ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 3.2

ಮುಳುಗಿಸೆನ್ನ ಈ ಜೀವನದಿ ಮುಳುಗಿಸು |

ಏಳದಂತೆ ಕುತ್ತಿಗೆ ಒತ್ತಿ ಮುಳುಗಿಸು ||ಪ||

ಒಪ್ಪಿದವರು ಮೆಚ್ಚುವಂತೆ ಸದಾ |

ಸಪ್ತಕ್ರಮದಲ್ಲೇ ಮುಳುಗಿಸು ||ಅಪ||

ಸುಪಾವಕ ಚಿನ್ಹೆ ಧರಿಸಿ ಮೆರೆವಲ್ಲಿ |

ಸುಪಥದಿ ಸಾಗಿ ಸಂದರ್ಶಿಸುವಲ್ಲಿ ||

ಕೃಪೆಯಿಂ ಸ್ವೀಕರಿಸುವ ತೀರ್ಥ-ಪ್ರಸಾದದಿ |

ಒಪ್ಪವಾಗಿ ಸತತ ನಾಮಸ್ಮರಣೆಯಲಿ ||

ಸುಪ್ತೇಶನ ರಂಗಿನ ಕಥಾಸಾಗರದಿ |

ಅಪ್ಯಾಯವಾದ ಆಳದ ಧ್ಯಾನದಲಿ ||

ಸುಪೂಜೆಯ ಮೌನದ ಆನಂದದಿ |

ಅಪ್ಪ ಶ್ರೀಕೃಷ್ಣವಿಠ್ಠಲ ನೀ ಮುಳುಗಿಸಿದಷ್ಟೂ ನಾ ತೇಲುವೆ ||2||

102. ಧರ್ಮ ಬೇರೆ, ದಾನ ಬೇರೆ |

ಧರ್ಮವೆಂದರೆ ಮನುಜ ಸಹಜ ||

ಕರುನದಿ ನೀಡುವ ಅನ್ನ-ವಸನ |

ಬೀರುವ ಸಹಾಯ ದೈನ್ಯರಿಗೆ ||

ಸರ್ವರ ಕಷ್ಟದಿ ಮನಮಿಡಿಯುವುದು |

ದಾನವೆಂದರೆ ಕೈಎತ್ತಿ ಪಾತ್ರರಿಗೆ ||

ನನ್ನದಲ್ಲ ಇದು ನಿಮ್ಮದೇ ಎಂದು |

ಮನಕೆ ಪ್ರೀತಿ ಕರವಾಗಿದ್ದು ಕೊಡುವುದು ||

ಪುಣ್ಯ ವಿಶೇಷ ಪಡೆಯಲು ದಕ್ಷಿಣೆ ಜೊತೆ |

ಎನ್ನ ಶ್ರೀಕೃಷ್ಣವಿಠ್ಠಲಗರ್ಪಿಸುವುದು ||

103. ದಾನದಿ ತ್ರಿವಿಧ ಉತ್ತಮ, ಮಧ್ಯಮ, ಅಧಮ |

ಮೌನದಿ ಸಕಾಲಕೆ ಪಾತ್ರರಿಗೆ ದಕ್ಷಿಣೆ ||

ಮನದಿ ಫಲಪೇಕ್ಷೆ ಇಲ್ಲದೆ ಕೊಡುವುದು ಉತ್ತಮ |

ದಾನಿಸಿದ ಮೇಲೂ ವಸ್ತುವಿನ ಮಮಕಾರ ||

ಮನದಿ ಪ್ರತಿ ಫಲಾಪೇಕ್ಷೆ ಇದ್ದರೆ ಮಧ್ಯಮ |

ತನಗೆ ಬೇಡವಾದ ತಿರಸ್ಕೃತ ವಸ್ತು ||

ತನ್ನ ಪ್ರಶಂಸನೆಗಾಗಿ ದಕ್ಷಿಣೆ ರಹಿತ ಇತ್ತರೆ ಅಧಮ |

ದಾನಿಸಿದರೆ ಶ್ರಿಕೃಷ್ಣವಿಠ್ಠಲ ಮೆಚ್ಚುವಂತಿರಬೇಕು ||

ಮನ್ನಿಸಿ ತನ್ನಾಲಯದಿ ಇರಿಸುವಂತಿರಬೇಕು ||

104. ಕಾಲಕೂ ಮುಂಚೆ ಕಾಣಿಸಿದಿರೆ |

ಫಲವೇನು ನಿನ್ನ ಪಾಡಿ-ಕೊಂಡಾಡಿದುಕೆ ||

ಬಲವಿಲ್ಲದೆನ್ನಲಿ, ಛಲ ತೋರದೆ |

ಅಲ್ಪ ದೃಷ್ಟಿಯ ಮಂದ ಭಾಗ್ಯಳೆನ್ನದೆ ||

ಅಲ್ಲಲ್ಲಿ ಸ್ವಲ್ಪವಾದರೂ ಕಂಡರೆ |

ಒಲುಮೆಯಲಿ ಶ್ರೀಕೃಷ್ಣವಿಠ್ಠಲ ನಿನ್ನ ಒಪ್ಪುವೆನಯ್ಯಾ ||

105. ಎಂದು ಒಲಿಯುವೆ ಎನಗೆ ಎಂದು ಕಾಂಬುವೆ |

ಎಂದಿಗೆ ಬಂದು ಬೇಗ ಸಂದರುಶನವೀವೆ ||ಪ||

ಸುತ್ತಮುತ್ತ ನೀನಿದ್ದರೂ ಎಲ್ಲೂ ಕಾಣೆನೂ |

ಪ್ರತಿ ವಸ್ತುವಲ್ಲಿದ್ದರೂ ಎಂದೂ ತೋರಲಿಲ್ಲ ||

ತತ್ತದಾಕಾರದಲ್ಲಿದ್ದರೂ ಎಂದೂ ಗುರುತಿಸಲಿಲ್ಲ |

ಕತ್ತಲೆ ತುಂಬಿದೆ ಬೆಳಕಿನ ಕಿರಣ ಬೀರೆಯಾ ||1||

ವೇದಶಾಸ್ತ್ರವ ಖಚಿತದಿ ತಿಳಿಯಲಿಲ್ಲ |

ಬುದ್ಧಿ ಮನದಿ ಪೂರ್ಣದಿ ಅರಿಯಲಿಲ್ಲ ||

ಬುಧ-ಜನರ್ಯಾರೂ ಸಹಾಯವಾಗಲಿಲ್ಲ |

ಮಂದ-ಅಯೋಗ್ಯಳೆಂದು ತಿರಸ್ಕರಿಸಬೇಡಾ ||2||

ಅರಿತಷ್ಟು ಜ್ಞಾನದಿ ಸಾಧಿಸಿ ನೊಡದಾದೆ |

ಬರಿದೇ ಭಕ್ತಿಲಿ ಪೂಜಿಸಲು ಅರಿಯೆ ||

ವೈರಾಗ್ಯವೆನಿತೂ ಬಾರದೀ ಜನುಮದಿ |

ಕರುಣೆಯಲಿ ಶ್ರೀಕೃಷ್ಣವಿಠ್ಠಲ ನೀನೇ ಕಾಣಿಸೆಯಾ ||3||

106. ನೀನಿದ್ದರೆ ಸಕಲವೂ ಹಿತವೆನಿಸುವುದು |

ನೀನೆದ್ದರೆ ಹಿತವೂ ಅಹಿತವೆನಿಪುದು ||

ನೀನೊದ್ದರೆ ಬರುವುದೂ ಬಾರದು |

ನೀನೇ ನನ್ನಹಿತ, ನನ್ನ ಭಾಗ್ಯ ಶ್ರೀಕೃಷ್ಣವಿಠ್ಠಲ ||

107. ಇರುಳಲಿ-ಹಗಲಲಿ ನೀನು |

ಸುರಿವ ಮಳೆ-ಮಿಂಚಲಿ ನೀನು ||

ಕಣ್ಣಿಗೆ ಕಾಣುವುದರೆಲ್ಲೆಲ್ಲಾ ನೀನು |

ಮಣ್ಣಿನ ಕಣ-ಕಣದಲಿ ನೀನು ||

ಆಕಾಶದ ಅವಕಾಶದಿ ನೀನು |

ಪ್ರಕಾಶದ ಸೂರ್ಯನಲಿ ನೀನು ||

ಬೀಸುವ ಗಾಳಿಯಲಿ ನೀನು |

ಸೂಸುವ ತಂಪಿನಲಿ ನೀನು ||

ದಾಹ ತಣಿಸುವ ನೀರಲಿ ನೀನು |

ದಾಹಕ ಅಗ್ನಿಯಲಿ ನೀನು ||

ನೋಡುವ ದೃಷ್ಟಿಯಲಿ ನೀನು |

ಪಾಡುವ ಪದದಲಿ ನೀನು ||

ಪ್ರತಿ ಉಸಿರಿನಲಿ ನೀನು |

ಪ್ರತಿ ತುತ್ತು ಅನ್ನದಿ ನೀನು ||

ಮಾಡುವ ಕರ್ಮದಲಿ ನೀನು |

ಬಡಿಯುವ ಮಿಡಿತದಿ ನೀನು ||

ಮೊಳಕೆಯ ಅಂಕುರದಿ ನೀನು |

ಸೆಳೆಯುವ ಪ್ರಾಣನಲಿ ನೀನು ||

ಸರ್ವಕಾಲದಿ ಸಕಲದಿ ನೀನು |

ಶ್ರೀಕೃಷ್ಣವಿಠ್ಠಲ ನೀನಿಲ್ಲದೇನಿಲ್ಲ ||

108. ಜೊತೆ ಬಾರದು ಎಂದಿಗೂ ಜೊತೆ ಬಾರದು |

ಮತ್ತೆ ಮಾಡಿದ ಪಾಪ-ಪುಣ್ಯ ಬಿಟ್ಟು ಬೇರೇನೂ ಬಾರದು ||ಪ||

ಉಂಡುಟ್ಟು ಮೆರೆದ ದೇಹಸುಖ |

ಗಂಡು ಗಲಿಯಂತೆ ಮಾಡಿದ ಅಧಿಕಾರ ||

ಬಿಡದೇ ಗಳಿಸಿದ ಆಸ್ತಿ-ಅಂತಸ್ತು |

ಒಡನಾಡಿಗಳು ಯಾರು ಸಂಗಡ ಬಾಹರು ||1||

ಅನ್ಯಾಯ-ಮೋಸದಿ ಗಳಿಸಿದ ಹಣ |

ದಾನಿಸದೇ ಜಿಪುಣತನದ ಹಣ ||

ಅನ್ನ-ವಿದ್ಯೆ-ಮಕ್ಕಳ ಮಾರಿದ ಹಣ |

ಮನೆ-ಮಡದಿ,ಬಂಧುಗಳ್ಯಾರೂ ಬಾಹರು ||2||

ಗುರು-ಹಿರಿಯರಿಗೆಸೆದ ದ್ರೋಹ |

ಕಿರಿಯರಿಗೆ, ದು:ಖಿತರಿಗೆ ಮಾಡದ ಸಹಾಯ ||

ಪರಮ ಪ್ರಿಯ ಶ್ರೀಕೃಷ್ಣವಿಠ್ಠಲನ ಸ್ಮರಿಸದಕಾಲ |

ವಜ್ರಲೇಪದಂತೆ ಬಿಡದೆ ಹಿಂಬಾಲಿಸುವುದು ||3||

109. ನೀನು ಸಕಲರಿಗೂ ಆಶ್ರಯನಾದರೆ |

ನಾನೂ ಆಶ್ರಯದಾತೆ ನಿನ್ನ ಒಲುಮೆಯಲಿ ||ಪ||

ನೀನು ಒಂಟಿ ನಿನ್ನಿಂದ ಎಲ್ಲರೂ ಇಹರು |

ನಾನು ಸಂಘ ಜೀವಿ ಇವರಿಲ್ಲದೆ ಬದುಕಲಾರೆ ||ಅ.ಪ||

ಎನ್ನೊಳಗೊಬ್ಬ ಆಸೆಬುರುಕನಿರುವ |

ಎನ್ನೊಳಗೊಬ್ಬ ಸುಳ್ಳನಿರುವ ||

ಎನ್ನೊಳಗೊಬ್ಬ ಕಳ್ಳನಿರುವ ||1||

ಎನ್ನೊಳಗೊಬ್ಬ ಸಮಯ ಸಾಧಕನಿರುವ |

ಎನ್ನೊಳಗೊಬ್ಬ ವಂಚಕನಿರುತ ||

ಎನ್ನೊಳಗೊಬ್ಬ ಕ್ರೋಧನಿರುವ ||2||

ಎನ್ನೊಳಗೊಬ್ಬ ಕಾಮುಕನಿರುವ |

ಎನ್ನೊಳಗೊಬ್ಬ ಮತ್ಸರನಿರುವ ||

ಎನ್ನೊಳಗೊಬ್ಬ ಅಸಹನನಿರುವ ||3||

ಎನ್ನೊಳಗೊಬ್ಬ ದ್ವೇಷಿ ಇರುವ |

ಎನ್ನೊಳಗೊಬ್ಬ ದು:ಖಿ ಇರುವ ||

ಎನ್ನೊಳಗೊಬ್ಬ ಅಸಂತೃಪ್ತಿ ಇರುವ ||4||

ಎನ್ನೊಳಗೆಲ್ಲ ಇವರೇ ಇರಲಾಗಿ |

ನಿನಗೆಲ್ಲಿದೆ ಜಾಗ ಶ್ರೀಕೃಷ್ಣವಿಠ್ಠಲ ||

ನಿನ್ನೊಳಗೇ ಸದಾ ಎನ್ನಿರಿಸಿಕೋ ಸ್ವಾಮಿ-ದಯಾನಿಧೇ ||5||

110. ವಿಷ ವಿಷಯಗಳಿಂದ ದೂರ ವಿಶೇಷ |

ಅಶೇಷ ದೋಷದೂರ ಶೇಷಶಾಯಿ ||

ಈಶ ಸುರಾದಿ ನರರಿಗೂ ಲಕ್ಷ್ಮೀಶ |

ಶುಚಿಪ್ರಿಯ ಶುಭದಾಯಿ ಶ್ರೀಕೃಷ್ಣವಿಠ್ಠಲ ||

111. ಶಾಂತ, ಅತೀಶಾಂತ, ಸುಶಾಂತನಿವ ||ಪ||

ಭ್ರಾಂತನಲ್ಲ ಲಕ್ಷ್ಮೀಕಾಂತ ಸುಕಾಂತ ||ಅ.ಪ||

ಅಂತ್ಯ ಆದಿ ಇಲ್ಲದವ ಪ್ರಶಾಂತ |

ಸ್ವತಂತ್ರ ತಾನಿರುವ ಸದಾ ಸ್ವರತ ||

ಮತ್ಸ್ಯಾದಿ ರೂಪದಿ ಅವತರಿಪ |

ಅಂತರ್ಬಹಿರ ಬ್ರಹ್ಮಾಂಡದಿ ವ್ಯಾಪುತ ||1||

ಸತತ ಸೃಷ್ಟಿ-ಲಯ ಲೀಲೆಯಲಿ ಮಾಳ್ಪ |

ಸ್ಥಿತಿ-ನಿಯಮನದಿ ತಲ್ಲೀನ ಗುಣಪೂರ್ಣ ||

ಭಕ್ತವತ್ಸಲ ದು:ಖಾರ್ತ-ಭೀತರ ಕಾಯ್ವ |

ಮೂರ್ತಿಮಾನ್ ಸಚ್ಚಿದಾತ್ಮ ಶ್ರೀಕೃಷ್ಣವಿಠ್ಠಲ ||2||

112. ನಮ್ಮವರೆಂಬುವರು ಹೊತ್ತಿಗೆ ಒದಗರು |

ಸುಮನದಿ ಹೊತ್ತಿಗಾಗುವರೇ ನಮ್ಮವರು ||

ನಮ್ಮವರು-ಪರರೆನ್ನದೆ ಸೇವಿಸು ಸರ್ವರ |

ನಮ್ಮವರಲ್ಲದವರೂ ನಮ್ಮವರಾಗುವರು ||

ನಮ್ಮವನಾಗೇ ಸದಾ ಇರುವವನೊಬ್ಬನೇ |

ನಮ್ಮ ಸಹೃದಯಿ, ಅವನೇ ಶ್ರೀಕೃಷ್ಣವಿಠ್ಠಲ ||

113. ಯಾರೋ ಹೆತ್ತವರು, ಯಾರೋ ಅನ್ನವಿತ್ತವರು |

ಯಾರೋ ವಿತ್ತ ವಿತ್ತವರು, ಯಾರೋ ವಿದ್ಯೆ ವಿತ್ತವರು ||

ಯಾರೋ ಜೊತೆಯಲ್ಲಿದ್ದವರು, ಯಾರೋ ಬಿಟ್ಟುಹೋದವರು |

ಯಾರೋ ಹೊತ್ತಿಗಾದವರು, ಯಾರೋ ಧೈರ್ಯವಿತ್ತವರು ||

ಯಾರೋ ಸುಖವಿತ್ತವರು, ಯಾರೋ ದು:ಖವಿತ್ತವರು ||

ಯಾರೋ ಗೊತ್ತಿದ್ದವರ, ಗೊತ್ತಿಲ್ಲದವರ ಕೈವಾಡ ||

ಯಾರೋ ಸ್ಮಶಾನಕೊಯ್ಯುವರು, ಪರರ ಸ್ವತ್ತು ಈ ಜೀವನ |

ಯಾರೂ ಮೊದಲಿಂದ ಕಡೆವರೆಗೆ ಇರಲಿಲ್ಲ ||

ಯಾರು ಯಾರೋ ಗೊತ್ತಿಲ್ಲ ಆದರೆ ಎಲ್ಲರೊಳಗಿರುವ |

ಪರಾತ್ ಪರ ಶ್ರೀಕೃಷ್ಣವಿಠ್ಠಲನಂತೆ ನಡೆವುದು ಸದಾ ||

114. ಎಲ್ಲಿ ಹುಡಕಲಿ ರಂಗಯ್ಯಾ ನಿನ್ನ ಎಲ್ಲಿ ಕಾಣಲಿ |

ಎಲ್ಲೆಡೆ ನೀನಿರುವಿ ಎಂಬುವರು ಬಲ್ಲವರು ||ಪ||

ಕಲ್ಲಿನಲ್ಲೂ ಕಾಣೆನಲ್ಲ-ಎಲ್ಲರಲ್ಲೂ ಕಾಣೆನು |

ಸಲ್ಲುವರಲ್ಲೂ ಕಾಣಸಿಗದೇ ಎಲ್ಲಿ ಇರುತಿಹಿ ||

ಮೇಲ್ನೋಟಕೆ ಕಂಡಿರುವೆ ನಿನ್ನ ಎಂಬುವರ |

ಸೊಲ್ಲ ಕೇಳಿ ಹುಡುಕಿ ಹುಡುಕಿ ಮೋಸಹೋದೆ ||1||

ಹೊರಗಣ್ಣಿನಿಂದ ಗುರುತಿಸದಾದೆ |

ಅರಿಯ ದಾದೆ ಅಂತರಂಗದಲಿ ||

ಸರಿದ ಸಮಯ ಸರಿದು ಹೋಯಿತು |

ಬರುವ ಸಮಯ ಸಾರ್ಥಕಗೊಳಿಸು ||2||

ಬುದ್ಧಿಗೆ ನಿಲುಕದ, ದೃಷ್ಟಿಗೆ ಎಟುಕದ |

ಒಂದು ಕ್ಷಣವೂ ಮನದಿ ನಿಲ್ಲದವನ ||

ಎಂದೂ ಕಾಣದೆ ವ್ಯರ್ಥ ಪ್ರಯತ್ನಿಸಿದೆ |

ಹೃದಯದಿ ವಾಸಿಪ ಶ್ರೀಕೃಷ್ಣವಿಠ್ಠಲ ಇನ್ನೂ ಕಾಣಲಿಲ್ಲ ||3||

115. ನಿನ್ನ ಭಕ್ತರ ಪಟ್ಟಿಯಲ್ಲಿ |

ಅನ್ನ-ದಾನ ಕೊಟ್ಟವರಲ್ಲಿ ||

ಅನ್ಯರಲ್ಲಿ ದಯೆ ಇಟ್ಟವರಲ್ಲಿ |

ಜ್ಞಾನಿಗಳ ಸಾಲಿನಲ್ಲೂ ಎನ್ನ ಹೆಸರಿಲ್ಲ ||

ನಿನಗಾಗಿ ವ್ರತ ಮಾಡದವರ |

ನಿನ್ನ ಪ್ರೀತ್ಯರ್ಥಶಾಸ್ತ್ರ ಓದದವರ ||

ನಿನ್ನ ಹೊರತು ಅನ್ಯರತರಲ್ಲಿ |

ಎನ್ನ ಹೆಸರೇ ಮೊದಲಿದೆ ||

ಚೆನ್ನ ಶ್ರೀಕೃಷ್ಣವಿಠ್ಠಲ ಸರಿಯೋ ತಪ್ಪೋ ತಿಳಿಯದು |

ನೀನಿಟ್ಟಂತೆಯೇ ಸದಾ ನಾನಿರುವೆ ||

116. ಎಷ್ಟು ದಿವ್ಯ, ಎಷ್ಟು ಭವ್ಯ- ಶ್ರೀಕೃಷ್ಣಗಾಥಾ |

ಎಷ್ಟು ರಮ್ಯ, ಎಷ್ಟು ರೋಚಕ - ಶ್ರೀಕೃಷ್ಣಗಾಥಾ ||

ಶಿಷ್ಟ ವಿಶಿಷ್ಟ, ನಿತ್ಯ ಸತ್ಯ - ಶ್ರೀಕೃಷ್ಣಗಾಥಾ |

ನಿಷ್ಠೆಯಲಿ ಧರ್ಮಪರಿಪಾಲಕ- ಶ್ರೀಕೃಷ್ಣಗಾಥಾ ||

ಪುಟ್ಟವನಾಗಿ ಗೈದ ಮೇರು ಸಾಹಸದ- ಶ್ರೀಕೃಷ್ಣಗಾಥಾ |

ದುಷ್ಟರ ದಮನ ಗೈದು ರಕ್ಷಿಸಿದ - ಶ್ರೀಕೃಷ್ಣಗಾಥಾ ||

ಕಷ್ಟಕಾಲದಿ ಸಕಲರ ಸಲುಹಿದ - ಶ್ರೀಕೃಷ್ಣಗಾಥಾ |

ದಿಟ್ಟ ಸದಾ ಆಪದ್ಬಾಂಧವನ- ಶ್ರೀಕೃಷ್ಣಗಾಥಾ ||

ಇಷ್ಟದಿ ತತ್ವಜ್ಞಾನ ಬೋಧಿಸಿದ - ಶ್ರೀಕೃಷ್ಣಗಾಥಾ |

ದೃಷ್ಟಿಯಲಿ ವಿರಾಟರೂಪ ತೋರಿದ - ಶ್ರೀಕೃಷ್ಣಗಾಥಾ ||

ಚೇಷ್ಟೆಯಲಿ ಸ್ವಕುಲ ನಾಶಗೈದ- ಶ್ರೀಕೃಷ್ಣಗಾಥಾ |

ಹೃಷ್ಟನಾದ ವೀರ ಶ್ರೀಕೃಷ್ಣವಿಠ್ಠಲನ- ಶ್ರೀಕೃಷ್ಣಗಾಥಾ ||

117. ಸಕಲರ ಬದುಕಿನ ದಾರಿದೀಪ ಶ್ರೀಕೃಷ್ಣನಕಥೆ |

ಸಕಲ ಕಲಾವಲ್ಲಭ ತಾ ನಡೆದು ತೋರಿದ ||

ಸುಕರ್ಮ-ಕುಕರ್ಮಗಳ ಫಲವೀವ ನಿತ್ಯ |

ಸಂಕಲ್ಪ-ವಿಕಲ್ಪ, ಭಕ್ತ-ಅಭಕ್ತರ ಪೋಷಿಪ ||

ಶ್ರೀಕೃಷ್ಣವಿಠ್ಠಲ ಯದುಕುಲ ಲಲಾಮ ಸತ್ಯಸ್ಯಸತ್ಯ ||

118. ನಂಬಿದರಿಗೆ ಇಂಬುನೀಡುವ |

ನಂಬದವರಿಗೆ ಚೊಂಬು ಕೊಡುವ ||

ನಂಬಿಯೂ-ನಂಬದವರಿಗೆ ಕಂಬದಂತಿರುವ |

ನಿಭತ್ಕಾಯ ಶ್ರೀಕೃಷ್ಣವಿಠ್ಠಲ ಅವರವರ ತೆರನಾಗಿರುವ ||

119. ಸತತ ಮಾಡುವ ಕೆಲಸ ಸರಾಗವಾಗುವಂತೆ |

ಚಿಂತಿಸುವುದು ಅಂತೆಯೇ ಸುರಾಗವಾಗುವುದು ||

ಅಂತ್ಯಕಾಲದಿ ಶ್ರೀಕೃಷ್ಣವಿಠ್ಠಲನ ಚಿಂತನೆ ಬರಬೇಕೆಂದರೆ |

ಸತತ ಚಿಂತನೆಯ ಸುರಾಗವಿದ್ದರೆ ಸರಾಗದಿ ಆಗುವುದು ||

120. ದುರ್ಗಂಧ ಒಳಗೆ ತುಂಬಿರಲು | ಸುಗಂಧ ಹೊರಗೆ ಸೂಸುವುದ್ಹೇಗೆ ?|

ದುರ್ಗತಿ ಭಾವ ಒಳಗಿರಲು | ಸುಗತಿ ಮಾರ್ಗಪ್ರಾಪ್ತಿ ಹೇಗೆ ?||

ಸಂಗತಿ ಒಳ್ಳೆಯದಿರಲು | ಭಂಗ ಬರುವುದು ತಪ್ಪುವುದ್ಹೇಗೆ ||

ಮಂಗಳೇ ಕಟಾಕ್ಷವಿಲ್ಲದಿರೆ | ರಂಗ ಶ್ರೀಕೃಷ್ಣವಿಠ್ಠಲ ಒಲಿಯುವನ್ಹೇಗೆ ||

ಸುಗತಿ = ಮೋಕ್ಷಮಾರ್ಗ

ಭಂಗ= ಪುಣ್ಯಕಾರ್ಯದಿ

ಮಂಗಳೇಕಟಾಕ್ಷ = ಅಂತರ್ಗತಪೂಜೆ

121. ಜನಮನ ಜಗದೀ ಮೆಚ್ಚಿಸುವುದು ದುಸ್ತರ |

ಮನವಿರೆ ಅಂದಣದೀ ಕೂರಿಸಿ, ಇಲ್ಲದಿರೆ ಕೆಳಗೆ ನೂಕುವರು ||

ಕೊನೆವರೆಗೂ ಕೈಬಿಡದಿರುವವನೊಬ್ಬನೇ |

ಅನಿಮಿತ್ತ ಬಂಧು ಅವನೇ ಶ್ರೀಕೃಷ್ಣವಿಠ್ಠಲ ||

122. ಜನ್ಯ ಜನಕ ಪ್ರತಿ ಜನುಮಕೆ ಅನ್ಯರಿಹರು |

ಮಾನ-ಅಪಮಾನ ಪ್ರತಿ ಕ್ಷಣದಿ ಆಗುವುದು ||

ಅನ್ಯ ಚೊಂತಸದೆ ಸದಾ ಶ್ರೀಕೃಷ್ಣವಿಠ್ಠಲನ್ನೆ ಉಪಾಸಿಸಿದರೆ |

ಮಾನದೋ ಮಾನ್ಯ ನಿತ್ಯವೂ ಯೋಗಕ್ಷೇಮ ನೋಡಿಕೊಳ್ಳುವ ||

123. ಕ್ರೌರ್ಯವು ನರ-ನಾಡಿಯಲಿ ಹರಿವಾಗ |

ದಯೆಯು ಹೊರಗೆ ಸೂಸಬಲ್ಲುದೆ ? ||

ಮಾಯೆಯು ಒಳ-ಹೊರಗೆ ತುಂಬಿರಲು |

ಕಾಯಾ, ವಾಚಾ, ಮನಸಾ ಶ್ರೀಕೃಷ್ಣವಿಠ್ಠಲನ ಸೇವಿಸಲು ಸಾಧ್ಯವೇ ||

124. ದಾನಿಸಬೇಕು ಸದಾ ದಾನಿಸುತಿರಬೇಕು |

ದಾನದಲ್ಲಿ ದಾನ ಶ್ರೇಷ್ಠ ಅನ್ನದಾನ ||

ಉನ್ನತ, ಅತಿ ಉತ್ತಮ ದಾನ ವಿದ್ಯಾದಾನ |

ಅನ್ನವು ಜೀವಕೆ ಕ್ಷಣಿಕ ತೃಪ್ತಿ ಇತ್ತರೆ ||

ವಿನಾಶರಹಿತ ವಿದ್ಯೆ, ಜೀವನ ಪರ್ಯಂತ |

ಮನದುಂಬಿ ಶ್ರೀಕೃಷ್ಣವಿಠ್ಠಲನ ಪ್ರೀತ್ಯರ್ಥ ||

ದಾನಿಸಿದ ದಾನವೇ ಸಾರ್ಥಕ ದಾನ ||

125. ಬಾಗಿದರೂ ಬೀಗಿದರೂ ಹೋಗಲೇಬೇಕು |

ಹೋಗುವುದು ಎಲ್ಲಿಗೆ, ಹೇಗೆ, ಯಾವಾಗ ||

ಆಗಲೋ, ಈಗಲೋ ಮತ್ತ್ಯಾವಾಗಲೋ ಗೊತ್ತಿಲ್ಲ |

ಸಗ್ಗ ಸುಖವೋ, ನರಕ ದು:ಖವೋ ತಿಳಿಯದು ||

ಜಗದಿಂದ ಹೊರಟು ಮರಳಿ ಬರುವರೆಗಿರುವ |

ಜಾಗ ಯಾರೂ ಅರಿಯರು, ಅರಿತವರು ಪೇಳರು ||

ಕರ್ಮಭೂಮಿ ಇದು, ಎಲ್ಲ ಅವಸರದಿ ಬಂದು |

ಪೂರ್ವನಿರ್ಧಾರಿತ ಕಾರ್ಯಮುಗಿಸುವರು ||

ಸರ್ವರ ಜೀವನವೂ ವೈವಿಧ್ಯ, ವೈಚಿತ್ರ್ಯವು |

ಸರ್ವ ಪ್ರಾಣಿಗಳ ಜನ್ಮ-ಮೃತ್ಯು ಮಾತ್ರ ಖಚಿತ ||

ಯಾರೋ, ಎಲ್ಲಿವರೋ ಇಲ್ಲಿ ಬಂದು ಜೊತೆಇದ್ದು |

ತೆರಳುವರು ಸ್ವಸ್ಥಾನಕ್ಕೆ ಶ್ರೀಕೃಷ್ಣವಿಠ್ಠಲನ ಅನುಜ್ಞೆಯಲಿ ||

126. ದುರ್ಗಮ ಜೀವನದ ಸುಗಮ ಮಾರ್ಗವೆಂದರೆ |

ಭಗವಂತನ ಪಾದಸೇವೆ, ಅನನ್ಯಭಕ್ತಿ ||

ಜಗಕೆ ಸತ್ಸಂತಾನ ಕೊಡ ಮಾಡುವಿಕೆ |

ನಿರ್ಗಮಿಸುವತನಕ ಸುಧರ್ಮ ಪರಿಪಾಲನೆ ||

ಸುಗುಣವಂತ ಶ್ರೀಕೃಷ್ಣವಿಠ್ಠಲನ ಅಣತಿಪಾಲನೆ |

ಆಗಲೇ ಮಾನವ ಜನುಮದ ಸಾರ್ಥಕ್ಯ ||

127. ತ್ರಿಕಾಲದಿ ಕಾಯಾ, ವಾಚಾ, ಮನಸಾ ಸುಖವೀವ |

ಶಂಕೆ ಇಲ್ಲದೆ ಕಷ್ಟಕಳೆದು ಸಂತೋಷವೀವ ||

ಸಕಲ ಪ್ರದಾತಾ ಈ ಜೀವಕೆ ಇಹ-ಪರದಿ ||

ಶ್ರೀಕೃಷ್ಣವಿಠ್ಠಲನ ನಂಬದೆ ಭವದಿ ಬಳಲುವಿರೇಕೆ ?||

128. ಪಂಚೇಂದ್ರಿಯ ಪಂಚ ಪಾಂಡವರಂತೆ, ಬುದ್ಧಿ ದ್ರೌಪದಿಯಂತೆ |

ಹೊಂಚುಹಾಕುವ ಕಲಿ ದುರ್ಯೋಧನನಂತೆ, ಕಷ್ಟದ ಸಂಸಾರದಿ ||

ವಂಚನೆಗೆ ಬಲಿಯಾಗದಂತೆ ಪೇಚಿನಿಂದ ಪಾರುಮಾಡುವ |

ಹೆಚ್ಚಿನ ಅಘಗಳ ತರಿದು, ಮೆಚ್ಚಿ ಉದ್ಧರಿಸುವ ನಮ್ಮ ||

ಅಚ್ಯುತಾನಂತ ಗೋವಿಂದ ಶ್ರೀಕೃಷ್ಣವಿಠ್ಠಲ ಕೈಪಿಡಿದು ನಡೆಸುವ ||

129. ಮುಚ್ಚಿಕೊಂಡಿರುವುದರಲ್ಲೇ ಇದೆ ಮರ್ಯಾದೆ |

ಹೆಚ್ಚಿನ ಮೈತೋರದೆ ಮುಚ್ಚಿದಷ್ಟೂ ಗೌರವ ||

ಬಚ್ಚಿಟ್ಟು ಅಂಜಿಕೆ, ಕೆಚ್ಚೆದೆ ಬಂಟನಂತೆ ತೋರಬೇಕು |

ಹಚ್ಚಬೇಕು ಆರದಂತಹ ನಂದಾದೀಪ ಬಿರುಗಾಳಿಯಲ್ಲೂ ||

ಮುಚ್ಚಿದ ಬಾಗಿಲೊಳಗಿರುವದೇ ಸದಾ ಸುರಕ್ಷೆ |

ಮುಚ್ಚಿ ಒಳಗೆ ಕಷ್ಟ-ಕಾರ್ಪಣ್ಯ ನಗುನಗುತಿರಬೇಕು ||

ಹೊಚ್ಚಹೊಸದಂತೆ ಹೊರಗೆ ತೋರಬೇಕು, ಒಳಗೆ ತೇಪೆ ಇದ್ದರೂ |

ಹೆಚ್ಚಿಗೆ ತೇಗಿರಿ ಮೃಷ್ಟಾನ್ನ ಉಂಡಂತೆ, ಉಪವಾಸವಿದ್ಧರೂ ||

ಕೊಚ್ಚೆ ಗುಂಡಿಯಲ್ಲಿದ್ದರೂ ಹೊರಗೆ ಕಮಲ ಅರಳಿಸಬೇಕು |

ಸ್ವಚ್ಛ ಮನದಿ ಸಕಲರ ಸೇವಿಸುತಿರಬೇಕು ||

ಮೆಚ್ಚುವ ಶ್ರೀಕೃಷ್ಣವಿಠ್ಠಲ ನಿಜದಿ ಅನುಗ್ರಹಿಸಿ ||

130. ಬಡತನವಿರಲಿ, ಸಿರಿತನವಿರಲಿ ಅಂಗಹೀನನಿರಲಿ |

(ಸುದಾಮ, ಅಂಬರೀಷ, ಜಡಭರತ)

ಎನ್ನೊಡೆಯ, ಬುದ್ಧಿ ಭ್ರಷ್ಟನಾಗಿಸಲು ಬೇಡಾ || (ಅಜಮಿಳ)

ಬಿಡದೆ ಪರಿಪಾಲಿಸೋ ನಿನ್ನವನೆಂದು | (ಪ್ರಲ್ಹಾದ)

ಕಡೆಗೆ, ಕಡೆಹಾಯಿಸೋ ಆಪದ್ಬಾಂಧವ ಶ್ರೀಕೃಷ್ಣವಿಠ್ಠಲನೇ || (ಗಜೇಂದ್ರಮೋಕ್ಷ)

131. ಉರಿ ಬಿಸಿಲ ಬೇಗೆ ಇರಲಿ, ಮರದ ತಂಪಿರಲಿ |

ಸೂರು ಇರಲಿ, ಇರದೇ ಸದಾ ತಿರುಗುತಿರಲಿ ||

ಬರೀ ಉಪವಾಸವಿರಲಿ, ಮೃಷ್ಷಾನ್ನ ಭೊಜನವಿರಲಿ |

ಜರಿ ಪೀತಾಂಬರವಿರಲಿ, ಹರಕು ವಸನವಿರಲಿ |

ಶ್ರೀಕೃಷ್ಣವಿಠ್ಠಲ ಹೇಗಾದರೂ ಇರಲಿ ಜೊತೆಗಾರನಾಗಿರಲಿ ||

132. ಉಸಿರಲಿ, ದೇಹದಿ ಕಣ-ಕಣದಿ ಇದ್ದು |

ಬಸಿರಿನಿಂದ- ಉಸಿರಿರುವ ತನಕ ||

ಸಂಸಾರದ ಕೆಸರಿನಿಂದ ಪಾರುಗೈವ |

ಕಂಸಾರಿ ಶ್ರೀಕೃಷ್ಣವಿಠ್ಠಲನಿರೆ ಕ್ಲೇಶವೆಲ್ಲಿದೆ ? ||

133. ಪರಮಾತ್ಮನ ಕರುಣಾಪೂರಿತ ದೃಷ್ಟಿ |

ಅಮೃತದ ಹಸ್ತ ತಲೆಯ ಮೇಲೆ ||

ಪೂರ್ಣಕೃಪೆಯಲಿ ಪೋಷಿತನಾಗಿರಲು |

ಶ್ರೀಕೃಷ್ಣವಿಠ್ಠಲನಲಿ ಹೇಗೆ ರತಿ ಮಾಡದಿರಲಿ ||

134. ಅಂಜನಾಪುತ್ರ ಭಕ್ತಿಯಲಿ ಸೇವಿಸಿದ ಪ್ರಥಮಾವತಾರದಿ |

ಭಂಜಿಸಿದ ಕುರುಸೈನ್ಯ ಬಲಭೀಮನಾಗಿ ದ್ವಿತೀಯವತಾರದಿ ||

ಅಂಜಿಸಿ ಕುಮತಿಗಳ ಪೂರ್ಣಪ್ರಜ್ಞರಾಗಿ ತೃತೀಯವತಾರದಿ |

ರಂಜಿಸಿದ ವಿವಿಧ ಕಾರ್ಯಸಾಧಕನಾಗಿ ರಾಮ, ಕೃಷ್ಣ, ವೇದವ್ಯಾಸರ ||

ಭಜಿಸಿ ಭಕ್ತಿಯಲಿ ಮುಖ್ಯಪ್ರಾಣನು ಮೂರು ಅವತಾರದಿ |

ಕಂಜನಾಭ ಶ್ರೀಕೃಷ್ಣವಿಠ್ಠಲನ ಬಿಡದೆ ಸರ್ವತ್ರ ಜೊತೆಲಿರುವ ||

135. ಹೊಟ್ಟೆ ಹಾಳು ಹೊಟ್ಟೆ, ಹೊಟ್ಟೆಗಾಗಿ ಏನೇನೋ ಮಾಡಿಸುವುದು |

ಹುಟ್ಟಿಂದನಿಂದ ಚಟ್ಟವೇರುವತನಕ ಬಿಡದ ಹೊಟ್ಟೆ||

ಕುಟ್ಟಿ ಕುಟ್ಟಿ ಒಳಗ್ಹಾಕಿದರೂ ಎಂದಿಗೂ ತೃಪ್ತವಾಗದು |

ಕಟ್ಟ ಕಡೆಯತನಕ ತುಂಬದೇ, ಹಿಗ್ಗಿಸಿದಷ್ಟೂ ಹಿಗ್ಗುವುದು ||

ಕೆಟ್ಟದ್ದು-ಸುಟ್ಟಿದ್ದು, ಸುಡದದ್ದು ಮಸಣದಂತೆ ಹಿಡಿಸುವುದು |

ಹೊಟ್ಟೆಯಿಂದಲೇ ಆರೋಗ್ಯ, ಹೊಟ್ಟೆಯಿಂದಲೇ ನಾನಾರೋಗ ||

ಕಷ್ಟಪಡಿಸುವುದಲ್ಲದೇ, ನಾನಾ ಅಪಮಾನಗಳ ಭರಿಸುವುದು |

ಒಟ್ಟಿನಲಿ ಬಡವ-ಶ್ರೀಮಂತನೆನ್ನದೆ ಎಲ್ಲ ಜೀವಿಗಳ ಬೆಂಬಿಡದು ||

ಹೊಟ್ಟೆಬಾಕ ಶ್ರೀಕೃಷ್ಣವಿಠ್ಠಲನ್ನೇ ಬೇಡಿದರೆ ಹೊಟ್ಟೆತುಂಬುವುದೇನೋ |

136. ನಿಲ್ಲೇ ಗೋಪಿಕೆ ನಿಜವ ಪೇಳೇನಗೆ |

ಹಾಲು-ಬೆಣ್ಣೆಗೆ ಕೃಷ್ಣ ನಿನ್ನ ಮೆಚ್ಚಿದನೇನೆ ||ಪ||

ಒಲವಿಂದ ಮೃಷ್ಟಾನ್ನ ನೀಡುವೆ ಎನ್ನ ಒಪ್ಪುವನೇನೆ ? ||ಅಪ ||

ಕಳ್ಳತನ ಹೊರೆಸಿ ಒರಳಿಗೆ ಕಟ್ಟಿಸಿದೆ |

ಮೆಲ್ಲಗೆ ಮೆಚ್ಚಿಸಿ ರಾಸವ್ಹೇಗೆ ಆಡಿದೆ ? ||1||

ಎಳೆದ ಸೆರಗ ದಾರಿ ಬಿಡದೆ ಎಂದೆ |

ನಲಿದು ಹೃದಯಲಿ ಹೇಗೆ ನಿಲ್ಲಿಸಿದೆ ? ||2||

ಗೊಲ್ಲರೆಲ್ಲರ ಗೋಕುಲದಿ ಪೊರೆದ ಚಿಣ್ಣ |

ಸಲ್ಲಿದನ್ಹೇಗೆ ಮಥುರೆಗೆ ಪೋಗಿ ||3||

ಎಲ್ಲ ಬಲ್ಲ ಲಕುಮಿರಮಣ |

ಎಲ್ಲರ ಹೇಗೆ ಮರುಳ ಮಾಡಿದ ? ||4||

ಮಲ್ಲ ಸಕಲರ ದುರಿತ ಕಳೆವ |

ಚೆಲ್ವ ಶ್ರೀಕೃಷ್ಣವಿಠ್ಠಲ ಪುನ: ಗೋಕುಲಕೆ ಬರಲಿಲ್ಲವೇಕೆ ? ||

137. ಕೊಂಡು ತಂದ ಜೀವನ ವ್ಯರ್ಥವಾಗುತಿಹೆ |

ಚೆಂಡಿನಂತೆ ಈಡಾಡುತಿಹುದು ಕಂಡರೂ ||ಪ||

ಭಂಡ ಜೀವ ಕಾಡಿ-ಬೇಡಿ ಓಲೈಸುತಿದೆ |

ಕಂಡರೂ, ಕಾಣದಂತಿಹರೆಲ್ಲ ಕುಂಡೆ ತಿರುಗಿಸುತ ||

ಮಂಡೆಗೆ ಕುಕ್ಕಿ ಜಡಿಯುತಿಹರೆಲ್ಲ ಆದರೂ |

ಬಿಡದೆ ಅವರನ್ನೇ ಮೋಹಿಸುತಿದೆ ಜೀವ ||1||

ಸುಡು ಸುಡು ಬಿಸಿಲು ಮಳಲಲಿ ನಡೆದೆ |

ಬೆಂಡು ಬಸವಳಿದೆ ಕಂಡೆಯಾ ||

ಜಡಿ ಮಳೆಯಲಿ ಗಡಗಡ ನಡುಗುತ |

ಓಡಿ ಓಡಿ ದಣಿಯುತ ತಿರುಗಾಡಿದೆ ||2||

ಪೊಡವಿಯೊಳು ಎಡಬಿಡದೆ ದಡ-ಬಡ |

ನಡೆದಾಡಿ ಎಡವಿ ಬೀಳುತಿರುವೆ ||

ಒಡನೆ ಕಡೆಹಾಯಿಸೋ ಕಡು ಕರುಣಿಯೇ |

ಒಡೆಯಾ ನಿನ್ನಡಿಗಳ ಮೇಲೆ ಬಿದ್ದುಕೊಂಡಿರುವೆ ಶ್ರೀಕೃಷ್ಣವಿಠ್ಠಲ ||3||

138. ಮುಳುಗಿಸೋ ಇಲ್ಲ ತೇಲಿಸೋ ಪ್ರಭುವೇ ||ಪ||

ಮುಳುಗಲು ಆಳದಿ ರತ್ನಗಳ ಹೆಕ್ಕುವೆ ||ಅ.ಪ||

ಪ್ರಳಯದಿ ಸಕಲವೂ ಮುಳುಗಲು |

ಏಳುದಿನ ನೌಕೆಯಲಿ ತೇಲಿಸಿದವನೇ ||

ಕಳಚಿದ ಇಳೆಯ ದಾಡೆಯಲಿ ರಕ್ಷಿಸಿದವನೇ |

ಮುಳುಗುವ ಶಿಲೆಗಳ ತೇಲಿಸಿದವನೇ ||1||

ಮುಳುಗಿರುವೆ ಸಂಸಾರದಿ ಸರಾಗದಿ ಮೇಲೆತ್ತಿ |

ಕೊಳೆಗಳ ತೊಳೆದು ನಿನ್ನ ಸದನದಿ ಇಡಿಸು ||2||

ಸೆಳೆದು ರಭಸದ ಸುಳಿಯಿಂದ ತೇಲಿಸು |

ಪೊಳೆವ ಶ್ರೀಕೃಷ್ಣವಿಠ್ಠಲ ಚಿತ್ತಕ್ಕೆ ಬಂದಂತೆ ದಯಾಮಾಡೋ ||3||

139. ಕಾಡಿನಲ್ಲಿರಿಸು-ನಾಡಿನಲ್ಲಿರಿಸು ಬೇಡುವುದೊಂದೇ |

ಬಿಡದೇ ದೊರಕಿಸು ಪಾದಕಮಲ ಅಖಂಡಸೇವೆ |

ಧೃಡಭಕುತಿ ಪ್ರತಿ ಜನುಮದಿ ಕೊಡು |

ಒಡೆಯಾ ಶ್ರೀಕೃಷ್ಣವಿಠ್ಠಲ ನಿನ್ನಡಿಗಡಿಗೆ ವಂದಿಪೆ ||

140. ಅಖಂಡ ನಾಮಸ್ಮರಣೆಯಿಂದ ಧೃಡಭಕುತಿ |

ಸಂಖ್ಯೆ ಇಲ್ಲದ ಭಗವದ್ಭಕ್ತರ ಸತ್ಸಂಗದಿ ||

ನಿಖಿಳ ಸೇವಾಭಾಗ್ಯ ದೊರಕುವುದಲ್ಲದೆ |

ಸಖ ಶ್ರೀಕೃಷ್ಣವಿಠ್ಠಲನ ಸಾನಿಧ್ಯ ನಿಶ್ಚಿತ ||

141. ಹರಿನಾಮೋಚ್ಛಾರವು ಸಕಲ ಸುಖಪ್ರದಾಯಕ ||ಪ|\

ಹರಿಯುವುದು ಅನಂತ ಪಾಪರಾಶಿ ||ಅ.ಪ||

ಬರದಂತೆ ತಡೆಯುವುದು ದು:ಖಗಳ |

ನರಕ ದರುಶನವಾಗದು ಇಹ-ಪರದಿ ||

ಗೌರವದ ಸರಮಾಲೆ ತೊಡೆಸುವುದು |

ಪರಿಪರಿಯಲಿ ಅಂತರ್ಯದಿ ಹರುಷವಾವುದು ||1||

ಸರ್ವ ಪವಿತ್ರ ತೀರ್ಥಸ್ನಾನದ ಫಲವಾಹುದು |

ಸರ್ವ ಶ್ರೇಷ್ಠ ದಾನದ ಪುಣ್ಯಪ್ರಾಪ್ತಿಯಾಗುವುದು ||

ಸರ್ವ ಪ್ರತಾಚರಣೆಕಿಂತ ವಿಶೇಷವಿದು |

ಪುರಾಣಾದಿಗಳ ಸಾರ ಇದೇ ಇರುವುದು ||2||

ಸರ್ವತ್ರ, ಸರ್ವಾವಸ್ಥೆಯಲಿ ಸದಾ ಪೇಳಬಹುದು |

ಜೋರಾಗಿ ಇಲ್ಲದೇ ಮನದಿ ಉಚ್ಚರಿಬಹುದು ||

ಬೇರೆಯವರಿಂದಲೂ ಹೇಳಿಸುತಲಿರಬೇಕು |

ಸರ್ವವೇದಾರ್ಥ ಅಕ್ಷರನಾಮಕ ಶ್ರೀಕೃಷ್ಣವಿಠ್ಠಲನಾಮ ||3||

142. ತೆರೆದ ಕಣ್ಣಲಿ ಹುಸಿಕೋಪ |

ಬರೀ ಅವನ ರೂಪ ಹೃದಯದಿ ||

ಬಿರಿದ ತುಟಿಯಲಿ ‘ನ’ಕಾರ |

ಪೂರ್ಣಮನದಿ ಶ್ರೀಕೃಷ್ಣವಿಠ್ಠಲನ್ನೇ ಅಪ್ಪುವ ಬಯಕೆ ರಾಧೆಗೆ ||

143. ಹರಿನಾಮ ಸ್ಮರಸುತ, ಹರಿಲೀಲೆಗಳ ಕೊಂಡಾಡುತ |

ಹರಿ ದರುಶನಕಾಗಿ ಕಾತರದ ಕ್ಷಣಗಣನೆ ಮಾಡುತ ||ಪ||

ಸರಿ ರಾತ್ರಿಯಲ್ಲೆದ್ದು ಚಳಿಯಲಿ ನಡುಗುತ |

ಸರದಿಯಲಿ ನಿಂತು ತರತರದ ಜನರ ನೋಡುತ ||

ಭರಭರನೆ ಓಡುತಾ, ನಿಲ್ಲುತಾ, ಜನರ ದೂಗಿಸುತ್ತಾ |

ಬೇರೆಯವರನು ಬೈಯುತ್ತಾ, ಬೈಸಿಕೊಳ್ಳುತ್ತಾ ||1||

ಸರಿಯುವುದು ಮನದಿ ಗಂಟೆಗಳೆಷ್ಟೋ (ಆದರೂ) |

ಸರಿಯಾಗಿ ಒಂದುಕ್ಷಣ ಶ್ರೀನಿವಾಸನೆದುರು ನಿಂತಾಗ ||

ಮರೆತೆಲ್ಲ ಪಟ್ಟಶ್ರಮ ಧನ್ಯತೆಯಲಿ ಮಿಂದು |

ಭರ್ಜರಿ ನಾಮದ ಇಷ್ಟದೈವನ ಮುಖವೋ, ಪಾದವೋ ||2||

ವರದಹಸ್ತವನ್ನೋ, ಶಂಖ-ಚಕ್ರವನ್ನೋ ನೋಡುವುದರಲ್ಲಿ |

ಹರಕೆ ಮನದಿ ಹೇಳಿಕೊಂಬುವುದನ್ನೆ ಮರೆತಾಗ ||

ಗರ್ಭಗುಡಿಯ ಹೊಗೆಗಳೆದು ಹಾಕಿರುತ್ತಾರೆ |

“ಹರೇ ಶ್ರೀನಿವಾಸ” ಎಂದೆನ್ನುತ್ತಾ ಏನೋ ಸಮಾಧಾನದಿ ||3||

ನರ ಜನ್ಮವೇ ಸಾರ್ಥಕವಾದ ಭಾವಹೊತ್ತು |

ಹೊರಬಂದು ಅನಂತಭಕ್ತರ ದರುಶನದಿ ತೃಪ್ತಿಪಟ್ಟು ||

ತಿರುಗಿ ಎಂದಿಗೆ ದರುಶನ ಕೊಡುವನೋ |

ತಿರುಮಲಾಧೀಶ ಶ್ರೀಕೃಷ್ಣವಿಠ್ಠಲನ ಕರುಣೆಯಲಿ ||4||

144 ದುರ್ಲಭವಾದ ಸ್ವಾಮಿ ದರುಶನವೆಂದಾಗ |

ಪೂರ್ವಜನ್ಮಕೃತ ಪುಣ್ಯದ ಫಲವೇ ಸರಿ ||

\ ಗುರುಹಿರಿಯರ ಆಶೀರ್ವಾದದ ಪ್ರಭಾವದಿ |

ಹರಿಚಿತ್ತಕ್ಕೆ ಬರಲು, ಕರೆದು ಸುದರುಶನವಿತ್ತು ||

ಗುರುಗಳಿಂದ ಸನ್ಮಾನಿಸೆನ್ನ ಜನ್ಮ ಸಾರ್ಥಕವಾಗಿಸಿದ |

ಶ್ರೀಕೃಷ್ಣವಿಠ್ಠಲನ ಕೃಪೆಗೇನೆಂದು ಹೇಳಲಿ ? ||

145. ಕ್ಷಣ ಕ್ಷಣ ಕೂಡಿದರೆ ಯುಗಗಳಾಗುವುದು |

ಕ್ಷಣವೇನು ಬಲ್ಲುದು ಯುಗದ ಕಾಲ ||

ಕ್ಷಣ ಕಳೆದರೆ ಮತ್ತೆಬಾರದೂ ಎಂದೂ |

ಕಾಣದ ಕ್ಷಣದಿಂದ ನಿತ್ಯಕಾಲದ ಗಣನೆ ||

ಗುಣತ್ರಯಗಳ ಸೂಕ್ಷ್ಮಭಾಗ ರೂಪತ್ವ ಮೂಲ ಪ್ರಕೃತಿಯಿಂದ |

ಗುಣ ಮೂರು ಪ್ರಧಾನ ತ್ರಿಗುಣಾತ್ಮಕ ಪ್ರಕೃತಿಯಲಿ ||

ಗುಣ ಸಾಮ್ಯವೇ ಲಯವು, ಗುಣ ವೈಷಮ್ಯವೇ ಸೃಷ್ಠಿ |

ಗುಣತ್ರಯಗಳ ಉಪಚಯವೇ ತತ್ವಗಳ ಸ್ಥೂಲಕ್ಕೆ ಕಾರಣ ||

ಪ್ರಾಣಿರಾಶಿಗಳು ಅನಂತ ಹಾಗೇ, ಸ್ಥೂಲ ಶರೀರವೂ ಅನಂತವೇ |

ಕಾಣುವ ತದ್ಭೋಗ್ಯ ವಸ್ತುಗಳು ಸಹ ಅನಂತಾನಂತ ||

ಕಾಣುವ ಪ್ರಕೃತಿ ಸ್ವರೂಪತ: ನಿತ್ಯಾನಿತ್ಯವೇ |

ಮಣ್ಣು-ಘಟದ ಸೃಷ್ಟಿಗೆ ಉಪಾದಾನ ಕಾರಣದಂತೆ ||

ಸೃಷ್ಟವಾಗುವ ಸಮಸ್ತ ವಸ್ತುಗಳಿಗೆ ಪ್ರಕೃತಿ ಕಾರಣ |

ಸೃಷ್ಟಿಯಲಿ ದೇಶ, ಕಾಲ, ಗುಣಗಳ ಸಂಬಂದವಿಲ್ಲದಿಲ್ಲ ||

ದೇಶ ಕಾಲಗಳು ಸದಾ ಸ್ವಗತ ಈಶಾಧೀನ |

ಸೃಷ್ಟ್ಯಾಧೀಶ ಶ್ರೀಕೃಷ್ಣವಿಠ್ಠಲ ಸ್ವತಂತ್ರ, ಸರ್ವಕ್ಕೂ ಮೂಲಕಾರಣ ||

146. ರಕ್ಷಕ ನೀನಿರಲು ನನಗ್ಯಾತರ ಭಯವೋ |

ರಕ್ಷಿಸುವೆ ನವಮಾಸ ಗರ್ಭದಿ ||

ರಕ್ಷಿಸುವೆ ಜನನಾನಂತರ ಜೀವನದಿ |

ಚಕ್ಷುವಿನಲ್ಲಿದ್ದು ನೋಟ ನೀಡುವಿ ||

ಭಿಕ್ಷೆ ನೀಡುವೆ ಸಕಲ ಭೋಗಂಗಳ |

ಭಕ್ಷ್ಯಗಳಲ್ಲಿದ್ದು ತೃಪ್ತಿ ಪಡಿಸುವಿ ||

ಶಿಕ್ಷಿಸಿ ಎನ್ನ ತಪ್ಪುಗಳ ತಿದ್ದುವಿ |

ಲಕ್ಷಿಸದೆನ್ನಪಚಾರಗಳ ಉಪಕರಿಸುವಿ ||

ಪಕ್ಷಪಾತ ಮಾಡದ ಸಮದರ್ಶಿ |

ಸೂಕ್ಷ್ಮರೂಪದಿ ಸರ್ವತ್ರವ್ಯಾಪಕ ||

ಸಾಕ್ಷಿಯಾಗಿದ್ದು ಸಕಲ ವೀಕ್ಷಿಸುವ |

ಲಕ್ಷ್ಮೀಪತಿ ನಿನ್ನ ಕರುಣೆಗೆ ಎಣಿಗಾಣೆ ||

ಸಕ್ಷಮದಕ್ಷ ಶ್ರೀಕೃಷ್ಣವಿಠ್ಠಲನಿರೆ ಭಯವೇಕೆ ? ||

147. ದಿನಕರಂತರ್ಗತ ಶ್ರೀಹರಿಯ ನೆನೆಯೆ |

ದಿನ ಪ್ರತಿದಿನ ಬುದ್ಧಿಶೋಧಿಸುವ |

ದಿನ ದಿನದಿ ಆಯುರಾರೋಗ್ಯ ಹೆಚ್ಚಿಸಿ |

ಮಾನ್ಯವಂತನಾಗಿಸುವ ಶ್ರೀಕೃಷ್ಣವಿಠ್ಠಲ ||

148. ವ್ರತವಾಚರಿಸಿದರು ಗೋಪಿಕೆಯರು ವ್ರತವಾಚರಿಸಿದರು ||ಪ||

ಪತಿಯಾಗಲಿ ದೇವಕಿಕಂದ ತಮಗೆಂದೆಂದೂ ||ಅಪ||

ಪ್ರತಿ ಉಸಿರನ್ನೇ ಮಿಸಲಾಗಿಟ್ಟರು |

ಪ್ರತಿ ಘಳಿಗೆ ತುಂಬು ಭಾವದಿ ಧೇನಿಸುತ ||

ಪ್ರತಿ ವಸ್ತುವಿನಲಿ ಅವನನ್ನೇ ಕಾಣುತ |

ಜೊತೆಗಾರನಾಗಲಿ ಎಂದು ಬಯಸುತ ||1||

ಕಾತ್ಯಾಯನಿ ವ್ರತಾಚರಣೆ ನಿಷ್ಠೆಯಲಿ ಮಾಡಲು |

ಬತ್ತಲೆಯಾಗಿ ನದಿಯಲಿ ಕನ್ನಿಕೆಯರು ಮುಳುಗಲು ||

ಇತ್ತ ಯದುಕುಲಚಂದ್ರ ಮಾಡಿದವರ ವಸ್ತ್ರಾಪಹಾರ |

ಎತ್ತಿ ಎರಡು ಕೈ ಹೊರಬಂದು ಬೇಡಿದರೆ ಕೊಡುವೆನೆಂದ ||2||

ಕತ್ತಲೆಯಲ್ಲೂ ಮಾನಿನಿಯರು ನಾಚಿ ನೀರಾದರು |

ರಾತ್ರಿಯಲಿ ನಗ್ನರಾಗಿ ನದಿಯಲಿ ಮುಳಗಬಾರದು ||

ತತ್ವಾಭಿಮಾನಿ ದೇವತೆಗಳಿಗಪಚಾರ ಮಾಡಬಾರದು |

ಇತ್ತನು ವಸ್ತ್ರ ಸರಿಯಾದ ಪದ್ಧತಿ ಪೇಳಿ ||3||

ಭಕ್ತಿಯಲಿ ಪೂರ್ತಿ ಶರಣಾಗಿ ಫಲ ಕೇಳಲು |

ಅತಿ ಸಂತೋಷದಿ ವ್ರತ ಸಮಾಪ್ತಿ ಮಾಡಿದ ||

ಸ್ವತಂತ್ರ ಸ್ವರಮಣ ವಚನವಿತ್ತವರಿಗೆ |

ಪತಿಯಾಗಿ ರತಿ ನೀಡುವೆ ನಿಮಗೆಂದ ಶ್ರೀಕೃಷ್ಣವಿಠ್ಠಲ ||4||

149. ಸವತಿ ಮಾತ್ಸರ್ಯ ಮೋಹನನ ಮುರುಳಿಯಲಿ |

ತವಕದಿ ಅಂಗಸಂಗವೆಲ್ಲ ತನದಾಗಿಸುವ ಬಯಕೆ ||

ಅವನ ಅಧರಾಮೃತ ತನಗಾಗಿ ಮಾತ್ರ ಎನ್ನುವ ರಾಧೆ |

ಅವನು ಸಕಲ ಭಕ್ತ ಪರಾಧೀನ ಎಂಬುದ ಮರೆತಳು ||

ಅವನ ಕಾಣದೇ ಪರಿತಪಿಸಿ ಬೇಡಿಕೊಂಡಳು |

ಸ್ವವಶ ಶ್ರೀಕೃಷ್ಣವಿಠ್ಠಲ ಯಾರ ಅಧೀನನು ಅಲ್ಲ ||

150 ನಾರಾಯಣ ತಾನಿಹನು ಕ್ಷೀರಸಾಗರದಿ |

ಶ್ರೀರಮಾ ಇಹಳು ಇವನ ವಕ್ಷ ಸ್ಥಳದಿ ||

ಇರುವನು ನಾಲ್ಮೋಗನು ಕಮಲದಿ |

ಹರನಿಹನು ಕೈಲಾಸ ಗಿರಿಯಲಿ ||

ಇಂದ್ರನಿಹನು ಅಮರಾವತಿಯಲಿ |

ನರಕಲೋಕದಿ ಜವರಾಯನಿಹನು ||

ನರರಿಗೂ ಭೂಲೋಕ ವಿತ್ತಿಹನು |

ಸುರವೈರಿಗೂ ಇತ್ತಿಹನು ಅಧಮಲೋಕ ||

ಸರ್ವರಿಗೂ ಸ್ಥಾನ ಇತ್ತಿಹನು ಸ್ವಾಮಿ |

ಸರ್ವಪ್ರಾಣರ ಪ್ರಾಣನೇ ನಿನ್ನಲೋಕ ಯಾವುದು ? ||

ಸರ್ವತ್ರ ವ್ಯಾಪ್ತ ಸ್ವಾಮಿಯ ಆಪ್ತ ಬಂಟನೇ |

ಶ್ರೀಕೃಷ್ಣವಿಠ್ಠಲನ ಬಿಟ್ಟಿರದ ಮುಖ್ಯಪ್ರಾಣನೇ ನಿನ್ನ ತಾಣ ಯಾವುದು ? ||

...

151. ವಂಶೋದ್ಧಾರಕ ನೀನೇ ವಂಶನಿರ್ಮೂಲಕ ನೀನೆ ||ಪ|| (ಪಾಂಡವ,ಯಾದವ)

ಆಶಿಪೆ ಸದಾ ನಿನ್ನ ಕೃಪೆ ಎನ್ನ ಮೇಲಿರಲಿ ||ಅಪ||

ಈಶ ನೀನು, ನಿನ್ನ ದಾಸ ನಾನು |

ಪಾಶ ಬಂಧನ ಬಿಡಿಸುವವ ||

ಆಶಾ, ಕ್ಲೇಶಾದಿಗಳ ಕಳೆದು |

ಹರ್ಷ ನೀಡುವವ ನೀನಲ್ಲದೇ ಮತ್ಯಾರು ? ||1||

ದೋಷ ದೂರ ನೀನು, ಹೇಶಿ ನಾನು |

ಕಾಶಿ ಸುತ್ತಿ, ಕೋಶ ಓದಿದರೂ ||

ಲೇಶ ಪಾಪ ಕಳೆಯಲಿಲ್ಲ |

ವಶವೆಲ್ಲ ನಿನಗೆ, ನೀನೊಬ್ಬರ ವಶನಲ್ಲ ||2||

ಅಂಶಿ ನೀನು, ನಿನ್ನಂಶ ನಾನು |

ಸಾಂಶರೆಲ್ಲ ನಿನ್ನ ವಶರಿಹರು ||

ವಿಷಯ ದೂರ ಮಾಡೆನ್ನ |

ಕೀಶ, ಅವನೀಶ ವ್ರತಿಶನಾಥ ಶ್ರೀಕೃಷ್ಣವಿಠ್ಠಲನೇ ||3||

(ಹನುಮ,ಭೀಮ,ಮಧ್ವ.)

152 ಹುಟ್ಟಿಲ್ಲದವ ಹೊಕ್ಕುಳಲಿ ಹುಟ್ಟಿಸಿ ಹೂವೊಂದು ಮೂಲರೂಪದಿ |

ಎಂಟು ಮೇಲ್ನಾಕು ಪಕಳೆಯ ಪುಷ್ಪದ ಬ್ರಹ್ಮಾಂಡದೊಳೊಂದು ರೂಪ ||

ಹೊಟ್ಟೆಯಲ್ಲಿದ್ದ ಜೀವಿಗಳಿಗೆ ದೇಹ ಸೃಷ್ಟಿಸಿ, ಪಿಂಡಾಂಡದಲ್ಲೊಂದು ರೂಪ |

ಜಟ್ಟಿ ತ್ರಯೀಶ ಶ್ರೀಕೃಷ್ಣವಿಠ್ಠಲ ವ್ಯಾಪಿತ ಸರ್ವತ್ರ ||

153. ಹಲವು ಬಗೆಯಲಿ ಆರಾಧಿಪರು ಲೋಕದಿ |

ಒಲಿಸಲು ಭಗವಂತನ ಸತತ ಯತ್ನದಿ ||ಪ||

ಕೆಲವರು ಭಜನೆಯಲಿ ಮೈಮರೆವರು |

ಕೆಲವರು ತಾಳ ಹಾಕುತ್ತಾ ಕುಣಿವರು ||

ಕೆಲವರು ಏಕಾಂತದಿ ಕುಳಿತು ಧ್ಯಾನಮಾಳ್ಪರು |

ಕೆಲವರು ಪ್ರಕೃತಿ ಅಚ್ಚರಿಯಲ್ಲೇ ತನ್ಮಯರು ||1||

ಕೆಲವರು ಬಾಹ್ಯ ಚಿನ್ಹೆ ಢಾಳಾಗಿ ಧರಿಸುವರು |

ಕೆಲವರು ಬರೀ ಸ್ನಾನ, ಸ್ತೋತ್ರ ಪಠಿಸುವರು ||

ಕೆಲವರು ಮಾಡುವ ಕೆಲಸವೇ ದೇವರೆಂಬುವರು |

ಕೆಲವರು ಪ್ರತ-ನಿಯಮದಿ ದೇಹ ದಣಿಸುವರು ||2||

ಕೆಲವರು ಸತ್ಸಂಗದಲ್ಲೇ ಇರುವರು |

ಕೆಲವರು ಪ್ರವಚನ ಆಲಿಕೆ ಬಯಸುವರು ||

ಕೆಲವರು ಯಜ್ಞ, ಗೋಪೂಜೆ ನಿರುತರು |

ಕೆಲವರು ಮುತ್ತೈದೆ-ಬ್ರಾಹ್ಮಣರ ಪೂಜೆಯಲಿ ತೃಪ್ತರು ||3||

ಕೆಲವರು ಭೋಜನ ಮಾಡಿಸಿ ತಣಿಸುವರು |

ಕೆಲವರು ಅತಿಥಿ-ಅಭ್ಯಾಗತರ ಸೇವಿಸುವರು ||

ಕೆಲವರು ದೀನ-ದು:ಖಿತರ ಸೇವೆಯಲಿ ಸಂತಸರು |

ಕೆಲವರು ಪ್ರಾಣಿದಯೆ ದೊಡ್ಡ ಸೇವೆ ಎಂಬುವರು ||4||

ಕೆಲವರು ಜಪ-ತಪದಿ ತನ್ಮಯರು |

ಕೆಲವರು ಪಾದಯಾತ್ರೆಯಲಿ ನಿರುತರು ||

ಕೆಲವರು ಬರೀ ನಾಮಸ್ಮರಣೆಯಲಿ ಸಂತಸರು |

ಕೆಲವರು ಭಕುತರ ಸೇವೆಯೇ ಭಾಗ್ಯವೆನ್ನುವರು ||5||

ಕೆಲವರಿಗೆ ತೀರ್ಥಯಾತ್ರೆಯಲಿ ರತಿ |

ಕೆಲವರಿಗೆ ದಾನಗಳಲ್ಲೇ ಆಸಕ್ತಿ ||

ಕೆಲವರಿಗೆ ಮೂರ್ತಿ ಪೂಜೆಯಲಿ ತನ್ಮಯತೆ |

ಕೆಲವರಿಗೆ ಬಾಹ್ಯ ಆಚರಣೆಯಲ್ಲಿ ಸುಖಿಪರು ||6||

ಕೆಲವರಿಗೆ ಪ್ರದಕ್ಷಿಣೆಯಲಿ ಭಕುತಿ |

ಕೆಲವರಿಗೆ ನಮಸ್ಕಾರದಲ್ಲೇ ನಂಬಿಕೆ ||

ಕೆಲವರಿಗೆ ದುಡಿಮೆಯಲ್ಲಿ ತತ್ಪರತೆ |

ಕೆಲವರಿಗೆ ಶಾಸ್ತ್ರಭ್ಯಾಸದಲ್ಲೇ ನಂಬಿಕೆ ||7||

ಕೆಲವು ವಿಚಾರವಂತರು ಆಚಾರ ನಂಬರು |

ಕೆಲವರು ಸಕಲರಿಗೆ ಪ್ರಿಯವಚನರು ||

ಕೆಲವರು ಗುರು-ಹಿರಿಯರು ವಚನಪಾಲಕರು |

ಕೆಲವರು ಸ್ವಂತದ ಬಲವೇ ದೈವ ಬಲವೆನ್ನುವರು ||8||

ಎಲ್ಲವೂ ಸುಗತಿಗೆ ಅನೇಕ ದಾರಿಗಳು |

ಸ್ವಲ್ಪ ಮಾಡಿದರೂ ಪುಣ್ಯವೇ ಬರುವುದು ||

ಬಲ್ಲವರು ಬಲ್ಲರು ಒಲಿಸುವ ಬಗೆ |

ಚೆಲ್ವ ಶ್ರೀಕೃಷ್ಣವಿಠ್ಠಲ ತಾನೇ ಒಲಿದರೆ ಅನುಗ್ರಹೀಪ ||9||

ಶ್ರೀ ಕೃಷ್ಣವಿಠ್ಠಲಪದಗುಚ್ಛ 3 ಅನುಕ್ರಮಣಿಕಾ

154. ಉತ್ತಮರ ಸಂಗದಿ ನಿತ್ಯ ಒಡನಾಡ |

ಉತ್ತಮ ಜ್ಞಾನವೃದ್ಧಿಗಾಗಿ ಮಾತಾಡು ||

ಜೊತೆಗಾರನಾಗಿ ಧಾರಾಳಿಯ ಸ್ನೇಹಮಾಡು |

ಮತ್ತೆಂದೂ ಜೀವನದಿ ಸೋಲು ಕೊಡೆನು ಶ್ರೀಕೃಷ್ಣವಿಠ್ಠಲ ||

155. ಮರೆತು ಬಾಹ್ಯ ವಿಷಯಂಗಳ |

ಅರಿವೆಂಬ ಜ್ಞಾನ ಸರೋವರದಿ ||

ಪರಮಾತ್ಮನ ಧ್ಯಾನದಿ ಸದಾ ಮುಳುಗೇ |

ಕಾರುಣ್ಯ ರತ್ನ ಶ್ರೀಕೃಷ್ಣವಿಠ್ಠಲ ಕಾಣದಿಹನೇ ||

156. ತೀರ್ಥಯಾತ್ರೆ ಮಾಡಿ ಜೀವನದಿ ಧನ್ಯರಾಗಿರಿ ||ಪ||

ಅರ್ಥಸಹಿತ ಪುಣ್ಯಪ್ರದಾಯಕ ತೀರ್ಥಯಾತ್ರೆ ಮಾಡಿರಿ ||ಅಪ||

ಯಾವ ಪುಣ್ಯಕ್ಷೇತ್ರಕೆ ಹೋದರೆ ಬಾಹೋದೇನು |

ಯಾವ ನದಿಯಲಿ ಮುಳುಗಿದರೆ ಫಲವೇನು ||

ಯಾವ ದಾನ-ಧರ್ಮದಿಂದಲೂ ದೊರೆದಂತಹ |

ಸಾವು-ನೋವು ನೀಗುವಂತಹ ಯಾತ್ರೆ ಮಾಡಿರಿ ||1||

ಶ್ರಮವಿಲ್ಲದಂತಹ ತೀರ್ಥಯಾತ್ರೆ |

ದಮ್ಮಡಿ ಖರ್ಚಿಲ್ಲದಂತಹ ತೀರ್ಥಯಾತ್ರೆ ||

ಸುಮ್ಮನೆ ಓಡಾಡಿ ದಣಿಯದೆ |

ನಿರ್ಮಲ ಮನದಿ ನಿರುತ ಇದ್ದಲೇ ಯಾತ್ರೆ ಮಾಡಿರಿ ||2||

ಮಾನಸ ಸರೋವರದಿ ಬ್ರಹ್ಮಧ್ಯಾನ ಮಾಡಿರಿ |

ಮಾನಸೋಪಚಾರವೆಂದು ಇಂದ್ರಿಯ ನಿಗ್ರಹಸಿ ||

ಏನೊಂದು ಬಿಡದೆ ವ್ರತ-ಉಪವಾಸ ಆಚರಿಸೆ |

ಮನು-ದೇಹದ (ಭಾವ)ಶುದ್ಧಿಯೇ ತೀರ್ಥಯಾತ್ರೆ ||3||

ಇದೇ ಜೀವನದ ಪರಮಯಜ್ಞ |

ಇದನ್ನೇ ಯಜ್ಞ ಪುರುಷ ನಿಂತು ನಡೆಸೆ ||

ಶುದ್ಧ ಹೃದಯದ ಯಜ್ಞೇಶನು ಸ್ವೀಕರಿಸಿ |

ಬಂಧು ಶ್ರೀಕೃಷ್ಣವಿಠ್ಠಲ ಯಜ್ಞ ಭಾವದಿ ಯಜ್ಞ ಭೋಕ್ತಾರನಾಗುವ ||4||

=

157. ವಿಪ್ರನಿಗೆ ಭೂಷಣ ಅಧ್ಯಾತ್ಮವಿದ್ಯೆ |

ಉರ್ವಿಗೆ ಭೂಷಣ ಧಾರ್ಮಿಕ ಭೂಪತಿ ||

ಆಕಾಶಕೆ ಭೂಷಣ ರಾಜ ಚಂದ್ರ |

ಸಕಲರಿಗೂ ಭೂಷಣ ಸುಶೀಲ ||

ಮನ:ಪೂರ್ವಕ ನಾಮೋಚ್ಚಾರ ವ್ಯರ್ಥವಾಗದು |

ಸ್ವನಿಯಾಮಕ ಶ್ರೀಕೃಷ್ಣವಿಠ್ಠಲ ನಾಮ ಸರ್ವಮಾನ್ಯ ||

158. ಮಡಿಯೆಂದರೆ ಮೈ ತೊಳೆಯುವದಷ್ಟೇ |

ಮಾಡಿ ಆದಷ್ಟು ಅಷ್ಟವಿಧದ ಮಡಿಯನು ||

ಮಡಿಯೆಂದರೆ ಸತ್ಯದ ನಡೆ-ನುಡಿ |

ಮಡಿಯೆಂದರೆ ಸರ್ಮ ಪ್ರಾಣಿ ದಯೆ ||

ಮಡಿಯೆಂದರೆ ನಿರುತ ಅಧ್ಯಾತ್ಮಚಿಂತನ |

ಮಡಿಯೆಂದರೆ ಇಂದ್ರಿಯ ನಿಗ್ರಹ ||

ಪುಂಡರಿಕಾಕ್ಷನ ಸ್ಮರಣೆಯಲಿ ಅಪವಿತ್ರವೂ ಪವಿತ್ರವಾಗುವುದು |

ಮಡಿಗೆ ಮಡಿ ಶ್ರೀಕೃಷ್ಣವಿಠ್ಠಲನ ನಾಮೋಚ್ಚಾರ ||

ಅಷ್ಟವಿಧ ಮಡಿ-ಸತ್ಯ, ದಾನಂ, ದಯಾ, ಅಲೋಭ, ವಿದ್ಯಾ, ಇಜ್ಯಾಂ(ಅಗ್ನಿಹೋತ್ರ ಇಡುವುದು) |ಪೂಜನಂ, ದಮ (ಇಂದ್ರಿಯನಿಗ್ರಹ)

159. ಬೇಡಾದದ್ದು ಕೊಡುವಿ, ಬೇಕೆಂದಿದ್ದನ್ನು ಬಿಡಿಸುವಿ |

ಒಡಲು ತುಂಬಿದಾಗ ತಿನ್ನಿಸುವಿ, ಹಸಿದಾಗ ಹಿಡಿಯೂ ಸಿಗದು ||

ಹೊಡೆತ ತಾಳದಾಗ ಮತ್ತೆ ಹೊಡೆಯುವಿ, ತಡೆಯುವುದೆಂತು |

ಚೆಂಡಿನಂತೆ ಈಡಾಡಿ ಕಡೆಗೆ ಕೈ ಬಿಡುವುದು ಸರಿಯೇ ಶ್ರೀಕೃಷ್ಣವಿಠ್ಠಲ ||

160 ಎನ್ನಲ್ಲಿರುವ ನೂರಾರು ಅವನುಣನಿನಗೊಪ್ಪಿಸುವೆ |

ನಿನ್ನ ಅನಂತಗುಣಗಳಲ್ಲೊಂದಾದ ಕ್ಷಮಾಗುಣದಿಂದೆನ್ನ ಮನ್ನಿಸು ಶ್ರೀಕೃಷ್ಣವಿಠ್ಠಲ ||

161. ಮಾವಿನ ಗೊಟ್ಟದಿಂ ಅಂತರಿಕ್ಷದಲಿ ವೃಕ್ಷವಾಗುವುದೇ? |

ಭುವಿಲಿ ನೆಟ್ಟು ನೀರುಣಿಸಿದಾಗ ಫಲವಿವುದು ||

ಜೀವಿಗೆ ದೇಹವಿತ್ತರೆ ಸಾಧನೆಯಾಗುವುದೇ ? |

ಸ್ವಇಚ್ಛಾ, ಪ್ರಯತ್ನ ಜೊತೆ ಶ್ರೀಕೃಷ್ಣವಿಠ್ಠಲನ ಅನುಗ್ರಹ ಬೇಕಲ್ಲವೇ ? ||

162. ಸಣ್ಣವನೆಂದು ಉದಾಸೀನತೆ ಬೇಡಾ ವಿರಾಟರೂಪಿಯೇ |

ನಿನಗೆ ಅಭಿಷೇಕಿಸುವ ಜೇನು ಬಂದಿದ್ದು ಸಣ್ಣಹುಳುವಿನಿಂದ ||

ನಿನಗೆ ಪಟ್ಟಿಮಡಿ ಉಡಿಸುವುದು ಸಣ್ಣರೇಶಿಮೆ ಹುಳುವೇ |

ಎನ್ನನು ಸದಾಯೋಗ್ಯ ಭಕ್ತರ ಸಂಗದಲ್ಲಿರಿಸಿ ಸೇವೆಕೊಡು ||

ನಾನೂ ಸಾಧನೆಮಾಡಿ ನಿನ್ನಅನುಗ್ರಹ ಪಡೆಯುವೆ ಶ್ರೀಕೃಷ್ಣವಿಠ್ಠಲ ||

163. ಜಡಮತಿಗೆ ಸುಮತಿ ನೀಡುವ ಬ್ರಹ್ಮಾಣಿಯೇ |

ಮಾಡುವೆ ನಿನ್ನಾಧೀನ ಕಾಯಾ, ವಚನ, ಮನವ ||

ಬಿಡದೆ ತೀಡಿ ತಿದ್ದಿ ಒಳಗಿಳಿಸು ಸಕಲ ವೇದಾರ್ಥವ |

ಮಾಡದ್ದಿದರೆ ಇದನ್ನು, ನಿನಗೆ ಒಡೆಯ ಶ್ರೀಕೃಷ್ಣವಿಠ್ಠಲನಾಣೆ ||

164. ಕಳ್ಳ ಬರುವ ಮೆಲ್ಲಗೆ ಕಳ್ಳ ಬರುವ |

ಹೇಳದೆ ಕೇಳದೆ ಬಂದು ಸದ್ದಿಲ್ಲದೆ ಒಯ್ಯುವ ||ಜೋಕೆ|| ||ಪ||

ದಿಟ್ಟನಿವ ಹಗಲುಗಳ್ಳನಂತೆ ಬರುವ |

ಗುಟ್ಟಾಗಿ ಮಾಡಿದ ಸಂಪತ್ತೆಲ್ಲಾ ಹೊತ್ತೋಯ್ಯುವ ||

ಸಿಟ್ಟು ಮಾಡಿದರೂ ಅಂಜನು ಯಾರಿಗೂ |

ದಿಟವಿದು ಸಟೆಯಲ್ಲ ಪುಂಡನಿವ ||1||

ಕಳೆದುಕೊಳ್ಳದಂತೆ, ಶ್ರೀದೇವಿ ಇತ್ತಿದ್ದು |

ಉಳಿಸಲೊಂದೇ ದಾರಿ ಇರುವುದು ||

ಕಳ್ಳರ ಕಳ್ಳ ಮಹಾಕಳ್ಳ ಇವನೊಬ್ಬನೇ |

ಒಳಗೊಳಗೆ ಶ್ರೀಕೃಷ್ಣವಿಠ್ಠಲಗೆ ಸಮರ್ಪಿಸೆ ಸದಾ ಕಾಯ್ವ ||2||

165. ಹನುಮಂತ ಹೇಳೆನಗೆ, ಅಸ್ವಾತಂತ್ರನಲಿ ಸ್ವತಂತ್ರ ಇರುವನ್ಹೆಂಗೆ ||ಪ||

ಹೀನ ಶರೀರದಿ ಅಶರೀರನಿರುವನ್ಹೆಂಗೆ? ||ಅಪ||

ಸರ್ವಭೋಕ್ತೃ ತನ್ನನ್ನು ತಾನೇ ತಿನ್ನುವನ್ಹೆಂಗೆ ? (ಯೋಗಾವಸ್ಥೆ)

ಸರ್ವತೃಪ್ತ ಒಂದೇ ತುತ್ತಲಿ ಜಗವ ನುಂಗುವನ್ಹೆಂಗೆ? ||(ಲಯ)

ಸರ್ವದಾತೃ ತನ್ನನ್ನು ಪೂರ್ಣ ದಾನಿಸುವನ್ಹೆಂಗೆ? |

ಸರ್ವಪಿತನಿಗೆ ಪಿತನಿಲ್ಲದಿರುವದ್ಹೆಂಗೆ ||1||

ಸರ್ವಕರ್ತೃತ್ವ ತಾನಾದರೆ, ಜೀವ ಕರ್ತೃತ್ವ ಇರುವುದಹೆಂಗೆ? |

ಸರ್ವಶಕ್ತ ತಾನಾದರೆ ಪುರುಷ ಪ್ರಯತ್ನವಿರುವುದದ್ಹೆಂಗೆ ? ||

ಸರ್ವಜ್ಞಾತ ತಾನಾದರೆ ಜೀವಿ ಬೇಡಿಕೊಳ್ಳುವುದ್ಹೆಂಗೆ ? |

ಸರ್ವ ಚಿತ್ತ ತಾನಾದರೆ ಇಚ್ಛಾ-ದ್ವೇಷವಿರುವುದ್ಹೆಂಗೆ ? ||2||

ಸರ್ವವ್ಯಾಪ್ತನಿಗೆ ಅಧಿಷ್ಠಾನ ವಿರುವುದ್ಹೆಂಗೆ ? | (ಪ್ರಾಣ)

ಸರ್ವ ಆತ್ಮ-ಅಂತರಾತ್ಮ ಒಬ್ಬನೇ ಇರುವುದ್ಹೆಂಗೆ ? ||

(ಆತ್ಮ= ದೇಹದೊಳಗಿರುವ, ಅಂತರಾತ್ಮ= ಜೀವದೊಳಗಿರುವ ಪರಮಾತ್ಮ)

ಮೂರ್ತಿಮಂತ ಅಮೂರ್ತಿ ಅಚಿಂತ್ಯನ ತಿಳಿವುದ್ಹೇಂಗೆ |

ಉರ್ವಿಪತಿ ಶ್ರೀಕೃಷ್ಣವಿಠ್ಠಲ ಸರ್ವಪತಿ ಹೆಂಗೆ ||3||

166. ತಿಳಿಯೆನು ಮಾಯೆ ಏನೆಂದು ತಿಳಿಯೆನು ||ಪ||

ತಿಳಿಯೆನು ಜಗತ್ತು ಮಾಯೆ ಹೇಗೆ ಎಂಬುದು ||ಅಪ||

ಮಯನು ಮಾಡಿದ್ದರಿಂದ ಮಾಯೆ ಸರಿಯೇ |

ಮಾಯೆ ಕುಹಕವೆಂಬುದು ಸರಿಯೇ || (ಜಾದೂ)

ಮಾಯೆ ಪರಮ ಆಸೆ ಎಂಬುದು ಸರಿಯೇ |

ಮಾಯೆ ಸಾಮ್ಯರ್ಥವೆಂಬುದು ಸರಿಯೇ ||1||

ಮಾಯೆ ಜ್ಞಾನವೆಂಬುದು ಸರಿಯೇ |

ಮಾಯೆ ಕೃಪೆ ಎಂಬುದು ಸರಿಯೇ ||

ಮಾಯೆಯ ಸರ್ವಾರ್ಥದ ನೆಲೆತಿಳಿಸು |

ಮಾಯಾಪತಿ ವಾಸುದೇವಾಭಿನ್ನ ಶ್ರೀಕೃಷ್ಣವಿಠ್ಠಲನೇ ||2||

167. ಕಂದ ಬೇಕೆನಗೆ ಚೆಂದದ ಕಂದ ಬೇಕೆನೆಗೆ |

ಆದಿ ಸುಂದರ ಧೀಮಂತನಾದ ||ಪ||

ನೀರು ಸುತ್ತಲೂ ಪ್ರಳಯಾಂತಕ ನೀರು |

ಸುರ-ನರ ಯಾರದೂ ಸುಳಿವಿಲ್ಲ ||

ಪರ್ಣವೊಂದೇ ತೇಲಿ ಬರಲು |

ಚಿತ್ತಚೋರ ಪೋರನೊಬ್ಬನೇ ಮಲಗಿದ್ದ ||1||

ಹೆದರದೆ ಕತ್ತಲಲಿ ಒಬ್ಬನೇ ಆಡುತ್ತಾ |

ಪಾದವನ್ನೆತ್ತಿ ಬೆರಳು ಬಾಯಲ್ಲಿಡುತಾ ||

ಅಂದದ ಕಣ್ಣರಳಿಸಿ ಸುತ್ತ ನೋಡುತ |

ಮೋದದಿ ನಲಿವ ಪುಟ್ಟ ಕಂದ ||2||

ತಾಯಿ ಹೆರಲಿಲ್ಲ, ತಂದೆ ಬೆಳಸಲಿಲ್ಲ |

ಬಯಸನು ಯಾರನ್ನೂ, ಎಲ್ಲರೂ ಬಯಸುವಂತಹ ||

ಸ್ವಯಂ ತನ್ನನ್ನು ಕಾಯ್ದು ಎಲ್ಲರನ್ನೂ ಕಾಯ್ವ |

ಜಯ ಶ್ರೀಕೃಷ್ಣವಿಠ್ಠಲನಂತಹ ಕಂದ ಬೇಕು ||3||

168. ಪಥಿಕ ನಾನು ಪಾಥೇಯ ಕಟ್ಟುತಿರುವೆ |

ಮಥಿಸಿ ಜ್ಞಾನ ಅರ್ಥ ತಿಳಿಯುತಿರುವೆ ||

ಪಂಥನೇ, ಅನ್ಯವರಿಯದಂತೆ ಮಾಡೆನ್ನ |

ಪಾರ್ಥಸಖ ಶ್ರೀಕೃಷ್ಣವಿಠ್ಠಲ ದಯಾನಿಧೇ ||

169 ಎನಗೆ ದೇಹವಿತ್ತು ಸಲುಹಿದವ ಪಿತೃ | (ಸ್ಥೂಲ)

ಎನಗೆ ಜನ್ಮ-ಆಹಾರವಿತ್ತವಳು ಮಾತೃ ||

ಎನಗೆ ಅರಿವಿತ್ತು ತಿದ್ದಿದವರು ಗುರು |

ಎನ್ನ ಸರ್ವ ಆಗು-ಹೋಗುಗಳ ನಿರ್ಧಾರ ನಿನ್ನದು ||

ಎನ್ನ ಪಾತ್ರ ಇದರಲ್ಲೇನಿದೆ ಪೇಳು ಶ್ರೀಕೃಷ್ಣವಿಠ್ಠಲ ||

170. ಒಂದೇ ಕಾಲ, ಒಂದೇ ಶರೀರ |

ಒಂದೇ ಜೀವನ, ಒಂದೇ ಅವಕಾಶ ||

ಒಂದೇ ಮನ, ಒಂದೇ ಬುದ್ದಿ |

ಒಂದೇ ಭಕುತಿಯಲಿ ಒಂದೇ ದೈವದಿಂದ ||

ಒಂದನ್ನೇ ಪಡೆಯಿರಿ ಶ್ರೀಕೃಷ್ಣವಿಠ್ಠಲನ ಭಜಿಸಿ ||

171. ತಿಳಿಯಿರೋ ಒಳ ತಿರುಳು ತಿಳಿದು ತಿಳಿಯಿರೋ |

ಒಳ್ಳೆಯದನ್ನು ಬಿಡದೇ ಕೇಳಿ ತಿಳಿಯಿರಿ ||ಪ||

ಬಾಳಿನಲಿ ಏಳು-ಬೀಳುಗಳು ಸಹಜವೇ |

ಗೋಳು ಹೇಳಿಕೊಳ್ಳದೇ ಸಹಿಸಿರಿ ||

ದಾಳಿಂಬೆ ಕಾಳು ಹಣ್ಣಿನಿಂದ ಸಿಡಿದರೆ ಬೆಲೆಯಿಲ್ಲ |

ಒಳಗೇ ಜೋಡಣೆಯಲ್ಲಿದ್ದರೆ ರುಚಿ-ಶುಚಿ ||1||

ಕಳೆಯುವ ಉದಯಾಸ್ತಮಾನ ಆಯುಷ್ಯಕಳೆವುದು |

ಒಳಗೊಳಗೆ ಬೆಂದು ಪಕ್ವವಾಗುವುದು ಪಾಕದಂತೆ ||

ಕೊಳೆ ಹತ್ತದಂತಿರುವ ಕಮಲದೆಲೆಯಂತೆ |

ಸುಳಿಯೊಳು ಸಿಲುಕದೆ ಮೆಲ್ಲ ಜಾರಿಕೊಳ್ಳಿ ||2||

ಪೊಳ್ಳು ಮಾತಲಿ ವ್ಯರ್ಥವ್ಯಯಿಸದೇ ಕಾಲ |

ಸುಳ್ಳು ಜೊಳ್ಳುಗಳಿಗೆ ಜೋತು ಬೀಳದೆ ||

ಕಳ್ಳ ಹೊಂಚು ಹಾಕಿ ಮಳ್ಳ ಮಾಡುವ ಮುನ್ನ |

ಮುಳುಗದಂತೆ ಕಾಯ್ವ ಶ್ರೀಕೃಷ್ಣವಿಠ್ಠಲಗೆ ಶರಣೆನ್ನಿ ||3||

ಸಂಕ್ಷಿಪ್ತ ಪೃಥುರಾಜ ಚರಿತೆ (ಪದಗದ್ಯ)

172. ಮಥಿಸಲು ವೇನನ ಬಾಹು ಜನಿಸಿದ ಹರಿಅಂಶದ ಪೃಥು |

ಸಾರ್ಥಕದಿ ವರಸಿದಳು ಸಹಜಾತೆ ಅರ್ಚಿ ||ಪ||

ದೇವತೆಗಳೊಡಗೂಡಿ ಋಷಿಗಳೈದರು ಪಟ್ಟಾಭಿಷೇಕ |

ಅವನ ಸ್ತುತಿಸಲು ವಂದಿ-ಮಾಗಧರು ಮುಂದಾದಾಗ ತಡೆದು ||

ಯಾವ ಗುಣಗಳನ್ನೂ ತಿಳಿಯದೆನ್ನ ಪೊಗಳದಿರಿ |

ಸರ್ವೋತ್ತಮನಾದ ಪರಮಾತ್ಮನನ್ನೇ ಸ್ತುತಿಸಲು ಪೇಳಿದ ||1||

ಬರ ಭೀಕರದಿ ದೇಶ ಬಳಲಲು ರಾಜನ ಮೊರೆ ಹೊಕ್ಕರೆಲ್ಲ |

ಶರಣು ಬಂದವರ ಕಾಪಾಡಲು ಧಮರ್ಧಾರಿಯಾದ ||

ಕಾರಣ ತಿಳಿದು ಗೋರೂಪದ ಉರ್ವಿ ಬೆನ್ನಟ್ಟಿದ |

ನಿರಪರಾಧಿ ಸ್ತ್ರೀವಧೆ ಪ್ರಜಾಪಾಲಕಗೆ ಸಲ್ಲದೆಂದಳು ||2||

ಧರಿತ್ರಿಯೇ, ಹಾಕಿದ ಬೀಜನುಂಗಿ ಬೆಳೆಕೊಡದಿರುವುದು ನ್ಯಾಯವೇ ?|| ಎಂದಾಗ ||

ಉಗ್ರರಾಜನ ನೋಡಿ ಮೋದಿನಿ ಅನ್ನ ಪ್ರಾಪ್ರಿಯ ಉಪಾಯ ಪೇಳಿದಳು ||

ಗೋರೂಪಿ ತಾನಾಗಿ ಕರು, ಪಾತ್ರೆ, ಹಿಂಡುವರ ವ್ಯವಸ್ಥೆ ಮಾಡೆಂದಳು ||

ಕರುಣದಿ ಸಕಲರಿಗೆ ಅಭೀಷ್ಟ ಪ್ರದಳಾದಳು ||3||

ಸ್ವಾಯಂಭೂ ಮನುವನ್ನು ಕರುವಾಗಿಸಿ ಸಮಸ್ತ ಧಾನ್ಯಾದಿಗಳನು |

ಸ್ವಯಂ ಪೃಥುರಾಜ ತನ್ನ ಕರವನ್ನೇ ಪಾತ್ರೆಯಾಗಿಸಿ ಕರೆದ ||

ಬೃಹಸ್ಪತಿಯು ವೇದರೂಪಿ ಹಾಲನ್ನು ಕರೆದರು |

ಪ್ರಲ್ಹಾದನನ್ನು ಕರು ಮಾಡಿ ದೈತ್ನರು ಮದಿರೆ ಹಿಂಡಿದರು ||4||

ದೇವತೆಗಳು ಇಂದ್ರನ ಕರುಮಾಡಿ ಅಮೃತ ಹಿಂಡಿದರು |

ಸರ್ವಗಂಧರ್ವರು ವಿಶ್ವಾವಸು ಕರುಮಾಡಿ ಗಾನವಿದ್ಯೆ ಹಿಂಡಿದರು ||

ಪಿತೃಗಳು ಮೃತ್ತಿಕಾ ಪಾತ್ರೆಯಲಿ ಕವ್ಯವನ್ನು ಹಿಂಡಿದರು |

ಸಿದ್ಧರು ಕಪಿಲನ್ನ ಕರುಮಾಡಿ ಅಣಿಮಾಡಿ ಸಿದ್ಧಿ ಪಡೆದರು ||5||

ರುದ್ರನನ್ನು ಕರುಮಾಡಿ ಪಿಶಾಚಿಗಳು ಕಪಾಲದಿ ರಕ್ತಹಿಂಡಿದರು |

ಸರ್ಪಗಳು ತಕ್ಷಕನ ಕರುಮಾಡಿ ವಿಷವನ್ನೇ ಕರೆದರು ||

ಗರುಡನ್ನ ಮುಂದೆ ಮಾಡಿ ಪಕ್ಷಿಗಳು ಕೀಟ-ಪತಂಗ ಹಿಂಡಿದರು |

ಪರ್ವತಗಳು ಹಿಮಾಲಯ ಕರುಮಾಡಿ ನಾನಾಧಾತುಗಳ ಹಿಂಡಿದರು ||6||

ಸರ್ವರೂ ಸಂತೋಷಿಸಲು ಪೃಥ್ವಿಯನ್ನು ಪುತ್ರಿಯೆಂದು ಸ್ವೀಕರಿಸಿದ |

ಸುಪ್ರಜೆಗಳ ಅನುಕೂಲಕ್ಕಾಗಿ ನೆಲಸಮಗೊಳಿಸಿ ಪುರನಿರ್ಮಿಸಿದ ||

ನೂರನೇ ಅಶ್ವಮೇಧ ಯಜ್ಞವನು ಪ್ರಾರಂಭಿಸಿದ |

ಇಂದ್ರನು ಸಹಿಸದೇ ಯಜ್ಞಾಶ್ವವ ಅಪಹರಿಸಿದ ||7||

ಪುತ್ರನಿಗೆ ಇಂದ್ರನ ವಧೆಗೆ ಪೇಳಿ ಯಜ್ಞ ಮುಂದುವರಿಸಿದ |

ಧರ್ಮರಕ್ಷಣಾರ್ಥ ಅವತರಿಸಿದ ನಿನಗಿದು ತರವಲ್ಲವೆಂದು ಬ್ರಹ್ಮ ಪೇಳಲು ||

ಇಂದ್ರನೊಡನೆ ಸಂಧಾನಮಾಡಿ “ಏಕೋನ ಶತಕ್ರತು” ಎನಿಸಿದ |

ವಾರ್ಧಕ್ಯದಿ ವಿಜಿತಾಶ್ವಗೆ ಪಟ್ಟಗಟ್ಟಿ ವನಕೆ ತೆರಳಿದ ||8||

ಗುರೂಪದೇಶದಂತೆ ಚಕ್ರಸ್ಥಿತ ಪಂಚತತ್ವಗಳರಿತು |

ಆರೋಹಿಸಿ ಶರೀರವನ್ನು ತ್ಯಜಿಸಿದ ಶಾಂತತೆಯಲಿ ||

ನಿವೃತ್ತಿಸಿ ವಿಷಯ ಚಿಂತನೆಗಳ ಶ್ರೀಕೃಷ್ಣವಿಠ್ಠಲನ ಪಾದರತಿ ಪಡೆದ |

ಪರಮಾತ್ಮನಲಿ ರತಿ ಕೊಡುವುದೀ ಪೃಥು ಚರಿತೆ (ಓದಿ) ಕೇಳಿದವರಿಗೆ ||

173. ಪಟ್ಟೆ ನಾಮ ಇಟ್ಟ ದಿಟ್ಟ ನಿಂತಿರುವ |

ಬೆಟ್ಟದೊಡೆಯ ನೆಟ್ಟಿಯಾಗಿ ಕಾಲೂರಿ ನಿಂತಿರುವ ||ಪ||

ಸೊಂಟದ ಮೇಲೆ ಎಡೆಗೈ ಇಟ್ಟು |

ಕಂಟಕ ಕಳೆವ, ವರವ ನೀಡುವ ||

ಒಂಟಿಯಾಗಿ ನಿಂತು ಕರೆಯುತಿರುವ |

ಬಂಟರೆಲ್ಲ ಬಂದು ಪಾದಭಜಿಸಿ ||1||

ಸುಂಟರ ಗಾಳಿಯಂದದಿ ದರುಶನ |

ದಿಟ್ಟಿಸಲು ಪೂರ್ಣಕಾಣದಿದ್ದರೂ ||

ಕೆಟ್ಟ ಘಳಿಗೆ ಬರುವುದು ತಡೆದು |

ಚಟ್ಟನೆ ಚಿಂತೆ ಕಳೆವ ಚಿನ್ಮಯ ||2||

ಸಿಟ್ಟಾಗದೆ ಎನ್ನವಗುಣ ಬಿಟ್ಟು |

ಘಟ್ಯಾಗಿ ಪಾದಭಕ್ತಿ ಕೊಡಲಿ ||

ಸೃಷ್ಟಿಗೊಡೆಯ ಶ್ರೇಷ್ಠದೈವ |

ಸೃಷ್ಠಸೃಷ್ಟ ಶ್ರೀಕೃಷ್ಣವಿಠ್ಠಲ ಒಲಿಯಲಿ ||3||

174.. ಹುಟ್ಟಿದ ಮೇಲೆ ಸಾವು ನಿಶ್ವಿತ |

ಅಷ್ಟರಲಿ ಪ್ರಕೃತಿಯ ತಿಳಿದುಕೋ ||

ಉಟ್ಟ ಬಟ್ಟೆ ಕಳೆಚುವ ಮುನ್ನ |

ಕಟ್ಟು ಬುತ್ತಿ ಸಾಕಾಗುವಷ್ಟು ||

ಅಷ್ಟೂ ವೈವಿಧ್ಯತೆಯ ವೈಚಿತ್ರ್ಯವ |

ಬಿಟ್ಟು ಬಿಡದೆ ಧ್ಯಾನಿಸಿ ಅಚಿಂತ್ಯಾದ್ಭುತನ ||

ಸೃಷ್ಟಿದಾತನ ಸಾಮರ್ಥ್ಯವರಿತು |

ಅಷ್ಟವಿಧದಿ ಭಜಿಸಿ ಸಮರ್ಪಿಸು ||

ಕಷ್ಟ ಕಳೆದು ಸದಾ ಸುಖಕೊಡುವ |

ಇಷ್ಟದೈವ ಶ್ರೀಕೃಷ್ಣವಿಠ್ಠಲ ಪೊರೆವ ||

175. ಎಂಬತ್ತ್ನಾಲ್ಕು ಲಕ್ಷಯೋನಿ ಜೀವಿ ಸೃಷ್ಟಿಸಿ ಪೊರೆವ ನಿನಗೆ |

ಒಬ್ಬ ನಾನು ಭಾರವಾದನೆ? ||

ಬಿಂಬ ನೀನು, ಪ್ರತಿಬಿಂಬನಾನು |

ಇಂಬು ನೋಡಿ ನಡೆಸಲಾರೆಯಾ? ||

ಕೊಂಬು ಕಹಳೆ ನಗಾರಿ ವೈಭವ ಬೇಡ |

ಸಂಬ್ರಮದಿ ನಿನ್ನಡಿ ಸೇರುವ ಸೌಭಾಗ್ಯ ನೀಡೆಯಾ? ||

ನಂಬಿದ ದೈವ ಶ್ರೀಕೃಷ್ಣವಿಠ್ಠಲ ಕೈಬಿಡಬೇಡಾ ||

176. ಸರ್ವರಿಗೂ ಸುಖಾನಂತರ ದು:ಖ, ದು:ಖಾನಂತರ ಸುಖವಿದ್ದೇ ಇದೆ |

ಇರುಳು-ಹಗಲಿನಂತೆ ಬರಲೇಬೇಕು, ಯಾರಿಗೂ ಎಂದಿಗು ತಪ್ಪದು ||

ಸವಿಯಾದ ಸುಖದಿ ಕಳೆದ ಕಾಲ ತಿಳಿಯದು, ದು:ಖ ಕ್ಷಣವೊಂದು ಯುಗವಾಗಿ ಕಾಯ್ವದು | ಭವದಿ ಜನರು ಪರರ ದು:ಖದಿ ಸಂತೋಷಿಸಿ, ಅವರ ಉತ್ಕರ್ಷಸಿ ದ್ವೇಷ ಪಡುವರು ||

ಶವದಂತೆ ಕಾಣುವರು ಬಡವರ, ಹಣವಂತರ ಕಂಡು ಮಣೆ ಹಾಕುವರು |

ಭುವದಿ ಹಸಿದವಗೆ ಅನ್ನವಿಕ್ಕದೇ, ಹೊಟ್ಟೆತುಂಬಿದವಗಿಕ್ಕಿ ಆದರಿಸುವರು ||

ಯಾವುದೋ ಕ್ಷುದ್ರ ದೇವತೆಗಳ ಭಜಿಸಿ, ಇಲ್ಲದ ಬವಣೆ ಪಡುವರು |

ಚೆಲ್ವ ಶ್ರೀಕೃಷ್ಣವಿಠ್ಠಲನ ಒಲಿಸಲು, ದಾರಿ ತಿಳಿಯದೇ ಮೂರ್ಖರಾಗುವರು ||

177. ಪ್ರಭು ನಿನ್ನಲಿ ಬೇಡದೇ ಬೇಡುವಂತಿರಲಿ |

ಪ್ರಭು ಎನಗೆ (ಸೊಕ್ಕು) ಮದ ಕೊಡದೆ, (ಸಂತೋಷ) ಮದ ಕೊಡು ||

ಪ್ರಭು ಎನಗೆ (ಭಾಹ್ಯವಿಷಯಗಳಲಿ) ರತಿಕೊಡದೆ, (ಪದರತಿ) ರತಿಕೊಡು |

ಪ್ರಭು ಎನಗೆ (ವಿಪರೀತ) ಜ್ಞಾನಕೊಡದೆ, (ಸ್ಥಿರ) ಜ್ಞಾನಕೊಡು ||

ಪ್ರಭು ಎನಗೆ (ವೇದಾಭ್ಯಾಸದಿ) ವೈರಾಗ್ಯ ಕೊಡದೆ, (ಲೌಕಕದಿ) ವೈರಾಗ್ಯ ಕೊಡು |

ಪ್ರಭು ಎನ್ನ ಶ್ರಿಕೃಷ್ಣವಿಠ್ಠಲ ನಿನ್ನವಳೆಂದೆಣಿಸು ||

178. ಎಲ್ಲ ಬಲ್ಲವ, ಎಲ್ಲಕಡೆ ತುಂಬಿರುವ |

ಎಲ್ಲಗುಣಗಳ ಕಡಲಾಗಿರುವ ||

ಕಾಲ, ದೇಶ-ಗುಣತ: ಪರಿಪೂರ್ಣ |

ಎಲ್ಲ ಸಂಜ್ಞಾನ, ವಿಜ್ಞಾನ, ಪ್ರಜ್ಞಾನಕ ||

ಎಲ್ಲ ಇಂದ್ರಿಯಗಳ ಪ್ರೇರಕ |

ಬಲ್ಲವರಿಗೆ ಹೃದಯಸ್ಥನಾಗಿರುವ ||

ಎಲ್ಲ ಅವನ ವಶ, ಅವನಾರವಶನಲ್ಲ |

ಎಲ್ಲ ಕಾಲದ ಆತ್ಮೀಯ ಬಂಧು ||

ಎಲ್ಲ ಜ್ಞಾತ ಆನಂದರೂಪಿ ಶ್ರೀಕೃಷ್ಣವಿಠ್ಠಲ ||

179. ತೊರವಿಯ ಕಂಡಿರ್ಯಾ ತ್ವರಿತ್ವಾಲಯ ಕಂಡಿರ್ಯಾ ||ಪ||

ತ್ವರಿತದಿ ಒಲಿವ ನರಹರಿಯ ಕಂಡಿರ್ಯಾ ||ಅಪ||

ಎರಡು ಕರದಿ ಶಂಖ-ಚಕ್ರ ಧರಿಸಿ |

ಎರಡು ಕರದಿ ಖಡ್ಗ-ಗದಾಪಾಣಿ ||

ಎರಡು ಕರದಿಂ ಉದರ ಸೀಳುತ |

ಎರಡು ಕರದಿಂ ಕರಳುಮಾಲೆ ಧರಿಸುವ ನೃಸಿಂಹನ ||1||

ದಶಾವತಾರದ ಪ್ರಭಾವಳಿ ಸುತ್ತಲೂ |

ಅಷ್ಟಬಾಹು ನರಸಿಂಹ ಕುಳಿತ ಭಂಗಿ ||

ದುಷ್ಟ ಹಿರಣ್ಯಕನ ತೊಡೆಯಲಿ ಮಲಗಿಸಿ |

ವಿಶಿಷ್ಟ ರೀತಿಯಲಿ ದೃಷ್ಟಿಸುತಿರುವ ನೃಸಿಂಹನ ||2||

ಬಲಕೆ-ಎಡಕೆ ಲಕ್ಷ್ಮೀ-ಪ್ರಲ್ಹಾದ ನಿಂತಿರುವರು |

ಕೆಳಗೆ ಗರುಡ ಕುಳಿತಿರುವ ಸ್ವಾಮಿ ಭಕ್ತಿಯಲಿ ||

ಬಲಭೀಮ ಇರುವ ಗದೆಯಲಿ |

ಸಾಲಿಗ್ರಾಮ ಏಕಶಿಲೆಯ ಸ್ಪಷ್ಟಮುರುತಿ ನೃಸಿಂಹನ ||3||

ಭಕುತರ ಕೈಬೀಸಿ ಕರೆಯುವ ದೇಗುಲದಿ |

ಭಕುತ ದುರ್ವಾಸ ಸ್ಥಾಪಿತ ಲಿಂಗ ದರ್ಶನಾನಂತರ ||

ಸಂಕಟ ಕಳೆದು ಸದಾ ಸಂತೈಪ ಶಾಂತದೈವ |

ಮುಕ್ತಿದಾಯಕ ಶ್ರೀಕೃಷ್ಣವಿಠ್ಠಲಾಭಿನ್ನ ನೃಸಿಂಹನ ||4||

180. ಒಂದೇ ಜೀವನ (ಸಾಧನಕೆ), ಒಂದೇ ಗುರಿ (ಮೋಕ್ಷ) |

ಒಂದನ್ನೇ ನಂಬಿ (ಏಕತತ್ವ), ಒಂದರಂತೆ ಇನ್ನೊಂದಿಲ್ಲ (ಪರಮತ) ||

ಒಂದೇ ಮತ (ಮಧ್ವ), ಒಂದೇ ವಿದ್ಯೆ (ವೇದ) |

ಒಂದೇ ಗುರು (ಪ್ರಾಣ), ಒಂದೇ ದೇವರು (ನಾರಾಯಣ) ||

ಒಂದೇ ಅಂಕಿತ, ಒಂದೇ ನಾಮ |

ಒಂದೇ ತಿಳಿದರೆ, ಒಂದೇ ತಿಳಿದಂತಲ್ಲ ||

ಒಂದರೊಳಗೊಂದಾಗುವ ತನಕ ಒಂದಾಗಿ ಇರು |

ವಂದೇ ವಂದ್ಯಂ ಶ್ರೀಕೃಷ್ಣವಿಠ್ಠಲಂ ಸದಾ ||

181. ಮಾತು ಕೇಳಿಸೊ ಇಲ್ಲ ರೂಪ ತೋರಿಸೋ |

ಕಾತುರದಿ ಹಾತೊರೆಯುತಿರುವೆ ಪ್ರಭು ||ಪ||

ಬಾಲ್ಯದಿ ನಾರದರಿಗೆ ಆಕಾಶದಿಂದ ಕೇಳಿಸಿದೆ |

ಬಾಲಕ ಧ್ರುವನೆದುರು ನಿಂತು ಹೇಳಿದೆ ||

ಬಾಲಕ ಪ್ರಲ್ಹಾದಗೊಲಿದಿತ್ತೆ ಸುವಚನ |

ಒಲಿದು ಕಕ್ಷಿವಂತಗಿತ್ತೆ ಸುವಾಕ್ಯವ ||1|| (ಉಶಿನರಮಗ)

ಕರಿರಾಜನ ಕಂಟಕ ಕಳೆದೆ ದರುಶನದಿ |

ಕರಾಳ ಶಾಪ ಕಳೆದು ಅಹಲ್ಯನುದ್ಧರಿಸಿದೆ ||

ಕರುವಧುಗೆ ಕಾಣಿಸದೇ ಅಕ್ಷಯ ವಸ್ತ್ರವಿತ್ತೆ |

ಶ್ರೀಕೃಷ್ಣವಿಠ್ಠಲ ನಿಜ ದರುಶನದಿ ಸ್ವರಾರ್ಣವ ನೀಡೋ ||

182. ಕರ್ಮ ಸವೆಯಲು ಜನುಮವೋ ಜನುವೆತ್ತಿದ್ದಕ್ಕೆ ಕರ್ಮವೋ ||ಪ||

ಕರ್ಮಬಹು ಜಟಿಲ ಅರ್ಥವಾಗದು ಸರಳದಿ ||ಅ.ಪ||

ಕರ್ಮ ಮಾಡಲೇಬೇಕು ಜೀವಿಗಳೆಲ್ಲ |

ಕರ್ಮ ಮಾಡದೇ ಇರಲು ಆಗದು ಎಂದೂ ||

ಕರ್ಮವಿಲ್ಲದ ಜೀವನವಿಲ್ಲ, ಕರ್ಮವೇ ಮುಖ್ಯ |

ಕರ್ಮದ ಲಕ್ಷಣ ತಿಳಿಯಿರಿ ಎಲ್ಲ ||1||

ಕರ್ಮ ಮಾಡಿದ್ದೆಂದೂ ನಶಿಸದು |

ಕರ್ಮಫಲ ಎಂದೂ ಹೆಚ್ಚು-ಕಡಿಮೆಯಾಗದು ||

ಕರ್ಮ ಫಲ ತಾನೇ ಭೋಗಿಸಬೇಕು |

ಕರ್ಮದ ಫಲ ಈಗಲ್ಲದಿದ್ದರೆ ಮುಂದಾದರೂ ಉಣ್ಣಲೇಬೇಕು ||2||

ಕರ್ಮದ ಫಲ ಬೇರೆಯವರಿಗೆ ಕೊಡಲಾಗದು |

ಕರ್ಮದ ಸತ್ಪಲವು ಕುಕರ್ಮಫಲ ನಿಷ್ಕ್ರಿಯಗೊಳಿಸದು ||

ಕರ್ಮದ ಫಲ ವಿವಿಧ ರೂಪದಿ ಬರುವುದು |

ಕರ್ಮದ ಲೆಕ್ಕದೊಡೆಯ ಶ್ರೀಕೃಷ್ಣವಿಠ್ಠಲನಲ್ಲದೆ ಬೇರಾರಿಲ್ಲ ||

183. ಆಡುವ ಮಾತೆಲ್ಲ ಮಹದೇವನ ಗುಣಗಾನ ||ಪ||

ಆಡಿದ ಮಾತು, ಒಡೆದ ಮುತ್ತು ಹೋದರೆ ಹೋಯಿತು |

ಆಡಿದ ಮಾತು ಎಂದೂ ಅಳಿಸಲಾಗದು ||

ಹೊಡೆದು ಹಾಕಲಾಗದು, ಅಳಿಯದೆಂದೂ |

ನುಡಿಯಬಾರದು ಮರ್ಮಭೇದಕ ಮಾತು ||1||

ಮಾಡಿ ಮನದಿ ವಿಚಾರ ನಂತರ ನುಡಿಯಬೇಕು |

ದುಡುಕುತನದ ಮಾತು ಅತೀ ಗಂಡಾಂತರ ||

ಆಡಿದ ಮಾತಿಂದಲೇ ಬರುವುದು ಪಾಪ-ಪುಣ್ಯ |

ಆಡಿದ್ದೆಲ್ಲಾ ಕೂಡಿ ಶಾಶ್ವತವಾಗಿರುವುದು ಆಕಾಶದಿ ||2||

ಮಾಡಬಾರದು ವೃಥಾಹರಟೆ ನಿಂದಕ ಮಾತು |

ಕೇಡುಮಾತುಗಳ ಸ್ತುತಿಪರ ಎನ್ನಬೇಕು ||

ಮಾಡಬಾರದು ವರ್ಣಗಳ ದುರುಪಯೊಗ |

ಆಡಿದ್ದೆಲ್ಲಾ ವರ್ಣಾಭಿಮಾನಿ ಶ್ರೀಕೃಷ್ಣವಿಠ್ಠಲನ ಸೇವೆ ಎನ್ನಿ ||3||

184. ನಾನು ನನ್ನದಲ್ಲ, ನನ್ನದೆಂಬುವುದು ಏನಿಲ್ಲ |

ನನ್ನವರೆಂಬುವರು ಎಂದೂ ನನ್ನವರಲ್ಲ ||1||

ನಾನು ದುಡಿದು ಮಾಡಿದ್ದೆಲ್ಲಾ ಮಂದಿಗಾಗಿ |

ಚೆನ್ನಾದ ಮನೆ, ಮಡದಿ, ಮಕ್ಕಳು ನನ್ನವಲ್ಲ ||2||

ಮನೆಯ ಒಡೆತನ ನನ್ನದೆಂಬುವಳು ಮಡದಿ |

ನನ್ನ ಮನೆ ಸುಂದರ ಎನ್ನುವವು ಮಕ್ಕಳು ||3||

ಮನೆಯಲ್ಲಿ ವಾಸವಾಗಿಹ ಜಿರಳೆ, ಇರುವೆ |

ಮನೆ ಕೆಲಸದಾಕೆ ಎಲ್ಲ ನಮ್ಮನೆ ಎನ್ನುವುವು ||4||

ನಾನು ಹಾಕಿದ ಬಟ್ಟೆ ನಾಶವಾಗುವ ದೇಹಕ್ಕೆ |

ನಾನು ಉಣ್ಣುವ ಅನ್ನ ಒಳಗಿರುವ ಕ್ರಿಮಿಗಳಿಗೆ ||5||

ಅನುದಿನದ ವ್ಯಾಪಾರವೆಲ್ಲ ಇಂದ್ರಿಯ ತೃಪ್ತಿಗೆ |

ಮನದಿ ಬೇಡದೆ ಪರವಿಷಯ ನೆಲೆವೂರಿಸಿ ||6||

ಕನಕದ ಸಂಕೋಲೆ ಆಭರಣವೆಂದು ಧರಿಸಿದೆ |

ಅನವರತ ಇರುವ ಜೊತೆಗಾರನ ಲಕ್ಷಿಸಲಿಲ್ಲ ||7||

ನನಗೆ ನಿಜದಿ ಬೇಕಾಗಿದ್ದು ಎಂದೂ ಮಾಡಲಿಲ್ಲ |

ನನ್ನದೆಂಬುವ ಸುಹೃತ ಶ್ರೀಕೃಷ್ಣವಿಠ್ಠಲನ ಅರಿಯಲಿಲ್ಲ ||8||

185. ಕೇಳಿ, ಪ್ರಕೃತಿ ಕೇಳಿಯ ಕೇಳಿ |

ಕೇಳಿ ತಿಳಿಯಿರಿ ಅವುಗಳರ್ಥವ ||

ಪಕ್ಷಿಗಳ ಕಲರವ ಸಾರುತಿದೆ |

ವೃಕ್ಷಗಳ ಮರ್ಮರ ಸದ್ದಲ್ಲಿದೆ ||

ಗಾಳಿಯು ಸುಂಯ್ ಗುಟ್ಟುವಿನಲ್ಲಿದೆ |

ನಳಿನಳಿಸುವ ಪುಷ್ಪದ ಸುಗಂಧದಲ್ಲಿದೆ ||

ಜುಳುಜುಳು ನದಿಯ ಶಬ್ದದಲ್ಲಿದೆ |

ಹಲ್ಲಿಯ ಲೊಚು ಗುಟ್ಟುವಿಕೆಯಲ್ಲಿದೆ ||

ಭೋರ್ಗೆರೆವ ಸಾಗರದ ಘೋಷದಲ್ಲಿದೆ |

ಅಗಣಿತ ಗುಣಧಾಮ ಶ್ರೀಕೃಷ್ಣವಿಠ್ಠಲನ ಗುಣಗಾನ ||

186. ಪ್ರಕೃತಿ ಸಾರುತಿದೆ ಓಂಕಾರನಾದ | ಸೂಕ್ಷ್ಮತೆಯಲಿ ತಿಳಿದು ಆರಾಧಿಸಿ |

ಶ್ರೀಕೃಷ್ಣವಿಠ್ಠಲನ ಭಕ್ತಿಲಿ ತಿಳಿದು | ವೈಕುಂಠದಲಿ ಶಾಶ್ವತ ನೆಲೆಗಾಣಿರಿ ||

187. ಸವಿ ಸವಿಗಾನ ಸವಿಯಾದ ಗಾನ |

ಆವಾಗ ಈವಾಗ ಯಾವಾಗಲು ಹೇಳುವಗಾನ ||ಪ||

ಸುಲಭದಿ ಮೆಲಕು ಹಾಕುವ ಗಾನ |

ಕುಳಿತಲ್ಲಿ, ನಿಂತಲ್ಲಿ, ಮಲಗಿದಲ್ಲಿ ಹೇಳುವ ಗಾನ ||

ಎಲ್ಲರೂ ಎಲ್ಲ ಸ್ಥಳದಿ ಬಿಡದೆ ಹೇಳುವ ಗಾನ |

ಬಲ್ಲವರೆಲ್ಲ ಸದಾ ಹೇಳುವ ಗಾನ ||1||

ನಲುಮೆಯಲಿ ಹೇಳುವ ಗಾನ |

ಒಲುಮೆಯಿಂದ ಉಪದೇಶಿಸುವ ಗಾನ ||

ಹೇಳುತ್ತಾ ಹೇಳುತ್ತಾ ಬರುವುದು ಸುಜ್ಞಾನ |

ಚೆಲುವ ಶ್ರೀಕೃಷ್ಣವಿಠ್ಠಲನ ಅಮೃತ ಗಾನ ||2||

188. ಅಕ್ಷಮಾಲೆಯ ಎಲ್ಲ ಅಕ್ಷರಗಳಿಗೂ ಪರಮಾರ್ಥವಿದೆ |

ಸಾಕ್ಷಾತ್ ಪರಮಾತ್ಮನ ಗುಣ ತಿಳಿಸಿ ಹೇಳುವುದು ||

ಸಾಕ್ಷರಿಸಿಕೊಂಡರೆ ವರ್ಣಗಳ ಉತ್ಕೃಷ್ಟ ಜೋಡಣೆ |

ಅಕ್ಷರನಾಮಕ ಪರಮಾತ್ಮನನ್ನು ಆರಾಧಿಸಿದಂತೆ ||

ಸ್ವಕ್ಷಯವಾಗುವುದು ದು:ಖ ಜೀವನದಿ |

ಅಕ್ಷಯ ಫಲದಾತಾ ಶ್ರೀಕೃಷ್ಣವಿಠ್ಠಲ ಒಲಿದು ಮೆಚ್ಚುವ ||

189. ನಾಭಾಗ ಚರಿತೆ

ನಭಗ ಪುತ್ರ ನಾಭಾಗ ವೈವಸ್ವತನ ಪೌತ್ರ |

ಸಭ್ಯನು ವಿದ್ಯಾರ್ಜನೆಗೆ ಗುರುಕುಲಕೆ ಪೋದ ||

ವಿಭಾಗಿಸಿ ಆಸ್ತಿ ಭಾತೃಗಳು ಹಂಚಿಕೊಂಡರೆಲ್ಲ |

ಅಭಾಗನಿಗೆ ಪಿತೃಧನ ಭಾಗ್ಯವಿಲ್ಲದಾಯ್ತು ||

ಸಂಭಾವಿತ ಬಂದು ತನ್ನ ಭಾಗ ಕೇಳಿದ |

ವೈಭವದಿ ಯಜ್ಞನಿರುತ ಅಂಗೀರಸರು ಷಷ್ಠಿದಿನ ||

ಶೋಭೆ ತರುವ ವೈಶ್ಯದೈವತ್ವ ಕರ್ಮದ ಸೂಕ್ತ ಮರೆವರು |

ಪ್ರಭಾವಿ, ನೀನದ ನೆನಪಿಸು, ಯಜ್ಞಶೇಷ ಪೆಡೆಯುವೆ ಎಂದನು ||

ಸಂಭ್ರಮದಿ ತೆರಳಿ ತರುವಷ್ಟರಲಿ ವಿಲಕ್ಷಣಪುರುಷ |

ಸುಭಗನೊಬ್ಬ ಉತ್ತರ ದಿಕ್ಕಿನಿಂದ ಬಂದು ತನ್ನದೆಂದನು ||

ದಿಗ್ಭ್ರಮೆಗೊಂಡ ನಾಭಾಗ ತಂದೆಗೆ ಬಂದು ಕೇಳಿದ |

ಸುಭಾಗ ಯಜ್ಞಶೇಷ ಎಂದೂ ರುದ್ರನದೆಂದು ಪೇಳಲು ||

ಸುಭದ್ರದಿ ಆದ ತಂದು ರುದ್ರನಿಗೊಪ್ಪಿಸಿದನು |

ನಭಗ-ನಾಭಾಗರ ಸತ್ಯತೆಗೆ ಮೆಚ್ಚಿ ಸಕಲವನ್ನು ಕೊಟ್ಟು ||

ನಾಭಾಗನಿಗೆ ಬ್ರಹ್ಮಜ್ಞಾನ-ಮಂತ್ರದರ್ಶಿತ್ವ ದಯಪಾಲಿಸಿದ |

ನಾಭಾಗ ಚರಿತೆ ಪ್ರಾತ: ಸಾಯಂಕಾಲ ಸ್ಮರಿಸಿದವರು ||

ಈ ಭವದಿ ತತ್ವಜ್ಞನಾಗಿ ದಿವ್ಯಗತಿ ಪೊಂದಲು |

ಶುಭಸಾರ ಶ್ರೀಕೃಷ್ಣವಿಠ್ಠಲನೆಡೆಗೆ ಪೋಗುವರು ||

190. ನೇರ ಹರಿಯ ದರುಶನ-ಅನುಗ್ರಹವಾಗದು ||ಪ||

ತಾರತಮ್ಯದಿ ಭಜಿಸಿ ಪೂಜಿಸೆ ಒಲಿವಾ |

ಕ್ಷುದ್ರ ದೇವತಾ ಪೂಜೆ ವರ್ಜಿಸಿ ||

ಸರ್ವ ಸುರ ಪರಿವಾರ ಜ್ಞಾನದಿ |

ತಂತ್ರೋಕ್ತಸಾರ ಪದ್ಧತಿ ಅನುಸರಿಸಿ ||1||

ಗುರುಮುಖೇನ ಮಂತ್ರ ಸ್ವೀಕರಿಸಿ |

ಸ್ಥಿರವಾಗಿ ಶುಚಿಯಲಿ ಜಪ, ಧ್ಯಾನಿಸಿ ||

ಮರುತಾಂತರ್ಗತ ಶ್ರೀಕೃಷ್ಣವಿಠ್ಠಲನ ಪೂಜಿಸೆ |

ಪ್ರಾರಬ್ಧವಶಾತ್ ಅನುಗ್ರಹಿಸಿ ದರ್ಶನವೀವ ||2||

191. ಒಂದೇ ಮನದಿ ಕೊಂಡಾಡುತಿರಿ |

ಎಂದೂ ಬಿಡದೆ ವಿವಿಧ ನಾಮ ಸ್ಮರಿಸಿರಿ ||ಪ||

ನೇಮದಿ ಗೊಪಿಚಂದನ ಮುದ್ರೆ ಹಚ್ಚುವಾಗ |

ಸುಮ್ಮನ ಕುಳಿತಾಗ, ಕೆಲಸ ಮಾಡುವಾಗ ||

ಮೈಮನ, ನೋವು ಪರಿಹಾರಕ |

ರಾಮ, ವಾಸುದೇವ, ನಾರಾಯಣ ಎನ್ನಿ ||1||

ದಾರಿ ತಪ್ಪಿದಾಗ, ಕಷ್ಟದಲ್ಲಿದ್ದಾಗ |

ಅರಿತುಅರಿಯದೇ ಅಪರಾಧವಾದಾಗ ||

ಮಂತ್ರಾಕ್ಷರ ಲೋಪದೋಷವಾದಾಗ |

ಮೂರುಬಾರಿ ಅಚ್ಯುತಾನಂತ ಗೋವಿಂದ ಎನ್ನಿ ||2||

ಬರಬಾರದ ಆದಿ-ವ್ಯಾಧಿಗಳು ಬಂದಾಗ |

ಬೇರೆಯವರಿಂದ ಮನಕೆ ನೋವಾದಾಗ ||

ನರಸಿಂಹ, ಹರಿ ಎಂದರೆ ಹರಿವುದು ಸಕಲ ಬಂಧನ |

ಸುರವರ ಶ್ರೀಕೃಷ್ಣವಿಠ್ಠಲ ಪದತಲದಲ್ಲಿಡುವ ||3||

192. ರಾಮ, ರಾಮ ಎನೆ ಸಂಸಾರ ಆರಾಮ |

ರಾಮ ಸರ್ವತ್ರ ಇರುವನೆಂದು ತಿಳಿಯೆ ಆರಾಮ ||ಪ||

ಅವನೆಲ್ಲಿರುವ ಎಂದು ಸಂಶಯಬೇಡ |

ಅವನಲ್ಲಿ ರಾಮ ಇವನಲ್ಲಿ ರಾಮ ||

ಆವಾವ ಜೀವಿಯಲಿ ಆವಾವ ರೀತಿಯಲ್ಲಿರುವ |

ಸರ್ವಾಂತರ್ಯಾಮಿಯಾಗಿರುವ ರಾಮ ||1||

ಶ್ರೀ ಎನೆ ಸಕಲ ಶುಭಕ್ಕೂ ಶ್ರೀಕಾರ |

ರಾ ಎನೆ ರಾರಾಜಿಸುವ ಇಹಪರದಿ ||

ಮ ಎನೆ ಮಾರುತಿ ಕಾಂತಕಾಯ್ವ ಸದಾ |

ಶ್ರೀರಾಮ ಜಪಿಸಲು ಆರಾಮವೇ ಆರಾಮ ||2||

ಹೇಳಲು ಸುಲಭ ತಿಳಿಯಲು ಸುಲಭ |

ಗಳಿಸಲು ಪುಣ್ಯ ಸುಲಭದ ನಾಮ ||

ಕಳೆಯಲು ಪಾಪ ಒಳ್ಳೆಯ ನಾಮ |

ಕೆಳೆಯ ಶ್ರೀರಾಮನೇ ಶ್ರೀಕೃಷ್ಣವಿಠ್ಠಲನೆಂದು ತಿಳಿ ||3||

193. ನಾರಾಯಣ ನಾಮ ನುಡಿಸುವುವು |

ನಾರಾಯಣನತ್ತ ನಡೆಸುವುವು ||

ನಾರಾಯಣನ ಪೂಜೆ ಮಾಡಿಸುವುವು |

ನಾರಾಯಣ ಮೂರ್ತಿ ನೋಡಿಸುವುವು ||

ನಾರಾಯಣ ಕೀರ್ತಿ ಪಾಡಿಸುವುವು |

ನರರಹಂಕಾರ ಕೆಡಿಸುವುವು ||

ನರದೇಹ ಮೋಹ ಬಿಡುಸುವುವು |

ನರರನು ಸತ್ಕರ್ಮದಿ ಸಲಹುವುವು ||

ನರೋದ್ಧಾರಕ ಶ್ರೀಕೃಷ್ಣವಿಠ್ಠಲನ ದಯೆದಿ ||

194. ಜರೆಯದಿರು ಎಂದೂ ಜರಾವಸ್ಥೆಯ ||ಪ||

ಜರೆಯು ಕಾಲನ ದೂತಿಯಾಗಿ ಬರುವಳು ||ಅ.ಪ||

ವಿನಯದಿಂದ ಕೇಳಿಕೊಂಡರು ಬರದಿರದು |

“ವಿನಾ ದೈನ್ಯೇನ ಜೀವನಂ, ಅನಾಯಾಸೇನ ಮರಣಂ” ||

ಪುಣ್ಯವಂತರಿಗೆ ಮಾತ್ರ ಸಿಗುವುದೀ ಭಾಗ್ಯ |

ಜ್ಞಾನಿಗಳು ಕರ್ತವ್ಯ ಮುಗಿಸಿ ಹೋಗಲಣಿಯಾಗುವರು ||1||

ಕುರೂಪಿಯಾಗಿ ಶರೀರ ಒಣಗುವುದು |

ತಿರುಗುವುದು ಕಠಿಣವಾಗಲು ಕೊಲೇ ಸಹಾಯ ||

ನೇತ್ರ ದೃಷ್ಟಿ, ಶ್ರವಣ ಮಂದವಾಗುವುದು |

ಸುರಿಯುವುದು ಜೊಲ್ಲು, ಉದುರುವುದು ಹಲ್ಲು ||2||

ಕೊಡುಗೈ ದಾನಿ ಇದ್ದರೂ ಕೊಡುವತನಕ ಪ್ರೀತಿ |

ಒಡನೆ ಸಾಯುವ ದಾರಿ ಕಾಯುವರು ||

ಬಡ ಬಡನೆ ಕೋಪಿಸಿ ಎದುರೇ ಬೈಯ್ವರು |

ಕೊಡದೇ ಏನನ್ನೂ ತಿರಸ್ಕರಿಸುವರು ||3||

ಮಾತು ಆಡಿಸಲು ಸಮಯವೇ ಇರದು |

ಪ್ರೀತಿ, ಸಹನೆಗೂ ಬರ ಇರುವುದು ||

ಅತೀ ಅಸಹ್ಯದಿ ಸನಿಹಬಾರರು |

ಪ್ರೇತಕಳೆ ನೋಡಿ ಹೆದರುವರು ||4||

ಸರ್ವರು ಶತ್ರುವಿನಂತೆ ನೋಡುವರು |

ಮರಣಕ್ಕಿಂತ ವೃದ್ಧಾಪ್ಯ ಅಸಹನೀಯ ||

ಪರರ ಆಶ್ರಯಿಸದೇ ಪರಮಾತ್ಮನ ಭಜಿಸಿ |

ಪರಾತ್ ಪರ ಶ್ರೀಕೃಷ್ಣವಿಠ್ಠಲನಾಶ್ರಯಿಸೇ ಪಾರುಗೈವ ||5||

ಶ್ರೀವಾದಿರಾಜವಿರಚಿತ ದಶಾವತಾರ ಸ್ತುತಿ |

ಆಧಾರಿತ ಪದ ಗದ್ಯಸಾರ

ಮತ್ಸ್ಯ

195. ಸಾಗರದ ಜಲಧಿಯಲಿ ವಿಹರಿಸುವ |

ಯುಗಾಂತದಲಿ ಸಕಲ ಜೀವಿ ಸಮೂಹ ||

ಭಂಗ ಬರದಂತೆ ಉದರದಲಿ ಪೊರೆವ |

ಬಂಗಾರದ ಮತ್ಸ್ಯದ ಕೋಡಿಗೆ ಘಟ್ಯಾಗಿ ||

ಹಗ್ಗದಿಂದ ಬಿಗಿದ ದೋಣಿ ಹೊತ್ತವನೆ ನಿನ್ನ ಪಾದಪದ್ಮತೋರೋ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು