ಶ್ರೀ ಕೃಷ್ಣವಿಠ್ಠಲಪದಗುಚ್ಛ 2
ಶ್ರೀರಾಮ,ಸ ಕೃಷ್ಣ ವಿಠ್ಠಲ
ಶ್ರೀಸೀತಾರಾಮ ಕಲ್ಯಾಣ
65. ನಿತ್ಯಾವಿಯೋಗಿ ಶ್ರೀಸೀತಾ-ರಾಮರ ಶುಭ ಕಲ್ಯಾಣ |
ನಿತ್ಯೋತ್ಸವ ಸುಜನರಿಗೆಲ್ಲಾ ಆನಂದದಾಯಕ, ಮಂಗಳದಾಯಕ || || ಪ ||
ಮಿಥಿಲೇಶ ಸಾರಿದ ತನ್ನ ಕುವರಿಯ ಸ್ವಯಂವರವ |
ಸ್ವತ: ತೆರಳಿ ವಿಶ್ವಾಮಿತ್ರ, ದಾಶರಥಿಯರಿಗಿತ್ತ ಆಹ್ವಾನವ ||
ಎತ್ತ ನೋಡಿದರೂ ಸಿಂಗಾರದಿ ಪುರ ನವವಧುವಿನಂತೆ ಕಂಗೊಳಿಸುತ್ತಿತ್ತು |
ಮತ್ತೆ ಆಗಮಿಸಿದರಿಲ್ಲಿ ಬ್ರಹ್ಮರ್ಷಿ, ರಾಮ- ಲಕ್ಷ್ಮಣರೊಡಗೂಡಿ || || 1 ||
ನೀಲವರ್ಣದ, ನೀಳಕಾಯದ, ಗಂಭಿರವದನ ಸುಂದರರಾಮನ |
ಎಲ್ಲ ನರ, ನಾರಿಯರು ಮನದಣಿಯ ನೋಡಿ ಆನಂದಿಸಿದರು ||
ಮೆಲ್ಲನೆ ಹೇಳಿದರು ನಲ್ಮೆಯ ಸೀತೆಗೆ ಸರಿಜೋಡಿಯೆಂದು |
ಬಲವಾದ ಶಿವಧನುಸ್ಸು ಈ ಬಾಲಕ ಎತ್ತಬಲ್ಲನೆ? ಎಂದೂ ಶಂಕಿಸಿದರು || ||2||
ಹಲವಾರು ಜನರು ಗಾಡೀಲಿ ಎಳೆತಂದರು ಧನಸ್ಸನು |
ಕೇಳಿ ಗುರುಗಳಪ್ಪಣೆ ಸುಧನ್ವರಾಮ ಅತ್ತ ನಡೆದನು ||
ಲೀಲಾಜಾಲವಾಗಿ ಎಡಗೈಲೆತ್ತಿ ಹೆದೆ ಏರಿಸಲು |
ಬಿಲ್ಲು ನಡುವೆಯೇ ತುಂಡಾಯಿತು ಸಿಡಿಲಿನಂತೆ || || 3 ||
ಮರೆಯಲ್ಲಿದ್ದ ಸೀತೆ ವರಮಾಲೆ ಪಿಡಿದು ಬಂದಳು |
ಓರೆ ನೋಟ ಬೀರಿ ನಾಚಿ ಸಂತೋಷ ಮನದಿ ನಿಂದಳು ||
ಶ್ರೀರಾಮನ ಕೊರಳಿಗೆ ಅರವಿಂದದ ಮಾಲೆಹಾಕಿದಳು |
ನೀರೆಯ ಕೈಪಿಡಿದು ಅರ್ಧಾಂಗಿಯಾಗಿ ಸ್ವೀಕರಿಸಿದ ದಯದಿ || || 4 ||
ಜಾನಕಿ ರಾಮನ ವಿವಾಹ ನಿತ್ಯನೂತನ ಹರುಷದಾಯಕ |
ಅನಿಮಿಷರೆಲ್ಲಾ ಆಕಾಶದಿ ನೆರೆದು ನೋಡಿ ಸಂತೋಷಿಸಿದರು ||
ಕಣ್ಮಣಿ ಅಯೋಧ್ಯಾಪತಿ ಪಾವನ ಪುರುಷೋತ್ತಮ |
ಚಿನ್ಮಯನಾದ ಶ್ರೀಕೃಷ್ಣವಿಟ್ಠಲನ ಅಭೇದರೂಪವೇ ಸರಿ || || 5 ||
ಜಯ ಜಯ ರಾಮ ಸೀತಾ ರಾಮ |
ಜಯ ಜಯ ರಾಮ ಕೃಷ್ಣ ಹರೇ ||
66. ಪರಮ ಪುರುಷೋತ್ತಮನಿವ ಶ್ರೀರಾಮಚಂದ್ರ | || ಪ ||
ಅಪಮಾನಕ್ಕಂಜಿ ಮಡದಿಯ ತೊರೆದ ಲೀಲೆಯಲಿ | || ಅಪ ||
ಪತಿತಳನುದ್ಧರಿಸಿದವ ಪತ್ನಿಯನ್ನೇ ಶಿಕ್ಷಿಸಿದ |
ಕ್ಷತ್ರಿಯರ ಸಂಹರಿಸಿದ ಬ್ರಾಹ್ಮಣನ ಗೆದ್ದ ಧೀರ || (ರಾವಣ)
ಪಿತೃವಾಕ್ಯಪರಿಪಾಲಕ, ಭ್ರಾತೃವಾತ್ಸಲ್ಯಮಯಿ |
ಏಕಪತ್ನಿವೃತಸ್ಥನೆಂಬ ಬಿರುದುಪೊತ್ತಮಹಿಮ ||
ವಾಲಿಯನಿಗ್ರಹಿಸಿದ, ಸುಗೀವನನುಗ್ರಹಿಸಿದ |
ವಿಭೀಷಣಗಾಶ್ರಯವಿತ್ತ ಹನುಮದ್ಸಖ ||
ಶ್ರೀಕೃಷ್ಣವಿಟ್ಠಲನ ಪಾದವನಂಬಿ |
ಭಜಿಸಿದವರಿಗೆ ಮುಕುತಿ ಕೊಡುವ ||
67. ಧನುರ್ಧರ ಚಾಪಧಾರಿ ತ್ರಿಗುಣತೀತ ಶ್ರೀರಾಮ |
ಕೌಸಲ್ಯಾ ನಂದನ ಮರ್ಯಾದಾ ಪುರುಷೋತ್ತಮ ||
ಅಸುರ ಸಂಹಾರಕ ಸುಜನರಕ್ಷಕ ಸದಾ |
ಏಕಪತ್ನಿ ವ್ರತಸ್ಥ ಮಾತೃವಾಕ್ಯ ಪರಿಪಾಲಕ ||
ಹನುಮಭೀಮ ಮಧ್ವಾಂತರ್ಗತ ಶ್ರೀರಾಮಾಭಿನ್ನ ಶ್ರೀಕೃಷ್ಣವಿಟ್ಠಲ ನಮೋ ನಮ: |
68. ಶ್ರೀರಾಮ ಜಯರಾಮ
ಶ್ರೀಶನ ನೆನೆವರನುದಿನ
ರಾರಾಜಿಸುವರು ಜಗದೊಳು ||
ಮರಣ-ಜನನ ಬಾಧೆ ತಪ್ಪುವುದು |
ಜಪ,ತಪ,ಧ್ಯಾನಕ್ಕೂ ಒಲಿಯದ ||
ಯಶೋದೆಕಂದ ಕಣ್ಣಿಗೆ ರೆಪ್ಪೆಯಂದಿ ಕಾಯ್ಪ ||
ರಾಗದಿ ಒಪ್ಪಿಸಿಕೂಂಬ ಅನುಕ್ಷಣದಿ |
ಮನಮೋಹಕ ಶ್ರೀಕೃಷ್ಣವಿಟ್ಠಲ ರಾಯಾ ||
69. ಶ್ರೀರಾಮ ಪದದಲ್ಲಡಗಿದೆ ಸರ್ವಸಾರ, ಜಪಿಸೇ |
ಪಾಪದಹಕ, ಪವನ ಪಾವಕ ಪೂಜನೀಯ ಪತಿತೋದ್ಧಾರಕ ||
ಸಿರಿ ಸಹಿತ ವಾಸಿಪ ಆನಂದವೀವ ಅಕ್ಷರಫಲದಾತ |
ಭಕ್ತವತ್ಸಲ ಸಂಸಾರತಾರಕ ಸುಲಭದಿ ಸರಳಭಕ್ತಿಗೊಲಿವ ಶ್ರೀಕೃಷ್ಣವಿಟ್ಠಲ ||
ಊಊಊ
ಶ್ರೀಕೃಷ್ಣ
70. ಎರಡು ತಾಯಂದಿರ ಮಗನಿವನೊಬ್ಬ |
ಧರ್ಮದಿ ನಡೆದು ಜ್ಞಾನವಬೋಧಿಸಿ ||
ತರಿದು ದುಷ್ಟರ ಶಿಷ್ಟರ ಸಲಹಿದ |
ಆರ್ತ ಕರೆ ಮನ್ನಿಸಿ ಕಾಯ್ದ ಆಪದ್ಬಾಂಧವ ||
ಸರಸ ಸಂಸಾರ ತೋರಿದ ಸಾವಿರಾರು ಪತ್ನಿಯರಲಿ |
ಮತ್ರ್ಯಲೋಕ ನಟನಿವ ಶ್ರೇಷ್ಠ ಶ್ರೀಕೃಷ್ಣವಿಟ್ಠಲ ||
71. ಎನ್ನ ಮನೆಯೊಳಗೆ ಬಾರೋ, ಕೃಷ್ಣಯ್ಯಾ, ಇಲ್ಲಾ |
ಎನ್ನ ಮನದೊಳಗೆ ತೋರೋ ಕೃಷ್ಣಯ್ಯಾ || || ಪ ||
ಮನೆಯಲಿ ಯಜ್ಞ, ಪೂಜಾದಿಗಳು ಒಂದಿನ ನಡೆಯಲಿಲ್ಲ |
ಜ್ಞಾನಿಗಳ ಸತ್ಸಂಗ, ಭಾಗವತಾದಿ ಪಾರಾಯಣವಾಗಲಿಲ್ಲ ||
ದೀನ, ದು:ಖಿತರ ಸೇವೆಯಂತೂ ಮಾಡಲೇ ಇಲ್ಲಾ |
ಅನ್ನದಾನ, ವಸ್ತ್ರದಾನ, ಜಲದಾನ ಎಂದು ಕೊಡಲಿಲ್ಲ || || 1 ||
ಮನ ಶುದ್ದೀಲಿ ಸತ್ಯ, ಅಹಿಂಸೆ,ಶೌಚ ಪಾಲಿಸಲಿಲ್ಲ |
ಜ್ಞಾನ ಸಂಪಾದನೆಗಾಗಿ ಎಂದು ಪ್ರಯತ್ನಿಸಲಿಲ್ಲ ||
ಮನ:ಪೂರ್ವಕ ಭಕ್ತಿಯ ದಾರಿಯಲಿ ನಡೆದಿಲ್ಲ |
ಘನ್ನ ಮಹಿಮನ್ನ ಯಾವ ರೀತಿಯಲ್ಲೂ ಒಲಿಸಲಿಲ್ಲ || || 2 ||
ಎನ್ನೊಳು ನಿಂತ ಸಕಲ ಕರ್ಮ, ಕಾರ್ಯಕಾರಣಕರ್ತನೇ ||
ನಾನು ಮಾಡುವೆನೆಂದರೆ ಎನ್ನ ಪ್ರಾರಬ್ಧ ಮಾಡಕೊಡದಯ್ಯಾ |
ಜನುಮ ಜನುಮದ ಸಖ ಎನ್ನ ಕೈ ಬಿಟ್ಟರೆ ಸಲಹುವರ್ಯಾರು ||
