ಶ್ರೀ ಕೃಷ್ಣವಿಠ್ಠಲಪದಗುಚ್ಛ 2
ವಾಯುಸ್ತುತಿ
28. ಶ್ರೀರಾಮಪ್ರಿಯ ಪರಮಮುಖ್ಯಪ್ರಾಣ |
ದೇಹದೊಳ ಹೊರಗೆ ನೆಲಸಿಹ ಪವಮಾನ ||
ಆ ವಾಯುನಿಂದಲೇ ಸಿಗುವುದು ಹರಿಕರುಣೆ |
ಸೀತಾಮಾತೆಗೆ ಅಂಗುಲೀಯನಿತ್ತವ ||
ಲಂಕೆಯನ್ನೆ ಸುಟ್ಟ ಧೀರ ಬಲವಂತ |
ಸೇತುವೆಯ ಕಟ್ಟಿ ರಾವಣನ ತರಿದ ||
ಮೆಚ್ಚಿ ಬ್ರಹ್ಮಪದವಿ ದಯಪಾಲಿಸಲು |
ನಿಜಭಕುತಿಯನೆ ಬೇಡಿದ ರಾಮದೂತ ||
ಅವನೇ ವೇದ ಶಾಸ್ತ್ರಸಾರವ ಧರಿಸಿದ |
ನಿಜ ಗುರು ಶ್ರೇಷ್ಠ ತ್ರೇತೆಯ ಹನುಮಂತ | || 1 ||
ಧರ್ಮಶಾಸ್ತ್ರಅರಿತ ಮಾರುತನೇ ದ್ವಾಪರದಲಿ |
ಧರ್ಮಜನ ಅನುಜನಾಗಿ ಪಾಂಡವನೆನಿಸಿದ ||
ಅವನೇ ರಕ್ಕಸರನು ತರಿದಟ್ಟಿದ ಬಲಭೀಮ |
ಉರಿವ ಅರಗಿನ ಮನೆಯಿಂದೆಲ್ಲರ ಪಾರುಗಾಣಿಸಿದ ವೃಕೋದರ ||
ದ್ರೌಪದಿಯ ಕರಪಿಡಿದು ಮನವನರಿತು ಕೀಚಕನ ಕೊಂದ |
ಕಿರ್ಮಿರಾದಿಗಳ ಮೆಟ್ಟಿ ಸೌಗಂಧಿಕವ ತಂದ ||
ಕೌರವ ಕುಲವ ನಿರ್ನಾಮಮಾಡಿದ ಹರಿಯಕೃಪೆಯಲಿ | || 2 ||
ಕುಜನರು ಕಲಿಯುಗದೊಳು ಕುಮತ ಪಸರಿಸಲು |
ಸುಜ್ಞಾನಿಯು ತಾ ಮಧ್ವನಾಗಿ ಅವತರಿಸಿ ||
ಸರ್ವವ್ಯಾಪಿ, ಸವೋತ್ತಮ, ವಿಶ್ವಸತ್ಯ |
ಭೂಮಿಯಲಿ ಸರ್ವ ಸುಜನರಿಗೆ ಬೋಧಿಸಿ ||
ಬದರಿಕಾಶ್ರಮಕೆ ಪುನರಪಿ ತೆರಳಿ |
ವ್ಯಾಸಮುನಿ ಪದಕೆರಗಿ ಸಕಲ ವೇದಾರ್ಥಗಳ ||
ಬ್ರಹ್ಮಪಿತನಿಂ ತಿಳಿದು ಜಗತ್ತಿಗೆ ಸಾರಿದ |
ಪೂರ್ಣಪ್ರಜ್ಞರಿಗೆ ಬಾರಿ ಬಾರಿಗೆ ವಂದಿಪೆನು | || 3 ||
ಹನುಮ, ಭೀಮ, ಮಧ್ವಾಂವತರಾತ್ಮಕ |
ಶ್ರೀಕೃಷ್ಣವಿಟ್ಠಲ ಸಕಲರಿಗೂ ಮುಕ್ತಿಪಾಲಿಪ ||
ಜಯ ಜಂಯ ಅವತಾರತ್ರಯ ಶ್ರೀರಾಮದೂತಗೆ ಜಯಜಯ ||
29. ಶರಣು ಮಾರುತಿಯೇ | ವರ ರಾಮದಾಸನೇ |
ಬುದ್ಧಿತಮ ಗರಿಷ್ಠನೇ | ಇಂದ್ರಿಯ ಜಯನೇ ||
ಭಾರತಿ ಪತಿ ಕಪಿಶ್ರೇಷ್ಠನೇ |
ಕರುಣಿಸು ಶ್ರೀಕೃಷ್ಣವಿಟ್ಠಲ ಭಕ್ತನೇ ನಮೋ ನಮಃ ||
30. ಯಂತ್ರೋದ್ಧಾರಕ ಹನುಮ ಮಂತ್ರದಿ ಬಂಧಿತನಾದ |
ಯತಿವರ್ಯ ಶ್ರೀವ್ಯಾಸರಿಂದ ಪ್ರತಿಷ್ಠಿತನಾದ(ಪೂಜಿತನಾದ) | || ಪ ||
ಚಕ್ರತೀರ್ಥದಿ ನೆಲಸಿಹ ಕೋದಂಡರಾಮ ಭಕುತ |
ಏಕಚಿತ್ತದಿ ಯೋಗಮುದ್ರೆಯಲಿ ಕುಳಿತಿಹನು | || 1 ||
ಚೆಂದದಿ ಪಂಚಖಾದ್ಯ ನೈವೇದ್ಯ ಸ್ವೀಕರಿಸುವ |
ಬಂದ ಭಕುತರಭೀಷ್ಟೆ ಪೂರೈಸುವ ಬಿಡದೆ | || 2 ||
ರಾಮಮಂತ್ರ ನಿರುತ ಜಪಿಸುವ ಜಪಮಾಲೆಪಿಡಿದು |
ಸಾಮಗಾನಪ್ರಿಯ ಶ್ರೀಕೃಷ್ಣವಿಟ್ಠಲನ ಸುತನಿವನು | || 3 ||
31. ಓರೆ ಮೋರೆಯ ಮಾರುತಿಯೇ ಕರೆ-ಕರೆ ಮಾಡದಿರು |
ಸರುವ ಜೀವ ಭಾರ ಪೊತ್ತಿರುವ ನಿನಗೆ ನಾ ಭಾರವೇ? | || ಪ ||
ಸೂರ್ಯನೆಡೆಗೆ ಹಾರಿದಾಗ ತಾಪ ತಾಕಲಿಲ್ಲವೆ? |
ಪರಿಹರಿಸಲಾರದಂತಹ ಎನ್ನಪಾಪ ಸುಡಲಾರೆಯಾ? ||
ತಾರಿಸಿ ಸಾಗರ ಲಂಕೆಗೆ ಪೋಗಿ ಸೀತೆಗೆ ಉಂಗುರವಿತ್ತೆ |
ಭರಿಸಿ ಎನ್ನ ಸಂಸಾರದಿಂ ಪಾರು ಮಾಡಲಾರೆಯಾ | || 1 ||
ಧೀರ, ಸಂಜೀವಿನಿ ಪರ್ವತ ತಂದು ಪ್ರಾಣ ಉಳುಹಿದೆ |
ಶ್ರೀರಾಮ-ಲಕ್ಷ್ಮಣರ ಹೆಗಲ ಮೇಲೆ ಪೊತ್ತೆ ||
ಧರೆಯಲಿ ದುರ್ಜನರಿಂದೆನ್ನ ಉಳಿಸಲಾರೆಯಾ |
ಗುರುವೆಂಬೆ ಎನ್ನ ಬಿಂಬಸ್ಥ ಹರಿಯ ತೋರೆಯಾ | || 2 ||
ಭೀಮನಾಗಿ ಸಕಲ ಅಸುರರ ಸದೆ ಬಡೆದೆ |
ಶ್ರೀಮಧ್ವನಾಗಿ ಅಂಜದೆ ದುರ್ಮತ ಖಂಡಿಸಿದೆ ||
ಸಮರಾರು ನಿನಗೆ, ಜೀವೋತ್ತಮನೇ ನೀನಹುದು |
ಸ್ವಾಮಿ ಶ್ರೀಕೃಷ್ಣವಿಟ್ಠಲನ ಆತ್ಮಾಲಿಂಗನ ಪಡೆದು ಧನ್ಯನಾದೆ | || 3 ||
32. ಪ್ರಾಣ, ಮುಖ್ಯಪ್ರಾಣ, ಹಂಸಮಂತ್ರ ಜಪಿತ || ಪ್ರಾಣ | || ಪ ||
ಜ್ಞಾನ, ಭಕ್ತಿ ಮೂರ್ತಿಮಂತ, ಸರ್ವಕಾರ್ಯಕಾರಕ | || ಅಪ ||
ಮಾರ್ಗ ಪ್ರದರ್ಶಕ ಶ್ರೀಹರಿಗೆ, ಜೀವ ದೇಹ ಪ್ರವೇಶದಿ |
ಮಂಗಳ ಸ್ವರೂಪನೇ ಅಂತರ್ಯಾಮಿಯಾದ ಆತ್ಮನಾಗಿರುವ ||
ಅಗಲದೆ ನಾಲ್ಕು ದೇಹದಿ, ಒಂದೊಂದು ರೂಪದಿ ಚೇಷ್ಟಾಪ್ರದ | (ಅನಿರುದ್ಧಾದಿ)
ಆಗಲೇ ಧರ್ಮನೆನಿಸಿ, ಚೇತನಾಚೇತನಾತ್ಮಕ ಜಗತ್ ಧರಿಪನು | || 1 ||
ಭಕ್ತ್ಯಾದಿ ಸಕಲ ಸದ್ಗುಣಗಳಿಗೂ ಇವನೇ ಪ್ರೇರಕ |
ಮೌಕ್ತಿಕ ಆನಂದಾನುಭವಕೂ ಇವನೇ ಕಾರಣ ||
ಮುಕ್ತಿಪ್ರದ ನವವಿಧ ಭಕ್ತಿಪ್ರದಾತನಿವ |
ಮೋಕ್ಷಪ್ರದ ವಿಷ್ಣು ಅಭಿನ್ನ ಶ್ರೀಕೃಷ್ಣವಿಟ್ಠಲನ ಅನುಜ್ಞೆಯಿಂದ | || 2 ||
33. ಆವನು ದೇಹದಲ್ಲಿರೆ ಇರುವ | ಆವನು ಹೊರಹೊಟರೆ ಹೊರಡುವ |
ಆವನು ಸದಾ ಹಂಸಮಂತ್ರ ಜಪಿತ | ಅವನನ್ನೇ ಸೃಷ್ಟಿಸಿದ ಶ್ರೀಕೃಷ್ಣವಿಟ್ಠಲ ||
34. ಧಾರಣಾಪ್ರದ ಧರ್ಮನಾಮಕ ವಾಯು |
ಸರ್ವಜೀವಿಗಳಿಗೆ ಚೇಷ್ಟಾಪ್ರದ ||
ಇರನು ಪ್ರಾಣ ಕ್ಷಣಮಾತ್ರ ಹರಿಇಲ್ಲದಿರೆ |
ಪರಿಸರ ಪದ್ಧತಿ ಎನಿಸಿದ ನಮ್ಮ ಶ್ರೀಕೃಷ್ಣವಿಟ್ಠಲ ||
(ದೇಹದೊಳಗೆ ಪ್ರವೇಶಿಸುವಾಗ ಶ್ರೀಹರಿ ಮುಂದೆ ಹೋಗುವ ಮುಖ್ಯಪ್ರಾಣ. ಅದಕ್ಕೆ ಪರಿಸರ ಪದ್ಧತಿ ಎನ್ನುವರು)
35. ಮಾರುತನ ಮೂರುತಿ ಅತಿ ಪರಾಕ್ರಮಿಯಯ್ಯಾ |
ಸಮುದ್ರವ ಲಂಘಿಸಿ ಲಂಕೆಯ ದಹಿಸಿದ ||
ಚಿಂತಾಮಣಿಯಿತ್ತು ಸೀತೆಯ ದುಃಖ ಕಳೆದನಯ್ಯಾ |
ಸೌಮಿತ್ರೆಯ ಪ್ರಾಣದಾತಾರ ಅಕ್ಷಯ ಪ್ರಾಣಹಂತಾರ ||
ಶ್ರೀರಾಮದೂತನಿವ ಸ್ವಾತ್ಮಪ್ರದಾನಿತನಯ್ಯಾ |
ವಾಯುಜೀವೋತ್ತಮ ಶ್ರೀಕೃಷ್ಣವಿಟ್ಠಲನ ನಿಜಭಕುತ ||
36. ಶ್ರೀಹರಿ ಪ್ರಿಯ ಪರಮ ಮುಖ್ಯಪ್ರಾಣ |
ದೇಹದೊಳ ಹೊರಗೆ ನೆಲಸಿಹ ಪವಮಾನ ||
ಆ ವಾಯುನಿಂದಲೇ ಸಿಗುವುದು ಹರಿಕರುಣೆ |
ಸೀತಾಮಾತೆಗೆ ಅಂಗುಲೀಯನಿತ್ತವ ||
ಲಂಕೆಯನ್ನೇ ಸುಟ್ಟ ಧೀರ ಬಲವಂತ |
ಸೇತುವೆಯ ಕಟ್ಟಿ ರಾವಣನ ನಡುಗಿಸಿದ ||
ಮೆಚ್ಚಿ ಬ್ರಹ್ಮ ಪದವಿ ದಯಪಾಲಿಸಲು |
ನಿಜ ಭಕುತಿಯನೆ ಬೇಡಿದ ರಾಮದೂತ ||
ಅವನೇ ವೇದ ಶಾಸ್ತ್ರಸಾರವ ಧರಿಸಿದ |
ನಿಜ ಗುರು ಶ್ರೇಷ್ಠ ತ್ರೇತೆಯ ಹನುಮಂತ | || 1 ||
ಧರ್ಮಶಾಸ್ತ್ರ ಮಾರುತನೆ ದ್ವಾಪರದಲಿ |
ಧರ್ಮಜನ ಅನುಜನಾಗಿ ಪಾಂಡವನೆನಿಸಿದ ||
ಅವನೇ ರಕ್ಕಸರನು ತರಿದಟ್ಟಿದ ಬಲಭೀಮ |
ಉರಿವ ಅರಗಿನ ಮನೆಯಿಂದೆಲ್ಲರ ಪಾರುಗಾಣಿಸಿದ ವೃಕೋದರ ||
ದ್ರೌಪದಿಯ ಕರ ಪಿಡಿದು ಮನವನರಿತು |
ಕಿರ್ಮಿರಾದಿಗಳ ಮೆಟ್ಟಿ ಸೌಗಂಧಿಕವ ತಂದ ||
ಕೌರವ ಕುಲ ನಿರ್ನಾಮ ಮಾಡಿದ ಹರಿಯ ಕೃಪೆಯಲಿ | || 2 ||
ಕುಜನರು ಕಲಿಯುಗದೊಳು ಕುಮತ ಪಸರಿಸಲು |
ಸುಜ್ಞಾನಿಯು ತಾ ಮಧ್ವನಾಗಿ ಅವತರಿಸಿ ||
ಸರ್ವವ್ಯಾಪಿ, ಸರ್ವೋತ್ತಮನೇ ವಿಶ್ವಸತ್ಯ |
ಭುವಿಯಲಿ ಸರ್ವ ಸುಜನರಿಗೆ ಬೋಧಿಸಿ ||
ಬದರಿಕಾಶ್ರಮಕೆ ಪುನರಪಿ ತೆರಳಿ |
ವ್ಯಾಸಮುನಿ ಪದಕೆರಗಿ ಸಕಲ ವೇದಾರ್ಥಗಳ ||
ಬ್ರಹ್ಮಪಿತನಿಂ ತಿಳಿದು ಜಗತ್ತಿಗೇ ಸಾರಿದ |
ಪೂರ್ಣಪ್ರಜ್ಞರಿಗೆ ಬಾರಿಬಾರಿಗೆ ವಂದಿಪೆನು | || 3 ||
ಹನುಮ, ಭೀಮ, ಮಧ್ವಾವತಾರಾಂತ್ಮಕ |
ಶ್ರೀಕೃಷ್ಣವಿಟ್ಠಲ ಸಕಲರಿಗೂ ಮುಕ್ತಿಪಾಲಿಪ ||
ತ್ರೈಅವತಾರಿ ಶ್ರೀರಾಮದೂತಗೆ ಜಯಾಜಯಾ | || 4 ||
37. ಹನುಮಂತ ಧೀಮಂತ, ಇವನ ಸಾಮಥ್ರ್ಯ ಪೇಳಲೇನಿದೆ | || ಪ ||
ಎಷ್ಟು ಪೇಳಿದರೂ ಸಾಲದು | || ಅಪ ||
ಇವ ಹೇಳಿದಂತೆ ಕೇಳ್ವರು ಸುರರೆಲ್ಲ |
ಇವನಿದ್ದರವರೆಲ್ಲರ ಸಕಲ ಕ್ರಿಯೆಗಳೆಲ್ಲ ||
ಇವನಿದ್ದರೆ ಜೀವಿಗಳ ಜೀವನ |
ಇವನೆದ್ದರೆ ಎಲ್ಲ ಅಮಂಗಳವೇ | || 1 ||
ಸೇವೆಯ ಪರಾಕಾಷ್ಠೆಯಲಿ ಆನಂದ ಪಡೆವ |
ತ್ರೈವತಾರವೆತ್ತಿ ಪರಮಾತ್ಮನ ಸೇವೆ ಮಾಡಿದವ ||
ಅವಿರತ ಶ್ರೀರಾಮ ನಾಮ ಜಪಿಸುವ |
ಸರ್ವ ಶ್ರೇಷ್ಠ ಸ್ವಾತ್ಮಾಲಿಂಗನ ಪಡೆದವ | || 2 ||
ಜೀವನ ಬಾಧೆ ತಪ್ಪಿಸುವ |
ಭವದ ಕಡಲು ಪಾರುಗೈವ ||
ಈವ ಜ್ಞಾನ ಭಕುತಿ ವೈರಾಗ್ಯ |
ಒಯ್ವ ಶ್ರೀಕೃಷ್ಣವಿಟ್ಠಲನ ಸನ್ನಿಧಿಗೆ || || 3 ||
38. ಸಂಜೀವಿನಿ ತಂದು ಪ್ರಾಣ ಉಳುಹಿದ |
ಒಜ್ಜೆಯಾದವನ ನುಜ್ಜುಗುಜ್ಜಾಗಿಸಿದ ||
ಜಜ್ಜಿಹಾಕಿ ಕೀಚಕನ ಸತಿಯನುಳುಹಿದ |
ದುರ್ಜನರ ಒರೆಸಿ ಸೌಗಂಧಿಕವ ತಂದ ||
ಅಜ್ಞಾನ ಕಳೆವ ತತ್ವಜ್ಞಾನ ನೀಡಿದ |
ಸಜ್ಜನರಿಗೆ ದಾರಿದೀಪವಾದ ಜೀವೋತ್ತಮ ||
ಪೂಜಿಸಿ ಶ್ರೀಕೃಷ್ಣವಿಟ್ಠಲನ ಅನುಗ್ರಹ ಬಲದಿ ||