ಸರ್ವವಿದಿತ ||
294. ದೈವ ಬಲವಿದ್ದರೆ ಹುಲ್ಲು ನಿಗರಬಲ್ಲದು |
ಭವದ ಕಡಲು ಗೋಪಾದದಂತೆ ತಾರಿಸಬಲ್ಲದು ||
ಆವ ಪ್ರಯತ್ನವಿಲ್ಲದಯೇ ಯಶವಾಗಬಲ್ಲದು |
ಅವನೀಪತಿ ಶ್ರೀಕೃಷ್ಣವಿಟ್ಠಲನ ದಯೆ ಇಲ್ಲದಿರೆ ಎಲ್ಲ ವಿಪರೀತವಾಹುದು ||
295. ಜಗದಲ್ಲಿಯ ಅನಘ್ರ್ಯರತ್ನ ವಿಷ್ಣು ಭಕ್ತಿಸುಖ |
ಭಗವದ್ಭಕ್ತರ ಸಂಗದ ಸವಿ ಬಲ್ಲವನೇ ಬಲ್ಲ ||
ಸಗ್ಗ ಸುಖವು ಬಯಸದೇ ಸಾಧನ ಜನುಮ ಬೇಕೆನುತ |
ಭಂಗ ಬರದಂತೆ ಶ್ರೀಕೃಷ್ಣವಿಟ್ಠಲನ ಪಾದಸೇವೆ ಬಯಸುವರು ||
296. ಸಜ್ಜನ ಪ್ರೇಮಿಗಳಿಹರು ಜಗದೀ | ವರ್ಜಿಸಿ ಐಹಿಕ ಸುಖಗಳ ||
ತ್ಯಜಿಸಿ ಕಾಮಕ್ರೋಧಗಳ | ಭಜಿಸಿ ಜಯ-ವಿಜಯ ಹಂತಕನ ||
ನಿಜದಿ ಆನಂದನಾಮಕ ಶ್ರೀಕೃಷ್ಣವಿಟ್ಠಲನ ಪೊಂದುವರು ||
297. ಮಾಡಿದ್ದೆಲ್ಲವು ಸೇವೆಯೆಂದು |
ಮಾಡುತ್ತಿರುವುದೆಲ್ಲ ಪೂಜೆಯೆಂದು ||
ಮಾಡಬೇಕಾದ್ದು ಎಲ್ಲಾ ಕೂಡಿಸಿ |
ಒಡೆಯಾ ಶ್ರೀಕೃಷ್ಣವಿಟ್ಠಲಗರ್ಪಿಸುವೆ ಸಲಹೆನ್ನ ಕೃಪಾಲುವೇ ||
298. ಐವತ್ತೊಂದು ಅಕ್ಷರ ನಾಮ ವರ್ಣಗಳೇ |
ಸರ್ವ ವೇದಗಳು, ಸರ್ವಭಾಷೆ ||
ಸರ್ವಮಾತು, ಸರ್ವಕ್ಕೂ ನಾಮಗಳು |
ಅವರಿವರೇನೆಂದರೇನು ಸಕಲವೂ ಸುಶ್ರಾವ್ಯ ||
ಭವತಾರಕ ಶ್ರೀಕೃಷ್ಣವಿಟ್ಠಲನ ನಾಮಗಳೇ ಎಲ್ಲಾ ಎಂದು ತಿಳಿದವಗೆ ||
299. ನಿತ್ಯದೈನ್ಯತೆಯ ಜೀವನ ಬೇಡಾ |
ಪ್ರತಿಕ್ಷಣ ನರಳಿ ಸಾಯುವುದರಿಂದ ||
ಪತಿತಪಾವನ ಸಂರಕ್ಷಿಸೆನ್ನನು |
ಎತ್ತಿ ನಿನ್ನ ಲೋಕದಲ್ಲಿರಿಸು ಶ್ರೀಕೃಷ್ಣವಿಟ್ಠಲ ||
300. ಶೃತಿ-ಸ್ಮøತಿಗಳಿಗಗೋಚರ | ಸ್ತೋತ್ರ-ಸ್ತುತಿಗಳಿಗೊಲಿಯದ ||
ಸ್ಥಿತಿಕರ್ತಾ ತನ್ನಂತಾನೇ ತಿಳಿಸುವ | ಕೃತಿಪತಿ ಶ್ರೀಕೃಷ್ಣವಿಟ್ಠಲ ಒಲಿದಾಗ ||
301. ಸತ್ಕವಿಗಳ ಸತ್ಸಂಗವೇ ಸದ್ಗತಿಗೆ ದಾರಿ |
ಸುಕಥಾ ಶ್ರವಣ ಹೃತ್ಕರ್ಣ ರಸಾಯನವಾಹುದು ||
ಭಕ್ತಿ-ಶ್ರದ್ಧೆಯನ್ನನುಸರಿಸಿ ಸಿಗುವುದು ಮುಕ್ತಿ |
ಹೃತ್ಕಮಲಸ್ಥ ಶ್ರೀಕೃಷ್ಣವಿಟ್ಠಲಾಪರೋಕ್ಷಾನಂತರ ||