ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 2

ಉ-ಕಾರನಾಮದ ಪರಮಾತ್ಮ

177. ಊಧ್ರ್ವಮೂಲಂ ವೈಕುಂಠಸ್ಥ ಉಪಸ್ಥ ಪರಮಪವಿತ್ರಂ |

ಉದೀರ್ಣ ಉದಾರಧೀಃಯ ಉತ್ಕಷ್ಟ ಊರ್ಜಿತ ||

ಉತ್ತಮ ಶ್ಲೋಕ ಊಚ ಉರುಕ್ರಮ ಉದಾರಿ |

ಉರುಗಶಾಯಿ ಉಪರಾಧೀಶ ಉನ್ನತ ಉದ್ವಾಹನ ||

ಉನ್ನತ ಪ್ರಾರ್ಥಿತ ಉನ್ಮೀಲಿತ ಉನ್ನತೋನ್ನತ |

ಉದ್ಗಂಧ ಉದ್ಗಮಸಾರ ಉದ್ಧಾರಕ ಉದ್ಯೋತ ||

ಉತ್ಪಲನೇತ್ರ ಉತ್ತಮಾಂಗ ಉತ್ಕಟ ಭಕ್ತವತ್ಸಲಂ |

ಉರ್ವಿಪತಿ ಉಪೇಂದ್ರಾಭಿನ್ನ ಶ್ರೀಕೃಷ್ಣವಿಟ್ಠಲ ನಮಃ ||

(ಊಚ-ಉಚ್ಚ, ಉದ್ವಾಹನ-ಮೇಲೆರುವ ಸಾಧನ, ಉನ್ಮೀಲ- ಅರಳುವ, ಉದ್ಗಮ- ಹೊರಹೊಮ್ಮುವ, ಉತ್ಪಲ-ಕನ್ನೆದಿಲೆ, ಉದ್ಯೋತ-ಹೊಳೆಯುವ)

178. ಒಂದೂರಿನಿಂದ ಇನ್ನೊಂದೂರಿಗೆ ಹೊಗುವಾಗ |

ಸದಾ ಜೊತೆ ನೀನಿರಲು ಎನಗೇಕೆ ಭಯ? ||

ಮುಂದೆ ನರಸಿಂಹನಾಗಿ ಹಿಂದೆ ಶ್ರೀಕೃಷ್ಣನಾಗಿ |

ಎಡಬದಿ ಧನುರ್ಧಾರಿ ಶ್ರೀರಾಮ-ಲಕ್ಷ್ಮಣರಾಗಿ ಕಾಯಲು ||

ಬಂಧು ಬಳಗ ಎಲ್ಲಾ ನೀನೇ ಬೇರೊಬ್ಬರು ಯಾಕೆ ಬೇಕು? |

ಹಾದಿಯಲಿ ಸಿಗುವ ಆಪತ್ತಿನಿಂದ ರಕ್ಷಿಸುವವ ನೀನೇ ||

ಬದಿಯಲ್ಲಿದ್ದು ಬೀಳದಂತೆ ತಡೆಯುವವ ನೀನೇ |

ಬಿದ್ದರೂ ಎಬ್ಬಿಸಿ ಕೈ ಪಿಡಿದು ಮುನ್ನಡೆಸುವವ ನೀನೇ ||

ಬುದ್ಧಿ ಇತ್ತು ಸುಖದ ದಾರಿಯ ತೋರಿಸುವ |

ಹೃದ್ಗುಹಾವಾಸಿಯೇ ಬಂಧಮೋಚಕನೆಂದು ನಂಬಲು ||

ಉದ್ಧಾರಕರ್ತ ಎನ್ನ ಸ್ವಾಮಿ ಶ್ರೀಕೃಷ್ಣವಿಟ್ಠಲ ಸದಾ ಕಾಯ್ವ ||

179. ಅಣು ಅಣುವಿನಲ್ಲಿರುವನ ಕ್ಷಣ ಬಿಡದೆ ಧ್ಯಾನಿಸಿ |

ಹಣ ಜಂಬ, ಬಂಧು ಮೋಹ ಬಿಟ್ಟು ಉಸಿರಿಗೊಮ್ಮೆ ||

ದೊಣ್ಣೆನಾಯಕ ನಂದದಿ ತಪ್ಪಿದರೆ ಶಿಕ್ಷಿಸುವ |

ಕಣ್ಣಿಗೆ ರೆಪ್ಪೆಯಂದದಿ ಸತತ ರಕ್ಷಿಸುವ ||

ಹಣಿಯನು ಯಾರನು ಪ್ರೀತಿ, ದ್ವೇಷದಿ |

ದಣಿಯನು ಎಂದೂ ಆರಾಮ ಬಯಸನು ||

ಮಣಿಯುವ ಜ್ಞಾನ ಸಹಿತ ನಿರ್ಮಲ ಭಕುತಿಗೆ |

ಗಣ ನಾಯಕ ಶ್ರೀಕೃಷ್ಣವಿಟ್ಠಲ ಕರುಣೆಗೆ ಎಣಿಯುಂಟೆ? ||

180. ಭಕುತಿ ಸುಖದ ನಿಜವ ತಿಳಿಯಿರೋ |

ಸಕಲಪ್ರದಾತಾ ಶಕುತವಂತ ||

ಮುಕುತಿ ಹೊರತು ಬೇರೇನೂ ಬಯಸದೆ |

ಏಕಾಂತದಿ ಭಜಿಸಿ ಶ್ರೀಕೃಷ್ಣವಿಟ್ಠಲನ ಪೊಂದಿರೋ ||

181. ನಿನ್ನಂತಹ ದಾನಿಯು ಬೇರಾರಿಲ್ಲ ಜಗದೊಳು |

ಎನ್ನ ಹಾಗೆ ಬೇಡುವವರೇನು ಕಡಿಮೆ ಇಲ್ಲ | || ||

ಕೂಡಾ ಹುಟ್ಟಿದವರಂತೆ ಜೊತೆಗಿದ್ದು |

ಒಡಲಿಗ್ಹಾಕಿ ಉಡಲು ಕೊಟ್ಟು ಬಿಡದೆ ||

ವಿದ್ಯೆ, ಬುದ್ಧಿ ನೀಡುವುದಲ್ಲದೆ |

ಬಂಧು, ಬಾಂಧವರನ್ನೂ ಸಲುಹುವೆ | || 1 ||

ಕೇಳಿದ್ದೆಲ್ಲಾ ಸಕಾಲಕೆ ಕೊಡುವಿ |

ಇಲ್ಲವೆನ್ನದೇ ಸದಿಚ್ಛೆ ಪೂರ್ಣ ಮಾಡುವಿ ||

ತಿಳಿಯದು ನಿನ್ನ ಲೆಕ್ಕಾಚಾರ (ಯಾರಿಗೂ) |

ಒಲ್ಲೆನೆಂದರೂ ಫಲಾನುಸಾರ ಮುಟ್ಟಿಸುವಿ | || 2 ||

ಬಲ, ಆರೋಗ್ಯ,ಆಯುಷ್ಯ ಪ್ರದಾತಾ |

ಒಳ-ಹೊರಗೂ ಸದಾಕ್ರಿಯೆ ಶೀಲದಿ ||

ಅಳಸಿ ಕಷ್ಟ, ನೀಡುವೆ ಸುಖವ |

ಒಲವಿಂದ ಸಲಹುವ ಆಪದ್ಬಾಂಧವ ಶ್ರೀಕೃಷ್ಣವಿಟ್ಠಲನೇ | || 3 ||

182. ಸೇವೆಯ ಪರಿ ತಿಳಿಯೆನೋ ದೇವಾ |

ವಿವಿಧ ಸೇವೆಯಲಿ ಯಾವ ಸೇವೆ ಮಾಡಲಿ | || ||

ತಪ, ಯಜ್ಞ ಮಾಡಲರಿಯೆ |

ಕೋಪ, ಕಾಮಗಳ ಬಿಡಲರಿಯೆ ||

ಪಾಪ-ಪುಣ್ಯಗಳ ಲೆಕ್ಕ ತಿಳಿಯದು |

ಪೋಪುತಿದೆ ಬರಿದೇ ಆಯುಷ್ಯ | || 1 ||

ಅನ್ನ, ವಸ್ತ್ರ, ಭೂಮಿದಾನ |

ಧನ, ಕನಕ, ಗೋದಾನವೇ ||

ದೀನ, ದೂನ ಅನಾಥರ ಸೇವೆಯೇ |

ದಾನದಿ ಶ್ರೇಷ್ಟವಾದ ದಾನ ಯಾವುದು | || 2 ||

ವ್ರತ, ನಿಯಮಗಳ ಗೊಜಲು ತಿಳಿಯದು|

ಸತತ ನಾಮಸ್ಮರಣೆ ಮನದಿ ಇರಲು ||

ತೀರ್ಥಯಾತ್ರೆಯಲಿ ತನು ಸಹಕರಿಸದು |

ಸಾರ್ಥಕತೆಗೆ ಸೇವೆ ಯಾವುದು? | || 3 ||

ವರ್ಣಪ್ರತಿಪಾದ್ಯ ಸುವರ್ಣ ನಾಮಕ? |

ವಾಣಿಪತೀಶನೇ ತೋರಿದ ಸೇವೆಯೆಂದು ||

ಬಣ್ಣಿಸಿ ಬರೆದ ಲೀಲೆಗುಣ ಪದಗಳನು |

ಗುಣಾರ್ಣವ ಶೀಕೃಷ್ಣವಿಟ್ಠಲನಿಗೆ ಸಮರ್ಪಿಸುವೇ ಸ್ವೀಕರಿಸೋ | || 4 ||

183. ಸರ್ವರಕ್ಷಕ ನೀನಲ್ಲದೆ ಮತ್ತ್ಯಾರು ಇಹಪರದೊಳು |

ಸರ್ವತ್ರ, ಸರ್ವಪರಿಯಲಿ ಸಂದೇಹವಿಲ್ಲದೆ ರಕ್ಷಿಪೆ | || ||

ಅವನಿಯೊಳು ಮತ್ತೆ ಮತ್ತೆ ಅವತರಿಸಿ ಸಲಹುವ | || ಅಪ ||

ಪ್ರಳಯದಿ ಸತ್ಯವ್ರತನ ರಕ್ಷಿಸಿದೆ |

ಮುಳುಗುವ ಮಂದರಗಿರಿ ಎತ್ತಿಪಿಡಿದೆ ||

ಇಳೆಯನು ಕೋರೆಯಲ್ಲೆತ್ತಿ ಕಾಪಾಡಿದೆ |

ಉಳುಹಿದೆ ಬಾಲಕನ ಭಕ್ತಿಯಲಿ ಮೆಚ್ಚಿ ||

ಕೇಳಿದಾನವ ದಾನವನ ಪಾತಾಳಕ್ಕೊತ್ತಿದೆ | || 1 ||

ಪಾಲಿಸಲು ಪಿತೃವಾಕ್ಯ ಮಾತೆಯ ಶಿರ ಕಡಿದೆ |

ಶಿಲೆಯಂತಾದ ಬಾಲೆಯನುದ್ಧರಿಸಿದೆ ||

ಬಾಲ ಲೀಲೆ ತೋರಿ ಗೋಪಿಯರ ಹರಸಿದೆ |

