ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 3.3

1 ಚಕ್ರ- ಶಂಖಗಳ ಧರಿಸಿ ಸಾಧಕ |

ಹಯಗ್ರೀವ

ತುಂಡಾದ ಅನೇಕ ನೊರೆಯಿಂದ ಭಯಾನಕದಿ |

ಕಂಡ ಅಪ್ರಮೇಯ ಮಹಾ ಕನಕದಂತ ||

ಅಂಡಜನಾಭ ಗಜ ಗಂಡಸ್ಥಲ ಖಂಡಿಸುವಂತೆ |

ಚೆಂಡಾಡುವ ದುಷ್ಟರ, ಕಂಬುಕಂಠದ ಹಯಗ್ರೀವನೇ ||

ಕೊಡು ನಿನ್ನಲಿ ಅಖಂಡ ನಿರ್ಮಲ ಭಕುತಿ ||

ಕೂರ್ಮ

ಬೆನ್ನಮೇಲೆ ಮಂದರಗಿರಿ ಪೊತ್ತವನೆ |

ಚೆನ್ನಾದ ಧರ್ಮವನ್ನೇ ಅವಲಂಬಿಸಿದ ||

ಅನೀಶ ಸುರಿಗೆ ಸದಾ ಸುಖ ಬಯಸುವ |

ದಾನವರ ಮರ್ಮಭೇದಕ ಕೂರ್ಮನೇ ||

ಘೃಣೀ ಕಾಂತಿಯುಕ್ತ, ವಿಕಾರರಹಿತ ಜಗತ್ಕರ್ತೃ ಸಂಸಾರದಿಂದೆನ್ನ ತಾರಿಸು ||

ಧನ್ವಂತರಿ

ಸೂರ್ಯಕಿರಣದಿಂದ ವನೌಷಧಿ ಬೆಳೆಸುವ |

ಆಯುರ್ವೇದ ಅಧಿಪತಿಯಾದ ಧನ್ವಂತರಿಯೇ ||

ಜಯಿಸಿ ದಾನವರನ್ನು ವಿವಿಧ ಅವತಾರದಿ |

ಮಾಯೆಯಲಿ ಕಾಮಹರನ ಭ್ರಮಿಸಿದ ರೂಪ ತಳೆದು ||

ಸಂಯಮಕ ಸುರರಿಗೆ ಅಮೃತವಿತ್ತವ ಎನಗೆ ಸುಪಥ ತೋರೋ ||

ಮೋಹಿನಿ

ಕ್ಷೀರಸಾಗರ ಮಥನದಿ ಅಸುರರು ಅಮೃತಾಪಹರಿಸಲು |

ಸುರೇಶ್ವರ ತಳೆದ ಲಾವಣ್ಯಮಯ ಸೌಂದರ್ಯರೂಪ ||

ಸುರಳಿ ಗುಂಗುರ ಕೂದಲು ಹಾರಿಸುತ ಶ್ವೇತವಸನೆ |

ಸೀರೆಯುಟ್ಟು ಕುಚನರ್ತಿಸಿ ಬಳಕುತ್ತಾ ಅಸುರರ ವೀಕ್ಷಿಸೆ ||

ಹರಿಯ ಸ್ತ್ರೀರೂಪ ಮೋಹಿನಿಗೆ ಶರಣಾದರೆಲ್ಲ, ಹಾಗೆ ಎನ್ನನ್ನೂ ಶರಣಾಗಿಸು ||

ಷಡಂಗಯುಕ್ತ ವೇದಾಭಿಮಾನಿ ಸರಸ್ವತೀ, ಉಮೆ |

ಸಡಗರದ ರೂಪ ನೋಡಿ ಬೆರಗಾದರು ||

ಕಡು ಕೆಂಪಾದ (ಹವಶದಂತಹ) ಪಾದ ಊರಿ ಬಳಕುವ ಮೋಹಿನಿಯ |

ಕಂಡು ಬ್ರಹ್ಮ, ರುದ್ರಾದಿಗಳು ಅಸಮರ್ಥರಾದ ತಮ್ಮನ್ನು ಮಾನ್ಯಸೆಂದು ||

ಬೇಡಿಕೊಡರೆಲ್ಲ ಜ್ಞಾನಾನಂದ ಸ್ವರೂಪನ ಹೇ| ನನ್ನನ್ನು ಮನ್ನಿಸಲಿ ||

ವರಾಹ

ಜಲಧರ ಕಾರ್ಮೋಡದಂತೆ ನೀಲ ಮೇಘಶಾಮನು |

ಜಲಸಾಗರ, ನದಿ, ಪರ್ವತ ಸಕಲ ಪೊತ್ತವ ||

ಲೋಲೆಯಿಂದಲಿ ಊರ್ವಿ ಹರಣಗೈದ ಹಿರಣ್ಯಾಕ್ಷನ ದಹಿಸಿ |

ಜಲ ಕ್ರೀಡಿಸಿದ ನೈದಿಲೆ ವರ್ಣದ ಭೂವರಾಹನು ||

ಕಲಂಕ ರಹಿತ ಯೋಗಿವರ್ಯರಿಂದ ಸದಾವಂದಿತ, ಎನ್ನ ನಮನ ಸ್ವೀಕರಿಸು ||

ನರಸಿಂಹ

ವಿಜೃಂಭಿಸಿ ಕಂಬದಿಂದ ಹೊರಟು ಭಕ್ತ ಪ್ರಲ್ಹಾದಗೆ ವರವಿತ್ತ |

ವಜ್ರದಂತಹ ತೀಕ್ಷ ನಖದಿಂದ ಹಿರಣ್ಯಕನ ಉದರ ಬಗೆದ ||

ಅಜನಿ ರಮಾ, ಬ್ರಹ್ಮ, ವಾಯು ಗರುಡ, ಶೇಷರಲ್ಲದೆ |

ಅಜ್ಞಾನಿ, ಹರಿದ್ವೇಷಿಗಳನೆಂದೂ ಸಹಿಸನು ನರಸಿಂಹ ||

ಗಜ ಚರ್ಮಾಂಬರಧಾರಿ ರುದ್ರ, ಇಂದ್ರ, ಷಣ್ಮುಖರಿಂದ ಸ್ತುತಿಸಿಕೊಳ್ಳುವವ ಎನ್ನ ರಕ್ಷಿಸಲಿ||

ವಾಮನ

ಚತುರಂಗ ಸೈನ್ಯಬಲದಿ ಸೊಕ್ಕಿದ ದನುಜನು |

ಕೂತನು ಬಲಿ, ಸಾಂಗವಾಗಿ ಯಜ್ಞಮಾಡಲು ||

ಉತ್ತಮ ಮಂಗಲ ತ್ರಿವಿಕ್ರಮ ಶೃಂಗಾರ ಪಾದದಿ |

ಉತ್ತುಂಗ ಬ್ರಹ್ಮಾಂಡ ಕಟಾಹ ತಾಕಿಸಿ ಸುರಗಂಗೆ ಹರಿಸಿದ ||

ಇಂತಹ ವಿರಾಟರೂಪಿಯ ಭಜಿಸೆ ಪಾಪ ಕಳೆವ ವಾಮನನಿಗೆ ನನ್ನ ನಮನಗಳು ||

ದಾನವ ಬಲಿಯಿಂದ ಗುಪ್ತ್ಯಾರ್ಥದಿ ದಾನ ಪಡೆಯಲು |

ದನುಜ ಪರಿವಾರವೆಲ್ಲ ನೆರೆದು ನಿಂತು ನೋಡಿದರು ||

ಮನ ನಿರ್ಮಲದಿ ಕೋಟಿ ಚಂದ್ರನಂತೆ ಪೊಳೆವ ಮೌಂಜಿಧಾರಿ |

ಜನಿವಾರ, ಛತ್ರಿ, ಪಾದುಕಾ, ದಂಡ ಕಮಂಡಲಧರ ||

ಧಾನ್ಯಯೋಗ್ಯ ವಾಮನರೂಪ ಹರ್ಷ ಸುರಿಸಿ ಎನ್ನ ಧನ್ಯನಾಗಿಸಲಿ ||

ಪರಶುರಾಮ

ಶೌರ್ಯದು ಕ್ಷತ್ರಿಯರಾಜ ಸಮೂಹ ಕುಲಾಂತಕ |

ವೀರ್ಯವಂತ ಸಹಸ್ರಾರ್ಜುನನ ಸವರಿದ ಪರಶುರಾಮ ||

ಭಾರ್ಯೆಯ ಪರಾಧಕೆ ಕುಪಿತ ಪಿತನಾಜ್ಞೆಯಂತೆ |

ಧೈರ್ಯದಿ ಮಾತಾ, ಭ್ರಾತೃಗಳ ಶಿರ ಸಂಹರಿಸಿದ ||

ದಯಾಮಯ ಅಮಿತವೀರ್ಯ ಎನ್ನಪರಾಧ ತಡೆಯಲಿ ||

ಶ್ರೀರಾಮ

ಶುಭ್ರ ನಿರ್ಮಲ ಅಮಿತ ಗುಣವಂತ |

ಶ್ರೀರಾಮನು ಲಕ್ಷ್ಮಣನೆಂಬ ಗಿಳಿಗೆ ಯಶೋವಂತ ||

ಪರಶುರಾಮನಲಿ ಯುದ್ಧ ಕಲಹ ತೋರಿದವ |

ಸ್ವರ್ಗಾಧಿಪತಿ ವೈರಿಗಳ ಭಯ ಹೆಚ್ಚಿಸುವ ||

ನಾರು ವಸ್ತ್ರಾನ್ವಿತ ಘೋರ ಮನೋರಥ ಪೂರೈಸನೆಂದಿಗೂ ಎನ್ನನು ರಕ್ಷಿಸಲಿ ||

ರಮಾ, ಬ್ರಹ್ಮಾದಿಗಳಿಗೆ ಸುಖದ ಸ್ವರ್ಗನು |

ಭ್ರಮಿತವಾಲಿ ಭಜಿಸಿ, ರವಿಸುತಗೆ ರಾಜ್ಯವಿತ್ತ ||

ಕಾರ್ಮೋಡ ಕಂಡು ನಲಿವ ನವಿಲಂತೆ ಅಯೋಧ್ಯಾಪತಿ ಸುತ |

ದುರ್ಮುಖ, ಕಾಕರೂಪಿ ಕುರಂಗನ ಒಕ್ಕಣ್ಣು ಮಾಡಿದ ||

ಸುಮುಖ ಶ್ರೀರಾಮ ನಿನ್ನ ಪಾದ ಕಮಲದಿ ಅತುಲ ಭಕ್ತಿಕೊಡು |

ಸ್ವರ್ಗಭೂಮಿ ಜಯಿಸಿದ ತಪಸ್ವಿ ವಿಶ್ವಾಮಿತ್ರ ಜೊತೆ ಹೊರಟ |

ಶ್ರೀರಾಮ ಸಕಲರ ಕಣ್ಮಣಿ ಮನೋ ವಲ್ಲಭ ||

ಸರ್ವದಾ ಹಸನ್ಮುಖನಾದ ಇವಗೆ ಸಮಾನ-ಅಧಿಕರಾರಿಲ್ಲ |

ರುದ್ರವರಪ್ರದ ಧನು ಹದೆಯೇರಿಸಿ ಮುರಿದ ||

ಶೌರ್ಯವಂತ ಸೌಂದರ್ಯಸಾರ ವಿಜಯಿ ಎನ್ನ ಸಂಸಾರದಿಂದ ಜಯಿಸಲಿ ||

ಅರಣ್ಯದಿ ಶರ ಬೀಸಿ ಅಸುರ ಪತ್ನಿಯರ ವಿಧವೆಯಾಗಿಸಿದ ||

ಕರಿ ಮುಂಗುರುಳು ಹಾರಾಡುವ ಭ್ರಮರದಂತೆ, ಭ್ರೂಮಧ್ಯೆತಿಲಕವಿಟ್ಟ |

ಅರವಿಂದ ನಯನೇ, ಸೂರ್ಯವಂಶ ಕುಲವಧು ಬಂದಳು ||

ಶ್ರೀರಾಮನನುಸರಿಸಿ ದುರ್ಗಮ ಕಾನನಮಾರ್ಗ ಸವೆಸಿದಳು |

ತಾರೆ ಗುಂಪಲಿದ್ದ ಉಡುಪನಂತೆ, ಸೀತೆ ಜೊತೆ ಶೋಭಿಸಿದವ ಎನ್ನ ಕಾಪಾಡಲಿ ||

ಜಿತೇಂದ್ರಿಯರಾದ ಮಹಾ ತಪಸ್ವಿಗಳು |

ಸತತದಿ ದಶಾನನನಿಂದ ಕ್ಲೇಶಪಟ್ಟರು ||

ಇಂತಿರಲು ಭುವಿಯೊಳ್, ಅವರ ದು:ಖ, ಭಯ |

ಅಂತಗೊಳಿಸಲು ಯಜ್ಞರಿಪು ದನುಜನ ||

ಚಿತ್ರಕೂಟದಲ್ಲಿದ್ದ ಶ್ರೀರಾಮ ಉದ್ಯುಕ್ತನಾದ, ಇವನ ಭಜಿಸುವಂತಾಗಲಿ ||

ಮಿಂಚುಳ್ಳ ಕಾಂತಿಯ ಚಾಪ ಶತ್ರು ನಿರ್ಮೂಲಿಸುವಂತೆ |

ವಾಂಛಿತ ಪಾದ ಕಮಲದಿಂ ಅತೀ ದಯಾ ರಸ ಸುರಿಯಲಿ ||

ಇಚ್ಛೆಯಲಿ ಜಟಾಯು ಶ್ರೀರಾಮನ ಸಂದರ್ಶಿಸಿ |

ಸ್ವಚ್ಛವಾಗಿ ಪಾಪಿ ರಾವಣ ಕುಕೃತ್ಯನರುಹಿ ಮರಣಿಸಲು ||

ಸಂಚಿತ ಪಾಪ ಪಾವಕ ಅಮಿತಕೀರ್ತಿ, ಪಂಪಾತಟದಿ ಸಂಚರಿಸುವವ ರಕ್ಷಿಸಲಿ |

ಹರಿಣಾಕ್ಷಿ ಕನಕ ಕುರಂಗ ಕುತೂಹಲದಿ ಆಪೇಕ್ಷಿಸಲು |

ಉರ್ವಿಸುತೆ ಅಪಹಾರಕನ ಅನುಜನ ಪೋಷಿಸಲು ||

ಧರಿಸಿದ ಪುಚ್ಛದಾಗ್ರದಿ ಅಗ್ನಿಯಿಂದ ಲಂಕೆ ದಹಿಸಿ |

ಶ್ರೀರಾಮ ಪದತಲ ರಜವ ಹಣೆಯಲಿಟ್ಟ ||

ಹರಿಸೇನೆ ಶರಧಿಗೆ ಸೇತು ಬಂಧಿಸಿದಂತೆ ಭಕ್ತಿಯಿಂದ ಬಂಧಿಸಲಿ ||

ಬಿಲ್ಲು, ಖಡ್ಗ, ಭುಜದಿ ಬತ್ತಳಿಕೆ ಧರಿಸಿ |

ಸಲ್ಲಕ್ಷಣ ಸೂರ್ಯಕಾಂತಿ ಸಮಾನ ಶ್ರೀರಾಮ ಕಪಿಸೈನ್ಯ ಸಂರಕ್ಷಕನ |

ಅಲಕ್ಷಿಸಿದ ರತ್ನಾಕರನ ಕುಪಿತದಿ ಕೆಂಗಣ್ಣು ಕುಡಿ ನೋಟದಿ ವೀಕ್ಷಿಸೆ ||

ತಲ್ಲಣ ಹೃದಯದಿ ಅಮೂಲ್ಯರತ್ನ ಮಣಿ ಪದತಲಕೆ ಸುರಿದ |

ನಲುಮೆಯಲಿ ಸತತ ಸ್ತುತಿಸುವ ವಾಯುಸುತನ ಸ್ವಾಮಿ ಜಯವೀಯಲಿ ||

ಹುಂಕಾರದಿಂದ ಟಂಕಾರನಾದ ಕೇಳಿ ಪಾಪಿಷ್ಠರು |

ಶಂಕೆಯಿಂದ ವಜ್ರದಂತಿದ್ದ ಹೃದಯ ಚೂರಾಯಿತು ||

ಲಂಕಾಧೀಶ ತನಗೆ ಮೃತ್ಯುಕಾಲ ಸಮೀಪಿಸಿತೆಂದು |

ಏಕಕಾಲಕೆ ಅನೇಕ ಶಂಕೆಯಿಂದ ಉದ್ಗಾರ ತೆಗೆದನು ||

ಲಂಕೆಯಲ್ಲಿದ್ದವರ ಕಾಲನಾದ ಶ್ರೀರಾಮ ಧನುರ್ಧಾರಿಯಾದವನ ಸದಾಭಜಿಸುವಂತಾಗಲಿ ||

ಬುದ್ಧಿಯಿಂದ ತಿಳಿಯಲಸಾಧ್ಯನು, ದು:ಖಿತರಿಗೆ ಮಂಗಲನಾಮ |

ಶುದ್ಧ ರಮಾ, ಬ್ರಹ್ಮ, ರುದ್ರ, ಶೇಷ, ಗರುಡ, ಚಂದ್ರ, ಗುರುವಂದ್ಯನು ||

ಹೃದ್ಯರ ರಕ್ಷಣೆ ಭಾರ ಹೊತ್ತಿರುವ ಪ್ರಭು ಶ್ರೀರಾಮ ಸೀಮಾತೀತ ||

ಯುದ್ಧದಿ ಸಕಲ ಕಂಟಕ ರಾವಣನ ವಧಿಸಿದ |

ಆದ್ಯನಾಗಿ ಸಕಲ ವೇದ ಪ್ರತಿಪಾದ್ಯ ಅಪ್ರಾಕೃತ ಪ್ರಕೃತಿಯಿಂದ ರಕ್ಷಿಸಲಿ ||

ಕಾಮವಶ ಇಂದ್ರನಿಂದ ಪತಿತಳಾಗಿ ಪತಿ ವಚನದಂತೆ |

ಶಮ ದಮ ಸಹಿತಳಾಗಿ ಶಿಲೆಯಾಗಿದ್ದವಳ ಉದ್ಧರಿಸಿದ ||

ಉಮೆಯ ಬಯಸಿ ತಪಗೈದ ಶಂಬೂಕನ ಕರದಿ ಕೊಂದ |

ಸಮಾನತೆಯ ಪ್ರತೀಕ ಶ್ರೀರಾಮ ಬೇಡಸ್ತ್ರೀಯ ಅನುಗ್ರಹಿಸಿದ ||

ಮಾನವಂತ ವಿಭೀಷಣಗೆ ಆಶ್ರಯವಿತ್ತು ಶುಭಕೋರಿದವನ ಸದಾ ಆಶ್ರಯಿಸುವಂತಾಗಲಿ||

ಶ್ರೀಕೃಷ್ಣ

ವೃಂದಾವನದಿ ಗೋವೃಂದವ ಕಾಯ್ದು ಲೀಲೆಗಳ ತೋರಿದ |

ನಂದಸುತ ಏಕೈಕ ಸಕಲ ದೇವತೆಗಳಿಂದ ನಮ್ಯ ||

ಬುಧರಿಂದ ನಮಿತನಾದವ ಅಸುರಹರಣಾರ್ಥ ಭುವಿಗಿಳಿದ |

ಸುಂದರ ಚಂದಿರನು ನೀಲಕಾಂತಿ ಶ್ರೀಕೃಷ್ಣ ರೂಪಕೆ ನಾಚಿದ ||

ಉದರಕೆ ಹಗ್ಗದಿಂದ ಬಂಧಿತನಾದವ ಬಂಧನ ಬಿಡಿಸಿಲಿ ||

ಗೋಪಾಲಕ ಉತ್ಸವದಿ ಉತ್ಸಾಹದ ಮೃಷ್ಟಾನ್ನ ಭೋಜನ |

ಲೋಪಿಸಲು ಕುಪಿತ ಇಂದ್ರ ಸುರಿಸಿದ ಮುಸಲಧಾರೆಗೆ ಗಿರಿಧಾರಿಯಾದ ||

ಗೋಪಾಂಗನೆಯರ ವಸ್ತ್ರ ಅಪಹರಿಸಿ ಭಕ್ತಿವಶರನ್ನಾಗಿಸಿ |

ಗೋಪಿಯರೊಡಗೂಡಿ ರಾಸಲೀಲೆ ಆಡಿ ಉದ್ಧರಿಸಿದ ||

ಗೋಪಾರಿಜಾತಹರಣ ಮಾಡಿದ ಶ್ರೀಕೃಷ್ಣ ಸಕಲಪಾಪ ಅಪಹರಿಸಲಿ ||

ಕಂಸಾದಿ ದುರುದ್ಧೇಶಿತ ಅಸುರರ ದಮನಕ್ಕಾಗಿ ಧರೆಗಿಳಿದ |

ಸು-ಸಾರಭೂತನು ಸಂಸಾರಬದ್ಧ ಸಜ್ಜನರೋದ್ಧಾರಕ ||

ಸಂಸಾರದಿ ಸಾತ್ವಿಕರಿಗೆ ಸುಖವೀವ ಶ್ರೀಕೃಷ್ಣ ಜ್ಞಾನಾನಂದ ||

ಹಂಸಾದಿ ತಾಪಸರಿಗೆ ದರುಶನವಿತ್ತು ಹರುಷವೀವ |

ಹಂಸವಾಹಕ ಬ್ರಹ್ಮಾದಿಗಳಿಂದ ಚರಣವಂದ್ಯನು ಆದರದಿ ಚರಣ ತೋರಲಿ ||

ರಾಜೀವ ನೇತ್ರನು ಜ್ಞಾನಿಪ್ರಿಯ ವಿದುರಗೆ ಪ್ರಾಣಪ್ರಿಯ |

ರಾಜ ಜರಾಸಂಧನ ಚತುರಂಗ ಬಲ ಸೈನ್ಯ ಗರ್ವ ಭಂಗಿಸಿ ||

ಭುಜ ಬಲದಿಂದ ಶ್ವೇತಾಶ್ವರೂಪಿ ದೈತ್ಯನ ವಧಿಸಿದ ಶ್ರೀಕೃಷ್ಣ |

ಜಾಜಿ, ಕದಂಬ, ಎಳೆ ಕಮಲಾದಿ ಹೊಮಾಲೆ ಧರಿತ ||

ವಾಜೀಶವಾಹನ ಸುವಾಸಿತ ಶಿರದವ ಸದಾ ರಕ್ಷಿಸಲಿ ||

ಕಾಲೀಯ ಆವಾಸ ಯಮುನೆಯ ಮಡುನಲ್ಲಿದ್ದವನ |

ಕೇಲಿಯಲಿ ತಲೆಮೇಲೆ ನರ್ತಿಸಿ ಪಾದನಖದಿಂ ||

ಕಾಲೂರಿ ರವಿ ಹೊಂಗಿರಣದಂತೆ ಕೆಂಪಾಗಿ ಪ್ರಹಾರಿಸಿದ |

ನೀಲಕಂಠನ ವರದಿಂದ ಸೊಕ್ಕಿದ ದೈತ್ಯರ ವಧಿಸಿದ ||

ಆಲಿಂಗಿಸಿ ಗೋಪಸ್ತ್ರೀಯರ ಸುವಾಸಿತನಾದ ಶ್ರೀಕೃಷ್ಣ ಭಕ್ತಿಯ (ಪರಿಮಳ) ಪಸರಿಸಲಿ ||

ಕೃಷ್ಣಾದಿ ಪಾಂಡುಸುತರು ದ್ರೌಪದಿ ಮನೋರಥವ ಸಂತೈಸಿದರು |

ಕೃಷ್ಣ ಚಿನ್ಹೆ ಧರಿತವರ ಕಷ್ಟ ಕಳೆವ ನೀಲಾದಿ ಷಣ್ಮಹಿಷಿ ಪತಿ ||

ಪೋಷಿಸಿ ಜ್ಞಾನಿಗಳ ಆನಂದ ಕಡಲಿನ ಚಂದ್ರನಂತೆ |

ವಿಷ್ಣುನಾಮಕ ಗೋವರ್ಧನಧಾರಿ ಶ್ರೀಕೃಷ್ಣ ಜಯಶಾಲಿ ||

ನಿಷ್ಣಾತ ಉಪೇಂದ್ರ ಧೈರ್ಯಶಾಲಿ ಸದಾ ಕರುಣಿಸಲಿ ||

ಸುಂದರಿಯರಾದ ಭೂ,ರಮೆ ಸಮೇತ ಬಲರಾಮಾನುಜನ |

ಮಾಧವನಂಘ್ರಿ ಕಮಲದಿ ಕಾಮಪಿತ ರತಿ ಕೊಡಲಿ ||

ವಧಿಸಿ ವ್ಯೋಮಾಸುರ, ಕಾಮಾರ್ತ ಭೌಮಸುರರ ಕನ್ಯೆಯರ |

ಬಂಧಿತರಾದ ಪ್ರಣಯಪೀಡಿತ ಕನ್ಯೆಯ ಸ್ವೀಕರಿಸಿದವ ಭೀಮಾಭಿವಂದ್ಯ ||

ರುದ್ರ, ಶೇಷಾದಿ, ವೈಮಾನಿಕ ಸಂಚರಿಪರಿಂದ ವಂದ್ಯನು ಸೆರೆ ಬಿಡಿಸಿದ ಶ್ರೀಕೃಷ್ಣ ||

ವಿಷಮಿಶ್ರಿತ ಭಕ್ಷ್ಯ ಇತ್ತು, ವಿಷಸರ್ಪ ಗಣದಲ್ಲಿ ಬಂಧಿತನ ದೂಡಿ |

ಲಾಕ್ಷಾಗೃಹ ಜ್ವಲಿಸಲು, ರಾಕ್ಷಸರಾದ ಹಿಡಿಂಬ, ಬಕರಿಂದ ಪೀಡಿತರು |

ಭೀಕ್ಷಾನ್ನದಂತಹ ಆಪತ್ತು ಬಂದರೂ ಧೈರ್ಯ ಬಿಡಲಿಲ್ಲ |

ಅಕ್ಷಯ ಸೀರೆಯಿತ್ತ ಶ್ರೀಕೃಷ್ಣ , ದ್ರೌಪದಿಮಾನ ಭಂಗದಿ ||

ಭೀಷಣ ಅಪಹಾಸವಾದರೂ ಧರ್ಮಮಾರ್ಗದಿ ನಡೆದರು ||

ಧರ್ಮಾರ್ಜುನಾದಿ ಪಾಂಡವರ ಅನ್ಯಾಯ ವೀಕ್ಷಿಸಿ |

ಮರ್ಮಘಾತಕರ ಅಕ್ಷೋಹಿಣಿ ಬಲನಾಶ ಮಾಡಲು ನಿರ್ಧರಿಸಿ ||

ಗರುಡಾರೂಢೀ ಖಡ್ಗ, ಬಿಲ್ಲು, ಬಾಣ, ಚಕ್ರ ಪಿಡಿಯಲೊಪ್ಪದೇ |

ಸಾರಥಿಯಾಗಿ ಕಪಿಧ್ವಜ ರಥಕೆ ಅರ್ಜುನನ ರಕ್ಷಿಸಿದ |

ಶ್ರೀಕೃಷ್ಣ ಲಕ್ಷ್ಮೀಪತಿ, ಯದುಪತಿ ಜಯಶಾಲಿಯೆನ್ನ ಜಯಶಾಲಿಯಾಗಿಸಲಿ ||

ಬುದ್ಧ & ಕಲ್ಕಿ

ಬುದ್ಧಾವತಾರದಿ ಬುಧರಿಗೆ ದಯೆತೋರಿ ಅವತರಿಸಿ |

ಶುದ್ಧೋಧನ ಪುತ್ರನಾಗಿ ಕಥಾಗತ ಶಾಸ್ತ್ರ ಸಿದ್ಧಾಂತ ಪ್ರವರ್ತಕನಾದ ||

ಕ್ರೋಧದಿ ಖಡ್ಗ-ಗುರಾಣಿ ಪಿಡಿದು ಕಲ್ಕಿ ರೂಪದಿ |

ಶುದ್ಧಾಶ್ವಯಾನದಿ ದೈತ್ಯರ ಹತಗೈವ ಶ್ರೀಕೃಷ್ಣ ||

ಶುದ್ಧ ಹೃದಯದಿ ಲಕ್ಷ್ಮೀಧರಿಸಿದವಗೇ ಕರಮುಗಿವೆ ಸ್ವೀಕರಿಸಲಿ ||

...

ತಾಪಸಿಯರಿಗೆ ವಾರಿಧರ ಕಾರ್ಮೋಡದಂತೆ ಕರಿವರ |

ಅಪಾರ ಸಂಸಾರ ಶತ್ರುವಾದ ಅಹಂನಾಶವೇ ಬಲ ಔಷಧ ||

ಪುಷ್ಪಗಳ ಸಾರ ಶೇಖರಿಸುವ ಭ್ರಮರದಂತೆ ಸದಾ |

ಆಪತ್ತು ಬರಲೀಸದೆ ವೈಕುಂಠದಿ ಚರಿಸುವ ಪದಕಮಲದಲ್ಲಿಟ್ಟು |

ಅಪರಿಮಿತ ವರ್ಣದ ಶ್ರೀಕೃಷ್ಣ ತಾಮರೆ ಸಾರದಂತೆ ರಕ್ಷಿಸಲಿ ||

ಹಯಮುಖ ದೇವನು ಮತ್ಸ್ಯಾದಿ ದಶಾವತಾರಿ ಮನೋಹರನ |

ಬಯಸಿ, ಅತೀ ಭಕ್ತಿಯಲಿ ಶುದ್ಧಬುದ್ಧಿಯ ವಾದಿರಾಜಯತಿ ||

ದಯದಿ ರಚಿಸಿದ ಮಾಣಿಕ್ಯ ಮಾತಿನ ಚಮತ್ಕಾರ ಹಾರ |

ವಾಯು, ಬ್ರಹ್ಮಾದಿವಂದ್ಯ ಶ್ರೀಕೃಷ್ಣವಿಠ್ಠಲನ ಪೂಜೆಯಲಿ ಪಠಿಸಲು ||

ಭಯದ ಯಮಲೋಕವಾಗದೇ ಇತರ ಸುರಲೋಕವೇ ಫಲ ಪ್ರಾಪ್ತಿ ||

196. ಹರಿಯ ನೆನೆದರೆ ಪರಲೋಕ |

ನರರ ನೆನೆದರೆ ಸಂಸಾರಗತಿ ||

ದ್ವೇಷ ಬಿಟ್ಟರೆ ಉತ್ತಮ ಲೋಕ |

ರೋಷ ಮಾಡಲು ಅಧಮಲೋಕ ||

ಕರುಣೆತೋರಲು ಮನಕೆ ಶಾಂತಿ |

ಪರಹಿತ ಬಯಸದಿರೆ ಸ್ವಾರ್ಥಿ ||

ಧನ ದಾನಿಸದಿರೆ ಪಿಸುಣವಂತ |

ಮನ ವಿಶಾಲಿಸೇ ಮಾನ್ಯವಂತ ||

ಗುರು ಹಿರಿಯರ ನಿಂದೆಪಾಪ ವಜ್ರಲೇಪ |

ಕಿರಿಯರ, ಅಸಹಾಯಕರ ಸೇವೆ ಧನ್ಯತಾಭಾವ ||

ಪರರಿಗಾಗಿ ಬಾಳು ಈಲೋಕದಿ ಪರತರ |

ಸೇರಲು ಶ್ರೀಕೃಷ್ಣ ವಿಠ್ಠಲನ ಇದೊಂದೇ ದಾರಿ ||

197. ಎನ್ನ ಸ್ವಾಮಿ ಎನ್ನವ ಗುಣಗಳ ಚಿತ್ತಕ್ಕೆ ತರಿದಿರು |

ನೀನು ಕ್ಷಮಾರ್ಣವನಲ್ಲವೇ, ಎನ್ನ ಅಕ್ಷಮ್ಯಪರಾಧ ಕ್ಷಮಿಸು ||

ನೀನು ಜ್ಞಾನಿಯಲ್ಲವೇ, ಎನ್ನ ಅಜ್ಞಾನ ನೀಗಿಸು |

ನೀನು ಗುಣವಂತನಲ್ಲವೇ ಎನ್ನವ ಗುಣಗಳ ವಧಿಸು ||

ನೀನು ಆನಂದದಾಯಕನಲ್ಲವೇ ಎನಗಧಿಕಾನಂದ ನೀಡು |

ನೀನು ಧನವಂತನಲ್ಲವೇ ಎನ್ನಲಿ ಭಕ್ತಿಧನ ಹೆಚ್ಚಿಸು ||

ನೀನು ವಿಕಾರರಹಿತನಲ್ಲವೇ ಎನ್ನ ವಿಕಾರ ವರ್ಜಿಸು |

ನೀನು ಸಹನವಂತನಲ್ಲವೇ ಎನ್ನನು ಸದಾ ಸಹಿಸು ||

ನೀನು ಶಾಂತಮೂರ್ತಿಯಲ್ಲವೇ ಎನ್ನನು ಶಾಂತಳನ್ನಾಗಿಸು ||

ನೀನು ಸಂತೃಪ್ತನಲ್ಲವೇ ಎನ್ನನು ತೃಪ್ತಿಪಡಿಸು |

ನೀನು ಕಾಮರಹಿತನಲ್ಲವೇ ಎನ್ನನ್ನು ಕಾಮ ವಿಜಯಿಯಾಗಿಸು ||

ನೀನು ಮಹಾದಾನಿಯಲ್ಲವೇ ಎನ್ನನ್ನು ದಾನವಂತಳನ್ನಾಗಿಸು |

ನೀನು ಧರ್ಮಪ್ರಭುವಲ್ಲವೇ ಎನ್ನನ್ನು ಧರ್ಮದಿಂದ ನಡೆಸು ||

ನೀನು ಅನಂತಕಲ್ಯಾಣಗುಣನಲ್ಲವೇ ಎನ್ನನ್ನು ಕಲ್ಯಾಣವಾಗಿಸು |

ನೀನು ಅಚ್ಯುತನಲ್ಲವೇ ಎನ್ನವೇ ಎನ್ನನ್ನು ದೋಷರಹಿತಳನ್ನಾಗಿಸು ||

ನೀನು (ಅಜಾತಶತ್ರು) ಜಿತಾಮಿತ್ರನಲ್ಲವೇ ಎನ್ನ ವೈರಿಗಳ ನಾಶಗೊಳಿಸು |

ನೀನು ಸರ್ವಪ್ರಾಣಿ ಹಿತೈಷಿಯಲ್ಲವೇ ಎನ್ನಹಿತ ನಿನ್ನದಾಗಿಸಿಕೋ ||

ನೀನು ಸರ್ವಭೋಕ್ತಾರನಲ್ಲವೇ ಎನ್ನನ್ನು ಸ್ವೀಕರಿಸು |

ನೀನು ಸರ್ವಾಂತರ್ಯಾಮಿಯಲ್ಲವೇ ಎನ್ನ ಅಂತರ್ಯದಿ ಕಾಣಿಸು ||

ನೀನು ಸರ್ವಪ್ರಭುವಲ್ಲವೇ ಎನ್ನನ್ನು ನಿನ್ನ ದಾಸಳನ್ನಾಗಿಸು ||

ಎನ್ನ ಶ್ರೀಕೃಷ್ಣವಿಠ್ಠಲ ಎನ್ನನ್ನು ನಿನ್ನವಳೆಂದು ಅಪ್ಪಿಕೊ ||

198. ಒಂದೇ ಕಾಲಕೆ ಒಂದೇ ವಿಷಯಕೆ |

ಎಂದೂ ವಿಭಿನ್ನ ಯೋಚನೆ ಬರುವುದು ||ಪ||

ಜೋಡಿ ತಲೆಯಲಿ ಎಂದೂ ಒಂದೇ ವಿಚಾರವಿರದು |

ಕೂಡಿ ಆಲೋಚಿಸಿದರೂ ಒಂದೇ ಚಿತ್ರಣವಿರದು ||

ಕೂಡಾ ಹುಟ್ಟಿದವರಿರಲಿ ಒಡಿನಾಡಿಯೇ ಇರಲಿ |

ಗಂಡ-ಹೆಂಡತಿ ಇರಲಿ ಹಡೆದ ಮಕ್ಕಳೇ ಇರಲಿ ||1||

ಭಿನ್ನ ಜೀವ, ಭಿನ್ನ ಕರ್ಮದಂತೆ ಭಿನ್ನ ಅಭಿರುಚಿ |

ಭಿನ್ನ ಭಿನ್ನ ಸರ್ವಪ್ರಾಣಿಗಳಲಿ ಸರ್ವದಾ ಇರುವುದು ||

ಭಿನ್ನ ನೋಟ, ಭಿನ್ನಊಟ, ಭಿನ್ನಗುರಿ, ಭಿನ್ನಾಭಿಲಾಷೆ |

ಭಿನ್ನಮನ, ಭಿನ್ನಬುದ್ಧಿ, ಭಿನ್ನದೇಹ ಪ್ರಕೃತಿ |||2||

ನೆಲ ಒಂದೇ, ಕಾಲವೊಂದೆ, ಬಾಹ್ಯಾಕಾರವೊಂದೇ |

ಎಲ್ಲ ಸೇವಿಸುವ ಅನ್ನ, ಕುಡಿಯುವ ನೀರು ಒಂದೇ ||

ಬಲಾಬಲ, ದೇಹ-ಬುದ್ಧಿಯಲಿ ಬೇರೆ ಬೇರೆ |

ಎಲ್ಲರಂತರ್ಯಾಮಿ ದೈವ ಶ್ರೀಕೃವಿಠ್ಠಲನೇ ಆದರೂ ಪ್ರಾರಬ್ಧ ಬೇರೆ ಬೇರೆ ||3||

199. ವಾರಿಚರ ಚರಿಸಿ ಸಪ್ತರಾತ್ರಿ ವನೌಷಧಿ ರಕ್ಷಿಸಿದ |

ಘೊರತರ ರಣದಿ ವರಾಹ ಉರ್ವಿಯ ಉಳುಹಿದ ||

ಗಿರಿಧರ ಕುರ್ಮರೂಪಿ ಮಥಿಸಿದ ಸಾಗರವ |

ಸುರವರ ಸಿರಿವರ ಗಂಭಿರನಾದ ನರಹರಿ ||

ಪೋರ ಮೂರು ಪಾದ ಭೂಮಿ ಬೇಡಿ ತ್ರಿವಿಕ್ರಮನಾದ |

ಮಾತೃ-ಭಾತೃರ ಪಿತೃವಾಕ್ಯಕೆ ಪರುಶದಿ ಶಿರತರಿದ ||

ಗುರುವರ ಮಾರುತಿಕಾಂತ ಪ್ರಿಯ ಸೀತಾಪತಿ |

ಗುರುಪುತ್ರ ಮರಳಿಸಿ ಕಂಸಾರಿ ಗುರುದಕ್ಷಿಣೆಯಿತ್ತ ||

ಕರಿವರ ಪರಿವಾರಪಾಲಕ ನವನೀತ ಚೋರ |

ಧರ್ಮಪರಿ ಪಾಲಕ ಜ್ಞಾನಾಮೃತ ಸತ್ಯಬೋಧಕ ||

ಚೋರಪೋರ ಬೋಧಿಸಿ ಅವೇದ ಚಿತ್ತವ ಕೆಡಿಸಿದ |

ಪರಿಸರ ಉಳಿಸಲು ಅಶ್ವನೇರಿ ಖಡ್ಗ ಹಿಡಿದು ಬಂದ ||

ಮಾರಹರ ಭ್ರಮಿತ ರೂಪದಿ ಅಮೃತ ಪಾನಿಸಿದ |

ಸುರಾಸುರರೊಡೆಯ ಭಕ್ತರ ಪ್ರೀತಿ ಪಾತ್ರ ಸದಾ ||

ಪರಿಹರಿಸಿ ಸಜ್ಜನರ ಸಂಸಾರ ಭೀತಿಯ ಕರಪಿಡಿದು ನಡೆಸಿ |

ಗುರುತರ ಪ್ರಾರಬ್ಧ ಬಿಡಿಸಿ ಚರಣಕಮಲದಿ ಇರಿಸು ||

ಪರಾತ್ಪರ ಪಾಪಹರ ಶ್ರೀಕೃಷ್ಣವಿಠ್ಠಲ ದಯಾನಿಧೇ ||

200. ದಣಿವರಿಯದ ದಣಿ ಗುಣಗಳ ಖಣಿ |

ಮಣಿಯನು ಯಾರಿಗೂ ದಿನಮಣಿ ||ಪ||

ಅಣು, ರೇಣು, ತೃಣಕಾಷ್ಠದಲ್ಲಿರುವ |

ಕಣ್ಣುರೆಪ್ಪೆಯಂದದಿ ಸಕಲರ ಕಾಯ್ವ ||

ಬೆಣ್ಣೆಯಂದದಿ ಕರಗುವ ದು:ಖಾರ್ತರಿಗೆ |

ಪ್ರಾಣಿ, ಚಿಣ್ಣರಿಗೂ ಒಲಿದು ಅನುಗ್ರಹಿಪ ||1||

ಕಣಕಣದಲ್ಲಿರುವ ಸುಗುಣಗ್ರಾಹಿ |

ಮಣ ಬಂಗಾರಕೊಟ್ಟರೂ ಒಲಿಯನು ||

ಒಣ ಜಂಬ ತೋರ ಭಕ್ತಾಪರಾಧ ಸಹಿಷ್ಣು |

ದೊಣ್ಣೆನಾಯಕ ಎಲ್ಲರ ಬಿಡದೆ ಹಣಿಯುವ ||2||

ವರ್ಣಾಭಿಮಾನಿ, ಸೃಷ್ಟಿ, ಲಯ ಮಾಳ್ಪ |

ಕುಣಿದು ಕುಣಿಸುವ ಅಕಂಳಕ ||

ಋಣಮೋಚಕ, ಮೋಕ್ಷಪ್ರದಾಯಕ |

ಪರ್ಣಶಾಯಿ ಶ್ರೀಕೃಷ್ಣವಿಠ್ಠಲ ಅಪ್ರತಿಮ ||3||

201. ಅಂಗಳದಲ್ಲಾಡುತಿರಲು ರಘುರಾಮ ಕಂಡಾ |

ಆಗಸದಲ್ಲಿದ್ದ ಚಂದಿರ (ತನಗೆ) ಬೇಕೆಂದು ಹಟ ಮಾಡಿದ ||ಪ||

ಮಗುವಿನಹಟವೆಂದು ಬೇರೆ ಆಟಿಕೆ ತರಲು |

ಚೆಂಗಣ್ಣಿನಲಿ ನೀರು, ಉಬ್ಬಿಸಿಗಲ್ಲ, ಹುಸಿಗೋಪದಿ ||1||

ಬುಗುರಿ, ಚೆಂಡು, ಗೊಂಬೆಗಳನ್ನೆತ್ತಿ ಬಿಸುಟಿದ |

ಗಗನದೆಡೆ ಕೈ ಚಾಚಿ ಪೂರ್ಣ ಚಂದಿರನೇ ಬೇಕೆಂದ ||2||

ಆಗ ತಂದು ಕನ್ನಡಿಯಲಿ ಪ್ರತಿಬಿಂಬ ತೋರಲು |

ನಗುತಾ ಕಿಲಕಿಲ, ಚಪ್ಪಾಳೆ ತಟ್ಟಿದ ಹರ್ಷದಿ ||3||

ತೂಗಿಸಿ ತಲೆ ಗೆಜ್ಜೆ ಕಾಲ್ಗಳ ಹೆಜ್ಜೆ ಕುಣಿಸಿದ |

ಖಗಪತಿ ಶ್ರೀಕೃಷ್ಣವಿಠ್ಠಲ ಜಗಕೆ ಮರುಳ ಮಾಡಿದ ||4||

202. ಆದಿ ಬುನಾದಿಯಿಂದ ಎಲ್ಲ ಶಕ್ತಿಯ ಮೂಲ |

ಆದ್ಯಂತರಹಿತ ಸರ್ವಶಕ್ತ ನೀನಲ್ಲವೇ ? ||ಪ||

ತಿನ್ನುವ ಅನ್ನದಲ್ಲರುವ ಶಕ್ತಿ ನೀನೇ |

ನೀನಲ್ಲದ ಆಹಾರ ಕಸದ ಸಮಾನ ||1||

ಕುಡಿಯುವ ನೀರಿನ ಚೇತನನಾಗಿ |

ಒಡನೆಯೇ ದಾಹ ಪರಿಹರಿಸುವಿ ||2||

ಪ್ರತಿ ಉಸಿರಿನಲ್ಲಿದ್ದು, ಒಂದುಸುರಿನಲ್ಲಿಲ್ಲದಿರೆ |

ಸತ್ತು ಶವವಾಗುವರು ಕ್ಷಣದಲಿ ||3||

ಪ್ರತೀ-ದ್ವೇಷ, ಕಾಮ-ಲೋಭ ಹುಟ್ಟಿಸುವ |

ಕೋತಿ ಮನಸಿನ ಕಡಿವಾಣ ನೀನು ||4||

ಹಿಂದೆ, ಇಂದು-ಮುಂದೆ ಎಂದೆಂದೂ |

ಇದ್ದು ಜೊತೆಗೆ ಶಕ್ತಿಯ ಶಕ್ತಿ ನೀನೇ ಶ್ರೀಕೃಷ್ಣವಿಠ್ಠಲ ||5||

203. ಹುಡುಕ ಬೇಡಿ ಹುಡುಕಿ ದಣಿಯಬೇಡಿ ||ಪ||

ದುಡುಕಿ ಯಾರನ್ನೋ ನಿಯತ ಗುರುವೆನ್ನದಿರಿ ||ಅಪ|||

ಅರುಹುವರು ಸಾಧನದ ಬಗೆ ಅನೇಕರು |

ಮಾರ್ಗದರ್ಶನ ತೋರುವವರನೇಕರು ||

ಶಾಸ್ತ್ರಧ್ಯಾಯ ಮಾಡಿಸುವರನೇಕರು |

ತೋರುವುರು ಗುರಿ ಆದರೆ ತಲುಪಿಸರು ||1||

ನಿಂದ್ಯಾನ್ನ ವರ್ಜಿಸಿ ಅಶೌಚ ತೊರೆದು |

ಸಾಧನೆ ಪೂರ್ಣವಾಗಲು ಸುಜೀವಿ ಬಳಿ ||

ಒದಗಿ ಬರುವ ತಾನೇ ನಿಯತ ಗುರು |

ಕಂದನ ಹುಡುಕಿ ತಾಯಿ ಬರುವಂತೆ ||2||

ಏಕಚಿತ್ತದಿ ಬೋಧಿಸುವ ಸ್ವಬಿಂಬೋಪಾಸನೆ |

ಸಂಕೀರ್ತಿಸಿ, ಸ್ತುತಿಸಿ, ಪೂಜಿಸಲು ಬಿಂಬರೂಪ ||

ಮುಕುಂದನ ಮಂದಿರ ದಾರಿ ಸಿಗುವುದು |

ಲಕುಮಿವಲ್ಲಭ ಶ್ರೀಕೃಷ್ಣವಿಠ್ಠಲನಾಣೆಗೂ ಸತ್ಯ ||3||

204. ಶ್ರೀಗೌರಿ ಕಲ್ಯಾಣಿ ಶಂಕರನರ್ಧಾಂಗಿ |

ಜಗನ್ಮಾತೆ ಉಮಾಮಹೇಶ್ವರಿ ||ಪ||

ಮಾಗಭಿಮಾನಿ ಸೌಭಾಗ್ಯವಂತೆ |

ಗಂಗಾಧರ ಪ್ರಿಯೆ ಸತೀದೇವಿ ||

ಹೊಂಗಿರಣ ಮೂಡಿಸೆನ್ನ ಜೀವನದಿ |

ಜಗನ್ಮಂಗಳೆ, ಪಾರ್ವತಿಯೇ ||ತಾಯೇ |||1||

ಮಾತು ಮನದ ಪ್ರತೀಕವಂತೆ |

ಶತ್ರು ಭಯ ಬಿಡಿಸಿ ಕಾಪಾಡು ||

ಸತ್ಯದ ದಾರಿ ತೋರು ಕರುಣದೀ |

ನಿತ್ಯ ಶ್ರೀಕೃಷ್ಣವಿಠ್ಠಲನ ನಿಜಭಕುತೆ ||ತಾಯೇ ||2||

ಶ್ರೀ ಕೃಷ್ಣವಿಠ್ಠಲಪದಗುಚ್ಛ 3 ಅನುಕ್ರಮಣಿಕಾ

ಸತೀ ದೇವಿ ದೇಹತ್ಯಾಗ

205. ಕುತೂಹಲದಿ ವೀಕ್ಷಿಸಿ ಕೇಳಿದಳು ದೇವತೆಗಳ |

ಮತ್ತೆಲ್ಲಿ ಹೊರಟರೆಲ್ಲ ಈಪರಿ ಶ್ರೀಂಗಾರದಿ ||

ಗೊತ್ತಿಲ್ಲವೇ ಉಮೆ, ದಕ್ಷ ಯಜ್ಞಕೆ ಹೊರಟೆವು |

ಪತಿ ಬಳಿ ಬಂದು ತಾವೂ ಹೊರಡೋಣವೆಂದಳು ||1||

ಇತ್ತಿಲ್ಲ ತಮಗೆ ಅಹ್ವಾನ ಹೋಗುವುದು ಬೇಡ |

ಮಾತಾ-ಪಿತೃ ಮನೆಗೆ ಹೋಗಲು ಅಹ್ವಾನವೇಕೆ ? ||

ಸಾತ್ತ್ವಿಕ ಯಜ್ಞವಲ್ಲವಿದು ಅಪಮಾನ ತೀರಿಸಲುಸಂಚು |

ಎಂತ ಹೇಳಿದರೂ ಕೇಳದೆ ಉಮೆಯೊಬ್ಬಳೇ ಹೊರಟಳು ||2||

ಅತೀ ಆಡಂಬರದ ಯಜ್ಞಶಾಲೆಕಂಡಳು |

ಮಾತೆ ಸಹೋದರಿಯರೆಲ್ಲ ಬಂದು ಅಪ್ಪಿಕೊಂಡರು ||

ಸ್ವತ: ದಕ್ಷ ಮಾತ್ರ ನೋಡಿಯೂ ಅಲಕ್ಷಿಸಿದ |

ಇತರ ಎಲ್ಲ ದೇವತೆಗಳೆಲ್ಲ ಉಪಸ್ಥಿತರಿದ್ದರು ||3||

ಸಂತೈಸಿ ತನ್ನಮನವ ನಿಂತಳಲ್ಲೇ ಬಂದವಳು |

ಹೋತೃಗಳು ರುದ್ರನಿಗೆ ಆಹುತಿ ಹಾಕದಾಗ ||

ಪಿತನ ಪ್ರಶ್ನಿಸಿ ಅಪಮಾನಿತಳಾದಳು |

ಮಾತಿನಲ್ಲೇ ಅತೀಯಾಗಿ ಶಿವನ ನಿಂದಿಸಿದನು ||4||

ಪತಿಯನಿಂದೆ ತಾಳದೆ ಸತೀ ಕುಪಿತಳಾಗಿ |

ಪಿತನ ಯಜ್ಞದಿ ದೇಹ ಅಗ್ನಿಗಾಹುತಿಸಲು ||

ಅತೀ ಭಯಂಕರ ತಾಪದಿ ಶಿವ ತಾಂಡವನೃತ್ಯದಿ |

ದೂತ ವಿರೂಪಾಕ್ಷನ, ಜಟೆ ಅಪ್ಪಳಿಸಿ ಸೃಜಿಸಿದ ||5||

ಭೂತನಾಥ ಕಳುಹಿದನವನ ಯಜ್ಞ ಧ್ವಂಸಿಸಲು |

ಶಸ್ತ್ರಕ್ಕೆ ಬೆದರದೆ ಶಿರಗಳ ತರಿದು ಚೆಂಡಾಡಿದ ||

ಅತೀ ಶೀಘ್ರದಿ ಯಜ್ಞಶಾಲೆ ರಣರಂಗವಾಯ್ತು |

ಕತ್ತರಿಸಿದ ದಕ್ಷನ ತಲೆ ಯಜ್ಞಗಾಹುತಿಯಾಯ್ತು ||6||

ಪತಿತಪಾವನ ನಾರಾಯಣ ಬಂದು ತಡೆದು |

ನೇತ್ರಹೀನರಿಗೆ ದೃಷ್ಟಿ, ಮೃತರಿಗೆ ಜೀವದಾನಿಸಿ ||

ಸಂತೈಸಿ ಶಿವನ ಶಾಂತಗೊಳಿಸಿದನಾಗ |

ಹೋತನ ತಲೆ ಇರಿಸಿದ ಮಾವ ದಕ್ಷಗೆ ||7|

ನಂತರ ಮದ ಇಳಿದು ವಿನಮ್ರನಾದ ದಕ್ಷ |

ಪ್ರೀತಿಪುತ್ರಿಯ ಮರಣಕ್ಕಾಗಿ ಶೋಕಿಸಿದನು ||

ಅತ್ತ ಸತೀ ಪರ್ವತನ ಪುತ್ರಿ ಪಾರ್ವತಿಯಾಗಿ ಜನಿಸಿ |

ಮತ್ತೆ ಕೈಲಾಸ ಪತಿಯನ್ನೇ ಪಡೆದು ಧನ್ಯಳಾದಳು ||8||

ಮುತ್ತು ದಾರದಲಿ ಪೋಣಿಸಿದಂತೆ |

ಮಾತು ಮನಸು ಒಂದಾದಂತೆ ಜೊತೆಯಾದರು ||

ಸ್ತುತಿಸಿ ಪೂಜಿಸಿ ಅವರ ಅನುಗ್ರಹ ಪಡೆದರೆ |

ಅಂತರ್ಯಾಮಿ ಶ್ರೀಕೃಷ್ಣವಿಠ್ಠಲನ ಸೇರುವರು ||9||

206. ನಾಸಿಕ ಘ್ರಾಣಿಸುವಂತೆ, ಚರ್ಮ ಘ್ರಾಣಿಸಬಲ್ಲುದೆ |

ಅಸ್ವಾದಿಸುವುದು ಜಿಹ್ವೆ, ದೃಷ್ಟಿಸುವುದು ನಯನ ||

ಸುಶಬ್ದಕೆ ಕಿವಿಯಾದರೆ, ಪಾದನಡೆದಂತೆ ಕರ ನಡೆವುದೆ |

ಆಶ್ರಯಕೆ ಆಕಾಶದಂತೆ, ತೃಷೆ ತೀರಲು ನೀರು ಬೇಕು ||

ಸಸ್ಯಕ್ಕಾಧಾರ ನೆಲದಂತೆ, ಬೇಯಿಸಲನ್ನ ಬೆಂಕಿಬೇಕು |

ಉಸಿರಿಗೆ ವಾಯು ಅಗತ್ಯ, ಸ್ಥಿರ ಬುದ್ಧಿ ನಿರ್ಣಾಯಿಸಲು ||

ವಿಶ್ವದಿ ಭಿನ್ನತತ್ವಗಳಿಗೆ ಭಿನ್ನಕಾರ್ಯ, ಇದಕೆ ಅಧಿಕನ್ಯೂನತೆ ಸಲ್ಲ |

ಅಸಾಧ್ಯ ಶ್ರೀಕೃಷ್ಣವಿಠ್ಠಲನೊಬ್ಬನೇ ಪ್ರತಿ ಅಂಗದಿ ಸರ್ವಕಾರ್ಯಮಾಳ್ಪ ||

207. ಸೀಮಿತಕಾಮಿತಾರ್ಥಪ್ರದ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ |

ಕುಮುತಿ ನೀಗಿಸುವ ಸುಮತಿ ಅಸಾಧಾರಣ ಶಕ್ತಿಪ್ರದ ||

ನಾಮ ಮಹಾತ್ಮೆ ಅಂತರಾರ್ಥ ತಿಳಿದು ಭಜಿಸಲು |

ಅಮಿತ ಚತುರ್ವಿಧ ಪುರುಷಾರ್ಥಪ್ರದ ಶ್ರೀಕೃಷ್ಣವಿಠ್ಠನ ಶುಭನಾಮ ||

1

208. ಭೀಷ್ಮ ಸ್ತವರಾಜ, ಅನುಸ್ಮೃತಿ, ಗಜೇಂದ್ರಮೋಕ್ಷ |

ವಿಷ್ಣುಸಹಸ್ರನಾಮ, ಭಗವದ್ಗೀತೆ ಭಾರತದ ಪಂಚರತ್ನನ ||

ನಿಷ್ಕಾಮನದಿ ಸದಾ ಶ್ರವಣ, ಮನನ ಗೈಯಲು |

ವಿಶ್ವಗರ್ಭ ಶ್ರೀಕೃಷ್ಣವಿಠ್ಠಲ ನಿರ್ವಾಜ್ಯ ಭಕ್ತರಿಗತಿ ಸುಲಭನು ||

1

209. ಇಷ್ಟಿಕೆ ಮೇಲೆ ನಿಂತು ಪುಂಡರೀಕನನುಗ್ರಹಿಸಿದ |

ಮುಷ್ಠಿ ಅವಲಿಗೆ ಸಕಲೈಶ್ವರ್ಯವಿತ್ತ ಸುದಾಮಗೆ ||

ಶಿಶುಪಾಲನ ಸಂಹರಿಸಿ ಜಯಗೆ ಸದ್ಗತಿಯಿತ್ತ |

ಭೀಷ್ಮ ನವಗುಣವೆಣಿಸದೆ ಶರಶಯ್ಯದಿ ದರ್ಶನವಿತ್ತ ||

ವಿಶೇಷ ಕರುಣಾಳು ನಮ್ಮ ಶ್ರೀಕೃಷ್ಣವಿಠ್ಠಲ ||

210. ಶುದ್ಧದೇಹ, ಶುದ್ಧ ಮನ ಆಲೋಚನೆಗೆ |

ಸದಾವರ್ಜಿಸಿ ಐದು ತರದ ಭೋಜನ ||

ಕ್ಷುದ್ರ ದೇವತೆಗಿಟ್ಟ ಅನ್ನ, ಮಾಂಸಯುಕ್ತಾನ್ನ |

ಶೂದ್ರಾನ್ನವಲ್ಲದೆ ರಜಸ್ವಲಾದೃಷ್ಟಾನ್ನ ||

ಇದಲ್ಲದೆ ಬೇಡಿ ತಂದ ಅನ್ನ, ಎಂಜಲನ್ನ |

ಇದೆಲ್ಲ ನಿಷಿದ್ಧ ಬಾಧಕ ಸಾಧಕರಿಗೆ ||

ಮೊದಲು ಆಚರಣೆ ಜೊತೆ ವೈರಾಗ್ಯ |

ತದನಂತರ ಆಧ್ಯಾತ್ಮಜ್ಞಾನದಿ ಶ್ರೀಕೃಷ್ನವಿಠ್ಠಲನ ಕೃಪೆ ಗಳಿಸಿರಿ ||

211. ದೊರೆ ಮೆಚ್ಚಲುವೀವ ಧನ, ಕನಕ |

ವಸ್ತ್ರ ವಿಶೇಷ ವಾಹನಾದಿ ಗಳ ||

ಸರ್ವಥಾ ಸ್ವಗೃಹವಿತ್ತು ದಾಸನಾಗನು |

ಪರಮಾತ್ಮಗೆ ಪುತ್ರ ನಾನೆಂದು ಬಿನ್ನೈಸೆ ||

ಸ್ಮರಿಸಿ ಬಾಲ ಸ್ವಭಾವ ಕ್ಷಮಿಸಿ ದೋಷ |

ಸರ್ವತ್ರ ಪಿತನಂತೆ ರಕ್ಷಿಸುವ ಶ್ರೀಕೃಷ್ಣವಿಠ್ಠಲ ||

212. ಪರಮ ಪವಿತ್ರ ಶ್ರವಣ ಮಂಗಳನ |

ಕೀರ್ತಿಸಲು ಸರ್ವಪಾಪ ನಾಶ ||

ಸ್ತ್ರೀರೂಪಧರಿಸಿ ದೈತ್ಯರ ವಂಚಿಸಿ |

ಸುರರಿಗೆ ಅಮೃತಪಾನಿಸಿದ ರೂಪದಿ ||

ಪಾರ್ವತಿಪತಿಯನು ಮೋಹಿಸಿ ಕೆಡಿಸಿ |

ಓದಿಸಿದ ಜ್ಞಾನವ ಶ್ರೀಕೃಷ್ಣವಿಠ್ಠಲನ ಮಾಯೆ ಜಯಿಸರ್ಯಾರು ||

213. ರುದ್ರನೊಡನೆ ಕಾದಾಡಿ ಮಾಯೆ ಹರಿದ |

ಇಂದ್ರನ ಗರ್ವಭಂಗಿಸಿ ಗೋಪರಕಾಯ್ದ ||

ವಧಿಸಿ ಕಂಸನ ತಾಯಿಯ ಸೆರೆ ಬಿಡಿಸಿದ |

ಚಂದ್ರನ ಅಕ್ಷಮ್ಯಪರಾಧ ಸಹಿಸಿದ ||

ಬೈಯ್ದು ಶಿಶುಪಾಲಗಿತ್ತ ಸದ್ಗತಿ |

ಎದೆಗೊದ್ದ ಭೃಗನಪಾದ ಪೂಜಿಸಿದ ಶ್ರೀಕೃಷ್ಣವಿಠ್ಠಲ ಸಹಿಷ್ಣುತೆಯ ಶಿಖರವಲ್ಲವೆ ? ||

214. ದಾಸನಂತೆ ಪಾಂಡವರ ನಿರುತ ಸೇವಿಸಿದ |

ಕುಸಿದ ಅರ್ಜುನಗೆ ಜ್ಞಾನ ಬೋಧಿಸಿದ ||

ಹಸಿವು ತಣಿಸಿದ ಗೋಪಾಲಕರ ಕಾಡಿನಲಿ |

ರಾಸಲೀಲೆಯಲಿ ಗೋಪಿಯರ ರಮಿಸಿದ ||

ಏಸೊಂದು ಸುರರಪರಾಧ ಸಹಿತ ಕ್ಷಮಿಸಿದ |

ಅಸುರಾಂತಕ ನಮ್ಮ ಶ್ರೀಕೃಷ್ಣವಿಠ್ಠಲ ಗುಣಪೂರ್ಣ ||

215. ನಾರುವ ದೇಹದಿ ಜಡದಿ ಬಿದ್ದಿರುವೆ |

ತೋರುತ ಎತ್ತಿ ಹಿಡಿದಿರುವೆ ಪಾಪಗಳ ||

ತರಿದು ಅರಿಗಳ ಶಿರ ಬಗ್ಗಿಸು |

ಮರ್ಯಾದೆ ದಾಟದೆ ಜ್ಞಾನಗಳಿಸುವಂತೆ ||

ಅರಿವು ಶುದ್ಧವಾಗಿ ಚಂಚಲತೆ ನೀಗಿ |

ಭದ್ರವಾಗಿ ನಿನ್ನೆಡೆ ಬರುವಂತೆ ಮಾಡೋ ಶ್ರೀಕೃಷ್ಣವಿಠ್ಠಲ ||

216. ಕಾಣುವ ಜಗವ ಬಣ್ಣಿಸಲೇಕೆ ? |

ಕಾಣದ ದೇವನ ಬಣ್ಣಿಸಲೆಂತು ? ||

ಕಣ್ಣಿಗೆ ಕಣ್ಣಾದವನ ಕಾಣುವುದೆಂತು ? |

ಕಣ್ಣಿಗೆ ಕಾಣದಿದ್ದರೂ ಮನದಿ ನಿಲ್ಲು ||

ಹಣವಂತ ನಾನಲ್ಲ ಗುಣವಂತ ನಾನಲ್ಲ |

ಒಣಮಾತಿಗೆ ಒಲಿಯುವ ನೀನಲ್ಲ ||

ಮಣಿಸುವೆ ಶಿರ ಬಗ್ಗಿ ಬೇಡುವೆ |

ಕಣ್ಣು ಬಿಟ್ಟು ನೋಡು ಒಂದು ಬಾರಿ ||

ಕ್ಷಣ ಕಾಲವಾದರೂ ಎನ್ನನು ದೃಷ್ಟಿಸು |

ಕಣ್ಮಣಿ ನೀನು ಕಡೆಗಾಣಿಸ ಬೇಡೆನ್ನ ||

ಕಾಣಿಸುವೆ ಎಂದು ತಿಳಿಸೊಮ್ಮೆ ಶ್ರೀಕೃಷ್ಣವಿಠ್ಠಲ ||

1

217. ನೀನಿತ್ತ ದೇಹ, ನೀನಿತ್ತ ತಾಯ್ತಂದೆ, ನೀನಿತ್ತ ಪತಿ, ಸುತರು |

ನೀನಿತ್ತ ಒಡನಾಡಿಗಳು, ನೀನಿತ್ತ ಪರಿಸರ, ನೀನಿತ್ತ ಮಾತು ||

ನೀನಿತ್ತ ಗುರುಗಳು, ನೀನಿತ್ತ ವಿದ್ಯೆ, ನೀನಿತ್ತ ಅವಕಾಶಗಳು |

ನೀನಿತ್ತ ಆಹಾರ, ನೀನಿತ್ತ ಆರೋಗ್ಯ, ನೀನಿತ್ತ ಧನ, ಕನಕಾದಿಗಳು ||

ನೀನಿತ್ತ ಮೊದ, ಪ್ರಮೊದ, ನೀನಿತ್ತ ಜ್ಞಾನ, ನೀನಿತ್ತ ಭಕ್ತಿವೈರಾಗ್ಯ |

ನೀನಿತ್ತ ಮರ್ಯಾದೆ, ನೀನಿತ್ತ ಆದರ ಪುರಸ್ಕಾರಗಳು ನಿನ್ನದಲ್ಲವೇ ? ||

ನಿನ್ನ ಒಂದು ದೃಷ್ಟಿಗಾಗಿ ಕಾತರಿಸುತಿರುವೆ, |

ನಿನ್ನ ಒಂದು ಬಾರಿ ದರುಶನಕೆ ಹಾತೊರೆಯುತಿರುವೆ ||

ನಿನ್ನ ನೊಡಿದರೆ ಸಕಲವನ್ನು ನೊಡಿದಂತೆ |

ನಿನ್ನ ತಿಳಿದರೆ ಸಕಲವನ್ನು ತಿಳಿದಂತೆ ||

ನಿನ್ನ ಜೊತೆ ಮಾತಾಡಿದರೆ ಎಲ್ಲ ತೃಪ್ತಿಯಾದಂತೆ |

ನನ್ನ ಹಿಂದು-ಇಂದು-ಮುಂದಿನ ಸಂಗಾತಿ ನಿನ್ನ ಬಿಟ್ಟರನ್ಯರಿಲ್ಲ ||

ನಿನಗಾಗಿ ಪರಿತಪಿಸುತಿರುವೆ, ಎನ್ನ ಎಡಬಿಡದೆ ಕಾಯುವವ ನೀನೇ |

ನೀನು ಮಾಡಿಸಿದಂತೆ ಮಾಡುವೆ |

ನೀನು ನುಡಿದಂತೆ ನುಡಿವೆ ||

ನೀನು ನಡಿಸಿಂತೆ ನಡೆವೆ |

ನೀನು ಕುಣಿಸಿದಂತೆ ಕುಣಿವೆ ||

ನನ್ನ ಜನ್ಮ-ಜೀವನ, ಉಸಿರು ನೀನೇ |

ನಿನ್ನ ಬಿಟ್ಟರನ್ನವೇನು ಇಲ್ಲ, ನಿನ್ನಿಂದ ನಾನು ನನ್ನದೇನಿಲ್ಲ ||

ನಿನ್ನನ್ನೇ ಅನಾದಿಯಿಂದ ಅನಂತಕಾಲದವರೆಗೆ ನಂಬಿರುವೆ |

ನನ್ನಿಂದಾದ ಪುಣ್ಯದಿಂದಾಗಲು ಇದೆಲ್ಲಾ ಸಾಧ್ಯವಿಲ್ಲ ||

ನನ್ನ ಕೈ ಬಿಡದೆ ನಡೆಸಿ ನಿನ್ನವಳನ್ನಾಗಿಸಿಕೋ |

ನೀನೆ ಜನ, ಜೀವನ, ಜಗತ್ತು, ಅವಕಾಶ ಪರಿಸರ ||

ನೀನೆ ಮಣ್ಣು, ಗಾಳಿ, ಬೆಂಕಿ, ನೀರು, ಆಕಾಶವೆಲ್ಲ |

ಎನ್ನ ಹಿಂದೆ-ಮುಂದೆ, ಅಕ್ಕ-ಪಕ್ಕದಲ್ಲಿದ್ದು ರಕ್ಷಿಸುವವ ||

ಎನ್ನ ಅಪರಾಧಗಳ ಚಿತ್ತಕ್ಕೆ ತರದೆ ಅಲಕ್ಷಿಸು ಸದಾ |

ನಿನ್ನ ಅನಂತ ಕರುಣಿಯ ಫಲವಿದು, ಸರ್ವೋದ್ಧಾರಕನೇ ||

ನನ್ನನ್ನು ಕಾಪಾಡಿದಂತೆ ಸಕಲರನ್ನೂ ಕಾಪಾಡಿ ಉದ್ಧರಿಸು |

ನಿನ್ನನು ಅರಿಯದೇ, ಕಾಣಲು ಹಂಬಲಿಸದರೆ ಜನ್ಮ ವ್ಯರ್ಥ ||

ಎನೆಲ್ಲಾ ಕೊಟ್ಟ ದೊರೆ ನಿನಗೆ ನಾನೇನು ಕೊಡಬಲ್ಲೆ |

ಎನ್ನ ಶಿರ ನಿನ್ನಚರಣದಲ್ಲಿಟ್ಟು ಸದಾ ನಮಿಸುವಂತೆ ಅನುಗ್ರಹಿಸು ||

ನಿನ್ನಲಿ ಭಕ್ತಿ ಎಡಬಿಡದೆ ಸದಾ ಹೆಚ್ಚುತಿರಲಿ, ಕುಂದುವುದು ಬೇಡಾ |

ಎನ್ನ ಪ್ರಭೋ, ನಿನ್ನಲಿ ನಿಶ್ಚಲ, ನಿರ್ಮಲ, ನಿರಂತರ, ನಿಜಭಕುತಿ ಕರುಣಿಸು ||

ಎನ್ನ ಜನುಮ ನಿನ್ನ ಸೇವೆಯಲಿ ಸವೆದು ಸಾರ್ಥಕವಾಗಿಸಿಕೋ |

ಎನ್ನ ಅನ್ನ, ನೀರು, ಉಸಿರು, ಜೀವ ನೀನಾಗಿರುವಿ ||

ನಿನ್ನಿಂದ ಅನ್ಯವಾದುದೇನೂ ಎನಗೆ ಬೇಡ ||

ನೀನು ಸಕಲಜನಕ , ಅನುಗ್ರಹಿಸುವವ |

ನೀನಿಲ್ಲದ ಯಾವ ವಸ್ತುವೂ ಇಹ-ಪರದಲ್ಲಿಲ್ಲ ||

ನನ್ನಲ್ಲಿರುವ ತತ್ವಾಭಿಮಾನಿ ದೇವತೆಗಳಂತರ್ಗತನಾಗಿ |

ಎನ್ನ ಇಂದ್ರಿಯಾಭಿಮಾನಿ ದೇವತೆಗಳಂತರ್ಗತನಾಗಿ ||

ಎನ್ನ ಮುಖ್ಯಪ್ರಾಣಾಂತರ್ಗತನಾದ ಎನ್ನ ಬಿಂಬಸ್ಥ |

ನೀನು ಶ್ರೀಕೃಷ್ಣವಿಠ್ಠಲ ಕರುಣೆಯ ಕಡಲು ||

ನಿನ್ನಲ್ಲಿ ಅಮಲ ಭಕ್ತಿ ಇರುವಂತೆ ದಯಮಾಡು ||

1

218. ‘ಮಾತೃದೇವೋಭವ’ ಏಕೆ? ಮಾತೆ ಶ್ರೇಷ್ಠ ಏಕೆ ||ಪ||

ಮಾತೆ ಜನ್ಮದಾತೆ | ಮಾತೆ ಜೀವನದಾತೆ ||

ಮಾತೆ ಅನ್ನದಾತೆ | ಮಾತೆ ಮೊದಲಗುರು ||1||

ಮಾತೆ ಗುಣದಾತೆ | ಮಾತೆ ವಿದ್ಯಾದಾತೆ ||

ಮಾತೆ ಮಾತು ಕಲಿಸಿದಾಕೆ | ಮಾತೆ ರಕ್ಷಿಸುವಾಕೆ ||2||

ಮಾತೆ ಕನಿಕರಮೂರ್ತಿ | ಮಾತೆ ಕ್ಷಮಾಮೂರ್ತಿ ||

ಮಾತೆ ಮಡಿಲುಶಾಂತಿಸ್ಥಾನ | ಮಾತೆ ಸರ್ವಪ್ರದಾತೆ ||3||

ಮಾತೆ ಕಷ್ಟ ಸಹಿಷ್ಣು | ಮಾತೆ ಮಮತೆ ಕಡಲು ||

ಮಾತೆ ಮಾಡು-ಬೇಡ ತಿಳಿಸುವಾಕೆ | ಮಾತೆ ಸಹನಾಮುರ್ತಿ ||4||

ಮಾತೆ ಪ್ರಾಮಾಣಿಕ ಸ್ವರೂಪ | ಮಾತೆ ಸಂಸ್ಕೃತಿ ಪ್ರದಾತೆ ||

ಮಾತೆ ಋಣ ಎಂದಿಗೂ ತೀರದು | ಮಾತೆ ಶ್ರೀಕೃಷ್ಣವಿಠ್ಠಲನ ಚಲಪ್ರತಿಮೆ ||5||

219 ಮಾತೆ ನವಮಾಸ ಭಾರಪೊತ್ತು ನೋವಿನಲ್ಲೂ ಸುಖ ಕಂಡವಳು |

ಉತ್ತಮ ಆಹಾರವಿತ್ತು ತ್ಯಾಗದಿ ಸಲಹಿ ಜೀವನವಿತ್ತವಳು ||

ಪುತ್ರನ ಭಾರವೆಂದೆಣಿಸದೆ ಪೋಷಕಳಾದವಳು |

ಪ್ರತಿ ಉಪಕಾರ ಬಯಸದೆ ನಿ:ಸ್ವಾರ್ಥಿಯಾದವಳು ||

ಪುತ್ರನಿಗೆ ತಾಯಿ ಭಾರವೆಂದೇಕೆ ಎಣಿಸಬೇಕು |

ಪುತ್ರನಿಲ್ಲದಿರೆ ಗತಿ ಇಲ್ಲ ಎನ್ನುವರು ||

ಗತಿ ಯಾರು ಯಾರಿಗೆ ಎಂದು ತಿಳಿಯದು |

ಗತಿ ಪ್ರದ ಶ್ರೀಕೃಷ್ಣವಿಠ್ಠಲನೇ ತಿಳಿಸಬೇಕು ||

220. ಪರಮಶಿವ ಪರಮ ಮಂಗಳ ಕೈಲಾಸ ಪತಿ |

ಪರಮೂರುತಿ ಕಾರುಣ್ಯನಿಧಿ ಉಮಾಪತಿ ಶಂಭೋ ||ಪ||

ವಿರೂಪಾಕ್ಷ ಗಂಗಾಧರ ನಟರಾಜ |

ಚಂದ್ರಚೂಡ ನೀಲಕಂಠ ಡಮರುಧರ ||

ಪಾರ್ವತಿ ಪತಿ ಶಿವಶಂಕರ ನಂದಿವಾಹನ |

ರುದ್ರ ಪರಮೋತ್ತಮ ವೈಷ್ಣವೋತ್ತಮ ||1||

ಧರಿಪ ರುಂಡಮಾಲೆ ತ್ರಿಶೂಲಧಾರಿ |

ಶಿರ ತರಿದು ಮಗನ ಅಹಂಕಾರ ಅಳಿದು |

ಕರಿ ಶಿರವಿಟ್ಟು ವಿಘ್ನೇಶ್ವರನ ಮಾಡಿದ ||

ಶ್ರೀರಾಮ ಭವತಾರಕ ಮಂತ್ರ ಸತಿಗುಪದೇಶಕ ||2||

ವೈರಾಗ್ಯನಿಧಿಯೇ ಮನೋ ನಿಯಾಮಕನೇ |

ಗೌರೀಶ ಈಶನಲಿ ಮನವ ನಿಲ್ಲಿಸಿ ||

ನಿರ್ಮಲ ಭಕುತಿಯಲಿ ಏಕಚಿತ್ತದಿ |

ನಿರುತ ಆರಾಧಿಸುವಂತೆ ದಯೆತೋರೋ ||3||

ಹರಿಹರ ರೂಪದಿ ಭಕ್ತಿಯಲಿ ಅಭೇದ ತೋರಿ |

ಗೌರವವಿತ್ತೆ ಸತಿಗೆ ಅರ್ಧನರನಾರಿರೂಪದಿ ||

ಶೀಘ್ರ ತಪಕೆ ಒಲಿದು ವರ ನೀಡುವ ಉದಾರಿ |

ಕರುಣಾಕರ ಸುಂದರ ಶ್ರೀಕೃಷ್ಣವಿಠ್ಠಲನ ನಿಜಭಕುತ ||4||

221. ಇಟ್ಟಿಗೆ ಕೊಟ್ಟ ಪುಂಡಲೀಕಗೆ ವರವಿತ್ತ |

ಕೊಟ್ಟ ಐಶ್ವರ್ಯ ಮುಷ್ಟಿ ಅವಲಕ್ಕಿ ಇತ್ತ ಸುದಾಮಗೆ ||

ಕೆಟ್ಟ ಮಾತಾಡಿದ ಶಿಶುಪಾಲನ ಹೊಟ್ಟೆಯೊಳಿಟ್ಟ |

ಗಟ್ಟಿಯಾಗಿ ದರುಶನವಿತ್ತ ಭೀಷ್ಮರ ಅವಗುಣಗಳೆಣಿಸದೆ ||

ಸೃಷ್ಟೀಶ ಶ್ರೀಕೃಷ್ಣವಿಠ್ಠಲಗಿಂತ ದಯಾನಿಧೆ ಯಾರಿಹರು ||

222. ಬಿಟ್ಟು ವೈಕುಂಠ ಧರೆಗಿಳಿದ ಭಗವಂತ |

ದುಷ್ಟ ಜನರ ವಧೆಗೆ ಸಜ್ಜನರುದ್ಧಾರಕ್ಕಾಗಿ ||ಪ||

ಸುರರೆಲ್ಲ ತಮ್ಮ ಸಾಧನೆಗಾಗಿ, ಸಾನಿಧ್ಯಕ್ಕಾಗಿ |

ಧರೆಗಿಳಿದು ಸಾಂಗತ್ಯದಿ ಸುಖಿಸಿದರು ||

ಧರಿಸಿ ವಿವಿಧ ರೂಪದಿ ಸೇವೆಗೈಯ್ದರು |

ಪರಮಪಾವನ ಧರ್ಮಯುದ್ಧದಿ ಪಾಲುದಾರರು ||1||

ಇರುತ ಎಲ್ಲರೊಳಗೊಂದಾಗಿ ಮಾನವನಂತೆ |

ತೋರಿದ ಅನೇಕ ಸಹಜ ಲೀಲೆಗಳ ||

ಗುರುತಿಸಲಿಲ್ಲ ಮಂದಮತಿಗಳವನ ವಿಶೇಷವ |

ದರುಶಿಸಿದರೂ ನಿತ್ಯ ನಿಜಭಕುತಿ ಬರಲಿಲ್ಲ ||2||

ಜ್ಞಾನಬೋಧಿಸಿ, ನೀತಿಮಾರ್ಗದಿ ನಡೆದು ತೋರಿದ |

ಅನ್ಯಾಯಗಳ ವಿರುದ್ಧ ಬಿಡದೆ ಸಮರ ಸಾರಿದ ||

ಸನ್ನ್ಯಾಯ ಮಾರ್ಗದಿಂ ಸಕಲರ ಮನಗೆದ್ದ |

ಚಿನ್ಮಯ ಮೂರುತಿ ಸಹೃದಯವಂತ ಶ್ರೀಕೃಷ್ಣವಿಠ್ಠಲ ||3||

223. ಪೋರ ಬಂದಿಹನೆ ನಿಮ್ಮನೆಗೆ ಬಾಲಕರೊಡಗೂಡಿ |

ಬರಿದೇ ಗೊಂದಲ ಮಾಡಿ ಓಡಿ ಬಿಡುವ ತುಂಟ ||ಪ||

ನಿಲುಕದಂತೆ ಇವಗೆ ಮೇಲೆ |

ನೆಲುವಿಗೆಯಲ್ಲಿ ಬೆಣ್ಣೆ ಇಡಲು ||

ಮೆಲ್ಲಗೆ ಯಾವ ಮಾಯೆಯಲ್ಲೋ |

ಕಳ್ಳ ಬೆಕ್ಕಿನಂತೆ ಬಂದು ಸೂರೆ ಮಾಡುವ ||1||

ಎಲ್ಲ ಗಡಿಗೆ ಒಡೆದು ಹಾಕುವ |

ಪಾಲು, ಮೊಸರನ್ನೆಲ್ಲಾ ಚೆಲ್ಲಾಡಿ ||

ಎಲ್ಲರಿಗೂ ಸಮ ತಿನ್ನಲು ಕೊಡುವ |

ಮಲಗಿದ್ದ ಶಿಶುವ ಚಿವುಟಿ ಅಳಿಸುವ ||2||

ಮೂಡಿದ ಮೊಸರಿನಲಿ ಪುಟ್ಟ ಪಾದ |

ನೋಡಿ ಹಿಡಿಯಲು ಹಿಂದೆ ಪೋದರೆ ||

ಓಡಾಡಿಸಿ ಕೈಗೆ ಸಿಗದೆ ಜಾರಿಕೊಳ್ಳುವ |

ಬಿಡೆನು ಅವನೊಮ್ಮೆ ಸಿಕ್ಕರೂ ಸಾಕು ||3||

ಮಾಯಗಾರನಿವ ದೊಡ್ಡ ಮಾಯಗಾರ |

ಬೈಯ್ದು ಹುಸಿ ಮುನಿಸು ತೋರಿದರೂ ||

ಬಯಸುವುದು ಹೃದಯ ಅವ ಬರಲೆಂದು |

ಕಾಯುವೆ ನಿತ್ಯ ಶ್ರೀಕೃಷ್ಣವಿಠ್ಠಲನಿಗಾಗಿ ||4||

224. ಬಾಗಿದ ವಂಶಿಗೆ ಜೇನುಹುಟ್ಟು ಭಾರವೆ ? |

ಬಳ್ಳಿಗೆ ಕುಂಬಳದಂತೆ ||

ಬಾಗಿನ ಕೊಂಬೆಯೆ ಮಹಾಲಕುಮಿ |

ಮೂಲ ಪ್ರಕೃತಿಗಾಶ್ರಯೆ ||

ತೂಗಿ ತೊನೆದಾಡುವ ಜೇನು ಹುಟ್ಟು ಪ್ರಾಣ |

ಸರ್ವಜೀವಕ್ಕಾಧಾರ ||

ಹೋಗಿ ವಿವಿಧ ಮಕರಂದ ಹೀರುವ ಹುಳು-ದೇವತೆಗಳು |

ಪರಮಾತ್ಮನ ಗುಣಗಾನಕ್ಕಾಧಾರ ||

ಕಂಗೊಳಿಸುವ ಚಿಕ್ಕ ತೂತುಗಳ ನಾಡಿಯಲ್ಲಿ ಜೇನಿದೆ |

ಜ್ಞಾನಾನಂದಮಯ ||

ಸುಗಂಧ ಭರಿತ ಕೆಂಪಾದ ಸವಿಜೇನು ಶ್ರೀಕೃಷ್ಣವಿಠ್ಠಲ |

ಮಧುವಿದ್ಯೆಯ ಮೂಲ ||

=

225. ಸಾಧು, ಸಂತರಿಗೆ ಕಂಡೂ ಕಾಣದವ |

ಸಿದ್ಧ, ಗಂಧರ್ವರಿಗೆ ಒಲಿಯದವ ||

ಬುದ್ಧಿಯಿಂದ ತಿಳಿಯಲಾಗದವ |

ಶುದ್ಧ ಹೃದಯದಿ ಬೇಡಿಕೊಳ್ಳಲು ||

ಬುಧರಿಗೆ ದಯದಿ ಒಲಿವಾ ಶ್ರೀಕೃಷ್ಣವಿಠ್ಠಲ ||

226. ಈಶ ಪ್ರೇರಿತ ಸರ್ವವೂ, ಈಶ ಪ್ರೇರಿತ |

ಈಶ ಶಕ್ತಿ ಸರ್ವಕ್ರಿಯಾ ಪ್ರೇರಿತ ||ಪ||

ಈಶ್ವರ ನಿಯತವು ಸರ್ವವಸ್ತು ಸ್ವಭಾವ |

ನಾಶ, ನಿರ್ಮಾಣ ನಿಯಾಮನ ಸರ್ವೇಶನ ಇಚ್ಛೆ ||

ಈಶಾಜ್ಞೆ ಮೀರಲು ಅಸಾಧ್ಯ ಎಲ್ಲರಿಗೂ |

ಶೇಷವಿಷ ಮೇಲೆರಲು ಈಶಪ್ರೇರಣೆ ||

ವಿಷ ಕುಡಿದ ಬಾಲಕ ಪ್ರಹ್ಲಾದ ಏನಾದ ||1||

ವಿಷವೇನು ಮಾಡಿತು ಕಾಲಕೂಟ ಕುಡಿದ ಶಿವನ ||

ವಿಷ ಸ್ತನ್ಯ ಪಾನಿಸಿದ ನಂದನಕಂದ ಏನಾದ |

ಈಶತ್ವ-ವಶತ್ವ ಸರ್ವಕಾಲಿಕ ಸತ್ಯ ||

ದೊಷ ದೂರನ ಒಪ್ಪದವ ಎಲ್ಲೂ ಸಲ್ಲನು |

ವಿಶೇಷ ಈಶ ಈ ನಮ್ಮ ಶ್ರೀಕೃಷ್ಣವಿಠ್ಠಲ ||2||

227. ಕ್ಲೇಶವರ್ಜಿತ ಜನ್ಮ-ಜರಾ-ಮೃತ್ಯುರಹಿತ |

ಶೇಷ ಶಾಯಿ- ಕ್ಷುಧಾ-ತೃಷೆರಹಿತ ||

ದೋಷದೂರ, ವಿಧಿ-ನಿಷೇಧರಹಿತ ಸ್ವಾಮಿ |

ನಾಶರಹಿತ ಅಪ್ರಾಕೃತ ದೇಹಿ ನಿತ್ಯಮುಕ್ತ ||

ಆಶಾದೂರ ಆದ್ಯಂತರಹಿತ ನಿರವದ್ಯ |

ಶಾಶ್ವತ ತ್ರಿಧಾಮವಾಸಿ ಲಕ್ಷ್ಮೀರಮಣ ||

ಶೇಷ್ಠ ನಮ್ಮ ಶ್ರೀಕೃಷ್ಣವಿಠ್ಠಲ ಪರಮ ಪುರುಷೋತ್ತಮ ||

228. ಎನ್ನ ಅಪರಾಧಗಳನೇಕ ದಯೆತೋರು ||ಪ||

ಎನ್ನ ಕ್ಷಮಿಸು ತಾಯೇ ಕ್ಷಮಾಯಾ ಧರಿತ್ರೀ ||ಅಪ ||

ಉಗುಳುವುದು, ತುಳಿಯುವುದು |

ಅಗಿಯುವುದು, ಹುಗಿಯುವುದು ||

ಬಗೆಯುವುದು, ಸುಡುವುದು |

ಬಗೆ ಬಗೆಯ ಅಪರಾಧಗಳನೇಕೆ ||1||

ತಿಳಿದೂ ತಿಳಿಯದೆ ಮಾಡುವ ತಪ್ಪು |

ಒಳ್ಳೆಯದ್ದು ಕೆಟ್ಟದ್ದು ಉದ್ದೇಶಪೂರಿತ ||

ತಿಳಿಯದೆ ನನ್ನದೆಂಬ ಸ್ವಾರ್ಥತನದಿ |

ಮಾಳಿಗೆ ಮನೆಕಟ್ಟಿ ಶಾಶ್ವತ ಸುಖದ ಚಿಂತನೆ ||2||

ತುಣುಕು ಭೂಮಿ ಒಡೆತನಕಾಗಿ ಹೋರಾಟ |

ಅಣ್ಣ-ತಮ್ಮ, ತಂದೆ-ಮಕ್ಕಳ ತಿಕ್ಕಾಟ ವಿರೋದ ||

ಒಣ ಕಣವೂ ಸತ್ತ ನಂತರ ಜೊತೆಬಾರದೆಂಬ ಸತ್ಯ |

ಮನದಿ ತಿಳಿಯದಾದೆ ಶ್ರೀಕೃಷ್ಣವಿಠ್ಠಲನರ್ಧಾಂಗಿಯೆ ||3||

229. ಹೊತ್ತು ಹೋಗದೆಂದು ಕತ್ತೆಯಂತೆ ತಿರುಗಬಾರದು |

ಮುಕ್ತಿಗಾಗಿ ಸಾಧನೆ ಏಕಾಂತದಿ ಸಾಧಿಸಬೇಕು ||

ಪಂಕ್ತಿಯಲಿ ಪರಪಂಕ್ತಿ ಎಂದೂ ಮಾಡಬಾರದು |

ಮತ್ತಿನಲ್ಲಿ ಜೀವನವೆಂದೂ ಕಳೆಯಬಾರದು ||

ಸತೀ ಸುತರಲಿ ಅತೀರಕ್ತಿ ತೋರಬಾರದು |

ಆಸ್ತಿ ಸಂಗ್ರಹದಲ್ಲಿ ಆಸಕ್ತಿ ಇರಬಾರದು ||

ಸ್ವಂತದ್ದೇ ಆದರೂ ಎಲ್ಲ ಬಿಟ್ಟು ಹೋಗಬೇಕು |

ಸ್ತುತಿ ನಿಂದೆಗೆ ಎಂದೂ ಒಳಗಾಗಬಾರದು ||

ಮಾತು ಬರುವುದೆಂದು ಬರೀ ವಾದಿಸಬಾರದು |

ವ್ಯರ್ಥಮಾತು ಆಡುವುದಕ್ಕಿಂತ ಮೌನವೇ ಲೇಸು ||

ಅತೀಯಾಗಿ ತಿಂದು ಅಜೀರ್ಣಮಾಡಿಕೊಳ್ಳಬಾರದು |

ನಿತ್ಯ ಹಂಗಿನ ಹುಗ್ಗಿ ಉಂಬುವುದಕ್ಕಿಂತ ಉಪವಾಸವೇ ಮೇಲು ||

ಅತ್ತು ಪರರ ಕರುಣೆ ಎಂದೂ ಪಡೆಯಬಾರದು |

ಸತ್ತರೂ ಪರರು ನೆನೆಸುವಂತೆ ಬಾಳಬೇಕು ||

ಹೆತ್ತವರ ಮನವೆಂದೂ ನೋಯಿಸಬಾರದು |

ಹತ್ತು ಹಲವು ದೈವಾರಾಧನೆ ವ್ಯರ್ಥಪೋಪುದು ||

ಕರ್ತೃ ಹೆದ್ದೈವ ಸ್ವಂತಂತ್ರನ ತಿಳಿದು ನಂಬಿರಿ |

ಅತ್ಯುತ್ತಮ ಶ್ರೀಕೃಷ್ಣವಿಠ್ಠಲನ್ನೇ ಭಜಿಸಿರಿ ||

230. ಅನುಪಮ ಮುಖ್ಯಪ್ರಾಣನ ಕಾರ್ಯಕೆ ಇಲ್ಲ ಸಮ |

ಜ್ಞಾನಕಾರ್ಯ, ಬಲಕಾರ್ಯವೆರಡೂ ಅನುಪಮ ||

ಹನುಮನಾಗಿ ಹಾರಿದ ನೂರು ಯೋಜನ ಸಾಗರ |

ದಣಿಯದೆ ಸ್ವಾಮಿಯ ಮನದಂತೆ ನಡೆದ ಭೀಮನಾಗಿ ||

ಆನಂದತೀರ್ಥರಾಗಿ ತಾರಿಸಿದರು ವೇದ ಸಾಗರ |

ಧ್ಯಾನಿಸಿ ಶ್ರೀಕೃಷ್ಣವಿಠ್ಠಲನ ಪಾದಪದುಮವ ||

ಶ್ವಾಸ ಜಪ ಜಪಿತ ಮುಖ್ಯಪ್ರಾಣ ಅಜಪಾ |

ಹಂಸವೆಂದರೆ ದೊಷರಹಿತ ಗುಣಪೂರ್ಣ ||

ಸೋSಹಂ ಎಂದರೆ ಅವ್ಯಕ್ತ-ಅಹೇಯನಾದ |

ಸ್ವಾಹಾ ಎಂದರೆ ಸ್ವಾಖ್ಯರಸ ಸ್ವೀಕರಿಪನ ||

ಬ್ರಹ್ಮ-ವಾಯು ಜಪಕೆ ಹರಿಯೇ ನಿಯಾಮಕ |

ಸಹಭೋಗ ಭಾಗಿ ಶ್ರೀಕೃಷ್ಣವಿಠ್ಠಲನ ನಿಜದೂತ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು