ಶ್ರೀ ಕೃಷ್ಣವಿಠ್ಠಲಪದಗುಚ್ಛ 3.7
ವಾಮನ ಚರಿತೆ
400. ಸುಗುಣಾಂತರಂಗ ಅವಿರ್ಭವಿಸಿ ಅದಿತಿ-ಕಶ್ಯಪ ಪುತ್ರನಾಗಿ |
ಆಗಲೇ ತೋರಿದ ಸುಂದರ ವಟು ವಾಮನರೂಪದಿ ||
ಆಗಮಿಸಿ ಯಜ್ಞಮಂಟಪದಿ ಬೇಡಿದ ಬಲಿಗೆ ದಾನವ |
ಬಗೆಬಗೆಯ ದಾನ ಒಲ್ಲದೆ ಬೇಡಿದ ತ್ರಿಪದ ಭುವಿಯ ||
ಅಗಣಿತ ಬೆಳೆದ ಅಚಿಂತ್ಯಾದ್ಭುತ ತ್ರಿವಿಕ್ರಮರೂಪದಿ |
ಬೇಗ ಅಳೆದ ಎರಡು ಪಾದದಿ ಭುವಿ ಅಂತರಿಕ್ಷವ ||
ನಗೆ ಬೀರಿ ಕೇಳಿದ ಎಲ್ಲಿಡಲಿ ಮೂರನೇ ಪಾದ ಸ್ಥಳತೋರು |
ಯೊಗದಿ ಅರಿತ ಸಾಮನ್ಯನಲ್ಲ ಇವ ಪರಮಾತ್ಮನೆಂದು ||
ಭಂಗವಾಗದಂತೆ ತನ್ನ ಪ್ರತಿಜ್ಞೆ ಸ್ಥಳವ ತೋರಿದ ಶಿರಬಾಗಿ |
ಬೇಗನೆ ಬಲಿಶಿರವ ಮೆಟ್ಟಿ ಪಾತಾಳ ಕಟ್ಟಿದ ||
ಅಂಗನೆಯ ಜೊತೆಗೂಡಿ ನಡೆದ ಚಿರಂಜೀವಿ ಬಲಿ |
ಈಗಲೂ ಕಾಯುತ್ತಿರುವ ಭಕ್ತವತ್ಸಲ ಅರಮನೆ ಬಾಗಿಲವ ||
ಗಗನಕ್ಕೆತ್ತಿದ ಪಾದ ನಖ ತಾಕಿ ಒಡೆಯಿತು ಬ್ರಹ್ಮಾಂಡ ಖರ್ಪರ |
ಸುಜ್ಞಾನಿ ಬ್ರಹ್ಮ ಆ ಜಲದಿ ಮಾಡಿದ ಪಾದಪೂಜೆಯ ||
ಆಗ ವಿಷ್ಟುಪದಿ ಎನಿಸಿ ಪವಿತ್ರಳಾಗಿ ಕೆಳಗೆ ಹರಿದಳು |
ನುಗ್ಗಿ ಬಂದ ರಭಸ ತಡೆದು ಶಿವ ಜಟೆಯಲಿ ಬಂಧಿಸಿದ ||
ಭಗೀರಥ ಮಾಡಿದ ಘೋರ ತಪಕೆ ಮೆಚ್ಚಿ ಕೆಳಗೆ ಕಳುಹಿದ |
ಸಂಗ ತೊರೆಯಲು ಮನವಿಲ್ಲದೆ ದೇವಲೋಕ ಬಿಟ್ಟು ಇಳಿದಳು |
ಸಾಗಿ ಬಂದು ಜಹ್ನುಋಷಿ ಆಶ್ರಮವ ತೇಲಿಸಿದಳು |
ಗಂಗೆಯನು ತೀರ್ಥವೆಂದು ಆಪೋಶನದಿ ಸಕಲ ಸ್ವೀಕರಿಸಿದ ||
ಸುಜ್ಞಾನಿಗಳು ಪಾವನವಾದುದ್ದು ಎಂದು ಬಿಟ್ಟಗಲರು ||
ವಿಜ್ಞಾಪಿಸಲು ಭಗೀರಥ ಕಿವಿಯಿಂದ ಹೊರಹೊರಟಳು ಜಾಹ್ನವಿ |
ಮಂಗಳೆ ಕೆಳಗೆ ಹರಿದು ಭುವಿ ಪಾತಾಳದಿ ಲೋಕ ಪಾವನಗೊಳಿಸಿ ||
ಸಗರ ಕುಲ ಬಾಂಧವರನ್ನೆಲ್ಲಾ ಉದ್ಧರಿಸಿದ ಸುಚರಿತನ ಗಾಥಾ |
ಗಗನದ ಸುರನದಿ ಭೂಮಿಲಿ ಪಾಪ ಕಳೆವ ಗಂಗೆ ||
ಜಗದೋದ್ಧಾರಕ ಶ್ರಿಕೃಷ್ಣವಿಠ್ಠಲನ ಪ್ರೇಮ ಕುವರಿಯಾದಳು ||
401. ಪುಟ್ಟದ ದೇಶವಿಲ್ಲ ಧರಿಸದ ದೇಹವಿಲ್ಲ |
ಮುಟ್ಟದ ಗ್ರಾಸವಿಲ್ಲ ತಿರುಗದ ಸ್ಥಳವಿಲ್ಲ ||
ಬಟ್ಟ ಬಯಲಲ್ಲೂ ನೀನೇಜೊತೆ |
ಹುಟ್ಟಿದ ಸ್ಥಿತಿಯಲ್ಲೂ ನೀನೇಜೊತೆ ||
ಹುಟ್ಟಿದ ಮೇಲೆ ಹೊಟ್ಟೆ ಚಿಂತೆ |
ಹೊಟ್ಟೆಗಾಗಿ ಮಾಡದ ಕೆಲಸವಿಲ್ಲ ||
ಕಟ್ಟದೆ ಬುತ್ತಿ ತಿಂದುಂಡು ತೇಗಿದೆ |
ಜಟ್ಟಿ ನಾನೆಂದು ಎಂಟರಿಂದ ಬೀಗಿದೆ ||
ಕಟ್ಟಕಡೆಗೆ ನಿನ್ನ ಪಾದವೇ ಗತಿಯೆಂದೆ |
ಸತ್ಯದಾಣೆಗೂ ಮುಂದೆ ಎಲ್ಲಿ ಹೇಗೆಂದರಿಯೆ ||
ಖಟ್ವಾಂಗನಂದದಿ ನಿನ್ನ ಸೇರಲರಿಯೆ |
ಕಟ್ಟಿ ಎಳೆದೊಯ್ವಾಗ ನಿನ್ನ ಸ್ಮರಣೆ ಸಾಕು ||
ಇಷ್ಟುಮಾತ್ರ ಪಾಲಿಸು ಶ್ರೀಕೃಷ್ಣವಿಠ್ಠಲನೇ ||
402. ಯಾರು ಬಂದಾರಮ್ಮಾ ನಮ್ಮ ಮನೆಗಿಂದು |
ಪೋರ ಗೋಪಲಕೃಷ್ಣ ಬಂದಾನಮ್ಮ ||ಪ||
ಸುಳಿಸುಳಿದಾಡುತಾ ನಲಿನಲಿಡಾಡುತಾ |
ಮೆಲ್ಲ ಮೆಲ್ಲನೆ ಬಂದು ಸುತ್ತಲೂ ನೋಡುತಾ ||
ನೆಲುವಿನಲ್ಲಿದ್ದ ಹಾಲು ಮೊಸರನೆ ಮೆದ್ದ |
ಕಳ್ಳನ ಹಿಡಿಯಲು ಓಡಿ ಓಡಿ ದಣಿದೇವಮ್ಮಾ ||1||
ಕೋಲು ತರಲು ತನಗೇನೂ ಗೊತ್ತಿಲ್ಲಮ್ಮಾ ಸೊಲ್ಲ |
ಸುಳ್ಳು ಹೇಳುತ್ತಾ ಕನ್ಣೀರ ತುಂಬಿದ ಅಮಾಯಕ ||
ಗಲ್ಲ ಉಬ್ಬಿಸಿ, ತುಟಿ ಕಚ್ಚಿ ಕೆಂಪುಮೋರೆ ಮಾಡಿದ |
ಚೆಲ್ವ ಶ್ರೀಕೃಕಷ್ಣವಿಠ್ಠಲನೇ ಸಕಲ ಚಿತ್ತ ಚೋರನಮ್ಮಾ ||2||
403. ಅನೇಕಾನೇಕ ರೂಪಿ ಪರಮಾತ್ಮನಿಗೆ ನಮ: |
ಅನೇಕಾನೇಕ ಶಿರ, ನೇತ್ರ, ಪಾದ, ಬಾಹುವಿಗೆ ನಮ: ||
ಅನೇಕಾನೇಕ ಹೆಸರಿನ ಪುರುಷ ಶಾಶ್ವತನೇ ನಮ: |
ಅನೇಕನೇಕ ಕೋಟಿ ಯುಗಗಳಲ್ಲವ ತರಿಸುವ ಶ್ರೀಕೃಷ್ಣವಿಠ್ಠಲನೇ ನಮೋನಮ: ||
404. ಒಂದರಸುಖ (ಸ್ವರೂಪ) ಸವಿಯಲು ಎರಡನು ತಿಳಿ | (ಪ್ರವೃತ್ತಿ & ನಿವೃತ್ತಿ)
ಮುದದಿ ಮುರನು (ಜ್ಞಾನಭಕ್ತಿ, ವೈರಾಗ್ಯ), ಪಡೆಯಲು ನಾಲ್ಕುರೀತಿ ಪಾಲಿಸಿ ||(ಧರ್ಮದಿ)
ಐದನ್ನು (ಪಂಚೇಂದ್ರಿಯ) ತುಳಿದು ಆರನ್ನು ತ್ಯಜಿಸಿ | (ಕಾಮಾದಿ)
ಒದ್ದು ಏಳನ್ನು (ಸಪ್ತದೋಷ), ಎಂಟನ್ನು ಪರಿತ್ಯಾಗಿಸಿ || (ಅಷ್ಟಮದ)
ಒಂದೇ ಮನದಿ ಒಂಬತ್ತರಿಂದ (ನವವಿಧಭಕ್ತಿ), ಹತ್ತಾಗುವುದೇ | (ಪೂರ್ಣಜ್ಞಾನಿ)
ಬದುಕಿನ ಗುರಿ ಶ್ರೀಕೃಷ್ಣವಿಠ್ಠಲನ ಸೇರುವ ಸುಲಭದಾರಿ ||
405 ದಾರಿಯ ತೋರೋ ಮುಕುಂದ ಎನಗೆ ಬೇರ್ಯಾರು ತೋರುವರಿಲ್ಲ |
ಉದ್ಧವಗೆ ಉಪದೇಶಿಸಿದೆ ತತ್ವವ ||
ಯುದ್ಧ ಬೇಡೆಂದರ್ಜುನಗೆ ಬೋಧಿಸಿದೆ ಧರ್ಮವ |
ಭೀಷ್ಮರಿಗೆ ತೋರಿ ನಿಜರೂಪ ಮುಕ್ತಿಯಿತ್ತೆ ||
ಕಷ್ಟದಿ ದ್ರೌಪದಿಯ ಮಾನವ ಕಾಯ್ದೆ |
ಸಕಲರ ಇಷ್ಟಾನಿಷ್ಟ ಬಲ್ಲ ಸರ್ವಜ್ಞನೇ ||
ಶ್ರೀಕೃಷ್ಣವಿಠ್ಠಲ ಎನಗೆ ದಾರಿ ತೋರದಿರೆ ಆಣೆ ನಿನಗೆ ||
406. ಎನಗೆ ಎಳೆತ ಸಕಲ ಕಡೆಗಳಿಂದಲು ಎಳೆತ |
ನಿನಗೆ ತಿಳಿಯದೇ ನಾ ಹೇಗೆ ಧ್ಯಾನಿಸಲಿ ನಿನ್ನ ||ಪ||
ನಿನ್ನ ಬಿಟ್ಟು ಅನ್ಯದರಲ್ಲಿ ಸದಾ ಸೆಳೆತ |
ಮನ ಮತ್ತು ಶರೀರ, ಸತಿ ಆತ್ಮಜರಲಿ ||
ಮನೆ ಮತ್ತು ಆಪತ್ತು ಸಮಾಜ ರಾಷ್ಟ್ರದಲಿ |
ಧನ ಮತ್ತು ಕನಕ ಸೇವಕ ಆತ್ಮೀಯರಲಿ ||1||
ತ್ರೀಗುಣದಲಿ ಸಿಲುಕಿ ಸುತ್ತುತಿರುವೆ ಸದಾ |
ಸಂಗರಹಿತಳಾಗಲು ಆಗದೆ ಒದ್ದಾಡುತಿರುವೆ ||
ಸುಜ್ಞಾನ ಪಡೆಯದೆ ಜನುಮ ವ್ಯರ್ಥವಾಗುತಿದೆ |
ಸುಗುಣಾಂತರಂಗ ಶ್ರೀಕೃಷ್ಣವಿಠ್ಠಲ ಎನ್ನ ಪಾರುಮಾಡು ||2||
407. ಸರಿಯುವುದು ಸಮಯ ಅರಿವಿಲ್ಲದೆ |
ಮರೆಯದೆ ಮುನ್ನ ಮಾಡು ಹರಿಸೇವೆ ||
ಸದಾ ಶ್ರವಣ ನಿರುತನಾಗು ಹರಿಕಥೆಯಲಿ |
ಸದಾ ಕೀರ್ತಿಸು ಚಿತ್ತದಿ ಹರಿಮಹಾತ್ಮೆಯಾ ||
ಸದಾ ಧ್ಯಾನಿಸು ಅಂತ್ಯವಿಲ್ಲದ ಹರಿ ಗುಣಗಳ |
ಸದಾ ದೃಷ್ಟಿಸು ಒಲುಮೆಯಿಂ ಹರಿ ಸರ್ವತ್ರದಿ ||
ಸದಾ ಮಾಡಿದ ಕೆಲಸವ ಹರಿಗರ್ಪಿಸು |
ಸದಾ ಓಡಾಡುವುದು ಹರಿ ತೀರ್ಥಯಾತ್ರೆ ||
ಸದಾ ಅಘ್ರಾಣಿಸು ಭಕ್ತಿಯಿಂ ಹರಿ ನಿರ್ಮಾಲ್ಯವ |
ಸದಾ ಸೇವಿಸು ಪ್ರೀತಿಯಿಂ ಹರಿ ಪ್ರಸಾದವ ||
ಸದಾ ಸತ್ಕರ್ಮಾಚರಣೆಯೇ ಉಸಿರಾಗಲಿ |
ಸದಾ ನಡೆಯುವುದೆಲ್ಲಾ ಹರಿ ಪ್ರೇರಣೆಯೆನ್ನು ||
ಸಚ್ಚಿದಾನಂದಾತ್ಮ ಶ್ರೀಕೃಷ್ಣವಿಠ್ಠಲನೊಲಿವ ||
408. ಅಂತರಂಗದಿ ಪೊಳೆವ ಚಿನ್ಮಯ ವಚನಾತೀತ |
ಅತೀ ಶಕ್ತ ಸುಜೀವಿಗಳ ವೈಕುಂಠದಲ್ಲಿಡುವ ||