ಮನ್ನಿಸಿ ತಪ್ಪುಗಳ ಒಲಿದು ಬಾರೋ ಶ್ರೀಕೃಷ್ಣವಿಟ್ಠಲದಯದಿ || || 3 ||
72. ನೆನೆ ನೆನೆ ಮನವೆ ಶ್ರೀಕೃಷ್ಣ ಮೂರುತಿಯ |
ಕ್ಷಣಕಾಲವೂ ಬಿಡದೆ ನಿರುತ ನೆನೆ ಮನವೇ | || ಪ ||
ಸಕಲ ದೇಶದಿ ಸಕಲ ಕಾಲದಿ ಗುಣಗಳ ನೆನೆ |
ಸಕಲ ಅವಸ್ಥೆಯಲಿ ಸಕಲ ರೂಪಗಳ ನೆನೆ ||
ಸಕಲ ನಾಮಗಳ ವಿವಿಧ ಪುಷ್ಪಗಳೆಂಬಂತೆ |
ಶಂಕೆಯಿಲ್ಲದೆ ಸಮರ್ಪಿಸೆ ಒಲಿದು ತೋರುವ|| || 1 ||
ಅನ್ನದಲಿ, ಮಣ್ಣಿನಲಿ ಸರ್ವಮನುಜರಲಿ ನೆನೆ |
ಕಣ್ಣಿಂದ ಕಾಣುವ ಸರ್ವವಸ್ತುವಿನಲಿ ನೆನೆ ||
ಬಣ್ಣಿಸಿ ಸರ್ವಕ್ರಿಯೆಗಳ ಸಂತೋಷ ಪಡೆದು |
ವರ್ಣಾಭಿಮಾನಿ ಸರ್ವಶಕ್ತನ ಸಾಮಥ್ರ್ಯಅನುಭವಿಸು | || 2 ||
ಅಂತಾದರೂ ಇಂತಾದರೂ ಸರ್ವಾಂತರವಾಗಿ ನೆನೆ |
ಅಂತಕಾಲದಿ ನೆನೆದೊಡೆ ವಿಶೇಷ ಪ್ರಾಪ್ತಿಯಾಗಿ ||
ಅಂತರವಿಲ್ಲದೆ ವೈಕುಂಠಪತಿ ದರುಶನವಾಹುದು |
ಸಂತಪ್ರಿಯ ನಿಶ್ಚಿಂತ ಚಿನ್ಮೂಲ ಶ್ರೀಕೃಷ್ಣವಿಟ್ಠಲನ ನೆನೆ | || 3 ||
73. ವದನದಿ ಕೃಷ್ಣನಾಮ |
ಹೃದಂiÀiದಿ ಕೃಷ್ಣಧ್ಯಾನ ||
ಬುದ್ದಿಯಲಿ ಕೃಷ್ಣಮಂತ್ರ |
ಎದುರಲಿ ಕೃಷ್ಣಮೂರ್ತಿ ||
ಸದಾ ಇರುವಂತೆ ಅನುಗ್ರಹಿಸೋ |
ಹಿಂದೆ, ಮುಂದೆ ನಿಂದು ಕಾಯೋ ವಂದ್ಯ ಶ್ರೀಕೃಷ್ಣವಿಟ್ಠಲ ||
74. ಶ್ರೀಕೃಷ್ಣನೇ ಸರ್ವಕ್ಕಾಶ್ರಯ ಬ್ರಹ್ಮಾಂಡ-ಪಿಂಡಾಡದಿ |
ಶ್ರೀಕೃಷ್ಣನಿಂದಲೆ ಓತಪ್ರೋತವಾದ ಜಗ ನಿತ್ಯ ಸತ್ಯ ||
ಶ್ರೀಕೃಷ್ಣನ ಅಂಜಿಕೆಯಲಿ ಸರ್ವಭೂತ ಕ್ರಿಯೆ ನಡೆವುದು |
ಶ್ರೀಕೃಷ್ಣನಿಂದಲೇ ಇಚ್ಛಿತವಾಗಿ ಸರ್ವಕಾರ್ಯನಡೆವುದು ||
ಶ್ರೀಕೃಷ್ಣ ನಾಮವೇ ಸರ್ವಶತ್ರುಸಂಹಾರಕ, ಸಂಸಾರತಾರಕ |
ಶ್ರೀಕೃಷ್ಣನೇ ಆದಿಮೂಲ ಸರ್ವಕೂ ಕಾರಣ ಪುರುಷ ||
ಶ್ರೀಕೃಷ್ಣನೇ ಸಕಲ ವಸ್ತುಗಳಲಿ ಆಯಾಕಾರನಾಗಿರುವ |
ಶ್ರೀಕೃಷ್ಣನೇ ಸರ್ವ ಶಕ್ತಿಯ, ಶಕ್ತಿಯ ಮೂಲನಾಗಿರುವ ||
ಶ್ರೀಕೃಷ್ಣನ ಅಧೀನದಿ ಸರ್ವ ಜೀವಿಯ ಕರ್ಮ ನಡೆವುದು |
ಶ್ರೀಕೃಷ್ಣನೇ ಸೃಷ್ಟ್ಯಾದಿ ಅಷ್ಟಕರ್ತೃತ್ವ ಲೀಲೆಯಲಿ ಮಾಳ್ಪ ||
ಶ್ರೀಕೃಷ್ಣನೇ ಸತ್ಯಸ್ಯ ಸತ್ಯ, ಸರ್ವಸ್ಯ ಸರ್ವ, ಸರ್ವಕಾಲಿಕ (ಇಂತಹ) |
ಶ್ರೀಕೃಷ್ಣವಿಟ್ಠಲಗೇ ಶರಣಾಗಿ ಸರ್ವಸಮರ್ಪಿಸಿ ಧನ್ಯರಾಗಿ ||
ಭಕ್ತಿರಸ ಲೀಲೆ
75. ಮುರಳಿ ಅಧರ ತಾಕಲು ತಾನೆ |
ಹೊರಹೊಮ್ಮಿತು ಮೋಹಕ ಮಧುರ ಗಾನ || || ಪ ||
ತುರು-ಕರುಗಳು ಕಿವಿನಿಮಿರಿಸಿ ಚಂಗನೆ |
ಹಾರುತ್ತ, ಬಾಲ ಬೀಸುತ್ತ ಓಡಿ ಓಡಿ ಬಂದವು ||
ಕರುಗಳು ಕ್ಷೀರಪಾನ ಬಿಟ್ಟು ಶಿಲೆಯಂತೆ ನಿಂತವು |
ಕೊರಳು ತೂಗುತ್ತಾ ಹಸುಗಳು ತಮ್ಮನ್ನೇ ಮರೆತವು || || 1 ||
ತರುಲತೆಗಳು ಪಲ್ಲವಿಸಿ ಪುಷ್ಪಗಳರಳಿದವು |
ಪರಿಮಳ ಭರಿತ ಮರುತ ಮಂದವಾಗಿ ಬೀಸಿತ್ತು ||
ತೆರೆ ತೆರೆಯಾಗಿ ಯಮುನೆ ತಲೆ ತೂಗಿದಳು |
ನೀರಿನ ಜುಳು ಜುಳುನಾದ ವೇಣುವಿಗೆ ಜೊತೆಯಾಯ್ತು || || 2 ||
ಶರಬೀಸಿದ ಕಾಮ ಸಕಲರ ಮೋಹಮಾಡಲು |
ಮರಳು ಮಾಡಿತು ರಾಗ ನಿನಾದ ಪರಿಸರವ ||
ನೀರವ ಕತ್ತಲೆ ಸಕಲರ ಹೃದಯ ತಬ್ಟಿತ್ತು |
ಸುಶ್ರುತ ರಾಗದಿ ಆಕರ್ಷಿತರಾದರೆಲ್ಲರು || || 3 ||
ಕರೆ ಕೇಳಿ ಗೋಪಿಕೆಯರೆಲ್ಲಾ ಮಾಡುವ ಕೆಲಸ |
ಮರೆತು ಅದರ್üದಿ ನಿಲ್ಲಿಸಿ ಹೊರ ಹೊರಟರು ||
ವೈರಾಗ್ಯ ಸಾಧಕರು ಪತಿಸುತ ಗೃಹತೊರೆದು |
ಪರಮಾನುಗ್ರಹ ಪಡೆಯಲು ತ್ವರಿತದಿ ಧಾವಿಸಿದರು || || 4 ||
ಸುರಾಗ ಆಲಿಸಿ ದೇಹಭಾನ ಮರೆತು ಧನ್ಯತೆಯಲಿ |
ತೊರೆದು ಲಜ್ಜೆ ಆಪೇಕ್ಷಿಸಿದರು ತನು ಮನ ಸಂಗ ||
ನಿರಾಕರಿಸೇ ದೇಹ ತೊರೆವೆವು ಎಂದರು ಭಕ್ತಿಭಾವದಿ |
ಕರುಣೆಯಿಂದ "ತಥಾಸ್ತು" ಎಂದು ಮನಮಾಡಿದಮೋಹನ || || 5 ||
ಶರದೃತು ಪೌರ್ಣಿಮೆರಾತ್ರಿ ಪೂರ್ಣರಾಸಲೀಲೆ ಆಡಿದರು |
ಸ್ವರ್ಗವೇ ಧರೆ ಗಿಳಿದು ಬಂದು ಸೃಷ್ಟಿ ನಿರ್ಮಿಸಿತು ||
ಶ್ರೀಕೃಷ್ಣವಿಟ್ಠಲ ಅನೇಕರೂಪದಿ ಅನೇಕ ಭಾವದಿ ಬಾಲಕನಾಗಿ |
ನೀರೆ ಗೋಪಿಕೆ ಜೊತೆ ಲಾಸ್ಯದಿ ನಲಿದಾಡಿದನು || || 6 ||
ಜತೆ
ಸ್ಮರಿಸುತ್ತಾ ರಸ ಸಮಯ ಹರುಷದಿ ತೆರಳಿದರವರವರ ಮನೆಗಳಿಗೆ ||
ಸಂತೃಪ್ತಿ ಪರಿಪಾಲಿಸಿದ ಶ್ರೀಕೃಷ್ಣವಿಟ್ಠಲನ ಲೀಲೆ ಅಚಿಂತ್ಯಾದ್ಭುತ |
76. ಕೃಷ್ಣನ ರೂಪವೇ ಸುಂದರ ರೂಪ | || ಪ ||
ಕೃಷ್ಣನ ನಾಮವೆ ರಕ್ಷಾಕವಚ || || ಅಪ ||
ಕೃಷ್ಣನ ಲೀಲೆಯೇ ಅಪ್ಯಾಯಮಾನ |
ಕೃಷ್ಣನ ನುಡಿಯೇ ಚೇತೊಹಾರಿ ||
ಕೃಷ್ಣನ ನಡೆಯೇ ಆದರ್ಶಪ್ರಾಯ |
ಕೃಷ್ಣನ ನೆನೆಯೆ ಕಷ್ಟ ಪೋಪುದು || || 1 ||
ಕೃಷ್ಣನ ಕಥೆಯೇ ಅಮೃತಾನಂದ |
ಕೃಷ್ಣನ ಸ್ವರೂಪವೇ ಜ್ಞಾನಾನಂದ ||
ಕೃಷ್ಣನ ಕೃಪೆಯೇ ಜನುಮದ ಧ್ಯೇಯ |
ಶ್ರೀಕೃಷ್ಣವಿಟ್ಠಲನೇ ಸರ್ವರಸ್ವಾಮಿ || || 2 ||
ಶ್ರೀಕೃಷ್ಣವಿಟ್ಠಲ | ಹರಿ ಹರಿ | ಶ್ರೀಕೃಷ್ಣವಿಟ್ಠಲ || ಹರಿ ಹರಿ ವಿಟ್ಠಲ ||