ಒಲಿಸಲು ಮನವ ದುರ್ಮತ ಬೋಧಿಸಿದೆ ||

ಕಾಲನ ರಕ್ಷಿಸಲು ಹಯವನೇರಿ ಬರುವಿ | || 2 ||

ಶಿಶುವು ರಕ್ಷಿಸಿದೆ ಜನನಿಯ ಗರ್ಭದಿ |

ಖುಷಿ ಕೃತ್ಯೆಯಿಂದ ರಕ್ಷಿಸಿದೆ ವ್ರತಸ್ಥನ ||

ದುಷ್ಟರ ತರಿದು ಶಿಷ್ಟರ ರಕ್ಷಕನಾದೆ ||

ಅಕ್ಷಯಾಂಬರವಿತ್ತು ಮಾನವ ಕಾಯ್ದೆ |

ಕಷ್ಟಕಾಲಕೆ ಒದಗುವ ಸಖ ಶ್ರೀಕೃಷ್ಣವಿಟ್ಠಲ | || 3 ||

184. ಉಡುಪಿಯ ಅನ್ನಬ್ರಹ್ಮ-ಶ್ರೀಕೃಷ್ಣ |

ಪಂಢರಿಯ ನಾದಬ್ರಹ್ಮ-ವಿಟ್ಠಲ ||

ಗೂಢಾಕಾರದ ಶ್ರೀಕೃಷ್ಣವಿಟ್ಠಲನೇ |

ಗುಡ್ಡದ ಮೇಲಿನ ಶ್ರೀನಿವಾಸ ||

ಒಡೆಯಾ ಅಡಿಗಡಿಗೆ ವಂದಿಪೆ |

ಎಡಬಿಡದೆ ರಕ್ಷಿಸು ಅನವರತ ||

185. ಲಕ್ಷಕೊಡುವವ ನೀನೆ |

ಭಿಕ್ಷೆ ಬೇಡಿಸುವವ ನೀನೇ ||

ಲಕ್ಷಣದಿ ಪೀತಾಂಬರ ಉಡುಸುವ ನೀನೆ |

ತಕ್ಷಣದಿ ಹರಕು ಉಡಿಸುವವ ನೀನೇ ||

ಭಕ್ಷ್ಯ ತಿನಿಸುವವ ನೀನೇ |

ಲಕ್ಷಿಸದೆ ಉಪವಾಸ ಬೀಳಿಸುವವ ನೀನೇ ||

ಕುಕ್ಷಿಯೊಳಗೆ ಸಕಲ ಜಗತ್ ಧರಿಸಿ |

ಸಾಕ್ಷಿಯಾಗಿ ಇರುವೆ ಶ್ರೀಕೃಷ್ಣವಿಟ್ಠಲ ||

186. ಶಾಪವೂ ಅನುಗ್ರಹವಾಗುವುದು |

ಪಾಪವೂ ಕಳೆದು ಹರುಷವಾಹುದು | || ||

ನಾರಿಶಾಪದಿ ಶಿಲೆಯಾದಾಗ |

ಶ್ರೀರಾಮನ ದರುಶನವಾಯಿತು ||

ಕರಿಯ ಪಾದ ಮಕರ ಪಿಡಿದಾಗ |

ಹರಿಯ ದರುಶನವಾಯಿತು | || 1 ||

ಊರ್ವಶಿಯ ಶಾಪಕಳೆದು |

ಮರಳಿ ಕಳುಹಿದ ಇಂದ್ರ ನಡೆಗೆ ||

ಮರವಾದ ಗಂಧರ್ವರ ಮನ್ನಿಸಿ |

ಒರಳಿಂದ ತಾಕಿಸಿ ದರುಶನವಿತ್ತ | || 2 ||

ವಿಪತ್ತು ಸದಾ ಬೇಡಿದಳು ಕುಂತಿ |

ಆಪದ್ಬಾಂಧವನ ದರುಶನವಾಹುದೆಂದು ||

ಆಪತ್ತು ಬರಲೀಸ ತನ್ನ ಭಕುತರಿಗೆ |

ತಪ್ಪದೇ ಕಾಯುವ ಶ್ರೀಕೃಷ್ಣವಿಟ್ಠಲ | || 3 ||

187. ಅದ್ಭುತ! ತಮದ್ಭುತ | ಜಗತ್ ಸೃಷ್ಟಿ |

ಸದ್ಭಾವೇ, ಸಾಧುಭಾವೇ ವೀಕ್ಷಿಸೇ ಅತಿ ಸುಂದರ ||

ಉದ್ಭವ ವಸ್ತು ಚಿತ್ರ ವಿಚಿತ್ರ ವಿನ್ಯಾಸ |

ಸ್ವಭಾವ, ಸ್ವರೂಪ ಭಿನ್ನಾಭಿನ್ನದಿ ತೋರ್ಪ ||

ಗಂಭೀರ, ಪರೇಶ ಶ್ರೀಕೃಷ್ಣವಿಟ್ಠಲನ ಚಾತುರ್ಯಫಲ ||

188. ಸಲಹೋ ಎನ್ನ ಸ್ವಾಮಿ ಸದಾ ಸಲಹೋ |

ಒಲವಿಂದ ಎಡ ಬಿಡದೆ ಸಲಹೋ | || ||

ಜ್ಞಾನ ಸ್ವರೂಪಿ ಜ್ಞಾನವಿತ್ತು ಸಲಹೋ |

ಆನಂದರೂಪಿ ಆನಂದವಿತ್ತು ಸಲಹೋ ||

ಮಾನ್ಯತೆ ಇತ್ತು ಮಾನದಿಂ ಸಲಹೋ |

ಅನ್ಯನೆನಿಸದೆ ನಿನ್ನವನೆಂದೆಣಿಸೋ | || 1 ||

ಹತ್ತು ಮಂದಿ ಕೈವಶ ಮಾಡದಿರೋ |

ಎತ್ತಿನಂತೆ ದುಡಿಸಿ ದಂಡಿಸುವರೋ ||

ಮತ್ರ್ಯ ನಾನು ನ್ಯೂನ್ಯತೆಯೇ ತುಂಬಿದೆ |

ಕರ್ತೃ ಶ್ರೀಕೃಷ್ಣವಿಟ್ಠಲ ಮುಕ್ತಿಯ ತನಕ ಸಲಹೋ | || 2 ||

189. ಸೃಷ್ಟಿಯ ಅಗಾಧತೆ ಕಂಡು ದಂಗಾದೆ |

ಸ್ಪಷ್ಟ ಅಸ್ಪಷ್ಟತೆಯ, ಚಿತ್ರವಿಚಿತ್ರದ ಗೂಡು ||

ಅಷ್ಟೂ ಅಚಿಂತ್ಯಾದ್ಭುತ ವೈವಿಧ್ಯತೆಯಲಿ |

ಇಷ್ಟ ದೈವ ಶ್ರೀಕೃಷ್ಣವಿಟ್ಠಲನ ಕರ್ತೃತ್ವ ಶಕ್ತಿ ಆಳ ಅರಿಯದಾದೆ ||

190. ತಳಮಳಿಸದಿರು, ಎಲೈ, ಮನವೇ |

ವ್ಯಾಳವ್ಯಾಳಕೆ ಸಲಹುವ ಸಂಶಯ ಬೇಡಾ | || ||

ಪುಟ್ಟಿಸುವವ ಸಕಲ ಜೀವಿಯ |

ಹೊಟ್ಟೆಗೆ ಹಾಕುವವ ಸಕಾಲಕೆ ||

ಬಟ್ಟೆಕೊಟ್ಟು ಮಾನ ಕಾಯುವ |

ಒಟ್ಟಿನಲಿ ಸರ್ವ ಭಾರಹೊತ್ತಿರುವ | || 1 ||

ಯಾವಾಗ ಯಾರಿಗೆ ಏನು ಕೊಡಬೇಕೆಂದು |

ಪೂರ್ವ ನಿರ್ಧಾರಿತವಾಗಿರುವಾಗ ||

ಜಾವಜಾಗರದಿ ಕಣ್ಣುರೆಪ್ಪೆಯೆಂದದಿ ಕಾಯ್ವ |

ಅವ್ವೆ ಕೂಸಿಗೆ ಉಣಿಸುವಂದದಿ ಉಣಿಸುವ | || 2 ||

ಚರಾಚರರಗಳ ಬಾಧ್ಯತೆ ಹೊತ್ತಿರುವ |

ಮಾ-ರಮಣನ ಪಾದಗಳ ಭಜಿಸಿ ||

ಸ್ವರಮಣ ಶ್ರೀಕೃಷ್ಣವಿಟ್ಠಲನೇ ಸದಾ ಪೊರೆವನೆಂದು |

ಸ್ಥಿರನಂಬಿಕೆಯಲಿ ಸಂತೈಸಿಕೋ | || 3 ||

191. ನಾನ್ಯಾರೆಂಬುದು ಗೊತ್ತಿಲ್ಲಾ |

ನಾನೆಲ್ಲಿಂದ ಬಂದೆ ಎಂಬುದು ತಿಳಿದಿಲ್ಲ ||

ನಾನ್ಯಾತಕೆ ಬಂದೆ ಕಾರಣ ಹೊಳೆದಿಲ್ಲ |

ನಾನೆಷ್ಟು ದಿನ ಇರುವೆ ಅರಿವಿಲ್ಲ ||

ನನ್ನ ಕೆಲಸವೇನು ಗುರುತಿಲ್ಲ |

ನನ್ನ ಪಾಲಿಗೆ ಬಂದಷ್ಟೇ ಏಕೆ ಮಾಡುತ್ತಿರುವೆ ||

ನಾನು ಬಯಸಿದಂತೇಕೆ ಆಗುವುದಿಲ್ಲ |

ನನ್ನತನ ಏಕೆ ನನ್ನ ವಶದಲ್ಲಿಲ್ಲಾ? ||

ನಾನು-ನಾನಲ್ಲವೆ? ನನ್ನದಲ್ಲವೆ? |

ನಾನೊಬ್ಬಳೇ ಹೀಗೋ ಅಥವಾ ಸರ್ವವೂ ಹೀಗೇಯೋ ||

ನಾನು ನನ್ನೊಳವನ್ನು ತಿಳಿವುದ್ಹ್ಯಾಂಗೆ |

ನಾನು ನಾನೆಂದು ಆಗುವೆ ತಿಳಿಯದು ||

ನನ್ನನ್ನು ನನಗೇ ಪರಿಚಯಿಸು ದಯಾನಿಧೆ |

ನಿನ್ನನ್ನೇ ನಂಬಿರುವೆ ಶ್ರೀಕೃಷ್ಣವಿಟ್ಠಲ ||

192. ಎಂಟದೆಯ ಬಂಟ ನಂಬಿದವರ ಕಂಟಕ ಕಳೆವ |

ಎಂಟು ದಳದಲಿ ಸ್ವಾನಿಯೊಡನೆ ಒಂಟಿಯಾಗಿ ತಿರುಗುವ ||

ಒಟ್ಟಿನಲಿ ಸಕಲೇಂದ್ರಿಯಗಳಲ್ಲಿದ್ದು ತಾ ನಡೆಸುವ |

ಸೃಷ್ಟೀಶನಾಜ್ಞೆಯಲಿ ಜೀವಿಗಳಲಿ ಸಂಚೇತನ ತಾನಾಗಿ ||

ಸುಟ್ಟು ಪಾಪ, ಕಷ್ಟ ಕಳೆದು ಹರುಷವೀವ |

ದುಷ್ಟರ ಕುಟ್ಟಿ ಸದೈವ ಶಿಷ್ಟರ ಪೊರೆವ ||

ಗುಟ್ಟಾಗಿ ಸಾಧನೆ ಮಾರ್ಗದಿ ಮುನ್ನಡೆಸುವ |

ಬಿಟ್ಟು ಬಿಡದೆ ಶ್ರೀಕೃಷ್ಣವಿಟ್ಠಲನ ಹೊತ್ತು ತಿರುಗುವನ್ಯಾರು ಪೇಳೆ? ||

193. ದುಃಖ ಭಂಜಕ, ಸುಖ ಪ್ರದಾಯಕ, ಅಖಿಲ ಜಗತ್ರಾತ |

ಖಗವಾಹನ, ಸಖ ಶ್ರೀಕೃಷ್ಣವಿಟ್ಠಲ ವಿಶ್ವಬಂಧು: ||

194. ನೀನೇ ಎಲ್ಲಾ, ನೀನಿಲ್ಲದೇನಿಲ್ಲ |

ಎನ್ನದೆಲ್ಲ ನಿನ್ನದೇ ಸ್ವೀಕರಿಸೋ || ಸ್ವಾಮಿ ಸ್ವೀಕರಿಸೋ | || ||

ನಿನ್ನ ಕರುಣೆ ಕಂದ ಸದಾ ನಾನಾಗಿರಲಿ |

ನಿನ್ನೊಲುಮೆ ಸವಿಗೆ ಸಮಾನ ಯಾವುದೂ ಇಲ್ಲ ||

ಎನ್ನನು ನಿನ್ನವಳಾಗಿಸು ಇಲ್ಲ ನೀ ಎನ್ನವನಾಗು |

ಎನ್ನೊಡೆಯ ನೀ ಆಡಿಸಿದಂತಾಡುವೆ ಬೇರಿಲ್ಲ | || 1 ||

ನನ್ನ ಭಾಗ್ಯದಿಂದ ಪರಿ ಆಗಿದ್ದೇನು? |

ನಾನಾಗಿ ಬೇಡಿ ಬಯಸಿ ಮಾಡಿದ್ದೇನು? ||

ದಿನ-ದಿನವೂ ದಿವಾ-ರಾತ್ರಿಲಿ ಎಡಬಿಡದೆ |

ಎನ್ನಿಂದ ಮಾಡಿಸಿದ್ದು ಎನ್ನಿಚ್ಛೆಯಂತಲ್ಲ | || 2 ||

ಆನಂದತೀರ್ಥರು ಗುರುವಾಗಿರಲು |

ಆನಂದ ಶಾಸ್ತ್ರ ತಿಳಿಯುವ ಹಂಬಲವಿರಲು ||

ಅನವರತ ಶ್ರೀಕೃಷ್ಣವಿಟ್ಠಲ ಹೆದ್ದೈವನಿರಲು |

ನನಗೇನು ಭಯ ಇಹ-ಪರದೊಳು | || 3 ||

195. ನಾ ಅನ್ಯನಲ್ಲವೋ, ನೀನೆನ್ನ ಅನ್ಯನೆಂದೆಣಿಸಬೇಡಾ |

ನಾ ಅವರಳಾದರೇನು, ನಿನ್ನಂಶ ನಾನಲ್ಲವೇ? ||

ನೀ ಅವುಚಿಕೋ ಸದಾ ಮಾತೆ ಶಿಶುವನ್ನೆತ್ತಿಕೊಂಡಂತೆ |

ಎನ್ನಂತರ್ಯಾಮಿ ಸ್ವಾಮಿ, ಶ್ರೀಕೃಷ್ಣವಿಟ್ಠಲ ಬಿಡದೆ ಸಲಹು ||

196. ಈರ್ವರೂ ನಾರಾಯಣನ ಅಂತರಂಗ ಭಕ್ತರಿಹರು | || ||

ಸ್ವರೂಪದಿ ಸಾತ್ತ್ವಿಕರು ಸದಾ ಹರಿ ಸಮೀಪವಿದ್ದರೂ ಶಾಪಗ್ರಸ್ತರಾದರು || ಅಪ ||

ಮೂರು ಅಸುರ ಜನುಮವೆತ್ತಿದರು ಭುವಿಯಲಿ |

ಧರ್ಮಬೋಧಕರು ಸನೀಹದಿ ಪ್ರತಿ ಜನುಮದಿ ಇದ್ದರೂ ||

ಪ್ರಾರಬ್ಧಕರ್ಮ ತೀರದು ಅನುಭವಿಸುವತನಕ |

ಯಾರನ್ನೂ ಬಿಡದು ದೇವ-ಮಾನವರ ಸಹಿತ | || 1 ||

ಹಿರಣ್ಯಕಶ್ಯಪನಿಗೆ ಸುತ ಪ್ರಲ್ಹಾದನಿದ್ದ ಹಿತೋಪದೇಶಕೆ |

ಎರಡನೇ ಜನುಮ ರಾವಣ-ಕುಂಭಕರ್ಣರಿಗೆ ವಿಭೀಷಣನಿದ್ದ ||

ಮೂರನೇ ಜನುಮ ಶಿಶುಪಾಲ-ದಂತವಕ್ತ್ರರಿಗೆ ಉಪದೇಶಿಸಲು |

ಶ್ರೀಕೃಷ್ಣವಿಟ್ಠಲನೇ ಸ್ವಯಂ ಎದುರಲಿ ನಿಂತು ಪೇಳಿದರೂ ಕೇಳಲಿಲ್ಲ | || 2 ||

197. ಎಲ್ಲಿ ಹರಿಯೋ ಮತ್ತಲ್ಲಿ ಪ್ರಾಣನಿರುವ || ಅಲ್ಲಿ ಪ್ರಾಣನಿರುವ ||

ಶ್ರೀಕೃಷ್ಣವಿಟ್ಠಲನ ನಿರುತ ಸೇವಿಸುತ | || 1 ||

ದೇಹದೊಳು ಪ್ರಾಣನಿರುವ ತತ್ತ್ವೇಶರೊಡಗೂಡಿ ಪ್ರೇರ್ಯಪ್ರೇರಕನಾಗಿ |

ಪ್ರೇರ್ಯ ಪ್ರೇರಕನಾಗಿರುವ || ಶ್ರೀಕೃಷ್ಣವಿಟ್ಠಲನ ಅಣತಿಯಿಂದ | || 2 ||

ಸಕಲಕಾರ್ಯಗಳನು ಬಿಡದೆ ಮುಖ್ಯಪ್ರಾಣಾಂತರ್ಗತ ಸಮರ್ಪಿಸಿದರೆ |

ಸಮರ್ಪಿಸಿದರೆ || ಸದೈವ ಶ್ರೀಕೃಷ್ಣವಿಟ್ಠಲನೊಲಿವ | || 3 ||

ಒಂದು ರೂಪದಿಂ ಚತುರ್ರೂಪ ತಳೆದು|| ‘ತಳೆದು ||

ಸಹಸ್ರಾರು ರೂಪದಿಂ ಸಹಜದಿ ಜಗವ ಸಲಹುವ ಶ್ರೀಕೃಷ್ಣವಿಟ್ಠಲ || 4 ||

ಬ್ರಹ್ಮಾಂಡ-ಪಿಂಡಾಂಡದಿ ಬಹಿರಂತರ್ಗನಾಗಿ || ‘ಬಹಿರಂತರ್ಗತನಾಗಿ ||

ತನ್ನಾಮ, ತದ್ರೂಪ, ತತ್ತದಾಕಾರನಾಗಿ ಶ್ರೀಕೃಷ್ಣವಿಟ್ಠಲ ವ್ಯಾಪ್ತನು ಎಂದುತಿಳಿ || 5 ||

ಒಂದು ರೂಪದಿ ಅನಂತರೂಪಗಳು || ‘ಅನಂತರೂಪಗಳು ||

ಅನಂತ ಗುಣಗಣ ಸಹಿತದಿ ಇರುವ ಶ್ರೀಕೃಷ್ಣವಿಟ್ಠಲಗೆ ಸರಿ-ಮಿಗಿಲಾರಿಲ್ಲ ||6||

ಪರ-ಅಪರ ತತ್ತ್ವಗಿಂತ ಪರಲೋಕ ವೈಕುಂಠಾಧಿಪತಿ || ‘ವೈಕುಂಠಾಧಿಪತಿ ||

ಶ್ರೀಕೃಷ್ಣವಿಟ್ಠಲನೇ ಪರತಮ ಪರತತ್ವ | || 7 ||

198. ಅಂಗಡಿಯ ಸರಕು ಇನ್ನೂ ಎಷ್ಟಿರುವುದು ಪೇಳಯ್ಯಾ | || ||

ಮುಗಿಯುವುದೆಂದು ಎನ್ನ ಪಾಲಿನ ಕರ್ಮಫಲ | || ಅಪ ||

ಬೇಗ ತೀರಿಸೆನ್ನ ಪೂರ್ವ ಜನುಮದ ವ್ಯಾಪರವಾ |

ಸಾಗರದಡಿಯ ಮುತ್ತು-ರತ್ನ ಬೊಗಸೆಗೆ ಬರುವುದೆಂದು ||

ಲಿಂಗದೇಹ ಭಂಗವಾಗುವ ಪರಿ ಅರುಹಯ್ಯಾ |

ಜಾಗ್ರತ, ಸ್ವಪ್ನ, ಸುಷುಪ್ತಿಯಲಿ ಕೊಡು ನಿನ್ನಧ್ಯಾನ ||

ಆಗಲಿ ಸದಾ ನಾಮ, ರೂಪ, ಕ್ರಿಯಾ ಚಿಂತನ | || 1 ||

ಬಗೆ ಬಗೆಯ ಸರ್ವಾವತಾರಗಳ ಲೀಲೆಗಳು |

ಜಗತ್ತಿನ ಹೊರ-ಒಳ ವ್ಯಾಪುತನ ದರುಶನ ||

ಈಗಲೂ-ಯಾವಾಗಲೂ ಸಂತತದಿ ಇದೇ ಕರುಣಿಸು |

ಪೋಗುತಿದೆ ಆಯುಷ್ಯ, ಉಳಿದಿದ್ದಾದರೂ ಸಾರ್ಥಕಗೊಳಿಸು ||

ಜಗನ್ನಾಥ ಶ್ರೀಕೃಷ್ಣವಿಟ್ಠಲ ಎಮಗೆಲ್ಲರಿಗೂ ಸುಖವೇ ನೀಡು | || 2 ||

ಶ್ರೀ ಕೃಷ್ಣವಿಠ್ಠಲಪದಗುಚ್ಛ 3 ಅನುಕ್ರಮಣಿಕಾ

199. ಮೂರ್ಖಳಂತೆ ಎದೆ ತಟ್ಟಿ ನಾ-ನನದೆಂದೆ |

ಸುಖ ಬಂದಿದ್ದೆಲ್ಲಾ ನಾ ಮಾಡಿದ್ದೆಂದೆ ||

ದುಃಖ ಬಂದಿದ್ದೆಲ್ಲಾ ನಿನ್ನಿಂದಲೆಂದೆ |

ಅಖಿಲ ಕಾರ್ಯ-ಕಾರಣ-ಕರ್ತನಾದ ||

ಸಖ ಶ್ರೀಕೃಷ್ಣವಿಟ್ಠಲನೇ ಎದೆಯೊಳಿದ್ದಾನೆಂದು ಅರಿಯದೆ ||

200. ವಾರಿಧಿ ಶಯನ ವಾರಿಜಳ ವರಿಸಿ |

ವರಾಭಯದಿ ಪೊರೆವ ವರಾಂವರ ||

ವರವೀವ ಕಪಿವರ ಅಂತರ್ಯಾಮಿ |

ವಾರಾಂಗನೆಯ ಉದ್ಧರಿಸಿದ ಪರಮವರ ||

ವೀರ-ಸುವೀರ ಶ್ರೀಕೃಷ್ಣವಿಟ್ಠಲ ವರಿಸೆನ್ನ ||

201. ಮುರಾರಿಯ ನೆನೆಯದ ಮನ |

ಕೇಶವನಾರಾಧನಾ ಮಾಡದ ನಾಲಿಗೆ ||

ಕಂಸಾರಿಯ ಪೂಜಿಸದ ಕೈಗಳು |

ಗೋವಿಂದನ ದರುಶನಕೆ ಪೋಗದ ಕಾಲ್ಗಳು ||

ಹೃಷಿಕೇಶನ ಧರಿಸದ ಹೃದಯ |

ಹರಿಕಥೆ ಕೇಳದ ಕಿವಿಗಳು ||

ನಾರಾಯಣನ ನೋಡದ ಕಂಗಳು |

ಇದ್ದೂ ಇಲ್ಲದೆ ಶವಕ್ಕೆ ಅಲಂಕಾರ ಮಾಡಿದಂತೆ ||

ಮುಕ್ತಿಪಥಕೆ ಹೋಗಲು ಮುಕುಂದಾ ಎನೆ |

ಕರೆದು ಕೈವಲ್ಯ ಕೊಡುವ ನಮ್ಮ ಶ್ರೀಕೃಷ್ಣವಿಟ್ಠಲ ||

202. ಮಾಡಿದ ಕರ್ಮವ ಕೇಶವಗರ್ಪಿಸಿ ನಿ:ಸ್ವಾರ್ಥದಿ |

ಕ್ಲೇಶವ ಕಳೆವ ನಿಜ ಮರ್ಮವ ತಿಳಿಯಿರೋ | || ||

ಬಿದ್ದು ಹೋಗುವ ದೇಹದ ಬಾಧೆಗೆ ಸಿಲುಕದೆ ಚಿತ್ತ ಶುದ್ಧಿಯ ಕಾಣಿರೋ|

ತನುಶುದ್ಧಿಗಾಗಿ ವ್ರತ, ನೇಮ ಆಚರಿಸಿ ನಿರ್ಮಲರಾಗಿ ||

ಮನಃ ಶುಚಿಗಾಗಿ ಸತ್ಯಸಾಧಕರಾಗಿ ಸಜ್ಜನ ಸಂಗದಿ | || 1 ||

ನಡೆ-ನುಡಿ ಒಂದಾಗಿ, ದಾನಧರ್ಮವಗೈದು |

ಬಿಡದೆ ಸತ್ಯಪಥದಿ ನಡೆದು ಮೆಚ್ಚಿಸಿ ||

ಒಡೆಯ ಶ್ರೀಕೃಷ್ಣವಿಟ್ಠಲನ ಶಾಶ್ವತಪದ ಪಡೆಯಿರೋ ||

203. ಏನು ಪುಣ್ಯವೋ ಯಶೋದೆ, ಯಾವ ಪುಣ್ಯ ಮಾಡಿ

ಶ್ರೀಹರಿಯ ಮಗನಾಗಿ ಪಡೆದಳೋ || ||

ಬ್ರಹ್ಮಾಂಡವನೇ ರೋಮಕೂಪದಲಿ ಧರಿಸಿದವನ

ಕಾಲಮೇಲೆ ಮಲಗಿಸಿದಳಾ ತಾಯಿ |

ಗುಮ್ಮ ಬರುವನೆಂದು ನರಸಿಂಹರೂಪಿಗೆ ಹೆದರಿಸಿದವಳು ||

ತ್ರಿಗುಣಾತೀತ ಶೇಷ ಶಾಯಿಯನು ಮಲಗು ಜೊಜೋ |

ಎಂದು ಹೊನ್ನ ತೊಟ್ಟಲಲ್ಲಿ ತೂಗಿದವಳು | || 1 ||

ಪಾಲಗಡಲಲಿ ಪವಡಿಸಿದವಗೆ ಕ್ಷೀರವನಿತ್ತವಳು |

ವೇದಗಳ ರಚಿಸಿದವನಿಗೆ ಮಾತು ಕಲಿಸಿದವಳು ||

ಬ್ರಹ್ಮಾಂಡವನೆ ಬೊಂಬೆಯಾಟ ಆಡುವವನ |

ತೋಳನ್ನಾಡಯ್ಯಾ, ಹೊನ್ನಗುಬ್ಬಿ ತಾರಯ್ಯಾ ಎಂದಾಡಿಸಿದಳು | || 2 ||

ಪಾದವ ನಖದಿಂ ಬ್ರಹ್ಮಾಂಡವನೇ ಒಡೆದವನ |

ಕುಣಿಕುಣಿ ಎನ್ನುತ ಕುಣಿಸಿದವಳು ||

ನಿತ್ಯತೃಪ್ತನಾದ ಶ್ರೀಕೃಷ್ಣವಿಟ್ಠಲಗೆ ಹಸಿದಿರುವೆ ಎಂದು ಮೊಲೆಯೂಡಿಸಿ |

ಸರ್ವರಕ್ಷಕ, ಶ್ರೀಕೃಷ್ಣವಿಟ್ಠಲಗೆ ರಕ್ಷೆ ಇಟ್ಟು ಹರಿಸಿದವಳು | || 3 ||

204. ಸಂಚಿತ ಕರ್ಮ ಅನುಭವಿಸದೇ ತೀರದು |

ಅಚ್ಯುತನ ಕರುಣಿಯಿಂ ಕೊಂಚವಾದರೂ ಕಡಿಮೆಯಾಗುವುದಂತೆ || ||

ವಂಚನೆಯಿಂದ ದಾಟಲು ಬಾರದು ಯಾರಿಗೂ |

ಕೌಸಲ್ಯಾನಂದನನೇ ಆಗಿದ್ದು ಪುತ್ರವಿರಹ ತಪ್ಪಲಿಲ್ಲಾ ||

ಜಾನಕೀರಾಮನಾಗಿದ್ದೂ ಪತ್ನಿಯ ಕಳೆದುಕೊಂಡವ |

ಶ್ರೀರಾಮಾನುಜನಾಗಿದ್ದೂ ಹದಿನಾಲ್ಕು ವರ್ಷದ ವನವಾಸ ತಪ್ಪಲಿಲ್ಲಾ ||

ಮರ್ಯಾದಾ ಪುರುಷೋತ್ತಮನಿದ್ದೂ ಸೀತೆಯ ಶಂಕೆಹೋಗಲಿಲ್ಲಾ |

ಲಕ್ಷ್ಮೀಪತಿಯಾಗಿದ್ದೂ ಇನ್ನೊಬ್ಬರ ಅನ್ನಕ್ಕೆ ಕೈಚಾಚಿದವ ||

ಇಂದಿರೇಶನಾಗಿದ್ದೂ ಇಂದುವದನೆಯ ಭೂಮಿಯ ಮಡಿಲೊಳಿಟ್ಟವ || 1 ||

ಶ್ರೀಮನ್ನಾರಾಯಣನೇ ಪುತ್ರನಾದರೂ ಸೆರೆವಾಸ ತಪ್ಪಲಿಲ್ಲಾ |

ಕೇಶವನ ಸಖನಾದರೂ ವನವಾಸ ತಪ್ಪಲಿಲ್ಲಾ ||

ಮುಕುಂದನ ಅತ್ತೆಯಾದರೂ ಮುತ್ತೈದೆತನ ಉಳಿಯಲಿಲ್ಲಾ |

ದ್ವಾರಕಾಧೀಶನ ತಂಗಿಯಾದರೂ ಅಪಮಾನ ಬಿಡಲಿಲ್ಲಾ ||

ಗುಣಪೂರ್ಣನಾಗಿದ್ದು ನವನೀತ ಚೋರನೆಂಬ ಬಿರುದು ಬಿಡಲಿಲ್ಲಾ |

ದೇವಾಧೀದೇವನಾದ ಸರ್ವೋತ್ತಮನಿಗೆ ಕಳ್ಳತನದ ಅಪವಾದ ತಪ್ಪಲಿಲ್ಲಾ ||

ಶ್ರೀಕೃಷ್ಣವಿಟ್ಠಲ ನಿರುತ ಭಜಿಸಿದರೆ ಸಂಚಿತಕರ್ಮ ಕಿಂಚಿತ್ತಾದರೂ ಕಡಿಮೆಯಾಗುವುದಂತೆ ||2||

205. ಸರ್ವವ್ಯಾಪಿತನಿಗೆ ಗುಡಿಯಿಂದೇನು ಫಲ? |

ಮಂಗಳ ಮೂರ್ತಿಗೆ ಮಂಗಳಾರತಿಯಿಂದೇನು ಫಲ ||

ಪುಣ್ಯಶ್ಲೋಕನಿಗೆ ಸ್ತೋತ್ರಗಳಿಂದೇನು ಫಲ |

ಸರ್ವಭಕ್ಷಕನಿಗೆ ನೈವೇದ್ಯದಿಂದೇನು ಫಲ ||

ಲಕ್ಷ್ಮೀಪತಿಗೆ ದಕ್ಷಿಣೆಯಿಂದೇನು ಫಲ |

ಸ್ವಯಂಭೂಷಿತನಿಗೆ ಅಲಂಕಾರದಿಂದೇನು ಫಲ ||

ಶೇಷಶಯನಿಗೆ ಶಯನೋತ್ಸವದಿಂದೇನು ಫಲ |

ಜಗತ್ತನ್ನೇ ತೂಗುವಗೆ ತೊಟ್ಟಿಲು ಸೇವೆಯಿಂದೇನು ಫಲ ||

ಅನ್ನಬ್ರಹ್ಮನಿಗೆ ಅನ್ನ ಸಮರ್ಪಣೆಯಿಂದೇನು ಫಲ |

ಹೃದಯದಲ್ಲಿರುವಗೆ ಮಂಟಪದಿಂದೇನು ಫಲ ||

ಸದ್ಗುಣಗಳ ಖನಿಯಾದ ಶ್ರೀಕೃಷ್ಣವಿಟ್ಠಲಗೆ |

ಭಕ್ತಿಯಿಂದ ಸರ್ವಸಮರ್ಪಣೆ ಮಾಡೆ ಧನ್ಯವಾಹುದು ||

206. ನನ್ನ ಕರ್ಮವೆಲ್ಲಾ ನಿನ್ನ ಸೇವೆಯಾಗಲಿ | || ||

ನಿನ್ನ ಸೇವೆಯೇ ನನ್ನ ಕರ್ಮವಾಗಲಿ |

ನಿನ್ನ ಇಚ್ಛೆಯೇ ನನ್ನ ಇಚ್ಛೆಯಾಗಲಿ | || 1 ||

ನನ್ನ ಜೀವ, ಆತ್ಮ ಎರಡು ಪರಮಾತ್ಮನದಾಗಲಿ |

ನಿರಂತರ ನಿನ್ನ ಧ್ಯಾನ ನನದಾಗುವ, ಸದಾನುಗ್ರಹ ಎನಗಾಗಲಿ | || 2 ||

ಶ್ರೀಕೃಷ್ಣವಿಟ್ಠಲನ ಸ್ಮರಣೆ ಸೌಭಾಗ್ಯದಿಂದ ನನದೆಲ್ಲಾ ನಿನ್ನದಾಗಲಿ |

ನಾನು ಸದಾ ನಿನ್ನವನಾದರೆ ಸಾಕು ಎಂದೆಂದಿಗೂ ಮರೆಯದಿರು || 3 ||

207. ಚಿತ್ತಜನಯ್ಯಾ ಚಿತ್ತವನಿಲ್ಲಿಸೋ ಚಿನ್ಮಯನಲಿ ಚಿತ್ತವನಿಲ್ಲಿಸೋ | || ||

ಸುತ್ತಮುತ್ತ ತುಂಬಿದೆ ಗಾಢಾಂಧಕಾರ ||

ಎತ್ತಲೋ ಓಡಾಡಿದೆ ದಾರಿ ತಿಳಿಯದೇ |

ಶತ್ರುಗಳೇ ಒಳ ಹೊರಗೆ ಮುತ್ತಿರುವಾಗ ||

ಹತಾಶಳಾಗಿ ನಿನ್ನೇ ಮೊರೆ ಹೊಕ್ಕಿರುವೆ-ದಯಮಾಡು || 1 ||

ವೇದ ಶಾಸ್ತ್ರ ಓದಿ ತಿಳಿಯದೆ |

ವಾದಮಾಡಿ ನಾನೇ ಸರಿಯೆಂದೆ ||

ವಿದ್ಯೆಯ ಮರ್ಮವನರಿಯದೆ |

ಬಿದ್ದಿರುವೆ ಸಂಸಾರಕೂಪದೊಳಗೆ-ಕೃಪೆತೋರು | || 2 ||

ಸರಸಿಜನಾಭನೇ ನೀನೆನಗಾಸರೆ |

ಕರುಣದಿ ಕಡೆಗಾಣಿಸದೆ ಎನ್ನನು ||

ಭರದಿಂದ ಎತ್ತಿ ನೀನೇ ಪಾರುಗಾಣಿಸು |

ಪರತರನೆನಿಸಿದ ಶ್ರೀಕೃಷ್ಣವಿಟ್ಠಲನೇ ದೇವಾಧಿದೇವ | || 3 ||

208. ನಮೋ ಬಿಂಬರೂಪಿ ಅನಂತಕೋಟಿ

ಚರಣ, ಚಕ್ಷು, ಬಾಹು, ಶಿರೋಧಾರಿಯೇ |

ಸರ್ವಾಕ್ಷರ ಪ್ರತಿಪಾದಿತ ಅಗಣಿತ ನಾಮದಿಂ

ಪೂಜಿಪ ಶಾಶ್ವತ ಯುಗಧಾರಿತ ||

ಮಮ ಶ್ರೀಕೃಷ್ಣವಿಟ್ಠಲ ಸದಾ ತವ

ಚರಣಂ ಶರಣಂ ಪ್ರಪದ್ಯೇ ||

209. ಬಲಗೈಯಿಂದ ಎಡಗೈಲಿಟ್ಟಂತೆ ಸರ್ವಸ್ವ ನಿನ್ನದಾಗಿರುವ

ಲೊಕದೊಳು ದಾನಕೊಡಲು ನನ್ನದೇನಿದೆ? |

ಜಡ, ಚೇತನಗಳೆಲ್ಲಾ ನಿನ್ನದೇ ಸೃಷ್ಟಿ

ಇದ್ದಾಗ ನನ್ನ ಕರ್ತೃತ್ವವೆಲ್ಲಿದೆ? ||

ನೀನಿತ್ತ ವಸ್ತುವಿನಿಂದ ನಿನ್ನ ದಯದಿ

ಮಾಡಿದ ಪದಾರ್ಥ ನಿನಗೇ ನೈವೇದ್ಯ |

ನಿನ್ನೊಲುಮೆಯಿಂದ ಎನ್ನ ಇಂದ್ರಿಯ ವ್ಯಾಪಾರ

ನಡೆಸಿ ನಾನು ಪುಣ್ಯ ಪಡೆಯಲುಂಟೆ? ||

ಎನ್ನ ಆಯಸ್ಸು, ಉಸಿರು ನಿನ್ನ ಕೈಲಿರುವಾಗ,

ಪ್ರತಿಯೊಂದನ್ನೂ ಯಾಚಿಸುವ |

ಯಾಚಕನೇ ನಾನಾದಾಗ, ನೀ ಬಲು

ದೊಡ್ಡಯಾಚಕನೆಂದೆಂತು ಪೇಳಲಿ ||

ಎನ್ನೊಳಗಿನ ರಕ್ಕಸರ ದಮನಿಸದೆ,

ನೀನು ರಾಕ್ಷಸ ಕುಲಾಂತಕನೆಂದು ಹೇಗೆ ನಂಬಲಿ? |

ದಿಕ್ಕುತೋರದೆ ಕಂಡ ಕಡೆ ಅಲೆಯುವ ನಾನು,

ನೀನು ಕಾಡಲಿ ಅಲೆದವನೆಂದು ಹೇಗೆ ತಿಳಿಯಲಿ ||

ನಿನ್ನದೇ ಆದ ಪ್ರತಿಯೊಂದು ವಸ್ತುವನ್ನೇ ಕದಿಯುವ ನಾನು,

ನಿನಗೆ ಚೋರನೆಂದು ಹೇಗೆ ಹೇಳಲಿ? |

ಎಲ್ಲಾ ಬಲ್ಲೆನೆಂಬಹಂಕಾರದಲಿ ಮೆರೆಯುವ ನಾನು,

ನೀನು ಹಾದಿ ತಪ್ಪಿಸಲು ಬಂದಿರುವಿ ಎಂದೆಂತು ಅರಿಯಲಿ |

ಬುದ್ಧಿ ನೀನೆ, ಚಿತ್ತ ನೀನೆ, ಮನಸ್ಸಲಿ ಮನೆಮಾಡಿ,

ನಾನು ಮಾಡಿದ್ದೆಂಬ ಅಹಂಕಾರ ಹೇಗೆ ತಾಳಲಿ? ||

ವಿಶಾಲವೃಕ್ಷ ನೀನು ನಿನ್ನ ವಿಭಿನ್ನಾಂಶದ ಚಿಕ್ಕ ಬೀಜನಾನು |

ನಿನ್ನ ಹೃದಯವಂತಿಕೆಯ ಅರಿಯಬಲ್ಲೆನೆ ಪರಮಪುರುಷ ||

ಧರ್ಮಕಾರ ಶ್ರೀಕೃಷ್ಣವಿಟ್ಠಲ ನಿನ್ನೆದುರಿಗೆ ನನ್ನ ಶಾಠ್ಯ

ಪ್ರದರ್ಶಿಸುವ ಎನ್ನನು ಏನೆಂದು ಕರೆಯುವಿ? ||

210. ಅಮಲು ಏರಿದೆ ಏನಗೆ ಅಚ್ಯುತನೆಂಬೋ ಅಚ್ಚು ಮೆಚ್ಚಿನ | || ||

ಹಲವರಿಗೆ ಮಡದಿ ಮಕ್ಕಳೆಂಬೋ ಅಮಲು |

ಕೆಲವರಿಗೆ ಸಿರಿ ಸಂಪತ್ತಿನ ಅಮಲು ||

ಇನ್ನೂ ಕೆಲವರಿಗೆ ಸ್ಥಾನಮಾನದ ಅಮಲು |

ಎಲ್ಲರಿಗೂ ಅಹಂ-ಮಮದ ಅಮಲು | || 1 ||

ಕಾಸಿಲ್ಲದೆ ಸುಲಭದಲಿ ಸಿಗುವ ಅಮಲು |

ಹೆಚ್ಚೆಚ್ಚು ಏರಲಿ ಎಂದು ಹಂಬಲಿಸಿ ||

ಏರಿದಮಲು ಏಂದೆಂದಿಗೂ ಇಳಿಯದಿರಲಿ |

ಇಂದಿರೇಶ ಶ್ರೀಕೃಷ್ಣವಿಟ್ಠಲನ ದಯದಿ | || 2 ||

211. ಹರ್ಷಚಿತ್ತನಾಗಿ ನಿನ್ನ ಸದಾ ಸ್ಮರಿಸುವಂತೆ ಮಾಡು ಹೃಷಿಕೇಶ |

ಆಶಾಪಾಶ ಕ್ಲೇಶ ಕಳೆದು ಪದಸಮೀಪದಲ್ಲಿಡು ಪುರುಷೋತ್ತಮ-ದೇವಾ ||

ಬುದ್ಧಿಶೂನ್ಯ ಕಳೆದು ದುರ್ಬದ್ಧಿಯ ಬಿಡಿಸು ಪ್ರೇರಕ ಪ್ರದ್ಯುಮ್ನ |

ಆಧ್ಯಾತ್ಮವಿದ್ಯೆ, ಸತ್ಯ ಜ್ಞಾನ ಕೊಟ್ಟು ನಿತ್ಯಕಾಪಾಡು ಅಧೋಕ್ಷಜ ||

ಸದ್ಬುದ್ಧಿ ಕೊಟ್ಟು ಸಂಕಟ ಬಾರದಂತೆ ನೋಡಿಕೋ ಸಂಕರ್ಷಣ |

ಅನಿತ್ಯ ಸಂಸಾರದಲಿ ತೊಳಲಾಡುವುದು ತಪ್ಪಿಸಿ ನಿತ್ಯ ಲೋಕದಲ್ಲಿರಿಸು ||

ಶ್ರೀಕೃಷ್ಣವಿಟ್ಠಲ ನೀ ಎನ್ನ ತಂದೆ ಜನುಮ ಜನುಮಕೂ ||

212. ನಂಬುವುದ್ಹ್ಯಾಂಗೆ ನಿನ್ನ ನಂಬವುದ್ಹ್ಯಾಂಗೆ | || ||

ಒಬ್ಬನೇ ಮಾಡಿದ ಲೀಲೆಗಳು ಎಂಬುವುದ್ಹ್ಯಾಂಗೆ | || ಅಪ ||

ನವಜಾತ ರಕ್ಕಸಿಯ ಕೊಂದಿದ್ಹ್ಯಾಂಗೆ |

ಗೋವಳ ಕಾಯ್ದು ಗೋಪಾಲಕನಾಗಿದ್ಹ್ಯಾಂಗೆ ||

ಮಾವ ಕಂಸನ ಎದೆಮೆಟ್ಟಿ ಒರೆಸಿದ್ಹ್ಯಾಂಗೆ |

ನವನೀತ ಚೋರನೆಂದರೆ ನೆಲವು ನಿಲುಕ್ಕಿದ್ಹ್ಯಾಂಗೆ | || 1 ||

ವಿಧವಿಧದಿ ದುಷ್ಟಶಕ್ತಿ ಅಳಿಸಿದ್ಹ್ಯಾಂಗೆ |

ಸದನದಿ ಪೊಕ್ಕು ಗೋಪಿಯರ ಕಾಡಿದ್ಹ್ಯಾಂಗೆ ||

ಸುಂದರ ವದನ ಸೋಂಗು ಮಾಡಿದ್ಹ್ಯಾಂಗೆ |

ಮಧುರ ಭಾವ ಗೋಪಿಯರಲಿ ಮೂಡಿಸಿದ್ಹ್ಯಾಂಗೆ | || 2 ||

ಮುರುಳಿ ಮನೋಹರ ರಾಸ ಮಾಡಿದ್ಹ್ಯಾಂಗೆ |

ನಾರಿಯರ ಸೀರೆಯ ಕದ್ದಿದ್ಹ್ಯಾಂಗೆ ||

ಗರತಿಗೆ ಅಕ್ಷಯಾಂಬರ ಇತ್ತಿದ್ಹ್ಯಾಂಗೆ |

ವಕ್ರಳ ಸರಳ ಸುಂದರಿ ಮಾಡಿದ್ಹ್ಯಾಂಗೆ | || 3 ||

ಪ್ರೀತಿಸಿದವರ ತೊರೆದು ಹೋಗಿದ್ಹ್ಯಾಂಗೆ |

ಮಾತೆಯ ಆಸೆ ಕಂದ ತೀರಿಸಿದ್ಹ್ಯಾಂಗೆ ||

ಕತೆ ಕೇಳಿದರೆ ಮನಕಾನಂದ ನೀಡುವನ್ಹ್ಯಾಂಗೆ |

ಮತ್ತೆ ಬರದ್ಹಾಂಗೆ ಶ್ರೀಕೃಷ್ಣವಿಟ್ಠಲ ದಾರಿ ತೋರುವನ್ಹ್ಯಾಂಗೆ ||

213. ಯಜ್ಞದಿನಿರುತ ವಿಪ್ರರಿಗೆ ಒಲಿಯದವ |

ಅಜ್ಞ ಪತ್ನಿಯರ ಭಕ್ತಿ ಭೋಜನಕೆ ಒಲಿದ ||

ಆಜ್ಞೆಯಿಂದ ಕಳುಹಿದನವರ ಅನುಗ್ರಹಿಸಿ |

ಪ್ರಾಜ್ಞ, ವಿಜ್ಞಾನ ಪುರುಷೋತ್ತಮ ಶ್ರೀಕೃಷ್ಣವಿಟ್ಠಲ ||

214. ಹಾವಾಡಿಗನಿವ ದೊಡ್ಡ ಹಾವಾಡಿಗ | || ||

ಹಾವಿನ ಮೇಲೆ ಕುಣಿ ಕುಣಿದಾಡಿದವ ||

ಹಾವಿನ ಮೇಲೆ ಮಲಗಿ ಹೆಡೆ ಛತ್ರಿಯನ್ನಾಗಿಸಿದವ |

ಹಾವಿನ ಬಾಯಿ ಸೀಳಿ ಗೋಪಾಲಕರ ಹೊರತಂದವ ||

ಹಾವಿನ ಬಂಧ ಬಿಡಿಸಿ ನಂದನ ಕರೆತಂದವ |

ಹಾವಿನ ಹೆಡೆಯ ಮೇಲೆ ಪೃಥ್ವಿಯನ್ನಿಟ್ಟವ | || 1 ||

ಹಾವಿಗೆ ಭಾಗವತುಪದೇಶ ಮಾಡಿದವ |

ಇವನೇ ಸರ್ವಜೀವರ ಆತ್ಮನಾಗಿರುವ ||

ಹಾವಂತೆ ತಲೆದೂಗುವ ಭಕ್ತರ ಕರೆ ಕೇಳಿ |

ಹಾವಂತೆ ಎನ್ನೊಳಿರುವ ಕಾಮ, ಕ್ರೋಧ ಅಳಿಸಿ ||

ಕಾಯೆನ್ನ ಸದಾ ವಿಶ್ವದೊಡೆಯ ಶ್ರೀಕೃಷ್ಣವಿಟ್ಠಲ | || 2 ||

215. ಅವಶನಿವ ಅನಾದಿ ಪರವಶನಲ್ಲನಿವ |

ಇವನ ವಶ ಸಕಲ ಜೀವ-ಜಡಗಳೆಲ್ಲ ||

ಇವನ ವಶ ಸತತ ಕಾಲ, ಗುಣ ದೇಶಗಳೆಲ್ಲ |

ಸ್ವವಶನೆಂಬರು ಭಕ್ತಪರಾಧೀನ ಶ್ರೀಕೃಷ್ಣವಿಟ್ಠಲನ ಬುಧರೆಲ್ಲ ||

216. ಸುಲಭ ಸಾಧನವಿದು ಅನಂತ ಪಾಪನಾಶಕೆ | || ||

ಗೆಲ್ಲಬಹುದು ಅಕಾಲಮೃತ್ಯು ಪಾಪ ಪರಿಹಾರಕ ತೀರ್ಥಪ್ರಾಶನದಿ | || ಅಪ ||

ಪಾಪ ನಿವೃತ್ತಿಗೆ ಪರಮಾತ್ಮನಿಗೆ ಪಂಚಾಮೃತಭಿಷೇಕ |

ರೂಪ ಭಗವಂತನ ನೆನೆಯಿರಿ ಜಡ ವಸ್ತುವಿನಲಿ | || 1 ||

ನೆನೆಸೆ ನಾರಾಯಣನ ಜಲಾಭಿಷೇಕದಿ ದಶಾಪರಾಧ ನಾಶ |

ನೆನೆಸೆ ಗೋವಿಂದನ ಕ್ಷೀರಾಭಿಷೇಕದಿ ಶತಾಪರಾಧ ನಾಶ | || 2 ||

ನೆನೆಸೆ ವಾಮನನ ದಧಿಅಭಿಷೇಕದಿ ಸಹಸ್ರಾಪರಾಧ ನಾಶ |

ನೆನಸೆ ವಿಷ್ಣುನ ಘೃತಾಭಿಷೇಕದಿ ದಶ ಸಹಸ್ರಾಪರಾಧ ನಾಶ | || 3 ||

ನೆನೆಸೆ ಮಧುಸೂದನ ಮಧುಅಭಿಷೇಕದಿ ಲಕ್ಷಾಪರಾಧ ನಾಶ |

ನೆನೆಸೆ ಅಚ್ಯುತನ ಇಕ್ಷು (ಶರ್ಕರ) ಅಭಿಷೇಕದಿ ದಶಲಕ್ಷಾಪರಾಧ ನಾಶ || 4 ||

ಸುರಿಯೆ ಎಳೆನೀರ ಕೋಟಿ ಪಾಪನಾಶ |

ಹರಿಸಲು ಗಂಧೋದಕ ಸ್ನಾನ ಅನಂತ ಪಾಪನಾಶ | || 5 ||

ಶ್ರೀಕೃಷ್ಣವಿಟ್ಠಲನ ಅಂತರಂಗದಿ ಇಂತು ಧ್ಯಾನಿಸಿ ಪೂಜಿಸಲು |

ಅಕ್ಷಯ ಫಲದಾತಾ ನಿಷ್ಕಾಮ ಕರ್ಮಕೆ ಹರಿಲೋಕ ಕೊಡುವ | || 6 ||

217. ಜಲದಲ್ಲಿ ಬೆರೆತ ಉಪ್ಪಿನಂತೆ |

ಹಾಲಲ್ಲಿ ಬೆರೆತ ಸಕ್ಕರೆಯಂತೆ ||

ಗಾಳಿಯಲ್ಲಿಯ ಗಂಧದಂತೆ |

ಬೆಳಕು ಸರ್ವತ್ರ ಪಸರಿಸಿದಂತೆ ||

ಎಲ್ಲ ಕಡೆ ವ್ಯಾಪ್ತ ಪರಮಾತ್ಮ ಅದೃಷ್ಟ |

ಒಳ-ಹೊರಗೂ ದೇಹದಿ ನೆಲೆಸಿರುವ ||

ಆಲಿಸುವ ಸರ್ವ, ಸರ್ವವೂ ವಿದಿತ |

ಇಲ್ಲ ಸಲ್ಲದ್ದು ಹೇಳಿ ದೂರದಿರಿ ||

ಒಲ್ಲೆನೆಂದರೂ ಅವರವರ ಕರ್ಮಾನುಸಾರದಿ |

ಎಲ್ಲರಿಗೂ ಹಿತವನ್ನೇ ಮಾಡುವ |

ಶ್ರೀಕೃಷ್ಣವಿಟ್ಠಲ ಸಮದರ್ಶಿ ||

218. ನೀನೇ ಸೃಷ್ಟಿಸಿದ ಎಲೆ, ಹೂ, ಹಣ್ಣು, ನೀರು ನಿನಗೇ ಹೇಗೆ ಕೊಡಲಿ? |

ನೀನೇ ಸರ್ವಯಜ್ಞಭೋಕ್ತಾ ಇರುವಾಗ ಯಜ್ಞ ಹೇಗೆ ಮಾಡಲಿ? ||

ನೀನೇ ಎಲ್ಲದರಲ್ಲೂ,ಎಲ್ಲ ಕಡೆಯಲ್ಲೂ ಇರುವಾಗ ನನ್ನದೆಂದು ಹೇಗೆ ಹೇಳಲಿ? |

ಮನದಲ್ಲೂ, ಬುದ್ಧಿಯಲ್ಲೂ, ಹೃದಯದಲ್ಲೂ ಇರುವಾಗ ಏನು ನೀಡಲಿ? ||

ನಿನ್ನದೇ ಸರ್ವವೂ ಇದ್ದಾಗ ನೀನಗೇನೆಂದು ಅರ್ಪಿಸಲಿ? |

ನಿನ್ನದೇ ನಿನಗರ್ಪಿಸುವಾಗ ಇರುವ ಭಾವ ಮಾತ್ರ ನನ್ನದೆಂದು ತಿಳಿದು ||

ನಿನಗರ್ಪಿಸುವೆ, ಶ್ರೀಕೃಷ್ಣವಿಟ್ಠಲ ಕರುಣದಿ ಸ್ವೀಕರಿಸಿ ಸಲಹೋ ದೇವಾ ||

219. ಮನದ್ಹೊಲಸು ತೊಳೆದು ನಿರ್ಮಲ ಭಕುತಿ ತೋರೋ |

ಜನರ ಡೊಂಕು ಎಣಿಸದೆ ನನ್ನನೇ ತಿದ್ದಿಕೊಳ್ಳುವಂತೆ ಮಾಡೋ | || ||

ಜಗದ ಆಗು-ಹೋಗುಗಳ ಚಿಂತೆ ಬಿಡಿಸಿ

ವಿಷಯಕೆ ಮನವೆರಗದಂತೆ ಮಾಡೋ |

ಜಗನ್ನಿಯಾಮಕ ಜಗದ ಚಕ್ರ ಒಲುಮೆಯಲಿ

ನಡೆಸುವವನಿರಲು ಗೊಡವೆ ಏತಕೆ? ||

ಭಗವಂತನ ಪ್ರೇರಣೆಯಿಂ ಸಕಲ

ಕಾರ್ಯ ನಡೆವುದೆಂದು ಅರಿತೆ |

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು