ಶ್ರೀ ಕೃಷ್ಣವಿಠ್ಠಲಪದಗುಚ್ಛ 3.4
232. ಇಪ್ಪತ್ತೊಂದು ಸಾವಿರ ಮೇಲೆ ನೂರು |
ಜಪಮಾಡುವ ನಾಲ್ಕು ಶರೀರಗಳಲಿ ||
ಇಪ್ಪುದ್ದು ಮೊತ್ತ ಎಂಬತ್ತಾರು ಸಾವಿರ ನಾನೂರು |
ಜಪ ಮಾಳ್ಪ ಭಕ್ತನಿಗೆ ಅನುರೂಪ ಫಲ ಬ್ರಹ್ಮಪಟ್ಟ ||
ನಿಷ್ಪಕ್ಷಪಾತಿ ಶ್ರೀಕೃಷ್ಣವಿಠ್ಠಲ ಕೊಡುವ ಸಾಲಿಗನಂತೆ ||
233. ಹದಿನಾಲ್ಕುಲೋಕದ ಅನಂತ ಜೀವರಾಶಿಗೆ |
ಎಡಬಿಡದೆ ಮಹಾ ಬ್ರಹ್ಮಕಲ್ಪಕಾಲ ಶ್ವಾಸಜಪ ||
ಮಾಡಿ ಪೂರ್ಣಭಕ್ತಿಯಲಿ ಸಮರ್ಪಿಸಲು |
ಮೊದಲ ಸ್ವಾಖ್ಯರಸಾನಂದ ಸಹಭೋಗವಿತ್ತು ||
ಒದಗಿಸುವ ಕಲ್ಪಪರ್ಯಂತ ಬ್ರಹ್ಮಪದವಿ ಫಲರೂಪದಿ |
ಇಂದಿರಾಪತಿ ಶ್ರೀಕೃಷ್ಣವಿಠ್ಠಲ ಪ್ರಸಾದಿಸುವ ಸೇವೆಗೆ ತಕ್ಕಂತೆ ||
234. ಮೋದದಿ ಚತುರ್ವಿಂಶತಿ ರೂಪದಿ ಲೀಲೆ ತೋರುವ |
ಕುಂದಿಲ್ಲದ ಒಬ್ಬನೇ ಭಗವಂತ ಅನೇಕ ನಾಮದಿ ||ಪ||
ಚೆಂದದಿ ಆನಂದಿಸಿ ನಿತ್ಯ ಆನಂದವೀವ ಯೋಗ್ಯತಾನುಸಾರದಿ ||ಅಪ||
ಮುದದಿ ಸುರರಿಗೆ ಸುಖವೀವ ಕೇಶವ ರೂಪದಿ |
ಮಡದಿ ಸಹಿತ ಶೇಷತಲ್ಪನಾಗಿರುವ ನಾರಾಯಣ ||
ಹೆಂಡತಿಗೆ ನಿತ್ಯಾಶ್ರಯನಾಗಿರುವ ನಿತ್ಯಾವಿಯೋಗಿ ಮಾಧವ |
ವೇದ, ಗೋ, ಬ್ರಾಹ್ಮಣಪ್ರಿಯ ಗೋವಿಂದ ||1||
ಎಡಬಿಡದೆ ಎಲ್ಲಡೆ ಸದಾ ವ್ಯಾಪಿಸಿರುವ ವಿಷ್ಣು |
ಮದವೇರಿದ ಅಸುರರ ದಮನಿಸಿದ ಮಧುಸೂದನ ||
ಬೇಡಿದ ದಾನ ಪಡೆಯಲು ಬೆಳೆದ ನಿಂತ ತ್ರಿವಿಕ್ರಮ |
ಸುಂದರ ಬಾಲಕ ರೂಪ ತಳೆದ ವಾಮನ ||2|||
ಎದೆಯಲ್ಲಿ ಲಕ್ಷ್ಮೀಯ ನಿತ್ಯ ಧರಿಸಿರುವ ಶ್ರೀಧರ |
ಇಂದ್ರಿಯಗಳಿಗೆ ಸದಾ ಸುಖವೀವ ಹೃಷೀಕೇಶ ||
ಪದ್ಮಪೊತ್ತ ಪೊಕ್ಕಳಲಿ ಚತುರ್ಮುಖನಿಗಾಗಿ ಪದ್ಮನಾಭ |
ಉದರಕೆ ಹಗ್ಗದಿ ಕಟ್ಟಿಸಿಕೊಂಡ ದಾಮೋದರ ||3||
ಮಾಡುವ ಸಕಲ ಜಗತ್ತಿನ ಲಯ ಸಂಕೆರ್ಷಣ |
ಸದಾ ಎಲ್ಲಡೆ ಸಂತೋಷದಿ ಕ್ರೀಡಿಸುವ ವಾಸುದೇವ ||
ಜಡ-ಜೀವಗಳ ಸೃಷ್ಷಿಸುವ ಪ್ರದ್ಯುಮ್ನ |
ಬಿಡದೆ ಪಾಲಿಪ ಲೋಕವ ಅನಿರುದ್ಧ ||4||
ಇದ್ದ ಸರ್ವಕ್ಕಿಂತ ಉತ್ತಮೋತ್ತಮ ಪುರುಷೋತ್ತಮ |
ಇಂದ್ರಿಯ ಜನ್ಯರಹಿತ ಜ್ಞಾನಿ ಯಾಗಿರುವ ಅಧೊಕ್ಷಜ ||
ತಾಂಡವನಾಡುವ ಉಂಡು ಸಕಲ ಜಗತ್ ನರಸಿಂಹ |
ಭದ್ರನಾಗಿರುವ ತನ್ನ ಸ್ಥಾನದಿ ದೋಷ ದೂರ ಅಚ್ಯುತ ||5||
ಮರ್ದನ ಗೊಳಿಸುವ ಜನನ-ಮರಣ ಚಕ್ರ ಜನಾರ್ದನ |
ಇಂದ್ರನ ಸಂಪ್ರೀತಗೊಳಿಸಿದ ತಮ್ಮನಾಗಿ ಉಪೇಂದ್ರ ||
ಬಂದ ಸಂಕಷ್ಟ ಕಳೆದು ಭಕ್ತರ ಸಲಹುವ ಶ್ರೀಹರಿ |
ಬೋಧಿಸಲು ಜ್ಞಾನ ಧರೆಗಿಳಿದ ಶ್ರೀಕೃಷ್ಣರೂಪದಿ ||6||
ಇದ್ದಷ್ಟೂ ರೂಪ, ಕ್ರಿಯೆ, ನಾಮ ತಿಳಿಯಲಾಗದು, ಹೇಳಲಾಗದು |
ಆದ್ಯನಂತ ರಹಿತನ ಮಿತ ಬುದ್ಧಿಯಲಿ ಅರಿಯಲಾಗದು ||
ಬುದ್ಧಿಗೆ ಹೊಳೆದಷ್ಟು ಯೋಗ್ಯತೆಯಲಿ ತಿಳಿಸಿರುವೆ |
ಬಿಡದೆ ನಿತ್ಯದಿ ಸ್ಮರಿಸಲು ಶ್ರೀಕೃಷ್ಣವಿಠ್ಠಲ ಪದಲೊಕವೀವ ||7||
235. ಶರ್ಕರ, ಮಧುವಿಗಿಂತ ಸವಿಯಾದ ನಾಮ |
ಭಕ್ತಿಯಲಿ ಉಸಿರಾಗಿಸಿ ನಿತ್ಯದಿ ಬಿಡದೆ ||
ಶ್ರೀಕೃಷ್ಣವಿಠ್ಠಲನಾಮ ಸದಾ ಇಷ್ಟದಿ ಭಜಿಸೆ |
ಸಕಲಾಭೀಷ್ಟ ಕೊಟ್ಟು ಪೊರೆವ ಸರ್ವತ್ರ ಸರ್ವದಾ ||
236. ಜೀವನ ಸಾರ್ಥಕ್ಯ
ಶ್ರೀಕೃಷ್ಣವಿಠ್ಠಲನ, ಸರ್ವೋತ್ತಮತ್ವ ತಿಳಿಯುವುದೊಂದು ಅಗ್ಗಳಿಕೆ |
ಶ್ರೀಕೃಷ್ಣವಿಠ್ಠಲನ ಲೀಲೆಗಳ ಬರೆಯುವುದೊಂದು ವೆಗ್ಗಳಿಕೆ ||
ಶ್ರೀಕೃಷ್ಣವಿಠ್ಠಲನ ಅವತಾರ ಉದ್ದೇಶ ತಿಳಿಯುದೊಂದು ಹೆಗ್ಗಳಿಕೆ |
ಶ್ರೀಕೃಷ್ಣವಿಠ್ಠಲನ ತಿಳಿಯಲು ಪ್ರಯತ್ನಿಸದಿರೆ ಜೀವ ತೆಗಳಿಕೆ ||
ಶ್ರೀಕೃಷ್ಣವಿಠ್ಠಲನ ತಿಳಿಯದೆ ವ್ಯರ್ಥ ಜೀವಿಸಿದರೆ ಹಳಹಳಿಕೆ |
ಶ್ರೀಕೃಷ್ಣವಿಠ್ಠಲನ ತತ್ವ ತಿಳಿದು ತಿಳಿಸದಿರೆ ಜೀವನ ಕಿಗ್ಗಳಿಕೆ ||
ಶ್ರೀಕೃಷ್ಣವಿಠ್ಠಲನ ಕೊಂಡಾಡುವುದೇ ಜೀವನ ಸಾರ್ಥಕತೆಯ ಹೊಗಳುವಿಕೆ ||
237. ಭಕ್ತಿಮಾರ್ಗದರ್ಶಿ - ಪದಗದ್ಯ
ಮಾರ್ಗ ಅನೇಕ ಭಕ್ತಿ ಮೂಡಲು, ಭಕ್ತಿ ಮುಕ್ತಿಯ ಸೋಪಾನ |
ಬರೀ ಮನದಿ ಭಕ್ತಿ ಮಾಡಿದರೆ ಸಾಲದು, ಉನ್ನತಿ ಸಾಧಿಸಿ ||
ವರ್ಜಿಸಿ ಸಂಸಾರ ಸುಖ, ತ್ಯಜಿಸಿ ಆಶೆ ಪ್ರಯತ್ನದಿ |
ಪ್ರೇರೆಪಿಸಿ, ವೃದ್ಧಿಸಲು ವ್ರತ-ನೇಮಾದಿ ಮಾಡುವ ಬುದ್ಧಿ ಬೇಕು ||
ಬರೀ ಬುದ್ಧಿ ಇದ್ದರೆ ಸಾಲದು, ಅದಕ್ಕೆ ಸತ್ಸಂಗದ ಪರಿಸರ ಬೇಕು |
ಪರಿಸರವೊಂದಿದ್ದರೆ ಸಾಲದು, ಕಣ್ಣ ಮುಂದೆ ಬಿಂಬ ಮೂರ್ತಿಬೇಕು ||
ತೆರೆದಾಗ ಕಣ್ಣು ಮುಂದೆ, ಮುಚ್ಚಿದಾಗ ಹೃದಯದೊಳಗೆ ಕಾಣುತಿರಬೇಕು |
ಬರೀ ಕಂಡರೆ ಸಾಲದು, ಅದನು ತರ ತರದಿ ವರ್ಣಿಸಬೇಕು ||
ವರ್ಣಿಸಿದರಷ್ಟೇ ಸಾಲದು, ಕುಳಿತಲ್ಲಿ ನಿಂತಲ್ಲಿ ಹೊರಗೂ ಕಾಣಬೇಕು |
ಹೊರಗೆ ಕಂಡರೆ ಸಾಲದು, ನಮಗಿಂತ ಹೆಚ್ಚು ಪ್ರೀತಿಸಬೇಕು ||
ಬರೀ ಪ್ರೀತಿಸಿದರೆ ಸಾಲದು, ವಿವಿಧ ರೂಪದಿ ವಿಧದ ವಸ್ತುಗಳಲಿ ಅನುಭವಿಸಬೇಕು |
ಬರೀ ಅನುಭವಿಸಿದರೆ ಸಾಲದು, ನಾವು ಅವನ ಅಂಶವೆಂಬ ಜ್ಞಾನಬೇಕು ||
ಸರಳ ಜ್ಞಾನವಾದರೆ ಸಾಲದು, ವಿರಳ ವಿಜ್ಞಾನ-ಸುಜ್ಞಾನ ಬರಬೇಕು |
ಬರೀ ವಿಜ್ಞಾನವಾದರೆ ಸಾಲದು, ಅವನ ಅನಂತ ಗುಣ ತಿಳಿದು ಭಜಿಸಬೇಕು ||
ಬರೀ ಒಮ್ಮೆ ಭಜಿಸಿದರೆ ಸಾಲದು, ಉಸಿರಿನಂತೆ ಸದಾ ಧರಿಸಬೇಕು |
ಬೇರೆ ಬೇರೆ ಗುಣಗಳನ್ನು ತಿಳಿದು ಆನಂದೋದ್ರೇಕದಿಂದ ಮೈಮರೆಯಬೇಕು ||
ಸ್ಮರಿಸಿ ಒಂದರೊಳನಂತ ರೂಪ, ನಾಮ, ಕ್ರಿಯೆ ಸದಾ ಸುಖಿಸಬೇಕು |
ಪರೋಪಕಾರಿ ನಿಸ್ಸೀಮ ನಿರವಧಿಕ, ನಿರುಪಮ, ಶ್ರೇಷ್ಠತಮ ||
ಶ್ರೀಕೃಷ್ಣವಿಠ್ಠಲ ಆತ್ಮಬಂಧು ದಯದಿ ದು:ಖ ಕಳೆದು ನಿತ್ಯ-ಸುಖವೀವ ||
238. ಹೊಂಗಿರಣದ ಹೊಂಬೆಳಕಲಿ ಹೊಂಗೊಳಲು ಊದಲು |
ಬಗೆ ಬಗೆಯ ಪಕ್ಷಿಗಳ ಕೂಜರ ಮೆಳೈಸಿತು ||ಪ||
ನಿಮಿಲ ನೇತ್ರನು ಹೊಂಬಿಸಿಲ ಅಹ್ಲಾದಕರ |
ಸುಮನದಿ ಸವಿಯುತ್ತಾ ನಾದದಿ ತಲ್ಲಿನನಾದ ||
ಸುಮಧು ಸವಿಯುವುದು ಮರೆತಿತ್ತು ದುಂಬಿ |
ಮೈಮನ ತೂಗಿದಂತೆ ಗಿಡ ಬಳ್ಳಿಗಳು ಓಲಾಡುತ್ತಿದ್ದವು ||1||
ಗೋಗಳು ಕಿವಿ ನಿಮಿರಿಸಿ ಬಾಲವನ್ನೆತ್ತಿ |
ಲಗು ಬಗೆಯಲಿ ಧಾವಿಸಿ ಓಡಿ ಬಂದವು ||
ಭೋರ್ಗೆರವ ನದಿ ಶಾಂತತೆಯಲಿ ಹರಿಯಿತು |
ಸುಗಂಧ ಪೂರಿತ ಶೀತಲಗಾಳಿ ಮಂದವಾಗಿ ಬೀಸುತ್ತಿತ್ತು ||2||
ಆಲಿಸಿ ಕೊಳಲದನಿ ಮರೆತು ದೇಹಭಾನ |
ಅಲ್ಲಿ ಓಡಿ ಬಂದ ರಾಧೇಯ ಬಿಸಿಯುಸಿರಿನ ||
ತಾಳಕೆ ಸರಿಯಾಗಿ ಕುಚಗಳು ಕುಣಿಯುತ್ತಿತ್ತು |
ಹೊಳೆಯುತಿತ್ತು ಬೆವರ ಹನಿ ಹಣೆಯಲಿ ಮುತ್ತಿನಂತೆ ||3||
ಪಕ್ಕ ಕೆದರಿದ ನವಿಲಿನಂತೆ ಮನದಣೆಯ ನರ್ತಿಸಿದಾಗ |
ಶಿಖೆಗೆ ಕಟ್ಟಿದ ಪೂಮಾಲೆ ಬಿಚ್ಚಿ ಉದರಿದವು ||
ಹಾಕಲು ಹೆಚ್ಚೆ ನೂಪುರದ ಗೆಜ್ಜೆ ಚೆಲ್ಲಾಡಿದವು |
ಸಖನ ಪಕ್ಕಕೆ ಕುಳಿತು ಕಣ್ಮಚ್ಚಿ ಆನಂದಿಸಿದಳು ||4||
ಪ್ರಕೃತಿ ಎಲ್ಲಡೆ ನಿನಾದ ಅಲೆ ಪಸರಿಸಿತ್ತು |
ಪರಿಸರದ ಅರಿವಿಲ್ಲದಂತೆ ತನ್ಮಯನಾಗಿದ್ದ ||
ಪರಮಾತ್ಮ ತನ್ನನ್ನೆ ಮರೆತು ಮೇರುಗಿರಿಯಾಗಿದ್ದ |
ಶ್ರೀಕೃಷ್ಣವಿಠ್ಠಲ ಪರವಶನಾದ ದೃಶ್ಯ ಅಪೂರ್ವವಾಗಿತ್ತು ||5||
239 ಅಬ್ಬಾ | ಎಂಥಾ ಸಾಹಸವಂತ ಈ ಪೋರ |
ಒಬ್ಬನೇ ಎಂತೆಂತಹ ಸಾಹಸ ಮಾಡಿದ ||ಪ||
ಅಂಜುವನಲ್ಲ ಯಾವುದಕೂ, ಕಂಜನಾಭ ಅಂಜದಗಂಡು ||ಅಪ||
ಪ್ರಳಯಾಂತಕ ಜಲದಿ ಶಿಶುವಾಗಿ ಮಲಗಿ |
ಕಾಲ್ಬೆರಳು ಬಾಯಲ್ಲಿಟ್ಟು ಎಲೆ ಮೇಲೆ ತೇಲಿದ ||
ಮಲಗಿದ್ದ ಶೇಷ ಶಯನನು ಯೋಗ ನಿದ್ರೇಲಿ |
ಕಾಲ ತಾನಾಗಿ, ಕಲ್ಪಕೃತ ಭಯ ರಹಿತ ||1||
ಮತ್ಸ ತಾನಾಗಿ ನಾಮೆ ಪಿಡಿದು ಏಳುದಿನ ತೇಲಿದ |
ಸತ್ಯವಂತ ರಾಜನ ಉಳುಹಿದ ಸಂಪದ ಸಹಿತ ||
ಮಂಥನ ಸಮಯದಿ ಮಂದರ ಪೊತ್ತ |
ಮತ್ತೆ ಪ್ರವೇಶಿಸಿ ಸಕಲದರಲ್ಲಿ ಅಮೃತವಿತ್ತ ||2||
ಕಕ್ಷೆಯಲಿ ಪೃಥ್ವಿ ಕಳಚಿ ನೀರಲಿ ಬೀಳಲು |
ವೀಕ್ಷಿಸಿ ವರಾಹ ತಂದಿಟ್ಟ ಸ್ವಸ್ಥಾನದಿ ||
ರಾಕ್ಷಸ ಹಿರಣ್ಯಾಕ್ಷ ಮತ್ತೆ ಕದ್ದೊಯ್ಯಲು |
ತಕ್ಷಣವೇ ಸಂಹರಿಸಿ ದಾಡೆಯಲ್ಲಿಟ್ಟು ರಕ್ಷಿಸಿದ ||3||
ಭಕ್ತಿಯಲಿ ಬಾಲಕ ಪ್ರಾರ್ಥಿಸೆ ಜಲದ ಬಾಧೆ ತಡೆದ |
ಭಕ್ತಿಯಲಿ ಜಲವಿತ್ತು ಸಂಕಲ್ಪಿಸಿದವನ ಉದ್ಧರಿಸಿದ ||
ಲೋಕದಿ ಸುರಗಂಗೆ ಹರಿಸಿ ಪಾವನ ಗೊಳಿಸಿದ |
ರಕ್ತವ ಜಲದಂತೆ ಹರಿಸಿ ದುಷ್ಟ ಕ್ಷತ್ರಿಯರ ತರಿದ ||4||
ವಾರ್ತೆಕಳುಹಿದರೂ ಕಡಲರಾಜ ಅಲಕ್ಷಿಸಿಲು |
ಬತ್ತಿಸುವೆ ಜಲವೆಂದು ಧನುರ್ಧಾರಿಯಾದ ಕೋಪದಿ ||
ತತ್ತರಿಸಿ ಭಯದಿ ಮುತ್ತು ಮಾಣಿಕ್ಯದ ಆತಿಥ್ಯವಿತ್ತ |
ಸೇತು ಬಂಧಿಸಿ ಸಾಗರದಿ, ರಾಕ್ಷಸರ ಶಿರ ತರಿದ ||5||
ಶಿಶುವಾಗಿ ಪುಟ್ಟಿ ಭೋರ್ಗೆರೆವ ಯಮುನೆ ದಾಟಿದ |
ವಿಷಯುಕ್ತ ಕಾಲೀಯ ಹೆಡೆಮೇಲೆ ನರ್ತಿಸಿದ ||
ಶೇಷ ಬಂಧನ ಬಿಡಿಸಿ ನಂದನ ಕರೆತಂದ |
ವಿಶೇಷ ವಿಶಿಷ್ಠನಿವ ಸಕಲರಿಗೂ ಪ್ರೀತಿ ಪಾತ್ರ ||6||
ಸುರಿವ ಮುಸಲಧಾರೆಯಲಿ ನಲಗಲು ಎಲ್ಲ |
ಕಿರುಬೆರಳಲಿ ಗೊವರ್ಧನ ಪಿಡಿದೆತ್ತಿ ಏಳು ದಿನ ||
ಗೋವೃಂದ, ಯಾದವರೆಲ್ಲರ ಸದಾ ರಕ್ಷಿಸಿದ |
ಶರನ್ನವ ರಾತ್ರಿ ಯಮುನೆ ತೀರದಿ ರಾಸ ರಚಿಸಿದ ||7||
ಮಗನನ್ನೇ ಬದುಕಿಸಿ ಗುರುದಕ್ಷಿಣೆ ಕೊಡೆನಲು |
ಸಾಗರದಡಿಯಲ್ಲಿ ಗುರುಪುತ್ರನ ಹುಡುಕಲು ||
ತೆಗೆದು ಪಾಂಚಜನ್ಯ ಶಂಖ ತಾನೇ ಧರಿಸಿದ |
ಬಗೆ ಬಗೆಯ ಲೀಲೆಗಳ ಜಲದಿ ಮಾಡಿದ ||8||
ಜಲದಂತೆ ನಿರ್ಮಲ ಪವಿತ್ರವಾದ ವೇದಗಳನು |
ಉಳುಹಲು ದುರ್ಮಾರ್ಗ ಬೋಧಿಸಿದ ಬುದ್ಧನಾಗಿ ||
ಕಲ್ಕಿಯಾಗಿ ಕುದುರೆಯನೇರಿ ಬರುವ |
ಕಲಿಯ ಬಾಧೆ ತಪ್ಪಿಸಿ ಪಾಪ ಕಳೆವ ನಾರಾಯಣ ||9||
ಜಲ, ನೆಲ, ಗಾಳಿ, ಆಹಾರ ಸಕಲದಲ್ಲಿ ವ್ಯಾಪ್ತ |
ಶ್ರೀಲಕ್ಷ್ಮೀನಲ್ಲ ನಿತ್ಯಾವಿಯೋಗಿಯ ಕರಪಿಡಿದು ||
ಅಳಿಯನಾದ ಸಮುದ್ರ ರಾಜನಿಗೆ ಶೋಭಾನೆ |
ಲೀಲೆಗಳ ಕೊಂಡಾಡಲು ನಿತ್ಯ ಸುಖವೀವ ಶ್ರೀಕೃಷ್ಣವಿಠ್ಠಲ ||10||
240. ಮಾತು ನೀನೆ, ಮೌನ ನೀನೇ |
ದಾತಾ ನೀನೇ, ಪಡೆವವ ನೀನೇ ||
ಶಾಂತ ನೀನೇ, ರೌದ್ರ ನೀನೇ |
ಭಕ್ತರ ಹಿಂಬಾಲಕ ನೀನೇ, ಮಾರ್ಗದರ್ಶಿ ನೀನೇ ||
ಅಂತರಂಗದಲ್ಲೂ ನೀನೇ, ಬಹಿರಂಗದಲ್ಲೂ ನೀನೇ |
ಪತಿ ನೀನೇ, ಮತಿ ನೀನೇ ||
ಸತ್ಯ ನೀನೇ ನಿತ್ಯ ನೀನೇ |
ಆತ್ಮ ನೀನೇ ಶ್ರೀಕೃಷ್ಣವಿಠ್ಠಲ ನಿನ್ನಬಿಟ್ಟಿರನ್ಯರಿಲ್ಲ ||
241. ಬಂಗಾರ ವರ್ಣದ ಗಂಗಾಜನಕನೇ |
ಸಂಗ ಬಿಡಿಸಿ ಮಂಗ ಬುದ್ಧಿಯ ||
ಭಂಗವಾಗದೆ ಕಂಗೊಳಿಸುವಂತ |
ಹಿಂಗದಂತಹ ಸೌಭಾಗ್ಯ ನನ್ನದಾಗಲಿ ಶ್ರೀಕೃಷ್ಣವಿಠ್ಠಲ ||
242. ಒಳಗೆ ಹೀನ ಬುದ್ಧಿ, ಮೇಗಣ ಸುಂದರ ಹೊದಿಕೆ |
ಹೊಲಸಿನ ಹೊಂಡ, ದುರ್ಗಂಧದ ಬೀಡು ||
ಕೀಳು ಸ್ವಾರ್ಥದ ಗೂಡು, ಹಿಂಗದಾಸೆಯ ಕೊಂಡ |(ಬೆಟ್ಟ)
ಕಾಲು ಜಾರಿದೆ ಪ್ರಪಾತಕೆ, ಜಗಪತಿ ಶ್ರೀಕೃಷ್ಣವಿಠ್ಠಲ ಕಾಯೋ ||
243. ತಾ ಸೃಷ್ಟಿಸಿದ ಸಕಲ ಜೀವರಾಶಿ ಪೊರೆವ |
ವರಾವರನು ಅವರಂತೆಯೇ ಇಟ್ಟು ವೀಕ್ಷಿಸುವ ||
ಸರ್ವರಿಗೂ ಅಲ್ಲಲ್ಲೇ ಉಸಿರು-ಆಹಾರವಿತ್ತು ರಕ್ಷಿಸುವ |
ಸರ್ವರೊಳಗಿದ್ದು ಸರ್ವಕಾರ್ಯಮಾಡಿಸಿ ಫಲವೀವ ||
ತೋರನು ಬಾಹ್ಯದಿ, ತೋರಿಕೊಳ್ಳುವ ಕ್ರಿಯೆಯೊಳಗೆ |
ಕರುಣಾಳು ಶ್ರೀಕೃಷ್ಣವಿಠ್ಠಲ ಎಂದಿಗೂ ಯಾರನೂ ಮರೆಯನು ||
=
244. ಅಮ್ಮಾ , ಲಕುಮಿ ನಿನ್ನ ನಲ್ಲಗೆ ಪೇಳೆ |
ಒಮ್ಮೇ ಎನ್ನ ಕರುಣೆಯಲಿ ನೋಡೆಂದು ||ಪ||
ಸಮಸ್ತ ಜಗದೊಡೆಯ ಬಿಡುವಿನಿಂದೆನ್ನ ನೊಡೆಂದು ||ಅಪ||
ದೊಡ್ಡ ವಿಶ್ವದಲ್ಲಿಯ ಚಿಕ್ಕ ಹುಳು ನಾನು |
ಕಡೆಗಾಣಿಸದೆ ಎನ್ನ ಕೈ ಪಿಡಿದು ನಡೆಸೆಂದು ||
ಕಡಲ ನೀರಿನ ಹನಿ ಬಿಂದು ನಾನು |
ಒಡಲೊಳಗೆ ತಪ್ಪೆಲ್ಲಾ ಮುಚ್ಚಿ ಮನ್ನಿಸೆಂದು ||1||
ನೆಲಸಲು ನೆಲ, ಬದುಕಲು ಅವಕಾಶ |
ಒಲವಿಂದ ಕಾಲಕಾಲಕೆ ಆಹಾರವಿತ್ತು ||
ಎಲ್ಲ ಕಷ್ಟ ಕಳೆದು ಸುಖವಿತ್ತು |
ಸಲುಹಿ ಸತತ ಸ್ವಾಮಿ ದಯೆ ಸೂಸಲೆಂದು ||2||
ಸಂಸಾರ ಸಾಗರದಿ ಈಜಲು ಬಾರದೆ |
ಸಂಸಾರದಿ ಜೀವನ ಕಳೆವಂತೆ ಆಗಲೆಂದು ||
ಹೇಸಿಗೆಯಲಿ ದಿನ ಕಳೆಯದಂತೆ ಅನುಗ್ರಹಿಸಿ |
ಆಸೆ-ನಿರಾಸೆ, ಬಂಧನ ಬಿಡಿಸೆಂದು ಶ್ರೀಕೃಷ್ಣವಿಠ್ಠಲನಲಿ ಪೇಳು ||3||
=
245. ಹಂತ ಹಂತದಲ್ಲೂ ಬಿಡದೆ ಕಾಯ್ವನು ಮಾಡಿದ ತ್ಯಾಗದ ಲೆಕ್ಕವೇನು |
ಪ್ರತಿ ವಸ್ತುವಿನಲ್ಲಿದ್ದು, ಪ್ರತಿ ಕ್ಷಣದಿ, ಪ್ರತಿಕ್ರಿಯೆಯಲಿ ಸ್ಪಂದಿಸುವವನ ಕಾಣದಾದೆ ||ಅಪ||
ತಾಯ್ತಂದೆಯರ ಕೊಟ್ಟೆ, ಬಂಧು-ಬಾಂಧವರನ್ನಿತ್ತೆ |
ಹೊತ್ತು ಹೊತ್ತಿಗೆ ಹೊಟ್ಟೆ ತುಂಬಿಸಿ ಸಂತೋಷವಿತ್ತೆ ||
ಅತಿಶಯ ಪ್ರೇಮ, ಅಪಾರ ಕರುಣೆಯಲಿ ತೋಯಿಸಿದೆ |
ಹಿತದ ದೃಷ್ಟಿಯಲಿ ಆಸೆ-ನಿರಾಸೆಯಿತ್ತು ಸಲುಹಿದೆ ||1||
ಆಕಾರವಿಲ್ಲದ ಕಣಕ್ಕೆ ಸಕಾಲದಿ ಆಕಾರ ಕೊಟ್ಟು ಕಾಪಾಡಿದೆ |
ಚಿಕ್ಕ ಮಾಂಸದ ಮುದ್ದೆಗೆ ಕಣ್ಣು, ಮೂಗು, ಕೈಕಾಲು ಕೆತ್ತಿದೆ ||
ಚೊಕ್ಕದಾಗಿ ಚಿಕ್ಕ ಪ್ರದೇಶದಿ ಅನ್ನಾಹಾರ, ಉಸಿರು ಇತ್ತೆ |
ನೀ ಕೊಟ್ಟರೂಪ, ಬುದ್ಧಿ, ದೃಷ್ಟಿ, ಮನಸಲಿ ಮೈಮರೆತೆ ||2||
ಬರುತಲೆ ಎಲ್ಲ ಕಡೆನೋಡಿದೆ ಎಲ್ಲವೂ ನನದೆಂದೆ |
ಹೆರವರ ಸಂತೋಷ ಸಹಿಸದೆ ಅಮಿತ ಶೋಕ ತಳೆದೆ ||
ಯಾರಿಗೂ ನೆರವೂ ನೀಡದೆ ಸಕಲವೂ ನನಗಾಗಿ ಇರುವುದೆಂದೆ |
ಬರೀ ಒಣ ಜಂಭದಿ ಕಾಲ ಕಳೆಯುತ ಕಾಲವ ಅರಿಯದಾದೆ ||3||
ನೀನೆನಗೆ ದಯದಿ ಇತ್ತ ಅನ್ನ-ವಸ್ತ್ರ, ಧನ-ಕನಕವ |
ನಾನೇ ಪರರಿಗೆ ದಾನಿಸಿ ಅಹಂಭಾವದಿ ಹೆಮ್ಮೆ ಪಟ್ಟೆ ||
ನಾನು, ನನ್ನದು, ನನಗಾಗಿ ಎಂಬ ಮಂತ್ರಜಪದಿ ಮುಳುಗಿದೆ |
ಮನ ಮಥಿಸಿ, ಅಂತ:ಶುದ್ಧಿಗಾಗಿ ಎಂದೂ ಪ್ರಯತ್ನಿಸಲಿಲ್ಲ ||4||
ಭಕ್ತರಿಗಾಗಿ ಮೀನಾದೆ, ಭಕ್ತರಿಗಾಗಿ ಆಮೆಯಾದೆ |
ಭಕ್ತರಿಗಾಗಿ ಹೆಣ್ಣಿನ ರೂಪ ಹೊತ್ತೆ, ಭಕ್ತರಿಗಾಗಿ ಭಿಕ್ಷೆ ಬೇಡಿದೆ ||
ಭಕ್ತರಿಗಾಗಿ ಸ್ತಂಭದಿಂದ ಬಂದೆ, ಭಕ್ತರಿಗಾಗಿ ಬೆತ್ತಲೆನಿಂತೆ |
ಭಕ್ತರಿಗಾಗಿ ವಿಶ್ವರೂಪ ತೋರಿದೆ, ಭಕ್ತರನು ಹಗಲಿರುಳು ರಕ್ಷಿಸಿದೆ ||5||
ತಿಳಿಯದೆ ನಿನ್ನ ತ್ಯಾಗ, ಅರಿಯದೆ ಜೀವನಧ್ಯೇಯ |
ಬಳಸಿದೆ ಸಕಲ ಸೌಭಾಗ್ಯ ನಿನ್ನುಪಕಾರ ಸ್ಮರಿಸಿದೆ ||
ತಿಳುವಳಿಕೆ ಹೆಚ್ಚಿ ಜ್ಞಾನ ಪಡೆವ ಜನ್ಮವ ವ್ಯರ್ಥ ಕಳೆದೆ |
ಎಲ್ಲ ಬಲ್ಲ ಶ್ರೀಕೃಷ್ಣವಿಠ್ಠಲ ಕೃತಘ್ನಳ ಕ್ಷಮಿಸೆಯಾ ||6||
246. ಬ್ರಹ್ಮಾಂಡದ ಪ್ರತಿ ವಸ್ತುವಿನಲ್ಲಿದ್ದು ವ್ಯಾಪಕದಿ ಬಾಹ್ಯಕ್ರಿಯೆ ಮಾಳ್ಪ |
ಪಿಂಡಾಂಡದ ಪ್ರತಿ ಕಣದಲ್ಲಿದ್ದು ಪ್ರತಿಕ್ಷಣ ನಡೆವ ಕ್ರಿಯೆಯ ಮೂಲ ||
ಪಡೆದು ಬಂದಷ್ಟು ಸುಖ-ದು:ಖ ಪ್ರತಿ ಜೀವಿಗೆ ಬಿಡದೆ ಕೊಡುವ |
ಗಂಡರ ಗಂಡ ಶ್ರೀಕೃಷ್ಣವಿಠ್ಠಲ ಸರ್ವರ ಸದಿಚ್ಛೆ ಪೂರೈಸುವ ||
247. ಕಾಣುವ ಒಂದೊಂದು ಕ್ರಿಯೆಯಲಿ ಅನೇಕ ಕ್ರಿಯೆಗಳಡಗಿವೆ |
ಸಣ್ಣದಿರಲಿ, ದೊಡ್ಡದಿರಲಿ ಮುಂದನೇಕ ಕ್ರಿಯೆಗೆ ರಂಗಮಂಚ ||
ಜ್ಞಾನ-ಇಚ್ಛೆಯು ಕ್ರಿಯೆಗೆ ಮೂಲವಾದರೂ ಪ್ರಯತ್ನಬೇಕು |
ಚಿನ್ಮಯ ಶ್ರೀಕೃಷ್ಣವಿಠ್ಠಲನ ಅನುಗ್ರಹ ಮೊದಲಿರಬೇಕು ||
248. ಗುರು-ಹಿರಿಯರ ವಾಕ್ಯ ಪರಿಪಾಲನೆಯಲ್ಲಿ ಶ್ರದ್ಧೆ |
ಗುರುನಿಂದೆಯ ಪಾಪ ವಜ್ರಲೇಪದಂತೆ ||
ನಿರ್ವ್ಯಾಜ್ಯ, ನಿರ್ಮಲ ಮನದಿ ಗುರುಸೇವೆ ಯಶಕೆ ಕಾರಣ |
ಗುರು ಕರುಣೆಗೆ ಪಾತ್ರರಾದವರು ಹರಿಗೆ ಪ್ರಿಯರು ||
ಗುರ್ವಾಂತರ್ಗತ ಜಗದ್ಗುರು ಶ್ರೀಕೃಷ್ಣವಿಠ್ಠಲ ಒಲಿವ ||
249. ದುಷ್ಟ ಜನರ ಸಹವಾಸ ಯಾರೂ ಬಯಸರು |
ಕಷ್ಟ, ದುಖ:ಗಳ ಯಾರು ಇಷ್ಟ ಪಡರು ||
ನಷ್ಟವಾಗಲಿ, ಲಾಭವಾಗಲಿ ಹರಿಪ್ರಸಾದವೆಂದು |
ನಿಷ್ಠೆಯಲಿ ಸ್ವೀಕರಿಸಿ ಶಾಂತನಾಗಿದ್ದರೆ ||
ಚೇಷ್ಟಾನಾಮಕ ಶ್ರೀಕೃಷ್ಣವಿಠ್ಠಲ ತೇಲಿಸುವ ||
250. ಅನಾದಿಕಾಲೀನ ಧರ್ಮಸುಳ್ಳೇ |
ಅನಂತಕಾಲದ ವೇದ ಸುಳ್ಳೇ ||
ಆನಂದ, ಜ್ಞಾನಸ್ವರೂಪ ದೇವ ಸುಳ್ಳೆ |
ಸನಾತನ ಸತ್ಸಂಪ್ರದಾಯ ಸುಳ್ಳೆ ||
ಅನುಭವಿಸುವ ಜಗತ್ತು ಸುಳ್ಳೆ |
ಭಿನ್ನಾಭಿನ್ನ ಕಾಣುವ ವಸ್ತು ಸುಳ್ಳೇ ||
ಅನನ್ಯ ಶ್ರೀಕೃಷ್ಣವಿಠ್ಠನಾಣೆಗೂ ಸರ್ವವೂ ನಿತ್ಯಸತ್ಯ ||
251. ಹೆಂಗೇ ಇಟ್ಟರೂ ಸರಿಯೇ ಹರಿಯೇ ಹೀಗ್ಹೆಂಗೆಂದು ಕೇಳೆನು ||ಪ||
ಹಂಗಾದರೂ ಇಡು, ಹಿಂಗಾದರೂ ಇಡು ನಿನ್ನ ಕೃಪೆಯಿರಲಿ ||ಅಪ||
ಅನ್ನವಾದರೂ ಇಕ್ಕು, ಉಪವಾಸವಾದರೂ ಕುಕ್ಕು |
ನನ್ನೀ ಮಾತಾದರೂ ಸರಿಯೇ, ಹೀಗೆಳೆದರೂ ಸೈ ||
ಕುನ್ನಿಯಂತೆ ತುಚ್ಛಮಾಡಿದರೂ, ಏನೂ ಅನ್ನೆನು |
ಮಾನ್ಯದ: ನೀನು, ಮಾನಾಪಮಾನ ನಿನ್ನದಲ್ಲವೆ ? ||1||
ವೃದ್ಧಿಸುವ ಹ್ರಾಸವರ್ಜಿತ ಭಕ್ತಿಯನ್ನೇ ನೀಡು |
ಒಂದೇಮನದಿ ನಿರುತ ನೆನೆವಂತೆ ಮಾಡು ||
ಇಂದು, ಮುಂದಿನ ಕರ್ಮಗಳೀಗಲೆ ಅರ್ಪಿಸುವೆ |
ತಂದೆ, ಶ್ರೀಕೃಷ್ಣವಿಠ್ಠಲ ಸ್ವೀಕರಿಸಿ ಉದ್ಧರಿಸೋ ||2||
252. ಕಾಣದು ಪುಷ್ಪದೊಳಗಿನ ಸುಗಂಧ |
ಕಾಣದು ಫಲದೊಳಗಿನ ರುಚಿ ||
ಕಾಣದೂ ಪಾಲಿನೊಳಗಿನ ಘೃತ |
ಕಾಣದು ಕಾಷ್ಟದೊಳಗಿನ ಅಗ್ನಿ ||
ಕಾಣದ ದೈವದಲಿ ನಿರ್ಮಲ ಭಕ್ತಿಮಾಡೆ |
ಕಾಣದ ಹೃದ್ಗುಹಾವಾಸಿ ಒಲಿದು ಅನುಗ್ರಹೀಪ ||
ಜಾಣ ಪ್ರಾಣನಾಮಕ ಶ್ರೀಕೃಷ್ಣವಿಠ್ಠಲ ||
253. ಪುಟ್ಟಿಸುವವ, ಪಾಲಿಸುವವ, ಲಯಿಸುವವ ನೀನೇ |
ಗಟ್ಟಿಯಾಗಿ ಶೃಂಖಲೆಗಳ ಕ್ರಿಯೆ ಘಟಿಸುವನೇ ||ಪ||
ಬಟ್ಟಿನಲಿ ಕುಣಿಸಿ ಹೊಣೆಮಾತ್ರ ಜೀವಿಗೇಕೆ ||ಅಪ||
ಎಂಬತ್ನಾಲ್ಕು ಲಕ್ಷಯೋನಿಗಳಲಿ ಪುಟ್ಟಿದ ಜೀವಿಗೆ |
ಉಂಬುವಂತೆ ಮಾಡಿ ಅವರವರ ಪಾಪ-ಪುಣ್ಯಫಲ ||
ಕಾಂಬದಂತಿದ್ದು ಹೇಗೆ ತಕ್ಕ ಸಾಧನೆ ಮಾಡಿಸುವಿ ? |
ಸಂಬಳದ ಪ್ರತಿಫಲಾಶೆ ರಹಿತ ಎಲ್ಲರ ಲೆಕ್ಕ ಹೇಗೆ ಇಡುವಿ ? ||1||
ಬದ್ಧ ದ್ವೇಷಿಗಳ, ಸಿದ್ದ ಪುರುಷರ ಸಲಹುವವನೆ |
ಶುದ್ಧಾತ್ಮರ, ಸುರಾಸುರರ ಸರ್ವರ ನಡೆಸುವವನೆ ||
ಬಂಧನದಲ್ಲಿ ಹಾಕಿ ಸಿಕ್ಕು ಬಿಡಿಸುವವನೆ |
ಕ್ರೋಧರಹಿತ ಬುದ್ಧಿವಂತನೇ ಹೇಗೆ ಮಾಡುವಿ ? ||2||
ಪುಟ್ಟುವುದಕ್ಕೆ ಮುನ್ನ ತಕ್ಕ ಜನ್ಮವಿತ್ತು |
ಕಟ್ಟಿಹಾಕಿ ಸರ್ವರ ವಿವಿಧ ಮಾಯೆಗಳಲಿ ||
ಒಟ್ಟಿನಲಿ ತನ್ನಗುರಿ ಮರೆತು ಜೀವಿಸಿ |
ಚಟ್ಟ ನೆದ್ದು ಹೋಗುವರು ಶ್ರೀಕೃಷ್ಣವಿಠ್ಠಲನ ಸ್ಮರಿಸದೆ ||3||
254.. ಒಂದೇ ಪದಕೆ ಅರ್ಥ ಬೇರೆ ಬೇರೆ ||ಪ||
ಒಂದೇ ಭಾವ, ಒಂದೇರಾಗ, ಒಂದೇ ತಾಳ ||ಪ||
ಒಂದೇ ನುಡಿ ಆದರೂ ಅರ್ಥ ಹಲವು |
ಕೆದಕುತ್ತಾ ಹೋದಂತೆ ಅನೇಕಾರ್ಥಗಳು ||
ಸಂದರ್ಭ ಸಮಯ ಬೇರಾದಂತೆ ಅರ್ಥಬೇರೆ |
ಇದಕೆ ದೊರಕುವ ಪ್ರತಿಕ್ರಿಯೆ ಬೇರೆ ಬೇರೆ |||1||
ಪದ ಹೊರಡಿಸಿ ನುಡಿಸುವವ ನೀನೇ |
ಪದ ಶಬ್ದದಲಿ ಕೇಳಿಸುವವ ನೀನೆ ||
ಪದದ ವಿವರ ವಿಚಾರ ತಿಳಿಸುವವ ನೀನೆ |
ಆದರೂ ಅದರ ಅರ್ಥಗಳನೇಕ ಏಕೆ ? ||2||
ಪದ ಪ್ರತಿ ಪದದಲ್ಲೂ ನೀನೇ ಇರುವಿ |
ಆದ ಅನಂತವತಾರದಂತೆ ಅರ್ಥವೂ ಅನಂತ ||
ಆದ್ಯನು ಅನಂತ ಬಗೆಯಲಿ ತೋರ್ಪ |
ಶಬ್ದಾತೀತ ಶ್ರೀಕೃಷ್ಣವಿಠ್ಠಲನ ನಿರ್ದಿಷ್ಟದಿ ಅರ್ಥೈಸುವುದು ಹೇಗೆ ? ||3||
255. ಕೋದಂಡಪಾಣಿ ಪುರುಷೋತ್ತಮನೇ |
ಬದುಕಲಹುದೇ ನಿನ್ನ ಪದಕಮಲ ತೊರೆದು ||ಪ||
ಉದ್ಧರಿಸಿದೆ ಬಾಲೆಯ, ಪಾದ ಶಿಲೆಯ ಮೇಲಿಟ್ಟು |
ವಧಿಸಿದೆ ವಾಲಿಯ, ಸುಗ್ರೀವಗೆ ಸ್ನೇಹ ಹಸ್ತವಿತ್ತು ||
ಕೊಂದು ಅಸುರರ ಋಷಿಗಳಿಗೆ ಅಭಯವಿತ್ತೆ |
ಮಂದಿ ಮಾತಿಗೆ ಸತಿಯ ತೊರೆದು ಮಾನ್ಯವಿತ್ತೆ ||1||
ಅಂಬುದಾಟಿ ಮಾತೆಗೆ ಅಂಗುಲೀಯಕವಿತ್ತ |
ನಂಬಿದ ಬಂಟಗೆ ಸ್ವಾತ್ಮ, ಸಹಭೋಗವಿತ್ತೆ ||
ಜಂಬೂ ವಾನರ ಸೈನ್ಯಜೊತೆ ರಾವಣನ ಸಂಹರಿಸಿದೆ |
ಇಂಬುವರಿತ ಸ್ವಯಂಭೂ ಶ್ರೀಕೃಷ್ಣವಿಠ್ಠಲ ಕರುಣಿಸು ||2||
256. ರಮ್ಯ ಅಂಡಾಕಾರದ ಬ್ರಹ್ಮಾಂಡದಿ ಎಲ್ಲರಿಗೂ |
ತಮ್ಮ ನಾಡಿ ಮಿಡಿತ ಇರುವರೆಗೂ ಜೀವನ ||
ತಮ್ಮ ಬದುಕಿಗೆ ತಾವೇ ಉಸಿರಾಡಿಸಬೇಕು |
ತಮ್ಮ ಸೊಂಡಿಯಿಂದಲೇ ನೀರು ಕುಡಿಯಬೇಕು ||
ತಮ್ಮ ಕುಂಡಿ ಊರಿಯೇ ಕೂಡಬೇಕು |
ತಮ್ಮ ಮಂಡೆ ಮೇಲೆ ದಂಡೆ ಮುಡಿಯಬೇಕು ||
ತಮ್ಮ ಗಂಡನ ಸೇವೆಯೇ ಸಂಸಾರದ ಸುಖ |
ನಮ್ಯ ಗಾಡಿಕಾರ ಶ್ರೀಕೃಷ್ಣವಿಠ್ಠಲನ ಮುಂದೇನು ಆಢ್ಯತೆ ? ||
257. ಕ್ಷಿರಸಾಗರದಿ ಶೇಷಶಾಯಿಯಾದ ನಾರಾಯಣನೇ |
ಸರ್ವರ ರಕ್ಷಿಸಲು ಎತ್ತಿದನೇಕ ರೂಪಗಳ ಕಾಲಕಾಲಕೆ ||
ಕರಿಯಕಾಲ ಮಕರನಿಂದ ಬಿಡಿಸಿದ ಶ್ರೀಹರಿ |
ಅಮೃತಕಲಶಧಾರಿ ಸರ್ವೇಷ್ಟಪ್ರದಾಯಕ ಧನ್ವಂತರಿ ||
ಮಾತೃಗೆ ತತ್ವೋಪದೇಶದಿ ಸದ್ಗತಿ ಇತ್ತ ಕಪಿಲ |
ಅರಸು ಸತ್ಯವ್ರತಗೆ ಧರ್ಮಬೋಧಿಸಿದ ಮತ್ಸ್ಯ ||
ನೀರಲಿ ಮುಳುಗುವ ಮಂದರ ಪೊತ್ತ ಕೂರ್ಮ |
ಹಿರಣ್ಯಾಕ್ಷನ ವಧಿಸಿ ಧರೆಯನ್ನುಳುಹಿದ ವರಾಹ ||
ಹಿರಣ್ಯಕನ ಕೊಂದು ಪ್ರಹ್ಲಾದಗೆ ವರವಿತ್ತ ನರಹರಿ |
ಇಂದ್ರಗೆ ಅಧಿಪತ್ಯವೀಯಲು ಬಲಿಯ ಪಾತಾಳಕೊತ್ತಿದ ವಾಮನ ||
ಪಿತೃವಾಕ್ಯಪಾಲಕ ಕ್ಷತ್ರಿಯ ಕುಲಾಂತಕ ಪರಶುರಾಮ |
ಮಾರುತಿವಲ್ಲಭ ಮಾತೃ ವಚನಪಾಲಕ ಶ್ರೀರಾಮ ||
ನೀರೆಯ ಸೀರೆಕದ್ದವ, ನೀರೆಗೆ ಸೀರೆ ಇತ್ತ ನೀರಜಾಕ್ಷ |
ಜಾರ, ಚೋರ, ಆನಂದಕಂದ ನಂದಕುಮಾರ ಶ್ರೀಕೃಷ್ಣ ||
ಅರ್ಧಾಂಗಿಯ ತೊರೆದ ಧರ್ಮ ಸುಬೋಧಕ ಬುದ್ಧ |
ಏರಿ ಹಯವ ಬರುವ ಖಡ್ಗಧಾರಿ ಕಲ್ಕಿ ||
ಶ್ರೀಕೃಷ್ಣವಿಠ್ಠಲ ಸಕಲರುದ್ಧರಿಸಲು ನಿನಗೆ ಇಷ್ಟೆಲ್ಲಾ ವಿವಿಧ ರೂಪ ಬೇಕಿತ್ತೇ ? ||
258. ಚಕ್ರಧರ ನಕ್ರನ ಕೊಂದು |
ವಕ್ರ ಗಜರಾಜಗೆ ಮುಕ್ತಿ ಇತ್ತ ||
ಶಕ್ರನ ಗರ್ವ ಭಂಗಿಸಿದ |
ವಿಕ್ರಮ ಉರುಕ್ರಮನಿವ |
ಶ್ರೀಕೃಷ್ಣವಿಠ್ಠಲ ಕ್ರತೋಸ್ಮರ ಕ್ರತುಸ್ಮರ ||
259. ಎಷ್ಟು ಶಾಸ್ತ್ರ ಓದಿದರೇನು |
ಎಷ್ಟು ವ್ರತ-ನೇಮವಾಚರಿಸಿದರೇನು ||
ಎಷ್ಟು ತೀರ್ಥಯಾತ್ರೆ ಗೈದರೇನು |
ಎಷ್ಟು ಪ್ರತಿಮೆ ಸಂದರ್ಶಿಸಿದರೇನು ||
ಎಷ್ಟು ಭಜನೆ ಮಾಡಿದರೇನು |
ಎಷ್ಟು ಸತ್ಸಂಗದಲ್ಲಿದ್ದರೇನು ||
ಎಷ್ಟು ತೀರ್ಥ-ಪ್ರಸಾದ ಸ್ವೀಕರಿಸಿದರೇನು |
ಎಷ್ಟು ಕಷ್ಟಪಟ್ಟರೂ ಭಕ್ತಿ ಪುಟ್ಟಲಿಲ್ಲ ||
ಇಷ್ಟು ಮಾತ್ರ ತಿಳಿದೆ ಶ್ರೀಕೃಷ್ಣವಿಠ್ಠಲನೇ |
ಸೃಷ್ಟಿಕರ್ತ ನಿನ್ನ ಅನುಗ್ರಹವಾಗದೆ ಏನೂ ಸಿಗದು ||
260. ದೆವ್ವ ಮೆಟ್ಟಿದೆ ಎನಗೆ ಪ್ರಾಪಂಚಿಕ ವಿಷಯಗಳ |
ಜವರಾಯನ ಭಯವಿಲ್ಲದೆ ಅನಾಚಾರ ಮಾಡುವ ||
ಭವ ಬಂಧ ಬಿಡಿಸಿ ಭಕ್ತರ ಸಂಗದಿ ಕೂಡುವಂತೆ |
ಅವ್ವ ಲಕುಮಿ, ನಿನ್ನಂತರ್ಯಾಮಿ ಶ್ರೀಕೃಷ್ಣವಿಠ್ಠಲಗೆ ಪೇಳೇ ||
261. ಸುದಾಮ ಸಖ ಅನಿಮಿತ್ತ ಬಂಧುವೇ |
ಚೆಂದದಿ ಕಾಯೋ ಜನುಮ ಜನುಮದಿ ||ಪ||
ಎಂದಿಗೂ ಮಾನ ಅವಮಾನ ನಿನದಯ್ಯಾ |
ಆದದಾಯಿತು ಪಾಪಗಳ ಕಳೆದು ದಯದಿ ||
ಮುಂದೆಂದೂ ಹಾದಿ ತಪ್ಪದಂತೆ ಮಾಡು |
ಭೇದವೆಣಿಸದೆ ನೋಡು ಸಮದರ್ಶಿಯೇ ||1||
ಹೃದಯ ಮಂದಿರದಲಿ ಸ್ಥಿರದಿ ನೆಲೆಸು |
ಎಂದೆಂದೂ ವಿಸ್ಮರಣೆ ಬರದಿರಲಿ ||
ಒಂದೇ ಮನದಿ ಸದಾ ಸ್ಮರಿಸುವಂತಾಗಲಿ |
ಸುಂದರಿನಾಥ ನಿನ್ನ ದರುಶನವಾಗಲಿ ||2||
ಮಂದಿಯೊಳಗಾಡಿಸಿ ಮಂದನೆನಿಸಬೇಡ |
ಕುಂದುಗಳೆಣಿಸದೆ ಕಂದಿಸದೆ ಎನ್ನ ||
ಬಂದು ಭರದಿಂ ಸಲಹೋ ಶುದ್ಧಾತ್ಮ |
ಯದುಕುಲಚಂದ್ರ ಶ್ರೀಕೃಷ್ಣವಿಠ್ಠಲ ||3||
262.. ಮನದಿ ಮಾತು ವ್ಯಕ್ತವಾಗಲು ಭಾಷೆ ಬೇಕು |
ಮನದ ಮಾತು, ಆಡುವ ಭಾಷೆ ಬೇರೆಯಾಗಲೂಬಹುದು ||
ಮಾನ್ಯ-ಅಮಾನ್ಯತೆ ಬರುವುದು ಆಡುಭಾಷೆಯಿಂದ |
ಮೌನದಿಂದ ತಿಳಿಸುವದಕ್ಕೆ ಭಾಷೆಬೇಡ ||
ಮೌನದೊಳಡಗಿಹುದು ಪ್ರೀತಿ, ದ್ವೇಷ, ರೋಷ, ಆನಂದ |
ಕಣ್ಣಿನ ಮೌನ ಭಾಷೆಯಿಂದ ಭಾವನೆವಿದಿತ ||
ಕಾಣದ ದೈವ ಶ್ರೀಕೃಷ್ಣವಿಠ್ಠಲ ಮನದೊಳಗಿದ್ದು ಎಲ್ಲ ನಡೆಸುವ ||
263.. ಭಾಷೆ ತಿಳಿಯದು ಹಕ್ಕಿಗಳ ಇಂಚರದ |
ಭಾಷೆ ತಿಳಿಯದು ಪ್ರಾಣಿಗಳ ಕೂಗಾಟದ ||
ಭಾಷೆ ಭಿನ್ನ, ವೇಷ, ಆವಾಸ ಭಿನ್ನ |
ಪುಷ್ಪಗಳ ವಿಭಿನ್ನ ಸುಗಂಧದ ಮೂಲ ತಿಳಿಯದು ||
ಪುಷ್ಟಿಕರ ಜೇನರುಚಿ ಇರುವ ಬಗೆ ಅರಿಯದು |
ಭಾಷೆಯಾಡದ ಹರಿವ ಜಲದ ವಿಭಿನ್ನತೆ ಗೊತ್ತಾಗದು ||
ಭಾಷೆಗಿಂತ ಉತ್ತಮ ಮೌನ, ಎಲ್ಲವೂ ತಿಳಿಸುವುದಂತೆ |
ವಿಶಿಷ್ಟ ಶ್ರೀಕೃಷ್ಣವಿಠ್ಠಲನ ಮೌನ ಒಟ್ಟಾರೆ ತಿಳಿಯದಲ್ಲ ಹೇಗೆ ? ||
264. ಭಿನ್ನಾಭಿನ್ನ ಈ ಪ್ರಪಂಚದೆಲ್ಲೆಡೆ ಸತ್ಯದಿ ಇದೆ |
ತಿನ್ನುವ ಅನ್ನದಿಂದ, ಅನ್ನುವ ವೇದದವರೆಗೂ ಇದೆ ||ಪ||
ಹೂವ ರಸ-ರುಚಿ ಬೇರಾದರೂ ಮಧುವಿನ ರುಚಿ ಒಂದೇ |
ಜೀವಿಗಳು ಭಿನ್ನರೂಪವಾದರೂ ಒಳಗಿರುವ ಪರಮಾತ್ಮನೊಬ್ಬನೇ ||
ಬದುಕುವ ಜೀವನ ಬೇರೆಯಾದರೂ ನಿಶ್ವಿತ ಮೃತ್ಯು ಒಂದೇ |
ನದಿ ಜಲದ ರುಚಿ ಬೇರಾದರೂ ಸಮುದ್ರ ನೀರು ಉಪ್ಪೇ ||1||
ಒಡಾಡಲು ಕಾಲುಗಳೆರಡಾದರೂ ನಡಿಗೆ ಒಂದೇಕಡೆ |
ನೋಡುವ ಕಣ್ಣು ಎರಡು ಬೇರಾದರೂ ದೃಷ್ಟಿ ಒಂದೇ ||
ದೇವತೆಗಳು ಹಲವಾರು ಇದ್ದರೂ ಪರದೈವನೊಬ್ಬನೇ |
ಅವತಾರರೂಪ ಬೇರೆಯಾದರೂ ಮೂಲರೂಪದ ಶ್ರೀಕೃಷ್ಣವಿಠ್ಠಲನೊಬ್ಬನೇ ||2||
265. ಯಾರು ಆಕಾಶದಲ್ಲಿ ಶಬ್ದ ಇಟ್ಟವರು ? |
ಯಾರು ವಾಯುವಿನಲ್ಲಿ ಸ್ಪರ್ಶವಿಟ್ಟವರು ? ||
ಯಾರು ಅಗ್ನಿಯಲ್ಲಿ ರೂಪ ಇಟ್ಟವರು ? |
ಯಾರು ನೀರಿನಲ್ಲಿ ರಸ ಇಟ್ಟವರು ? ||
ಯಾರು ಪೃಥ್ವಿಯಲಿ ಗಂಧವಿಟ್ಟವರು ? |
ಯಾರು ಚೇತನರಲ್ಲಿ ಚೇತನವಿಟ್ಟವರು ? ||
ಪರಮ ಚೇತನ ಶ್ರೀಕೃಷ್ಣವಿಠ್ಠಲನೇ ಅಲ್ಲವೆ ? ||
266. ಯಾರು ಜೀವಿಗಳಲಿ ಅಷ್ಟಮದವಿಟ್ಟವರು ? |
ಯಾರು ಸಂಸಾರದಿ ಅಭಿಮಾನವಿಟ್ಟವರು ? ||
ಯಾರು ಮನದಿ ಅಹಂಕಾರವಿಟ್ಟವರು ? |
ಯಾರು ದಿವಾ-ರಾತ್ರಿಯಲಿ ಆಯಸ್ಸುಇಟ್ಟವರು ? ||
ಯಾರು ಸೃಷ್ಟ ವಸ್ತುವಿಗೆ ನಾಶವಿತ್ತವರು ? |
ಯಾರು ದೇಶ, ಕಾಲ, ಗುಣ ಬಿಟ್ಟಿರದವರು ? ||
ಪರಮ ಮಹದ್ಬ್ರಹ್ಮ ಶ್ರೀಕೃಷ್ಣವಿಠ್ಠಲನಲ್ಲವೆ ? ||
267. ಎಲ್ಲ ಮೊಡಗಳು ಮಳೆ ಸುರಿಸುವುದಿಲ್ಲ |
ಎಲ್ಲ ವೀರ್ಯಾಣುಗಳಿಂದ ಶಿಶು ಪುಟ್ಟುವುದಿಲ್ಲ ||
ಎಲ್ಲ ಆಶ್ರಮಿಗಳಿಗೆ ಒಂದೇ ತರದ ಯಜ್ಞವಿಲ್ಲ |
ಎಲ್ಲ ಬೀಜಗಳಿಂದ ಉತ್ಕೃಷ್ಟ ಸಸ್ಯ ಹುಟ್ಟುವುದಿಲ್ಲ ||
ಎಲ್ಲ ತಿನ್ನುವುದರಿಂದ ದೇಹಕ್ಕೇ ಹಿತವಿಲ್ಲ |
ಎಲ್ಲ ಕರ್ಮಾಚರಣೆ ಒಂದೇ ಬಗೆಯದಲ್ಲ ||
ಎಲ್ಲ ಕರ್ಮಗಳು ಹರಿ ಪ್ರೀತ್ಯರ್ಥವಾಗುವುದಿಲ್ಲ |
ಕೆಲವು ಮಾತ್ರ ಶ್ರೀಕೃಷ್ಣವಿಠ್ಠಲನ ದಯದಿ ಫಲವೀವುದು ||
268.. ನಮಗೆ ಜಿಹ್ವೆ ಮೂಲಕ ರಸಸ್ವಾದನೆ |
ನಮಗೆ ಕಿವಿಯ ಮೂಲಕ ಶಬ್ದ ಗ್ರಹಣ ||
ನಮಗೆ ನಾಸಿಕದ ಮೂಲಕ ಆಘ್ರಾಣ |
ನಮಗೆ ಕಣ್ಣಿನ ಮೂಲಕ ಮಾತ್ರ ದೃಷ್ಟಿ ||
ನಮಗೆ ಕಾಲಿನಿಂದ ಮಾತ್ರ ನಡಿಗೆ |
ಬೊಮ್ಮಪಿತ ಶ್ರೀಕೃಷ್ಣವಿಠ್ಠಲ ಮಾತ್ರ ಒಂದೇ ಅವಯವದಿ ಸರ್ವಕಾರ್ಯಮಾಡಬಲ್ಲ ||
269.. ಕಣ್ಣಿನಿಂದ ದೃಷ್ಟಿ-ಸೃಷ್ಟಿ |
ಕಣ್ಣಿನಿಂದ ಭಯ-ಲಯ ||
ಕಣ್ಣಿನಿಂದ ಶಾಪ-ಅನುಗ್ರಹ |
ಕಣ್ಣಿನಿಂದ ಹಗಲು-ರಾತ್ರಿ ||
ಕಣ್ಣಿನಿಂದಲ್ಲದೆ ಬೇರೆ ಅಂಗದಿಂದಲೂ |
ಕಣ್ಮಣಿ ಶ್ರೀಕೃಷ್ಣವಿಠ್ಠಲ ಸರ್ವಕಾರ್ಯಮಾಳ್ವ ||
270.. ಸ್ವಾರ್ಥಕ್ಕಾಗಿ ಎಷ್ಟು ಜೀವಿ-ಸಸ್ಯಗಳ ಬಲಿ ಕೊಡುವೆವೋ |
ಸತ್ತು ಹೋಗುವ ಭಯದಿ ಎಷ್ಟು ಪ್ರಾಣಿಗಳ ವಧಿಸುವೆವೋ ||
ಪ್ರತಿ ಹೆಜ್ಜೆ ಕೆಳಗೆ ಎಷ್ಟು ಕ್ರಿಮಿಗಳು ಸಾಯುವವೋ |
ಪ್ರತಿ ಚಪ್ಪಾಳೆಯಲ್ಲಿ ಎಷ್ಟು ಕ್ರಿಮಿಗಳು ಸಾಯುವವೋ ||
ಪ್ರತಿ ಮಾತಿಗೆ ಬಾಯ್ದೆರೆದಾಗ ಎಷ್ಟು ಕ್ರಿಮಿ ಸಾಯುವವೋ |
ಪ್ರತಿ ತುತ್ತಿಗೆ ಎಷ್ಟು ಕ್ರಿಮಿ ನುಂಗುವೆವೋ ||
ಪ್ರತಿ ಉಸಿರಿಗೂ ಎಷ್ಟು ಕ್ರಿಮಿಗಳು ಸಾಯುವವೋ |
ಪ್ರತಿ ಒಂದು ದಿನದ ಬದುಕಿಗೆ ಹತ್ತು ಜನ್ಮವೆತ್ತುವಷ್ಟು ಪಾಪ ||
ಹೊತ್ತು ತಿರುಗುವ ಜೀವಕ್ಕೆ ಮುಕ್ತಿ ಹೇಗೆ ಸಾಧ್ಯ ? |
ಭಕ್ತಿಯ ಶಕ್ತಿಯಿಂದ ಎಲ್ಲಾ ಪಾಪ ಅಳಿವುದು ಶ್ರೀಕೃಷ್ಣವಿಠ್ಠಲ ದಯದಿ ||
271. ಸಿಕ್ಕು ಬಿದ್ದೆನಲ್ಲ ಸಂಸಾರದ ಕೆಸರಲಿ |
ಸಿಕ್ಕ ಸಿಕ್ಕ ದಾರೀಲಿ ತಿರುಗಿ ಇಲ್ಲಿ ಬಂದೆನಲ್ಲ ||
ಸಿಕ್ಕು ಬಿಡಿಸುವುದ್ಹೇಗೆಂದು ಕಾಣದೆ |
ಸಿಕ್ಕಿರುವವರಿಗೆಲ್ಲಾ ಕೇಳಿ ಮೊಸಹೋದೆ ||
ಸಿಕ್ಕ ಸಿಕ್ಕಿದ್ದೆಲ್ಲಾ ಹೇಳಿ ದಾರಿ ತಪ್ಪಿಸಿದರಲ್ಲ |
ಸಿಕ್ಕಷ್ಟೇ ಸಿಗಲಿ ಎಂಬ ಆಸೆಗೆ ಸಿಲುಕಿರುವೆ ||
ಸಿಕ್ಕರೂ ಸಿಗದ ಶ್ರೀಕೃಷ್ಣವಿಠ್ಠಲನೇ ಪಾರುಗೈಸು ||
ಸಹಸಾರ್ಚಿತಸಪ್ತಜಿಹ್ವಸಪ್ತೈಧಾ ಸಪ್ತವಾಹನ | ಅಮೂರ್ತಿರನಘೋಚಿಂತ್ಯೋಭಯಕೃದ್ಭಯನಾಶನ: ||
272.. ತಿಳಿದ ಬುಧರ ಜಿಹ್ವೆಯಾಗಿರುವನ ತಿಳಿಯಲು | (ಪರಮಾತ್ಮ)
ತಿಳಿದ ಸಜ್ಜನರ ಸಮೂಹ ಸೇರಿ || (ಸತ್ಸಂಗ)
ಏಳು ತರದ ಕಟ್ಟಿಗೆ ಒಟ್ಟಿ | (ರೂಪ, ಶಬ್ಧ, ಗಂಧ, ರಸ, ಸ್ಪರ್ಶ, ಸಂಶಯ, ನಿಶ್ವಯ)
ಏಳು ತರದ ಬೆಂಕಿ ಉರಿಸಿ || ( ಇವುಗಳ ಜ್ಞಾನದಿ)
ಏಳು ತರದಿಂದ ಅನುಭವಿಸಿ | (ಅನುಭವ ಜ್ಞಾನದಿ)
ಏಳು ತರದ ಗಾಡಿಯೆಳೆವ || (4 ವೇದ ಮೂಲರಾಮಯಣ, ಮಹಾಭಾರತ, ಪಂಚರಾತ್ರ)
ಏಳು ತರದ ರಥದಿ ಕುಳಿತವ | ( ಉಪಸ್ಥಿತ ಭಗವಂತನ ತಿಳಿಸುವ ಗುರು)
ಗೆಳೆಯ, ದೋಷದೂರ ಆನಂದ |
ಕಳವಳದಿ ಅಭಯ ನೀಡುವನೆಂದು |
ತಿಳಿಸುವ ಅಚಿಂತ್ಯ ಶ್ರೀಕೃಷ್ಣವಿಠ್ಠಲನ ಗುಣಗಳ ||
ಶ್ರೀಮದ್ಭಾಗವತದ ಸರಳ ಅರ್ಥ
273. ತಪವೇ ಶ್ರೀಮದ್ಭಾಗವತ ಸಾರಬೋಧ |
ತಪವೆಂದರೆ ದೀರ್ಘ ಆಲೋಚನೆ, ಚಿಂತನೆ ||
ತಪವೆಂದರೆ ಸತ್ಯತೆಯ ದೀಕ್ಷೆ ಸ್ವೀಕಾರ |
ತಪದಿಂದ ಐಹಿಕ-ಪರಮಾರ್ಥ ಸುಖ ||
ತಪದಿಂಧ ದುಷ್ಟ ಶಕ್ತಿ ನಾಶನ |
ತಪದಿಂದ ಭಗವದ್ ಸಾಕ್ಷಾತ್ಕಾರ ||
ತಪದಿಂದ ಭೋಗಸುಖ, ಮುಕ್ತಿ |
ತಪವೆಂದರೆ ಶ್ರದ್ಧೆ ನಂಬಿಕೆಗಳ ಗೂಡು ||
ತಪವೆಂದರೆ ಅಚಲ ನಿಷ್ಠೆದ್ಯೋತಕ |
ತಪದಿಂದ ಶಾಪ-ಅನುಗ್ರಹ, ಮೋಚಕ ||
ತಪವೆಂದರೆ ಮಾಡುವ ಕೆಲಸದಿ ನಿಷ್ಠೆ |
ತಪವೆಂದರೆ ಪ್ರಾಮಾಣಿಕ ಪ್ರತೀಕ ||
ತಪವೆಂದರೆ ವಚನದಲ್ಲಿ ನಂಬಿಕೆ |
ತಪವೆಂದರೆ ಮಾಡುವ ಕೃತ್ಯದಿ ಪ್ರೀತಿ ||
ತಪವೆಂದರೆ ಹಿರಿಯರ ಮಾತಲಿ ವಿಶ್ವಾಸ |
ತಪವೆಂದರೆ ಗುರುಗಳಲಿ ಶ್ರದ್ಧೆ ||
ತಪವೆಂದರೆ ಅಸಾಧ್ಯ ಸಾಧ್ಯವಾಗಿಸುವುದು |
ತಪ ಮಾಡಲು ಜಾತಿ, ಲಿಂಗ, ವಯಸ್ಸು ಅಭೇಧ ||
ತಪವೆಂದರೆ ಸರ್ವಕಾಲಿಕ ಸರ್ವರ ಉದ್ಧಾರ ಮಾರ್ಗ |
ತಪವೆಂದರೆ ಕೆಲಸದಿ ಸಾಧಿಸಲುಯಶ ||
ತಪವೆಂದರೆ ಜೀವನಸಾರದ ಸತ್ಯ |
ತಪ ಜೀವಿತದಿ ಸಾಧಿಸಿದರೆ ಮುಕ್ತಿಗೆ ಸೋಪಾನ ||
ತಪ ಸಾಧಿಸಿ ಜೀವಿಯ ಸೃಷ್ಟಿಸಿದ |
ತಪ ಸಾಧಿಸಿ ಪ್ರಾಣಿಯಾದರೂ ಮೋಕ್ಷಪ್ರಾಪ್ತಿ ||
ತಪ ಸಾಧಿಸಿದ ಬಾಲಕರಿಗೆ ಪ್ರತ್ಯಕ್ಷನಾದ |
ತಪ ಸಾಧಿಸಿ ಋಷಿ ಲಯ ಅನುಭವಿಸಿದ ||
ತಪದಿಂದ ಭಗವದ್ ಸಂತಾನಪ್ರಾಪ್ತಿ |
ತಪವೆಂದರೆ ಶ್ರೀಮದ್ಭಾಗವತೇ ಸಾಕ್ಷಿ ||
ತಪದಿಂದ ಶ್ರೀಕೃಷ್ಣವಿಠ್ಠಲನಲ್ಲಿ ಸಾಯುಜ್ಯಪ್ರಾಪ್ತಿ ||
274. ತಾಯೇ, ಹರಿಣಾಕ್ಷಿಯೇ ಸ್ಥಿರದಿ ಪೇಳೆ, ಕಾಯಲು ಎನ್ನ ಸದಾ ||ಪ||
ಮಾಯಾಂಗಿನಿ ಪ್ರಪಂಚವ ಮಾಯೆಯಲಿ ಇಟ್ಟವಳೇ ||ಅಪ||
ಮೋಹಿನಿ ರೂಪದಿ ಮರುಳ ಮಾಡಿ ಅಮೃತವಿತ್ತವ |
ಮೋಹ ಹುಟ್ಟಿಸಿ ಬಿಡಿಸುವ ಸಕಲ ಲೋಕಪಾಲಕ ||
ಬಹುವೇಷಧರಿಸಿ ಭಕ್ತರ ಉದ್ಧರಿಸಿ ಸಲಹುವಗೆ |
ಸಹನೆಯಿಂದ ಪಾಪ ಕಳೆದು ಸಾಲೋಕ್ಯದಲ್ಲಿಡಲು ಪೇಳೆ || ||1||
ಸಮುದ್ರ ಮಥನದಿ ಮಂದರಗಿರಿ ಎತ್ತಿದ |
ಮನ್ಮಥಪಿತನವರಿಸಿ ಕ್ಷೀರಸಾಗರದಿ ಕುಳಿತು ||
ಮನ್ಮೋಹಕ ಮುಗುಳುನಗೆ ಬೀರುತ್ತಾ ಪಾದ ಸೇವಿಸುವಳೇ |
ಕರ್ಮಗಳ ಕಳೆದು ಸಾಮಿಪ್ಯದಲ್ಲಿಡಲು ಪೇಳೆ || ||2||
ಸುರಪ್ರಿಯ ಸತ್ಯ ಅನಾದಿ ಜ್ಞಾನ ಮೂರುತಿ |
ಸುರನದಿ ಭುವಿಗೆ ಹರಿಸಿ ಪಾವನಗೊಳಿಸಿ ||
ಊರುವಿನಿಂದ ಅಪ್ಸರೆ ಪುಟ್ಟಿಸಿ ಅಚ್ಚರಿಸಿದ ಯೊಗಿಗೆ |
ಅರ್ಧಾಂಗಿನಿ ಶ್ರೀಕೃಷ್ಣವಿಠ್ಠಲಪ್ರಿಯೆ ಸಾಯುಜ್ಯ ನೀಡಲು ಪೇಳೆ || ||3||
275 ಕರುಣಾಕರ ನೀನಲ್ಲವೆ ? ಧಯಾನಿಧಿ |
ಸರ್ವರಪಾಲಿಪ, ತಂದೆ ಕರುಣಾಕರ ||ಪ||
ಬಂಧನವ ಬಿಡಿಸಯ್ಯಾ ಕರುಣಾಕರ |
ಚೆಂದದಿ ಸಲಹಯ್ಯಾ ಕರುಣಾಕರ ||
ಒಂದೇ ಮನದಿ ಬೇಡಿಕೊಂಬೆ ಕರುಣಾಕರ |
ಮಂದಮತಿಯನುದ್ಧರಿಸೋ ಕರುಣಾಕರ ||1||
ಕಾಲಿಗೆ ಬಿದ್ದೆನಯ್ಯಾ ಕರುಣಾಕರ |
ಪಾಲಿಸೆನ್ನ ಕೈಪಿಡಿದು ಕರುಣಾಕರ ||
ಬಲವಿತ್ತು ಮೇಲೆತ್ತು ಕರುಣಾಕರ |
ಒಲವಿಂದ ನೋಡಯ್ಯಾ ಕರುಣಾಕರ ||2||
ಕೂಸಿನ ಸಂಕಟ ಅರಿಯದೇ ಕರುಣಾಕರ |
ಹೇಸಿಯೆಂದು ತಳ್ಳುವರೇ ಕುರುಣಾಕರ ||
ಎಸಗಿದ ತಪ್ಪು ಮನ್ನಿಸು ಕರುಣಾಕರ |
ಹೊಸ ಶಾಶ್ವತ ಬಾಳುನೀಡು ಶ್ರೀಕೃಷ್ಣವಿಠ್ಠಲ ||ಕರುಣಾಕರ ||3||
276. ಪರಮಾತ್ಮಗೆ ಜ್ಞಾನವೇ ಹೃದಯ |
ಪರಮಾತ್ಮಗೆ ಆನಂದವೇ ಶರೀರ ||
ಪರಮಾತ್ಮಗೆ ಕ್ರಿಯೆಗಳೇ ಆಕಾರ |
ಪರಾತ್ಪರ ಶ್ರೀಕೃಷ್ಣವಿಠ್ಠಲ ಅವಿನಾಶಿ ||
ದಶಾವತಾರದ ಪ್ರಾರ್ಥನಾ ದಶಕ
277. ಭೂಮಿಯನ್ನು ಕಕ್ಷೆಯಲ್ಲಿರಿಸಿದ ವರಾಹನೇ |
ನಮ್ಮ ಭಕ್ತಿ ಕಕ್ಷೆಯಿಂದ ಕಳಚುತ್ತಿದೆ ಉದ್ಧರಿಸು ||1||
ಸಮುದ್ರದಿ ಮುಳುಗುವ ಬೆಟ್ಟ ಅಡಿಯಿಂದೆತ್ತಿದ ಕೂರ್ಮನೇ |
ನಮ್ಮ ಅಕ್ಷಮ್ಯ ಅಪರಾಧ ಬೆಟ್ಟದಿಂದೆತ್ತಿ ಉದ್ಧರಿಸು ||2||
ಕಮಂಡಲದಿಂದ ಬಂದು ಪ್ರಳಯದಲಿ ತೇಲಿಸಿದ ಮತ್ಸನೇ |
ನಮ್ಮ ಮಮಕಾರದಲಿ ತೇಲುತ್ತಿರುವುದ ತಪ್ಪಿಸಿ ಉದ್ಧರಿಸು ||3||
ಒಮ್ಮನದಿ ನಂಬಿದ ಬಾಲಕನ ಅನುಗ್ರಹಿಸಿದ ನರಸಿಂಹನೇ |
ನಮ್ಮ ಕಾಮ, ಕ್ರೋಧಾದಿಗಳನ್ನು ಸುಟ್ಟು ಉದ್ಧರಿಸು ||4||
ಬ್ರಾಹ್ಮಣನಾಗಿ ಬಂದು ಕ್ಷತ್ರಿಯರ ತರಿದ ಪರಶುರಾಮನೇ |
ನಮ್ಮ ಅಹಂಕಾರದ ಹೆಮ್ಮರ ತರಿದು ಉದ್ಧರಿಸು ||5||
ತ್ರಿಮಾತೆಪುತ್ರ ಜಾನಕಿಕಾಂತ ಮಾರುತಿ ಪ್ರಾಣ ಶ್ರೀರಾಮನೇ |
ನಮ್ಮ ಚತುರಾರ್ಥಗಳು ಪರಸೇವೆ ಯಾಗುವಂತೆ ಉದ್ಧರಿಸು ||6||
ಮನ್ಮೋಹಕ ರೂಪನೇ ಯಧು ಕುಲೋದ್ಧಾರಕ ಶ್ರೀಕೃಷ್ಣನೇ |
ನಮ್ಮ ಹೃನ್ಮಂದಿರದಿ ನೆಲಸಿ ಜ್ಞಾನ, ಭಕ್ತಿ ಇತ್ತು ಉದ್ಧರಿಸು |||7||
ಧರ್ಮವ ಉಳುಹಲು ಅಧರ್ಮ ಉಪದೇಶಿಸಿದ ಬುದ್ಧನೇ | ನಮ್ಮ ಜೀವನದ ಕತ್ತಲು ಪರಿಹರಿಸಿ ಉದ್ಧರಿಸು ||8||
ಧರ್ಮಯುದ್ಧಕ್ಕಾಗಿ ಖಡ್ಗಪಾಣಿ, ಹಯವೇರಿದ ಕಲ್ಕಿಯೇ |
ನಮ್ಮ ಬಂಧ ಪಾಶ ಬಿಡಿದಿ ಶ್ರೀಕೃಷ್ಣವಿಠ್ಠಲನಡಿಗೆ ಬೀಳಿಸಿ ಉದ್ಧರಿಸು ||9||
278. ಪರಮಾತ್ಮ ಐಶ್ವರ್ಯಾದಿ ಧರ್ಮಸ್ವರೂಪ |
ಪರಮಾತ್ಮ ಅನಂತ ಶಕ್ತಿ ಸ್ವರೂಪ ||
ಪರಮಾತ್ಮಗಿಲ್ಲ ಲೌಕಿಕ ಆನಂದ ರೂಪ |
ಪರಮಾತ್ಮ ಅಸಂಖ್ಯಾತ ಜ್ಞಾನಾದಿ ಗುಣಪೂರ್ಣ ||
ಪರಮಾತ್ಮ ಸ್ವಾಭಾವಿಕ ಉತ್ತಮೋತ್ತ ಉತ್ತುಂಗ |
ಪರಮಾತ್ಮ ಶ್ರೀಕೃಷ್ಣವಿಠ್ಠಲನೇ ಸರ್ವಪ್ರಣೀತ ||
279. ದೈನ್ಯಕೆ ಸಿಲುಕುವ ದೇವನಲ್ಲನಿವ |
ಚೆನ್ನಾದ ನಿಷ್ಕಲಂಕ ಭಕ್ತಿಗೊಲಿವ ||
ಭಿನ್ನಾಭಿನ್ನ, ಅವ್ಯಕ್ತಾವ್ಯಕ್ತ, ಶೂನ್ಯ ನಾಮಕನಿವ |
ಧ್ಯಾನಕ್ಕೆ ನಿಲುಕುವ ಗುಣಗಳು ಚಿಂತ್ಯಾ ||(ಲಕ್ಷ್ಮೀ, ಬ್ರಹ್ಮರಿಗೆ )
ಅನ್ಯರಿಗೆ ಧ್ಯಾನಿಸಲು ಅಶಕ್ಯಗುಣಗಳೇ ಅಚಿಂತ್ಯಾ (ಇತತರಿಗೆ)
ಮಾನ್ಯ ಶ್ರೀಕೃಷ್ಣವಿಠ್ಠಲನೇ ಚಿಂತ್ಯಾ: ಅಚಿಂತ್ಯಾ: ||
280. ತುಳುಸಿಯ ನಿಜ ಮಂದಿರ ವೃಂದಾವನ |
ತುಳುಸಿಲಿ ನಿತ್ಯ ಶ್ರೀಹರಿ ಸನ್ನಿಧಾನ ||ಪ||
ತುಳುಸಿ ವೃಂದಾವನವಿರೆ ಮನೆ-ಮನ ಶಾಂತಿಸ್ಥಾನ ||ಅಪ||
ಧನ್ವಂತರಿಯ ಅಶ್ರುಬಿಂದುಲಿ ಜನಿಸಿದಳು ರೂಪಮತಿ |
ಸರ್ಮ ಪುಪಷ್ಪಗಳಾರ್ಪಣೆ ಫಲ ತುಳುಸಿ ಅರ್ಪಿಸಲಹುದು ||
ದೇವಿ ಜಾಂಬುವತಿ ತುಳಸಿ ರೂಪದಿ ಹರಿಸೇವಿಪಳು |
ಸರ್ಮ ಸಾಧನೆ ಇದ್ದು ತುಳುಸಿ ಇಲ್ಲದ ಪೂಜೆ ಹರಿ ಕೊಳ್ಳನೋ ||1||
ದುರಿತ ಕಳೆದು ದರುಶನದಿ ಫಲವೀವಳು ನಿಶ್ಚಯ |
ಸರ್ವ ಹತ್ಯೆಯ ಪಾಪ ಕಳೆದು ಗೋದಾನ ಪುಣ್ಯ ಲಭ್ಯ ||
ತೀರ್ಥಾಭಿಮಾನಿಗಳು ಮೂಲದಿ, ಮಧ್ಯೆ ಸರ್ಮದೇವತೆಗಳವಾಸ |
ಅಗ್ರಭಾಗದಿ ಸರ್ವವೇದಾಭಿಮಾನಿಗಳಿದ್ದು ಅಭೀಷ್ಟೆ ಪೂರೈಪರು ||2||
ತುಳಸಿ ನಿಂದಿಸಿದವರೆಲ್ಲಾ ಜಗದಿ ನಿಂದ್ಯರಾಗುವರು |
ತುಳಸಿ ವಂದಿಸಿದವರೆಲ್ಲಾ ಸುರ-ನರ ವಂದ್ಯರಾಗುವರು ||
ತಿಳಿದ ಸಜ್ಜನರು ನಿತ್ಯದಿ ಪೂಜಿಸಲು ಪಾಪ ಪರಿಹಾರ |
ತುಳಸಿಸಹಿತ ಶ್ರೀಕೃಷ್ಣವಿಠ್ಠಲನಂಘ್ರಿ ಪೂಜಿಸೆ ಇಹ-ಪರದಿ ಸೌಖ್ಯ ||3||
281. ಇದ್ದಾಗ ಇಲ್ಲದ ಚಿಂತೆ, ಇಲ್ಲದಾಗ ಇರುವುದರ ಚಿಂತೆ |
ಎದ್ದಾಗ ಬೀಳುವ ಚಿಂತೆ ಬಿದ್ದಾಗ ಏಳುವ ಚಿಂತೆ ||
ಉಂಡು ಅಜೀರ್ಣವಾದಾಗ ಉಪವಾಸದ ಚಿಂತೆ, ಉಪವಾಸದಿ ಊಟದ ಚಿಂತೆ |
ನಿದ್ದೆಯಿದ್ದಾಗ ಎಚ್ಚರದ ಚಿಂತೆ, ಎಚ್ಚರದಿ ನಿದ್ದೆ ಚಿಂತೆ ||
ಸದ್ದು ಜೋರಾದಾಗ ನಿಶಬ್ದದ ಚಿಂತೆ, ನಿಶಬ್ದವಾದಾಗ ಶಬ್ದದ ಚಿಂತೆ |
ಇದ್ದರೂ ಹೆರವರ ವಸ್ತು ಕದಿಯುವ ಚಿಂತೆ, ಕದ್ದಮೇಲೆ ಉಳಿಸುವ ಚಿಂತೆ ||
ಇದ್ದೂ ಇಲ್ಲದಂತಿರಬೇಕೆಂಬ ಅರಿವಿನ ಚಿಂತೆ ಅನುಗಾಲಕೂ ಚಿಂತೆ |
ಹೊದ್ದ ಆಸೆಯ ಹೊದಿಕೆ ಸರಿಯದೆ, ಮುಗಿಯದಿರುವ ಚಿಂತೆ ||
ಒದ್ದಾಡುತ್ತಾ ಗುದ್ದು ತಿಂದು ಪೆದ್ದನಂತೆ ಜೀವನ ಗತಿಸಿದರೂ |
ಚಿದ್ದೇಹ ಮುದ್ದು ಶ್ರೀಕೃಷ್ಣವಿಠ್ಠಲನ ಚಿಂತೆ ಬರುವುದೇ ?||
ಧರ್ಮಚಕ್ರಸಾರ
282. ಚಕ್ರ, ಚಕ್ರ ಧರ್ಮಚಕ್ರ ತಿರುಗುತಲೇ ಇರುವುದು |
ಧರ್ಮಚಕ್ರ ಯುಗಯುಗದಿ ತಿರುಗುತಲೇ ಇರುವುದು ||
ಯಾರೂ ತಿರುಗಿಸದಿದ್ದರೂ ಅದು ತಿರುಗುತಲೇ ಇರುವುದು |
ಚಕ್ರ ಸುಖದಿ ತಿರುಗಲು ಮಾನವರೆಲ್ಲ ಶ್ರಮಿಸಬೇಕು ||
ಸೂತ್ರದಿ ಪೋಣಿಸಿದ ಮಣಿಯಂತೆ ಸರ್ವರೂ ಜೀವನಿಯಮಬದ್ಧರು |
ಸರಳದಿ ತಿರುಗಲು ಸಹಬಾಳ್ವೆಯಲಿ ಔದಾರ್ಯಬೇಕು ||
ಸರ್ವರೂ ಯಜ್ಞ, ದಾನ, ತಪೋವಂತರಾಗಬೇಕು |
ಚಕ್ರಕಾಲ ಕಾಲದಿ ಬದಲಿಸಿದರೂ ಧ್ಯೇಯ ಒಂದೇ ಇರಬೇಕು ||
ವರ್ಜಿಸಿ ಕಾಮಕ್ರೋಧಗಳ ಇನ್ನೊಬ್ಬರ ಕಷ್ಟಕೆ ಒದಗಬೇಕು |
ಸ್ವಾರ್ಥಿಯಾಗದೇ ಪ್ರಿತಿ, ದಯೆ, ಶಾಂತಿ ಉಸಿರಾಗಿಸಬೇಕು ||
ಬರೀ ನಾವು ಸುಖಿಸಿದರೆ ಸಾಲದು ಬೇರೆಯವರನ್ನೂ ಸುಖಿಯಾಗಿಸಬೇಕು |
ಬರುವವರಿಗೆ ಸುಖ ಜೀವನದ ಭದ್ರತೆ ಕಲ್ಪಿಸಿ ಹೋಗಬೇಕು ||
ದಾರಿದ್ರ್ಯ, ನೆಲ, ಜಲ, ಆಹಾರ ಕ್ಷಾಮಕೆ ಕಾರಣವಾಗಬಾರದು |
ಆರೋಗ್ಯ, ಸುಖದ ವಾತಾವರಣ ಸಾಧಿಸಿ, ಉಳಿಸುವ ಕಾರ್ಯಸಾಧಿಸಬೇಕು ||
ಸರ್ವರೂಪ ಸುಖದ ಸೂತ್ರ ಅಳವಡಿಸಿ ಮುಂದಿನವರಿಗೆ ಕೊಡಬೇಕು |
ಧರ್ಮದ ಮರ್ಮವೇ ನಿಜ ಜೀವನದ ಸುಖದ ಸಾರ ||
ಧರ್ಮ ಚಕ್ರದ ರೂವಾರಿ ಶ್ರೀಕೃಷ್ಣವಿಠ್ಠಲನಲಿ ನಿಜಭಕ್ತಿ ಬೆಳೆಸಬೇಕು ||
283. ಬ್ರಹ್ಮಾಂಡದಿ ಸಣ್ಣ ಕ್ರಿಯೆ ಹಿಂದೆ ಎಷ್ಟೊಂದು ಕ್ರಿಯೆ ಅಡಗಿವೆ |
ಅಹಂಕಾರದಿ ನಾ ಮಾಡಿದೆ ಎನ್ನುವರಿಗೆ ಏನು ಗೊತ್ತು ? ||
ಬಹು ಜೀವರ ಶ್ರಮದಿಂದ, ಬಹು ಜನ್ಮದ ಪುಣ್ಯದಿಂದ ಸಾಧಿಸುವುದು |
ಬಹು ಜನರ ಕ್ಷೇಮಕ್ಕಾಗಿ ನಿ:ಸ್ವಾರ್ಥದಿ ಪ್ರಾರ್ಥಿಸಬೇಕು ||
ಬಹು ಜನ ಶೂಶ್ರುಷ ಮಾನವ ಜನ್ಮದ ಸಾರ್ಥಕತೆ |
ಇಹದ ಶಾಂತಿ, ಪ್ರೀತಿ ಇದರಲ್ಲೇ ಹುದುಗಿದೆ ||
ಸಹಬಾಳ್ವೆ ಮಹಿಮೆಯ ಗುಟ್ಟು ಇದರಲ್ಲೇ ಇದೆ |
ದೇಹದ ಪ್ರತೀ ಕ್ರಿಯೇ ತತ್ವಾಭಿಮಾನಿ ದೇವತೆಗಳಿಂದ ನಡೆವುದು ||
ದೇಹದ ಸುಸ್ಥಿತಿಯೂ ಬಹು ಇಂದ್ರಿಯಗಳ ಪರಿಶ್ರಮದ ಫಲ |
ಮಹತ್ವ ತಿಳಿದು ಬಳಿದರೆ ಇಹ-ಪರದಿ ಆಗುವುದು ಸೌಖ್ಯ ||
ಅಹೇಯ ಶ್ರೀಕೃಷ್ಣವಿಠ್ಠಲನೊಬ್ಬನೇ ಪರಿಶ್ರಮರಹಿತ ಸರ್ವಕರ್ತೃ ||
284. ಸುವ್ಯವಸ್ಥಿತ ಸೃಷ್ಟಿ, ನಿಯಾಮಕರು ಯಾರಿಹರು |
ಸುವ್ಯವಸ್ಥಿತ ಜಗತ್ತಿನ ವ್ಯವಸ್ಥೇಲಿ ಯಾರ ಕೈವಾಡ ||
ಸುವ್ಯವಸ್ಥಿತ ಕಾಲಚಕ್ರ ಯಾರು ಉರುಳಿಸುವರು |
ಸುವ್ಯವಸ್ಥಿತ ಜನ ಜೀವನ ಚಕ್ರ ಯಾರ ತಿರುಗುವಿಕೆ ||
ಸುವ್ಯವಸ್ಥಿತ ಪಿಂಡಾಂಡದ ರಚನಾಕಾರ ಯಾರಿಹರು |
ಸುವ್ಯವಸ್ಥಿತದಿ ಪಂಚೇಂದ್ರಿಯಗಳ ಕಾರ್ಯ ನಿರ್ಧರಿಸುವರು ಯಾರು ||
ನವ್ಯತೆಯ ಭವ್ಯತೆ ಜೀವಿಗಳಿಗೆ ಉಣಿಸುವರು ಯಾರು |
ಅವ್ಯಯ ನಮ್ಯ ಶ್ರೀಕೃಷ್ಣವಿಠ್ಠಲದ್ದೇ ಈ ಅಚಿಂತ್ಯಾಧ್ಬುತ ಕ್ರಿಯೆ ||
285. ಕೊಡಪಾನ ಒಡೆಯುವುದೆಂದು ಕೊಳ್ಳದೆ ಬಿಡುವರುಂಟೆ | (ಮಾನವಜನ್ಮ)
ಬಿಡಬೇಕಾದಿತು ಹೊರಗೆ ಉಸಿರೆಂದು ಒಳಗೆಳೆಯದಿರುವರೆ ? ||
ಗಡಿಬಿಡಿ ಜೀವನದಿ ಓಡಾಡದೆ ಕುಳಿತಿದ್ದರೆ ನಡೆವುದೆ ? | (ಜ್ಞಾನಾರ್ಜನೆ)
ನಡೆವವ ಎಡವುನಲ್ಲದೆ ಮಲಗಿದವ ಎಡುವುವನೇ ? || (ಪಾಪಕ್ಕೆ ಹೆದರಿ ಪುಣ್ಯಕರ್ಮ- ಬಿಡುವರೆ)
ಬಿದ್ದರೆ ಎತ್ತುವ ಒಡೆಯ ಶ್ರೀಕೃಷ್ಣವಿಠ್ಠಲನಿರೆ ಚಿಂತೆ ಯಾಕೆ ? ||
286. ಹಡೆದ ತಾಯ್ತಂದೆಯರ ಬಿಟ್ಟು ಗೋಕುಲಕೆ ನಡೆದೆ |
ಪಡೆದ ತಾಯ್ತಂದೆಯರ ಬಿಟ್ಟು ಮಥುರೆಗೆ ಪೋದೆ ||
ಮಡಿಕೆ ಒಡೆದು ಗೋಪಿಯರ ಕಾಡಿ ಆನಂದಿಸಿದೆ |
ಗಡಿಗೆ ಹಾಲು-ಬೆಣ್ಣೆ ಮೆದ್ದು ಗೋಪಿಯರ ತೊರೆದೆ ||
ಒಡನಾಡಿಗಳಾದ ಗೋಪಾಲಕರ ಒಡನಾಟ ತೊರೆದೆ |
ಚೆಂಡಾಡಿ ದುಷ್ಟರ ಶಿರಗಳ ಭೂಭಾರ ಇಳುಹಿದೆ ||
ಒಡನೆ ಆಸಕ್ತಿಯಲಿ ನಿರಾಸಕ್ತಿ ಬೋಧಿಸಿದೆ |
ಕೂಡಲೇ ಹಚ್ಚಿಕೊಂಡಿದ್ದು ಬಿಚ್ಚುಕೊಳ್ಳಲು ಹೇಳಿದೆ ||
ಕೂಡಿಟ್ಟದ್ದು ಪರರಿಗೆ ಕೊಟ್ಟಿದ್ದು ತನಗೆ ಎಂದೆ |
ಮಾಡದೆ ಕರ್ಮಫಲಪೇಕ್ಷೆ ಸಮರ್ಪಿಸು ಎಂದೆ ||
ಕಡೆಗೆ ಮಣ್ಣಿನಿಂದ ಹುಟ್ಟಿ ಮಣ್ಣಾಗುವ ದೇಹದ ಮೋಹ ತೊರೆಎಂದೆ |
ನಡೆದಂತೆ ನುಡಿದೆ ನುಡಿದಂತೆ ನಡೆದೆ ||
ಪದ್ಮಪತ್ರದಂತೆ ಸಂಸಾರದಲ್ಲಿದ್ದು ಪಯಣಿಸು ಎಂದೆ |
ಪದುಮನಾಭ ಶ್ರೀಕೃಷ್ಣವಿಠ್ಠಲ ದಯಾಂಬುಧೇ ಶರಣೆಂಬೆ ತಾರಿಸೆನ್ನ ||
287. ಪ್ರಸನ್ನ ಸುಂದರ ಮೂರುತಿ ಯಾರೆಂದು ಪೇಳಲಿ |
ಪ್ರಸಿದ್ಧನಿವ ಸುಜ್ಞಾನವಂತ ಪಸರಿಸಿಹನೆಲ್ಲಡೆ ಇಹ-ಪರದಿ ||ಪ||
ತ್ರೇತಾಯುಗದಿ ಆಂಜನೇಯನಾಗಿ |
ಮತ್ತೆ ದ್ವಾಪರದಿ ಬಲಭೀಮನಾಗಿ ||
ಇತ್ತ ಕಲಿಯುಗದಿ ಮಧ್ವರಾಗಿ |
ಸತತ ರಾಮ ಕೃಷ್ಣ, ವ್ಯಾಸರ ಸೇವಿಸುವ ||1||
ಹುಟ್ಟುತಲೆ ಸೂರ್ಯನೆಡೆಗೆ ಜಿಗಿದ |
ಮುಷ್ಟಿಯಲಿ ಬಂಡೆ ಪುಡಿ ಮಾಡಿದ ||
ಮೆಟ್ಟಿ ಶಿರ ಅಸುರರ ಭಂಜಿಸಿದ |
ಪುಟ್ಟ ಪೋರ ಧೀರ ಹನುಮಂತ ||2||
ಪಂಚರೂಪದಿಂದಿಹ ಮುಖ್ಯಪ್ರಾಣ |
ಕಿಂಚಿತ್ ಅಪಶಬ್ದ ನುಡಿಯನೆಂದು ||
ಮುಂಚೆ ಮಾಡಿದ ಸಂಚಿತಾರ್ಥ ಕಳೆವ |
ಸಚ್ಚಿದಾನಂದಾತ್ಮಗೆ ಪೇಳಿ ಮೆಚ್ಚಿಸುವ ||3||
ಪ್ರತಿ ಶ್ವಾಸದಿ ಚೇತನ ಪುರೈಸುವ |
ಪ್ರತಿ ಇಂದ್ರಿಯಗಳಲ್ಲಿದ್ದು ಪ್ರೇರಕನಾಗಿಹ ||
ಪ್ರತಿಷ್ಠ ಜೇಷ್ಠ ಶ್ರೇಷ್ಠ ವರಿಷ್ಠ |
ವಾತಾತ್ಮಜ ವಾನರ ಮುಖ್ಯನಿವ ||4||
ಸ್ವಾಮಿ ಕಾರ್ಯ ಸ್ವಕಾರ್ಯದಂತೆ ಮಾಳ್ಪ |
ಕಾಮಿಸಿ ಭಕ್ತಿ, ಮುಕ್ತಿಯ ಬೇಡನೆಂದೂ ||
ಸುಮ್ಮಾನದಿ ಸಹಭೋಗ ಸುಖ ಉಂಬ |
ಹೆಮ್ಮೆಯಲಿ ರಾಮದೂತನೆನಿಸಿಕೊಂಬ ||5||
ಹಾರಿ ಬರುವ ಎಲ್ಲಿ ನೆನೆದರಲ್ಲಿ |
ಬರದಂತೆ ಆಪತ್ತು ಕಾಯ್ವ ||
ವರವಿತ್ತು ಸತತ ಸಲಹುವ |
ಚಿರಂಜೀವಿ ಇವ ಭಕ್ತಿಗೆ ಒಲಿವ ||6||
ಇವನಿಂದ ಗ್ರಹಬಾಧೆ ತಪ್ಪುವುದು |
ಇವನಿಂದ ಜೀವನದಿ ಸಾಮರಸ್ಯ ||
ಇವನನು ಗ್ರಹದಿ ಸರ್ವವಿಜಯ ನಿಶ್ಚಿತ |
ಇವನೊಲಿದರೆ ಪರಮಾತ್ಮ ಒಲಿವ ||7|||
ಅಣುವಾಗುವ ತಾ ಮಹತ್ತಾಗುವ |
ಗುಣವಂತ ಬಲುಧೀಮಂತ ||
ವರ್ಣನೆಗೂ ನಿಲುಕದ ಪುಣ್ಯವಂತ |
ಚಿನ್ಮಯ ಶ್ರೀಕೃಷ್ಣವಿಠ್ಠಲನ ಪರಮಪ್ರಿಯನಿವ ||8||
288. ಕ್ಷಮಿಸು ಹನುಮಯ್ಯ, ನಿನ್ನಯ್ಯನ ಖ್ಯಾತಿ ಬಲ್ಲೆಯಾ |
ಹೆಮ್ಮೆಯಲಿ ಒಮ್ಮೊಮ್ಮೆ ಭಕುತರ ಎತ್ತಿತೋರುವನಯ್ಯಾ ||
ಪುಟ್ಟ ಬಾಲಕನ ದಿಟ್ಟ ಭಕುತಿಗೆ ಒಲಿದ ಸ್ಥಂಭೋದ್ಭವ |
ಕೆಟ್ಟ ಪಿತನ ಸೊಕ್ಕು ಮುರಿದು ಅಂತ ಕಾಣಿಸಿದ ||
ಕೊಟ್ಟ ಮಾತಿನಂತೆ ಅರಣ್ಯಕೆ ತೆರಳಿ ಹೆಣ್ಣನುದ್ಧರಿಸಿದ |
ಕೆಟ್ಟದಾಗಿ ಹೆಣ್ಣಿಗಾಗಿ ಪ್ರಲಾಪಿಸಿ ಯುದ್ಧದಿ ಅಸುರರ ತರಿದ ||1||
ಕೊಟ್ಟ ಉಂಗುರ ಮುಟ್ಟಿಸಿದಕ್ಕಾಗಿ ಸಹಭೋಗವಿತ್ತ ಸಂತಸದಿ |
ಸೃಷ್ಟಿ-ಲಯ ಭ್ರೂಕುಣಿತದಿ ಮಾಡುವಗೆ ಇನ್ನೊಬ್ಬರ ನೆರವು ಬೇಕೆ ? ||
ಮೀಟುತ ತಂಬೂರಿ ನಾರಾಯಣ ಎನ್ನುತ ನಾರದರಲ್ಲಿ ಬರಲು |
ತಟ್ಟನೆ ಅನಾರೋಗ್ಯದ ಸೋಂಗುಹಾಕಿ ಉರುಳಿ ಉರುಳಿ ನರಳಿದ ||2||
ಸ್ಪಷ್ಟ ಪರಿಹಾರವಿದಕೆ ಭಕುತರ ಪಾದಧೂಳಿ ಪರಮೌಷಧವೆಂದ |
ಎಷ್ಟೂ ತಡಮಾಡದೆ ಪಟ್ಟದರಸಿರೆಡೆಗೆ ಬಂದುಪಾದಧೂಳಿ ಬೇಡಲು |
ಕೊಟ್ಟು ಪಾದಧೂಳಿ ಸ್ವಾಮಿಗೆ ಅಪಚಾರವೆಸಗೆವು ಎಂದರೆಲ್ಲ |
ಒಟದಿ ವ್ರಜಕೆ ಬಂದು ಗೋಪಿಯರನೆ ದೈನ್ಯದಿ ಬೇಡಿದರು ||3||
ಕೊಟ್ಟರೆಲ್ಲ ತಮ್ಮ ಪಾದಧೂಳಿ ಬೇಗಹೋಗಿ ಪೂಸಿರೆಂದರು |
ತಟ್ಟದೆ ಹೋದಿತೆ ಪಾಪ, ನರಕ ಭಯ ನಿಮಗಿಲ್ಲವೆ ? ಎನ್ನಲು ||
ಎಷ್ಟೋ ಜನುಮದಿ ಪಾಪಮಾಡಿ ನರಕ ಅನುಭವಿಸಿಲ್ಲವೆ ? ಈಗ ಪುಣ್ಯಮಾಡಿ ಅನುಭವಿಸುವೆವು |
ಕಷ್ಟ ಕಳೆದು ಸ್ವಾಮಿ ಬೇಗ ಗುಣವಾಗಲೆಂದು ಹಾರೈಸಿ ಬೀಳ್ಕೊಟ್ಟರು ||4||
ಮೃತ್ತಿಕಾ ಲೇಪನದಿ ಆರೋಗ್ಯವಾದಂತೆ ನಟಿಸಿದ ಕಪಟನಾಟಕಧಾರಿ |
ಪಟ್ಟ ಮಹಿಷಿಯರಿಗಿಂತ ಗೋಪಾಂಗನೆಯರ ಭಕ್ತಿ ಮೇಲೆಂದು ತೋರಿದ ||
ದೃಷ್ಟಿಯಿಂದ ದುಷ್ಟಸೈನ್ಯ ಸಂಹರಿಸಿ ಪಾರ್ಥಗೆ ಕೀರ್ತಿಯಿತ್ತಂತೆ |
ಶಿಷ್ಟಭಕ್ತ ವತ್ಸಲ ಶ್ರೀಕೃಷ್ಣವಿಠ್ಠಲನ ಲೀಲೆ ಅಚಿಂತ್ಯಾದ್ಭುತ ||5||
ಹಗ್ಗದಿಂದ ಬಿಗಿದ ದೋಣಿ ಹೊತ್ತವನೆ ನಿನ್ನ ಪಾದಪದ್ಮತೋರೋ ||