77. ಮೋಹಕರೂಪ ಚಿನ್ಮಯ ರೂಪದ ಶಿಶುಕಾಣಿರೋ | || ಪ ||
ತಾನಾಗಿ ಒಲಿದು ದಯ ಮಾಡಿದ ರೂಪ ಯಶೋದಾನಂದನ | || ಅಪ ||
ಚತುರ್ಭುಜ ಶಂಖ ಚಕ್ರಧಾರಿ ಶ್ರೀವತ್ಸಾಂಕಿತ |
ಪೀತಾಂಬರಧಾರಿ ದೇವಕಿ ಗರ್ಭದಿ ಜನಿಸಲು ಸಾಧ್ಯವೇ ||
ಸರ್ವವ್ಯಾಪುತ ಸಚರಾಚರ ಗರ್ಭದಲಿ ಅಡಗುವನ್ಹೇಗೆ |
ಸರ್ವರಿಗೂ ಜನ್ಮಕೊಟ್ಟ ಶ್ರೀರಮಣ ಪುನ: ಜನಿಸುವನ್ಹೇಗೆ ||
ಪೂತನೆಯ ಕೊಂದವ, ನಳ-ಕೂಬರ ಶಾಪ ಪರಿಹರಿಸಿದವ |
ಗರ್ಭದಲಿ ಶಿಶುವ ಕಾಪಾಡಿದವ ಗರ್ಭದಿಂದ ||
ಜನಿಸಿದನೆಂಬುವುದು ಹಗೆತನದ ಮಾತು |
ಮಣ್ಣನೇಕೆಮೆದ್ದೆ ಎಂದ ತಾಯಿಗೆ ಬ್ರಹ್ಮಾಂಡತೋರಿದವ ಶಿಶುವಾಗುವುದ್ಹೇಗೆ || 1 ||
ಗುರುಪುತ್ರನ ಬದುಕಿಸಿದವ, ಹಿಡಿ ಅವಲಕ್ಕಿಗೆ |
ಮಹಾಸೌಭಾಗ್ಯ ಕರುಣಿಸಿದವ, ತಂಗಿಗೆ ಅಕ್ಷಯಾಂಬರವಿತ್ತವ ||
ಶಿಶುವೆಂದೆ ತಿಳಿದು ಬುಧರು ನುಡಿವರೇ |
ಶ್ರೀಕೃಷ್ಣವಿಟ್ಠಲಂ ವಂದೇಂ ಜಗದ್ಗುರುಂ || 2 ||
78. ನವನೀತಚೋರ ನಿವನ್ಯಾರಮ್ಮಾ ||
ನೀ ಪೇಳಮ್ಮಾ ಈ ನಂದಕುಮಾರನ್ಯಾರಮ್ಮಾ | || ಪ ||
ಪೂತನಿಯ ಕೊಂದವ, ಬಾಯೊಳು ಜಗವ ತೋರಿದವ |
ಬಂಡಿಯನ್ನೆ ಮುರಿದವ, ಬೆಟ್ಟವನ್ನೆ ಪೊತ್ತವ ||
ತಾಯಿಗೆ ಜಗವ ತೋರಿದವ, ಮಾವನನ್ನೇ ಸಂಹರಿಸಿದವ |
ಗೊಪಿಯರ ಸೀರೆ ಕದ್ದವ, ಮುರುಳಿಯನಾದದಿ ಮೈಮರೆಸಿದವನ್ಯಾರೆ | || 1 ||
ಕಾಳಿಂಗನ ಫಣೆÂಯಲಿ ಕುಣಿದಾಡಿದವ |
ಮೋಹಕ ರೂಪದಿ ಮನಸೆಳೆಯುವ ||
ನಿರುತ ಲೋಲಾಕ್ಷಿ ಸೇವೆ ಸೇವಿಪನ |
ಭಕ್ತ ಪರಾಧೀನ ನಮ್ಮ ಶ್ರೀಕೃಷ್ಣವಿಟ್ಠಲನಲ್ಲದೆ ಮತ್ತ್ಯಾರಮ್ಮಾ | || 2 ||
79. ಮುರಳಿಯ ಪಿಡಿದ ಪಿಳ್ಳಂಗೋವಿ ಚೆಲ್ವ |
ಮೋಡಿಯ ಮಾಡಿದ ಮೋಹಕರೂಪ | || ಪ ||
ಮಧುರ ಭಾವದಿ ಮುರಳಿಯ ನಾದದಿ |
ಮೈಮನ ಮರೆತೆ ಮುಕುಂದನ ಧ್ಯಾನದಿ ||
ತಾಳವ ಹಾಕುತಿದೆ ಕೈಗಳು, ಹೆಜ್ಜೆ ಕುಣಿಯುತಿರೆ |
ತೂಗುತಿದೆ ತಲೆ ನಿಜ ಆನಂದದಿ | || 1 ||
ಮುಡಿದ ಹೂಚೆಲ್ಲಾಡಿ ಮುಂಗುರುಳು ಹಾರಾಡಿ |
ಗೆಜ್ಜೆಯ ನಾದಕ್ಕೆ ಬಳೆಗಳ ಖಣಖಣ ಧ್ವನಿಯ ||
ಬಾಲಮುರಳಿಯ ಮೋಡಿಗೆ ಸಿಲುಕಿ |
ಶ್ರೀಕೃಷ್ಣವಿಟ್ಠಲನ ನೆನಪಿಲಿ ನಾ ಸೋತೆ | || 2 ||
80. ಮುರುಳಿಮನೋಹರ ಸರ್ವಜ್ಞ ಸರ್ವಪ್ರದ |
ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 1 ||
ಅಪರಾಧ ಸಹಸ್ರಾಣಾಂ ಕೃಪಯಾ ಕ್ಷಮಸ್ವ |
ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 2 ||
ಆನಂದ ಸ್ವರೂಪ ಅನಾದಿ ಪರಬ್ರಹ್ಮಣೇ |
ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 3 ||
ಘೊರಸಂಸಾರ ಭವತಾರಕ ಸ್ವಾಮಿನ್ |
ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 4 ||
ಸತ್ಯಸ್ಯ ಸತ್ಯ ಅನಂತಗುಣಪರಿಪೂರ್ಣ |
ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 5 ||
ತ್ರೀಭುವನ ಸುಂದರ ತ್ರಿವಿಕ್ರಮರೂಪ |
ಮಮಾತ್ಮನಾಂ ಶ್ರೀಕೃಷ್ಣವಿಟ್ಠಲ ತಮಾಶ್ರಯೇತ | || 6 ||
ಕಾಲಿಯಮರ್ದನ ನವನೀತ ಚೋರ |
ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 7 ||
ವಸ್ತ್ರಾಪಹಾರಿ ವಸ್ತ್ರಾಭಯಪ್ರದಾಯಕ |
ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 8 ||
ದೇವಕಿನಂದನ ಕಂಸಾರಿ ಬಲಭದ್ರ |
ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 9 ||
ಗೋಪಿವಲ್ಲಭ ಭಕ್ತಜನಪ್ರಿಯ ಪರಮಪವಿತ್ರ |
ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 10 ||
ಗೀತಾಭೋಧಕ ರುಕ್ಮಿಣಿಪ್ರಿಯ ಜ್ಞಾನ ಸ್ವರೂಪಕ |
ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 11 ||
ಸದಾ ಸರ್ವತ್ರ ಸರ್ವರಕ್ಷಕ ಸರ್ವವಂದ್ಯಂ |
ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 12 ||
81. ವಸುದೇವಸುತ ಶ್ರೀಕೃಷ್ಣಾವತಾರ |
ಅಸುರದಮನ ಶಿಷ್ಟಪರಿಪಾಲನ ||
ಲೋಕವಿಡಂಬನ ಲೋಕೋದ್ಧಾರಕ |
ಚಿನ್ಮಯಗಾಥಾ ಚಿತ್ತಾಪಹಾರಕ ||
ಅವಿರತ ಸ್ಮರಣ ಪುಣ್ಯಪ್ರದಾಯಕ |
ದಿವ್ಯಮನೋಹರ ನಿತ್ಯ ನವೀನ ||
ದೇವಕಿ ಪುತ್ರ ಯದುಕುಲನಂದನ |
ವಂದಿತ ಪಾದ ಚಂದನಚರ್ಚಿತ ||
ಗೋಕುಲಚಂದ್ರ ಯಶೋದಾನಂದ |
ಗೋಪಕುಮಾರ ಬಲರಾಮಾನುಜ ||
ಗೋಪಿಕಾಜನ ಚಿತ್ತವಲ್ಲಭ |
ಪೂತನಾ ಸಂಹಾರಕ ಅಭಯಪ್ರದಾಯಕ ||
ನವನೀತ ಚೋರ ಪಾಪಪರಿಹಾರಕ |
ನಳ ಕೂಬ ಗಂಧರ್ವ ಶಾಪವಿಮೋಚಕ ||
ಮೃದುಪದ ಸ್ಪರ್ಶಿತ ಶಕಟಾಸುರಹರ |
ಮುಕುಂದ ವದನೇ ಬ್ರಹ್ಮಾಂಡ ದರ್ಶನ ||
ಆಣೋರಣಿಯಾನ್ ಮಹಿತೋಮಹಿಯಾನ್ |
ಕಾಲೀಯಫಣೆ ನಾಟ್ಯಲೀಲಾವಿನೋದ ||
ಯಮುನಾ ಜಲ ವಿಷಾಪಹಾರಕ |
ಗೋಪಾಲಕ ಗೋವರ್ಧನಧಾರಿ ||
ಸಜ್ಜನರೋದ್ಧಾರಕ ರಾಧಾಪ್ರಿಯ |
ಗೋಪಿ ರಾಸಲೀಲಾ ಮೋದಕ ನಿರ್ಮೋಹಕ ||
ಆಶ್ರಯದಾತ ಸರ್ವಗೋಪಿ ಪ್ರಿಯ |
ಮೋಹನಾಂಗ ಅಂಗಸಂಗ ಪ್ರದಾತ ||
ಅಕ್ರೂರಪ್ರಿಯ ಮಥುರಾಗಮನ |
ಚಾಣೂರ ಮುಷ್ಟಿಕ ಕಂಸಾರಿ ||
ದೇವಕಿ ವಸುದೇವ ನಮಿಪ ಕಂದ |
ವಿದ್ಯಾಗುರು ಸಾಂದೀಪಿನಿ ಆಶ್ರಯೆ ||
ಗುರುದಕ್ಷಿಣಾರ್ಪಿತ ಗುರುಪುತ್ರ: ||
ಕೃಷ್ಣಪ್ರಿಯ ಸುದಾಮಸಖ |
ಕುಂತಿ ಆರಾಧಿತ ಪಾಂಡವ ಪರಿಪಾಲಕ ||
ಸರ್ವಶಾಸ್ತ್ರ ರಹಸ್ಯ ಬೋಧಕ ಅಕ್ಷರ |
ವಿಶ್ವರೂಪದರ್ಶನ ಸಜ್ಜನಾನ್ಮೋದಕ ||
ಭಗವದ್ಗೀತಾ ಬೋಧಕ ಮುಕ್ತಿದಾಯಕ ||
ಪಾರ್ಥಸಾರಥಿ ಶ್ರೀರುಕ್ಮಿಣಿ ನಾಥ |
ಸ್ಯಮಂತಕಮಣಿ ಪ್ರದಾತ ಸತ್ಯಭಾಮಾಪ್ರಿಯ ||
ಸದಾತುಲಸೀ ಸಾನ್ನಿಧ್ಯಸ್ಥ ಕಾಲೀಂದಿಪ್ರಿಯ |
ಷೋಡಶ ಸಹಸ್ರ ಪತ್ನಿಸ್ಥ ಸಮದರ್ಶಿ ||
ಉತ್ತಮ ಶ್ಲೋಕ ಆರ್ತಜನಾಶ್ರಯ |
ದುರ್ವಾಸ ಶಾಪಸ್ವೀಕಾರ ಯದುಕುಲನಾಶಕ |
ಉದ್ಧವ ಬೋಧಕ ಮಾನವ ಶರೀರತ್ಯಾಗ ||
ಲಕ್ಷ್ಮೀಸಹಿತ ವಿಷ್ಣುಲೋಕೇ ಚಿರಸ್ಥಾಯಿ |
ಸಿಂಧುಶಯನ ಅನಂತ ಗುಣಸಾಂದ್ರ ||
ಸದಾನಂದ ಸರ್ವೋತ್ತಮ ಸ್ಮರೇತ್ ಸದಾ |
ಸಂಸಾರ ಚಕ್ರ ವಿಮುಕ್ತಿ ಶ್ರೀಕೃಷ್ಣವಿಟ್ಠಲ ಸಾಮೀಪ್ಯ ಲಭೇತ್ ||
82. ಶೇಷ ಶಾಯಿಯಾಗಿ ಪವಡಿಸಿದ ಮನಮೋಹಕ ರಂಗನಾಥ |
ಶಾಲಿಗ್ರಾಮ ಕೃಷ್ಣವರ್ಣದ ರೂಪ ಅದ್ಭುತ, ಮಹಾದ್ಭುತ, ರಮ್ಯ | || ಪ ||
ಧನಕನಕವ ಅಳೆದು ಬಸವಳಿದು ಸೇರನೆ ತಲೆಯಡಿಇಟ್ಟು |
ತೋಳನೆ ದಿಂಬಾಗಿಸಿ ಸುಖವಾಗಿ ನಿದ್ರಿಸಿದ ಮುದ್ದು ರಂಗನಾಥ ||
ಅಗಲಮೋರೆ, ನೀಳನಾಸಿಕ, ಮಂದಹಾಸ ಬೀರುತ |
ನಿಮಿಲನೇತ್ರ, ಕಾಮಪಿತ, ಸುಂದರರೂಪ ರಂಗನಾಥ | || 1 ||
ಬೃಹತ್ ಕಿರೀಟ, ಮಕರಕುಂಡಲ, ಕಂಕಣಧರಿಸಿ |
ಹಾರ, ಕೇಯೂರ, ಪೀತಾಂಬರಧಾರಿ, ಭವ್ಯ ರೂಪದಸ್ವಾಮಿ ರಂಗನಾಥ ||
ಚಾಚಿದ ವಾಮಹಸ್ತ, ಬಲಮಗ್ಗಲಾಗಿ ಮಲಗಿದ |
ನೀಡಿದ ಕಾಲ್ಗಳ ದಿವ್ಯ ಪಾದಪದ್ಮ ದರುಶನವಿತ್ತ ಜೀಯಾ | || 2 ||
ನಾನೆಂದಿಗೂ ಮರೆಯಲಾರೆ ಆ ನಿನ್ನ ದಿವ್ಯರೂಪ |
ಲೋಕಪಾಲಕ ಕರುಣಾಮಯನೆ, ಎನ್ನಲಿ ಏನುಂಟೆಂದು ||
ದರುಶನ ಭಾಗ್ಯ ಕರುಣಿಸಿ ಎನ್ನ ಪಾವನಗೊಳಿಸಿದೆ ರಂಗನಾಥ |
ಈ ರಂಗನಾಥನೇ ನನ್ನಪ್ರಿಯ ಶ್ರೀಕೃಷ್ಣವಿಟ್ಠಲನೆಂಬಲ್ಲಿ ಸಂಶಯವಿಲ್ಲಾ || 3 ||
83. ನೀನೆ ನಿತ್ಯ ಶ್ರೀಕೃಷ್ಣ |
ನೀನೇ ಸತ್ಯ ಶ್ರೀಕೃಷ್ಣ ||
ನೀನೇ ಕರ್ತಾ ಶ್ರೀಕೃಷ್ಣ |
ನೀನೇ ಭರ್ತಾ ಶ್ರೀಕೃಷ್ಣ ||
ನೀನೇ ಹರ್ತಾ ಶ್ರೀಕೃಷ್ಣ |
ನೀನೇ ಆತ್ಮ ಶ್ರೀಕೃಷ್ಣಾ ||
ನೀನೇ ಸ್ವತಂತ್ರ ಶ್ರೀಕೃಷ್ಣ |
ನೀನೇ ಅಂತರ್ಬಹಿಶ್ಚ ಶ್ರೀಕೃಷ್ಣ ||
ಜ್ಞಾನಾನಂದರೂಪಿ ನಿರ್ದೋಷಿ ಶ್ರೀಕೃಷ್ಣ |
ಅನಂತಾನಂತ ಗುಣಪೂರ್ಣ ಶ್ರೀಕೃಷ್ಣ ||
ಮನದಿ ಅರ್ಚಿಸೆ ಧ್ಯಾನಕ್ಕೆ ಪೊಳೆವ ಶ್ರೀಕೃಷ್ಣ|
ಎನ್ನಸ್ವಾಮಿ ಸರ್ವಸ್ವಾಮಿ ಶ್ರೀಕೃಷ್ಣವಿಟ್ಠಲ ||
84. ಗೋಕುಲದಿ ಬೆಳೆದ ದೇವಕಿ ನಂದನ |
ಗೋವುಗಳ ಕಾಯ್ದ ಅನುದಿನ ಪ್ರೇಮದಿ ||
ಗೋಪಾಲರೂಡಗೂಡಿ ಓಡನಾಡಿದ |
ಗೋವರ್ಧನ ಗಿರಿಯನ್ನೆತ್ತಿ ಸಕಲರ ರಕ್ಷಿಸಿದ ||
ಗೋಪಿಯರೊಡನೆ ರಾಸಲೀಲೆ ರಚಿಸಿದ |
ಗೋವಿಂದ ಸತ್ಯದಿ ಅಸುರರ ಸದೆಬಡೆದ ||
ಗೋಜು ಸಂಸಾರದಿ ತಪ್ಪಿಸುವ ಶ್ರೀಕೃಷ್ಣವಿಟ್ಠಲನ ನಿತ್ಯ ನೆನೆವರ ||
85. ಅಷ್ಟಮ ಅವತಾರದಿ ಭಗವಂತ ಶ್ರೀಕೃಷ್ಣವಿಟ್ಠಲ |
ಅಷ್ಟವಸುವಿನ ಕಂದನಾಗಿ ಜನಿಸಿದ ಶ್ರೀಕೃಷ್ಣವಿಟ್ಠಲ ||
ಅಷ್ಟಮಿದಿನ ರೋಹಿಣಿ ನಕ್ಷತ್ರದಿ ಜನಿಸಿದ ಶ್ರೀಕೃಷ್ಣವಿಟ್ಠಲ |
ಅಷ್ಟರನ್ನೂ ಸಲಹುವ ಸಂಶಯವಿಲ್ಲದೆ ಶ್ರೀಕೃಷ್ಣವಿಟ್ಠಲ ||
ಅಷ್ಟಗಂಧ, ಬುಕ್ಕಿ ಟ್ಟುಗಳಿಂದ ಅರ್ಚಿಸೆ ನಲಿವ ಶ್ರೀಕೃಷ್ಣವಿಟ್ಠಲ |
ಅಷ್ಟಾಂಗ ಸಾದರ ಪ್ರಣಾಮಕ್ಕೆ ತನ್ನನ್ನೇ ಒಪ್ಪಿಸಿ ಕೂಳ್ಳುವ ಶ್ರೀಕೃಷ್ಣವಿಟ್ಠಲ ||
ಅಷ್ಟದಶದಿನ ಕುರುಕ್ಷೇತ್ರದಿ ಸಾರಥ್ಯನಡೆಸಿದ ಶ್ರೀಕೃಷ್ಣವಿಟ್ಠಲ |
ಅಷ್ಟಾದಶ ಅಕ್ಷೋಹಿಣಿ ಸೈನ್ಯದ ಮಧ್ಯೆ ರಾರಾಜಿಸಿದ ಶ್ರೀಕೃಷ್ಣವಿಟ್ಠಲ ||
ಅಷ್ಟಮಹಿಷಿರೊಡಗೂಡಿ ಅವತಾರಕ್ರಿಯೆ ನಡೆಸಿದ ಶ್ರೀಕೃಷ್ಣವಿಟ್ಠಲ |
ಅಷ್ಟಮದ ಅಡಗಿದಾಗ ಒಲಿವ ಶ್ರೀಕೃಷ್ಣವಿಟ್ಠಲ ||
ಎಂಟರ ನೆಂಟಿನ ಗಂಟು ಅರಿತವರಿಗೆ ಇಲ್ಲ ಸಂಸಾರದ ಕಗ್ಗಂಟು
ಬಂಟರಂತೆ ಸಂತತ ಸೇವಿಪರಿಗೆ ಬಲು ಸುಲಭನೋ ಶ್ರೀಕೃಷ್ಣವಿಟ್ಠಲ ||
86. ಅಡಿಯಿಂದ ಮುಡಿವರೆಗೆ ನಾನಾ ಒಡವೆ ಧರಿಸಿದ |
ಗದಾ ಶಂಖ ಪದ್ಮ ಚಕ್ರಧಾರಿ ಲಲಾಟದಿ ಮುಂಗುರುಳ ಹಾರುತ ||
ಸುಂದರ ಮೂರ್ತಿ ಪೀತಾಂಬರಧಾರಿ ನಸುನಗುತ |
ಕುಡಿನೋಟ ಬೀರುವ ಚೆಲುವ ಕಸ್ತೂರಿ ತಿಲಕಧಾರಿ ||
ಕುಂಡಲ ಕಿವಿಯೊಳು, ನವರತ್ನಕಿರೀಟ ಶಿರದಿ |
ಕಡಗ ಕಂಕಣ ಕೈಯೊಳು, ಬಾಜುಬಂದ ಬಾಹುದಿ ||
ನಡುವಿಗೊಡ್ಯಾಣ, ಕೌಸ್ತುಭ ಮುತ್ತಿನಹಾರ ಕಂಠದಿ |
ಅಂದುಗೆ ಗೆಜ್ಜೆ ಘಲ್ಲಘಲ್ಲೆಂದು ಕಾಲಲಿ ನೋಡೆ ||
ಎಡ ಬಲದಿ ರುಕ್ಮಿಣಿ ಸತ್ಯ ಭಾಮ ರೊಡಗೂಡಿದ |
ಒಡೆಯಾ ಶ್ರೀಕೃಷ್ಣವಿಟ್ಠಲನ ನೆನೆ ತನ್ನ ಪಾದಾಶ್ರಯ ನೀಡುವ ||
87. ಪುಟ್ಟ ಬಾಲಕನಿವ ಸಕಲರ ಮನ ಸೆಳೆವನೀತ |
ದಿಟ್ಟಿಸಲು ಇವನ ಜನುಮ ಕಡೆ ಹಾಯಿಸುವನೀತ | || ಪ ||
ಅಷ್ಟಮದಗಳ ತರಿದು ಬಿಸುಟುವವನೀತ |
ಸುಟ್ಟು ಪಾಪಕರ್ಮ ಶುದ್ಧ ಮಾಡುವವನೀತ | || ಅಪ ||
ರಜತ ಪೀಠದಿ ನಿಂತ ಬಾಲಕನ್ಯಾರುಗೊತ್ತೆ |
ವಿಜೃಂಭಣೆಯಿಂ ಸಕಲ ಕೈಂಕರ್ಯ ಕೈಗೊಳುವ ||
ಗೆಜ್ಜೆಕಾಲ್ಗಳ ಪುಟ್ಟಪಾದ ಕಂದನಿವ |
ಕಜ್ಜಾಯ ಪಂಚಖಾದ್ಯಗಳ ನೈವೇದ್ಯ ಸವಿಯುವ | || 1 ||
ಮಧ್ವಸರೋವರದಿ ಮಿಂದವಗೆ ಭಾಗ್ಯವೀವ |
ಮಂದರೋದ್ಧಾರಿ ಮಂದಸ್ಮಿತ ಮನಸೆಳೆವ ||
ಬಂದ ಭಕುತರ ಅಭೀಷ್ಟೆ ಪೂರೈಸುವವ |
ವಾದಿರಾಜರ ಇಚ್ಛೆಯಂತೆ ನಡೆದ ಪರ್ಯಾಯದ ಅಧಿದೈವ | || 2 ||
ಅಷ್ಟಮಠಾಧೀಶರೂಡೆಯ ನಿತ್ಯಪೂಜೆಗೊಳ್ಳುವ |
ಇಷ್ಟದೈವ ಸಕಲರ ಪೊರೆವನೆಂಬ ಬಿರುದಿನ ||
ದೃಷ್ಟಿಸಿ ಮೋಹದಿ ತಾರಿಸುವ ಸಂಸಾರ ಕಂಸಾರಿ |
ಮಾಟವಾದ ಮೈಮಾಟದ ಮಾಂತ್ರಿಕನಿವ | || 3 ||
ಕಡೆಗೋಲ ಬಲಕೈಯಲಿ ಧರಿಸಿರುವ |
ಪಿಡಿದು ನೇಣವ ಎಡೆಕೈಯಲ್ಲಿನಿಂತವ ||
ಹೊಡೆದೂಡಿಸುವ ಸಕಲ ದುಷ್ಟ ಶಕ್ತಿಯ |
ಒಡೆಯನಿವ ಹೃಷ್ಟರೂಪಿ ನಮ್ಮ ಶ್ರೀಕೃಷ್ಣವಿಟ್ಠಲ | || 4 ||
88. ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲಾ |
ಮನ್ನಿಸಿ ಸಕಲ ತಪ್ಪುಗಳ ಬಿಡದೆ ಕಾಯೋ ಶ್ರೀಕೃಷ್ಣವಿಟ್ಠಲಾ | || ಪ ||
ಚಂದನ ಚರ್ಚಿತ ಸುಂದರವದನ |
ಮಂದಸ್ಮಿತ ನಿಮಿಲನೇತ್ರ ಮುಕು ಟಧರನೇ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 1 ||
ನಡುವಿಗೊಡ್ಯಾಣ ಮಕರ ಕುಂಡಲಧಾರಿನ್ |
ಕಡಗಕಂಕಣ ನೂಪುರ ಘಿಲ್ಲೆನ್ನುತ ವರಾಭಯಪ್ರದ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 2 ||
ಬ್ರಹ್ಮಾಂಡ ಪಿಂಡಾಡ ಸರ್ವವ್ಯಾಪ್ತ ಸರ್ವೇಶ |
ಅಮರ ಸುರಗಣ ಸರ್ವವಂದ್ಯ ಸುಪೂಜಿತ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 3 ||
ಲೋಕೈಕನಾಥ ಸಮಸ್ತ ದೋಷದೂರ |
ಲಕ್ಷ್ಮೀಪತಿ ಶೇಷಶಾಯಿ ಯೋಗೇಶ್ವರ ||
ಎನ್ನನ್ನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 4 ||
ಜಗತ್ಪರಿಪಾಲಕ ಸತ್ಯಸ್ಯ ಸತ್ಯ |
ಸ್ವಗತ ಭೇದವಿವರ್ಜಿತ ಸ್ವತಂತ್ರ ರೂಪಿ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 5 ||
ದೇಶಕಾಲಗುಣತಃ ಸರ್ವ ಸಾಕ್ಷಿ, ಏಕೈಕ |
ನಾಶರಹಿತ ಸರ್ವಶಕ್ತಅನಂತ ಗುಣಿ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 6 ||
ಆನಂದ ವಿಮಲ ಜ್ಞಾನ ಸಾಗರ |
ಚಿನ್ಮಯ ರೂಪ ಸಂಸಾರ ಭವತಾರಕ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 7 ||
ಸ್ಮರಣತ್ ಸದಾವಂದ್ಯ ಪಾವನರೂಪ |
ಸ್ಪುರೇತ್ ಹೃದ್ಗುಹೇ ನಿಜ ಬಿಂಬರೂಪ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 8 ||
89. ಕಡೆಗೋಲ ನೇಣಪಿಡಿದ ಉಡುಪಿಕೃಷ್ಣ |
ಬಾಲಕನಾಗಿ ನಿಂತಿಹ ಗುರುವಾಯೂರಪ್ಪನಾಗಿ ||
ಎರಡು ಕೈ ಕಟಿಯಲ್ಲಿಟ್ಟು ಪಂಢರಿರಾಯ |
ಅಭಯ ಹಸ್ತದ ಕಂಚಿ ವರದರಾಜ ||
ವರದ ಹಸ್ತ ತೋರಿದ ಶೇಷಗಿರಿವಾಸ |
ಶೇಷ ಶಾಯಿಯಾದ ಶ್ರೀರಂಗನಾಥ ||
ಬದರಿಲಿ ಯೋಗಮುದ್ರೆ ಭಂಗಿಲಿ ಕುಳಿತ |
ಸರ್ವದೈವವೂ ಜಗನ್ನಾಥ ಶ್ರೀಕೃಷ್ಣವಿಟ್ಠಲನೇ ||
ಇದು ತ್ರಿಕಾಲಕೂ ಸತ್ಯಸ್ಯ ಸತ್ಯವೆಂದು ಎರಡೂ |
ಕೈಮೇಲೆತ್ತಿ ಪೇಳುವೆ ಶ್ರೀಕೃಷ್ಣ ವಿಟ್ಠಲನ ದಯದಿ ||
90. ಜಯಹರಿ ಶ್ರೀಹರಿ ಕೃಷ್ಣವಿಟ್ಠಲ |
ಜಯಹರಿ ಶ್ರೀರಾಮ ಶ್ರೀಕೃಷ್ಣವಿಟ್ಠಲ ||
ಜಯಹರಿ ಗೋವಿಂದ ಶ್ರೀಕೃಷ್ಣವಿಟ್ಠಲ |
ಜಯಹರಿ ಅಚ್ಯುತ ಶ್ರೀಕೃಷ್ಣವಿಟ್ಠಲ ||
ಜಯಹರಿ ಅನಂತ ಶ್ರೀಕೃಷ್ಣವಿಟ್ಠಲ |
ಜಯಹರಿ ಪಂಢರಿ ಶ್ರೀಕೃಷ್ಣವಿಟ್ಠಲ ||
ಜಯಹರಿ ಪಾಂಡುರಂಗ ಶ್ರೀಕೃಷ್ಣವಿಟ್ಠಲ |
ಜಯಹರಿ ರಂಗನಾಥ ಶ್ರೀಕೃಷ್ಣವಿಟ್ಠಲ ||
ಜಯಹರಿ ಶ್ರೀನಿವಾಸ ಶ್ರೀಕೃಷ್ಣವಿಟ್ಠಲ |
ಜಯಹರಿ ವೇಂಕಟೇಶ ಶ್ರೀಕೃಷ್ಣವಿಟ್ಠಲ ||
ಜಯಹರಿ ನಾರಾಯಣ ಶ್ರೀಕೃಷ್ಣವಿಟ್ಠಲ |
ಜಯಹರಿ ಮಧುಸೂದನ ಶ್ರೀಕೃಷ್ಣವಿಟ್ಠಲ ||
ಜಯಹರಿ ದ್ವಾರಕನಾಥ ಶ್ರೀಕೃಷ್ಣವಿಟ್ಠಲ |
ಜಯಹರಿ ಜಗನ್ನಾಥ ಶ್ರೀಕೃಷ್ಣವಿಟ್ಠಲ ||
ಜಯಹರಿ ನರಸಿಂಹ ಶ್ರೀಕೃಷ್ಣವಿಟ್ಠಲ |
ಜಯಹರಿ ತ್ರಿವಿಕ್ರಮ ಶ್ರೀಕೃಷ್ಣವಿಟ್ಠಲ ||
ಜಯಹರಿ ಜನಾರ್ದನ ಶ್ರೀಕೃಷ್ಣವಿಟ್ಠಲ |
ಜಯಹರಿ ದಾಮೋದರ ಶ್ರೀಕೃಷ್ಣವಿಟ್ಠಲ ||
ಜಯಹರಿ ಹೃಷಿಕೇಶ ಶ್ರೀಕೃಷ್ಣವಿಟ್ಠಲ |
ಜಯಹರಿ ಪದ್ಮನಾಭ ಶ್ರೀಕೃಷ್ಣವಿಟ್ಠಲ ||
ಜಯಹರಿ ಪರುಷೋತ್ತಮ ಶ್ರೀಕೃಷ್ಣವಿಟ್ಠಲ |
ಜಯಹರಿ ವಾಸುದೇವ ಶ್ರೀಕೃಷ್ಣವಿಟ್ಠಲ ||
ಜಯಹರಿ ಲಕ್ಷ್ಮೀಪತಿ ಶ್ರೀಕೃಷ್ಣವಿಟ್ಠಲ |
ಜಯಹರಿ ಮುಕುಂದ ಶ್ರೀಕೃಷ್ಣವಿಟ್ಠಲ ||
ಜಯಹರಿ ಮಾಧವ ಶ್ರೀಕೃಷ್ಣವಿಟ್ಠಲ |
ಜಯಹರಿ ಕೇಶವ ಶ್ರೀಕೃಷ್ಣವಿಟ್ಠಲ ||
ಜಯಹರಿ ಗೋಪಾಲ ಶ್ರೀಕೃಷ್ಣವಿಟ್ಠಲ |
ಜಯಹರಿ ಮುರಾರಿ ಶ್ರೀಕೃಷ್ಣವಿಟ್ಠಲ ||
ಜಯಹರಿ ಮುರಳಿಧರ ಶ್ರೀಕೃಷ್ಣವಿಟ್ಠಲ |
ಜಯಹರಿ ಗೋವರ್ಧನ ಶ್ರೀಕೃಷ್ಣವಿಟ್ಠಲ ||
ಜಯಹರಿ ಸರ್ವನಾಮಃ ಶ್ರೀಕೃಷ್ಣವಿಟ್ಠಲ |
ಜಯಹರಿ ಮುಕ್ತಿಪ್ರದಾಯಕ ಶ್ರೀಕೃಷ್ಣವಿಟ್ಠಲ ||
ವಿಟ್ಠಲವಿಟ್ಠಲ ಶ್ರೀಕೃಷ್ಣವಿಟ್ಠಲ |
ಜಯಹರಿವಿಟ್ಠಲ ಶ್ರೀಕೃಷ್ಣವಿಟ್ಠಲ ||
91. ಲೀಲೆಯ ಬಲ್ಲಿರಾ ಯದುಕುಲ ಲಲಾಮನ |
ನೀಲ ಮೇಘಶ್ಯಾಮನ ಅದ್ಭುತ ಲೀಲೆಯ ಬಲ್ಲಿರಾ | || ಪ ||
ಬಾಲಕ ಲಳಿ(ಬೆರಗು), ಚತುರ್ಭುಜ, ಪೀತಾಂಬರಧರ, ಕಿರೀಟಧಾರಿ |
ಶ್ರೀಲಕ್ಷ್ಮೀ ಲಾಂಛಿತ ಪ್ರಾದುರ್ಭವಿಸಿದ ದೇವಕಿಯ ಗರ್ಭದಿಂ ||
ಬೆಳೆದ ಗೋಕುಲದಿ ನಂದ-ಯಶೋದೆ ಕಂದನಾಗಿ |
ಬಾಲ್ಯವ ಕಳೆದ ಗೋಪಾಲಕ, ಗೋಪಿಯರೊಡಗೂಡಿ ಲಾಸ್ಯದಿ ||
ಕಳ್ಳತನದಿ ಬೆಣ್ಣೆ, ಮೊಸರು, ಹಾಲು ಕದ್ದು ಮೆದ್ದನೆಂಬರು | || 1 ||
ಲೀಲಾಜಾಲದಿ ಕೆಲವು ದುಷ್ಟ ಅಸುರ ಮರ್ದನಗೈದ ||
ಕಾಲಿಂದ ಫಣೆಯಲಿ ನರ್ತಿಸಿ ಯಮುನೆಯ ರಕ್ಷಿಸಿದ |
ಏಳು ವರ್ಷದ ಬಾಲಕ ಏಳುದಿನ ಸತತ ಮಳೆಯಲಿ ||
ಲೀಲೆಯಲಿ ಗೋವರ್ಧನ ಎತ್ತಿಪಿಡಿದು ಸಂರಕ್ಷಿಸಿದ ಸಕಲರ |
ಬಿಲ್ಲು ಹಬ್ಬದ ನೆಪದಿ ಲಟ್ಟ(ದುಷ್ಟ) ಮಾವ ಕಂಸನ ಕೊಂದ ಧೀರ || 2 ||
ಲೋಲ, ಲೋಕಮಾತೆ ಶ್ರೀರುಕ್ಮೀಣಿಯ ವರಿಸಿದ |
ಲಲನೆಯರ ಹದಿನಾರು ಸಾಸಿರನೂರೆಂಟು ಪತ್ನಿ ಯುಕ್ತನಾದ ||
ಒಲವಿಂದ ಯೋಗ ಜ್ಞಾನವಿತ್ತ ಯುದ್ಧದಿ ಪಾರ್ಥಸಾರಥಿ |
ಹಲವಾರು ಲೀಲೆಗೈದ ಲೀಲಾಮಾನುಷನ ಬಣ್ಣಿಸಲಾರೆ ||
ಎಲ್ಲ ಬಲ್ಲ ಶ್ರೀಕೃಷ್ಣವಿಟ್ಠಲನ ಪೊಗಳಲು ಶಬ್ದಸಾಲದು | || 3 ||
92. ಪುಟ್ಟಿಸಿದ ತಾಯ್ತಂದೆಯರ ಕಾರಾವಾಸದಲ್ಲಿ ಬಿಟ್ಟು |
ಬುಟ್ಟಿಯಲಿ ಕುಳಿತು ಗೋಕುಲಕೆ ಪೊದೆ ||
ಘಟವನೊಡೆದು ಹಾಲು ಬೆಣ್ಣೆ ಮೆದ್ದೆ |
ದಟ್ಟವಾದ ಕಾಡಲಿ ಗೊಪಾಲಕನಾದೆ ||
ಬೆಟ್ಟವನ್ನೆತ್ತಿ ಇಂದ್ರನ ಮದ ಮುರಿದೆ |
ಘಟ್ಯಾಗಿ ನಂಬಿಸಿ ಗೋಪಿಯರ ತೊರೆದೆ ||
ಮೆಟ್ಟಿದೆ ಮಾವ ಕಂಸನ ತರಿದು ಶಿರವ |
ಅಷ್ಟ ಮಹಿಷಿಯರ ವರಿಸಿ ಸುಕಾಂತನಾದೆ ||
ಚಟ್ಟನೆ ತಂಗಿಗೆ ವಸ್ತ್ರವಿತ್ತು ಮಾನಕಾಯ್ದೆ |
ನೆಟ್ಟೆ ಪಾರಿಜಾತ ಮಡದಿಯ ಪ್ರೀತಿಗಾಗಿ ||
ಕೊಟ್ಟ ಮಾತು ಉಳುಹಲು ಚಕ್ರವ ಪಿಡಿದೆ |
ಒಟ್ಟಿಲಿ ಪಾಂಡವರ ರಕ್ಷಿಸಿ ಕೌರವರ ಒರೆಸಿದೆ ||
ದುಷ್ಟರ ತರಿದು ಶಿಷ್ಟರ ಪಾಲಿಸಿದೆ |
ಇಷ್ಟೆಲ್ಲಾ ಮಾಡಿದ ಶ್ರೀಕೃಷ್ಣವಿಟ್ಠಲ ನಿನಗೆ ನಾ ಭಾರವೆ? ||
ದಿಟವಾಗಿ ನಿನ್ನ ಪಾದನಂಬಿರುವೆ ಕಡೆಗಾಣಿಸೋ ||
93. ಉಡುಪಿಕೃಷ್ಣನ ಪ್ರತಿಮೆ ಸೊರಗುವಿಕೆಗೆ ಕಾರಣವೇನು ?
ಚಿಣ್ಣ ಕೃಷ್ಣಯ್ಯಾ, ಬಾಲ ಕೃಷ್ಣಯ್ಯ ಏಕೆ ಸಣ್ಣಗಾಗಿರುವೆ || ಪೇಳು | || ಪ ||
ಮಣ್ಣ ಮೆದ್ದಬಾಯಿಗೆ ಬೆಣ್ಣೆ, ಹಾಲು, ನೈವೇದ್ಯ ಒಗ್ಗಲಿಲ್ಲವೇ? |
ಹಣ್ಣಿನ ಬುಟ್ಟಿಗೆ ಕೈಹಾಕಿ ತಿಂದವಗೆ ಎದುರಿಟ್ಟಿದ್ದು ಬೇಕಿಲ್ಲವೇ ||
ಒಣ ದ್ರಾಕ್ಷಿ, ಗೋಡಂಬಿ, ಉತ್ತತ್ತಿ ದೇಹಕ್ಕೆ ಪುಷ್ಟಿ ಕೊಡುತಿಲ್ಲವೇ? |
ಕಣ್ಣಿನಿಂದ ಸ್ವಾಖ್ಯರಸ ಸ್ವೀಕರಿಸುವಗೆ ಏನೂ ಬೇಡವಾಯಿತೇ | || 1 ||
ನೇಣು-ಕಡೆಗೋಲು ಪಿಡಿದು ಕೈ ಸೋತು ಹೋಯಿತೇ? |
ಕಣ-ಕಣದಲ್ಲಿರುವಗೆ ಒಂದೆಡೆಯೇ ನಿಂತು ಸಾಕಾಯಿತೆ? ||
ಕ್ಷಣ-ಕ್ಷಣಕೂ ಸೊರಗುತಿರುವುದು ಪಂಚಾಮೃತ ಮಜ್ಜನದಿಂದಲೇ? |
ಮಣಭಾರ ಉದರದಲ್ಲಿಟ್ಟವಗೆ ಜಠರ ಬೇನೆಯೇ | || 2 ||
ಉಣಿಸಿ ಔತಣ ಸಕಲರಿಗೆ ‘ಅನ್ನಬ್ರಹ್ಮ’ ದಣಿದೆಯಾ? |
ಪಣದಿ ಸೋತವರ ಪಕ್ಷವಹಿಸಿ ಧರ್ಮವ ಉಳುಹಲು ಸೊರಗಿದೆಯಾ? ||
ಗಣಿತ ಅಗಣಿತ ಲೋಕಸ್ಥ ದೇವಾ ಕ್ರೀಡಿಸಿದ್ದೇ ಕಾರಣವಾ |
ವರ್ಣಾಭಿಮಾನಿ ಸಕಲ ಸುರವಂದ್ಯರ ಸಂತೈಸಿ ಸೋತೆಯಾ | || 3 ||
ಕಣ್ರೆಪ್ಪೆ ಬಡೆಯದೆ, ಭಾರಪೊತ್ತು, ಮೋರೆ ತಿರುವಿ |
ಸಣ್ಣ ಬಾಲಕಗೊಲಿದು, ತ್ರಿವಿಕ್ರಮನಾಗಿ, ಕಾಡಲಿ ಅಲಿದು ||
ಮಾತೆಯ ಶಿರ ಕಡಿದು, ಕಾಳಿಂಗನ ಫಣೆಮೇಲೆ ನರ್ತಿಸಿ |
ಗುಣಗಳ ಬಿಟ್ಟು ಬೋಧಿಸಿ ಅಧರ್ಮ, ಹಯವನೇರಿದ್ದು ಸೋತು ಸೊರಗಿದೆಯಾ || 4 ||
ಕಣ್ಮಣಿ, ನೀಲವರ್ಣಗೆ ಭಕ್ತರ ದೃಷ್ಟಿ ತಾಕಿದೆಯೇ |
ದಣಿವಾಗಿದೆಯೇ, ಅಷ್ಟಯತಿಗಳ ಭಕ್ತಿ ಕೈಂಕರ್ಯಕೊಂಡು ||
ಷಣ್ಮಹಿಷಿಯರ ವಿರಹ ವೇದನೆ ಸಹಿಸದಾಯಿತೇ? |
ಜಾಣ, ರುಕ್ಮಿಣಿಕರಾರ್ಚಿತ ಶ್ರೀಕೃಷ್ಣವಿಟ್ಠಲ ಕಾರಣವ ಪೇಳಯ್ಯಾ | || 5 ||
94. ಈತನು ವಾಸುದೇವನಲ್ಲದೆ ಮತ್ತ್ಯಾರೂ ಅಲ್ಲ | || ಪ ||
ಚಿತ್ತಚೋರ ಪೋರನೀವ ಬೇರ್ಯಾರೂ ಅಲ್ಲ | || ಅಪ ||
ತಾಯಿಗೆ ಬಾಯಲಿ ಜಗವತೋರಿ |
ಮಾಯೆಯಲಿ ದೇಹಭಾನ ಮರೆಸಿ |
ದಯದಿ ಮತ್ತೆ ಕುವರನಾಗಿ ಕಾಣಿಸಿದವ | || 1 ||
ಪುಟ್ಟಪಾದ ಕಾಳಿಂಗನ ಫಣಿಮೇಲೆ |
ಘಟ್ಟಿಯಾಗಿ ಇಟ್ಟು ನರ್ತಿಸಿದವ |
ಪಟ್ಟು ಬಿಡದೆ ಯಮುನೆ ಬಿಟ್ಟು ದೂರ ಕಳುಹಿದ | || 2 ||
ಏಳುದಿನ ಏಳುರಾತ್ರಿ ಕಿರುಬೆರಳಲೆತ್ತಿ ಗಿರಿ |
ಮಳೆಯಿಂದ ಸಕಲರ ಪ್ರಾಣ ಉಳುಹಿದ ||
ಕಳೆದು ಇಂದ್ರನ ಗರ್ವ ಸರ್ವೋತ್ತಮ ತಾನೆಂದು ಸಾರಿದವ | || 3 ||
ಪೌರ್ಣಿಮೆಯ ಮಧುರ ರಾತ್ರಿಯಲಿ |
ಮಣಿಸಿ ಗೋಪಿಯರ ರಾಸಲೀಲೆ ನೆಪದಿ ||
ದಣಿದು ಶರಣಾದವರ ಪ್ರೇಮಭಾವದಿ ತಣಿಸಿದವ | || 4 ||
ಹತ್ತು ವರುಷದ ಬಾಲಕ ಕುವಲಯಾಪೀಡ |
ಮತ್ತೆ ಚಾಣೂರ, ಮುಷ್ಟಿಕರ ಒರೆಸಿ ||
ಹತ್ತಿ ಕುಳಿತು ಎದೆ ಮೇಲೆ ಮಾವ ಕಂಸನ ಕೊಂದವ | || 5 ||
ಪಾಲು, ಬೆಣ್ಣೆ, ಮೊಸರು ಕದ್ದು ಮರಳುಮಾಡಿ |
ಲೀಲೆಯಲಿ ಊಲುಖವೆಳೆದು ಮರವ ಕೆಡುಹಿದ ||
ಪಾಲಿಸಿ ಗೋವುಳ ಗೋಪಾಲಕ ಶ್ರೀಕೃಷ್ಣವಿಟ್ಠಲನೆನಿಸಿದ | || 6 ||
95. ಸೆರೆಯಲಿ ಶ್ರೀಕೃಷ್ಣ ಜನಿಸಿದಾಗ
ಮೋಹಕರೂಪ ಚಿನ್ಮಯ ರೂಪದ ಶಿಶುವು ಕಾಣಿರೋ | || ಪ ||
ತಾನಾಗಿ ಒಲಿದು ದಯ ಮಾಡಿದ ರೂಪ ಯಶೋದಾನಂದನ | || ಅಪ ||
ಚತುರ್ಭುಜ ಶಂಖ ಚಕ್ರಧಾರಿ ಶ್ರೀವತ್ಸಾಂಕಿತ |
ಪೀತಾಂಬರಧಾರಿ ದೇವಕಿ ಗರ್ಭದಿ ಜನಿಸಲು ಸಾಧ್ಯವೇ ||
ಸರ್ವವ್ಯಾಪುತ, ಸಚರಾಚರ, ಗರ್ಭದಲಿ ಅಡಗುವನ್ಹೇಗೆ |
ಸರ್ವರಿಗೂ ಜನ್ಮಕೊಟ್ಟ ಶ್ರೀರಮಣ ಪುನಃ ಜನಿಸುವನ್ಹೇಗೆ | || 1 ||
ಪೂತನೆಯಕೊಂದವ, ನಳಕೂಬರ ಶಾಪ ಪರಿಹರಿಸಿದವ |
ಗರ್ಭದಲಿ ಶಿಶುವ ಕಾಪಾಡಿದವ ಗರ್ಭದಿಂದ ||
ಜನಿಸಿದನೆಂಬುದು ಹಗುರಾದ ಮಾತು |
ಮಣ್ಣನೇಕೆ ಮೆದ್ದೆ ಎಂಬ ತಾಯಿಗೆ ಬ್ರಹ್ಮಾಂಡ ತೋರಿದವ ಶಿಶುವಾಗುವುದ್ಹೇಗೆ | || 2 ||
ಹದಿನಾರು ಸಾವಿರ ಮೇಲೆಂಟು ಸ್ತ್ರೀಯರಲಿ |
ಹತ್ತು ಹತ್ತೇನಿಪ ಶಿಶುಗಳ ಪುಟ್ಟಿಸಿದವ ಶಿಶುವಾಗಬಲ್ಲನೇ ||
ಗುರುಪುತ್ರನ ಬದುಕಿಸಿದವ ತಂಗಿಗೆ ಅಕ್ಷಯಾಂಬರವಿತ್ತವ |
ಹಿಡಿ ಅವಲಕ್ಕಿಗೆ ಮಹಾ ಸೌಭಾಗ್ಯ ಕರುಣಿಸಿದವ ||
ಶ್ರೀಕೃಷ್ಣವಿಟ್ಠಲಂ ವಂದೇ ಜಗದ್ಗುರುಂ |
ಶಿಶುವೆಂದು ತಿಳಿದ ಬುಧರು ನುಡಿವರೆ | || 3 ||
96. ಲೋಕದಿ ಮನುಜರ ಮೆಚ್ಚಿಸಲರಿಯೇ,
ಎನ್ನಮಾಧವನ ಮನವ ಮೆಚ್ಚಿಸಬಹುದು |
ಪರಿಪರಿ ಸ್ತುತಿಸೆ ಪರರಿಂದ ಅಪವಾದ ತಪ್ಪದು,
ಆರ್ತದಿಂದೊಮ್ಮೆ ಕರೆಯೇ ಅನಿಕೇತನೊಲಿವಾ ||
ಪರರ ಆಪೇಕ್ಷೆಗೆ ಮಿತಿ ಇಲ್ಲಾ,
ಅವಿರತ ನೆನೆದೊಡೆ ಶ್ರೀಕೃಷ್ಣವಿಟ್ಠಲನ ಕಾರುಣ್ಯಗೆ ಎಣಿಯಿಲ್ಲಾ ||
97. ಅನವರತವೂ ನಿನ್ನ ಗುಣಗಳನ್ನೇ ಪಾಡುತ್ತಿರಲಿ ವದನ |
ನಿನ್ನ ನಾಮ ಸಂಕೀರ್ತನೆಯನ್ನೇ ಪೇಳಲಿ ಜಿಹ್ವೇ ||
ನಿನ್ನ ಹೆಸರನ್ನೇ ಜಪಿಸಲಿ ಈ ಶ್ವಾಸವು |
ನಿನ್ನ ಕಥೇಯನ್ನೇ ಕೇಳಲೀ ಕಿವಿಗಳು ||
ನಿನ್ನ ಬಗೆ ಬಗೆಯಲಿ ಚಿಂತಿಸಲಿ ಈ ಮನವು |
ಒಳ ಹೊರಗೂ ಸದಾ ನಿನ್ನನ್ನೇ ಕಾಣುವಂತಾಗಲಿ ಕಂಗಳು ||
ಯಾವಾಗಲೂ ನಿನ್ನ ಕೆಲಸವೇ ಮಾಡಲಿ ಈ ಕೈಗಳು |
ಎಲ್ಲಿ ಹೋದರೂ ನಿನ್ನ ಬಳಿಗೆ ನಡೆಯಲಿ ಕಾಲ್ಗಳು ||
ನಿಜ ಭಕುತರ ಸಂಗ ದೊರೆತು ನಿತ್ಯದಲಿ |
ಶ್ರೀಕೃಷ್ಣವಿಟ್ಠಲನಲಿ ಅನನ್ಯರತಿ, ಅನ್ಯರಲಿ ವಿರಕ್ತಿ ಆಗಲಿ ||
98. ನವನೀತ ಚೋರನಿವನ್ಯಾರಮ್ಮಾ | || ಪ ||
ನೀ ಪೇಳಮ್ಮಾ, ಈ ನಂದಕುಮಾರನ್ಯಾರಮ್ಮಾ | || ಅಪ ||
ಚತುರ್ಭುಜನಾಗಿ ಪುಟ್ಟಿ ಮಾತೆಗೆ ಉಪದೇಶಿಸಿದ |
ಪೂತನಿಯ ಕೊಂದವ, ಬಾಯೊಳು ಜಗವ ತೋರಿದವ ||
ಬಂಡಿಯನ್ನೆ ಮುರಿದವ, ಬೆಟ್ಟವನ್ನೆ ಪೊತ್ತವ |
ಗೋಪಿಯರ ಸೀರೆ ಕದ್ದವ, ಮುರಳಿಯ ನಾದದಿ ಮೈಮರೆಸಿದವನ್ಯಾರಮ್ಮಾ | || 1 ||
ಕಾಳಿಂಗನ ಫಣೆಯಲಿ ಕುಣಿದಾಡಿದವ |
ಮೋಹಕರೂಪದಿ ಮನ ಸೆಳೆಯುವ ||
ನಿರುತ ಲೋಲಾಕ್ಷಿ ಸೇವೆ ಸೇವಿಪನ |
ಭಕ್ತಪರಾಧೀನ ನಮ್ಮ ಶ್ರೀಕೃಷ್ಣವಿಟ್ಠಲನಲ್ಲದೆ ಮತ್ತ್ಯಾರಮ್ಮಾ | || 2 ||
99. ಎಲ್ಲಿ ಹುಡುಕಲಿ ಕೃಷ್ಣಯ್ಯಾ, ಹೇಗೆ ಹುಡುಕಲಿ | || ಪ ||
ಬಲ್ಲವರಾರೂ ಇಲ್ಲಿಲ್ಲ ಕೇಳುವುದ್ಯಾರಿಗೆ | || ಅಪ ||
ಸೆರೆಮನೆ-ಅರೆಮನೆ ಎಲ್ಲ ತಿರುಗಿದೆ |
ನೆರೆಮನೆ-ಕೆರೆಮನೆಯಲ್ಲೂ ಕೇಳಿದೆ ||
ತರು-ಲತೆಗಳಿಗೂ ದೈನ್ಯದಿ ಕೇಳಿದೆ |
ಭೋರಾಡಿ-ಗೋಳಾಡಿದರೂ ಸುಳಿವೇ ಇಲ್ಲ | || 1 ||
ವನ-ವನದಲ್ಲೂ ಮತ್ತೆ ಮತ್ತೆ ತಿರುಗಿದೆ |
ಕಾನನದ ಪಶು-ಪಕ್ಷಿಗಳಿಗೂ ಕೇಳಿದೆ ||
ವನಜನರಸನ ಬಲ್ಲಿರಾ? ತಿಳುಹಿರಿ ಎಂದೆ |
ಮನದರಸನ ಹುಡುಕಿ ಕೊಡಿ ಎಂದರೂ | || 2 ||
ನೀಲವರ್ಣದ ಸುಂದರಾಂಗನಿರುವ |
ನಲ್ಲನಿವ ಸಕಲ ಗೋಪಿಯರಿಗೆ ||
ಒಲ್ಲೆನೆಂದರೂ ಸರಸಕ್ಕೆಳಿಸುವನಿವ |
ನಲ್ಮೆಯ ಮಿತ್ರನಿವ ಗೋಪಾಲಕರಿಗೆ | || 3 ||
ಇಲ್ಲಿ ಸಲ್ಲುವರೂ ಯಾರು ಇವಗೆ ಬೇಕಿಲ್ಲಾ |
ಅಲ್ಲಿ ಸಲ್ಲುವರ ಅರೆಕ್ಷಣ ಬಿಟ್ಟರಲಾರ ||
ನಿಲ್ಲಲಾರರೂ ಯಾರು ಇವಗೆ ಸಮ |
ಮಲ್ಲನಿವ ಯದುಕುಲಚಂದ್ರ | || 4 ||
ಅರಿವು ಮೂಡಿಸುವರ್ಯಾರು ಇಲ್ಲಿಲ್ಲ |
ಅರಿಯದವರಿಗೆ ಕೇಳಿ ಏನುಪಯೋಗ ||
ಪರತಮನ ವರಾನುಗ್ರಹದಿ ಸಿಗಬೇಕಷ್ಟೇ |
ಕರೆದರೆ ಭಕ್ತಿಯಲಿ ಓಡೋಡಿ ತಾನೇ ಬರುವ ಶ್ರೀಕೃಷ್ಣವಿಟ್ಠಲ||ಕೃಷ್ಣಯ್ಯಾ ||5||
100. ದೇವಕಿ ಕಂಡು ಕಂದನ ಚತುರ್ಭುಜ ರೂಪ ಸ್ತುತಿಸಿದಳು |
ಅವ್ವೆ ಯಶೋದೆ ಆನಂದಿಸಿದಳು ಸಕಲ ಬಾಲಲೀಲೆಗಳ ||
ಭಾವೆ ರಾಧೆ ಅನುಭವಿಸಿದಳವನ ಪ್ರೀತಿಯ ಸೆಲೆಯ |
ಭಾವ ಭಕ್ತಿಯಲಿ ಮಿಂದರೆಲ್ಲಾ ಗೋಪಿಯರು ||
ತ್ರಿವಕ್ರಳು ಮೈಮರೆತಳವನ ಅಂಗ ಸುಖದಿ |
ಮಾವ ಕಂಸ ಕಂಡನವನಲಿ ತನ್ನ ಮರಣವ ||
ಸುವ್ರತ-ತಪದಿ ಋಷಿಗಳು ಧನ್ಯರಾದರವನ ಪಾದರತಿಯಲಿ |
ದೇವತೆಗಳೆಲ್ಲಾ ನತಮಸ್ತಕರಾಗಿ ಆರಾಧಿಸಿದರು ||
ನವನೀತ ಚೋರ ನವನವೀನ ರೀತಿಲಿ ತೋರಿದ |
ಸರ್ವರ ಇಚ್ಛೆಯ ಪೂರ್ತಿಗೊಳಿಸಿದ ||
ಆವಾವ ಭಾವಕ್ಕೆ ಆವಾವ ತೆರನಾಗಿ ಇದ್ದು |
ಕಾವ ಶ್ರೀಕೃಷ್ಣವಿಟ್ಠಲ ತನ್ನನ್ನೇ ನೆಚ್ಚಿದವರ ||
101. ಕಂಟಕಕಾರಿ ವಿಷದ ಗಾಳಿ ಸೋಂಕಲು |
ಬಂಟರಾದ ಗೋಪಾಲಕರೆಲ್ಲ ಮೂರ್ಛೆ ಹೋದರು ||
ದಿಟ್ಟ ಬಾಲಕ ಇದ ನೋಡಿ ಸಹಿಸದೆ |
ಸೊಂಟಕೆ ಕಟ್ಟಿದ ದಟ್ಟಿ ಬಿಗಿದು ಸುತ್ತಿದ ||
ಒಂಟಿಯಾದ ತಾಳೆಮರ ಹತ್ತಿ ಮಡುವಿಗೆ ಧುಮಿಕಿದ |
ಮೆಟ್ಟಿ ಮೆಟ್ಟಿ ಕಾಳಿಂಗನ ಫಣೆಮೇಲೆ ನರ್ತಿಸಿದ ||
ಪುಟ್ಟ ಪುಟ್ಟಪಾದ ಚಿಹ್ನೆ ಮೂಡಿಸಿದ ಹೆಡೆಮೇಲೆ |
ಪಟ ಪಟನೆ ರಕ್ತ ಕಾರಿದ ಸಕಲ ಮುಖದಿ ವಿಷವೆಲ್ಲ ||
ಚಟ ಚಟನೆ ಓಡಿಬಂದ ಲಲನೆಯರು ಪ್ರಾರ್ಥಿಸೆ |
ಬಿಟ್ಟು ಹೋಗು ರಮಣಕ ದ್ವೀಪಕೆ ಕಾಡಬೇಡ ಇನ್ನಿಲ್ಲಿ ಎಂದ ||
ಉಂಟಾದ ವಿಷಮಯ ವಾತಾವರಣ ನಿವಾರಿಸಿದ ಪರಿಸರಪ್ರೇಮಿ |
ಗಟ್ಟಿಯಾಗಿ ಶ್ರೀಕೃಷ್ಣವಿಟ್ಠಲನ ಪಾದ ಪಿಡಿದರೆಚ್ಚೆತ್ತ ಗೋಪಾಲಕರೆಲ್ಲ ||
102. ಆರಾಧಿಸೆ ವೃಂದಾವನದಿ ಸಕಲರೂ ಗೋವರ್ಧನನ |
ಇಂದ್ರ ಕುಪಿತಗೊಂಡು ಮುಸಲಧಾರೆಗೆರೆದ ||
ಸುರಿದ ಜಡಿ ಮಳೆ ರಭಸ ತಪ್ಪಿಸಲು |
ಗಿರಿಯ ಛತ್ರಿಯಾಗಿಸಿ ಪಿಡಿದ ಏಳುದಿನ ಸತತ ||
ಕಿರು ಬೆರಳ ತುದಿಯಲ್ಲೆತ್ತಿ ಅಲುಗಾಡದೆ |
ಕರೆದ ಸಕಲ ಜನರ ಗೋವಳ ಸಹಿತ ||
ಪೋರ ದಿಟ್ಟತನದಿ ಆಶ್ರಯವಿತ್ತ |
ಪೂರ್ಣನಂಬದೇ ಬಾಲಕನ ಶಕ್ತಿಯ ||
ಊರುಗೋಲಾಗಿ ಕೋಲನು ಆನಿಸಿ ಹಿಡಿದರು ಭಯದಿ |
ಇಂದ್ರ ತಿಳಿದು ತನ್ನ ತಪ್ಪಿಗೆ ನಾಚಿ ನೀರಾದ ||
ಬೇರಾರಲ್ಲ ಸರ್ವಾಧಿಪತಿ ಶ್ರೀಕೃಷ್ಣವಿಟ್ಠಲನೇ ಈ ಬಾಲಕನೆಂದರಿತ ||
103. ಸುಂದರನ ಅತೀ ಸುಂದರನಿವ | ಯದುಕುಲ ತಿಲಕಚಂದ್ರ ಲಲಾಮ || ಪ ||
ಮುಗ್ಧಮುಖದ ಮಂದಸ್ಮಿತ |
ಸ್ನಿಗ್ಥ ಶೀತಲಕಾಂತಿ ಚೆಲುವ ||
ದುಗ್ಧಸಾಗರ ಶೇಷಶಾಯಿ |
ಸ್ತಬ್ಧನಾಗಿಸುವ ನೋಡುವವರ | || 1 ||
ಅಂದ-ಚೆಂದಗಳೆಲ್ಲಾ ನೋಡುವರ ಕಣ್ಣಲ್ಲಿದೆ |
ಸಂದಣಿಸುವ ಸೇವೆ ಕಂತುಪಿತನಿಗಿರಲಿ ||
ಕುಂದುಕೊರತೆ ನೀಗಿಸಿ ಮೋದವೀಯಲಿ |
ಬಂಧನ ಮೋಚಕ ಶಕ್ತಿ ಇವನಿಗೇ ಇದೆ | || 2 ||
ಎಷ್ಟು ಅಂದನೋ ನನ್ನ ಕೃಷ್ಣಯ್ಯ |
ಎಷ್ಟು ಚೆಂದನೋ ನನ್ನ ಕೃಷ್ಣಯ್ಯ ||
ದೃಷ್ಟಿಯಾದಿತು ನನ್ನ ಕೃಷ್ಣಯ್ಯಗೆ |
ಸೃಷ್ಟಿಗೊಡೆಯಾ ನನ್ನ ಶ್ರೀಕೃಷ್ಣವಿಟ್ಠಲ | || 3 ||
104. ಜಾಣನ ಪಾಣಿಯ ನೋಡಿರೈ ಜಾಣರೆಲ್ಲ | || ಪ ||
ಕಣ ಕಣದಲ್ಲಿದೆ ಅಮೃತಧಾರೆ || ಸತತ | || ಅಪ ||
ಚಕ್ರವ ಪಿಡಿದ ಪಾಣಿ |
ನಕ್ರನ ತರಿದ ಪಾಣಿ ||
ವಕ್ರಳ ಸರಳಿಸಿದ ಪಾಣಿ |
ಶಕ್ರನ ಗರ್ವಮುರಿದ ಪಾಣಿ | || 1 ||
ಮೊಲೆ ಪಿಡಿದು ಅಸುವೆಳೆದ ಪಾಣಿ |
ಊಲುಖವೆಳೆದು ಶಾಪ ಕಳೆದ ಪಾಣಿ ||
ಬಾಲೆಯರ ಸೀರೆ ಕದ್ದ ಪಾಣಿ |
ನಲ್ಮೆಯ ಗೋಪಾಲರ ಕಾಯ್ದ ಪಾಣಿ | || 2 ||
ಕಂಸಮಾವನ ಕೊಂದ ಪಾಣಿ |
ಕೂಸನ್ನೇ ಗುರುದಕ್ಷಿಣೆಯಾಗಿತ್ತ ಪಾಣಿ ||
ಅಸುರರ ನಿಗ್ರಹಿಸಿದ ಪಾಣಿ |
ಹಸನಾದ ಬಾಳು ಇವ ಪಾಣಿ | || 3 ||
ಅಧರದಿ ವೇಣುವಿಟ್ಟ ಪಾಣಿ |
ಸಾದರದಿ ಗೋವಳ ಕಾಯ್ದ ಪಾಣಿ ||
ಬೆದರದೆ ಬೆಣ್ಣೆಯ ಕದ್ದ ಪಾಣಿ |
ಕಾದಿಹ ಗೋಪಿಯರ ತಣಿಸಿದ ಪಾಣಿ | || 4 ||
ಸಭೆಯಲಿ ಶಿರ ತರಿದ ಪಾಣಿ |
ಗರ್ಭದಿ ಶಿಶುವ ರಕ್ಷಿಸಿದ ಪಾಣಿ ||
ಅಭಯದಿ ವಸ್ತ್ರವಿತ್ತ ಪಾಣಿ |
ನಿರ್ಭಯದಿ ಭೈಷ್ಮಿಯ ಪಿಡಿದ ಪಾಣಿ | || 5 ||
ಪಾಂಡವರನೇ ಕಾಯ್ದ ಪಾಣಿ |
ಒಡನೆ ಜಗ ನುಂಗುವ ಪಾಣಿ ||
ನಡುವನೆ ಬಳಸಿದ ಪಾಣಿ |
ಒಡೆಯಾ ಶ್ರೀಕೃಷ್ಣವಿಟ್ಠಲನ ಪದ್ಮಪಾಣಿ | || 6 ||