ಶ್ರೀ ಕೃಷ್ಣವಿಠ್ಠಲಪದಗುಚ್ಛ 3.5
289. ಸುಳ್ಳು ಹೇಳುತಿರುವ ನಿನ್ನ ಕಂದ ಗೋಪಮ್ಮಾ |
ಕಳ್ಳ ಬೆಕ್ಕಿನಂತೆ ಒಳಬಂದು ಪಾಲು ಬೆಣ್ಣೆ ಮೆಲುವ ||
ಮಲಗಿದ್ದ ಶಿಶುಗಳ ಚಿವುಟಿ ಅಳಿಸಿ ಹೋಗುವ |
ಮಳ್ಳನಿಗೆ ಸರಿಯಾಗಿ ಬುದ್ಧಿ ಪೇಳಮ್ಮಾ ||
ಕೇಳಿ ಚಾಡಿ ಮಾತು ರೋಸಿ ಸಿಟ್ಟಿನಲಿ |
ಊಲುಖಕ್ಕೆ ಹಗ್ಗದಿಂದ ಹೊಟ್ಟೆಗೆ ಬಿಗಿದು ಕಟ್ಟಿದಳು ||
ಒಳಗೆ ಕೆಲಸಕೆ ಯಶೋದೆ ಹೋದ ಕೂಡಲೇ |
ಊಲುಖ ಸಹಿತ ಎಳೆದು ಹಿತ್ತಲಿಗೆ ಬಂದ ಕಂದ ||
ನಳಕೂಬರು ಶಾಪದಿಂದ ವೃಕ್ಷವಾಗಿದ್ದು ಕಂಡು |
ಬೀಳಿಸಿ ಅವುಗಳನು ಶಾಪ ಮುಕ್ತರನ್ನಾಗಿಸಿದ ಕನಿಕರದಿ ||
ಕೆಳಗೆ ಬಿದ್ದ ಭಾರಿ ಮರ ನೋಡಿ ಹೆದರಿ ಓಡಿಬಂದಳಾ ತಾಯಿ |
ಕಿಲಕಿಲ ನಗುತಿದ್ದ ದಾಮೋದರನ ಕಂಡು ಸಂತಸ ಪೊಂದಿ ||
ಹಳಿದು ತನ್ನನ್ನೇ ಇನ್ನೆಂದೂ ಶಿಕ್ಷೆ ನೀಡುವುದಿಲ್ಲವೆಂದಳು |
ಜಲ ತುಂಬಿದ ಕಣ್ಗಳಿಂದ ಕಂದನ್ನೆತ್ತಿ ಒಳ ನಡೆದಳು ||
ಕೇಳುಗರ ಮನ ಮೊಹಗೊಳಿಸುವ ಶ್ರೀಕೃಷ್ಣವಿಠ್ಠಲನ |
ಬಾಲ ಲಿಲೆಯ ಸೊಬಗು ಎಷ್ಟೆಂದು ಬಣ್ಣಿಸಲಿ ? ||
290. ಶ್ರೀಕೃಷ್ಣವಿಠ್ಠಲನೇ ಶ್ರೇಷ್ಠರಲ್ಲಿ ಅತೀ ಶ್ರೇಷ್ಠ |
ಶ್ರೀಕೃಷ್ಣವಿಠ್ಠಲನೇ ಪರಮ ಜಗದ್ಗುರು ||
ಶ್ರೀಕೃಷ್ಣವಿಠ್ಠಲನೇ ಜಗತ್ತಿನ ತಾಯಿ-ತಂದೆ |
ಶ್ರೀಕೃಷ್ಣವಿಠ್ಠಲನಿಂದಲೇ ಹಗಲು-ರಾತ್ರಿ ||
ಶ್ರೀಕೃಷ್ಣವಿಠ್ಠಲನೇ ಕಾರಣ ಜನನ-ಮರಣಕೆ |
ಶ್ರೀಕೃಷ್ಣವಿಠ್ಠಲನೇ ಸರ್ವ ಚಲನ ಶಕ್ತಿ ||
ಶ್ರೀಕೃಷ್ಣವಿಠ್ಠಲನದ್ದೇ ಸರ್ವ ನಾಮಗಳು |
ಶ್ರೀಕೃಷ್ಣವಿಠ್ಠಲನೇ ಸಕಲ ಸೃಷ್ಟಿಕಾರ ||
ಶ್ರೀಕೃಷ್ಣವಿಠ್ಠಲನ ಇಚ್ಛೆಯಂತೇ ಎಲ್ಲ ನಡೆವುದು |
ಶ್ರೀಕೃಷ್ಣವಿಠ್ಠಲನೇ ಹೊರೆತು ಮತ್ತೇನೂ ಇಲ್ಲ ||
ಶ್ರೀಕೃಷ್ಣವಿಠ್ಠಲನೇ ನಾಮವೇ ಉಸಿರಾಗಿಸಬೇಕು |
ಶ್ರೀಕೃಷ್ಣವಿಠ್ಠಲನ್ನ ಪಡೆಯುವುದೇ ಜೀವನದ ಗುರಿಯಾಗಬೇಕು ||
291. ಶಿರಬಾಗಿ ನಮಿಸುವೆ ಗುರು ರಾಘವೇಂದ್ರ |
ಕರ ಪಿಡಿದು ಕರುಣದಿ ಕಾಯೋ ಗುರುವೆ ||ಪ||
ಎನ್ನಲಿ ಅಪರಾಧಗಳನೇಕವಿರೆ ಮಾನನಿಧಿ |
ಬನ್ನ ಬಡಿಸದೆ ಚಿತ್ತಕ್ಕೆ ತಂದು ನೀ ಸಲಹೋ ||
ಮನದ ತಲ್ಲಣ ಕಳೆದು ವಾತ್ಸಲ್ಯದಿ ಸಂತೈಸಿ |
ಜ್ಞಾನ ಮಾರ್ಗದಿ ಬಿಡದೆ ಮುನ್ನಡೆಸು ||1||
ಅಮಿತ ದಯಾನಿಧೇ ಪರಿಮಳಾರ್ಯನೆ |
ಕಾಮಿತ ಫಲವೀವೆ ಎಂಬಸೊಲ್ಲ ನಿಜವಲ್ಲವೇ? ||
ಜನ್ಮ ಸಾರ್ಥಕಗೊಳಿಸಲು ಹರಸು ಎನ್ನ |
ಹೃನ್ಮಂದಿರವಾಸಿ ಶ್ರೀಕೃಷ್ನವಿಠ್ಠಲನ ತೋರು ||2||
292. ನಿನ್ನ ರೂಪವನ್ನೇ ನೊಡುತ್ತಾ |
ನಿನ್ನ ನಾಮವನ್ನೇ ಪಾಡುತ್ತಾ ||
ನಿನ್ನ ಕಥೆಯನ್ನೇ ಕೇಳುತ್ತಾ |
ನಿನ್ನ ಗುಣಗಳನ್ನೇ ನೆನೆಯುತ್ತಾ ||
ನಿನ್ನಲ್ಲೇ ಸ್ಥಿರದಿ ಮನವ ನಿಲ್ಲಿಸಿ |
ನಿನ್ನನ್ನೇ ಸೇರುವಂತೆ ಮಾಡು ಶ್ರೀಕೃಷ್ಣವಿಠ್ಠಲ ||
293. ಸೂರ್ಯಕುಲೋತ್ತಮ ರಘುವಂಶ ತಿಲಕ |
ಮೂರು ತಾಯಿಂದರ ಮಡಿಲಲ್ಲಿ ಆಡುತ್ತಾ ||
ಮೂರು ತಮ್ಮಂದಿರ ಒಡನಾಟದ ಜೊತೆ |
ಮೂರುಲೋಕದ ಸ್ವಾಮಿ ತಾ ಕಳೆದ ಬಾಲ್ಯವ ||
ಮರೆಯದೆ ಸತ್ಯ ವಚನ ಪರಿಪಾಲಿಸಲು |
ಮರ್ತೈಲೋಕದ ಶಿಕ್ಷಣಕ್ಕಾಗಿ ತಾ ನಡೆದು ತೋರಿದ ||
ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನೇ |
ತೋರಲು ಲೀಲೆ ನಾನಾವತಾರವೆತ್ತಿದ ಶ್ರೀಕೃಷ್ಣವಿಠ್ಠಲ ||
294. ರೂಪ ಮತ್ಸ್ಯದಿ ವೇದ, ವನೌಷಧಿ ರಕ್ಷಿಸಿದ |
ರೂಪ ವರಾಹದಿ ಧರಣಿಯನ್ನೆತ್ತಿ ಕಕ್ಷೆಯಲ್ಲಿಟ್ಟ ||
ರೂಪ ಕೂರ್ಮದಿ ಗಿರಿಭಾರವೆತ್ತಿ ಅಮೃತ ಊಣಿಸಿದ |
ರೂಪ ನರಸಿಂಹನಾಗಿ ಭಕ್ತಿಗೆ ಒಲಿವನೆಂದು ತೋರಿದ ||
ರೂಪ ವಾಮನದಿ ಅಹಂಕಾರ ಮೆಟ್ಟಿ ಇಂದ್ರಗೆ ಸ್ವಸ್ಥಾನವಿತ್ತ |
ರೂಪ ಪರಶುನಾಗಿ ತಂದೆ ವಚನ ಪರಿಪಾಲಿಸಿದ ||
ರೂಪ ಶ್ರೀರಾಮನಾಗಿ ದುಷ್ಟರ ತರಿದು ಶಿಷ್ಟರ ರಕ್ಷಿಸಿದ |
ರೂಪ ಶ್ರೀಕೃಷ್ಣನಾಗಿ ಧರ್ಮಜ್ಞಾನ ಬೋಧಿಸಿದ ||
ರೂಪ ಬುದ್ಧನಾಗಿ ಅಜ್ಞಾನಿಗಳಿಗೆ ಅವೇದ ಸಾರಿದ |
ರೂಪ ಕಲ್ಕಿಯಾಗಿ ಹಯವೇರಿ ಧರ್ಮಸಂಸ್ಥಾಪಿಸಿದ ||
ರೂಪ ಅನೇಕ ತೋರಿ ಪ್ರತಿಯುಗದಿ ಮನುಕುಲ ಸಂರಕ್ಷಿಸುವ ನಮ್ಮ ಶ್ರೀಕೃಷ್ಣವಿಠ್ಠಲ ||
295. ಶ್ರೀಹರಿಯು ಸ್ವತಂತ್ರ, ಸ್ವಾಭಾವಿಕ ಕರ್ತೃ |
ಬ್ರಹ್ಮಾದಿಗಳ ಕರ್ತೃತ್ವ ಇವನಧೀನ ||
ಬ್ರಹ್ಮಧ್ಯಾನವೇ ಅಕ್ಷಯ ಸುಖ ಅನುಭವ |
ಬ್ರಹ್ಮಯೋಗ ಸಹಿತ ಸುಖವೇ ಶಾಶ್ವತ ||
ಇಹ-ಪರದಿ ಪಾಪ-ಪುಣ್ಯಫಲ ಅಸ್ವತಂತ್ರ |
ಸಹಿಸಿ ಚಿತ್ತ ಚಾಂಚಲ್ಯ ಜ್ಞಾನ ಸಾಧಿಸಿರೆ ||
ಸ್ವಹೃದಯದಿ ಶ್ರೀಕೃಷ್ಣವಿಠ್ಠಲನ ದರ್ಶನಾನಂದ ಪ್ರಾಪ್ತಿ ||
296. ಆಗು-ಹೋಗುಗಳು ಮಾನವರ ವಶವಲ್ಲ |
ಎಗರಾಡದೆ ಏಳು-ಬೀಳುಗಳ ಎದುರಿಸು ||
ನಗುನಗುತಲೇ ಸ್ವೀಕರಿಸು ಪಾಲಿಗೆ ಬಂದಿದ್ದು |
ಸಾಗು ಮುಂದೆ ಸುಖ-ದು:ಖ ದಾಟುತಾ ||
ಬಗೆಬಗೆಯ ಘಟನೆಗಳು ಜೀವನಕೆ ಸವಾಲು |
ಹಿಗ್ಗದೆ-ಕುಗ್ಗದೆ ಸಮಸ್ಥಿತಿ ಕಾಪಾಡಿಕೊಂಡು ||
ಬಗ್ಗಿ ನಡೆದಾಗಲೇ ಸಗ್ಗ-ಸುಖ ಸಿಗುವುದು |
ಆಗಲೇ ಶ್ರೀಕೃಷ್ಣವಿಠ್ಠಲನಲಿ ಭಕ್ತಿ ಬರುವುದು ||
297. ನದಿ ಕಲರವದಿ, ಹೂವಿನ ಪರಿಮಳದಿ, ಗಾಳಿಯ ಸ್ಪರ್ಶದಿ |
ಸುಂದರ ನೋಟದಿ, ಮಗುವಿನ ಮುಗ್ಧತೆಲಿ, ಅರಳಿದ ಪುಷ್ಟದಿ ||
ಹಾಡಿನ ಮಾಧುರ್ಯದಿ, ಮಳೆಬಿದ್ದ ಹಸಿ ಮಣ್ಣಿನ ಸುವಾಸನೆಯಲಿ |
ಅಡಗಿರುವ ಸುಚೇತನ, ಸಕಲ ಪ್ರಾಣಿ, ವೃಕ್ಷ, ಸರ್ವತಾಣದಿ ||
ತುದಿ ಮೊದಲಿಲ್ಲದೆ ಓತ ಪ್ರೋತನಾಗಿ ಎಳ್ಳುಮೊನೆ ಬಿಡದಷ್ಟು |
ಕಂಡು ಕಾಣದಂತೆ ಹಬ್ಬಿರುವ ಸರ್ವಸಾಕ್ಷಿಗನಾಗಿರುವ ||
ಹೃದಯಸ್ಥ ಆತ್ಮದಿ ನೆಲಸಿ ಸರ್ಮವನ್ನೂ ಮಾಡಿ ಮಾಡಿಸುವ |
ಹದಿನಾಲ್ಕು ಲೋಕಗಳಲಿದ್ದು ಜೀವಿಗಳಿಂದ ಸಾಧನೆ ಮಾಳ್ಪ ||
ಪದ್ಮಸ್ಥ ಚತುರ್ಮುಖ ಬ್ರಹ್ಮಾದಿ ಸಕಲ ದೇವತೆಗಳ ಸೃಷ್ಟಿಸುವ |
ಉದರದಿ ಸರ್ವಲೋಕ ಧರಿಸಿ ತಾನೂ ಲೋಕದಿ ಪಸರಿಸಿರುವ ||
ಐದು ಭೂತಗಳೊಳಗೆ ತಾನಿದ್ದು ತನ್ನೊಳಗೆ ಐದು ಭೂತ ಇಷ್ಪಂತೆ |
ಸದಾ ಸೇವಿಸುವ ರಮೆಯ ಹೃದಯಸ್ಥ ತನ್ನ ವಕ್ಷ ಸ್ಥಲದಿ ಕುಳ್ಳಿಸಿರುವ ||
ಬಿಡಿಸಿದರೂ ಬಿಡಿಸಲಾಗದ ಗಂಟಿನ ನಂಟು ಎಲ್ಲದರ ಜೊತೆ |
ಒಡೆಯಲಾರದ ಒಗಟಾಗಿರುವ ನಮ್ಮ ಶ್ರೀಕೃಷ್ಣವಿಠ್ಠಲ ಚಿಂತನೆಗೂ ನಿಲುಕದವ ||
298. ಶ್ರೀಮಹಾಲಕುಮಿ ಸಕಲ ಸೌಭಾಗ್ಯ ಪ್ರದಾತೆ |
ಎಮ್ಮ ಮನೆಗೆ ಬಾರಮ್ಮಾ ಕೈಮುಗಿದು ಬೇಡಿಕೊಂಬೆ ||ತಾಯೇ ||ಪ||
ನೀನೊಲಿದ ಮನೆ ಅರಮನೆಯಾಗುವುದು |
ನೀನಿದ್ದೆಡೆ ಸಂಪತ್ತು ತುಂಬಿ ಹರಿವುದು ||
ನಿನ್ನ ಸಾನಿಧ್ಯದಿ ಮನ ಮುದವಾಹುದು |
ನಿನ್ನಿಂದಲೇ ಜ್ಞಾನ, ಭಕ್ತಿ ಉಕ್ಕೇರುವುದು ||ತಾಯೇ ||1||
ಕಂಗಳು ತೆರೆದು ಕೃಪೆಯಲಿ ನೋಡೆ |
ಹಿಂಗದಂತಹ ಸುಖವಿತ್ತು ಸಲಹು ||
ಭಂಗವಿಲ್ಲದೆ ಸಜ್ಜನ ಸಂಗದೊಳಿಡಿಸು |
ಮಂಗಳಮಯಿ ಸಂತೃಪ್ತಿಯಿಂದ ಹರಸೆನ್ನ ||ತಾಯೆ ||2||
ಅಬ್ಧಿಸುತೆ ನಿತ್ಯಾವಿಯೋಗಿನಿ |
ಶುಭ್ರವಸನೆ ನಾನಾಭರಣ ಭೂಷಿತೆ ||
ಅಭಯ ಹಸ್ತೇ ಬ್ರಹ್ಮ-ರುದ್ರಾದಿವಂದಿತೆ |
ಶುಭಕಾಯೆ ಶ್ರೀಕೃಷ್ಣವಿಠ್ಠಲನರ್ಧಾಂಗಿ ||ತಾಯೆ ||3||
299. ಪೂಜಿಸಲು ನಿತ್ಯ ಮನಬಾರದು |
ಭಜಿಸುವ ರೀತಿ ತಿಳಿಯದು ||
ರಾಜ ವೈಭವಕೆ ಮನ ಸೋಲುವುದು |
ಭೋಜನಕ್ಕಾಗಿ ಸದಾ ಪರಿತಪಿಸುವುದು ||
ಮಜಾ ಮಾಡಿ ಪವಡಿಸೆ ಸುಖರಾತ್ರಿ ಕಳೆವುದು |
ಕಜ್ಜಾಯ ಮೆದ್ದಂತೆ ಕಾಲ ಸರಿಯುತಿದೆ ||
ಮುಂಜಾವಿನ ಮಂಜಿನ ಹನಿಯಂತಿರುವೆ |
ನಿಜದಿ ಸಜ್ಜನರ್ಯಾರೋ ತಿಳಿಯದಲ್ಲ ||
ಗೋಜಲು ಬೀಳದೆ ಹಿಂದೆ-ಮುಂದೆ ನಂಬಿದೆ |
ಕಂಜನಾಭ ಶ್ರೀಕೃಷ್ಣವಿಠ್ಠಲಗೆ ಕ್ಷಮಿಸೆಂದು ಬೇಡುವೆ ||
...
300. ಮೂರುತಿ ನೊಡಿದರೂ ಭಕುತಿ ಬಾರದು |
ಕೀರುತಿ ಪಾಡಿದರೂ ಭಕುತಿ ಬಾರದು ||
ತೀರ್ಥಯಾತ್ರೆಗೆ ಪೋದರೂ ಭಕುತಿ ಬಾರದು |
ಇರಳು-ಹಗಲು ಸತ್ಸಂಗದಲ್ಲಿದ್ದರೂ ಭಕುತಿ ಬಾರದು ||
ಅರ್ಥ, ವಸನ, ಕನಕ ದಾನಿಸಿದರೂ ಭಕುತಿ ಬಾರದು |
ಬರೀ ಉಪವಾಸ-ವ್ರತಾದಿಯಿಂದಲೂ ಭಕುತಿ ಬಾರದು ||
ಶ್ರೀಕೃಷ್ಣವಿಠ್ಠಲನಲಿ ಅಖಂಡಭಕುತಿ ಬರಲು ಏನು ಮಾಡಲಿ ? ||
301. ನಾನೇನು ಸೇವೆ ಮಾಡಲಿ ಕೃಷ್ಣಯ್ಯಾ |
ಏನು ಮಾಡಿದರೆ ನೀನೊಲಿಯುವೆಯಯ್ಯಾ ||ಪ||
ನಿನ್ನನ್ನೇ ಬಯಸುವ ಎನಗೆ ಸೇವಾಭಾಗ್ಯ ಕೊಡು ||ಅಪ||
ವಿಷಸಹಿತ ಕ್ಷೀರ, ಪ್ರಾಣ ಹೀರಿದವಗೆ |
ವಿಶ್ವನಾಥ ವಿಷವಿಳಿಯಲು ದೃಷ್ಟಿ ತೆಗೆಯಲೇ ? ||1||
ಶಕಟನ ಒದ್ದ ಪುಟ್ಟಪಾದ ನೊವಾಯಿತೇ |
ಶಂಕಿಸದೇ ಎಣ್ಣೆ ಪೂಸಿ ಪಾದ ಒತ್ತಲೆ ? ||2||
ಕದ್ದು ತಿಂದೆ ಮೊಸರು, ಬೆಣ್ಣೆ ಉದರ ಶೂಲೆಯೇ |
ಹದವಾದ ಬಿಸಿನೀರು ಕಾಸಿ ಕುಡಿಸಲೆ ? ||3||
ಉಲೂಖ ಬಂಧನದಿ ಹೊಟ್ಟೆಗೆ ಗಾಯವಾಯಿತೇ |
ಮೆಲ್ಲಗೆ ಊದಿ ಕೈಯಾಡಿಸಲೆ ? ||4||
ಹೆಡೆಯ ಮೇಲೆ ನರ್ತಿಸಿ ದಣಿವಾಯಿತೇ |
ಒಡನೆ ಚಾಮರ ಬೀಸಿ ಅಹ್ಲಾದ ಮಾಡಲೆ ? ||5||
ದಾವಾನಲ ಪಾನಮಾಡಿ ಬಾಯಿ ಸುಟ್ಟಿತೇ |
ಸುವದನಕೆ ಜೇನು ತುಪ್ಪ ಲೇಪಿಸಲೆ ? ||6||
ಕಿರು ಬೆರಳಲಿ ಬೆಟ್ಟ ಎತ್ತಿ ಕೈ ಉಳುಕಿತೇ |
ಪರಿ ಪರಿ ಔಷಧ ತಿಕ್ಕಿ ಪಟ್ಟು ಹಾಕಲೆ ? ||7||
ರಾತ್ರಿಯೆಲ್ಲ ರಾಸ ಕ್ರೀಡಿಸಿ ತನು ದಣಿಯಿತೇ |
ಶಕ್ತಿ ಬರಲು ಕಷಾಯಕಾಸಿ ಕುಡಿಸಲೇ ? ||8||
ವಧಿಸಲು ಕುವಲಯಾ ಪೀಡ ಮೂಡಿದ ಬೆವರು ಹನಿಗಳ |
ಮೃದುವಾದ ಸೆರಗಿನಿಂದ ಒತ್ತಿ ಒರೆಸಲೇ ? ||9||
ಹೆದರಿದ ಮಾವನ ಹತ ಮಾಡಿದವನೇ |
ಬೆದರಂತೆ ಸರ್ವಾಂಗ ರಕ್ಷೆ ಇಡಲೇ ? ||10||
ಗೋಗಳ ಸೇವಿಸಿ ಗೋಪಾಲಕರೊಡನೆ ಒಡಾಡಿದವನೇ |
ಅಂಗ-ಸಂಗದಿ ನಿನ್ನೊಡನಿದ್ದು ಸಂತೋಷ ಕೊಡಲೆ ? ||11||
ಎಂಜಲೆಲೆ ಬಳೆದು ಸುಸ್ತಾಗಿದೆಯೆ |
ಊಂಜಲ ಸೇವೆ ಮಾಡಿ ಹಾಯೆನಿಸಲೆ ? ||12||
ಸಾರಥ್ಯದಿ ಲಗಾಮ ಎಳೆದು ಅಂಗೈಕೆಂಪಾಯಿತೆ |
ವರವೀವ ಹಸ್ತಕೆ ಔಷಧ ಹಚ್ಚಿ ಊದಲೇ ? ||13||
ಪಾದುಕೆಯಾಗಿಸಿ ಪಾದ ಸ್ಪರ್ಶದಿ ಪುನೀತಳಾಗಿಸು |
ಎಂದೂ ಬಿಡದೆ ಪ್ರತಿಜನುಮದಿ ಕೈ ಹಿಡಿದು ನಡೆಸೆನ್ನ ||14||
ಕಡೆಗೆ ನಿನ್ನ ಪಾಡಿ ಕೊಂಡಾಡುವ ಭಾಗ್ಯವಾದರೂ ಕೊಡು |
ಒಡನೆ ಸ್ವೀಕರಿಸಿ ಉದ್ಧರಿಸೆಂದು ಬೇಡಿಕೊಂಬೆ ||15||
ಸದಾ ಇನ್ನೊಬ್ಬರ ಹಿತವನ್ನೆ ಬಯಸುವ |
ಒಡೆಯಾ ಶ್ರೀಕೃಷ್ಣವಿಠ್ಠಲನೇ ಯಾವ ರಿತಿಯಲ್ಲಿ ಸೇವಿಸಲಿ ? ||16||
302. ನೀನೆ ಗತಿ ಕಾಣೋ, ಎನಗೆ ಕೃಷ್ಣಯ್ಯಾ |
ನಿನ್ನ ಬಿಟ್ಟರಿನ್ನಾರು ಕಾಯ್ವರು ||ಪ||
ಎನ್ನ ಮಾನಾಪಮಾನ ನಿನ್ನದಯ್ಯಾ ||ಅಪ||
ಮತಿಹೀನಳೆನಿಸಬೇಡಾ ದುರ್ಗತಿಗೆಳೆಯಬೇಡಾ |
ಸತ್ಯ ಪಥವ ತೋರಿ ಜೀವನ ಸತ್ವವಾಗಿಸು ||
ಮತ್ತೇರದಂತೆ ನಿಜದಿ ಅಷ್ಟಮದ ಅಳಿಸಯ್ಯಾ |
ಚತುರತನದಿ ಚಿಂತೆ ಕಳೆದು ನಿಶ್ಚಿಂತನಾಗಿಸು ||1||
ಹೊಡೆದರೂ ಕಂದ ತಾಯಿ ಬಳಿಗೇ ಹೋಗುವಂತೆ |
ಭಂಡ ಜೀವ ತಿರುಗಿ ತಿರುಗಿ ಪರಮಾತ್ಮನ ಉದರ ಪೊಕ್ಕಂತೆ ||
ಮಾಡುತಾ ಪದೇ ಪದೇ ತಪ್ಪುಗಳ ಕ್ಷಮೆಯಾಚಿಸುವೆ |
ಕಾಡಿ ಬೇಡುವೆ ಎನ್ನ ಅವಗುಣ ಚಿತ್ತಕ್ಕೆ ತರದಿರು ||2||
ಕೈಮುಗಿವೆ, ಶರಣೆಂಬೆ, ಕಾಲಿಗೆ ಬೀಳುವೆ |
ಅಮಲ ಭಕುತಿ ಇತ್ತು ಧ್ಯಾನದಲ್ಲೇ ಮುಳುಗಿಸು ||
ಸುಮನದಿ ಶುದ್ಧ ಮೂರುತಿ ನಿಲ್ಲಿಸೋ ಆನಂದಾತ್ಮನೇ |
ಸಮಯ ಸಮಯಕೆ ಎನ್ನ ತಿದ್ದು ಉದ್ಧರಿಸು ||3||
ತಂದೆ-ತಾಯಿ, ಬಂಧು-ಬಳಗ ಎಲ್ಲ ನೀನೇ |
ಕಂದ ನಿನ್ನವನೆಂದು ತಿಳಿದು ಸಲಹಯ್ಯಾ ||
ನೊಂದ ಜೀವ ನಿನ್ನ ತಿಳಿಯದೆ ನಂದಿಸದಿರು |
ನಂದ ಕಂದ ಶ್ರೀಕೃಷ್ಣವಿಠ್ಠಲ ನಿಂದಿಸೆನ್ನ ದೂರದಿರು ||4||
303. ಹರಿ ಹರಿ ಹರಿ ಎನಲು ಹಾರಿಹೋಗುವುದು ಪಾಪ |
ಹರಿ ಸ್ಮರಣೆ ಎಂತಾದರೂ ಆಗಲಿ ಪಾಪದ ಅಂಜಿಕೆ ಇಲ್ಲ ||1||
ಹರಿ ನಾಮದಲ್ಲಿಹುದು ಅನಂತ ಪಾಪನಾಶ ಶಕ್ತಿ |
ಹರಿದ್ವಾರ ಎನಲು ಸುಖಕೆ ಮಾರ್ಗ ಆಗುವುದು ||2||
ಹರಿವುದು ನೀರು ಎನಲು ಹರಿದು ಹೋಗುವುದು |
ಹರಿಯಿತು ಅರಿವೆ ಎನಲು ಅರಿವು ಮಾಡುವುದು ||3||
ಹರಿಯಿತು ಕಾಗದ ಎನಲು ಪರಪರ ಹರಿವುದು |
ಹರಿಯಿತು ಹಾವು ಎನಲು ಸರಿದು ಹೋಗುವುದು ||4||
ಹರಿಯಿತು ಬೆಳಗು ಎನಲು ಕಳೆವುದು ಕತ್ತಲೆ |
ಹರಿಗೋಲ ಎನಲು ಇದ್ದದ್ದು ಹಿಂದಕ್ಕೆ ಹೋಗುವುದು ||5||
ಹರಿಣಿ ಎನಲು ಜಿಗಿಯುತ್ತಾ ಓಡಿ ಪೋಪುದು |
ಹರಿಣಾಕ್ಷಿ ಎನಲು ದೃಷ್ಟಿಯಿಂದಲೇ ನಾಶವಾಗುವುದು ||6||
ಹರಿವಾಣ ಎನಲು ಹರುಷದಿ ತುಂಬಿ ತುಳುಕುವುದು |
ಹರಿಚಂದನ ಲೇಪ ಎನಲು ವಜ್ರಲೇಪ ಅಳಿವುದು ||7||
ಹರಿವೆ ಸೊಪ್ಪು ಎನಲು ಬೆಂದು ಹೋಗುವದು |
ಹರಿತ್ ಸಸ್ಯಶ್ಯಾಮಲೆ ಎನಲು ಜೀವನ ಹರಿದ್ವರ್ಣವಾಗುವುದು ||8||
ಹರಿದಿನ ಭಕ್ತಿಯಲಿ ಉಪವಾಸವಿರೆ ಹರಿಪದ ಪ್ರಾಪ್ತಿ |
ಹರಿದಾಸ ನಾನೆನಲು ಜೀವನ ಸಾರ್ಥಕ ವೆನಿಪುದು ||9||
ಹರಿಕಥೆಯ ಕೇಳಲು ಪಾಪ ಕಳೆದು ಮುಕ್ತಿ ಸಿಗುವುದು |
ಹರಿಸಂಗ ದೊರಕಲು ಮನ ನಲಿದಾಡುವುದು ||10||
ಹರಿಮಯ ಎನಲು ಸಂತೋಷದ ಹೊನಲಾಗುವುದು |
ಹರಿ ಶ್ರೀಕೃಷ್ಣವಿಠ್ಠಲನೆಂದು ಭಜಿಸೆ ಪಾಪ ಎಲ್ಲಿರುವುದು ? ||11||
304. ಓಡಿ ಪೊದನೇನ ರಂಗಯ್ಯಾ ಓಡಿಪೊದನೇನೆ |
ಪಿಡಿದ ಕೈ ಕೊಸರಿಕೊಂಡು ಓಡಿಪೋದನೇನೆ ||ಪ||
ಹಿಡಿತಕೆ ಸಿಗದವನ ಹೇಗೆ ಹಿಡಿಯಲಿ ||ಅಪ||
ಸದ್ದು ಮಾಡದೆ ಕಳ್ಳ ಬೆಕ್ಕಿನಂತೆ |
ಎಂದಿನಂತೆ ಒಳಗೆ ತಿಳಿಯದ್ಹಾಂಗೆ ಬರುವ ||
ಮೆದ್ದು ಹಾಲು-ಬೆಣ್ಣೆ ಮೆಲ್ಲಗೆ ಹೋಗುವ |
ಹಿಂದಿನಿಂದ ಬಂದು ಹಿಡಿಯಲು ಓಡಿಪೋಗುವ ||1||
ಬರುವ ಪ್ರತಿದಿನ ತಪ್ಪದೆ ಗೆಳೆಯರೊಡನೆ |
ತೋರಿಸಿ ಕೊಲು ಹೆದರಿಸಲು ಹಲ್ಲು ಕಿಸಿಯುವ ||
ಮರಳಿ ಬಂದರೆ ಯಶೋದೆಗೆ ಪೇಳುವೆನೆಂದರೆ |
ತಿರುಗಿ ನಿಂತು ಸೊಟ್ಟಮೊರೆ ಮಾಡಿ ಅಣಕಿಸುವ ||2||
ಹುಸಿ ಮುನಿಸು ತೋರಿದರೂ ಹೃದಯದಿ ಬಯಕೆ |
ಆಸೆ ಮೂಡುವುದು ಮನದಿ ನಿತ್ಯ ಬರಲೆಂದು ||
ಹಸನಾದ ಬೆಣ್ಣೆ, ಕಾಸಿದ ಹಾಲು ಕೊಡಲು ಕಾಯುತ್ತಾ |
ಚೇಷ್ಟೆಕಾರ ಶ್ರೀಕೃಷ್ಣವಿಠ್ಠಲನ ಕಾಣದೆ ಜೀವ ನಿಲ್ಲದು ||3||
305. ಸಕಲ ಪುಣ್ಯವೂ ದಾನದ ಹಿಂದೆ |
ಸಕಲ ದಾನವೂ ಅನ್ನದಾನದ ಹಿಂದೆ ||
ಸಕಲ ಸುಖವೂ ಆರೋಗ್ಯದ ಹಿಂದೆ |
ಸಕಲ ಬಂಧುಗಳು ತಾಯ್ತಂದೆ ಹಿಂದೆ ||
ಸಕಲ ವ್ರತವೂ ಏಕಾದಶಿ ವ್ರತದ ಹಿಂದೆ |
ಸಕಲ ಸುಗುಣಗಳು ಶೀಲಗುಣದ ಹಿಂದೆ ||
ಸಕಲ ವಿದ್ಯೆಯು ಅಧ್ಯಾತ್ಮ ವಿದ್ಯೆ ಹಿಂದೆ |
ಸಕಲ ದೇವತೆಗಳು ಶ್ರೀಕೃಷ್ಣವಿಠ್ಠಲನ ಹಿಂದೆ ||
306. ನಿಜ ಪೇಳಲೇನೆ ಗೋಪಮ್ಮಾ ಮನದಮಾತು |
ಭಜಿಸಿ ನಿತ್ಯ ನಾಮ ಪಾಡುವುದೇ ಎಮ್ಮ ಕಾಯಕ ||
ರಂಜಿಸಿ ಮುದ ನೀಡುವುದು ಅವನ ಲೀಲೆಗಳ ನೆನಪಲಿ |
ವ್ರಜಭೂಮಿ ಕಣಕಣದಲ್ಲಿರುವನೇ ಪ್ರತಿ ಉಸಿರಲಿರುವ ||
ಅಂಜದೆ ಬೀಸುವ ತಂಗಾಳಿಯಲ್ಲಿದೆ ಸ್ಪರ್ಶದ ಅನುಭವ |
ಹೆಜ್ಜೆಯ ಗೆಜ್ಜೆನಾದದಲಿ ಮುರಳಿನಾದ ಕೇಳುವುದು ||
ಮುಂಜಾನೆ ಎದ್ದರೆ ಅವನದೇ ಉದಯರಾಗ |
ಸಂಜೆವರೆಗೂ ಅವನದ್ದೇ ಸದಾ ಗುಣಗಾನ ||
ಮುಂಜಾನೆಯಿಂದ ಸಂಜೆ ತನಕ, ಸಂಜೆಯಿಂದ ಮುಂಜಾನೆತನಕ |
ಕಂಜನಾಭ ಶ್ರೀಕೃಷ್ಣವಿಠ್ಠಲ ಮೂರುತಿ ಒಳ-ಹೊರಗೆ ಎಲ್ಲೆಲ್ಲೂ ಕಾಣುವುದು ||
307. ಮನವಿದೇ ಬಯಸಲಿ ದಯಾನಿಧೇ ದಯಾನಿಧೇ |
ನಿನ್ನ ನೆನೆಯದೇ ಕ್ಷಣವೆಂದೂ ಕಳೆಯದಿರಲಿ ||
ಮನದ ಕನ್ನಡಿಯ ಮಲವು ತೊಳೆದು ಸ್ವಚ್ಛವಾಗಿಸು |
ಬನ್ನ ಬಡಿಸದಿರು ಲೌಕಿಕದಿ ಎಲ್ಲರೊಳಗೆ ||
ಜನುಮ ಜನುಮದಿ ಬಿಂಬಮುರುತಿ ಸ್ಥಿರದಿ ನಿಲ್ಲಿಸು |
ಚೆನ್ನಾಗಿ ನಲಿದಾಡುವುದ ನಿತ್ಯದಿ ಒಳಗಣ್ಣಿಗೆ ತೋರು ||
ಕೊನೆಯತನಕ ಮೊನಚಾಗಿ ಸತ್ಯದಿ ಕಾಣುತಿರಲಿ |
ಕನವರಿಸುತಿರುವೆ ನಿನ್ನ ಕೃಪೆಗಾಗಿ ಪ್ರತಿಕ್ಷಣದಿ ||
ನಿನ್ನ ಬಿಟ್ಟರನ್ನರಿಲ್ಲ ಮನ್ಯುನಾಮಕನೇ |
ಹೃನ್ಮಂದಿರವಾಸಿ ಶ್ರೀಕೃಷ್ಣವಿಠ್ಠಲ ತ್ವರಿತದಿ ದಯಮಾಡೋ ||
308. ಮನುಜನೇ ಮನದಲ್ಲಿ ಮರುಗದಿರು |
ಮನಸ್ಸಿನಂತೆ ನಡೆಯದು ಎಂದೆಂದೂ ||ಪ||
ಹಿಂದೆಂದೂ ನಡೆದಿಲ್ಲ ಮುಂದೆಯೂ ನಡೆಯದು ||ಅಪ ||
ಎಲ್ಲಿ, ಹೇಗೆ ಯಾವಾಗ ಹುಟ್ಟಬೇಕೆಂದು ಬೇಡಿದ್ದಿಯಾ |
ಮಲ್ಲನಂತೆ ಜೀವನಸಾರದಿ ನಾನೇ ಎನ್ನಬೇಡಾ ||
ಇಲ್ಲಸಲ್ಲದ ವಿಚಾರ ಮಾಡಿದರೆ ಅದರಂತೆ ಆಗದು |
ಒಲ್ಲದಿರೆ ಯಾವ ರೀತಿಯ ನಿರ್ಗಮನ ಗೊತ್ತಿದಿಯಾ ||1||
ಜೀವನದ ಚುಕ್ಕಾಣಿ ಹಿಡಿದವರ್ಯಾರೋ |
ಜೀವನದಿ ಬಂದು ಹೋಗವರ್ಯಾರೋ ||
ಜೀವನದ ಘಟಿಸುವ ಘಟನೆಗಳೆಷ್ಟೋ |
ನೋವು-ನಲಿವನೀವ ಅವನಿಷ್ಟ ಬಮದಾಗ ||2||
ಸೂತ್ರದ ಗೊಂಬೆಯಂತೆ ಎಲ್ಲ ಕಾಲದಿ |
ಎತ್ತಿ ಕುಣಿಸಿದರೆ ಕುಣಿಯುವುದು ಅಷ್ಟೆ ||
ಮತ್ತೆ ಕಾಲ ಬರುವರೆಗೆ ಕಾಯುವುದು |
ಚೇತನ ಹೆಸರಿಗಷ್ಟೆ ಚಿತ್ತದಂತೆ ಸಾಗದು ||3||
ಆದಿ-ಅಂತ್ಯ ತಿಳಿದಯೆ ಮಧ್ಯದ ಗೊತ್ತು ಗುರಿ ಇಲ್ಲದೆ |
ಹೋದತ್ತ ಹೊಗುವುದಷ್ಟೋ, ಒಲ್ಲೆನೆಂದರೆ ಬಿಡದು ||
ಎದುರಾಗಿ ಬಿರುಗಾಳಿಗೆ ಹಾದಿಯಲ್ಲಿ ಸಾಗಬಹುದೇ ? |
ಮೊದಲೇ ಎಲ್ಲ ನಿರ್ಧರಿಸುವ ಶ್ರೀಕೃಷ್ಣವಿಠ್ಠಲ ||4||
ನಾರದ
309. ಬ್ರಹ್ಮಪುತ್ರರಿವರು ಭಗವಂತನ ಕಾರ್ಯತತ್ಪರರು |
ಮಹತಿ ಮೀಟುತ ಸಂಚರಿಸುವರು ತ್ರಿಲೋಕದಿ ||
ಬ್ರಹ್ಮಚಾರಿಯಾದರೂ ಸಕಲರ ಮನೋಧರ್ಮವರಿತವರು |
ಇಹ-ಪರದಿ ಕಲಹಪ್ರಿಯರೆಂದೇ ಪ್ರಖ್ಯಾತರು ||
ಸಹನೆಯಲಿ ಪರಾಕಾಷ್ಠರು ನಿಂದೆಯ ಸಹಿಸುವರು |
ಸ್ನೇಹ ಜಿವಿ ಯಾರನ್ನೂ ಎಂದೂ ದ್ವೇಷಿಸರು ||
ಮಹಾತ್ಮರ ಸೇವಿಸಿ ಅಹಿಶಯನನ ಪ್ರಿಯರಾದರು |
ಮಹತ್ವ ಸಾರುವ ಶ್ರೀಮದ್ಭಾಗವತ ರಚಿಸಲು ಪೇಳಿದರು ||
ಇಹದೊಳಿರುವ ನರರಿಗೆ ಸನ್ಮಾರ್ಗ ತೋರಿದರು |
ಬಹು ವಿಧದಿ ಪರಮಾತ್ಮನ ಕೊಂಡಾಡುವ ಭಕ್ತಶ್ರೇಷ್ಠ ||
ಇಹರು ಇವರೇ ನಾರದರೆಂಬ ನಾರಾಯಣ ಸೇವಕ |
ಅಹರ್ನಿಶಿ ಶ್ರೀಕೃಷ್ಣವಿಠ್ಠಲನ ನಾಮ ಜಪಕರು ||
310. ಮಾಡಿದ್ದ ಪಾಪ ಏಕಾಂತದಿ ಯಾರೂ ಅರಿಯರೆನ್ನದಿರು |
ಎಂದೋ ಮಾಡಿದರೂ ಅದು ಮುಂದೆ ಬಾಧಿಸದೇ ತೀರದು ||
ಹದಿಮೂರು ದೇವತೆಗಳು ಅದಕ್ಕೆ ಸಾಕ್ಷಿಯಾಗಿಹರು |
ಆದಿತ್ಯ, ಚಂದ್ರ, ಪಂಚಭೂತಗಳಲ್ಲದೆ ||
ಸಂಧ್ಯಾಕಾಲಗಳು, ಮನ, ಯಮ, ಹಗಲು-ಇರಳು |
ಅದರೊಂದಿಗೆ ಬಹುಮುಖ್ಯವಾದದ್ದೇ ಧರ್ಮ || (ಪರಮಾತ್ಮ)
ಅದಕ್ಕೇ ತಕ್ಕ ಪ್ರಾಯಶ್ಚಿತವಾಗದಿದ್ದರೆ ನಂತರ |
ಮಾಡಿದ್ದುಣ್ಣೋ ಮಹರಾಯಾ ಎಂಬಂತೆ ಸತ್ಯ ಸಂಕಲ್ಪ ||
ಅದರ ಫಲ ಉಣ್ಣಿಸದೆ ಬಿಡನು ಶ್ರೀಕೃಷ್ಣವಿಠ್ಠಲ ||
311. ಚೆನ್ನ ಯಾವ ರೂಪ ಚೆನ್ನ ಮನದಿ
ನೆನೆಯಲು ಯಾವ ರೂಪ ಚೆನ್ನ ||ಸತತ|| ||ಪ||
ಚೆನ್ನವೋ ಬುಟ್ಟಿಯಲಿ ಗೋಕುಲಕೆ ತೆರಳಿದ ರೂಪ |
ಚೆನ್ನವೋ ಪೂತನಿ ಹರಣದ ರೂಪ ||
ಚೆನ್ನವೋ ಬಾಯಲಿ ಬ್ರಹ್ಮಾಂಡ ತೋರಿದ ರೂಪ |
ಚೆನ್ನವೋ ಯಶೋದೆ ಬೆನ್ನಿಗೆ ಬಿದ್ದ ರೂಪ ||1||
ಚೆನ್ನವೋ ಪರರ ಬೆಣ್ಣೆ ಕದಿಯುವ ರೂಪ |
ಚೆನ್ನವೋ ಉಲೂಖ ಬಂಧನದ ರೂಪ ||
ಚೆನ್ನವೋ ಗೋವಳ ಕಾಯ್ದ ರೂಪ |
ಚೆನ್ನವೋ ಗೋವರ್ಧನಧಾರಿ ರೂಪ ||2||
ಚೆನ್ನವೋ ಕಾಳಿಂಗ ಮರ್ದನ ರೂಪ |
ಚೆನ್ನವೋ ಮುರುಳಿ ಊದಿದ ರೂಪ ||
ಚೆನ್ನವೋ ಸ್ತ್ರೀವಸ್ತ್ರಾಪಹರಣ ರೂಪ |
ಚೆನ್ನವೋ ರಾಸಕ್ರೀಡೆಯ ನಾನಾ ರೂಪ ||3||
ಚೆನ್ನವೋ ರಾಧೆ ಸಂಗಡ ವಿಹಾರ ರೂಪ |
ಚೆನ್ನವೋ ಮಾವ ಕಂಸನ ಕೊಂದ ರೂಪ ||
ಚೆನ್ನವೋ ರುಕ್ಮಿಣಿ ವರಿಸಿದ ರೂಪ |
ಚೆನ್ನವೋ ಸುದಾಮನ ಹರಸಿದ ರೂಪ ||4||
ಚೆನ್ನವೋ ರಥ ಸಾರಥ್ಯದ ರೂಪ |
ಚೆನ್ನವೋ ಗೀತೆ ಉಪದೇಶಕ ರೂಪ ||
ಚೆನ್ನವೋ ಅಗಾಧ ವಿಶ್ವರೂಪ |
ಚೆನ್ನವೋ ಚಕ್ರಪಿಡಿದೆತ್ತಿದ ರೂಪ ||5||
ಚೆನ್ನಕ್ಕಿಂತ ಚೆನ್ನ ಅನೇಕಾನೇಕ ರೂಪ |
ಚೆನ್ನ ಕಡೆಗೋಲು ಪಿಡಿದ ಬಾಲ ರೂಪ ||
ಚೆನ್ನ ಸ್ಮರಿಸಲು ಒಲಿವ ಎಲ್ಲ ರೂಪದಿ |
ಚೆನ್ನ ಶ್ರೀಕೃಷ್ಣವಿಠ್ಠಲ ಸುಂದರ ಸಕಲ ರೂಪದಿ ||6||
312. ಆರು ಇರೆ ನೀನಿಲ್ಲದಿರೆ ಎಂತು ಕರುಣಾಕರ |
ಆರು ಬಲ್ಲರು ಆರಿಗೆ ನೀನೊಲಿವೆ ಎಂದು ||
ಆರು ಇದ್ದರೆ ನರಕ ಭಾಜನರಾಗುವರು | (ಕಾಮಾದಿಗಳು)
ಆರು ಗುಣಗಳಿಂದ ಪ್ರಸನ್ನೀಕರಿಸಲಸಾಧ್ಯ || (ಧನ-ರೂಪ, ತಪ-ವಿದ್ಯೆ, ಬಲ-ಪೌರುಷ)
ಆರು ಇದ್ದರೆ ಭಕ್ತಿ ಲಭ್ಯವಾಗುವುದು | (ನಮಸ್ಕಾರ-ಸ್ತುತಿರೂಪಕರ್ಮ, ಪೂಜನ-ಸೇವೆ, ಸ್ಮರಣೆ-ಕಥಾಶ್ರವಣ)
ಆರು ಜನರೋದ್ಧಾರಕನೇ, ಸಮದರ್ಶಿಯೇ || (ಧ್ರುವ-ಗಜೇಂದ್ರ, ವಿದುರ-ವ್ಯಾಧ,
ಕುಬ್ಜೆ-ಸುಧಾಮ)
ಆರು ನಿನಗೊಪ್ಪಿಸುವೆ ದಯಪಾಲಿಸೋ | (ಪಂಚೇಂದ್ರಿಯಮನ)
ಅರಿಗಳ ತರಿದು ಅರಿವು ಮೂಡಿಸೋ ಶ್ರೀಕೃಷ್ಣವಿಠ್ಠಲಾ ||
313. ಪರಮ ಶಾಂತ ನಮ ನರಸಿಂಹ |
ಕರುಣಾಳು ಕಂದನ ಕರೆ ಆಳಿಸಿ ಬಂದ ||
ಕರೆಕರೆ ಮಾಡಿದ ತಂದೆಯ ಒರೆಸಿದ |
ಕರುಳಿನ ಮಾಲೆ ಕೊರಳೊಳು ಧರಿಸಿದ ||
ಕರದಿಂದ ಉದರದಿ ರತ್ನಗಳ ಹುಡುಕಿದ |
ಕರೆದು ಹತ್ತಿರ ಪ್ರಲ್ಹಾದನ ಶಿರ ನೇವರಿಸಿದ ||
ವರವ ಕೇಳೆಂದು ಪ್ರೀತಿಯಲಿ ಪೇಳಿದ |
ಚಕ್ರವರ್ತಿಯ ಮಾಡಿ ಸಿಂಹಾಸನದಿ ಕುಳ್ಳಿರಿಸಿದ ||
ಸುರೇತರ ಕುಲ್ಯನ ಭಕ್ತಿಗೆ ಒಲಿದ |
ಶ್ರೀಕೃಷ್ಣವಿಠ್ಠಲಾಭಿನ್ನ ನರಸಿಂಹ ರೂಪ ಉಗ್ರ ಹೇಗೆ ? ||1||
ಅರ್ಧನರ, ಅರ್ಧಕೇಸರ ರೂಪದಲ್ಲಿರುವ |
ಕೂರಲಗಿನಂತೆ ನಖಗಳ ಪೊಂದಿರುವ ||
ಕರೆದಲ್ಲಿ ಬಂದು ತೋರಿದಲ್ಲಿ ಪ್ರತ್ಯಕ್ಷನಾದ |
ಶೀಘ್ರದಿ ಭಕ್ತರನು ಕರುಣಿಸುವನಿವ ||
ಗರ್ಜಿಸಿ ದ್ವೇಷಿಗಳ ಹೃದಯ ಸೀಳುವ |
ಸ್ಮರಿಸಲು ಸುಜನರು ಸದಾ ನರಸಿಂಹನ ||
ನರಸಿಂಹಸ್ತುತಿ ಪಠಿಸಲು ಶನಿ ಕಾಟವಿರದು |
ಅಗ್ರದಿ ನಾರಸಿಂಹ ಹಿಂದೆ ಶ್ರೀಕೃಷ್ಣವಿಠ್ಠಲರಿದ್ದು ರಕ್ಷಿಪರು ||2||
ಬಾರದು ಭಯ ಕಂದಗೆ ತಾಯಿ ಮಡಿಲಲಿ |
ಬಾರದು ಸಂಶಯ ಗುರುವಿನಲಿ ಶಿಷ್ಯಗೆ ||
ಬಾರದು ಕತ್ತಲೆ ಸೂರ್ಯನ ಬೆಳಕಿನಲಿ |
ಉಗ್ರರೂಪ ಎಂದೂ ತೋರದು ಭಕ್ತಗೆ ನರಸಿಂಹನಲಿ ||
ಶರಣು ಬಂದವರಿಗೆ ಆಪದ್ಬಾಂಧವನಿವ |
ಕರಪಿಡಿದು ನಡೆಸಿ ಆಪತ್ತು ಕಳೆವನು ||
ಪತ್ರ-ಪುಷ್ಪ, ಫಲ-ಜಲದಿ ಸಂತೃಪ್ತ |
ಸಂರಕ್ಷಿಸುವ ಸದಾ ಶ್ರೀಕೃಷ್ಣವಿಠ್ಠಲಾಭಿನ್ನ ನರಸಿಂಹ ||3||
ನೀರು ಕುಡಿದಂತೆ ಆಪೋಶನದಿ ಜಗತ್ತನ್ನೇ ನುಂಗುವ |
ಶ್ರೀಕೃಷ್ಣವಿಠ್ಠಲಾಭಿನ್ನ ನರಸಿಂಹ ಇರುತಿಹನು ಭಾವನೆಗೆ ತಕ್ಕಂತೆ ||
314. ಬಾಯ್ತೆರೆದು ಹರಿ ನಾರಾಯಣ, ಗೋವಿಂದ ಎನೆ |
ಎತ್ತರಕೆ ಏರಿಸುವುದು ಎಲ್ಲರ ದೃಷ್ಟಿಯಲಿ ||
ಗುಪ್ತವಾಗಿ ತುಟಿಯಲಿ ಶ್ರೀರಾಮನ ಜಪಿಸಲು ಆರಾಮ | (ಉಪಾಂಶು)
ನಿತ್ಯದಿ ಶ್ರೀಕೃಷ್ಣವಿಠ್ಠಲನ ಮನದಿ ನೆನೆಯೆ ಮುಕ್ತಿಪ್ರದಾಯಕ ||
315. ಸತತ ಮಾಡಲು ಪರಮಾತ್ಮನ ನಾಮೋಚ್ಚಾರ |
ಪ್ರತಿ ಉಸಿರಿಗೊಮ್ಮೆ ಉಚ್ಚರಿಸೆ ದೇಹ ಶುದ್ಧಿಯಲಿ ||
ಚಿತ್ತ ಶುದ್ಧಿಯೂ ಮಾಳ್ಪ ಸಕಲ ಪಾಪ ಪರಿಹಾರದಿ |
ಸ್ತುತ್ಯ ಶ್ರೀಕೃಷ್ಣವಿಠ್ಠಲ ಒಲಿದು ಅನುಗ್ರಹಿಪ ಸರ್ವಸಿದ್ದಿ ||
316. ಸಾವು ನಿಶ್ವಿತ, ಹುಟ್ಟಿದ್ದು ಸಾಯಲೇಬೇಕು |
ಹಾವು ಮೈಮೇಲೆ ಹರಿದಂತೆ ಭಯವೇಕೆ ? ||
ನೋವಿಗಂಜಿದೊಡೆ ಸಾವು ತಪ್ಪವುದೆ ? |
ಸಾವು ದೇಹ ಕಷ್ಟೇ, ಆತ್ಮ ಅಮರ ಸದಾ ||
ಯಾವ ವಿಧದಿ ಬಂದರೂ ದು:ಖಿಸುವದೇಕೆ |
ಕಾವುದಮ್ಮನು ತಪ್ಪದೇ ಶ್ರೀಕೃಷ್ಣವಿಠ್ಠಲನ ಕೃಪೆ ||
317. ಭಿಕ್ಷೆಯಿಂದ ಬಂದ ಜೀವನ ಕಳೆವವರೆಷ್ಟೋ |
ರಕ್ಷೆ ಇಲ್ಲದೆ ಹಾಳಾಗಿ ಕೆಟ್ಟ ಹಾದಿ ಹಿಡಿವವರೆಷ್ಟೋ ||
ಸಾಕ್ಷಿ ಇಲ್ಲವೆಂದು ತಿಳಿದು ಕುಕರ್ಮ ಮಾಡುವವರೆಷ್ಟೊ |
ಭಕ್ಷಣೆಗಾಗಿ ನಿಷಿದ್ಧ ಅನ್ನ ಸೇವಿಸುವವರೆಷ್ಠೋ ||
318 ಕುಕ್ಷಿಗಾಗಿ ಜಗದೊಳು ಅಳುವವರೆಷ್ಟೋ |
ಸೊಕ್ಕಿನಿಂದ ಅನ್ನಹಾಳು ಮಾಡುವವರೆಷ್ಟೋ ||
ದಾಕ್ಷಿಣ್ಯದಿ ಆಹಾರವಿತ್ತು ಸಲುಹುವವರೆಷ್ಟೋ |
ದಕ್ಷ ಶ್ರೀಕೃಷ್ಣವಿಠ್ಠಲ ನಿನ್ನಂತೆ ಹೊಟ್ಟಿಗಿತ್ತು ಸಲುಹುವರ ನಾ ಕಾಣೆ ಎಲ್ಲೂ ||
319. ಎನ್ನ ಆನಂದ ಕೃಷ್ಣಯ್ಯಾ | ಎನ್ನ ಚೇತನ ಕೃಷ್ಣಯ್ಯಾ ||
ಎನ್ನ ಮುದ್ದು ಕೃಷ್ಣಯ್ಯಾ | ಎನ್ನ ಮಹಾದೇವ ಕೃಷ್ಣಯ್ಯಾ ||
ಎನ್ನ ತಾಯಿ ಕೃಷ್ಣಯ್ಯಾ | ಎನ್ನ ತಂದೆ ಕೃಷ್ಣಯ್ಯಾ ||
ಎನ್ನ ಬಂಧು ಕೃಷ್ಣಯ್ಯಾ | ಎನ್ನ ಬಳಗ ಕೃಷ್ಣಯ್ಯಾ ||
ಎನ್ನ ಹಬ್ಬ ಕೃಷ್ಣಯ್ಯಾ | ಎನ್ನ ಹರಿದಿನ ಕೃಷ್ಣಯ್ಯಾ |
ಎನ್ನ ವ್ರತ-ನೇಮ ಕೃಷ್ಣಯ್ಯಾ | ಎನ್ನ ತೀರ್ಥಯಾತ್ರೆ ಕೃಷ್ಣಯ್ಯಾ ||
ಎನ್ನ ವಿದ್ಯೆ ಕೃಷ್ಣಯ್ಯಾ | ಎನ್ನ ಧನ ಕೃಷ್ಣಯ್ಯಾ ||
ಎನ್ನ ಶಾಸ್ತ್ರ ಕೃಷ್ಣಯ್ಯಾ | ಎನ್ನ ಶ್ರವಣ ಕೃಷ್ಣಯ್ಯಾ ||
ಎನ್ನ ಜೀವ ಕೃಷ್ಣಯ್ಯಾ | ಎನ್ನ ಜೀವನ ಕೃಷ್ಣಯ್ಯಾ ||
ಎನ್ನ ಆತ್ಮ ಕೃಷ್ಣಯ್ಯಾ | ಎನ್ನ ಪರಮಾತ್ಮ ಕೃಷ್ಣಯ್ಯಾ ||
ಎನ್ನ ಉಸಿರು ಕೃಷ್ಣಯ್ಯಾ | ಎನ್ನ ಉದ್ಧಾರಕರ್ತ ಕೃಷ್ಣಯ್ಯಾ ||
ಎನ್ನ ಜ್ಞಾನ ಕೃಷ್ಣಯ್ಯಾ | ಎನ್ನ ಭಕುತಿ ಕೃಷ್ಣಯ್ಯಾ ||
ಎನ್ನ ಶ್ರೀಕೃಷ್ಣವಿಠ್ಠಲನೇ | ಎನ್ನ ಸರ್ವಸ್ವ ಕೃಷ್ಣಯ್ಯಾ ||
ಸ್ವಪ್ನ ದರುಶನ
320. ದರ್ಶನ ಪಡೆಯಲು ಸ್ವಪ್ನದಿ ಅನಂತೇಶ್ವರ ಸನ್ನಿಧಿಗೆ ಪೊಗಲು |
ಆಶ್ಚರ್ಯವಾಯಿತು ಪೌಳಿಯಲಿ ಕುಳಿತ ಗುರುಗಳ ಕಂಡು ||
ಆಶೀರ್ವಾದ ಪಡೆಯಲು ಪೋಗಿ ನಮಸ್ಕರಿಸಲು |
ವೀಕ್ಷಿಸಿ ಕೇಳಿದರು ಪರಮಮಂಗಳನ ಕಥೆಯಲಿ ||
ವಿಶೇಷ ಪ್ರಸಂಗ ಯಾವುದಿದೆ ಪೇಳೆನಲು |
ಅಕ್ಷಯಪಾತ್ರೇಲಿ ಪಡೆದ ಕಥಾಭಾಗ ಪ್ರಿಯವೆನಗೆನಲು ||
ಹರ್ಷದಿ ಎನಗೂ ಅದು ಪರಮ ಪ್ರಿಯವೆಂದು ಹೇಳಿ |
ಆಶೀರ್ವಾದದಿ ಇತ್ತು ಫಲಮಂತ್ರಾಕ್ಷತೆ ಹರಿಸಿದರು ||
ಸಾಕ್ಷಾತ್ ಗುರುಗಳಂತರ್ಗತ ಮಾಡಿದ ಪರಮಾನುಗ್ರಹವಿದು |
ದಶದಿಕ್ಕುಗಳಿಂದ ಮನದಿ ಹೃತ್ಪೂರ್ವಕ ನಮನಗಳು ||
ವಿಶ್ವೇಶ ಶ್ರೀಕೃಷ್ಣವಿಠ್ಠಲಗೇ ಪುನ: ನಮೋನಮ: ||
321. ಉಲ್ಲಾಸತೆಯಲಿ ಕೊಳಲು ನುಡಿಸಿದರೆ |
ಗೊಲ್ಲತಿಯರು ನೀವೆಲ್ಲ ಓಡಿ ಬರುವುದುಚಿತವೇ ? ||
ಕೆಲಸ- ಕಾರ್ಯಗಳು ನಿಮಗಿಲ್ಲವೆ ಸದನದಿ |
ಕೈಲಿದ್ದ ಕೆಲಸ ಅರ್ಧಕೆ ಬಿಟ್ಟು ಹೀಗೆ ಬರುವರೆ ? ||
ಒಲವಿನ ಪತಿ-ಸುತರು, ಅತ್ತೇ ಮಾವ ನಿಮಗಿಲ್ಲವೆ ? |
ಬಲು ಸೋಜಿಗ ರಾತ್ರೀಲಿ ಒಂಟಿಯಾಗಿ ಬರುವುದೇ ? ||
ಪೇಳುವೆನು ನಿಮ್ಮ ಒಳ್ಳೆಯದಕ್ಕೆ ಈಗಲೇ ಹಿಂತಿರುಗಿರಿ |
ಗೊಲ್ಲ ಬಾಲ ಲೊಕಾನು ರೂಢಿಯ ಮಾತನಾಡಿದ ||
ಸೊಲ್ಲ ಕೇಳಿ ಗೋಪಿಯರ ಹೃದಯ ತಲ್ಲಣಿಸಿತು |
ಜಲ ತುಂಬಿದ ನಯನದಿ ಗದ್ಗದಿತರಾದರು ||
ಕುಲಟೆಯರು ನಾವೆಲ್ಲ ದುಷ್ಟ ಕಾಮನೆ ಎಮಗಿಲ್ಲ |
ಒಲವಿನ ಪತಿ-ಸುತ, ಅತ್ತೆ-ಮಾವರೆಲ್ಲ ಎಮಗಿಹರು ||
ಎಲ್ಲ ಇವರು ಈ ಜನುಮದ ಪತಿ-ಬಾಂಧವರು |
ಕಳೆದ ಜನುಮದಿ ಶತ್ರು-ಮಿತ್ರ, ಪುತ್ರ-ಕಳತ್ರ ಏನಾಗಿದ್ದರೋ ||
ಬಲವಂತದಿ ಎಮ್ಮನು ಸಂಸಾರ ಚಕ್ರಕ್ಕೆ ಏಕೆ ಸಿಗಿಸುವಿ ? |
ಕಾಲುಗಳು ನಿನ್ನತ್ತಲೇ ಚಲಿಸುವುದು, ಮನ ನಿನ್ನಲ್ಲೇ ನೆಟ್ಟಿದೆ ||
ನಾಲಿಗೆ ನಿನ್ನನ್ನೇ ಪಾಡುವುದು, ಕಣ್ಗಳು ನಿನ್ನನ್ನೇ ಅರಸುವುದು |
ಆಲಿಸಲು ನಿನ್ನ ವೇಣುನಾದ ಕಿವಿ ಸದಾ ಹಾತೊರೆವುದು ||
ಮೇಲೆ ಹುಸಿ ಮುನಿಸು ತೋರಿದರೂ ನಿನ್ನಾಪೇಕ್ಷೆ ಎಮ್ಮ ಧ್ಯೇಯ |
ಎಲ್ಲ ಬಲ್ಲ ನೀನೇ ಪ್ರತಿ ಜನುಮದ ಪತಿ-ಬಂಧು, ಸಂರಕ್ಷಕ ||
ನಿಲ್ಲಿಸಿರುವೆವು ಎಮ್ಮ ಮನ ನಿನ್ನಲಿ ಶಾಶ್ವತವಾಗಿ |
ಒಲ್ಲೆನೆಂದರೆ ಇಲ್ಲೇ (ಪ್ರಾಣತ್ಯಾಗಿಸಿ) ನಿನ್ನ ಸೇರುವೆವು ||
ಲೀಲಾ ಮಾಧವ ನಿನ್ನನ್ನೇ ಶರಣು ಬಂದಿಹೆವು ಅನುಗ್ರಹಿಸು |
ಎಲ್ಲ ಗೊತ್ತಿದ್ದೂ ಪರೀಕ್ಷಿಸಲೆಂದೇ ಕೇಳಿದನೆಂದ ಗೋಪಾಲ ||
ಗೊಲ್ಲರು, ಗೋವ್ಗಳು, ವೃಂದಾವನ ಎನಗೆ ಪರಮಪ್ರಿಯ |
ಪೇಳಿದ ಗೋವಿಂದ ನಸು ನಗುತಾ, ನಾಚಿನಿಂದ ನೀರೆಯರಿಗೆ ||
ಅಲೌಕಿಕ ನಂದನಂದನ ಆನಂದದಿ ರಾಸವಾಡಿ ದಣಿಸಿದ |
ಅಹ್ಲಾದದಿ ಪ್ರೇಮ ಪೂರ್ಣ ಆಲಾಪದಿ ಅವರ ತಣಿಸಿದ ||
ಗೊಲ್ಲಬಾಲೆಯರೆಲ್ಲ ನಿತ್ಯಸಿದ್ಧ ಪತ್ನಿಯರು |
ತುಳಸಿಪ್ರಿಯ ಶ್ರೀಕೃಷ್ಣವಿಠ್ಠಲ ಭಕ್ತವತ್ಸಲನಿವ ||
322. ಪರಮಾತ್ಮ ನಿಸ್ಪೃಹ- ಕರ್ಮರತ: |
ಪರಮಾತ್ಮ ಅಜನ್ಮ- ಅವತಾರಿ ||
ಪರಮಾತ್ಮ ಕಾಲಾತ್ಮ- ಶತ್ರು ಪಲಾಯನಿ |
ಪರಮಾತ್ಮ ಸ್ವಾತ್ಮರಾಮ-ಸಾಸಿರ ಸ್ತ್ರೀ ಭರ್ತ ||
ಪರಮಾತ್ಮ ಅಖಂಡ ಜ್ಞಾನಿ-ಸಲಹಾಪೇಕ್ಷಿ |
ಪರಮಾತ್ಮ ಸಂಸಾರ ರಹಿತ-ಜಗತ್ ಪಿತೃ ||
ಪರಮಾತ್ಮ ಅವ್ಯಕ್ತ-ವ್ಯಕ್ತಾದೀನ |
ಪರಮಾತ್ಮ ಸ್ವತಂತ್ರ- ಪರತಂತ್ರ || (ಭಕ್ತಾನಾಂವಶ)
ಪರಮಾತ್ಮ ಭಯಕೃತ - ಭಯನಾಶಕ |
ಶ್ರೀಕೃಷ್ಣವಿಠ್ಠಲ ಸರ್ವ- ಶೂನ್ಯನಾಮಕ ||
323. ವಿಶಾಲ ನಯನ ಪರಮ ಪುರುಷನ |
ದರ್ಶಿಸಬೇಕು, ಸಂದರ್ಶಿಸಬೇಕು ||
ಸ್ಪರ್ಶಿಸಬೇಕು, ಹರ್ಷಿಸಬೇಕು |
ವಿಷಯಾಸಕ್ತ ಜೀವಿಗೆ ದುರ್ಲಭ ||
ದುಷ್ಟ ಚಿತ್ತ, ಹೃದಯಸ್ಥಗೆ ದೃಷ್ಟಿಗಗೋಚರ |
ಸಾಕ್ಷಾತ್ ಪರತತ್ತ್ವ, ವಿಶುದ್ಧ ಸತ್ವಮಯ ||
ಮೋಕ್ಷಪ್ರದಾತ ಶ್ರೀಕೃಷ್ಣವಿಠ್ಠಲ ಪಾಹಿಮಾಮ್ ||
324. ಚರಣದಲ್ಲಿರಿಸಿಕೋ ಪರಮ ಪಾವನನೇ |
ದುರ್ಗಾಪತಿ ಕರುಣಾಸಾಗರ, ಪತಿತ ಪಾವನನೇ ||ಪ||
ಮೋಸ ಮಾಡುವ ಅವಕಾಶವೊಂದೂ ಬಿಡಲಿಲ್ಲ |
ಕಾಸಿಗೆ ಆಸೆಪಟ್ಟು ಅನ್ಯಾಯಿಗಳ ಸೇವೆಗೈದೆ ||
ಅಸಹ್ಯ, ಅಭಕ್ಷಣ ಆಹಾರ ಸೇವಿಸಿದೆ |
ದುಷ್ಟನಾಗಿರುವ ಎನ್ನ ಕ್ಷಮಿಸಿ ಸಲಹೋ ||1||
ಪಂಕ್ತಿಯಲಿ ಪರಪಂಕ್ತಿ ಮಾಡಿದೆ |
ಸೊಕ್ಕಿನಲಿ ಮಾತಂದು ಮನ ನೋಯಿಸಿದೆ ||
ಉಕ್ಕಿ ಬಂದ ಕೋಪದಿ ಕೆಡಕು ಬಯಸಿದೆ |
ತೋಕ ನಾನಯ್ಯಾ ಕ್ಷಮಿಸಿ ಸಲಹೋ ||2||
ಅನ್ಯರು ಮಾನಗೇಡಿ ಎಂದರೇನೂ ಭಯವಿಲ್ಲ |
ಮನನೊಂದು ಹೃತ್ಪೂರ್ವಕದಿ ಬೇಡುವೆ ||
ಅನನ್ಯ ಭಕುತಿ ಇತ್ತು ನಿಶ್ಚಯದಿ ಕಾಪಾಡು |
ಜನ್ಮ ಸಾರ್ಥಕವಾಗಿಸಯ್ಯಾ ಶ್ರೀಕೃಷ್ಣವಿಠ್ಠಲ ||3||
325. ಮತ ಬೇಕು, ಮತಿ ಬೇಕು ಪತಿಗೆ |
ಸತಿಯಾಗಿ ಸಂಸಾರದಿ ನಿರಾಸಕ್ತಿಬೇಕು ||
ಅತಿ ಸೇವೆಗೈದು ಗುರುಗಳೊಲುಮೆಯಲಿ |
ಪತಿತ ಪಾವನನ ನಿತ್ಯ ಒಲೈಸಬೇಕು ||
ಸತ್ಯ ಜ್ಞಾನದಿ ಅನಂತ ಬ್ರಹ್ಮನ ಅರಿಯಬೇಕು |
ಭಕ್ತಿ ಸಾಗರದಿ ತತ್ಪರತೆಯಲಿ ತತ್ತ್ವನಿಷ್ಠನಾಗಿ ||
ಉತ್ಸಾಹದಿ ಉತ್ಥಾನಗೈದು ಉಚ್ಚಸ್ತರದಿ |
ಉತ್ತುಂಗ ಶ್ರೀಕೃಷ್ಣವಿಠ್ಠಲನ ಭಜಿಸಬೇಕು ||
ಮತ = ದ್ವೈತಸಿದ್ಧಾಂತ, ಮತಿ = ಬುದ್ಧಿ, ಪತಿ = ಪರಮಾತ್ಮ, ಸತಿ = ವಿಧೇಯ (ಸರ್ವಾಂಗಸೇವೆ)
|
326. ಸತ್ಯವಂತ ಬ್ರಹ್ಮನ ಪುತ್ರ ಅಧರ್ಮ |
ಈತನ ಸತಿಯಾದಳು ಮೃಷಾ ||
ಪುತ್ರ-ದಂಭ, ಪುತ್ರಿ ಮಾಯಾ ಜನಿಸೆ |
ಸಂತಾನರಹಿತ ನಿರ್ಋತಿ ಗ್ರಹಿಸಿದರಿವರಿಬ್ಬರ ||
ಸಂತತಿ ಬೆಳೆದು ಜನಿಸಿದರು ಲೋಭ-ನಿಕೃತಿ | (ಶಾಠ್ಯ)
ಮತ್ತೆ ಇವರಿಂದ ಕ್ರೋಧ-ಹಿಂಸೆ ಪುಟ್ಟಿದರು ||
ಪುತ್ರರಾಗಿ ಕಲಿ (ಕಲಹ)-ದುರುಕ್ತಿ ಇವರಿಗಾದರು |
ಪತ್ನಿದುರುಕ್ತಿಯಿಂದ ಭಯ-ಮೃತ್ಯು ಸಂತತಿ ಪಡೆದ ಕಲಿ ||
ಉತ್ಪನ್ನವಾಯಿತು ಯಾತನೆ ನಿರಯ (ನರಕ) ಜೋಡಿ ಇವರಿಂದ |
ಅತ್ಯಾಚಾರ-ಅನ್ಯಾಯ, ಅಶಾಂತಿಯ ಮೂಲವೇ ಅಧರ್ಮವಂಶ ||
ತತ್ತರಿಸಿ ಇದರಿಂದ ಪ್ರಳಯ ಕಾರಣವಾಯ್ತು |
ನಿತ್ಯದಿ ಇದ ತಿಳಿಯಲು ಅಧರ್ಮ ತ್ಯಜಿಸಿ ಪುಣ್ಯ ದೊರೆವುದು ||
ಸತ್ಸಂಗವಿರೆ, ಅಧರ್ಮ ಸಂತತಿಯಿಂದಲೇ ದೂರವಾಗುವುದು |
ಸಾತ್ತ್ವಿಕ ಪೂಜೆಯಲಿ ಸದಾ ಶ್ರೀಕೃಷ್ಣವಿಠ್ಠಲಗೆ ಕೃತಜ್ಞನಾಗಿರುವ ||
ಶ್ರೀಹರಿ ಅವತಾರ ಕಾರ್ಯ
327. ಸರೋವರದಲ್ಲಿಳಿದ ಗಜನ ಕಾಲ್ಪಿಡಿದು |
ಭದ್ರವಾಗಿ ಬಿಡದೆ ಮಕರ ನೀರಲ್ಲೆಳೆದ ||
ಸ್ವರಕ್ಷಣೆ ಫಲ ನೀಡದಿರಲು ಆರ್ತಿಯಲಿ |
ಪರಮಾತ್ಮನ ಸ್ತುತಿಸಿ ಮೊರೆ ಇಟ್ಟ ||
ಕರಿಯ ಕರೆ ಕೇಳಿ ಅವಸರದಿ ಶ್ರೀಹರಿ |
ಗರುಡನ ಹೆಗಲೇರಿ ರಮೆಗೂ ಪೇಳದೆ ||
ತ್ವರಿತದಿ ಧಾವಿಸಿ ಕಂಟಕ ಮಕರಿಯ |
ಕೊರಳು ತರಿದು ಒಡನೆ ಶುಭವಿತ್ತ ||
ಶ್ರೀಕೃಷ್ಣವಿಠ್ಠಲನ ಕಾರುಣ್ಯಕ್ಕೇನೆಂಬೆ ||1||
ಮಾತೃವಚನದಂತೆ ತೆರಳಿ |
ಅರಣ್ಯದಿ ಕಠಿಣ ತಪಗೈದ ||
ಸರಳ ಮನದ ಚಿಣ್ಣ ತರಳಗೆ |
ಆರು ತಿಂಗಳಿಗೆ ಪ್ರತ್ಯಕ್ಷನಾಗಿ ||
ಕರದಲ್ಲಿದ್ದ ಶಂಖ ಗಲ್ಲಕೆ ಸ್ಪರ್ಶಿಸೆ |
ತೆರೆದು ಕಣ್ಣು ನೋಡಿದ ಒಳಗಿದ್ದ ರೂಪ ಹೊರಗೆ ||
ಸರ್ವಾಂಗದಿ ಶರಣಾದವಗೆ ಚಿರಸ್ಥಾನವಿತ್ತ |
ಶ್ರೀಕೃಷ್ಣವಿಠ್ಠಲನ ಕಾರುಣ್ಯಕ್ಕೇನೆಂಬೆ ||2||
ಹರಿ ಹರಿ ಎಂದೊಡೆ ಹರಿವುದು ಪಾಪವೆಲ್ಲ |
ಹರಿ ಹರಿ ಎಂದೊಡೆ ಉದ್ಧರಿಸುವ ಸಕಲರ ||
ಹರಿ ಹರಿ ಎಂದೊಡೆ ತರಿವನೆಲ್ಲ ಕಷ್ಟವ |
ಹರಿ ಹರಿ ಎಂದೊಡೆ ನೆರಳಿನಂದದಿ ಸದಾ ಕಾಯ್ವ ||
ಹರಿ ಹರಿ ಎಂದೊಡೆ ಹರಸುವನು ಹರುಷದಿ |
ಹರಿ ಹರಿ ಎಂಬ ಶ್ರೀಕೃಷ್ಣವಿಠ್ಠಲನೇ ಓಡಿ ಬರುವ ||3||
328. ಸ್ಮರಿಸಲು ಸದಾ ಹರಿನಾಮ ಭಕುತಿಯಲಿ |
ಇರುಳು-ಹಗಲು ಉಪದ್ರವ ಬಾರದಂತೆ ||
ಪರಿಹರಿಸಿ ಸಕಲ ಕಷ್ಟ ಕಾರ್ಪಣ್ಯಗಳ |
ಹರಿದು ಬಿಸುಟುವ ಭವದ ಗಂಟು ||
ಶ್ರೀರಮಾ ವಲ್ಲಭ ಆಪತ್ತು ಬರಲೀಸದೆ |
ಶ್ರೀಕೃಷ್ಣವಿಠ್ಠಲ ತನ್ನ ಭಕುತರ ಯೋಗಕ್ಷೇಮಕಾಯ್ವ ||
329. ನಿನ್ನ ಧ್ಯಾನಿಸುವ ಮನವಿತ್ತರೆ ಧ್ಯಾನಿಸುವೆನಯ್ಯಾ |
ನಿನ್ನ ವೀಕ್ಷಿಸುವ ದೃಶ್ಯವಿತ್ತರೆ ದೃಷ್ಟಿಸುವೆನಯ್ಯಾ ||
ನಿನ್ನ ಕಥಾಶ್ರವಣಿಸುವ ಭಾಗ್ಯವಿತ್ತರೆ ಶ್ರವಣಿಸುವೆನಯ್ಯಾ |
ನಿನ್ನತ್ತ ಧಾವಿಸುವ ಅವಕಾಶವಿತ್ತರೆ ಓಡಿ ಬರುವೆನಯ್ಯಾ ||
ನಿನ್ನ ಸೇವಾ ಸಂದರ್ಭವಿತ್ತರೆ ಸೇವೆ ಸಲ್ಲಿಸುವೆನಯ್ಯಾ |
ನಿನ್ನತ್ತ ಧಾವಿಸುವ ಅವಕಾಶವಿತ್ತರೆ ಸೇವೆ ಸಲ್ಲಿಸುವೆನಯ್ಯಾ |
ನಿನ್ನಿಂದ ಸರ್ವಸೇವಾ ಸೌಭಾಗ್ಯ ಸಿಕ್ಕರೆ ನನ್ನ ಅರ್ಪಿಸುವೆನಯ್ಯಾ ||
ನಿನ್ನ ಓಲೈಸುವ ಬುದ್ಧಿ ಇತ್ತರೆ ಅದರಲ್ಲೇ ಮುಳುಗುವೆನಯ್ಯಾ |
ನೀನೆನ್ನ ಯೋಗೇಶ್ವರ ಶ್ರೀಕೃಷ್ಣವಿಠ್ಠಲ ಸಕಲ ಯೋಗ ದಯಪಾಲಿಸು ||
330. ಜಯ, ಜಯ ಕರುಣಾಸಾಗರ ಭವ ಬಂಧಮೋಚಕ |
ಭಯವ ಪರಿಹರಿಸಿ ಧ್ಯಾನವೀಯೋ ದಯಾನಿಧೇ ||
ಕಯಾದು ಇತ್ತ ವಿಷ ಅಮೃತವಾಗಿಸಿದಂತೆ |
ಸಿಯಾ ರಾಮನ ನಂಬಿದ ಹನುಮನ ಪೊರೆದಂತೆ ||
ಮಾಯಾ ಸಂಸಾರ ಬಿಡಿಸಿ ಪದಕಮಲದಲ್ಲಿರಿಸು |
ವಾಯ್ವಾಂತರ್ಗತ ಸಚ್ಚಿದಾನಂದಾತ್ಮಕ ಶ್ರೀಕೃಷ್ಣವಿಠ್ಠಲ ||
331. ವಿಧವಿಧದ ಆನಂದ ಲೌಕಿಕದಿ |
ಬಂದು ಹೋಗುವುವು ಕ್ಷಣಿಕದಿ ||ಪ||
ಮೋದ ಅಮೋದ ಪ್ರಮೊದ ಸುಖವೀವುದು |
ಸದಾ ಅಲೌಕಿಕದ ಆನಂದ ಪರಮಾನಂದ ||
ಹುಡುಕಬಾರದು ಹೊರಗಿನ ವಸ್ತುವಿನಲಿ |
ತಡಕಾಡಬೇಕು ತನ್ನೊಳಗೆ ಮುಳುಗಿ ||1||
ಕಡೆ ಇಲ್ಲದ ನಿತ್ಯ ಆನಂದವ |
ಪಡೆಯಬೇಕು ಬಿಡದೆ ಶಾಶ್ವತದಿ ||
ನಂದನಕಂದ ಆನಂದ ಸ್ವರೂಪಿ |
ಒಡೆಯ ಶ್ರೀಕೃಷ್ಣವಿಠ್ಠಲ ಬೇಡಿಕೊಂಡರೆ ಅನುಗ್ರಹೀಪ ||2||
332. ಆಳವಾದ ಅಲೌಕಿಕ ಜ್ಞಾನ, ವಿಜ್ಞಾನ |
ತಿಳಿಯಲು ಮಾನವ ಜನುಮ ಸಾರ್ಥಕ ||ಪ||
ತಿಳಿಯಲಾಗದು ಸಂಪೂರ್ಣದಿ ಎಂದೂ |
ಒಳ್ಳೇಯದಾಗುವುದು ತಿಳಿಸಿಕೊಂಡರೆ ||
ಅಳತೆ ಇಲ್ಲದ, ಎಲ್ಲೆ ಇಲ್ಲದ್ದು |
ಕೊಳೆಯದೇ ಸದಾ ಜೊತೆಯಲ್ಲಿಹುದು ||1||
ಅಳೆಯಲಾಗದು, ಕಳೆಯಲಾಗದು |
ತಿಳಿದು, ತಿಳಿಸುವ ಕ್ರಮವಿದೆ ||
ಬೆಳಸಿ, ಉಳಿಸುವ ವಿಧಾನವಿದೆ |
ಉಳಿದಾಗ ಫಳಫಳ ಹೊಳೆವುದು ||2||
ಕಳ್ಳತನವಾಗದು ಸುರಕ್ಷೆ ಈವುದು |
ತಿಳುವಳಿಕೆ ನೀಡಿ ಸುಖವೀವುದು ||
ಬಳುವಳಿಯಾಗಿ ಮುಂದೂ ಬರುವುದು |
ಬೆಳೆಯುವುದು ಜನ್ಮ ಜನ್ಮದಿ ||3||
ಹೇಳುವಂತಹ ನಿರ್ದುಷ್ಟ ಆಕಾರವಿಲ್ಲದ್ದು |
ಕೇಳಿ ತಿಳಿದಾಗ ಆನಂದ ಅಪರಿಮಿತ ||
ಸುಳ್ಳಲ್ಲ ಇದೇ ಸತ್ಯದ ಜ್ಞಾನ |
ಕೇಳಿಕೊಂಡರೆ ಅನುಗ್ರಹೀಪ ನಮ್ಮ ಶ್ರೀಕೃಷ್ಣವಿಠ್ಠಲ ||4||
333.. ಒಂದು ಒಂದೇ, ಒಂದೇ ಸಾಧ್ಯ, ಸಾಧನೆ |
ಒಂದರ ಸಮ ಮತ್ತೊಂದಿಲ್ಲ, ಒಂದೇ ಎಂದೂ ಎಂದೆಂದಿಗೂ ||ಪ||
ಒಂದರಿಂದಲೇ ಆನಂದ, ಮಹದಾನಂದ |
ಒಂದನ್ನೇ ನಂಬಿರಿ ಅನ್ಯವೇನಿಲ್ಲ ಜೀವನದಿ ||ಅಪ||
ಒಂದರ ಸಮ ಯಾವ ತೀರ್ಥಯಾತ್ರೆ ಇಲ್ಲ |
ಒಂದರ ಸಮ ಯಾವ ಪವಿತ್ರ ನದಿ ಇಲ್ಲ ||
ಒಂದರ ಸಮ ಸಕಲ ವ್ರತ-ಆಚರಣೆ |
ಒಂದರ ಸಮ ಸಕಲ ಯಜ್ಞ, ದಾನ, ತಪ ||1||
ಒಂದರಲ್ಲಿ ಮುಳುಗಿದರೆ ಸಕಲೋದ್ಧಾರ |
ಒಂದರಲ್ಲಿದ್ದ ಶಕ್ತಿ ಎಲ್ಲದರಲ್ಲಿದೆ ||
ಒಂದೇ ಸಕಲ ರೋಗಕ್ಕೆ ಸಿದ್ಧೌಷದ |
ಒಂದರಿಂದ ಹಿಂದು-ಇಂದು-ಮುಂದಿನ ಶುದ್ಧಿ ||2||
ಒಂದಕ್ಕೆ ಯಾವ ದೇಶ-ಕಾ ಲನಿಯಮವಿಲ್ಲ |
ಒಂದಕ್ಕೆ ಯಾವ ವರ್ಣಾಶ್ರಮ ಭೇದವಿಲ್ಲ ||
ಒಂದಕ್ಕೆ ಯಾವ ಶೌಚಾಶೌಚ ಬಾಧೆ ಇಲ್ಲ |
ಒಂದರಿಂದ ಸಕಲ ಪಾಪ ವಿಮುಕ್ತವು ||3||
ಒಂದನ್ನೇ ಪದೇ ಪದೇ ಉಚ್ಚರಿಸು |
ಒಂದು ಮಾಡುವುದು ಭಕ್ತಿ ಧೃಡತೆ ||
ಒಂದರಲ್ಲೇ ಉತ್ಕಟ ಶ್ರದ್ಧೇ ಇರಲಿ |
ಒಂದರ ನಿರಂತರ ಸೇವನೆ ಮಧುರಾತಿ ಮಧುರ ||4||
ಒಂದೇ ಸುಡುವುದು ಸಕಲ ಪಾಪರಾಶಿ |
ಒಂದೇ ತಡೆವುದು ಬರುವ ದುರಂತ ||
ಒಂದೇ ಕೊಡುವುದು ಅಮಿತ ಪುಣ್ಯ |
ಒಂದೇ ಇಡುವುದು ಪಾದ ಪದ್ಮದಿ ||5||
ಒಂದರಿಂದ ಆರ್ತತೆ ಪೋಪುದು |
ಒಂದರಿಂದ ದು:ಖ ಅಳಿವುದು ||
ಒಂದರಿಂದ ಭೀತಿ ತೊಲಗುವುದು |
ಒಂದರಿಂದಲೇ ವ್ಯಾಧಿ ನಿವಾರಣ ||6||
ಒಂದು ಎಂಬುದು ಅಜಮಿಳನ ಪೊರೆಯಿತು |
ಒಂದು ಎಂಬುದು ದ್ರೌಪದಿಯ ಕಾಯ್ದಿತು ||
ಒಂದು ಎಂಬುದು ಪ್ರಲ್ಹಾದನ ರಕ್ಷಿಸಿತು |
ಒಂದು ಎಂಬುದು ಕರಿಗೆ ಮೋಕ್ಷ ಕೊಟ್ಟಿತು ||7||
ಒಂದರಿಂದಲೇ ಸರ್ವತ್ರ ರಕ್ಷಣೆ |
ಒಂದರಿಂದಲೇ ಸರ್ವದರಿಂದ ರಕ್ಷಣೆ ||
ಒಂದರಿಂದಲೇ ಸರ್ವದಾ ರಕ್ಷಣೆ |
ಒಂದೇ ಸರ್ವದ ಸರ್ವಸಾರ ||8||
ಒಂದು ಇರುವುದು ಕೃತಯುಗದಿ ಧ್ಯಾನ |
ಒಂದು ಇರುವುದು ತ್ರೇತಾಯುಗದಿ ಯಜ್ಞ ||
ಒಂದು ಇರುವುದು ದ್ವಾಪಾರದಿ ಅರ್ಚನೆ |
ಒಂದೇ ಇರುವುದು ಕಲಿಯುಗದಿ ನಾಮ ಕೀರ್ತನೆ ||9||
ಒಂದು ನಾಮದಿ ಸಕಲನಾಮ ಪುಣ್ಯ |
ಒಂದು ರೂಪದಿ ಸಕಲರೂಪ ಸ್ಮರಣೆ ||
ಒಂದು ಕ್ರಿಯೆದಿ ಸಕಲ ಶಕ್ತಿ ಸ್ಫುರಣೆ |
ಒಂದರಿಂದ ನಾಮ ರೂಪ ಕ್ರಿಯೆ ಅಭೇದ ||10||
ಒಂದು ನಾಮದಿ ಅಡಕ ಸರ್ವನಾಮ |
ಒಂದುರೂಪದಿ ಅಡಕ ಸರ್ವರೂಪ ||
ಒಂದು ಗುಣದಿ ಅಡಕ ಸರ್ವಗುಣ |
ಒಂದರಿಂದ ಅಭೇದ ರೂಪ ಗುಣ ಕ್ರಿಯಾ ||11||
ಒಂದರಿಂದಲ್ಲಿದೆ ಸುಖದ ಭಂಡಾರ |
ಒಂದರಲ್ಲಿದೆ ಅನಿಷ್ಟ ನಿವಾರಕ ||
ಒಂದರಿಂದಲೇ ಶತ್ರುನಿವಾರಣ |
ಒಂದೇ ಸುಹೃತ ಮಿತ್ರ, ಬಾಂಧವ ||12||
ಒಂದರಿಂದ ಸಕಲ ಮಂಗಲಮಯ |
ಒಂದನ್ನರಿತರೆ ಸಕಲ ವೇದವೇದ್ಯ ||
ಒಂದರಿಂದಲೇ ಪರಮಗತಿ |
ಒಂದು ಎಂಬುದು ಶ್ರೀಕೃಷ್ಣವಿಠ್ಠಲನಾಮ ಸಂಕೀರ್ತನೆ ||12||
ಜಯಹರಿ ಶ್ರೀಕೃಷ್ಣವಿಠ್ಠಲ, ಅಚ್ಯುತ, ಅನಂತ, ಗೋವಿಂದ |
334. ತಿಳಿದಷ್ಟೂ ತಿಳಿಯುವ ತಿಳಿಯಾದ | ತಿಳಿಯಲಾರದ ತಿಳುವಳಿಕೆ ಕೊಡು ||
ತಿಳಿದು ತಿಳಿಸುವ ನಿರ್ದುಷ್ಟ | ತಿಳಿದೂ ತಿಳಿಯದಿರೆ ಅವಿದ್ಯೆ ||
ಕಾಳು ಕಾಳಾಗಿ ಹೆಕ್ಕಿ ಕಣಜ ತುಂಬಿಸಿ | ಕಳೆದುಹೋಗುವ ಮುನ್ನ ಗಳಿಸಿಕೊಳ್ಳಬೇಕು ||
ಸುಳ್ಳು ಇದಲ್ಲ ಸತ್ಯದಿ ಶ್ರೀಕೃಷ್ಣವಿಠ್ಠಲನ | ಕೊಳ್ಳೆಹೊಡೆಯಬೇಕು ನಮ್ಮ ಪಾಲಿನದ್ದು ||
(ಜ್ಞಾನ-ಆನಂದ)
335. ಶ್ರೀನಾರಾಯಣವರ್ಮ ಕಥಾ
ಸರ್ವದೋಷದೂರ, ಸರ್ವಗುಣಪೂರ್ಣ ಓಂಕಾರಸ್ವರೂಪ |
ಸರ್ವಸ್ಥಳದಿ, ಸರ್ವವ್ಯಾಪುತ ಇಹ-ಪರದಿ ರಕ್ಷಿಪ ||1||
ಗುರು ವಿಶ್ವರೂಪರ ಮಂತ್ರತುಲ್ಯ ನಾರಾಯಣ ಕವಚ ಧರಿಸಿ |
ಇಂದ್ರ ಅಸುರರ ಗೆಲ್ಲಿ ಮೂರುಲೊಕದ ಸಾಮ್ರಾಜ್ಯ ಪಡೆದ ||2||
ಪರಿಪೂರ್ಣನಾದ ಪರಮಾತ್ಮನ ಧ್ಯಾನ ಸಹಿತ ಚಿಂತಿಸಿ |
ಪಾರಾಯಣ ರೂಪದಿ ಮಾಡಿದ ವಿದ್ಯಾ ತೇಜ ತಪೋಮೂರ್ತಿಯ ||3||
ಸರ್ವತ್ರ, ಸರ್ವಗ, ಸರ್ವರೂಪದಿಂ ರಕ್ಷಿಸಲಿ |
ಸರ್ವದಾ ಕರುಣಾಮೂರ್ತಿಸ್ಮರಿಸೆ ಸದಾ ರಕ್ಷಿಸಲಿ ||4||
ಗರುಡಗಾಮಿ ಶ್ರೀಹರಿ ಸರ್ವರಕ್ಷಕನ ಧ್ಯಾನಿಸಿ ಪಾದಪದ್ಮವ |
ಕರದಿ ಶಂಖ, ಚಕ್ರ, ಗುರಾಣಿ, ಖಡ್ಗ, ಗದೆ, ಬಾಣ, ಧನು, ಪಾಶಧರಿಸಿಹ ||5||
ನೀರಲಿ ಮತ್ಸಮೂರ್ತಿ ಜಲಜಂತು ವರುಣ ಪಾಶದಿಂದೆನ್ನ ರಕ್ಷಿಸಲಿ |
ಸುರೂಪ ವಾಮನ ನೆಲದಿ, ವಿಶ್ವರೂಪಿ ತ್ರಿವಿಕ್ರಮ ಆಕಾಶದಿ ರಕ್ಷಿಸಲಿ ||6|||
ಘೋರ ಅಟ್ಟಹಾಸದಿ ದೈತ್ಯ ಸ್ತ್ರೀಗರ್ಭಪಾತಿಸಿದ ದಾನವ ಶತ್ರು |
ನರಸಿಂಹ ಕೋಟೆ, ಅರಣ್ಯ, ರಣಭೂಮಿಯಲ್ಲೆನ್ನ ರಕ್ಷಿಸಲಿ ||7||
ಕೋರೆಯಲಿ ಭೂಮಿ ಧರಿಸಿಹ ಯಜ್ಞ ವರಾಹ ಮಾರ್ಗದಲಿ |
ಪರಶುರಾಮ ಗಿರಿ, ಕಂದರದಿ, ಲಕ್ಷ್ಮಣ ಸಹಿತ ಭರತಾಗ್ರಜ ಪ್ರವಾಸದಿ ರಕ್ಷಿಸಲಿ ||8||
ಉಗ್ರ ಪ್ರಮಾದಗಳು, ಅಭಿಚಾರದಿಂದ ನಾರಾಯಣ ರಕ್ಷಿಸಲಿ |
ಕರ್ಮಬಂಧನದಿಂದ ಕಪಿಲನು ಯೋಗೇಶ್ವರದತ್ತನು, ಯೋಗದಲ್ಲಿಯ ವಿಘ್ನದಿಂದ ರಕ್ಷಿಸಲಿ ||9||
ಪರಮ ಋಷಿ ಸನತ್ಕುಮಾರನು ಕಾಮದೇವನಿಂದಲೂ |
ಮಾರ್ಗಕ್ರಮಿಸುವಾಗ ದೇವತಾವರ್ಯರಿಗಭಿವಂದಿಸದ ಪರಾಧವ ||10||
ನಾರದರು ಪೂಜೆ ಕಾಲದಿ ನಡೆದ ಸೇವಾಪರಾಧಗಳಿಂದಲೂ |
ಕೂರ್ಮಾವತಾರಿ ಶ್ರೀಹರಿ ಎಲ್ಲ ರೀತಿಯ ನರಕದಿಂದೆನ್ನ ರಕ್ಷಿಸಲಿ ||11||
ಪರಮಾತ್ಮ ಧನ್ವಂತರಿ ಕುಪಥ್ಯದಿಂದ ಋಷಭನು ಜಿತೇಂದ್ರಿಯದಿ |
ಭರಿಸುವ ಕ್ರೋಧ, ದು:ಖಗಳ ದ್ವಂದ್ವವ ಯಜ್ಞ ರಕ್ಷಿಸಲಿ ||12||
ಮರ್ತ್ಯಲೋಕದಿ ಬರುವ ಕಷ್ಟವನ್ನು ಬಲರಾಮ ನೀಗಲಿ |
ಸರ್ಪಾಧಿರಾಜ ಶ್ರೀಆದಿಶೇಷನು ಸರ್ಪಗಣದಿಂದೆನ್ನ ರಕ್ಷಿಸಲಿ ||13||
ಶ್ರೀಕೃಷ್ಣದ್ವೈಪಾಯನ ಅಜ್ಞಾನದಿಂದ, ಬುದ್ಧ ಪಾಷಂಡಿಗಳಿಂದಲೂ |
ಧರ್ಮರಕ್ಷಣಾರ್ಥದಿ ಅವತರಿಸುವ ಕಲ್ಕಿ ಕಲಿದೋಷದಿಂದೆನ್ನ ರಕ್ಷಿಸಲಿ ||14||
ಸುಹೃತ ಗದಾಪಾಣಿ ಕೇಶವ ಪ್ರಾತ:ದಿ ನಂತರ ಪಿಳ್ಳಂಗೋವಿ ಗೋವಿಂದನು ರಕ್ಷಿಸಲಿ |
ನಾರಾಯಣನು ಪೂರ್ವ ಮಧ್ಯಾಹ್ನದಿ ನಂತರ ಚಕ್ರಧಾರಿ ವಿಷ್ಣು ರಕ್ಷಿಸಲಿ ||15||
ತೀವ್ರದಿ ಅಪರಾಹ್ನದಿ ಧನುರ್ಧಾರಿ ಮಧುಸೂದನ, ಸಾಯಂಕಾಲದಿ ಮೂರ್ಲೋಕದಿ ಮಾಧವ |
ಅರ್ಧರಾತ್ರೀಲಿ ಹೃಷಿಕೇಶ, ನಿಶೀಥದಿ ಪದ್ಮನಾಭನೆನ್ನ ಸಲಹಲಿ ||16||
ದೊರೆ ಶ್ರೀವತ್ಸಾಂಕಿತ ಅಪರಾತ್ರೀಲಿ, ಖಡ್ಗಧಾರಿ ಜನಾರ್ದನ ಉಷ:ಕಾಲದಿ |
ಸೂರ್ಯೋದಯ ಮೊದಲು ದಾಮೋದರನು, ಪ್ರಭಾತದಿ ಕಾಲಮೂರ್ತಿ ವಿಶ್ವೇಶ್ವರ ರಕ್ಷಿಸಲಿ ||17||
ಕಾರ್ಯಕಾರಣ ಕರ್ತ ಕಾಲ ಚಕ್ರನಧೀನ ಸರ್ವವೆಂಬ ಸತ್ಯದ |
ಅರಿವಿನಿಂದ ಎಲ್ಲ ಉಪದ್ರವಗಳು ನಾಶವಾಗಲಿ ||18||
ಚಕ್ರರಾಜ ಸುದರ್ಶನನೇ ವಾಯುಸಹಿತ, ಹುಲ್ಲಿನಮೆದೆ ಸುಡುವಂತೆ |
ಶೀಘ್ರದಿ ನಮ್ಮ ಶತ್ರುಸೈನ್ಯವ ಸುಟ್ಟುಹಾಕು, ಸುಟ್ಟುಹಾಕು ||19||
ಪರಮಾತ್ಮ ಪ್ರಿಯನೇ ವಜ್ರಾಯುಧಕೆ ಮಿಗಿಲಾದ ಕಿಡಿ ಉದುರಿಸುವ ಗದೆಯೇ |
ಸರ್ವಕೂಷ್ಮಾಂಡ ಯಕ್ಷ, ಭೂತಾದಿ ಗ್ರಹದಿಗಳ ಸದೆ ಬಡೆ ||20||
ಶತ್ರುಹೃದಯ ನಡಗಿಸುವ ಶಂಖ ಧ್ವನಿಯಿಂದ ಸರ್ವಪ್ರೇತ, ಪಿಶಾಚಿ |
ಘೋರ ಬ್ರಹ್ಮರಾಕ್ಷಸರ ಘೋರದೃಷ್ಟಿಯಿಂದ ರಕ್ಷಿಸಲಿ ||21||
ಅರಿಯ ತೀಕ್ಷ್ಣವಾದ ಅಲಗಿನಿಂದ ಶತ್ರುಗಳು ಛಿನ್ನ ಭಿನ್ನ ಆಗಲಿ |
ನೂರಾರು ಚಂದ್ರಮಂಡಲ ಸಮ ಗುರಾಣಿಪ್ರಭೆ, ಪಾಪಾತ್ಮರ ಪಾಪನೇತ್ರ ಮುಚ್ಚಿ ರಕ್ಷಿಸಲಿ ||22||
ಸೂರ್ಯವಿರೋಧಿಗ್ರಹ, ಧೂಮಕೇತು, ಜೀವಿಗಳಿಂದ ಬರುವ ಭಯ |
ಕೋರೆಗಾಡಿ ಹಿಂಸ್ರಪಶು, ಸರಿಸೃಪ, ಭೂತಪ್ರೇತ ಭಯನಿವಾರಿಸಲಿ ||23|||
ಸರ್ವಕ್ಕೂ ದಿವ್ಯೌಷಧವಾದ ಭಗವನ್ನಾಮರೂಪ ಅಸ್ತ್ರವೆಂಬ ಮಂತ್ರ |
ಕೀರ್ತಿಶ್ರೇಯಸ್ಸಿಗೆ ವಿಘ್ನತರುವ ಭಯವನ್ನು ನೀಗಿಸಲಿ ||24||
ಗರುಡರೂಢಿಯ ಸ್ತುತಿಸುವ ಬೃಹತ್ ರಥಂತರ ಸಾಮವೇದ |
ಗರುಡ ವಿಷ್ವಕ್ಸೇನ ಪ್ರಭುನಾಮವು ಉಳಿದೆಲ್ಲ ರೀತಿಯಲಿ ರಕ್ಷಿಸಲಿ ||25||
ಹರಿಯ ನಾಮ ರೂಪ, ನಾನಾ ಆಯುಧ, ಶ್ರೇಷ್ಠ ಪಾರ್ಷದರೆಲ್ಲ |
ಇಂದ್ರಿಯ, ಬುದ್ಧಿ, ಮನ-ಪ್ರಾಣಸಹಿತ ಕಾಪಾಡಲಿ ||26||
ಕಾರ್ಯ, ಕಾರಣರೂಪದ ಈ ಜಗತ್ತು ಭಗವಂತನೇ ಆಗಿರುವನೆಂದು |
ಅರಿತರೆ ಸತ್ಯ ಆಗುವುದು ಉಪದ್ರವಗಳ ನಾಶ ||27||
ಸ್ವರೂಪದಿ ವಿಕಲ್ಪರಹಿತ ಭಗವಂತ ಮಾಯಾ ಸ್ವ-ಶಕ್ತಿಯಲಿ |
ಧರಿಸಿರುವ ಸತ್ಯದಿ ಆಯುಧ, ರೂಪ, ನಾಮವ ||28||
ಸರ್ವಜ್ಞ ಭಗವಾನ್ ಹರಿಯೊಬ್ಬನೇ ಸರ್ವಸತ್ಯ |
ಸರ್ವದಾ ಸ್ವರೂಪದಿಂದ ಸರ್ವತ್ರ ರಕ್ಷಿಸಲಿ ||29||
ಯಾರ ಅಟ್ಟಹಾಸದಿ ಭಯ ಓಡಿಸುವನೊ ಅಂತಹ ಸ್ವತೇಜ ನರಸಿಂಹ |
ಸರ್ವರಕ್ಷಕನಾಗಿ ದಿಕ್ಕು ವಿದಿಕ್ಕುಗಳಲಿ ಒಳ ಹೊರಗೆ ಸಮಸ್ತ ರಕ್ಷಿಸಲಿ ||30||
ನಾರಾಯಣಾತ್ಮಕವಾದ ನಾರಾಯಣವರ್ಮ ಕಥೆಯಿಂದ |
ಸರ್ವ ಸುರಕ್ಷಿತನಾಗಿ ಸರ್ವದೈತ್ಯರ ಗೆಲ್ಲಬಲ್ಲೆ ||31||
ನಾರಾಯಣ ಕವಚಧರಿಸಿದವ ಯಾರನ್ನಾದರೂ ದೃಷ್ಟಿಸಲು |
ಚರಣ ಸ್ಪರ್ಶಿಸಿದರೂ ಸಹ ಸಮಸ್ತಭಯ ನಿವಾರಿಸುವುದು ||32||
ಧರಿಸಲು ವೈಷ್ಣವವಿದ್ಯೆ ಭಯವಿರದು ಈ ಜಗದೀ |
ಚೋರ, ರಾಜ, ಗ್ರಹ, ವ್ಯಾಘ್ರಾದಿತರಗಳಿಂದಾಗದು ||33||
ವಿಪ್ರನೊಬ್ಬ ಕೌಶಿಕ ಗೋತ್ರಜನು ಧರಿಸಿ ಈ ವಿದ್ಯೆ |
ಮರಣಿಸಿದ ಮರಳು ಗಾಡಿನಲಿ ||34||
ಚಿತ್ರರಥನೆಂಬ ಗಂಧರ್ವ ತನ್ನ ಪತ್ನಿಯೊಂದಿಗೆ ಆಕಾಶಮಾರ್ಗದಿ |
ಬರುವಾಗ ಆ ಸ್ಥಳದಿ ಕೆಳಗೆ ಬಿದ್ದನು ||35||
ನಾರಾಯಣ ಕವಚ ಧರಿಸಿದ ಪ್ರಭಾವ ವಿದೆಂದು ವಾಲಖಿಲ್ಯರು ಅರುಹಲು |
ಸರಸ್ವತಿ ನದಿಯಲಿ ಅಸ್ಥಿ ವಿಸರ್ಜಿಸಿ ಸ್ನಾನಮಾಡಿ ತೆರಳಿದನು ||36||
ನಾರಾಯಣ ಕವಚ ಸದಾ ಕೇಳುವ, ಆದರದಿ ಧರಿಸುವ ಮಾನ್ಯನು |
ಸರ್ವ ಅಭಯ ಪದದಿ ಪೂಜ್ಯನಾಗುವ ಜಗದಲ್ಲಿ ||37||
ಗುರುವಿಶ್ವರೂಪ ರಚಿತ ಶ್ರೇಷ್ಠನಾರಾಯಣ ವಿದ್ಯೆ |
ಮೂರ್ಲೋಕದಿ ಅಸುರರ ಗೆಲಿದು ಸಾಮ್ರಾಜ್ಯ ಲಕ್ಷ್ಮೀ ಸೇವಿಸಿದನು ||38||
ಪರೀಕ್ಷಿತಗೆ ಶ್ರೀಶುಕಮಹರ್ಷಿ ಪೇಳಿದರೆಂಬಲ್ಲಿಗೆ |
ಕರುಣೆಯಿಂದ ಶ್ರೀಕೃಷ್ಣವಿಠ್ಠಲ ಪೇಳಿದ ಶ್ರೀನಾರಾಯಣವರ್ಮ ಕಥನ ಮುಗಿಸುವೆ ||39||