ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 2

ಉಪಾಸಕ ನಾನು, ಸತ್ಯ ಉಪಾಸನೆ ತಿಳಿಸು

ಉಪಾಸ್ಯ ಸರ್ವಗತ ಶ್ರೀಕೃಷ್ಣವಿಟ್ಠಲನೇ ದಯದಿ ||

ಎಎಎ

303. ಬೇಕೆನ್ನುವುದು ಹೋಗದು, ಸಾಕೆನ್ನುವುದು ಬರದು | (ಆಸೆ-ತೃಪ್ತಿ)

ಜೋಕೆಯಿರದೆ ಜಾರಿ ಬೀಳುವುದು ತಪ್ಪಿಲ್ಲ ||

ದಕ್ಕದಿರುವುದರ ಹಿಂದೆ ಓಡಿ ದಣಿದೆ |

ಸಿಕ್ಕಿದ್ದರಲ್ಲಿ ತೃಪ್ತಿ ಕಾಣದೇ ಹೋದೆ ||

ಸಕಲ ಪ್ರಾಪ್ತಿಯ ಲೆಕ್ಕ ತಿಳಿಯದಾದೆ |

ಏಕೈಕನಾಥ ಶ್ರೀಕೃಷ್ಣವಿಟ್ಠಲನ ನಂಬದಾದೆ ||

ಎಎಎ

304. ರೂಪ, ಕುಲ, ವಿದ್ಯೆ, ಜನನ-ಮರಣ ಪೂರ್ವನಿರ್ಧಾರಿತ |

ಕೋಪ-ತಾಪ, ಮಾನ-ಅಪಮಾನ ಸ್ವರೂಪಾನುಸಾರ ||

ಜಪ-ತಪ, ವ್ರತ-ನಿಯಮಾಚರಣೆ ಸ್ವಯೋಗ್ಯತಾನುಸಾರ |

ಪ್ರಾಪ್ತಿ-ಅನುಗ್ರಹ ಮಾತ್ರ ಶ್ರೀಕೃಷ್ಣವಿಟ್ಠಲನ ಇಚ್ಛಾನುಸಾರ ||

ಎಎಎ

305. ಲಕ್ಷ್ಮೀಪತಿಗೆ ಐಶ್ವರ್ಯದಾಸೆಯೇ |

ಪಕ್ಷಿವಾಹನಗೆ ಉತ್ಸವದಾಸೆಯೇ ||

ಕುಕ್ಷಿಯೊಳು ಜಗವನಿಟ್ಟವಗೆ ನೈವೇದ್ಯವೇ |

ದಕ್ಷ ಸೇವಕಗೆ ಕೈಂಕರ್ಯಗೊಳ್ಳುವಾಸೆಯೇ ||

ಸಾಕ್ಷೀ ಶ್ರೀಕೃಷ್ಣವಿಟ್ಠಲಗೆ ನಿಜ ಭಕುತಿಯೊಂದೇ ಸಾಲದೆ ||

ಎಎಎ

306. ಅಂತರಂಗ ಸಖ ಸರ್ವಾಂತರ್ಯಾಮಿ, ಸರ್ವಪ್ರೇರಕ,

ಮೂಕಪ್ರೇಕ್ಷಕ ಅನವರತ ಸಂಗಾತಿ |

ನಿನ್ನಲಿ ಅಮಲಭಕುತಿ ಇತ್ತು ಪರಿಪಾಲಿಸೊ ಕರುಣಾಕರನೇ ||

ಸದಾ ನಿನ್ನ ಸ್ಮರಣೆಯಲ್ಲಿದ್ದು ಅನ್ಯಾಪೇಕ್ಷೆ ಇಲ್ಲದಂತೆ

ದಯ ಮಾಡೋ ಶ್ರೀಕೃಷ್ಣವಿಟ್ಠಲ ||

ಎಎಎ

