ಶ್ರೀ ಕೃಷ್ಣವಿಠ್ಠಲಪದಗುಚ್ಛ 3.6
ಕೋರೆಗಾಡಿ ಹಿಂಸ್ರಪಶು, ಸರಿಸೃಪ, ಭೂತಪ್ರೇತ ಭಯನಿವಾರಿಸಲಿ ||23|||
ಸರ್ವಕ್ಕೂ ದಿವ್ಯೌಷಧವಾದ ಭಗವನ್ನಾಮರೂಪ ಅಸ್ತ್ರವೆಂಬ ಮಂತ್ರ |
ಕೀರ್ತಿಶ್ರೇಯಸ್ಸಿಗೆ ವಿಘ್ನತರುವ ಭಯವನ್ನು ನೀಗಿಸಲಿ ||24||
ಗರುಡರೂಢಿಯ ಸ್ತುತಿಸುವ ಬೃಹತ್ ರಥಂತರ ಸಾಮವೇದ |
ಗರುಡ ವಿಷ್ವಕ್ಸೇನ ಪ್ರಭುನಾಮವು ಉಳಿದೆಲ್ಲ ರೀತಿಯಲಿ ರಕ್ಷಿಸಲಿ ||25||
ಹರಿಯ ನಾಮ ರೂಪ, ನಾನಾ ಆಯುಧ, ಶ್ರೇಷ್ಠ ಪಾರ್ಷದರೆಲ್ಲ |
ಇಂದ್ರಿಯ, ಬುದ್ಧಿ, ಮನ-ಪ್ರಾಣಸಹಿತ ಕಾಪಾಡಲಿ ||26||
ಕಾರ್ಯ, ಕಾರಣರೂಪದ ಈ ಜಗತ್ತು ಭಗವಂತನೇ ಆಗಿರುವನೆಂದು |
ಅರಿತರೆ ಸತ್ಯ ಆಗುವುದು ಉಪದ್ರವಗಳ ನಾಶ ||27||
ಸ್ವರೂಪದಿ ವಿಕಲ್ಪರಹಿತ ಭಗವಂತ ಮಾಯಾ ಸ್ವ-ಶಕ್ತಿಯಲಿ |
ಧರಿಸಿರುವ ಸತ್ಯದಿ ಆಯುಧ, ರೂಪ, ನಾಮವ ||28||
ಸರ್ವಜ್ಞ ಭಗವಾನ್ ಹರಿಯೊಬ್ಬನೇ ಸರ್ವಸತ್ಯ |
ಸರ್ವದಾ ಸ್ವರೂಪದಿಂದ ಸರ್ವತ್ರ ರಕ್ಷಿಸಲಿ ||29||
ಯಾರ ಅಟ್ಟ 336 ಕಾಲವೇ ಕಾರಣ ಜಯಾ-ಪರಾಜಯಕೆ | ಕಾಲವೇ ಕಾರಣ ಮನೋಬಲ-ಇಂದ್ರಿಯ ಬಲಕೆ || ಕಾಲವೇ ಕಾರಣ ದೇಹಬಲ-ಪ್ರಾಣಗಳಿಗೆ | ಕಾಲವೇ ಕಾರಣ ಜೀವನ-ಮೃತ್ಯುವಿಗೆ || ಕಾಲ ಅನುಕೂಲವಿದ್ದರೆ ಬಯಸದೇ ಬರುವುದು ಭಾಗ್ಯ | ಕಾಲ ಅನುಕೂಲವಿದ್ದರೆ ಬಯಸದೇ ಬರುವುದು ಸಂಪತ್ತು, ಕೀರ್ತಿ
|| ಕಾಲ ವಿರುದ್ಧವಿದ್ದರೆ ದು:ಖ-ಅಪಕೀರ್ತಿ ಸಿದ್ಧ |
ಕಾಲಾತೀತ, ಕಾಲ ನಿಯಾಮಕ ಕಾಲನ ಇಚ್ಛೆ || ಕಾಲಕಾಲಕೆ ಶ್ರೀಕೃಷ್ಣವಿಠ್ಠಲ ಉಣಿಸುವ ಸಕಲಭೋಗ ||
337. ಸರ್ವದೋಷವಳಿಸಿ | ಸರ್ವಪಾಪ ಕಳೆದು || ಸರ್ವಪುಣ್ಯ ಉಳಿಸಿ | ಸರ್ವದಾ ಸರ್ವೇಶ ಶ್ರೀಕೃಷ್ಣವಿಠ್ಠಲ
ಶುಭ ತೋರೋ || 338. ಕೇಶವಾದಿ ನಾಮಗಳು
ಸಂಶಯ ಕಳೆದು ನಿರ್ಮಲ ನಿಶ್ಚಲ
ಭಕುತಿ ಕೊಡು | ವಿಷಯ ಸುಖ ದೂರಮಾಡು ಕೌಸ್ತುಭಧಾರಿ ಶ್ರೀಕೇಶವ ||1||
ನಿರ್ಮಾಲ್ಯ ಶಿರದಿ ಧರಿಸಿ ನೈವೇದ್ಯ ಭುಂಜಿಸುವಂತೆ |
ಮಾನವಜನ್ಮ ಸಾರ್ಥಕವಾಗಿಸೋ ಪಾಲಶಾಯಿ ಶ್ರೀನಾರಾಯಣ
||2|| ಅಧಮರೊಡನೆ ಕೂಡದಂತೆ, ಧನದಾಹಿಯಾಗದಂತೆ | ಸುಧರ್ಮದಿ ಜೀವಿಸುಂತಾಗಲೀ ಅಣುಮಹದ್ಗತ ಶ್ರೀಮಾಧವ
||3|| ಬುಧರೊಡನೆ ಬೆರೆತು ಸಮಯ ವ್ಯರ್ಥವಾಗಿಸದೆ | ಒಂದೇ ಮನದಿ ಭಜಿಸುವಂತಾಗಲಿ ಪದ್ಮಾಪತಿ ಶ್ರೀಗೋವಿಂದ
||4|| ಉಷ್ಣ, ಶೀತಬಾಧೆಸಹಿತ ವೈಷ್ಣವ ಸಂಗದಿಂದ್ದು | ಇಷ್ಟಪಡುವ ಸತ್ಸಂಗ ದೊರಕಿಸು ಸತ್ಯಸಂಕಲ್ಪ ಶ್ರೀವಿಷ್ಣು
||5|| ಬಂಧುಬಾಂಧವರಿಂದ ದೂರವಿರಿಸಿ ಏಕಾಂತದಿ | ಸುಂದರಮೂರುತಿ ಮನದಿ ನಿಲ್ಲಿಸೋ ಸಮದರ್ಶಿ ಶ್ರೀಮಧುಸೂದನ
||6|| ತ್ರಿವಿಧ ತಾಪ ಕಳೆದು ತ್ರಿಕಾಲದಿ ಸ್ಮರಣೆಯಿತ್ತು |
ತ್ರಿಗುಣಾತೀತ ಸದಾ ಸಲಹೋ ತ್ರೀಧಾಮಗ ಶ್ರೀತ್ರಿವಿಕ್ರಮ ||
7|| ಮನದ ಅಹಂಕಾರವಳಿದು ಕೊನೆ ಉಸಿರಿನತನಕ | ಮಾನಸದೀ ಪೂಜಿಸುವಂತಾಗಲಿ ವಿಧಾತಾ ಶ್ರೀವಾಮನ ||8||
ಧರಣಿಯಂತೆ ಸಹನೆ ಇತ್ತು ಕರುಣೆಯ ಕಂದನೆಂದು | ತಾರಿಸು ಭವದ ಕಡಲ ಶ್ರೀವತ್ಸಾಂಕ ಶ್ರೀಧರ ||9|| ಆಶಾಪಾಶ ಕಡಿದು ಭವಪಾಶ ನೀಗಿಸಿ ಪಾಪದ | ಶೇಷ ಉಳಿಯದಂತೆ ತೊಳೆ ವೇದವೇದ್ಯ ಶ್ರೀಹೃಷಿಕೇಶನೇ
||10|| ಹೃದಯ ಕಮಲದಿ ಶಾಶ್ವತದಿ ಚಿದ್ರೂಪ ನಿಲಿಸಿ | ಬುದ್ಧಿ ಶುದ್ಧವಾಗಿಸೋ ಶುದ್ಧಾತ್ಮ ಸರ್ವವ್ಯಾಪ್ತ
ಶ್ರೀಪದ್ಮನಾಭ ||11|| ಅಮೋದ-ಪ್ರಮೋದದ ಆಸೆ ನೀಗಿಸಿ ಚೆಂದದಿ | ಸನ್ಮೋದದಿ ಸುಮತಿ ಪಾಲಿಸು ನಿರ್ದೋಷ ಶ್ರೀದಾಮೋದರ
||12|| ಆಕರ್ಷಣೆಯಲಿ ಮುಳುಗಿಸದೆ ಮೇಲೆತ್ತಿ ಎನ್ನ | ಸಂಕಲ್ಪ-ವಿಕಲ್ಪ ತೊರೆ ಬಿಡಿಸು ಶೇಷಶಾಯಿ ಶ್ರೀಸಂಕರ್ಷಣ
||13|| ಆಸೆಯಿಂದ ಸ್ಮರಸುವೆ ಜೀವನ ಹಾಸುಹೊಕ್ಕಾಗಲಿ ನಾಮ |
ಅಶನ-ವಸನ ಚಿಂತೆ ಬಿಡಿಸು ಪ್ರಾಣಪತಿ ಶ್ರೀವಾಸುದೇವ
||14|| ಗದ್ಯದಲಿ ಪದ್ಯದಲಿ ಪ್ರತಿಪದದಿ ನಾಮನುಡಿಸಿ | ಪಾದಪದ್ಮದಲ್ಲಿರಿಸು ಅನುಗಾಲ ಗುಣಪೂರ್ಣಶ್ರೀಪ್ರದ್ಯುಮ್ನ
||15|| ಅನುಸರಿಸಿ ಭಕ್ತಿಪಥ ಅನುದಿನ
ಆಚರಿಸು ಬಿಡದೆ | ಸಾನುರಾಗದಿ ಗುಣ ಪಾಡುವಂತೆ ಮಾಡು ಅನಿಂದ್ಯ ಶ್ರೀಅನಿರುದ್ಧ
||16|| ಹರುಷದಿ ಪ್ರತಿಕ್ಷಣ ತನುಮನ ಓಲ್ಯಾಡಿ | ವರ್ಷಿಸಿ ಸಂಕೀರ್ತನ ದರ್ಶನವೀಯೋಹೃದ್ಗತ ಶ್ರೀಪುರುಷೋತ್ತಮ
||17|| ಅಧೋಗತಿಗಿಳಿಯದಂತೆ, ಊರ್ಧ್ವಗತಿ ಪೊಂದುವಂತೆ | ಬಂಧುವಾಗಿ ಚಿರಕಾಲದಿ ನಿಲ್ಲು ಅದ್ಭುತ ಶ್ರೀಅಧೋಕ್ಷಜ
||18|| ಹೆರವರಿಗೆ ಕೈ ಚಾಚದಂತೆ, ಸೆರೆವಾಸ ಬಿಡಿಸಿ | ನರಕ ದರುಶನವಾಗದಂತೆ ನೆರವಾಗೋ ಸುರಾಸುರವಂದ್ಯ ಶ್ರೀ ನರಸಿಂಹ
||19|| ಮುಚ್ಚಿದ ಕಣ್ತೆರೆದೊಮ್ಮೆ ಮೆಚ್ಚಿ ಅನುಗ್ರಹಿಸೆನ್ನ
| ಸಚ್ಚಿದಾನಂದಾತ್ಮ ಎನ್ನಲಿ ನಿಲಸೋ ಅಚಿಂತ್ಯ ಶ್ರೀ ಅಚ್ಯುತ
||20|| ಜನನ-ಮರಣ ಚಕ್ರ ತರಿದು ಸುಸ್ಥಿತಿಕೊಡು | ಜನ್ಮರಹಿತ, ಎನ್ನ ಜನಕ ಜಗದೀಶ ಶ್ರೀಜನಾರ್ಧನ ||21||
ಸೊಂಪಾದ ಸುವಿದ್ಯೆಯಿತ್ತು ಇಹ-ಪರದಿ ನಿತ್ಯದಿ | ಆಪತ್ತು ಕಳೆ ಇಂದ್ರಿಯಪ್ರೇರಕ ಉದ್ಗೀಥ ಶ್ರೀಉಪೇಂದ್ರ
||22|| ಹರಿಗೊಲಿಲ್ಲದ ನಾವೆಯಂತೆ ಸದಾ ಚಲಿಸುತಿರುವೆ | ಗುರಿ ತಲುಪುವಂತೆ ಮಾಡೋ ಆಪದ್ಬಾಂಧವ ಶ್ರೀಹರಿ
||23|| ಕಷ್ಟದಿಂದ ನಿನ್ನಲಿ ಭಕ್ತಿಮಾಡಲು ಅರಿತಿರುವೆ | ಇಷ್ಟದಿಂದ ಬೇಗ ಸಲಹೆನ್ನ ಕೃಪಾಂಬುಧಿ ಶ್ರೀಕೃಷ್ಣ
||24|| ಇಪ್ಪತ್ನಾಲ್ಕು ಕೇಶವಾದಿ ನಾಮಗಳ ನಿತ್ಯ ನೆನಯೆ |
ಆಪ್ತ ಪರಮಪ್ರಿಯ ಶ್ರೀಕೃಷ್ಣವಿಠ್ಠಲ ಬಿಡದೆ ಕಾಯ್ವನು
||25|| ದೇವನ ಅನಂತ ನಾಮಗಳಲಿ ಮನವಿಟ್ಟು | ದಿವ್ಯ ಇಪ್ಪತ್ನಾಲ್ಕು ನಾಮ ಜಪಿಸಲು ಕರೆದು ಮುಕ್ತಿಕೊಡುವ
||26|| 339. ಪುಣ್ಯಪಾಪದ ಲೆಕ್ಕ ಎನಗಂತು ಗೊತ್ತಿಲ್ಲ | ಎಣಿಕೆಗೆ ಬಾರದು, ಅಂಕೆಗೆ ಸಿಗದು || ಸಣ್ಣಗೆ ಪಾಪಗಳು ಗೊತ್ತಿಲ್ಲದೆ ಸೇರಿದ್ದೆಷ್ಟೋ |
ನುಣ್ಣಗೆ ಪುಣ್ಯಗಳು ನವಿರಾಗಿ ಕಳೆದಿದ್ದಿಷ್ಟೋ ||
ಕಣ ಕಣವಾಗಿ ಕೂಡಿಸಿದ್ದು ಕರಗಿದ್ದ್ಯಾವಾಗೋ | ಅಣುವಾಗಿ ಕಂಡಿದ್ದು ಗುಣಾಕಾರದಿ ಬೃಹತ್ ಆಗಿದೆ ||
ಬಣವಿಯಂತೆ ಒಟ್ಟಿದ್ದು ಆಯಸ್ಸಿನಿಂದ ಭಾಗಿಸಿದರೂ |
ದಣಿಸಿದ ಲೆಕ್ಕ ಮುಗಿಯಲೇ ಇಲ್ಲ || ಕಣ್ಣಿಗೆ ಕಾಣದಂತೆ ಶೇಷರೂಪದಿ ಉಳಿದಿದ್ದು | ಚಣ ಚಣಕೆ ಬಡ್ಡಿಸೇರಿ ಚಕ್ರಾಕಾರವಾಗಿದ್ದು || ಗಾಣಿಗರ ಎತ್ತಿನಂತೆ ತಿರುಗುತ್ತಲೇ ಇರುವೆ | ಗುಣಪೂರ್ಣ ಶ್ರೀಕೃಷ್ಣವಿಠ್ಠಲಗೇ ಗೊತ್ತು ಇರದ ಅಂತ
|| 340. ಅಸ್ವತಂತ್ರ, ಅಸ್ವತಂತ್ರದ ಪರಮಾವಧಿ ||ಪ||
ಅಸ್ವತಂತ್ರದಿ ಸ್ವತಂತ್ರದ ಈ ಜೀವ ಪರತಂತ್ರ ||ಅಪ||
ಕಣ್ಣುರೆಪ್ಪೆ ಬಿಡದೆ ಬಡೆವಲ್ಲಿ | ಸಣ್ಣಗೆ ನಿಯಮಿತ
ಉಸಿರಾಟದಲ್ಲಿ || ಕರ್ಣಗಳ ಕೇಳುವಿಕೆಯಲಿ | ವರ್ಣಗಳ ಸ್ಪಷ್ಟ ಉಚ್ಚಾರದಲಿ
||1|| ಆಹಾರದ ಸೂಕ್ಷ್ಮತೆ ವಿಭಾಗದಲಿ | ದೇಹದ ಸರ್ವಕ್ರಿಯೆಯಲ್ಲಿ |
ವಿದ್ಯೆ ಸಂಪತ್ತು ಪಡೆವಲ್ಲಿ | ಬದುಕಿನಲಿ ಮುಂದೇನು ಎಂಬಲ್ಲಿ
||2|| ನಿದ್ರೆ-ಎಚ್ಚರಿಕೆಯಲಿ | ಗುದ್ದಾಡುವ ಭದ್ರಜೀವನದಿ
|| ಹಸಿವು-ನೀರಡಿಕೆಯಲಿ | ಬಸಿರಾಗಿ ಹಡೆಯುವಲ್ಲಿ ||3||
ಹೂಸು-ತೇಗುವಲ್ಲಿ | ಹಸನಾದ ಬಾಳು ಪಡೆವಲ್ಲಿ | ವಿಹಾರ-ವಿನೋದ ಪಡೆವಲ್ಲಿ | ಸಹಾಯ-ದಾನ ಕೊಡುವಲ್ಲಿ
||4|| ಕನಸು ಬೀಳುವ ಪ್ರಕ್ರಿಯೆಯಲಿ | ಮನದಿ ಬರುವ ವಿಚಾರದಲಿ
|| ಜನನ-ಮರಣದ ವಿಷಯದಿ | ಪ್ರಾಣದ ಸ್ಥಿರತೆಯಲಿ ||5||
ಕಾಲವನ್ನು ತಡೆವಲ್ಲಿ | ಬಾಲ್ಯ-ಯೌವ್ವನಾದಿ ಕಳೆವಲ್ಲಿ
|| ಕಳೆದಿದ್ದು ಸಿಗುವುದರಲಿ | ಬಲ್ಲಿದ್ದೂ ಆಶೆ ಮಾಡುವಲ್ಲಿ
||6|| ಸ್ವತಂ,ತ್ರ ಬುದ್ಧಿಲಿ ಪೇಳುವೆ | ತಂತ್ರಸಾರೋಕ್ತ
ಪುರುಷೋತ್ತಮ | ಮತ್ತ್ಯಾರೂ ಅನ್ಯರಿಲ್ಲ | ಕರ್ತೃ ಶ್ರೀಕೃಷ್ಣವಿಠ್ಠಲನೊಬ್ಬನೇ
ಸರ್ವಸ್ವತಂತ್ರ ||7||| 341. ಭೂಷಣಕೆ ಭೂಷಣ | ಗಾನ ಶ್ರವಣಕೆ ಭೂಷಣ || ಸ್ನಾನ ದೇಹಕೆ ಭೂಷಣ | ಧ್ಯಾನ ಮನಕೆ ಭೂಷಣ || ಜ್ಞಾನ ಬುದ್ಧಿಗೆ ಭೂಷಣ | ಮೌನ ಮಾತಿಗೆ ಭೂಷಣ || ದಾನ ಜೀವನಕೆ ಭೂಷಣ | ಮಾನ ಮಾನವಗೆ ಭೂಷಣ || ಮಾನ್ಯ ಶ್ರೀಕೃಷ್ಣವಿಠ್ಠಲ ಸಕಲಕೂ ಭೂಷಣ || 342. ಜಗದೀ ಯಾರಿಗೆ ತನ್ನವರಿಲ್ಲವೋ | ಭಗವಂತನೆ ಸ್ವಯಂ ಅವರಿಗಿರುವ ||ಪ|| ಜಗನ್ನಾಥ, ಅನಾಥೋ ದೀನ ರಕ್ಷಕ ||ಅಪ|| ಗರ್ಭದಿ ಯಾರು ಸಂರಕ್ಷಿಸುವರೋ | ಹೊರಬರಲು ಯಾರು ಉಸಿರು ಹಾಕುವರೋ || ಪ್ರೇರಕನಾಗಿ ನಿಂದು ಸರ್ವಚೇಷ್ಟೇ ಮಾಳ್ಪನೋ | ಪರಮಾತ್ಮನವನೇ ಸರ್ವತ್ರ ಕಾಯ್ವ ||1|| ಭುವಿಗೆ ಬರುವ ಮೊದಲು ಎಲ್ಲಿದ್ದ | ಸಾವಿನ ನಂತರ ಎಲ್ಲಿಗೆ ಹೋಗುವ || ಅವಿರತ ಬಿಡದೆ ಜೊತೆಯಲ್ಲಿರುವ | ಅವಿನಾಶಿ ಯಾರು ಕೈಬಿಟ್ಟರೂ ತಾ ಕೈಬಿಡ ||2|| ಪ್ರತಿ ಕ್ಷಣದಿ ಸರ್ವ ಪ್ರಚೋದಕನಾಗಿ | ಪ್ರತಿಕಾರ್ಯ, ಕಾರಣ, ಕರ್ತನಾಗಿ || ಪ್ರತಿ ಫಲಾಕ್ಷೆ ಇಲ್ಲದ ನಿರ್ವಿಕಾರಿ | ಪೂತಾತ್ಮ ಪರಾತ್ಪರ ಶ್ರೀಕೃಷ್ಣವಿಠ್ಠಲ ಸರ್ವಬಂಧು ||3||
343. ವಿಜಯವಿಠ್ಠಲ ಪ್ರಿಯದಾಸ | ವಿಜಯ ಗುರುರಾಯ ಶಿಷ್ಯವತ್ಸಲ ||ಪ|| ಸುಜೀವಿ ಉದ್ಧಾರಕ ಹರಿದಾಸಶ್ರೇಷ್ಠ ||ಅಪ|| ಉದರಶೂಲೆ ಎಂದರೆ ಬರುವಂತೆ ಮಾಡಿ | ಅಧ್ಯಾತ್ಮವಿದ್ಯೆ ಜೊತೆ ಆಯಸ್ಸು ಕೊಡಿಸಿದೆ || ಸಾಧನೆ ಮಾರ್ಗದಿ ನಿಲಿಸಿ ಪರಮೋಪಕಾರ ಗೈದೆ | ಬದುಕು ಸಾರ್ಥಕತೆ ಉಪಾಯ ಸೂಚಿಸಿದ ||1|| ಅಪೂಪ ಸೀಕರಣೆಯಲಿ ಮುಳುಗಿ ಗತಿಸಿದ | ಅಪರೂಪದ ಬಾಲಕಗೆ ಜೀವ ದಾನಿಸಿದೆ || ವಿಪರೀತ ಅನಾರೋಗ್ಯದ ಕೂಸಿಗೆ ಆರೋಗ್ಯವಿತ್ತು | ತಾಪ ಕಳೆದು “ಚಿರಂಜೀವಿಯಾಗೆಲೋ ಚಿಣ್ಣ” ಎಂದು ಹರಸಿದ
||2|| ನೂರಾರು ಪದದಿ ಜ್ಞಾನಬೋಧಿಸಿದವಗೆ | ಗುರುವೆಂದು ತಿಳಿದು ಶರಣಾಗಿ ಬಂದಿರುವೆ || ಕರಪಿಡಿದು ಮುಕ್ತಿಪಥದಿ ಮುನ್ನಡೆಸಿ | ಶ್ರೀಕೃಷ್ಣವಿಠ್ಠಲನ ತೋರೋ ನಿಜಭಕುತ ||3|| 344. ಎಲ್ಲಿ ಅಡಿಗುರುವೆ ಕೃಷ್ಣಯ್ಯಾ ಹುಡುಕಲೆಲ್ಲಿ ?
| ಬಲ್ಲೆ ನೀನಿರುವೆ ಎಂದು ಕಾಣಿಸಲೊಲ್ಲೇಕೆ ||ಪ|| ಎಲ್ಲ ಕಡೆ ಇದ್ದರೂ ಹುಡುಕಿದರೇಕೆ ಕಾಣಿಸಲೊಲ್ಲೆ
||ಅಪ|| ಒಳ-ಹೊರಗೆ ಇರುವಿ ಎಂದು ಪ್ರಖ್ಯಾತಿ | ಒಳಗೂ ಕಾಣಿಸಲೊಲ್ಲಿ ಹೊರಗೂ ಕಾಣಿಸಲೊಲ್ಲಿ || ಗೋಳಾಕಾರದ ಧ್ಯಾನಕ್ಕೂ ಕಾಣಿಸಲೊಲ್ಲಿ | ಗೆಳೆಯ, ಎಡೆಬಿಡದೆ ಜೊತೆಗಿರುವಿಯಂತೆ ||1|| ಎನ್ನ ಅಪರಾಧವಾದರೂ ಏನೆಂದು ತಿಳಿಸು | ಮನ್ನಿಸಿ ಕ್ಷಮಿಸು ಸುಹೃತ ನೀನಲ್ಲವೆ ? || ಮುನಿಸಿದ್ದರೆ ಒದ್ದು, ತಿದ್ದಿ, ಬುದ್ಧಿ ಕಲಿಸು |
ಮನೋಹರಮೂರ್ತಿ ಒಮ್ಮೆಯಾದರೂ ಕಾಣಿಸು ||2|| ಎಂದೂ ಕಾಣಿಸದವನು ಇರುವನ್ಹಾಂಗೆನ್ನಲಿ | ಬಂಧು-ಬಳಗ ನೀನೇ ಎಲ್ಲ ಕೈ ಬಿಡುವಿ ಹೆಂಗೆ || ಒಂದೂ ಸಲವಾದರೂ ಕಾಣಿಸದವನ ನಂಬುವುದ್ಹೆಂಗೆ | ಎಂದಿಗೂ ಕಣ್ಣಿಗೆ ರೆಪ್ಪೆ ಕಾಣದಂತೆ ನೀನಿರುವುದ್ಯಾಕೆ
||3|| ವಚನಕೂ ನಿಲುಕದವ, ಮನದಿ ನಿಲ್ಲದವ | ಉಚ್ಚಸ್ವರದಿ ಕೂಗಿದರೂ ‘ಓ ’ಗೊಡದವ || ಹೆಚ್ಚು ಓದಿದರೂ ಅನುಭವಕೆ ಬಾರದವ | ಹುಚ್ಚು ಹಿಡಿಸುವೆಯಲ್ಲ ಶ್ರೀಕೃಷ್ಣವಿಠ್ಠಲ ಅನುಗ್ರಹಿಸೊ
||4|| 345. ವಜ್ರದಿಂದ ಕಿರಣ ಬೇರಾಗದಂತೆ | ಸೂರ್ಯನಿಂದ ಬೆಳಕು ಬೇರಾಗದಂತೆ || ಕ್ಷೀರದಿಂದ ಬಿಳುಪು ಬೇರಾಗದಂತೆ | ಶ್ರೀಕೃಷ್ಣವಿಠ್ಠಲ ನಿನ್ನ ಚರಣದಲ್ಲೆನ್ನ ಭಕ್ತಿ ಇರಿಸೋ
|| 346. ಶರೀರದಿಂದ ಛಾಯೆ ಭಿನ್ನ ತೆರದಿ | ಪರಮಾತ್ಮನಿಂದ ಆತ್ಮಭಿನ್ನ ತೆರದಿ || ಸರ್ಪದಂತೆ ತೋರುವ ರಜ್ಜು ಭಿನ್ನ ತೆರದಿ | ಶ್ರೀಕೃಷ್ಣವಿಠ್ಠಲ ದುರ್ವಿಷಯಗಳಿಂದ ಭಿನ್ನವಾಗಿಸೆನ್ನ
|| 347. ಜಗದೊಡೆಯ ದ್ವಾರ ಪಾಲಕನಂತೆ | (ವಾಮನ) ಜಗನ್ನಿವಾಸ ಕಂಬದಿಂದ ಬಂದಂತೆ || (ನರಸಿಂಹ) ಜಗದೀಶ ಕಾಡು-ಮೇಡು ಅಲೆದಂತೆ | (ಶ್ರೀರಾಮ) ಖಗವಾಹನ ನರನ ಸಾರಥಿಯಂತೆ || (ಶ್ರೀಕೃಷ್ಣ) ಭಗವಂತ ಭಕುತಿಗಾಗಿ ಇಟ್ಟಿಗೆ ಮೇಲೆ ನಿಂತಂತೆ |
(ವಿಠ್ಠಲ) ಬಗೆ ಬಗೆ ಲೀಲೆ ತೋರುವ ಶ್ರೀಕೃಷ್ಣವಿಠ್ಠಲ ಎನಗಾಗೇನಿದೆ ?
|| 348. ಮೆಟ್ಟಿ ಕಷ್ಟವ ಕೊಟ್ಟು ದೊಡ್ಡವನಾಗು | ಇಟ್ಟುಕೊಂಡು ದುಷ್ಟತನ ತೋರದಿರು || ಇಷ್ಟದಿಂದ ಕೊಡದಿದ್ದರೆ ಕಸಿದು ಕೊಡುವ | ಗಟ್ಟಿಯಾಗಿ ಮನಮುಟ್ಟಿ ಭಜಿಸು ಶ್ರೀಕೃಷ್ಣವಿಠ್ಠಲನ
|| ಸ್ಪಷ್ಟವಾಗಿ ಇಹ-ಪರದಿ ಸುಖದಲ್ಲಿಡುವ ಸಂಶಯವಿಲ್ಲ ||
349. ಬರುವುದು ದೇಹ ತಾಯ್ತಂದೆಯರಿಂದ | ಬರುವದು ವಿದ್ಯೆ ಗುರುಗಳಿಂದ || ಬರುವುದು ಧನ ಪೂರ್ವಜನ್ಮ ಪುಣ್ಯದಿ | ಬರುವುದು ಆದಿ-ವ್ಯಾಧಿ ಪುರ್ವಜನ್ಮಕೃತ ಪಾಪದಿ
|| ಬರುವುದು ಘಟನೆಗಳು ಪೂರ್ವನಿರ್ಧಾರಿತದಿ | ಬರುವುದು ಗುಣ ಬದಲಾಗದ ಸ್ವರೂಪದಿ || ಬರುವುದು ಭಾಗ್ಯ ಶ್ರೀಕೃಷ್ಣವಿಠ್ಠಲನಿಂದ | ಪರತಂತ್ರ ಜೀವ ಯಾವುದರಲಿ ಸ್ವತಂತ್ರ || 350. ವಿದ್ಯೆಯಾಗಲಿ, ಧನ-ಕನಕವಾಗಲಿ | ಬಂದಿದ್ದು ಸದ್ಬುದ್ಧಿಯಲಿ ಹಂಚಲೆಂದು || ಬೇಡಿದವರಿಗೆ ಸ್ವಾರ್ಥಿಯಾಗದೆ ನೀಡಿದರೆ | ಮುಂದಿನ ಜನುಮದಿ ಹೆಚ್ಚೆಚ್ಚು ಕೊಡುವ || ಒಡೆಯಾ ಶ್ರೀಕೃಷ್ಣವಿಠ್ಠಲ ತಾ ಒಲಿದು ಮೆಚ್ಚುವ
|| 351. ಎಲ್ಲರೂ ಸುಖವಾಗಿರಲೆಂದು ಹೃತ್ಪೂರ್ವಕ ಬಯಸು
| ಎಲ್ಲರ ಸುಖದಲ್ಲಡಗಿದೆ ತನ್ನ ಸುಖ ಎಂದು ತಿಳಿ
||ಪ|| ಬೆಳಕಿನಿಂದಲೇ ವಜ್ರ ಹೊಳೆವುದು ಸರ್ವದಾ ||ಅಪ||
ಬೆಲ್ಲ-ಬೇವಿನಂತೆ ಈ ಸಂಸಾರವಿದೆ | ಎಲ್ಲರೊಡನೆ ಹಂಚಿಕೊಂಡಿರುವುದೇ ಜೀವನ || ಎಲ್ಲರಿಂದ ಪಡೆದಾಗಲೇ ಬದುಕಲು ಸಾದ್ಯ | ಬಲ್ಲವರೂ ಎಲ್ಲರಿಗೂ ಕೊಟ್ಟೇ ಹೋಗುವರು ||1||
ಗಳಿಸಿದ್ದರಲ್ಲಿ ತಾನು ಅನುಭವಿಸುವುದು ಸ್ವಲ್ಪ
| ಬೆಳೆಸಿದ್ದರೂ ಬೇರೆಯವರದ್ದೇ ಸಿಂಹಪಾಲು || ಉಳಿಸಿದ್ದು ಪೂರ್ಣ ಅನ್ಯರಿಗೆ ಬಿಟ್ಟುಹೋಗುವುದು
| ಕಳೆದು ಋಣಮುಕ್ತನಾಗಿ ಹೊಗುವುದು ಖಚಿತ ||2||
ಇದ್ದವರು ಇಲ್ಲದವರಿಗೆ ಇತ್ತರೆ ಜನ್ಮ ಧನ್ಯ |
ಇದ್ದದ್ದು- ಬಂದಿದ್ದೆಲ್ಲ ಪೂರ್ವಕೃತಕರ್ಮದಿಂದ
|| ಆದ ಈಗ ಕೊಡದಿದ್ದರೆ ಕಳ್ಳತನದಂತೆ | ಮುಂದಿನ ಜನುಮದಲಿ ಏನೂ ಸಿಗದು ||3|| ಅರಿತು ಇದರ ಮರ್ಮ ನಡೆದರೆ ಕ್ಷೇಮ | ಸ್ವಾರ್ಥ ತೊರೆದು ಪರೋಪಕಾರಿಯಾದರೆ ಚೆನ್ನ ||
ಪರರ ಸೊತ್ತು ಪರರಿಗೆ ಒಪ್ಪಿಸಿದರೆ ಸಾರ್ಥಕ |
ಪರರಿಗೆ ಕೊಡಲೆಂದೇ ಶ್ರೀಕೃಷ್ಣವಿಠ್ಠಲ ದಯದಿ ಇತ್ತಿದ್ದು
||4|| 352. ಸುಂದರ ಪುರುಷ ಮಾಡಿದ ಲೋಕ ಅತೀ ಸುಂದರ |
ಸುಂದರತೆ ಸವಿವರು ಪಾಪವೇಕೆ ಮಾಡುವರು ||ಪ||
ಸುಂದರತೆ ಮೂರ್ತಿಮಂತವಿದ್ದಲ್ಲಿ ಹುಳುಕು ಇರುವುದ್ಹೇಂಗೆ
? ||ಅಪ|| ಸುಂದರ ಅರಳುವ ಪುಷ್ಟ, ಬೀಸುವ ತಂಗಾಳಿ | ಸುಂದರ ಉದಯಿಸುವ ಸೂರ್ಯ, ಚಂದ್ರನ ಶೀತಲ || ಸುಂದರ ಹರಿಯುವ ನದಿ, ಸರೋರುಹ ಸರೋವರ | ಸುಂದರ ಹಸಿರು ವನ, ಗಿರಿಗಳ ಸಾಲು ||1||| ಸುಂದರ ಮಗುವಿನ ಮುಗ್ಧ ನಗೆ | ಸುಂದರ ವಿವಿಧ ಬಣ್ಣಗಳ ಇಂದ್ರಧನು || ಸುಂದರ ಪದವುಳ್ಳ ಸಾಮವೇದ ಸುಂದರ ಅತೀಪ್ರಶಾಂತ ಪರಿಸರ ||2|| ಸುಂದರ ಜೀವನದ ಸುಂದರ ಕ್ಷಣಗಳ | ಸುಂದರವಾಗಿ ಕಳೆಯದೆ ಕ್ಲೇಶ ಪಡುವುದೇಕೆ ? ||
ಸುಂದರ ಆಲೋಚನೆ ಮಾಡಿ ಅಹ್ಲಾದದಿ | ಸುಂದರ ಅದೃಷ್ಠವ ಒಲಿಸಿಕೊಳ್ಳಿ ||3|| ಸುಂದರ ಸ್ವಸ್ಥ ದೇಹ-ಮನ | ಸುಂದರವು ವೈರಾಗ್ಯ ಬುದ್ಧಿ || ಸುಂದರತೆಯೇ ಭಕ್ತಿ-ಸತ್ಸಂಗ | ಸುಂದರಾತಿ ಸುಂದರ ಶ್ರೀಕೃಷ್ಣವಿಠ್ಠಲನ ಜ್ಞಾನ
||4|| 353. ಭಕ್ತಿಯ ಉತ್ತುಂಗ ನಾನಾಗಿದ್ದರೆ ಭಕುತಿ ಬೇಡಲೇಕೆ
? | ಅತ್ಯುನ್ನತ ಜ್ಞಾನ ಎನಗಿದ್ದರೆ ಜ್ಞಾನ ಬೇಡಲೇಕೆ ?
|| ಸತ್ಯವಾದ ವೈರಾಗ್ಯ ಎನಗಿದ್ದರೆ ವೈರಾಗ್ಯ ಬೇಡಲೇಕೆ ?
| ಅತೀ ಮೋಹದ ಭಕುತಿ ಇಲ್ಲದ ಅಜ್ಞಾನಿ ನಾನೆಂದೇ ||
ನಿತ್ಯದಿ ಉದ್ಧರಿಸಿ ಚರಣದಲ್ಲಿರಿಸಿಕೋ ಎಂದು ಬೇಡುವೆ
| ಆತ್ಮೋದ್ಧಾರಕ ಶ್ರೀಕೃಷ್ಣವಿಠ್ಠಲ ದಯಾನಿಧೇ
ನೀನಲ್ಲದಿದ್ದರೆ ನಿನ್ನನೇಕೆ ಬೇಡಲಿ || = 354. ಬೇಡುವೆ ಕಾಡುವೆ, ಅಂಗಾಲಾಚಿಸುವೆ | ಒಡೆಯಾ ಬಿಡದೆ ಅನುಗ್ರಹಿಸೆಂದು ||ಪ|| ನೋಡಯ್ಯಾ, ಎನ್ನ ಪುಣ್ಯವಿದ್ದರೆ ನಿನ್ನನ್ನೇಕೆ ಬೇಡಲಿ
||ಅಪ||| ನಚಿಕೇತ ಚಿಣ್ಣನೆಂದು ಎಣಿಸದೆ ಜ್ಞಾನವಿತ್ತೆ |
ಹೆಚ್ಚು ಪಾಪಿಷ್ಠನಾದರೂ ಅಜಮಿಳನ ಪೊರೆದೆ ||
ಅಚ್ಚುಮೆಚ್ಚಿನವಳೆಂದು ದ್ರೌಪದಿಯ ರಕ್ಷಿಸಿದೆ |
ಇಚ್ಛಿಸಿ ತ್ರಿವಕ್ರೆಯ ದೃಷ್ಟಿಸಿದಂತೆ ಉದ್ಧರಿಸೆನ್ನ
||1|| ಕಡೆದರೆ ಮೊಸರು ಬೆಣ್ಣೆ ಬರುವಂತೆ | ಕಡೆಗೋಲು ನೀನೆ ಕಡೆಯುವವನೂ ನೀನೇ || ಹಡೆದವರು ಮಕ್ಕಳ ಕಡೆಗೆಣಿಸುವರೇ ? | ಸಡಗರದ ದೈವ ಬಿಡದೆ ಪರಿಪಾಲಿಸೆನ್ನ ||2|| ನಿನ್ನ ಸದಾ ನೆನಸಿ ಮಾರ್ದವವಾಗುವ ಮನವಿಲ್ಲ |
ನಿನ್ನ ಪಾಡಿಕೊಂಡಾಡುಷ್ಟು ಭಕ್ತಿ ಎನಗಿಲ್ಲ ||
ನಿನ್ನ ಒಲಿಸಿಕೊಳ್ಳುವಷ್ಟು ಜ್ಞಾನ ಮೊದಲಿಲ್ಲ |
ಏನು ಇಲ್ಲದ್ದಕ್ಕೆ ನಿನ್ನನ್ನೇ ಬೇಡುವೆ)
ಶ್ರೀಕೃಷ್ಣವಿಠ್ಠಲ ||3|| 355. ಸರ್ವಗುಣ ಪರಿಪೂರ್ಣ ನೀನೆಂದು ಬುಧರು ಪೇಳ್ವರು
| ಪೂರ್ಣಜ್ಞಾನ_ಭಕ್ತಿ_ವೈರಾಗ್ಯ ಎನ್ನಲ್ಲಿ ಇಲ್ಲದ್ದಕ್ಕೆ
|| ಪೂರ್ವಕೃತ-ಇಂದು-ಮುಂದಿನ ಕರ್ಮಫಲ ಕಡೆಗಣಿಸಿ |
ಕುಕೃತ್ಯ-ಪಾಪಗಳ ಲಕ್ಷಿಸದೆ ಕರುಣಾಸಾಗರ ಉದ್ಧರಿಸೆನ್ನ
|| ಶ್ರೀಕೃಷ್ಣವಿಠ್ಠಲ ನಿನ್ನ ಸೇವಕ ನಾನೆಂದು ದಯದಿ
ಸ್ವೀಕರಿಸು || 356. ಎಷ್ಟು ಹೇಳಲಿ, ಎಷ್ಟು ಬೇಡಲಿ ಕೊನೆ ಇಲ್ಲವೆ ?
| ಕುಟ್ಟಿ ಕುಟ್ಟಿ ತಟ್ಟಿ ತಟ್ಟಿ ಕೇಳಾಯ್ತು-ಹೇಳಾಯ್ತು
|| ಇಷ್ಟೆಲ್ಲಾ ಕೇಳಿ ಕೇಳಿ ನಿನಗೆ ಬೇಸರವಿಲ್ಲವೆ ?
| ಇಷ್ಟದಿಂದಾಗಿ, ಬೇಸರದಿಂದಾಗಲಿ ಕೊಟ್ಟುಬಿಡು ||
ಘಟ್ಯಾಗಿ ಹಿಡಿದುಕೋ ಎಂದೆಂದಿಗೂ ಬಿಡದಂತೆ |
ಒಟ್ಟಿನಲಿ ನಿನ್ನ ಚರಣದಲ್ಲೇ ಬಿದ್ದಿರುವಂತೆ ಮಾಡು
|| ಕಟ್ಟಕಡೆಗೆನ್ನ ವೈಕುಂಠದಲ್ಲಿರಿಸೋ ಶ್ರೀಕೃಷ್ಣವಿಠ್ಠಲ
|| 357. ಕಾಣುವ ಜ್ಞಾನವೃದ್ಧಿಯ ಪಿಪಾಸೆ ಮೇಲು ||
ಕಾಣುವ ವಿಷಯದಿ ವೈರಾಗ್ಯ ಮೇಲು | ಕಾಣದ ಮುಕ್ತಿಗಾಗಿ ಹಾತೊರೆವುದಕ್ಕಿಂತ | ಕಾಣದ ದೈವ ಶ್ರೀಕೃಷ್ಣವಿಠ್ಠಲನಲಿ ಧೃಡ ಭಕುತಿ ಇನ್ನೂ
ಮೇಲು || 358. ತಂದೆ, ತಂದೆ ನೀನು | ಬಂಧು ಬಳಗ ನೀನು |
ಚೆಂದದ ಜನುಮವಿತ್ತು | ಕುಂದುಗಳ ಎಣಿಸುವರೇ ||
ಎಂದಿಗೂ ಆಗುಹೋಗುಗಳ ಹೊಣೆಗಾರ | ನೊಂದಿಸಿ ನಂದಿಸದಿರು
| ಒಂದು ಕ್ಷಣದ ಜೀವನದಿ ಬಂದಾಗ | ನಿಂದು ಉಣಿಸಿದೆ
ಸುಖ-ದು:ಖಫಲ || ಬೆಂದ ಜೀವಕೆ ತಂಪೆರೆದು | ಸದಾ ನಿರ್ಮಲ ಭಕುತಿ ಬೇಡುವೆ
| ಬಂಧನವ ಬಿಡಿಸಿ ಪಾಲಿಸಯ್ಯಾ | ಪಾದಪದುಮದಲ್ಲಿರಿಸು
ಒಡೆಯಾ ಶ್ರೀಕೃಷ್ಣವಿಠ್ಠಲ ||
359. ಚಿಂತೆ ಚಿತೆವರೆಗೆ ಇರವುದು ಸಹಜ | ಚಿಂತೆ ಚಿಂತನೆಯಾಗಿಸೋ ಪ್ರಯತ್ನದಿ | ಹೇ | ಮನುಜ
||ಪ|| `ಚಿಂತೆ ತೊರೆಯುವುದ್ಹೇಗೆಂದು ಚಿಂತಿಸದಿರು
||ಅಪ|| ಚಿಂತೆಯಲಿ ಮನ ಕಸದ ಗೂಡಾಗುವುದು | ಚಿಂತೆಯಲಿ ಆಹಾರ ವಿಷವಾಗುವುದು || ಚಿಂತೆಯಲಿ ನಿದ್ರೆ ಮಾರು ದೂರಾಗುವುದು | ಚಿಂತೆ ಅಗ್ನಿಯಂತೆ ಜೀವಂತ ಸುಡುವುದು ||1||
ಚಿಂತೆ ಶೂರ್ಪನಖಗೆ ಅಗ್ನಿಹೊತ್ತಿಸಿತು | ಚಿಂತೆ ದಶಮುಖನ ಚಿತೆಯಾಗಿಸಿತು || ಚಿಂತೆ ಚಿಂತನೆಯ ಮಾಡಿ ಧ್ರುವ ಪದವಿ ಪಡೆದ |
ಚಿಂತೆ ಚಿಂತನೆಯಾಗಿಸಿ ನಚಿಕೇತ ವಿಜ್ಞಾನಿಯಾದ
||2|| ಚಿಂತನೆಯಲಿ ಶಬರಿ ಸ್ವಾಮಿ9 ಸೇವಿಸಿದಳು | ಚಿಂತನೆಯಲಿ ಹನುಮ ಸ್ವಾತ್ಮಸುಖಿಯಾದ || ಚಿಂತನೆಯಲಿ ಗೋಪಿ ಹೃದಯದಿ ದರ್ಶಿಸಿದಳು | ಚಿಂತನೆಯು ಚಿನ್ಮಯನೊಲಿಮೆ ಗಳಿಸುವುದು ||3||
ಚಿಂತೆ ಚಿಂತನೆಯಾಗುವುದು ನಿಶ್ಚಿಂತ ಮನದಿಂದ |
ಚಿಂತೆ ಹೋಗುವುದು ಶಬ್ದ-ನಿಶಬ್ದವಾದಾಗ || ಚಿಂತೆ ಸರಿಯುವುದು ಅನ್ಯವಿಷಯ ಬಿಟ್ಠಾಗ | ಚಿಂತನೆಯಾಗುವುದು ಶಾಶ್ವತನ ತನ್ಮಯತೆಯಲಿ ||4||
ಚಿಂತೆ ನಿವಾರಣೆ ಬಗೆ ತಿಳಿದಾಗ | ಚಿಂತೆ ಚಿಂತೆಯಾಗದೆ ಚಿಂತನೆಯಾಗಿರಿಸಿ || ಚಿತ್ತದಿ ಚಿತ್ತದೊಲ್ಲಭ ಯೋಗಕ್ಷೇಮ ವಹಿಸುವ |
ಚಿಂತೆ ಚಿಂತನೆಯಾದರೆ ಶ್ರೀಕೃಷ್ಣವಿಠ್ಠಲನೇ ಸಿಗುವ
||5|| 360. ಮನಶುದ್ಧಿ ಇಲ್ಲ, ತನು ಶುದ್ಧಿ ಇಲ್ಲ |
ವಾಣಿ ಶುದ್ಧಿ ಮೊದಲೇ ಇಲ್ಲ | ನಡೆ ಶುದ್ಧಿ ಇಲ್ಲ
|| ಇನ್ನೂ ಶುದ್ಧಿಯಾಗಿ ಶುದ್ಧವಾಗುವುದ್ಹೇಂಗೆ
||ಅಪ|| ಸದಾ ಎಂಜಲು ತಿನ್ನು, ಪರರ ಎಂಜಲಲ್ಲ |
(ನೈವೇದ್ಯ-ಪಂಚಾಮೃತ) ಸದಾ ತ್ಯಜಿಸಿದ ವಸ್ತ್ರ ಧರಿಸು, ಪರರು ಧರಿಸಿದ್ದಲ್ಲ ||
(ನಿವೇದಿತವಸ್ತ್ರ) ಸದಾ ಸಂಗಿಯಾಗಿರು, ಜನರಜೊತೆ ಇರಬೇಡ | (ಪರಮಾತ್ಮನ
ಸಂಗ) ಸದಾ ನೆನಪಿನಲ್ಲಿಡು, ಎಲ್ಲ ಮರೆತಿರಬೇಕು ||1||
(ಅಧ್ಯಾತ್ಮವಿದ್ಯೆ) ಸದಾ ನಿಂದಿಸುತಿರು, ಬಿಡದೆ ಸ್ತುತಿಸುತಿರು |
(ದುರ್ಗುಣಗಳು) ಸದಾ ಆನಂದಿಸು, ನೆನೆನೆನೆದು ದು:ಖಿಸು || (ಪರಮಾತ್ಮ
ವಿಸ್ಮರಣೆ) ಸದಾ ಬೇಡುತಿರು, ಎಂದೂ ಬೇಡದಿರು | (ಭೇಡದಂತೆ ಪರಮಾತ್ಮನ
ಬೇಡು) ಸದಾ ಸೌಭಾಗ್ಯಶಾಲಿಯಾಗು, ದೌರ್ಭಾಗ್ಯ ಹಳಿಯುತಿರು ||2||
(ಪರಮಾತ್ಮನ ಕಾಣದ್ದು) ಸದಾಮಲ ಜ್ಞಾನ ಇರಲಿ, ಅಜ್ಞಾನಿಯಾಗಿರು | (ಜ್ಞಾನ
ಪ್ರದರ್ಶನ) ಸದ್ಭಕ್ತಿ ಭಾವ ಇರಲಿ, ಭಕ್ತಿಮಾಡಬೇಡ || (ಢೋಂಗಿ
ಭಕ್ತಿ) ಸದ್ಬುದ್ಧಿ ವೈರಾಗ್ಯವಿರಲಿ, ವೈರಾಗ್ಯವಂತನಾಗಬೇಡ |
(ಅಭಾವ ವೈರಾಗ್ಯ) ಸದ್ಬ್ರಹ್ಮ ಶುದ್ಧಾತ್ಮ ಶ್ರೀಕೃಷ್ಣವಿಠ್ಠಲನೊಬ್ಬನೇ
ಪರದೈವ ನಂಬು ||3|| 361. ನಿಜ ಸುಖದ ಮರ್ಮತಿಳಿದು ಬದುಕುವುದು ಲೇಸು
| ರಾಜನ ಸುಖ ಪ್ರಜೆಗಳ ಸುಖದಲ್ಲಿದ್ದ ತೆರದಿ ||
ಯಜಮಾನನ ಸುಖ ಮನೆ ಮಂದಿ ಸುಖದಲ್ಲಿದೆ | ಸುಜನ ನೀಡುವಾ, ಸುಖ ಸರ್ವರಿಗೂ ಭೇದವಿಲ್ಲದೆ ||
ಅಂಜದೆ ಕಷ್ಟ-ದು:ಖ ನಗುತ್ತಾ ಸಹಿದುವುದು | ಭಂಜಸಿ ಸುಖದಿ ಬಂದಿದ್ದರಲ್ಲೇ ತೃಪ್ತಿ ಪಡೆವುದು
|| ಪೂಜಿಸಿ ದ್ವಿಜ-ಗೋ-ಪರರ ಹಿತವನ್ನೇ ಬಯಸುವುದು |
ಪೂಜ್ಯ ಗುರು-ಹಿರಿಯರ ಸುವಾಕ್ಯ ಪರಿಪಾಲನೆ ||
ಸಂಜೆಯಿಂದ ಬೆಳಗಿನವರೆಗೆ, ಬೆಳಗಿನಿಂದ ಸಂಜೆ ತನಕ
| ಕಂಜನಾಭಗರ್ಪಿಸಿ ಮಾಡಿದ ಸಕಲ ಕರ್ಮಸಂತೋಷದಿ ||
ಧ್ವಜಾಂಕುಶ ಗದಾ-ಪದ್ಮ ಚಿಹ್ನಾಂಕಿತ ಚರಣ ಸ್ಮರಿಸಿ
| ಭಜಿಸಿದರೆ ಶ್ರೀಕೃಷ್ಣವಿಠ್ಠಲನ, ಆತ್ಮಸುಖವೇ ಅಡಗಿದೆ
|| 362. ಕಂಗಳಲಿ ಪ್ರೀತಿಸೂಸುತಾ | ಬಂಗಾರ ವರ್ಣಾಂಬರಧಾರಿ
|| ಅಂಗನೆಯರೊಡಗೂಡಿ ನಲಿದು | ಸ್ವರ್ಗಸುಖವಿತ್ತು ಓಲೈಸಿದ
|| ಭಂಗ ಬರದ ಭಕ್ತಿ ಪಡೆದು | ಅಗಲದ, ನಿಜ ಸ್ಥಾನವಿತ್ತ
|| ಖಗವಾಹನ ಶ್ರೀಕೃಷ್ಣವಿಠ್ಠಲನೇ | ಸಂಗ ಬಿಡದೆನ್ನ
ಪರಿಪಾಲಿಸು ||
363. ಸರ್ವಜ್ಞ, ಸರ್ವೇಶ, ಸರ್ವಪ್ರದ |
ಸರ್ವರ ಅಕ್ಷಮ್ಯಪರಾಧ ಕ್ಷಮಿಸಿ ||
ಸರ್ವರ ಮತಿ ಸುಸ್ಥಿತಿಯಲ್ಲಿರಿಸು |
ಸರ್ವ ಆತ್ಮಸ್ಥ ಶ್ರೀಕೃಷ್ಣವಿಠ್ಠಲ ಧಯಾನಿಧೇ ||
364. ಪರಮೈಶ್ವರ್ಯಶಾಲಿ ಪರಮಾತ್ಮ |
ಸರ್ವಕೂ ಮೂಲ, ಸತ್ಯ ಸ್ವರೂಪ ಶರಣು,ಶರಣು ||
ಪರಮಾತ್ಮ ಕಾರಣ ಸಂಸಾರವೆಂಬುದು ಸನಾತನವೃಕ್ಷ |
ಆಶ್ರಯವಿದಕೆ ಒಂದೇ ಮೂಲಪ್ರಕೃತಿ ||
ಎರಡು ಫಲಗಳಿದಕೆ ಸುಖ-ದು:ಖ |
ಬೇರುಗಳು ಮೂರು, ಸತ್ತ್ವ-ರಜ-ತಮ ||
ಧರ್ಮ, ಅರ್ಥ, ಕಾಮ, ಮೋಕ್ಷಗಳೆ ನಾಲ್ಕು ವಿಧರಸ |
ಚರ್ಮ, ಕಣ್ಣು, ಕಿವಿ, ನಾಲಿಗೆ, ಮೂಗೇ ತಿಳಿವ ಕರಣಗಳು ||
ಹುಟ್ಟು-ಇರುವು, ಬೆಳೆ-ಬದಲು, ಕುಗ್ಗು-ನಾಶ ಆರು ಸ್ವಭಾವವಿದಕೆ |
ಒಟ್ಟು ಏಳು ತೊಗಟೆಗಳು ರಸ, ರುಧಿರ, ಮಾಂಸ, ಮೇದಸ್ಸು, ಮೂಳೆ, ಮಜ್ಜೆ, ಶುಕ್ರ ||
ಎಂಟು ರೆಂಬೆಗಳೇ ಪಂಚಮಹಾಭೂತ, ಮನ, ಬುದ್ಧಿ, ಅಹಂಕಾರವು |
ಪೊಟರೆಗಳಿವೆ ಅದೇ ಶರೀರದ ನವದ್ವಾರಗಳು ||
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಅಲ್ಲದೆ |
ಧನಂಜಯ, ದೇವದತ್ತ, ನಾಗ, ಕೂರ್ಮ ಕೃಕಲದ ದಶಪ್ರಾಣಗಳೇ ಎಲೆಗಳು ||
ಅದ್ಭುತ ಸಂಸಾರ ವೃಕ್ಷದಲಿ ಜೀವೇಶ್ವರರೇ ಎರಡು ಪಕ್ಷಿಗಳು |
ಇದರ ಉತ್ಪತ್ತಿ-ಆಧಾರಕೆ ಶ್ರೀಕೃಷ್ಣವಿಠ್ಠಲನೊಬ್ಬನೇ ಇರುವ ||
ಬಿಂದು ಸಿಂಧುವಿನಲ್ಲಿರುವಂತೆ ಪ್ರಳಯವೂ ಇವನಲ್ಲೇ ನಿರುತ |
ಸಿದ್ಧಜ್ಞಾನ ತಿಳಿದ ಬುಧರು ಸಕಲದಲ್ಲಿ ಶ್ರೀಕೃಷ್ಣವಿಠ್ಠಲನನ್ನೇ ದರ್ಶಿಸುವರು ||
365. ಹೊಟ್ಟೆಗಾಗಿ ಏನೆಲ್ಲ ಮಾಡುವುದು |
ಕೆಟ್ಟು ಹೊಗುವುದು ಹೊಟ್ಟಿಯಿಂದಲೇ ||
ಒಟ್ಟು ಆರೋಗ್ಯವೂ ಹೊಟ್ಟೆಯಿಂದಲೇ |
ಹೊಟ್ಟೆ ಹಸಿದರೆ ಹಾದಿ ತಪ್ಪಿಸುವುದು ||
ಹೊಟ್ಟೆ ಬಿರಿಯ ತಿಂದರೆ ಅನಾರೊಗ್ಯ |
ಹೊಟ್ಟೆ ಇಲ್ಲದಿರೆ ಜಗಚ್ಚಕ್ರವೇ ನಿಲ್ಲುವುದು ||
ಹೊಟ್ಟೆಯಿಂದಲೇ ಜನನ, ಹೊಟ್ಟೆಯಲ್ಲೇ ಲಯ |
ಪುಟ್ಟ ಬಾಲಕ ಶ್ರೀಕೃಷ್ಣವಿಠ್ಠಲನ ಹೊಟ್ಟೆಯೇ ಸರ್ವಾಶ್ರಯ ||
366. ಅನರ್ಘ ಅನವದ್ಯ, ಅಚಿಂತ್ಯನೇ |
ಅನುದಿನದಿ ಅನುರಾಗವಿತ್ತು ಅನಿಕೇತನ ||
ಅನುಕ್ತ ಅನುಚಿತ ಅಣುಜೀವಿಯ |
ಅನುಭವಿಸದಂತೆ ಅನುದಿನದ ಭವತಾಪ ||
ಅನುಷ್ಠಾನದಿ ಅನುವರ್ತಿಸಿ ಅನುವಾಗಿಸೋ |
ಅನುಭಾವಿ ಶ್ರೀಕೃಷ್ಣವಿಠ್ಠಲ ಅನುಗ್ರಹಿಸೋ ||
367. ಗೋಪಾಲಕರೊಡಗೂಡಿ ಮೊಸರನ್ನ ಸವಿದು ಸಹಭೋಜನವಿತ್ತೆ |
ಗೋಪಾಲಕರೊಡನೆ ಗೋವತ್ಸ ಕಾಯ್ದು ಗೋವೃಂದಕೆ ಸಾಮೀಪ್ಯವಿತ್ತೆ ||
ಗೋಪಿಕೆರೊಡಗೂಡಿ ರಾಸವಾಡಿ ಪ್ರಿಯ ಸಾನಿಧ್ಯವಿತ್ತೆ |
ಗೋಪಿಪತಿಯ ಸಖನಾಗಿ ಸಾರಥ್ಯಮಾಡಿ ಸಾಯುಜ್ಯವಿತ್ತೆ ||
ಗೋಪಿಜನಪ್ರಿಯನಾಗಿ ನಿನ್ನ ಸೇವಿಪ ಸುಜನರಿಗೆ ಸಾಲೋಕ್ಯವಿತ್ತೆ |
ಗುಂಪು ನಕ್ರತ್ರಗಳ ನಡುವೆ ಶೋಭಿಪ ಉಡುಪನಂತಿರುವನೇ ||
ಗುಪ್ತವೇದ ವಿದಿತ ಶ್ರೀಕೃಷ್ಣವಿಠ್ಠಲ ಎನ್ನನಿತ್ತ ಎನಗೇನೀಯುವಿ ? ||
368. ಶ್ರೀ ರಾಘವೇಂದ್ರನಮ: ಎನಲು ಸಲಹುವ |
ಶ್ರೀ ನಾಥನ ಒಂದೇ ಮನದಿ ಪೂಜಿಸಲು ||
ರಾರಾಜಿಸುವ ವಿಷ್ಣು ಲೋಕದಿ |
ಘಸಣೆ (ಚಿಂತೆ) ಕಳೆದು ಘನತೆವೆತ್ತಿ ||
ವೇಂಕಟಪತಿ ಶ್ರೀಕೃಷ್ಣವಿಠ್ಠಲನ ದಯದಿ |
ದ್ರವಣ (ಸಾಮರ್ಥ್ಯ / ಸಂಪತ್ತು) ಪಡೆದು ಸುಖಿಸುವ ||
ನಮಸಲು ಬಿಡದೆ ಬಾರಿ ಬಾರಿಗೂ |
ಮರೆಯದೆ ಸಕಲರ ಪೊರೆದು ||
ಹರುಷದಿ ಜನ್ಮ ಸಾರ್ಥಕವಾಗಿಸುವ ||
369. ಬೇಕು ಪ್ರತಿಕಾರ್ಯದಲಿ ಜ್ಞಾನ | ಬೇಕು ಪ್ರತಿ ಕಾರ್ಯದಿ ಇಚ್ಛೆ |
ಬೇಕು ಪ್ರತಿ ಕಾರ್ಯಕೆ ಸಮಯ | ಬೇಕು ಸಕಲಕೂ ಮುಂಚೆ ಶ್ರೀಕೃಷ್ಣವಿಠ್ಠಲನ ಅನುಗ್ರಹ ||
370. ಸುಲಭ ಸಾಧನವಿದು ಅನಂತ ಪಾಪ ನಾಶಕೆ ||ಪ||
ಗೆಲ್ಲಬಹುದು ಅಕಾಲಮೃತ್ಯು ಪರಿಹಾರಕ ತೀರ್ಥಪ್ರಾಶನದಿ ||ಅಪ||
ಪಾಪ ನಿವೃತ್ತಿಗೆ ಪರಮಾತ್ಮನಿಗೆ ಚಾಮೃತಭಿಷೇಕ |
ರೂಪ ಭಗವಂತನ ನೆನೆಯಿರಿ ಜಡ ವಸ್ತುವಿನಲಿ ||1||
ನೆನೆಸೆ ನಾರಾಯಣನ ಜಲಾಭಿಷೇಕದಿ ದಶಾಪರಾಧ ನಾಶ |
ನೆನೆಸೆ ಗೋವಿಂದನ ಕ್ಷೀರಾಭಿಷೇಕದಿ ಶತಾಪರಾಧ ನಾಶ ||2||
ನೆನೆಸೆ ವಾಮನನ ದಧಿ ಅಭೀಷೆಕದಿ ಸಹಸ್ರಾಪರಾಧ ನಾಶ |
ನೆನೆಸೆ ವಿಷ್ಣುನ ಘೃತಾಭಿಷೇಕದಿ ದಶ ಸಹಸ್ರಾಪರಾಧ ನಾಶ ||3||
ನೆನೆಸೆ ಮಧುಸೂಧನ ಮಧು ಅಭಿಷೇಕದಿ ಲಕ್ಷಾಪರಾಧ ನಾಶ |
ನೆನಸೆ ಅಚ್ಯುತನ ಇಕ್ಷು (ಶರ್ಕರ) ಅಭಿಷೇಕದಿ ದಶಲಕ್ಷಾಪರಾಧ ನಾಶ ||4||
ಸುರಿಯೆ ಎಳೆನೀರ ಕೋಟಿ ಪಾಪ ನಾಶ |
ಹರಿಸಲು ಗಂಧೋದಕ ಸ್ನಾನ ಅನಂತ ಪಾಪ ನಾಶ ||5||
ಅಕ್ಷಯ ಫಲದಾತ ನಿಷ್ಕಾಮ ಕರ್ಮಕೆ ಹರಿಲೋಕ ಕೊಡುವ |
ಶ್ರೀಕೃಷ್ಣವಿಠ್ಠಲನ ಅಂತರಂಗದಿ ಇಂತು ಧ್ಯಾನಿಸಿ ಪೂಜಿಸಲು ||6||
371. ಆರಾಧಿಸೇ ವೃಂದಾವನದಿ ಸಕಲರೂ ಗೋವರ್ಧನನ |
ಇಂದ್ರ ಕುಪಿತಗೊಂಡು ಮುಸಲಧಾರೆ ಎರೆದ ||
ಸುರಿದ ಜಡಿ ಮಳೆ ರಭಸ ತಪ್ಪಿಸಲು |
ಕಿರು ಬೆರಳು ತುದಿಯಲ್ಲೆತ್ತಿ ಅಲುಗಾಡದೆ ||
ಗಿರಿಯ ಛತ್ರಿಯಾಗಿಸಿ ಪಿಡಿದ ಏಳುದಿನ ಸತತ |
ಕರೆದ ಸಕಲ ಜನರ ಗೋವಳಸಹಿತ ||
ಪೋರ ದಿಟ್ಟತನದಿ ಆಶ್ರಯವಿತ್ತ |
ಪೂರ್ಣನಂಬದೇ ಬಾಲಕನ ಶಕ್ತಿಯ ||
ಊರುಗೋಲಾಗಿ ಕೋಲನು ಆನಿಸಿ ಹಿಡಿದರು ಭಯದಿ |
ಇಂದ್ರ ತಿಳಿದು ತನ್ನ ತಪ್ಪಿಗೆ ನಾಚಿ ನೀರಾದ ||
ಬೇರಾರಲ್ಲ ಸರ್ವಾಧಿಪತಿ ಶ್ರೀಕೃಷ್ಣವಿಠ್ಠಲನೇ ಈ ಬಾಲಕನೆಂದರಿತ ||
372. ಎಷ್ಟು ಪೊಗಳಿದರೂ ಮನ ತುಂಬದು |
ಇಷ್ಟ ದೈವನ ಇಷ್ಟೂ ಪಾಡಿದರೂ ತೃಪ್ತಿಯಾಗದು ||
ತುಷ್ಟಿಯಾಗದು ಬರೀ ನಾಮಾಮೃತ ಜಪದಿ |
ಕಷ್ಟ ಕಾಲದಿ ಕಾಯುವವನೊಬ್ಬನೇ ||
ದೃಷ್ಟಿಸುವ ಆಸೆ ಪ್ರತ್ಯಕ್ಷದಿ ಪೂರೈಸೆಯಾ |
ಸೃಷ್ಟಿ ಕರ್ತ ಶ್ರೀಕೃಷ್ಣವಿಠ್ಠಲ ನಿನ್ನಾಕರ್ಷಣೆ ಉತ್ತುಂಗ ||
373. ವಸುವಿನಿಂದ ಜನಿಸಿ, ವಸುವನು ಪಾಲಿಸಿದ |
ವಸುಧೀಶ ಶ್ರೀಕೃಷ್ಣವಿಠ್ಠಲ ವಾಸಿಸೆನ್ನ ಹೃನ್ಮಂದಿರದಿ ||
374. ವಾರಿಧಿ ಶಯನ ವಾರಿಜಳ ವರಿಸಿ |
ವರಾಭಯದಿ ಪೊರೆವ ವರಾಂವರ ||
ವರವೀವ ಕಪಿವರ ಅಂತರ್ಯಾಮಿ |
ವಾರಾಂಗನೆಯ ಉದ್ಧರಿಸಿದ ಪರಮವರ ||
ವೀರ-ಸುವೀರ ಶ್ರೀಕೃಷ್ಣವಿಠ್ಠಲ ವರಿಸೆನ್ನ ||
375. ಸತ್ಕವಿಗಳ ಸತ್ಸಂಗವೇ ಸದ್ಗತಿಗೆ ದಾರಿ |
ಸುಕಥಾ ಶ್ರವಣ ಹೃತ್ಕರ್ಣ ರಸಾಯನ ವಾಹುದು ||
ಭಕ್ತಿ-ಶ್ರದ್ಧೆಯನ್ನನುಸರಿಸಿ ಸಿಗುವುದು ಮುಕ್ತಿ |
ಹೃತ್ಕಮಲಸ್ಥ ಶ್ರೀಕೃಷ್ಣವಿಠ್ಠಲನ ಅಪರೋಕ್ಷಾನಂತರ ||
ತತ್ವಸುವ್ವಾಲಿ
376. ಎಲ್ಲಿ ಹರಿಯೋ ಮತ್ತಲ್ಲಿ ಪ್ರಾಣನಿರುವ || ಪ್ರಾಣನಿರುವ ||
ಶ್ರೀಕೃಷ್ಣವಿಠ್ಠಲನ ನಿರುತ ಸೇವಿಸುತ ||1||
ದೇಹದೊಳು ಪ್ರಾಣನಿರುವ ತತ್ವ್ತೇಶರೊಡಗೂಡಿ ಪ್ರೇರ್ಯ ಪ್ರೇರಕನಾಗಿ |
“ಪ್ರೇರ್ಯ ಪ್ರೇರಕ” ನಾಗಿರುವ || ಶ್ರೀಕೃಷ್ಣವಿಠ್ಠಲನ ಅಣತಿಯಿಂದ ||2||
ಸಕಲ ಕಾರ್ಯಗಳನು ಬಿಡದೆ ಮುಖ್ಯಪ್ರಾಣಾಂತರ್ಗತ ಸಪರ್ಪಿಸಿದರೆ |
ಸಮರ್ಪಿಸಿದರೆ || ಸದೈವ ಶ್ರೀಕೃಷ್ಣವಿಠ್ಠಲನೊಲಿವ ||3||
ಒಂದು ರೂಪದಿಂ ಚತುರರೂಪ ತಳೆದು || ಚತುರರೂಪ ತಳೆದು ||
ಸಹಸ್ರಾರು ರೂಪದಿಂ ಸಹಜದಿ ಜಗವ ಸಲಹುವ ಶ್ರೀಕೃಷ್ಣವಿಠ್ಠಲ ||4||
ಬ್ರಹ್ಮಾಂಡ-ಪಿಂಡಾಂಡದಿ ಬಹಿರಂತರ್ಗನಾಗಿ || ಬಹಿರಂತರ್ಗತನಾಗಿ ||
ತನ್ನಾಮ, ತದ್ರೂಪ, ತತ್ತದಾಕಾರನಾಗಿ ಶ್ರೀಕೃಷ್ಣವಿಠ್ಠಲ ವ್ಯಾಪ್ತನು ಎಂದುತಿಳಿ ||5||
ಒಂದು ರೂಪದಿ ಅನಂತರೂಪಗಳು || ಅನಂತ ರೂಪಗಳು ||
ಅನಂತ ಗುಣಗಣ ಸಹಿತದಿ ಇರುವ ಶ್ರೀಕೃಷ್ಣವಿಠ್ಠಲಗೆ ಸರಿ-ಮಿಗಿಲಾರಿಲ್ಲ ||6||
ಪರ-ಅಪರ ತತ್ತ್ವಗಿಂತ ಪರಲೋಕ ವೈಕುಂಠಾಧಿಪತಿ || ವೈಕುಂಠಾಧಿಪತಿ ||
ಶ್ರೀಕೃಷ್ಣವಿಠ್ಠಲನೇ ಪರತಮ ಪರತತ್ವ ||7||
377. ಈರ್ವರೂ ನಾರಾಯಣನ ಅಂತರಂಗವರಿತವರು ||ಪ||
ಸ್ವರೂಪದಿ ಸಾತ್ತ್ವಿಕರು ಸದಾ ಹರಿ ಸಮೀಪವಿದ್ದರೂ ಶಾಪಗ್ರಸ್ತರಾದರು ||ಅಪ||
ಮೂರು ಅಸುರ ಜನುಮವೆತ್ತಿದರು ಈ ಭುವಿಯಲಿ |
ಧರ್ಮಬೋಧಕರು ಸನೀಹದಿ ಪ್ರತಿ ಜನುಪದಿ ಇದ್ದರೂ ||
ಪ್ರಾರಬ್ಧ ಕರ್ಮ ತೀರದು ಅನುಭವಿಸುವ ತನಕ |
ಯಾರನ್ನೂ ಬಿಡದು ದೇವ-ಮಾನವರ ಸಹಿತ ||1||
ಹಿರಣ್ಯ ಕಶ್ಯಪನಿಗೆ ಸುತಪ್ರಲ್ಹಾದನಿದ್ದ ಹಿತೋಪದೇಶಕೆ |
ಎರಡನೇ ಜನುಮ ರಾವಣ-ಕುಂಭಕರ್ಣರಿಗೆ ವಿಭೀಷಣನಿದ್ದ ||
ಮೂರನೇ ಜನುಮ ಶಿಶುಪಾಲ-ದಂತವಕ್ತ್ರರಿಗೆ ಉಪದೇಶಿಸಲು |
ಶ್ರೀಕೃಷ್ಣವಿಠ್ಠಲನೇ ಸ್ವಯಂ ಎದುರಲಿ ನಿಂತು ಪೇಳಿದರೂ ಕೇಳಲಿಲ್ಲ ||2||
378. ಸರ್ವಜೀವಿಗಳಿಗೆ ಸತ್ತಾಪ್ರದ ವಾಯು ಧಾರಣಾಪ್ರದ |
ಸರ್ವೇಂದ್ರಿಯಾಭಿಮಾನಿ ನಿಯಾಮಕ ಮುಖ್ಯಪ್ರಾಣ ||
ಇವನಿಗೂ ಪ್ರೇರಕಳು ರಮಾ ಭಕ್ತಿ ಪ್ರದಾಯಕಳು |
ಸರ್ವರಿಗೂ ಮುಕ್ತಿ ಪ್ರದಾಯಕ ನಮ್ಮ ಶ್ರೀಕೃಷ್ಣವಿಠ್ಠಲ ||
ಉಡುಪಿಕೃಷ್ಣನ ಸೊರಗುವಿಕೆಗೆ ಕಠಾರಣವೇನು ?
379. ಚಿಣ್ಣ ಕೃಷ್ಣಯ್ಯಾ, ಬಾಲ ಕೃಷ್ಣಯ್ಯಾ ಏಕೆ ಸಣ್ಣಗಾಗಿರುವೆ ||ಪೇಳು ||ಪ ||
ಮಣ್ಣ ಮೆದ್ದ ಬಾಯಿಗೆ ಬೆಣ್ಣೆ, ಹಾಲು ನೈವೇದ್ಯ ಒಗ್ಗಲಿಲ್ಲವೇ ? |
ಹಣ್ಣಿನ ಬುಟ್ಟಿಗೆ ಕೈಹಾಕಿ ತಿಂದವಗೆ ಎದುರಿಟ್ಟಿದ್ದು ಬೇಕಿಲ್ಲವೇ ? ||
ಒಣದ್ರಾಕ್ಷಿ, ಗೋಡಂಬಿ ಉತ್ತತ್ತಿ ದೇಹಕೆ ಪುಷ್ಟಿ ಕೊಡುತಿಲ್ಲವೇ ? |
ಕಣ್ಣಿನಿಂದ ಸ್ವಾಖ್ಯರಸ ಸ್ವೀಕರಿಸುವಗೆ ಏನೂ ಬೇಡವಾಯಿತೇ ? ||1||
ನೇಣು-ಕಡೆಗೋಲು ಪಿಡಿದು ಕೈ ಸೋತು ಹೋಯಿತೇ ? |
ಕಣ-ಕಣದಲ್ಲಿರುವಗೆ ಒಂದೆಡೆಯೇ ನಿಂತು ಸಾಕಾಯಿತೇ ? ||
ಕ್ಷಣ-ಕ್ಷಣಕೂ ಸೊರಗುತಿರುವುದು ಪಂಚಾಮೃತ ಮಜ್ಜನದಿಂದಲೇ |
ಮಣಭಾರ ಉದರದಲ್ಲಿಟ್ಟವಗೆ ಜಠರ ಬೇನೆಯೇ ||2||
ಉಣಿಸಿ ಔತಣ ಸಕಲರಿಗೆ ಅನ್ನಬ್ರಹ್ಮ ದಣಿದೆಯಾ ? |
ಪಣದಿ ಸೋತವರ ಪಕ್ಷವಹಿಸಿ ಧರ್ಮ ಉಳುಹಲು ಸೊರಗಿದೆಯಾ ? ||
ಗಣಿತ ಅಗಣಿತ ಲೋಕಸ್ಥ ದೇವಾ ಕ್ರೀಡಿಸಿದ್ದೇ ಕಾರಣವಾ |
ವರ್ಣಾಭೀಮಾನಿ ಸಕಲ ಸುರವಂದ್ಯರ ಸಂತೈಸಿ ಸೋತೆಯಾ ||3||
ಕಣ್ರೇಪ್ಪೆ ಬಡೆಯದೆ, ಭಾರಪೊತ್ತು, ಮೋರೆ ತಿರುವಿ |
ಸಣ್ಣ ಬಾಲಕಗೊಲಿದು, ತ್ರಿವಿಕ್ರಮನಾಗಿ, ಕಾಡಲಿ ಅಲೆದು ||
ಅಣ್ಣಂದಿರ ಶಿರ ಕಡಿದು, ಕಾಳಿಂಗನ ಫಣೆಮೇಲೆ ನರ್ತಿಸಿ |
ಗುಣಗಳ ಬಿಟ್ಟು ಬೋಧಿಸಿ (ಅಧರ್ಮ), ಹಯವನೇರಿದ್ದಕೆ ಸೋತು ಸೊರಗಿದೆಯಾ ||4||
ಕಣ್ಮಣಿ, ನೀಲವರ್ಣಗೆ ಭಕ್ತರ ದೃಷ್ಟಿ ತಾಕಿದೆಯೇ |
ದಣಿವಾಗಿದೆಯೇ ಅಷ್ಟಯತಿಗಳ ಭಕ್ತಿ ಸೇವೆಯಲಿ ||
ಷಣ್ಮಹಿಷಿಯರ ವಿರಹ ವೇದನೆ ಸಹಿಸದಾಯಿತೇ ? |
ಜಾಣ, ರುಕ್ಮಿಣಿ ಕರಾರ್ಚಿತ ಶ್ರೀಕೃಷ್ಣವಿಠ್ಠಲ ಕಾರಣವ ಪೇಳಯ್ಯಾ ||5||
380. ಹರಿಯ ತತ್ವವೇ ಹರಿಯ ಮತ |
ಹರಿ (ಮನ) ಹರಿ (ತೀವ್ರದಿ) ಹರಿಯೆಡೆ (ವಿಷ್ಣು() ಹರಿಕಾರ (ಮುಂದಾಳು) ಹರಿಸಿ ||
ಹರಿಪದದಿ ಹರಗು (ಚೆಲ್ಲು) ಹರಣಕೂ ಮುನ್ನ |
ಹರಿ ಕಥೆಯಲಿ ಹರವಸ (ಪರವಶ) ಳನ್ನಾಗಿಸಿ ಹರಿಯದಂತೆ ಬೇರೆಡೆ ||
ಹರಿ ಅಭಿನ್ನ ಶ್ರೀಕೃಷ್ಣವಿಠ್ಠಲನಲಿ ಹರುಷದಿ ಹರಿಸು |
ಹರಿಯೇಪ್ರಾಣ, ಹರಿಯೇ ಪರದೈವ ಎಂದೆಂದಿಗೂ ||
381. ದು:ಖಭಂಜಕ , ಸುಝ ಪ್ರದಾಯಕ, ಅಖಿಲ ಜಗತ್ರಾತ |
ಖಗವಾಹನ, ಸಖ ಶ್ರೀಕೃಷ್ಣವಿಠ್ಠಲ ವಿಶ್ವಬಂಧು: ||
382.ನನ್ನ ಕರ್ಮದ ಗಂಟೀ ಹೊರೆಯಾಗಿರಲು | ನೀನೇನು ಮಾಡುವಿ ಒಳಹೊರಗಿದ್ದು ||
ನಿನ್ನ ಮನಸಿಗೆ ಬಂದಂತೆ ಉಣಿಸುವಿ | ಎನಗೇಕೆ ಹೊಗಳಿಕೆ- ತೆಗಳಿಕೆ ಚೆನ್ನಿಗರಾಯ ಶ್ರೀಕೃಷ್ಣವಿಠ್ಠಲ ||
383. ಲಕ್ಷ ಕೊಡುವವ ನೀನೇ | ಭಿಕ್ಷೆ ಬೇಡಿಸುವವ ನೀನೇ ||
ಲಕ್ಷಣದಿ ಪೀತಾಂಬರ ಉಡಿಸುವ ನೀನೇ | ತಕ್ಷಣದಿ ಹರಕು ಉಡಿಸುವವ ನೀನೇ ||
ಭಕ್ಷ್ಯ ತಿಸಿಸುವವ ನೀನೇ | ಲಕ್ಷಿಸದೆ ಉಪವಾಸ ಬೀಳಿಸುವವ ನೀನೇ ||
ಕುಕ್ಷಿಯೊಳಗೆ ಸಕಲ ಜಗತ್ ಧರಿಪೆ | ಸಾಕ್ಷಿಯಾಗಿ ಇರುವೆ ಶ್ರೀಕೃಷ್ಣವಿಠ್ಠಲ ||
384. ಸೇವೆಯ ಪರಿ ತಿಳಿಯೆನೋ ದೇವಾ |
ವಿವಿಧ ಸೇವೆಯಲಿ ಯಾವ ಸೇವೆ ಮಾಡಲಿ ||ಪ||
ತಪ, ಯಜ್ಞ ಮಾಡಲರಿಯೆ |
ಕೊ, ಕಾಮಗಳ ಬಿಡಲರಿಯೆ ||
ಪಾಪ, ಪುಣ್ಯಗಳ ಲೆಕ್ಕ ತಿಳಿಯದು |
ಪೋಪುತಿದೆ ಬರಿದೇ ಆಯುಷ್ಯ ||1||
ಅನ್ನ, ವಸ್ತ್ರ, ಭೂಮಿದಾನ |
ಧನ, ಕನಕ, ಗೋದಾನವೇ ||
ದೀನ, ದೂನ, ಅನಾಥರ ಸೇವೆಯೇ |
ದಾನದಿ ಶ್ರೇಷ್ಠವಾದ ದಾನ ಯಾವುದು ? ||2||
ವ್ರತ, ನಿಯಮಗಳ ಗೋಜಲು ತಿಳಿಯದು |
ಸತತ ಮಾನಸ್ಮರಣೆ ಮನದಿ ಇರದು ||
ತೀರ್ಥ ಯಾತ್ರೆಯಲಿ ತನು ಸಹಕರಿಸದು |
ಸಾರ್ಥಕತೆಗೆ ಸೇವೆ ಯಾವುದು ? ||3||
ವರ್ಣ ಪ್ರತಿಪಾದ್ಯ ಸುವರ್ಣನಾಮಕ |
ವಾಣಿ ಪತೀಶನೇ ತೋರಿದ ಸೇವೆಯೆಂದು ||
ಬಣ್ಣಿಸಿ ಬರೆದ ಲೀಲೇ ಗುಣ ಪದಗಳನು |
ಗುಣಾರ್ಣವ ಶ್ರೀಕೃಷ್ಣವಿಠ್ಠಲನಿಗೆ ಸಮರ್ಪಿಸುವೆ ಸ್ವೀಕರಿಸೋ ||4||
385. ಓಂಕಾರ ಸ್ವರೂಪ ಶಾಂತ ಸ್ವಭಾವ |
ಲೋಕೈಕ ಸುಂದರ ಮೂಲ ಪುರುಷೋತ್ತಮ ||
ಭಕ್ತ ಜನರೋದ್ಧಾರಕ ಸತ್ಯವಚನಪರಿಪಾಲಕ |
ಶ್ರೀಕೃಷ್ಣವಿಠ್ಠಲನೇ ಸರ್ವಕಾರ್ಯ ಕಾರಣಕರ್ತ ||
386. ಭಕ್ತಿರಸ ಲೀಲೆ
ಮುರುಳಿ ಅಧರ ತಾಕಲು ತಾನೇ |
ಹೊರಹೊಮ್ಮಿತು ಮೋಹಕ ಮಧುರ ಗಾನ ||ಪ||
ತುರು-ಕರುಗಳು ಕಿವಿ ನಿಮಿರಿಸಿ ಚಂಗನೆ |
ಹಾರುತ್ತಾ- ಬಾಲ ಬೀಸುತ್ತ ಓಡಿ ಓಡಿ ಬಂದವು ||
ಕರುಗಳು ಕ್ಷೀರಪಾನ ಬಿಟ್ಟು ಶಿಲೆಯಂತೆ ನಿಂತವು |
ಕೊರಳು ತೂಗುತ್ತಾ ಹಸುಗಳು ತಮ್ಮನ್ನೇ ಮರೆತವು ||1||
ತರುಲತೆಗಳು ಪಲ್ಲವಿಸಿ ಪುಷ್ಪಗಳರಳಿದವು |
ಪರಿಮಳ ಭರಿತ ಮರುತ ಮಂದನಾಗಿ ಬೀಸಿತ್ತು ||
ತೆರೆ ತೆರೆಯಾಗಿ ಯಮುನೆ ತಲೆ ತೂಗಿದಳು |
ನೀರಿನ ಜುಳು ಜುಳುನಾದ ವೇಣುವಿಗೆ ಜೊತೆಯಾಯ್ತು ||2||
ಶರ ಬೀಸಿದ ಕಾಮ ಸಕಲರ ಮೋಹಮಾಡಲು |
ಮರಳು ಮಾಡಿತು ರಾಗ ನಿನಾದ ಪರಿಸರವ ||
ನೀರವ ಕತ್ತಲೆ ಸಕಲರ ಹೃದಯ ತಟ್ಟಿತ್ತು |
ಸುಶ್ರುತ ರಾಗದಿ ಆಕರ್ಷಿತರಾದರೆಲ್ಲರು ||3||
ಕರೆ ಕೇಳಿ ಗೋಪಿಕೆಯರೆಲ್ಲಾ ಮಾಡುವ ಕೆಲಸ |
ಮರೆತು ಅರ್ಧದಿ ನಿಲ್ಲಿಸಿ ಹೊರ ಹೊರಟರು ||
ವೈರಾಗ್ಯ ಸಾಧಕರು ಪತಿ-ಸುತ ಗೃಹ ತೊರೆದು |
ಪರಮಾನುಗ್ರಹ ಪಡೆಯಲು ತ್ವರಿತದಿ ಧಾವಿಸಿದರು ||4||
ಸುರಾಗ ಆಲಿಸಿ ದೇಹಭಾನ ಮರೆತು ಧನ್ಯತೆಯಲಿ |
ತೊರೆದು ಲಜ್ಜೆ ಆಪೇಕ್ಷಿಸಿದರು ತನು-ಮನಸಂಗ ||
ನಿರಾಕರಿಸೆ ದೇಹ ತೊರೆವೆವು ಎಂದರು ಭಕ್ತಿ ಭಾವದಿ |
ಕರುಣೆಯಿಂದ “ತಥಾಸ್ತು” ಎಂದು ಮನ ಮಾಡಿದ ಮೋಹನ ||5||
ಶರದೃತು ಪೌರ್ಣಿಮೆರಾತ್ರಿಪೂರ್ಣ ರಾಸಲೀಲೆ ಆಡಿದರು |
ಸ್ವರ್ಗವೇ ಧರೆಗಿಳಿದು ಬಂದು ಸೃಷ್ಟಿ ನಿರ್ಮಿಸಿತ್ತು ||
ಶ್ರೀಕೃಷ್ಣವಿಠ್ಠಲ ಅನೇಕರೂಪದಿ ಅನೇಕ ಭಾವದಿ ಬಾಲಕನಾಗಿ |
ನೀರೆ ಗೋಪಿಕೆ ಜೊತೆ ಲಾಸ್ಯದಿ ನಲಿದಾಡಿದನು ||6||
ಜೊತೆ
ಸಂತೃಪ್ತಿ ಪರಿಪಾಲಿಸಿ ಸಂತೈಸಿದ ಲೀಲೆ ಅಚಿಂತ್ಯಾದ್ಭುತ |
ಸ್ಮರಿಸುತ್ತಾ ರಸ ಸಮಯ ಹರುಷದಿ ತೆರಳಿದವರವರ ಮನೆಗೆ ||
387. ಓಡೋಡಿ ಬರುವ ಭಕ್ತವತ್ಸಲ ಸಕಲರನುದ್ಧರಿಸಲು ||ಪ||
ನೋಡದೆ ಸಮಯ ತ್ವರಿತದಿ ಧಾವಿಸಿ ಬರುವ ದೇವ ||ಅಪ||
ಪುಟ್ಟ ಬಾಲಕನಿರಲಿ, ದೀನಾರ್ತಪ್ರಾಣಿ ಇರಲಿ | (ಧ್ರುವ, ಆನೆ)
ಕಷ್ಟದಲ್ಲಿರಲಿ, ಶಾಪಿತಳಾಗಿರಲಿ || (ದ್ರೌಪದಿ, ಅಹಲ್ಯ)
ಇಷ್ಟದಿ ಭಕ್ತಿಯಿಂದ ದಾರಿ ಕಾಯ್ದಿರಲಿ ||1|| (ಶಬರಿ)
ಬಡವನಿರಲಿ, ಸಖ-ಸಖಿಯರಿರಲಿ | (ಸುಧಾಮ, ಅರ್ಜುನ, ಗೋಪಿಕೆ)
ಭಂಡ ಬಲ್ಲಿದವನಿರಲಿ, ಅಸುರನಿರಲಿ || (ಪ್ರಹ್ಮಾಲ, ಬಲಿ)
ಬಿಡದೆ ಸಲಹುವ ಅವರಿದ್ದಲ್ಲಿಗೇ ಪೋಗಿ ||2||
ತ್ರಿವಕ್ರಳಿರಲಿ, ಜ್ಞಾನಾರ್ತಿ ಇರಲಿ | (ಉದ್ಧವ)
ಈವ ಅಭವ ದು:ಖ ಭಂಜಕ ||
ಕಾವ ಸರ್ವದಾ ನಮ್ಮ ಶ್ರೀಕೃಷ್ಣವಿಠ್ಠಲ ಭೇದವೆಣಿಸದೆ ||3||
388. ಒಂದು ರೂಪದಿ ವಿಶ್ವ ಒಳ-ಹೊರ ವ್ಯಾಪಿಸಿ |
ಭೇದವಿಲ್ಲದೆ ಅನೇಕ ರೂಪ ತಳೆದವಗೆ ನಮೋ ನಮ: ||
ಅಂಶ-ಪೂರ್ಣಾವತಾರವೆಂಬೆರಡು ರೀತಿಯಲಿ ತಾ |
ಈಶ- ರಮಾದಿರೊಳಗಿದ್ದು ಜಗದ್ರಕ್ಷಕನಾದವಗೆ ನಮೋನಮ: ||
ಮೂರು ರೂಪದಿ ಜಾಗ್ರತ-ಸ್ವಪ್ನ-ಸುಷುಪ್ತಿ ನೀಡುವ |
ಮೂರು ರೂಪದಿ ಹೃದಯದಿ ನೆಲಸಿ ಸಂಚರಿಪಗೆ ನಮೋನಮ: ||
ಮೂರು ನಾಮದಿ ಪಾಪ-ಸಂಹಾರಕನೆನಿಸಿದ ಸರ್ವೋದ್ಧಾರಕ |
ಕರ್ಮಲೋಪ-ದೋಷಗಳ ಸ್ವೀಕರಿಸುವಗೆ ನಮೋನಮ: ||
ವಿಚಿತ್ರ ಸೃಷ್ಟ್ಯಾದಿ ಕರ್ತ, ನಿಯಾಮಕ ನಾಲ್ಕು ರೂಪದಿ ಭರಿಸಿ |
ಪಂಚರೂಪದಿ ದೇಹವ್ಯಾಪಿಸಿ ಕರ್ಮವೈದಿಸುವಗೆ ನಮೋನಮ: ||
ಅಜಾದಿ ಐವತ್ತೊಂದು ಶಬ್ದ, ರೂಪದಿ ಸೇವಿಸಲ್ಪಡುವವನೇ |
ನಿಜದಿ ಶತ ಸಹಸ್ರ ನಾಮಾವಳಿಂದ ಪೊಗಳಲ್ಪಡುವನೇ ನಮೋನಮ: ||
ಬಾಲರೂಪದಿ ಜಲದಿ ಆಲದೆಲೆ ಮೇಲೆ ಪವಡಿಸಿ |
ಲೀಲೆಯಲಿ ಕ್ರೀಡಿಸುವ ಯುಗಪ್ರವರ್ತಕಗೆ ನಮೋನಮ: ||
ಅಗಣಿತ ರೂಪ ಅಗಣಿತ ನಾಮದಿ ಪೂರ್ಣತಿಳಿಯಲಾಗದ |
ಖಗಪತಿ ಶ್ರೀಕೃಷ್ಣವಿಠ್ಠಲ ಸ್ವಯಂ ವ್ಯಕ್ತಾ ವ್ಯಕ್ತಗೆ ನಮೋನಮ: ||
389. ಅತ್ತ, ಇತ್ತ, ಸುತ, ಮುತ್ತ, ಎತ್ತಲೂ ಪ್ರತೀ ಜನುಮದೀ |
ಕರ್ತೃ ಪ್ರೇರಕ ಶ್ರೀಕೃಷ್ಣವಿಠ್ಠಲನೇ ಕಾಣಲಿ ದಯದಿ ||
390. ಹೇಳಲ್ಹೇಗೆ ನಿನಗೆ ಹೇಗೆ ತಿಳಿಯಲ್ಹೇಳಲಿ || ನಾನೇನು ಹೇಳಲಿ ? ತಿಳಿಯದೆ ನಿನಗೆ ||ಪ||
ಸುಳಿಯೊಳಗೆ ಸಿಲುಕಿ ಹೊರ ಬರಲು ದಾರಿ ಕಾಣದಾಗದೆ |
ಸುಳಿಸುಳಿದಾಡುವ ಸರ್ವದಾ ಹಿತವನ್ನೇ ಬಯಸುವ ||
ಸೆಳೆದು ವಿಷಯಗಳಿಂದ ಒಲಿದು ಪಾಲಿಸು ಸರ್ವದಾ |
ಕಳೆದು ಪಾಪಗಳ ತೊಳೆದು ಮನದ ಮಲ ಶುದ್ಧಳಾಗಿಸೆಂದು ಹೇಗೆ ಹೇಳಲಿ ||1||
ಒಳಿತಾಗಲೀ ಕೆಡುಕಾಗಲೀ, ಸುಖವಾಗಲಿ, ದು:ಖವಾಗಲೀ |
ವೇಳೆವೇಳೆಗೆ ಕರ್ಮಾನುಸಾರ ಕಲೆಸಿ ಉಣಿಸುವವ ||
ಒಳಗೆ ಕುಳಿತು ಹೇಳುವವ ಕೇಳುವವ ಎನ್ನಂತರ್ಯಾಮಿ |
ನೋಳ್ಪ ಮಾಳ್ಪ ಸರ್ವವಿದಿತ ಶ್ರೀಕೃಷ್ಣವಿಠ್ಠಲ ನಿನಗೆ ಹೇಗೆ ಹೇಳಲಿ ||
391. ಪ್ರದ್ಯುಮ್ನನೇ ಹಿಂಕಾರ ನಾಮಕನಾಗಿ ಪ್ರಾಣನಲಿ |
ಉದ್ಗೀಥ ನಾಮಕ ನಾರಾಯಣ ಚಕ್ಷುವಿನಲಿ ||
ವಾಗೀಂದ್ರಿಯಲಿ ಪ್ರಸ್ತಾವ ನಾಮಕ ವಾಸುದೇವ |
ಶ್ರೋತೇಂದ್ರಿಯಲಿ ಪ್ರತಿಹಾರ ನಾಮಕ ಅನಿರುದ್ಧ ||
ನಿಧನ ನಾಮಕ ಸಂಕರ್ಷಣನು ಮನದಿ |
ಐದು ಇಂದ್ರಿಯಗಳಲಿ ಪಂಚರೂಪಿ ಪರಮಾತ್ಮನ ಉಪಾಸಿಸಿ ||
ಪರೋವರೀಯ ಶ್ರೀಕೃಷ್ಣವಿಠ್ಠಲ ಮಾಡುವ ಉಪಕಾರವ |
ಪ್ರತಿಕ್ಷಣದಿ ನೆನೆ ನೆನೆದು ಧನ್ಯರಾಗಿರಿ ||
392. ಹರಿರೂಪದಿ ಗರುಡನ ಮೇಲೇರಿ ಭರ ಭರ್ರನೆ |
ಸರೋವರಕೆ ತೀವ್ರವೇ ಬಂದು ಚಕ್ರದಿಂದ ||
ನಕ್ರನ ಕೊರಳು ಸರಸರ್ರನೇ ಕತ್ತರಿಸಿ |
ಕರಿರಾಜನ ಪಾಪಗಳ ಕರ ಕರ್ರನೇ ತರಿದು ||
ಶ್ರೀಕೃಷ್ಣವಿಠ್ಠಲ ತನ್ನ ಚರಣದಲ್ಲಿಟ್ಟವನೇ |
ಹರಿದು ಎನ್ನ ಪಾಪವ ಪರಪರ್ರನೇ ಸಂಸಾರದಿಂ ತಾರಿಸು ಕರುಣಾನಿಧಿಯೇ ||
393.. ಒಂದೇ ಮನದಿ ಬೇಡುವೆ ನಿರ್ಮಲ, ನಿಚ್ಚಳ, ನಿರವಧಿಕ, ನಿರಂತರ |
ನಿತ್ಯನಿಜ ಭಕುತಿ ನಿನ್ನ ಪದತಲದಿ ||
ಇದೇ ಜ್ಞಾನ ಇರಲಿ ಸಾಕು ಪ್ರತಿ ಜನುಮದಿ ಇದನ್ನೇ ದಯಪಾಲಿಸು ಶ್ರೀಕೃಷ್ಣವಿಠ್ಠಲ ||
394. ಅಧಿಕರಾರೈ ಸಮರಾರೈ ದೇವಾ ನಿನಗಧಿಕ ರಾರೈ ಸಮರಾರೈ |
ಭೇದ ವಿವರ್ಜಿತನ ಮಹಿಮೆಗಳೇ ಅಧಿಕ ನಿನ್ನ ಗುಣಗಳೇ ಸಮ ನಿನಗೆ ||
ಸುಂದರರಾರೈ ಸರ್ವಶಕ್ತರಾರೈ ನಿನಗಿಂತ ಸುಂದರರಾರೈ ಸರ್ವಶಕ್ತರಾರೈ |
ಸುಂದರಾತಿ ಸುಂದರ ಸಕಲಾವತಾರಗಳು, ಸರ್ವಶಕ್ತ ನೀನೇ ಶ್ರೀಕೃಷ್ಣವಿಠ್ಠಲ ಸರ್ವದಾ ||
395. ಬಾಧಕಗಳೆಲ್ಲಾ ಸಾಧಕವಾಗಲಿ ಅನುದಿನ ಸಾಧನೆ ಹೆಚ್ಚಲಿ |
ಬಂಧಕ ವಿಷಯದಿಂದ ವಿಮುಖವಾಗಲಿ ಇಂದ್ರಿಯ ||
ದುರ್ದಿನಗಳೆಲ್ಲಾ ಸುದಿನವಾಗಿ ಸಂತೈಸಲಿ ನಿತ್ಯ |
ಬಂಧು-ಬಾಂಧವರ ಸಂಗ ತೊರೆದು ಏಕಾಂತವಾಗಲಿ ಮನ ||
ಬಿದ್ದು ಹೋಗುವ ಮುನ್ನ ತೀರಲಿ ಪ್ರಾರಬ್ಧವೆಲ್ಲಾ |
ವೃಂದಾವನಸ್ಥ ವರದೇಶ ವರಪ್ರದ ಶ್ರೀಕೃಷ್ಣವಿಠ್ಠಲನ ದಯದಿ ||
ಶ್ರೀಸೀತಾರಾಮಕಲ್ಯಾಣ
396. ನಿತ್ಯಾವಿಯೋಗಿ ಶ್ರೀಸೀತಾರಾಮರ ಕಲ್ಯಾಣ |
ನಿತ್ಯೋತ್ಸವ ಸುಜನರಿಗೆಲ್ಲಾ ಆನಂದದಾಯಕ, ಮಂಗಳದಾಯಕ ||ಪ|||
ಮಿಥಿಲೇಶ ಸಾರಿದ ತನ್ನ ಕುವರಿಯ ಸ್ವಯಂವರವ |
ಸ್ವತ: ತೆರಳಿ ವಿಶ್ವಾಮಿತ್ರ ದಾಶರಥೇಯರಿಗಿತ್ತ ಅ|ಹ್ವಾನವ ||
ಎತ್ತ ನೋಡಿದರೂ ಸಿಂಗಾರದಿ ಪುರ ನವವಧುವಿನಂತೆ ಕಂಗೊಳಿಸುತ್ತಿತ್ತು |
ಮತ್ತೆ ಆಗಮಿಸಿದರಿಲ್ಲಿ ಬ್ರಹ್ಮರ್ಷಿ ರಾಮ-ಲಕ್ಷ್ಮಣರೊಡಗೂಡಿ ||1||
ನೀಲವರ್ಣದ ನೀಳಕಾಯದ ಗಂಭೀರ ವದನ ಸುಂದರರಾಮನ |
ಎಲ್ಲ ನರನಾರಿಯರು ಮನದದಣಿಯ ನೋಡಿ ಆನಂದಿಸಿದರು ||
ಮೆಲ್ಲನೆ ಹೇಳಿದರು ನಲ್ಮೆಯ ಸೀತೆಗೆ ಸರಿ ಜೋಡಿಯೆಂದು |
ಬಲವಾದ ಶಿವಧನಸ್ಸು ಈ ಬಾಲಕ ಎತ್ತ ಬಲ್ಲನೆ ? ಎಂದು ಶಂಕಿಸಿದರು ||2||
ಹಲವಾರು ಜನರು ಗಾಡೀಲಿ ಎಳೆತಂದರು ಧನಸ್ಸನು |
ಕೇಳಿ ಗುರುಗಳಪ್ಪಣೆ ಸುಧನ್ವರಾಮ ಅತ್ತ ನಡೆದನು ||
ಲೀಲಾಜಾಲವಾಗಿ ಎಡಗೈಲೆತ್ತಿ ಹೆದೆ ಏರಿಸಲು |
ಬಿಲ್ಲು ನಡುವೆಯೇ ತುಂಡಾಯಿತು ಸಿಡಿಲ ಶಬ್ದದಿ ||3||
ಮರೆಯಲ್ಲಿದ್ದ ಸೀತೆ ವರಮಾಲೆ ಪಿಡಿದು ಬಂದಳು |
ಒರೆ ನೋಟ ಬೀರಿ ನಾಚಿ ಸಂತೋಷ ಮನದಿ ನಿಂದಳು ||
ಶ್ರೀರಾಮನ ಕೊರಳಿಗೆ ಅರವಿಂದದ ಮಾಲೆ ಹಾಕಿದಳು |
ನೀರೆಯ ಕೈಪಿಡಿದು ಅರ್ಧಾಂಗಿಯಾಗಿ ಸ್ವೀಕರಿಸಿದ ದಯದಿ ||4||
ಜಾನಕಿರಾಮರ ವಿವಾಹ ನಿತ್ಯನೂತನ ಹರುಷದಾಯಕ |
ಅನಿಮಿಷರೆಲ್ಲಾ ಆಕಾಶದಿ ನೆರೆದು ನೋಡಿ ಸಂತೋಷಿಸಿದರು ||
ಕಣ್ಮಣಿ ಆಯೋಧ್ಯಾಪತಿ ಮರ್ಯಾದಾ ಪುರುಷೋತ್ತಮ |
ಚಿನ್ಮಯನಾದ ಶ್ರೀಕೃಷ್ಣವಿಠ್ಠಲನ ಅಭೇದ ರೂಪವೇ ಸರಿ ||5||
397. ಮುಂದೆ ನರಸಿಂಹ ರಕ್ಷಿಸೆ ಹಿಂದೆ ನಂದನಕಂದ |
ಎಡ ಬಲದಲಿ ಧನುರ್ಧಾರಿ ಶ್ರೀರಾಮ-ಲಕ್ಷಣರಿರೆ ||
ಇಂದಿರಾರಮಣ ಎನಗೇತರ ಭಯವೋ |
ಸದಾ ಎನ್ನ ನಡೆ-ನುಡಿ ಕಾಯ್ವ ಶ್ರೀಕೃಷ್ಣವಿಠ್ಠಲ ||
398. ಎಂತು ಕೊಂಡಾಡಲಿ ದೊರೆಯೇ, ನಿನ್ನ ಕರುಣೆಯ |
ಭ್ರಾಂತಿ ಹೊಯಿತು ನಿನ್ನ ವ್ಯಾಪಾರ ವೀಕ್ಷಿಸಿ ||ಪ||
ಸ್ವತಂತ್ರ, ದೋಷದೂರ, ಜ್ಞೇಯ, ಗುಣಪೂರ್ಣ ನೀನು |
ಅತ್ಯಣು, ಪರಾಧೀನ, ಅಲ್ಪಜ್ಞ, ಬದ್ಧ, ಉಪ ಜೀವ್ಯನಾನು ||
ಕೊಟ್ಟ ಮೂರು ಅಮೂಲ್ಯ ಸಾಮಾನುಗಳ ಅರಿಯದಾದೆ | (ಬುದ್ದಿ, ಮನ, ಇಂದ್ರಿಯ)
ಬಿಟ್ಟು ಸ್ವಧರ್ಮದ ಉಪದೇಶಾರ್ಥವ ಮರೆತು ||1||
ತತ್ವ ನಿಶ್ಚಯಿಸಿ, ಧ್ಯಾನಿಸಿ, ಅದರಂತೆ ಕರ್ಮ ಮಾಡುವುದು |
ನಿತ್ಯಧ್ಯಾನ, ಪರಿಶುದ್ಧ ಮನದಿ ಬಿಂಭೋಪಾಸಕರ ಸೇವೆಯ ||
ನಿಂತಿದ್ದು, ಕುಳಿತಿದ್ದು, ಮಲಗಿದ್ದು, ಓಡಾಡಿದ್ದರಲ್ಲೇ |
ಚಿಂತಿಸಿ ಅಚಿಂತ್ಯಾದ್ಭುತನ ಮಹಿಮೆ, ಅರ್ಪಿಸು ||2||
ಸತತ ಒಳಹೊರಗಿನ ವ್ಯಾಪಾರ ನಡೆಸುವವನ |
ಜೊತೆಗಾರನ ಗುಣ ಚಿಂತನದಿ ಮುಳುಗಿರೆ ||
ಅತ್ಯಂತ ಅಚ್ಚುಮೆಚ್ಚಿನ ಭಕ್ತನೆಂದು ಗ್ರಹಿಸಿ |
ಚಿತ್ತ ಸ್ವಚ್ಛಗೈಸಿ ಅನುಗ್ರಹೀಪ ಸತ್ಯಮೂರ್ತಿ ಶ್ರೀಕೃಷ್ಣವಿಠ್ಠಲ ||3||
399. ಏನು ಕರುಣೆಯೋ ಕಾರುಣ್ಯನಿಧಿಯೇ ಎಷ್ಟೆಂದು ಪೇಳಲಿ |
ಸ್ವಾನುಭವದ ಮಾತಿದು ಉತ್ಪ್ರೇಕ್ಷೆ ಸ್ವಲ್ಪವೂ ಇಲ್ಲ ||
ಪ್ರಾರಬ್ಧ ತಪ್ಪದು ಆದರೆ ಗುಡ್ಡದಷ್ಟಿರುವ ಕಷ್ಟ ಕಡ್ಡಿಯಂತೆ ಮಾಡಿದೆ |
ಸರ್ವದಾ ಸರ್ವತ್ರ ಕಣ್ಣನ್ನು ರೆಪ್ಪೆ ರಕ್ಷಿಸಿದಂತೆ ಎನ್ನ ರಕ್ಷಿಸಿದೆ ||
ವದನದಿ ನುಡಿಸಿದ ಮಾತನ್ನು ನಿಜವಾಗಿಸಿ ಗೌರವಿಸಿದೆ |
ಮಾಡಿದ ಕಾರ್ಯವ ಜಯವನ್ನಾಗಿಸಿ ಉನ್ನತಿ ನೀಡಿದೆ ||
ಶುದ್ಧ ಮಾಡುತ ಅಂತ:ಕರಣ ಸರ್ವಕಾರ್ಯಕಾರಣ ಪ್ರೇರಕನಾದೆ |
ಮಾಡಿದುಪಕಾರವ ಅಳೆಯಲಾರೆ, ಮರೆಯಲಾರೆ, ತೀರಿಸಲಾರೆ ||
ತನು ಮನದಿ ಅಶುದ್ದಳ ಶುದ್ಧಗೊಳಿಸಿದೆ ಸ್ವಚ್ಛಮೂರುತಿಯೆ |
ಮನದಿ ನೆನೆದಿದ್ದನ್ನು ನಿಜಕೆ ತಂದು ತೋರಿಸಿದೆ ಸಾಕ್ಷಿಯೆ ||
ನೀನೆನಗೇನು ಸಂಬಂಧವೆಂದು ಇದೆಲ್ಲವ ಮಾಡಿದೆಯೇ ದಯಾನಿಧೇ |
ನಿನ್ನನರಿಯದಾದೆ ಒಮ್ಮೆಯಾದರೂ ನಿನ್ನ ತೋರಿಸಿಕೊಡೋ ಅದೃಶ್ಯ ಬಾಂಧವನೇ ||
ಕನ್ಣಿಗೆ ಕಾಣದಿದ್ದರೂ ಸದಾ ನೆರವಿನ ಹಸ್ತ ಚಾಚಿದ ಅಪ್ರತ್ಯಕ್ಷ ದೈವವೆ |
ನಿನ್ನ ಇರವು-ಹರುವಿನ ಅರಿವು ನೀಡಿ ಸರ್ವವಶತ್ವವ ನಿರೂಪಿಸಿದೆ ||
ದೊಡ್ಡ ಗಂಡಾಂತರ ಒದಗಿದಾಗ ಬಿಡದೆ ಚಿಕ್ಕದಾಗಿಸಿ ಸಲುಹಿದೆ |
ಬಂದನೋವು ಅರಿವಿಗೆ ಬಾರದಂತೆ ಎನಗೆ ಉಣಿಸಿದೆ ||
ಬಿಡದೆ ನಿನ್ನುಪಕಾರವ ಜನುಮ ಜನುಮಕೂ ಸ್ಮರಿಸುವಂತೆ ಮಾಡು |
ಒಡೆಯಾ, ಪ್ರಾಣಸಖ ಶ್ರೀಕೃಷ್ಣವಿಠ್ಠಲ ನಿನ್ನ ಋಣ ತೀರಿಸುವ ಬಗೆ ತಿಳಿಸು ||