ಚೇತನ ಪರಮಾಧೀನ ಎನ್ನ ಕರ, ಚರಣ, ಪ್ರಾಣ |
ಆತ್ಮಸ್ಥ ಪುರುಷ ಶ್ರೀಕೃಷ್ಣವಿಠ್ಠಲ ನಿನಗೆ ನಮೋನಮ: ||
409 ಮುಂಜಾವಿನಲಿ ನಾರಾಯಣ ನಾರಾಯಣ ಎಂದೆನ್ನುತ್ತಾ ||ಪ||
ಎದ್ದು ತುಳಸೀಲಿ ಕೃಷ್ಣನ ವಂದಿಸಿ ||
ಶೌಚದಲಿ ಕೇಶವನ ನೆನೆಸಿ ಮೃತ್ತಿಕಾಶೌಚದಲಿ ತ್ರಿವಿಕ್ರಮನ ||1||
ದಂತಧಾವನ ಕಾಲದಲಿ ಆಷ್ಟಬಾಹುಗಳ ಹರಿಯ ನೆನಿಸಿ |
ವದನ ತೊಳೆವಾಗ ಮನಸಾ ಮಾಧವನ ಸ್ಮರಿಸಿರಿ ||2||
ಸ್ತನ್ಯ ಪಾನ ಮಾಡಿಸುವಾಗ ಬಾಲಕೃಷ್ಣನ ಸ್ಮರಿಸಿ |
ಮಕ್ಕಳಾಡಿಸುವಾಗ ಅಕ್ಕರದಿ ಯಶೋದೆ ನಂದನ ನೆನೆಸಿರಿ ||3||
ಮೃತ್ತಿಕಾ ಸ್ನಾನದಿ ವರಾಹ ಸ್ವಾಮಿ ಸ್ಮರಿಸಿ |
ವಸ್ತ್ರ ಧರಿಸುವಾಗ ಉಪೇಂದ್ರನ ನೆನೆಯಿರಿ ||4||
ತುಲಸಿ ತೆಗೆವಾಗ ದಾಶರಥ ನಂದನ ಸ್ಮರಿಸಿ |
ಹೂ ಬಿಡಿಸುವಾಗ ಯದುಕುಲ ಚಂದ್ರನ ನೆನೆಯಿರಿ ||5||
ಶುದ್ಧ ವಸ್ತ್ರದಿ ವಾಸುದೇವನ ಸದಾ ಸ್ಮರಿಸಿ |
ಕೇಶವನ ಊರ್ಧ್ವ ಪುಂಡ್ರಧಾರಣೆ ಕಾಲದಿ ಸ್ಮರಿಸಿ ||6||
ಮುದ್ರಾಧಾರಣ ಕಾಲದಿ ಕೃದ್ಧೋಲ್ಕರ ನೆನೆದು |
ಆಪೋಶನ ಸಮಯದಿ ಶ್ರೀಹರಿಯ ನೆನೆಯಿರಿ ||7||
ಉಪವಿತ ಧರಿಸುವಾಗ ವಾಮನನ ಸ್ಮರಿಸಿ |
ಪಾದಯಾತ್ರೆಯಲಿ ಜಾಮದಗ್ನಿ ನೆನೆಯಿರೋ ||8|||
ಮಂಗಳಾರತಿ ಸ್ವೀಕರಿಸುವಾಗ ಭಾರ್ಗವನ ನೆನೆಸಿ |
ತೀರ್ಥಪ್ರಾಶನ ಕಾಲದಿ ರಾಮಾ,ಕೃಷ್ಣಾ, ವಾಸುದೇವ ಎನ್ನಿರಿ ||9||
ಶಂಖೋದಕ ಪ್ರೋಕ್ಷಣೆಯಲಿ ಮುಕುಂದನ ಸ್ಮರಿಸಿ |
ಭೋಜನ ಕಾಲದಿ ಭಕ್ಷ್ಯದಲ್ಲಿ ಅಚ್ಯುತನ ನೆನೆಯಿರಿ ||10||
ಶಾಕದಲಿ ಧನ್ವಂತರಿಯ ಮರೆಯದೇ ಸ್ಮರಿಸಿ |
ಪರಮಾನ್ನದಿ ಪಾಂಡುರಂಗನ ನೆನೆಸಿರಿ ||11||
ಬೆಣ್ಣೆಯಲಿ ಕೃಷ್ಣನ ತುಪ್ಪದಲಿ ದಾಮೋದರನ ಸ್ಮರಿಸಿ |
ಎಣ್ಣೆಭಕ್ಷ್ಯದಲಿ ವಿಷ್ಣು ಮತ್ತು ಮೊಸರಲಿ ವಾಮನನ ಸ್ಮರಿಸಿರಿ ||12||
ಕ್ಷೀರಪಾನದಿ ಶ್ರೀನಿವಾಸನ ನೆನಸಿ ಫಲ ಭಕ್ಷಿಸಿ |
ಜಲಪಾನೇ ಬಾಲಕೃಷ್ಣಂ ಮಧುಪಾನೇ ತ್ರಿವಿಕ್ರಮನ ನೆನೆಸಿ ||13||
ಪಾನಕದಿ ನಾರಸಿಂಹನ ಮಾರ್ಗಮಧ್ಯೆ ಗರುಡಾರೂಢ ಶ್ರೀಹರಿಯ |
ಪ್ರೀತಿಯಿಂ ಚುಂಬಿಸುವಾಗ ವೇಣುನಾದ ಪ್ರಿಯನ ನೆನೆಸಿರಿ ||14||
ಹೆಂಡತಿಯೊಡನೆ ಸರಸದಿ ಗೋಪಿವಲ್ಲಭನ ನೆನೆಸಿ |
ಶಯನದಿ ಸಂಕರ್ಷಣ ತಾಂಬೂಲದಿ ಅನಿರುದ್ಧನ ಸ್ಮರಿಸಿರಿ ||15|||
ದಕ್ಷಿಣೆ ಕೊಡುವಾಗ ದಕ್ಷಿಣಾಪತಿ ಹರಿಯ ನೆನೆದು |
ಪ್ರದಕ್ಷಿಣೆ ಕಾಲದಿ ಗರುಡಾತ್ಮ ನಾರಾಯಣ ಎನ್ನಿರಿ ||16||
ಅಂಜಿಕೆಯಲಿ ನರಸಿಂಹನ ನೆನೆದರೆ ಅಭಯಪ್ರಾಪ್ತಿ |
ಫಲಹಾರ ಕಾಲದಿ ವಾಸುದೇವನ ನೆನೆದರೆ ಉದರಪೂರ್ತಿ ||17||
ಪಂಚಪ್ರಾಣಾಹುತಿಯಲಿ ಅನಿರುದ್ಧಾದಿ ರೂಪ ನೆನೆದು |
ಸಂಧ್ಯಾಕಾಲದಲಿ ಶ್ರೀರಾಮ ಜಪದಲಿ ದತ್ತ ನಾಮಕನ ನೆನೆಯಿರಿ ||18||
ಪ್ರೀತಿಯಿಂದ ದೊರಕಿದ್ದಾಗ ಶ್ರೀರಾಮಚಂದ್ರನ ದಯದಿ ಎನ್ನಿ |
ದ್ವೇಷದಿಂದ ಆಗಿದ್ದೆಲ್ಲ ಪರಶುರಾಮನ ದಯದಿ ಎನ್ನಿರಿ ||19||
ವಿಜ್ಞಾನ ಸುಜ್ಞಾನ ಪ್ರಾಪ್ತಿಗಾಗಿ ಹಯಗ್ರೀವನ ಸ್ಮರಣೆ |
ಸರ್ವ ಪದಾರ್ಥದಿ ರಮಾಪತಿಯ ನೆನೆಸಿರಿ ||20||
ಸಕಲ ಕಾರ್ಯವೂ ಶ್ರೀಹರಿ ಚಿತ್ತಕ್ಕೆ ಬಂದಂತೆ ಸೈ |
ಎಂದುದಾಸಿನದಿ ಜಗನ್ನಾಥನ ಸ್ಮರಿಸಿರಿ ||21||
ಆಯಾ ವಸ್ತುಗಳಲ್ಲಿ ತನ್ನಾಮ ಹರಿಯು ರೂಪಗಳ ನೆನೆಸಿ |
ಸ್ಮರಿಸಿ ಈ ಬಗೆಯ ಸದಾ ಚಿಂತಿಸುವಗೆ ವಿಷ್ಣಲೋಕ ಪ್ರಾಪ್ತಿ ನಿ:ಸಂಶಯ ||22||
ಕಾಲಕಾಲಕ್ಕೆ ಈಶ ನೀನು ದಾಸ ನಾನೆಂದು ನೆನೆಸಿ |
ಸರ್ವಕಾರ್ಯವನ್ನು ಶ್ರೀಕೃಷ್ಣವಿಠ್ಠಲಗರ್ಪಿಸಿ ನಿಶ್ಚಿಂತರಾಗಿರಿ ||24||
ಸರ್ವತ್ರ ಸರ್ವದಾ ಸರ್ವದರಲ್ಲಿ ಸರ್ವೇಶನ ನೆನೆಸಿ |
ಸರ್ವಜ್ಞನು ಯೋಗ್ಯತಾನುಸಾರ ಫಲಗಳಿತ್ತು ಕಾಯ್ವ ಕರುಣಾಕರ ಶ್ರೀಕೃಷ್ಣವಿಠ್ಠಲ ||24||
410. ನಿತ್ಯಸ್ಮರಿಸಿ ಎಡೆಬಿಡದೆ ಸಕಲ ಕಾರ್ಯದಿ ಸರ್ವತ್ರ |
ಸತ್ಯಸ್ಯ ಸತ್ಯ ದೋಷದೂರನ ನಿಶ್ಚಲಮನದಿ ||
ಬ್ರಾಹ್ಮೀಕಾಲದಲೆದ್ದು ನಾರಾಯಣನ ಸ್ಮರಿಸಿ ಕೃಷ್ಣಪ್ರಿಯೆ ತುಲಸಿಗೆ ನಮಿಸಿ |
ಶೌಚಕಾಲದಿ ಕೇಶವನೆನ್ನಿ ಮೃತ್ತಿಕಾ ಶೌಚದಿ ತ್ರಿವಿಕ್ರಮನ ||
ದಂತಧಾನವದಿ ಚತುರ್ಭುಜ ಶ್ರೀ ಹರಿ ನೆನೆದು |
ಮುಖಪ್ರಕ್ಷಾಲನದಿ ಮಾಧವನ ಮನದಣಿಯ ನೆನೆಯಿರಿ ||
ಮೊಸರಿನಲಿ ವಾಮನರೂಪ ತುಪ್ಪದಿ ಕೃಷ್ಣನ ಸ್ಮರಿಸಿ |
ಮೃತ್ತಿಕೆ ಸ್ನಾನ ಕಾಲಕೆ ವರಾಹನ ವಸ್ತ್ರ ಧಾರಣೆಯಲಿ ಉಪೇಂದ್ರನ ||
ಮಡಿ ವಸ್ತ್ರದಿ ವಾಸುದೇವನ ಸದಾ ಸ್ಮರಿಸಿ |
ಪುಂಡ್ರ ಧಾರಣೆ ಕಾಲಕೆ ಕೃದ್ಧೋಲ್ಕಾದಿ ಹರಿ ನೆನೆಯಿರಿ ||
ರಾಮಕೃಷ್ಣ ವಾಸುದೇವ ತೀರ್ಥಪಾನ ಸಮಯದಿ |
ಸಮದರ್ಶಿ ಮುಕುಂದನ ಶಂಖೋದಕ ಗ್ರಹಣ ಕಾಲದಿ ಸ್ಮರಿಸಿ ||
ಭೋಜನಾದಿ ಭಕ್ಷ್ಯದಿ ಅಚ್ಯುತನೆನ್ನಿ ತುತ್ತಿಗೊಮ್ಮೆ ಗೋವಿಂದನ ಬಿಡದೆ ಸ್ಮರಿಸಿ |
ಗೋಜುಬೀಳದಿರಲು ಶಾಕದಿ ಧನ್ವಂತರಿ ನಾಮ ಸತತ ನೆನೆಸಿ ||
ಸತ್ಕಥಾ ಕಾಲದಿ ವ್ಯಾಸ, ಕೃಷ್ಣ ಹಯಗ್ರೀವನ ಸ್ಮರಿಸಿ |
ಪತ್ರಛೇದನ ಕಾಲದಿ ಶೇಷಶಾಯಿ ನಾರಾಯಣ ಎನ್ನಿ ||
ಗರಿಕೆ ಕೀಳುತ ಮನದಿ ಕಪಿಲ ಸ್ಮರಿಸೆ ಉತ್ತಮ |
ನಾರಾಯಣನ ದ್ವಿಜರಲಿ ಕ್ಷತ್ರಿಯರಲಿ ಅನಿರುದ್ಧನ ಕಾಣಿರೋ ||
ಗೋವಿನಲಿ ವಿಷ್ಣುರೂಪ ವೈಶ್ಯರಲಿ ಪ್ರದ್ಯುಮ್ನರೂಪ |
ಸೇವಕರಲಿ ಮಹಿದಾಸ ಶೂದ್ರರಲಿ ಸಂಕರ್ಷಣ ನೆನೆಯಿರೋ ||
ಅಲ್ಪಜಾತಿ ಪ್ರಾಣಿ ಪಕ್ಷಿಗಳಲಿ ತ್ರಿವಿಕ್ರಮನ ಸ್ಮರಿಸಿ |
ಕಾಲಕಳೆಯದೆ ಸರ್ವತ್ರ ಗೋವಿಂದನ ಕಾಣಿರೋ ||
ಗ್ರಹಣಕಾಲದಿ ಪರಶುರಾಮನ ಕ್ಷತ್ರಿಯರಲ್ಲಿ ಜನಾರ್ದನ: |
ಆಹಾರ ಸೇವನೆ ಆದಿ ಅಂತ್ಯದಿ ಆಪೋಶನ ಕಾಲದಿ ಹರಿಯನೆನೆಯಿರೋ ||
ಸರ್ವಜ್ಞ ಹರಿಯ ಸ್ಮರಿಸಿ ಸಕಲ ಸಮಯದಿ |
ಅರಿತು ಕೇಶವ ಗೋವಿಂದನೆನ್ನಿ ಪ್ರಭಾತದಿ ||
ಮಧ್ಯಾಹ್ನಾಧಿಪತಿ ವಿಷ್ಣುಂ ಅಪರಾಹ್ನದಿ ಮಧುಸೂದನ |
ಸಾಯಂಕಾಲೇ ನೃಸಿಂಹಂ ಪ್ರದೋಶ ಕಾಲದಿ ಹೃಷಿಕೇಶನ ನೆನೆಸಿ ||
ಆದಿಮೂಲ ಅನಂತರೂಪೀ ಪರಮಾತ್ಮನ ನಾಮಗಳ ಪಠಿಸಿ ಸದಾ |
ಹೃತ್ಕಮಲವಾಸಿ ಶ್ರೀಕೃಷ್ಣವಿಠ್ಠಲ ಸ್ಮರಿಸಿ ಪಡೆಯಿರಿ ಸಕಲ ಫಲವ ||
ಸರ್ವಕಾಲದಿ ವಾಸುದೇವನ ಸದಾ ನೆನೆಯಲು |
ಸರ್ವತ್ರ ವ್ಯಾಪ್ತ ಸದಾನಂದ ಶ್ರೀಕೃಷ್ಣವಿಠ್ಠಲ ಪಂಚವಿಧ ಮುಕ್ತಿನೀವ ||
...
411. ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲಾ ||ಪ||
ಮನ್ನಿಸಿ ಸಕಲ ತಪ್ಪುಗಳ ಬಿಡದೆ ಕಾಯೋ ಶ್ರೀಕೃಷ್ಣವಿಠ್ಠಲಾ ||ಅಪ||
ಚಂದನ ಚರ್ಚಿತ ಸುಂದರವದನ |
ಮಂದಸ್ಮಿತ ನಿಮಿಲನೇತ್ರ ಮುಕುಟಧರನೇ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲಾ ||1||
ನಡುವಿಗೊಡ್ಯಾಣ ಮಕರಕುಂಡಲ ಧಾರಿನ್ |
ಕಡಗ ಕಂಕಣ ನೂಪುರ ಘಿಲ್ಲೆನ್ನುವ ವರಾಭಯಪ್ರದ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲ ||2||
ಬ್ರಹ್ಮಾಂಡ ಪಿಂಡಾಡ ಸರ್ವವ್ಯಾಪ್ತಾ ಸರ್ವೇಶ |
ಅಮರ ಸುರಗಣ ಸರ್ವವಂದ್ಯ ಸುಪೂಜಿತ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲ ||3||
ಲೋಕೈಕನಾಥ ಸಮಸ್ತ ದೋಷದೂರ |
ಲಕ್ಷ್ಮೀಪತಿ ಶೇಷಶಾಯಿನ ಯೋಗೇಶ್ವರ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲ ||4||
ಜಗತ್ ಪರಿಪಾಲಕ ಸತ್ಯಸ್ಯ ಸತ್ಯ |
ಸ್ವಗತ ಭೇದವಿವರ್ಜಿತ ಸ್ವತಂತ್ರರೂಪಿ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲ ||5||
ದೇಶ ಕಾಲ ಗುಣತ: ಸರ್ವಸಾಕ್ಷಿ ಏಕೈಕ |
ನಾಶರಹಿತ ಸರ್ವಶಕ್ತ ಅನಂತ ಗುಣಿ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲ ||6||
ಆನಂದ ವಿಮಲ ಜ್ಞಾನ ಸಾಗರ |
ಚಿನ್ಮಯರೂಪ ಸಂಸಾರ ಭವತಾಕರ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲ ||7||
ಸ್ಮರಣಾತ್ ಸದಾ ವಂದ್ಯ ಪಾವನರೂಪ |
ಸ್ಫುರೇತ್ ಹೃದ್ಗುಹೇ ನಿಜ ಬಿಂಬರೂಪ ||
ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲ ||8||
412. ಗೌರಿಸುತಗೆ ನಮಿಸಿ ಶೇಷಶಾಯಿಯ ಅನುಗ್ರಹದಿಂ |
ಪರಮ ದಾನವಾವುದೆಂದು ಅರಿತು ಧನ್ಯಳಾಗ ಬಯಸುವೆ ||ಪ||
ಸುತನ ಯಮಗೆ ದಾನ ಮಾಡಿದ ನಚೀಕೇತನ ಪಿತ ಧನ್ಯನೋ |
ಪತಿಯನ್ನೇ ನಾರದಗೆ ದಾನಮಾಡಿದ ಪತ್ನಿ ಸತ್ಯ ಭಾಮೆ ಧನ್ಯಳೋ ||
ಕತ್ತರಿಸಿ ಮಾಂಸವ ಅಳುಕದೆ ದಾನವನಿತ್ತ ಶಿಬಿಯೆ ಧನ್ಯನೋ |
ಎತ್ತರದಿ ಬೆಳೆದ ತ್ರಿವಿಕ್ರಮಗೆ ಭೂದಾನ ಮಾಡಿದ ಬಲಿಯೇ ಧನ್ಯನೋ ||
ದಾನದೊಳು ಪರಂದಾನ ಯಾವುದೆಂದು ಹೇಗೆ ತಿಳಿಯಲಿ ? ||1||
ಷಡ್ರಾಸನ್ನ ದಾನ ಮಾಡಿದ ವಿಪ್ರ ಪತ್ನಿಯರೇ ಧನ್ಯರೋ |
ಬಿಡಿಸಿ ಕನ್ಯಾ ಸೆರೆಯ ರಾಮಗೆ ದಾನವಿತ್ತ ಜನಕ ಧನ್ಯನೋ ||
ಒಡಕು ಕಾಸು ಇಟ್ಟುಕೊಳ್ಳದೇ ಸಕಲ ದಾನವಿತ್ತ ಪುರಂದರನೇ ಧನ್ಯನೋ |
ಒಡನೆ ಜೀವ ತ್ಯಾಗಿಸಿ ತನ್ನೆಲುಬ ದಾನವಿತ್ತ ದಧೀಚಿ ಧನ್ಯನೋ ||
ದಾನದೊಳು ಪರಂ ದಾನ ಯಾವುದೆಂದು ಹೇಗೆ ತಿಳಿಯಲಿ ? ||2||
ಮಮಕಾರ ರೂಪದ ದೇಹನನ್ನದಲ್ಲ ದೇಹದೊಳಿರುವ ಆತ್ಮ ನಾನಲ್ಲ |
ಕರ್ಮವೂ ನಾ ಮಾಡಿದ್ದಲ್ಲ ಮಾನಾಭಿಮಾನ ಸಕಲ ಗುಣವೂ ನನ್ನದಲ್ಲ ||
ಭೂಮಿ ಕಾಣಿ, ಧನ-ಕನಕ, ಜ್ಞಾನ-ವಿದ್ಯೆ, ಅನ್ನ-ನೀರು, ಸೂರು |
ಸಮಸ್ತನಾಥ ಶ್ರೀಕೃಷ್ಣವಿಠ್ಠಲ ಸಕಲವೂ ನಿನ್ನದಿರುವಾಗ ನಾನೆಂತು ದಾನಿಸಲಿ ||
ದಾನದೊಳು ಪರಂದಾನ ಯಾವುದೆಂದು ಹೇಗೆ ತಿಳಿಯಲಿ ? ||3||
413. ಯಾವುದಾದರೊಂದು ಮಾಡೆನಗೆ ದೇವಾ |
ಭಾವುಕಳಾದೆನ್ನ ಒದೆ, ತರಿ, ಸುಡು, ಕೊಲ್ಲು ||
ಯಾವುದಾದರೂ ಕಾವುದೆನ್ನೆಂಬ ನಂಬಿಕೆ ಎನಗಿದೆ ಸ್ವಾಮಿ ||ಪ||
ಒದೆದು ಶಿಲೆಯ ಮಾಡಿದೆ ಬಾಲೆಯುದ್ಧಾರ ||
ಒದೆದೆನ್ನ ಬದುಕು ಉದ್ಧರಿಸೋ ||1||
ತರಿದು ಶಿರವ ಶಿಶುಪಾಲಗಿತ್ತೆ ಮುಕ್ತಿಯ |
ತರಿದೆನ್ನ ಭವದ ಪಾಶ ಸಂಸಾರ ತಾರಿಸೋ ||2||
ಕಡೆಗೆಣ್ಣಿನ ನೋಟದಿ ಅಗಳು ಸೃಷ್ಟಿಸಿ ದ್ರೌಪದಿಯ ಮಾನ ಕಾಯ್ದೆ |
ಕಿಡಿಗಣ್ಣಿನಿಂದೆನ್ನ ಸಕಲ ಪ್ರಾರಬ್ಧ ಪಾಪ ಸುಟ್ಟು ಹಾಕೋ ||3||
ಕೊಂದು ಮಾವನ ದೇವಕಿಯ ಸೆರೆಯ ಬಿಡಿಸಿದೆ |
ಕ್ರೊಧವನಳಿಸಿ ಮದ ಮತ್ಸರ ಕೊಂದೆನ್ನ ಕಾಯೋ ||4||
ಕಾಮಿತಾರ್ಥ ಪ್ರದಾಯಕ ಶ್ರೀಕೃಷ್ಣವಿಠ್ಠಲ ನೀನೆನ್ನವನಾಗದಿದ್ದರೂ ಸರಿ |
ಒಮ್ಮೆಯಾದರೂ ಎನ್ನ ನಿನ್ನವನಾಗಿಸಿಕೋ ಸಾಕು-ಸ್ವಾಮಿ ||5||
414. ಬೇಡಿದ ಕಾಮಿತಾರ್ಥಗಳೀವ ರಮಾಪತಿ | ಮೋಕ್ಷಾದಿ ಪರುಷಾರ್ಥಗಳನಿತ್ತು ತಾ ||
ಕಾಡದೆ ತನ್ನ ತ್ರಿಧಾಮದೊಳಗಿಟ್ಟು | ಅನುದಿನ ಆನಂದ ಪಡಿಸುವನು ||
ಶ್ವೇತದ್ವೀಪ ಎಂದರೆ ಇಂದ್ರಿಯ ನಿಗ್ರಹದಿಂ | ಮನದಿ ಉತ್ತಮಶ್ಲೋಕನ ಧರಿಸೆ ||
ಕುಂಠಿತವಾಗದ ಭಕ್ತಿ ಇರಲು ಮನುಜುಗೆ | ವೈಕುಂಠ ಪದವಿ ಪ್ರಾಪ್ಯುತ ಬಡಿಸುವ ||2||
ಮಾನವಿತ್ತು ವಾಸುದೇವನ ಪಡೆಯಲು ಶಾಶ್ವತ | ಯತ್ನದಿ ಅನುಸರಿಸಲೀ ಬೇಕು ತಂತ್ರವ ||
ಸಾನಿಧ್ಯ ತಾ ನೀಡುವ ಅನಂತಾಸ ನದಿ | ಉಚ್ಚಸ್ತರಕ್ಕೇರಿಸಿ ಮೊಕ್ಷವನೀವ ||3||
ಒಡೆಯನ ಗುಣಗಳ ವ್ಯಾಪಕವರಿತಂತೆ | ಸತ್ಯದಿ ತೋರುವುದು ಲೌಕಿಕಾಲೌಕಿಕ ಸುಖ ||
ನಿತ್ಯದಿ ಮುಕ್ತಾನಂದ ಅನುಭವನೀವ | ಅನಾದಿ ಶ್ರೀಕೃಷ್ಣವಿಠ್ಠಲನ ಪಾದ ನಂಬಲು ||4||
415. ಹರಿಯ ಪೊಗಳಿ ಪಾಡಿ ಆನಂದಿಸಿ ಸದಾ |
ವಿರಮಿಸದಂತೆ ಅನುಗಾಲವೂ ಸೇವಿಸಿರಿ ||ಪ||
ಸಾವಿರ ಮುಖದ ಶೇಷ ಇಂದ್ರರಿಗಸಾಧ್ಯದ |
ಸಾವು ಹುಟ್ಟಿಲ್ಲದ ಮುಕ್ತರರಿಗಾಗದ ||
ನವವಿಧ ಭಕುತಿಯಿಂ ದೊಲಿಸಿ ಭಜಿಸಿರಿ |
ಅವನಿಪತಿಯ ತಡೆ ಇಲ್ಲದೆ ಸ್ಮರಿಸಿರಿ ||
ಸಂತತ ಸ್ಮರಣೆಯಿಂದೆಮಗೆ ಬಹುಲಾಭ |
ಅಂತ್ಯಾದಿ ಗಳಿಲ್ಲದವನಿಗೇನದರ ಸಂಬಂಧ ||
ಸಂತೋಷದಿ ಹಿಗ್ಗಿಲ್ಲವಗೆ ದು:ಖದ ಮಾತಿಲ್ಲ |
ಅತಿಶಯ ಭಕ್ತಿಜ್ಞಾನದಿ ದೊರಕುವನೆಮಗೆ ||
ಕುಣಿದು ಕುಪ್ಪಳಿಸಿದರೂ ನಾವೆಂದಂತಾಗದು |
ಒಣಮಾತು ಢಂಬಾಚಾರಕೆ ಬಗ್ಗುವನಲ್ಲ ||
ಹಣಾಹಣಿಗೆ ಮಣಿಯಲಾರ ದೋಷವಿದೂರ |
ಸಣ್ಣಕ್ರಿಯೆ ಸಹ ಅನವಿಚ್ಛೆಯಂತೆ ನಡೆಯುವುದು ||
ಮಾಡಿ ಮಾಡಿಸುವ ಬೇಡನೆಂದರೆ ಬಿಡ |
ನೊಡಿ ನೋಡಿಸುವ ಕಣ್ಣಿಗೆಂದು ಕಾಣಿಸ ||
ನೋಡಿ ವದನದಿ ನಿಂತು ನುಡಿಸುವ |
ಒಡೆಯ ಕರ್ತೃ ಶ್ರೀಕೃಷ್ಣವಿಠ್ಠಲ ಅನುಕ್ಷಣವೂ ||
416. ಸಂಸಾರದಿ ಬರಲು ಸದಾಕಾಲ ನೆನೆದರೆ ಇಲ್ಲ ಕಷ್ಟ |
ಕಂಸಾದಿ ಸ್ಮರಣಾತ್ ನಿಜ ಪೂರ್ಣಲಾಭ ನಿತ್ಯ ಸಂತುಷ್ಟಿ ||
ವಾಸಿತ ಹೃದ್ಗುಹನ ಗುರುತಿಸದಿರೆ ಜನ್ಮಪೂರ್ಣ ನಷ್ಟ |
ದಾಸನಾಗಿ ಸೇವಿಸೆ ಭಕ್ತ ವತ್ಸಲ ತಾನಾಗುವ ಹೃಷ್ಟ ||
ಆಶಾಪಾಶಕ್ಲೇಶ ಸಂಹರಿಸಿ ನೀಡುವ ದಿವ್ಯದೃಷ್ಟಿ |
ಅಷ್ಟಕರ್ತೃ ಶ್ರೀಕೃಷ್ಣವಿಠ್ಠಲನ ಕೊಂಡಾಡೆ ಒಲಿವ ವಿಶಿಷ್ಠ ||
417. ಕಡೆಗೋಲು ನೇನ ಪಿಡಿದ ಉಡುಪಿ ಕೃಷ್ಣ |
ಬಾಲಕನಾಗಿ ನಿಂತಿಹ ಗುರುವಾಯೂರಪ್ಪನಾಗಿ ||
ಎರಡೂ ಕೈ ಕಟಿಯಲ್ಲಿಟ್ಟು ಪಂಢರಿರಾಯ |
ಅಭಯ ಹಸ್ತದ ಕಂಚಿ ವರದರಾಜ ||
ವರದ ಹಸ್ತ ತೋರಿದ ಶೇಷಗಿರಿವಾಸ |
ಶೇಷ ಶಾಯಿಯಾದ ಶ್ರೀರಂಗನಾಥ ||
ಬದರಿಲಿ ಯೋಗ ಮುದ್ರೆ ಭಂಗಿಲಿ ಕುಳಿತ |
ಸರ್ವದೈವವೂ ಜಗನ್ನಾಥ ಶ್ರೀಕೃಷ್ಣವಿಠ್ಠಲನೇ ||
ಇದು ತ್ರಿಕಾಲಕೂ ಸತ್ಯಸ್ಯ ಸತ್ಯವೆಂದು |
ಕೈಮೇಲೆತ್ತಿ ಪೇಳುವೆ ಶ್ರೀಕೃಷ್ಣವಿಠ್ಠಲನ ದಯದಿ ||
418. ಎನ್ನ ತನು-ಮನ ಶುದ್ಧವಿಲ್ಲ |
ಎನಗೆಲ್ಲ ಅದರ ಅರಿವಿದೆ ||1||
ಎನಗಿಂತ ಅತೀ ಹಿರಿಯ ನೀನು |
ನಾನು ಹೀನಳು ಉತ್ತಮೋತ್ತಮ ನೀನು ||2||
ನಿನ್ನ ಮಧುರ ಗಾನ ಕೇಳುವ ಕೋರಿಕೆ |
ನಿನ್ನ ಜೊತೆ ಒಡನಾಡುವ ಆಸೆ ||3||
ನಿನಗಾಗಿ ಹಂಬಲಿಸುತಿರುವೆ |
ನಿನ್ನನು ಕಾಣುವ ಪ್ರಬಲ ಇಚ್ಛೆ ||4||
ನಿನ್ನನೇ ಶಾಶ್ವತದಿ ಸೇರುವ ಬಯಕೆ |
ನನಗಾಗಿ ಪೂರೈಸೆಯಾ ಶ್ರೀಕೃಷ್ಣವಿಠ್ಠಲ ಭಕ್ತವತ್ಸಲ ||5||
419. ದೇಹ ವೃಕ್ಷದಲಿ ಜೀವ-ಈಶ್ವರ ದ್ವಯರಿಹರು |
ಅಹೇಯ ಶ್ರೇಷ್ಠ ಶುಭಸಾರ ಭೋಕ್ತ, ದು:ಖ ಅಭೋಕ್ತ ||ಪ||
ಶ್ರೀಹಂಸನಾಮಕ ಭಗವಂತನೇ ಪೂರ್ಣಪುಣ್ಯಫಲಕೆ ಭಾಗಿ ||ಅಪ||
ದೇಹಗತ ಸುಖ ಪ್ರಭೇದ ಪಂಚರೂಪಾತ್ಮಕವು |
ಶ್ರೀಹರಿ ಶಿರವೇ ಪ್ರಿಯ-ಪರೋಪಕಾರದ ಆನಂದ ||
ಶ್ರೀಹರಿ ಬಲ ಭುಜವೇ ಮೋದ-ವಿಷಯ ಭೋಗಜನ್ಯ ಸುಖ |
ಶ್ರೀಹರಿ ಎಡಭುಜವೇ ಪ್ರಮೋದ-ಉತ್ತಮ ವಿಷಯ ಭೋಗಸುಖ ||
ಶ್ರೀಹರಿ ಮಧ್ಯದೇಹ ಆನಂದಾತ್ಮ-ಪದಾರ್ಥ ವಿಜ್ಞಾನ ಜನ್ಯ |
ಶ್ರೀಹರಿ ಪುಚ್ಛಪಾದವು ಬ್ರಹ್ಮನಾಮಕನು ||1||
ಇಹನು ಸಕಲ ಪ್ರಾಪ್ತ ವಸ್ತುವಿನಲಿ ನಾರಾಯಣ ನೆನಿಸಿ |
ಇಹ-ಪರದಿ ಸಕಲಕೂ ಸುಖವಿಶೇಷಕೆ ನಿಯಾಮಕ ||
ಬ್ರಹ್ಮಸಹಿತವೇ ಸರ್ವರೂ ಮೋಕ್ಷ ಪಡೆವರು |
ಅರ್ಹರಿಗೂ ಅನ್ಯಥಾ ಸ್ವಯಂ ವಿಷ್ಣುಪದ ಪ್ರಾಪ್ತಿ ಇಲ್ಲ ||
ಬಹು ತರದ ವಿಶ್ವಗತ ಸರ್ವ ಶುಭಭೋಗಜನ್ಯ ಸುಖ |
ಬಾಹ್ಯಾಂತರ ಸ್ಥಿತ ಶ್ರೀಕೃಷ್ಣವಿಠ್ಠಲನ್ನೆ ಸದಾ ಪೊಂದುವುದು ||2||
420. ಪದದ ರಚನೆಗಿಂತ ಪದ್ಧತಿಯಂತೆ ಪದ ಅಭ್ಯಾಸ ಮುಖ್ಯ |
ಪದದ ಅಭ್ಯಾಸಕ್ಕಿಂತ ಪದದ ಭಾವನೆ ಅರಿವು ಮುಖ್ಯ ||
ಪದದ ಭಾವನೆಗಿಂತ ಪದದಿ ಪರೆಮಾತ್ಮನ ಕಾಣುವಿಕೆ ಮುಖ್ಯ |
ಬಿದ್ದು ಹೋಗುವ ಜಡ ದೇಹದಿ ಇರುವ, ಗೋಪಾಲಕನೇ ||
ಪದದಿ ಪರಮಾತ್ಮನ ಕಾಣುವ ಸುಂದರನ ರಾಣಿ ಪೂಜಿಪ |
ಶುದ್ಧ ಶ್ರೀಕೃಷ್ಣವಿಠ್ಠಲ ಸರ್ವಕರ್ತೃವಿಗೆ ನಮೋ ಎಂಬೆ ||
421. ಧರ್ಮಾಧರ್ಮದ ಅರಿವಿದ್ದರೂ ಜೀವಿ |
ಕರ್ಮದಿ ಅಧರ್ಮ ಮಾಡುವುದೇಕೆ ||ಪ|||
ಧರ್ಮಾತ್ಮನೇ ಅಧರ್ಮ ಮಾಡಿಸುವುದೇಕೆ ||ಅಪ||
ಮಾತೃವಧೆ ಮಹಾ ಪಾಪವಿದ್ದರೂ |
ಪಿತೃವಚನ ಪರಿಪಾಲನೆ ದೊಡ್ಡದೆ ? || (ಪರಶುರಾಮ )
ಗುರುಹತ್ಯೆಪಾಪ, ಗುರುತರ ಆದರೂ |
ಗುರುಹತ್ಯೆ ಧರ್ಮವೆನಿಸಿದ್ದೇಕೆ ? || (ಅರ್ಜುನ) ||1||
ಪರರ ನಿಂದನೆಗಂಜಿ ಬಸಿರಿ ಭಾರ್ಯೆ ತ್ಯಜಿಸಿ |
ಪುತ್ರರ ಜನನವೂ ತಿಳಿಯದಿದ್ದುದು ಹೆಂಗೆ ? ||
ಸುಪ್ರಜಾರಾಮನಾಗಿ ಪತ್ನಿ-ಪುತ್ರರ ಪರಿವೆ ಇಲ್ಲವೆ ? |
ಧರ್ಮದ ಮೂರ್ತಿ ಎನಿಸಿದವಗೆ ಆಧರ್ಮ ತಿಳಿಯದೆ ? ||2||
ಧರ್ಮಾಧರ್ಮದ ನಂಟು ಅತೀ ಜಟಿಲ |
ಧರ್ಮವೆನಿಸಿದ್ದು ಅಧರ್ಮವಾಗಿರಬಹುದು |||
ಧರ್ಮಾಧರ್ಮದ ಮಧ್ಯದ ಗೆರೆ ಸೂಕ್ಷ್ಮ |
ಧರ್ಮಮೂರ್ತಿ ಶ್ರೀಕೃಷ್ಣವಿಠ್ಠಲನೇ ಬಿಡಿಸಿ ಪೇಳಯ್ಯಾ ||3||
422. ತಳಮಳಿಸದಿರು ಎಂದೂ ತಾಳುತಿರು ಸದಾ |
ಬಾಳು ಕೊಟ್ಟವನೇ ಬಾಳು ಬೆಳಗುವನು ||ಪ||
ತಿಳಿದುಕೋ ಇದರ ಮರ್ಮ ಸಂದೇಹಿಸದಿರು ||ಅಪ||
ಹಾಳು ಹರಟೆ ಮಾಡಿ ಕಾಲ ಕಳೆಯದಿರು |
ಒಳ್ಳೇಳ್ಳೇ ಮಾತ ಕೇಳಿ ಸುಖಿಸುತಿರು ||
ಕೇಳದೆ ಬರುವ ಸುಖ-ದು:ಖ ಖಗಳಿಗೆ |
ಒಳ-ಹೊರಗಿರುವ ಸ್ವಾಮಿ ತಾನೇ ಹೊಣೆ ||1||
ಹಳೆಯ ಕಡಕುಗಳ ಮರೆಯುತಿರು |
ಕಳ್ಳತನ ಮಾಡದೆ ಪರರ ಸೊತ್ತು ||
ಗಳಿಸಿಕೋ ಎಂದಿಗೂ ಕರಗದ ಆಸ್ತಿ |
ಬೆಳೆಸಿಕೋ ಪುಣ್ಯದ ಸಂಪತ್ತು ||2||
ಕಳವಳಿಸದೇ ಮುಂದೆ ಹೇಗೆಂದು |
ನಳಿ ನಳಿಸುತಿರು ನವ ಉತ್ಸಾಹದಿ ||
ಹೊಳೆಯುತಿರು ಹೊರಗೆ ಬೆಳಕಾಗಿ |
ನಾಳೆ ಹೇಗೆಂದು ಚಿಂತಿಸದೇ ನಿಶ್ಚಿಂತನಾಗಿರು ||3||
ಗೋಳಾಕಾರದೀ ಜನನ-ಮರಣವೆಂಬ |
ಗೋಳು ತಪ್ಪಿಸಲು ಒಂದೇ ಮನದಿ ||
ಜೊಳ್ಳು ವಿಷಯಗಳ ಬಿಟ್ಟು ಶರಣಾಗು |
ದಳ್ಳುರಿಯಿಂದ ಕಾಯ್ವ ಶ್ರೀಕೃಷ್ಣವಿಠ್ಠಲ ಕೃಪಾಳು ||4||
423. ಅರಿವಾಯ್ತೆನಗೆ ಗುರುತರದ ಅರಿವಾಯಿತು |
ಸರಿಯಾದ ರೀತಿಯಲಿ ಖಚಿತದಿ ಅರಿವಾಯ್ತು ||
ಭಜಿಸದೆ ಬೈಯ್ದ ಚೈದ್ಯನ ತನ್ನ ಉದರದಲ್ಲಿಟ್ಟ |
ಸೋಜಿಗದಿ ಶರಶಯ್ಯಯಲ್ಲಿದ್ದವಗೆ ಕಡೆಕಾಲದಿ ದರುಶನವಿತ್ತ ||
ಅಜಮಿಳನ ತಪ್ಪು ಮನ್ನಿಸಿ ಪೊರೆದ ದಯಾನಿಧಿ |
ರಾಜನ ಮೂಹೂರ್ತ ಸಾಧನೆಗೆ ಮುಕ್ತಿ ಇತ್ತವನೆಮ್ಮ ಪೊರೆವ ||1||
ಬರಿದೀ ಮಾತಲ್ಲ ಅನುಭವದ ವಾರ್ತೆ ಇದು |
ಸರಿದಮೇಲೆ ಸಾಕಷ್ಟು ಸಮಯ ಈಗ ಅರಿವಾಯ್ತು ||
ಸುರಿದ್ಹೋದ ಕಾಲ ನೆಲದಮೇಲೆ ಸುರಿದೆಣ್ಣೆಯಂತೆ |
ತಿರುಗಿಬಾರದು ಎಷ್ಟೆ ಪೇಚಾಡಿದರೂ ಸಹ ||2||
ನಡೆಸಿದವ ನೀನೇ, ನಡೆಸುತ್ತಿರುವವ ನೀನೇ |
ತಡವಾದರೂ ಬಿಡದೆ ನಡೆಸುವವ ನೀನೆಂದು ||
ಒಡನೆ ಇನ್ನಾದರೂ ಎಚ್ಚೆತ್ತು ಮುಂದೆ ಇದ್ದಷ್ಟುವೇಳೆ |
ಕೂಡಲೇ ಸದುಪಯೋಗಿಸಿ ಶ್ರೀಕೃಷ್ಣವಿಠ್ಠಲನ ಭಜಸಿದರೆ ಉತ್ತಮ ||3||
424. ಯಾವ ಜನುಮದ ಪುಣ್ಯವೋ, |
ಯಾವ ಸುಖ ಜೀವಿಗಳಾಶೀರ್ವಾದ ಫಲವೋ ||ಪ||
ಭವದ ಆಸೆ ನೀಗಿ ಜನುಮ ಸುಫಲವಾಯಿತು |
ಸಾವು ಬರುವ ಮುನ್ನ ಅರಿವು ಮೂಡಿತು ||ಅಪ||
ಹೊಲಸು ನಾಲಿಗೆ, ಹೊಲಸು ದೇಹ |
ಹೊಲಸು ದೃಶ್ಯ, ಹೊಲಸು ದೃಷ್ಟಿ ||
ಕಲುಷಿತ ಮನ, ಕಲುಷಿತ ಬುದ್ಧಿ |
ಹುಲುಮನುಷಗೆ ಒಲಿಯಿತು ದೈವ ||1||
ಕೊನೆ ಮೊದಲಿಲ್ಲದ ಆನಂದದ ಹೊನಲು |
ಕನಸು-ಮನಸಲೂ ನೆನೆಯದ ಸೌಭಾಗ್ಯವಿದು ||
ಕನವರಿಸಲು ಸಧಾ ಮನದಿ ಬಂದುನಿಂತ |
ಕನಸೆಲ್ಲ ನನಸಾಯ್ತು ಶ್ರೀಕೃಷ್ಣವಿಠ್ಠಲನ ದಯದಿ ||2||
425. ಸುಲಭ ದರುಶನ ಕೊಡಯ್ಯಾ ನಿತ್ಯದಿ |
ಅಲಭ್ಯ ದರುಶನ ಲಭ್ಯವಾಗಿಸಯ್ಯಾ ||ಪ||
ಒಲವಿಂದ ನಿತ್ಯ ಸತತ ದರುಶನ ನೀಡಯ್ಯಾ ||ಅಪ||
ನಾನೇನು ಧನ-ಕನಕ ಬೇಡಲಿಲ್ಲ |
ಮನೆ-ಭೂಮಿ-ಆಸ್ತಿ ಬೇಡೆನಗೆ ||
ನಿನ್ನ ಸ್ಥಾನ-ಮಾನ ನಾನೇಕೆ ಬೇಡಲಿ |
ಜೀನ, ನಿನ್ನ ಚರಣದಿ ಸ್ಥಳವಿತ್ತು ಸಲುಹೋ ||1||
ಬೆಲ್ಲವಿದ್ದಡೆ ಇರುವೆ ಬರುವುದು ಸಹಜ |
ಎಲ್ಲರಿಗೂ ಕೇಳಿದ್ದೆಲ್ಲಾ ಕೊಡುವ ದಾನಿ ನೀನಂತೆ ||
ಎಲ್ಲಿ ಭಕ್ತರೋ ಅಲ್ಲೇ ನೀನಿರುವಿಯಂತೆ |
ಬಲ್ಲೆ ನೀ ಎನ್ನಲಿ ಏನಿಲ್ಲ ಆದರೂ ಬೇಡುವೆ ||2||
ಲೋಕವ ಸುತ್ತಿ ಸುತ್ತಿ ಸಾಕಾಯಿತು |
ರಕರಕಾಲು ತಿಂದು ಅಜೀರ್ಣವಾಯಿತು ||
ಬೇಕೆನ್ನುವುದು ಮುಗಿಯದಾಯ್ತು |
ತೋಕ ನಾನಾಯ್ಯ ಶ್ರೀಕೃಷ್ಣವಿಠ್ಠಲ ಸಾಕು ಮಾಡಯ್ಯಾ ದಯಮಾಡಿ ||3||
426. ನಿನ್ನ ಅಪರಾಧಿ ನಾನು ಎಣಿಸದಂತಹ ಅಪರಾಧವೆನ್ನದು |
ಎನ್ನ ಬಿಡದೆ ಶಿಕ್ಷಿಸು, ಇಲ್ಲ ಅಪರಾಧ ನಿಲ್ಲುವುದಿಲ್ಲ ||
ನಿನ್ನ ಕಾಲಿಗೆನ್ನ ಕುತ್ತಿಗೆ ಬಿಗಿದು ಸರಪಳಿ ಕಟ್ಟು ಇಲ್ಲ |
ಎನ್ನ ಕೈಗಳೆರಡನ್ನು ನಿನ್ನ ಪಾದಕ್ಕೆ ಸೇರಿಸಿ ಕಟ್ಟು ||
ನಿನ್ನ ಕಾಲಿನಿಂದೆನ್ನ ಶಿರಮೆಟ್ಟಿ ಚಿಹ್ನೆ ಮೂಡಿಸು |
ತಿನ್ನಲು ಏನನ್ನೂ ನೀಡದೆ ಸದಾ ನಿನ್ನ ಜೊತೆಯಲ್ಲೇ ಇರಿಸು ||
ನಿನ್ನ ಕಣ್ಗಾವಲಿನಲ್ಲಿ ನಿನ್ನ ಮನೆಯಲ್ಲೇ ಬಂದಿಮಾಡು |
ನಿನ್ನೊಳಗೇ ಇದ್ದು ಈ ಜೀವ ಹೊರಗೆ ಹೋಗದಂತೆ ಮಾಡು ||
ನೀನಿತ್ತ ಯಾವ ಶಿಕ್ಷೆಯೂ ಪ್ರಿಯವೆನಗೆ ಶ್ರೀಕೃಷ್ಣವಿಠ್ಠಲ |
ನೀನಿಲ್ಲದ ಯಾವ ಸುಖವೂ ಎನಗೆ ಬೇಡ ||