307. ಲೋಕದಿ ಮನುಜರ ಮೆಚ್ಚಿಸಲರಿಯೆ ಎನ್ನ ಮಾಧವ ಮನವ ಮೆಚ್ಚಿಸಬಹುದು |

ಪರಿಪರಿ ಸ್ತುತಿಗೆ ಪರರಿಂದ ಅಪವಾದ ತಪ್ಪದು ||

ಆರ್ತದಿಂದೊಮ್ಮೆ ಕರೆಯೆ ಅನಿಕೇತನ |

ಪರರ ಆಪೇಕ್ಷೆಗೆ ಮಿತಿಯಿಲ್ಲ ಅಮಿತ ವಿಕ್ರಮ ||

ಅವಿರತ ನೆನೆದೊಡೆ ಶ್ರೀಕೃಷ್ಣವಿಟ್ಠಲ ಕಾರುಣ್ಯಗೆ ಎಣೆಯಿಲ್ಲ ||

ಎಎಎ

308. ಪ್ರತ್ಯಕ್ಷ ಕಂಡು, ಎಲ್ಲಾ ಕೇಳುವ, ಹೇಳುವ |

ಸರ್ವವಿದಿತ ಸರ್ವ ಮನ: ಪ್ರೇರಕನೇ ||

ಪ್ರಾಣ, ಗುಣಪೂರ್ಣನೇ, ಸಂಹಾರಕನೇ |

ಬ್ರಹ್ಮಗಿರಿಯಾದ ನಮ್ಮ ಶ್ರೀಕೃಷ್ಣವಿಟ್ಠಲ ||

ಎಎಎ

309. ಬೇಡಿದರೂ ಕೊಡಲಾಗದವಗೆ ಕರೆದುಕೊಡುವ ಮನಸ್ಸೆಲ್ಲಿ? |

ಮನುಜರಲ್ಲೇ ಕರುಣೆ ತೋರದವಗೆ ಪ್ರಾಣಿಗಳಲಿ ದಯೆಯೆಲ್ಲಿ? ||

ಹಸಿದವರ ಮುಂದೆ ಸುಗ್ರಾಸ ಭೋಜನ ಮಾಡುವವ ಕಾಗೆಗಿಂತ ಕಡೆ |

ಹೃದಯವಂತಿಕೆ ಇಲ್ಲದವನ ಜೀವನ ಇಹ-ಪರದಲ್ಲೂ ದುಃಸ್ಸಹ ||

ಶ್ರೀಕೃಷ್ಣವಿಟ್ಠಲನ ಭಜಿಸದಿರುವನ ಜನುಮ ವ್ಯರ್ಥ ||

ಎಎಎ

310. ಚಿಕ್ಕವರಿದ್ದಾಗ ತಾಯಿಯ ಆಶ್ರಯ |

ಸ್ಥಾನಮಾನ ಗಳಿಸಲು ತಂದೆಯ ಆಶ್ರಯ ||

ಯೌವನದಲಿ ಮಡದಿಯ ಆಶ್ರಯ |

ಮುದಿತನದಲಿ ಮಕ್ಕಳ ಆಶ್ರಯ ||

ಹುಲುಮಾನವರಲ್ಲೇ ಹೊಗಳುವ ಜಿಹ್ವೆಗೆ |

ಅನಾದಿ ಕಾಲಕೂ ಆಶ್ರಯದಾತನಾಗಿರುವೆ ||

ಶ್ರೀಕೃಷ್ಣವಿಟ್ಠಲನ ನೆನೆದು ಪಾಡಲು |

ಮನಬಾರದೇ ಹೀನಾಯರಾಗಿರುವರಯ್ಯಾ ||

ಕರೆದು ಪೇಳಿದರೂ ಒಪ್ಪಲಾರದೆ ನಿತ್ಯ |

ನರಕವೆಂಬ ಕೂಪದಲಿ ಹೊರಳಾಡುವರು ||

ಎಎಎ

311. ತಾಯಿ, ತಂದೆ ಬಂಧು ಬಳಗ ರಕ್ಷಿಪುದು ಕೆಲವರಿಗೆ |

ಧನ-ಕನಕ, ಮನೆಯೇ ಸರ್ವಸ್ವ ಜೀವನದಲಿ ಹಲವರಿಗೆ ||

ಇಚ್ಛಿತಮಡದಿ, ಮಕ್ಕಳು ಇರಲು ಜೀವನಸುಖ ವೆನಿಪುದು |

ಸುಗ್ರಾಸ ಭೋಜನದಿ ಎಲ್ಲಾ ದುಃಖ ಮರೆವರು ಬಹುಜನ ||

ಕಾಮಕೇಳಿಯಲಿ ನಿಜವಾದ ಸುಖವ ಕಾಣುವರು |

ವಾಂಛಿತ ಜೀವನ ಸುಖದ ಸುಪ್ಪತ್ತಿಗೆ ಇಷ್ಟೇ ಜೀವನ ||

ವೆನ್ನುವ ಮಂದಬುದ್ಧಿ ಜನ ನಿಜ ಮರ್ಮ ತಿಳಿಯದೇ |

ಸಂಸಾರದಲಿ ತೊಳಲಾಡಿ ಹೊರಳಾಡುವರು ಪದೆ ಪದೇ ||

ಶ್ರೀಕೃಷ್ಣವಿಟ್ಠಲನ ನಾಮಸ್ಮರಣೆ ಒಂದೇ ಪಾರಮಾರ್ಥಕ್ಕೇ |

ಸರಳ ಸೊಪಾನವೆಂದರಿಯದೆ ಮೊಸಹೋಗುವರಲ್ಲಾ ||

ಎಎಎ

312. ಆನಂದತೀರ್ಥರ ದ್ವೈತಮತ ಅರಿತವರಿಗೆ |

ಪನ್ನಂಗ ಶಯನ ಒಲಿದು ರಕ್ಷಿಪನನವರತ ||

ಅನಂತ ಜನುಮದ ಪುಣ್ಯದಿ ಭಾಗ್ಯ ದೊರಪುದು |

ಜ್ಞಾನನಿಧಿ ದೊರಕೆ ಆಪ್ತರಸಂಗದನುಗ್ರಹದಿ ||

ಮನಸಿನ ಸುಖಗಳ ಬೇಡದಿರಲು ಸಾನುರಾಗದಿ |

ಒಲಿದು ಸಾಮಿಪ್ಯ ನೀಡುವ ಶ್ರೀಕೃಷ್ಣವಿಟ್ಠಲರೇಯಾ ||

ಎಎಎ

313. ಅರಿವಿನಲಿ ಮಹಾನ್ ಅರಿವು ವೇದಶಾಸ್ತ್ರದರಿವು |

ಗುರುವಿನಲಿ ಮಹಾನ್ ಗುರು ಶ್ರೀಮಧ್ವಾಚಾರ್ಯರು ||

ಎಂಬತ್ತ್ನಾಲ್ಕು ಲಕ್ಷಯೋನಿಯಲಿ ಸಾರ್ಥಕ ಮಾನವಜನ್ಮ |

ಸಂಬಳದಾಸೆ ಬಿಟ್ಟು ಗುರು ಮಧ್ವಾಂತರ್ಗತ ಶಾಸ್ತ್ರ ತಿಳಿ ಶ್ರೀಕೃಷ್ಣವಿಟ್ಠಲನ ದಾಸನಾಗಿ ||

ಎಎಎ

314. ಸದಾ ನಿನ್ನ ಧ್ಯಾನಕೊಡು ಮನದಿ |

ಸದಾ ನಿನ್ನ ಸ್ಮರಣೆ ಕೊಡು ಚಿತ್ತದಿ ||

ಸದಾ ನಿನ್ನ ಮೂರುತಿ ನಿಲಿಸೋ ಬುದ್ಧಿಯಲಿ |

ಸದಾ ನಿನ್ನ ಬೇಡುವಂತೆ ಮಾಡು ಇದೊಂದೇ ||

ಸದಾನಂದ ಒಡೆಯಾ ಶ್ರೀಕೃಷ್ಣವಿಟ್ಠಲ ದಯಪಾಲಿಸೋ ||

ಎಎಎ

315. ಬೇಕು ಪ್ರತಿಕಾರ್ಯದಲಿ ಜ್ಞಾನ |

ಬೇಕು ಪ್ರತಿಕಾರ್ಯದಿ ಇಚ್ಛೆ ||

ಬೇಕು ಪ್ರತಿಕಾರ್ಯಕೆ ಸಮಯ |

ಸಕಲಕೂ ಮುಂಚೆ ಬೇಕು ಶ್ರೀಕೃಷ್ಣವಿಟ್ಠಲನುಗ್ರಹ ||

ಎಎಎ

316. ಆತ್ಮನೇ ಬಂಧು, ಆತ್ಮನೇ ಶತ್ರು ಎನ್ನುವ |

ಆತ್ಮೋಧ್ಧಾರಕ ಶ್ರೀಕೃಷ್ಣವಿಟ್ಠಲನೇ ಎನ್ನ ಜಿತಾತ್ಮಳಾಗಿಸು ||

ಎಎಎ

317. ಜ್ಞಾನವೆಂದರೆ ಅಲೌಕಿಕ ಶ್ರೇಷ್ಠ ಜ್ಞಾನ |

ಜ್ಞಾನಯಜ್ಞವೇ ಯಜ್ಞಗಳಲಿ ಪರಮಮುಖ್ಯ ||

ಜ್ಞಾನ ಶ್ರದ್ಧಾವಂತಗೆ ಮಾತ್ರ ಲಭ್ಯ |

ಜ್ಞಾನಯಜ್ಞದಿ ಸಕಲ ಕರ್ಮ ಸಮಾರೋಪ ||

ಜ್ಞಾನಾಗ್ನಿ ಸರ್ವ ಕುಕರ್ಮಗಳ ದಹಿಸುವದು |

ಜ್ಞಾನಕೆ ಸಮಾನ ಪವಿತ್ರವಾವುದೂ ಇಲ್ಲ ||

ಜ್ಞಾನವಿನಾ ಮಾನವ ಜನ್ಮ ನಿರರ್ಥಕ |

ಜ್ಞಾನ ದೊರಕೆ ಶ್ರೀಕೃಷ್ಣವಿಟ್ಠಲನ ದಯದಿ ಪರಮ ಶಾಂತಿ ಲಭ್ಯ ||

ಎಎಎ

318. ಸರ್ವರ ಹಿತದಲ್ಲಡಗಿದೆ ನಿನ್ನ ಸುಖ |

ಸರ್ವರ ಅಹಿತದಲ್ಲಿದೆ ನಿನ್ನ ದು: ||

ಸರ್ವದಾ ಸರ್ವರ ಹಿತವೇ ಬಯಸು |

ಸರ್ವೇಶ ಶ್ರೀಕೃಷ್ಣವಿಟ್ಠಲ ರಕ್ಷಿಸುವನನವರತ ||

ಎಎಎ

319. ಅನಂತ ರೂಪಗಳೊಂದು ಮೂಲರೂಪದಿಂ |

ಅನಂತ ಜೀವ, ಅನಂತ ಚೇತನಾಚೇತನ ||

ಅನಂತ ಕಾಲ, ಕರ್ಮ, ಗುಣಗಳು |

ಅನಂತಾನಂತ ಯೋನಿಜ ಸ್ವಭಾವ ಹೊಂದಿಸುವ | || 1 ||

ಒಂದು ರೂಪವು ಅನಂತ ರೂಪದಿಂ |

ಒಂದರೊಳಗೊಂದು ಬೆರೆದಿಹ ಬ್ರಹ್ಮಾಂಡ- ||

ಪಿಂಡಾಂಡದಿ ಸ್ರೀಕೃಷ್ಣವಿಟ್ಠಲ ಕಾಣಿಸುವ ಪರಿ |

ಅನಂತ ಮಹಿಮೆ ಅದ್ಭುತ! ಅತ್ಯಾದ್ಭುತ! | || 2 ||

ಎಎಎ

320. ಹಿಂದೆ ಬಂದ ಅನೇಕ ಜನುಮದಿ |

ಒಂದೊಂದರಲ್ಲೂ ಎನ್ನಲಿ ನೀನಿದ್ದು ||

ಮಾಡಿ ಮಾಡಿಸಿದ ಸಕಲ ಕರ್ಮದಿ |

ಬಂಧನವ ಹೆಚ್ಚಿಸಿದ್ದನುಕೂಲದಿಂದ ||

ಇಂದು ಬಂದ ಮಾನವಜನ್ಮದರಿವಿಲಿ |

ಸಾಧನದ ಮಾರ್ಗ ತೋರು ಸುಜ್ಞಾನವಿತ್ತು ||

ಮುಂದೆ ಬಪ್ಪ ಜನುಮದಿ ನಿನ್ನ ಮರೆಯದಂತೆ |

ಮಾಡು ಇಂದಿರೇಶ ಶ್ರೀಕೃಷ್ಣವಿಟ್ಠಲನೇ ||

ಎಎಎ

321. ದಿಗ್ಭ್ರಮೆಗೊಂಡೆ ಭಗವಂತನ ವ್ಯಾಪಾರ ವೀಕ್ಷಿಸಿ |

ವಿಭ್ರಮೆ ಅಳಿಯಿತು ತಾರತಮ್ಯವನರಿತು ||

ಸಂಭವಿಪ ಸಕಲ ಕಾರ್ಯಕಾರಣಕರ್ತ |

ಗಂಬೀರ ಬಲು ಉದಾರ, ಭಕ್ತಿಗೊಲಿವನ ||

ಸಂಭ್ರಮದಿ ಪೂಜಿಪೆ ಅಂಭ್ರಣಿಪತಿಯ |

ಬಿಂಬಸ್ಥ ಶ್ರೀಕೃಷ್ಣವಿಟ್ಠಲ ಸದಾ ಬಲಗೊಂಬೆ ||

ಎಎಎ

322. ಸಿರಿಹರಿ ಒಲುಮೆಗೆ ಎಣೆಯಿಲ್ಲವೋ |

ಧರೆಯೊಳು ಬಹು ಸುಲಭ ಹರಿಯನೊಲಿಸಲು ||

ನಿರ್ಮಲ ಚಿತ್ತದಿಂ ನಾ ನಿನ್ನವನೇನುವೆನು |

ನನ್ನವನಿವನೆಂದು ಶ್ರೀಕೃಷ್ಣವಿಟ್ಠಲನೆಂದರೆ ಸಾಕು ||

ಎಎಎ

323. ಚಕ್ರ-ಶಂಖಗಳ ಧರಿಸಿ ಸಾಧಕ |

ವಕ್ರವಿರದ ಊಧ್ರ್ವಪುಂಡ್ರವನ್ನಿಟ್ಟು ||

ಚಕ್ರಗಳಾರು ನಿರೋಧಿಸಿ |

ಚಕ್ರಾಬ್ಜ ಮಂಡಲ ರಚಿಸಿ ||

ನಕ್ರಹರನ ಸ್ಥಿರದಿ ನಿಲಿಸಿ |

ಚಕ್ರಾಕಾರದಿ(ಗೋಲಕ)ಸ್ಮರಿಸುತಾ ||

ಶಕ್ರಾಂತರ್ಗತ, ರುದ್ರಾಂತರ್ಗತ |

ವಿಕ್ರಮ ತುರಂಗ ಮರುತಾಂತರ್ಗತ ||

ಚಕ್ರಧರ ಶ್ರೀಕೃಷ್ಣವಿಟ್ಠಲನ ಪೂಜಿಸೆ |

ಸಾಕ್ಷಾತ್ತಾಗಿ ಒಲಿದು ವರವ ನೀಡುವಾ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು