ಶ್ರೀ ಕೃಷ್ಣವಿಠ್ಠಲಪದಗುಚ್ಛ 3.1
1 ಚಕ್ರ- ಶಂಖಗಳ ಧರಿಸಿ ಸಾಧಕ |
ವಕ್ರವಿರದ ಊರ್ಧ್ವಪುಂಢ್ರವನಿಟ್ಟು ||
ಚಕ್ರಗಳಾರು ನಿರೋಧಿಸಿ |
ಚಕ್ರಾಬ್ಜ ಮಂಡಲ ರಚಿಸಿ ||
ನಕ್ರಹರನ ಸ್ಥಿರದಿ ನಿಲಿಸಿ|
ಚಕ್ರಾಕಾರದಿ (ಗೋಳಕ) ಸ್ಮರಿಸುತಾ ||
ಶಕ್ರಾಂತರ್ಗತ ರುದ್ರಾಂತರ್ಗತ |
ವಿಕ್ರಮ ತುರಂಗ ಮರುತಾಂತರ್ಗತ ||
ಚಕ್ರಧರ ಶ್ರೀಕೃಷ್ಣವಿಠ್ಠಲನ ಪೂಜಿಸೆ |
ಸಾಕ್ಷಾತ್ತಾಗಿ ಒಲಿದು ವರವ ನೀಡುವಾ |
2 ಪಾದದಿಂ ಶಿರದವರೆಗೆ ಸಕಲಲೋಕ ಚಿಂತಿಸಿ ||
ಪಾದತಲದಲ್ಲಿರುವುದೇ ಪಾತಾಳ |
ಅದರ ಮೇಲೆ ಹಿಮ್ಮಡಿಯಲಿ ರಸಾತಲ ||
ನೋಡಲದರ ಮೇಲೆ ಮಹಾತಲ |
ಉದ್ದಕೆ ಮೀನು ಖಂಡದಿ ತಲಾ ತಲ ||
ಗುಂಡಗಿನ ಮೊಣಕಾಲಲಿ ಸುತಲ |
ತೊಡೆಯಲ್ಲಿ ಅತಲ-ವಿತಲಗಳು ||
ಇದೆ ಸೊಂಟದಲಿ ಭೂಲೋಕ |
ಇದರ ಮೇಲೆ ನಾಭಿಯಲಿ ಅಂತರಿಕ್ಷ ||
ಎದೆಯ ಭಾಗದಿ ಇಹುದು ಸ್ವರ್ಗ |
ಸಿದ್ಧವಾಗಿದೆ ಕಂಠದಿ ಮಹರ್ಲೋಕ ||
ಪೊಂದಿದೆ ಮುಖದಿ ಜನೋಲೋಕ |
ಅಂದದಿ ಹಣೆಯಭಾಗದಿ ಶೋಭಿಪ ತಪೋಲೋಕ ||
ಮುಂದೆ ಶಿರಸ್ಸಿನಲಿ ಸತ್ಯಲೋಕವು |
ಹದಿನಾಲ್ಕು ಲೋಕಗಳ ಪೊತ್ತವನ ||
ಅಂದಿನ ಕ್ರಿಯಾವಸಾನವಾಗಲು ಬಿಡದೆನಿತ್ಯ |
ಒಂದೇ ಮನದಿಂ ಸ್ಮರಿಸಲು ವಿರಾಡ್ರೂಪವ ಕ್ರಿಯಾವಸಾನದಿ ||
ಬಂದು ಸದಾ ಪೊರೆವ ಶ್ರೀಕೃಷ್ಣವಿಠ್ಠಲ ||
3. ಅವನಿಯೊಳು ಗಂಧವಿಟ್ಟೆ ಗರ್ಭದಿ ಜೀವವಿಟ್ಟೆ |
ಆ ವನದೊಳು ರಸವಿಟ್ಟೆ ಅದರಲಿ ರುಚಿಯಿಟ್ಟೆ ||
ಉಜ್ವಲ ಶಿಖೆಯಲಿ ರೂಪವಿಟ್ಟೆ ಜೊತೆ ಶಾಖವಿಟ್ಟೆ |
ಪವನನಲಿ ಸ್ಪರ್ಶವಿಟ್ಟೆ ಅದರಲಿ ಅರಿವಿಟ್ಟೆ ||
ಭವ್ಯ ಆಗಸದಿ ಶಬ್ದವಿಟ್ಟೆ ಸುವಿಶಾಲ ಭಾವವಿಟ್ಟೆ |
ಅವ್ಯಕ್ತಾವ್ಯಕ್ತ ಶ್ರೀಕೃಷ್ಣವಿಠ್ಠಲನೇ ಎನ್ನಲಿ ಏನಿಟ್ಟೆ ತಿಳಿಸು ||
4 ಒಲಿದು ಬಾರೋ, ಒಲಿದು ಬಾರೋ ||ಪ||
ಸಲ ಪ್ರತಿ ಸಲ ಒಲಿದು ಬಾರೋ ಚೆನ್ನ ||ಅಪ||
ಅಜಮಿಳನ ತಪ್ಪು ನೋಡದೆ ಒಲಿದಂತೆ |
ಗಜೇಂದ್ರನ ಆರ್ತತೆಗೆ ಒಲಿದಂತೆ ||1||
ದ್ರೌಪದಿಯ ಕೂಗಿಗೆ ಓಡಿ ಬಂದಂತೆ |
ತಪಕೆ ಮೆಚ್ಚಿ ಬಾಲಕನೆಡೆ ಬಂದಂತೆ ||2||
ಗರ್ಭಸ್ಥ ಶಿಶುವ ಸುತ್ತಿ ಸುತ್ತಿ ರಕ್ಷಿಸಿದವನೇ |
ಗರ್ಭರಹಿತ ಶ್ರೀಕೃಷ್ಣವಿಠ್ಠಲ ಎನ್ನನ್ನೂ ಗರ್ಭರಹಿತಳನ್ನಾಗಿಸು ||3||
5 ಸಹಿಸೆನು ಗರ್ಭವಾಸ ದು:ಖವ |
ವಹಿಸೆನು ಸಂಸಾರದ ದುರ್ಭರ ಭಾರವ ||
ದಹಿಸೆನ್ನ ಪ್ರಾರಬ್ಧ ಕರ್ಮಗಳನ್ನೆಲ್ಲ |
ಅಹಿಶಯನ ಶ್ರೀಕೃಷ್ಣವಿಠ್ಠಲ ಇರಿಸಿಕೋ ನಿನ್ನಲ್ಲೇ ಸದಾ ||
6 ಶ್ರೀಗಂಧ ತಾನು ಸವೆದರೂ ಪರಿಮಳ ಪಸರಿಸುವುದು |
ಸಂಗ್ರಹಿಸಿದ ಜೇನು ಪರರಿಗೆ ನೀಡುವುದು ಹುಳು || 1||
ಮಡಿವಸ್ತ್ರವಾಗುವುದು ತನ್ನ ಪ್ರಾಣ ತೆತ್ತು |
ನೀಡಿ ತನ್ನರಕ್ತ ಕ್ಷೀರ ರೂಪದಿ ಸಕಲರ ಸಲುಹುದು || 2 ||
ಮಾನವ ಸ್ವಾರ್ಥಿಯಾಗದೇ ನಿ:ಸ್ವಾರ್ಥಿಯಾಗು |
ಹೀನ ಬದುಕಿಗಿಂತ ತ್ಯಾಗಮಯಿಯಾಗು || 3 ||
ಪರಮದಯದಿ ಸಿಕ್ಕ ಈ ಅವಕಾಶದಿ |
ಗುರಿಯಾಗಿಸಿ ಶ್ರೀಕೃಷ್ನವಿಠ್ಠಲನ ಧ್ಯಾನಿಯಾಗು || 4 ||
7 ಇದು ಯಾರ ದೇಹ, ನನ್ನದೋ ಮತ್ತ್ಯಾರದೋ ತಿಳಿಯದಲ್ಲ ? |
ಈ ದೇಹ ನನ್ನ ವೀರ್ಯದೊಂದ ಹುಟ್ಟಿದೆ ಎಂದ ತಂದೆ ||
ಈ ದೇಹ ನನ್ನ ಗರ್ಭದಲಿ ಬೆಳೆದಿದೆ ಎಂದ ಜನನಿ |
ಈ ದೇಹ ನಾ ಕೊಟ್ಟ ಅನ್ನದಿಂದ ಬೆಳೆದಿದೆ ಎಂದ ಅನ್ನದಾತ ||
ಈ ದೇಹ ನನ್ನದಾಗಲು ಎಷ್ಟು ಶ್ರಮಿಸಿದ್ದೆನೆಂದೆಳರ್ಧಾಂಗಿ |
ಈ ದೇಹ ಸತ್ತ ಮೇಲೆ ನಾ ಸುಡುವೆನೆಂದ ಅಗ್ನಿ ||
ಈ ದೇಹ ಕೊಳೆತರೆ ನನ್ನ ವಶವೆಂದ ಕ್ರಿಮಿಗಳು |
ಈ ದೇಹ ಕೊಳೆಯದಿರೆ ನಮ್ಮ ವಶವೆಂದ ನಾಯಿ-ನರಿಗಳು ||
ಈ ದೇಹ ನನ್ನಾಧೀನ ಎಂದ ಪ್ರತಿದಿನ ದುಡಿತಕೆ ಹಣವಿತ್ತವ ||
ಈ ದೇಹ ಯಾರದೆಂಬುದೇ ನಿರ್ಣಯವಾಗದಿರೆ ಈ ಅಹಂ ಏಕೆ ?||
ಇದಕ್ಕಾಗಿ ಮಾಡುವ ಮೋಸ, ಸ್ವಾರ್ಥಗಳೇಕೆ |
ಮದತರುವ ಮೋಹವೇಕೆ ? ಸುಂದರತೆಗಾಗಿ ಶ್ರಮಿಸುವುದೇಕೆ ? ||
ಬಿದ್ದು ಹೋಗುವ ದೇಹದ ಮೇಲೆ ದುರಭಿಮಾನವೇಕೆ ? |
ಸದಾ ಪಾಪ-ಶಾಪಕೆ
ಈಡಾಗುವ ಈ ದೇಹ ಬೇಡವೆನಗೆ ||
ಎಂದೂ ನಿನ್ನನ್ನೇ ಸ್ಮರಿಸುವ, ಕಾಣುವ ಯೋಗವೆನೆಗಿರಲಿ |
ಬಂದಿದ್ದಕ್ಕೆ ಪ್ರತಿ ಜನ್ಮ ಸಾರ್ಥಕವಾಗುವಂತೆ ಮಾಡೋ ಶ್ರೀಕೃಷ್ಣವಿಠ್ಠಲ ||
8. ನಿಲ್ಲಿಲು ನೆಲ ಬೇಕು |
ಕುಳ್ಳಿರಲು ನೆಲ ಬೇಕು ||
ಮಲಗಲು ನೆಲಬೇಕು |
ಕಾಲಿಟ್ಟು ಓಡಲೂ ನೆಲಬೇಕು ||
ಬೆಳೆಬಂದರೆ ಮಾತ್ರ ತಿನ್ನಲು ಅನ್ನ |
ನೆಲದ ನೆಲೆ ಇ,ಲ್ಲದಿರೆ ಇರಲು ಸಾಧ್ಯವೇ ? ||
ಕುಲ ಗೋತ್ತಿರದಿದ್ದರೂ ನೆಲೆಗೊತ್ತಿದೆ |
ನೆಲೆಯ ಬೆಲೆ ಗೊತ್ತಿದ್ದರೂ ||
ಅಲಕ್ಷ್ಯ ಹಾಗೂ ಸದಾ ಉದಾಸೀನ |
ಹೇಳುವುದಕ್ಕೆ ಮಾತ್ರ ನೆಲವೇ ಜನನಿ ಎಂದು ||
ಕೆಲಸಕ್ಕೆ, ಬದುಕಲಿಕ್ಕೆ ಎರಡೂ ಬೇಕು ||
ಹೊಲಸು ಮಾಡಲು ಸದಾ ಸಿದ್ದ |
ಕೀಳಾಗಿ ಬಯ್ಯಲಿಕ್ಕೂ ಇವೇ ಎರಡು ಬೇಕು |
ಕಾಲಿನಿಂದ ವದೆದರೂ, ಪ್ರೀತಿಯಿಂದ ಕಾಣುವವು ||
ಒಲವಿಂದ ಈ ವಿಪರೀತದ ಅರ್ಥಮಾಡಿಸು |
ಆಲದೆಲೆ ಮೇಲೆ ಪವಡಿಸಿದ ಶ್ರೀಕೃಷ್ಣವಿಠ್ಠಲನೇ ||
9 ಯತಿ ಶ್ರೀ ರಾಘವೇಂದ್ರ ಸಕಲರ ಪೊರೆಯುವ ||ಪ||
ದ್ವೈತಮತೋದ್ಧಾರಕ ಸುಜ್ಞಾನಿ ಪರಮವೈರಾಗಿ || ಅಪ||
ಮಂತ್ರಾಲಯದಿ ಕುಳಿತಿಹರು ಗುರುರಾಯರು |
ಸಂತರಮಣನ ಜಪಿಸುತ ವೃಂದಾವನದೊಳು ||
ಪತಿತರ ಪಾವನಗೊಳಿಸುತ, ಹೀನ ದು:ಖಿತರ ಸಲಹುತ |
ಸತತ ಸಕಲರ ಮನದಿಚ್ಛೆ ಪೂರೈಸುತ ||1||
ಸುರಿಸುತ ವರಗಳ ನಿರುತ ರಕ್ಷಿಪ ಭಕ್ತರ |
ಪರಿಪರಿಯಿಂದ ಸಕಲರ ಪಾಲಿಸುತ ||
ಬರೆದಿಹುರು ಪಂಚಾಶತ ಮೇಲಾರು ಗ್ರಂಥಗಳ |
ಪರಿಮಳ ಸೂಸಿದರು ನ್ಯಾಯ ಸುಧೆಯ ||2||
ಕಷ್ಟ ಕಾರ್ಪಣ್ಯದಿ ತಾ ದಿನ ನೂಕಿದರೂ |
ಇಷ್ಟಪುಣ್ಯವ ಹಂಚಿಉದ್ಧರಿಸುತರಲ್ಲರೆ ||
ದಿಟ್ಟತನದಿ ಸಜೀವ ವೃಂದಾವನಸ್ಥರಾದರು |
ಶಿಷ್ಟ ಪರಿಪಾಲಕ ಶ್ರೀಕೃಷ್ನವಿಠ್ಠಲನ ನಿಜಭಕುತ ||3||
. ಇರವಿದ್ದರೆ ಸಾಲದು |
ಇರವಿನ ಅರಿವುಬೇಕು ||
ಅರಿವಿಗೆ ಗುರುಬೇಕು |
ಗುರುವಿನ ಗುರು ಜಗದ್ಗುರು ||
ಶ್ರೀಕೃಷ್ಣವಿಠ್ಠಲನ ಅನುಗ್ರಹಬೇಕು ||
11 ಎದ್ದು ಶ್ರೀಕೃಷ್ಣನ ಸುಪ್ರಭಾತ ಕೇಳುತ್ತಾ |
ವಂದಿಸಿ ಧರಣಿಯ ಕ್ಷಮೆ ಕೋರುತ್ತಾ ||
ಮಧ್ವ ಸರೋವರದಿ ಸ್ನಾನವ ಮಾಡಿ |
ಶುದ್ಧ ವಸನ ಧರಿಸಿ ಬೇಗನೆ ||
ಮುದ್ದು ಶ್ರೀಕೃಷ್ಣ ವಿಠಲನ ದರುಶನಮಾಡಿ |
ನಿಂದು ಸಕಲ ಪೂಜೆಯ ನೋಡಿ |
ಮುದದಿ ಅಲಂಕಾರದಿ ಮೈವೆತ್ತಿನಿಂತ |
ಮಧ್ವೇಶ ಉಡುಪಿ ಶ್ರೀಕೃಷ್ಣವಿಠ್ಠಲನ ||
ನೋಡಿ ನಾ ಧನ್ಯನಾದೆ ||
12 ಮಧ್ವ ಸಿಂಹಾಸನದಿ ವಿರಾಜಿಪರ |
ಕಂಡು ಶ್ರೀ ವಿಶ್ವೇಶತೀರ್ಥರ ಧನ್ಯತೆಯಲಿ ||
ಪಡೆದು ತೀರ್ಥ, ಗುರುಗಳಾಶೀರ್ವಾದ ಸಹಿತ |
ನಡೆತಂದು ಚೌಕಿಯ ಭೋಜನಕೆ ||
ವಂದಿಸಿ ಗುರುಳೊಂದಿಗೆ ಸಹಭೋಜನ |
ಮಾಡಿ ನಂತರ ಮಂತ್ರಾಕ್ಷತೆ ಪ್ರಸಾದ ||
ಪಡೆದಿದ್ದೇ ಶ್ರೀಕೃಷ್ನವಿಠ್ಠಲನ ಅನುಗ್ರಹದಿ ||
13. ಶ್ರೀ ವಿಶ್ವೇಶತೀರ್ಥರ ಸಮ್ಮುಖದಿ |
ಸುವಿಶೇಷದಿ ಉಪನ್ಯಾಸ ಮಾಡಿದ್ದೇ ಪುಣ್ಯ ||
ಭವದಿ ಹರಿದಾಸರು ಪಾಡಿದ ಶ್ರೀರಾಘವೇಂದ್ರತೀರ್ಥರ |
ಸುವರ್ಣಿಸಿ ವಾಕ್ ಶುದ್ಧಿ ಪಡೆಡಿದ್ದೇ ಪುಣ್ಯಪ್ರದ ||
ದಿವ್ಯಪ್ರಸನ್ನತೆಯಲಿ ಆಲಿಸಿ ಧ್ವನಿಸಾಂದ್ರತೆ |
ಮೆಚ್ಚಿ ಬಿಡುಗಡೆಮಾಡಿದರು ಗುರುಗಳು ಸಭೆಯಲಿ ||
ಚಾರ್ವಾಂಗ ಶ್ರೀಕೃಷ್ಣವಿಠ್ಠಲನ ಶೇಷ ವಸ್ತ್ರವಿತ್ತು ಹರಿಸಿದರು ||
14. ಪುರ್ವಜನ್ಮಕೃತ ಪುಣ್ಯದ ಬಲದಿಂ |
ಅವಕಾಶ ದೊರೆಯತೆನಗೆ ಮುತ್ತೈದೆಯರ ಸತ್ಸಂಗ ||
ಸಾವಿರ ಸ್ತ್ರೀಯರ ಜೊತೆ ಶ್ರೀ ಲಕ್ಷ್ಮೀ ಶೋಭಾನ ಪಠಿಸಿದೆ |
ಶ್ರೀ ವಿಶ್ವೇಶತೀರ್ಥರ ಉಪಸ್ಥಿತಿಯಲಿ ಮುದದಿ ||
ಶ್ರಾವಣ ಬಹುಳ ಶುಕ್ರವಾರದ ಸಂಜೆಯಲಿ |
ಸರ್ವ ಮುತ್ತೈದೆಯರ ಆಶೀರ್ವಾದದ ಸಂಗದಿ ||
ಶ್ರೀವಿಶ್ವಪ್ರಸನ್ನತೀರ್ಥರಿಂದ ದಕ್ಷಿಣೆಸಹಿತ ಪ್ರಸಾದ ಸ್ವೀಕರಿಸಿ |
ಭವತಾರಕ ಬಿಂಬಸ್ಥ ಶ್ರೀಕೃಷ್ಣವಿಠ್ಠಲಗರ್ಪಿಸಿ ಧನ್ಯಳಾದೆ ||
15. ಗೋದಾನ ಸಹಿತ ನವನೀತ ಸೇವೆ ಅರ್ಪಿಸಿ |
ಮುದದಿ ಪ್ರದಕ್ಷಿಣೆ, ದಕ್ಷಿಣೆ ಸಮರ್ಪಿಸಿ ||
ಮುದ್ದು ಶ್ರೀಕೃಷ್ಣಣಪ್ರಸಾದ ಮಿಷ್ಟಾನ್ನಭುಂಜಿಸಿ |
ಹಿಂದಿನ ದಿನ ಅಲಂಕರಿಸಿದ ಸೀರೆ ಪ್ರಸಾದದಿ ||
ಪಡೆದು ಶ್ರೀವಿಶ್ವೇಶತೀರ್ಥ ಗುರುಗಳಿಂದ |
ಹೃದಯ, ಮನತುಂಬಿ ತೃಪ್ತಿಯಾಯಿತು ||
ಮಾಡಿ ಪುನ: ಶ್ರೀಕೃಷ್ಣವಿಠ್ಠಲನ ದರುಶನ |
ಉಡುಪಿಯ ಯಾತ್ರೆಯಲಿ ಪುಣ್ಯದಿ ದೊರೆತ ||
ಸದವಕಾಶದಿಂದೆನ್ನ ಜನುಮ ಸಾರ್ಥಕವಾಯಿತು ||
16. ಬಾಲಕೃಷ್ಣನಿರಲಿ, ಮುರಳಿ ಮನೋಹರನಿರಲಿ |
ಕಾಲಕಾಲಕೆ ತೋರಿದ ಲೀಲೆಗಳ ಅಮಿತಾನಂದ ||
ನಿಲುವ ಸದಾ ಒಂದೇ ಮನದಿ ನೆನೆಯಲು |
ಚೆಲುವ ಶ್ರೀಕೃಷ್ನವಿಠ್ಠಲ ಒಲಿವ ತನ್ನ ನೆನೆವರ ||
17. ಕೃಷ್ಣನ ನೆನೆಯಿರಿ ಸದಾ ಕೃಷ್ನನ ನೆನೆಯಿರಿ ||ಪ||
ಕಷ್ಟತಾರಕ ಇಷ್ಟ ಪ್ರದಾಯಕ ಆಪದ್ಬಾಂಧವ ||ಅಪ||
ಈ ಲೋಕದಿ ಕೈಪಿಡಿಸು ನಡೆಸುವವ |
ಒಲವಿಂದ ಸಲಹುವ ನಿರುತ ಕರುಣದಿ ||
ನಿಲುವ ಮನ, ಚಿತ್ತ, ಬುದ್ಧಿಯಲಿ |
ಸಲ್ಲುವ ಕಾರ್ಯವನೇ ಸದಾ ಮಾಡಿಸುವ || 1 ||
ಒಲ್ಲೆನೆಂದರೂ ಪ್ರಾರಬ್ಧ ತಪ್ಪದು |
ಬಲ್ಲ ನಿವ, ಮರ್ದಿಸು ಮಣಿಸುವ ||
ಎಲ್ಲ ಸಹಿಸಲು ಶಕ್ತಿಯನೀವ |
ಒಲಿದು ಗುಡ್ಡದಷ್ಟನ್ನು ಕಡ್ಡಿಯಾಗುಸುವ || 2 ||
ಸುಖದಿ ನೆನೆದರೆ ಕಷ್ಟ ಬರಲೀಸ |
ದು:ಖದಿ ನೆನೆದರೆ ಸುಖವ ಕೊಡುವ ||
ಅಖಿಲ ಕಾರ್ಯಕಾರಣಕರ್ತನೆಂದು |
ಸಖ ಶ್ರೀಕೃಷ್ಣವಿಠ್ಠಲನ ಎಂದೂ ಮರೆಯದೆ || 3 ||
18. ಸಕಲ ಅಕ್ಷರಗಳು ಅವನನ್ನೆಪೇಳುವುದು |
ಸಕಲ ಶಬ್ದಗಳು ಅವನನ್ನೇ ಪೇಳುವುದು ||
ಸಕಲ ಸ್ವರಗಳು ಅವನನ್ನೇ ಪೇಳುವುದು |
ಅಖಿಲವೂ ಅವನನ್ನೇ ಪೇಳುವಾಗ ವ್ಯರ್ಥವಾಗಿಸದೆ ||
ನಿಖಿಲ ಪದಗಳೂ ಅವನ ಪೂಜೆಯಾಗಬೇಕು |
ದುಷ್ಕಾಲದಲ್ಲೂ ಅಪಶಬ್ದ ಬರಬಾರದು ||
ಅಕ್ಷರ ಪೂಜೆಯೆ ಜೀವನದ ಲಕ್ಷ್ಯವಾಗಿರಲಿ |
ಆಕಾಶಾಧಿಪತಿ ಯಾದವ ಅನಾದಿ ಅಂತ್ಯರಹಿತ ||
ಶ್ರೀಕೃಷ್ಣವಿಠ್ಠಲನ ಪೂಜೆಎಂಬ ಅರಿವಿರಲಿ ||
19 ನೀನೇ ತಂದೆ, ನೀನೇ ತಾಯಿ |
ನೀನೇ ಬಂಧು, ನೀನೇ ಬಳಗ ||
ನೀನೇ ದಿಕ್ಕು, ನೀನೇ ಜಗತ್ತು |
ನೀನೇ ಕಾರ್ಯ, ನೀನೇ ಕಾರಣ ||
ನೀನೇ ಹಸಿವು, ನೀನೇ ಅನ್ನ |
ನೀನೇ ಉಸಿರು, ನೀನೇ ಪ್ರಾಣ ||
ನೀನೇ ಶಕ್ತಿ, ನೀನೇ ಭಕ್ತಿ |
ನೀನೇ ಬುದ್ಧಿ, ನೀನೇ ಚಿತ್ತ ||
ನೀನೇ ಜಾಗ್ರತ, ನೀನೆ ಸುಷುಪ್ತಿ |
ನೀನೇ ಸ್ವಪ್ನ, ನೀನೇ ಕರ್ತೃ||
ನೀನೇ ಸ್ಮರಣ, ನೀನೇ ವಿಸ್ಮರಣ |
ನೀನೇ ಒಳಗೂ, ನೀನೇ ಹೊರಗೂ ||
ನೀನೇ ದೇಹ, ನೀನೇ ಆತ್ಮ |
ನೀನೇ ನಿಧಿ, ನೀನೇ ಸಾಧನ ||
ನೀನೇ ಸುಖ, ನೀನೇ ಕಷ್ಟ |
ನೀನೇ ಕೋಪ, ನೀನೇ ಶಾಂತ ||
ನೀನೇ ಮಾತು, ನೀನೇ ಮೌನ |
ನೀನೇ ನೆಲೆ, ನೀನೇ ಆಶ್ರಯ ||
ನೀನೇ ಸೃಷ್ಟಿ, ನೀನೇ ಲಯ |
ನಿನ್ನ ಬಿಟ್ಟರನ್ಯರಿಲ್ಲ, ನೀನೇ ಎಲ್ಲ ||
ನೀನೇ ಇಲ್ಲೂ, ನೀನೇ ಅಲ್ಲೂ |
ನೀನೇ ಎಲ್ಲಲ್ಲೂ ಶ್ರೀಕೃಷ್ಣವಿಠ್ಠಲ ||
ನಿನಗೇ ಸಕಲ ಸಮರ್ಪಣೆ |
ನೀನೇ ಉದ್ಧರಿಸೋ ಸದಾ ಸರ್ವದಾ||
20. ಹರೇ ರಾಮ ಹರೇ ರಾಮ ರಾಮ ರಾಮ ಹರೇ |
ಹರೇ ಕೃಷ್ಣ ಹರೇ ಕೃಷ್ಣ ರಾಮ ಕೃಷ್ಣ ಹರೇ ||
ಮಾಧವ ಮಧುಸೂದನ ಗೋವಿಂದ ಮುಕುಂದ |
ನರಹರಿ ಮುರಾರೇ ವಾಸುದೇವ ಶ್ರೀಕೃಷ್ಣವಿಠ್ಠಲ |
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ||
ಶ್ರೀಕೃಷ್ಣವಿಠ್ಠಲ ಶ್ರೀಕೃಷ್ಣವಿಠ್ಠಲ, ಶ್ರೀಕೃಷ್ಣವಿಠ್ಠಲ ||
21. ಎನ್ನ ಪುಟ್ಟಿಸಿದವgÁåರೋ, ಸಲಹಿದವgÁåರೋ |
ಎನಗೆ ವಿದ್ಯೆವಿತ್ತವgÁåರೋ, ಬುದ್ಧಿಯಿತ್ತವgÁåರೋ ||
ಎನ್ನ ಒಡಲಿಗ್ಹಾಕಿದವgÁåರೋ, ವಸ್ತ್ರವಿತ್ತgÁåರೋ |
ಎನಗೆ ಸಂಪತ್ತಿತ್ತವgÁåರೋ, ಮಕ್ಕಳ ಭಾಗ್ಯವಿತ್ತವgÁåರೋ ||
ಎನ್ನ ಸುಖ-ದುಖ:ಕ್ಕೆ ಮೂಲgÁåರೋ, ಸಂತೈಸಿದವgÁåರೋ |
ಎನಗೆ ತಿಳಿದಂತೆ, ತಿಳಿಯದಂತೆ ಉಪಕರಿಸಿದವgÁåರೋ||
ಎನಗೆ ಹೆಜ್ಜೆ ಹೆಜ್ಜೆಗೆ ಕಲಿಸಿದ ಗುರುಗಳ್ಯಾgÁåರೋ |
ಎನ್ನ ತಿದ್ದಿ ಮೂರ್ತಿ ಮಾಡಿದವgÁågÁåರೋ ||
ಎನ್ನ ಕೈ ಪಿಡಿದು ಕಾಪಾಡಿದವರ ಲೆಕ್ಕವಿಲ್ಲ |
ನೀನೇ ಸರ್ವರೊಳಿದ್ದು ಮಾಡಿ ಮಾಡಿಸಿದ್ದು ವಿದಿತ ||
ಎನ್ನ ಬಲ್ಲ ಶ್ರೀಕೃಷ್ಣವಿಠ್ಠಲ ಸರ್ವರನೂ ಸಲಹೋ ಸ್ವಾಮಿ ||
22. ಇಲ್ಲೂ ಭಯವಿಲ್ಲ, ಅಲ್ಲೂ ಭಯವಿಲ್ಲ |
ಎಲ್ಲಲ್ಲೂ ನೀನೇ ಇರಲಾಗಿ, ಎನಗೇತರ ಭಯ?||
ಕಳ್ಳರ ಭಯವಿಲ್ಲ, ಸುಳ್ಳರ ಭಯವಿಲ್ಲ |
ಮಲ್ಲ ಜನರ ಭಯವಿಲ್ಲ, ಒಳ್ಳೆಯವರ ಭಯವಿಲ್ಲ ||
ಒಲವಿಂದ ಸಲಹುವ ಶ್ರೀಕೃಷ್ಣವಿಠ್ಠಲನಿರುವಾಗ ಯಾವಭಯ || ಎಲ್ಲಿಯ ಭಯ |
23. ಅಲ್ಲಿ ಇಲ್ಲಿ ಸುಳಿವ ಚಂಚಲಮನ |
ಚಲ ಅಚಲ ವಸ್ತುಗಳಲಿ ಓಡುವುದು ||
ಕಾಲ-ಕಾಲಕೆ ಎಳೆತಂದು ಬೇಗ |
ನಿಲ್ಲಿಸು ನಿನ್ನಲ್ಲೇ ಚಿತ್ತ ಚೋರನೇ ||
ಶ್ರೀಲಕ್ಷ್ಮೀನಲ್ಲ ಶ್ರೀಕೃಷ್ಣವಿಠ್ಠಲ ಮನದೊಡೆಯ ನೀನಲ್ಲವೆ ? ||
24. ಬೇಡುವವರನೇಕರು, ನೀಡುವವ ನೀನೇಬ್ಬನೇ |
ಕಾಡುವವರನೇಕರು, ಒಡೆಯ ನೀನೊಬ್ಬನೇ ||
ಕೊಡುವವ ಒಬ್ಬನೇ, ಹೇಗೆ ಮಾಡಲಿ ಎಂದೆನ್ನದೇ |
ಬಿಡದೆ ಕಾಪಾಡುವ ನಿನಗೆ, ಅನಂತರೂಪ, ಅನಂತಹಸ್ತವಿರೇ ||
ತಡ ಮಾಡದೇ ಸಕಲರನುದ್ಧರಿಸು ಶ್ರೀಕೃಷ್ಣವಿಠ್ಠಲ ನಿನ್ನ ಬಿಟ್ಟರನ್ಯರಿಲ್ಲ ||
25. ಬೆರಳುಗಳೈದು ಒಂದು ಕೈಯಲಿ |
ತೋರುವುದು ಬಹುಪಯೋಗವ ||
ಇರುವುದು ಪಂಚತತ್ವಗಳಲ್ಲಿ |
ಮುದ್ರೆಮಾಡಲು ವಿಧವಿಧದಿ ||
ಆರೋಗ್ಯಕರ ಜೀವನವೀವುದು |
ಅರುಹುವುದು ಪಂಚತಾರತಮ್ಯವ ||
ಎರಡೂ ಕೈ ಜೋಡಿಸಲು ವಿನಮ್ರದಿ |
ಶ್ರೀಕೃಷ್ಣವಿಠ್ಠಲ ಒಲಿದು ಮೆರೆಸುವ ||
26. ದು:ಖನುಭವ ಸುಖದ ಪ್ರಾಪ್ತಿಗೆ ಕಾರಣ |
ದು:ಖಾನಂತರ ಸುಖ ಜೀವನವು ನಿಯಮ ||ಪ||
ಸುಖ-ದು:ಖಕೆ ಪೂರ್ವಜನುಮದ ಪ್ರಾರಬ್ಧವೇ ಕಾರಣ ||ಅಪ||
ನಕ್ರ ಕಾಲ್ಪಿಡಿಯಲು ಗಜನ ಮದವಡಗಿ |
ವಕ್ರಬುದ್ಧಿ ಸರಿಯಾಗಿ ಶ್ರೀಹರಿ ದರುಶನವಾಲಯಿತು ||1||
ತಂದೆ ಕೊಟ್ಟ ನಾನಾ ಬಗೆ ಶಿಕ್ಷೆ ಸಹಿಸಲು |
ಕಂದಗೆ ಶ್ರೀ ನರಸಿಂಹನ ಅನುಗ್ರಹವಾಯಿತು ||2||
ಪತಿಯ ಶಾಪದಿ ದು:ಖಿತಳಾಗಿ ಕಲ್ಲಾದ |
ಸತಿಗೆ ಶ್ರೀರಾಮನ ಸಂದರುಶನವಾಯಿತು ||3||
ಮಾತೆಯ ಮಾತಿಗೆ ದು:ಖಿತನಾಗಿ ತಪಗೈದ |
ಸುತ ಧ್ರುವಗೆ ಶ್ರೀಮನ್ನಾರಾಯಣ ದರುಶನವಿತ್ತ ||4||
ಮರವಾಗಿ ನಿಂತ ಶಾಪಿತ ನಳಕೂಬರು |
ಶ್ರೀಕೃಷ್ಣವಿಠ್ಠಲನ ಸ್ಪರ್ಶದಿ ವಿಮುಕ್ತರಾದರು ||5||
27. ದು:ಖದಿ ದೈವವ ಹಳಿಯುವ ಮನುಜ |
ಸುಖದಿ ತನ್ನನ್ನೇ ಬಣ್ಣಿಸಿಕೊಳ್ಳುವುದ ಬಿಟ್ಟು ||
ಸುಖ-ದು:ಖ ಎರಡನ್ನೂ ಸಮಾನದಿ ಸ್ವೀಕರಿಸುತ |
ಅಖಿಲಕೂ ಪ್ರಾರಬ್ಧವೇ ಕಾರಣವೆಂದು ತಿಳಿದು ||
ಸಖ, ಶ್ರೀಕೃಷ್ಣವಿಠ್ಠಲನೇ ಪರದೈವ, ಸದಾಕಾಯ್ವ ಎಂದುನಂಬು ||
28. ಅನ್ಯ ಜನುಮವೇಕೆ- ಸಾಧನಾ ಜನುಮವಿರಲು |
ಅನ್ಯಮತಗಳೇಕೆ- ಮಧ್ವಮತವಿರಲು ||
ಅನ್ಯ ಶಾಸ್ತ್ರಗಳೇಕೆ- ಶುಕ ಶಾಸ್ತ್ರವಿರಲು |
ಅನ್ಯ ಗ್ರಂಥಗಳೇಕೆ- ಬ್ರಹ್ಮ ಸೂತ್ರವಿರಲು ||
ಅನ್ಯ ಬಯಕೆ ಏಕೆ- ಮೋಕ್ಷದ ಗುರಿ ಇರಲು |
ಅನ್ಯಗುರುಗಳೇಕೆ- ಸುಖತೀರ್ಥರಿರಲು ||
ಅನ್ಯದೈವವೇಕೆ- ಶ್ರೀಕೃಷ್ಣವಿಠ್ಠಲನೇ ಇರಲು ||
29. ನಿನ್ನ ಬಿಟ್ಟರನ್ಯ ದೈವವಿಲ್ಲ |
ಅನ್ಯ ಭಜಿಸಿದರೆ ಅಲ್ಪ ಫಲ ||
ನಿನ್ನ ಭಜಿಸಿದರೆ ಮಹಾಫಲ |
ಸನ್ನುತ ಶ್ರೀಕೃಷ್ನವಿಠ್ಠಲನಾಲಯದಿ ನಲಿವ ||
30. ಸಂಸಾರ ದಾಟಿದವರ ಊರುಗೋಲಾಗಿ |
ಸಸಾರದಿ ಅವರ ಅವಚಿಗೊಂಬೆ ||
ಅಸುರರ ದಾಮದಿ ಬಂಧಿಸಿ ಕೆಳಗಿರಿಸುವೆ |
ಮಿಶ್ರರ ಎನ್ನಕೃಪಾದೃಷ್ಟಿಯಿಂ ವೀಕ್ಷಿಸುವೆಂಬ ||
ಸುಸಂದೇಶವೀಯುತ ರಜತಪೀಠದಿ |
ಸುಸ್ಮಿತ ಬಾಲ ಶ್ರೀಕೃಷ್ಣವಿಠ್ಠಲನಿಂತಿರುವ ಸದಾ ||
31 ಭದ್ರೇ, ದಿತಿಯು ಇಂದ್ರ ಸಂಹಾರಕ |
ಪುತ್ರಬೇಕೆಂದು ಪುಂಸವನ ಆಚರಿಸಿದಳು ||
ಸರಿ ರಾತ್ರಿಯಲಿ ದಿತಿಯ ಗರ್ಭಪ್ರವೇಶಿಸಿ |
ಗರ್ಭವ ಚೂರಾಗಿಸಿದ ಏಳು ಏಳರಂತೆ ||
ಮಾsರುದ ಎನ್ನುತ ಅಳಲು ನೀಗಿಸಿದ |
ಹಿರಿಯ ತಾನಾಗಿ ತನ್ನ ತಮ್ಮಂದಿರನ್ನಾಗಿಸಿದ ||
ತೋರು ಬೆರಳಿಂದ ಕ್ಷೀರಪಾನ ಮಾಡಿಸಿದ | (ಮಾಂಧಾತ)
ಇಂದ್ರನ ಮಹಿಮೆಯೇ ಇಷ್ಟಿರುವಾಗ ||
ಶ್ರೀರಾಮನಾಗಿ ದೂರ್ವಾಸರಿಗೆ ತೋರುಬೆರಳಿಂದ |
ಶೀಘ್ರದಿ ಮೃಷ್ಟಾನ್ನ ಉಣಿಸಿ ಹಸಿವು ತಣಿಸಿದ ||
ಪುರುಷೋತ್ತಮ ತನ್ನ ನಾಭಿಯಿಂ ಬ್ರಹ್ಮನ ಪೆತ್ತ |
ಸರ್ವಸ್ವಾಮಿ ಸುರ-ನರ ಸೃಷ್ಟಿದಾತನಿವ ||
ಉರುಕ್ರಮ ಶ್ರೀಕೃಷ್ಣವಿಠ್ಠಲ ಸಕಲಪ್ರದಾತ |
ಪರಾತ್ಪರ ಎಂಬಲ್ಲಿ ಸಂಶಯವೇಕೆ ? ||
32. ಸವೋತ್ತಮನ ಮಹಾತ್ಮೆ ಅರಿತು |
ಜೀವೋತ್ತಮ ಗುರುಗಳ ಪಾದಕೆರಗಿ ||
ಜೀವನು ಜ್ಞಾನ ಪೂರ್ವಕ ಸುಧೃಡದಿ |
ಸರ್ವಕಾಲಕೂ ಭಕ್ತಿಯಿಂ ಸ್ಮರಿಸಿ ||
ದೇವ ಶ್ರೀಕೃಷ್ನವಿಠ್ಠಲನೇ ಬಿಂಬ |
ಅವನ ಪ್ರತಿ ಬಿಂಬ ತಾನೆಂದು ಉಪಾಸಿಸಿ ||
ನಿವೇದಿಸೇ ಆತ್ಮ, ಆಗುವುದು ಮುಕ್ತಿ ಇದು ಸತ್ಯ ||
33. ಬಯಸಲಿ, ಬಯಸದಿರಲಿ | ಸುಯೋಗ್ಯಭಾಗ್ಯ ನಮಗಿರಲು |
ಕಾಲಕಾಲಕೆ ಪ್ರಾಪ್ತಿ ಇದ್ದಷ್ಟು ಲಭ್ಯ | ಎಲ್ಲವೂ ಪೂರ್ವನಿಯೋಜಿತ ||
ಕರುಣಾಳು ಶ್ರೀಕೃಷ್ಣವಿಠ್ಠಲ | ಗುರುತಿಸಿ ಸಕಲರ ಪೊರೆವ ||
34. ಅಂತರಂಗದ ಸುಖಾನುಭವ |
ಸಂತರು ಮೆಚ್ಚುವರು ಮುದದಿ ||
ಕಂತೆ ಹಣಕೂ ಸರಿ ತೂಗದು |
ಚಿಂತಿಸಿದರೂ ಸಿಗಲಾರದು ||
ಸಂತೆಯ ಬಿಟ್ಟು ಏಕಾಂತದಿ |
ಚಿಂತಾಮಣಿ ಶ್ರೀಕೃಷ್ಣವಿಠ್ಠಲನ ||
ನಿತ್ಯದಿ ಬೇಡಲು ಅನುಗ್ರಹೀಪ ||
35. ಬದುಕೆಲ್ಲ ಸಾಧನೆಗೆ ಮೀಸಲಾಗಲಿ |
ಇಂದ್ರಿಯಗಳ ವಿಷಯ ಸುಖನಾಶವಾಗಲಿ ||
ಒಂದು ಜನುಮದಿ ಸಾಧಿಸುವ ಮಾತಲ್ಲ |
ಬುಧರು ಪೇಳಿದಂತೆ ನಡೆಯಲು ಅಸಾಧ್ಯವೇನಲ್ಲ||
ಸಾಧನೆ ಮೊದಲ ಮೆಟ್ಟಲೇ ಭಗವಂತನ ಅರಿವು |
ಒಂದೇ ಮನದಿ ಮಾಡಲು ಭಕುತಿ, ಭಗವತ್ತತ್ವಚಿಂತನ ||
ಇದುವೇ ಸಾಕ್ಷಾತ್ಕಾರಕ್ಕೆ ದಾರಿ, ಮುಕುತಿಗೆ ಗುರಿ |
ಆಧಾರ ಮೊದಲಾದ ಆರು ಚಕ್ರ ಜಾಗ್ರತಗೊಳಿಸಿ ||
ಸಾಧಿಸಿ ಸುಷುಮ್ನಾನಾಡಿ, ಭೇದಿಸಿ ಪರಬ್ರಹ್ಮನ ಸೇರಲು |
ಮೊದಲು ಕಾಣುವುದು ಭಾನುಕೋಟಿ ತೇಜ ||
ದ್ವಾದಶ ನಾದ, ಓಂಕಾರಘೋಷದ ಮಧ್ಯೆ |
ಬಿಂದು ಕಾಣುವುದು ಅನುಭವ ವೇದ್ಯದಿ ||
ಆದಿ-ಅಂತ್ಯವಿರದೀ ಸ್ಥಿತಿಯಲಿ ಅರಿವರು ಸರ್ವ ಸಮರ್ಥನ |
ಸಿದ್ಧ ಪುರುಷರು ಪಡೆದ ಅನುಭವ ಬೇರೆಬೇರೆ ||
ನಿರ್ದಿಷ್ಟ ಸಮಯದಿ ಗುರುಗಳಿಂದ ಅನುಗ್ರಹವಾದಾಗ |
ಅಂದದ್ದೆಲ್ಲಾ ಭಗವಂತನ ವಾಕ್ಯಗಳು || (ವೇದವಾಕ್ಯ)
ಹಾಡಿದ್ದೆಲ್ಲಾ ಭಗವಂತನ ಮಹಿಮೆಗಳು |
ಕಂಡಕಂಡದ್ದೆಲ್ಲಾ ಭಗವಂತನ ರೂಪಗಳು ||
ಆದ ಆನಂದ ಮಂದಿಗೆ ಹೇಳಲಾಗದು, ಹೇಳಿದರೆ ತಿಳಿಯಲಾಗದು |
ಸಾಧ್ಯದ ಮಾತಲ್ಲ ಬಿಂಬೋಪಾಸನೆ ಸಕಲರಿಗೆ ||
ಸಾದೃಶ್ಯಅಂತರಂಗದ ಏಕಾಗ್ರತೆ ಜೊತೆ ಬಿಂಬಕ್ರಿಯಾನುಸಂಧಾನದಿ |
ಹೃದಯಸ್ಥ ಶ್ರೀಕೃಷ್ಣವಿಠ್ಠಲನ ಕಾಣುವುದೇ ಬಿಂಬಾಪರೋಕ್ಷ ||
36. ನಿಂದಿಸುವರು ಸುತ್ತಮುತ್ತವಿರಲಿ |
ಹಂದಿ ಇದ್ದರೆ ಸಂದಿ ಸಂದಿ ಸ್ವಚ್ಛ ||
ಅಂದು ಅಂದು-ಇಂದಿನ ಪಾಪ ತೊಳೆವರು |
ಇಂದು ಮುಂದಿನ ಏಳ್ಗೆಗೆ ಕಾರಣರಾಗುವರು ||
ಛಂದದಿ ಶ್ರೀಕೃಷ್ಣವಿಠ್ಠಲನೆಡೆ ಕೊಂಡೊಯ್ಯುವರು ||
37. ಹುಟ್ಟಿದ ಮೇಲೆ ಚಟ್ಟವೇರುವತನಕ |
ಹೊಟ್ಟೆಗೆ ಬದುಕಲು ಅನ್ನ ಹಾಕಲೇಬೇಕು ||
ಮಾಡಿದ್ದು ಒತ್ತಾಯದಿ ತಿನ್ನಲೇಬೇಕು |
ತಿಂದಿದ್ದು ಖಂಡಿತದಿ ಹೊರಹಾಕಲೇಬೇಕು ||
ಸರ್ವರೂ ಊಟವನೇ ಮಾಡುವರು |
ಅವರವರಿಗೆ ಬಡಿಸಿದ್ದು ಉಣಬೇಕು ||
ಇಷ್ಟವಿದ್ದದ್ದು ಪಾಲಿಗೆ ಬರದಿರಬಹುದು |
ಕಷ್ಟವಾದರೂ ಅಷ್ಟೂ ಸೇವಿಸಲೇಬೇಕು ||
ಜೀರ್ಣವಾದರೂ ಸರಿ ಅಜೀರ್ಣವಾದರೂ ಸರಿ |
ಪೂರ್ಣವಾಗಿ ಬಿಡದೆ ಸಹಿಸಲೇಬೇಕು ||
ಏನಾದರಾಗಲಿ ಬೇಡದಂತೆ ಮಾಡು |
ಅನುಗ್ರಹಿಸು ದಯದಿ ಶ್ರೀಕೃಷ್ನವಿಠ್ಠಲ ||
38. ಪುಟ್ಟಿದೆ ಉತ್ತಮ ಕುಲದಿ ಮುಂದೇನು? |
ಉತ್ತಮ ತಾಯ್ತಂದೆಯರ ಪಡೆದ ಮುಂದೇನು? ||
ಆಟ-ಪಾಟದಿ ಬಾಲ್ಯವ ಕಳೆದೆ ಮುಮದೇನು? |
ಉತ್ತಮ ಲೌಕಿಕಶಿಕ್ಷಣ ಪಡೆದೆ ಮುಂದೇನು? ||
ಮಾತಿನ ಪ್ರತಿಭೆಯಲಿ ಪ್ರಶಂಸೆ ಪಡೆದೆ ಮುಂದೇನು? |
ಉತ್ತುಂಗ ಶಿಖರದಿ ಮೆರೆದೆ ಮುಂದೇನು? ||
ಪ್ರೀತಿ-ಕಾಮದಿ ಯೌವ್ವನ ಹೋಯಿತು ಮುಂದೇನು? |
ಹುಟ್ಟಿದ ಮಕ್ಕಳ ಉನ್ನತಿ ನೋಡಿದೆ ಮುಂದೇನು? ||
ಕಟ್ಟಿಮನೆ, ಧನ-ಕನಕ ಸೇರಿಸಿಟ್ಟೆ ಮುಂದೇನು? |
ಇಷ್ಟ ಪಟ್ಟಿದ್ದೆಲ್ಲಾ ಹರ ಸಾಹಸದಿ ಪಡೆದೆ ಮುಂದೇನು? ||
ಕಷ್ಟ ಪಡೆದೆ ಸುಖದಿ ಜೀವನ ಸಾಗಿತು ಮುಂದೇನು? |
ಇಷ್ಟೇನಾ ಹುಟ್ಟಿ ಬಂದ ಜೀವನದ ಅರ್ಥ? ||
ಸತ್ಕರ್ಮ, ದಾನ-ಧರ್ಮ ಒಂದಿನ ಮಾಡಲಿಲ್ಲ |
ಬಿಟ್ಟು ಎಲ್ಲ ಇಲ್ಲೇ, ಹೋಗಬೇಕೆಂಬುದು ತಿಳಿಯಲಿಲ್ಲ ||
ನಿತ್ಯ ಅರಿಯದೇ ಪರರಿಗೆ ಬೇಕಾದಂತೆ ಬಾಳಿದೆ |
ಸ್ವಂತ ಸುಖದ ನೆಲೆಯ ಅರಿಯಲಿಲ್ಲ ||
ಭ್ರಷ್ಟವಾಯಿತು ಬುದ್ಧಿ, ನಿಜಮರ್ಮ ತಿಳಿಯದೇ |
ನಷ್ಟವಾಯಿತು ಮಾನವ ಜನುಮವೆಲ್ಲ ||
ಕಟ್ಟಕಡೆಗೆ ಅರ್ಥಮಾಡಿಕೊಳ್ಳುವುದರಲ್ಲಿ ||
ಮಾತು ಮೌನ, ದೇಹ ಜೀರ್ಣ, ಪರಸಾಧೀನ |
ಪುಟ್ಟಿಸಿ ಜೊತೆ ಸುಖ ಕೊಟ್ಟವನ ಮರೆತೆ ||
ಸುತ್ತಲೂ ನೋಡುತ್ತಾ, ಒಳಗೇ ಇಣುಕಿಸದಾದೆ |
ಮತ್ತ್ಯಾವಾಗ ಮಾನವ ಜನುಮ ಬರುವುದೋ ಗೊತ್ತಿಲ್ಲ ||
ಮತ್ತೊಮ್ಮೆ ಹುಟ್ಟಿದರೂ ಧರ್ಮದಿ ಇಚ್ಛೆ ಬರಬೇಕಲ್ಲ |
ಇಷ್ಟೆಲ್ಲಾ ಕೊಟ್ಟ ಶ್ರೀಕೃಷ್ಣವಿಠ್ಠಲಗೆ ದ್ರೋಹ ಬಗೆದೆ
ವಿಠ್ಠಲ ಶ್ರೀಕೃಷ್ಣವಿಠ್ಠಲ ತಪ್ಪು ಮನ್ನಿಸಿ ಸಲಹೋ ದಯನಿಧೇ ||
39. ಮುಂದೆ ಮಾಡುವ ಕೆಲಸ ಇಂದೇ ಮಾಡು |
ಇಂದು ಮಾಡುವುದ ಈಗಲೇ ಮುಗಿಸು ||
ಉದಿಸುವ ಸೂರ್ಯ, ಮೃತ್ಯು ಯಾರಿಗೂ ಕಾಯರು |
ಒಂದಿನ ಹೋಗುವುದು ಸತ್ಯ, ತಯಾರಿಯಲ್ಲಿರು ||
ಇಂದಿರಾಪತಿ ಶ್ರೀಕೃಷ್ನವಿಠ್ಠಲನ ಧ್ಯಾನಿಸುತಿರು ||
40. ಕಾಲಕಾಲಕೆ ತಿದ್ದಿಕೊಳ್ಳುವುದರಲ್ಲೇ ಹೋಯಿತು ಜೀವನ |
ಕಲಿಯಲಿಲ್ಲ ಪೂರ್ಣ, ಕಾಲಮಾತ್ರ ಕಳೆಯಿತು ||
ಕಲಿ ಆವೇಶದಿ, ಸಾತ್ವಿಕ ಬುದ್ಧಿ ಬರಲಿಲ್ಲ |
ಕಲೆ ಅಳಿಯಲಿಲ್ಲ, ಆಳ ತಿಳಿಯಲಿಲ್ಲ ||
ಕುಲಸ್ವಾಮಿ ಶ್ರೀಕೃಷ್ನವಿಠ್ಠಲನೇ ತಿಳಿಸಬಲ್ಲ ||
41. ನಿನ್ನ ನಾಮೋಚ್ಚಾರಣದಿ ಎನಗೆ ಸುಪ್ರಭಾತವಾಗಲಿ |
ನಿನ್ನ ನಾಮೋಚ್ಚಾರಣೆ ಸಹಿತ ದಿನದ ಕಾರ್ಯಗಳು ಆಗಲಿ ||
ನಿನ್ನ ನಾಮೋಚ್ಚಾರಣೆ ಸಹಿತ ನಿತ್ಯ-ನೈಮತ್ತಿಕ ಕಾರ್ಯವಾಗಲಿ |
ನಿನ್ನ ನಾಮೋಚ್ಚಾರಣೆ ಸಹಿತ ವ್ರತ-ನೇಮಗಳು ನಡೆಯಲಿ ||
ನಿನ್ನ ನಾಮೋಚ್ಚಾರಣೆ ಹಗಲು-ರಾತ್ರಿ ನಡೆಯಲಿ |
ನಿನ್ನ ನಾಮೋಚ್ಚಾರಣೆ ಮನದಿ ಬಿಡದೆ ನಡೆಯಲಿ ||
ನಿನ್ನ ನಾಮೋಚ್ಚಾರಣೆ ಸಹಿತ ಪಂಚೇಂದ್ರಿಯ ಕಾರ್ಯವೆಸಗಲಿ |
ನಿನ್ನ ನಾಮೋಚ್ಚಾರಣೆ ಸಹಿತ ಅನ್ನ ಭುಂಜಿಸುವಂತಾಗಲಿ ||
ನಿನ್ನ ನಾಮೋಚ್ಚಾರಣೆ ಪ್ರತಿ ಉಸಿರಿನಲ್ಲಿರಲಿ |
ನಿನ್ನ ನಾಮೋಚ್ಛಾರಣೆ ಮಾಡುತಾ ಪ್ರಾಣಬಿಡುವಂತಾಗಲಿ ||
ನಿನ್ನ ನಾಮೋಚ್ಚಾರಣೆ ಪ್ರತಿಕ್ಷಣ, ಪ್ರತಿ ಜನುಮದಿ ಮಾಡುವಂತಾಗಲಿ |
ನಿನ್ನ ನಾಮಾಮೃತ ಸಾಗರವನ್ನೇ ಅನುಗ್ರಹಿಸು ಶ್ರೀಕೃಷ್ನವಿಠ್ಠಲಾ ||
42. ಎಲ್ಲ ಬಲ್ಲವನಾಟ ಬಲ್ಲದು |
ಬಲ್ಲಿದವಗೆ ಇದು ಚೆಲ್ಲಾಟ (ಸರಳದಾಟ)
ಬಲ್ಲದವಗೆ ಸದಾ ಪ್ರಾಣ ಸಂಕಟ ||
ಒಲ್ಲೆನೆಂದರೆ ಬಿಡದೆಂದಿಗೂ |
ಚೆಲ್ವ ಶ್ರೀಕೃಷ್ನವಿಠ್ಠಲನ ಜಗತ್ತಿನಾಟ ||
43. ( ಆದದ್ದೇನು (ಮಾನವಜನ್ಮ), ನೋಡಿದ್ದೇನು (ಜಗತ್ತಿನವ್ಯಾಪಾರ), ನಡೆದಿದ್ದೇನು? (ಕರ್ಮಾನುಸಾರ)
ಮಾಡಿದ್ದೇನು (ಕರ್ಮ), ಉಂಡಿದ್ದೇನು (ಕರ್ಮಫಲ), ಸಂದಿಸಿದ್ದೇನು (ಕೊಟ್ಟದ್ದು)?
ಬಂದದ್ದೇನು (ಪಾಪಪುಣ್ಯ-ಆಗಾಮಿ), ಹೋದದ್ದೇನು (ಸಂಚಿತ), ಇದ್ದುದ್ದೇನು (ಪ್ರಾರಬ್ಧ)?
ಮಂದವಾಯಿತೋ-ಛಂದವಾಯಿತೋ ಎಲ್ಲ ಶ್ರೀಕೃಷ್ಣವಿಠ್ಠಲನಂತಾಯಿತು || (ಪೂರ್ವನಿರ್ಧಾರಿತ))
ಆದ್ಧದ್ದೇನು?, ನೋಡಿದ್ದೇನು?, ನಡೆದಿದ್ದೇನು? |
ಮಾಡಿದ್ದೇನು?, ಉಂಡಿದ್ದೇನು? ಸಂದಿಸಿದ್ದೇನು? ||
ಬಂದದ್ದೇನು? ಹೋದದ್ದೇನು ? ಇದ್ದುದ್ದೇನು? |
ಮಂದವಾಯಿತೋ-ಛಂದವಾಯಿತೋ ಎಲ್ಲ ಶ್ರೀಕೃಷ್ಣವಿಠ್ಠಲನಂತಾಯಿತು ||
44. ಉದಿಸುವ ದಿನಕರ ಪ್ರತಿದಿನ |
ಸದಾ ಶುಭಕರ ಮೂಡಣದಿ ||
ಶೋಧಿಸುತ, ಬೋಧಿಸುತ, ಪೊಂದಿಸುತ |
(ಶುದ್ಧವಾಗಿಸುವ, ಜ್ಞಾನ, ಆಹಾರ)
ವೃದ್ಧಿ-ಹ್ರಾಸದಿ ಸೆಳೆಯುತ ಜೀವನ ||
ಆದಿತ್ಯಾಂರ್ಗತ ಶ್ರೀಕೃಷ್ಣವಿಠ್ಠಲನ |
ವಂದಿಸೆ ನಿತ್ಯ ಅತ್ಯಂತದಿ ಒಲಿವ ||
45. ಅರಸುತ ಹಿರಣ್ಯದ ಹರಿಣಿಯ |
ಸರಸದಿ ಬೆನ್ಹತ್ತಿದ ಮಾಯಾವಿ ||
ಸರಸಿಜಾಕ್ಷಳ ಅಪಹರಿಸಿದ ಭಿಕ್ಷುಕ |
ಘೋರ ಯುದ್ಧದಿ ಅಸುರರ ತರಿದ ||
ಸುರಾಜ್ಯವ ತನ್ನ ಭಕ್ತನಿಗಿತ್ತಾ |
ಅರ್ಪಿಸಿ ಅಗ್ನಿಗೆ (ಮಾನವಿತ್ತವಳ) ಪರಸ್ತ್ರೀಯಳ ||
ಪರಮ ಸತಿ ನಿತ್ಯಾವಿಯೋಗಿಯ ಪಡೆದ |
ಸ್ಮರಿಸಲು ಸದಾ ಸುರಸುಂದರನ ||
ಸರಾಗವಾಯಿತು ಬಾಳು ಸುರಾಗದಿ |
ಸ್ವರತ ಶ್ರೀಕೃಷ್ಣವಿಠ್ಠಲನ ಅನುರಾಗದಿ ||
46. ಸಹಿಸೆ ದು:ಖ-ಕೋಟಲೆಗಳ |
ವಹಿಸಿ ಅಪಮಾನದ ಸರಮಾಲೆಗಳ ||
ದಹಿಸುವ ಅಗ್ನಿ ಪರೀಕ್ಷೆಗೊಳಗಾಗಿ |
ಮಹಿಯೊಳು ತಾಳಿದವ ಬಾಳಿಯಾನೆಂಬ ||
ಮಹತ್ತಾದ ಸಂಧೆಶವಿತ್ತ ಕ್ಷಮಯಾಧರಿತ್ರೀ |
ಮಹಿಮೆ ತೋರಿದಳು ಶ್ರೀಕೃಷ್ಣವಿಠ್ಠಲನರ್ಧಾಂಗಿ ||
47. ಭೂಮಿಜೆ ಮೇದಿನಿ ಸುತೆ ಮೋದದಿ |
ರಮ್ಯತೆಯಲಿ ರಮಣನಾಜ್ಞೆ ಪಾಲಿಸಲು ||
ರಮಿಸಿ ನಟಿಸಿದಳು ನರಲೋಕದಿ ಸ್ತ್ರೀಪಾತ್ರ |
ರಮಾಪತಿ ಶ್ರಿಕೃಷ್ನವಿಠ್ಠಲನ ಅವತಾರ ನಾಟಕದಿ ||
48. ಭವ್ಯಮಾತೆ ದಿವ್ಯತೆಯಲಿ |
ನವ್ಯತೆಯಲಿ ಸ್ತವ್ಯ ||
ಉರ್ವಿಸುತೆ ಮರ್ಮವನರುಹಿದಳು |
ಪರ್ವ ಪರಮ ಶ್ರೀಕೃಷ್ಣವಿಠ್ಠಲನಾಜ್ಞೆಯಲಿ ||
49. ಮಾಡುವುದೆಲ್ಲ ನಿನಗಾಗಿ | (ಕರ್ಮ)
ನೋಡುವುದೆಲ್ಲ ನಿನ್ನಿಂದ || (ದೃಷ್ಟಿ)
ಕೊಡುವುದೆಲ್ಲ ನಿನ್ನದೇ | (ದಾನ)
ಜೋಡಿದಾರ ನೀನಾಗಿರುವಾಗ || (ದ್ವಾಸುಪರ್ಣಾಸಯುಜಾಸಖ )
ಅಂಡಲೆಯದಂತೆ ನೀನೇ ಅನುಗ್ರಹಿಸು ಶ್ರೀಕೃಷ್ಣವಿಠ್ಠಲ ||
50.. ದಾರಿ ಬಿಡು ಎನಗೆ ಗೋಪಾಲ ಹೋಗಬೇಕು ಮನೆಗೆ ||ಈಗ|| ||ಪ||
ಸರಿ ದಾರೀಲಿ ಅಡ್ಡಗಟ್ಟಿದರೆ ನಿನಗಿದು ತರವೇ ||
ಮಾರಲು ಹಾಲು_ಮೊಸರು ಸಂತೆಗೆ ಹೋಗಬೇಕು ||ಅಪ||
ಹಾದಿಯಲಿ ಸೆರಗ ಪಿಡಿದೆಳೆದು ರಂಪಮಾಡಿ |
ಬೀದಿಯಲಿ ಗಡಿಗೆ ಒಡೆದು ಸೂರೆಗೊಂಡರೆ ||
ಹೋದ ಮಾನ ಮರಳಿ ಬರುವುದೇ |
ನಾದ ಕೇಳಿಯಲಿ ತಪ್ಪದೇ ಬರುವೇನಯ್ಯಾ ||1||
ಅತ್ತೆ ಮಾವರ ಸೇವೆಯಲಿ ಸಂತೈಸುವೆ |
ಪತಿ-ಸುತಗೆ ಭೊಜನವಿಕ್ಕಿ ಮಲಗಿಸುವೆ ||
ಸುತ್ತದಾರಿ ಬಳಸದೇ ಒಡನೆ ಓಡಿ |
ಚಿತ್ತದಿ ನಿನ್ನನ್ನೇ ನೆನೆಯುತ ಬರುವೆ ||2||
ಚೆಂದದಿ ಫಣೆಯಲಿ ಕುಂಕುಮ, ಕಿವಿಯೋಲೆಧರಿಸಿ |
ಅಂದದ ಕಣ್ಣಿಗೆ ಕಾಡಿಗೆ ಇಟ್ಟು ಷೋಡಶ ಸಿಂಗಾರದಿ ||
ಅಂದುಗೆ ಕಾಲ್ಗೆಜ್ಜೆ, ಕಡಗ, ಕಂಕಣ ಕಿಂಕಿಣೆ ಮಾಡುತ |
ಮಂದಾರ-ಮಲ್ಲಿಗೆ ಮುಡಿದು ವ್ಯೆಯಾರದಿ ಬರುವೆ ||3||
ಜಡ ದಾರಿಯ ಸವೆಸುತ ಆತುರದಿ ಬಂದು |
ಕಂಡು ನಿನ್ನ ನಾ ಮರೆತು ಪರವಶಳಾಗಿ ||
ಕೂಡಿ ಕುಣಿಯುತ ಸತತ ಸರಸವಾಡುವೆ |
ಬಿಡದೆ ಎನ್ನ ತಣಿಸು ಶ್ರೀಕೃಷ್ನವಿಠ್ಠಲ ಬೇಡಿಕೊಂಬೆನು ||4||
ಮುಕ್ತಿ ತೋರುವ ಮುಕುಟಗೆ ಮಂಗಳಂ |
ಸುಖ ಕೊಡುವ ಮುಖಕೆ ಮಂಗಳ ||
ದು:ಖ ಕಳೆವ ಸುಕಂಠಕೆ ಮಂಗಳಂ |
ಕಕ್ಕುಲಾತಿ ನೀಡುವ ಹೃದಯಕೆ ಮಂಗಳಂ ||
ಕುಕ್ಷಿಯೊಳು ಜಗಪೊತ್ತ ಉದರಕೆ ಮಂಗಳಂ |
ಪಂಕಜಾಸನನ ಪೆತ್ತ ನಾಭಿಗೆ ಮಂಗಳಂ ||
ಸಕಲಾಶ್ರಯ ಜಾನು-ಜಂಘಕೆ ಮಂಗಳಂ |
ಲೋಕದಿ ಸುರಗಂಗೆ ಹರಿಸಿದ ಪಾದಕೆ ಮಂಗಳಂ ||
ಏಕೈಕ ಶ್ರೀಕೃಷ್ಣವಿಠ್ಠಲನ ಸರ್ವಾಂಗಕೆ ಮಂಗಳಂ |
ಲಕ್ಷ್ಮೀಪತಿ ಶ್ರೀಕೃಷ್ಣವಿಠ್ಠಲಗೆ ಮಂಗಳಂ-ಜಯಮಂಗಳಂ ||
52. ನೋಡುವ ದೃಶ್ಯ ನಿನ್ನದೇ | ಆಡುವ ಮಾತು ನಿನ್ನದೇ ||
ಮಾಡುವ ಕರ ನಿನ್ನದೇ | ನಡೆಯುವ ಕಾಲು ನಿನ್ನದೇ ||
ಓಡುವ ಮನ ನಿನ್ನದೇ | ಮಿಡಿಯುವ ಹೃದಯ ನಿನ್ನದೇ ||
ಓಡನಾಡುವ ಆತ್ಮ ನಿನ್ನದೇ | ನೀಡುವ ಜ್ಞಾನ ನಿನ್ನದೇ ||
ಕೊಡುವ ಭಕ್ತಿ ನಿನ್ನದೇ | ಕಂಡ ಕಂಡದದ್ದೆಲ್ಲಾ ನಿನ್ನದೇ ||
ಚಂಡ ಪ್ರಚಂಡ ಉದ್ದಂಡ | ಗಂಡರ ಗಂಡ ಸ್ವಾಮಿ ಶ್ರೀಕೃಷ್ಣವಿಠ್ಠಲ ಸರ್ವವೂ ನೀನೇ- ನಿನ್ನದೇ ||
53. ಇಳೆಯೊಳು ಒಳ್ಳೆಯ ಉಪಾಯ | (ಮುಕ್ತಿ ಸಾಧನ ಮಾರ್ಗ)
ಕೊಳೆ ಕಳೆಯುವ ಸಾಧನವಿದು || (ಅಜ್ಞಾನ ನಿವೃತ್ತಿ)
ತಿಳಿಯಲು ವೇಳೆ ಕಳೆಯಿರಿ | (ಶಾಸ್ತ್ರ)
ತಿಳಿಯದ್ದು ಕೇಳಿ ತಿಳಿಯಿರಿ || (ಗುರುಮುಖೇನ)
ತಿಳಿದಿದ್ದು ಹೇಳದೆ ಇರಬೇಡಿ | (ಉಪದೇಶ)
ತಿಳಿಯುವರಿಗೆ ತಿಳಿಸಿ ಹೇಳಿ || (ಆಸಕ್ತರಿಗೆ)
ತಿಳಿಯಾಗಿ ಸದಾ ತಿಳಿಸುತಿರಿ | (ನಾಸ್ತಿಕರಿಗೆ)
ತಿಳಿಯದವರಿಗೆ ತಿಳಿಸಬೇಡಿ || (ಅಧ್ಯಯನ-ಅಧ್ಯಾಪನ)
ಒಳ್ಳೇ ಮಾತೇ ಹೇಳುತ್ತಾ ಇರಿ | (ಮಧ್ವಸಿದ್ಧಾಮತ)
ಸುಳ್ಳು-ಗೊಳ್ಳು ಹೇಳದಿರಿ || (ಸಿದ್ಧಾಂತವಿರುದ್ಧ )
ಸುಳ್ಳು ಹೇಳಿದರೆ ಶ್ರಿಕೃಷ್ಣವಿಠ್ಠಲ ಮೆಚ್ಚನು || (ಅನುಗ್ರಹವಾಗದು)
54. ಎಂಬತ್ತ್ನಾಲ್ಕು ಲಕ್ಷಯೋನಿಯಲಿ ಸುತ್ತಿದರೂ |
ಕಂಬದಂತಾಗಿರುವ ಬಿಂಬ, ಶ್ವಾನ ಬಾಲದಂತೆ ||
ದಂಬ-ದರ್ಪ, ಅಹಂ-ಮಮತೆ ನೀಗದೆ |
ಸಂಬಳಕ್ಕಾಗಿ ಸುತ್ತುತ್ತಿರುವೆ ಆಶೆಯಲಿ ||
ಹಂಬಲಿಸಿ ಬೇಡವೆ ಶ್ರಿಕೃಷ್ಣವಿಠ್ಠಲ |
ಬೆಂಬಿಡದೆ ಎನ್ನ ತಿದ್ದಿ ನಿನ್ನಡಿ ಇರಿಸಿಕೋ ||
55. ಶ್ರೀಕೃಷ್ಣವಿಠ್ಠಲನೆಂದು ಅಂಕಿತವಿತ್ತ ಗುರುಗಳು |
ಶ್ರಿಕೃಷ್ಣನ ಪೂಜೆ ಮಾಡುವುದ ಕಂಡೆ ||ಪ||
ಶ್ರೀಕೃಷ್ಣನ ಪರ್ಯಾಯ ಪೂಜಾಕೈಂಕರ್ಯನಿರುತ ಶ್ರೀವಿಶ್ವೇಶತೀರ್ಥರ ಕಂಡೇ || ಅಪ||
ಗಡಿಬಿಡಿಯಲಿ ಬಂದು ತನ್ಮಯತೆಯಲಿ |
ಉಡುಪಿ ಬಾಲಕೃಷ್ಣನ ಸರ್ವಸೇವೆ ||
ಖಂಡುಗ ಉತ್ಸಾಹದಿ ಅಖಂಡದಿ |
ಮಾಡುವುದ ಕಂಡು ಪುನೀತಳಾದೆ ||1||
ಸರ್ವರ ಆದರದಿ ಬರಮಾಡುವ |
ಸರ್ವ ಯೋಗ-ಕ್ಷೇಮ ವಿಚಾರಿಸುತ ||
ಸರ್ವರಿಗೆ ಹಿತೋಪದೇಶ ಕೊಡುವ |
ಸರ್ವಕಲೆ, ನಿತ್ಯದಿ ಪ್ರೋತ್ಸಾಹಿಸುವ ||2||
ಸತತ ಶಕ್ತಿಯ ಸೆಲೆಯಾದ |
ನಿತ್ಯನೂತನ ಹರುಷ ಪುರುಷ ||
ಚೇತೊಹಾರಿ ತೇಜೋಪುಂಜ: |
ಸತ್ಯವ್ರತ ವಾಯ್ವಂಶ ಶ್ರೀಕೃಷ್ಣವಿಠ್ಠಲನ ನಿಜದೂತ ||3||
56. ಬೀದಿ ಬೀದಿಯಲಿ ಸುತ್ತುವ ನಾಯಿಯಂತೆ |
ಸಂದಿ ಸಂದಿಯಲಿ ತಿರುಗುತ ||
ಹಾದಿ ಬೀದಿಯಲಿ ಮೂಸುತ |
ಬಿದ್ದ ಬಿದ್ದ ಹೊಲಸು ತಿನ್ನುತ ||
ಮಂದಿ ಮಂದಿ ಕಾಲು ನೆಕ್ಕುತ ||1||
ಹಿಂದೆ ಮುಂದೆ ಬಾಲ ಅಲ್ಲಾಡಿಸಿ ಓಡಾಡುತ |
ಮುಂದೆ ಮುಂದೆ ಎಸೆದಿದ್ದು ಹಿಡಿಯುತ ||
ಎದ್ದು ಜಿಗಿದಾಡಿ, ಹೊಗಳಿದಾಗ ಉಬ್ಬುತ |
ವಿಧೇಯನಾಗಿದ್ದರೂ ಹೊಡೆಸಿ, ಬೈಸಿಕೊಳ್ಳುತ ||
ತಿಂದು, ನಿದ್ದೆ-ಮೈಥುನದಿ ಕಾಲಕಳೆಯುತ ||2||
ಇದೇ ಜೀವನವೆಂದು ನಂಬಿ ನಡೆದಿರುವೆ |
ಇದನ್ನು ಬಿಟ್ಟು ಹೊರ ಬರುವ ದಾರಿ ಕಾಣದೆ ||
ಒದ್ದಾಡುತ್ತಾ ಒಂದೇ ಮನದಿ ಬೇಡಿಕೊಂಬೆ |
ಬಿದ್ದುಹೋಗುವ ದೇಹದಿಂದ ನಿನ್ನ ಜೀತಗೈಸಿಕೋ ||
ಇದರಿಂದ ಪಾರುಗೈಸೋ ಒಡೆಯಾ ಶ್ರಿಕೃಷ್ಣವಿಠ್ಠಲ ದಯಾನಿಧೇ ||3||
57. `ಜೀವನವೆಂದರೆ ಇಷ್ಟೇನಾ ನಿತ್ಯದಿ ||ಪ||
ಪಾವನಗೊಳಿಸುವ ದಾರಿ ಇದೇನಾ || ಅಪ||
ಊಟ, ನಿದ್ದೆ, ಮೈಥುನದಿ ವ್ಯಯಿಸಿ |
ಕೊಟ್ಟ ಕಾಲ ಕಳೆಯುತ ವ್ಯರ್ಥದಿ ||
ನಿಟ್ಟುಸಿರು ಬಿಡುತಾ ಓಡಿ ದಣಿವುದು |
ಬಿಟ್ಟು ಇದೆಲ್ಲಾ ಬೇರೆ ಮಾರ್ಗದಿ ನಡೆದು ||
ಶ್ರೇಷ್ಠ ಅರ್ಥದಿ ಸಾರ್ಥಕ ಹೇಗೆ ಮಾಡಲಿ |
ಸೃಷ್ಟಿಕರ್ತನ ಉದ್ದೇಶ ಹೇಗೆ ತಿಳಿಯಲಿ? ||1||
ಪರರ ಧನ-ಕನಕಕ್ಕಾಗಿ ಆಶೆಪಟ್ಟೆ |
ಪರರ ಉನ್ನತಿ ಕಂಡು ಅಸೂಯೆ ಪಟ್ಟೆ ||
ಪರರೊಡನೆ ಹೋಲಿಸಿ ದು:ಖಪಟ್ಟೆ |
ಪರರಿಂದ ಹೊಗಳಿಸಿಕೊಳ್ಳಲು ಶ್ರಮಪಟ್ಟೆ||
ಪರರ ಸೇವೆಯಲಿ ಅಂತ:ದನಿ ಬಿಟ್ಟೆ |
ಪರತಮ ಶ್ರಿಕೃಷ್ಣವಿಠ್ಠಲನ್ನೇ ಮರೆತುಬಿಟ್ಟೆ ||2||
58 ಅರ್ಜಿ ಹಾಕುವೆ ನೀಕು ಸ್ವಾಮಿ ಪ್ರತಿಜನುದಿ |
ವರ್ಜಿಸಿ ಭವ ವಿಷಯ ಸುಖಂಗಳ ||
ಗರ್ಜಿಸಿ ಪಂಚಭೇದ ತಾರತಮ್ಯ ಜ್ಞಾನದಿ |
ಭಜಿಸಿ ಬಿಡದೆ ತವಪಾದ ಭಕ್ತಿಯಲಿ ||
ಮರ್ಜೀsಸೆ ಶ್ರೀಕೃಷ್ಣವಿಠ್ಠಲ ನಿನ್ನಡಿ ಸೇರುವಂತೆ ಮಾಡು ||
59. ಶಾಪ-ಕೋಪವೂ ಪರಮಾನುಗ್ರಹಕೆ ಕಾರಣವಾಹುದು ||ಪ||
ಪಾಪ-ಲೇಪಿತ ಭಕ್ತರೂ ಉದ್ಧಾರವಾಗುವರು ||ಅಪ||
ಶಾಪಿತ ಅಹಲ್ಯಗೆ ಶ್ರೀರಾಮ ದರುಶನ |
ಶಾಪಿತ ಗಜೇಂದ್ರನಿಗೆ ಶ್ರೀಹರಿ ಅನುಗ್ರಹ ||
ಶಾಪಿತ ಊರ್ವಶಿಗೆ ಸ್ತನ್ಯಪಾನಿಸುವ ಭಾಗ್ಯ |
ಶಾಪಿತ ನಳಕೂಬರಿಗೆ ನಂದಕಂದನ ಸ್ಪರ್ಶ ||1||
ನಿಂದೆ ಮಾಡಿ ಶಿಶುಪಾಲ ಮುಕ್ತಿಹೊಂದಿದ |
ಕದ್ದು ಪೃಥ್ವಿಯ ವರಾಹನ ದರುಶನ ಪಡೆದ ||
ಕದ್ದು ಮಾನಿನಿಯ ಅಸುರ ಶ್ರೀರಾಮನ ಸಂದರ್ಶಿಸಿದ |
ಒದ್ದು ಎದೆಗೆ ನಾರಾಯಣನಿಂದ ಉಪಚರಿಸಿಕೊಂಡ ||2||
ಕೋಪಿತ ಮಾತೆಯಿಂ ಧ್ರುವಗೆ ನಾರಾಯಣ ದರುಶನ |
ಕೋಪಿತ ಪಿತನಿಂ ಪ್ರಲ್ಹಾದಗೆ ನರಸಿಂಹನ ಅನುಗ್ರಹ ||
ಪಾಪಿ ಅಜಮಿಳ ವಿಷ್ಣು ಲೋಕಕೆ ನಡೆದ |
ಪಾಪಿ ಪಿಂಗಳೆ ಶ್ರೀಕೃಷ್ಣವಿಠ್ಠಲನ ಅಂಗಸಂಗ ಪಡೆದು ಧನ್ಯಳಾದಳು ||3||
60. ನೀ ಅಡಿ ಇಟ್ಟೆಡೆ ಎಲ್ಲ ಪಾವನವಾಯಿತೋ | ||ಕೃಷ್ಣ||
ನೀ ಅಡಿ ಇಟ್ಟಲ್ಲೆಲ್ಲಾ ಪವಿತ್ರ ಸ್ಥಳಗಳಾದವು ||
ನಿನ್ನಡಿ ಸೋಕಲು ಯಮುನೆ ದಾರಿ ಬಿಟ್ಟಳು |
ನಿನ್ನಡಿ ಮುಡಿದ ಕಾಳಿಂಗ ನಿರ್ಭಯನಾದನು ||
ನಿನ್ನಡಿ ಸೋಕಲು ಅಸುರ ಅಸು ನೀಗಿದ |
ನಿನ್ನಡಿ ಸೋಕಲು ಅಜಗರ ಸುಂದರ ಯುವಕನಾದ ||
ನೀ ಅಡಿ ಮೆಟ್ಟಿ ತ್ರಿವಕ್ರಳ ಸುಂದರಳಾಗಿಸಿದೆ |
ನಿನ್ನಡಿ ಕುಳಿತ ಅರ್ಜುನ ನಿನ್ನೇ ಬೇಡಿ ಪಡೆದ ||
ನೀ ಅಡಿ ಒತ್ತಿ ಅರ್ಜುನನ ಪ್ರಾಣ ಉಳಿಸಿದೆ |
ನಿನ್ನಡಿ ಸ್ಪರ್ಶಿಸಿದ ಗಂಗೆ ಪಾವನಳಾದಳು ||
ನಿನ್ನಡಿ ಕುಳಿತ ಮಾರುತಿ ಸ್ವಾತ್ಮಾಲಿಂಗನ ಪಡೆದ |
ನಿನ್ನಡಿ ಒತ್ತುತಾ ರಮೆ ಹೃದಯದಿ ಕುಳಿತಳು ||
ನಿನ್ನಡಿಯಲ್ಲಿದೆ ಸಕಲ ಸುಖದ ಸಾಗರ |
ನಿನ್ನಡಿ ಸೇವಕ ನಾನು ಶ್ರಿಕೃಷ್ಣವಿಠ್ಠಲ ನಿನ್ನಡಿಗೆ ಸೇರಿಸಿಕೋ ||
61. ಮಥುರೆಯಲಿ ಪುಟ್ಟಿ ಗೋಕುಲಕೆ ನಡೆದ |
ಎಂಥೆಂಥಾ ಅಸುರರ ಅಸು ಹೀರಿದ ||
ಮಥಿಸಿದ ಮೊಸರು ಬೆಣ್ಣೆ ಚೆನ್ನಾಗಿ ಕದ್ದುಮೆದ್ದ |
ಪಂಥದಿ ವೃಂದಾವನಕೆ ಪೊಗಿ ನೆಲಸಿದ ||
ಜಾಥಾಕೆ ಕರೆಸಿದ ಮಾವನ ಒರೆಸಿದ |
ಪೃಥೆಯ ಸುತರ ಕಣ್ರೆಪ್ಪೆಯಂದದಿ ಕಾಯ್ದುವ ||
ರಥ ನಡೆಸಿ ಧರ್ಮಯುದ್ಧ ಜಯಸಿದ |
ಕಥಾನಾಯಕ ಶ್ರೀಕೃಷ್ಣವಿಠ್ಠಲಗೆ ನಮೋನಮೋ ||
62. ಗಡಿ ಬಿಡಿಯಲ್ಲಿ ಗಡಿಗೆ ಒಡೆದೇ ಹೋಯ್ತು |
ಗಡಗಡ ಬಂದು ತುಂಬುವುದರಲ್ಲಿ ||
ಬಡ ಬಡನೆ ಉರುಳಿ ಜಾರಿಹೋಯ್ತು |
ಸಡಗರದ ಶ್ರೀಂಗಾರದ ಗಡಿಗೆ ||
ನೋಡು ನೊಡುವುದರಲ್ಲೇ ಚೂರಾಯ್ತು |
ಕಂಡ ಕಂಡವರ ಬೇಡಿದರೂ ಉಳಿಯಲಿಲ್ಲ ||
ಮಂಡೆ ಹೊಡಕೊಂಡರೂ ಮತ್ತೆಬಾರದು |
ಗಂಡರ ಗಂಡ ಶ್ರೀಕೃಷ್ಣವಿಠ್ಠಲ ಕೊಟ್ಟರೆ ಬರುವುದು ||
63 ಉಡುಪಿಯ ಕೃಷ್ಣನ ಮುಖ ಚೆಂದ |
ಒಡೆಯ ಶ್ರೀನಿವಾಸನ ನಡು ಚೆಂದ ||
ಪಂಢರಿಯ ವಿಠ್ಠಲನ ಪಾದ ಚೆಂದ |
ಕೂಡಿ ಎಲ್ಲವೂ ಶ್ರಿಕೃಷ್ಣವಿಠ್ಠಲ ಅತೀ ಚೆಂದ ||
64. ಬದರಿಯ ಹಾದಿಯು ಚೆಂದ |
ಸೌಂದರ್ಯದಿ ರಾಮೇಶ್ವರ ಚೆಂದ ||
ಬಂಧನ ಬಿಡಿಸುವಲ್ಲಿ ಜಗನ್ನಾಥ ಚೆಂದ |
ಅಂದವೋ ಅಂದ ನಮ್ಮ ದ್ವಾರಕಾಧೀಶ ಶ್ರಿಕೃಷ್ಣವಿಠ್ಠಲ ||
65. ಧರ್ಮದಿ ನಡೆದವಗೆ ವನವಾಸ | (ಯುಧಿಷ್ಠಿರ)
ಅರ್ಥ ಬಿಟ್ಟವನಿಗೆ ದಾಸತ್ವ || (ಪುರಂದರದಾಸ)
ಕಾಮ ಪೀಡಿತನಿಗೆ ವಿಷ್ಣುಲೋಕ | (ಅಜಮಿಳ)
ಮರ್ಮವನರಿತವಗೆ ಮೋಕ್ಷವೀವ ಶ್ರೀಕೃಷ್ಣವಿಠ್ಠಲ ||
66. ಗಾಳಿ ಬೆಳಕಿಲ್ಲದ ಖೋಲಿ |
ಕಾಲು ಚಾಚೇನಂದರೆ ಜಾಗ ಇಲ್ಲ ||
ಪಾಲಿಗೆ ಬಂದಿದ್ದಷ್ಟೇ ತಿನ್ನುವುದು |
ಹೊಲಸಿನಲ್ಲೇ ಉರುಳಾಡುವುದು ||
ಒಳದನಿ ಹೊರಗ್ಯಾರಿಗೂ ಕೇಳದು |
ಒಲ್ಲೆನೆಂದರೂ ನವಮಾಸ ಇರಲೇಬೇಕು ||
ಎಲ್ಲ ಸೈರಿಸಿದರೂ ಹೊರಬರಲು ತಿಳಿಯದು |
ಒಲವಿಂದ ವಾಯು ಹೊರಹಾಕಿದರೆ ||
ಅಳುತ್ತಾ ಉಸಿರೆಳೆದುಕೊಳ್ಳುವೆ |
ಕಾಲ ಎಲ್ಲ ದು:ಖ ಮರೆಸುವುದಂತೆ ||
ಕಳೆದ ಗರ್ಭವಾಸ ದು:ಖ ಮರೆತು |
ಉಳಿದ ದಿನ ಆನಂದದಿ ಕಳೆವೆ ||
ಕಾಲ ಚಕ್ರದಿ ಪುನ: ಪುನ: ಸಿಲುಕಿ |
ಒಳಗೆ ಬರುವುದು ಹೊರಗೆ ಹೋಗುವುದು ||
ಎಲ್ಲ ಬಲ್ಲ ಚೆಲ್ವ ಶ್ರೀಕೃಷ್ಣವಿಠ್ಠಲ ಪಾರುಮಾಡೋ ||
67. ಪರಿಮಳವು ಕಸ್ತೂರಿ, ಶ್ರೀಗಂಧದಲಿ |
ಹಾರುವುದು ಆಗಸದಿ ಹಕ್ಕಿಗಳಿಗೆ ||
ಪರೋಪಕಾರಿ ಮರಗಳಿಗೆ ನಿಶ್ಚಲತ್ವ |
ನೀರಲಿ ಈಸುವುದು ಜಲಚರವು ||
ಸರ್ವರಲೂ ಒಂದೊಂದು ವಿಶೇಷತೆವಿಟ್ಟ |
ಪರಮಾತ್ಮ ಮನುಜರಿಗಾಗಿ ಮೀಸಲಿಟ್ಟ ||
ಸರ್ವೋತ್ತಮ ಗುಣಗಳಾದ ಜ್ಞಾನ-ಮಾತು |
ನರರು ಬರೀ ಲೌಕಿಕಕ್ಕಾಗಿ ಇದನ್ನು ಬಳಸಿ ||
ಶ್ರೀಕೃಷ್ಣವಿಠ್ಠಲನ ಪಾಡಿ ಪೊಗಳದಿರೆ ಮೆಚ್ಚುವನೇ ||
68. ನಿನ್ನ ಬಿಟ್ಟರನ್ಯರಿಲ್ಲ | ಎನ್ನವರೆನ್ನುವgÁåjಲ್ಲ ||
ಅನಾಥೋ ದೀನರಕ್ಷಕ | ಉನ್ನತದಿ ಎತ್ತಿ ಕಾಪಾಡು ||
ಎನಗೆ ನಿನ್ನ ಅರಿವಿಲ್ಲ | ನಿನಗೆ ಎನ್ನರಿವಿದ್ದರೆ ಸಾಕೋ ಶ್ರೀಕೃಷ್ಣವಿಠ್ಠಲ ||
69. ಹೊಂಗಿರಣ ಮೂಡಿ ಮೂಡಣದಿ ಉಲ್ಲಾಸ ತಂದಿತು | ||ಪ||
ಅಂಗನೆಯರೆದ್ದು ಸುರಾಗದಿ ಉದಯರಾಗ ಪಾಡುತಿರಲು ||ಅಪ||
ಅಂಗದಿ ಕಂಬಳಿಯ ಹೊದ್ದು ಕೈಲಿ ಕೋಲನೆ ಪಿಡಿದು |
ಪೊಂಗಳಲೂದುತ್ತಾ ನಡೆದ ಗೊಲ್ಲರೊಡಗೂಡಿ ||
ಸಂಗಡಿಗರೆಲ್ಲಾ ಹರುಷದಿ ಅಡವಿಗೆ ಪೋದರು |
ಚೆಂಗನೆ ನಗೆಯುತ್ತಾ ಗೋವುಗಳು ಮುನ್ನಡೆದವು ||1||
ಪೋಗುತ್ತಾ ಪೋದರೆಲ್ಲ ಗುಹೆಯಂತಿರುವ ಅಜಗರದೊಳಗೆ |
ಪೋಗಿದ್ದರೆಲ್ಲ ಒಳಗೆ ಗೋಗಳ ಸಹಿತ ಗೋಪಾಲಕರು ||
ದಂಗಾದ ಗೋಪಾಲಕರು ಭೀತಿಯಲಿ ಸ್ಮರಿಸಿದರು |
ಕಗ್ಗಂಟಿನಿಂದ ಪಾರಾಗುವುದರಲ್ಲೇ ವರುಷ ಕಳೆದಿತ್ತು ||2||
ಭಂಗವಾಗದಂತೆ, ಯಾರ ಅರಿವಿಗೂ ಬಾರದಂತೆ |
ಆಗ ಸೃಜಿಸಿದ ಗೋಪಾಲಕರ ಗೋಗಳ ಸಹಿತ ||
ಅಗಮ್ಯ ಮಹಿಮೆಯ ಸರ್ವಸಮರ್ಥ ಕರುಣಾಳು |
ಭಗವಂತ ಶ್ರೀಕೃಷ್ಣವಿಠ್ಠಲನೆಂತು ಪೊಗಳಲಿ ||3||
70. ಬುತ್ತಿ ಕಟ್ಟೋ ಮನುಜ ಏಳೋ ಬುತ್ತಿ ಕಟ್ಟೋ ||ಪ||
ಜೊತೆ ಸದಾ ಇರುವಂತೆ, ತಿನ್ನುವಂತಹ || ಬುತ್ತಿಕಟ್ಟೋ ||ಅಪ||
ಸುತ್ತು ಸುತ್ತುವಾಗ ಹಸಿವಾದಾಗ |
ಸುಸ್ತಾದಾಗ ಬೆಂಡು ಬಸವಳಿದಾಗ ||
ಹೊತ್ತು ಹೊತ್ತಿಗೆ ಹೊಟ್ಟೆಗೆ ಹಾಕಲು |
ಹಿತವಾದ ಬುತ್ತಿಯೇ ಹಿತಕೆ ಕಾರಣ ||1||
ಕರಗದ ಬುತ್ತಿ, ಚೆನ್ನಾಗಿ ಅರಗುವ |
ಸೋರದ ಹಾಗೆ ಸರಿಯಾಗಿ ಕಟ್ಟುವಂತಹ ||
ಸಾರದ ಬುತ್ತಿ, ಅಮೃತದಂತಹ |
ಮರೆಯದೆ ಜೊತೆ ಬರುವಂತಹ ||2||
ಕಳೆಯಲಾರದ ಎಂದೂ ಹಳೆಯದಾಗದ |
ಹಳಸಲಾರದ ಎಂದೂ ತಿಳಿಸಲಾರದ ||
ಕಳ್ಳತನವಾಗದ ಇಳೆಯೊಳು ಒಳ್ಳೆಯದಾದ |
ಕಳ್ಳ ಶ್ರೀಕೃಷ್ಣವಿಠ್ಠಲಗೆ ಪ್ರಿಯವಾದ ಬುತ್ತಿ ||3||
71. ಅನ್ನಬೇಕು, ಅನ್ನಬೇಕೆಂದು ಸದಾ ಅನ್ನುತಿರು |
ಚೆನ್ನಾದ ಅನ್ನ ತಿನ್ನಲು ಪರಿತಪಿಸುತಿರು ||
ಮನವಿಟ್ಟು ದುಡಿದು ಅನ್ನ ಬೇಡುತಿರು |
ಚಿನ್ಮಯ ಶ್ರೀಕೃಷ್ಣವಿಠ್ಠಲನೇ ಅನ್ನಪ್ರದಾತಾ ಎಂದು ಮರೆಯದಿರು ||
72. ಮೂಲ ತಿಳಿಯದಲ್ಲ, ಎಲ್ಲದರ ಮೂಲ ತಿಳಿಯದಲ್ಲ |
ಮೂಲದ ನೆಲೆಯ ಸುಳಿವೂ ಸಿಗದಲ್ಲ ||
ಎಲ್ಲಿಂದ ಬಂದೆವು, ಎಲ್ಲಿಗೆ ಹೋಗುವೆವು |
ಎಲ್ಲ ಭೋಗ-ಸಂಪತ್ತು ಎಲ್ಲಿಂದ ಬಂದಿತು ||
ಬಲದಿಂದ, ಒಲವಿಂದ ಸಿಗುವುದೂ ಇಲ್ಲ |
ಒಲ್ಲೆನೆಂದರೆ ಸಿಗದೆ ಇರುವುದೂ ಇಲ್ಲ ||
ಕಾಲ ಹೇಗೆ ಬರುವುದು, ಹೇಗೆ ಸರಿವುದು |
ಎಲ್ಲದರ ಚಲನಾ ಚಲದ ಕಾರಣವಾವುದು ||
ಚೆಲ್ವ ಶ್ರೀಕೃಷ್ಣವಿಠ್ಠಲನೇ ಪೇಳಿ ತಿಳಿಸಬೇಕಷ್ಟೆ ||
73. ಕಾಲವು ಹೇಗೆ ಬಂದು-ಹೋಗುವುದೋ | (ಕಾಲ=ಸಮಯ & ಪ್ರಾಣ)
ಕಾಲ-ಕಾಲಕೆ ಕಾಲ ಹೇಗೆ ಒದಗುವುದೋ ||
ಕಾಲ ಎಮ್ಮ ,ಕಾಲ ಸೆಳೆದೊಯ್ಯುದೇಕೆ |
ಕಾಲಕಾಶ್ರಿತ ಶ್ರೀಕೃಷ್ಣವಿಠ್ಠಲ ಕಾಲಕಾಲದಿ ಕಾಯಲಿ ||
74. ದಾರಿಯ ತೋರೋ ಮುಕುಂದನೇ | ಬೇಗ ||ಪ||
ದೂರದ ದಾರಿಯು ಸಲ್ಲದು-ಸನಿಹದ ದಾರಿತೋರೋ ||ಅಪ||
ಸರಿದಾರಿ ಕಲ್ಲು-ಮುಳ್ಳಿಲ್ಲದ ದಾರಿ |
ಭಾರ ಹೊತ್ತಿರುವೆ ಸುಗಮದಾರಿಯ ತೋರೋ ||1||
ನೀರಡಿಕೆ-ಹಸಿವು, ದಣಿವಾಗದಂತಹ ದಾರಿ |
ತಿರುಗಿ ಬರಬಾರದಂತಹ ದಾರಿಯ ತೋರೋ ||2||
ಇರುಳು ಭಯಾನಕ ಒಬ್ಬಳೇ |
ಗಾರುಡಿಗಾರ, ಗಾಡಿಕಾರ ಶ್ರೀಕೃಷ್ಣವಿಠ್ಠಲ ದಾರಿ ತೋರೋ ||3||
75. ರಥದ ರಥಿಕನೇ ಪಥ ತೋರೋ |
ವೃಥಾ ಪೃಥ್ವಿಯಲಿ ಬಳಲಿಸದೆ ||
ಜಾಥಾದೊಳಗೆ ಯಥಾ ಪ್ರಕಾರವಿಡದೆ |
ಅರ್ಥ-ಕಾಮ ವರ್ಜ್ಯದಿ ಧರ್ಮದಿಂದಿದ್ದು ||
ಪಂಥದಿ ಸ್ವಾರ್ಥತೆ ತೊರೆದು ಪ್ರಾರ್ಥಿಪೆ |
ನಾಥ ಶ್ರೀಕೃಷ್ಣವಿಠ್ಠಲ ಸುಪಥ ತೋರೋ ||
76. ಬಂಧುಗಳ ಭಾಗ್ಯದಿಂ ಬಡವರಿಗೇನು ಫಲವಿಲ್ಲ |
ಶ್ರೀದೇವಿ, ಕಲ್ಪವೃಕ್ಷ, ಶಂಖಕ್ಕೂ ರತ್ನಾಕರನೇ ತಂದೆ ||
ಊದಿ ಶಂಖ ಮನೆಗಳಲಿ ಭಿಕ್ಷೆ ಬೇಡುವುದುಂಟು |
ಮಂದಿಗೆ ಯಾಚಿಸುವ ದುರವಸ್ಥೆ ತಪ್ಪಲಿಲ್ಲ ||
ಬೇಡಿದ್ದೆಲ್ಲಾ ಕೊಡುವ ಮಹಾದಾನಿ ಕಲ್ಪವೃಕ್ಷ |
ಸುಂದರಿ, ವರಿಸಿ ಶ್ರೀಕೃಷ್ಣವಿಠ್ಠಲನ ಎದೆಯಲಿ ಸ್ಥಿರದಿ ನಿಂತಳು ||
77. ಆರು ಕಾಯ್ವರು ಈ ಜೀವನದಿ |
ಆರನ್ನು ನಂಬುವುದು ತಿಳಿಯದು ||ಪ||
ಕೈಕೇಯಿಯಂತಹ ತಾಯಿ |
ಹಿರಣ್ಯಕಶ್ಯಪನಂತಹ ತಂದೆ ||
ಶ್ರೀರಾಮನಂತಹ ಪತಿ |
ತಾಯಿಯ ಶಿರ ಕಡಿವ ಮಗ ||1|| (ಪರಶುರಾಮ)
ಸುಗ್ರೀವನಂತಹ ತಮ್ಮ |
ಮಾವನ ಶಿರ ತರಿದ ಅಳಿಯ || (ಶಿವ)
ಶಿಷ್ಯನ ಬೆರಳು ತೆಗೆದ ಗುರು || (ದ್ರೋಣ)
ಶ್ರೀಕೃಷ್ಣವಿಠ್ಠಲ ನಿನ್ನ ಬಿಟ್ಟು ಯಾರನ್ನೂ ನಂಬಲಾರೆ ||
78. ದಾನ ಇತ್ತವರಲ್ಲಿ ಯಾರು ಶ್ರೇಷ್ಟರೂ ||ಪ||
ತನ್ನ ಅನ್ನ-ನೀರು ಕೊಟ್ಟ ರಂತಿಯೇ |
ತನ್ನ ಕವಚ-ಕುಂಡಲವಿತ್ತ ಕರ್ಣನೇ ||1||
ತನ್ನ ಮಾಂಸವನ್ನೇ ಕೊಟ್ಟ ಶಿಬಿಯೇ |
ತನ್ನ ಬೆನ್ನೆಲುಬಿತ್ತ ದಧೀಚಿಯೇ ||2||
ಹೊನ್ನು- ಹಣ ದಾನವಿತ್ತ ಪುರಂದರದಾಸರೇ |
ತನ್ನ ನಲವತ್ತು ವರುಷ ಆಯುರ್ದಾನ ಮಾಡಿದ ಗೋಪಾಲದಾಸರೆ ||3||
ತನ್ನನ್ನೇ ದಾನಿಸಿದ ಜೀಮೂತವಾಹನನೇ |
ದಾನಿಸಲು ಅವಕಾಶವಿತ್ತ ಶ್ರೀಕೃಷ್ಣವಿಠ್ಠಲನೇ ||4||
79. ಬಂದಿ ತುಂಬಿದ ಜಗದಿ ಒಬ್ಬನಾಗಿ |
ಇದ್ದಿ ಬಂಧು-ಬಳಗ ಮಧ್ಯದಲಿ ||
ಬಿದ್ದಿ ಕಷ್ಟ-ಸುಖದ ಗುಂಡಿಯಲಿ |
ಹೊದ್ದಿ ಪಾಪ-ಪುಣ್ಯಗಳ ಹೊದಿಕೆ ||
ಸದ್ದಿಲ್ಲದೆ ಹೋದಿ ಶ್ರೀಕೃಷ್ಣವಿಠ್ಠಲನೊಡನೆ | (ಜೀವ-ಆತ್ಮ)
ಸಾಧಿಸಿದ್ಧೇನು ಎಂದು ಮಾತ್ರ ತಿಳಿಯಲಿಲ್ಲ ||
80. ವೇದವ್ಯಾಸರು, ಸತ್ಯವತಿ-ಪರಾಶರ ಪುತ್ರರು |
ಬಾದರಾಯಣರು ವಿಶಾಲ ಬದರಿಲಿ ನೆಲಸಿಹರು ||
ವೇದ ವಿಭಾಗಕರು-ಪಂಚರಾತ್ರವಿತ್ತವರು |
ಓದಲು ದಶೋಪನಿಷತ್-ಮಹಾಭಾರತ ರಚಿಸಿಹರು ||
ಬಿದ್ದ ಜೀವಿಗಳ ಉದ್ಧರಿಸಲು ಭಾಗವತಾದಿ ಇತ್ತವರು |
ವಿದುರ, ಪಾಂಡು-ಧೃತರಾಷ್ಟ್ರರ ಸೃಷ್ಟಿಸಿದರು ||
ಮಧ್ವ ಗುರುವಿಗೆ ಧರ್ಮವಿಧ್ಯೆ ಬೋಧಿಸುತ್ತಿರುವರು |
ಶುದ್ಧರಾದ ಇವರೇ ಶ್ರೀಕೃಷ್ಣವಿಠ್ಠಲಾಭಿನ್ನರು ||
81. ಜೀವಿ ಹುಟ್ಟಿದಾಗ ಇರುವ ಗ್ರಹಸ್ಥಾನದಿಂದ ಜೀವಿತದಿ ಫಲ |
ಅವನ ಪುರ್ವಜನ್ಮಕೃತ ಪಾಪ-ಪುಣ್ಯಗಳಿಂದ ಫಲ ||
ಸರ್ವ ಅನಿಷ್ಟ ಫಲದಿಂದ ಪಾರಾಗುವ ಬಗೆ ಹೇಗೆಂದು |
ಅವಕಾಶ ಸಿಕ್ಕಂತೆ ಬದಲಾಗುವ ಮನುಜ ||
ತಾ ವಂಚಿಸಿ ಜಾತಕವನ್ನೇ ಬದಲಿಸಿದರೆ ಹಣೆಬರಹ ಬದಲಾಗುವುದೇ |
ಸರ್ವಗ್ರಹ ಬಲ ಶ್ರೀಕೃಷ್ಣವಿಠ್ಠಲ ಕರ್ಮಫಲ ಬದಲಾಯಿಸುವನೇ ||
82. ಕಾಣುವ ಪ್ರಪಂಚದಲ್ಲಿ ಭೇದ |
ಉಣುವ ಪದಾರ್ಥದಲ್ಲಿ ಭೇದ ||
ದಣಿವ ಜೀವಗಳಲಿ ಭೇದ |
ಮಣ್ಣು-ಮಣ್ಣಲಿ ಭೇದ ||
ಬಣ್ಣ ಬಣ್ಣದ ಹೂಗಳಲಿ ಭೇದ |
ಕಾಣದ ಪರಿಮಳದಲಿ ಭೇದ ||
ಕಣ್ಣರಿಯದ ದೇವತೆಗಳಲಿ ಭೇದ |
ವರ್ಣ್ಯಾತ್ಮಕ ಸೃಷ್ಟಿಯಲಿ ಭೇದ ||
ಗುಣ ಪೂರ್ಣನ ಅವತಾರದಿ ಭೇದ |
ಸ್ವರ್ಣಗರ್ಭ ಶ್ರೀಕೃಷ್ಣವಿಠ್ಠಲನ ಸರ್ವನಾಮ ಮಾತ್ರ ಅಭೇದ ||
83. ಭೇದಾತ್ಮಕ ಪ್ರಪಂಚದಿ ತಾರತಮ್ಯ ಸಹಜ |
ವೇದಾತ್ಮಕ ನಿರ್ಣಯದಿ ದ್ವೈತ-ಅದ್ವೈತ ಸಹಜ ||
ಆಧ್ಯಾತ್ಮಕ ಸಾಧನೆಯಲಿ ವಿವಿಧ ದಾರಿ ಸಹಜ |
ವಂದ್ಯಾತ್ಮಕ ಶ್ರೀಕೃಷ್ಣವಿಠ್ಠಲ ಒಬ್ಬನೇ ಅಸಹಜ ||
84. ಅಂದದ ದೇಹವ ಸುಂದರವಾಗಿಸಿ |
ಚೆಂದದ ಜೀವನ ಚಂದನವಾಗಿಸಿ ||
ಹೋದ ಸಮಯ ಮರಳಿಬಾರದು |
ವಂದಿಸಿ ಶ್ರೀಕೃಷ್ಣವಿಠ್ಠಲನ, ಬಂಧನ ನೀಗಿಸಿ ||
(ಶಂಖ ಚಕ್ರ ದ್ವಾದಶನಾಮ ಧರಿಸಿ ಅಖಂಡ ಪರೋಪಕಾರದಿ,
ವ್ಯರ್ಥ ಸಮಯ ಕಳೆಯದೇ, ಸತತ ಸ್ಮರಿಸಿ ಶ್ರೀಕೃಷ್ಣವಿಠ್ಠಲನ, ಜನ್ಮ ಸಾರ್ಥಕವಾಗಿಸಿ )
85. ಜನಸೇವೆ ಡಂಬಾಚಾರಕ್ಕೆಂದೂ ಮಾಡದಿರು |
ಮನಮುಟ್ಟಿ ಮಾಡಿದ್ದು ಹೇಳಿ ಪುಣ್ಯ ಕಳೆದುಕೊಳ್ಳದಿರು ||
ಋಣದ ಕರ ಸಂದಾಯಿಸಲು ಪರರ ಸೇವಿಸು |
ತನು,ಮನ,ಧನ ಯಾವುದೇ ರೂಪದಲ್ಲಿರಲಿ ||
ಧನ-ಪ್ರಸಿದ್ಧಿ-ಲೋಭದಾಸೆಗಾಗಿ ಮಾಡದಿರು |
ಹೀನ-ಸ್ವಾರ್ಥ ಕಾರಣಕ್ಕಾಗಿ ಬಳಸದಿರು ||
ಪುನ: ಪ್ರತೀ ಪ್ರತ್ಯುಪಕಾರ ಬಯಸದಿರು |
ಈ ನರ ಜನುಮದ ದೇಹ-ಆತ್ಮಶುದ್ಧಿಗಾಗಿ ಮಾಡು ||
ಜನ-ಮೆಚ್ಚದಿರೆ ಎಂದೂ ದು:ಖಿಸದಿರು |
ಕೊನೆಯತನಕ ಅವಕಾಶವಿದ್ದೆಡೆ ಬಿಡದೆ ಸೇವಿಸು ||
ಮಾನ್ಯ, ಆತ್ಮಸ್ಥ ಶ್ರೀಕೃಷ್ಣವಿಠ್ಠಲನ ಸೇವೆಯೆಂದು ಸೇವಿಸು ||
86. ಹಣದ ಹಿಂದೆ ಬಿದ್ದು ಹೆಣಗಾಡದಿರು |
ಸಣ್ಣಗಾಗದಿರು ಎಲ್ಲರ ಮೆಚ್ಚಿಸಲು ||
ಕಣಜದಿ ಕೂಡಿಟ್ಟ ಧಾನ್ಯ ಹಾಳಾಗುವುದು |
ಮಣ ಬಂಗಾರವಿತ್ತರೂ ಯಾರೂ ತೃಪ್ತರಾಗರು ||
ಮಣ್ಣು-ಮನೆಎಂದೂ ಜೊತೆಗೊಯ್ಯಲಾಗದು |
ಬಣ್ಣದ ಜಗತ್ತಿನಲ್ಲೂ ಹೃದಯದಿ ವೈರಾಗ್ಯತಾಳು ||
ಹೆಣವಾಗುವ ಮುನ್ನ ಜ್ಞಾನಗಳಿಸು |
ಕ್ಷಣವೂ ಹಾಳುಮಾಡದೇ ಸಾರ್ಥಕದಿ ||
ಕಣ ಕಣದಿ ಶ್ರೀಕೃಷ್ಣವಿಠ್ಠಲನ ಪ್ರತಿ ಭಕ್ತಿ ತುಂಬಿಸು ||
87. ಮಾನವ ಜನುಮದಿ ಅನವರತ ನೆನೆಯಲೇಬೇಕು |
ಜ್ಞಾನಾನಂದ ರೂಪಿಯ ಸಕಲ ಅವತಾರ, ಸಕಲ ಪ್ರದಾತ ||
ಅನೇಕ ಅವತಾರವಾದರೂ ಪರಮಾತ್ಮನೊಬ್ಬನೇ |
ಘನಕಾರ್ಯವೆಸಗುವ ಪ್ರತೀ ಅವತಾರದಿ ||
ಅನ್ಯನಲ್ಲನಿವ ಗುಣಪೂರ್ಣ, ದೋಷದೂರ, ನಿತ್ಯಸತ್ಯ |
ನೆನೆಯಲು ಅನೇಕ ರೂಪ, ಜಪಿಸಲು ಒಂದೇಮಂತ್ರ ||
ಚೆನ್ನಾಗಿ ನೆನೆದರೆ ವಿವಿಧ ರೂಪದಿ ಕೃಪೆ ತೋರುವ |
ನೆನೆದರೆ ಮತ್ಸ್ಯನ ಸತ್ಯಸಂಧನಾಗುವಿ ||
ನೆನೆದರೆ ಕೂರ್ಮನ ಕರ್ಮ ಕಳೆದುಕೊಳ್ಳುವಿ |
ನೆನೆದರೆ ವರಾಹನ ಅಹಂಕಾರ ಪೋಪುದು ||
ನೆನೆದರೆ ನಾರಸಿಂಹನ ಭಯ ಪರಿಹರಿವುದು |
ನೆನೆದರೆ ವಾಮನನ ಸುಂದರ ವಿಚಾರ ಬರುವುದು ||
ನೆನೆದರೆ ಭಾರ್ಗವನ ದುಷ್ಟಶಕ್ತಿ ದೂರ ನಿಲ್ಲುವವು |
ನೆನೆದರೆ ಶ್ರೀರಾಮನ ಜೀವನವೆಲ್ಲಾ ಆರಾಮ ||
ನೆನೆದರೆ ಬುದ್ಧನ ಬುದ್ಧಿ ಶುದ್ಧವಾಗುವುದು |
ನೆನೆದರೆ ಕಲ್ಕಿಯ ರಕ್ಷಣೆ ಸಿಗುವುದು ||
ಅಚ್ಯತನ ನೆನದರೆ ಚ್ಯತಿಯಾಗದೆಂದೂ |
ನೆನೆದರೆ ಅನಂತನ ಪುಣ್ಯಅನಂತವು ||
ನೆನೆದರೆ ಗೋವಿಂದನ ಸೇರುವಿ ಶ್ರೀಕೃಷ್ಣವಿಠ್ಠಲನ ಪಾದ ||
88. ಪರರಿಗೆ ಸೇರಿದ್ದು ತೆಗೆದುಕೊಳ್ಳಬೇಡಾ |
ಪರಸತಿ, ಪರಧನ, ಪರಾಸ್ತಿ ಕಣ್ಣಿತ್ತಿ ನೋಡದಿರು ||
ಪರರ ಪೀಡಿಸಿ ಮನ ನೋಯಿಸದಿರು |
ಪರಮಾತ್ಮ ಕೊಟ್ಟಿದ್ದರಲ್ಲೇ ತೃಪ್ತಿಪಡು ||1||
ಇರುವುದರಲ್ಲೇ ಸಂತಸದಿಂದಿರು |
ಇರುದುದರೆಡೆಗೆ ತುಡಿತವಿರದಿರಲಿ ||
ಇರುತಿರು ಸದಾ ವಿನೀತ-ಪುನೀತ ಭಾವದಿ |
ಇರುಳು-ಹಗಲು ದೇವರ ಸ್ಮರಣೆ ಇರಲಿ ||2||
ಮರೆಯುತಿರು ಮನದ ಕಹಿ ಪ್ರಸಂಗಗಳ |
ಮರೆಯದಿರು ಮಾನವ ಜನುಮವಿತ್ತವನ ||
ಮೆರೆಯುತಿರು ಸದ್ಭಕ್ತರ ಸತ್ಸಂಗದಲಿ |
ಸ್ಮರಿಸುತಿರು ಮಹಾದೇವನ ಲೀಲೆಗಳ ||3||
ಮರ್ಮಭೇದಕ ಮಾತಲಿ ಮನ ನೋಯಿಸದಿರು |
ಪರರ ಸುಖ ನೋಡಿ ಕರುಬದಿರು ||
ಪರಲೋಕದ ಸಾಧನೆಗಾಗಿ ಪರಿತಪಿಸುತಿರು |
ಪರಮಾತ್ಮ ಶ್ರೀಕೃಷ್ಣವಿಠ್ಠಲನ ಭಜಿಸುತಿರು ||4||
89. ಅನ್ಯರ ಸಂಗಮಾಡದಿರು | ಅನ್ಯಥಾ ಸಮಯ ಕಳೆಯದಿರು ||
ಅನ್ನಕ್ಕಾಗಿ ಪರದಾಡದಿರು | ಅನ್ಯರಿಗೆ ದೈನ್ಯದಿ ಕೈ ಒಡ್ಡದಿರು ||
ಅನ್ಯನಲ್ಲ, ಸ್ವಾಮಿ ನನ್ನವನೆಂದು ಸಂತಸಪಡು |
ಅನನ್ಯ ಭಕ್ತಿ ಶ್ರೀಕೃಷ್ಣವಿಠ್ಠಲನಲ್ಲಿ ಎಂದೂ ಬಿಡದಿರು ||
90. ಹೆರವರ ವಸ್ತುಗಾಗಿ ಕಣ್ಣಟ್ಟರೆ ಕಣ್ಣು ಕಳೆದುಕೊಳ್ಳುವಿ |
ಹೆರವರ ದೋಷಗಳೆಣಿಸಿದರೆ ದೋಷಪೂರ್ಣನಾಗುವಿ ||
ಹೆರವರಿಗೆ ಉಪಕರಿಸದಿದ್ದರೂ ಅಪಕಾರವೆನಿತೂ ಮಾಡದಿರು |
ಹೆರವರಿಗೆ ಮನದಲ್ಲೂ ಕೆಡಕು ಬಯಸದಿರು |
ಹೆರವರನು ನಿಂದಿಸಿ ಮನ ನೋಯಿಸದಿರು ||
ಹೆರವರಲ್ಲೂ ಅಂತರ್ಯಾಮಿಯಾಗಿ ಶ್ರೀಕೃಷ್ಣವಿಠ್ಠಲನೇ ಇಹನು ||
91. ಬಾಯಿಗೆ ಸವಿ, ಸತತ ಮನಕೂ ಸವಿ |
ಭಯ-ಭವತಾರಕ ಸ್ಫೂರ್ತಿದಾಯಕ ಸವಿ ||
ಒಯ್ಯಬಹುದು ಎಲ್ಲೆಡೆ ಭಾರವಿಲ್ಲದ ಸವಿ |
ಸಾಯುವತನಕ ಸವಿಯುವ ಸವಿ ||
ಹೇಯವಲ್ಲದ, ಸದ ಬಯಸುವ ಸವಿ |
ಗೇಯದೇ ಸುಖ ನೀಡುವ ಸವಿ ||
ಕೈಯ್ಯಲಿ ಕಾಸು ಇಲ್ಲದೆಯೂ ಸಿಗುವ ಸವಿ |
ಮೈಯೊಳಗೆ ಚೇತನ ಹರಿಸುವ ಸವಿ ||
ಆಯ್ದ ಸವಿಯ ಸವಿ, ಆಯ್ದವರೇ ಬಲ್ಲರು |
ದಯಾಮಯ ಶ್ರೀಕೃಷ್ಣವಿಠ್ಠಲನ ನಾಮದ ಸವಿ ||
92. ಬಡಾಯಿ ಕೊಚ್ಚದಿರು ಪರರೆದುರು |
ಮಾಡಿದ್ದು-ಮಾಡದ್ದು ಹೇಳಿಕೊಳ್ಳದಿರು ||
ನೋಡಿದ್ದೂ ನೋಡದಂತಿರು ಜಗದಲಿ | (ಅನ್ಯಾಯ)
ಮೊಂಡಾಟ-ಒಡನಾಟ ಮಾಡದಿರು || (ದುಷ್ಟರಸಂಗ, ಅಹಂಕಾರ)
ಬಿಡದಿರು ಸತ್ಸಂಗ ಬಿಟ್ಟು ಕೆಡದಿರು |
ಒಡೆಯ ಶ್ರೀಕೃಷ್ಣವಿಠ್ಠಲನ ಲೀಲೆಗಳ ಕೋಂಡಾಡುತಿರು ||
(ಸಂಗಬಿಡದಿರು ಬಿಟ್ಟುಕೆಡದಿರು)
93. ಪಾದವ ಭಜಿಸಿ ಸೌಖ್ಯ ಪೊಂದಿರೋ ಎಂದಿಗೂ ||ಪ||
ಅದಮ್ಯ ಭಕ್ತಿಲಿ ಪಾದವ ನಂಬಿರೋ ||ಅ.ಪ||
ಪಾದ-ಪ್ರಕ್ಷಾಲನೆಯ ಪವಿತ್ರ ಜಲ ಶಿರದಿ ಧರಿಸು |
ಶುದ್ಧ ಭಾಗವತರು ಪೇಳುವ ಸನ್ಮತಿಯ ಪಾಲಿಸು ||
ಸದಾಚಾರ, ಸತ್ಯ-ಅಹಿಂಸೆ- ಪರೋಪಕಾರದಿ |
ಹೃದಯದಿ ಧರಿಸಿ ಭಕ್ತಿ, ನಡೆ-ನುಡಿ ಒಂದಾಗಿಸೋ ||1||
ಒಂದೇ ಮನದಿ ಗುರು-ಹಿರಿಯರ ಪಾದ ನಮಿಸಿ |
ಪಾದ ಸೇವೆ ದಿವ್ಯೌಷಧ ಕಲಿಯುಗದಲಿ |
ಬಂದ ದುರಿತ ಕಳೆದು ಇಹ-ಪರರ ಸುಖವೀವ ||
ಎಂದೆಂದಿಗೂ ಸದ್ಧರ್ಮವಾಚರಿಸುವರ ಬಿಡದೆ ||2||
ಹಿಂದೆ ಆಗಿದ್ದುದರ ಚಿಂತಿಸಿ ಹಳಿಹಳಿಸದಿರು |
ಮುಂದೆ ಉಳಿದ ಸಮಯ ಸದ್ವಿನಿಯೋಗಿಸು ||
ಬಂದ ಮಾನವ ಜನುಮದಿ ಇದನ್ನೇ ಸಾಧಿಸಿ |
ಸದ್ಭಾವದಿ ಶ್ರೀಕೃಷ್ಣವಿಠ್ಠಲನ ಪಾದ ಬಿಡದಿರೂ ||3||
94. ಗುರುಗಳ ಪಾದ ಸೇವೆ ಎಂದರೆ |
ಧರ್ಮಶಾಸ್ತ್ರ ಅಧ್ಯಯನ ಮಾಡುತ್ತಾ ||
ಮಾರ್ಗದರ್ಶನದಂತೆ ನಡೆವುದು |
ಸೂರ್ಯಕೋಟಿ ಸಮಪ್ರಭೆ ಬೀರುವ ||
ನರಸಿಂಹನ ಪಾದ ನಖದ ಗುಣಗಳೆಣಿಸುವ |
ಶ್ರೀರಮಾ, ಬ್ರಹ್ಮಾದಿಗಳ ತಾರತಮ್ಯದಿ ಅರಿತು ||
ಸುಹೃದಯದಿ ಧೃಡಭಕುತಿ ಧರಿಸುವುದು ||
ಶ್ರೀಕೃಷ್ಣವಿಠ್ಠಲ ಆಗ ಕೊಡುವ ತನ್ನ ಪಾದಸೇವಾ ಭಾಗ್ಯ ||
95. ಹರಿಯ ಪಾದದ ವಜ್ರಾಂಕುಶ, ಗದಾಪದ್ಮ |
ತೋರುವುದು ನಾವು ಬಾಳುವ ರೀತಿಯ ||
ವಜ್ರದಂತೆ ಕಠಿಣ ಯಮ-ನಿಯಮ ಆಚರಿಸಿ |
ಗರಿಕೆದರಿ ಹಾರಾಡುವ ಮನಕೆ ಅಂಕುಶ ಹಾಕಿ ||
ಭಾರದ ಗದಾ ಪ್ರಹಾರ ಶಾಸ್ತಿಗೆ ಹೆದರಿದರೆ |
ಪೊರೆವ ಪದ್ಮಸ್ಥ ಶ್ರೀಕೃಷ್ಣವಿಠ್ಠಲನ ಪಾದ ನಂಬಲು ||
96. ಮನದಿ ಅಗಣಿತ ಗುಣಧಾಮನ ಕೊಂಡಾಡುವುದೇ ಮೌನ |
ಮೌನ ಸಾಧಿಸಿ ಸಪ್ತ ಕ್ರಿಯೆಯಲಿ ಪುಣ್ಯವರ್ಧಿಸುವುದು ||
ಮೌನ ಧರಿಸಿ ಅನ್ನ-ಜಲ ಸೇವನೆಯ ಸಮಯದಿ |
ಮೌನ ಧರಿಸಿ ಮೂತ್ರ ವಿಸರ್ಜನೆಯಲಿ ||
ಮೌನ ಧರಿಸಿ ಮಲ ತ್ಯಜಿಸುವಾಗ |
ಮೌನ ಧರಿಸಿ ದಂತ-ಧಾವನದಿ ||
ಮೌನ ಧರಿಸಿ ಸ್ನಾನ ಶುದ್ಧಿಯಲಿ |
ಮೌನ ಧರಿಸಿ ಹೋಮ ಮಾಡುವಾಗ ||
ಮೌನ ಧರಿಸಿ ಜಪ-ತಪದಲಿ |
ಮೌನ ಧರಿಸಿ ಪೂಜಿಸೆ, ಶ್ರೀಕೃಷ್ಣವಿಠ್ಠಲ ಮೆಚ್ಚುವಾ ||
97. ಮೌನ ಪಾಲಿಸಿ ಹರಿ ದಿನದಿ |
ಮೌನದಿ ಅಂತ: ಶಕ್ತಿವರ್ಧಿಸಿ ||
ಮನದಿ ಸುಭಕ್ತಿ ಹೆಚ್ಚಲು |
ಜ್ಞಾನದ ವಿಶಿಷ್ಠ ಅನುಭವದಿ ||
ಚಿನ್ಮಯರೂಪಿ ಶ್ರೀಕೃಷ್ಣವಿಠ್ಠಲ ವೇದ್ಯನಾಗುವ ||
98. ಭಕ್ತಿಯಲಿ ಅರ್ಪಿಸು ಮಾಡಿದ್ದ ಕರ್ಮವೆಲ್ಲಾ || ಬಿಡದೆ ||ಪ||
ಲಕ್ಷ್ಮೀಪತಿಯನೊಲಿಸಲು ಬುಧರು ಪೇಳಿದಂತೆ ||ಅ.ಪ||
ಸಣ್ಣ ದೊಡ್ಡ ಕಾರ್ಯಮಾಡಿ ತಣ್ಣಗಿರು |
ಕ್ಷಣದಿ “ನಾಹಂ ಕರ್ತಾಹರಿ: ಕರ್ತಾ” ಎಂದು ||
ಪುಣ್ಯ ಕರ್ಮವ ಮಾಡಿ ಸಮರ್ಪಿಸು |
ಪೂರ್ಣ ನಿಷಿದ್ಧ ಕರ್ಮ ತೊರೆದು ಒಪ್ಪಿಸು ||
ಅಣು-ರೇಣು, ತೃಣ ಕಾಷ್ಠದಲ್ಲಿರುವ |
ಗುಣಪೂರ್ಣ ಶ್ರೀಕೃಷ್ಣವಿಠ್ಠಲನ ಒಲಿಸಿಕೋ ||1||
ತನು-ಮನದಿ ಮಾಡಿದ್ದೆಲ್ಲಾ |
ದಿನದಿನದಿ ಸಮರ್ಪಿಸು ||
ನೆನ್ನೆ-ನಾಳೆ ಆಗಿದ್ದು, ಆಗುವುದೆಲ್ಲಾ |
ಮನದಿ ಸಮರ್ಪಿಸು ಸರ್ವತ್ರವ್ಯಾಪ್ತಗೆ ||
ಆನಂದದಿಂದರು ಸತತ ಮರೆತು |
ಅನುಭವದಿ ಶ್ರೀಕೃಷ್ಣವಿಠ್ಠಲನ ಒಲಿಸಿಕೋ ||2||
ತ್ರೈಕರ್ಮ ದೈಹಿಕ, ದೈಶಿಕ, ಕಾಲಕವ |
ನಿಷ್ಕಾಮನೆಯಲಿ ಭಾರತೀಶನ ನೆನೆದು ||
ತತ್ಕಾಲದ ಆನಂದವ ಶ್ರೀಕೃಷ್ಣಾರ್ಪಣವೆಂದು |
ಭಕ್ತಿಪರವಶದಿ ಪೇಳಿದರೆ ಸಾಕು ||
ಮುಕ್ಕಿದ ಒಪ್ಪಿಡಿ ಅವಲಕ್ಕಿಯಂದದಿ |
ಶ್ರೀಕೃಷ್ಣವಿಠ್ಠಲ ಸ್ವೀಕರಿಸಿ ಅನಂತ ಫಲವೀವ ||3||
99. ವಿಶ್ವಕರ್ತ, ವಿಶ್ವಪ್ರಾಣ, ವಿಶ್ವಸ್ಥ |
ವಿಶ್ವಾಧಾರ, ವಿಶ್ವಕುಟುಂಬಿ, ವಿಶ್ವನಿಧಿ ||
ವಿಶ್ವಾರೂಪಿ, ವಿಶ್ವಪಿತ, ವಿಶ್ವದ್ಧಾತ್ರಿ (ಗಂಗಾ) |
ವಿಶ್ವಜ್ಯೋತಿ, ವಿಶ್ವಸೃಷ್ಟಿ, ವಿಶ್ವ ಲಯಕರ್ತ ||
ವಿಶ್ವದೇವ, ವಿಶ್ವದಿ ದೃಷ್ಟಾದೃಷ್ಟ |
ವಿಶ್ವಸುಂದರ, ವಿಶ್ವಸೃಜ, ವಿಶೇಷ ||
ವಿಶ್ವಮೋಹಕ, ವಿಶ್ವಾಧೀಶ, ವಿಶ್ವ ಚಕ್ಷುಸ್ |
ವಿಶ್ವನಾಥ,ವಿಶ್ವತ:, ವಿಶ್ರುತ, ವಿಸ್ತೃತ ||
ವಿಶುದ್ಧ, ವಿಶಿಷ್ಟ, ವಿಲಕ್ಷಣ, ವಿಶ್ವಂಭರ |
ವಿಶ್ವೇಶ ಶ್ರೀಕೃಷ್ಣವಿಠ್ಠಲ ವಿಶ್ವವಂದ್ಯಂ ||
100. ವೇಷಧರಿಸಲು ವಿಶ್ವದೇವ ಕಾಂಬೆನೆ |
ಕೋಶ ಸುತ್ತಲು ಪಂಚಕೋಶಸ್ಥ ಕಾಣನು ||
ವಿಶ್ವವ್ಯಾಪ್ತನ ವಿಶ್ವದಿ ಅನುಭವಿಸಲು |
ವಿಶೇಷದಿ ಅಂತರ್ಮುಖಿಯಾಗೇ ||
ಶೇಷಶಯನನ ದಯವಾಗಲು |
ಸುಶೇಷ ಶ್ರೀಕೃಷ್ಣವಿಠ್ಠಲ ಅಲ್ಪದಿ ತೋರ್ಪ ||